ಫಾದರ್ ವಿಲಿಯಂ, ನಿಮಗೆ ಮುದಿ ವಯಸು ಈಗ
ಕೂದಲೂ ಹಣ್ಣಾಗಿದೆ
ಯಾವಾಗ ನೋಡಿದರೂ ಶೀರ್ಷಾಸನದ ಭಂಗಿ!
ಬೇಕೆ ಇದು ಈ ವಯಸಿಗೆ!
ಮಗೂ, ಯೌವನದಲ್ಲಿ ನಾನೂ ಹೆದರಿದ್ದೆ :
“ಮಿದುಳಿಗೆ ಏಟಾದರೆ!”
ಮಿದುಳಿಲ್ಲವೆಂದೀಗ ಗೊತ್ತಾಗಿದೆ!
ಮರುಮರಳಿ ಹೀಗೇ ನಿಲುವೆ!
ವಯಸ್ಸಾಗಿದೆ ನಿಮಗೆ, ಫಾದರ್ ವಿಲಿಯಂ,
ಬೊಜ್ಜು ಮೈ ಕುಣಿಯುತ್ತಿದೆ
ಹಿಂ ಪಲ್ಟಿ ಹೊಡೆಯುವಿರಿ ಬಾಗಿಲ ಪಕ್ಕ!
ಏಕೆಂದು ತಿಳಿಯಬಹುದೆ?
ನುಡಿವರು ‘ಮುನಿವರ’ ನರೆಮುಡಿ ಕುಣಿಸುತ:
“ಕೈಕಾಲು ಗಟ್ಟಿ ಇವೆ”
ಈ ಮುಲಾಮೇ ಅದರ ಗುಟ್ಟು, ನಿನಗೂ ಎರಡು
ಪೆಟ್ಟಿಗೆ ಮಾರಿಬಿಡುವೆ!
ವಯಸ್ಸಾಗಿದೆ ನಿಮಗೆ, ದವಡೆಗಳು ದುರ್ಬಲ
ತಿನ್ನಲಾಗದು ಖಂಡಮಾಂಸ.
ಅದು ಹೇಗೆ ತಿಂದಿರೋ! ಮೂಳೆ, ಕೊಕ್ಕುಗಳೊಡನೆ
ಹೆಬ್ಬಾತು ಆಯ್ತು ಧ್ವಂಸ!
ತಾರುಣ್ಯದಿಂದಲೂ ಹೆಂಡತಿಯ ಜೊತೆ ಜಗಳ!
ಬಿಡದೆ ಮಾಡಿದೆನು ವಾದ
ಗಟ್ಟಿಯಾದವು ನನ್ನ ಸ್ನಾಯು, ದವಡೆಗಳು!
ಅಳುಕಬೇಕಿಲ್ಲ ಈಗ!
ವಯಸ್ಸಾಗಿದೆ ನಿಮಗೆ, ನಿಮ್ಮ ಕಂಗಳ ಚುರುಕು
ಕುಂದಿದೆ, ನಾನೇ ಕಂಡೆ!
ನಾಸಿಕದ ತುದಿಯಲ್ಲಿ ಬೀಳದಂತೆ ಈಲ್
ನಿಲಿಸಿದಿರಿ ಹೇಗೆ ತಂದೆ?
ಮೂರು ಪ್ರಶ್ನೆಗಳನ್ನು ಆಗಲೇ ಉತ್ತರಿಸಿದೆ
ಅತಿಶಾಣ್ಯಾ ಆಗಬೇಡ
ಮತ್ತೆ ಮತ್ತದೆ ಪ್ರಶ್ನೆ! ಮರಳಿ ಮಾತಾಡಿದರೆ
ಒದ್ದುಬಿಟ್ಟೇನು ಮೂಢ!
ಒದ್ದುಬಿಟ್ಟೇನು ಮೂಢ
ಮತ್ತೆ ಮಾತಾಡಬೇಡ
- ಮೂಲ: ಲೂಯಿಸ್ ಕಾರೊಲ್ (You are old, father William) ಕನ್ನಡಕ್ಕೆ : ಚಿಂತಾಮಣಿ ಕೊಡ್ಲೆಕೆರೆ








5 thoughts on “ವಯಸ್ಸಾಯಿತು ನಿಮಗೆ, ಫಾದರ್ ವಿಲಿಯಂ”
ಎಂದಿಗೂ ಮದುವೆಯಾಗಿಲ್ಲದವನ, ವೈಚಾರಿಕ ಆಯಾಮದ ವಸ್ತು ಈ ಕವಿತೆಯದು. ಹತಾಶೆಯ ಸಾಲುಗಳು ಹುರುಪಿನಿಂದ ಹೊರಬಿದ್ದಿವೆ, ಯುವಮನದಲ್ಲಿ.
ರಸಗ್ರಹಣ ಚೆನ್ನಾಗಿ ಮೂಡಿಬಂದಿದೆ.
ಮುದಿತ ಮುದಿತನ. ಲವ ಲವಿಕೆಯ ಕುದಿ ತನ
ಮುದಿತ ಮುದಿತನ. ಲವ ಲವಿಕೆಯ ಕುದಿ ತನ
ಬನಿಯನದ ಅಂಗಿ
ಶೀರ್ಷಾಸನದ ಭಂಗಿ
ಮಿದುಳಿಲ್ಲದ ಮುದಿ ಮಾಮ
ಮೈಯೆಲ್ಲಾ ಮುಲಾಮ
ಚೆನ್ನಾಗಿದೆ, ಚೆನ್ನಾಗಿದೆ!
ಇಂಗ್ಲಿಷಿನಲ್ಲೂ ಓದಿದೆ ಅನುವಾದ ಚನ್ನಾಗಿ ಮೂಡಿ ಬಂದಿದೆ
ಮಿದುಳಿಲ್ಲವೆಂದೀಗ ಗೊತ್ತಾಗಿದೆ!😇