ವೃದ್ಧಾಶ್ರಮದ ಕಿಟಕಿಯಲ್ಲಿಣುಕಿದ ಚಂದಮಾಮ

ನೀನೇಯೇನಮ್ಮ ಹಿಂದೊಮ್ಮೆ

ಪುಟ್ಟ ಕಂದನ ಮುಖವೆತ್ತಿ

ಬಾನಂಗಳದಲ್ಲಿ ಬೆಳಗುವ ನನ್ನತ್ತ

ಪುಟಾಣಿ ಕೈ ಬಿಡಿಸಿ ಬೆರಳುಗಳ ಚಾಚಿ

ಚಂದಮಾಮ…ಚಂದದಮಾಮ… ತೋರಿಸಿದವಳು

ತಟ್ಟೆಯಲಿ ತುತ್ತ ಕಲಸುತ್ತ, ಹೂಂ… ತೆರೆ ಬಾಯಿ

ಬಾ…ಬಾ… ಆಂ ಅನ್ನು…ಕೊಟ್ಟೆ ನೋಡು ಆ ಮಾಮಗೆ

ರಮಿಸುವ ನೆಪದಲ್ಲಿ ನನ್ನಮ್ಮನ ನೆನೆಸಿ

ನನ್ನಕಣ್  ತೋಯಿಸಿದವಳು…

ಈಗೇಕೆ ನನ್ನತ್ತ ನೋಡುತ್ತಿಲ್ಲ…

ಎರಗಿತೆ ಬರಸಿಡಿಲು…ಬರಿದಾಯಿತೆ  ಮಮತೆಯ  ಮಡಿಲು

ನವಮಾಸದ ಮಾಸದ ಮಧುರ ಯಾತನೆಯ ಒಡಲು?

ತೂಗಿತೂಗಿ  ಹಾಡಲು ಭುವಿಗೂ-ಬಾನಿಗೂ ಇಳಿಬಿಟ್ಟ ತೊಟ್ಟಿಲು??

ಬಂದೇ ಬಿಟ್ಟಿತೆ ನಿನ್ನಂಗಳಕ್ಕೀಗ  ಅಮಾವಾಸ್ಯೆ

ಭಾವಿಸ ಬಹುದೆ ಇದನ್ನೂ ಒಂದು ಸಮಸ್ಯೆ

ನೋಡಿಲ್ಲಿ  ನನ್ನ ಹಿಂದೆ-ಮುಂದೆ

ಇದ್ದಾವೆ ಗ್ರಹ-ತಾರೆ ನೂರಾರು

ಎಲ್ಲ ಅವರಷ್ಟಕ್ಕೆ ಬೆಳೆಯುತ್ತವೆ, ಬೆಳಗುತ್ತವೆ

ನೋಡಲ್ಲಿ  ಹಕ್ಕಿ ರೆಕ್ಕೆಗೆ ಕುಕ್ಕಿ-ಕುಕ್ಕಿ ಕಲಿಸುತ್ತಿದೆ

ಪುಟ್ಟ ಮರಿಗೆ ಹಾರುವ ಪರಿ

ಒರಿಸಿಕೊ ಸೆರಗಂಚಿಂದ ಒತ್ತೊತ್ತಿ

ಕಣ್ಣಂಚಿಂದ  ಒಸರುವ ಮುಸಲಧಾರೆಯ

ಅಷ್ಟು ಬೇಗ ಮರೆತೆಯಾ…

ಈ ಇಳೆಗೆ ಇಳಿವ ವೇಳೆ ಇರಲಿಲ್ಲ ಯಾರೂ ಜೊತೆಯಲ್ಲಿ

ಪುಟ್ಟ ಪಾದವ  ಊರಿಸಿ ಕಲಿಸಿದ  ಒಂದೊಂದೇ…

ಒಂದೊಂದೇ  ಹೆಜ್ಜೆ ಬಿಟ್ಟು ಹೋಗುವಂತಾಯಿತೇ

ಇದೀಗ ಈ ಕಿಟಕಿಯ ಬಳಿ…ಮಹಾ ಮೌನದಂಗಳಕ್ಕೆ

ಮತ್ತುಳಿವ ಶೂನ್ಯಕ್ಕೆ ಮತ್ತೆ-ಮತ್ತೆ ಸೇರಿಸಿದರೇನು ಬಂತು…

ನೀನು, ನಿನ್ನಮ್ಮ ನಿನ್ನತ್ತೆ ಮತ್ತೆ-ಮತ್ತೆ

ಕೂಡಿಕಟ್ಟದ ಕನಸಿನ  ಸೌಧಕ್ಕೆ ಸಾವುಂಟೇ?

ಇರುತ್ತದೆ ಅದು ಅದರಷ್ಟಕ್ಕೆ

ಕಳೆದದ್ದು ನಿನ್ನ ದಿನ ಕೂಡಿಟ್ಟದ್ದು ತಲೆಮಾರಿಗಲ್ಲದೆ

ಮತ್ತಾರಿಗಾಗಿ  ನೀನೇ  ಹೇಳು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ವೃದ್ಧಾಶ್ರಮದ ಕಿಟಕಿಯಲ್ಲಿಣುಕಿದ ಚಂದಮಾಮ”

  1. Sreenivas G Kappanna

    ಕೆಲವೊಮ್ಮೆ ಕವಿತೆ
    ಪದಗಳ ಫೋಣಿಸುವ ಕಲೆ ಮಾತ್ರ.
    ಅಲ್ಲಿ ಪದಗಳು ಅಕ್ಷರ ಮಾತ್ರ.
    ಮತ್ತೇನನ್ನು ಬಿಂಬಿಸುವುದಿಲ್ಲ.

    ಈ ಕವಿತೆಯಲ್ಲಿ ಪ್ರತಿ ಪದವೂ
    ಬೇರೆ ಬೇರೆ ದೃಶ್ಯಗಳನ್ನು ಕಟ್ಟಿಕೊಡುತ್ತದೆ.
    ಮನಸ್ಸು ಭಾರವಾಗುತ್ತೆ.
    ಇದು ಬರಿ ಕವಿತೆ ಅಲ್ಲ :
    ಬದುಕಿನ ಕರಾಳ ಚಿತ್ರಣ.

    ಕಪ್ಪಣ್ಣ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter