ಬಚ್ಚಲುಮನೆಯಿಂದ ತಲೆಒರೆಸಿಕೊಳ್ಳುತ್ತ ಹಿಂಬದಿಯ ಶೆಡ್‍ನಲ್ಲಿರುವ ಬಕೆಟ್‍ಗೆ ತೊಳೆಯಬೇಕಾಗಿರುವ ಬಟ್ಟೆಗಳನ್ನೆಲ್ಲ ಎಸೆದು ಬಂದು ಮೊಬೈಲ್ ಹಿಡಿದು ಕುಳಿತೆ. ಸ್ನಾನದ ಕೋಣೆಯಲ್ಲಿರುವಾಗಲೇ ಮೊಬೈಲ್ ರಿಂಗಣ ಒಂದೇಸವನೆ ಕೇಳಿಸುತ್ತಿತ್ತು. ಯಾರಿರಬಹುದು…? ಯಾವುದೋ ಅಪರಿಚಿತ ನಂಬರ್. ಇನ್ಸುರೆನ್ಸ್ ಕಂಪೆನಿಯವರದ್ದೇ ಇರಬೇಕು. ದಿನಕ್ಕೆ ಹತ್ತುಬಾರಿಮಾಡುತ್ತಿರುತ್ತಾರೆ, ಮನಸ್ಸಲ್ಲೇ ಗೊಣಗಿಕೊಂಡೆ.
“ಯಾರದ್ದು ಫೋನ್? ವಿಷ್ಣು ಸಹಸ್ರನಾಮ ಪಠಿಸುತ್ತ ಕುಳಿತ ನಮ್ಮವರು ಕೇಳಿದರು. ಇನ್ಸುರೆನ್ಸ್ ಕಂಪೆನಿಯವರದ್ದಿರಬೇಕು. ಟಾಪ್‍ಅಪ್‍ಗೆ ಇನ್ನೂ ಹದಿನೈದು ದಿನಗಳಿವೆ. ಆಗಲೇ ಇವರ ಕೊರೆತ ಶುರುವಾಗಿದೆ. ನಮ್ಮ ಸೇವಿಂಗ್ಸ್‍ಗೆ ನಮಗೇ ರಿಮೈಂಡರ್! ಮೊಬೈಲ್ ಬದಿಗಿರಿಸಿ ಅಡಿಗೆಮನೆಗೆ ಹೋದೆ. ಹಾಗಲಕಾಯಿ ಸಾಸ್ಮೆ ಮಾಡುವುದಕ್ಕೆ ಕಾಯಿ ತುರಿಯತೊಡಗಿದೆ. ಮತ್ತೆ ಫೋನ್ ರಿಂಗಣಿಸಿತು. “ಯಾರದ್ದು ಮಹಾರಾಯ್ತಿ. ಒಂದೋ ಎತ್ತಿ ಮಾತಾಡು ಅಥವಾ ಆ ನಂಬರ್ ಬ್ಲಾಕ್ ಮಾಡು. ಬೆಳಿಗ್ಗೆಯಿಂದ ಕೇಳಿ- ಕೇಳಿ ಸಾಕಾಗಿಹೋಯ್ತು.” ಯಜಮಾನರು ತಮ್ಮ ಕಿರಿಕಿರಿಯನ್ನು ತೋಡಿಕೊಂಡರು. ಆ ಕಡೆಯವರಿಗೆ ಒಂದು ಗತಿ ಕಾಣಿಸಿಯೇ ಬಿಡಬೇಕೆಂದು ಕಾಲ್ ಎತ್ತಿದೆ. “ಹಲೋ ಭಾಮಿ ಆಂಟಿ” ಸ್ವರ ಪರಿಚಿತವಲ್ಲದಿದ್ದರೂ, ಭಾಮಿ ಎಂದು ಕರೆದಿದ್ದಾರೆ ಎಂದಮೇಲೆ ನಮ್ಮ ಕುಟುಂಬಕ್ಕೆ ಸಂಬಂಧಿಸಿದವರೇ ಯಾರೋಇರಬೇಕು.
ನನ್ನ ಆಲೋಚನೆಗೆ ಬ್ರೇಕ್ ಹಾಕುವಂತೆ ಆ ಕಡೆಯಿಂದ ಕ್ಷೀಣದನಿ ಕೇಳಿಸಿತು, “ಗುಡ್ ಮಾರ್ನಿಂಗ್ ಆಂಟಿ. ಐ ಆಮ್ ಅಕ್ಷಯ್… ಯುವರ್ ಅಕ್ಕಿ” ಅಕ್ಕಿ…ಕೇಳುತ್ತಿದ್ದಂತೆ ಮೈ ಜುಂ ಆಯ್ತು. ಇವನು ನಮ್ಮವರ ಅಕ್ಕನ ಮಗ ಅಕ್ಷಯ್ ಇರಬಹುದಾ? ಅವನ ದನಿ ಕೇಳಿ ಅದೆಷ್ಟೋ ವರ್ಷ ಕಳೆದಿದೆ. “ಹೌದು ಹೇಳಿ” ಎಂದೆ ಅಪ್ಪಟ ಕನ್ನಡದಲ್ಲಿ. ಕನ್ನಡಾಭಿಮಾನ ಅನ್ನುವುದಕ್ಕಿಂತ ನನಗೆ ಇಂಗ್ಲಿಷ್ ಅಂದರೆ ಮೊದಲಿನಿಂದಲೂ ಕಬ್ಬಿಣದ ಕಡಲೆ. ಈ ನಯಾಗಾರ್ ನೀರು ಕುಡಿದವ ವಟಾಯಿಸಲಿಕ್ಕೆ ಆರಂಭಿಸಿದರೆ ನಾನು ಮೂಗಿಯಾಗುವುದಂತೂ ಗ್ಯಾರಂಟಿ. ಹಾಗಂತ ಟಿ.ವಿ. ಸೀರಿಯಲ್‍ಗಳ ಕೃಪೆಯಿಂದ ಹಿಂದಿಯನ್ನು ಅರಗಿಸಿಕೊಳ್ಳಬಲ್ಲೆ. ನನ್ನಪ್ರತಿಕ್ರಿಯೆ ನೋಡಿ ಅವನು ಕನ್ನಡದಲ್ಲೇ ಮಾತು ಮುಂದುವರಿಸುವ ಪ್ರಯತ್ನ ಮಾಡಿದ.
“ನಾನು ಅಕ್ಷಯ್, ವಿಶಾಲಾಕ್ಷಿಯ ಮಗ. ಸ್ಟೇಟ್ಸ್‍ನಿಂದ ಬಂದಿದ್ದೇನೆ…” ಅವನ ಮಾತು ಮುಗಿಯುವ ಮೊದಲೇ, “ಗೊತ್ತಾಯ್ತು, ನೀನು ನಮ್ಮ ಅಕ್ಕಿ ಅಂತ. ಅಂತೂ ಈ ಭಾಮಿ ಆಂಟಿಯನ್ನು ನೆನಪು ಮಾಡಿಕೊಂಡು ಫೋನ್ ಮಾಡಿದೆಯಲ್ಲ! ಅಮೇರಿಕಾಕ್ಕೆ ಹೋದಮೇಲೆ ನಮ್ಮನ್ನೆಲ್ಲ ಮರೆತೇಬಿಟ್ಟಿದ್ದಿಯಲ್ವಾ? ಬಹುಶಃ ಮೂರು-ನಾಲ್ಕು ವರ್ಷಗಳ ಕೆಳಗೆ ನಾನೇ ಒಮ್ಮೆ ದೀಪಾವಳಿಗೆ ವಿಶ್ ಮಾಡಿದ್ದೆ. ನಿನ್ನ ಹೆಂಡತಿಯ ಹತ್ತಿರ ಮಾತಾಡೋದು ನನಗಂತೂ ಅಸಾಧ್ಯ! ನಿನ್ನ ನಂಬರ್ ನನ್ನ ಹಳೆ ಸೆಟ್‍ನಲ್ಲಿತ್ತು. ಅದು ನೀರಿಗೆ ಬಿದ್ದು ಹಲವು ನಂಬರ್ ಕಳೆದುಕೊಂಡೆ. ಅದರಲ್ಲಿ ನಿನ್ನದೂ ಒಂದು.”
“ನನ್ನ ಹತ್ರ ನಿಮ್ಮ ನಂಬರ್ ಇತ್ತು. ಈಗ ಅಂಧೇರಿಯಲ್ಲಿದ್ದೇನೆ.” “ನನಗಂತೂ ಫೋನ್ ಮಾಡಲಾಗಲಿಲ್ಲ. ನೀನಾದರೂ ಮಾಡಬಹುದಿತ್ತಲ್ವಾ ಮಗಾ?… ನಿನ್ನಮ್ಮನಿಗೆ ಸಂಬಂಧಿಕರ ಜೊತೆ ಸಂಬಂಧ ಇಟ್ಟುಕೊಳ್ಳೋದೆಂದರೆ ಮೊದಲಿಂದಲೂ ಆಗದು.” ನಾವೆಲ್ಲಾದರೂ ದುಡ್ಡು-ಗಿಡ್ಡು ಕೇಳಿಬಿಡ್ತೇವೇನೋ ಅಂತ ಭಯ ಅವಳಿಗೆ ಅಂತ ಹೇಳಬೇಕೆನಿಸಿದರೂ ಮಗನ ಹತ್ತಿರ ತಾಯಿ ಬಗ್ಗೆ ಚಾಡಿ ಹೇಳುವುದು ಸರಿಯಲ್ಲವೆಂದು ಮಾತು ತಿರುಗಿಸಿಬಿಟ್ಟೆ. “ಅವಳಾಯಿತು, ಅವಳ ಪೂಜೆ-ಧ್ಯಾನ ಆಯ್ತು…ನಿಮ್ಮಪ್ಪ ಇರುವವರೆಗಷ್ಟೆ…” ನಾನಿನ್ನೂ ಮಾತು ಮುಗಿಸಿರಲಿಲ್ಲ. ನಡುವೆಯೇ ಹೇಳಿದ, “ಅಮ್ಮ ಸತ್ತುಹೋಗಿದ್ದಾಳೆ. ಅದನ್ನು ತಿಳಿಸಲಿಕ್ಕೆ ಫೋನ್ ಮಾಡಿದ್ದು.” ಒಮ್ಮೆಲೆ ಕಂಗಾಲಾದವಳಂತೆ ಹೇಳಿದೆ, “ಅಯ್ಯೋ! ಏನ್ ಹೇಳ್ತಾ ಇದ್ದಿಯೋ…ನನಗೆ ದಿಕ್ಕೇ ತೋಚ್ತಾ ಇಲ್ಲ…ಇರು, ನಿನ್ನ ಮಾಮಂಗೆ ಕೊಡ್ತೇನೆ.” “ನೋಡಿ, ನಿಮ್ಮ ಅಕ್ಕನ ಮಗ…” ಎಂದಷ್ಟೇ ಹೇಳಿ ಮೊಬೈಲ್ ಅವರ ಕೈಗಿಟ್ಟು ಅಲ್ಲೇ ಪಕ್ಕದಲ್ಲೇ ನಿಂತೆ. “…ಅಂಕಲ್, ಪೊಲೀಸರೆಲ್ಲ ಮನೆಗೆ ಬರ್ತಿದ್ದಾರೆ. ನೀವು ಬಂದರೆ ನನಗೆ ತುಂಬಾ ಹೆಲ್ಪ್ ಆಗ್ತಾ ಇತ್ತು. ಇಲ್ಲಿಗೆ ಬಂದಮೇಲೆ ವಿಸ್ತಾರವಾಗಿ ಹೇಳ್ತೇನೆ.” ನಾವು ಅಂದೇ ರಾತ್ರಿಯ ಟ್ರೇನ್ ಹಿಡಿದು ನಸುಕಿನಲ್ಲಿ ಮುಂಬೈ ತಲುಪಿದೆವು.
ಅಲ್ಲಿಂದ ಲೋಖಂಡವಾಲಾದ ಪಾಷ್ ಅಪಾರ್ಟಮೆಂಟ್‍ಗೆ. ಅಕ್ಷಯ್ ಒಬ್ಬನೇ ಇದ್ದ. ಹೆಂಡತಿ ಬಂದಿರಲಿಲ್ಲ. “ಅಂಕಲ್ ಆಂಟಿ ಬನ್ನಿ.ನಿಮಗೋಸ್ಕರ ಕಾಯ್ತಾ ಇದ್ದೆ.” ಮನೆ ತುಂಬಾ ಅಸ್ತವ್ಯಸ್ತವಾಗಿತ್ತು. ನನ್ನಿಂದ ನೋಡಲಾಗಿಲ್ಲ, ಸ್ವಲ್ಪ ಫ್ರೆಶ್ ಆಗಿ ಭುಜದ ಮೇಲಿನ ಶಾಲ್ ಸೊಂಟಕ್ಕೆ ಕಟ್ಟಿಕೊಂಡು ಅಡಿಗೆಕೋಣೆಯ ಕಡೆಗೆ ಹೆಜ್ಜೆ ಹಾಕಿದೆ. “ಅಲ್ವೊ ಅಕ್ಕಿ, ಈ ಫ್ಲೋರ್‍ನಲ್ಲಿ ಇದ್ದದ್ದು ಎರಡೇ ಫ್ಲ್ಯಾಟ್. ಅದರಲ್ಲಿ ನೀವು ಎದುರುಗಡೆ ಇರ್ತಿದ್ರಿ. ಈ ಅಪಾರ್ಟಮೆಂಟ್‍ನಲ್ಲಿ ಒಂದು ಮಾರ್ವಾಡಿ ಫ್ಯಾಮಿಲಿ ಇದ್ದ ನೆನಪು.” ನಮ್ಮವರು ಹೇಳಿದರು. “ಅಂಕಲ್, ನೀವು ಹೇಳ್ತಾ ಇದ್ದದ್ದು ಹದಿನಾರು ವರ್ಷ ಹಿಂದಿನ ಕಥೆ. ಈಗ ಇವೆರಡೂ ಅಪಾರ್ಟಮೆಂಟ್ ನಮ್ಮದೇ. ಇದನ್ನು ಖರೀದಿಸಿಯೇ ಹತ್ತು ವರ್ಷ ಆಗಿದೆ…” ನಾನು ಮನಸ್ಸಲ್ಲೇ ಯೋಚಿಸಿದೆ, ಹೊಸಮನೆ ತೆಗೆದುಕೊಂಡವರು ಪೂಜೆ-ಪುನಸ್ಕಾರ ಮಾಡಿ ನಾಲ್ಕು ಜನರನ್ನು ಕರೆದು ಊಟ ಹಾಕಿಸಿದರೆ ತಾನೇ ಗೊತ್ತಾಗೋದು. ಸ್ವಂತ ತಮ್ಮನನ್ನೇ ಕರೆಯದ ಅವಳೆಂಥ ಅಕ್ಕ! ಆದರೆ ಬಾಯಿಬಿಟ್ಟು ಹೇಳೋದಕ್ಕೆ ಅದು ಸಮಯವೂ ಆಗಿರಲಿಲ್ಲ, ಅಂಥ ಭಂಡತನವೂ ನನ್ನಲ್ಲಿರಲಿಲ್ಲ.
“ಅಮ್ಮ ಸತ್ತಿದ್ದು ಆ ಫ್ಲ್ಯಾಟ್‍ನಲ್ಲಿ. ಅವರ ಅಸ್ಥಿಪಂಜರ ಅಲ್ಲಿತ್ತು. ಪೊಲೀಸ್ ಕಾರ್ಯಾಚರಣೆ ಅಲ್ಲಿ ಆಗ್ತಾ ಇದೆ. ಸಧ್ಯ ಅಲ್ಲಿರೋ ಯಾವುದೇ ವಸ್ತು ಆಚೆ-ಈಚೆ ಮಾಡಬೇಡಿ ಎಂದಿದ್ದಾರೆ. ಅದಕ್ಕಾಗಿ ಇಲ್ಲೇ ಇದ್ದೇನೆ.” “ಅಸ್ಥಿಪಂಜರ! ಅಂದರೆ?” ತಲೆಬುಡ ಅರ್ಥವಾಗದೆ ಅಲ್ಲೇ ಕುಶನ್ ಒಳಗಡೆ ಹುದುಗಿ ಕುಳಿತೆ. ಅಕ್ಕಿ ಮಾತು ಮುಂದುವರಿಸಿದ, “ಹೊಸ ಕಂಪೆನಿಯ ಸಿ.ಇ.ಒ ಆದಾಗಿನಿಂದ ನನಗೆ ಒಂದು ಸೆಕೆಂಡೂ ಪುರುಸೊತ್ತಿರಲಿಲ್ಲ. ಈಗಲೂ ಆಫೀಸ್‍ನಿಂದ ಕಾಲ್ ಬರ್ತಾ ಇದೆ. ಮೂರು ತಿಂಗಳ ಹಿಂದೆ ಅಮ್ಮನ ಹತ್ರ ಮಾತಾಡಿದ್ದೇನೆ…” ನಾನು ಮನಸ್ಸಲ್ಲೇ ಎಣಿಸಿದೆ, ಈ ಮಗ ಹೇಳೋ ರೀತಿ ನೋಡು, ನಿನ್ನೆ ಅಲ್ಲ, ಮೊನ್ನೆ ಫೋನ್ ಮಾಡಿದ್ದೆ ಅನ್ನೋಥರಾ ಹೇಳ್ತಿದ್ದಾನೆ.
ಅದೇ ಹೊತ್ತಿಗೆ ನಮ್ಮವರೂ ನನ್ನಕಡೆ ತಿರುಗಿದರು. ಬಹುಶಃ ಅವರೂ ಅದನ್ನೇ ಯೋಚಿಸುತ್ತಿದ್ದಿರಬೇಕು. ಅವನ ಮಾತು ಮುಂದುವರಿದಿತ್ತು, “ಲಾಸ್ಟ್ ಟೈಮ್ ಮಾತಾಡುವಾಗ ಅಮ್ಮ ತುಂಬಾನೇ ಸುಸ್ತಾದವಳ ಹಾಗೆ ಮಾತಾಡಿದ್ದಳು. ‘ಇನ್ನು ನನ್ನಿಂದ ಒಬ್ಬಳೇ ಇರೋದಕ್ಕೆ ಆಗ್ತಾ ಇಲ್ವೋ ಅಕ್ಕಿ. ನೀನು ಇಂಡಿಯಾಕ್ಕೆ ಬಂದುಬಿಡು ಅಥವಾ ನನ್ನನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿಬಿಡು.’ ಅದಕ್ಕೆ ನಾನು ಹೇಳಿದ್ದೆ, ನಿನಗೀಗ ಅರವತ್ಮೂರು ವರ್ಷ. ನೂರು ವರ್ಷ ಬಾಳಬೇಕಾದವಳು ನೀನು. ಅಷ್ಟರೊಳಗೆ ನಾನು ಬಂದರಾಯ್ತಲ್ವಾ? ಆರು ಕೋಟಿ ಮೌಲ್ಯದ ಫ್ಲ್ಯಾಟ್ ಬಿಟ್ಟು ಓಲ್ಡೇಜ್ ಹೋಮ್‍ಗೆ ಹೋಗ್ತೀಯಾ? ಯಾರಾದರೂ ಏನಂದಾರು?” ಅಬ್ಬಾ, ಇಲ್ಲಿ ಫ್ಲ್ಯಾಟ್‍ಗಿರುವ ಬೆಲೆ ಅಮ್ಮನಿಗೆ ಇಲ್ಲವಲ್ಲ… ವಿಶಾಲತ್ತಿಗೆ ಹಿಂದೊಮ್ಮೆ ‘ನಿನಗೆ ಒಬ್ಬನೇ ಮಗ ಸಾಕಿತ್ತು. ಎರಡೆರಡು ಮಕ್ಕಳು ಯಾಕೆ ಬೇಕಿತ್ತು ಭಾಮಿನಿ ಎಂದು ಹೇಳಿದಾಗ ನನಗೆ ವಿಪರೀತ ಸಿಟ್ಟು ಬಂದಿತ್ತು. ಹಡೆಯುವವಳು ನಾನು, ಸಾಕುವವರು ನಾವು, ಬಿಡಿಗಾಸು ಬಿಚ್ಚದ ಈ ಜುಗ್ಗಿಗೆ ಯಾಕೆ ಜಕ್ಕೆ ಎಂದು ಅಮ್ಮನ ಹತ್ತಿರ ಹೋದಾಗ ಹೇಳಿದ್ದೆ. ಆದರೀಗ ಆ ಮಾತು ಮರುಕಳಿಸಿದಂತಾಗಿ ಒಂದು ಕ್ಷಣ ಅಗಲಿದ ಆತ್ಮದ ಬಗ್ಗೆ ಅನುಕಂಪ ಹುಟ್ಟಿತು. ಜೊತೆಗೆ ನನ್ನ ಮಕ್ಕಳಂತೂ ಈ ಕ್ಷಣದ ವರೆಗೆ ಸಂಸ್ಕಾರವಂತರಾಗಿ ಬಾಳುತ್ತಿದ್ದಾರೆ, ಎಂಬ ಸಮಾಧಾನವೂ ಆಯಿತು.
“ಅಕ್ಕಿ, ನೀನು ಇಂಡಿಯಾಕ್ಕೆ ಯಾವಾಗ ಬಂದೆ? ನೀನು ಬಂದಾಗ ಬಾಗಿಲು ತೆರೆದಿತ್ತಾ? ಬೆಲೆಬಾಳುವ ವಸ್ತುಗಳೆಲ್ಲ ಸುರಕ್ಷಿತವಾಗಿತ್ತಾ? ಕೆಲಸದವರು ಯಾರೂ ಕಾಣಿಸ್ತಾ ಇಲ್ಲ. ಪೊಲೀಸರು ಅವರ ಮೇಲೇನಾದರೂ ಸಂಶಯ ಪಡ್ತಾ ಇದ್ದಾರಾ? ಅವರಲ್ಲಿ ಯಾರಾದರೂ ಕಾಂಟೆಕ್ಟ್‍ಗೆ ಸಿಕ್ಕರಾ?” ತನ್ನ ಮನದಲ್ಲೆದ್ದ ಹಲವು ಸಂದೇಹಗಳ ನಿವಾರಣೆಗಾಗಿ ನಮ್ಮವರು ಪ್ರಶ್ನೆಗಳ ಮಳೆಗರೆದರು. ಅಕ್ಕಿ ನಡುವೆ ಒಮ್ಮೆ ಎದ್ದು ಹೋಗಿ ನೀರು ಕುಡಿದು ಬಂದವನು ಮತ್ತೆ ಮಾತು ಮುಂದುವರಿಸಿದ, “ಅಂಕಲ್, ನಾನು ಬಂದು ಇವತ್ತಿಗೆ ಐದು ದಿನ ಆಯ್ತು. ಬಂದು ಕಾಲಿಂಗ್ ಬೆಲ್ ಎಷ್ಟು ಒತ್ತಿದರೂ ರಿಪ್ಲೈ ಇಲ್ಲ. ಅಮ್ಮ ಸುಸ್ತಾಗಿ ಮಲಗಿರಬೇಕೆಂದು ನಾನು ರೆಸ್ಟ್ ತೆಗೆದುಕೊಳ್ಳಲು ಲಾಂಜ್‍ಗೆ ಹೋದೆ. ರೆಸ್ಟ್ ಎಲ್ಲಿಂದ ಬರಬೇಕು, ಯಾವುಯಾವುದೋ ಫೋನ್‍ಗೆ ಉತ್ತರಿಸುವಷ್ಟರಲ್ಲಿ ಬೆಳಗಾಯ್ತು. ಮತ್ತೆ ಬಂದು ಅಮ್ಮನನ್ನು ಎಬ್ಬಿಸುವ ಪ್ರಯತ್ನ ಮಾಡಿದೆ. ಮೊಬೈಲ್ ರಿಂಗ್ ಆಗ್ತಾ ಇರಲಿಲ್ಲ. ಲ್ಯಾಂಡ್ ಲೈನ್ ಸೇವೆ ರದ್ದಾಗಿದೆ ಅಂತ ಬರ್ತಾ ಇತ್ತು.
ಯಾಕೋ ಸಂದೇಹ ಬಂದು, ಸೆಕ್ಯೂರಿಟಿಯವರನ್ನು ಕರೆದೆ. ಸಮ್ ಹೌ…ಒಳಗಡೆ ನೋಡಿದರೆ, ಸೋಫಾದ ಮೇಲೆ ಅಡ್ಡಾಗಿ ಬಿದ್ದುಕೊಂಡ ಸ್ಕೆಲೆಟನ್…” ಅವನು ಕಥೆ ಹೇಳುವುದರಲ್ಲೇ ಮುಳುಗಿದ್ದ. ನಮ್ಮವರಿಗೆ ಅದೇನಾಯಿತೋ ಗೊತ್ತಾಗಲಿಲ್ಲ. ಒಡಹುಟ್ಟಿದ ಅಕ್ಕನ ಕೊನೆಯ ದಿನಗಳು ಸಹಿಸಲಾಗದ ನೋವು ಕೊಟ್ಟಿರಬೇಕು. “ಆಂ ಅಸ್ಥಿಪಂಜರವಾ?” ಎಂದು ಒಮ್ಮೆಲೆ ಪ್ರತಿಕ್ರಿಯಿಸಿ ದೀರ್ಘವಾಗಿ ಉಸಿರೆಳೆದುಕೊಂಡರು. ಆ ಕ್ಷಣ ನನಗೂ ಭಯವಾಯಿತು. ನೂರೆಂಟು ಮಾತ್ರೆ ನುಂಗುವ ಇವರಿಗೆ ಏನೂ ಆಗದಿರಲಿ ಎಂದು ಮುಖ್ಯಪ್ರಾಣನಿಗೆ ಮನಸಾ ವಂದಿಸಿದೆ. ಒಂದು ಕ್ಷಣ ನಮ್ಮವರತ್ತ ತಿರುಗಿದೆ. ಇವರು ಕೇಳಿದರು, “ಎರಡೆರಡು ಅಪಾರ್ಟಮೆಂಟ್ ಇದ್ದೂ ಕೆಲಸದವರ್ಯಾರೂ ಬರ್ತಾ ಇರಲಿಲ್ವಾ?” ಅದಕ್ಕವನು ಹೇಳಿದ, “ಈ ಟೆನ್ಥ್ ಫ್ಲೋರ್‍ನ ಎರಡೂ ಅಪಾರ್ಟಮೆಂಟ್‍ಗಳು ಖಾಲಿಯಿದ್ದವು. ಕೊರೋನಾ ಬಂದಮೇಲೆ ಹೊರಗಿನಿಂದ ಬರುವ ಯಾವುದೇ ಕೆಲಸದವರಿಗೆ ಎಂಟ್ರಿ ಇರಲಿಲ್ಲವಂತೆ.
ಹಾಗೆ ಯಾರಾದರೂ ಬಂದರೂ ಎಂಟ್ರೆನ್ಸ್‍ನ ರಜಿಸ್ಟರ್‍ನಲ್ಲಿ ಬರೆದು ಬರಬೇಕು. ಪೊಲೀಸರು ಅದನ್ನೆಲ್ಲ ನೋಡಿದ್ದಾರೆ…ಸಂದೇಹಕ್ಕೆ ಆಸ್ಪದವೇ ಇಲ್ಲ. ಅದು ಅಮ್ಮನ ಸ್ಕೆಲೆಟನ್ ಅಲ್ಲದೆ, ಮತ್ಯಾರದ್ದೂ ಅಲ್ಲ.” “ಮೊದಲು ನಮ್ಮೂರಿನವರಿಬ್ಬರು ಖಾಯಂ ಆಗಿನಿಮ್ಮ ಮನೆಯಲ್ಲೇ ಕೆಲಸಕ್ಕೆ ಇದ್ದರಲ್ವಾ?” ನಮ್ಮವರು ಯಾರನ್ನು ನೆನಪಿಸಿಕೊಂಡು ಕೇಳಿದರೆಂದು ಗೊತ್ತಾಯಿತು. ನನಗೂ ನೆನಪಾಗಬಹುದೇನೋ ಎಂದು ನನ್ನ ಮುಖ ನೋಡಿದರು. ಗೊತ್ತಿದ್ದರೂ ನಾನೇನೂ ಹೇಳಲಿಲ್ಲ. ನನ್ನ ಶೂನ್ಯ ಮುಖಭಾವ ನೋಡಿ ಇವರು ಸುಮ್ಮನಾದರು. ಆದರೆ ಅಕ್ಕಿ ಮಾತ್ರ ನನ್ನ ಮುಖ ನೋಡುತ್ತ ಹೇಳಿದ, “ಅಯ್ಯೋ ಆಂಟಿ, ನಿಮಗೆ ಗೊತ್ತಲ್ವಾ, ನಮ್ಮ ಅಮ್ಮಂದು ಲೂಸ್ ಟಂಗ್. ಕೆಲಸದವರು ಯಾರೂ ಇಲ್ಲಿ ಒಂದೋ ಎರಡೋ ತಿಂಗಳಿಗಿಂತ ಹೆಚ್ಚು ನಿಲ್ಲತಾನೇ ಇರಲಿಲ್ಲ.
ಅಮ್ಮ ಯಾವಾಗ ನೋಡಿದರೂ ನನ್ನ ಹತ್ರ ಕೆಲಸದವರ ಬಗ್ಗೆ ಕಂಪ್ಲೇಂಟ್ ಕೊಡ್ತಿದ್ದಳು. ಅವಳ ದೃಷ್ಟಿಯಲ್ಲಿ ಅವರೆಲ್ಲ ಕಳ್ಳರು. ನಮ್ಮ ಆಫೀಸಲ್ಲೇ ಸಾಲ್ವ್ ಮಾಡೋದಕ್ಕಾಗದ ಸಾಕಷ್ಟು ಪ್ರಾಬ್ಲೆಮ್‍ಗಳಿವೆ. ಹಾಗಾಗಿ ನಾನಂತೂ ಅಮ್ಮನಿಗೆ ಒಮ್ಮೆ ಖಾರವಾಗಿ ಬೈದುಬಿಟ್ಟಿದ್ದೆ. ಆಮೇಲವಳು ನನ್ನಹತ್ತಿರ ಹೇಳೋದನ್ನು ನಿಲ್ಲಿಸಿದ್ದಳು. ಅಂಕಲ್ ಹೇಳಿದ ಜನ ಯಾರು ಅಂತ ನನಗೆ ನೆನಪಾಗ್ತಾಇಲ್ಲ.” “ಅಕ್ಕಿ, ನೀನು ಏನೇ ಹೇಳು, ನಿಮ್ಮಮ್ಮನನ್ನು ಅಮೇರಿಕಾಕ್ಕೆ ಕರೆದುಕೊಂಡು ಹೋಗಬೇಕಿತ್ತು.” ಕಾಯಿಸಿದಾಗಲೇ ಬೆಸುಗೆ ಹಾಕಿಬಿಡಬೇಕು ಎಂಬಂತೆ ಅವನಿಗಿಂತ ಹಿರಿಯಳು ಎಂಬ ಹಿರಿಮೆಯಿಂದ ನಾನೂ ಹಿತೋಪದೇಶ ಮಾಡುವವಳಂತೆ ನಡುವೆ ಬಾಯಿ ಹಾಕಿದೆ. ಅಬ್ಬಬ್ಬಾ ಮೈಮೇಲೆ ಚೇಳು ಹರಿದಾಡುತ್ತಿರುವಂತೆ ಒಮ್ಮೆಲೆ ಎದ್ದು ನಿಂತು, ಬಿರುಸಾಗಿ ನಾಲ್ಕು ಹೆಜ್ಜೆ ಹಾಕಿದವನು ಹಿಂದಿರುಗಿ ಬಂದು ಹೇಳಿದ, “ಆಂಟಿ, ಅಮ್ಮನ ಬಗ್ಗೆ ಹೇಳಿದರೆ ನನ್ನ ವೈಫ್ ಸೂಸಿ ಅಂದ್ರೆ ಸೂಸಾನ್‍ಗೆ ತುಂಬಾ ಇರಿಟೇಶನ್ ಆಗ್ತಿತ್ತು.
ಅಂಥದ್ದರಲ್ಲಿ ಅಮ್ಮನ್ನ ಸ್ಟೇಟ್ಸ್‍ಗೆ ಕರೆದುಕೊಂಡು ಹೋಗೋದು ನನಗೆ ಪ್ರೆಕ್ಟಿಕಲಿ ಇಂಪಾಸಿಬಲ್ ಆಗಿಬಿಟ್ಟಿತ್ತು. ನಮ್ಮವರು ಕುಳಿತಲ್ಲಿಯೇ ಕೈ-ಕೈ ಹೊಸಕಿಕೊಳ್ಳುತ್ತಿದ್ದರು. ‘ಏನಾಯ್ತು?’ ಕೇಳಿಯೇಬಿಡಬೇಕು ಎಂದೆನಿಸಿದರೂ, ಸಂದರ್ಭದ ಔಚಿತ್ಯ ನೋಡಿ, ಸವಾಲನ್ನು ಮರಳಿ ಬತ್ತಳಿಕೆಗೆ ಸೇರಿಸಿಕೊಂಡೆ. ಏನೋ ಮನಸ್ಸನ್ನು ತಹಬಂದಿಗೆ ತಂದುಕೊಂಡವರಂತೆ ಶಾಂತವಾಗಿ ನಮ್ಮವರುಕೇಳಿದರು, “ಅಂದಹಾಗೆ ಅಕ್ಕ ಸತ್ತಿದ್ದೋ? ಅಥವಾ ಕೊಲೆಯೋ? ಪೊಲೀಸರು ಏನಾದರೂ ಮಾಹಿತಿ ಕೊಟ್ಟಿದ್ದಾರಾ?”ಬರವಣಿಗೆಯ ರೂಪದಲ್ಲಿ ಇನ್ನೂ ಏನೂ ಕೊಟ್ಟಿಲ್ಲ. ಕಲೆಕ್ಟ್ ಮಾಡಿದ ಮಾಹಿತಿ ಆಧಾರದ ಮೇಲೆ ಅಮ್ಮ ಬಹುಶಃ ಹಸಿವು ಬಾಯಾರಿಕೆಯಿಂದ ಕೊನೆಯುಸಿರೆಳೆದಿರಬಹುದು ಅಂತ ನಿನ್ನೆ ಇನ್ಸೆಪೆಕ್ಟರ್ ಹೇಳಿದ್ದರು.
ಸಿ.ಸಿ.ಟಿ.ವಿ ಫುಟೆಜ್‍ಗಳನ್ನೆಲ್ಲ ನೋಡಿದ್ದಾರೆ. ಲಾಕರ್ ಯಾರೂ ಮುಟ್ಟಿಲ್ಲ. ಡೋರ್ ಮೇಲೆ ನನ್ನ ಫಿಂಗರ್ ಪ್ರಿಂಟ್ ಬಿಟ್ಟರೆ ಬೇರೆ ಯಾರದೂ ಇರಲಿಲ್ಲ. ಧೂಳನ್ನೆಲ್ಲ ನೋಡಿದರೆ ಕೆಲಸದವರಿಲ್ಲದೆ ಕೆಲವು ಸಮಯ ಕಳೆದಿರಬಹುದು ಅಂತ ಅವರೇ ಹೇಳಿದರು. ಇಷ್ಟಾಗಿಯೂ ಯಾರ ಮೇಲಾದರೂ ನಿಮಗೆ ಸಂದೇಹ ಇದೆಯಾ ಅಂತ ಕೇಳಿದರು. ಅಂಕಲ್, ದೂರದಲ್ಲಿರೋ ನಾನು ಹೇಗೆ ಹೇಳೋದಕ್ಕೆ ಸಾಧ್ಯ?” ‘ಹೌದಪ್ಪ ನೀನೇನು ಹೇಳಲಿಕ್ಕೆ ಸಾಧ್ಯ? ನಿಜವಾದ ಕೊಲೆಗಾರ ನೀನು ಮತ್ತು ನಿನ್ನ ಸಂಸ್ಕಾರ’ಮನಸ್ಸಲ್ಲೇ ಎಣಿಸಿ ಸುಮ್ಮನಾದೆ.
“ಅಂಕಲ್ ನೀವಿಬ್ಬರೂ ರೆಸ್ಟ ತೊಗೊಳ್ಳಿ. ಈಗ ನನಗೊಂದು ವಿಡಿಯೋ ಕಾಲ್ ಮಾಡಲಿಕ್ಕಿದೆ. ಮುಂದೆ ಏನು-ಎತ್ತ ಅಂತ ನೋಡೋಣ.” ಉತ್ತರಕ್ಕೂ ಕಾಯದೆ ನೇರ ಒಂದು ಕೋಣೆಯೊಳಗೆ ಹೋದ. ಬಹುಶಃ ಅದು ಅವನ ಮಲಗುವ ಕೋಣೆ ಇರಬಹುದು. ಹಿಂದಿನ ಘಟನೆಯೊಂದು ನೆನಪಾಗಿ ನಮ್ಮವರನ್ನು ಕೇಳಿದೆ, “ನೀವಾಗ ಹಲ್ಲು ಮಸೆಯುತ್ತ ಕೈ-ಕೈ ಹೊಸಕಿಕೊಂಡಿದ್ದು ಯಾಕೆ?” ಯಾವಾಗ? ಎಲ್ಲಿ? ಎಂದು ಏನನ್ನೂ ಕೇಳದೆ ನೇರ ವಿಷಯಕ್ಕೆ ಬಂದರು. ಇದರರ್ಥ ಆ ಮುಳ್ಳು ಅವರ ಎದೆಗೆ ಇನ್ನೂ ಚುಚ್ಚುತ್ತಿತ್ತು. “ಲೂಸ್‍ಟಂಗ್ ಅಂತೆ, ಈ ಲಫಂಗ ತನ್ನ ಅಮ್ಮನಿಗೇ ಹೀಗೆ ಹೇಳ್ತಾನಲ್ವಾ? ಅವಳಲ್ಲಿ ನೂರು ದೋಷಗಳಿರಬಹುದು. ಆದರೂ ಹೆತ್ತಮ್ಮ ಅಲ್ವಾ? ಇವನ ಇಂಥ ಮಾತುಗಳನ್ನು ಕೇಳಿಯೇ ನನ್ನಕ್ಕನ ಪ್ರಾಣ ಹಾರಿಹೋಗಿರಬೇಕು…ನಮ್ಮ ಅಪ್ಪಯ್ಯ ಅಶ್ವತ್ಥ ಕಟ್ಟೆ ಸುತ್ತಲಿಕ್ಕೆ ಹೋದರೆ, ‘ಅಜ್ಜಯ್ಯ, ಲೆಕ್ಕಮಾಡಲಿಕ್ಕೆ ನಾನು ಬರ್ತೇನೆ. ಹನ್ನೆರಡು ಸುತ್ತು ಆದ ಮೇಲೆ ನಾನು ಹೇಳ್ತೇನೆ’ ಎಂದು ಅವರ ಹಿಂದೆ ಓಡ್ತಿದ್ದ. ನನ್ನ ಮಕ್ಕಳ ಜೊತೆ ತಾನೂ ಸಂಧ್ಯಾವಂದನೆ ಮಾಡ್ತಿದ್ದ. ಈಗ ಅವನ್ನೆಲ್ಲ ಇಟ್ಟುಕೊಂಡಿದ್ದಾನಾ ಅಥವಾ ಬಿಟ್ಟಿದ್ದಾನಾ…ಕೇಳುವವರು ಯಾರು?ಚಿಕ್ಕವನಿರುವಾಗ ಬಾಯಿತುಂಬ ಮಾವ-ಭಾಮಿಅತ್ತೆ ಎಂದುಕರೆಯುತ್ತಿದ್ದವನಿಗೆ ನಾವೀಗ ಅಂಕಲ್-ಆಂಟಿ ಆಗಿದ್ದೇವೆ.” ನಮ್ಮವರ ಧ್ವನಿ ಒಮ್ಮೆಲೆ ತಾರಕಕ್ಕೆ ಏರುತ್ತಿತ್ತು. ನಾನು ‘ಮೆಲ್ಲಗೆ…ಮೆಲ್ಲಗೆ…’ ಎಂಬಂತೆ ಕೈ ಸನ್ನೆ ಮಾಡಿದೆ.
ಅವನು ಅಮ್ಮನ ಬಗ್ಗೆ ಅಷ್ಟು ಲಘುವಾಗಿ ಹೇಳಿದ್ದು ನನಗೂ ಕೆಟ್ಟದೆನಿಸಿತ್ತು. ಇವರ ಮನೆಯಲ್ಲಿ ಅಡಿಗೆ ಮತ್ತು ನಿತ್ಯಪೂಜೆ ಮಾಡಿಕೊಂಡಿದ್ದ ಕೂಸಕ್ಕಯ್ಯನ ಮನೆ ಶ್ರೀನಿವಾಸಣ್ಣ ಎರಡು ವರ್ಷ ಕೆಳಗೆ ಒಂದು ಉಪನಯನದ ಹಾಲ್‍ನಲ್ಲಿ ಮಾತಿಗೆ ಸಿಕ್ಕಿದ್ದ. ಅವನೇ ಹೇಳಿದ್ದ, ‘ನಮ್ಮನೆ ಗಂಜಿತೆಳಿಯಲ್ಲಿದ್ದಷ್ಟು ಸವಿ ದೊಡ್ಡವರ ಮನೆ ಪರಮಾನ್ನದಲ್ಲಿಲ್ಲ.’ ಇದು ವಿಶಾಲತ್ತಿಗೆಯ ಬಗ್ಗೆ ಹೇಳಿದ್ದು ಅಂತ ನನಗೆ ಗೊತ್ತಾಯ್ತು. ನನಗೆ ಅಲ್ಲಿ ಕೇಳುವುದು ಸರಿ ಕಾಣಲಿಲ್ಲ, ಅವನೂ ಹೇಳುವ ಮನಸ್ಥಿತಿಯಲ್ಲಿರಲಿಲ್ಲ. ಆಕಸ್ಮಿಕವಾಗಿ ನಾನು ಅವರ ಮನೆ ಕಡೆ ಹೋದಾಗ ಅವನು ಗದ್ದೆಯಲ್ಲಿ ಸಿಕ್ಕ. ಅಡ್ಡಗಟ್ಟಿ ಕೇಳಿಯೇಬಿಟ್ಟೆ. “ಆ ದಿನ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ಯಲ್ವಾ. ನನಗೀಗ ಖುಲಾಸೆ ಮಾಡು. ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳ್ತೇನೆ. ನನ್ನ ಗಂಡನಿಗೂ ಈ ವಿಷಯ ತಿಳಿಸೋದಿಲ್ಲ.”
ವಿಶಾಲತ್ತಿಗೆಯ ದೊಡ್ಡಸ್ತಿಕೆಯ ಬಗ್ಗೆ ಅಲ್ಲಿ ಅವನಿಂದ ಕೆಲವು ಸ್ಫೋಟಕ ಮಾಹಿತಿಗಳು ಸಿಕ್ಕಿದ್ದವು. ಕೆಲಸದವರಿಗೆ ಸರಿಯಾಗಿ ಸಂಬಳ ಕೊಡುತ್ತಿರಲಿಲ್ಲ. ‘ನೀವು ಮೂರೂ ಹೊತ್ತು ಬಿಟ್ಟಿ ತಿನ್ನೋದಿಲ್ವಾ, ಅಂತ ಹಂಗಿಸುವವಳು. ಪ್ರತಿದಿನ ಬಾಗಿಲು ಹಾಕಿಕೊಂಡು ಲಾಕರ್‍ನಲ್ಲಿಟ್ಟ ಹಣ ಎಣಿಸುವವಳು. ತನಗೆ ಲೆಕ್ಕ ತಪ್ಪಿದರೂ ನಾವೇ ಕದ್ದಿದ್ದೇವೆ ಎಂದು ತರಾಟೆಗೆ ತೆಗೆದುಕೊಳ್ಳೋದನ್ನು ನೋಡಿ ಕೆಲಸವೂ ಬೇಡ, ಆ ಸಂಬಳವೂ ಬೇಡ ಅಂತ ಬಿಟ್ಟುಬಂದೆ.’ ಇಷ್ಟು ಹೇಳಿದವನು “ಯಾರಿಗೂ ಹೇಳಬೇಡ” ಎಂದು ಹೇಳುವುದಕ್ಕೆ ಮರೆಯಲಿಲ್ಲ. ಗಂಡ ಎಷ್ಟು ಧಾರಾಳಿಯಾಗಿದ್ದನೋ, ಹೆಂಡತಿ ಅಷ್ಟೇ ಜಿಪುಣೆಯಾಗಿದ್ದಳು. ಅವಳಿಗೆ ನಮ್ಮ ಮೇಲೂ ಸಂದೇಹ, ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಿಯಾದರೂ ಕೈಚಾಚುತ್ತೇವೇನೋ ಎಂದು ತಿಳಿದಿದ್ದಳು. ಆದರೆ ದೇವರು ನಮಗೆ ಅಂಥ ಪರಿಸ್ಥಿತಿ ತಂದೊಡ್ಡಲಿಲ್ಲ, ಅದು ನಮ್ಮ ಪುಣ್ಯ… ”ಭಾಮಿ, ಕೋಟಿಗಟ್ಟಲೆಯ ಒಡತಿಯಾಗಿದ್ದರೂ ನಾಲ್ಕು ಜನರ ಹೆಗಲೇರುವ ಭಾಗ್ಯ ನನ್ನ ಅಕ್ಕನಿಗೆ ಇಲ್ಲದೇ ಹೋಯಿತಲ್ಲ. ” ನನ್ನ ಯೋಚನಾ ಲಹರಿಗೆ ನಮ್ಮವರ ಮಾತಿನಿಂದ ಬ್ರೇಕ್ ಬಿತ್ತು. “ಏನು ಹೇಳೋದು, ಅವರವರ ಹಣೆಯಲ್ಲಿ ಬರೆದಹಾಗೆ ಆಗೋದಲ್ವಾ?” ಏನು ಹೇಳಬೇಕೆಂದು ತೋಚದೆ, ಇಷ್ಟು ಹೇಳಿ ಸುಮ್ಮನಾದೆ.
ನಮ್ಮವರು ಏನೋ ಹೇಳಲು ಹೊರಟಿದ್ದರು. ಅಷ್ಟರಲ್ಲಿ ಅಕ್ಕಿ ಅಲ್ಲಿಗೆ ಬಂದವನು, “ಏನ್ ಅಂಕಲ್, ನೀವು ರೆಸ್ಟ್ ತೆಗೆದುಕೊಳ್ಳಲಿಲ್ವಾ?…ಆಂಟಿ, ನೀವೇನೂ ಮಾಡೋದು ಬೇಡ. ವಾಚ್ ಮೆನ್ ಹೆಂಡತಿ ಬರ್ತಾಳೆ. ಅವಳಿಗೆ ಹೇಗೆ ಆಗಬೇಕು ಅಂತ ಹೇಳಿದರೆ ಸಾಕು.” ಅವರ ಅಡಿಗೆಮನೆಗೆ ಹೋಗಿ ಹೊರಬಂದವಳಿಗೆ ಕಾಡಿನಲ್ಲಿ ಕಣ್ಣುಕಟ್ಟಿ ಬಿಟ್ಟವರಂತೆ ಆಗಿತ್ತು. ಈಗ ಅವನ ಮಾತು ಕೇಳಿ ನಿರಾಳವಾಯಿತು. ಅಕ್ಕಿ ಬಂದು ನಮ್ಮೆದುರು ಕುಳಿತವನು ಯಾವುದೋ ವಿಷಯದ ಪೀಠಿಕೆ ಹಾಕುವಂತೆ ಕಂಡ. “ಆಯ್ತಾ ನಿನ್ನ ಮೀಟಿಂಗ್?” ನಮ್ಮವರು ಕೇಳಿದರು. ಹೌದು ಎನ್ನುವಂತೆ ತಲೆಯಾಡಿಸಿದವನು ಹೇಳಿದ, “ಅಂಕಲ್, ನಾನು ಒಂದು ತಿಂಗಳು ಇಲ್ಲೇ ಇರ್ತೇನೆ. ಅಮ್ಮನ ಹೆಸರಲ್ಲಿ ಒಂದು ಸ್ಮಾರಕ ಮಾಡಬೇಕೆಂದಿದ್ದೇನೆ. ಹಾಗೆಯೇ ಒಂದು ಟ್ರಸ್ಟ್ ಮಾಡಿ ಅದಕ್ಕೆ ನಿಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅಂತ ಸೂಸಿ ಹೇಳಿದಳು. ನೀವು ಕೇವಲ ಹೆಸರಿಗೆ ಮಾತ್ರ. ಅಂದ್ರೆ ಸಿಗ್ನೇಚರ್ ಮಾಡೋದಕ್ಕೆ…” ನಾನು ಕಣ್ ಸನ್ನೆಯಲ್ಲೆ ಬೇಡ ಎನ್ನುವಂತೆ ತಲೆಯಾಡಿಸಿದೆ. ಹಾಗಾಗಿ ಅದು ಏನು…ಎಂಥ…ಎಂದು ಕೇಳದೆ, “ನಾನು ಊರಲ್ಲಿ ಇರುವವನಲ್ವಾ? ನನಗೆ ಮುಂಬೈ ಅಂದರೆನೇ ಪರದೇಶ ಇದ್ದ ಹಾಗೆ. ಆಗಾಗ ಇಲ್ಲಿಗೆ ಬರಲಿಕ್ಕಾಗ್ತದಾ?” ಎಂದು ಜಾರಿಕೊಂಡರು. ಅವನೂ ಒತ್ತಾಯ ಮಾಡಲಿಲ್ಲ. ಯಾವುದೋ ಕಾಲ್ ಬಂತೆಂದು ಎದ್ದು ಹೋದ. ನಮ್ಮವರಿಗೆ ಹೇಳಿದೆ, “ಕೊನೆಯ ದಿನಗಳಲ್ಲಿ ಹೆತ್ತಮ್ಮನ ಪಕ್ಕಕ್ಕೆ ಬಂದು ಕುಳಿತಿಲ್ಲ, ಸತ್ತ ಮೇಲೆ ಹೆಗಲು ಕೊಟ್ಟಿಲ್ಲ, ಚಿತೆಗೆ ಬೆಂಕಿ ಕೊಟ್ಟು ಅಂತ್ಯೇಷ್ಟಿ ಮಾಡಿಲ್ಲ, ಅಪರ ಕರ್ಮಗಳನ್ನು ಮಾಡ್ತಾನೋ ಬಿಡ್ತಾನೋ ಗೊತ್ತಿಲ್ಲ…ಸ್ಮಾರಕ ಮತ್ತು ಟ್ರಸ್ಟ್ ಅವಶ್ಯವಾಗಿ ಮಾಡ್ತಾನೆ…” “ನನ್ನ ಮನಸ್ಸೂ ಅದನ್ನೇ ಹೇಳುತ್ತಿದೆ” ನಮ್ಮವರು ಅನುಮೋದಿಸಿದರು.
********
ಡಾ. ನಮ್ರತಾ ಬಿ.
1 thought on “ಎಲ್ಲರೊಳಗೊ ಅಸ್ಥಿಪಂಜರ”
nice story