ಡಾ. ಜನಾರ್ದನ ಭಟ್ ಅವರ “ಉತ್ತರಾಧಿಕಾರ” – ಕೆಲವು ಟಿಪ್ಪಣಿಗಳು

ತುಳುವ ಸಂಸ್ಕೃತಿಯ ಶ್ರೀಮಂತ ಚಿತ್ರಣ. ಪಾಂಡಿತ್ಯ ಮತ್ತು ಕಲೆ ಸಮಪಾಕದಲ್ಲಿ ಮೇಳನಗೊಂಡ ಕಲಾಕೃತಿ ” ಉತ್ತರಾಧಿಕಾರ”

ಡಾ. ಜನಾರ್ದನ ಭಟ್ ಕನ್ನಡದ ಅಧ್ಯಯನಶೀಲ ಕಾದಂಬರಿಕಾರರು. ಅವರ ಈಚಿನ ಕೃತಿ ” ಬೂಬರಾಜ ಸಾಮ್ರಾಜ್ಯ” ಓದಿದ ಮೇಲೆ ಅವರ ಚೊಚ್ಚಲ ಕಾದಂಬರಿ ” ಉತ್ತರಾಧಿಕಾರ” ಓದಿದೆ.  ಅದರ ಬಗೆಗಿನ ಕೆಲವು ಟಿಪ್ಪಣಿಗಳು ಇವು. 



ದ್ರುಪದ್ ಸಂಗೀತದಲ್ಲಿ ಮೊದಲ ಭಾಗ ಆಲಾಪ್. ನಿಧಾನವಾಗಿ ರಾಗದ ಪ್ರತಿಯೊಂದು ಸ್ವರ ಸ್ಥಾನವನ್ನು ತಟ್ಟುತ್ತಾ ಮುಟ್ಟುತ್ತಾ ಸಾವಧಾನವಾಗಿ ಸಾಗುವುದು ಇಲ್ಲಿಯ ಕ್ರಮ. ” ಉತ್ತರಾಧಿಕಾರ” ಕಾದಂಬರಿಯೂ ದ್ರುಪದ್ ಸಂಗೀತದಲ್ಲಿನ ಮೊದಲ ಆಲಾಪದ ಗಾಂಭೀರ್ಯವನ್ನು ಮೈಗೂಡಿಸಿ ತುಳುನಾಡಿನ ಒಳಗೊಳಗಿನ ಮೆಯ್ ಮನಸುಗಳನ್ನು ತೆರೆಯುವ ರೋಚಕ ಕ್ರಿಯೆಗೆ ಓದುಗ ರಸಸ್ಪಂದಿಯಾಗದೆ ಇರಲು ಅಸಾಧ್ಯ. ತುಳು ಸಂಸ್ಕೃತಿಯನ್ನು ಇಷ್ಟು ಗಾಢವಾಗಿ ನೋಡಲು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ತುಳುವ ಜನಪದದಲ್ಲಿ ಮನುಷ್ಯರ ಜತೆ ಜತೆಗೇ ದೇವರು, ದೈವ ಮತ್ತು ದೆವ್ವಗಳೂ ಕೂಡ ಜನಪದದ ಭಾಗವೇ!. ಜನರ ಮನದಲ್ಲಿ ಭೂತ, ದೈವ, ಕುಲೆ, ರಣ, ಮೋಹಿನಿ ಇವೆಲ್ಲ ಅಂಧಶ್ರದ್ಧೆ ಎಂದು ಕಂಡರೂ ಹಿಂದಣ ಹಳ್ಳಿಯ( ಇಂದೂ ಅಲ್ಲಲ್ಲಿ) ಜನರ ಮನದಲ್ಲಿ ಈ ರೀತಿಯ ನಂಬಿಕೆಗಳು ಇಲ್ಲದಿಲ್ಲ ಇವು ಅಸತ್ಯವೆಂದು ತಳ್ಳಿಹಾಕುವವರೂ ಹೆಚ್ಚು ಇಲ್ಲ. ಇದು ಹಳ್ಳಿಯ ಜೀವನವನ್ನು ಜೀವಿಸಿದವರಿಗೆ ವೇದ್ಯ. ಇಂಥ ನಂಬಿಕೆಗಳನ್ನು ಪಾತ್ರವಾಗಿಸಿ ಕಾದಂಬರಿಯ ಕಥಾಸಾರಕ್ಕೆ ಸಹಜವಾಗಿ ಒಗ್ಗುವಂತೆ ಮಾಡಿದ ಕಾದಂಬರಿಕಾರರ ಕಾರಯಿತ್ರೀ ಪ್ರತಿಭೆ ಮನಮುಟ್ಟುವಂಥದ್ದು. 

ಈ ಕಾದಂಬರಿಯಲ್ಲಿ ಜನರ ಕಥೆಗಿಂತಲೂ ಕಥೆಯನ್ನು ಅಲಂಕರಿಸಿದ ವ್ಯಂಜಕ- ಅಲಂಕಾರದಂತಿರುವ ಆವರಣದ ಚಿತ್ರಣವೇ ಅಮೂರ್ತವಾದ ಕಥೆಯಂತಿದೆ. ಪಾತ್ರಗಳು ಅಂತಿರಲಿ ಕಾದಂಬರಿಕಾರರು ಚಿತ್ರಿಸಿದ ತುಳುವ ಸಂಸ್ಕೃತಿಯ ಶ್ರೀಮಂತಿಕೆ, ಬಡತನದ ಬೇಗೆ, ಹಳ್ಳಿಗಳ ಚಿತ್ರದ  ನಿಬಿಡತೆ, 

ಪಾತ್ರಗಳು ಆಡುವ ‘ ಕಾಕು’ ಗಳು ಹೊರಡಿಸುವ ಧ್ವನಿಗಳು ಇವೆಲ್ಲ ನಮ್ಮನ್ನು ನಡುಕಣಿ ಗ್ರಾಮದಲ್ಲೋ, ಆಚಾರ್ಯರ ಮನೆಯ ಶಾನುಭೋಗರ ಕಛೇರಿಯಲ್ಲೋ ಮಹಾಲಿಂಗೇಶ್ವರ ದೇವಸ್ಥಾನದಲ್ಲೋ ತಂದಿರಿಸುತ್ತವೆ. ಕಡ್ತಡ್ಕದ ಸೈತಾನನ ಜಾತ್ರೆಯಾಗಲಿ, ಮುಕ್ಕಣ್ಣಯ್ಯ ತನ್ನ ಉಪಾಸನಾ ದೇವತೆಯಿಂದ ಗದ್ದೆಯ ಕೆಲಸ ಮಾಡಿಸುವದಾಗಲಿ, ಕುಲೆಗಳ ಮಳೆಗಾಲದ ಕಷ್ಟಗಳಾಗಲಿ, ವಾಗ್ದೇವಿ- ಗೋದಕ್ಕರ ಜಗಳವಾಗಲಿ, ಸೂತ ಮುನಿ ( ಸೂತ್) ಯ ಸನಾತನ ಸಂಸ್ಕೃತಿಯ ಕುರಿತಾಗಿನ ಆಸಕ್ತಿಯಾಗಲಿ, ಪೌಂಡ್ರಕ ವಾಸುದೇವನ ಕುತಂತ್ರಗಳಾಗಲಿ ಎಲ್ಲೂ ಅಸಹಜತೆಯಿಂದ ಕೂಡಿಲ್ಲ. ಇದು ಕಾದಂಬರಿಯ ಹೆಚ್ಚುಗಾರಿಕೆ. ಹೆಚ್ಚೇನು, ಈ ಕಾದಂಬರಿ ತುಳುವರ ಸಂಸ್ಕೃತಿಯನ್ನು ಬಿಂಬಿಸುವ ಅತ್ಯಂತ ಮಹತ್ತ್ವದ ಕೃತಿ ಎನ್ನುವದರಲ್ಲಿ ಯಾವ ಸಂಶಯವೂ ಇಲ್ಲ.ಪಾಂಡಿತ್ಯ ಮತ್ತು ಕಲೆ ಸಮಪಾಕದಲ್ಲಿ ಮೇಳನಗೊಂಡ ಕಲಾಕೃತಿ ” ಉತ್ತರಾಧಿಕಾರ”.

*ಕೃಷ್ಣಪ್ರಕಾಶ ಉಳಿತ್ತಾಯ

  • ವಿ.ಸೂ. :  ವರ್ಧಮಾನ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಯು ಈ ಕಾದಂಬರಿಗೆ ಲಭಿಸಿದೆ. ಹೇಮಾವತಿ ಪ್ರಕಾಶನ, ನೀರ್ಮಾರ್ಗ, ಮಂಗಳೂರು ಇವರು ಪ್ರಕಾಶಕರು. ಪುಸ್ತಕದ ಬೆಲೆ ರೂಪಾಯಿ 150. 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter