ಅಳಿಸದಿರು ಒಲವನ್ನು ನಂಬದಿರು ಮಿಥ್ಯ
ಮನದ ಕದ ತೆರೆದೊಮ್ಮೆ ನೋಡು ಸತ್ಯ
ನಿನ್ನ ನಾ ವಂಚಿಸೆನು ಎಂದೆಂದೂ ನಿನ್ನವನು
ಎಲ್ಲವನೂ ಮನಬಿಚ್ಚಿ ಹೇಳ್ವೆ ಸಮಕ್ಷ//
ಅಂಜದಿರು ಸ್ನೇಹಕ್ಕೆ ಬೆದರದಿರು ಸನಿಹವನು
ನಂಬಿಕೆಗೆ ದ್ರೋಹ ನಾ ಎಂದೂ ಬಗೆಯೆ
ಇಷ್ಟು ಬಲ್ಲೆನು ನಾನು ಸೂಕ್ಷ್ಮತೆಯ ಅರಿತಿರುವೆ
ನಡೆದುದೆಲ್ಲವ ಮರೆತು ಬರಬಾರದೇ?!//
ನುಡಿಯೊಳಗೆ ತಿರುಳಿಲ್ಲ ನೋಟದಲಿ ಒಲವಿಲ್ಲ
ಸಂಧಿಸಿದ ಕಂಗಳಲಿ ಪ್ರೇಮವಿರದು
ಎಷ್ಟೋ ವರುಷಗಳಿಂದ ಗೂಡು ಕಟ್ಟಿದ ಪ್ರೇಮ
ಸುಟ್ಟು ಹೋಗದ ತೆರದಿ ಇರಬಾರದೇ?!//
ಹುಡುಗಾಟ ನನದಲ್ಲ, ಬೇಡುವೆನು ನಿನ್ನಲ್ಲಿ
ಮುಚ್ಚುಮರೆಯಿಲ್ಲದೆಯೆ ಹೇಳು ಎಲ್ಲ
ನೂರು ಚಿಂತೆಯ ಹರಿಸಿ ಸೊಗಸು ಮನದಲಿ ಬೆರೆಸಿ
ಬಾಳುವಾ ನಾವಿನ್ನು ಮರೆತು ಎಲ್ಲ//