ಸುತ್ತಿ ಬರಬೇಕು
ಬುಗುರಿಯಂತಲ್ಲ ಉಯ್ಯಾಲೆಯ ಹಾಗಲ್ಲ
ಇಲ್ಲೇ ಇರದೆ ಆಚೆ ಊರಾಚೆ
ಕೋಲಾಹಲದ ನಡುವೆ ಒಳಗಣ್ಣ ತೆರೆದು
ಎಲ್ಲರೊಳ ಮನಸನರಿಯಬೇಕು,
ಇಲ್ಲಿಹುದು ಎಳೆಚೂರು ಎಲ್ಲಿದೆ ಬಹುಪಾಲು…!
ತಿರುವು ಮುರುವುಗಳ ಪಥಗಳ ನಡುವೆ
ನೆಗೆದು ಸರಿಯುವ ಗಾಲಿ
ಹಗಲಿರುಳ ತೂಗಿನಲಿ ಮುಗುಳುನಗುತ ಸರಿಯುವ ಕಾಲ
ಕಾಣಬೇಕು ಮನಗಾಣಬೇಕು ವಿಶಾಲವಾಗಬೇಕು
ಸರಿತೂಗಿಸೆಂದು ಹೇಳಿ ಬರಬೇಕು
ಬೆಳೆ ಕಳೆದ ಬೋಳು ಹೊಲ ಅದ್ಯಾವ ನೆಲ…?
ಹಸಿರನೊಣಗಿಸಿ ನಿಂತ ನೀಳ ಮರ ಎಲೆ ಕಳಚಿ
ಉಸಿರ ಲಯ ಕಂಪಿಸುತ
ಬಿಸಿಲ ಬಿರುಸನು ಹಳಿದಂತೆ…!
ಜಲದ ಇನಿದನಿಗೆ ನೆಲದ ಹಾಡಿನ ಸೊಲ್ಲು
ಪದದಾಳದ ಮೊರೆತವನಾಲಿಸಿ ಬರಬೇಕು
ಮಿಕ್ಕಿದವುಗಳ ನೀಡುವ ಮನಸ್ಸುಗಳಿಲ್ಲದೆ
ಮೃಷ್ಟಾನ್ನ ಚಿತ್ರಾನ್ನ ಹಾದಿ ಬೀದಿಯಲಿ ಕಾಲಡಿಯಲಿ
ಕಸದ ತೊಟ್ಟಿಯ ಸುತ್ತ ಸಣಕಲು ಅಂಗೈಯಲುಗು
ಸರಿತೂಗಿಸಲಾಗದೇ…?
ಉಳ್ಳವರು ಇಲ್ಲದವರ ನಡುವೆ…!
ಸಮನಿಸಿರೆಂದು ಹೇಳಿ ಬರಬೇಕು
ಹೆಣ್ಣು ಹೊನ್ನು ಮಣ್ಣಿಗೆ ಜಗಳ ಜಗದಗಲ
ಒಬ್ಬರಿಗೊಬ್ಬರಾಗದಂತೆ ಮೋಡ ಮಿಂಚೆಸೆದಂತೆ
ಅಜ್ಞಾನದ ಕತ್ತಲೆಯಲಿ ಕಾಣೆಯಾಗುತಿವೆ
ಹರೆಯಗಳ ಸರಮಾಲೆ
ಅದೇ ನೀತಿ ಅದೇ ರೀತಿಯನುಳಿದು
ಹೊಸತೊಂದು ಬರಬಹುದೇ ತೆರೆಯ ಮರೆಯಿಂದ…!
ಸುಳ್ಳೆ ಮರುಗುವ ಬದಲು
ಸುತ್ತಿ ಬರಬೇಕು ಜಗದಗಲದ ಊರುಕೇರಿಯಲಿ
- ಅನಿತಾ ಪಿ. ತಾಕೊಡೆ








1 thought on “ಸುಳ್ಳೆ ಮರುಗುವ ಬದಲು”
ತುಂಬಾ ಉತ್ತಮವಾಗಿ ಮೂಡಿಬಂದಿದೆ. ಅಭಿನಂದನೆಗಳು ಅನಿತರವರೆ 🥰