ಖ್ಯಾತಚಿಂತಕ, ಕವಿ ,ವಿಮರ್ಶಕ , ಸಂಶೋಧಕ,ಹಾಸ್ಯ ಪ್ರಜ್ಞೆಯವರಾಗಿದ್ದ ಡಾ. ಸಿದ್ದಲಿಂಗಯ್ಯ( 67) ಜೂನ್ 11 ರಂದು ನಮ್ಮನ್ನಗಲಿದರು. ಕೆಲವು ದಿನಗಳ ಹಿಂದೆಯೇ ( ಮೇ 2) ಕೊರೊನಾ ಪೀಡಿತರಾದ ನಂತರ ಅವರ ನಿಧನದ ವದಂತಿಯನ್ನೂ ಹಬ್ಬಿಸಲಾಗಿತ್ತು. ನಂತರ ಅವರ ಮನೆಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದೂ ಇದೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ತನ್ನ ವಿಶಿಷ್ಟ ಕೊಡುಗೆಯನ್ನು ನೀಡಿರುವ ಡಾ. ಸಿದ್ದಲಿಂಗಯ್ಯ ಅವರು ‘ಗ್ರಾಮದೇವತೆಗಳು’ ಎಂಬ ವಿಷಯದ ಬಗ್ಗೆ 1989 ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದರು.ಎರಡು ಸಲ ಎಂ ಎಲ್ ಸಿ ಸ್ಥಾನವನ್ನು ಅಲಂಕರಿಸಿರುವ ಇವರು ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ…. ಮೊದಲಾದ ಕವನಸಂಕಲನಗಳು, ಜನಸಂಸ್ಕೃತಿ ,ಹಕ್ಕಿನೋಟ…ಮುಂತಾದ ಲೇಖನಗಳ ಸಂಗ್ರಹ,ಪಂಚಮ,ಏಕಲವ್ಯ…. ನಾಟಕಗಳು….ಬಹು ಜನಪ್ರಿಯವಾಗಿದ್ದು ನಾಡಿನಾದ್ಯಂತ ಜನಜಾಗೃತಿಯನ್ನು ಹುಟ್ಟಿಸಲು ನೆರವಾಗಿವೆ. ಊರುಕೇರಿ ಇವರ ಆತ್ಮಕಥನ. ಇದು ಇಂಗ್ಲಿಷ್, ತಮಿಳಿಗೂ ಅನುವಾದ ಗೊಂಡಿದೆ. 81 ನೇ ಅ.ಭಾ.ಕ.ಸಾ.ಸಮ್ಮೇಳನದ ಅಧ್ಯಕ್ಷರಾಗಿದ್ದವರು. ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ….ಹೀಗೆ ಹಲವು ಪ್ರಶಸ್ತಿ ಗಳು ದೊರೆತಿವೆ.
————-
2003 ರಲ್ಲಿ ಎರಡು ದಿನ ನಾವು ಕೆಲವು ಗೆಳೆಯರು ಡಾ.ಸಿದ್ದಲಿಂಗಯ್ಯ ಅವರ ಜೊತೆಗಿದ್ದೆವು.ಅದು ಮುಂಬಯಿಯ ಗೋರೆಗಾಂವ್ ನಲ್ಲಿ.
“ಮಾಯಾನಗರಿ ಮುಂಬೈಯ ಗೋರೆಗಾಂವ್ ವಿಚಾರ ಭಾರತಿ ಸಮ್ಮೇಳನಕ್ಕೆ ಬರುವಂತೆ ನನ್ನನ್ನು ಕೋರಿದಾಗ ಮುಂಬೈ ಜನಕ್ಕೆ ಸಾಹಿತ್ಯ ಸಮ್ಮೇಳನ ಮಾಡುವಷ್ಟು ಪುರುಸೋತ್ತಿದೆಯೇ ಎಂದು ಆಶ್ಚರ್ಯವಾಯಿತು”
ಈ ಮಾತು ಹೇಳಿದವರು ದಲಿತ ಬಂಡಾಯ ಕವಿ ಡಾ.ಸಿದ್ಧಲಿಂಗಯ್ಯ.2003 ಫೆಬ್ರವರಿ 9 ರಂದು ಮುಂಬೈಯ ಗೋರೆಗಾಂವ್ ಕರ್ನಾಟಕ ಸಂಘ ಹಮ್ಮಿಕೊಂಡ ‘ಕನ್ನಡ ಕಾವ್ಯದ ಒಲವು-ನಿಲುವು’ ವಿಷಯದ ಆರನೆಯ ವಿಚಾರ ಭಾರತಿ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಬಂದವರು ಡಾ. ಸಿದ್ದಲಿಂಗಯ್ಯ. ಈ ಅಧ್ಯಕ್ಷ ಭಾಷಣ ನಾನೇ ಸಂಪಾದಿಸಿದ ‘ವಿಚಾರ ಭಾರತಿ’ ಸಂಕಲನದಲ್ಲೂ ಪ್ರಕಟವಾಗಿದೆ.
“ಪ್ರೀತಿ ಮತ್ತು ವಿಚಾರಗಳ ಬೆಸುಗೆಯೇ ಕರ್ನಾಟಕ ಸಂಸ್ಕೃತಿ.ಕನ್ನಡಿಗನದು ತೆರೆದ ಮನಸ್ಸು.ರಾಷ್ಟ್ರಕವಿ ಕುವೆಂಪು ನಾವೆಲ್ಲ ವಿಶ್ವಮಾನವರಾಗಬೇಕು ಎಂದು ಕರೆಕೊಟ್ಟದ್ದು ಈ ಅರ್ಥದಲ್ಲಿಯೇ……”ಎನ್ನುತ್ತಾ-
” ನಾವು ವಿಚಾರವಂತರು ಮಾತ್ರವಲ್ಲ.ಭಾಷೆ, ಪ್ರದೇಶ,ಜಾತಿ ಕೋಮುಗಳ ಗಡಿಗೆರೆಗಳನ್ನು ದಾಟಿ ವಿಶಾಲ ಬಯಲಿಗೆ ಬಂದು ಹೊಸ ಗಾಳಿಯನ್ನು ಉಸಿರಾಡುತ್ತಿರುವ ಭಾರತೀಯರು…….ನಮ್ಮ ಸಮಾಜದ ಎಲ್ಲ ರೀತಿಯ ಆರೋಗ್ಯ ಮತ್ತು ಸಂತೋಷಕ್ಕಾಗಿ ಸಾಹಿತ್ಯ ಕ್ಷೇತ್ರ ಕಾಣಿಕೆ ನೀಡಲಿ ” ಎಂದು ಆ ದಿನ ತಮ್ಮ ಅಧ್ಯಕ್ಷ ಭಾಷಣದಲ್ಲಿ ಆಶಿಸಿದ್ದರು.
ಡಾ.ಸಿದ್ದಲಿಂಗಯ್ಯ ಅವರನ್ನು ಸಮ್ಮೇಳನದ ದಿನ ರಾತ್ರಿಗೆ ಅವರ ರೂಮಿನಲ್ಲಿ ಸಂದರ್ಶನ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಪ್ರೀತಿಯಿಂದಲೇ ಅವರು ಒಪ್ಪಿಗೆ ನೀಡಿದ್ದರು. ಈ ಸಂದರ್ಶನ ಅನಂತರ ಜನವಾಹಿನಿ ದೈನಿಕದ ‘ಬಹುಮುಖಿ’ಯಲ್ಲಿ (6, ಎಪ್ರಿಲ್,2003) ಪ್ರಕಟವಾಯಿತು.
ಬಂಡಾಯ ಸಾಹಿತ್ಯ ಸಂಘಟನೆಯ ಆರಂಭದ ದಿನಗಳಲ್ಲಿ ‘ಇಕ್ರಲಾ ವದೀರ್ಲಾ….’ ಕವನ ಬರೆದ ದಿನಗಳನ್ನು ನೆನಪಿಸಿಕೊಳ್ಳಿ ಅಂದರೆ ಡಾ.ಸಿದ್ದಲಿಂಗಯ್ಯ ಅವರ ಉತ್ತರ ಹೀಗಿತ್ತು-
ನಿಜ ಹೇಳಬೇಕೆಂದರೆ ನಾನು ಅವೆಲ್ಲವನ್ನೂ ಬರೆದಿದ್ದು ತಮಿಳುನಾಡಿನ ಒಂದು ಸ್ಲಂ ಏರಿಯಾದಲ್ಲಿ. ಹೆಚ್ಚಿನ ಜನ ನಾನದನ್ನು ಕರ್ನಾಟಕದಲ್ಲಿ ಕೂತು ಬರೆದಿದ್ದೇನೆ ಎಂದೇ ಭಾವಿಸಿದ್ದರು .ನಾನಿದ್ದ ಜಾಗದಲ್ಲಿ ಕಂಡ ಶೋಷಣೆಯನ್ನು ಕಂಡು ಬರೆದ ಕವನ ಅದು. ಬರೆದ ನಂತರ ಅದನ್ನು ಡಿ.ಆರ್ ಗೆ ತೋರಿಸಿದೆ.ಶೂದ್ರದಲ್ಲಿ ಅದು ಪ್ರಿಂಟೂ ಆಯ್ತು. ನನ್ನ ಹೆಚ್ಚಿನ ಕವನಗಳನ್ನು ನಾನು ಸ್ಮಶಾನದಲ್ಲಿ ಕೂತು ಬರೆದದ್ದು .ಅದೊಂದು ದೊಡ್ಡ ಕಥೆ… ಎಂದು ಆರಂಭದಲ್ಲೇ ಅವರು ಆ ಕವನದ ಬಗ್ಗೆ ಸ್ಪಷ್ಟನೆ ನೀಡಿದ್ದರು.
“ಸ್ಮಶಾನದಲ್ಲಿ ಹೂಗಿಡಗಳು ಇದ್ದವು. ಹಲವಾರು ಮರಗಳು ಇದ್ದವು. ನಾನು ಖುಷಿಗೊಂಡು ಅಲ್ಲೇ ಕೂತು ಬರೆಯುತ್ತಿದ್ದೆ. ಆದರೆ ಬರೆದುದನ್ನು ಯಾರಿಗೂ ತೋರಿಸುತ್ತಿರಲಿಲ್ಲ ಐದುವರ್ಷದ ತನಕ ಸುಮ್ಮನೆ ಇಟ್ಟುಕೊಂಡಿದ್ದೆ .ನಂತರ ಕಿ.ರಂ ನೋಡಿದರು. ಹೀಗೆ ಒಬ್ಬೊಬ್ಬರಿಗೆ ತಿಳಿಯುತ್ತಾ ಬಂತು.1975ರಿಂದ ಅವು ಪ್ರಕಟವಾಗ ತೊಡಗಿದವು .ಆಳವಾಗಿ ನೋಡಿದರೆ ಇದೆಲ್ಲ ಸ್ಮಶಾನದ ಪದ್ಯಗಳು ಎಂದು ಗೊತ್ತಾಗುವುದು. ವಿಶೇಷ ಅಂದರೆ ನಾನು ಸ್ಮಶಾನದಲ್ಲಿ ಹೆಚ್ಚಿಗೆ ಇರುತ್ತಿದ್ದುದರಿಂದ ಅನೇಕರಿಗೆ ಡೆತ್ ಸರ್ಟಿಫಿಕೇಟ್ ಕೂಡ ನೀಡುತ್ತಿದ್ದೆ….”
ಎಂದಾಗ ನನಗೂ ಆಶ್ಚರ್ಯವಾಗಿತ್ತು.
ಡಾ. ಸಿದ್ದಲಿಂಗಯ್ಯ ಅವರು ಹೇಳಿದಂತೆ ಎಪ್ಪತ್ತರ ದಶಕದಲ್ಲಿ ಚಳವಳಿ ಮತ್ತು ಸಾಹಿತ್ಯ ಎರಡೂ ಗಟ್ಟಿಯಾಗಿದ್ದವು. ಚಳವಳಿಗೆ ನಾನು ಬರೆದ ಪದ್ಯಗಳು ಇಷ್ಟವಾಯಿತು. ಬಸವಲಿಂಗಪ್ಪ ಅವರ ಬೂಸಾ… ವಿವಾದದ ಸಂದರ್ಭದಲ್ಲೂ ನಾನು ನೆರವಿಗೆ ನಿಂತಿದ್ದೆ. ಕನ್ನಡ ಸಾಹಿತ್ಯ ಬೂಸಾ….ಇಂತಹ ಹೇಳಿಕೆ ನೀಡಿದಾಗ ಅವರಿಗೆ ವಿದ್ಯಾರ್ಥಿ ಬೆಂಬಲ ಹೆಚ್ಚಾಗಿ ಇರಲಿಲ್ಲ. ಆವಾಗ ನಾನು ಸೆಕ್ರೆಟರಿ ಆಗಿದ್ದೆ. ನನ್ನನ್ನು ಬೆಂಬಲಕ್ಕೆ ಕರೆದರು. ನಾನು ಡಿ.ಆರ್ ಬಳಿ ವಿಚಾರ ವಿಮರ್ಶೆ ನಡೆಸಿ ಒಪ್ಪಿದೆ. ಬಸವಲಿಂಗಪ್ಪ ಹೇಳಿದ್ದು ಸರಿ ಎಂದು ಬೆಂಬಲಿಸಿ ಭಾಷಣ ಮಾಡಿದ್ದೆ. ನನ್ನನ್ನು ಆ ದಿನಗಳಲ್ಲಿ ಎರಡು ಸಲ ಕಿಡ್ನಾಪ್ ಕೂಡ ಮಾಡಲಾಗಿತ್ತು…… ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದರು.
“ಎಮರ್ಜೆನ್ಸಿ ಸಮಯ ದೇವರಾಜ ಅರಸು ನಮ್ಮ ಕಡೆ ಇದ್ದಾರೆ ಎಂದು ಬಹುಶ: ಅರೆಸ್ಟ್ ಆಗಿಲ್ಲವೇನೋ” ಎಂಬ ಮಾತು ಹೇಳಲೂ ಮರೆತಿರಲಿಲ್ಲ. ಎಂ ಎ ಸ್ಟೂಡೆಂಟ್ ಆಗಿದ್ದಾಗ ಇವರ ಕವಿತೆಗಳು ಹೆಚ್ಚೆಚ್ಚು ಜನರನ್ನು ತಲುಪಲು ಶುರುವಾಯಿತು.
70ರ ದಶಕದಲ್ಲಿ ಇದ್ದಂತಹ ಚಳವಳಿಯು ನಂತರ ಯಾಕೆ ಕ್ಷೀಣಿಸುತ್ತ ಬಂತು? ಎಂದು ಕೇಳಿದರೆ ಅವರ ಉತ್ತರ-
“ಹಾಗಲ್ಲ, ಒಂದು ಘಟ್ಟ ಮುಗಿಯುವವರೆಗೆ ಲೀಡರ್ ಗಳು ಸಕ್ರಿಯರಾಗಿರುತ್ತಾರೆ. ಅನಂತರ ಹೊಸ ಲೀಡರ್ ಗಳು ಕ್ರಿಯೇಟ್ ಆಗಬೇಕು. ನಮ್ಮಲ್ಲೀಗ ಲೀಡರ್ ಶಿಪ್ ಮತ್ತು ಪ್ರೋಗ್ರಾಮ್ ಗಳ ಪ್ರಾಬ್ಲೆಮ್ ಇದೆ. ಹೊಸ ನಾಯಕತ್ವ ಬರದಿದ್ದರೆ ಚಳವಳಿಗಳು ತಣ್ಣಗಾಗಲು ಕಾರಣವಾಗುತ್ತವೆ. ಜನರು ಲೀಡರ್ ಗಳನ್ನು ನಂಬದಿದ್ದರೆ ಚಳವಳಿಗಳು ದುರ್ಬಲವಾಗುತ್ತವೆ. ಮಹಾರಾಷ್ಟ್ರದಲ್ಲಿ ದಲಿತ್ ಪ್ಯಾಂಥರ್ಸ್ ಎಂಬುದು ಇದೆ. ಆದರೆ ಅವರೆಲ್ಲ ಮಾರ್ಕ್ಸ್ ವಾದವನ್ನು ಒಳಗೊಂಡು ಮುನ್ನಡೆದು ಬರೆದಿದ್ದು ಕಡಿಮೆ. ಆದರೆ ಕರ್ನಾಟಕದಲ್ಲಿ ದಲಿತ-ಬಂಡಾಯಕ್ಕೆ ಹೆಚ್ಚು ಗಟ್ಟಿತನ ಬಂದಿದೆ. ಅಂಬೇಡ್ಕರ್ ಮಾರ್ಕ್ಸ್ ಎಲ್ಲರನ್ನೂ ಒಳಗೊಂಡ ಗಟ್ಟಿತನ ಇದೆ .ಹಾಗಿದ್ದೂ ನಮಗೆ ಕರ್ನಾಟಕಕ್ಕೆ ಮಹಾರಾಷ್ಟ್ರಕ್ಕೆ ಸಿಕ್ಕಿದಂತೆ ‘ಫುಲೆ’ ಮಾತ್ರ ಸಿಕ್ಕಿಲ್ಲ….ಎಂದು ಹೇಳಲೂ ಮರೆತಿರಲಿಲ್ಲ.
“ನಮ್ಮಲ್ಲಿ ಏನಾಯ್ತು ಅಂದರೆ ಪಂಪ ಕುಮಾರವ್ಯಾಸ ಬೇಂದ್ರೆ ಅಡಿಗ ಮುಂತಾದವರಿಗೆ ಯುವಕವಿಗಳು ಬರೇ ಬಯ್ಯುವುದಕ್ಕೆ ಶುರುಮಾಡಿದರು. ದಿನಾ ಭಾಷಣ ,ದಿನಾ ಹೋರಾಟ ಎಂದಾಗ ಸಾಹಿತಿಗಳು ಬರವಣಿಗೆಯಿಂದ ಹಿಮ್ಮುಖ ರಾಗುತ್ತಾರೆ” ಎಂಬ ಎಚ್ಚರವನ್ನೂ ತಿಳಿಸಿದ್ದರು.
ಬಂಡಾಯದಿಂದ ದಲಿತ ಸಾಹಿತ್ಯಕ್ಕೆ ನಷ್ಟವಾಯಿತು ಎಂಬ ಆರೋಪದ ಚರ್ಚೆಗೆ ಸಿದ್ದಲಿಂಗಯ್ಯನವರನ್ನು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ-
ಬಂಡಾಯ ಸಾಹಿತ್ಯ ಸಂಘಟನೆಯನ್ನು ಸಮರ್ಥಿಸುತ್ತಾ ಸಿದ್ದಲಿಂಗಯ್ಯರು “ಅದು ತಪ್ಪು ಅಭಿಪ್ರಾಯ. ಬಂಡಾಯದಿಂದ ದಲಿತರಿಗೆ ಲಾಭವಾಗಿದೆ. ಹೇಗೆಂದರೆ ದಲಿತರು ಸೀಮಿತ ಚೌಕಟ್ಟಿನಲ್ಲಿ ಸಿಕ್ಕಿ ಬೀಳುವ ಅಪಾಯವಿತ್ತು. ಆದರೆ ಬಂಡಾಯ ಬಂದದ್ದರಿಂದ ಮಾರ್ಕ್ಸ್ ಪೆರಿಯಾರ್ ಮುಂತಾದ ಬೇರೆ ಬೇರೆ ಎಡಶಕ್ತಿಗಳ ಜೊತೆಗೆ ಸೇರಲು ಅವರಿಂದ ಸಾಧ್ಯವಾಯಿತು. ಇಲ್ಲವಾದರೆ ದಲಿತರು ಸೀಮಿತ ಚೌಕಟ್ಟಿನೊಳಗೆ ಚಿಕ್ಕದಾಗಿ ಬಿಡುತ್ತಿದ್ದರೇನೋ…” ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು.
ಸಂದರ್ಶನದ ಕೊನೆಗೆ ಅವರು ಹೇಳಿದ ಮಾತು- ಸಾಹಿತ್ಯಕೃಷಿ ತಪಸ್ಸು ಇದ್ದ ಹಾಗೆ. ಗುಣಮಟ್ಟ ಕಡಿಮೆಯಾಗಬಾರದು. ಬಂಡಾಯದಲ್ಲಿ ಭಾಷಣ ಹೊಡೆದ ಹಾಗೆ ಬರಹ ಕಾಣಿಸಿಲ್ಲ. ಯಾಕೆಂದರೆ ಅವರಿಗೆ ಟೈಮೇ ಇರಲಿಲ್ಲ. ಕೊನೆಗೂ ನಾನು ಹೇಳುವುದೆಂದರೆ ಬೈಯುವ ಮೊದಲು ಅದರ ಹಿಂದಿರಬಹುದಾದ ಮಾನವೀಯತೆಯನ್ನು ಮೊದಲು ಸಾಹಿತಿಗಳು ಗಮನಿಸಿ ಬರೆಯಬೇಕು.”
ಕನ್ನಡ ಅಭಿವೃದ್ದಿ ಪ್ರಾಧಿಕಾರದ,ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ನಂತರವೂ ಅವರು ಮುಂಬಯಿಗೆ ಬಂದುದಿದೆ.ಕೆಲವು ಸಂಘಗಳಿಗೆ ಅನೇಕ ಪುಸ್ತಕಗಳನ್ನು ನೀಡಿದ್ದರು.
2019 ರ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಾಗತಿಹಳ್ಳಿಯವರ ಟೆಂಟು ಸಿನಿಮಾ ಶಾಲೆಯ ಸಭಾಂಗಣದಲ್ಲಿ ನಾನು ಬರೆದ ‘ನಾಗತಿಹಳ್ಳಿ ಚಂದ್ರಶೇಖರ ಪತ್ರಕಾಮೇಷ್ಠಿ’ ಕೃತಿಯನ್ನು ಅವರೇ ಬಿಡುಗಡೆಗೊಳಿಸಿ ಮಾತನಾಡಿದ್ದರು. 36 ವರ್ಷಗಳಲ್ಲಿ ನಾಗತಿಹಳ್ಳಿಯವರು ನನಗೆ ಬರೆದ ಪತ್ರಗಳ ಕೃತಿ ಅದು.ಅವರ ಜೊತೆ ಅದೇ ಕೊನೆಯ ವೇದಿಕೆ ಹಂಚಿಕೊಂಡದ್ದು. ಡಾ. ಸಿದ್ದಲಿಂಗಯ್ಯ ಅವರು “ಪತ್ರಗಳು ಆ ಕಾಲದ ಸಾಹಿತ್ಯಕ-ಸಾಂಸ್ಕೃತಿಕ ಘಟನೆಗಳಿಗೆ ಕನ್ನಡಿ. ಜೋಕಟ್ಟೆಯವರು ನಾಗತಿಹಳ್ಳಿ ಅವರು ಬರೆದ ಪತ್ರಗಳನ್ನು ಪ್ರಕಟಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ .ಇದು ಚಿಕ್ಕಚಿಕ್ಕ ಪತ್ರಗಳು ಆಗಿದ್ದು ಸ್ವಾರಸ್ಯಕರವಾಗಿದೆ” ಎಂದಿದ್ದರು.
ಡಾಕ್ಟರ್ ಸಿದ್ದಲಿಂಗಯ್ಯ ಅವರು ಯಾವಾಗಲೂ ವೇದಿಕೆಯಲ್ಲಿದ್ದರೆ ಭಾಷಣದ ನಡುವೆ ಎಂತಹ ಗಂಭೀರ ಉಪನ್ಯಾಸದ ನಡುವೆಯೂ ಅನೇಕ ತಮಾಷೆಗಳನ್ನು ಹೇಳುತ್ತಾರೆ. ಹಾಗಾಗಿ ಅವರ ಭಾಷಣಗಳನ್ನು ಮತ್ತೂ ಕೇಳೋಣ ಅನಿಸುತ್ತಿತ್ತು.
ಡಾ.ಸಿದ್ದಲಿಂಗಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
—————
1 thought on “ಬೈಯುವ ಮೊದಲು ಅದರ ಹಿಂದಿರಬಹುದಾದ ಮಾನವೀಯತೆಯನ್ನು ಮೊದಲು ಸಾಹಿತಿಗಳು ಗಮನಿಸಿ ಬರೆಯಬೇಕು- ಡಾ.ಸಿದ್ದಲಿಂಗಯ್ಯ”
ಸಿದ್ದಲಿಂಗಯ್ಯನವರ ಮುಂಬಯಿ ನಂಟನ್ನು ವಸ್ತುನಿಷ್ಠವಾಗಿ ನಿರೂಪಿಸಿದ ಲೇಖನ. ಸಿದ್ದಲಿಂಗಯ್ಯ ಅಂದರೆ ಗಂಭೀರ ಎಂಬ ಭಾವನೆಯಿತ್ತು. ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು ಎಂಬುದು ನನಗೆ ಹೊಸ ಮಾಹಿತಿ