ಶ್ರೀಪತಿ ಪ್ರಸಂಗ

ಬೆಳ್ತಂಗಡಿಯ ಮನೆಯಲ್ಲಿ ಆ ಸಂಜೆ ಮನೆಗೆ ಬಂದಿದ್ದ ನೆಂಟರೊಬ್ಬರು ಪಟ್ಟಾಂಗ ಹೊಡೆಯುತ್ತಿದ್ದಾಗ ಶ್ರೀಪತಿಯ ಬಳಿ ”ಮುಂಬಯಿಯಲ್ಲಿ ಕೊರೊನಾ ಆಘಾತದಿಂದ  ನಮ್ಮ ಊರಿನವರು ಎಲ್ಲ  ಕಂಗಾಲಾಗಿದ್ದಾರಂತೆ. ಅನೇಕರು ಊರಿಗೆ ಬಂದವರು ಹೋಗಲೇ ಇಲ್ಲ. ಇನ್ನು ಮುಂಬಯಿ ಕಷ್ಟ ಇದೆ ಮಹರಾಯ…..” ಎಂದಿದ್ದರು. ಶ್ರೀಪತಿಗೆ ಈ ಮಾತು ಕೇಳಿ ಆಶ್ಚರ್ಯವೇನೂ ಆಗಲಿಲ್ಲ. ಆದರೆ ರಾತ್ರಿಗೆ ಹಾಸಿಗೆಯಲ್ಲಿ ಬಿದ್ದುಕೊಂಡಾಗ  ತನ್ನ ಮುಂಬಯಿ ದಿನಗಳು ಮತ್ತೆ ನನಪಿಗೆ ಬಂತು. ತಾನು ಈ ಮೊದಲೇ ಮುಂಬಯಿ ತ್ಯಜಿಸಿದ್ದು ಒಳ್ಳೆಯದಾಯ್ತು ಎಂದು ಆ ಕ್ಷಣಕ್ಕೆ ನೆಮ್ಮದಿಯಾಯ್ತು. ತನ್ನ ಅಂದಿನ ದಿನಗಳನ್ನು  ಮತ್ತೆ ನೆನಪಿಸಿಕೊಂಡ………..

0———-0———-0———-0———-0

ಮಳೆ ಬರುವ ಲಕ್ಷಣ ಕಾಣಿಸತೊಡಗಿದಾಗ ಮತುಂಗಾದಲ್ಲಿದ್ದ ಶ್ರೀಪತಿ ಸ್ವಲ್ಪ ಅವಸರದಿಂದಲೇ ”ಬೇಗ ಪ್ಯಾಕ್ ಮಾಡಿಕೊಡಿ” ಎಂದು ಅಂಗಡಿಯವನಿಗೆ ಒತ್ತಡ ಹಾಕುವುದು ಅನಿವಾರ್ಯವಾಯಿತು. ಮಾತುಂಗಾದಲ್ಲಿ ಮರುದಿನದ ಶಾಂತಿಹೋಮದ ಪ್ರಯುಕ್ತ ಪೂಜೆಗೆ ಬೇಕಾದ ಸಾಮಾನು, ಹೂಹಾರಗಳನ್ನು ಕೊಳ್ಳಲು ಬಂದಿದ್ದವ ಮಳೆ ಬರುವ ಅಂದಾಜಿನಲ್ಲಿ ಅಂಗಡಿಯಿಂದ ಅಂಗಡಿಗೆ ಬೇಗ ಬೇಗನೆ ಹೆಜ್ಜೆ ಇಡುತ್ತಾ ಪ್ರತೀ ಅಂಗಡಿಯಲ್ಲೂ ಅವಸರಮಾಡತೊಡಗಿದ.

”ಎಂಥದು ಭಟ್ರೇ ಗಡಿಬಿಡಿ, ಬಾಳೆಎಲೆ ಲೆಕ್ಕಮಾಡುವುದು ಬೇಡವಾ? ಹಿಂಗಾರ ಎರಡು ಕೊಡಲೇ?……” ಹೀಗೆ ಮಲೆಯಾಳಿ ಭಾಷೆಯ ಮೆನನ್ ತನಗೆ ಗೊತ್ತಿದ್ದ ಕನ್ನಡದಲ್ಲೇ ಶ್ರೀಪತಿಗೆ ಕೇಳುತ್ತಾ ಬೇಗ ಬೇಗ ಕಟ್ಟಿಕೊಟ್ಟು ”ಇನ್ನು ಹೊರಡಿ ಭಟ್ರೇ, ಮಳೆ ಬರಬಹುದು” ಎಂದ. ಚೀಲ ತುಂಬಾ ಭಾರವೆನೆಸಿತು ಈಗ. ರೈಲ್ವೆ ಸ್ಟೇಷನ್ ಪಕ್ಕದ ಅಂಗಡಿಯಿಂದ ಇನ್ನೊಂದು ಚೀಲ ಖರೀದಿಸಿ ಪೂಜಾ ಸಾಮಾನುಗಳನ್ನು ಎರಡೂ ಚೀಲಗಳಿಗೆ ಹಾಕಿದ. ಎರಡೂ ಕೈಗಳಲ್ಲಿ ಚೀಲ ಹಿಡಿದು ಬ್ರಿಜ್ ಹತ್ತಿ ರೈಲ್ವೆ ಸ್ಟೇಷನ್ನ ಪ್ಲ್ಯಾಟ್‌ಫಾರ್ಮ್‌ಗೆ ಬಂದು ಮುಲುಂಡ್‌ಗೆ ಹೋಗುವ ರೈಲಿಗಾಗಿ ಕಾಯತೊಡಗಿದ.

ಮಳೆ ಬರುವ ಭಯದಲ್ಲಿ ಇವತ್ತು ‘ಶಂಕರಮಠ’ಕ್ಕೂ ಹೋಗಲಿಲ್ಲ. ಸ್ವಾಮಿಯೊಬ್ಬರು ಚಾತುರ್ಮಾಸ್ಯವನ್ನು ಆ ಸಲ ಮುಂಬಯಿಯಲ್ಲಿ ಕಳೆಯಲು ಬಂದಿದ್ದರು. ಅವರ ವಾಸ್ತವ್ಯ ಶಂಕರಮಠವಾಗಿತ್ತು. ಸಂಜೆಗೆ ಏನೋ ಪ್ರವಚನವೂ ಇತ್ತೆಂದು ಪತ್ರಿಕೆಯಲ್ಲಿ ಓದಿದ್ದ. ಅತ್ತ ಒಂದು  ಸಭಾಗೃಹದಲ್ಲಿ ಯಕ್ಷಗಾನ ಪ್ರದರ್ಶನವೂ ಇತ್ತು. ಸ್ವಲ್ಪ ನೋಡಿ ಬರೋಣವೆಂದು ನಿರ್ಧರಿಸಿದ್ದರೂ ಇದೀಗ ಮಳೆ ಬಂದರೆ ಪಜೀತಿ ಆಗಬಹುದೆಂದು ಎಲ್ಲವನ್ನೂ ರದ್ದುಮಾಡಿ ನೇರವಾಗಿ ರೈಲ್ವೆ ಪ್ಲ್ಯಾಟ್‌ಫಾರ್ಮ್‌ಗೆ ಬಂದಿದ್ದ. ದಾದರ್ ಕಡೆಯಿಂದ ಇತ್ತ ಕಡೆ ಒಂದು ರೈಲು ಬರುತ್ತಿರುವುದು ಕಂಡಿತು. ಇನ್ನೇನು ರೈಲು ಪ್ಲ್ಯಾಟ್‌ಫಾರ್ಮ್‌ಗೆ ಬಂದು ನಿಲ್ಲುತ್ತಿದ್ದಂತೆ ಶ್ರೀಪತಿಯ ಕಿಸೆಯಲ್ಲಿದ್ದ ಮೊಬೈಲ್ ಎರಡು ಬಾರಿ ಸದ್ದು ಮಾಡಿತು. ಆದರೂ ತೆಗೆಯಲಿಲ್ಲ. ಹಿಂದೆ ಎರಡು-ಮೂರು ಬಾರಿ ರೈಲೊಳಗೆ ಮೊಬೈಲ್ ಕದ್ದು ಹೋಗಿದ್ದು ಅನಂತರ ಶ್ರೀಪತಿ ಜಾಗೃತನಾಗಿದ್ದ. ನೂಕುನುಗ್ಗಲಿನ ನಡುವೆ ಮೊಬೈಲ್ ತೆಗೆದು ಮಾತನಾಡುತ್ತಿರಲಿಲ್ಲ. ಏನಿದ್ದರೂ ಒಳಗೆ ಹೋಗಿ ಜಾಗ ಸಿಕ್ಕಿದರೆ ಮತ್ತೆ ನೋಡೋಣವೆಂದು ಸುಮ್ಮನಿದ್ದ. ಕೂರಲು ಜಾಗ ಸಿಗದಿದ್ದರೂ ನಿಲ್ಲುವುದಕ್ಕಂತೂ ಒಳಗಡೆ ಜಾಗ ಸಿಕ್ಕಿತ್ತು. ಥಾನೆಯ ರೈಲು ಆದ್ದರಿಂದ ಸ್ವಲ್ಪ ರಷ್ ಕಡಿಮೆ ಇತ್ತು. ಕಲ್ಯಾಣ್, ಅಂಬರ್‌ನಾಥ್, ಟಿಟ್ವಾಲ ರೈಲಾಗಿದ್ದರೆ ಪ್ರಯಾಣಿಕರ ನೂಕುನುಗ್ಗಾಟ ಹೆಚ್ಚಿಗಿರುತ್ತದೆ. ಶ್ರೀಪತಿಯ ಪುಣ್ಯವೋ ಎಂಬಂತೆ ಬಂದ ರೈಲು ಥಾನೆಯದ್ದಾಗಿತ್ತು. ಕುರ್ಲಾ ಬಂದಾಗ ಮೊಬೈಲ್ ತೆಗೆದು ಯಾರು ಕಾಲ್ ಮಾಡಿದ್ದೆಂದು ನೋಡಿದ, ಊರಿನಿಂದ ದೊಡ್ಡಪ್ಪ ಮಾಡಿದ್ದರು. ರೈಲಲ್ಲಿ ತುಳು ಮಾತಾಡಿ ಅಕ್ಕಪಕ್ಕದವರೆಲ್ಲ ‘ಮದ್ರಾಸಿ’ ಎಂದು ಕರೆಯುವುದು ಬೇಡವೆಂದು ವಾಪಾಸು ಮಾಡಲು ಹೋಗಲಿಲ್ಲ. ಏನೇ ಆಗಲಿ, ಮುಲುಂಡ್‌ನಲ್ಲಿ ಇಳಿದು ರೂಮಿಗೆ ಹೋದ ನಂತರವೇ ಕಾಲ್ ಮಾಡುವುದೆಂದು ಸುಮ್ಮನಿದ್ದ. ಹಾಗೆ ನೋಡಿದರೆ ಸಿಕ್ಕಸಿಕ್ಕಲ್ಲೆಲ್ಲ ಮೊಬೈಲ್ನಲ್ಲಿ ಮಾತನಾಡುವುದು ಶ್ರೀಪತಿಗೆ ಒಗ್ಗದ ಸಂಗತಿಯಾಗಿದೆ. ಅನೇಕ ಕಡೆ ತಾನು ಅಸಿಸ್ಟೆಂಟ್ ಆಗಿ ಹೋಗಿದ್ದ ಪೂಜಾ ಕಾರ್ಯಗಳಲ್ಲಿ ಪ್ರಧಾನ ಪುರೋಹಿತರೇ ಹೋಮದ ನಡುವೆ ಮೊಬೈಲ್ನಲ್ಲಿ ಮಾತನಾಡಿದ್ದನ್ನು ಕಂಡಾಗ ಶ್ರೀಪತಿ ಕಿರಿಕಿರಿಗೊಂಡಿದ್ದಿದೆ.  ಹೇಳುತ್ತಿದ್ದ ಮಂತ್ರವನ್ನು ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡಿ ಮತ್ತೆ ಮಂತ್ರೋಚ್ಚಾರವನ್ನು ಮುಂದುವರಿಸುವುದನ್ನು ಕಂಡಾಗ ಒಂದು ಬಾರಿ ಪುರೋಹಿತರ ಜೊತೆ ವಾದ ಮಾಡಿದ್ದೂ ಇದೆ. ಭಿಕ್ಷುಕರ ಕೈಯಲ್ಲೂ ಮೊಬೈಲ್ ನೋಡಿದ್ದ ಶ್ರೀಪತಿಗೆ ಇಷ್ಟೊಂದು ಕಚ್ಡಾ ಮಟ್ಟದಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ನೋಡಿ ನೋಡಿ ಅಸಹ್ಯವೂ ಆಗಿದ್ದಿದೆ.

ಮುಲುಂಡ್ ಸ್ಟೇಷನ್ ಬಂದಾಗ ಶ್ರೀಪತಿ ಚೀಲಗಳ ಸಹಿತ ಇಳಿದು, ಹೊರಬಂದು ರಿಕ್ಷಾ ಹಿಡಿದು ರೂಮಿನತ್ತ ಹೆಜ್ಜೆ ಇರಿಸಿದ.

ಊರಿನ ದೊಡ್ಡಪ್ಪನಿಗೆ ರಾತ್ರಿ ಫೋನ್ ಮಾಡಿದರೆ ಆಯಿತು ಎಂದೆಣಿಸಿದವ ಸ್ನಾನ ಮಾಡಿ ಊಟದ ತಯಾರಿಗೆ ಇಳಿದ. ಬೇಗ ಊಟ ಮಾಡಿ ಮಲಗಬೇಕು. ನಾಳೆ ಏಳು ಗಂಟೆಗೆ ಬದ್ಲಾಪುರದಲ್ಲಿ ಇರಬೇಕೆಂದು ಪುರೋಹಿತರು ಹೇಳಿದ್ದು ಮತ್ತೆ ನೆನಪಿಸಿಕೊಂಡು ಕೆಲಸ ಮುಂದುವರಿಸಿದ. ಬದ್ಲಾಪುರದಲ್ಲಿನ ದೇವಸ್ಠಾನವೊಂದರಲ್ಲಿ ಗಣಹೋಮಕ್ಕೆ ಅಸಿಸ್ಟೆಂಟ್ ಆಗಿ ಬರಬೇಕೆಂದೂ, ಎಲ್ಲಾ ಸಾಮಾನುಗಳನ್ನು ರೆಡಿ ಮಾಡಿ ತರಬೇಕೆಂದೂ ವಾರದ ಹಿಂದೆಯೇ ಪುರೋಹಿತರೊಬ್ಬರು ಶ್ರೀಪತಿಯನ್ನು ಬುಕ್ ಮಾಡಿದ್ದಲ್ಲದೆ ಸಾಮಾನುಗಳ ಖರ್ಚಿಗೆಂದು ಒಂದು ಸಾವಿರ ರೂಪಾಯಿ ನೀಡಿದ್ದರು. ”ನಾನು ನೇರವಾಗಿ ಬದ್ಲಾಪುರಕ್ಕೇ ಬರ್ತೇನೆ. ನೀನು ಸಾಮಾನುಗಳ ಜೊತೆ ಏಳು ಗಂಟೆಗೆ ಬಂದು ಬಿಡು” ಎಂದಿದ್ದರು ಪುರೋಹಿತರು. ಇವನೂ ಒಪ್ಪಿಗೆ ನೀಡಿದ್ದ.

ರಾತ್ರಿ ಊಟದ ನಂತರ ದೊಡ್ಡಪ್ಪನಿಗೆ ಕಾಲ್ ಮಾಡಬೇಕು ಎನ್ನುವುದನ್ನು ನೆನಪಿಸಿಕೊಂಡು ಮೊಬೈಲ್ ಎತ್ತಿಕೊಂಡ. ಆದರೆ ಎಷ್ಟು ಸಲ ಮಾಡಿದರೂ ಊರಿಗೆ ತಾಗಲೇ ಇಲ್ಲ. ಯಾವಾಗ ನೋಡಿದರೂ ಲ್ಯಾಂಡ್‌ಲೈನ್ ಹಾಳಾಗಿರುತ್ತದೆ! ಈಗ ಸರಿ ಇದ್ದರೆ ಅರ್ಧ ಗಂಟೆಯಲ್ಲಿ ಸತ್ತಿರುತ್ತದೆ! ಇರಲಿ, ನಾಳೆ ಮಾಡೋಣವೆಂದು ಮೊಬೈಲ್ ಇಟ್ಟುಬಿಟ್ಟ.

ಶ್ರೀಪತಿಗೆ ರಾತ್ರಿ ಅಷ್ಟು ಸುಲಭದಲ್ಲಿ ನಿದ್ದೆ ಬರಲಿಲ್ಲ. ಮುಂಬಯಿ ಬದುಕು ಇತ್ತೀಚೆಗೆ ಬೋರ್ ಅನಿಸುತ್ತಿತ್ತು. ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ, ‘ಕಾಶಿಯ ಪುರೋಹಿತರ ಪಲಾಯನ’ ಸುದ್ದಿ ಓದಿದ ನಂತರ ಈ ವೃತ್ತಿಯ ಬಗ್ಗೆ ಯಾಕೋ ಜಿಗುಪ್ಸೆ ಬರತೊಡಗಿತು. ಪುರೋಹಿತರು ಮಾಡುವ ಕೆಲವು ಮೋಸ, ಸುಳ್ಳು…. ಇತ್ಯಾದಿಗಳಿಂದ ರೋಸಿಹೋಗಿ ಕಾಶಿಯಲ್ಲಿ ಪುರೋಹಿತರ ವೃತ್ತಿಯಲ್ಲಿ ಇತ್ತೀಚಿನ ಪೀಳಿಗೆ ಆಸಕ್ತಿ ಇರಿಸುತ್ತಿಲ್ಲವಂತೆ. ಸಾವಿರ ಸಂಖ್ಯೆಯಲ್ಲಿದ್ದ ಪುರೋಹಿತರ ಸಂಖ್ಯೆ ಇಂದು ನೂರಿನ್ನೂರಕ್ಕೆ ಇಳಿದಿದೆಯಂತೆ. ಗೌರವ ಕಡಿಮೆಯಾಗಿದೆಯಂತೆ…..! ಈ ಸುದ್ದಿ ಓದಿದ ಶ್ರೀಪತಿಗೂ ಮನಸ್ಸು ಯಾಕೋ ಆಗಾಗ ಈ ವೃತ್ತಿಯಿಂದ ತಾನೂ ದೂರ ಹೋಗಬೇಕು ಅನಿಸತೊಡಗಿತ್ತು. ಆರು ವರ್ಷಗಳ ಹಿಂದಕ್ಕೆ ಮನಸ್ಸು ಓಡತೊಡಗಿತು…………

0———-0———-0———-0———-0

ಅಂದು ಬೆಳ್ತಂಗಡಿಯಲ್ಲಿರುವ ಕುಟುಂಬದ ಹಿರಿಯರ ಆ ಮನೆಯಲ್ಲಿ ಸಮಾರಾಧನೆ. ಪ್ರತೀವರ್ಷ ಅಂದು ಕುಟುಂಬದ ಸದಸ್ಯರೆಲ್ಲ ಎಷ್ಟೇ ದೂರದಲ್ಲಿದ್ದವರೂ ಬರಲೇಬೇಕು. ಕುಟುಂಬಕ್ಕೆ ಸಂಬಂಧಿಸಿದ ಬೆಂಗಳೂರು, ಮದ್ರಾಸ್ ಮೈಸೂರು……. ಎಲ್ಲಾ ಕಡೆಗಳಿಂದಲೂ ಸಂಬಂಧಿಕರು ಹಾಜರಿದ್ದರು. ರಾತ್ರಿ ಕೋಲವೂ ವಿಶೇಷ ಆಕರ್ಷಣೆ ಆಗಿತ್ತು. ಹೊರ ಊರುಗಳ ಕುಟುಂಬದ ಮಕ್ಕಳಿಗೆ ಕೋಲ ನೋಡುವ ಉತ್ಸಾಹ. ವಾದ್ಯ, ನರ್ತನ ವೇಷ…….ಎಲ್ಲವೂ ಮಕ್ಕಳಿಗೆ ವಿಸ್ಮಯ.

ಕೋಲ ಮುಗಿದು ರಾತ್ರಿಗೆ ಎಲ್ಲರೂ ಮಲಗುವಾಗ ಮೈಸೂರಿನಿಂದ ಬಂದ ಸಂಬಂಧಿಕರೊಬ್ಬರು ತಮ್ಮಲ್ಲೇ ಒಂದು ಪ್ರಶ್ನೆ ಹಾಕಿಕೊಂಡರು. –

”ಈ ಸಮಾರಾಧನೆಯ ವೈಭವ ಇನ್ನೆಷ್ಟು ದಿನ ನಡೆದೀತು? ಯಾರು ಮುಂದಕ್ಕೆ ಇದನ್ನು ನಡೆಸಿಕೊಂಡು ಹೋಗುವರು? ಗಂಡು ಮಕ್ಕಳಿಲ್ಲದ ಈ ಮನೆಯಲ್ಲಿ ಮುಂದಿನ ಜವಾಬ್ದಾರಿ ಯಾರು ವಹಿಸಬೇಕು? ಭವಿಷ್ಯದಲ್ಲಿ ಯಾರು ಪೂಜೆ ಮಾಡುವರು? ಇಲ್ಲಿ ಯಾರು ಕೂರುತ್ತಾರೆ….? ಈ ರೀತಿಯ ಗೊಂದಲಗಳು ಅವರನ್ನು ಕಾಡುತ್ತಿದ್ದಂತೆ ಮರುದಿನ ಈ ಬಗ್ಗೆ ಏನಾದರೂ ನಿರ್ಧಾರಕ್ಕೆ ಬರಬೇಕೆಂದು, ಇತರರ ಜೊತೆ ಚರ್ಚಿಸಬೇಕೆಂದೂ ಒಂದು ತೀರ್ಮಾನಕ್ಕೆ ಬಂದರು.

ಮರುದಿನ ಕೆಲವು ಹಿರಿಯರ ನಡುವೆ ಈ ವಿಷಯವಾಗಿ ಚರ್ಚೆ ಆರಂಭವಾಯಿತು. ಯಾಕೆಂದರೆ ಸಂಜೆಯೊಳಗೆ ಹೆಚ್ಚಿನವರು ಅವರವರ ಊರುಗಳಿಗೆ ಹೊರಟು ಹೋಗುವವರೇ. ಹಾಗಾಗಿ ಅದಕ್ಕಿಂತ ಮೊದಲು ಏನಾದರೊಂದು ತೀರ್ಮಾನ ಆಗಬೇಕಾಗಿದೆ.

”ಇಷ್ಟು ದೊಡ್ಡ ಮನೆಯನ್ನು ಸುಧಾರಿಸಿಕೊಂಡು ಹೋಗುವುದು, ಜೊತೆಗೆ ಮನೆದೇವರ ಪೂಜೆಯನ್ನು ಮಾಡಿಕೊಂಡಿರುವುದು, ಮೇಲ್ವಿಚಾರಣೆ ಎಲ್ಲವನ್ನೂ ಸಮರ್ಥವಾಗಿ ಮಾಡುವವರು ಆಗಿರಬೇಕು. ಈಗಲೇ ಆ ಕುರಿತು ಮುಂದುವರಿಯದಿದ್ದರೆ ಕಷ್ಟ ಆಗಬಹುದು ಮುಂದಕ್ಕೆ…”

ಚರ್ಚೆ ಸ್ವಲ್ಪ ಜೋರಾಗಿಯೇ ನಡೆಯಿತು. ಕೊನೆಯಲ್ಲಿ ಎಲ್ಲರೂ ಒಂದು ತೀರ್ಮಾನಕ್ಕೆ ಬಂದಂತೆ ಬಂಟ್ವಾಳದಲ್ಲಿರುವ ಸೀತಾರಾಮ ಭಟ್ಟರ ದ್ವಿತೀಯ ಪುತ್ರ ಈ ಕುಟುಂಬದ ಹಿರಿಯರ ಮನೆಯಲ್ಲಿ ಮುಂದಿನ ಪೂಜಾ ಜವಾಬ್ದಾರಿಯನ್ನು ಹೊರಬೇಕು ಎಂದು ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು. ಅನಂತರ ಸೀತಾರಾಮ ಭಟ್ಟರ ದ್ವಿತೀಯ ಪುತ್ರ ಶ್ರೀಪತಿಯನ್ನು ಪ್ರತಿಕ್ರಿಯೆ ಕೇಳಿದರು. 

ಆತನೂ ಸಂತೋಷದಿಂದಲೇ ”ಆಯಿತು. ಇನ್ನೂ ಏಳೆಂಟು ವರ್ಷಗಳ ನಂತರದ ಮಾತು ಅಲ್ಲವೇ?” ಎಂದುಬಿಟ್ಟ. ಎಲ್ಲರೂ ಶ್ರೀಪತಿಯೇ ಈ ಕುಟುಂಬದ ಮನೆಯ ಮುಂದಿನ ಜವಾಬ್ದಾರಿ ವಹಿಸುವುದು ಎಂಬ ತೀರ್ಮಾನ ಮಾಡಿಬಿಟ್ಟರು.

ಉಡುಪಿ ಪರಿಸರದಲ್ಲಿ ಪುರೋಹಿತರ ಜೊತೆ ಅಸಿಸ್ಟೆಂಟ್ ಆಗಿ ಪೂಜಾ ಕಾರ್ಯಗಳಿಗೆ ಹೋಗುತ್ತಿದ್ದ ಶ್ರೀಪತಿಗೆ ಇದೇನು ಅಂತಹ ದೊಡ್ಡ ತಲೆಬಿಸಿ ಮಾಡಿಕೊಳ್ಳುವ ಸಂಗತಿ ಎಂದೆನಿಸಲಿಲ್ಲ. ಎಂಟು ವರ್ಷಗಳ ನಂತರದ ಸಂಗತಿಯಲ್ಲವೇ? ಆಮೇಲೆ ನೋಡೋಣ ಏನಾಗುವುದು ಎಂದು. ಅಷ್ಟರ ತನಕ ದೊಡ್ಡಪ್ಪ ಪೂಜೆ ಮಾಡಿಕೊಂಡು ಇರುತ್ತಾರಲ್ಲಾ ಎಂದು ಯೋಚಿಸಿಯೇ ತನ್ನ ಒಪ್ಪಿಗೆ ನೀಡಿದ್ದ.

ಸಮಾರಾಧನೆಯ ಮರುದಿನ ಆ ಮನೆಯ ನೆಂಟರೆಲ್ಲ ಖಾಲಿಯಾದರು. ಶ್ರೀಪತಿಯೂ ಬಂಟ್ವಾಳಕ್ಕೆ ಹೊರಡಲು ತಯಾರಾದ. ನಾಳೆ ಮತ್ತೆ ಉಡುಪಿಗೆ ಬರಬೇಕು.

0———-0———-0———-0———-0

ಈ ನಡುವೆ ಉಡುಪಿಯಲ್ಲಿ ಶ್ರೀಪತಿ ಕೆಲಸ ಮಾಡುತ್ತಿದ್ದ ಆ ಪುರೋಹಿತರಿಗೆ ಮುಂಬಯಿಯಲ್ಲಿ ದೊಡ್ಡ ಉದ್ಯಮಿಯೊಬ್ಬರ ಕಂಪೆನಿಯ ಉದ್ಗಾಟನೆಯ ಸಂದರ್ಭದಲ್ಲಿ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆಗೆ ಮುಂಬಯಿಗೆ ಹೋಗಿ ಬರುವ ಅವಕಾಶ ಸಿಕ್ಕಿತು. ಆ ಪುರೋಹಿತರಿಗೆ ವಿಮಾನದ ಟಿಕೇಟೂ, ಅಸಿಸ್ಟೆಂಟ್‌ಗಳಿಗೆ ಮತ್ಸ್ಯಗಂಧ ರೈಲಿನ ಟಿಕೇಟೂ ಮುಂಬಯಿಯ ಆ ಉದ್ಯಮಿಯೇ ಮಾಡಿ ಕಳುಹಿಸಿದರು. ಶ್ರೀಪತಿಗೂ ಮುಂಬಯಿ ನೋಡುವ ಅವಕಾಶವೊಂದು ಪ್ರಥಮ ಬಾರಿಗೆ ಬಂದಿತ್ತು.

ಅಲ್ಲಿ ಶ್ರೀಪತಿಯ ಬದುಕಿಗೆ ತಿರುವು ಸಿಕ್ಕಿತು. ಆ ದಿನ ಪೂಜೆ ಎಲ್ಲಾ ಮುಗಿದ ನಂತರ ಮುಂಬಯಿಯಲ್ಲಿದ್ದ ಒಬ್ಬರು ಪುರೋಹಿತರು ಶ್ರೀಪತಿಯ ಬಳಿ ”ಇಲ್ಲೇ ಮುಂಬಯಿಯಲ್ಲಿ ಇರುವುದಾದರೆ ನಾನೇ ಎಲ್ಲಾ ವ್ಯವಸ್ಥೆ ಮಾಡುತ್ತೇನೆ.  ಸಾಂತಾಕ್ರೂಜ್‌ನ ಮಂದಿರವೊಂದರಲ್ಲಿ ಪೂಜೆ ಮಾಡಿಕೊಂಡು ಇರಬಹುದು. ಅಲ್ಲೇ ಉಳಕೊಳ್ಳಲೂ ಜಾಗ ಇದೆ. ಇತರ ಪುರೋಹಿತರ ಜೊತೆ ಅಸಿಸ್ಟೆಂಟ್ ಕೆಲಸಗಳಿಗೂ ತೆರಳಬಹುದು” ಎಂದು ಹೊಸ ಆಸೆಯನ್ನು ಎದುರಿಗಿಟ್ಟರು. ಈಗ ಶ್ರೀಪತಿ ಯೋಚನೆಗೆ ಬಿದ್ದ.

”ಯಾವುದಕ್ಕೂ ಊರಿಗೆ ಹೋಗಿ ಯೋಚಿಸುತ್ತೇನೆ. ಎಲ್ಲ ವ್ಯವಸ್ಥೆ ಮಾಡಿ ಬರಬೇಕು. ಬರುವುದಿದ್ದರೆ ಫೋನ್ ಮಾಡುವೆ” ಎಂದು ಫೋನ್ ನಂಬರ್ ಬರೆದಿಟ್ಟುಕೊಂಡ.

ಊರಿಗೆ ಹೋಗಿ ಒಂದು ವಾರ ಕಾಲ ಎಲ್ಲಾ ವ್ಯವಸ್ಥೆಗಳನ್ನು ಮುಗಿಸಿದ ನಂತರ ಮುಂಬಯಿಗೆ ಹೋಗುವ ತೀರ್ಮಾನಕ್ಕೆ  ಶ್ರೀಪತಿ ಮುಂದಾದ. ಸಾಂತಾಕ್ರೂಜ್‌ನ ಮಂದಿರಕ್ಕೆ ಫೋನ್ ಮಾಡಿ ಅರ್ಚಕರ ಬಳಿ ತಾನು ಇಂತಹ ದಿನ ಬರುತ್ತಿದ್ದೇನೆ ಎಂದೂ ತಿಳಿಸಿದ.

0———-0———-0———-0———-0

ಈಗ, ಶ್ರೀಪತಿ ಮುಂಬಯಿಯ ಒಂದೊಂದೇ ಜಾಗಗಳನ್ನು ಪರಿಚಯಿಸಿಕೊಳ್ಳುತ್ತಾ ಹೋದಂತೆ ಮುಂಬಯಿಯಲ್ಲಿ ಬ್ಯುಸಿಯಾದ. ಗಣಹೋಮ, ಸತ್ಯನಾರಾಯಣ ಪೂಜೆ, ಶಾಂತಿಹೋಮ, ವಾಸ್ತುಹೋಮ, ಸುದರ್ಶನ ಹೋಮ…… ಎಂದೆಲ್ಲ ಬೇರೆ ಬೇರೆ ಕಡೆ ಸುತ್ತುತ್ತಾ ಮುಂಬಯಿಯನ್ನು ತಿಳಿಯುತ್ತಾ ಬರತೊಡಗಿದ. ಅನೇಕ ಪುರೋಹಿತರ ಅಸಿಸ್ಟೆಂಟ್ ಆಗಿ ಗುರುತಿಸಿಕೊಂಡ.

ಆದರೆ, ಹೊರಗಡೆ ಹೀಗೆ ಪೂಜೆಗಳಿಗೆ ಹೋಗುತ್ತಾ ಹೋಗುತ್ತಾ ಬರುತ್ತಿದ್ದ ಶ್ರೀಪತಿಗೆ ದೇವಸ್ಥಾನದ ಪೂಜೆ ಕಿರಿಕಿರಿಯಾಗ ತೊಡಗಿತು. ಇದಕ್ಕಿಂತ ಪುರೋಹಿತರ ಜೊತೆ ಅಸಿಸ್ಟೆಂಟ್ ಆಗಿ ತೆರಳಿದರೆ ಕೈತುಂಬಾ ದುಡ್ಡು ಸಂಪಾದಿಸಬಹುದು ಎಂದು ನಂಬಿಕೆಯೂ ಬರುತ್ತಿದ್ದಂತೆ ಒಂದು ದಿನ ದೇವಸ್ಥಾನದ ಪೂಜೆಗೆ ರಾಜೇನಾಮೆ ನೀಡಿದ ಮತ್ತು ಮುಲುಂಡ್‌ನಲ್ಲಿ ಬಾಡಿಗೆ ರೂಮಿಗೆ ಬಂದಿಳಿದ. ಹೊರಗಡೆ ಪುರೋಹಿತರ ಜೊತೆ ತೆರಳಿದಾಗ ಇಂತಿಷ್ಟೇ ಸಮಯಕ್ಕೆ ವಾಪಾಸು ಬರಬಹುದು ಎಂದು ಹೇಳುವಂತಿಲ್ಲ. ಹೀಗಾಗಿ ದೇವಸ್ಥಾನದ ಪೂಜೆಯ ಸಮಯವೂ ಒಂದಿಷ್ಟು ಆಚೀಚೆ ಆಗುತ್ತಿತ್ತು. ಕೆಲವುಮ್ಮೆ ದೇವಸ್ಥಾನದ ಆಡಳಿತ ಮಂಡಳಿಯವರು ತರಾಟೆಗೆ ಎಳೆಯುವುದೂ ಇತ್ತು. ಹೀಗಾಗಿ ಕೆಲವು ದಿನಗಳಿಂದ, ದೇವಸ್ಥಾನದ ಪೂಜೆ ಬಿಟ್ಟು, ಇನ್ನು ಮುಂದೆ ಅಸಿಸ್ಟೆಂಟ್ ಆಗಿ ಪುರೋಹಿತರ ಜೊತೆ ಹೋಗುವುದೇ ಒಳ್ಳೆಯದು. ಕಿರಿಕಿರಿ ಕಡಿಮೆಯಾಗಬಹುದು ಎಂದೆಣಿಸುತ್ತಾ ಇದ್ದ ಶ್ರೀಪತಿಗೆ ಕೊನೆಗೆ ಆ ದಿನ ಬಂದೇ ಬಂತು.

ಈ ನಡುವೆ ಶ್ರೀಪತಿ ಇಲ್ಲಿಂದ ಹೊರಡಲಿದ್ದಾನೆ ಎಂದು ತಿಳಿಯುತ್ತಲೇ ದೇವಸ್ಥಾನದ ಆಡಳಿತದಲ್ಲಿದ್ದ ಒಂದಿಬ್ಬರು ”ದೇವಸ್ಥಾನದಲ್ಲಿ ಕಳವಾಗಿದೆ” ಎಂದು ಅಪಪ್ರಚಾರ ಮಾಡಿದ್ದೂ ಇದೆ. ಅದು ಮತ್ತೊಬ್ಬ ಅಸಿಸ್ಟೆಂಟ್‌ನ ಕೆಲಸವಾಗಿತ್ತು. ಈ ಹಿಂದೆ ಒಮ್ಮೆ ದೇವರ ಕಣ್ಣು ಮನೆಗೆ ಒಯ್ದದ್ದು, ಅನಂತರ ತನಿಖೆ ಮಾಡಿ ಸಿಕ್ಕಿಬಿದ್ದಾಗ – ”ಇಲ್ಲಿದ್ದರೆ ಕಳ್ಳರು ಒಯ್ಯುತ್ತಾರೆಂದು ಮನೆಯಲ್ಲಿ ತೆಗೆದಿರಿಸಿದ್ದೆ” ಎಂದು ಹೇಳಿ ಪಾರಾದ ಊರಿನ ಗ್ರಾಮದೇವಸ್ಥಾನದ ಅರ್ಚಕನ ಘಟನೆಯೊಂದು ಆ ಕ್ಷಣಕ್ಕೆ ಶ್ರೀಪತಿಗೆ ನೆನಪಾದದ್ದೂ ಇದೆ, ಅಂತೂ ದೇವಸ್ಥಾನ ತ್ಯಜಿಸಿ ಮುಲುಂಡ್‌ನ ರೂಮಿಗೆ  ಬಂದುಬಿಟ್ಟ. ಇನ್ನು ಯಾರದೂ ಹಂಗಿಲ್ಲ. ತಿಂಗಳಲ್ಲಿ ಸರಿಯಾಗಿ ಹತ್ತು ಕಾರ್ಯಕ್ರಮ ಸಿಕ್ಕಿದರೂ ನೆಮ್ಮದಿಯಿಂದ ಬದುಕಬಹುದು ಎಂಬ ಸಮಾಧಾನವೂ ಬಂದಿತ್ತು.

ಆದರೆ ಎಣಿಸಿದಂತೆ ಅಷ್ಟು ನೆಮ್ಮದಿ ಸಿಗಲು ಕಷ್ಟವಿತ್ತು. ಸಾಂತಾಕ್ರೂಜ್‌ನಲ್ಲಿದ್ದಾಗ ಅಡುಗೆ ಯಾರಾದರೂ ಇದ್ದವರು ಮಾಡುತ್ತಿದ್ದರು. ಈಗ ರೂಮಲ್ಲಿ ಎಲ್ಲವನ್ನೂ ತಾನೇ ಮಾಡಬೇಕು. ಗಣಹೋಮ ಇದ್ದರೆ ಬೆಳಿಗ್ಗೆ ಬೇಗ ಏಳಬೇಕಿತ್ತು. 

ರಾತ್ರಿಗೆ ವಾಸ್ತು ಪೂಜೆ ಮುಗಿಸಿ ತಡವಾಗಿ ಬಂದರೆ ಮತ್ತೆ ಅಡುಗೆ ಮಾಡಬೇಕು……. ಏನಾದರೂ ಅನಾರೋಗ್ಯ ಕಾಣಿಸಿದರೆ, ಜ್ವರ ಬಂದಾಗ ಎಷ್ಟೊಂದು ಕಷ್ಟ ಎದುರಿಸಬೇಕಾಗುತ್ತಿತ್ತು. ಕೆಲವೊಮ್ಮೆ ಈ ಮುಂಬಯಿ ಬದುಕೇ ಸಾಕು ಎನಿಸುವುದೂ ಇತ್ತು. ಸಣ್ಣ ಪ್ಲ್ಯಾಟ್ ಖರೀದಿಸಬೇಕು, ಮದುವೆ ಮಾಡಿಕೊಳ್ಳಬೇಕು…… ಇತ್ಯಾದಿಗಳನ್ನೂ ಎಣಿಸುತ್ತಿದ್ದರೆ ಆ ಕ್ಷಣಕ್ಕೆ ಗೊಂದಲ ಇನ್ನಷ್ಟು ಹೆಚ್ಚುತ್ತಿತ್ತು. ಯಾಕೆಂದರೆ ತನ್ನನ್ನು ಊರಿನ ಕುಟುಂಬದ ಹಿರಿಯರ ಮನೆಯ ಮುಂದಿನ ಪೂಜೆಗಾಗಿ ನೇಮಕ ಮಾಡಿದ್ದಾರೆ. ತಾನಿಲ್ಲಿ ಮನೆ, ಮದುವೆ…. ಇತ್ಯಾದಿ ಯೋಚಿಸಿದರೆ ಎಷ್ಟು ದಿನ? ಒಂದಲ್ಲ ಒಂದು ದಿನ ಊರಿಗೆ ಹೋಗಲೇ ಬೇಕಾಗಿದೆ. ಶ್ರೀಪತಿಯ ಗೊಂದಲ ದಿನೇದಿನೇ ಹೆಚ್ಚುತ್ತಲೇ ಇತ್ತು. ತನ್ನ ಮುಂದಿನ ಹೆಜ್ಜೆಯನ್ನು ಯಾವ ರೀತಿ ಇರಿಸಬೇಕೆಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ.

0———-0———-0———-0———-0

ಬದ್ಲಾಪುರಕ್ಕೆ ಮರುದಿನ ಬೆಳಿಗ್ಗೆ ಬೇಗನೆ ಹೋಗಿ ಶ್ರೀಪತಿ ತಲುಪಿದ್ದ. ಪುರೋಹಿತರು ಇನ್ನೂ ಬಂದಿರಲಿಲ್ಲ. ಪೂಜೆಯ ಸಾಮಾನುಗಳನ್ನು ಚೀಲದಿಂದ ಹೊರತೆಗೆದು ಅಷ್ಟದ್ರವ್ಯ ಮಾಡಲು ಕೂತ. ಕುಂಡದ ಸುತ್ತ ರಂಗೋಲಿ ಹಾಕಿದ.

ಎಷ್ಟೇ ಹೊತ್ತಾದರೂ ಪುರೋಹಿತರು ಬರಲಿಲ್ಲ. ಮೊಬೈಲ್ ಮಾಡಿದರೂ ಎತ್ತಿಕೊಳ್ಳಲಿಲ್ಲ. ಕೊನೆಗೆ ಇವನೇ ಗಣಹೋಮವನ್ನು ತನಗೆ ಗೊತ್ತಿದ್ದಂತೆ ಮಾಡಬೇಕಾಯಿತು. ಆದರೂ ಮನಸ್ಸಲ್ಲಿ ಪುರೋಹಿತರು ಯಾಕೆ ಬರಲಿಲ್ಲ…..  ಎನ್ನುವುದೇ ಚಿಂತೆಯಾಗಿತ್ತು.

ಆ ಸಂಜೆಗೆ ತಿಳಿಯಿತು ಪುರೋಹಿತರು ರೈಲಿನಿಂದ ಬಿದ್ದು ಪೆಟ್ಟು ಮಾಡಿಕೊಂಡು ಯಾವುದೋ ಆಸ್ಪತ್ರೆಯಲ್ಲಿ ಸೇರಿದ್ದಾರೆಂದು. ಅಂತೂ ಅವರ ಸಂಗತಿ ತಿಳಿದು ಆಸ್ಪತ್ರೆಗೂ ಭೇಟಿ ನೀಡಿ ಮತ್ತೆ ರೂಮಿಗೆ ಬಂದು ಎಂದಿನಂತೇ ಅಡುಗೆ ತಯಾರಿ ನಡೆಸಿದ. ಅದರೆ ಪುರೋಹಿತರು ರೈಲಿನಿಂದ ಬಿದ್ದದ್ದೇ ತಲೆಯಲ್ಲಿ……

ಅಷ್ಟು ಹೊತ್ತಿಗೆ ಊರಿನಿಂದ ಮತ್ತೆ ದೊಡ್ಡಪ್ಪ ಫೋನ್ ಮಾಡಿದ್ದು ಶ್ರೀಪತಿಯ ಮೊಬೈಲ್ ಸದ್ದು ಮಾಡಿತು. ಈವಾಗ ರೇಂಜ್ ಸರಿಯಾಗಿಯೇ ಇದ್ದುದರಿಂದ ಶ್ರೀಪತಿಯು ಮಾತನಾಡಿದ. ”ನಾನು ನಿನ್ನೆನೂ ಫೋನ್  ಮಾಡಿದ್ದೆ. ಆದರೆ ತಾಗಲಿಲ್ಲ. ಏನು ವಿಶೇಷ?” ಅಂದ.

”ಶ್ರೀಪತಿ, ನನಗೂ, ನಿನ್ನ ದೊಡ್ಡಮ್ಮನಿಗೂ ಏನೇನೂ ಸೌಖ್ಯವಿಲ್ಲ. ಬಹಳ ಕಷ್ಟದಲ್ಲಿ ಮನೆಯನ್ನು ನಡೆಸುತ್ತಾ ಇದ್ದೇವೆ. ಪೂಜೆ ಮಾಡುವುದಕ್ಕೂ ಓಡಾಟ ಕಷ್ಟವಾಗಿದೆ. ನೀನು ಮುಂಬಯಿ ಬಿಟ್ಟು ಮನೆಯ ಜವಾಬ್ದಾರಿ ತಕ್ಷಣ ವಹಿಸಬೇಕಾಗಿದೆ. ಮದುವೆನೂ ಮಾಡಿಕೊಳ್ಳಬೇಕು. ಹುಡುಗಿ ನೋಡಿದ್ದೇವೆ. ನಿನಗೆ ತಕ್ಕುದಾದ ಹುಡುಗಿ. ಈ ಮನೆಯನ್ನು ಮುಂದಕ್ಕೆ ನಡೆಸುವವಳು ಆಗಿರಬೇಕಲ್ಲ. ಇನ್ನೆಲ್ಲ ನಿನ್ನ ಕೈಯಲ್ಲಿ. ಎಷ್ಟು ಶೀಘ್ರ ಸಾಧ್ಯವೋ ಅಷ್ಟು ಬೇಗ ಬಂದರೆ ಸಂತೋಷ….” ಎಂದರು.

ಒಂದು ಕ್ಷಣ ಶ್ರೀಪತಿ ಮೌನವಾದ. ಸಾವರಿಸಿಕೊಂಡು, ”ಆಯ್ತು ದೊಡ್ಡಪ್ಪ, ಇನ್ನು ಒಂದು ವಾರದಲ್ಲೇ ಹೊರಟು ಬರುತ್ತೇನೆ. ನನಗೂ ಈ ಮುಂಬಯಿಯ ಬದುಕು ಸಾಕೆನಿಸುತ್ತಿದೆ.  ಹೊರಡುವ ದಿನ ಫೋನ್  ಮಾಡುವೆ. ಟಿಕೇಟ್ ಆದ ತಕ್ಷಣ ತಿಳಿಸುವೆ. ನೀವು ನಿಶ್ಚಿಂತೆಯಿಂದಿರಿ……” ಎಂದು ಸಮಾಧಾನಪಡಿಸಿದ…….

ಇವತ್ತು ಬೇಗ ಊಟ ಮಾಡಿ ಮಲಗಬೇಕು. ನಿದ್ರೆ ಸರಿಯಾಗಿ ಮಾಡಬೇಕು. ನಾಳೆ ಏನೂ ಪೂಜೆ, ಹೋಮ ಇಲ್ಲ. ರಜೆ. ಏನೂ ಕೆಲಸವಿಲ್ಲ. ಮತ್ಸ್ಯಗಂಧ ರೈಲಲ್ಲಿ ಟಿಕೇಟ್ ಬುಕ್ ಮಾಡಿ ಬರಬೇಕು ಎಂದೆಣಿಸಿದ ಶ್ರೀಪತಿ, ಅಡುಗೆ ಮುಗಿಸಿ ಊಟಕ್ಕೆ ಕೂತ. ಪುರೋಹಿತರು ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿ ಬಂದ ತಕ್ಷಣವೇ ತಾನು ಹೊರಡುವುದು ಎಂದು ಮನಸ್ಸಲ್ಲಿ ಖಾತ್ರಿ ಪಡಿಸಿಕೊಂಡು ಅವರು ಗುಣಮುಖರಾಗುವುದನ್ನೇ ಕಾಯತೊಡಗಿದ.

0———-0———-0———-0———-0

ತಾನು ಈ ಸಮಯ ಮುಂಬಯಿಯಲ್ಲಿದ್ದರೆ ತನ್ನ ಅವಸ್ಥೆ ಏನಾಗಿರಬಹುದಿತ್ತು…..? ಆದದ್ದೆಲ್ಲ ಒಳ್ಳೆಯದಕ್ಕೇ. ತಾನು ಆವತ್ತೇ ಮುಂಬಯಿ ತ್ಯಜಿಸಿದ್ದಕ್ಕೆ ಈ ಕ್ಷಣಕ್ಕೆ ಶ್ರೀಪತಿ ನೆಮ್ಮದಿಯ ಉಸಿರುಬಿಟ್ಟ.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter