ಗೊಂಬೆ

ಗೋವಿಂದ ಪೈಗಳು ಬರೆದ ಕವನ ‘ವಾಸವದತ್ತೆ’

ಅದರಲ್ಲಿ ಅವಳು ನಕ್ಕದ್ದಿಲ್ಲ ಅತ್ತದ್ದಿಲ್ಲ ಒಮ್ಮೆ

ನನ್ನೆದುರಿನ ಗೊಂಬೆಯೂ ಹಾಗೆ, ಆದರೆ ನಾನು

ಇದಕೆ ಹೆಸರಿಟ್ಟಿಲ್ಲ, ಬೇಡವಾಗಿ !

ನೋಡುತ್ತದೆ ಅದು ನನ್ನ, ನೋಡುತ್ತೇನೆ ನಾನು ಅದರ

ಮೌನವೇ ಮಾತು ನಮ್ಮ ನಡುವೆ

ನಾನು ಹೇಳುವುದನು ಅದು, ಅದು ಹೇಳುವುದನು ನಾನು

ಅರ್ಥೈಸಿಕೊಂಡಂಥ ಜೀವದೊಲುಮೆ !

ಯಾರು ಸೃಷ್ಟಿಸಿದರೋ ಈ ಮೌನಿ ಮೇನಕೆಯ

ಹೇಗೆ ಇದೆ ನೋಡಿ, ಅಪಾರ ಸೌಂದರ್ಯ !

ಆಚೀಚೆ ಕಣ್ಣಾಡಿಸದೆ ಇದ್ದರೂ, ಆಡಿಸುವ ಹಾಗೆ

ಕೈಗೆತ್ತಿಕೊಂಡಾಗ ಕಾಣುವುದು, ಆಶ್ಚರ್ಯ !

ಮೊನ್ನೆ ತಂಟಲುಮಾರಿ ಮೊಮ್ಮಗನು ಬಂದವನು

ಅದನೆತ್ತಿಕೊಂಡು ಮುದ್ದಿಸಿದ ಖುಶಿಯಲ್ಲಿ

ಇಷ್ಟು ಹತ್ತಿರವಿದ್ದರೂ ನಾನು ಮುದ್ದಿಸಲಿಲ್ಲ

ಯಾಕೆನ್ನುವುದು ಇದ್ದೂ ಇಲ್ಲದಾಗಿ

ಅವನ ಕೈಯಲ್ಲಿತ್ತು ಅದು, ಅವನಿದ್ದಷ್ಟು ದಿನ

ಹೊರಟಾಗ ತಂದಿಟ್ಟ ಎಲ್ಲಿತ್ತೊ ಅಲ್ಲಿ

ಈಗ ನೋಡಿದರದ ಕಣ್ಣುಗಳು ನಿಸ್ತೇಜ

ಕಿತ್ತುಕೊಂಡೊಯ್ದನೋ ಆತ ತನ್ನಲ್ಲಿ ?

                                                                                                ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗೊಂಬೆ”

  1. nagarekha gaonkar

    ಕವಿತೆ ಅರ್ಥಪೂರ್ಣವಾಗಿದೆ.
    ಮಕ್ಕಳಂತೆ ನಿರ್ಜೀವತೆಗೂ ಜೀವಂತಿಕೆ ತುಂಬಬಲ್ಲ ಮುಗ್ಧತೆಯ ಕೊರತೆ ದೊಡ್ಡವರದು.
    ಮೌನ ಮಾತು ಎರಡೂ ಸಮನ್ವಯ ಸಾಧಿಸಿವೆ ಕವಿತೆಯಲ್ಲಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter