(ಅಗಲಿದ ಹನ್ನೊಂದು ವರ್ಷಗಳ ನಂತರದ ಒಂದು ಕನಸು)
ರಾತ್ರಿಯ ಹೊತ್ತು ಕಂಗಳ ಮುಚ್ಚಿ
ಹಾಗೇ ಮಲಗಿದ್ದೆ
ದೀಪ ಇರಲಿಲ್ಲ, ಚಂದ್ರ ಬರಲಿಲ್ಲ,
ದೂರ ಇತ್ತು ನಿದ್ದೆ
ರೆಪ್ಪೆಗಳೊಳಗೆ ಅಪ್ಪ ಬಂದರು
ತಮ್ಮದೆ ಬೆಳಕಲ್ಲಿ
ಬಯಲಲ್ಲೊಬ್ಬರೆ ನಡೆಯುತಿದ್ದರು
ನಿಧಾನಗತಿಯಲ್ಲಿ
ಮಾತುಗಳಿಲ್ಲ ನನ್ನನ್ನವರು
ನಿಜಕೂ ನೋಡಿದರೆ?
ಅವರೇ ಕಣ್ಣೊಳಗಿಳಿದುದು ಖಚಿತ
ಎಲ್ಲಿಗೆ ಸಾಗಿದರೆ?
ಮಾತೇ ಆಡದೆ ಹೋದರು ಯಾಕೆ?
ಸಿಟ್ಟಾಗಿರಬಹುದೆ?
ನನಗೆ ತಿಳಿಯದೆ ನನ್ನಿಂದೇನೋ
ತಪ್ಪಾಗಿರಬಹುದೆ?
ಮೌನ ಗರ್ಭದಲಿ ಅವರು ಆಡದ
ಮಾತು ಇರುವವೇನು?
ಬಯಲಿನ ಭಾಷೆಗೆ ಅನಂತಾರ್ಥಗಳು
ಅರಿಯಬಹುದೆ ನಾನು?
* ಚಿಂತಾಮಣಿ ಕೊಡ್ಲೆಕೆರೆ








1 thought on “ಅಪ್ಪ ಕಂಡರು”
ಸರಳ , ಸುಂದರ, ಅರ್ಥಗರ್ಭಿತ