ಎಲ್ಲಾದರೂ ಅವನು ಸಿಗಬಹುದಿತ್ತು: ಡೆಲ್ಲಿಯಲ್ಲೋ, ಮುಂಬೈಯಲ್ಲೋ, ಹೈದರಾಬಾದಲ್ಲೋ ಅಥವಾ ಈ ದೊಡ್ಡ ಕಂಪನಿಗಳು ಟ್ರೇನಿಂಗ್ ನಡೆಸುವ ರೆಸಾರ್ಟಗಳಿರ್‍ತಾವಲ್ಲ, ಅಲ್ಲೆಲ್ಲೋ ಸಿಗಬಹುದಿತ್ತು. ಅಥವಾ ಯಾವುದೋ ಮ್ಯಾನೇಜ್‌ಮೆಂಟ್ ಸೆಮಿನಾರಲ್ಲಿ. ಆದರೆ ಎಲ್ಲಾ ಬಿಟ್ಟು ಜಕಾರ್ತಾದ ಒಂದು ಹೋಟೇಲಿನ ಲಾಬಿಯಲ್ಲಿ ಸಿಕ್ಕಿದನಲ್ಲಾ ಅಂತ ಅನಿಸುತ್ತಿದ್ದ ಹಾಗೇ, ಬೇರೆ ಎಲ್ಲಿ ಸಿಕ್ಕಿದ್ದರೂ ನಾವು ಮಾತಾಡುತ್ತಿರಲಿಲ್ಲ, ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ – ಇದೆಲ್ಲ ಇಲ್ಲದಿದ್ದರೆ ಈ ಭೆಟ್ಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು.
ಆಗಲೇ ಸಂಜೆ ಏಳು ಗಂಟೆ ಆಗಿಹೋಗಿತ್ತು. ಜಕಾರ್ತಾದಲ್ಲಿ ನನ್ನದು ಆಗಲೇ ಐದನೇ ದಿನ. ಕೆಲಸ ಬೇಗ ಮುಗಿದಿತ್ತು. ಮಾರನೆಯ ದಿನದ ರಜದ ನೆವ ಹೇಳಿ ಇಲ್ಲಿಯ ಆಫೀಸಿನ ಜನ ಮಧ್ಯಾಹ್ನವೇ ಹೊರಟುಬಿಟ್ಟಿದ್ದರು. ನಾನು ಹೊಟೆಲ್ ರೂಮಿಗೆ ಬಂದು ಸ್ವಲ್ಪ ನಿದ್ದೆ ಮಾಡಿದೆ. ಎದ್ದು ಈಮೇಲ್ ತೆಗೆದು, ಖಾಲಿ ಇನ್‌ಬಾಕ್ಸ್ ನೋಡಿ ಬೇಜಾರಾಗಿ, ಹಳೆಯ ಈಮೇಲ್‌ಗಳನ್ನೆಲ್ಲ ತೆಗೆದು ಯಾವಾಗಲೂ ಬರೆಯದೇ ಇದ್ದವರಿಗೂ ಎರಡೆರಡು ಸಾಲು ಗೀಚಿ ಹಾಕಿದೆ. ಅದೇ ಸಾಲುಗಳನ್ನು ಕಾಪಿ ಪೇಸ್ಟ್ ಮಾಡೋದು. ಹೆಸರು ಬಿಟ್ಟರೆ, ಎಲ್ಲರಿಗೂ ಅದೇ ಸಾಲುಗಳು. ಅವರಿಗೆಲ್ಲ ಬರೆಯದೇ ಇದ್ದರೂ ನಡೆಯುತ್ತದೆ. ಆದರೆ ಬರೆದಾಗ ಎಲ್ಲರಿಗೂ ಒಂದೇ ಪತ್ರ ಬರೆದರೂ ವ್ಯತ್ಯಾಸ ಆಗಲ್ಲ. ಸಂಪರ್ಕ ಇರಲಿ ಅಂತ ಆಗೀಗ ಬರೆಯೋದು. ಇವರೂ ಇಲ್ಲದಿದ್ದರೆ ನಾನು ಯಾರಿಗೆ ಈಮೇಲ್ ಕಳಿಸಲಿ? ಒಬ್ಬ ಅಮೇರಿಕಾದಲ್ಲಿ, ಒಬ್ಬ ಡೆಲ್ಲಿಯಲ್ಲಿ, ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿ. ಕ್ಲಾಸ್‌ಮೇಟುಗಳು, ಹಳೆಯ ಕಲೀಗ್ಸು. ಖಂಡಾಂತರಗಳಲ್ಲಿರುವ ಅವರಿಗೆಲ್ಲ ಹಗಲೋ ರಾತ್ರಿಯೋ ಆಗಿದ್ದು ಅಂತೂ ನಾಳೆ ಬೆಳಗಿನ ಹೊತ್ತಿಗೆ ಒಂದಿಷ್ಟು ಉತ್ತರಗಳು ಬರಬಹುದೆಂದುಕೊಂಡೆ. ಮತ್ತೆ ಬೇಜಾರಾಗಿ ಆಫೀಸಿನ ಈಮೇಲ್ ತೆರೆದರೆ ಎರಡು ಗಂಟೆಯಲ್ಲೇ ಇಪ್ಪತ್ತು ಮೇಲ್‌ಗಳಿದ್ದವು. ಅದರಲ್ಲಿ ಒಂದು ಬಿಟ್ಟರೆ ಉಳಿದದ್ದೆಲ್ಲ ಕಸ. ಸುಮ್ಮನೇ ನೋಡಿ ಮುಚ್ಚಿಟ್ಟೆ. ನಾನಿಲ್ಲದೇ ಹೇಗೋ ಏನೋ ಎಂದು ಮನೆಯ ಚಿಂತೆ ಮಾಡಿಕೊಂಡು ಬೆಂಗಳೂರಿಗೆ ಫೋನ್ ಮಾಡಿದರೆ ಶಾಲಿನಿ ಇನ್ನೂ ಮಧ್ಯಾಹ್ನದ ನಿದ್ದೆಯಿಂದ ಎದ್ದಿರಲಿಲ್ಲ. ಅದೇ ಸಿಟ್ಟಿಗೋ ಏನೋ, ಬುಸುಗುಟ್ಟತಾ ಇದ್ದಳು.
‘ಹಲೋ’ ಅಂದೆ.
‘ಏನು?’ ಅಂದಳು.
‘ಏನಿಲ್ಲಾ?’
‘ಈವತ್ತು ಬೆಳಿಗ್ಗೆ ಒಂದ್ಸಲಾ ಫೋನ್ ಮಾಡಿದ್ದೆಯಲ್ಲಾ?’
‘ಅರೆ ಹೌದಲ್ಲ ಈವತ್ತೇ. ಹೌ ಆರ್ ಯೂ?’
‘ಇದೀನಿ ಹಾಗೇ…’
‘ಸುಮ್ಮನೇ ಮಾಡ್ದೆ’
‘ಸರಿ ಹಾಗಾದ್ರೆ’
‘ಸುಮಂತ್ ಹೇಗಿದಾನೆ? ಸ್ಕೂಲ್ ಆಯ್ತಾ?’
‘ಈಗೆಲ್ಲಿ ಸ್ಕೂಲು? ರಜಾ ಅಲ್ವಾ? ನಿಂಗೆ ಯಾವುದೂ ನೆನಪಿರಲ್ಲಾ. ತಲೆತುಂಬ ಆಫೀಸ್ ಕೆಲಸಾ… ಕಡಿದು ಗುಡ್ಡೆ ಹಾಕಿರೋದು ಅಷ್ಟರಲ್ಲೇ ಇದೆ… ಸುಮ್‌ಸುಮ್ನೆ ಕಾಟಾಚಾರಕ್ಕೆ ಕೇಳ್ಬೇಡ.’
‘ಅರೆ ಹೌದಲ್ಲ. ಅದ್ಯಾಕೆ ನನಗಿದು ಮರೆತುಹೋಯಿತು?’
‘ದಿನಕ್ಕೆ ಒಂದ್ಸಲಾ ಫೋನ್ ಮಾಡಿದ್ರೆ ಸಾಕು. ನಿನ್ನ ಕಾಟ ಇಲ್ಲದೇ ಎಲ್ಲಾ ಹೆಚ್ಚು ಸರಿಯಾಗೇ ನಡೆಯುತ್ತಿದೆ.’
ಫೋನ್ ಇಟ್ಟೇಬಿಟ್ಟಳು. ಅವಳಿಗೆ ಸಾಧ್ಯವಾಗೋ ಕೆಲವು ಕ್ರೌರ್ಯಗಳು ನನಗೆ ಯಾವತ್ತಿಗೂ ಸಾಧ್ಯವಾಗಲ್ಲ. ಒಳ್ಳೆಯ ಉದಾಹರಣೆ ಅಂದರೆ ಇದೇ, ಅರ್ಧ ಮಾತಿನ ಮಧ್ಯೆ ಫೋನ್ ಇಟ್ಟುಬಿಡೋದು. ಇದು ಗೊತ್ತಾಗದೇ ನಾನು ಇನ್ನೊಂದು ಕೊನೆಯಲ್ಲಿ ಒಬ್ಬನೇ ಮಾತನಾಡುತ್ತ ಇರುವುದು ಎಂಥ ಅವಮಾನ. ನಾನು ಮಗನ ಸ್ಕೂಲ್ ವಿಷಯ ಮರೆತಿರಬಹುದು. ಅವಳೆಷ್ಟು ಸಂಗತಿಗಳನ್ನು ಮರೆತಿಲ್ಲ?
ಅವಳ ಸಿಟ್ಟಿನ ಕಾರಣಗಳನ್ನ ದೂರದೇಶದಿಂದ ಫೋನ್ ಮೇಲೆ ಕಂಡುಹಿಡಿಯುವುದಕ್ಕೆ ನನ್ನ ಕೈಯಲ್ಲಂತೂ ಸಾಧ್ಯವಿರಲಿಲ್ಲ. ಮತ್ತು ಅವು ಯಾವುದೂ ಅಷ್ಟು ಸರಳವೂ ಆಗಿರುವುದಿಲ್ಲ. ಹಾಗಾಗಿ ನನ್ನ ಸದ್ಯದ ಚಿಂತೆಯಾದ ರಾತ್ರಿಯ ಊಟದ ಬಗ್ಗೆ ತಲೆಕೆಡಿಸಿಕೊಳ್ಳತೊಡಗಿದೆ. ಇಷ್ಟೊಂದು ಸಮಯ ಹೀಗೆ ನನಗೆ ಸಿಕ್ಕು ಬಹಳ ಕಾಲವಾಗಿತ್ತು. ಒಂದರ ನಂತರ ಒಂದು ಕೆಲಸ ಬೆಂಬತ್ತಿ ಬರುತ್ತಿರುವಾಗ ಸ್ವಂತ ಯೋಚಿಸುವ ಅಗತ್ಯವೇ ಇರುವುದಿಲ್ಲ. ಅಯಾಚಿತವಾಗಿ ಹೀಗೆ ಸಮಯ ಸಿಕ್ಕಾಗಲೇ ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳೋದು; ತಾತ್ವಿಕ ಚಿಂತನೆಗಳು ಶುರುವಾಗೋದು. ಎಷ್ಟೇ ಸಣ್ಣದಿರಲಿ, ಈ ನಡುವಿನ ಖಾಲಿ ಜಾಗದಷ್ಟು ಅವಾಂತರಕಾರಿಯಾದದ್ದು ಮತ್ತೊಂದಿಲ್ಲ. ಇದು ಧಮನಿಗಳಲ್ಲಿ ಗಾಳಿಯ ಗುಳ್ಳೆ ಸೇರಿಕೊಂಡಷ್ಟೇ ಅಪಾಯಕಾರಿ! ಸುಮ್ಮನೇ ಏಳನೆಯ ಮಹಡಿಯ ರೂಮಿನ ಕಿಟಕಿಯಿಂದ ಹೊರಗೆ ನೋಡುತ್ತ ನಿಂತುಕೊಂಡೆ.
ಹೊಟೇಲಿನ ಕಿಟಕಿಯಿಂದ ಸುತ್ತಲಿನ ಜನವಸತಿಯ ಪ್ರದೇಶಗಳು ಕಾಣುತ್ತಿದ್ದವು. ಅಂಕೆಯಿಲ್ಲದೇ ಸಂದಿಗೊಂದಿಗಳಲ್ಲಿ ಹಬ್ಬಿದ ಊರು. ಮೆತ್ತನೆಯ ಕುರ್ಚಿಯಲ್ಲಿ ಕೂತೆ. ಕಾಲು ಚಾಚಲಿಕ್ಕೆಂದೇ ಅಲ್ಲೊಂದು ಮೆತ್ತನೆಯ ಆಸನವಿತ್ತು. ಕಾಲು ಚಾಚಿದೆ. ನಿಧಾನವಾಗಿ ಬೆಳಕು ಕ್ಷೀಣವಾಗಿ ಕತ್ತಲಾಯಿತು. ಒಂದು ಸುತ್ತು ನಡೆದು, ಅಲ್ಲೇ ಎಲ್ಲಾದರೂ ಊಟ ಮಾಡುವಾ ಅಂತಂದು ಕೆಳಗಿಳಿದು ಬಂದೆ. ಆಗಲೇ ಅವನು ಕಂಡದ್ದು.
ಜಕಾರ್ತಾದ ಸ್ಟಾರ್ ಹೊಟೇಲಿನ ಲಾಬಿ. ಇಲ್ಲೇ ಎರಡು ವರ್ಷದ ಹಿಂದೆ ಬಾಂಬ್ ಬ್ಲಾಸ್ಟ್ ಆಗಿದ್ದು. ನನ್ನಂಥವರೆಲ್ಲ ಚಿಂದಿಯಾಗಿದ್ದು. ಈಗೆಲ್ಲ ಸಿಕ್ಕಾಪಟ್ಟೆ ಸೆಕ್ಯುರಿಟಿ. ಲಾಬಿಯ ಮೂಲೆಯಲ್ಲಿ ಒಂದು ಕಾರಂಜಿ ಇತ್ತು. ಅವನು ಅದರ ಕಟ್ಟೆಗೆ ಕಾಲು ಕೊಟ್ಟು ನನಗೆ ಬೆನ್ನು ಮಾಡಿ ನಿಂತುಕೊಂಡಿದ್ದ. ಎಡಕಿವಿಗೆ ಮೊಬೈಲ್ ಫೋನು. ಹಿಂದಿಯಲ್ಲಿ ಜೋರುಜೋರಾಗಿ ಮಾತನಾಡತಾ ಇದ್ದ. ಪರದೇಶದಲ್ಲಿ ಈ ಭಾಷೆ ಕಿವಿಗೆ ಬಿದ್ದದ್ದರಿಂದ ಅವನ ಕಡೆ ನೋಡಿದೆ. ‘ಹಾಂಜೀ ಹಾಂಜೀ’ ಅಂತಾನೇ ಇದ್ದ. ಹಾಗನ್ನುವಾಗ ತಲೆ ಅಲ್ಲಾಡತಾ ಇತ್ತು. ಇಡೀ ಲಾಬಿಯಲ್ಲಿ ಇವನದೇ ಗದ್ದಲ. ಅದು ಐಶಾರಾಮಿ ಲಾಬಿ: ನೆಲಕ್ಕೆ ಮೆತ್ತನೆಯ ಕಾರ್ಪೆಟ್ಟು, ಮಾರ್ಬಲ್ಲಿನ ಉರುಟು ಕಂಬಗಳು, ಅಗಲದ ಮೆತ್ತನೆಯ ಕುರ್ಚಿಗಳು, ಕಾರಂಜಿಯ ನೀರಿನ ಜುಳುಜುಳು. ಅಲ್ಲೆಲ್ಲ ಗಂಭೀರ ಮೌನ. ಥಟ್ಟನೆ ನನ್ನ ಕಲೀಗ್ ಸಿ.ಕೆ.ಸಿಂಗ್ ನೆನಪಾದ. ಅವನಿಗೆ ಇಂಡಿಯನ್ ಇಮೇಜ್ ಹಾಳುಮಾಡುವ ಇಂಡಿಯನ್ಸ್ ಕಂಡರೆ ಸಿಟ್ಟೋ ಸಿಟ್ಟು. ಆ ಇಂಡಿಯನ್ ಇಮೇಜ್ ಅಂದರೇನು ಅನ್ನುವುದು ಅವನಿಗೆ ಮಾತ್ರ ಗೊತ್ತು. ಅದರಲ್ಲೂ ಎರಡು ಗುಟುಕಿನ ನಂತರ ಇಂಡಿಯನ್ಸ್ ಜನ್ಮ ಜಾಲಾಡುವುದೆಂದರೆ ಅವನಿಗೆ ಉತ್ಸಾಹ. ಉಳಿದವರಿಗೂ ಮನರಂಜನೆ. ಇದೇ ಹೊಟೇಲಿನಲ್ಲಿ ನಾಲ್ಕು ದಿನಗಳ ಕೆಳಗೆ ನಡೆದ ಪಾರ್ಟಿಯಲ್ಲಿ ಯಾರೋ ಚಾವಿ ಕೊಟ್ಟದ್ದೇ ಶುರುಮಾಡಿದ:
‘ಒಂಥರಾ ಸೀರಿಯಸ್ ಆಗಿದ್ದುಕೊಂಡೇ ಫೈವ್ ಸ್ಟಾರ್‌ಗಳನ್ನು ಎಂಜಾಯ್ ಮಾಡಬೇಕು. ಎಷ್ಟು ಆಶ್ಚರ್ಯವಾದರೂ ತೋರಿಸಿಕೋಬಾರದು. ಇದೆಲ್ಲ ಸಹಜ ಅನ್ನೋ ಹಾಗೆ, ತಾನು ಹುಟ್ಟಿದ್ದೇ ಈ ಐಶಾರಾಮಿಯಲ್ಲಿ ಅನ್ನೋ ಥರಾ ವರ್ತಿಸಬೇಕು. ಅದೆಲ್ಲ ಬಿಟ್ಟು ಈ ದರಿದ್ರ ಇಂಡಿಯನ್ಸೇ ಹೀಗೆ- ಒಂದು ಚೂರೂ ಎಟಿಕೇಟ್ ಇಲ್ಲಾ. ಎಲ್ಲಿದೀನಿ, ಹೇಗೆ ವರ್ತಿಸಬೇಕು ಅನ್ನೋ ಪರಿವೆನೇ ಇರಲ್ಲ. ಎಲ್ಲೇ ಇರಲಿ ತಮ್ಮದೇ ಮನೆ ಜಗಲೀ ಮೇಲೆ ಇದೀವಿ ಅಂತಾ ತಿಳಕೊಳ್ಳತಾರೆ. ಮೊಬೈಲ್ ಫೋನಿನಲ್ಲಿ ಬಾಯಿಬಾಯಿ ಬಡಕೋತಿರತಾರೆ. ಅದರಲ್ಲೂ ಈ ಮಿಡಲ್ ಕ್ಲಾಸ್ ಜನಾ, ಐಟಿ ದುಡ್ಡಲ್ಲಿ ಇಂಥಾ ಹೋಟೇಲಲ್ಲಿ ಬಂದು ಇರ್ತಾರಲ್ಲಾ ಅವರೆಲ್ಲಾ ಮಹಾ ಹೊಲಸು ಜನ. ವರ್ಸ್ಟ್ ಪೀಪಲ್. ರಾತ್ರಿಬೆಳಗಾಗೋದರೊಳಗೆ ಕ್ಲಾಸ್ ಚೇಂಜ್ ಆಗಿದೆ ಅಂತಾ ಭಾವಿಸಿಕೊಂಡರೆ ಹೀಗೇ ಆಗೋದು. ದುಡ್ಡು ಬಂದ್ರೆ ಕ್ಲಾಸ್ ಬರತ್ತಾ? ಬಫೆ ಲಂಚ್ ಮಾಡೋ ಕಡೆ ಹತ್ತು ಜನ ಇಂಡಿಯನ್ಸ್ ಇದ್ದರೆ ಇಬ್ಬರಾದರೂ ಚಮಚ ಬೀಳಿಸಿರತಾರೆ. ಒಬ್ಬ ಶರ್ಟಿಗೆ ತಾಗಿಸ್ಕೊಂಡಿರತಾನೆ. ಒಬ್ಬ ಪ್ಲೇಟ್ ಸಮೇತ ಯಾರಿಗಾದರೂ ಡಿಕ್ಕಿ ಹೊಡೆದಿರತಾನೆ. ಇನ್ನು ಇಬ್ಬರಾದರೂ ಕೈಬಾಯಿ ಎಂಜಲು ಮಾಡಿಕೊಂಡು ‘ಹ್ಯಾಂಡ್ ವಾಶ್, ಹ್ಯಾಂಡ್ ವಾಶ್’ ಎಂದು ಹೆಜ್ಜೆ ಹೆಜ್ಜೆಗೂ ಕೇಳ್ತಾ, ಗಟ್ಟಿಯಾಗಿ ತಮಿಳಲ್ಲೋ ಮಲಯಾಳಿಯಲ್ಲೋ ಮಾತಾಡತಾ ಎಂಜಲು ಕೈಯೆತ್ತಿ ಹಿಡಿದು ಇಂಥಾ ಫೈವ್ ಸ್ಟಾರ್ ಕಾರಿಡಾರ್‌ನಲ್ಲಿ ನಡೀತಾರೆ. ಇಪ್ಪತ್ತೈದು ವರ್ಷದವನಿಗೂ ಹೊಟ್ಟೆ ಬಂದಿರತ್ತೆ. ಚೆಕ್ ಔಟ್ ಮಾಡ್ತಾ ರೂಮಲ್ಲಿರೋ ಸೋಪು, ಬ್ರಶ್ಶು, ಶಾಂಪೂ ಎತ್ತಿಕೊಂಡು ಹೋಗದ ಇಂಡಿಯನ್ನೇ ಇಲ್ಲಾ… ಬೇರೆ ದೇಶದವರು ತಗೊಳಲ್ವ ಅಂತನ್ನಬಹುದು. ತಗೋತಾರೆ, ತಗೋತಾರೆ. ಆದರೆ ಉಳ್ಳವರು ತಗೊಂಡರೂ ತಗೊಂಡ ಹಾಗೆ ಆಗಲ್ಲ. ಇದನ್ನೇ ನಾವು ಅರ್ಥ ಮಾಡ್ಕೋಬೇಕು… ಶ್ರೀಮಂತ ಒಂದಿಷ್ಟು ರೂಪಾಯಿ ಕದ್ದರೆ ಅದನ್ನು ಕಳವು ಅನ್ನಬಹುದಾ? ಬೇಕಾದರೆ ಹಾಬಿ ಅನ್ನಬಹುದು, ಮೋಜು ಅನ್ನಬಹುದು, ಸಮಾಜವನ್ನ ಪರೀಕ್ಷೆ ಮಾಡೋದಕ್ಕೆ ಮಾಡ್ತಿದಾನೆ ಅಂತಲೂ ಅನ್ನಬಹುದು. ಬಡವ ಕದ್ದರೆ ಕಳ್ಳತನ. ದೇಶಗಳ ವಿಷಯದಲ್ಲೂ ಇದು ನಿಜ. ಇದಕ್ಕೆಲ್ಲ ಒಳ್ಳೊಳ್ಳೆಯ ಹೆಸರುಗಳಿವೆ. ವಾರ್ ಅಗೇನ್ಸ್ಟ್ ಟೆರರ್, ಸೆಲ್ಫ್ ಡಿಫೆನ್ಸ್, ಪ್ರೊಟೆಕ್ಟಿಂಗ್ ಅವರ್ ಟರ್ಫ್… ಇತ್ಯಾದಿ ಇತ್ಯಾದಿ. ಕಳ್ಳ ಮಾಲು ಹಂಚಿಕೊಂಡರೆ ಅದು ಸ್ಟ್ರಾಟೆಜಿಕ್ ಅಲೈಯನ್ಸ್…’
ಸಿ.ಕೆ.ಸಿಂಗ್‌ನ ಮಾತುಗಳನ್ನು ಮನಸ್ಸಲ್ಲೇ ಮರುಕಳಿಸಿಕೊಂಡು, ಈವತ್ತು ಕೂಡ ಅವನು ಇಲ್ಲೇ ಇದ್ದಿದ್ದರೆ ಒಳ್ಳೆಯ ಕಂಪನಿಯಾಗುತ್ತಿತ್ತು ಎಂದು ಕೊರಗುತ್ತ ಹೋಗ್ತಾ ಇದ್ದಾಗ ಆತ ಸ್ವಲ್ಪ ಈ ಕಡೆ ತಿರುಗಿದ. ಇನ್ನೂ ಕಿವಿಗೆ ಮೊಬೈಲ್ ಇತ್ತು. ಪಕ್ಕದಿಂದ ನೋಡಿದಾಗ ಥಟ್ಟನೆ ಗುರುತು ಹತ್ತಿದ ಹಾಗಾಯಿತು. ಅವನೇ, ಅಲ್ಲಲ್ಲ ಅವನಲ್ಲ, ಅವನೇ ಅವನೇ ಹೀಗೆ ಅಂದುಕೊಳ್ಳುತ್ತ ನನ್ನ ಮನಸ್ಸಲ್ಲಿ ನೂರಾರು ಹೆಸರುಗಳು ಸರಕ್ಕನೇ ಹಾದು ಹೋದವು. ನನಗೇ ಗೊತ್ತಾಗದ ಹಾಗೆ ಅವನ ದಿಕ್ಕಿನಲ್ಲಿ ಒಂದು ಹೆಜ್ಜೆ ಹಾಕಿದೆ. ಇದೇ ಸಂದರ್ಭ ಇಂಡಿಯಾದಲ್ಲೇ ಆಗಿದ್ದರೆ ಖಂಡಿತ ನಾನು ಮುಖ ತಿರುಗಿಸಿಕೊಂಡು ಹೋಗ್ತಿದ್ದೆ. ಈ ಹೆಜ್ಜೆ, ನನಗೆ ಅರಿವಿಲ್ಲದೇ ಅವನ ದಿಕ್ಕಿನಲ್ಲಿ ಬಿದ್ದ ಈ ಹೆಜ್ಜೆ, ಬೀಳುತ್ತಲೇ ಇರಲಿಲ್ಲ. ಅದಕ್ಕೇ ಹೇಳಿದ್ದು: ಅವನು ಜಕಾರ್ತಾದಲ್ಲಿ ಅಲ್ಲದೇ ಬೇರೆ ಎಲ್ಲಿ ಸಿಕ್ಕಿದ್ದರೂ ನಮ್ಮ ಭೇಟಿಯಾಗುತ್ತಿರಲಿಲ್ಲ. ಪರದೇಶ ಎಷ್ಟೇ ಅಂದರೂ ಪರದೇಶವೇ. ಅಲ್ಲಿ ನಮಗೆ ಎಲ್ಲವೂ ಭೂತಗನ್ನಡಿಯಲ್ಲೇ ಕಾಣಿಸುತ್ತದೆ. ನಮ್ಮ ನರಮಂಡಲ ಬೇರೆ ರೀತಿಯಲ್ಲೇ ವರ್ತಿಸುತ್ತದೆ.
ನೂರಾರು ಹೆಸರು ಮನಸ್ಸಲ್ಲಿ ಬಂದು ಹೋದರೂ ಅವನ ಹೆಸರು ಬಾಯಿಗೆ ಬರಲಿಲ್ಲ. ಇವನು ಒಂದು ಕಾಲದಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದವನಲ್ಲವೇ ಎಂಬ ಅನುಮಾನ ಹುಟ್ಟಿ ಅದು ನಂಬಿಕೆಯಾಗಲು ಬೇಕಾದ ಹೆಸರು ಬಾಯಿಗೆ ಬರಲಿಲ್ಲ. ಒಂದು ಗಳಿಗೆ ನಿಂತೆ. ಅದು ಅವನಿಗೆ ಗೊತ್ತಾಯಿತೇನೋ ಎಂಬ ಹಾಗೆ ತಿರುಗಿ ನೋಡಿದ. ಈಗ ನಾನು ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ನಾನು ಹೆಸರು ಹುಡುಕ್ತಾನೇ ಇದ್ದೆ. ಫೋನಿನಲ್ಲಿ ಮಾತನಾಡುತ್ತಲೇ ಮುಗುಳುನಕ್ಕು, ಕೈಯಿಂದಲೇ ಸನ್ನೆ ಮಾಡಿ ಒಂದು ಕ್ಷಣ ಇರು ಅನ್ನುವಂತೆ ಸೂಚಿಸಿದ. ಈಗ ಮತ್ತೆ ಹಿಂದೆ ಹೋಗಲು ಸಾಧ್ಯವೇ ಇರಲಿಲ್ಲ. ಅವನತ್ತ ಇನ್ನೊಂದು ಹೆಜ್ಜೆಯಿಟ್ಟೆ. ಕಿವಿಗೆ ಮೊಬೈಲು ಒತ್ತಿಕೊಂಡೇ ಬಲಗೈ ಚಾಚಿ ನನ್ನ ಕೈಕುಲುಕಿದ. ಫೋನಿನಲ್ಲಿ ಮಾತನಾಡುತ್ತಲೇ ಇದ್ದ. ಕೈಸನ್ನೆಯಲ್ಲೇ, ಮುಖಭಾವದಲ್ಲೇ ಎರಡು ನಿಮಿಷದ ಕುಶಲೋಪರಿ ನಡೆಯಿತು. ಈಗ ಅವನು ಮಾತು ಮುಗಿಸುವುದನ್ನು ಕಾಯದೇ ಬೇರೆ ದಾರಿಯೇ ಇರಲಿಲ್ಲ. ತಿರುಪತಿ ಕ್ಷೌರದ ಥರ. ಸಿಕ್ಕಿಹಾಕಿಕೊಂಡುಬಿಟ್ಟಿದ್ದೆ. ಅವನು ಯಾವುದೇ ಅವಸರ ಇಲ್ಲದವನ ಹಾಗೆ ನನ್ನ ಮೇಲೆ ಒಂದು ಕಣ್ಣಿಟ್ಟು ತನ್ನ ಹಾಂಜೀಗಳನ್ನು ಮುಂದುವರೆಸಿದ. ನೀಲಿ ಬಣ್ಣದ ಗೆರೆಗೆರೆಯ ಶರ್ಟು, ಕಪ್ಪು ಪ್ಯಾಂಟು, ಒಳ್ಳೆಯ ಡಿಸೈನರ್ ಶೂ ಹಾಕಿಕೊಂಡಿದ್ದ. ಹಿಂದಿನ ಜೇಬಲ್ಲಿದ್ದ ಪರ್ಸ್ ಉಬ್ಬಿ ಕಾಣಿಸ್ತಾ ಇತ್ತು.
ಕೊನೆಗೂ ಮಾತು ಮುಗಿಸಿ, ಮೊಬೈಲ್ ಮಡಚಿ, ನನ್ನತ್ತ ಬಂದ. ‘ಹೋ ಹೋ ಹೋ ಇಲ್ಲಿ? ಹೀಗೆ?’ ಎಂದು ನಾಟಕೀಯವಾಗಿ ಅರಚಿ ಹ್ಹಾ ಹ್ಹಾ ಹ್ಹಾ ಎಂದು ನಕ್ಕ. ಮತ್ತೊಮ್ಮೆ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಬಹಳ ಹೊತ್ತು ಕುಲುಕಿದ. ಅವನ ಗದ್ದಕ್ಕೆ ಲಾಬಿಯಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದಂತೆ ಅನಿಸಿತು. ಅಷ್ಟರಲ್ಲಿ ಅವನ ಹೆಸರು ಹೊಳೆಯಿತು. ಜ್ಯೋತಿರ್ಮೊಯಿ!! ಹೌದು ಇವನೇ ಜ್ಯೋತಿರ್ಮೊಯಿ. ಇವನೇ ಇವನೇ.
ನಮ್ಮ ಕಂಪನಿಯ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟಿನಲ್ಲಿದ್ದ. ಎಲ ಎಲಾ… ಆಗಲೇ ಇವನ ಕೂದಲು ಇಷ್ಟು ಬೆಳ್ಳಗಾಗಿದೆ. ಮೂಗಿನ ಮೇಲಾಗಿರುವ ಕಲೆ ನೋಡಿದರೆ ಬಹಳ ವರ್ಷಗಳಿಂದ ಕನ್ನಡಕ ಉಪಯೋಗಿಸುತ್ತ ಇದ್ದ ಹಾಗಿದೆ. ಆದರೆ ಇದಕ್ಕೂ ಮೊದಲು ಎಂದೂ ಅವನನ್ನು ಕನ್ನಡಕದಲ್ಲಿ ನೋಡಿರಲಿಲ್ಲವಲ್ಲ. ಅವನೇ ತಾನೇ? ಮನುಷ್ಯ ಬದಲಾಗತಾನೆ ನಿಜ. ಆದರೆ ಇಷ್ಟೊಂದು? ಅಥವಾ ಅವನು ಬದಲಾಗಲೇ ಇಲ್ಲವೇ? ನಾನು ಬದಲಾದವನನ್ನು ಅಪೇಕ್ಷಿಸಿ ಗೊಂದಲ ಮಾಡಿಕೊಂಡಿರಬಹುದು. ಆದರೆ ಅವನ ಆ ಮೂಗು ಅವನದೇ. ಖಂಡಿತ. ಅವನೇ.
‘ಎಂಥಾ ಆಶ್ಚರ್ಯ. ನಡಿ ನಡಿ… ನನಗೂ ಕಂಪನಿ ಬೇಕಾಗಿತ್ತು. ಏನು ಈ ಸಂಜೆಯ ಕಾರ್ಯಕ್ರಮ?’ ಅಂದ.
‘ಊಟಕ್ಕೆ ಹೊರಟಿದ್ದೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ.’
‘ನಡಿ ನಡಿ ರೂಮಿಗೆ ಹೋಗೋಣ. ರೂಮಲ್ಲಿ ಫಸ್ಟ್ ಕ್ಲಾಸ್ ವಿಸ್ಕಿ ಇದೆ. ಕುಡಿತೀ ತಾನೇ? ಇಲ್ಲಿ ಬಾರಿಗೆ ಹೋಗಿ ಯಾಕೆ ಅಷ್ಟೊಂದು ದುಡ್ಡು ಸುರೀಬೇಕು.’ ಎಂದು ಮುಂದೆ ಮಾತಾಡಲು ಬಿಡದೇ ಲಿಫ್ಟಿನತ್ತ ತಳ್ಳಿದ.
ನಾನು ಸುಮ್ಮನೇ ಇದ್ದದ್ದನ್ನು ಗಮನಿಸಿ, ‘ನಿನಗೆ ಬೇಕಾದರೆ ಇಲ್ಲೇ ಹೋಗೋಣ. ರೂಮಿಗೆ ಹೋಗಲೇಬೇಕಂತೇನಿಲ್ಲ’ ಅಂದ.
‘ಹೇಗಾದ್ರೂ ಸರಿ’
‘ರೂಮಲ್ಲಿ ಆರಾಮಾಗಿ ಮಾತಾಡಬಹುದು. ರಾತ್ರಿಯಾಗುತ್ತ ಹೋದ ಹಾಗೆ ಬಾರಲ್ಲಿ ತುಂಬಾ ಗದ್ದಲ. ಈ ಸಂಗೀತ ನನಗೆ ಅರ್ಥವೂ ಆಗುವುದಿಲ್ಲ. ನಿನ್ನೆ, ಮೊನ್ನೆ ಎರಡೂ ದಿನ ಅಲ್ಲೇ ಹೋಗಿದ್ದೆ. ತಲೆ ಬೋಳಿಸಿಬಿಟ್ಟ ಸೂಳೇಮಗ. ಮೊದಲೇ ರಿಸೆಶನ್. ಅದರ ಮೇಲೆ ಇವನ ಹಜಾಮತಿ. ರೂಮಲ್ಲಿ ಒಳ್ಳೆಯ ವಿಸ್ಕಿ ಇದೆ… ನೀನೇ ನೋಡು…’
ಹದಿನಾರನೇ ಮಹಡಿಯ ಮೇಲಿನ ರೂಮು. ಲಿಫ್ಟಿನ ಕನ್ನಡಿಯಲ್ಲಿ ಅವನನ್ನು ಗಮನಿಸಿದೆ. ದಪ್ಪ ಆಗಿದ್ದಾನೆ. ಹೊಟ್ಟೆ ಸೊಂಟದ ಬೆಲ್ಟ್ ದಾಟಿದೆ. ಅದು ಕಾಣಿಸದ ಹಾಗೆ ಪ್ರಯತ್ನಪಡ್ತಿದಾನೆ. ಬದಲಾಗಿದಾನೆ. ಅಲ್ಲಿ ಹೋಗುವವರೆಗೂ ಎಡೆಬಿಡದೇ ಮಾತಾಡ್ತಾನೇ ಇದ್ದ.
‘…ಯಾರ ಜೊತೆ ಮಾತನಾಡ್ತಿದ್ದೆ ಗೊತ್ತಾ? ಮೊಂಟೇಕ್‌ಸಿಂಗ್ ಅಹ್ಲುವಾಲಿಯಾ ಸೆಕ್ರೆಟರಿ ಜೊತೆ. ಇಂಡಿಯಾಕ್ಕೆ ಹೋದ ಮೇಲೆ ಮೊಂಟೇಕ್‌ಸಿಂಗ್ ಜೊತೆ ಮೀಟಿಂಗ್ ಫಿಕ್ಸ್ ಮಾಡ್ತೀನಿ ಅಂದಿದಾನೆ ನನ್ನ ಬ್ರದರ್ ಇನ್ ಲಾ… ಅವನು ತುಂಬಾ ಇನ್‌ಫ್ಲುಯೆನ್ಶಿಯಲ್ ಫೆಲೋ. ಮುಂಬೈಯಲ್ಲಿದಾನೆ. ಈ ಸೆಕ್ರೆಟರೀನ ಅವನೇ ಗುರುತು ಮಾಡಿಕೊಟ್ಟಿದ್ದು. ನಮ್ಮ ಕಂಪನಿಯಲ್ಲಂತೂ ಕೆಲಸ ನಡೀತಾನೇ ಇರಬೇಕು. ಅದಕ್ಕೆ ನೀನು ಬ್ರದರ್ ಇನ್ ಲಾ ಆದರೂ ಹಿಡಿ ಪ್ರೈಮ್ ಮಿನಿಸ್ಟರ್‌ನಾದರೂ ಹಿಡಿ. ಈ ಟೈಮಲ್ಲಿ ಗವರ್ನಮೆಂಟ್ ಕಾಂಟ್ಯಾಕ್ಟ್ಸ್ ತುಂಬಾ ಇಂಪಾರ್ಟೆಂಟ್. ಇದಕ್ಕಿಂತ ಮೊದಲಿನ ಕಂಪನಿಯೇ ವಾಸಿ. ಅಲ್ಲಿ ಇದೆಲ್ಲ ರಗಳೆ ಇರಲಿಲ್ಲ. ಪ್ರೊಫೆಶನಲ್ ಚಾರ್ಜಸ್ ಅಂತಾ ಕೊಟ್ಟರೆ ಆಯಿತು – ಅದರಲ್ಲೇ ಲಂಚಾನೂ ಅವರೇ ಕೊಟ್ಟುಕೊಂಡು ನಮ್ಮ ಆತ್ಮವನ್ನು ತಣ್ಣಗೆ ಇಡತಾ ಇದ್ದರು. ಈ ರಿಸೆಶನ್ ಅನ್ನೋದು ಒಂದು ನೆವ. ದಂಗೆಯಾದರೆ ಅಂಗಡಿ ದೋಚತಾರಲ್ಲ ಹಾಗೆ. ಇದೇ ಟೈಮ್ ನೋಡ್ಕೊಂಡು ಎಲ್ಲಾ ಕ್ಲೀನ್ ಮಾಡಿಬಿಡೋದು. ಆಗದವರನ್ನ ತೆಗೆದುಹಾಕಿಬಿಡೋದು. ಅಯ್ಯೋ ಏನು ಹೇಳೋದು, ಈ ಇಪ್ಪತ್ತು ವರ್ಷದಲ್ಲಿ ಏಳು ಸಲ ಕೆಲಸ ಬದಲಾಯಿಸಿದ್ದೇನೆ. ನಾನು ತುಂಬಾ ರೆಸ್ಟಲೆಸ್ ಫೆಲೋ. ಬೇಗ ಬೋರಾಗಿಬಿಡತ್ತೆ. ಅದೇ ಬಾಸ್ ಅದೇ ಟೀಂ. ಚಾಲೆಂಜ್ ಇರಲ್ಲ. ಮತ್ತೆ ಮೇಲಕ್ಕೆ ಹೋಗಕ್ಕೆ ಅವಕಾಶಾನೂ ಇರಲ್ಲ ಅಂತಿಟ್ಟುಕೋ. ಹೊಸ ಕೆಲಸಾ ಅಂದರೆ ಏಣಿಯ ಹೊಸಾ ಮೆಟ್ಟಿಲು. ಯಾರೂ ನಿಂತಿರದೇ ಇರೋ ಖಾಲಿ ಮೆಟ್ಟಿಲು. ಅಲ್ಲಿ ಹತ್ತಿ ಕೂತು ಇನ್ನೂ ಮೇಲಿನ ಮೆಟ್ಟಿಲು ಖಾಲಿಯಾಗೋದನ್ನೇ ಕಾಯೋದು. ಅವಕಾಶ ಸಿಕ್ಕಾಗಲೆಲ್ಲ ಅಲ್ಲಿರೋನ್ನ ತಳ್ಳೋದು. ಬಿದ್ದರೆ ಬೀಳಲಿ ಅಂತ. ಕೆಳಗಡೆಯಿಂದಲೂ ತಳ್ಳತಾ ಇರತಾರೆ ನನ್ನನ್ನ ಬೀಳೀಸೋಕೆ. ಅವರ ಮೇಲೆ ಒಂದು ಕಣ್ಣಿಡದೇ ಇದ್ದರೆ, ಅವರನ್ನ ಅಮುಕಿ ಇಡದೇ ಇದ್ದರೆ ತಳ್ಳಿಬಿಡತಾರೆ. ಅದೇ ಜನರ ಜೊತೆ ಆಡಿ ಆಡಿ ಬೇಜಾರಾದಾಗ ಕೆಲಸ ಬದಲಾಯಿಸೋದು. ಈಗೀಗಂತೂ ಮೂರು ವರ್ಷಕ್ಕೆ ಕೆಲಸಾ ಬದಲಾಯಿಸದೇ ಇದ್ದರೆ ಏನೋ ತಪ್ಪಾಗಿದೆ ಅಂತಲೇ ಅನಿಸ್ತಾ ಇರತ್ತೆ…’
ರೂಮು ತಲುಪೋವರೆಗೂ ಮಾತಾಡ್ತಾನೇ ಇದ್ದ. ರೂಮ್ ನಂಬರ್ ಸಾವಿರದಾ ಆರೂ ನೂರಾ ಹತ್ತು. ಸಿಕ್ಸಟೀನ್ ಟೆನ್. ರೂಮಲ್ಲಿ ಒಂದು ಕಡೆ ಬ್ಯಾಗು ಬಾಯಿ ಬಿಚ್ಚಿಕೊಂಡು ಬಿದ್ದಿತ್ತು. ಮಂಚದ ಮೇಲೆ ಹೊದಿಕೆ ದಿಂಬುಗಳು ಚೆಲ್ಲಾಪಿಲ್ಲಿಯಾಗಿದ್ದವು. ‘ಕೂತಕೋ ಕೂತಕೋ’ ಅಂದ. ನಾನು ಕೂರುವುದಕ್ಕೆ ಜಾಗ ಹುಡುಕಿದೆ. ಅಲ್ಲಿದ್ದ ಕುರ್ಚಿಯ ಮೇಲೆ ಅವನದೇ ಪ್ಯಾಂಟು ಬಿದ್ದಿತ್ತು. ತೆಗೆದು ಹಾಸಿಗೆಯ ಮೇಲಿಟ್ಟ. ರೂಮಿನ ಪರದೆ ಸರಿಸಿದ. ದಪ್ಪ ಗಾಜಿನ ಗೋಡೆ. ಅದರಿಂದ ಹೊರಗೆ ಪಾತಾಳದಲ್ಲಿ ಕಾರುಗಳ ದೀಪಗಳು ಸಾಲುಸಾಲಾಗಿ ಕಾಣಿಸುತ್ತಿದ್ದವು. ಹಗಲಿನ ಬಿಸಿಲಲ್ಲಿ ಕಣ್ಣಿಗೆ ಹೊಡೆಯುವ ಧೂಳು, ಸಂದಿಗೊಂದಿಗಳು, ಟ್ರ್ಯಾಫಿಕ್ ಅವ್ಯವಸ್ಥೆ ಎಲ್ಲವೂ ರಾತ್ರಿಯ ಕತ್ತಲಲ್ಲಿ ಮಾತ್ರ ಅದೆಲ್ಲೋ ಅವಿತುಕೊಂಡಿದ್ದವು. ನಾನು ನೋಡ್ತಾ ನಿಂತಿದ್ದೆ. ನನ್ನ ರೂಮಿನಿಂದ ಇದೆಲ್ಲ ಬೇರೆಯೇ ಕೋನದಿಂದ ಕಾಣಿಸ್ತಾ ಇತ್ತು.
‘ಥತ್ತೇರಿಕೀ… ಓಹ್ ಶಿಟ್… ಓಹ್ ಶಿಟ್…’ ಅಂದ. ಏನೋ ಅನಾಹುತವಾಯಿತೆಂದು ನೋಡಿದರೆ ಕೈಯಲ್ಲಿ ಅರ್ಧ ತುಂಬಿದ ವಿಸ್ಕಿಯ ಬಾಟಲನ್ನು ಎತ್ತಿ ಹಿಡಿದು ‘ಇದೆಲ್ಲಿ ಸಾಕು?’ ಅಂದ.
‘ಸಾಕು ಬಿಡು. ನಾನು ಹೆಚ್ಚು ಕುಡಿಯುವವನಲ್ಲ. ನಿನಗೊಬ್ಬನಿಗೆ ಸಾಕು ತಾನೇ?’ ಅಂದೆ.
‘ಓಹ್ ನನಗೆ ಇದು ಎರಡು ದಿನಕ್ಕೆ ಸಾಕು. ನಿನ್ನ ಕೆಪ್ಯಾಸಿಟಿ ನನಗೆ ಗೊತ್ತಿಲ್ಲ. ನೋಡೋಣ… ಇಬ್ಬರು ಕುಡಿಯುವಾಗ ಬೇಗ ಖರ್ಚಾಗತ್ತೆ. ಬೇಕಾದರೆ ತರಿಸೋಣ… ಶುರು ಮಾಡೋಣೇನು ಹಾಗಾದರೆ? ನಿನಗೇನು ಐಸ್, ಸೋಡಾ?’
‘ಐಸ್ ಆಂಡ್ ವಾಟರ್’
ಫ್ರಿಜ್ಜಿನಿಂದ ಐಸ್ ಕ್ಯೂಬ್ಸ್ ಹಾಕಿದ. ಅವು ಟಣಕ್ ಟಣಕ್ ಅಂತ ಸದ್ದು ಮಾಡುವಾಗ ನನ್ನ ಕಡೆ ನೋಡಿದ. ಅವನ ಮುಖದ ಮೇಲೆ ಮುಗುಳುನಗೆಯಿತ್ತು. ನಾಜೂಕಾಗಿ ವಿಸ್ಕಿ ಸುರಿದ. ನೀರು ಸೇರಿಸಿ ಎರಡೂ ಗ್ಲಾಸುಗಳನ್ನು ಎತ್ತಿ ಹಿಡಿದು ‘ತಗೋ…’ ಅಂದ.
‘ಚಿಯರ್ಸ್’ ಅಂದೆ.
‘ಫಾರ್ ಅವರ್ ಫ್ರೆಂಡ್‌ಶಿಪ್. ಲಾಂಗ್ ಲಿವ್ ಅವರ್ ಫ್ರೆಂಡ್‌ಶಿಪ್’ ಅಂದ.
‘ಚಿಯರ್ಸ್’
ಇಬ್ಬರೂ ಒಂದೊಂದು ಗುಟುಕು ಕುಡಿದ ಮೇಲೆ ಸ್ವಲ್ಪ ಸಡಿಲಾದ ಹಾಗಾಯಿತು. ಅವನು ಒಂದು ಕುರ್ಚಿಯ ಮೇಲೆ ಕೂತ. ಎದುರುಗಡೆಯ ಕುರ್ಚಿಯಲ್ಲಿ ನಾನು. ನಡುವೆ ಗಾಜಿನ ಟೇಬಲ್ಲು. ನನ್ನ ಬಲಬದಿಯ ಗಾಜಿನ ಗೋಡೆಯ ಆಚೆ ಶಹರದ ರಾತ್ರಿ. ಕೆಳಗೆ ದೂರದಲ್ಲಿ ಹರಿದಾಡುವ ಮೋಟರಿನ ದೀಪಗಳು.
‘ಈಗ ನಿನ್ನ ಬಗ್ಗೆ ಹೇಳು’ ಅಂದ.
‘ಏನು ಹೇಳಲಿ? ಇನ್ನೂ ಅದೇ ಕಂಪನಿಯಲ್ಲಿದ್ದೇನೆ. ಸಾಕಷ್ಟು ಮೇಲೆ ಬಂದಿದ್ದೇನೆ ಅಂತಿಟ್ಟುಕೋ. ಹೆಚ್.ಆರ್ ಡಿಪಾರ್ಟಮೆಂಟಿಗೆ ಟ್ರಾನ್ಸಫರ್ ಮಾಡಿಸಿಕೊಂಡೆ. ಈಗ ಅಲ್ಲಿ ನಾನೇ ಹೆಡ್. ನಡೀತಾ ಇದೆ. ನಡೀತಾ ಇದೆ. ನನ್ನ ಕತೆಗಳ ಮೂರನೇ ಪುಸ್ತಕ ಈ ವರ್ಷ ಬಂತು…’
‘ವಂಡರ್‌ಫುಲ್… ನೀನು ಕತೆ ಬರೀತೀಯಾ? ನನಗೆ ಗೊತ್ತೇ ಇರಲಿಲ್ಲ… ನಿಜವಾದ ಛುಪಾ ರುಸ್ತುಮ್ ನೀನು. ಥ್ರೀ ಬುಕ್ಸ್… ವಂಡರ್‌ಫುಲ್ ಯಾರಿಗೂ ಗೊತ್ತಾಗದ ಹಾಗೆ ಈ ಗುಟ್ಟು ಕಾಪಾಡಿಕೊಂಡಿದ್ದೀಯಲ್ಲ… ಈ ಕಾರ್ಪೋರೇಟ್ ಜಗತ್ತಿನಲ್ಲಿ ನಿನ್ನಂಥವರು ಇರಬೇಕು… ಇಂಥ ಹಾಬಿ ಇರೋದು ಬಹಳ ಅಪರೂಪ…’
‘ಒಂದು ಕಾದಂಬರೀನೂ ಬರ್‍ದಿದೀನಿ… ಬರವಣಿಗೆ ನನ್ನ ಪ್ರೊಫೆಶನ್… ಕಾರ್ಪೊರೇಟ್ ಕೆಲಸ ಹಾಬಿ…’
‘ಹ್ಹಾ… ಹ್ಹಾ… ಹ್ಹಾ… ಚೆನ್ನಾಗಿ ಹೇಳ್ದೆ… ಸದ್ಯ ನೀನೇ ಹೆಡ್ ಆಗಿದ್ದರಿಂದ ಬಚಾವಾದೆ. ಯಾರಾದರೂ ನಿಮ್ಮವರು ಕೇಳಿಸಿಕೊಂಡಿದ್ದರೆ ಲಾತಾ ಸಿಗ್ತಾ ಇತ್ತು… ಹ್ಹಾ… ಹ್ಹಾ… ನಿನ್ನ ಹೆಸರು ಎಲ್ಲೋ ಓದಿದ ನೆನಪಾಗ್ತಾ ಇದೆ ಈಗ… ಆದರೆ ಅದು ನೀನೇ ಅಂತ ಗೊತ್ತಾಗ್ಲಿಲ್ಲ ನೋಡು… ಅರೆ ನಿನ್ನ ಕೇಳೋದೇ ಮರೆತೆ. ಯಾವ ಊರಲ್ಲಿ ಇದೀಯಾ ಈಗ?’
‘ಬೆಂಗಳೂರಲ್ಲಿ’
‘ಅಬ್ಬಾ… ಆ ಊರಿನ ಟ್ರಾಫಿಕ್ ನೆನೆಸಿಕೊಂಡರೆ ಮೈ ಜುಂ ಅನ್ನತ್ತೆ. ಅಲ್ಲ, ಅದು ನಿಜವಾಗಲೂ ರಿಟೈರ್‍ಡ್ ಮನುಷ್ಯರ ಊರೇ ಬಿಡು. ಟ್ರಾಫಿಕ್ ಜಾಮ್‌ನಲ್ಲಿ ಕಳೆಯೋದಕ್ಕೆ ಅವರ ಹತ್ತಿರ ಅಷ್ಟೊಂದು ಸಮಯ ಇದೆಯಲ್ಲ. ಪಿಟಕ್ ಅನ್ನದೇ ಸಹಿಸ್ಕೋತಾರಲ್ಲ…’
‘ಸಾಕು ಸಾಕು. ಈ ದೇಶದಲ್ಲೂ ನಂಗೆ ಬೆಂಗಳೂರಿನ ಟ್ರ್ಯಾಫಿಕ್ ಬಗ್ಗೆ ಮಾತಾಡೋದಕ್ಕೆ ಇಷ್ಟವಿಲ್ಲ. ಅದರ ಬಗ್ಗೆ ತಾತ್ವಿಕ ಪಾರಮಾರ್ಥಿಕ ಇತ್ಯಾದಿ ಎಲ್ಲಾ ರೀತಿ ಚರ್ಚೆನೂ ಆಗಿಬಿಟ್ಟಿದೆ…’
ಒಂದು ಕ್ಷಣ ಸುಮ್ಮನೇ ಇದ್ದ. ಎರಡು ಗುಟುಕು ಕುಡಿದ. ಆಮೇಲೆ ನಿಧಾನವಾಗಿ ಮಾತಾಡಿದ.
‘ನಿನಗೆ ಒಂದು ವಿಷಯ ಹೇಳ್ತೀನಿ… ನೀನೊಬ್ಬ ಲೇಖಕ. ನಿನಗೆ ಅರ್ಥವಾಗತ್ತೆ…’
ಇಂಥ ಮಾತುಗಳು ನನಗೆ ಹೊಸದಲ್ಲ. ಲೇಖಕರ ಬಗ್ಗೆ ಜನರಿಗೆ ಇರುವ ಅಪಾರ ಭರವಸೆಯನ್ನು ಎಷ್ಟೊಂದು ಬಾರಿ ಅನುಭವಿಸಿದ್ದೇನೆ. ಯಾರಿಗೂ ಅರ್ಥವಾಗದ್ದು ಅವರಿಗೆ ಅರ್ಥವಾಗುತ್ತದೆನ್ನುವ ಭರವಸೆ. ಅವರಿಗೆ ಏನನ್ನಾದರೂ ಹೇಳಬಹುದೆನ್ನುವ ಭರವಸೆ. ಜೀವನದ ಯಾವ ಅತಿಗಳನ್ನೂ, ವೈಚಿತ್ರ್ಯಗಳನ್ನೂ, ಆಕಸ್ಮಿಕಗಳನ್ನೂ, ಬಂಡಾಯವನ್ನೂ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಮವನ್ನು ಅವರು ಸಹಾನುಭೂತಿಯಿಂದ ನೋಡುತ್ತಾರೆಂಬ ಭರವಸೆ. ಹಾಗಾಗಿ ನಾನು ಎಷ್ಟೊಂದು ಪ್ರೇಮಕತೆಗಳನ್ನು ಕೇಳಿಸಿಕೊಂಡಿದ್ದೇನೆ.
‘ಹೇಳು’ ಅಂದೆ
‘ನಮ್ಮಪ್ಪ ಬೆಂಗಳೂರಲ್ಲಿ ನಾಲ್ಕು ವರ್ಷ ಇದ್ದ. ನಾನು ಆಗ ಅಲ್ಲೇ ಹೈಸ್ಕೂಲಿಗೆ ಹೋಗಿದ್ದು. ಎಲ್ಲಿತ್ತು ಗೊತ್ತಾ? ಬಿಇಎಲ್ ಇದೆಯಲ್ಲ. ಅದರ ಹತ್ತಿರ. ಆಗ ಆ ಏರಿಯಾ ಪೂರ್ತಿ ಹಳ್ಳೀ ಥರಾನೇ ಇತ್ತು. ಈಗ ಅದಕ್ಕೆ ಏನಂತ ಕರೀತಾರೋ ನೆನಪಾಗ್ತಾ ಇಲ್ಲ. ಸ್ಕೂಲು ನಮ್ಮ ಮನೆಗೆ ತುಂಬಾ ಹತ್ತಿರ. ಅಲ್ಲಿ ಎರಡು ಮರಗಳಿದ್ದವು. ಒಂದು ಅರಳೀ ಮರ. ಒಂದು ಮಾವಿನ ಮರ. ನಮ್ಮ ಸ್ಕೂಲಿನ ಹೊರಗೇ ಇದ್ದ ಮರಗಳು. ಅದರ ಎದುರು ಖಾಲಿ ಜಾಗ. ಅದೇ ನಮ್ಮ ಆಟದ ಮೈದಾನ.’
ಜ್ಯೋತಿರ್ಮೊಯಿ ಬೆಂಗಳೂರಿನಲ್ಲಿ ಇದ್ದ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಗೊತ್ತಾಗಿದ್ದಿದ್ದರೆ ಬಹುಶಃ ಅವನ ಬಗ್ಗೆ ಸ್ವಲ್ಪ ಮೃದುವಾಗಿರುತ್ತಿದ್ದೆನೋ ಏನೋ. ಮಾತಾಡುತ್ತ ಅವನು ಭಾವುಕನಾಗಿಬಿಟ್ಟ.
‘ನಾನು ಎರಡು ತಿಂಗಳ ಹಿಂದೆ ಅಲ್ಲಿಗೆ ಹೋಗಿದ್ದೆ. ಹೇಳಿದರೆ ನೀನು ನಂಬಲಿಕ್ಕಿಲ್ಲ. ನನಗೆ ಸ್ಕೂಲು ಇರೋ ಜಾಗಾನೇ ಪತ್ತೆ ಮಾಡಕ್ಕಾಗಲಿಲ್ಲ. ಸುತ್ತಾಡಿ ಸುತ್ತಾಡಿ ಸುಸ್ತಾಗಿ ಹೋದೆ. ಎಲ್ಲಾ ಎಷ್ಟು ಬದಲಾಗಿಹೋಗಿತ್ತು ಅಂದ್ರೆ ಯಾವುದರದೂ ಗುರುತು ಸಿಗಲೇ ಇಲ್ಲ. ಕಾರಿನ ಡ್ರೈವರು “ಎಲ್ಲಿ ಹೋಗಬೇಕು ಸಾರ್, ಎಲ್ಲಿ ಹೋಗಬೇಕು ಅಂತಾ ಹೇಳಿದ್ರೆ ಯಾರನ್ನಾದ್ರೂ ಕೇಳ್ತೀನಿ…” ಅಂತಾನೇ ಇದ್ದ. ಆದರೆ ನಾನೇ ಹಟಮಾಡಿದೆ. ಆದರೆ ಎಷ್ಟು ಪ್ರಯತ್ನಿಸಿದರೂ ಯಾವುದರದೂ ಗುರುತು ಸಿಗಲಿಲ್ಲ; ಎಲ್ಲಿ ಇದ್ದೇನೆ ಎಂಬುದೇ ತಿಳಿಯಲಿಲ್ಲ. ನನಗೆ ನೆನಪಿರುವ ಯಾವುದೂ ಅಲ್ಲಿರಲಿಲ್ಲ. ಸಾಬಿ ಅಂಗಡಿ, ಆಟದ ಮೈದಾನ, ಮರಗಳು, ರಸ್ತೆಯ ಮೂಲೆಯಲ್ಲಿದ್ದ ದೊಡ್ಡ ಮನೆ, ರಸ್ತೆಯ ಮೊದಲಲ್ಲೇ ಇದ್ದ ದೊಡ್ಡ ಕಟ್ಟೆಯ ಬಾವಿ ಯಾವುದೂ ಸಿಗಲಿಲ್ಲ. ಇದರಲ್ಲಿ ಯಾವುದಾದರೂ ಒಂದು ಸಿಕ್ಕಿದ್ದರೂ ನನಗೆ ತಕ್ಷಣ ನೆಲೆ ಸಿಗತಿತ್ತು. ಹುಡುಕಿಹುಡುಕಿ ಕೊನೆಗೂ ಸಿಗದೇ ಡ್ರೈವರನಿಗೆ ಸ್ಕೂಲಿನ ಹೆಸರು ಹೇಳಿದೆ. ಅವನು ಯಾರನ್ನೋ ಕೇಳಿದ. ಎರಡು ಕ್ರಾಸುಗಳ ಆಚೆ ಸಿಕ್ಕಿತು. ಸ್ಕೂಲು ಸಿಕ್ಕ ಮೇಲೂ ನನಗೆ ಅದರ ಗುರುತು ಸಿಕ್ಕಲಿಲ್ಲ. ಅಲ್ಲಿದ್ದ ಮಾವಿನಮರ ಇರಲಿಲ್ಲ. ಅರಳೀ ಮರದ ಸುತ್ತಮುತ್ತ ಅಕ್ಕಪಕ್ಕ ಹಿಂದೆ ಮುಂದೆ ಮನೆಗಳು ಅಂಗಡಿಗಳು ಹುತ್ತುಗಟ್ಟಿದ ಹಾಗೆ ಹಬ್ಬಿದ್ದವು. ಮರದ ಕಾಂಡವೇ ಕಾಣ್ತಿರಲಿಲ್ಲ. ದೂರದಲ್ಲಿ ಮನೆಗಳ ಸೂರಿನೊಳಗಿನಿಂದಲೇ ಮರ ಉದ್ಭವಿಸಿದ ಹಾಗೆ ಅನಿಸುತ್ತಿತ್ತು. ಸ್ಕೂಲು ಬಿಲ್ಡಿಂಗ್ ಕೆಡವಿ ಹೊಸದಾಗಿ ಮೂರು ಮಹಡಿಯ ಕಟ್ಟಡ ಕಟ್ಟಿದ್ದರು. ಆ ಬಯಲಿನಲ್ಲಿ ಯಾವಯಾವುದೋ ದೊಡ್ಡ ಕಟ್ಟಡಗಳು ಬಂದಿದ್ದವು. ಹಾಗಾಗಿ ಶಾಲೆಗೆ ಆಟದ ಮೈದಾನವೇ ಇರಲಿಲ್ಲ. ಇದ್ದ ಸಣ್ಣ ನೆಲಕ್ಕೂ ಸಿಮೆಂಟ್ ಹಾಕಿದ್ದರು. ನಾವು ಬಯಲಲ್ಲಿ ಧೂಳು ಎಬ್ಬಿಸಿ ಆಡುತ್ತಿದ್ದದ್ದು, ಇರುವೆ ಹುತ್ತಗಳ ಮೇಲೆ ಉಚ್ಚೆ ಹೊಯ್ಯುತ್ತಿದ್ದದ್ದು ಎಲ್ಲಾ ಬೇರೊಂದು ಜಗತ್ತಿನಲ್ಲಿ ಅನಿಸಿಬಿಟ್ಟಿತು. ಆ ಭೌತಿಕ ಜಾಗವೇ ಭೂಮಂಡಲದಿಂದ ಮಾಯವಾಗಿಬಿಟ್ಟಿತ್ತು. ಶಾಲೆಯ ಮುಂದೆ ದೊಡ್ಡ ಬೋರ್ಡಿನ ಮೇಲೆ ಐಸಿಎಸ್‌ಇ ಸಿಲಬಸ್ಸಿನ ಕ್ಲಾಸುಗಳು ನಡೆಯುತ್ತವೆಂದು ಬಣ್ಣದಲ್ಲಿ ಬರೆದಿತ್ತು. ನನ್ನ ಬಾಲ್ಯದ ಒಂದು ತುಣುಕು ಅಳಿಸಿಹೋಗಿಬಿಟ್ಟಿತ್ತು… ನೀನು ಬದಲಾವಣೆ ಅಂದಾಗ, ಬೆಂಗಳೂರಿನ ವಿಷಯ ಎತ್ತಿದಾಗ ಇದೆಲ್ಲ ನೆನಪಾಯಿತು ನೋಡು…’
ಕೊನೆಕೊನೆಗೆ ಅವನ ಮಾತುಗಳಲ್ಲಿ ಅಳುತುಂಬಿದ ಹಾಗೆ ಅನಿಸಿತು. ಜ್ಯೋತಿರ್ಮೊಯಿಯ ಈ ಮುಖ ನನಗೆ ಗೊತ್ತೇ ಇರಲಿಲ್ಲ. ನನಗೆ ಏನು ಮಾತಾಡಬೇಕೋ ತೋಚಲಿಲ್ಲ.
ನಾನು ಸುಮ್ಮನಿದ್ದದ್ದು ನೋಡಿ ಅವನಿಗೆ ಏನನಿಸಿತೋ ಏನೋ. ಸ್ವಲ್ಪ ಪೆಚ್ಚು ನಗೆ ನಕ್ಕ. ಇನ್ನೆರಡು ಗುಟುಕು ಕುಡಿದ.
ಮೌನಾಚರಣೆಯ ಹಾಗೆ ಇಬ್ಬರೂ ಐದು ನಿಮಿಷ ಸುಮ್ಮನೇ ಇದ್ದೆವು. ನಂತರ ನಾನೇ ಮಾತಾಡಿದೆ. ‘ಬೇರೆ ವಿಷಯ ಹೇಳು. ಯಾರನ್ನು ಮದುವೆಯಾಗಿದ್ದೀ? ಮಕ್ಕಳು ಇದ್ದಾರಾ? ಇದ್ದರೆ ಎಷ್ಟು?’ ಎಂದು ಕೇಳಿದೆ.
ಅವನಿಗೆ ಹೊಸ ಹುರುಪು ಬಂದಂತಾಯಿತು.
‘ನನ್ನ ಹೆಂಡತಿ ಜಯಶ್ರೀ. ಹೋಮ್ ಮೇಕರ್. ಹಾಂ… ಶಾಪಿಂಗ್ ಮಾಡತಾಳೆ. ನನ್ನನ್ನ ನೋಡ್ಕೋತಾಳೆ. ಅವಳ ಅಪ್ಪ ಇಂಡಸ್ಟ್ರಿಯಲಿಸ್ಟ್. ದುಡ್ಡಿರೋರ ಮನೆಯವಳು. ಕಲ್ಕತ್ತಾದಲ್ಲಿ ಬೆಳೆದೋಳು. ಅವಳಿಗೆ ಮುಂಬೈ ಬೋರಾಗುತ್ತದಂತೆ. ಹಾಗಾಗಿ ಯಾವಾಗಲೂ ಏನೋ ಮಾಡತಾನೇ ಇರತಾಳೆ. ಸೋಶಿಯಲ್ ಸರ್ವೀಸ್. ಪ್ರತಿದಿನ ಕಲ್ಕತ್ತಾ ನೆನಪಿಸಿಕೋತಾನೇ ಇರತಾಳೆ. ಮತ್ತು ಭೂತಕಾಲದ ಆ ಕಲ್ಕತ್ತದ ನೆನಪಿನಲ್ಲಿಯೇ ಬದುಕುತ್ತಾಳೆ. ಪೇಂಟಿಂಗ್ಸ್ ಕೊಳ್ಳತಾಳೆ, ಮಾರತಾಳೆ. ಎಕ್ಸಿಬಿಶನ್ ಮಾಡತಾಳೆ. ಶೀ ಈಸ್ ಎ ಗ್ರೇಟ್ ವುಮನ್. ಟೈಮ್ಸ್ ಪೇಜ್ ಥ್ರೀನಲ್ಲಿ ಕೂಡ ಎರಡು ಸಲ ಕಾಣಿಸಿಕೊಂಡಿದಾಳೆ. ಯು ನೋ ವ್ಹೇರ್ ಐ ಮೆಟ್ ಹರ್? ಪೃಥ್ವಿ ಥಿಯೇಟರ್ ಹೊರಗಡೆ ಕ್ಯಾಂಟೀನಿನಲ್ಲಿ. ಅವಳಿಗೆ ಕಲಾಜಗತ್ತಿನ ಜನರ ಸಂಪರ್ಕ ಸ್ವಲ್ಪ ಜಾಸ್ತಿ. ನಿನಗೇ ಗೊತ್ತಲ್ಲ. ಪೇಂಟಿಗ್ ಮಾಡೋರು, ಥಿಯೇಟರ್‌ನವರು, ಬರೆಯೋರು ಎಲ್ಲಾ ಒಂದೇ ಗುಂಪು. ಅದು ಹೇಗೋ ಎಲ್ಲರಿಗೂ ಎಲ್ಲರೂ ಗೊತ್ತಿರುತ್ತಾರೆ… ನಮ್ಮ ಪ್ರೇಮದ ಹೊಸತರಲ್ಲಿ ನನಗೂ ಇದರಲ್ಲೆಲ್ಲ ಆಸಕ್ತಿ ಬಂತೂಂತ ಅಂದುಕೊಂಡಿದ್ದೆ. ಅಥವಾ ನಾನೇ ನಾಟಕ ಮಾಡತಾ ಇದ್ದೆನೋ, ಗೊತ್ತಿಲ್ಲ. ಆದರೆ ಅದು ಮುಂದುವರೀಲೇ ಇಲ್ಲ. ಯಾವ ಸಂಗೀತ ಕಾರ್ಯಕ್ರಮಕ್ಕೂ ವೇಳೆಗೆ ಸರಿಯಾಗಿ ಹೋಗಿ ತಲುಪಕ್ಕೆ ಆಗ್ತಿರಲಿಲ್ಲ. ಹೋದರೂ ಅರ್ಧಗಂಟೆಯೊಳಗೆ ಬೋರಾಗುತ್ತಿತ್ತು. ಅರ್ಥವೇ ಆಗ್ತಿರಲಿಲ್ಲ. ಮತ್ತೆ ಆ ಪೇಂಟಿಗ್ ಎಕ್ಸಿಬಿಶನ್‌ಗಳೋ… ನಿಜ ಹೇಳು ಅವುಗಳಲ್ಲಿ ಯಾವುದಾದರೂ ನಿನಗೆ ಅರ್ಥವಾಗಿದೆಯೇ? ಸ್ವಲ್ಪ ಈ ನಾಟಕಗಳೇ ಪರವಾಗಿಲ್ಲ. ಏನೋ ಚೂರು ಪಾರು ಕಥೆ ಇದ್ದರೆ ಹೇಗೋ ಸಹಿಸಿಕೋಬಹುದು. ಹಾಗೂ ಹೀಗೂ ಎರಡು ವರ್ಷ ಕಳೆದ ಮೇಲೆ ಅವಳು ನನ್ನ ಕರೆಯುವುದನ್ನೇ ನಿಲ್ಲಿಸಿದಳು. ನನಗೂ ಕರಿಯರ್ ಬಿಲ್ಡ್ ಮಾಡೋ ಹುಮ್ಮಸ್ಸು ಬಂತು. ಅಷ್ಟರಲ್ಲಿ ಮಗ ಹುಟ್ಟಿದ್ದ. ಇಲ್ಲವಾದರೆ ನಮ್ಮ ಮಧ್ಯೆ ಏನಾಗುತ್ತಿತ್ತೋ. ನಾನು ದುಡಿದು ದುಡಿದು ಮೇಲೆ ಬಂದರೂ ಅವಳಿಗೆ ಅದರ ಬಗ್ಗೆ ಕಿಮ್ಮತ್ತೇ ಇಲ್ಲ. ದುಡ್ಡು ಯಾಕೆ ಅಂತಾಳೆ. ಆದರೆ ದುಡ್ಡಿಲ್ಲದೇ ಏನಾಗತ್ತೆ? ಅವಳಿಗೂ ಗೊತ್ತಿಲ್ವೇ? ನಿನ್ನ ಅಪ್ಪ ಅದನ್ನೇ ಅಲ್ವೇ ಮಾಡಿದ್ದು ಅಂದರೆ ತನಗೆ ಅಪ್ಪನ ಬಗ್ಗೆ ಗೌರವಾನೇ ಇಲ್ಲಾ; ನೀನೂ ಅದೇ ಥರ ಆಗ್ತಾ ಇದೀಯಾ… ಅಂತಾಳೆ. ದಿನಾ ನಾವು ಜಗಳ ಮಾಡ್ತಾ ಮಾಡ್ತಾ ದೂರ ಹೋಗಿದ್ದೇವೆ. ಮಗ ಚಿಪ್ಸ್ ತಿನ್ನತಾ ಟೀವಿ ನೋಡತಾ ಬೆಳೀತಾ ಇದಾನೆ. ಆಟ ಆಡೋ ಅಂದ್ರೆ ಕಂಪ್ಯೂಟರ್ ಗೇಮ್ಸ್ ಆಡತಾನೆ.
ಒಂದು ಸುಖಸಂಸಾರಕ್ಕೆ ಇನ್ನೇನು ಬೇಕು? ಹೆಂಡತಿ ಜೊತೆ ಮಾತೇ ಇಲ್ಲ; ಮಗ ಮಾತು ಕೇಳಲ್ಲ, ಆಫೀಸಲ್ಲಿ ಸಿಕ್ಕಾಪಟ್ಟೆ ಕೆಲಸ, ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಏರತಾನೇ ಇದೆ ಆದರೆ ಅದರ ಬಗ್ಗೆ ಯಾರಿಗೂ ಕಿಮ್ಮತ್ತೇ ಇಲ್ಲ. ಎಲ್ಲಾ ಬದಲಾಗಿಬಿಟ್ಟಿದೆ. ಇಪ್ಪತ್ತು ವರ್ಷದ ಹಿಂದೆ ತೆಗೆದ ಫೋಟೋ ನೋಡಿದರೆ ಅದರಲ್ಲೂ ಅವಳು ನನ್ನ ಜೊತೆ ನಿಂತಿರೋ ರೀತಿಯಲ್ಲೇ ಪ್ರೀತಿ ಇಲ್ಲದೇ ಇರೋದು ಕಾಣಿಸ್ತಾ ಇದೆ. ಈಗ ಒಬ್ಬರನ್ನೊಬ್ಬರು ಅಸಹ್ಯಪಡಿಸಿಕೊಂಡು ಬಿಟ್ಟಿದೀವಿ.’
ಅಷ್ಟರಲ್ಲಿ ಅವನಿಗೊಂದು ಫೋನು ಬಂತು. ‘ಎಕ್ಸ್‌ಕ್ಯೂಸ್ ಮಿ’ ಅಂದು ಫೋನ್ ತಗೊಂಡ.
‘ಹಲೋ, ಯಾರು ಬೇಕು? ಹೌದು… ಹೌದು, ನಾನು ಫಣೀಶ್ ಮಾತಾಡೋದು… ನಾನು ಇಂಡೋನೇಶ್ಯಾದಲ್ಲಿದೀನಿ. ಬರೋದು ಮೂರು ದಿನ ಆಗತ್ತೆ. ಬಂದ ಮೇಲೆ ಮಾತಾಡೋಣ. ನನಗೆ ಆ ಪ್ರಾಪರ್ಟಿಲಿ ಇಂಟರೆಸ್ಟ್ ಇದೆ. ನಾನೇ ಬಂದು ಮಾತಾಡ್ತೀನಿ… ಓಕೆ… ಗುಡ್ ನೈಟ್…’
ಫಣೀಶ್? – ನನಗೆ ಅತ್ಯಾಶ್ಚರ್ಯವಾಯಿತು. ಇವನು ಜ್ಯೋತಿರ್ಮೊಯಿ ಅಲ್ಲ ಅಂತಾದರೆ ಇಷ್ಟು ಹೊತ್ತು ನಾನು ಕೇಳಿಸಿಕೊಂಡ ಕಥೆ ಯಾರದು? ನನಗೆ ಫಣೀಶ್ ಗೊತ್ತೇ ಇಲ್ಲವಲ್ಲಾ? ಇವನಿಗೆ ಹೇಳಿಬಿಡಲೇ – ಎಂದು ಯೋಚಿಸುವಷ್ಟರಲ್ಲಿ ಅವನು ಫೋನ್ ಮುಗಿಸಿ ಬಂದ.
‘ಹಾಂ ಏನು ಹೇಳ್ತಾ ಇದ್ದೆ. ಏನು ಹೇಳ್ತಾ ಇದ್ದೆ? ಹೋಗಲಿ ಬಿಡು. ಕೇಳಿಸ್ಕೊಳ್ಳೋದು ಮುಖ್ಯ. ಹೇಳಿಕೊಳ್ಳೋದಕ್ಕೆ ಜನಾ ಸಿಕ್ಕೋದು ಮುಖ್ಯ. ನಿನಗೊಂದು ವಿಚಿತ್ರ ಘಟನೆ ಹೇಳ್ತೇನೆ. ನಿನ್ನ ಕಥೆಯಲ್ಲಿ ಉಪಯೋಗಿಸಿಕೊಳ್ಳಬಹುದು, ಅಷ್ಟು ಮಜಾ ಇದೆ ಇದು… ಏನಾಯ್ತು ಗೊತ್ತಾ? ಎರಡು ತಿಂಗಳ ಹಿಂದೆ ಜನವರಿಯಲ್ಲಿ ನಾನು ಲಖನೌಗೆ ಹೊರಟಿದ್ದೆ. ಮುಂಬೈಯಿಂದ ಡೆಲ್ಲಿಗೆ ಹೋಗಿ ಅಲ್ಲಿಂದ ಫ್ಲೈಟ್ ಹಿಡೀಬೇಕಿತ್ತು. ಡೆಲ್ಲಿಗೆ ಹೋದರೆ ಸಿಕ್ಕಾಪಟ್ಟೆ ಮಂಜು. ಏರ್‌ಪೋರ್ಟ್ ತುಂಬಾ ಜನ. ಲಖನೌ ಫ್ಲೈಟ್ ಯಾವಾಗ ಹೋಗತ್ತೋ ಗೊತ್ತಿಲ್ಲ ಅಂದರು. ಸರಿ ಎಲ್ಲಾರನ್ನೂ ಕುರಿ ಮಂದೆ ಥರಾ ಏರ್‌ಪೋರ್ಟ್‌ಲ್ಲಿ ಒಂದು ಲೌಂಜಲ್ಲಿ ತುಂಬಿಸಿ ಕೂರಿಸಿದರು. ಆಗ ಬಂದಾ ನೋಡು. ಹಲ್ಲೋ, ಎಷ್ಟು ವರ್ಷ ಆಯ್ತು ನಿನ್ನನ್ನು ನೋಡಿ ಎಂದು ತಬ್ಬಿಕೊಂಡೇಬಿಟ್ಟ. ನೋಡಿದರೆ ನನ್ನ ಕ್ಲಾಸ್‌ಮೇಟ್ ಬಿಸ್ವಾಸ್ ಥರಾ ಇದ್ದ. ಅವನು ಅಷ್ಟು ವಿಶ್ವಾಸ ತೋರಿಸಿದಾಗ ಹೆಸರು ಹೇಗೆ ಕೇಳೋದು? ಸುತ್ತಿ ಬಳಸಿ ಯಾರಯಾರದೋ ವಿಷಯ ಮಾತನಾಡಿದೆವು. ನಾಗೇಶ್ ಗೊತ್ತಾ ಅಂದರೆ ಯಾರು ಸೀನಿಯರ್ ಕ್ಲಾಸಲ್ಲಿ ಜಮುನಾ ಜೊತೆ ಓಡಾಡ್ತಿದ್ದನಲ್ಲ ಅನ್ನೋದೇ? ಈ ಜಮುನಾ ಅನ್ನೋಳು ಇದ್ದಳೋ ಇಲ್ಲವೋ ಅನ್ನೋದೂ ಮರೆತುಹೋಗಿತ್ತು. ಅಷ್ಟಕ್ಕೂ ನಾಗೇಶ ಓಡಾಡಿದ್ರೂ ಓಡಾಡಿರಬಹುದು. ಸರಿ, ಪ್ರೊಫೆಸರ್ ರಾವ್ ಹೇಗಿದಾರೆ ಅಂದೆ. ರಿಟೈರ್ ಆದ ಪಾಪಿ ಅಂದ. ರಾವ್ ಅನ್ನೋ ಹೆಸರು ಎಷ್ಟು ಕಾಮನ್ ಅಂದರೆ ಪ್ರತಿ ಇನಸ್ಟಿಟ್ಯೂಟಲ್ಲೂ ಒಬ್ಬ ಇದ್ದರೂ ಇರಬಹುದು. ಇನ್ನೇನು ಮಾಡಿ ಅವನ ಹೆಸರು ಪತ್ತೆ ಮಾಡೋದು ಗೊತ್ತಾಗಲಿಲ್ಲ. ಮನೆಗೆ ಬಾ ಅಂತ ಒತ್ತಾಯ ಮಾಡಿದ. ಮಾತಾಡತಾ ನನ್ನನ್ನ ಸುಂದರ್ ಅಂತ ಕರೆಯೋದಕ್ಕೆ ಶುರುಮಾಡಿದ. ಎಂಥ ಸನ್ನಿವೇಶ ನೋಡು. ನನಗೆ ಅವನ ಹೆಸರು ಗೊತ್ತಿಲ್ಲ. ಅದರ ಮೇಲೆ ನಾನೂ ಬೇರೆ ಯಾರೋ ಅಂತ ತಿಳಕೊಂಡು ಮಾತನಾಡಿಸ್ತಾ ಇದಾನೆ. ಆದರೂ ಒಂದು ಗಂಟೆ ಕಾಲ ನಾವು ಸುಸಂಬದ್ಧವಾಗೇ ಮಾತನಾಡಿದ್ದೆವು. ಅವನಿಗೆ ತಾನು ತಪ್ಪು ತಿಳಕೊಂಡಿದ್ದೂ ಗೊತ್ತಾಗಿಲ್ಲ. ನನಗೆ ಗೊತ್ತಾದರೂ ತಪ್ಪಿಸಿಕೊಳ್ಳೋ ಹಾಗಿಲ್ಲ. ಈಗ ಏನು ಮಾಡಬೇಕು? ನನ್ನ ಅದೃಷ್ಟಕ್ಕೆ ಲಖನೋ ಫ್ಲೈಟ್ ಅನೌನ್ಸ್ ಆಯಿತು. ಬಚಾವಾದೆ.
ಆದರೆ, ಯೋಚನೆ ಮಾಡತಾ ಇದ್ದ ಹಾಗೆ ಯಾಕೋ ಬೇಜಾರಾಗಿ ಬಿಡ್ತು. ನನ್ನ ಜೀವನ ಎಷ್ಟೊಂದು ಕಾಮನ್ ಆಗಿದೆ ಅನಿಸ್ತು. ಒಂದಿಷ್ಟು ವರ್ಷ ದಾಟಿ ಮುಂದೆ ಬಂದರೆ ನೆನಪಿರೋದು ಸದ್ಯದ ಸಂಗತಿಗಳು ಮಾತ್ರ. ಒಂದೆರಡು ಹೆಸರು ಬಿಟ್ಟರೆ ಹೆಚ್ಚುಕಮ್ಮಿ ಎಲ್ಲಾ ಇನ್ನೊಬ್ಬರ ಜೀವನದ ಥರಾನೇ. ಎಲ್ಲಾ ಅದಲುಬದಲು ಮಾಡಿದರೂ ವ್ಯತ್ಯಾಸವಾಗಲ್ಲ ಅನಿಸಿಬಿಟ್ಟಿತು… ಹಾಗೆ ಅನಿಸಿದಾಗ ನನ್ನ ಶಾಲೆಯ ಟೀಚರ್ ನೆನಪಾದರು. ನನ್ನನ್ನು ಬಹಳ ಪ್ರೋತ್ಸಾಹಿಸೋ ಡ್ರಾಯಿಂಗ್ ಟೀಚರ್. ಜೀವನದಲ್ಲಿ ಜ್ಞಾನದ ಜೊತೆ ಅಭಿವ್ಯಕ್ತಿಯ ಭಾಷೆಯನ್ನೂ ಕಲೀಬೇಕು. ಚಿತ್ರ ಬಿಡಿಸಿ, ಕವಿತೆ ಬರೀರಿ, ಹಾಡು ಹಾಡಿ… ನಿಮಗೇ ಸ್ವಂತದ್ದು ಅನ್ನೋದು ಯಾವುದು ಅಂತ ಕಂಡುಕೊಳ್ಳಿ… ಹೀಗೆಲ್ಲ ಹೇಳುತ್ತಿದ್ದರು… ಆದರೆ ಪರೀಕ್ಷೆಗೆ ಉಪಯೋಗವಿಲ್ಲದವರ ಮಾತನ್ನು ಯಾರು ಕೇಳತಾರೆ? ನಾವೆಲ್ಲ ಅವರನ್ನು ಹಾಸ್ಯ ಮಾಡತಾ ಇದ್ವಿ… ಆದರೆ ಇತ್ತೀಚೆಗೆ ನನ್ನಲ್ಲೇನೇನೋ ವಿಚಾರಗಳು ಬರ್‍ತಾ ಇವೆ. ಕೊಳ್ಳುವ ಸುಖಕ್ಕಲ್ಲದೇ, ಯಾವುದೇ ವಸ್ತುವನ್ನೂ ಯಾಕೆ ಕೊಳ್ಳಬೇಕು ಅಂತ ಪ್ರಶ್ನಿಸಿಕೊಂಡರೆ ಉತ್ತರವೇ ಸಿಗುವುದಿಲ್ಲ. ಆಗ ಅವರ ನೆನಪಾಯಿತು. ಅವರ ಮಾತಿನಲ್ಲಿ ಏನೋ ಘನವಾದ್ದು ಇದೆ ಅಂತ ಅನಿಸಿತು. ಅವರನ್ನು ಹುಡುಕಿಕೊಂಡೇ ನಾನು ಬೆಂಗಳೂರಿಗೆ ಹೋಗಿದ್ದು… ಇದನ್ನು ಈತನಕ ಯಾರಿಗೂ ಹೇಳಿಲ್ಲ. ನನ್ನ ಹೆಂಡತಿಗೂ ಹೇಳಿಲ್ಲ…’
ಈಗಂತೂ ನನ್ನ ಬಾಯಿ ಕಟ್ಟಿತು. ನನಗೆ ಗೊತ್ತಿರುವ ಜ್ಯೋತಿರ್ಮೊಯಿ ಬೇರೆ ಯಾರೋ. ಈ ಫಣೀಶ್ ಯಾರೋ ಏನೋ.
ಮತ್ತೆ ಅವನ ಮೊಬೈಲ್ ಫೋನ್ ಕಿರುಚಿತು. ಎತ್ತಿ ನೋಡಿ ಹೇಳಿದ. ‘ನನ್ನ ಹೆಂಡತಿ… ಎಕ್ಸ್‌ಕ್ಯೂಸ್ ಮಿ’
ಈ ಕತೆಗೆ ನಿಜವಾದ ತಿರುವು ಬಂದದ್ದು ಈಗ. ಅವನ ಮಾತು ಕೇಳಿಸಿಕೊಂಡ ಮೇಲೆ.
‘ಹೌದು ನಾಡಿದ್ದೇ ಬರ್‍ತೀನಿ. ನೀನು ಹೋಗು, ನಾನು ಖಂಡಿತಾ ಬರ್‍ತೀನಿ. ಈಗ ಯಾರ ಜೊತೆ ಕೂತಿದ್ದೀನಿ ಗೊತ್ತಾ? ರತನ್ ಕಾವಲೇ. ದಿ ಫೇಮಸ್ ರೈಟರ್ ರತನ್ ಕಾವಲೇ. ಬಂದ ಮೇಲೆ ಎಲ್ಲಾ ಹೇಳ್ತೀನಿ… ಹೌದು ಹೌದು ಅವನೇ ಅವನೇ… ಓಕೆ ಗುಡ್‌ನೈಟ್…’
ಈಗ ಇನ್ನೂ ಫಜೀತಿಯಾಯಿತು. ನನ್ನ ಹೆಸರನ್ನು ರತನ್ ಕಾವಲೇ ಮಾಡಿಬಿಟ್ಟನಲ್ಲ. ನಾನು ರತನ್ ಕಾವಲೇ ಅಲ್ಲ ಅಂದರೆ ಈ ಇಡೀ ಸಂಜೆ ಹಾಳಾಗಿಹೋಗುತ್ತದೆ. ಸುಮ್ಮನೇ ಎರಡು ಡ್ರಿಂಕ್ ಹಾಕಿ ಹೋಗಿಬಿಡೋಣ ಅಂದುಕೊಂಡೆ. ಒಂದೋ ನಾನು ರತನ್ ಕಾವಲೇಯ ವೇಷ ಹಾಕಬೇಕಿತ್ತು. ಅವನು ಕೇಳುವ ಪ್ರಶ್ನೆಗಳಿಗೆ ಏನೋ ಉತ್ತರ ಹೇಳಿ ಬಚಾವಾಗಬಹುದಿತ್ತು. ಅಥವಾ ನಾನು ರತನ್ ಕಾವಲೇ ಅಲ್ಲ ಅಂತ ಹೇಳಿ, ‘ಹೋಗಲಿ ಬಿಡು ಈ ರೀತಿಯಿಂದಲಾದರೂ ನಮ್ಮ ಪರಿಚಯವಾಯಿತು’ ಎಂದು ಹೇಳಬಹುದಿತ್ತು. ಆದರೆ, ಆಗ ನಾವು ಮಾತಾಡುವ ಯಾವುದೂ ಬೇರೆಯಾಗುತ್ತಿರಲಿಲ್ಲ. ಹೆಸರು ಬೇರೆಯಾಗಿರುತ್ತಿತ್ತು ಅಷ್ಟೇ. ಅಥವಾ ಪ್ರತ್ಯೇಕ ಅನಿಸುವಂಥ ಸಂಗತಿಗಳನ್ನು ನಮ್ಮ ಜೀವನದಲ್ಲಿ ನಾವು ಗಮನಿಸಲೇ ಇಲ್ಲವೇ? ಯಾವ ದಾರಿ ಆಯ್ದುಕೊಂಡರೂ ವ್ಯತ್ಯಾಸವಾಗುವುದಿಲ್ಲ ಅನಿಸಿ ನಾನು ರತನ ಕಾವಲೇ ಆದೆ.
ಅವನು ಖುಷಿಯಲ್ಲಿದ್ದ. ‘ನನ್ನ ಹೆಂಡತಿಗೆ ನಾನು ಈಗ ನಿನ್ನ ಜೊತೆ ಇದ್ದೇನೆಂದು ತಿಳಿದು ಸಂತೋಷವಾಯಿತು. ಈಗ ನನ್ನ ಬಗ್ಗೆ ಕೇಳಿದ್ದು ಸಾಕು. ನಿನ್ನ ಬಗ್ಗೆ ಹೇಳು. ನಿನ್ನ ಹೆಂಡತಿಯ ಹೆಸರೇನು? ಮಕ್ಕಳು ಎಷ್ಟು?’
ನಾನು ಏನು ಹೇಳಲಿ? ಹೆಂಡತಿಯ ಹೆಸರು ಶಾಲಿನಿಯೆನ್ನಲೇ? ಅಥವಾ ಬಯಸಿ ಸಿಗದ ಕಾಮಿನಿಯ ಹೆಸರು ಹೇಳಲೇ?
ಹೇಗೂ ರತನ ಕಾವಲೇ ಆಗಿಬಿಟ್ಟಿದೀನಲ್ಲ. ಮುಂದುವರಿಸೋಣ ಅನ್ನಿಸಿತು.
‘ಅವಳ ಹೆಸರು ಕಾಮಿನಿ’ ಅಂದೆ.
ಹಾಗೆ ಅಂದೊಡನೆ ಮಾತಿಗೆ ಒಂದು ಬಗೆಯ ಸ್ವಾತಂತ್ರ್ಯ ಸಿಕ್ಕಿದಂತೆನಿಸಿತು. ಕಾಮಿನಿಯ ಬಗ್ಗೆ ಯೋಚಿಸುತ್ತ ಹೋದೆ. ಅವಳನ್ನು ನೆನಪಿಸಿಕೊಂಡೆ. ಅವನು ನನ್ನ ಗ್ಲಾಸು ತುಂಬಿಸಿದ.
ಕಾಮಿನಿ… ಅವಳ ಬಗ್ಗೆ ಏನು ಹೇಳೋದು ಅಂತ ಗೊತ್ತಾಗ್ಲಿಲ್ಲ. ಇತ್ತೀಚೆಗೆ ಅವಳ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ… ಯಾವುದರಲ್ಲಿ ಆಸಕ್ತಿಯಿತ್ತು ಅವಳಿಗೆ? ಸ್ವೆಟರ್ ಹೆಣೆಯೋದರಲ್ಲಿ… ನಾನು ಸ್ಟೂಡೆಂಟ್ ಆಗಿದ್ದಾಗಲೇ ಒಂದು ಸ್ವೆಟರ್ ಹೆಣೆದು ಕೊಟ್ಟಿದ್ದಳು… ಆಮೇಲೆ ಏನಾಯ್ತು? ನಮ್ಮ ಮದುವೆಯಾಯ್ತು. ಮತ್ತೇನಾಯ್ತು? ಮಗು ಆಯ್ತು. ಗಂಡು ಮಗು. ಆಮೇಲೆ? ಆಮೇಲೆ ನಾನು ನಮ್ಮ ಕಂಪನಿಯಲ್ಲಿ ಮೇಲೆ ಮೇಲೆ ಏರಿದೆ. ಅವಳು ಶಿ ಲುಕಡ್ ಆಫ್ಟರ್ ಮಿ… ಆಮೇಲೆ? ಸ್ವೆಟರ್ ಹೆಣೆಯೋದು ಯಾರಿಗೆ ಬೇಕಾಗಿದೆ… ಅದೇನು ಮಹಾವಿದ್ಯೆಯೇ? ಆಮೇಲೆ ಎಲ್ಲಾ ಇದೇ ಥರ. ಶಾಲಿನಿ ಜೊತೆ ಇದ್ದ ಹಾಗೇ. ಯಾಕೋ ಈ ಹೊಸ ಕತೆಯಲ್ಲಿ ಸ್ವಾರಸ್ಯವಾಗಿರೋದು ಏನೂ ಹೊಳೀತಾನೇ ಇಲ್ಲ ಅನಿಸಿತು.
ಅವನು ನಾನು ಮುಂದೇನು ಹೇಳ್ತೀನೋ ಎಂದು ಕಾಯುತ್ತ ನಡುನಡುವೆ ಕುಡಿಯುತ್ತ ಇದ್ದ. ಅವನ ಅಪೇಕ್ಷೆಯನ್ನು ತಣಿಸಲು ಏನಾದರೂ ಮಾತಾಡುವ ಒತ್ತಾಯ ನನ್ನ ಮೇಲಿತ್ತು.
‘ಮನೆ ನಡೆಸೋದೇ ಅವಳು. ಇಲ್ಲವಾದರೆ ನನ್ನ ಕೈಲಿ ಆಗ್ತಿರಲಿಲ್ಲ…’ ಅಂದೆ.
‘ನಿಜ ನಿಜ. ಎಲ್ಲಾ ಕಡೆ ಒಂದೇ ಥರ’ ಅಂದ.
ಒಮ್ಮೆಲೇ ನಮಗೆ ಮಾತಿಗೆ ವಿಷಯಗಳೇ ಇಲ್ಲದ ಹಾಗಾಯಿತು.
‘ಇನ್ನೊಂದು ಡ್ರಿಂಕ್’ ಅಂದ. ಹೊರಡ್ತೇನೆ ಅಂತ ಎದ್ದೇ ಬಿಟ್ಟೆ.
‘ಸಾರಿ… ನನಗೆ ಸ್ವಲ್ಪ ಜಾಸ್ತಿ ಆಯಿತು. ಐ ಕಾಂಟ್ ವಾಕ್… ನಾಳೆ ಮುಂಜಾನೆ ನಾನು ಹೊರಡಬೇಕಲ್ಲ…’ ಅಂದ.
‘ಗುಡ್ ನೈಟ್…’
‘ನನ್ನ ನಂಬರು ತಗೋ. ಕಾಲ್ ಮಿ…’
ಬಾಗಿಲವರೆಗೂ ಬಂದ. ಹೊರಡುವಾಗ ನನ್ನ ಹೆಗಲ ಮೇಲೆ ಕೈಯಿಟ್ಟು, ‘ನಾನೊಂದು ಸುಳ್ಳು ಹೇಳಿದೆ ನಿನಗೆ… ಕ್ಷಮಿಸು’ ಅಂದ.
‘ಪರವಾಗಿಲ್ಲ ಬಿಡು. ನಾನೂ ಎಷ್ಟೋ ಹೇಳಿದೀನಿ’
‘ಅಲ್ಲ… ದೊಡ್ಡ ಸುಳ್ಳು…’
‘ಏನು?’
‘ನಾನು ಫಣೀಶ್ ಅಲ್ಲ.’
‘ನನಗೆ ಗೊತ್ತು’
‘ಅದು ಹೇಗೆ?’
‘ಹೇಗೋ ಗೊತ್ತು. ಹೋಗಲಿ ಬಿಡು… ಲೆಟ್ ಇಟ್ ಬಿ…’
‘ಹಂ’
‘ನಾನು ಹೇಳಲಾ?’
‘ಏನು?’
‘ನಾನೂ ರತನ ಕಾವಲೇ ಅಲ್ಲ.’
‘ಅರೆ, ಹೂ ಆರ್ ಯೂ?’ ಅಂದ.
ನಾನು ಹೇಳಲಿಲ್ಲ.
ಸುಮ್ಮನೇ ನಕ್ಕು ಹೊರಟುಬಿಟ್ಟೆ.
ಹದಿನಾರನೇ ಮಹಡಿಯ ಆ ಉದ್ದ ಕಾರಿಡಾರಲ್ಲಿ ಎರಡೂ ಪಕ್ಕ ಸಾಲುಸಾಲು ಕೋಣೆಗಳು. ನಂಬರೊಂದನ್ನು ಬಿಟ್ಟರೆ ಒಂದೇ ಥರ ಇದ್ದ ಆ ಮುಚ್ಚಿದ ಬಾಗಿಲುಗಳ ಎದುರು ಮಧ್ಯರಾತ್ರಿಯ ವೇಳೆ ನಡೆಯುವುದೊಂದು ವಿಚಿತ್ರ ಅನುಭವ. ನನ್ನ ಹಿಂದಿನಿಂದ ಅವನು ಕೂಗಿ ಕೇಳಿದ್ದು ಕೇಳಿಸಿತು:
ಹೂ ಆರ್ ಯೂ?
ಹೂ ಆರ್ ಯೂ?
ನಾನು ಅವನ ಮಾತು ಕಿವಿಗೆ ಬೀಳದವನ ಹಾಗೆ, ಹಿಂತಿರುಗಿ ನೋಡದೇ ಸರಸರ ನಡೆದುಬಿಟ್ಟೆ. ಅವನ ದನಿ ಮತ್ತೆ ಕೇಳಿಸಿತು.
ಹೂ ಆರ್ ಯೂ? ಬಾಸ್ಟರ್ಡ್…