ಚಿತ್ರ, ಲೇಖನ : ಶ್ರೀನಿವಾಸ ಜೋಕಟ್ಟೆ
{‘ಕಾಜೀ(ಝೀ)ರಂಗಾ ರಾಷ್ಟ್ರೀಯ ಉದ್ಯಾನ’ ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ವಿಶ್ವವಿಖ್ಯಾತಿ. 1905 ರಲ್ಲಿ ರಾಷ್ಟ್ರೀಯ ಉದ್ಯಾನ ಎನಿಸಿದ ಇದಕ್ಕೆ ಯುನೆಸ್ಕೊ ವಿಶ್ವ ವಿರಾಸತ್ ದರ್ಜೆ ಸಿಕ್ಕಿದೆ. ಅಸ್ಸಾಮ್ ರಾಜ್ಯದಲ್ಲಿರುವ ಈ ಉದ್ಯಾನದಲ್ಲಿ ಘೇಂಡಾ ಮೃಗಗಳಲ್ಲದೆ, ಕಾಡುಕೋಣ, ಹನ್ನೆರಡು ಕೊಂಬುಗಳುಳ್ಳ ಕಡವೆ….ಇತ್ಯಾದಿಗಳನ್ನೂ ಕಾಣಬಹುದು. ಆದರೆ ಈ ಕಡವೆಗಳು, ಘೇಂಡಾ ಮೃಗಗಳು ಅಪಾಯದ ಅಂಚಿನಲ್ಲಿವೆ. ಜನರಿಂದ ಉದ್ಯಾನದ ಜಾಗಗಳು ಆಕ್ರಮಣವಾಗುತ್ತಿವೆ. ವಿವಿಧ ಮಂದಿರಗಳಿಗೆ ದಾನದ ರೂಪದಲ್ಲಿ ಅಸ್ಸಾಮ್‍ನಿಂದ ಆನೆಗಳನ್ನು ಸಾಗಿಸುತ್ತಿದ್ದಾರೆ ಆನೆ ಸ್ಮಗ್ಲರ್‍ಗಳು. ಮಳೆಗಾಲ ಬಂತೆಂದರೆ ಕಾಜೀರಂಗದಲ್ಲಿ ಪ್ರವಾಹ, ಪ್ರಾಣಿಗಳಿಗೆ ಸಂಕಷ್ಟ. ಪ್ರವಾಸಿಗರಿಗೆ ಪ್ರವೇಶ ಇರೋದಿಲ್ಲ. ಪ್ರವಾಹ ನಿಯಂತ್ರಣಕ್ಕಾಗಿ ಸರಕಾರದಿಂದ ವಿಶೇಷ ಬೈಠಕ್. ಅಸ್ಸಾಮ್‍ಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಕಾಜೀರಂಗಾಕ್ಕೆ ಭೇಟಿ}
ಬೊಮ್‍ಡಿಲಾದ ಹೊಟೇಲ್ ಸೇಪಲ್ ಯಂಗ್‍ಜಾಮ್‍ನಿಂದ ನಮ್ಮ ಪ್ರವಾಸಿ ತಂಡ ಒಂಟಿ ಕೊಂಬಿನ ಘೇಂಡಾಗಳಿಗೆ ದೇಶದಲ್ಲೇ ಪ್ರಸಿದ್ಧವಾದ ಅಸ್ಸಾಮ್‍ನ ಕಾಜೀರಂಗಾಕ್ಕೆ ಅಂದು ಬೆಳಿಗ್ಗೆ ಬೇಗನೆ ಕಾರಲ್ಲಿ ಹೊರಟಿತ್ತು. ಕತ್ತಲಾಗುವ ಮೊದಲು ನಾವು ಕಾಜೀರಂಗವನ್ನು ತಲುಪಬೇಕಿತ್ತು. ದಿನವಿಡೀ ಪ್ರಯಾಣ ಇರುವುದು ಮೊದಲೇ ಗೊತ್ತಿತ್ತು. ಎಲ್ಲರೂ ಹೊರಡುವಾಗ ಸ್ವಲ್ಪ ತಡವೇ ಆಯಿತು. ಸಮಯದ ಸದುಪಯೋಗಪಡಿಸಿಕೊಳ್ಳಲು ನಾವು ದಂಪತಿ ಬೊಮ್‍ಡಿಲಾದ ಮೈನ್ ಬಜಾರ್‍ಲೈನ್ ಸುತ್ತಾಡಿ ಕೆಲವು ತಿನ್ನುವ ತರಕಾರಿಗಳು ಬಹಳ ಕಡಿಮೆ ಬೆಲೆಗೆ ಮಾರುತ್ತಿದ್ದುದನ್ನು ಕಂಡು ದಾರಿಯಲ್ಲಿ ತಿನ್ನೋಕೆ ಅಂತ ಕೆಲವನ್ನು ಖರೀದಿಸಿದೆವು. ಬೆಳಿಗ್ಗೆ 6ರ ಸಮಯ. ಅಂಗಡಿಗಳೆಲ್ಲ ತೆರೆದಿದ್ದವು. ಬೊಮ್‍ಡಿಲಾದಿಂದ ನಮ್ಮ ಪಯಣ ಅಸ್ಸಾಮ್‍ನ ಕಾಜೀರಂಗಕ್ಕೆ. ಬೊಮ್‍ಡಿಲಾದಿಂದ ಹೊರಟವರು ದಾರಿಯಲ್ಲಿ ಕೆಲವು ಪ್ರವಾಸಿ ತಾಣಗಳನ್ನು ವೀಕ್ಷಿಸಿ, ಭಾಲುಕ್‍ಪೆÇೀಂಗ್ ಕ್ಷೇತ್ರದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಸ್ಸಾಮ್‍ನ ದಾರಿಯಲ್ಲಿ ಗಣಪತಿ ಮಂದಿರ, ಬ್ರಹ್ಮಪುತ್ರಾ ನದಿಯ ವ್ಯೂಪಾಯಿಂಟ್, ಅಗ್ನಿಘರ್ ಎಲ್ಲಾ ಸುತ್ತಾಡುತ್ತಾ ಕಾಜೀರಂಗ್‍ನ ರಿಸಾರ್ಟ್ ಲ್ಯಾಂಡ್‍ಮಾರ್ಕ್ ವುಡ್ಸ್‍ಗೆ ಬರುವಾಗ ರಾತ್ರಿ ಎಂಟಾಗಿತ್ತು. ಮುಂದಿನ ಪ್ರವಾಸದÀಲ್ಲಿ ಪರ್ವತ ರಸ್ತೆಗಳಿಲ್ಲ ಎಂದಾಗ ಒಂದು ಕ್ಷಣ ಎಲ್ಲರೂ ನೆಮ್ಮದಿಯ ಉಸಿರು ಬಿಟ್ಟೆವು. (ಅರುಣಾಚಲದ ಆ ಪರ್ವತ ದಾರಿಗಳ ಪಯಣ ನೆನೆದರೆ ಆ ಕ್ಷಣಕ್ಕೆ ಮೈ ಜುಂ ಎನ್ನುತ್ತಲೇ ಇತ್ತು.) ಇನ್ನು ಮುಂದಿನ ಸುತ್ತಾಟ ಅಸ್ಸಾಮ್. ಎಲ್ಲರಿಗೂ ಮರುದಿನದ ಕಾಜೀರಂಗಾ ನೇಶನಲ್ ಪಾರ್ಕ್‍ನ್ನು ವೀಕ್ಷಿಸುವ ಪುಳಕ.
ಬ್ರಹ್ಮಪುತ್ರಾ ನದಿ ಕಣಿವೆ ಕ್ಷೇತ್ರಗಳಲ್ಲಿನ ಕಾಜೀರಂಗಾ ಒಂದು ಕೊಂಬಿನ ಭಾರತೀಯ ಘೇಂಡಾ ಮೃಗಗಳ ಪ್ರಮುಖ ಆಶ್ರಯ ತಾಣ. ಈ ವನ್ಯ ಪ್ರಾಣಿಯ ಕಾರಣ ಕಾಜೀರಂಗಾ ರಾಷ್ಟ್ರೀಯ ಉದ್ಯಾನ ವಿಶ್ವ ಪರ್ಯಟನೆಯಲ್ಲಿ ತನ್ನನ್ನು ಗುರುತಿಸುವಂತೆ ಮಾಡಿದೆ. ವಿಶ್ವಮಾನ್ಯತೆಯ ಗೌರವ ಪಡೆದಿದೆ. ವಿಶಾಲಕಾಯ ಪ್ರಾಣಿಯಾಗಿದ್ದರೂ ಶಾಖಾಹಾರಿ ಘೇಂಡಾ ಮೃಗಗಳ ಕಾಜೀರಂಗಾ ರಾಷ್ಟ್ರೀಯ ಉದ್ಯಾನ ವಿಶ್ವ ಮಾನ್ಯತೆಯ ಗೌರವವನ್ನು ಪ್ರಾಪ್ತಿಯಾಗಿಸಿದ ಪಾರ್ಕ್. ಇಲ್ಲಿ ಅನ್ಯ ಪ್ರಾಣಿಗಳು – ಪಕ್ಷಿಗಳು ಇದ್ದರೂ ಘೇಂಡಾ ಮೃಗಗಳನ್ನು ನೋಡಲೆಂದೇ ವಿಶ್ವದ ಪ್ರವಾಸಿಗರು ಬರುತ್ತಾರೆ.
ಕಾಜೀರಂಗಾ ರಾಷ್ಟ್ರ್ಟ್ರೀಯ ಉದ್ಯಾನಕ್ಕೆ ಬರಲು ಗುವಾಹಟಿ ಅಥವಾ ಜೋರಹಾಟ್‍ನಿಂದ ಬರಬೇಕು. ಗುವಾಹಟಿ ಪೂರ್ವೋತ್ತರದ ಪ್ರವೇಶ ದ್ವಾರ, ಗುವಾಹಟಿಯಿಂದ ಕಾಜೀರಂಗಾಕ್ಕೆ ದೂರ 217 ರಿಂದ 225 ಕಿ.ಮೀಟರ್. ಜೋರಹಾಟ್‍ನಿಂದ 96 ಕಿ.ಮೀಟರ್ ದೂರದಲ್ಲಿದೆ ಕಾಜೀರಂಗಾ ರಾಷ್ಟ್ರೀಯ ಉದ್ಯಾನ. ಸಮೀಪದ ವಿಮಾನ ನಿಲ್ದಾಣ ರೊವರಿಯಾ (ಜೋರಹಾಟ್). ಕಾಜೀರಂಗಾ ರಾಷ್ಟ್ರೀಯ ಉದ್ಯಾನ ಅಸ್ಸಾಮ್‍ನ ಗೋಲಾಘಾಟ್ ಮತ್ತು ನಗಾಂವ್ ಜಿಲ್ಲೆಯಲ್ಲಿದೆ. ಇದು ವಿಶ್ವದ ಹಳೆಯ ಉದ್ಯಾನಗಳಲ್ಲಿ ಒಂದು. 430 ಚದರ ಕಿಲೋಮೀಟರ್‍ನಲ್ಲಿ ವ್ಯಾಪಿಸಿದೆ. ಗೋಲಾಘಾಟ್ ಮತ್ತು ನಗಾಂವ್ ಜಿಲ್ಲೆಗಳಲ್ಲಿ ಇದು ವಿಸ್ತರಿಸಿದ್ದು, ಅಸ್ಸಾಮ್ ಮತ್ತು ಮೇಘಾಲಯ ರಾಜ್ಯಗಳನ್ನು ನಿಶ್ಚಿತ ಸೀಮೆಯ ತನಕ ಬೇರ್ಪಡಿಸುವ ನೇಶನಲ್ ಹೈವೇ ನಂಬರ್ 37 ಕಾಜೀರಂಗಾ ಕಡೆ ಹೋಗುತ್ತದೆ.
ಕಾಜೀರಂಗಾ ಉದ್ಯಾನವನ್ನು ಆನೆ ಸಫಾರಿ ಮತ್ತು ಜೀಪ್ ಸಫಾರಿಗಳ ಮೂಲಕ ಪ್ರವಾಸಿಗರು ವೀಕ್ಷಿಸಬಹುದು. ನಾವು ಆಯ್ಕೆ ಮಾಡಿದ್ದು ಜೀಪ್ ಸಫಾರಿ. ಯಾಕೆಂದರೆ ನೇಪಾಳದ ಬಹು ಪ್ರಸಿದ್ಧಿಯ ಚಿತ್ವನ್ ರಾಷ್ಟ್ರೀಯ ಉದ್ಯಾನವನ್ನು ನಾವು ಈ ಹಿಂದೆ ಸುತ್ತಾಡಿದ್ದು ಆನೆ ಸಫಾರಿ ಮೂಲಕ. ಹಾಗಾಗಿ ಇಲ್ಲಿ ಜೀಪ್ ಸಫಾರಿ ಇಷ್ಟಪಟ್ಟೆವು. ಕಾಜೀರಂಗಾದ ಅರಣ್ಯದಲ್ಲಿ ಆನೆಗಿಂತಲೂ ಎತ್ತರಕ್ಕೆ ಬೆಳೆಯುವ ಹುಲ್ಲುರಾಶಿಗಳಿವೆ. ಕಡಿಮೆ ಆಳದ ಕೆರೆಗಳೂ ಸಾಕಷ್ಟಿವೆ. ಮಳೆಗಾಲದಲ್ಲಿ ಬ್ರಹ್ಮಪುತ್ರಾ ನದಿ ನೆರೆಯನ್ನು ಸೃಷ್ಟಿಸುವುದರಿಂದ ಕಾಜೀರಂಗಾ ಉದ್ಯಾನದ ಪ್ರಾಣಿಗಳು ಎತ್ತರ ಪ್ರದೇಶಗಳಿಗೆ ಹೋಗುವುವು. ಸಾಮಾನ್ಯ ಘೇಂಡಾಮೃಗ 1,820 ಕಿಲೋದಷ್ಟೂ ಭಾರವಿದ್ದು ಇದು ಹುಲ್ಲು ಮತ್ತು ವನಸ್ಪತಿಗಳನ್ನು ಅವಲಂಬಿಸಿ ಜೀವಿಸುತ್ತದೆ ಎಂದರೆ ಆಶ್ಚರ್ಯದ ಸಂಗತಿಯೇ ಸರಿ.
ಪ್ರತೀವರ್ಷ ಬ್ರಹ್ಮಪುತ್ರಾ ನದಿಯ ಪ್ರಳಯಕಾರಿ ಪ್ರವಾಹ ಈ ಉದ್ಯಾನದ ಜಾಗವನ್ನು ಬಹಳಷ್ಟು ಹಾನಿಗೊಳಿಸುತ್ತದೆ. ಆವಾಗ ಪ್ರಾಣಿಗಳೂ ಬಹಳ ಕಷ್ಟ ಅನುಭವಿಸುತ್ತವೆ. ಘೇಂಡಾ ಮೃಗಗಳ ಸಹಿತ ಹಲವು ಜಾನುವಾರುಗಳು ಆ ಸಂದರ್ಭದಲ್ಲಿ ಸಾಯುತ್ತವೆ. ಪ್ರವಾಹದ ಸಮಯ ಉದ್ಯಾನದಲ್ಲಿ ತಿರುಗಾಟ ಸ್ಥಗಿತಗೊಳ್ಳುವುದು. ಕೇವಲ ನವಂಬರ್‍ನಿಂದ ಎಪ್ರಿಲ್ ತನಕ ಮಾತ್ರ ಇಲ್ಲಿ ತಿರುಗಲು ಉತ್ತಮ ಕಾಲ.
ಘೇಂಡಾ ಮೃಗಗಳ ಸರಾಸರಿ ಆಯುಷ್ಯ 45 ರಿಂದ 50 ವರ್ಷ. ಹೆಣ್ಣು ಘೇಂಡಾ ಆಕಾರದಲ್ಲಿ ಸ್ವಲ್ಪ ಚಿಕ್ಕದು. ತನ್ನ ಜೀವಿತ ಕಾಲದಲ್ಲಿ 8 ರಿಂದ ಹತ್ತು ಮಕ್ಕಳಿಗೆ ಅದು ಜನ್ಮ ನೀಡುತ್ತದೆ. ಶಿಶು 17 ತಿಂಗಳ ನಂತರ ಜನ್ಮ ಪಡೆಯುತ್ತದೆ. ಘೇಂಡಾ ಮೃಗಗಳು ಸಣ್ಣ ಸಣ್ಣ ಹುಲ್ಲು ಮೇಯುತ್ತವೆ. ಆದರೆ 20-25 ಅಡಿ ಎತ್ತರದ ಹುಲ್ಲಿನ ರಾಶಿಯ ನಡುವೆ ಅಡಗಿ ಕೂರಲು ಇಷ್ಟಪಡುತ್ತವೆ. ಕೇವಲ ಹುಲಿಗಳಿಂದ ಮಾತ್ರ ಇವಕ್ಕೆ ಅಪಾಯವಿರುವುದು. ಘೇಂಡಾದ ಮರಿಗಳನ್ನು ಈ ಹುಲಿ ತನ್ನ ನಿಶಾನೆಗೆ ಒಳಪಡಿಸುವುದಿದೆ.
ಘೇಂಡಾಮೃಗ ನಾಚಿಗೆ ಸ್ವಭಾವದ್ದು. ಅದು ಮನುಷ್ಯರಿಂದ ದೂರ ಇರುವಂತದ್ದು. ಆದರೆ ತನ್ನ ಮಕ್ಕಳ ಜೊತೆಗಿದ್ದಾಗ ಅದು ಹಲ್ಲೆ ಮಾಡಲೂ ರೆಡಿ ಇರುತ್ತದೆ. ಆನೆ ಮೇಲೆ ಸಫಾರಿ ಮಾಡುವಾಗ ಮಾವುತನು ಶಿಶುಗಳ ಜೊತೆ ಸುತ್ತಾಡುತ್ತಿರುವ ಘೇಂಡಾ ಮೃಗಗಳ ಹತ್ತಿರ ಕರಕೊಂಡು ಹೋಗುವುದಿಲ್ಲ.
ಒಂದರ ಹಿಂದೆ ಒಂದರಂತೆ ಕಾಜೀರಂಗಾ ಉದ್ಯಾನದ ರಸ್ತೆಯಲ್ಲಿ ನಮ್ಮ ತಂಡದ ಜೀಪುಗಳು ಮೆಲ್ಲನೆ ಹೋಗುತ್ತಿದ್ದುವು. ದೂರದಲ್ಲಿ ಘೇಂಡಾ, ಕಾಡುಕೋಣಗಳು ಕಂಡು ಬಂದಾಗ ನಿಲ್ಲಿಸುತ್ತಿದ್ದ ಡ್ರೈವರ್. ನಾವು ಗೆಳೆಯರು ಕೊನೆಯ ಜೀಪ್ ನಲ್ಲಿದ್ದೆವು. ನಮಗೆ ಮೊದಲೇ ಗಾರ್ಡ್ ಸೂಚನೆ ಕೊಟ್ಟಿದ್ದರು – ‘ಯಾರೂ ದಾರಿಯಲ್ಲಿ ಜೀಪಿನಿಂದ ಇಳಿಯಬಾರದು’
ಎಂದು. ಆದರೆ ನಮ್ಮ ಎದುರಿನ ಜೀಪು ಹಾಳಾಗಿ ನಾವೂ ನಿಲ್ಲಬೇಕಾಯಿತು. ಕೊನೆಗೆ ಆ ಜೀಪ್ ದೂಡಲು ನಾವೆಲ್ಲ ಇಳಿಯಲೇ ಬೇಕಾಯಿತು!
ಉದ್ಯಾನ ಸುತ್ತಾಡುತ್ತಾ ಒಂದೆಡೆ ‘ಡೋಂಗಾ ಕ್ಯಾಂಪ್’ನಲ್ಲಿ ಜೀಪ್ ನಿಂತಿತು. ಆದು ವ್ಯೂಪಾಯಿಂಟ್. ಎದುರಿಗೆ ವಿಶಾಲ ಕೆರೆ. ಪಕ್ಕದಲ್ಲಿ ಬೋರ್ಡ್ – ಮೀನುಗಾರಿಕೆಗೆ ಅವಕಾಶವಿಲ್ಲ, ಪ್ಲಾಸ್ಟಿಕ್ ನಿಷೇಧ, ಸೂರ್ಯಾಸ್ತದ ಮೊದಲು ಹೊರಡಬೇಕು…..ಇತ್ಯಾದಿ ಬರಹಗಳು. ಹಲವು ವಿದೇಶಿಯರು ಅಲ್ಲಿದ್ದು ನಮ್ಮ ಜೊತೆ ತಮಾಷೆ ಮಾತನಾಡಿದರು. ಅವರೆಲ್ಲ ಯುರೋಪ್ ದೇಶಗಳಿಂದ ಬಂದವರು. ಈ ವಿದೇಶಿಯರು ಹಿಲ್ ಸ್ಟೇಷನ್ ಇಷ್ಟ ಪಡೋದಿಲ್ಲವಂತೆ. ಹಾಗಾಗಿ ಅರುಣಾಚಲ ಪ್ರದೇಶ ಅವರ ಸೂಚಿಯಲ್ಲಿಲ್ಲ. ಒಬ್ಬ ವಿದೇಶಿ ಅವರ ಕ್ಯಾಮರಾದಲ್ಲಿ ತಾನು ‘ಹುಲಿ ಸೆರೆಹಿಡಿದೆ’ ಎಂದು ತೋರಿಸಿದರು. ನಮಗೆಲ್ಲ ಅಚ್ಚರಿಯಾಯಿತು. ಕೊನೆಗೆ ಹೊರಡುವಾಗ ಆತ ‘ನಿಮ್ಮನ್ನೆಲ್ಲ ಮೋಸಗೊಳಿಸಿದೆ. ಇದು ಇಲ್ಲಿದ್ದಲ್ಲ’ ಎನ್ನುವಾಗ ನಾವೆಲ್ಲ ಬೇಸ್ತು ಬಿದ್ದುದಕ್ಕೆ ನಗು ಬಂತು.
ಇತಿಹಾಸ : ಬ್ರಿಟಿಷ್ ಆಡಳಿತ ಕಾಲದಲ್ಲಿ ವೈಸರಾಯ ಲಾರ್ಡ್ ಕರ್ಜನ್‍ರ ಪತ್ನಿಗೆ ಅವರ ಮಿತ್ರರೊಬ್ಬರು ಘೇಂಡಾ ಮೃಗಗಳ ಬಗ್ಗೆ ಹೇಳಿದಾಗ ವಿಶ್ವಾಸವೇ ಬರಲಿಲ್ಲವಂತೆ. ಕೊನೆಗೆ 1904 ರಲ್ಲಿ ಸ್ವತಹ ಘೇಂಡಾ ಮೃಗಗಳನ್ನು ನೋಡಲು ಕಾಜೀರಂಗಾಕ್ಕೆ ಬಂದರು. ಅವರಿಗೆ ಆವಾಗ ಘೇಂಡಾ ಸಿಗದಿದ್ದರೂ ಅದರ ಕುರುಹುಗಳು ಸಿಕ್ಕಾಗ ನಂಬಿದರು. ಪ್ರಕೃತಿಪ್ರಿಯರಾದ ಇವರು ಸುಮ್ಮನಿರಲಿಲ್ಲ. ವೈಸರಾಯ ಕರ್ಜನ್‍ರಿಗೆ ಕಾಜೀರಂಗಾ ಅರಣ್ಯವನ್ನು ಸುರಕ್ಷಿತ ಅರಣ್ಯವೆಂದು ಘೋಷಿಸುವಂತೆ ಒತ್ತಾಯಿಸಿದರು. 1 ಜೂನ್, 1905 ರಂದು ಕಾಜೀರಂಗಾದ 57,27,360 ಎಕರೆ ಕ್ಷೇತ್ರವನ್ನು ಸುರಕ್ಷಿತ ಅರಣ್ಯವೆಂದು ಸಾರ್ವಜನಿಕವಾಗಿ ಬ್ರಿಟಿಷ್ ಸರಕಾರ ಘೋಷಿಸಿತು. ನಂತರ 3, ಜನವರಿ, 1908 ರಂದು ಸರಕಾರ ಕಾಜೀರಂಗಾವನ್ನು ಸುರಕ್ಷಿತ ಅರಣ್ಯವೆಂದು ಘೋಷಿಸಿ ಬೇಟೆ ಆಡುವುದನ್ನು ನಿಷೇಧಿಸಿತು.
ಭಾರತದಲ್ಲಿ ಘೇಂಡಾ ಮೃಗಗಳಿಗೆ ಅಸ್ಸಾಮ್‍ನ ಕಾಜೀರಂಗಾ ಉದ್ಯಾನದಂತೆಯೇ ಪಶ್ಚಿಮ ಬಂಗಾಳದ ಜಲ್ದಾಪುರ ಕೂಡಾ ಪ್ರಸಿದ್ಧಿ ಇದೆ. ಅಸ್ಸಾಮ್‍ನ ಕಾಜೀರಂಗಾದಲ್ಲಿ ಘೇಂಡಾ ಮೃಗಗಳನ್ನು ಕಳ್ಳಬೇಟೆಯಾಡುವ ಗ್ಯಾಂಗ್ ಬಹಳ ಸಕ್ರಿಯವಿದೆ. 2001 ರಿಂದ 2016 ರ ತನಕ ಅಸ್ಸಾಮ್‍ನಲ್ಲಿ 240 ರಷ್ಟು ಘೇಂಡಾಗಳನ್ನು ಕಳ್ಳ ಬೇಟೆಗಾರರು ಕೊಂದಿದ್ದಾರೆ. ಇದರಲ್ಲಿ ಕಾಜೀರಂಗದಲ್ಲಿ 161 ಘೇಂಡಾಗಳನ್ನು ಕೊಂದಿದ್ದಾರೆ. ಅಸ್ಸಾಮ್‍ನ ಮಾನಸ, ಓರಂಗ್,ಸೋನಿತ್‍ಪುರ್ ಪಾರ್ಕ್‍ಗಳಲ್ಲೂ ಘೇಂಡಾಗಳ ಕಳ್ಳಬೇಟೆ ನಡೆದಿದೆ. ಕಳೆದ 2016 ರಲ್ಲಿ ಕಾಜೀರಂಗದಲ್ಲಿ 12 ಘೇಂಡಾಗಳನ್ನು ಜುಲೈ ತನಕ ಕೊಂದಿದ್ದರು. ಸರಕಾರದ ಕಠಿಣ ಹೆಜ್ಜೆಗಳಿಂದ ನಿಯಂತ್ರಣಕ್ಕೆ ಬಂದಿದೆ ಎಂದರೂ ಘೇಂಡಾಗಳನ್ನು ಕೊಲ್ಲುವುದು ನಿಂತಿಲ್ಲ.
ಮಾರ್ಚ್ 2015 ರ ಗಣತಿಯ ಪ್ರಕಾರ ಕಾಜೀರಂಗಾದಲ್ಲಿರುವ ಘೇಂಡಾಮೃಗಗಳ ಸಂಖ್ಯೆ 2401 ಇದ್ದುವು.. ಇವುಗಳಲ್ಲಿ 1651 ವಯಸ್ಕ ಘೇಂಡಾಗಳು. ಕಾಜೀರಂಗಾದಲ್ಲಿ ಹುಲಿಗಳೂ ಇವೆ. ಕಾಡುಕೋಣ ಹಿಂಡುಗಳೂ ಆಕರ್ಷಣೀಯ. ಜಿಂಕೆ,ಕಡವೆ , ಭಾರತೀಯ ಆನೆ, ಕಾಡುಹಂದಿ, ಕರಡಿ, ಚಿರತೆ, ಅಸ್ಸಾಮಿ ಮಂಗಗಳು, ಹಂಸ, ವಿವಿಧ ಜಲಪಕ್ಷಿಗಳೂ ಪ್ರವಾಸಿ ಪಕ್ಷಿಗಳೂ ಗಮನ ಸೆಳೆಯುತ್ತವೆ.
ಫೆಬ್ರವರಿ ತಿಂಗಳು ಬರುತ್ತಲೇ ಎತ್ತರದ ಹುಲ್ಲುಗಳು ಸಮಾಪ್ತಿಯಾಗಿ ಮೈದಾನ ಕ್ಷೇತ್ರ ಎದ್ದು ಕಾಣುತ್ತವೆ. ಆವಾಗ ಜಾನುವಾರುಗಳು ಸ್ಪಷ್ಟವಾಗಿ ಕಾಣುತ್ತವೆ. ನೀರು ಲಭ್ಯವಿರುವ ಸ್ಥಳಗಳಲ್ಲಿ ಪ್ರಾಣಿಗಳು ಹೆಚ್ಚು ಓಡಾಡಿಕೊಂಡಿರುತ್ತವೆ. ಪ್ರವಾಸಿಗರನ್ನು ಆಕರ್ಷಿಸಲು ¥sóÉಬ್ರವರಿಯಲ್ಲಿ ಆನೆ ಉತ್ಸವ ನಡೆಯುತ್ತದೆ. ಇಲ್ಲಿ ಆನೆ ಮತ್ತಿತರ ಜಾನುವಾರುಗಳ ಸಂರಕ್ಷಣೆಯ ಸಂದೇಶ ನೀಡಲಾಗುತ್ತದೆ.
ನಾಶದ ಅಂಚಿನಲ್ಲಿ ಕಡವೆ
ಅಸ್ಸಾಮ್‍ನಲ್ಲಿ ತನ್ನ ಸಂಖ್ಯೆಯನ್ನು ಇಳಿಸುತ್ತಿರುವ ಹನ್ನೆರಡು ಕೊಂಬುಳ್ಳ ಕಡವೆ (ಬಾರಹ್‍ಸಿಂಗಾ)ಯನ್ನು ಉಳಿಸುವ ಪ್ರಯತ್ನಗಳು ಕಾಣುತ್ತಿದ್ದೇವೆ. ಇದಕ್ಕಾಗಿ ‘ಓಎನ್‍ಜಿಸಿ’ ಮುಂದೆ ಬಂದಿರುವುದು. ಕಾಜೀರಂಗಾ ರಾಷ್ಟ್ರೀಯ ಪಾರ್ಕ್‍ನಲ್ಲಿ ಇವುಗಳ ಸಂಖ್ಯೆ ಅಧಿಕವಿದೆ. ಈ ಪಾರ್ಕ್‍ನಲ್ಲಿ 2010 ರಲ್ಲಿ ಆರುನೂರು ‘ಬಾರಹ್‍ಸಿಂಗಾ’ ಕಡವೆಗಳು ಇದ್ದುವು. ಕಾಜೀರಂಗಾದಲ್ಲಿ ವಿಶ್ವವಿಖ್ಯಾತ ಒಂದು ಕೊಂಬಿನ ಘೇಂಡಾ ಮೃಗಗಳು ಮತ್ತು ಹುಲಿಗಳ ಸಂರಕ್ಷಣೆಗಾಗಿ ಅನೇಕ ರಾಷ್ಟ್ರೀಯ ಅಂತಾರ್ರಾಷ್ಟೀಯ ಸಂಸ್ಥೆಗಳ ಸಹಯೋಗ ದೊರೆತಿದೆ. ವೈಲ್ಡ್‍ಲೈಫ್ ಟ್ರಸ್ಟ್ ಆಫ್ ಇಂಡಿಯಾದ ವರಿಷ್ಟ ಪದಾಧಿಕಾರಿ ರಥಿನ್ ಬರ್ಮನ್ ತಿಳಿಸಿದಂತೆ ಬಾರಹ್‍ಸಿಂಗಾ ಕಡವೆಗೂ ಹೊಸ ಬದುಕು ನೀಡಬೇಕಾಗಿದೆ. ಒಂದು ಕೊಂಬಿನ ಘೇಂಡಾಮೃಗ ಮತ್ತು ರಾಯಲ್ ಬಂಗಾಲ್ ಟೈಗರ್ ತುಲನೆಯಲ್ಲಿ ಬಾರಹ್‍ಸಿಂಗಾ ಹೆಚ್ಚು ಅಪಾಯದಲ್ಲಿದೆ.
ಜಿಂಕೆಗಳಲ್ಲಿ ವಿಶೇಷ ಜಾತಿಯ ಈ ಬಾರಹ್‍ಸಿಂಗಾ ತನ್ನ ವಿಶಿಷ್ಟ ಕೊಂಬುಗಳಿಗೆ ಖ್ಯಾತಿ ಪಡೆದಿದೆ. ಆದರೆ ಮಾಂಸಭಕ್ಷಿ ವನ್ಯಪ್ರಾಣಿಗಳ ಜೊತೆ ಬೇಟೆಗಾರರ ದಾಳಿಗೂ ಇದು ತುತ್ತಾಗುತ್ತಿದ್ದು ಸಂಖ್ಯೆ ಕ್ಷೀಣಿಸುತ್ತಿದೆ. ಆದಿವಾಸಿಗಳಲ್ಲೂ ಇದರ ಮಾಂಸ ಬಹಳ ಜನಪ್ರಿಯವಿದೆ. ಈ ಬಾರಹ್‍ಸಿಂಗಾ ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳದಲ್ಲೂ ಕಂಡುಬರುತ್ತವೆ. (ಆದರೆ ಈ ದಿನಗಳಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಇವುಗಳು ಕಣ್ಮರೆಯಾಗಿವೆ.) 2010 ರಲ್ಲಿ ಇವುಗಳ ಸಂರಕ್ಷಣೆಗಾಗಿ ವೈಲ್ಡ್‍ಲೈಫ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಅಸ್ಸಾಮ್‍ನ ವನ ವಿಭಾಗದ ಜೊತೆ ಒಂದು ಒಪ್ಪಂದವಾಗಿದೆ. ಹಾಗೂ ಓಎನ್‍ಜಿಸಿ ಆರ್ಥಿಕ ನೆರವು ನೀಡಿದೆ.
ಮಂದಿರಗಳಿಗೆ ದಾನದ ಹೆಸರಲ್ಲಿ
ಆನೆ ಸ್ಮಗ್ಲರ್‍ಗಳು ಸಕ್ರಿಯ!
ಮಂದಿರಗಳಿಗೆ ದಾನ ನೀಡುವ ಹೆಸರಲ್ಲಿ ಅಸ್ಸಾಮ್‍ನಿಂದ ಆನೆಗಳನ್ನು ಉತ್ತರ ಪ್ರದೇಶದ ದಾರಿಯಾಗಿ ಜೈಪುರ, ತಮಿಳುನಾಡು…. ಇತ್ಯಾದಿ ಅನ್ಯ ಶಹರಗಳಿಗೆ ಕಳುಹಿಸಲಾಗುತ್ತದೆ. ಆದರೆ ಹಲವಾರು ಬಾರಿ ಆನೆಯ ದಂತ – ಚರ್ಮ ಮತ್ತಿತÀರ ಅಂಗಗಳನ್ನು ಸ್ಮಗ್ಲರ್‍ಗಳಿಗೆ ಮಾರುತ್ತಿರುವ ಪ್ರಕರಣಗಳೂ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವುದೂ ಪತ್ತೆಯಾಗಿವೆ.
ಆನೆ ಸ್ಮಗ್ಲರ್‍ಗಳ ಒಂದು ಸಂಘಟಿತ ಬಳಗವು ಉತ್ತರ ಪ್ರದೇಶ ಮತ್ತು ಬಿಹಾರದ ಮಂದಿರಗಳ ಹೆಸರಲ್ಲಿ ಅಸ್ಸಾಮ್‍ನಿಂದ ಆನೆಗಳನ್ನು ಪಡೆದು ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅದರ ಅಂಗಗಳನ್ನು ಶ್ರೀಲಂಕಾ, ಥಾೈಲಾೈಂಡ್, ಚೀನಾ….. ಇತ್ಯಾದಿ ದೇಶಗಳಿಗೆ ಒಯ್ಯುತ್ತಿದ್ದಾರೆ. ನ್ಯಾಯಾಲಯದಿಂದ ದಾಖಲೆ ಪತ್ರಗಳನ್ನೂ ಈ ಸಂಘಟಿತ ಬಳಗ ದಾರಿಯಲ್ಲಿ ಏನೂ ಕಾನೂನಿನ ತೊಂದರೆಗಳು ಬರಬಾರದು ಎಂದು ಪಡೆದುಕೊಳ್ಳುತ್ತದೆ. ಆನೆಯ ಮಾಲಕರು ತಮ್ಮ ಆನೆಯನ್ನು ಎಲ್ಲೂ ಮಾರಬಹುದು. ಆದರೆ ನಂತರದ ತೊಂದರೆಗಳಲ್ಲಿ ಅವರು ಕೂಡಾ ಸಿಕ್ಕಿಬೀಳಬಹುದು. ಯಾಕೆಂದರೆ ಆನೆಗಳ ಮಾರಾಟಕ್ಕೆ ಕಾನೂನಿನ ಹಲವು ತೊಂದರೆಗಳೂ ಇರುತ್ತವೆ. ಈ ದಂಧೆಯಲ್ಲಿ ಅರಣ್ಯ ಇಲಾಖೆಯ ಜನರೂ ಸೇರಿರುತ್ತಾರೆ ಎನ್ನುವ ಆಪಾದನೆಗಳೂ ಇವೆ. ಕೆಲವು ವರ್ಷದ ಹಿಂದೆ ‘ಪೀಪಲ್ ಫಾರ್ ಎನಿಮಲ್ಸ್’ನ ಸಂಗೀತಾ ಗೋಸ್ವಾಮಿ ಅವರು ಹೇಳಿದಂತೆ ಅಸ್ಸಾಮ್‍ನ ಕೋಕ್ರಾಝಾಡ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಗ್ರೀನ್ ಹಂಟ್’ನ ಸದಸ್ಯರು ಸಾಪ್ತಾಹಿಕ ಹಿಂದಿ ‘ಜಾಗೃತಿ’ಯ ಆಗಿನ ಸಂಪಾದಕ ಆತ್ಮಾ ಚೌಧರಿಯವರ ಜೊತೆ ಸ್ಟಿಂಗ್ ಆಪರೇಶನ್ ನಡೆಸಿ ಬೊಕಾಖಾತ್‍ನಿಂದ ಆನೆಗಳ ಮಾರಾಟ ಮಾಡುತ್ತಿದ್ದ ಕೆಲವರನ್ನು ಹಿಡಿದಿದ್ದರು. ವರ್ಷ 2002 ರಿಂದ ಈ ತನಕ ನೂರಕ್ಕೂ ಹೆಚ್ಚು ಆನೆಗಳನ್ನು ಅಸ್ಸಾಮ್‍ನಿಂದ ಮಂದಿರಗಳಿಗೆ ದಾನದ ಹೆಸರಲ್ಲಿ ರಾಜ್ಯದಿಂದ ಹೊರಗೆ ಕಳುಹಿಸಲಾಗಿದೆ. ಇದರಲ್ಲಿ ಐವತ್ತರಷ್ಟು ಆನೆಗಳನ್ನು ಕೇವಲ ಕೃಷ್ಣಮೋಹನ್‍ಸಿಂಗ್ (ಉತ್ತರ ಪ್ರದೇಶ ನಿವಾಸಿ) ಹೆಸರಲ್ಲಿ ಕಳುಹಿಸಲಾಗಿತ್ತು. ಆಶ್ಚರ್ಯವೆಂದರೆ 2010 ರಲ್ಲಿ ನಡೆಸಿದ ಸ್ಟಿಂಗ್ ಆಪರೇಶನ್‍ನಲ್ಲಿ ಆತ ಸಿಕ್ಕಿಬಿದ್ದ. ಆದರೆ ಆತ ಹೇಳಿದ್ದೇನೆಂದರೆ – “ದಾನ ನೀಡಿದ ನಂತರವೂ ಹೊರಗಡೆ ಒಯ್ಯುವುದಕ್ಕಾಗಿ ವನವಿಭಾಗದಿಂದ ಆದೇಶ ಮತ್ತು ‘ಟಿಪಿ’ ಪಡೆದುಕೊಳ್ಳಬೇಕಾಗುವುದು. ಅದು ಸಿಕ್ಕಿದೆ.” ಎಂದು. ಇದು ತನಿಖೆಗೆ ಬಿಟ್ಟ ಸಂಗತಿ. ಆದರೆ ಈ ಅನುಮತಿ ಇವರಿಗೆಲ್ಲ ಸಿಗುವುದು ಹೇಗೆ? ಎನ್ನುವುದು ಮತ್ತೊಂದು ಚೋದ್ಯದ ಸಂಗತಿ.
ವನ್ಯಜೀವ ಸುರಕ್ಷಾ ಕಾನೂನಿನ ಪ್ರಕಾರ ಆನೆಗಳ ಖರೀದಿ – ಮಾರಾಟ ಪೂರ್ಣರೂಪದಿಂದ ನಿಷೇಧವಿದೆ. ಈ ಕಾರಣ ಆನೆಗಳ ಮಾಲಕರ ಹೆಸರನ್ನು ಬದಲಿಸುವಂತಿಲ್ಲ. ಆದರೆ ಇವರು ಮಂದಿರಕ್ಕೆ ದಾನ ಮಾಡಬಹುದು. ದೇಶದ ಯಾವುದೇ ಮೂಲೆಗೂ ರವಾನಿಸಬಹುದು. ಆದರೆ ಆನೆಯ ಮಾಲಕ ಮಾತ್ರ ಮೊದಲಿನವರೇ ಇರುತ್ತಾರೆ. ಇಲ್ಲಿ ಆ ರಾಜ್ಯದ ವೈಲ್ಡ್‍ಲೈಫ್ ವಾರ್ಡನ್‍ನ ಅನುಮತಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಆನಂತರವೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆನೆಗಳನ್ನು ಕಳುಹಿಸಬಹುದು.
ಅಸ್ಸಾಮ್‍ನಲ್ಲಿ ಅನೆಗಳ ಸಂಖ್ಯೆ ವೃದ್ಧಿಸಿದೆ. ಕಾಡಾನೆಗಳು ಕೆಲವೆಡೆ ಸಮಸ್ಯೆಯೂ ಆಗುವುದಿದೆ. ಈ ಮೊದಲು ಅರಣ್ಯದ ಒಳಗಿನ ಮರಗಳನ್ನು ಹೊರಗಡೆ ತರಲು ಆನೆಗಳನ್ನು ಬಳಸುತ್ತಿದ್ದು ಆನೆಗಳ ಮಾಲಕರಿಗೆ ಉತ್ತಮ ಆದಾಯವೂ ಸಿಗುತ್ತಿತ್ತು. ಆದರೆ ಸುಪ್ರೀಂ ಕೋರ್ಟ್‍ನ ಆದೇಶದ ನಂತರ ಅರಣ್ಯದಲ್ಲಿ ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಲಾಯಿತು. ಹೀಗಾಗಿ ಆನೆಗಳು ‘ನಿರುದ್ಯೋಗಿ’ಗಳಾಗುತ್ತಾ ಬಂದವು! ಆನೆಗಳನ್ನು ಸಾಕುವುದು ಆನೆಗಳ ಮಾಲಕರಿಗೆ ಕಷ್ಟವಾಗುತ್ತಿದೆಯಂತೆ. ಆನೆ ಸ್ಮಗ್ಲರ್‍ಗಳು ಇವುಗಳ ಲಾಭ ಪಡೆಯಲು ಮುಂದಾದರು.
ಅಸ್ಸಾಮ್‍ನಲ್ಲಿ ವನ್ಯ ಜೀವಿಗಳ ಉಪಟಳದಿಂದ ಗ್ರಾಮೀಣ ಜನತೆ ಸಂಕಷ್ಟಕ್ಕೀಡಾಗುವುದೂ ಇದೆ. ಅಸ್ಸಾಮ್ ಸರಕಾರ ವನ್ಯಜೀವಿಗಳ ಹಲ್ಲೆಯಲ್ಲಿ ಸಾವನ್ನಪ್ಪಿದ ಜನರ ಕುಟುಂಬಕ್ಕೆ ಪರಿಹಾರ (ಈ ಹಿಂದೆ) ಒಂದು ಲಕ್ಷ ರೂ. ನೀಡುತ್ತಿತ್ತು. ಅಸ್ಸಾಮ್‍ನಲ್ಲಿ ಮನುಷ್ಯ ಮತ್ತು ಆನೆಯ ನಡುವಿನ ಸಂಘರ್ಷ ಅಧಿಕವಿರುವುದು. ಕಾಡಾನೆ ಅಥವಾ ಇನ್ನಿತರ ಪ್ರಾಣಿಗಳನ್ನು ಕೊಲ್ಲುವುದಿದೆ. ಹೊಲಗಳಲ್ಲಿ ವಿದ್ಯುತ್ ತಂತಿ ಅಳವಡಿಸುವುದಿದೆ. ಆಹಾರಕ್ಕೆ ವಿಷ ಹಾಕುವುದಿದೆ. ವರ್ಷಕ್ಕೆ 40 ರಷ್ಟು ಜನ ಕಾಡಾನೆಗಳ ಕಾರಣ ಸಾವನ್ನಪ್ಪುವ ದೃಶ್ಯಗಳೂ ಹಲವು ವರ್ಷಗಳಿಂದ ಕಾಣಬಹುದು.
ಅಸ್ಸಾಮ್‍ನ ಗೋಲಾಘಾಟ್ ಜಿಲ್ಲೆಯಲ್ಲಿರುವ ಕಾಜೀರಂಗಾ ನೇಷನಲ್ ಪಾರ್ಕ್ ಪರಿಸರದಲ್ಲಿ ಸಾಕಷ್ಟು ಹೊಟೇಲುಗಳು, ರಿಸಾರ್ಟ್‍ಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಅಕ್ಕಪಕ್ಕದಲ್ಲಿ ಅಸ್ಸಾಮಿಯರ ಸಾಂಪ್ರದಾಯಿಕ ಮನೆಗಳನ್ನೂ ಕಾಣಬಹುದು. ‘ಎಥ್ನಿಕ್ ವಿಲೇಜ್’ ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ತಾಣ. ಚಹದ ಅಂಗಡಿಗಳು ಕಾಜೀರಂಗಾದಲ್ಲಿ ಸಾಕಷ್ಟಿದ್ದು ಚಹ ಪೌಡರ್‍ಗಳನ್ನು ಪ್ರವಾಸಿಗರು ಖರೀದಿ ಮಾಡಬಹುದು. ಅಂಗಡಿಗಳಲ್ಲಿ ಮರದ ಘೇಂಡಾಮೃಗಗಳ ಕಲಾಕೃತಿಗಳು ಮಾರಾಟಕ್ಕಿದ್ದು ಇವು ಅಸ್ಸಾಮ್‍ಗೆ ಬಂದ ಪ್ರವಾಸಿಗರು ನೆನಪಿಗಾಗಿ ಖರೀದಿಸುತ್ತಾರೆ. ಆ ರಾತ್ರಿಗೆ ಅಸ್ಸಾಮ್‍ನ ಪ್ರಖ್ಯಾತ ಬಿಹೂ ನೃತ್ಯವನ್ನು ನೋಡುವ ಅವಕಾಶವೂ ನಮಗೆ ಸಿಕ್ಕಿತು.
ಇಲ್ಲಿ ಒಂದು ತಮಾಷೆಯ ಸಂಗತಿ ನಡೆದಿತ್ತು. ನಮ್ಮ ಜೀಪ್ ಸುತ್ತಾಟದಲ್ಲಿ ಅಷ್ಟೇನೂ ಘೇಂಡಾಗಳ ಹಿಂಡು ಕಾಣಲಿಲ್ಲ. ವಾಪಾಸು ಬಂದು ಚಹತೋಟಗಳನ್ನು ಸುತ್ತಾಡಿ ಮತ್ತೆ ನಮ್ಮ ರೂಮಿನತ್ತ ಇನೋವಾ ಕಾರಿನಲ್ಲಿ ಹೊರಟಾಗ ದಾರಿಯಾಲ್ಲಿ ಒಂದೆಡೆ ರಸ್ತೆ ಪಕ್ಕ ಒಂದಷ್ಟು ಜನ ತಮ್ಮ ತಮ್ಮ ಕಾರುಗಳನ್ನು ನಿಲ್ಲಿಸಿ ಕಾಜೀರಂಗಾ ರಾಷ್ಟ್ರೀಯ ಉದ್ಯಾನದ ಮೈದಾನದತ್ತ ವೀಕ್ಷಿಸುತ್ತಿದ್ದರು. ನಾವೂ ಕಾರು ನಿಲ್ಲಿಸಿ ಅತ್ತ ಹೋದೆವು. ಎದುರಿಗೆ ಕಾಣುವ ಮೈದಾನದಲ್ಲಿ ಹತ್ತಿಪ್ಪತ್ತು ಘೇಂಡಾಗಳ ಹಿಂಡು ಮೇಯುತ್ತಿದ್ದ ದೃಶ್ಯ ಕಂಡು ದಂಗಾದೆವು. ನಮ್ಮ ಜೀಪ್ ಸಫಾರಿಯಲ್ಲಿ ಕಾಣದ ದೃಶ್ಯ ಹೈವೇ ನಂಬರ್ 37 ರಲ್ಲಿ ಪ್ರಯಾಣಿಸುವಾಗ ಉದ್ಯಾನದ ಪ್ರವೇಶದ್ವಾರದ ತನಕದ ಹಸಿರು ಮೈದಾನದಲ್ಲಿ ಹುಲ್ಲುಮೇಯುತ್ತಿರುವ ಹಿಂಡು ಹಿಂಡು ಘೇಂಡಾಗಳನ್ನು ಉಚಿತವಾಗಿ ವೀಕ್ಷಿಸಿ ಧನ್ಯರಾದೆವು.
2 thoughts on “ಬಹ್ಮಪುತ್ರಾ ಕಣಿವೆಯಲ್ಲಿನ ‘ಕಾಜೀರಂಗಾ’ ಎಂಬ ಕೌತುಕ”
Kajiranga nodi kandante anisitu. Tumba chennagi vivaranegalu,tippanigalu.. drushyagalannu anubhavisi barediddare.. dhanyavadagalu..photogaloo banana seleyuttave.. intaha lekhanagalige Seagata..ee lockdown alli namma manasigondu badalavane tandantaha lekhana…🙏🙏🙏 Dhanyavadagalu..
ಈ ಬಗೆಯ ಪ್ರವಾಸ ಕಥನದ ಓದು ಖೇಂಡಾ ಮೃಗಗಳ ಕುರಿತಾದಂತಹ ಹಲವು ನಾಲೇಡ್ಜ್ ಗಳನ್ನೂ ತಂದುಕೊಡುವಂಥದ್ದು..