ನೂರ ಐವತ್ತರ ಸಂಭ್ರಮದಲ್ಲಿ ಚುರಮುರಿ ವಿರಚಿತ ‘ಶಾಕುಂತಲ ನಾಟಕವು’

ಆಧುನಿಕ ಕನ್ನಡ ವಾಙ್ಮಯ ಶ್ರೀಮಂತವಾಗಲು, ಸಮೃದ್ಧವಾಗಲು ಅನುವಾದವೂ ಕಾರಣವಾಗಿದೆ. ಹೊಸಗನ್ನಡ ಸಾಹಿತ್ಯ ಆರಂಭವಾದುದೇ ಅನುವಾದದ ಮೂಲಕ. ಸಂಸ್ಕೃತ, ಮರಾಠಿ, ಬಂಗಾಳಿ ಹಾಗೂ ಇಂಗ್ಲಿಷ್ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಗೊಳಿಸುವ ಕೆಲಸ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಿಂದ ಆರಂಭವಾದುದು ಚಾರಿತ್ರಿಕ ಸತ್ಯ. ಜಗತ್ತಿನ ಎಲ್ಲ ವಿದ್ಯಮಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅನುವಾದ ನಮ್ಮ ನೆರವಿಗೆ ಬಂದಿದೆ. ಕಾಳಿದಾಸನ ಶಾಕುಂತಲ ನಾಟಕವನ್ನು ಮೊತ್ತಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಮುಂಬೈ ಕನ್ನಡಿಗ ಚುರಮುರಿ ಶೇಷಗಿರಿ ರಾಯರಿಗೆ ಸಲ್ಲುತ್ತದೆ.

ಕಾಳಿದಾಸ ಭಾರತೀಯ ಸಾಹಿತ್ಯದ ಧ್ರುವತಾರೆ, ಮೇರು ಪ್ರತಿಭೆ. ಅಭಿಜ್ಞಾನ – ಶಾಕುಂತಲ ಅವನ ಶ್ರೇಷ್ಠ ನಾಟಕ ಕೃತಿ. ಕಾಳಿದಾಸನ ನಾಟಕವನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ ನಾಂದಿ ಹಾಡಿದವರು ಚುರಮುರಿ ಶೇಷಗಿರಿರಾಯರು. ಮುಂಬೈಯಲ್ಲಿ ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬಹುಭಾಷಾ ಸಂವೇದನೆಯನ್ನು ಹೊಂದಿದ್ದ ಉತ್ಸಾಹಿ ಲೇಖಕರಾಗಿ ಹೆಸರು ಮಾಡಿದವರು. 1869ರಲ್ಲಿ ಚುರಮುರಿಯವರು ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು. 1870ರಲ್ಲಿ ಅದು ಮುಂಬೈನ ಬೈಖಲಾದಲ್ಲಿದ್ದ ಮುಂಬೈ ಎಜುಕೇಶನ್ ಸೊಸೈಟಿಯಲ್ಲಿ ಮುದ್ರಣಗೊಂಡು ಪ್ರಕಟವಾಯಿತು. ಹಲವು ದೃಷ್ಟಿಗಳಿಂದ ಚುರಮುರಿ ವಿರಚಿತ ಶಾಕುಂತಲ ನಾಟಕವು ಒಂದು ಐತಿಹಾಸಿಕ ಕೃತಿ. ಸಿಂಗಾರಾರ್ಯನ ‘ಮಿತ್ರಾವಿಂದಾಗೋವಿಂದ’ ಕನ್ನಡದ ಮೊದಲ ನಾಟಕ ಎಂಬ ಅಭಿಪ್ರಾಯವಿದೆ. ಆದರೆ ಆ ನಾಟಕ ಪದ್ಯರೂಪದಲ್ಲಿದೆ. ಹೀಗಾಗಿ ನಾಟಕ ರೂಪದಲ್ಲಿ ಕಾಣಸಿಗುವ ಮೊದಲ ಕೃತಿ ಚುರಮುರಿ ಅವರ ಶಾಕುಂತಲ. ಇದಾದ ಹತ್ತು ವರ್ಷಗಳ ಬಳಿಕ ಮೈಸೂರಿನ ಬಸವಪ್ಪ ಶಾಸ್ತ್ರಿಗಳು(1880) ಶಾಕುಂತಲ ನಾಟಕವನ್ನು ಅನುವಾದ ಮಾಡಿದರು. ಮೊದಲು  ಅನುವಾದವಾಗಿ ಪ್ರಕಟವಾದ ಕನ್ನಡ ಶಾಕುಂತಲ ನಾಟಕಕ್ಕೆ ಈಗ ನೂರೈವತ್ತರ ಸಂಭ್ರಮ(1870-2020). ಚುರಮುರಿ ಶೇಷಗಿರಿರಾಯರ ಶಾಕುಂತಲ ನಾಟಕ ಅವರ ಜೀವಿತಾವಧಿಯಲ್ಲಿಯೇ 1882ರಲ್ಲಿ ಧಾರವಾಡದಲ್ಲಿ ಮರು ಮುದ್ರಣವಾಯಿತು. ಉತ್ತರ ಕರ್ನಾಟಕದ ಶೈಲಿಯ ಕನ್ನಡ, ಈ ನಾಟಕದಲ್ಲಿ ಬಳಕೆಯಾಗಿರುವುದರಿಂದ ಅದು ಬಹುಬೇಗ ಜನಪ್ರಿಯವಾಗಿ 1894 ಹಾಗೂ 1938ರಲ್ಲಿ ಮತ್ತೆ ಬೆಳಕು ಕಂಡಿತು. 1934ರಲ್ಲಿ ಪ್ರಕಟವಾದ ಶಾಕುಂತಲ ನಾಟಕಕ್ಕೆ ಖ್ಯಾತ ಲೇಖಕ ಮುದವೀಡು ಕೃಷ್ಣರಾಯರು ಸುದೀರ್ಘವಾದ ಪ್ರಸ್ತಾವನೆಯನ್ನು ಬರೆದು ಈ ನಾಟಕದ ಆಯಾಮ ಹಾಗೂ ಅನನ್ಯತೆಯನ್ನು ತೆರೆದಿಟ್ಟಿದ್ದಾರೆ. ಅದು ಹೀಗಿದೆ. ”ಆಗ ಸುಸಂಸ್ಕೃತರ ಮನೆ ಮನೆಗಳಲ್ಲಿ ಚುರುಮುರಿಯವರ ಶಾಕುಂತಲ ಪುಸ್ತಕವು ನೋಡಲಿಕ್ಕೆ ದೊರೆಯುತ್ತಿತ್ತು. ಗೌರಿ-ಗಂಗೆಯರ ಆರತಿಯ ಪದಗಳಂತೆ ‘ಪತಿಯ ಮಂದಿರಕೆ ನೀ ಪೋದ ಮ್ಯಾಲಿನಿತು ಪದ್ಧತಿಯಿಂದ ನಡೆಯಬೇಕಮ್ಮ ಕೇಳು’ ಎಂಬುದಾಗಿ ಕಣ್ವ ಋಷಿಗಳು ಶಕುಂತಲೆಗೆ ಮಾಡಿದ ಉಪದೇಶದ ಪದ್ಯವು ಸುಶಿಕ್ಷಿತ ಪ್ರೌಢ ಗೃಹಿಣಿಯು ಬಾಯಿಂದ  ಕೇಳಲು ದೊರೆಯುತ್ತಿತ್ತು. ಸಿರಿವಂತರ ಉಲ್ಲಾಸ ಕೂಟಗಳಲ್ಲಿ ಸಂಗೀತ ಸಮಾರಂಭಗಳಲ್ಲಿ ಶಾಕುಂತಲದ ಪದ್ಯಗಳನ್ನು ಗಾಯಕರಿಂದ ಹೇಳಿಸಿ ಕೇಳಿ ಸಂತೋಷಪಟ್ಟು ತಲೆದೂಗುವ ತರುಣ ಸವಿಗಾರರ ತಂಡಗಳು ಈ ಭಾಗದಲ್ಲೆಲ್ಲ ಕಣ್ಣಿಗೆ ಬೀಳುತ್ತಿದ್ದವು. ಮುಂಜಿ ಮದುವೆಗಳ ಮಂಗಲ ಪ್ರಸಂಗದಲ್ಲಾಗಲಿ, ವಸಂತೋತ್ಸವದ ಹಂದರದಲ್ಲಾಗಲಿ ನಡೆಯುತ್ತಿದ್ದ ಗಾಯನ, ಕೀರ್ತನ ಪ್ರಸಂಗಗಳಲ್ಲಿ, ‘ಬಾ ಬಿಡಿಸೋ ಮೋಹನ್ನ ಆಯಾಸವನು ಪಡಬ್ಯಾಡಿ ಚುಂಬಿಸಲಿಲ್ಲ ಚೆಲ್ವ ಸಂಧಿಯೊಳು’ ಮೊದಲಾದ ಪದಗಳನ್ನು ಸುಸ್ವರವಾಗಿ ಸರಾಗವಾಗಿ ಪಾಡುವ ಸರಸಜಾಕ್ಷಿಯರನ್ನು ನೋಡಿ ರಸಭಾವಗಳನ್ನು ಕುಶಲತೆಯಿಂದ ವಿಶದಪಡಿಸುವ ಅವರ ಹಾಡುಗಾರಿಕೆಯನ್ನು ಕೇಳಿ ಬೆರಗಾಗಿ ಮೈಮರೆತು ಕುಳಿತಂಥ ಅನೇಕ ಪ್ರಸಂಗಗಳು ನನ್ನ ಸ್ವಂತ ಅನುಭವಕ್ಕೆ ಬಂದುಹೋಗಿವೆ. ಜಯದೇವ ಕವಿಯ ‘ಗೀತಗೋವಿಂದ’ದ ಒಂದೆರಡು ಅಷ್ಟಪದಿಗಳನ್ನೂ ಶಾಕುಂತಲದೊಳಗಿನ ಒಂದೆರಡು ಪದ್ಯಗಳನ್ನೂ ಗಾಯಕ ಗಾಯಕಿಯರಿಂದ ಹೇಳಿಸಿ ಕೇಳದೇ ಯಾವ ಸಂಗೀತ ಸಮ್ಮೇಳನವೂ ಬಹುಶ: ಕೊನೆಗಾಣುತ್ತಿರಲಿಲ್ಲ” ಎಂಬೀ ಮಾತುಗಳು ಈ ಕೃತಿಯ ಜನಪ್ರಿಯತೆಗೆ ಸಾಕ್ಷಿಯಾಗಿವೆ.

ಮೊದಲ ಬಾರಿಗೆ ಕನ್ನಡದಲ್ಲಿ ನಾಟಕರೂಪವಾಗಿ ಪರಿವರ್ತಿಸಲ್ಪಟ್ಟ ಕೃತಿ ಎಂದರೆ ಚುರಮುರಿ ಅವರ ಶಾಕುಂತಲ ನಾಟಕವು, ”ಕನ್ನಡ ನಾಟಕ ಸಾಹಿತ್ಯ ಮೊದಲೇ ವಿರಳವಾಗಿರುವಾಗ 1870ರಲ್ಲಿ ಮುಂಬೈಯಲ್ಲಿ ಒಬ್ಬ ಉತ್ತರ ಕರ್ನಾಟಕದ ಕನ್ನಡಿಗ ಕನ್ನಡಕ್ಕೆ ಪ್ರಥಮ ಅನುವಾದದ ಕಾಣಿಕೆಯೆನ್ನುವ ಕನ್ನಡ ಶಾಕುಂತಲವು ಪುಸ್ತಕರೂಪದಲ್ಲಿ ಪ್ರಕಟಗೊಂಡು ಕನ್ನಡ  ನಾಟಕ ಸಾಹಿತ್ಯಕ್ಕೆ ರಂಗಭೂಮಿಗೆ ಎಂತಹ ಮೌಲಿಕವಾದ ಕೊಡುಗೆಯನ್ನು  ಕನ್ನಡ ರಂಗ ಸರಸ್ವತಿಗೆ ತೊಡಿಗೆಯಾಗಿ ನೀಡಿದ್ದಾರಲ್ಲ ಎಂಬುದನ್ನು ನೆನೆದರೆ ಕನ್ನಡಿಗರ ಮೈಯುಬ್ಬಬೇಕು” ಎಂದು ಹಿರಿಯ ಸಾಹಿತಿ ಎನ್ಕೆ ಕುಲಕರ್ಣಿ ಅವರು ಅಭಿಪ್ರಾಯ ಪಟ್ಟಿದ್ದಾರೆ. 

ಮರಾಠಿ ರಂಗಭೂಮಿಗೆ ಜನ್ಮವಿತ್ತ ಶಾಕುಂತಲ :

ಮುಂಬೈಯಲ್ಲಿ ಇದ್ದ ಚುರಮುರಿ ಅವರು ಮರಾಠಿ ಭಾಷೆಯಲ್ಲಿಯೂ ಸಾಕಷ್ಟು ಕೃಷಿ ಮಾಡಿದವರು. ಚುರಮುರಿ ಅವರ ಅನುವಾದಿತ ನಾಟಕವನ್ನು ಓದಿಸಿಕೊಂಡು ಕೇಳಿ ಸಂತೋಷಪಟ್ಟ ಮರಾಠಿ ಲೇಖಕ ಅಣ್ಣಾ ಕಿರ್ಲೋಸ್ಕರ್ ಅವರು ಇದೇ ಮಾದರಿಯಲ್ಲಿ ಸಂಗೀತ ಶಾಕುಂತಲ ಎಂಬ ಹೆಸರಿನ ನಾಟಕವನ್ನು ಬರೆದರು. ಅದು ಪ್ರಕಟವಾಗಿ ಮಹಾರಾಷ್ಟ್ರದ ತುಂಬೆಲ್ಲ ಜನಪ್ರಿಯವಾಯಿತು. ಈ ಮೂಲಕ ಅಣ್ಣಾ ಕಿರ್ಲೋಸ್ಕರ್ ‘ಮರಾಠಿ ಸಂಗೀತ ನಾಟಕದ ಪಿತಾಮಹ’ ಎಂಬ ಹೊಗಳಿಕೆಗೂ ಭಾಜನರಾದರು. ಅದೇ ಹೊತ್ತಿನಲ್ಲಿ ಮರಾಠಿ ರಂಗಭೂಮಿ ಸಾಕಷ್ಟು ಕ್ರಿಯಾಶೀಲವಾಯಿತು. ‘ಶಾಕುಂತಲ’ದಿಂದ ಸ್ಪೂರ್ತಿಯನ್ನು ಪಡೆದು ಅಣ್ಣಾ ಸಾಹೇಬ ಕಿರ್ಲೋಸ್ಕರರು ಚುರಮುರಿಯವರ ಕನ್ನಡ ಶಾಕುಂತಲವನ್ನು ಮರಾಠಿಗೆ ಅನುವಾದ ಮಾಡಿದರು. ಶಾಕುಂತಲದ ಅನುವಾದಕ್ಕೂ ಹೊಸಗನ್ನಡದ ರಂಗಭೂಮಿಗೂ ನಿಕಟವಾದ ಸಂಬಂಧವಿದೆ. ಬಸವಪ್ಪ ಶಾಸ್ತ್ರಿಗಳ ಅನುವಾದ ಅರಮನೆಯ ರಂಗಭೂಮಿಯ ಮೇಲೆ ಅನೇಕ ಸಾರಿ ಪ್ರದರ್ಶಿತವಾಯಿತು. ಚುರಮುರಿಯವರ ಅನುವಾದವನ್ನು ಧಾರವಾಡದ ಭಾರತ ಕಲೋತ್ತೇಜಕ ನಾಟಕ ಮಂಡಳಿಯವರು ಆಡಿದರು. ”ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ರಂಗಭೂಮಿಯನ್ನು ಪ್ರಾರಂಭಿಸಿದ ನಾಟಕವೆಂದರೆ ಶಾಕುಂತಲ” (ಕೀರ್ತಿನಾಥ ಕುರ್ತುಕೋಟಿ – ಕನ್ನಡ ಸಾಹಿತ್ಯ ಸಂಗಾತಿ, 1987 ಪುಟ 313) ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. 

ಚುರಮುರಿ ಶೇಷಗಿರಿರಾಯರಶಾಕುಂತಲನಾಟಕ ಜಾನಪದ ಅಂಶವನ್ನು ಮೈಗೂಡಿಸಿಕೊಂಡಿದೆ. ಉತ್ತರ ಕರ್ನಾಟಕದ ಆಡುನುಡಿಗೆ ಸಮೀಪವಾಗಿದೆ ಕೃತಿಯ ಭಾಷೆ. ಕಾಳಿದಾಸನ ಶಾಕುಂತಲ ನಾಟಕದ ಯಥಾವತ್ ಅನುವಾದವನ್ನು ಚುರಮುರಿ ಅವರು ಮಾಡಲಿಲ್ಲ. ಅವರದು ಸೃಜನಾತ್ಮಕ ಅನುವಾದ. ಕಾಳಿದಾಸನ ನಾಟಕವನ್ನು ಅವರಿಲ್ಲಿ ಕನ್ನಡ ಜಾನಪದ ಪರಿಪ್ರೇಕ್ಷದಲ್ಲಿ ಪುನ: ಸೃಷ್ಟಿಸಿದ್ದಾರೆ. ಅಂದು ಉತ್ತರ ಕರ್ನಾಟಕದಲ್ಲಿ ಲೋಕಪ್ರಿಯವಾಗಿದ್ದ ಜಾನಪದ ದೃಶ್ಯ ಪ್ರಕಾರಗಳ ಸ್ಪಷ್ಟವಾದ ಪರಿಚಯ ಚುರಮುರಿ ಅವರಿಗಿತ್ತು. ಹವ್ಯಾಸಿಹಗಲುರಾತ್ರಿ, ಬೀದಿವೇದಿಕೆ ಮೊದಲಾದ ಹಿನ್ನೆಲೆಯಲ್ಲಿ ಜಾನಪದರಿಂದ ಪ್ರದರ್ಶಿಲ್ಪಡುತ್ತಿದ್ದ ಬಯಲಾಟ, ದೊಡ್ಡಾಟ, ಸಣ್ಣಾಟ ಮೊದಲಾದವು ಶಿಷ್ಟ ಪರಂಪರೆಗಿಂತ ಭಿನ್ನವಾದವು. ‘ಕಾಳಿದಾಸನ ಅಭಿಜಾತ ನಾಟಕಕ್ಕೆ ಜಾನಪದ ಸಂಸ್ಕಾರವನ್ನು ನೀಡಿದರೆ ಹೀಗಾಗಬಹುದು?’ ಎಂದು ಚುರಮುರಿ ಅವರ ಸೃಜನಶೀಲ ಮನಸ್ಸು ಯೋಚಿಸಿರಬೇಕು. ಕಾವ್ಯ ನಾಟಕಗಳ ಜೀವಂತ ಸ್ವರೂಪವನ್ನು ಚುರಮುರಿ ಅವರು ಶಾಕುಂತಲ ನಾಟಕದೊಳಗೆ ತುಂಬಿದರು. ಇದೊಂದು ಅಪೂರ್ವ ಪ್ರಯೋಗ. ಚುರಮುರಿ ಅವರು ಮಾಡಿದ ಪ್ರಯೋಗ ಒಂದು ರೀತಿಯಲ್ಲಿ ಮಾರ್ಗ, ದೇಶಿಶಿಷ್ಟಗಳ ಅನುಸಂಧಾನವೇ ಆಗಿದೆ.        


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter