ಮರ ನಿಂತಲ್ಲೆ ನಿಂತಿದೆ
ಮಳೆ ಬಿಸಿಲು ಹುಡುಕುತ್ತಾ
ಬಂದರೂ,
ಮರ ಅವುಗಳ ಹಿಂದೆ
ಸುತ್ತುವುದಿಲ್ಲ
ಶಿಶಿರದ ಚಳಿಯಲ್ಲಿ
ಎಲೆಗಳು ಮರವನ್ನು ತೊರೆದು
ಹೋದರೂ
ಮರ ಜೀವಂತಿಕೆ ಕಳಕೊಳ್ಳದೆ
ತಲೆಯೆತ್ತಿ ನಿಂತಿದೆ
ಬದುಕಿನ ರೀತಿ ನೀತಿ
ಬದಲಿಸುವ ಗೋಜಿಗೆ
ಹೋಗದೆ
ಮರ ನಿಂತಲ್ಲೆ ನಿಂತಿದೆ
ಎಲೆ ತೊರೆದು ನಗ್ನವಾಗಿ
ನಿಂತಿರುವ ಅದರತ್ತ
ಈಗ ಪಕ್ಷಿಗಳು ತಿರುಗಿ ನೋಡುತ್ತಿಲ್ಲ
ಆದರೂ
ಅದರ ಮನದೊಳಗೆ ಮನಸ್ಸಿಲ್ಲ
ಮತ್ತೆ ವಸಂತ
ನಳ ನಳಿಸುತ್ತಿದೆ ಮರ
ಮರಳಿ ಬಂದ ಎಲೆಗಳು ಹಸಿರು
ಚಿಗುರು ಹೂವು ಹಣ್ಣು
ಮತ್ತೆ ಹಕ್ಕಿಗಳ ದಂಡು
ಮರದ ಮೇಲೆಲ್ಲ ಮೆರವಣಿಗೆ
ಮರ ಮಾತ್ರ ನಿಂತಿದೆ
ಅದೇ
ಘನ ಗಂಭೀರತೆಯ ಮುದ್ರೆ
ಹೊತ್ತು, ಅದೇ ಗತ್ತು
ಮೂರೂ ಹೊತ್ತು….