ಮರೆಯುವುದೆಂತು ಯೋಜನಗಂಧಿಯನು,
ಭೋರ್ಗರೆಯುತಿಹ ನೆನಹಿನ
ವಿರಹ ಪ್ರವಾಹದಿಂದೆನ್ನ
ದಾಟಿಸುವ ಹರಿಗೋಲ ಒಡತಿಯವಳು.
ಅಂಬಿಗರ ಕೇರಿಯ ಆ ಹುಡುಗಿಯ
ಬಿಂಬವೇ ತುಂಬಿಹುದು ಕನಸು_ಮನಸಿನಲಿ.
ಆ ನಿತಂಬಿನಿ ಇಲ್ಲದೆ ಬಾಳುವುದೆಂತು.
ಅಬ್ಬಬ್ಬ ಅವಳ ಚೆಲುವು
ಹುಬ್ಬುಗಳ್ ಬಾಗಿದ ಬಿಲ್ಲು.
ಹಬ್ಬಿರುವ ಅವಳ ತನುಗಂಧ
ಸಗ್ಗದ ಕುಸುಮಗಳಂತೆ
ಮನದೊಳಗೆ.
ಎಲ್ಲಾ ಕನಸುಗಳನು ಇರಿವಂತೆ
ಸೊಲ್ಲನೊಂದ ನುಡಿದನಲ್ಲ
ಆ ಚೆಲುವೆಯ ತಂದೆ,
ನಾಳೆ ಪುಟ್ಟುವ ಕುವರಂಗೆ
ಪಟ್ಟವನೀಯ್ಯಬೇಕೆಂದು.
ಗಂಗೆ ಪೆತ್ತ ಕುವರ
ದೇವವ್ರತನಿರಲು ಸಮರ್ಥನಾಗಿ ಮತ್ತೊಬ್ಬನನು
ಉತ್ತರಾಧಿಕಾರಿ ಮಾಡುವುದೆಂತು.
ಚಿತ್ತದೊಳು ಕಾಡಾಡುತಿಹ ವಿರಹ ಮಮತೆಗಳ ಹೊಯ್ದಾಟದಲಿ
ಉನ್ಮತ್ತನಾಗುತಿರುವೆ.
ಹಂಸತೂಲಿಕವು ಅರೆಕ್ಷಣ
ಹಂಸಗಮನೆಯ ಕೋಮಲ ತನುವೆಂದೆನಿಸುವುದು.
ಧ್ವಂಸ ಮಾಡುವುದು ಕನಸುಗಳನು ಮರುಕ್ಷಣವೆ ವಿರಹ ಮುಳ್ಳಿನ ಹಸೆಯಾಗಿ.
ಬಿಸಿ ಗಾಳಿ ಬೀಸಿಬರಲು
ಅವಳುಸಿರು ತನುವ ಸೋಕಿದಂತೆನಿಸುವುದು.
ಹಸಿವಾಗದು, ಮನ
ಸೇರದು ದಿನದ ಕ್ರಿಯೆಗೆ.