ಈ ಬಾರಿ ಲೊಕೇಶನ್ ಬದಲಾಯಿಸಿ ಕತೆ ಬರೆಯಬೇಕೆಂದು ಯೋಚಿಸುತ್ತಾ ಕುಳಿತಿದ್ದೆ. ರಾತ್ರಿ ಹತ್ತಾಯಿತು. ಅಂತರ್ಜಾಲ ಆಧಾರಿತ ಕವನ ಸ್ಪರ್ಧೆಯ ಫಲಿತಾಂಶ ಬರುವ ಹೊತ್ತು ಎಂದು ಮೊಬೈಲ್‍ನಲ್ಲಿ ಗುಂಪಿಗೆ ಹೋದೆ. ಆಗಲೇ ಫಲಿತಾಂಶ ಹಾಕಿದ್ದರು. ನನಗೆ ಮೂರನೇ ಬಹುಮಾನ ಬಂದಿತ್ತು. ಒಂದು ರೀತಿಯ ನಿರಾಸೆಯಾಯಿತು. ಎಷ್ಟು ಚೆನ್ನಾಗಿ ಬರೆದಿದ್ದೆ ಎಂದು ಯೋಚಿಸುತ್ತಾ ಉಳಿದ ಬಹುಮಾನಿತರ ಹೆಸರು ನೋಡುತ್ತಿದ್ದಾಗ ಕಣ್ಣಿಗೆ ಬಿದ್ದ ಹೆಸರು ಅವಳದು……ಮಧುಮಾಲಾ. ನಿರಾಶೆಯಿಂದ ಮುಕ್ತಿ ಪಡೆಯಲಿಕ್ಕೋ ಎನ್ನುವ ಹಾಗೆ ಗುಂಪಿನಲ್ಲಿದ್ದ ಅವಳ ಕವನವನ್ನು ಓದಬೇಕೆನಿಸಿ ನಿನ್ನೆಯ ಕವನಗಳಲ್ಲಿ ಹುಡುಕಿದೆ. ಬರೇ ಎಂಟು ಸಾಲುಗಳ ಕವನ. ಅದರಲ್ಲಿ ಶಬ್ದಗಳಿದ್ದದ್ದೇ ಕಡಿಮೆ. ಶಬ್ದಗಳ ನಡುವಿನ ಡಾಟುಗಳೇ ಹೆಚ್ಚು. ಮೊದಲ ಓದಿಗೆ ಮನಸಿಗೆ ಏನೂ ಮೂಡಲಿಲ್ಲ ಮನಸಿಗೆ. ಯಾಕೆ ಈ ಕವನಕ್ಕೆ ಬಹುಮಾನ ಕೊಟ್ಟರು; ಏನಾದರೂ ಇರಬೇಕು ಎಂದು ಪುನ: ಓದಿದೆ. ಒಂದು ವಿಚಿತ್ರವಾದ ರೀತಿಯಲ್ಲಿ ಮನಸ್ಸನ್ನು ಭಾರವಾಗಿಸಿ ಬಿಟ್ಟಿತು ಕವಿತೆ. ನಿರಾಸೆ ಮಾಯವಾಗಿ ಬೇರೆ ತರದ ಭಾವಗಳು ತುಂಬಿಕೊಂಡು ಮನಸ್ಸು ಗಂಭೀರತೆಯ ದ್ವಾರವನ್ನು ಹೊಕ್ಕಿತು. ನನಗೆ ಮೂರನೇ ಬಹುಮಾನ ಬಂದದ್ದು ಖೇದವೆನಿಸಲಿಲ್ಲ. ನನಗಿಂತ ಅವಳ ಕವಿತೆ ಚೆನ್ನಾಗಿದೆ ಎಂದು ಮನಸ್ಸು ಒಪ್ಪಿಕೊಂಡಿತು.
ಹಾಗೆ ಕುಳಿತಿದ್ದಾಗ ಯಾವುದೋ ಕುತೂಹಲ ಮೂಡಿ ಅವಳಿಗೊಂದು ವಾಟ್ಸಪ್ ಮೆಸೆಜ್ ಹಾಕಿದೆ. “ನಿಮ್ಮ ಬಹುಮಾನಿತ ಕವಿತೆ ಓದಿದೆ. ಕಾಡುವ ಕವಿತೆ ಬರೆದಿದ್ದೀರಿ. ಅಭಿನಂದನೆಗಳು. ನಿಮ್ಮ ಬೇರೆ ಕವಿತೆಗಳಿದ್ದರೆ ಕಳಿಸಿ” ಎಂದು ಮುಗಿಸಿದೆ. ನಾನು ಮೂರನೇ ಬಹುಮಾನ ಪಡೆದ ಸಹಸ್ಪರ್ಧಿ ಎಂದು ಇನ್ನೊಂದು ಕಿರು ಸಂದೇಶ ಸೇರಿಸಿದೆ ಅವಳಾಗಿ ಕೇಳುವುದು ಬೇಡವೆಂದು. ಹೀಗೆ ಕವಯಿತ್ರಿಯರನ್ನು ಹಾಡಿ ಹೊಗಳುವ ಎಷ್ಟು ಸಂದೇಶಗಳು ಈ ಗುಂಪಿನಲ್ಲಿ ಓಡಾಡುತ್ತವೋ ತಿಳಿದವರು ಯಾರು? ಉತ್ತರ ಬರೆಯುತ್ತಾಳೆಂಬ ಭರವಸೆಯೇನೂ ಇರಲಿಲ್ಲ. ಅಂತರ್ಜಾಲದಲ್ಲಿ ಹೀಗೆ ಸಂದೇಶ ಹಾಕಿ ಪ್ರವೇಶ ಬಯಸುವವರು ಬಹಳ ಮಂದಿ. ಅಂತಹ ಸಂದೇಶಗಳನ್ನು ಪ್ರತಿಕ್ರಿಯಿಸದ ಜಾಣ್ಮೆಯನ್ನು ಕವಯಿತ್ರಿಯರೂ ಬೆಳೆಸಿಕೊಂಡಿರಬಹುದಲ್ಲವೇ? ಇದೂ ಕೂಡ ಅಂಥದೇ ಒಂದು ಎಂದು ತಿರಸ್ಕøತವಾಗಬಹುದೆಂಬ ಸಾಧ್ಯತೆಯನ್ನು ಅಲ್ಲಗಳೆಯದೆ ನನ್ನ ಕೆಲಸ ಮುಗಿಸಿ ನಿದ್ದೆಮಾಡಲು ಎದ್ದೆ.
ಹೀಗೆ ಕಳುಹಿಸಿದ ಸಂದೇಶಕ್ಕೆ ಎರಡು ದಿನಗಳಾದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಮಧ್ಯೆ ನಾನು ಒಂದೆರಡು ಕವನಗಳನ್ನು ಬರೆದು ಮಧುಮಾಲನ ಹಾಗೆ ಡಾಟೆಡ್ ಲೈನ್ಸ್ ಸೇರಿಸಿ ಗಂಭೀರತೆಯನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಪ್ರತಿದಿನ ನಡೆಯುವ ಆ ಗುಂಪಿನ ಸ್ಪರ್ಧೆಗೆ ಕಳಿಸಿದೆ. ಮತ್ತೆ ಆ ದಿನದ ಬಹುಮಾನ ಅವಳದೇ ಆಗಿತ್ತು. ನನ್ನದು ಮೂರರಿಂದ ಎರಡನೇ ಸ್ಥಾನಕ್ಕೆ ಏರಿತ್ತು! ಯಾಕೋ ಅವಳ ಪ್ರತಿಕ್ರಿಯೆ ಬರಲಿ ಎಂದು ಅವ್ಯಕ್ತ ಹಂಬಲ ಮೆಲ್ಲನೆ ಸುಳಿಯಿತು. ಅದಕ್ಕಾಗಿ ನೆನಪಿಸುವುದು ಶಿಷ್ಟತೆಯಲ್ಲವೆಂದು ಸುಮ್ಮನಾದೆ. ಅವಳು ಎಂಥವಳೋ ಎಂದು ಮನಸ್ಸು ನಿರತ್ಸಾಹ ತಾಳಿತು. ಹೆಣ್ಣನ್ನು ಇಂತಹ ಸಂಬಂಧದಾಚೆಗೆ ಎಷ್ಟು ಜನ ಶಿಷ್ಟತೆಯಿಂದ ನೋಡುತ್ತಾರೆ?
ಇಂದಿನ ದಿನಗಳಲ್ಲಿ ವಿಶಿಷ್ಟ ಕತೆಗಳನ್ನು ಬಯಸುವ ಓದುಗರಿಗೆ ಈ ಮಧುಮಾಲನಂತಹ ಪಾತ್ರವನ್ನು ವಿಸ್ತರಿಸಿ ಬರೆದರೆ ಒಳ್ಳೆಯ ಕತೆಯಾದೀತು ಎಂಬ ಯೋಚನೆ ಅವಳ ಬಗ್ಗೆ ಆಸಕ್ತಿಯನ್ನು ಉಳಿಸಿಕೊಂಡಿತು. ಅಂದಿನ ಸ್ಪರ್ಧೆಯಲ್ಲಿ ಅವಳ ಕವನವಿತ್ತು….. ಅದರಲ್ಲಿ ಹೊಸತಾಗಿ ಕಂಡುಕೊಂಡ ಒಂದು ಗಂಡಸಿನ ಆಸಕ್ತಿಯ ಸೂಕ್ಷ್ಮ ಎಳೆಯಿದ್ದಂತೆ ನನಗೆ ಅನಿಸಿತು. ಡಾಟೆಡ್ ಲೈನುಗಳು ಕಡಿಮೆಯಾಗಿದ್ದುವು.
ಮರುದಿನ ಬೆಳಗ್ಗೆ ಎಂದಿನಂತೆ ಮೊಬೈಲು ತೆರೆದಾಗ ಒಂದು ಚಿಕ್ಕ ಮೆಸೆಜ್ ಇತ್ತು “ನೀವು ನಿಮ್ಮನ್ನು ಸರಿಯಾಗಿ ಪರಿಚಯಿಸಿಲ್ಲ”. ನನ್ನ ಸಂದೇಶ ತಾತ್ವಿಕ ಕೊನೆ ಕಂಡಿಲ್ಲ ಎಂದು ಅನಿಸಿ ನನ್ನ ದೊಡ್ಡಸ್ತಿಕೆಗಳಿಗೆ ವಾಕ್ಯರೂಪ ಕೊಟ್ಟು ಸಂಕ್ಷಿಪ್ತವಾಗಿ ಕಳುಹಿಸಿದೆ. ಅವಳು ನನ್ನನ್ನು ತಿರಸ್ಕರಿಸಿಲ್ಲ ಎಂಬುದೇ ಒಂದು ಸಮಾಧಾನಕ್ಕೆ ಕಾರಣವಾಯಿತು. ಬಹುಷ್: ನನ್ನ ಹಿಂದಿನ ದಿನದ ಕವನ ತನ್ನ ಕವನದ ಜಾಡು ಹಿಡಿಯುತ್ತಿರುವುದು ನೋಡಿದ್ದರಿಂದ ಅವಳು ಉತ್ತರಿಸಿರಬೇಕು ಅಂದುಕೊಂಡೆ.
ಯಾವುದೇ ನಿಶ್ಚಿತ ಅಜೆಂಡಾ ಇರಲಿಲ್ಲ ನನ್ನ ಇತ್ತೀಚಿನ ದಿನಚರಿಯಲ್ಲಿ, ಸರಕಾರಿ ಕೆಲಸದಿಂದ ನಿವೃತ್ತನಾಗಿ ನಾಲ್ಕೈದು ತಿಂಗಳುಗಳಾಗಿವೆ. ಖರ್ಚಿಗೆ ಸಾಕಷ್ಟು ಪಿಂಚಣಿ ಬರುತ್ತದೆ. ಮಕ್ಕಳು ನೆಲೆ ಕಂಡಿದ್ದಾರೆ. ಹೆಂಡತಿಗೆ ಮನೆವಾರ್ತೆಯ ಆಸಕ್ತಿಯ ಕೆಲಸವಿದೆ. ಅಂತಹ ಸಂದರ್ಭದಲ್ಲಿ ಕೆಲಸದಲ್ಲಿರುವಾಗ ಮಾಡಲಾಗದ ಸಾಹಿತ್ಯ ಕೃಷಿ ಈಗ ಮೆಲ್ಲನೆ ಬಿರುಸು ಪಡೆಯುತ್ತಿದೆ. ಸಂಬಂಧಗಳನ್ನು ಅವಸರದಲ್ಲಿ ಬೆಳಿಸಿಕೊಳ್ಳಬಾರದು. ಹೆಚ್ಚು ಅದರ ಬೆನ್ನು ಹಿಡಿಯಬಾರದು ಎಂದು ಅನುಭವದಿಂದ ತಿಳಿದು ಅದನ್ನೇ ಅನುಸರಿಸುತ್ತಾ ಬಂದಿದ್ದೆ.
ಕೆಲ ದಿನಗಳಿಂದ ಮಧುಮಾಲಾಳಿಂದ ಯಾವುದೇ ಸಂದೇಶಗಳಿಲ್ಲ. ಆ ಗುಂಪಿನ ಭಾಗವಹಿಸಿದವರ ಪಟ್ಟಿಯಲ್ಲಿಯೂ ಅವಳ ಹೆಸರು ಕಾಣಲಿಲ್ಲ. ಪ್ರಶಸ್ತಿ ಪತ್ರ ಮಾತ್ರ ಸಿಗುವ ಈ ಅಂತರ್ಜಾಲ ಸ್ಪರ್ಧೆಯಲ್ಲಿ ನನ್ನ ಆಸಕ್ತಿಯೂ ಸ್ವಲ್ಪ ಕಡಿಮೆಯೇ ಆಯಿತು. ಅವಳು ಭಾಗವಹಿಸದಿರುವುದೇ ಮುಖ್ಯ ಕಾರಣವೋ ಎನ್ನುವುದು ನನಗೇ ಗೊತ್ತಿಲ್ಲ.! ಹಾಗಿರುವ ಒಂದು ದಿನ ಅವಳ ಧಾಟಿಯಲ್ಲಿ ಬರೆದ ಕವನಕ್ಕೆ ಪ್ರಥಮ ಸ್ಥಾನ ಬಂದು ಒಂದು ಖುಷಿಯೂ ಆಯಿತು. ಆದರೂ ಒಂದು ಪೂರ್ಣ ಹಿತವಿಲ್ಲದ ಭಾವ! ಅವಳನ್ನು ಅನುಕರಣೆ ಮಾಡಿ ಪಡೆದ ಮೊದಲ ಬಹುಮಾನವೆಂಬ ಕೀಳರಿಮೆ. ಮೇಲಾಗಿ ಅವಳು ಸ್ಪರ್ಧಿಸದ ದಿನಗಳಲ್ಲಿ ಗಳಿಸಿದ ಹೆಗ್ಗಳಿಕೆಯೆಂಬ ಅರಿವು! ಒಂದೊಮ್ಮೆ ಮೀರಿಸಿಬಿಡಬೇಕೆಂದರೆ ಅವಳೇ ಪತ್ತೆಯಿಲ್ಲ…… ಸಮಾಚಾರವೂ ಇಲ್ಲ.
ಇಂತಹ ಸಂಭವಗಳಿಲ್ಲದ ಒಂದು ದಿನ ಅವಳ ಸಂದೇಶ ಬಂತು.
“ನನ್ನ ಬಗ್ಗೆ ಕೇಳಿದ್ದೀರಿ… ಏನೆಂದು ಹೇಳಲಿ? ನಿಮ್ಮ ಮುಂದೆ ನನ್ನದೇನೂ ಸಾಧನೆ ಇಲ್ಲ. ಸುಮ್ಮನೆ ಬರೆಯುತ್ತೇನೆ…….. ಆರೋಗ್ಯ ಪೂರ್ತಿ ಸರಿಯಿಲ್ಲದ ಹುಡುಗಿ ನಾನು…… ಗಿಡ, ಮರ, ನೀರು, ನೆಲ, ಹಕ್ಕಿಗಳನ್ನು ಪ್ರೀತಿಸುವ ಹಳ್ಳಿಯವಳು … ನನ್ನ ಆಸಕ್ತಿಗಳ ನಮ್ಮೂರಿನ ವಿಡಿಯೋ ಹಾಕಿದ್ದೇನೆ” ಎಂದು ಸಂದೇಶ ಮುಗಿಸಿದ್ದಳು.
ವಿಡಿಯೋ ತೆರೆದು ನೋಡಿದೆ. ಮನುಷ್ಯ ಪಾತ್ರಗಳಿಲ್ಲದ ಗಾಥೆಯ ಹಾಗಿತ್ತು. ಮಳೆ ಬಂದ ಒಂದು ದಿನದ ನಾಲ್ಕೈದು ನಿಮಿಷಗಳ ವಿಡಿಯೋ ಆಗಿತ್ತದು. ತನ್ನ ಮನೆಯ ಅಂಗಳದಿಂದ ಹೊರಟು ಹತ್ತಿರದಲ್ಲಿ ಹರಿಯುವ ಹಳ್ಳದ ದಾರಿಯಾಗಿ ನಡೆದು ವಿಡಿಯೋ ಹಿಡಿದಿದ್ದಳು. ಅವಳು ನಡೆಯುವ ಜುಳು ಜುಳು ಎಂಬುದು ಬಿಟ್ಟರೆ ಬೇರೆ ಸದ್ದಿರಲಿಲ್ಲ….ಹರಿಯುವ ನೀರಿನಲ್ಲಿ ಮೂಡುವ ತರಂಗಗಳನ್ನು ಚೆನ್ನಾಗಿ ಸೆರೆಹಿಡಿದಿದ್ದಳು. ಹೊಳೆಯ ಬದಿಯಲ್ಲಿ ಬೆಳೆದ ಬಿದಿರಿನ ಗಿಡಗಳು, ನೀರು ಹರಿದು ಉಂಟಾದ ಕೊರಕಲು ಎಲ್ಲವೂ ಸ್ವಾಭಾವಿಕವಾಗಿ ಬಿಂಬಿತವಾಗಿತ್ತು. ಹಳ್ಳದಿಂದ ಮೇಲೇರಿ ತನ್ನ ಹೊಲದ ಕಡೆಗೆ ನಡೆದು ಬೆಳೆಸಿದ ಚೆಂಡು ಹೂಗಳ ತೋಟವನ್ನು ತೋರಿದಳು. ವಾಪಸ್ಸಾಗುತ್ತಾ ಮೇಲಿನಿಂದ ಹರಿದು ಬಂದು ಹೊಳೆಗೆ ಸೇರುವ ಝರಿಯನ್ನು ಸೆರೆಹಿಡಿದಿದ್ದಳು. ನೀರು ಸ್ವಲ್ಪ ರಭಸದಿಂದ ಹರಿದು ಜೇಡಿ ಮಣ್ಣನ್ನು ಕೊರೆದು ಒಂದು ವಿಶಿಷ್ಟ ವಿನ್ಯಾಸವನ್ನೇ ಹುಟ್ಟಿಸಿತ್ತು. ವಿಡಿಯೋದ ಕೊನೆಯಲ್ಲಿ ಅಂಗಳದ ಅಂಚಿನಲ್ಲಿ ತಾನು ಮರ ಹತ್ತಿದ ಒಂದು ಚಿತ್ರಮನ್ನು ತೋರಿದ್ದಳು.
ಸೆಣಕಲು ದೇಹ; ಉದ್ದಕ್ಕಿದ್ದಳು. ಯಾವುದೋ ರೋಗ ಬಾಧಿಸಿದಂತೆ ಕ್ಷೀಣವಾಗಿದ್ದಳು. ಸಾಧಾರಣ ಮಾಸಿದ ಬಟ್ಟೆ ತೊಟ್ಟಿದ್ದಳು. ಯಾವುದೇ ಕೃತಕತೆಯಿಲ್ಲದ ಸಾಧಾರಣ ಹಳ್ಳಿ ಹುಡುಗಿ. ಏನೇನೋ ನಿರೀಕ್ಷಿಸಿ ಸಂದೇಶ ಕಳಿಸಿದ ನನಗೆ ನಿರಾಶೆಯೆನಿಸಿತು. ಅವಳು ತನ್ನ ಸಂದೇಶದಲ್ಲಿ ಹೇಳಿದ ಅಸ್ವಸ್ಥತೆ ಅವಳ ದೇಹವನ್ನು ಆವರಿಸಿದಂತೆ ತೋರಿತು. ಸ್ವಲ್ಪ ಉಬ್ಬಿದ ಹಲ್ಲುಗಳು. ಕೂದಲು ಅಸ್ತವ್ಯಸ್ತವಾಗಿತ್ತು.
ಏನೋ ಆಕರ್ಷಣೆಯ ಬೆನ್ನುಹತ್ತಿ ಹೊರಟವನಿಗೆ ಕಂಡದ್ದು ತೀರಾ ಅನಿರೀಕ್ಷಿತ ಹೆಣ್ಣು ಜೀವ. ಬಹುóಷ: ಮೊದಲೇ ತನ್ನನ್ನು ತಾನು ತೋರಿಸಿದ್ದರೆ ನೋಡುವವರು ನಿರಾಶೆಯಿಂದ ಮುಂದೆ ನೋಡಲಾರರು ಎಂದು ಮೊದಲು ಆಸಕ್ತಿ ಹುಟ್ಟುವಂತಿದ್ದ ವಿಡಿಯೋ ತೋರಿ ಕೊನೆಗೆ ತನ್ನನ್ನು ತಾನು ತೋರಿರಬೇಕು ಎಂದುಕೊಂಡೆ. ಮುಂದೇನು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬರಲಾಗಲಿಲ್ಲ. “ಇರಲಿ, ಅವಳ ಪರಿಸರವನ್ನೂ ತೆಗೆದುಕೊಂಡು ಅವಳನ್ನೂ ಪಾತ್ರವಾಗಿಸಿ ಒಂದು ಕತೆ ಬರೆಯಬೇಕು ಅಂದುಕೊಂಡೆ. ಇನ್ನೂ ವಿಸ್ತøತ ಮಾಹಿತಿ ಬರಲಿ ಎಂಬ ಉದ್ದೇಶದಿಂದ ಒಂದು ಪುಟ್ಟ ಸಂದೇಶ ಕಳುಹಿಸಿದೆ.
“ನಿರಾಶೆಯೇನೂ ಆಗಲಿಲ್ಲ, ನನ್ನದೂ ಹಳ್ಳಿಯ ಪರಿಸರವೇ… ತಾದಾತ್ಮ್ಯ ತೋರಿತು… ಇನ್ನೂ ಹೆಚ್ಚಿನ ಪರಿಸರ ನೋಡಬೇಕೆನಿಸಿದೆ. ನಿಮ್ಮ ವೃತ್ತಿಯ ಬಗ್ಗೆಯೂ ತಿಳಿಸಿ” ಎಂದು ಸಂದೇಶ ಕಳುಹಿಸಿದೆ. ಅವಳನ್ನು ನಿರಾಶಗೊಳಿಸಬಾರದೆಂಬುದು ಒಂದು ಕಾರಣವಾದರೆ ಮುಂದಿನ ಕತೆಗೆ ಒಂದು ಸೂಕ್ತ ಲೊಕೇಶನಿಗೆ ಬೇಕಾದಷ್ಟು ಮಾಹಿತಿ ಬೇಕಲ್ಲಾ ಎಂಬ ಸ್ವಾರ್ಥವೂ ಇತ್ತು. ಹೆಣ್ಣುತನದ ಸುಸಂಸ್ಕøತ ಕವಯಿತ್ರಿಯೊಡನೆ ಸ್ನೇಹ ಬೆಳಸುವ ಅಜೆಂಡ ಹೆಚ್ಚು ಕಡಿಮೆ ದೂರವೇ ಸರಿಯಿತು. ಮೇಲಾಗಿ ಅವಳು ನನ್ನನ್ನು ಅಣ್ಣಯ್ಯ ಎಂದು ಸಂಬೋಧಿಸುತ್ತಿದ್ದುದು ಇನ್ನೂ ಒಂದು ಕಾರಣವಾಯಿತು. ಒಂದು ಹೆಣ್ಣು ಜೀವದೊಡನೆ ಅಣ್ಣಯ್ಯನೆಂಬ ಸಂಬಂಧ ಬೆಳೆಸಲು ಎಷ್ಟು ಗಂಡಸರಿಗೆ ಆಸಕ್ತಿಯಿರುತ್ತದೋ ನನಗೆ ಊಹಿಸಲಾಗಲಿಲ್ಲ?
ಕಳಿಸಿದ ಸಂದೇಶಕ್ಕೆ ಈ ಬಾರಿ ವಿಳಂಬವಿಲ್ಲದೆ ಉತ್ತರಿಸಿದಳು. ಅವಳು ಈ ಬಾರಿ ಕಳಿಸಿದ ವಿಡಿಯೋದಲ್ಲಿ ಕೃಷಿ ವೃತ್ತಿಯ ಐದು ನಿಮಿಷಗಳ ವಸ್ತು ಇತ್ತು. ಅದರಲ್ಲಿ ಅವಳೇ ನೇಗಿಲು ಹಿಡಿದು ಉಳುವ ಚಿತ್ರವಿತ್ತು. ಗಿಡಗಳಿಂದ ಗೊಂಡೆ ಹೂಗಳನ್ನು ಅವಳು ಬೇರೆ ಆಳುಗಳ ಜೊತೆ ದೊಡ್ಡ ಚೀಲಗಳಲ್ಲಿ ತುಂಬುವ ಚಿತ್ರವೂ ಇತ್ತು. ಒಟ್ಟಿನಲ್ಲಿ ಅವಳು ಕೃಷಿ ಬದುಕಿನ ಹುಡುಗಿ ಎಂಬಂತೆ ಕಂಡುಬಂತು.
ಒಂದು ಕ್ಷಣ ವಿಚಲಿತನಾದೆ. ಅವಳು ಇಷ್ಟು ಚೆನ್ನಾಗಿ ಕವನ ಬರೆಯುವುದಕ್ಕೂ ಅವಳ ನಿಜ ಜೀವನಕ್ಕೂ ತಾಳೆಹಾಕುವುದು ನನ್ನ ಊಹೆಗೆ ಸಿಲುಕಲಿಲ್ಲ. ಬರೇ ಇಷ್ಟರಲ್ಲೇ ಕತೆ ಕಟ್ಟುವುದು ಸಾಧ್ಯವಿರಲಿಲ್ಲ. ಆದರೆ ಪಾತ್ರ ಕತೆ ಕಟ್ಟಲು ಸೂಕ್ತವಾದದ್ದು ಎಂದು ಮನಸಿಗೆ ಅನಿಸಿತು. ಅವಳಲ್ಲಿ ಒಂದು ಕತೆ ಅಡಗಿರಬಹುದೆಂದು ಒಳ ಮನಸು ಹೇಳುತ್ತಿತ್ತು. ಸ್ಪರ್ಧೆಗೆ ಕತೆಯನ್ನು ಕಳುಗಿಸಲು ಇನ್ನೂ ಹತ್ತು ದಿನಗಳು ಮಾತ್ರ ಇದ್ದುದರಿಂದ ನನ್ನ ಕತೆ ಬರೆಯುವ ವಿಚಾರವನ್ನು ತಿಳಿಸುತ್ತಾ ನಾನು ನಿಮ್ಮ ಊರು ನೋಡಲು ಬರಬಹುದೇ ಎಂದು ಮೆಸೆಜ್ ಕಳುಹಿಸಿದೆ. ವಾಟ್ಸಪ್‍ಗೆ ‘ನಿಮ್ಮ ಓದಿಗಾಗಿ’ ಎಂದು ಇತ್ತೀಚೆಗೆ ಪ್ರಕಟವಾದ ನನ್ನ ಕತೆಯನ್ನು ಕಳುಹಿಸಿದೆ.
ಮರುದಿನವೇ ಲವಲವಿಕೆಯ ಉತ್ತರ ಬಂತು. “ನಿಮ್ಮ ಕತೆ ಓದಿದೆ. ನಮ್ಮದೇ ಕತೆ ಬರೆದಂತೆ ಅನಿಸಿತು. ನೀವು ಯಾವಾಗ ಬರುತ್ತೀರಿ ತಿಳಿಸಿ. ನೀವು ಹೂ ಕೊಳ್ಳುವವರ ಪಾತ್ರದಲ್ಲಿ ಬರಬೇಕು… ಕಾರಣ ಮುಖತಾ ತಿಳಿಸುವೆ” ಎಂದು ಮರುತ್ತರ ಬರೆದಳು. ಈ ಬಾರಿ ಹಳ್ಳಿಯವರಂತೆ ಕಾಣುವ ಅಮ್ಮ ಅಪ್ಪನ ಚಿತ್ರವನ್ನೂ ಕಳಿಸಿದಳು. ಯಾಕೆ ನನಗೆ ಹೂ ವ್ಯಾಪಾರಿಯ ಪಾತ್ರ ಕೊಟ್ಟಳು ಎಂದು ಕುತೂಹಲವೂ ಕೆರಳಿತು. ನನಗೆ ಅವಸರವಿರುವುದರಿಂದ ಮರುದಿನವೇ ಬರುವುದಾಗಿ ತಿಳಿಸಿ ಸೊರಬದ ಬಸ್ಸು ಹಿಡಿದೆ.
ದಾರಿಯುದ್ದಕ್ಕೂ ತುಂತುರು ಮಳೆ. ನೋಡಲು ಅನುಕೂಲವಾಗಲಿ ಎಂದು ಕಿಟಿಕಿಯ ಬದಿಯ ಸೀಟು ಹಿಡಿದಿದ್ದೆ. ಬಸ್ಸು ತುಂಬಾ ಹಳ್ಳಿಯವರೇ ತುಂಬಿದ್ದರು. ಸೊರಬದಲ್ಲಿ ಇಳಿಯುವಾಗ ಮಧ್ಯಾಹ್ನವಾಗಿತ್ತು. ಮಧುಮಾಲಳ ಊರು ಬರೇ ನಾಲ್ಕು ಕಿ.ಮೀ ದೂರವಿತ್ತು. ಆಟೋ ಹಿಡಿದು ಅವಳ ಮನೆಯಿರುವ ಸಂತೆಹಳ್ಳಿಗೆ ಬಂದು ನಾಲ್ಕಾರು ಅಂಗಡಿಗಳಿರುವ ತಾಣದಲ್ಲಿ ಕೇಳಿದೆ. ಅವಳ ಮನೆಯ ದಾರಿ ತೋರಿದರು. ಆಟೋ ಮುಂದಕ್ಕೆ ಓಡಿತು. ವಾಹನ ಚಲಿಸುತ್ತಿದ್ದಂತೆ ಅದೇ ತೋಡು, ಅದೇ ಹೊಳೆ, ಅದೇ ಜುಳು ಜುಳು; ಇಲ್ಲವೂ ವಿಡಿಯೋದಲ್ಲಿದ್ದ ಹಾಗೇ ಇತ್ತು. ಊರಿನ ತುಂಬ ನವರಾತ್ರಿಗೆ ಸರಿಯಾಗಿ ಬೆಳೆ ಬರುವಂತೆ ಎಲ್ಲಿ ನೋಡಿದರಲ್ಲಿ ಗೊಂಡೆ ಹೂವಿನ ಬೆಳೆ. ಮೊಗ್ಗು ಬಿಡುತ್ತಿದ್ದುವು. ಆಟೋದಿಂದ ಇಳಿದದ್ದು ಮನೆಯಂಗಳದಲ್ಲಿ. ಹಂಚು ಹೊದಿಸಿದ ಚಿಕ್ಕ ಮನೆ ಎದುರಿಗಿತ್ತು. ಹಂಚು ಕಾಣದ ಹಾಗೆ ಸೋರೆಕಾಯಿಯ ಬಳ್ಳಿ ಸುತ್ತಲೂ ಹಬ್ಬಿತ್ತು. ಅಂಗಳದ ಮೂಲೆಯಲ್ಲಿ ವಿಸ್ತಾರಕ್ಕೆ ಚಾಚಿದ್ದ ಬೃಹತ್ತಾದ ಆಲದ ಮರವಿತ್ತು. ಅದಕ್ಕೆ ನಿಷ್ಕ್ರಿಯವಾಗಿ ಜೋಕಾಲಿ ತೂಗುತ್ತಿತ್ತು. ವಾಹನದ ಸದ್ದು ಕೇಳಿ ಹುಡುಗಿ ಹೊರಬಂದಳು. ” ಬನ್ನಿ” ಎನ್ನುತ್ತಾ ಸ್ವಾಗತಿಸಿದಳು. ವಿಡಿಯೋದಲ್ಲಿ ನೋಡಿದಂತೆಯೇ ಇದ್ದಳು. ತುಂಬಾ ನಿಸ್ತೇಜಳಾಗಿ ಕಂಡಳು. ಅಂಗಳ ದಾಟಿ ಒಳಗೆ ಹೋದೆ. ವಿಶಾಲವಾದ ಚಾವಡಿಯೆಲ್ಲ ಖಾಲಿ ಖಾಲಿ ಕಾಣುತ್ತಿತ್ತು. ಗಾರೆ ಮಾಡದ ಮನೆ. ಇಟ್ಟಿಗೆಗಳು ಬೆತ್ತಲಾಗಿ ಕಾಣುತ್ತಿದ್ದುವು. ಒಂಟಿ ಕೆಲೆಂಡರ್ ತೂಗುತ್ತಿತ್ತು;ಪಕ್ಕದಲ್ಲಿ ಗಡಿಯಾರವೂ. ಉಳಿದಂತೆ ಗೋಡೆಯೆಲ್ಲವೂ ಖಾಲಿಯೇ. ಬಲ ಬದಿಗೆ ಅಡಿಗೆ ಮನೆ. ಅದರ ಹಿಂದೆ ಬಚ್ಚಲು. ಎಡಗಡೆಗೆ ಮಲಗುವ ಕೋಣೆಯಂತಹ ಎರಡು ಕೋಣೆಗಳು. ಚಾವಡಿಯ ಹಿಂದಿನ ಕಿಟಿಕಿಯಿಂದ ಇಣುಕಿದರೆ ಜಾನುವಾರುಗಳ ಹಟ್ಟಿ ಇತ್ತು. ಹಸುಗಳು ಹುಲ್ಲು ಜಗಿಯುತ್ತಾ ನಿಂತಿದ್ದುವು. ಮನೆಯಲ್ಲಿ ವೈಭವದ ಒಂದು ವಸ್ತುವೂ ಕಾಣಲಿಲ್ಲ. ಗೋಡೆಗೆ ತಗಲು ಹಾಕಿದ್ದ ಒಂದು ವಡ್ಡುವಡ್ಡಾದ ಹಲಿಗೆಯ ಮೇಲೆ ಅವಳಿಗೆ ಬಂದ ಕೆಲವು ಪ್ರಶಸ್ತಿಗಳ ಫಲಕಗಳಿದ್ದುವು. ಅವುಗಳು ದೂಳು ಹಿಡಿದು ಅಸ್ತವ್ಯಸ್ತವಾಗಿ ಕುಳಿತಿದ್ದುವು.
“ಮನೆ ಹುಡುಕುವುದು ಕಷ್ಟವಾಯಿತಾ ಅಣ್ಣಯ್ಯ; ಫೋನ್ ಮಾಡಿದರೆ ನಾನೇ ಬರುತ್ತಿದ್ದೆನಲ್ಲ” ಎಂದು ಉಪಚರಿಸಿದಳು. ಹುಡುಗಿ ವಿಡಿಯೋದಲ್ಲಿ ನೋಡಿದ್ದಕ್ಕಿಂತ ವ್ಯತಿರಿಕ್ತವಾಗಿರಲಿಲ್ಲ. ಒಂದೇ ವ್ಯತಾಸವೆಂದರೆ ಒಬ್ಬ ಅರೆಬರೆ ಕವಯಿತ್ರಿ ಎನ್ನುವ ಬದಲಿಗೆ ಒಬ್ಬ ಪ್ರಬುದ್ಧ ಲೇಖಕಿಯೆಂದು ಅವಳ ಪ್ರಶಸ್ತಿಗಳನ್ನು ಕಂಡಾಗ ಅನಿಸಿತು. ನನ್ನನ್ನು ಹೇಗೆ ಸುಧಾರಿಸಬೇಕೆಂಬ ತಬ್ಬಿಬ್ಬು ತಾಯಿ-ಮಗಳ ಮುಖದಲ್ಲಿ ವ್ಯಕ್ತವಾಗಿ ಗಮನಿಸಿದೆ. ಅವರ ತಳಮಳವನ್ನು ಸ್ವಲ್ಪ ಕಡಿಮೆ ಮಾಡಲು ಅವರ ಬೇಸಾಯದ ವಿಚಾರ ತೆಗೆದುಕೊಂಡು ಮಾತನಾಡತೊಡಗಿದೆ…. ಹೂವಿನ ವ್ಯಾಪಾರದ ಕುರಿತು ಮಾತನಾಡಿದೆ. ಅವರ ನನ್ನ ಮಧ್ಯೆ ಇದ್ದ ಅವ್ಯಕ್ತ ಭಾವ ಮಾಯವಾದಂತೆ ಅನಿಸಿತು. ಅವಳಮ್ಮ ಒಳಗೆ ಹೋದರು. ಮಧು ಹೇಳಿದಳು:
“ಅಪ್ಪಯ್ಯ ಹೊರಗಡೆ ಹೋಗಿದ್ದಾರೆ, ಅವರು ಎಷ್ಟು ಹೊತ್ತಿಗೆ ಬರುತ್ತಾರೋ ಹೇಳಲಾಗದು. ಕತ್ತಲಾಗುವ ಮೊದಲು ಊರು ನೋಡಿ ಬರೋಣ. ನೀವು ಹೂ ಕೊಳ್ಳಲು ಬಂದವರು… ಯಾಕೆಂದರೆ ನಾನು ಕವಿತೆ ಬರೆಯುವುದು ಇಲ್ಲಿ ಯಾರಗೂ ಇಷ್ಟವಿಲ್ಲ” ಎಂದು ಇಂಗ್ಲೀಷಿನಲ್ಲಿ ಹೇಳಿದಳು. ತಂದೆ ಎಲ್ಲಿ ಹೋಗಿದ್ದಾರೆ ಎನ್ನುವುದನ್ನು ನಾನೂ ಕೇಳಲಿಲ್ಲ, ಅವಳೂ ಹೇಳಿಲಿಲ್ಲ. ತಾಯಿಯನ್ನು “ನರಸಮ್ಮ… ನನ್ನ ತಾಯಿ… ” ಎಂದು ಪರಿಚಯಿಸಿದಳು. ನನ್ನನ್ನು ತೋರುತ್ತಾ ಇವರು ವೆಂಕಟಪ್ಪ…. ಉಡುಪಿಯ ಹೂ ಕೊಳ್ಳುವವರು” ಎಂದು ಪರಿಚಯಿಸಿದಳು. ತಾಯಿ ನರಸಮ್ಮ. ತಂದಿಟ್ಟ ಕಾಫಿ ಕುಡಿದು ಅವಳ ಜೊತೆ ನಾನು ತೋಟಕ್ಕೆ ಹೊರಟೆ.
ವಿಡಿಯೋದಲ್ಲಿ ಇದ್ದ ಅದೇ ಹೊಳೆ. ಇದನ್ನು ಹಳ್ಳ ಎಂದು ಕರೆಯುತ್ತಾರೆ ಈ ಕಡೆ ಎಂದು ವಿಶದೀಕರಿಸಿದಳು. ಮೊಣಕಾಲಿಗೆ ಬರುವಷ್ಟು ಮಾತ್ರ ನೀರು ಇತ್ತು. “ಅಣ್ಣಯ್ಯ ಆಷಾಢದ ಮಳೆಗೆ ಎಲ್ಲವನ್ನೂ ಮುಳುಗಿಸುವಷ್ಟು ಬೊಳ್ಳ ಬಂದು ಬಿಡುತ್ತದೆ. ಅಂಚಿನ ಮಣ್ಣನ್ನು ಕೊರೆದುಕೊಂಡು ನೀರು ಕೆಂಪೇರುತ್ತದೆ,,,,, ಇಲ್ಲಿ ನೋಡಿ….. ವರ್ಷವರ್ಷ ಸ್ವಲ್ಪ ಸ್ವಲ್ಪ ಕೆಡವಿಕೊಂಡು ಹೋಗುವುದೇ ಕೆಲಸ ಈ ಮಳೆಗೆ” ಎನ್ನತ್ತಾ ನಡೆದಳು. ನಾನು ಗಮನಿಸುತ್ತಾ ನಡೆದೆ. ಹೊಳೆಯಿಂದ ಮೇಲೇರಿ ಅವಳ ತೋಟದ ಕಡೆಗೆ ದಾರಿ ತೋರಿದಳು. ಮೆಟ್ಟಲಿಲ್ಲದ ಏರಿನಲ್ಲಿ ಕಾಲಿಟ್ಟಳು. ನಾನು ಸಂಶಯಿಸಿ ನಿಂತದ್ದನ್ನು ಕಂಡು ಕೈ ಮುಂದೆ ಚಾಚಿ ನನ್ನನ್ನು ಎಳೆದುಕೊಂಡೇ ಮೇಲಿನ ದಿಬ್ಬಕ್ಕೆ ಏರಿದಳು. ವಿಶಾಲವಾಗಿತ್ತು ಹೂವಿನ ತೋಟ. ಕೆಲವು ಹೆಣ್ಣಾಳುಗಳು ಗೊಂಡೆ ಹೂ ಕೊಯ್ಯುತ್ತಾ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬುತ್ತಿದ್ದರು. ಅವರ ಉಡುಪುಗಳೆಲ್ಲ ಹೂವಿನ ಎಸಳಯಗಳ ಮಯವಾಗಿತ್ತು. ಒಂದು ದಟ್ಟ ಹೂವಿನ ಸುಗಂಧವಿತ್ತು ಗಾಳಿಯಲ್ಲಿ. ” ಅಣ್ಣಯ್ಯಾ, ಇದು ನಮ್ಮ ಬದುಕು… ಮೂರು ವರ್ಷದಿಂದ ಮಳೆಯಾಗಿಲ್ಲ… ಈ ವರ್ಷ ಚೆನ್ನಾಗಿ ಮಳೆ ಬಿತ್ತು….. ಬೆಳೆಯೂ ಚೆನ್ನಾಗಿದೆ…… ಇದೆಲ್ಲಾ ನವರಾತ್ರೆಯ ಬೆಳೆ…… ಸಿರ್ಸಿ ಮಾರಿಯಮ್ಮನ ಜಾತ್ರೆಗೆ ಎಲ್ಲಾ ಖರ್ಚಾಗುತ್ತದೆ….. ಈ ವರ್ಷ ಕೊರೊನಾದಿಂದ ಜಾತ್ರೆ ನಡೆಯುತ್ತದೋ ಇಲ್ಲವೋ ಇನ್ನೂ ನಿರ್ಧಾರವಾಗಿಲ್ಲ… ಒಂದು ವೇಳೆ ಆಗದಿದ್ದರೆ ನಾವು ತಲೆಗೆ ಕೈ ಹೊತ್ತು ಕೂರಬೇಕು……ಜಾತ್ರೆ ನಡೆದರೆ ನಮ್ಮ ಸರಕಿಗೆ ಬೇಡಿಕೆ. ಇಲ್ಲದಿದ್ದರೆ ಗೊಬ್ಬರದ ಗುಂಡಿಗೆ” ಎಂದು ಅಳಲು ತೋಡಿಕೊಂಡಳು.
ಹೂವಿನ ದೊಡ್ಡ ಚೀಲವನ್ನು ಹೊತ್ತುಕೊಂಡು ಕೆಲಸದಾಳುಗಳು ಸಂತೆಯ ಕಡೆಗೆ ನಡೆದರು. ಅಪರಾಹ್ನದ ಝಳವಿತ್ತು ಬಿಸಿಲಿನಲ್ಲಿ. ಸುತ್ತು ಮುತ್ತಲಿನ ಪರಿಸರವನ್ನೆಲ್ಲಾ ತೋರಿದಳು. ಹೊಳೆಯ ಅಂಚಿನಲ್ಲಿ ಹೊಂಗೆಯ ಮರದ ನೆರಳಿನಲ್ಲಿ ಬಂಡೆಯ ಮೇಲೆ ಕೂಡಿಸಿದಳು.
“ಮನೆಯಲ್ಲಿ ಸಾಹಿತ್ಯದ ಕುರಿತು ಏನೂ ಮಾತನಾಡಲಾಗದು… ಅಪ್ಪ ಇದ್ದರೆ ಕವಿತೆಯ ವಿಷಯ ತೆಗೆದರೆ ಬಡಿದೇ ಬಿಡುತ್ತಾರೆ… ಅಮ್ಮನೂ ಏನೂ ಕಡಿಮೆಯಿಲ್ಲ… ಅದಕ್ಕೆ ಎಲ್ಲ ಮಾತು ಇಲ್ಲೇ ನಡೆಯಲಿ” ಎನ್ನುತ್ತಾ ತೋಳ ಮೇಲಿನ ಉದ್ದನೆಯ ಗಾಯದ ಗೀರನ್ನು ತೋರಿದಳು. ಮೊಣಕಾಲಿನ ವರೆಗೆ ಸಲ್ವಾರವನ್ನು ಎತ್ತರಿಸಿ ಕಟ್ಟಿಗೆಯಿಂದ ಹೊಡೆದ ಗಾಯವನ್ನು ತೋರಿದಳು. ನನಗೆ ವಿಚಿತ್ರವಾದರೂ ನಂಬಲೇ ಬೇಕಾದಂತಹ ಪರಿಸ್ಥಿತಿ. ಅವಳ ಮೇಲೆ ಕನಿಕರ ಭಾವ ಮೂಡಿತು.
ಅವಳು ತನ್ನ ಕೈಲಿದ್ದ ಚೀಲದಿಂದ ಕೆಲವು ಕಾಗದ ಪತ್ರಗಳನ್ನು ಹೊರಗೆ ತೆಗೆದಳು.
“ನಾನು ನಿಮಗೆ ಹೇಳಲಿಲ್ಲ….. ನನಗೆ ಎರಡು ತಿಂಗಳಿಂದ ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಸಣ್ಣ ಆಯಾ ಕೆಲಸ ಸಿಕ್ಕಿದೆ. ನನ್ನ ಸಾಹಿತ್ಯದ ಕೆಲಸವೆಲ್ಲವೂ ಮನೆಯ ಹೊರಗೇ ನಡೆಯುತ್ತದೆ…. ಮನೆಯಲ್ಲೆಲ್ಲಾದರೂ ಬರೆಯುವುದು ಕಂಡರೆ “ನಿನ್ನ ಕವನಗಳಿಂದ ಏನು ಸಿಗುತ್ತದೆ…. ಹೋಗು ಕೆಲಸಮಾಡು” ಎಂದು ದಬಾಯಿಸಿ ತೋಟದ ಕೆಲಸಕ್ಕೆ ಹಚ್ಚುತ್ತಾರೆ… ಅದಕ್ಕೆ ಏನೇ ಕವನಗಳಿದ್ದರೂ ಹೊರಗಡೆ ಬರೆದು ಕಳುಹಿಸಿ ಬಿಡುತ್ತೇನೆ…. ಅವರಿಗೆ ವಿದ್ಯಾಭ್ಯಾಸ ಇಲ್ಲ….. ಅದಕ್ಕೇ ಹೀಗೆಲ್ಲಾ ಆಡುತ್ತಾರೆ. ಅಪ್ಪನಿಗೆ ಕುಡಿತದ ಚಟ…. ಆದ್ದರಿಂದ ಯಾವಾಗಲೂ ಒಂದೇ ತರ ಇರುವುದಿಲ್ಲ…… ಅವರ ನಡವಳಿಕೆಯನ್ನು ನಿರೀಕ್ಷಿಸಲಾಗುವುದಿಲ್ಲ. ಕೈಗೆ ಸಿಕ್ಕಿದ್ದರಿಂದ ಹೊಡೆಯುವುದು ಅವರ ಅಭ್ಯಾಸ… ನಾನು ಹೆಣ್ಣು ಹುಡುಗಿ ಹೇಗೆ ತಡೆಯಬಹುದು” ಎಂದಳು. “ಅವರ ಕೈಗೆ ಸಿಕ್ಕದೆ ಉಳಿದುವುಗಳನ್ನು ತೆಗೆದುಕೊಂಡು ಬಂದಿದ್ದೇನೆ” ಎನ್ನುತ್ತಾ ಚೀಲದಿಂದ ತೆಗೆದ ಹಾಳೆಗಳಲ್ಲಿ ಒಂದೊಂದನ್ನೇ ಓದಲು ಕೊಟ್ಟಳು.
ಬಲಬದಿಗೆ ಹೊಳೆ ನಿಶ್ಶಬ್ದವಾಗಿ ಹರಿಯುತ್ತಿತ್ತು. ಮಂದವಾಗಿ ಗಾಳಿ ಬೀಸುತ್ತಿತ್ತು. ಸುತ್ತಲೂ ವಿಶಾಲವಾದ ಬಯಲು. ಮಳೆಯಾಗಿದ್ದುದರಿಂದ ಎಲ್ಲೆಡೆ ಒಳ್ಳೆ ಫಸಲು ಕಾಣುತ್ತಿತ್ತು.
ನಾನು ಅವಳು ಕೊಡುವ ಯಾವುದೋ ಹಳೆಯ ನೋಟು ಪುಸ್ತಕಗಳ ಹಾಳೆಗಳಲ್ಲಿ ಬರೆದ ಕವನಗಳನ್ನು ಓದತೊಡಗಿದೆ. ತುಂಬಾ ಜೀವನೋತ್ಸಾಹವಿತ್ತು ಕವಿತೆಗಳಲ್ಲಿ. ಮಧ್ಯ ಮಧ್ಯದಲ್ಲಿ- ಇದು ಆ ಪತ್ರಿಕೆಯಲ್ಲಿ ಅಚ್ಚಾಗಿದೆ,,, ಇದು ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ ಎಂದು ಟಿಪ್ಪಣಿ ಕೊಡುತ್ತಾ ಹೋದಳು. ಒಂದಕ್ಕಿಂತ ಒಂದು ಭಾವ ತೀವ್ರತೆಯನ್ನು ಹೊತ್ತ ಕವಿತೆಗಳು. ಹೆಚ್ಚಿನವು ಚಿಕ್ಕವೇ. ಎರಡು ಮೂರು ಬಾರಿ ಓದಿದರೆ ಮಾತ್ರವೇ ಅರ್ಥವಾಗುವ ಮೋಡಿ ಇತ್ತು ಅವುಗಳಲ್ಲಿ. ಥಟ್ಟನೆ ಅವಳ ಮುಖದಲ್ಲಿ ಒಂದು ವಿóಷಾದದ ಛಾಯೆ ಮೂಡಿದಂತೆ ನನಗೆ ಅನಿಸಿತು. ಕವನಗಳ ಒಂದು ಗೊಂಚನ್ನು ಕೊಟ್ಟಳು. ನೂಲಿನಲ್ಲಿ ಕೋದ ಹಾಳೆಗಳಾಗಿದ್ದುವು. ಓದತೊಡಗಿದೆ….. ಇಷ್ಟು ಹೊತ್ತು ಓದಿದ ಕವಿತೆಗಳಿಗೆ ವ್ಯತಿರಿಕ್ತವಾದ ಕವಿತೆಗಳು. ಯಾವುದೋ ನೋವು ಮಡುಗಟ್ಟಿದಂತಿತ್ತು ಅವುಗಳಲ್ಲಿ. ಪುನ: ಪುನ: ಓದಿದೆ. ಒಂದು ಬಾರಿ ಅವಳ ಮುಖ ನೋಡಿದೆ. ಅವಳು ತಲೆ ತಗ್ಗಿಸಿ ನೆಲದ ಹುಲ್ಲನ್ನು ಕಾರಣವಿಲ್ಲದೆ ಕಿತ್ತು ಎಸೆಯುತ್ತದ್ದಳು ಒಂದು ವಿಷಾದ ಭಾವದಿಂದ. ಕಣ್ಣಂಚು ಒದ್ದೆಯಾಗಿತ್ತು. ನಾನು ಮತ್ತೆ ಕವಿತೆಗಳನ್ನು ಓದಿದೆ. ದುಗುಡ ತುಂಬಿದ ಒಂದು ವಿಷಣ್ಣ ಭಾವÀ ಆ ಗೊಂಚಲಿನ ತುಂಬ……. ಒಂದು ನಿಟ್ಟುಸಿರು ಬಿಟ್ಟೆ. ಅವಳು ಮಂದಹಾಸ ತಂದುಕೊಂಡು ನನ್ನತ್ತ ನೋಡಿದಳು.
“ಇವೆಲ್ಲಾ ಕಾಡುವ ಗೀತೆಗಳು ಮಧುಮಾಲಾ” ಎಂದೆ ಭಾರವಾದ ಸ್ವರದಲ್ಲಿ.
“ಹೌದು… ಅಂತಹ ಸನ್ನಿವೇಶ ಎದುರಾಯಿತು….. ನಿಮಗೆ ಹೇಳದಿದ್ದರೆ ಹಿನ್ನೆಲೆ ಗೊತ್ತಾಗಲಿಕ್ಕಿಲ್ಲ…… ಕವಿತೆಗಳೆಂದರೆ ಮನಸಿನ ಪ್ರತಿಫಲನಗಳಲ್ಲವೇ? ಒಂದು ಬಾರಿ ಏನಾಯಿತೆಂದರೆ……”
“ಹೂಂ ಹೇಳು…” ನಾನು ಅನುಮೋದಿಸಿ ಕುತೂಹಲ ತೋರಿದೆ.
ನಿಮ್ಮ ಹಾಗೆ ಅಂತರ್ಜಾಲ ಸ್ಪರ್ಧೆಯಲ್ಲಿ ಒಬ್ಬರದ್ದು ಪರಿಚಯವಾಯಿತು….. ಇತ್ತೀಚೆಗೆ… ನಾಲ್ಕೈದು ತಿಂಗಳ ಕೆಳಗೆ. ತುಮಕೂರು ಕಡೆಯವನೆಂದು ಪರಿಚಯ ಮಾಡಿಕೊಂಡ. ಅವನಿಗೂ ಬರೆಯುವ ಅಭ್ಯಾಸ ಇತ್ತು. ಚೆನ್ನಾಗಿಯೇ ಬರೆಯುತ್ತಿದ್ದ.
ಮನೆಗೆ ಬರುತ್ತೇನೆಂದ. ಅಪ್ಪನಿಗೆ ಹೇಳಿದೆ; ಬೇಡವೆಂದರು.
” ನೀವು ಪ್ರಾರಂಭಿಸಿದಿರಲ್ಲ…. ಹಾಗೇ ಪ್ರಾರಂಭಿಸಿದ್ದು…..ಅವನ ಓಘ ಬೇರೆ….. ನಿಮ್ಮದು ಬೇರೆ. ಕಾಣಲೇ ಬೇಕೆಂದು ಹಟ ಹಿಡಿದ. ಪುನ: ಅಪ್ಪನಿಗೆ ಸಮಜಾಯಿಸಿ ಬರಲು ಹೇಳಿದೆ. ಒಂದು ದಿನ ಮಧ್ಯಾಹ್ನ ಬಂದ. ತೋಟ, ಊರು, ಕಾಡು, ನೀರು,ಪಕ್ಷಿಯೆಂದು ಸುತ್ತಾಡಿದೆವು. ಅಮ್ಮನೂ ಜೊತೆಗಿದ್ದರು – ಕಾವಲಿಗೆಂಬಂತೆ. ಸಂಜೆ ಮನೆಯ ಹತ್ತಿರದ ಜೋಕಾಲಿಂiÀiಲ್ಲಿ ಕುಳಿತು ಮಾತನಾಡಿದೆವು. ಕನಸಿನ ಕತೆಗಳನ್ನೆಲ್ಲಾ ಹೇಳಿ ಕನಸು ಕಟ್ಟಿಸಿದ ನನ್ನಲ್ಲಿ. ತುಂಬಾ ಲಹರಿಯಲ್ಲಿದ್ದ. ರಾತ್ರಿ ಉಳಿಯುತ್ತೇನೆಂದ. ನಾನು ಬೇಡವೆಂದರೂ ಒತ್ತಾಯಿಸಿದ. “ಹೂಂ” ಅಂದೆ.
ರಾತ್ರಿ ಅಪ್ಪ ತೂರಾಡುತ್ತಾ ಬಂದು ಊಟ ಮುಗಿಸಿ ಮಲಗಿದರು. ಅಮ್ಮ ಮನೆ ಕೆಲಸ ಮುಗಿಸಿ ಅವರೂ ಮಲಗಲು ಹೋದರು. ಅದೂ ಇದು ಮಾತನಾಡಿದ. ಅವನು ಸ್ಥಿಮಿತ ಕಳೆದುಕೊಂಡಂತೆ ನನಗೆ ಭಾಸವಾಯಿತು. ಮೆಲ್ಲನೆ ಎದ್ದುಬಂದ. ಮಾತನಾಡುತ್ತಾ ಹಿಂದಿನಿಂದ ತೋಳು ಬಳಸಿದ ಮೆತ್ತಗೆ. ನನಗೆ ಇಷ್ಟವಾಗಲಿಲ್ಲ….. ಅವಮ ಕೈಯನ್ನು ಎತ್ತಿ ಎಸೆದು ತೀಕ್ಷ್ಣವಾಗಿ ನೋಡಿದೆ…. ಅವನು ಉದ್ಧಟನಾಗಿದ್ದ….. ಅವನ ಕೈಗಳು ನನ್ನ ಎದೆಗಿಳಿದಿದ್ದುವು ಆಗಲೇ…… ಅವನ ಉಗುರುಗಳ ಮಾಂಸಕ್ಕಾಗಿ ಹುಡುಕುವಂತಿತ್ತು…… ನೋವಾಗುತ್ತಿತ್ತು ಎದೆಯ ಒಳಗೂ ಹೊರಗೂ … ಚೀರಿದೆ….. ಅಪ್ಪ ಅಮ್ಮ ಎದ್ದು ಬಂದರು….. ಅವನು ಬೆಚ್ಚಿ ಹಿಂದೆ ಸರಿದ. ಅಮಲಿನಲ್ಲಿದ್ದ ಅಪ್ಪಯ್ಯ ಅವನನ್ನು ಹಿಡಿದು ಬಡಿದರು… ದನ ಬಡಿದ ಹಾಗೆ……. ಅಮ್ಮನೂ ಅವಳ ಸೇಡು ತೀರಿಸಿಕೊಂಡಳು…. ಆಮೇಲೆ ನನಗೂ ನಾಲ್ಕು ಏಟು ಬಿತ್ತು…… ಅವನನ್ನು ರಾತ್ರೋ ರಾತ್ರಿಯೇ ಮನೆಯಿಂದ ಕಳುಹಿಸಿಬಿಟ್ಟರು.
ಅವನು ಹೋದಮೇಲೆ ನನ್ನ ರೂಮಿಗೆ ನುಗ್ಗಿ ಕೈಗೆ ಸಿಕ್ಕದ ನನ್ನ ಕವಿತೆ ಬರೆದ ಹಳೆ ಪುಸ್ತಕಗಳನ್ನೆಲ್ಲಾ ಆಕ್ರೋಶದಲ್ಲಿ ಹರಿದು ಹಾಕಿಬಿಟ್ಟರು ಅಪ್ಪನೂ ಅಮ್ಮನೂ ಸೇರಿ. ನನ್ನನ್ನೇ ಹೊಸೆದು ಹಾಕಿದಂತಿತ್ತು ಅವರ ನಡವಳಿಕೆ….. ಮನೆಗೆ ನಾನೊಬ್ಬಳೇ ಮಗಳು. ಇಲ್ಲದಿದ್ದರೆ ಕೊಂದು ಹಾಕುತ್ತಿದ್ದರೋ ಏನೋ…. ಹಾಗಿತ್ತು ಅವರ ಅವೇಶ. ಈ ಘಟನೆಯ ಮೇಲೆ ನನ್ನ ಕವಿತೆಗಳೆಂದರೆ ಅವರಿಗೆ ಬೆಂಕಿಯಷ್ಟು ಸಿಟ್ಟು. ಹುಡು ಹುಡುಕಿ ಹೊಸಕಿ ಬಿಡುತ್ತಿದ್ದರು. ಕವನಗಳಿಂದಲೇ ನಾನು ಕೆಟ್ಟದ್ದು ಎಂದು ತಿಳಿದಿದ್ದಾರೆ…..ನಾನು ಪೆನ್ನು ಹಿಡಿದರೆ ಸಾಕು ಅವರ ಸಿಟ್ಟು ಸ್ಪೋಟಿಸಿಬಿಡುತ್ತಿತ್ತು. ನನಗೆ ಕೆಲಸ ಸಿಕ್ಕಿದ ಮೇಲೆ ಸ್ವಲ್ಪ ಹಾರಾಟ ಕಡಿಮೆಯಾಗಿದೆ…. ಪಾಪ ಅವರ ನೋವು ಅವರಿಗೆ… ಹಾಗೆಂದು ನಾನು ಇಷ್ಟ ಪಟ್ಟದ್ದಾಗಲೀ ಬಯಸಿದ್ದಾಗಲೀ ಅಲ್ಲ ಸಂಭವಿಸಿದ್ದು” ಅವಳು ಬಿಕ್ಕುತ್ತಿದ್ದಳು. ನಾನು ಅವಳ ಹೆಗಲ ಮೇಲೆ ಕೈಯಿಟ್ಟು ಸಮಾಧಾನ ಮಾಡಿದೆ. ಕವನಗಳು ಅವಳ ಚೀಲ ಸೇರಿದುವು. ” ಇವಿಷ್ಟು ಉಳಿದುಕೊಂಡವು. ಎಲ್ಲಾ ಸೇರಿಸಿ ಒಂದು ಕವನ ಸಂಕಲನ ಮಾಡಬೇಕೆಂದಿದ್ದೆ. ಎಲ್ಲಾ ಭಗ್ನ ಕನಸಾಯಿತು. ಘಟನೆಯಾದ ಮೇಲೆ ನನ್ನ ಕವನ ಬರೆಯುವ ಹುಮ್ಮಸ್ಸೂ ಮೂಲೆಗುಂಪಾಗಿದೆ. ಈಗ ಬಂದ ಕೊರೋನದಿಂದ ಜಾತ್ರೆ ನಡೆಯದಿದ್ದರೆ ಬಂದ ಬೆಳೆಯನ್ನು ಹೇಗೆ ಮಾರುವುದೆಂಬ ಚಿಂತೆಯೇ ನಮ್ಮೆಲ್ಲರ ಮನಸಿನ ತುಂಬಾ. ಆದ್ದರಿಂದ ನಿಮ್ಮನ್ನು ಹೂ ಕೊಳ್ಳುವವರಾಗಿ ಕರೆಸಿಕೊಂಡದ್ದು. ಆದ್ದರಿಂದಲೇ ಅಮ್ಮ ಅಪ್ಪ ಒಪ್ಪಿಕೊಂಡರು. ನಮ್ಮ ಪ್ರಾಯವೂ ಅವರಿಗೆ ಭರವಸೆ ಬರುವ ಹಾಗಿದೆಯಲ್ಲ” ಎಂದಳು
ಹಿಂದಿರುಗುವಾಗ ಅವಳು ಹೇಳತೊಡಗಿದಳು. “ಅಪ್ಪಯ್ಯ ತೋಟದ ಕಡೆ ತಲೆಹಾಕುವುದಿಲ್ಲ….. ಎಲ್ಲೋ ಕುಡಿದು ಬರುತ್ತಾರೆ…. ಇನ್ನು ಅಮ್ಮನದೇ ಕಾರುಬಾರು. … ಇದ್ದ ಹಣವೆಲ್ಲಾ ಅಪ್ಪಯ್ಯ ಕುಡಿಯಲು ಎತ್ತಿಕೊಂಡು ಹೋಗುತ್ತಾರೆ… ಅಮ್ಮ ಜಗಳ ತೆಗೆಯುವವಳಲ್ಲ….” ಹೀಗಿದೆ ಬದುಕು. ನಾನು ಬರಿಯುವುದೂ ಯಾರಿಗೂ ಇಷ್ಟವಿಲ್ಲ…. ಹಾಗೆ ಅವರಿದ್ದರೆ ಬರೆಯುವುದೇ ಇಲ್ಲ…. ಅದರಿಂದ ಹೊಟ್ಟೆ ತುಂಬುತ್ತದೋ ಎಂದು ಹಿಯಾಳಿಸುತ್ತಾರೆ. ಕಾಗದ ಕಂಡು ಬಿಟ್ಟರೆ ಹರಿದೆ ಹಾಕುತ್ತಾರೆ. ಈಗ ನಾನು ಎಲ್ಲವನ್ನು ಟ್ರಂಕಿನಲ್ಲಿಟ್ಟು ಬೀಗಹಾಕಿ ಅವರಿಗೆ ಸಿಕ್ಕದ ಹಾಗೆ ಎತ್ತರದಲ್ಲಿ ಇಟ್ಟ್ಟು ಬಿಡುತ್ತೇನೆ…. ಏನಿದ್ದರೂ ಮೊಬೈಲಿನಲ್ಲಿ ಎಷ್ಟಿದೆಯೋ ಅಷ್ಟು ಕವಿತೆಗಳು ಭದ್ರ…..” ಎನ್ನುವಾಗ ಅವಳ ಕಣ್ಣಂಚು ತೊಯ್ದದ್ದು ಗಮನಿಸಿದೆ. ನಾವು ಹೊಂಗೆ ಮರದ ನೆರಳಿನಲ್ಲೇ ಇದ್ದೆವು. ನೆರಳು ಉದ್ದ ಉದ್ದಕ್ಕೆ ಬೆಳೆಯುತ್ತಿತ್ತು. ಹೆಗಲ ಮೇಲೆ ಕೈಯಿಟ್ಟು ಸ್ವಾಂತನ ಹೇಳಿದೆ. ನೀವು ನಮ್ಮ ತೋಟದ ಹೂ ನೋಡಲು ಬಂದವರು ಎಂದು ಹೇಳಿದ್ದೇನೆ. ನೀವು ಕವನ ಬರೆಯುವವರ ಪೈಕಿ ಎಂದು ಗೊತ್ತಾದರೆ ನನ್ನ ಮೇಲೆ ಬಂದು ಬಿಡುತ್ತಾರೆ. ನಿಮಗೆ ಮೊದಲೇ ಹೇಳಬೇಕೆಂದುಕೊಂಡೆ… ಆದರೆ ನೀವು ಬಂದ ಮೇಲೆ ಹೇಳಿದರಾಯಿತು ಎಂದುಕೊಂಡೆ.
ಸಾಹಿತ್ಯದವರೆಂದು ಹೇಳಿದರೆ ಅವರಿಗೆ ನೆನಪಿಗೆ ಬರುವುದು ಆ ತುಮಕೂರಿನ ಹುಡುಗನದ್ದು. ಕೆಂಡವಾಗಿಬಿಡುತ್ತಾರೆ.
“ಮಧು ” ನಾನು ಅವಳನ್ನು ಕರೆದೆ. ಕಾರಣವಿರಲಿಲ್ಲ. ಆದು ನನ್ನ ಸ್ವಾಂತನದ ಕರೆಯಾಗಿತ್ತು. ನನ್ನ ಒಳಗೂ ಅಸಹಾಯಕತೆ ತುಂಬಿತು.
“ಹೂಂ ಅಣ್ಣಯ್ಯ” ಅವಳು ಪ್ರತಿಕ್ರಿಯಿಸಿದಳು.
“ನಾನು ಬಂದದ್ದು ಸಾರ್ಥಕವಾಯಿತು. ನನ್ನ ಕತೆಗೆ ಲೊಕೇಶನ್ ಮಾತ್ರವಲ್ಲ….. ಕಥಾವಸ್ತು ಕೂಡ ಸಿಕ್ಕಿತು” ನಾನು ಹೇಳಿದೆ. ಸ್ವಲ್ಪ ದೀರ್ಘವಾದ ಮೌನದ ಬಳಿಕ ಮುಂದುವರಿಸಿದೆ. “ನೀವು ಬರೆಯಬೇಕು…… ಹೇಗೆಂದು ನಾನು ಹೇಳುವುದಿಲ್ಲ. ಅದು ಈ ಹೊಳೆಯ ಹಾಗೆ ಹರಿಯುತ್ತಲೇ ಇರಬೇಕು….. ಒಮ್ಮೆ ಬತ್ತಲು ಬಿಟ್ಟರೆ ಮತ್ತೆ ತುಂಬದು…… ಹೇಗೆ ಏನು ಎಂದು ನಿಮಗೆ ಬಿಡುತ್ತೇನೆ. ಹೇಗೂ ಕೆಲಸಕ್ಕೆ ಹೋಗುತ್ತೀರಿ. ಆರ್ಥಿಕವಾಗಿ ಸಬಳರಾಗುತ್ತೀರಿ. ಕವನ ಸಂಕಲನ ಬರಬೇಕು….. ಸಾಹಿತ್ಯ ಲೋಕಕ್ಕೆ ನಿಮ್ಮ ಪರಿಚಯವಾಗಬೇಕಾದರೆ ಇದು ಅನಿವಾರ್ಯ… ಜೊತೆಗೆ ನಾನಿದ್ದೇನೆ” ಎಂದೆ.
ಆ ಕ್ಷಣದ ಭಾವ ಪರವಶತೆಯಲ್ಲಿ ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕಿ ಅಪ್ಪಿಕೊಂಡಳು. “ಅಣ್ಣಯ್ಯಾ…. ಗಂಡಸರು, ಲೋಕ ಎಲ್ಲವೂ ಕ್ರೂರ ಎಂದುಕೊಂಡಿದ್ದೆ….” ಎಂದು ಹಿಡಿತ ಸಡಿಲಿಸಿದಳು. ಅವಳ ಮೆದುವಾದ ವಕ್ಷಸ್ಥಳ ಬೆನ್ನನ್ನು ಒತ್ತಿತು. ಗಂಡಸಾದ ನನ್ನ ಮಾಮೂಲಿ ಸಂವೇದನೆಗಳು ಎಚ್ಚರಗೊಳ್ಳಲೇ ಇಲ್ಲ. ನನ್ನ ಎದೆಯಾಳದಲ್ಲಿ ತಂಗಿಯೊಬ್ಬಳ ಆಲಿಂಗನದಂತಿತ್ತು ಅವಳ ಆ ಕ್ಷಣದ ಮಾನಸಿಕ ಮತ್ತು ದೈಹಿಕ ಪ್ರತಿಕ್ರಿಯೆ.
ಇಬ್ಬರೂ ಎದ್ದು ಹೊರಟೆವು. ಅವಳಲ್ಲಿ ಮತ್ತೆ ಒಂದು ಸಹಜ ಮಂದಹಾಸವನ್ನು ಗಮನಿಸಿದೆ. ಬಂದ ದಾರಿಯಲ್ಲಿ ನಡೆದು ನಾವು ಮನೆಯಂಗಳಕ್ಕೆ ಕಾಲಿಟ್ಟೆವು.
ಮರಕ್ಕೆ ನೇತುಕೊಂಡ ಉಯ್ಯಾಲೆ ಅತ್ತಿತ್ತ ಓಲಾಡುವಂತೆ ಅನಿಸಿತು. ಗಾಳಿಗೋ ನಮ್ಮ ಮನಸ್ಥಿತಿಗೋ ಎಂದು ನನಗೆ ತಿಳಿಯಲಿಲ್ಲ.
“ಅಣ್ಣಯ್ಯ,…. ನನಗೆ ಈ ಉಯ್ಯಾಲೆಯಲ್ಲಿ ಕುಳಿತು ಜಗ್ಗಿದರೆ ಕವಿತೆಗಳು ಹರಿದು ಬರುತ್ತವೆ ಒರತೆಯ ಹಾಗೆ….. ನೀವೂ ಒಂದು ಬಾರಿ ಕುಳಿತುಕೊಳ್ಳಲೇ ಬೇಕು…. ಅದು ನನ್ನ ಅನುಭವ ಮಾತ್ರವೋ ಸಾರ್ವತ್ರಿಕವೋ ಎಂದು ತಿಳಿಯಬೇಕು” ಎಂದು ಆಲದ ಮರದ ಬುಡಕ್ಕೆ ಕರೆತಂದಳು.
“ನಾನು ಉಯ್ಯಾಲೆಯ ಮೇಲೆ ಕುಳಿತು ಜಗ್ಗಿದೆ. ಕ್ಷಣದಲ್ಲಿ ಬೀಸು ಅರ್ಧವೃತ್ತವಾಯಿತು. ಯಾವುದೇ ಪ್ರೇರಣೆಯಿಲ್ಲದೆ ಉಯ್ಯಾಲೆ ಸ್ವಯಂಪ್ರೇರಿತವೆಂಬಂತೆ ಅನಿಸಿತು. ನಾನು ಈಗಾಗಲೇ ಹೆಣೆದುಕೊಂಡ ಕತೆಯ ಹಂದರ ಛಿದ್ರವಾಗಿ, ಅದರ ಜಾಗದಲ್ಲಿ ಹೊಸತೊಂದು ಸ್ಪುಟವಾಗಿ ಹೆಣೆದುಕೊಂಡಿತು. ಉಯ್ಯಾಲೆಯ ಚಲನೆಗೆ ಮನಸು ಕತೆಯ ಓಟವನ್ನು ಹುಡುಕುತ್ತಿತ್ತಷ್ಟೇ. ಅವಳು ನೆರಳಿನಲ್ಲಿ ಕುಳಿತು ಅಪೂರ್ಣವಾದ ಉಯ್ಯಾಲೆಯ ಬೀಸುಗಳನ್ನು ನೋಡುತ್ತಾ ಏನೋ ಯೋಚಿಸುತ್ತಿದ್ದಳು. ಮೆಲ್ಲ ಮೆಲ್ಲನೆ ಬೀಸು ಕಡಿಮೆಯಾಗುತ್ತಾ ಬರುವುದು ಅನುಭವವಾಯಿತು. ಇನ್ನು ಊರಿಗೆ ಹೋಗಬೇಕಾದ ತುರ್ತು ಮನಸಿನೊಳಗೆ ಸುಳಿದಾಗ ನನ್ನನ್ನು ಹೊತ್ತ ಹಗ್ಗಗಳನ್ನು ಸ್ಥಗಿತಗೊಳಿಸಿದೆ. ಅವು ನನ್ನ ಅಣತಿಯನ್ನು ಪಾಲಿಸಿದಂತಿತ್ತು.
ವಿದಾಯ ಹೇಳಿ ಹೊರಟಾಗ ಸಂಜೆ ಬಿಸಿಲು ಆಹ್ಲಾದಕರವಾಗಿತ್ತು. ಮನೆಯ ಹೆಣ್ಣು ಜೀವಗಳಿಗೆ ವಿದಾಯ ಹೇಳಿ ನಾನು ಬಸ್ ಹಿಡಿಯಲು ನಡೆದೆ. ಮನಸಿನ ಮೂಲೆಯಲ್ಲಿ ನಿರ್ಬಂಧಕ್ಕೊಳಗಾದ ಕವಿತೆ ಅವಳಿಂದ ಹೊರಗಿಣುಕಲು ಪ್ರಯತ್ನಿಸುತ್ತಿರುವ ದೃಶ್ಯ ನನ್ನನ್ನು ಅಣಕಿಸಿದಂತೆ ಅನಿಸಿತು. ಅವಳ ಮುಖವೂ ದೂರವಾಗುತ್ತಾ ಹೋಯಿತು.
ಡಾ ಕೊಳ್ಚಪ್ಪೆ ಗೋವಿಂದ ಭಟ್
8 thoughts on “ಜೋಕಾಲಿ”
ಅಂತರ್ಜಾಲ ಸ್ಪರ್ಧೆದಲ್ಲಿ ಕಥೆ ಕವನ ಬರೆಯುತ್ತಿದ್ದಂತೆ ಹೊಸ ಕಥೆಗಳಿಗೆ ಮರುಹುಟ್ಟು ಹಾಕಿದ ನಿಮ್ಮ ಕಲ್ಪನೆ ಅದ್ಭುತ. ಕಥೆ ಚನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು 💐💐
Thanks
ಚೆಂದದ ಕಥೆ. ಹಳ್ಳಿಯ ನೈಜ ಬದುಕು ತಿಳಿದವರಿಗೆ ಈ ಕಥೆ ಪರಮಾಪ್ತವೆನಿಸುವುದು. ಎಲ್ಲಿಯೂ ಆಡಂಬರಗಳಿಲ್ಲ. ಅತಿ ವಿಜೃಂಭಣೆಯಿಲ್ಲ. ಸಹಜವಾಗಿ ಮುಂದುವರಿಯುವ ಶೈಲಿ ಜತೆಗೆ ಹೃದಯಕ್ಕೆ ತಟ್ಟುವ ತೀವ್ರತೆ. ಸಮಕಾಲಿನ ಸ್ಥಿತಿಗತಿಯನ್ನು ಸರಿಯಾಗಿ ಪಡಿಮೂಡಿಸುವ ಕಥನ. ಭಾವನೆ ಮತ್ತು ವಾಸ್ತವ ಎರಡು ಪರಸ್ಪರ ವಿರುದ್ಧ ದಿಕ್ಕು ಗಳಲ್ಲಿರುವ ಕಥಾನಾಯಕಿಯಂತಿರುವ ಅದ್ಭುತ ಸೃಷ್ಠಿಶೀಲಪ್ರತಿಭೆಗಳು ಹಳ್ಳಿಯಲ್ಲಿ ಅನೇಕರಿದ್ದಾರೆ. ಕಥೆಯ ಬರವಣಿಗೆಯ ಶೈಲಿ ಬಳಸಿದ ಕೆಲವು ಪ್ರತಿಮೆ ರೂಪಕಗಳು ಆಕರ್ಷಕವೂ ಮೌಲ್ಯಾಧಾರಿತವೂ ಹೌದು.
ಬಳ ಚೆನ್ನಾಗಿ ಬರೆದಿದ್ದೀರಿ ಗೋವಿಂದಭಟ್ಟರೇ. ಅಭಿನಂದನೆಗಳು
ಕವನದ ಹುಡುಗಿ ನಿಮ್ಮ ಕಥೆಯಾಗಿ ಬಂದದ್ದು ನಮ್ಮ ಮನಸ್ಸನ್ನು ಗೆದ್ದಿದೆ.ಸುಂದರ ನಿರೂಪಣೆ,ಚಂದದ ಕಥೆ
ನಿಜಕ್ಕೂ ನಿಮ್ಮ ಕಥೆ ಅದ್ಭುತವಾಗಿದೆ. ಪ್ರಾರಂಭದಿಂದ ಅಂತಿಮ ದವರೆಗೂ ಸರಾಗವಾಗಿ ಓದಿಸಿಕೊಂಡು ಹೋಯಿತು. ಒಂದು ಕ್ಷಣವೂ ಬೋರ್ ಆಗಲಿಲ್ಲ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡುತ್ತಿತ್ತು. ನಾನು ಇಂತಹ ಕಥೆಗಳನ್ನು ಓದಿ ಹಲವು ವರ್ಷಗಳು ಆಯಿತು. ನಾನು ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ.
ಆದರೆ ನನ್ನ ಓದು ಕಡಿಮೆಯಾಗಿತ್ತು. ಈ ಕರೋನಾ….. ವಾಟ್ಸಪ್ ಯುಗದಲ್ಲಿ….. ಸಾಹಿತ್ಯದ ಸ್ಪರ್ಶ ಶುರುವಾಗಿದೆ. ಈ ನಡುವೆ ನಾನು ಕವಿತೆಗಳನ್ನು, ಚುಟುಕುಗಳನ್ನು 50ಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ನಲ್ಲಿ ಬರೆದೆ ನೀವು ಕೂಡ ಗಮನಿಸಿರಬಹುದು. ನಿಮ್ಮ ಹೆಸರು ಕೂಡ ನಾನು ಹಲವು ವಾಟ್ಸಪ್ನಲ್ಲಿ ಗಮನಿಸಿದ್ದೇನೆ. ಹಲವು ಪ್ರಶಸ್ತಿಗಳನ್ನು ಹಲವು ಬಹುಮಾನಗಳನ್ನು ಪಡೆದಿರುವಿರಿ. ನಾನು ಮೊದಲ ಬೊಮ್ಮನ ಪಡೆದೇ ಇಲ್ಲ. ಎರಡು,-ಮೂರನೇ, ಸಮಾಧಾನ, ಮೆಚ್ಚುಗೆ, ಟಾಪ್ ಟೆನ್ ಒಳಗೆ ನನ್ನ ಸುತ್ತು!.
.ಇದನ್ನೆಲ್ಲ ನೋಡಿದ ಮೇಲೆ ನಾನು ಕವಿತೆಯನ್ನೇ ಒಂದು ಬರೆದಿಲ್ಲ ಆದರೆ ನನ್ನ ಕ್ಷೇತ್ರ ಲೇಖನ, ವಿಮರ್ಶೆ, ವ್ಯಕ್ತಿಚಿತ್ರ, ಕಥೆ, ಕವಿತೆ ಬರೆಯಲು ಮನಸ್ಸು ಮಾಡಿದ್ದೇ ಇಲ್ಲ. ಏಕೆಂದರೆ ಸಾವಿರಾರು ಕವಿಗಳು ನಮ್ಮ ಮುಂದಿದ್ದಾರೆ. ಅವರ ಮುಂದೆ ನಾನು ಬರೆದು ಸ್ಪರ್ಧಿಸಲು ಉಂಟೆ? ಎನ್ನುವ ಭಾವನೆ ನನ್ನಲ್ಲಿ ಮೂಡುತ್ತಿತ್ತು!. ಆದರೂ ಕೂಡ ಮನದ ಮೂಲೆಯಲ್ಲಿ ಕವನ ಗೋಷ್ಠಿಗಳಲ್ಲಿ….. ಕವಿಗಳು ಕವಿತೆಗಳನ್ನು ಓದುವಾಗ….. ಫೋಟೋ ತೆಗೆಸಿಕೊಳ್ಳು ವಾಗ….. ಸರ್ಟಿಫಿಕೇಟ್ಗಳನ್ನು ಪಡೆಯುವಾಗ…… ಎಲ್ಲ ಕ್ಷಣಗಳನ್ನು ವಿಡಿಯೋ ಮಾಡಿಸಿಕೊಳ್ಳುವಾಗ…..ಎಲ್ಲರನ್ನೂ ಎಲ್ಲರೂ ಕಾರ್ಯಕ್ರಮದಲ್ಲಿ ಆಯೋಜಕರು…. ಇತರ ಸ್ನೇಹಿತರು….. ಪ್ರೇಕ್ಷಕರು….. ಅವರನ್ನು ಆತ್ಮೀಯವಾಗಿ ಮಾತನಾಡಿಸುವಾಗ ನಾನೇಕೆ ಕವಿತೆ ಬರೆಯಬಾರದು? ಕವಿತೆ ಬರೆದರೆ ಎಷ್ಟೆಲ್ಲಾ ಸ್ಪಂದನೆ ಖುಷಿ ಸಿಗುತ್ತದೆ! ಎಂದು ಅನಿಸುತ್ತಿತ್ತು.
ಆದರೆ ನಿಮ್ಮ ಕತೆ ನಿಜಕ್ಕೂ ಭಾವನೆಗಳನ್ನು ಸೃಷ್ಟಿಸಿದೆ. ನನ್ನ ಪ್ರಕಾರ ಇದನ್ನು ಯಾರಾದರೂ ಸಿನಿಮಾ ಕಥೆಗಾರರಿಗೆ ತಿಳಿಸಿದರೆ ನಿಜಕ್ಕೂ ಒಂದು ಅದ್ಭುತ ಚಿತ್ರವಾಗುತ್ತದೆ. ನಿಜ ಹೇಳುತ್ತಿರುವೆ ಸರ್…… ಕವನ ಗಾರ್ತಿಯ ಬದುಕು-ಬವಣೆ….. ಸಾಹಿತ್ಯದ ಆಸಕ್ತಿ….. ಊರಿನ ಸೊಗಸಾದ ವಾತಾವರಣ….. ಗ್ರಾಮಾಂತರ ಜೀವನದ ಬದುಕು….. ಕಥೆಯ ಮೂಲ ಆಶಯ…. ನಗರ ಪ್ರದೇಶದ ಕವಿಯೊಬ್ಬನ ಸಹ ಕವಿತಾ ಸ್ಪರ್ಧೆಯಿಂದಾಗಿ ನ
ಸಂಭಾಷಣೆ ವಿಭಿನ್ನ ಶೈಲಿಯಲ್ಲಿ ಚಿತ್ರ ಮಾಡಬಹುದು. ಅದರಲ್ಲಿ ಸಂದೇಹವಿಲ್ಲ. ನಿಜಕ್ಕೂ ಕತೆ ಬರೆದರೆ ಇಂತಹ ಕಥೆಗಳನ್ನು ಬರೆಯಬೇಕು ಸರ್. ಕಥೆ ವಾಸ್ತವಾಗಿ ತೀರ ಹತ್ತಿರವಾಗಿದೆ……. ಸೊಗಸಾಗಿದೆ…… ರಂಜನೀಯವಾಗಿದೆ ……ಒಂದು ರೀತಿಯಲ್ಲಿ ಹೇಳಿಕೊಳ್ಳಲಾರದ ಭಾವನೆಯ ತುಡಿತ ಅಡಗಿದೆ. ವಿಷಯದ ಒಂದು ಪ್ರಬುದ್ಧ ರೀತಿಯ ಕಥೆ ನಿಮಗೆ ವಿಶೇಷ ಅಭಿನಂದನೆಗಳು ಸರ್.
ನಿಮ್ಮ ಅಭಿಮಾನಿ ಶಿಷ್ಯ.
ಕಾಳಿಹುಂಡಿ ಶಿವಕುಮಾರ ಮೈಸೂರು.
ಅದ್ಭುತ ಕಥೆ ಇದಾಗಿದೆ ಸರ್. ನಿಮಗೆ ವಿಶೇಷ ಅಭಿನಂದನೆಗಳು. ಕಥೆ ಸರಾಗವಾಗಿ ಓದಿಸಿಕೊಂಡು ಹೋಯಿತು. ನಿಮ್ಮ ಕಲ್ಪನೆಯ ಸಾಮರ್ಥ್ಯಕ್ಕೆ ನಮ್ಮ ಶರಣು. ಮತ್ತೊಮ್ಮೆ ನಿನಗೆ ವಿಶೇಷ ಅಭಿನಂದನೆಗಳು ಸರ್.
good story