ಎದೆಯ ದನಿಯನು, ಗಗನಕೆಲ್ಲ ಚೆಲ್ಲಿ ಪಂಚಮದಲ್ಲಿ
ವಿಶ್ವಕೆ ಎರಚುವಾಸೆ
ಕದವ ಕಿರುತೆರೆದು, ಮನಕೆಲ್ಲ ಅರಳಿ ಆಳದಲ್ಲೆಲ್ಲೋ
ನಶ್ವರವ ಮರೆಯುವಾಸೆ
ಓಂಕಾರವೊಂದು ಜಗವೆಲ್ಲ ಪಸರಿಸಿ
ಸೃಷ್ಟಿಕಾರಣವ ಅರಹುತಿಹದು
ಸಿಂಗಾರದಳದಲ್ಲಿ ಮನವೆಲ್ಲ ಕಾಡಿಸಿ
ಅಷ್ಟದಿಕ್ಕುಗಳು ಅರಳುತಿಹವು
ಇಂದು ಹೀಗೆ ಇಲ್ಲಿ, ಎದೆಯ ಆಳದಲ್ಲಿ
ನವಿರಾದ ನೆನಪೊಂದು ಸುಳಿಯುತಿಹುದು
ಅಂದು ಕಾಡಿದ ಬಯಕೆ, ಸುರುಳಿ ಸುತ್ತಿ ಇಲ್ಲಿ
ಸವಿಯಾದ ಗಾನವನು ಹಾಡುತಿಹುದು
ಸುರಿದುಹೋಗಲಿ ಹಾಗೆ, ಪ್ರೀತಿಮೋಡಗಳಲ್ಲಿ
ಸರ್ವರಿಗೆ ಸಮಮಳೆಯು
ಬರಿದಾಗಲಿ, ಎಲ್ಲ ಮನಸುಗಳಲ್ಲಿ
ವೈಷಮ್ಯದ ಕಹಿತೊರೆಯು
ಆಹಾ ಸುಖಸುಮವೇ,ಅರಳು ಎಲ್ಲರ ಹಾದಿಯಲಿ
ದಾರಿ ಸುಗಮವಾಗಲಿ
ಮಹಾಯಾನಕೆ ತೃಪ್ತ ಜೀವ ಸಜ್ಜುಗೊಳ್ಳಲಿ
ಹಾರಿ ನಲಿಯಲಿ
* ಎಂ.ವಿ. ಶಶಿಭೂಷಣ ರಾಜು







