ಕುಂಡಲಿ

“ತಂಗಿ, ಎದ್ದು ಬಾರೆ ಮಂಗಳಾರತಿಗೆ” ದಡಕ್ಕನೆ ಎದ್ದು ಕುಳಿತ ವಸುಂಧರಾ ದಿಂಬಿನ ಪಕ್ಕದಲ್ಲಿ ನಿರಾತಂಕವಾಗಿ ಮಲಗಿದ್ದ ಮೊಬೈಲ್ ಕೈಗೆತ್ತಿಕೊಂಡು ಸಮಯವನ್ನು ನೋಡಿದಳು. ಇನ್ನೂ ಎರಡೂವರೆ. ತನಗೆ ಕನಸು ಬೀಳುವುದೇ ಅಪರೂಪ. ಆಫೀಸು ಕೆಲಸ ಮುಗಿಸಿ ರೂಮಿಗೆ ಬಂದು, ಗೀಸರಿನ ಸ್ವಿಚ್ಚು ಹಾಕಿ, ಬೆಳಗ್ಗೆ ಅಡುಗೆ ಮಾಡಿದ ಪಾತ್ರೆ ತೊಳೆದು, ತುಳಸಿಗಿಡಕ್ಕೆ ನೀರು ಹಾಕಿ, ಸ್ನಾನ ಮುಗಿಸಿ ಊಟ ಮಾಡಿ ಮಲಗಿದರೆ ಇನ್ನು ಎಚ್ಚರವಾಗುವುದು ಬೆಳಗ್ಗೆಯೇ. ಆಫೀಸಿನಲ್ಲಿ ಎಲ್ಲರೂ “ನೀನ್ ಬಿಡು, ನಿನ್ನಷ್ಟು ಸುಖ ಇಲ್ಲಿ ಯಾರಿಗೆ ಇದ್ಯೇ ವಸು” ಎಂದು ಹೇಳುವಾಗ, ತನ್ನಷ್ಟು ಸುಖದಿಂದ ಇಲ್ಲಿ ಯಾರೂ ಜೀವನ ಮಾಡುತ್ತಿಲ್ಲ ಎಂದು ಅವಳಿಗೂ ಅನ್ನಿಸಿದ್ದುಂಟು. ಎಲ್ಲರಿಗೂ ಅವರವರದೇ ಆದ ಸಮಸ್ಯೆ. ತೀರಾ ಬಡತನದಿಂದ ಬಂದ ಮುದ್ದುಮುಖದ ಶೈನಾ ಕಷ್ಟಪಟ್ಟು ಒಂದು ಡಿಗ್ರಿ ಪಡೆದು, ಅಪ್ಪ ಮಾಡಿದ ಸಾಲವನ್ನು ತೀರಿಸಲಿಕ್ಕೆಂದು ಕೇರಳದಿಂದ ಇಲ್ಲಿಗೆ ಬಂದು, ಯಾವುದೋ ಕಡಿಮೆ ಬೆಲೆಯ ಪಿಜಿಯಲ್ಲಿ ಉಳಿದುಕೊಂಡು ಹೊಟ್ಟೆಗೊಂದು ಒಳ್ಳೆಯ ಊಟವೂ ಇಲ್ಲದೇ ಪರದಾಡುವುದು ದಿನನಿತ್ಯ ಕಾಣುತ್ತಿತ್ತು. ತಾನು ಮಾಡಿದ ಚಿತ್ರಾನ್ನವನ್ನೋ, ಬಿಸಿಬೇಳೆಬಾತನ್ನೋ ಬಾಕ್ಸಿನಲ್ಲಿ ಹಾಕಿಕೊಂಡು ಹೋಗಿ ಕೊಟ್ಟಾಗ, ಮುಜುಗರದಿಂದಲೇ ಅದನ್ನು ತೆಗೆದುಕೊಂಡು ಬಿರಿಯಾನಿ ಸಿಕ್ಕಿದ ಖುಷಿಯಲ್ಲಿ ತಿನ್ನುತ್ತಿದ್ದಳು.

ಇನ್ನು ನಲವತ್ತು ವಯಸ್ಸಿನ ಪಂಕಜಾ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಬಿಟ್ಟು, ಗಂಡನ ಸಂಬಳ ಮನೆ ಬಾಡಿಗೆಗೆ ಮಕ್ಕಳ ಶಾಲೆಯ ಖರ್ಚಿಗೆ ಸಾಕಾಗದು ಎನ್ನುವ ಕಾರಣಕ್ಕೆ ಮೂವತ್ತು ಸಾವಿರಕ್ಕೆ ದುಡಿಯುತ್ತಿರುವುದಲ್ಲದೇ ಓಟಿಯನ್ನು ಕೂಡಾ ಮಾಡುತ್ತಿದ್ದಳು. “ನಾನು ಇವತ್ತು ಓಟಿ ಮಾಡಲ್ಲ ಶಶಾಂಕ್, ಪಾರ್ಲರ್ ಅಪಾಯಿಂಟ್ಮೆಂಟ್ ಇದೆ” ಎಂದು ಹೇಳಿ ತಾನು ಮನೆಗೆ ಬಂದಾಗಲೂ ಶೈನಾ, ಪಂಕಜಾ ಓಟಿ ಮಾಡುತ್ತ ಕುಳಿತಿರುತ್ತಿದ್ದರು. “ಇವಳದ್ದೊಂದು ಗೋಳು, ಪಾರ್ಲರಿಗೆ ವೀಕೆಂಡ್ ಹೋಗಕಾಗಲ್ಲ ಇವಳಿಗೆ” ಎಂದು ಶಶಾಂಕ್ ಗೊಣಗಿದ್ದು ಕೇಳಿಸಿದರೂ, ತನಗೆ ಸಂಬಂಧವೇ ಇಲ್ಲದಂತೆ ಎಷ್ಟು ದಿನ ಮನೆಗೆ ಬಂದಿಲ್ಲ ತಾನು! ಟೀಮಿನ ಹುಡುಗರೆಲ್ಲ “ನೀನು ಹೋಗೆ ವಸು, ನೀ ಚೆನ್ನಾಗಿ ಕಾಣಿಸಿದ್ರೆ ಮಾತ್ರ ಟೀಮಿಗೆ ಒಂದು ಕಳೆ” ಎಂದು ರೇಗಿಸುವುದು, ಅದಕ್ಕೆ ಶಶಾಂಕ್ ಒಂಥರಾ ಮನಸ್ಸಿಗೆ ಖುಷಿಯಾಗುವ ತರ ಮೀಸೆಯಲ್ಲೇ ನಗುವುದು ಎಲ್ಲ ನೆನಪಾಗಿ, ತನ್ನ ಬದುಕು ಅದೆಷ್ಟು ಸುಖವಾಗಿದೆ ಎನ್ನುವ ಅರಿವಾಗಲು ಅಮ್ಮನ ಕನಸೇ ಬರಬೇಕಾಯಿತಾ ಎನ್ನಿಸಿತು ವಸುಂಧರಾಳಿಗೆ.

“ಅಮ್ಮ ಒಂಥರಾ ಮಜಾ ಇದಾಳೆ ಮಾರಾಯ್ತಿ, ಅವಳು ಅಪ್ಪನಿಗೆ ಹೆದರ್ತಾಳೋ ಅಥವಾ ಅವಳಿಗೆ ಅಪ್ಪನ ಮೇಲಿರೋ ಪ್ರೀತಿ ಭಯ ಆಗಿ ಮಾರ್ಪಾಡಾಗಿದ್ಯಾ ಯಾವುದೂ ಅರ್ಥನೇ ಆಗೋದಿಲ್ಲ ನೋಡು” ಎಂದು ಕಳೆದ ವಾರವಷ್ಟೇ ಸರಸ್ವತಿಗೆ ಮೆಸೇಜ್ ಮಾಡಿದ್ದು ನೆನಪಾಯಿತು. ಸಣ್ಣ ವಯಸ್ಸಿನಲ್ಲೇ ಅಪ್ಪ ಕ್ಯಾನ್ಸರ್ ಬಂದು ತೀರಿಕೊಂಡಾಗ ಈ ಸರಸ್ವತಿ ಇನ್ನೂ ಡಿಗ್ರಿ ಫೈನಲ್ ಇಯರ್ ಓದುತ್ತಿದ್ದಳು. ಅಭ್ಯಾಸದಲ್ಲಿ ಬುದ್ಧಿವಂತೆಯಾಗಿದ್ದ ಇವಳು ತಾನು ಮುಂದೆ ಓದಲೇಬೇಕೆಂದು ಹಠ ಹಿಡಿದರೂ ಕೇಳದೇ, ಡಿಗ್ರಿ ಮುಗಿಯುತ್ತಿರುವುದನ್ನೇ ಕಾಯುತ್ತಿದ್ದವರಂತೆ ಅವಳ ಅಮ್ಮ ಚಿಕ್ಕಪ್ಪ ಎಲ್ಲರೂ ಒತ್ತಾಯ ಮಾಡಿ, ಅವರ ಪ್ರಕಾರ ಒಂದು ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಟ್ಟರು. ಮಗಳು ಶ್ರೀಮಂತರ ಮನೆಗೆ ಮದುವೆಯಾಗಿ ಹೋದರೆ ಇಬ್ಬರು ತಂಗಿಯರಿಗೆ ಒಂದು ದಡ ಕಾಣಿಸುತ್ತಾಳೆ ಎನ್ನುವ ಅವಳ ಅಮ್ಮನ ಯೋಚನೆ ಸ್ವಲ್ಪ ದಿನಗಳಲ್ಲೇ ತಲೆಕೆಳಗಾಯಿತು. ಎರಡೆರಡು ದಿನ ಕಷ್ಟಪಟ್ಟು ಬಾಳೆಕಾಯಿ ಚಿಪ್ಸ್ ಮಾಡಿದ್ದರಲ್ಲಿ ಸ್ವಲ್ಪ ಚಿಪ್ಸ್ ಆದರೂ ಅಮ್ಮನ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗೋಣವೆಂದು ಸರಸ್ವತಿ ಅಂದುಕೊಂಡರೆ, ಅವಳ ಅತ್ತೆ “ರಾಘು, ಹಬ್ಬದ ಮರುದಿನ ದೇವಕಾರ್ಯಕ್ಕೆ ಅಂತ ಮಾಡಿದ್ದು ಚಿಪ್ಸು, ನಾವು ಚಾ ಕುಡೀವಾಗ ನಾಲ್ಕ್ನಾಲ್ಕು ತಿಂದ್ರೆ ಸಾಕು, ಉಳಿದಿದ್ದೆಲ್ಲ ಇರಲಿ, ಸರಸು ಹತ್ರ ಅಮ್ಮನ ಮನೆಗೆ ತಗೊಂಡ್ ಹೋಗದು ಬೇಡ ಅಂತ ಹೇಳು, ಹೇಗೂ ಅವರೂ ದೇವಕಾರ್ಯಕ್ಕೆ ಬಂದೇ ಬರ್ತಾರೆ” ಎಂದು ಅವಳ ಗಂಡನ ಹತ್ತಿರ ಬಾಯೆಳೆಯುತ್ತಿದ್ದಳು.

ಸರಸ್ವತಿ ಇಂಥ ಸಂಗತಿಗಳನ್ನೆಲ್ಲ ಬೇರೆ ಯಾರಲ್ಲೂ ಹೇಳಿಕೊಳ್ಳಲಾಗದೇ, ಅಳುತ್ತ ಅದೆಷ್ಟು ದಿನ ತನಗೆ ಫೋನ್ ಮಾಡಿಲ್ಲ! ಅವಳಿಗೂ ತನ್ನ ಬಿಟ್ಟು ಬೇರೆ ಯಾರೂ ಸ್ನೇಹಿತೆಯರಿಲ್ಲ. ಅಪ್ಪನ ಭಯದಲ್ಲಿ ಅಮ್ಮ ಬದುಕುವುದು, ಸರಸ್ವತಿ ಅತ್ತೆಗೆ ಹೆದರುವುದು ಎಲ್ಲ ನೋಡಿ ವಸುಂಧರಾಗೆ ಈ ಸಂಸಾರವೇ ಸಾಕು ಅನ್ನಿಸಿದ್ದು ಸುಳ್ಳಲ್ಲ. ಒಂದಿನ ಅವಳು ಒಬ್ಬಳೇ ಯೂ ಟ್ಯೂಬ್ ನೋಡುತ್ತ ಊಟ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ಶಶಾಂಕ್ “ವಸು, ನೀನಂದ್ರೆ ನಂಗೆ ಸ್ವಲ್ಪ ಜಾಸ್ತಿನೇ ಇಷ್ಟ. ಮನೆಲ್ಲಿ ಮದ್ವೆಗೆ ಹುಡುಗಿ ನೋಡ್ತಾ ಇದಾರೆ, ನೀ ಹೂ ಅಂದ್ರೆ ಅಮ್ಮನ ಹತ್ರ ಮಾತಾಡ್ತೀನಿ” ಎಂದಾಗ ಒಂದು ರೀತಿಯ ಭಯವಾಗಿತ್ತು. ಯಾವ ಅಂಜಿಕೆಯೂ ಇಲ್ಲದೇ ನಿರ್ಲಿಪ್ತವಾಗಿ ಆತ ಮದುವೆಯ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಆಶ್ಚರ್ಯವೂ ಆಗಿತ್ತು. ತನ್ನ ವಯಸ್ಸಿನ ಎಲ್ಲ ಹುಡುಗಿಯರಿಗೂ ಸಹಜವಾಗಿ ಖುಷಿಯಾಗುವ ವಿಷಯಕ್ಕೆ ತನಗೆ ಮಾತ್ರ ಭಯವಾದ ಕಾರಣ ವಸುಂಧರಾಳಿಗೆ ಅರ್ಥವೇ ಆಗಲಿಲ್ಲ. ಸುಂದರಾಂಗ ಶಶಾಂಕ್ ಅವಳಿಗಿಂತ ಜಾಸ್ತಿ ಸಂಬಳ ಪಡೆಯುತ್ತಿದ್ದ; ಒಳ್ಳೆಯ ಹುದ್ದೆಯೂ ಇತ್ತು; ಅವನ ಮನೆ ಕಡೆಯೂ ಯಾವುದೇ ರಗಳೆಯಿರಲಿಲ್ಲ; ಆದರೂ ತನಗೆ ಯಾಕೆ ಖುಷಿಯಾಗಲಿಲ್ಲ, ಇಷ್ಟೆಲ್ಲ ಮಾಡರ್ನ್ ಯೋಚನೆ ಮಾಡುವ ತಾನು ಅವನ ಜಾತಿಯ ಬಗ್ಗೆ ಯೋಚಿಸುತ್ತಿರಬಹುದಾ ಎಂದು ಅನ್ನಿಸಿ, ನವರಾತ್ರಿ ಶಾರದೆಯ ಮುಖ ಕಣ್ಣೆದುರಿಗೆ ಬಂದಂತೆ ಭಾಸವಾಯಿತು.

ಅವಳ ಅಜ್ಜನಿಗೆ ಒಂದು ದಿನ ಕನಸಿನಲ್ಲಿ ಉಡುಪಿ ಮಠದ ಶ್ರೀಕೃಷ್ಣ ಕಾಣಿಸಿಕೊಂಡು “ನಿಮ್ಮನೆಯ ನವರಾತ್ರಿ ಪೂಜೆ ಸರಿಯಾಗಿ ಆಗ್ತಿಲ್ಲ, ಶಾರದೆಗೆ ಒಂದು ಬಂಗಾರದ ಮುಖ ಕಿವಿ ಮತ್ತು ತಾಳಿ ಮಾಡಿಸಿ ಹೊಸ ಮಡಿ ತಂದು ಪೂಜೆ ಮಾಡಿ” ಎಂದು ಹೇಳಿದನಂತೆ. ಅಜ್ಜ ಮರುದಿನವೇ ಸೊನ್ನಗಾರನನ್ನು ಕರೆಸಿ, ಮನೆಯಲ್ಲಿದ್ದ ಹಳೆಯ ಬಂಗಾರವನ್ನು ಕೊಟ್ಟು, ಶಾರದೆಯ ಬಂಗಾರವನ್ನು ಮಾಡಿಸಿದ ಕಥೆಯನ್ನು ಅಜ್ಜಿ ಪ್ರತಿ ನವರಾತ್ರಿಯಲ್ಲಿಯೂ ಹೇಳುತ್ತಿದ್ದಳು. ಈಗ ಹಳೆಮನೆ ನವರಾತ್ರಿ ಎಂದರೆ ಊರಿಗೆಲ್ಲ ಹಬ್ಬ. ಊರಿನಲ್ಲಿರುವ ಮೂವತ್ತು ಮನೆಗಳಿಗೂ ಅಪ್ಪನೇ ಸ್ವತಃ ಹೋಗಿ ಕರೆದು, ಎಲ್ಲ ಹೆಣ್ಣುಮಕ್ಕಳಿಗೂ ದುರ್ಗಿಯರೆಂದು ದಕ್ಷಿಣೆ ಕೊಟ್ಟು, ದಂಪತಿಗಳನ್ನು ಕೂರಿಸಿ ಪೂಜೆ ಮಾಡಿ, ಒಂಬತ್ತು ದಿನವೂ ದಿನಕ್ಕೊಂದರಂತೆ ಕಜ್ಜಾಯ ಮಾಡಿಸಿ, ಈಗ ವಸುಂಧರಾಳ ಮನೆಯ ನವರಾತ್ರಿಯೆಂದರೆ “ಹಳೆಮನೆ ನರಸಿಂಹಣ್ಣನ ಮನೆಯ ನವರಾತ್ರಿ” ಎನ್ನುವಷ್ಟು ಫೇಮಸ್. ಪ್ರತಿ ಸಲ ಅಜ್ಜಿಯ ನವರಾತ್ರಿಯ ಕಥೆ ಕೇಳುವಾಗಲೂ ಉಡುಪಿಯ ಶ್ರೀಕೃಷ್ಣನಿಗೂ ತನ್ನ ಮನೆಯ ಶಾರದೆಗೂ ಎಲ್ಲಿಂದೆಲ್ಲಿಯ ಸಂಬಂಧ, ಯಾರು ಹಾಕಿದ ಕುಂಡಲಿ ಯಾರ ಜನ್ಮವನ್ನು ಸುತ್ತುತ್ತಿರಬಹುದು ಎನ್ನುವ ಯೋಚನೆ ವಸುಂಧರಾಳನ್ನು ಕಾಡುತ್ತದೆ.

ನಿನ್ನೆ ಸಂಜೆ ಅಮ್ಮ ಫೋನ್ ಮಾಡಿದ್ದಾಗ “ತಂಗಿ, ಈ ಸಲ ನವಮಿ ಮೇಲೆ ದಶಮಿ, ಹೆಂಗೂ ರವಿವಾರ, ನೀ ಈಗಲೇ ಬಸ್ ಟಿಕೆಟ್ ತಗೊಂಡ್ಬಿಡು, ಆಮೇಲೆ ಬಸ್ ಸಿಗಲಿಲ್ಲ ಅಂತ ಕಥೆ ಹೇಳ್ಬೇಡ, ಶನಿವಾರ ಬೆಳಗ್ಗೆ ಬಂದ್ರೂ ಎರಡು ರಾತ್ರಿ ಸಿಗುತ್ತೆ, ಸೋಮವಾರನೇ ಬೇಕಾದ್ರೆ ವಾಪಸ್ ಹೋಗ್ಬಹುದು, ಕಳೆದ ವರ್ಷ ನೀ ಬಂದಿಲ್ಲ ಅಂತ ನಿಮ್ಮಪ್ಪ ಸಿಟ್ಟಾಗಿದ್ರು” ಎಂದಿದ್ದಳು. ಅಪ್ಪ ಕಳೆದ ವರ್ಷ ಸಿಟ್ಟು ಮಾಡಿಕೊಂಡ ಕಾರಣಕ್ಕೆ ಮಗಳು ಈ ವರ್ಷ ಹಬ್ಬಕ್ಕೆ ಬರಲಿ ಎನ್ನುವ ಅಮ್ಮನ ಯೋಚನೆಗೆ ವಸುಂಧರಾ ನಕ್ಕು ಸುಮ್ಮನಾಗಿದ್ದಳು. ಅಷ್ಟಕ್ಕೂ ಅಪ್ಪ ಬೇಜಾರಾಗುವ ವಿಷಯಗಳಿಗೆಲ್ಲ ಕೋಪಗೊಳ್ಳುವುದು ಯಾಕೆ, ಅಮ್ಮನ ಪ್ರೀತಿ ಭಯವಾಗಿ ಮಾರ್ಪಾಡಾದ ಹಾಗೆ ಅಪ್ಪನ ಪ್ರೀತಿ ಕೋಪವಾಗಿ ಬದಲಾಗಿರಬಹುದಾ, ಹಾಗಾದರೆ ಈ ಪರಿವರ್ತನೆ ಬದುಕಿನ ಯಾವ ಹಂತದಲ್ಲಿ ಆಗಿರಬಹುದು, ಪ್ರೀತಿ ಪ್ರೀತಿಯಾಗೇ ಉಳಿದುಕೊಳ್ಳಲು ಏನು ಮಾಡಬೇಕಾಗಬಹುದು, ಹೀಗೆ ಬುದ್ಧಿ ಬಂದಾಗಿನಿಂದ ಬಾಧಿಸುತ್ತ ಬಂದ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕಲಾರಂಭಿಸಿದಳು. ಮತ್ತೆ ನಿದ್ರೆ ಬರುವ ಲಕ್ಷಣಗಳು ಕಾಣಿಸದೇ, ಸುಮ್ಮನೆ ಮೊಬೈಲ್ ತೆಗೆದು ನೋಡಿದರೆ ಶಶಾಂಕನ ಗುಡ್ ನೈಟ್ ಮೆಸೇಜ್ ಕಾಣಿಸಿತು. ಆತ ಒಂದು ದಿನವೂ ತನಗೆ ಗುಡ್ ನೈಟ್ ಹೇಳದೇ ಮಲಗಿದ್ದೇ ಇಲ್ಲ ಎನ್ನುವ ಸಂಗತಿ ನೆನಪಾಗಿ ಹೃದಯ ಹಗುರವಾದಂತೆನ್ನಿಸಿತು. ಆಫ್ಸೈಟ್ ಮೀಟಿಂಗ್ ಎಂದು ಬೇರೆ ಊರಿಗೆ ಹೋದಾಗ ಬೆಳಗಿನ ಜಾವ ಮಲಗಿದರೂ, ಒಂದು ಮೆಸೇಜ್ ಜೊತೆಗೆ ಎಮೋಜಿಯನ್ನೂ ಕಳುಹಿಸಿಯೇ ಆತ ಮಲಗುವುದು ನೆನಪಾಯಿತು. ಈ ಸಲ ನವರಾತ್ರಿಗೆ ಹೋದಾಗ ಅಮ್ಮನ ಹತ್ತಿರ ಶಶಾಂಕನ ವಿಷಯವನ್ನು ಮಾತನಾಡಬೇಕು ಎಂದುಕೊಂಡು ಪ್ರೈಮ್ ನಲ್ಲಿ ಯಾವುದೋ ಸೀರೀಸ್ ನೋಡುತ್ತ ಬೆಳಗು ಮಾಡಿದಳು.

ಆಫೀಸಿಗೆ ರೆಡಿಯಾಗಿ ಕ್ಯಾಬಿಗೆ ಕಾಯುತ್ತಿದ್ದಾಗ ಅಮ್ಮನ ಫೋನು! ಅರೆ, ದಿನಾಲೂ ಸಂಜೆ ಫೋನ್ ಮಾಡುವ ಅಮ್ಮ ಈಗ ಯಾಕೆ ಮಾಡಿರಬಹುದು ಎಂದು ಯೋಚಿಸುತ್ತ ರಿಸೀವ್ ಮಾಡಿದರೆ, “ತಂಗಿ, ನಿಮ್ಮಪ್ಪ ಬೆಳಗ್ಗೆ ಎದ್ದವರೇ ಎದೆನೋವು ಅಂದ್ರು, ಅದಕ್ಕೇ ರಿಕ್ಷಾ ಮಾಡಿಸ್ಕೊಂಡು ಡಾಕ್ಟರ್ ಹತ್ರ ಬಂದ್ವಿ. ಅವರಿಗೆ ಬಿಪಿನೂ ಜಾಸ್ತಿ ಆಗಿದ್ಯಂತೆ, ಈ ವರ್ಷ ತಂಗಿ ಮದ್ವೆ ಮಾಡಲೇಬೇಕು, ಮುಂದಿನ ವರ್ಷದವರೆಗೆ ನಾನಿರ್ತೀನೋ ಇಲ್ವೋ ಅಂತೆಲ್ಲ ಮಾತಾಡ್ತಿದಾರೆ ಮಾರಾಯ್ತಿ, ನನಗೆ ನೀ ಬಂದ ಹೊರ್ತು ಸಮಾಧಾನ ಇಲ್ಲ, ಸರಿ ಡಾಕ್ಟ್ರು ಬಂದ್ರು ಫೋನ್ ಇಡ್ತೀನಿ” ಎಂದು ಹೇಳಿ ಫೋನ್ ಕಟ್ ಮಾಡಿದಳು. ಇಂತಹ ಸಮಯದಲ್ಲೇ ವಸುಂಧರಾಗೆ ಒಬ್ಬ ತಮ್ಮನೋ, ಅಣ್ಣನೋ ಇದ್ದಿದ್ದರೆ ಚೆನ್ನಾಗಿರೋದು ಎಂದು ಅನ್ನಿಸುವುದುಂಟು. ಮನೆಯ ದೊಡ್ಡ ಮಗಳಿಗೆ ಹೆಸರು ಹಿಡಿದು ಕರೆಯಬಾರದು ಎನ್ನುವ ಕಾರಣಕ್ಕೆ ನಾವೆಲ್ಲ ನಿನಗೆ ತಂಗಿ ಎಂದೇ ಕರೆಯುವುದು ಎಂದು ಅಮ್ಮ ಒಮ್ಮೆ ಹೇಳಿದ್ದಳು. ಆದರೆ ಎರಡನೇ ಮಗುವಿನ ಸುದ್ದಿಯನ್ನು ಒಮ್ಮೆಯೂ ಹೇಳಿದ ನೆನಪಿಲ್ಲ. ಅಪ್ಪ-ಅಮ್ಮ ಯಾವ ಕಾರಣಕ್ಕಾಗಿ ಇನ್ನೊಂದು ಮಗು ಮಾಡಿಕೊಳ್ಳಲಿಲ್ಲ ಎಂದು ಈ ಸಲ ಊರಿಗೆ ಹೋದಾಗ ಕೇಳಬೇಕು ಎಂದು ಯೋಚಿಸುತ್ತ ಆಫೀಸಿಗೆ ಹೋದರೆ, ಶಶಾಂಕನ ಗುಡ್ ಮಾರ್ನಿಂಗ್ ನಗು; ನಗು ಪ್ರೀತಿಯಾಗಿ, ಪ್ರೀತಿ ಪ್ರೀತಿಯೇ ಆಗಿ ಉಳಿದುಕೊಳ್ಳುವಂಥ ಸುಂದರ ನಗು!

ಕೆಲಸ ಮಾಡುತ್ತಿದ್ದರೂ ವಸುಂಧರಾಗೆ ಮಂಗಳಾರತಿಯ ಕನಸು, ಅಪ್ಪನ ಬಿಪಿ, ಯಾವತ್ತೂ ಮದುವೆಯ ಬಗ್ಗೆ ಮಾತನಾಡದ ಅಪ್ಪ ಈ ವರ್ಷ ಮದುವೆ ಮಾಡಲೇಬೇಕು ಎಂದಿದ್ದು ಎಲ್ಲ ಯೋಚನೆಗಳೂ ಸೇರಿ ತಲೆಭಾರವಾದ ಹಾಗೆ ಎನ್ನಿಸಿ, ಎದ್ದು ಕಾಫಿ ಮಶಿನ್ನಿನ ಹತ್ತಿರ ಹೋದಳು. ಎಲ್ಲ ಗಮನಿಸಿದವನಂತೆ ಹಿಂದೆಯೇ ಬಂದ ಶಶಾಂಕ್ “ನಿನ್ನ ಮನಸು ಯಾಕೋ ಸರಿ ಇದ್ದ ಹಾಗಿಲ್ಲ, ರಜೆ ಹಾಕಿ ಮನೆಗೆ ಹೋಗು” ಎಂದು ಹೇಳಿ ಅವನ ಜಾಗಕ್ಕೆ ಹೊರಟುಹೋದ. ಬೀನ್ ಬ್ಯಾಗ್ ಮೇಲೆ ಕುಳಿತು ಕಾಫಿ ಕುಡಿಯುತ್ತಿದ್ದರೆ, ಮಜ್ಜಿಗೆ ಕಡೆಯುತ್ತ ‘ಪಾಲಿಸೋ ಹೂವಾ ಶ್ರೀದೇವಾ’ ಎಂದು ಹಾಡು ಹೇಳುತ್ತಿದ್ದ ಅಜ್ಜಿ, ‘ಗದ್ದೆಲ್ಲಿ ಈ ಸಲ ತುಂಬಾ ದೂರ್ವೆ ಇದೆ ನಾಳೆ ಪೂಜೆಗೆ ಆಯ್ತು ಕೊಯ್ಕೊಂಡ್ ಬಂದೆ’ ಎನ್ನುತ್ತ ಬಾಳೆಯಲ್ಲಿ ದೂರ್ವೆ ಸುತ್ತಿಡುವ ಅಮ್ಮ, ‘ಈ ಸಲ ಗದ್ದೆ ಮಾಡೋ ಯೋಚನೆ ಇಲ್ಲ ಈ ಹಂದಿಕಾಟಕ್ಕೆ ಏನ್ ಮಾಡೋದು ಗೊತ್ತಿಲ್ಲ’ ಎನ್ನುತ್ತಲೇ ಪ್ರತಿ ವರ್ಷ ಭತ್ತ ಬೆಳೆಯುವ ಅಪ್ಪ ಎಲ್ಲರೂ ನೆನಪಾಗಿ, ತಾನು ಅವರೆಲ್ಲರನ್ನೂ ಬಿಟ್ಟು ಇಲ್ಲೇನು ಮಾಡ್ತಿದೀನಿ ಎನ್ನಿಸಿತು. ಅಂಗಳ ಸಾರಿಸಿ ರಂಗೋಲಿ ಹಾಕಲೆಂದು ಚುಕ್ಕಿಗಳನ್ನಿಡುವಾಗ, ಮಧ್ಯದಲ್ಲೊಂದು ಚುಕ್ಕಿಯೇ ಮರೆತುಹೋಗಿ ಪೂರ್ತಿ ರಂಗೋಲಿ ತಪ್ಪಿಹೋದಂತೆ, ತಾನು ರಂಗೋಲಿಯಿಂದ ಒಂದು ಪ್ರತ್ಯೇಕ ಗೆರೆಯೇ ಆಗಿ ಉಳಿದುಹೋದಂತೆ ಭಾಸವಾಯಿತು.

ಕೈಯಲ್ಲಿ ಹಿಡಿದಿದ್ದ ಪೇಪರಿನ ಕಾಫಿ ಗ್ಲಾಸನ್ನು ಕಸದ ಬುಟ್ಟಿಗೆ ಹಾಕಿ ತನ್ನ ಜಾಗಕ್ಕೆ ಬಂದವಳೇ ರಾಜೀನಾಮೆ ಪತ್ರ ಬರೆದು, ಶಶಾಂಕನಿಗೂ ಮಾರ್ಕ್ ಮಾಡಿ ಇ ಮೇಲ್ ಕಳುಹಿಸಿದ ವಸುಂಧರಾ ‘ಮಾಡೇ ದಯವನ್ನು ಆರ್ಯಾದುರ್ಗೆ’ ಎಂದು ತನ್ನಷ್ಟಕ್ಕೆ ತಾನೇ ಗುನುಗಿದ್ದು ಪಕ್ಕದಲ್ಲೇ ಕುಳಿತಿದ್ದ ಶಶಾಂಕನಿಗೂ ಕೇಳಿ, ಅದೇ ಪ್ರೀತಿಯ ಮುಗುಳ್ನಗೆಯನ್ನಾಡಿ ಸುಮ್ಮನಾದ; ನಿನ್ನ ಖುಷಿಯಿಂದ ಪ್ರತ್ಯೇಕವಾದ ಖುಷಿ ತನ್ನದು ಯಾವುದೂ ಇಲ್ಲವೆನ್ನುವಂತಹ ನಿಸ್ವಾರ್ಥದ ನಗು! ರೂಮಿಗೆ ಬಂದವಳೇ ಯಾವತ್ತಿನ ರೂಢಿಯಂತೆ ತುಳಸಿಗಿಡದೆಡೆಗೆ ದೃಷ್ಟಿ ಹಾಯಿಸಿದಳು. ನಿನ್ನೆ ಸಂಜೆ ಹಾಕಿದ್ದ ನೀರು ಕುಂಡದಿಂದ ಹನಿಹನಿಯಾಗಿ ಹರಿದುಹೋಗುತ್ತಿತ್ತು. “ಸಂಜೆ ಮೇಲೆ ತುಳಸಿಗಿಡಕ್ಕೆ ನೀರು ಹಾಕೋದು ಸಂಪ್ರದಾಯ ಅಲ್ಲ, ಬೆಳಗ್ಗೆ ನೀರು ಹಾಕೋದು ರೂಢಿ ಮಾಡ್ಕೋ” ಎಂದು ಅಮ್ಮ ಹೇಳಿದ್ದು ನೆನಪಾಯಿತು. ಅಮ್ಮ ಫೋನ್ ಮಾಡಿದಾಗ ಅದಕ್ಕೆ ಕಾರಣವನ್ನು ಕೇಳಬೇಕು ಎಂದುಕೊಂಡು ಒಳಗೆ ಬರುತ್ತಿದ್ದಂತೆಯೇ ಫೋನ್ ರಿಂಗ್ ಆಯಿತು. ವಸುಂಧರಾ ಫೋನ್ ಎತ್ತಿದವಳೇ, “ಅಮ್ಮ, ಮನೆಗೆ ಬರೋವಾಗ ತುಳಸಿಗಿಡವನ್ನೂ ಪ್ಯಾಕ್ ಮಾಡ್ಕೊಂಡು ಬರ್ತೀನಿ, ಈ ಸಲ ಇದೇ ತುಳಸಿಗೆ ಮದ್ವೆ ಮಾಡೋಣ” ಎಂದಳು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter