ಅವನು ಮೈತುಂಬಿಕೊಂಡ ನಾಗಬೆತ್ತದ ಹಾಗೆ ಇದ್ದ. ತುಂಬ ಸಣಕಲು. ನೆಟ್ಟಗೆ ಅಂದರೆ ನೆಟ್ಟಗೆ ನಿಲವು. ನಾಗಬೆತ್ತದ ಮೇಲಿನ ಕಪ್ಪು ಬಳೆಗಳಂತೆ ಅವನ ಪಕ್ಕೆಲಬುಗಳೆಲ್ಲವೂ ಕಾಣಿಸುತ್ತಿದ್ದವು. ಕೆಂಪಗಿನ ದಪ್ಪಗಿರುವ ಒಂದು ದಾರವನ್ನು ಉಡಿದಾರ ಮಾಡಿಕೊಂಡಿದ್ದ. ಆರು ಮೊಳದ ಮಗ್ಗದ ಪಂಚೆಯ ಒಂದು ತುದಿಯನ್ನು ಕಚ್ಚೆಯಾಗಿ ಹಿಂಬದಿಗೆ ಸಿಕ್ಕಿಸಿಕೊಂಡು ಅದರ ಉಳಿದ ಭಾಗವನ್ನು ಲುಂಗಿಯಂತೆ ಅಡ್ಡ ಸುತ್ತಿಕೊಳ್ಳುತ್ತಿದ್ದ. ಅದು ಬಿಟ್ಟರೆ ಮೈಯೆಲ್ಲ ಬೋಳು ಬೋಳು. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಒಂದು ಕೊಕ್ಕೆಯನ್ನು ಕಟ್ಟಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಅವನು ಕತ್ತಿಯನ್ನು ತರುತ್ತಿರಲಿಲ್ಲ.
ನಾನು ಈ ಊರಿಗೆ ಮದುವೆಯಾಗಿ ಬಂದಾಗ ಅವನು ಸುಮಾರು ಹದಿನೈದು ವರ್ಷದವನಿರಬಹುದು. ತನ್ನ ಅಣ್ಣನ ಜೊತೆ ನಮ್ಮ ತೋಟಕ್ಕೆ ಬರುತ್ತಿದ್ದ. ಏನೋ ನಿನ್ನ ಹೆಸರು ಅಂದ್ರೆ, ನನ್ಗೆ ಹೆಸ್ರಿಲ್ಲ ಅಂತಿದ್ದ. ನಮ್ಮನೆಯ ಕೆಲಸಕ್ಕೆ ಬರುವವರೆಲ್ಲ ಅವನಿಗೆ ಗೊಂಯ ಅಂತಿದ್ದರು. ಹಾಗಂದರೆ ಏನು ಅರ್ಥ ಎಂದು ನನಗಂತೂ ಗೊತ್ತಿರಲಿಲ್ಲ. ಅವನಿಗೆ ಮಾತು ಬರುವುದಕ್ಕೆ ಸ್ವಲ್ಪ ಹೆಚ್ಚು ಸಮಯ ಹಿಡಿದಿತ್ತಂತೆ. ಮಾತು ಬರುವುದಕ್ಕೆ ಮೊದಲು ಏನಾದರೂ ಕೇಳಿದರೆ ಗೊಂಯ್ ಎಂದು ಸದ್ದು ಮಾಡುತ್ತಿದ್ದನಂತೆ. ಹೀಗಾಗಿ ಅವನಿಗೆ ಗೊಂಯ ಎಂದು ಅವನ ಓರಿಗೆಯವರೆಲ್ಲ ಕರೆಯುತ್ತಿದ್ದರಂತೆ.
ಅವನಿಗೆ ಹೆಸರಿಲ್ಲವೆ ಎಂದು ಕೇಳಿದೆ. ಅವನು ತಾಯಿಯ ಗರ್ಭದಲ್ಲಿ ಇದ್ದಾಗಲೆ ಅವನ ಅಪ್ಪ ತೀರಿಹೋದನಂತೆ. ಹೀಗಾಗಿ ಅವನು ಹುಟ್ಟಿದ ಮೇಲೆ ಅವನನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುವ ಶಾಸ್ತ್ರ ಮಾಡಲಿಲ್ಲವಂತೆ. ಇದನ್ನು ಕೇಳಿದಾಗ ನನಗೆ ಅವನ ಬಗ್ಗೆ ಏನೋ ಮರುಕ. `ಅಮ್ಮಾ’ ಎಂದು ನನ್ನನ್ನು ಕರೆಯುತ್ತಿದ್ದ. ಅವನು ಬಂದಾಗಲೆಲ್ಲ ಮನೆಯಲ್ಲಿ ಏನಾದರೂ ತಿಂಡಿ ಇದ್ದರೆ ಅವನಿಗೆ ಕೊಡುತ್ತಿದ್ದೆ. ಹೀಗಾಗಿ ಅವನಿಗೂ ನನ್ನ ಬಗ್ಗೆ ಏನೋ ಗೌರವ. ಏನಾದರೂ ಕೆಲಸ ಹೇಳಿದರೆ ನೆಪ ಹೇಳದೆ ಮಾಡಿಕೊಡುತ್ತಿದ್ದ. ನಮ್ಮ ತೋಟದ ಬೇಲಿಯ ಮೂಲೆಯಲ್ಲಿ ಹಕ್ಕಿ ಹಿಡಿಯುವುದಕ್ಕೆ ಉರುಳು ಕಟ್ಟುತ್ತಿದ್ದ. ಯಾವತ್ತಾದರೂ ಕುಂಟುಕೋಳಿ ಹಕ್ಕಿ ಅವನ ಉರುಳಿಗೆ ಬಿತ್ತು ಎಂದರೆ ಅವನ ಮುಖದಲ್ಲಿ ಖುಷಿಯು ಮೋಡ ಕಂಡ ಗಂಡು ನವಿಲು ರೆಕ್ಕೆ ಬಿಚ್ಚಿ ಹಾರಿದಂಗೆ ಕಾಣುತ್ತಿತ್ತು.
ಕಾಮನ ಹಬ್ಬ ಬಂತು ಅಂದರೆ ಹುಡುಗರ ಟೋಲಿಗೆ ಅವನೇ ನಾಯಕ. ಯಾರದೋ ಹಿತ್ತಲಿನ ಕಟ್ಟಿಗೆ ಕದ್ದೆ, ಇನ್ನಾರದೋ ಮನೆಯ ಬಚ್ಚಲಿನಲ್ಲಿದ್ದ ತೆಂಗಿನ ಚಿಪ್ಪು, ಸಿಪ್ಪೆ ಕದ್ದೆ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಗೊಂಯನ ಕೈಯಲ್ಲಿ ಯಾವಾಗಲೂ ಗಾಳ, ಅದನ್ನು ಕಟ್ಟಿದ ಬಗನಿ ಮರದ ಮಡಲಿನ ಕೋಲು ಇರುತ್ತಿತ್ತು. ನಮ್ಮ ಮನೆಯ ಮುಂದಿನ ಕೋಡಿಯಲ್ಲಿ ಅವನು ಮೀನು ಹಿಡಿಯುತ್ತಿದ್ದ. ಒಂದೊಂದು ಸಲ ಅವನ ಅಣ್ಣನ ಜೊತೆ ಇರುಕುಳಿಯನ್ನು ತಂದು ಕೋಡಿಯಲ್ಲಿ ಹಾಯುತ್ತ ಇರುಕುಳಿಯನ್ನು ಇಕ್ಕರಿಸುತ್ತ ಅದರಲ್ಲಿ ಸಿಕ್ಕಿದ ಮೀನನ್ನು ಕೈಹಾಕಿ ಹಿಡಿದು ಬೆನ್ನಿಗೆ ಕಟ್ಟಿಕೊಂಡ ಅಡಕೆ ಹಾಳೆಯ ಕೊಟ್ಟೆಗೆ ಸೇರಿಸುತ್ತಿದ್ದ. ಕೋಡಿಯಂಚಿನ ನೀರೊಳಗಿನ ಕಲ್ಲುಸಂಧಿಯಲ್ಲಿ ಕೈತೂರಿ ಹತ್ತಿಪ್ಪತ್ತು ಶಟ್ಲಿಯನ್ನುಹಿಡಿದು ತಂದು ಕೊಡುತ್ತಿದ್ದ. `ಅಮ್ಮಾ, ಖಟ್ಟಗೆ ಹುಳಿ ಮಾಡ್ಕಂಡು ತಿನ್ನಿ’ ಎಂದು ಕೊಟ್ಟು ಹೋಗುತ್ತಿದ್ದ. ನಾನು ಅವನಿಗೆ ಕೊಡುತ್ತಿದ್ದ ತಿಂಡಿಯ ಋಣವನ್ನು ತೀರಿಸುವ ಅವನ ಪರಿ ಇದಾಗಿತ್ತು.
ತಾನು ಉಸಿರಾಡುತ್ತಿದ್ದ ಆ ನೆಲದೊಂದಿಗೆ ಅವನು ಅದೆಷ್ಟು ತಾದಾತ್ಮ್ಯ ಹೊಂದಿದ್ದ ಎಂದರೆ ಅವನ ಮಾತು ನಮಗೆ ಒಂದೊಂದು ಸಲ ಕಾಲಜ್ಞಾನಿಯ ಮಾತಿನ ಹಾಗೆ ಕೇಳಿಸುತ್ತಿತ್ತು. ತೆಂಕು ದಿಕ್ಕಿನಲ್ಲಿ ಮೋಡ ಆಗಿದೆ. ಸಂಜೆ ಹೊತ್ತಿಗೆ ಮಳೆ ಬಂದೇ ಬರ್ತದೆ ಅಂತಿದ್ದ. ಹೌದು, ಮಳೆ ಬಂದೇ ಬರ್ತಿತ್ತು. ನಮ್ಮ ಕೊಟ್ಟಿಗೆಯಲ್ಲಿದ್ದ ಗಬ್ಬದ ಎಮ್ಮೆ ಈಯುವ ದಿನ ಬೆಳಿಗ್ಗೆ ಆತ ಬಂದಿದ್ದ. `ಇವತ್ತು ನೋಡಿ, ಮಧ್ಯಾಹ್ನ ಹನ್ನೆರಡರ ಒಳಗೆ ಇದು ಕರು ಹಾಕುತ್ತದೆ’ ಎಂದು ಹೇಳಿದ. ಅವನು ಹೇಳಿದ ಹಾಗೇ ಆಯಿತು. ಮಾರನೆ ದಿನ ಅವನು ಬಂದಾಗ ಎಮ್ಮೆ ಹಾಲಿನ ಗಿನ್ನವನ್ನು ಅವನಿಗೆ ಕೊಟ್ಟು, `ಎಮ್ಮೆ ಈಯುವ ಸಮಯವನ್ನು ನೀನು ಅದು ಹೇಗೆ ಅಷ್ಟು ಕರೆಕ್ಟಾಗಿ ಹೇಳ್ದೆ?’ ಎಂದು ಕೇಳಿದೆ.
`ಅದೇನ್ ದೊಡ್ಡ ವಿಷ್ಯ ಅಮ್ಮಾ, ಎಮ್ಮೆಯ ಕೆಚ್ಚಲಿನಿಂದ ಅದರ ಹೊಕ್ಕುಳ ವರೆಗೆ ಒಂದು ನರ ಇರುತ್ತದೆ. ಈಯುವ ದಿನ ಹತ್ತಿರ ಬಂದಾಗ ಅದು ಸ್ವಲ್ಪ ದೊಡ್ಡದಾಗುತ್ತದೆ. ಮತ್ತು ಒಂದು ನಿಂಬೆಹಣ್ಣು ಗಾತ್ರದ ಗಂಟು ಕೆಚ್ಚಲಿನಿಂದ ಹೊಕ್ಕುಳ ಕಡೆ ಜಾರುತ್ತ ಬರುತ್ತದೆ. ಅದು ಹೊಕ್ಕುಳಿಗೆ ಬಂದು ಸೇರಿದ ಕ್ಷಣದಲ್ಲಿ ಎಮ್ಮೆ ಈಯುತ್ತದೆ. ನಿನ್ನೆ ಬೆಳಿಗ್ಗೆ ನಾನು ಬಂದಾಗ ಈ ಗಂಟು ಹೊಕ್ಕುಳಿನಿಂದ ಒಂದು ಗೇಣು ದೂರ ಇತ್ತು. ಮಧ್ಯಾಹ್ನದ ಹೊತ್ತಿಗೆ ಅದು ಹೊಕ್ಕುಳು ಸೇರುತ್ತದೆ ಎಂದು ಅಂದಾಜು ಮಾಡಿ ಹೇಳಿದೆ’ ಅಂದ.
ಹೀಗೆ ಅನೇಕ ನಿಸರ್ಗದ ರಹಸ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಗೊಂಯ ಒಂದೆರಡು ವರ್ಷ ಬೇಸಿಗೆಯಲ್ಲಿ ಗೋವಾಕ್ಕೆ ಮೀನು ಲಾಂಚಿನಲ್ಲಿ ಕೆಲಸ ಮಾಡುವುದಕ್ಕೆ ಹೋಗಿ ಬಂದ. ಹಾಗೆ ಹೋಗಿ ಬಂದವ ಅಲ್ಲಿಂದಲೂ ಏನೇನೋ ಹೊಸ ಸಂಗತಿಗಳನ್ನು ತಂದು ಹೇಳುತ್ತಿದ್ದ. ಸಮುದ್ರದಲ್ಲಿ ಲಾಂಚಿನಲ್ಲಿ ಹೇಗೆ ಹೋಗುವುದು, ಹೇಗೆ ಬಲೆಯನ್ನು ಬಿಡುವುದು, ವಾರಗಟ್ಟಲೆ ಲಾಂಚಿನಲ್ಲಿಯೇ ಹೇಗೆ ಉಳಿಯುವುದು, ಮಾರಿ ಬಲೆಯಲ್ಲಿಯ ಮೀನನ್ನು ಹೇಗೆ ಮೇಲೆ ಎತ್ತುವುದು ಎಂಬುದನ್ನೆಲ್ಲ ಹೂಬೆಹೂಬಾಗಿ ವರ್ಣಿಸುತ್ತಿದ್ದ. ಗೋವಾ ಕೊಂಕಣಿಯ ಹತ್ತಾರು ಪದಗಳನ್ನು ಕಲಿತುಕೊಂಡು ಬಂದಿದ್ದ. ಯಾವ ಶ್ರಾಯದಲ್ಲಿ ಯಾವ ಮೀನು ಮೊಟ್ಟೆ ಇಡುತ್ತದೆ, ಯಾವಾಗ ಮರಿಯಾಗುತ್ತದೆ, ಮೀನು ಮರಿಗಳು ಚೆನ್ನಾಗಿ ಬೆಳೆಯುವುದಕ್ಕೆ ಯಾವ ವಾತಾವರಣ ಪೂರಕ ಎಂಬುದನ್ನೆಲ್ಲ ಅವನು ತಿಳಿದುಕೊಂಡು ಬಂದಿದ್ದ.
ಎರಡು ಬಾರಿ ಗೋವಾಕ್ಕೆ ಹೋಗಿ ಬಂದ ಗೊಂಯ ಹೊಂತಕಾರಿ ಎನಿಸಿಕೊಂಡುಬಿಟ್ಟಿದ್ದ. ಸಂಬಂಧಿಕರು ಹೆಣ್ಣುಕೊಡುವುದಕ್ಕೆ ಮುಂದೆ ಬಂದರು. ಗೊಂಯನ ಮದುವೆಯಾಯಿತು. ಮದುವೆಗೆ ನಾವೆಲ್ಲ ಹೋಗಿ ಬಂದೆವು. ಮದುವೆಯಾದಮೇಲೆ ಹೆಂಡತಿಯನ್ನು ಕರೆದುಕೊಂಡು ನಮ್ಮ ಮನೆಗೆ ಗೊಂಯ ಬಂದಿದ್ದ. ಆಗ ಅವನು ಗುಟ್ಟಾಗಿ ಎಂಬಂತೆ, ಅಮ್ಮಾ ನೀವು ಇನ್ಮೇಲೆ ನನಗೆ ಗೊಂಯ ಎಂದು ಕರೆಯಬಾರದು. ನನ್ನ ಹೆಂಡತಿಗೆ ಸಿಟ್ಟು ಬರುತ್ತದೆ. ನನಗೆ ಮಂಜು ಎಂದು ಕರೆಯಿರಿ ಎಂದು ಹೇಳಿದ. ನಾನು ಅವನ ಮಾತಿಗೆ ಬೆಲೆ ಕೊಟ್ಟೆ. ನನ್ನ ಬಾಯಲ್ಲಿ ಅಂದಿನಿಂದ ಗೊಂಯ ಮಂಜು ಆದ. ಅವನನ್ನು ಮಂಜು ಎಂದು ಸಂಬೋಧಿಸಿದರೂ ನಮ್ಮ ಮನೆಯಲ್ಲಿ ಅವನ ಬಗ್ಗೆ ಮಾತನಾಡುವಾಗ ಅವನನ್ನು ಗೊಂಯ ಎಂದೇ ಹೇಳುತ್ತಿದ್ದೆವು. ಚಿಕ್ಕಂದಿನಿಂದ ಅವನನ್ನು ಕರೆದು ರೂಢಿ ನೋಡಿ.
ಗೊಂಯನ ಅಪ್ಪ ಜಟ್ಟಿ ಊರಿನ ಜನರಿಗೆ ದೆವ್ವ ಭೂತದ ಕಾಟ ಉಂಟಾದರೆ ಅದನ್ನು ಬಿಡಿಸಲು `ವೈತಾನ’ ಮಾಡುತ್ತಿದ್ದನಂತೆ. ಮಣೆಯ ಮೇಲೆ ಅಕ್ಕಿ ಹರಡಿಕೊಂಡು, ಒಂದು ಕೈಯಲ್ಲಿ ಹುಲ್ಲು ಕಡ್ಡಿ ಹಿಡಿದು ಇನ್ನೊಂದು ಕೈಯಲ್ಲಿ ಚಾಕು ಹಿಡಿದು ಅದನ್ನು ಅಕ್ಕಿಯ ಸುತ್ತ ಸುತ್ತುತ್ತ ಒಂದೊಂದು ಸಲ ಹುಲ್ಲುಕಡ್ಡಿಯನ್ನು ಕತ್ತರಿಸುತ್ತ ಸಾಯದಲ್ಲಿ ಕಡಿಯೋ ಸಕಾಯದಲ್ಲಿ ಕಡಿಯೋ ಗಡಿ ಸುತ್ತಿನಲ್ಲಿ ಕಡಿಯೋ, ಸ್ವಾಮಿಯೇ ಎನ್ನ ತಳಭಾಗದವರಾ ಎಂದು ಹೇಳುತ್ತ, ದೆವ್ವವನ್ನು ಹಳಿಯುತ್ತ ಹಂಗಿಸುತ್ತ ಕೊನೆಯಲ್ಲಿ ಹೊತ್ತಿಸಿ ಕೊಟ್ಟ ದೊಂದಿಯನ್ನು ಬಾಯಿಗೆ ಹಾಕಿಕೊಂಡು ಉಪ್ ಎಂದು ಬೆಂಕಿಯನ್ನು ನುಂಗಿದಂತೆ ಮಾಡುತ್ತಿದ್ದ. ರಾಹು ಕಾಟ, ಕೀಳು ದೆವ್ವಗಳ ಕಾಟವೆಲ್ಲ ಇದರಿಂದ ಬಿಟ್ಟು ಹೋಗುತ್ತಿದ್ದವಂತೆ. ಇದಕ್ಕೆ ಅವನಿಗೆ ಕೊಡುತ್ತಿದ್ದುದು ಕೊನೆಯಲ್ಲಿ ಅವನು ಅಬ್ಬರಿಸಿ ಒಡೆಯುತ್ತಿದ್ದ ಈಡುಗಾಯಿ ಮತ್ತು ಸಾರಾಯಿ ಕುಡಿಯುವುದಕ್ಕೆ ನಾಲ್ಕು ಕಾಸು ಅಷ್ಟೇ. ಜಟ್ಟಿಯ ವೈತಾನವನ್ನು ನಂಬುವವರು ಊರಿನಲ್ಲಿ ತುಂಬ ಜನ ಇದ್ದರು. ಜಟ್ಟಿ ಬರೀ ಜಟ್ಟಿಯಲ್ಲ, ದೊಂದಿ ಜಟ್ಟಿ ಎಂದೇ ಹೆಸರಾಗಿದ್ದ. ತನ್ನ ಅಪ್ಪನ ಪರಾಕ್ರಮವನ್ನು ಅವರಿವರ ಮೂಲಕ ಅಂತೆ ಕಂತೆ ಎಂಬಂತೆ ಕೇಳುತ್ತ ಒಳಗೊಳಗೇ ಪುಳಕಗೊಳ್ಳುತ್ತಿದ್ದ ಗೊಂಯನಿಗೆ ಊರಿನ ಕೆಲವು ಹಿರಿಯರು, ನಿಮ್ಮ ಅಪ್ಪನ ವೈತಾನವನ್ನು ನೀನೂ ಮುಂದುವರಿಸು. ನಿನ್ನ ಅಣ್ಣನಿಗೆ ಹೇಳಿ ನಾವು ಸೋತೆವು. ಅವನೊಬ್ಬ ಬುರ್ನಾಸು. ನಿಮ್ಮ ಮನೆತನದಲ್ಲಿ ದೈವದ ಶಕ್ತಿ ಇದೆ. ಜನರಿಗೆ ಉಪಕಾರ ಮಾಡಿದ ಪುಣ್ಯವೂ ನಿನಗೆ ಬರುತ್ತದೆ ಎಂದು ಹೇಳಿದರು. ಹಾಗೆ ಹೇಳಿದ ಮೇಲೆ ಗೊಂಯ ತಾನೂ ವೈತಾನವನ್ನು ಸಣ್ಣದಾಗಿ ಪ್ರಾರಂಭಿಸಿ ಈಗೀಗ ಅಪ್ಪನ ಹೆಸರು ಉಳಿಸಿದ ಎಂದು ಜನರು ಮಾತನಾಡಿಕೊಳ್ಳುವ ಮಟ್ಟಿಗೆ ಬೆಳೆದಿದ್ದ.
ಹೆಂಡತಿ ಎಂಬವಳು ಬಂದ ಮೇಲೆ ಗೊಂಯ ಗೋವಾ ಗೀವಾ ಅಂತೆಲ್ಲ ಊರು ಬಿಟ್ಟು ಹೋಗುವುದು ಕಡಿಮೆ ಮಾಡಿದ. ಅವನಿಗೆ ಸ್ವಂತದ್ದು ಎಂಬುದು ಸ್ವಲ್ಪ ಗದ್ದೆ, ಭಾಗಾಯ್ತ ಮತ್ತು ಬೇಣದ ಜಾಗ ಇತ್ತು. ಮೈಮುರಿದು ದುಡಿದರೆ ಅವನ ಸಂಸಾರಕ್ಕೆ ಸಾಕಾಗುತ್ತಿತ್ತು. ಇನ್ನು, ಮೇಲು ಖರ್ಚಿಗೆ ಅಲ್ಲಿ ಇಲ್ಲಿ ಚಿಕ್ಕ ಪುಟ್ಟ ಕೆಲಸಕ್ಕೆ ಹೋಗುತ್ತಿದ್ದ, ಅಪ್ಪನ ವೈತಾನ ಇವನು ಆರಂಭಿಸಿದ ಮೇಲೆ ಊರ ಜನಕ್ಕೆ ಬೇಕಾದ ಮನುಷ್ಯ ಆಗಿಬಿಟ್ಟಿದ್ದ.
ಅವನ ಅಕ್ಕ ಪಕ್ಕದ ಮನೆಯವರೆಲ್ಲ ಹೊಳೆಯಲ್ಲಿ ಹೊಯಿಗೆ ಎತ್ತಲು ಹೋಗುತ್ತಿದ್ದರು. ಇವನನ್ನೂ ಬಾ ಎಂದು ಕರೆದರು. ಆದರೆ ಇವನು ಮಾತ್ರ ಹೋಗಲಿಲ್ಲ. ಹೊಳೆ ಹೊಯಿಗೆಗೆ ಇಮಾರತು ಕಟ್ಟುವವರಿಂದ ಒಳ್ಳೆಯ ಬೇಡಿಕೆ ಇತ್ತು. ಮೊದಲೆಲ್ಲ ಹಲಗೆ ದೋಣಿಯ ಮೇಲೆ ಮೂರ್ನಾಲ್ಕು ಜನ ಸೇರಿಕೊಂಡು ಹೊಳೆಯಿಂದ ಹೊಯಿಗೆ ಎತ್ತುತ್ತಿದ್ದರು. ಆದರೆ ಈಗೀಗ ಈ ಮರಳು ಎತ್ತುವುದಕ್ಕೆ ಮಷೀನು ಬಂದಿತ್ತು. ಜನ ನೀರಿಗೆ ಇಳಿಯಬೇಕು ಅಂತ ಇರಲಿಲ್ಲ. ಅವರ ಕೆಲಸ ಆರಾಮ ಆಗುತ್ತಿತ್ತು. ಗಾಳ ಹಾಕಲು ಆಗೀಗ ಹೊಳೆಯ ಕಡೆ ಬರುತ್ತಿದ್ದ ಗೊಂಯನಿಗೆ ಅದೇನೋ ಸರಿಯಲ್ಲದ್ದು ಆಗುತ್ತಿದೆ ಎಂದು ಅನಿಸಲಿಕ್ಕೆ ಶುರುವಾಯಿತು. ವರ್ಷ ಆರು ತಿಂಗಳು ನೋಡಿದ. ಈ ಮಷೀನುಗಳು ನಮ್ಮ ಉದ್ಧಾರಕ್ಕೆ ಬಂದಿಲ್ಲ ಎಂಬುದು ಅವನಿಗೆ ತಿಳಿಯಿತು. ಈಗೀಗ ಬಳಚು ಸಿಗುವುದು ಕಡಿಮೆಯಾಗುತ್ತಿದೆ, ಮಡ್ಲೆ ಮೀನು ಅಪರೂಪ ಅಂದ್ರೆ ಅಪರೂಪ ಆಗುತ್ತಿದೆ. ಇದಕ್ಕೆಲ್ಲ ಈ ಮರಳು ಎತ್ತುವ ಮಷೀನೇ ಕಾರಣ ಎಂಬ ತೀರ್ಮಾನಕ್ಕೆ ಅವನು ಬಂದ.
ಮನೆಯಲ್ಲಿ ಮಲಗಿದ್ದಾಗಲೂ ಮಷೀನಿನ ಶಬ್ದ ಗುಡುಗುಡು ಎಂದು ಅವನ ಮಿದುಳಿಗೆ ಬಡಿಯುತ್ತಿತ್ತು. ಇದರ ದನಿ ಅಡಗಿಸಲೇಬೇಕು ಎಂದುಕೊಂಡ ಗೊಂಯ ಒಂದು ದಿನ ನಮ್ಮ ಮನೆಗೆ ಬಂದವನು, `ಒಡ್ಯಾ ಎಲ್ಲಿ? ಸ್ವಲ್ಪ ಕರೀತೀರಾ?’ ಎಂದು ಸ್ವಲ್ಪ ಆತುರದಿಂದಲೇ ಕೇಳಿದ. ಏನೋ ಕಷ್ಟದಲ್ಲಿ ಸಿಕ್ಕಿದ್ದಾನೆ ಎಂದು ಅನಿಸಿತು. `ಕೂತ್ಕೊಳ್ಳೋ, ಕರೀತೀನಿ’ ಎಂದು ಹೇಳಿದೆ. ನಮ್ಮ ಧ್ವನಿ ಕೇಳಿ ನಮ್ಮವರು ಒಳಗಿದ್ದವರು ಹೊರ ಬಂದರು. `ಏನ್ ಮಂಜು, ಮದ್ವಿ ಆದ್ಮೇಲೆ ಅಪರೂಪ ಆಗ್ಬಿಟ್ಟಿಯಲ್ಲೋ. ಎಲ್ಲಿ ಕೆಲ್ಸ ನಡಿದಿದೆ?’ ಎಂದು ಕೇಳಿದರು. `ಒಡ್ಯಾ, ಒಂದು ದೊಡ್ಡ ಘಾತ ಆಗಿಹೋಗ್ತಿದೆ ಬಲ್ರಾ’ ಎಂದ. `ಎಂಥದ್ದು ಅದು?’ ಎಂದರು ನಮ್ಮವರು ಸಹಜವಾಗಿ. ಗೊಂಯನ ಧ್ವನಿಯಲ್ಲಿ ಬೇಜಾರಿತ್ತು, ಏನೋ ಆತಂಕ ಇತ್ತು. ಅವನು ಹೇಳುವುದಕ್ಕೆ ಶುರು ಮಾಡಿದ.
`ಒಡ್ಯಾ ಈಗೀಗ ಅಂಬಿಗರ ಬಲೆಗಾಗಲಿ ರಂಪಣಿಗಾಗಲಿ ಮಡ್ಲೆ ಮೀನು ಬೀಳ್ತಾ ಇಲ್ವಂತೆ. ಮಡ್ಲೆ ಆಗ್ಲಿ ಮಗ್ಣಿ ಆಗ್ಲಿ ನೀವು ಇತ್ತೀಚೆ ತಿಂದಿದ್ದೀರಾ? ಮೀನು ಹಿಡಿಯುವವರು ಯಾರೂ ಅದನ್ನ ತರ್ತಾ ಇಲ್ಲ. ಕೇಳಿದ್ರೆ ಮಡ್ಲೆ ಬಲೆಗೆ ಬೀಳ್ತಾ ಇಲ್ಲ ಅಂತಾರೆ. ಕಾರಣ ಮಾತ್ರ ಹೇಳ್ತಿಲ್ಲ. ಗೊತ್ತಿದ್ರಲ್ವಾ ಹೇಳೂದು? ಮತ್ತೆ ಬಳಚು ಈಗ ಮೊದ್ಲಿನ ಹಾಗೆ ಹೊಳೆಯಲ್ಲಿ ಸಿಕ್ತಾ ಇಲ್ಲ. ಬಳಚು ತೆರಿಯಲು ಹೋದವರು ಬರಿಗೈಲಿ ಬರ್ತಾ ಇದ್ದಾರೆ. ಯಾಕೆ ಅಂತ ಕೇಳಿದ್ರೆ ಒಬ್ರಿಗೂ ಗೊತ್ತಿಲ್ಲ. ಇದು ಮೀನುಗಾರರ ಹೊಟ್ಟೆ ಮೇಲೆ ಹೊಡ್ದ ಹಾಗೆ ಒಡ್ಯಾ’ ಎಂದ.
`ಇದೆಲ್ಲ ಯಾತಕ್ಕಾಗಿ, ನಿನ್ಗೆ ಗೊತ್ತಿದ್ದರೆ ಹೇಳು’ ಎಂದರು ನಮ್ಮವರು. ಗೊಂಯ ಹೇಳಿದ್ದು ಕೇಳಿದಾಗ ನಮಗೆ ಆಘಾತ ಆಗಿತ್ತು.
ಇತ್ತೀಚೆಗೆ ಹೊಳೆಯಲ್ಲಿ ಹೊಯ್ಗೆ ತೆಗೆಯುವವರು ಜಾಸ್ತಿಯಾಗಿದ್ದಾರೆ. ಇಲ್ಲಿ ತೆಗೆದ ಹೊಯ್ಗೆಯನ್ನು ಲಾರಿಯಲ್ಲಿ ತುಂಬಿಕೊಂಡು ಎಲ್ಲೆಲ್ಲಿಗೋ ಹೋಗುತ್ತಾರೆ. ಹೊಯ್ಗೆ ಮಾರಿ ಹಣ ಬಾಚಿಕೊಂಡವರು ಹೊಳೆಸಾಲಿನಲ್ಲಿ ಹಲವರಿದ್ದರು. ದೊಡ್ಡದೊಡ್ಡ ಹಲಗೆ ದೋಣಿಗಳಲ್ಲಿ ನದಿಯಿಂದ ಮರಳನ್ನು ಹೊಸ ರೀತಿಯಲ್ಲಿ ಮಷೀನು ಬಳಸಿ ತೆಗೆಯುತ್ತಾರೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ಹೊಳೆಯಿಂದ ಯಂತ್ರ ಬಳಸಿ ಹೊಯ್ಗೆ ಎತ್ತುವುದರಿಂದ ನದಿಯ ತಳಕ್ಕೆ ಹೊಂದಿಕೊಂಡು ಮೊಟ್ಟೆ ಇಟ್ಟು ಮರಿ ಮಾಡುವ ಮಡ್ಲೆಗೆ ಸಂತತಿ ಬೆಳೆಸುವುದು ಸಾಧ್ಯವಾಗ್ತಾ ಇಲ್ಲವಂತೆ. ಹಾಗೆಯೇ ಬಳ್ಚು ಕೂಡ ಬೆಳೆಯುವುದಕ್ಕೆ ಆಗ್ತಾ ಇಲ್ಲವಂತೆ. ಇದೇ ರೀತಿ ಹೊಯ್ಗೆ ಎತ್ತುವುದು ನಡೆದರೆ ಈ ಹೊಳೆಯಲ್ಲಿ ಮಡ್ಲೆ ಸಂತತಿ ನಾಶವಾಗಿ ಹೋಗುತ್ತದೆ. ಬಳಚು ಕನಸಿನಲ್ಲಷ್ಟೇ ಕಾಣಬೇಕು ಎಂದು ಹೇಳಿದ ಗೊಂಯ.
ಇವನ ಮಾತಿನ ಹಿಂದಿನ ಗಂಭೀರತೆ ನಮ್ಮವರಿಗೆ ಅರ್ಥ ಆಯ್ತು. ಮುಂದೆ ನಡೆದದ್ದು ಒಂದು ಪವಾಡ. ಗೊಂಯನ ಮುಂದಿಟ್ಟುಕೊಂಡು ನಮ್ಮವರು ಮತ್ತು ಊರಿನ ಇತರ ಹಲವರು ತಾಲೂಕು ಕಚೇರಿಗೆ ಹೋಗಿ ಮನವಿ ಕೊಟ್ಟರು. ಜಿಲ್ಲಾಧಿಕಾರಿಗೆ ಬರೆದರು. ಅತ್ಯಪರೂಪದ, ಪುರಾತನ ಜಲಚರವೊಂದು ನಾಶವಾಗಿ ಹೋಗುತ್ತದೆ. ಕಾರಣ ಮರಳುಗಾರಿಕೆಯನ್ನು ನಿಲ್ಲಿಸಬೇಕು ಎಂಬುದು ವಾದವಾಗಿತ್ತು. ಹೊಳೆಸಾಲಿನಲ್ಲಿ ಅದೇ ಮೊದಲ ಬಾರಿಗೆ ಜನರೆಲ್ಲ ಈ ವಿಷಯದಲ್ಲಿ ಒಂದಾಗಿ ಬಿಟ್ಟಿದ್ದರು. ಜನರನ್ನು ಸೇರಿಸುವುದರಲ್ಲಿ ಗೊಂಯನ ಪ್ರಯತ್ನ ದೊಡ್ಡದಿತ್ತು. ನಮ್ಮೂರಿನಲ್ಲಂತೂ ಯಾರೂ ಮರಳು ಎತ್ತುವ ಕೆಲಸಕ್ಕೆ ಹೋಗಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಪರಿಸರವಾದಿಗಳು ನಮ್ಮ ದನಿಗೆ ದನಿಗೂಡಿಸಿದರು. ಪತ್ರಿಕೆಗಳಲ್ಲಿ ವರದಿಗಳು ಬಂದವು. ಟೀವಿಯವರು ಬಂದು ವರದಿಮಾಡಿದರು. ಇದರಲ್ಲೆಲ್ಲ ಗೊಂಯ ಅಲಿಯಾಸ ಮಂಜುನ ಹೇಳಿಕೆಗಳು ಬಂದವು. ಈ ಹೋರಾಟದ ಫಲವಾಗಿ ಹೊಳೆಸಾಲಿನಲ್ಲಿ ಮಾರಾಟಕ್ಕಾಗಿ ಹೊಯ್ಗೆ ತೆಗೆಯುವುದನ್ನು ಸರ್ಕಾರ ನಿಷೇಧಿಸಿತು. ಹೊಳೆಸಾಲಿನವರು ಮಾತ್ರ ತಮ್ಮ ಅಗತ್ಯಕ್ಕೆ ಮಾತ್ರ ಹೊಯ್ಗೆ ಎತ್ತಬಹುದು ಎಂಬ ರಿಯಾಯ್ತಿ ಸಿಕ್ಕಿತು. ಇದರಿಂದಾದ ಇನ್ನೊಂದು ಲಾಭ ಎಂದರೆ ಗೊಂಯನ ಗೊಂಯ ಎಂಬ ಹೆಸರು ಹಿಂದ ಸರಿಯಿತು. ಮಂಜು ಎಂಬ ಹೆಸರು ಪಕ್ಕಾ ಆಯಿತು. ಹೀಗೆ ಹೆಸರಿಲ್ಲದವನು ಹೆಸರುವಾಸಿಯಾಗಿದ್ದ.
1 thought on “ಹೆಸರಿಲ್ಲದವನು ಹೆಸರುವಾಸಿಯಾಗಿದ್ದು”
good story