ಆಗಿನ್ನೂ ಚುಮುಚುಮು ಬೆಳಗು. ಊರೆಲ್ಲ ಶಾಂತವಾಗಿ ಮಲಗಿದಂತಿತ್ತು. ಉಟ್ಟ ಸೀರೆ ನಿರಿಗೆಯನ್ನೆತ್ತಿ ಹಿಡಿದು, ಸೆರಗನ್ನು ತಲೆಯ ಮೇಲೆ ಬರುವಂತೆಳೆದು ಅದರ ಒಂದು ತುದಿಯನ್ನು ನೆರಿಗೆಯೊಂದಿಗೇ ಸೇರಿಸಿ ಸೊಂಟಕ್ಕೆ ಸಿಗಿಸಿ ಭದ್ರ ಮಾಡಿಕೊಂಡಳು ಚೆನ್ನಮ್ಮ. ಒಂದು ನೀರಿನ ಬಾಟಲಿ ಒಂದು ಬುತ್ತಿಯ ಗಂಟಿನೊಂದಿಗೆ ಮನೆಯಿಂದ ಹೊರಹೊರಡುವ ಮುನ್ನ ಮುಸುಗಿಕ್ಕಿ ಮಲಗಿದ ಮಗನನ್ನು ಅಲುಗಾಡಿಸಿ ಎಬ್ಬಿಸುತ್ತಾ ‘ಬಾಗಿಲಾ ಹಾಕಿಕೊಂಡು ಮಕ್ಕೊಳಪ್ಪಾ. ನಾ ಎಲಿ ಹರಕೊಂಡು ಬರಾಕ ಹೊಂಟೇನಿ’ ಎಂದಳು ಚೆನ್ನಮ್ಮ. ಬೇಸರದಿಂದಲೇ ಹೊದಿಕೆ ಸರಿಸಿ ಮೇಲೆದ್ದ ಪವನ್ ‘ದಿನಾ ಇದೇ ಕಥೆ, ಒಂದು ದಿನಾನೂ ಬೆಳಗಾಗೂ ತನಾ ಸುಖವಾಗಿ ನಿದ್ದಿ ಮಾಡಾಕ ಆಗಂಗಿಲ್ಲ ಈ ಮನ್ಯಾಗ’ ಎಂದ.
ಬೆಳಂಬೆಳಿಗ್ಗೆ ಜಗಳವಾಡುವ ಮನಸ್ಸು ಬಾರದೇ ಚೆನ್ನಮ್ಮ ನಿಟ್ಟುಸಿರಿಟ್ಟು ಹೊಸ್ತಿಲು ದಾಟಿ ಎದುರು ಮನೆಯ ಬಾಗಿಲೆದುರಿಗೆ ಹೋಗಿ ನಿಂತು ಮೆಲ್ಲನೆ ಚಿಲಕವನ್ನು ಟಕ್ ಟಕ್ ಎಂದೆರಡು ಸಲ ಬಡಿದಳು. ‘ಬಂದೆ ಚಿಗವ್ವಾ’ ಪ್ರತ್ಯುತ್ತರ ನೀಡುತ್ತಲೇ ನೀಲಾ ಬಾಗಿಲು ತೆರೆದಳು. ಮೂಲಿ ಮನಿ ಶಾಂತಕ್ಕ, ಮ್ಯಾಗಿನ ಮನಿ ರೇಣಕಾ ಬರ್ತಿನಿ ಅಂದಾರು ನಡಿವ್ವ, ಎಂದು ಬಾಗಿಲೆಳೆದುಕೊಂಡು ಚೆನ್ನಮ್ಮನ ಜೊತೆ ಸೇರಿದಳು. ಮತ್ತೈದು ನಿಮಿಷದಲ್ಲಿ ಶಾಂತಕ್ಕ ರೇಣುಕಾ ಜೊತೆಯಾದರು.
‘ಶಾಂತಕ್ಕ ಮತ್ಯಾರಾರ ಬರಾವ್ರ ಇದ್ದಾರೇನು? ನಾ ಯಾರಿಗೂ ಹೇಳಿಲ್ಲ. ನೀವ್ಯಾರದಾರ ಮುಂದ ಹೇಳಿರೇನು’ ಕೇಳಿದಳು ಚೆನ್ನಮ್ಮ.
‘ಇಲ್ಲವ್ವಾ ಭಾಳ ಮಂದಿ ಕೂಡಿ ಹ್ವಾದ್ರ ಮಾತೇ ಜಾಸ್ತಿ ಆಕ್ಕಾವು. ಕೆಲ್ಸಾ ಕಮ್ ಆಕ್ಕಾವು, ನಾಲ್ಕಮಂದಿ ಸಾಕು’ ಎಂದು ಬುತ್ತಿಗಂಟನ್ನು ತಲೆಗೇರಿಸುತ್ತಾ ನುಡಿದಳು ಶಾಂತಕ್ಕ.
ನಾಲ್ವರೂ ಸಣ್ಣಗೆ ಮಾತಾಡುತ್ತಾ ಊರ ಹೊರಗಿರುವ ಗುಡಿ ಮುಂದೆ ಬಂದರು ‘ಹೊರಲಾರದಷ್ಟು ಮುತ್ತುಗದೆಲೆ ಇಂದ ಸಿಗಲಿ’ ಎಂದು ಹನುಮಪ್ಪನಲ್ಲಿ ಪ್ರಾರ್ಥಿಸಿಕೊಂಡರು!
‘ಚೆನ್ನಮ್ಮಾ ಅಡಗಿ ಮಾಡಿಟ್ಟು ಬಂದ್ಯೋ, ಮಕ್ಕಳು ಮಾಡಿಕೊಳ್ಳತಾರೋ?’ ಎಂದು ಶಾಂತಕ್ಕ ಕುತೂಹಲದಿಂದ ಕೇಳಿದಳು.
‘ಏನೂ ಅಡುಗೆ ಮಾಡಿಕೊಳ್ಳಂಗಿಲ್ಲ ಬಿವ್ವಾ. ರಾತ್ರಿ ರೊಟ್ಟಿ ಬಡಿದು ಬುಟ್ಟಿ ತುಂಬಿಸಿಡತೀನಿ, ಕಾಳು ಪಲ್ಯೆ, ತಪ್ಪಲ ಪಲ್ಲೆ ಏನಾರ ಒಂದು ಮಾಡಿಟ್ಟಿರತೇನಿ, ಅದರದ್ದೇ ಕಟ್ಟು ಬಸಿದು ಸಾರು ಮಾಡಿಟ್ಟಿರತೀನಿ. ಹೊಟ್ಟಿ ಹಸದಾಗ ಉಂಡಿರತಾರ. ಹುಡುಗಿ ಒಂದೀಟು ಕಸಾ ಉಡುಗಿ ನಳಾ ಬಂದಾಗ ನೀರು ತುಂಬಿ ಇಟ್ಟಿರತತಿ. ಎಲಿ ಹಚ್ಚಾಕನೂ ಕೈಗೂಡತತಿ. ಮಗಾ ಅಂಕ್ರ ಥೇಟ್ ಅವರಪ್ಪನ್ನ ಹೋತಾನ. ಕೆಲಸಿಲ್ಲಾ ಬೊಗಸಿಲ್ಲ. ನಾಸ್ಟಾ ಮಾಡತನ, ಹಾಂಗ ಬ್ಯಾಟ ಬಾಲು ಆಡಾಕ ಹೊಕ್ಕಾನ, ಕಾಲೇಜು ಮೆಟ್ಟಲಾ ಹತ್ಯಾನಲಾ. ಕೂಲಿ ನಾಲಿ ಮಾಡಂಗಿಲ್ಲಂತ. ಬಿ.ಎ ಮಾಡೀನಿ ಅಂತಾನ. ಅಂವಾ ಓದಿದ್ದಕ್ಕ ಈ ಊರಿನ್ಯಾಗ ಯಾವ ನೌಕ್ರಿ ಐತವ್ವಾ? ವ್ಯಥೆಯಿಂದಲೇ ಚೆನ್ನಮ್ಮ ಮಾರುತ್ತರವಿತ್ತಳು.
‘ಇನ್ನೂ ಹುಡುಗು ಬುದ್ದಿ, ಇಂದಿಲ್ಲಾ ನಾಳೆ ಸುಧಾರಿಸ್ತಾರ ತಗೋ’ ಶಾಂತಕ್ಕ ಸಮಾಧಾನ ಹೇಳಿದಳು.
‘ನಿನ್ನ ಬಾಯ ಹರಕೆಯಿಂದ ಹಾಂಗ ಆಗ್ಲಿ ಅಕ್ಕಾ, ಮಾತಾಡಿಕೊಂತ ಎಷ್ಟ ಜಲ್ದಿ ಗಾಳಿಗುಡ್ಡಕ್ಕ ಬಂದೀವು’ ಎನ್ನುತ್ತ ಕಣ್ಣಿಗೆ ಕಂಡ ಮುತ್ತುಗದ ಗಿಡದತ್ತ ಧಾವಿಸಿದರು.
ಮೂರು ಎಲೆಗಳಿರುವಂತೆ ಎಲೆಗಳನ್ನು ಕಿತ್ತು ನೀಟಾಗಿ ಸೀರೆಯ ಮೇಲೆ ಜೋಡಿಸಲಾರಂಭಿಸಿ ಮಾತು ಕಡಿಮೆ ಮಾಡಿ ಕೈ ಚುರುಕು ಮಾಡಿದರು. ಆ ಗಿಡದ ಎಲೆಗಳೆಲ್ಲ ಮುಗಿದ ನಂತರ ಮತ್ತೊಂದು ಗಿಡದ ಹುಡುಕಾಟ ಶುರುವಾಯ್ತು.
‘ನಾಲ್ಕಾರು ವರುಸದ ಹಿಂದಕ್ಕ ಎಷ್ಟರ ಮುತ್ತುಗದ ಗಿಡಾ ಇದ್ವು ಈ ಗುಡ್ಡದಾಗ, ಈ ಹಾಳು ಚೆದರಂಗಿ ಗಿಡಾ, ಕಾಂಗ್ರೆಸ್ ಕಂಟಿ ಹುಟ್ಟಿದ ಮ್ಯಾಲ ಮುತ್ತುಗದ ಗಿಡಾನೇ ಕಮ್ಮ ಆಗ್ಯವು, ಮೊನ್ನೆ ಚೆದುರಂಗಿ ಮಟ್ಟಿ ತಾವಕ್ಕ ಒಂದು ದ್ವಾಡ್ಡ ಮುತ್ತುಗದ ಗಿಡಾ ಇತ್ತು ಅದರ ಎಲಿ ಹರಿಯೋ ಮುಂದ ಮುಳ್ಳಿನಿಂದ ನನ ಕೈಗ ಎಷ್ಟು ಗೀರು ಬಿದ್ದಾವು ನೋಡಬೇ’ ಎಂದಳು ನೀಲಾ.
‘ನನ್ ಕೈಗೂ ರಗಡ ಗಾಯಾ ಅದಾವು, ಜಳಕಾ ಮಾಡೂ ಮುಂದ ಬಿಸಿ ನೀರು ಬಿದ್ದರ ಜೀಂವಾ ಹೋದ ಹಾಂಗ ಆಕ್ಕೇತಿ. ಆದರ ಈ ತರಚುಗಾಯಾ ಆದ್ರೂ ಬೇಕು. ಹಾವು ಚೇಳು ಸಿಗಬಾರದು ನೋಡವ್ವಾ, ಎಡ್ಡ ವರಸದ ಹಿಂದಕ್ಕ್ ಎಲಿ ಕೊಯ್ಯಾಕ ಬಂದ ಈರವ್ವ ನಾಗ್ರಾವು ಕಚ್ಚಿ ಸತ್ತ ಮ್ಯಾಲ ಒಂದ ನಮೂನಿ ಭಯಾ ಮನಸ್ಸಿನ್ಯಾಗ ಅಡಗಿಕೊಂಡ ಕುಂತೇತಿ’ ಎಂದಳು ಚೆನ್ನಮ್ಮ. ಅರೆಘಳಿಗೆ ಮೌನವಾಗಿ ಸುಧಾರಿಸಿಕೊಂಡು ಮತ್ತೆ ಹಿಂದಿನ ಘಟನೆಗಳನ್ನು ನೆನೆಪಿಸಿಕೊಳ್ಳುತ್ತಾ ಮಾತು ಮುಂದುವರೆಸಿದಳು.
ಶಾಂತಕ್ಕಾ ಆ ಈರವ್ವನ ಹೆಣ್ಣಮಕ್ಕಳನ್ನು ನೋಡಿ ಜೀಂವಾ ಮರ ಮರಾ ಅಂತತಿ. ಆಕಿ ಸತ್ತಾಗ ಹಿರಿ ಮಗಳು ಚೊಚ್ಚಿಲ ಬಾಣಂತಿ. ಎರಡನೇ ಮಗಳಿಗಿ ಗಂಡು ಗೊತ್ತಾಗಿತ್ತು. ರೊಕ್ಕಾ ಹೊಂದಿಸಾಕ ಹೆಚ್ಚೆಚ್ಚು ದುಡೀಬೇಕಂತ ಸಂಜಿಗತ್ತಲತನಾ ಗುಡ್ಡಾ ತಿರುಗಾಕ ಹತ್ತಿದ್ಲು ಆಕಿ. ಅಂದ ನಾನೇ ಆಕಿ ಜೊತಿ ಇದ್ದಾಕಿ. ಕತ್ತಲಾತು ಈರಕ್ಕಾ, ಇಂದಿಗಿಷ್ಟ ಎಲಿ ಸಾಕು ಮನಿಗಿ ಹೋಗೋಣಂದ್ರೂ ಕೇಳಲಿಲ್ಲ. ಕಂಟ್ಯಾಗಿದ್ದ ಗಿಡದ ಎಲಿ ಹರಿಯಾಕಂತ ಕಾಲಿಟ್ಟಾಕಿ ದೀಡ ಮಾರ ಉದ್ದ ಇದ್ದ ಹಾಂವಿನ ಬಾಲ ತುಳಿದುಬಿಟ್ಟಾಳ. ಸಿಟ್ಟಿಗೆದ್ದ ಮ್ಯಾಲ ನಾಗಪ್ಪ ಬಿಟ್ಟಾನಾ, ಆಕಿ ಕಾಲಿನ ಮ್ಯಾಲ ಹಲ್ಲೂರಿಸಿ ಕಡಿದು ಸರಾ ಸರಾ ಹೋಗಿಬಿಟ್ಟಾನ’ ನಾ ಗಾಬರಿ ಹೊಡ್ದೆಹೋಗಿದ್ದೆ. ಊರಿನತನಕಾ ಆಕಿನ್ನ ನಾ ಒಬ್ಬಾಕಿ ಹೊತಗೊಂಡು ಹೋಗಾಕ ಆಕ್ಕೇತೆನು? ನೀರು ಕುಡಿಸಿದೆ, ಬಾಯಾಗ ಬುರುಗು ಬರಾಕ ಹತ್ತಿತ್ತು. ಗಾಯದಿಂದ ಒಂದ ತುಸು ಮ್ಯಾಲಕ್ಕ ನನ್ನ ಸೀರಿ ಸೆರಗ ಹರಿದಕ್ಯಾರ ಬಿಗಿಯಾಗಿ ಕಟ್ಟಿ ‘ಇಲ್ಲೆ ಮಕ್ಕೋವ್ವಾ ಯಾರನ್ನರೇ ಕರಕೊಂಡ ಬರತೀನಿ’ ಅಂದಾಕಿ ಗುಡ್ಡಾ ಇಳಿದು ಓಡಿದೆ. ಹೊಲದಿಂದ ಹೊಳ್ಳಿ ಹೋಗೂ ಗಣಸಮಕ್ಕಳು ಸಿಕ್ಕಿದ್ರು. ಅವರನ್ನ ಕರಕೊಂಡು ಈರವ್ವ ಇದ್ದಲ್ಲಿ ಬರೋ ತನಾ ಅಂದ್ರ ಆಕಿ ಜೀಂವಾನೇ ಹೋಗಿಬಿಟ್ಟಿತ್ತು. ಹೆಣಾ ಹೊತಕೊಂಡು ಊರಿಗೆ ಹೋಗಿದ್ದಾತು. ಹಡೆದು ಒಂದ ತಿಂಗಳೂ ತುಂಬದ ಬಾಣಂತಿ ಮಗಳು ಎದಿ ಎದಿ ಬಡಕೊಂಡು ಎಷ್ಟರ ಗೋಳಾಡಿದಳು ಪಾಪ. ‘ಅಳಬ್ಯಾಡವ್ವಾ ಎಷ್ಟ ಅತ್ರೂ ಹೋದ ಜೀಂವಾ ಹೊಳ್ಳಿ ಬರೂದಿಲ್ಲಾ ಅಂತಾ ಸಮಾಧಾನಾ ಹೇಳೂದ್ರಾಗ ನಾ ಹೈರಾಣಾಗಿಹೋದೆ’…….
ಮಠದಾಗಿನ ದೊಡ್ಡಸ್ವಾಮಿಗೋಳು ಹೇಳ್ತಾರಲ್ಲಾ ಯಾರಾರ ಸತ್ತಾಗ ಎಲ್ಲಾರೂ ವೈರಾಗ್ಯದ ಮಾತಾಡತಾರ. ಸ್ವಲ್ಪ ದಿನಾ ಆದ ಮ್ಯಾಲ ಮತ್ತ ಎಲ್ಲಾ ಮರ್ತು ಮೊದಲಿನ ಹಾಂಗ ಆಕ್ಕಾರ! ಹಾಂಗ ಆತು ನೋಡವ್ವಾ ,ಈರವ್ವಗ ಮಣ್ಣು ಕೊಟ್ಟ ಬಂದ ಮ್ಯಾಲ ನಾಲ್ಕಾರು ದಿನಾ ಯಾರೂ ಎಲಿ ಕೊಯ್ಯಾಕ ಹೋಗಿಲ್ಲ. ಅದೇ ಹೊತ್ತಿನ್ಯಾಗ ಹುಬ್ಬಳ್ಳಿ ಸಾವುಕಾರ್ರು ಬಂದು ಎಲಿ ಕಟ್ಟು ಖರೀದಿ ಮಾಡಾಕ ಇನ್ನೊಂದು ತಿಂಗಳಿಗೆ ಬರ್ತೇನಿ ಅಂದುಹ್ವಾದ್ರು. ಹುಟ್ಟಿದೋರೆಲ್ಲ ಒಂದಿನಾ ಸಾಯೂದು ಇದ್ದೇ ಇರ್ತತಿ. ಅಜೂದ್ಯಾಕ, ಎಲಿ ಹಚ್ಚದಿದ್ರೆ ಈ ಊರಿನ್ಯಾಗ ಇರೋವ್ರು ಹಸಕೊಂಡ ಸಾಯಬೇಕಾಗ್ತತಿ ನಡ್ರಿ, ಅನಕೊಂತ ನಾಲ್ಕು ಐದು ಹೆಣ್ಣುಮಕ್ಕಳು ಕೂಡಿಕೊಂಡು ಮತ್ತ ಗುಡ್ಡಾ ತಿರುಗಾಕ ಶುರು ಹಚ್ಚಿಕೊಂಡ್ರು….. ಎಂದು ಮಾತು ನಿಲ್ಲಿಸಿದಳು
ಏನು ಮಾಡಾದು ಬಿಡು ಚೆನ್ನಮ್ಮಾ, ನಾನ್ನೂರು ಮನಿ ಇರೂ ನಮ್ಮ ಊರಿನ್ಯಾಗ ದುಡಿದು ಸಂಸಾರಾ ನೋಡಿಕೊಳ್ಳೋ ಗಂಡಸಮಕ್ಕಳು ನಲವತ್ತು ಮಂದ್ಯರೇ ಇದ್ದಾರಿಲ್ಲೋ. ನಾಸ್ಟಾ ಚಾ ಹೊಟ್ಟೀಗ ಬಿದ್ದ ಕೂಡ್ಲೇ ಹೊರಗ ಹೋಗಿ ಅಳ್ಳಿ ಮರದ ಕಟ್ಟಿ ಪಂಚಾಯತ ಕಟ್ಟಿ ಎಲ್ಲಂದ್ರ ಅಲ್ಲಿ ಕುಂತು ಇಸ್ಪೀಟ್ ಎಲಿ ಬಡಕೊಂತ ಕೂಡತಾರ, ಹೊಟ್ಟಿ ಹ¸ದÀ ಮ್ಯಾಲ ಬಂದು ಉಣತಾರ, ಸುಸ್ತಾಗಿ ಸಂಜಿತನಾ ಮಕ್ಕೋತಾರ ಮತ್ತ ಹೆಂಡದಂಗಡಿಗೆ ಹೊಕ್ಕಾರ’
ಎತ್ತ ಹೋಕ್ಕೀರಿ? ಯಾಕ ಹೊಕ್ಕೀರಿ? ಅಂತ ಕೇಳೂ ಹಾಂಗಿಲ್ಲ. ದನಕ್ಕ ಬಡಿದಾಂಗ ಬಡಿತಾರ ಎಂದು ನಿಡುಸ್ದಳು ಶಾಂತಕ್ಕ.
ಕೊಯ್ದ ಎಲೆಗಳನ್ನು ಬಗ್ಗಿಕೊಂಡು ತುಂಬುತ್ತಿದ್ದ ಚೆನ್ನಮ್ಮನ ಕಂಗಳಂದ ಎರಡು ಹನಿ ಕಂಬನಿಗಳು ಜಾರಿ ಮಣ್ಣಿನ ಮೇಲೆ ಬಿದ್ದು ಇಂಗಿ ಹೋದವು. . ನಿಮಗ ಬಯ್ಯಾಕ ಹೊಡಿಯಾಕಾದ್ರೂ ಗಂಡ ಅನ್ನಾಂವಾ ಮನ್ಯಾಗ ಅದಾನ. ಆದರೆ ನನಗ$ ಎಂದು ಮಾತು ನಿಲ್ಲಿಸಿದಾಗ ಶಾಂತಕ್ಕ ಸಾಂತ್ವನ ಹೇಳುವಂತೆ ಚೆನ್ನಮ್ಮನ ಹೆಗಲ ಮೇಲೆ ಕೈಗಳನ್ನಿಟ್ಟಳು.
ನಿನ್ನದೊಂದ ಕತಿಯಾದರೆ ನನ್ನದೊಂದು ಕತಿ ಚಿಗವ್ವಾ. ನನ್ನ ಗಂಡಂದೆಂಥಾ ಪರಸ್ಥಿತಿ ಗೊತ್ತೈತಲಾ. ಮೂವತ್ತಾರು ವರಸಕ್ಕ ಕೈಕಾಲು ಸ್ವಾಧೀನ ಇರಲಾರ್ದೆ ಬಿದ್ದಾನ, ಗಟ್ಟಿ ಇದ್ದಾಗ ಇಡೀ ದಿನಾ ಕೂಲಿ ಮಾಡಿದ ದುಡ್ಡು ಪೂರಾ ಕುಡಿದೇ ಹಾಳು ಮಾಡಿದ. ಅದಕ್ಕ ಸಾಣ್ಣ ವಯಸ್ಸಿಗೆ ಲಕ್ವಾ ಬಡಿದತಿ. ಮಕ್ಕೊಂಡಲ್ಲೇ ‘ನನÀಗೊಂದು ಕ್ವಾಟರ್ ತಂದಕೊಡ ‘ ಅಂತಾ ಸನ್ನೆ ಮಾಡಿ ಅಂಗಲಾಚಿ ಬೇಡತಾನ. . ಎಂದಳು ನೀಲಾ.
ಅಚ್ಚರಿಯಿಂದ ಚೆನ್ನಮ್ಮ ಬಾಯ್ತೆಗೆದು ಎಲೆ ಹರಿಯುವುದನ್ನೂ ನಿಲ್ಲಿಸಿ ನೀಲಾಳತ್ತ ನೋಡಿದಳು. ಅಷ್ಟ ಅಲ್ಲ ಕೇಳ ಚಿಗವ್ವಾ ಮುಂಜಾನಿ ಅವಗ ಒಂದೀಟು ಗಂಜೀ ಕುಡಿಸಿ ಒಂದ ಕ್ವಾಟರ್ ಕುಡಿಸಿ ನಿಮ್ಮಗೂಡ ಬಂದೇನಿ.
‘ನೀ ಗಂಡಗ ಹೆಂಡಾ ಕುಡಿಸತಿ ಏನ?’ ಶಾಂತಕ್ಕ ಗಾಬರಿಯಿಂದ ಕೇಳಿದಳು.
ನೀಲಾ ಶಾಂತ ದ್ವನಿಯಲ್ಲಿ “ಹೌದಕ್ಕಾ. ಮನ್ಯಾಗಿರೋ ನನ್ನ ಮುದಿ ಅತ್ತಿಗೆ ಅವನನ್ನ ನೋಡಿಕೊಳ್ಳಾಕ ಆಗಂಗಿಲ್ಲ. ನಾ ದುಡಿಲಾರ್ದೆ ಇದ್ದರ ಮನಿತನಾ ನಡಿಯೋದ ಹ್ಯಾಂಗ? ನೆಲಾ ಇಲ್ಲಾ ಹೊಲ ಇಲ್ಲಾ ಇದ್ದಿದ್ದೊಂದು ಮುರುಕು ಮನಿ. ಅವಗೊಂದೀಟು ಕುಡಿಸಿ ಬಂದರ ರಾತ್ರಿ ತನಾ ಶಾಂತ ಮಲಗಿರ್ತಾನ. ಕುಡೀಲಿಲ್ಲಾ ಅಂದ್ರ ಒದರ್ಯಾಡಿ ನಮ್ಮತ್ತಿ ತೆಲಿ ಕೆಡಸ್ತಾನ. ದೊಡ್ಡಾಸ್ಪತ್ರೆಗೆ ಒಯ್ದು ಅವಗ ಆರಾಮ್ ಮಾಡಿಸೋ ಅಷ್ಟು ದುಡ್ಡಿನ ಸೊಕ್ಕಂತೂ ನನಗಿಲ್ಲ. ಒಂದೀಸು ಕುಡಿಸಿ ಬಿದ್ದಲ್ಲೇ ಇರೋ ಜೀವಕ್ಕ ನೆಮ್ದಿನಾರ ಕೊಡಾಕ ಹತ್ತೇನಿ, ಪುಣ್ಯೇಕ್ಕ ಈ ಕರ್ಮ ನೋಡಾಕ ಮಕ್ಕಳನ್ನೂ ಕೊಟ್ಟಿಲ್ಲ ದೇವ್ರು” ಎನ್ನುತ್ತಾ ವಿಷಾದದಿಂದ ನಕ್ಕಳು. ಜೊತೆಗಿದ್ದವರಿಗೆ ಏನು ಹೇಳಲೂ ತೋಚದೇ ಮೌನ ತಾಳಿದರು.
‘ಎಲ್ಲಾ ಚೊಲೋ ಆಕ್ಕೇತಿ’ ಅನಕೊಂತ ಬದುಕಿನ ಗಾಡಿ ಹೊಡ್ಯೋದು. ಇವತ್ತಿಷ್ಟು ಎಲೆ ಸಾಕು ಹೋಗೋಣ ನಡೀರವ್ವಾ… ಎನ್ನುತ್ತಾ ಚೆನ್ನಮ್ಮ ಬಾಟಲಿ ಮೇಲೆತ್ತಿ ನೀರು ಕುಡಿದಳು. ಪ್ಲಾಸ್ಟಿಕ್ ಬಾಟ್ಲಿ ಒಂದ ನಮೂನಿ ವರ ಸಿಕ್ಕ ಹಾಂಗ ಆಗೇದ ನೋಡ ಶಾಂತಕ್ಕ, ಇದ ಬರೂದಕಿಂತ ಮದ್ಲೀಕ ಸಿಕ್ಕ ಸಿಕ್ಕಲ್ಲಿ ಕೆರೆ ಹೊಂಡದಾಗ ನೀರು ಕುಡೀಬೇಕಾಗ್ತಿತ್ತು. ಹುಳಾ ಪಳಾ ಬಿದ್ದ ನೀರು ಸೈತ ಕುಡದೀವು. ಗುಂಡ ಕಲ್ಲಿನ ಹಾಂಗ ಬದುಕೀವು ನಾವು. ಪ್ಯಾಟೆ ಮಂದಿಯರೆ ‘ಅಂತಿಂತಾ ನೀರ ಕುಡಿಬಾರ್ದು ಇನಿಸ್ ಪೆಕ್ಷನ್ ಆಕ್ಕೇತಿ’ ಅಂತಾರು..ಎಂದಳು ಚೆನ್ನಮ್ಮ.
ಮುತ್ತುಗದೆಲಿಗೆ ಇಂಗ್ಲೀಸಿನ್ಯಾಗೆ ಇಕೊ ಪಿರೆಂಡ್ಲಿ ಅಂತಾರಂತೆ.. ಹಂಗದ್ರೇನು ನಮಗ್ಯಾರಿಗೂ ಗೊತ್ತಾಗೂದಿಲ್ಲ..ಎಂದು ರಾಗವಾಗಿ ನೀಲಾ ಹೇಳಿದ ಮಾತಿಗೆ ಎಲ್ಲರೂ ಗೊಳ್ಳೆಂದು ನಕ್ಕರು.
ಮುತ್ತುಗದೆಲಿ ಉಂಡ ಮ್ಯಲ ಮಣ್ಣಾಗ ಹಾಕಿದ್ರ ಕೊಳಿತದೆ ಅದಕ್ಕ ಹಾಂಗನ್ನತಾರ ಅಂದ್ನವ್ವಾ ನಮ್ಮುಡುಗ ಎಂದಳು ಚೆನ್ನಮ್ಮ. ಊರಿನ ಮಧ್ಯ ಇರುವ ಮಠದೆದುರು ಹಾದು ಹೋಗುವಾಗ ಭಕ್ತಿಯಿಂದ ಕೈ ಮುಗಿದ ಹೆಂಗಸರು ಸರ ಸರನೆ ನಾಳೆ ಮುಂಜಾನೆ ಬಸವನ ಗುಡ್ಡಕ್ಕ ಹೋಗೋಣ ಎನ್ನುತ್ತ ಅವರವರ ಮನೆಗೆ ಹೋದರು.
ಬಾಗಿಲಿನ ಮುಂದೆ ನೀರು ಚಿಮುಕಿಸಿತ್ತು. ಮನೆಯೊಳ ಹೊಕ್ಕ ಚೆನ್ನಮ್ಮ ಹೊತ್ತ ಎಲೆಯ ಗಂಟನ್ನು ಇಳುಹಿದಳು. ದೇವರ ಮುಂದೆ ದೀಪ ಹಚ್ಚಿ ಊದುಬತ್ತಿ ಹಚ್ಚಿ ಬೆಳಗುತ್ತಿದ್ದ ಲಕ್ಷ್ಮಿ ಕೈ ಮುಗಿದವಳೇ ತಾಯಿಯತ್ತ ತಿರುಗಿದಳು. ಕಿರುನಗೆ ಬೀರಿ ಅಡುಗೆ ಮನೆಯತ್ತ ನಡೆದಳು. ಬಚ್ಚಲು ಮನೆಗೆ ಹೋಗಿ ಕಾಲಿಗೆರಡು ಚರಿಗೆ ನೀರು ಹಾಕಿ, ಮುಖಕ್ಕೆ ನೀರೆರೆಚಿಕೊಂಡು, ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ ಬಂದು ಜಗುಲಿಯ ಮೇಲಿದ್ದ ಹಗ್ಗದ ಮಂಚದ ಮೇಲೆ ಉಸ್ಸಪ್ಪಾ ಎನ್ನುತ್ತಾ ಕುಳಿತಳು. ನಾಲ್ಕಾರು ಕಡೆ ನೆಗ್ಗಿದ ಸ್ಟೀಲ್ ಚರಿಗೆಯಲ್ಲಿ ನೀರು ತುಂಬಿ ಒಂದು ತುಂಡು ಬೆಲ್ಲವನ್ನು ಚಿಕ್ಕ ಬಟ್ಟಲಿನಲ್ಲಿಟ್ಟುಕೊಂಡು ಬಂದ ಲಕ್ಷ್ಮಿ ‘ತಗೋವಾ’್ವ ಎಂದಳು. ದಣಿದ ಜೀವಕ್ಕೆ ಮಗಳ ಆದರ ‘ಹಾಯ್’ ಎನಿಸಿತು. ಬೆಲ್ಲವನ್ನು ಮುರಿದು ‘ನೀನೂ ತಿನ್ನವ್ವಾ ಒಂಚೂರು’ ಎಂದು ಮಗಳಿಗೆ ಕೊಟ್ಟು ಉಳಿದೊಂದು ಚೂರನ್ನು ಬಾಯಿಗೆ ಹಾಕಿಕೊಂಡು ಗಟಗಟನೇ ನೀರು ಕುಡಿದಳು.
‘ನಿನ್ನಣ್ಣ ಎಲ್ಲಿಗೆ ಹೋಗ್ಯಾನ?’
ಅವ್ವಾ ಇದಕ್ಕ ಉತ್ರಾ ನಿನಗ$ ಗೊತ್ತಿರತತಿ. ಇಷ್ಟು ಹೊತ್ತಿನ್ಯಾಗ ಮಾದೇವ ಕಾಕಾನ ಅಂಗಡಿಯಾಗ ಮಿರ್ಚಿ ಮಂಡಕ್ಕಿ ತಿನ್ನಕೊಂತ ಗೆಳ್ಯಾರ ಜೋಡಿ ಹರಟಿ ಹೊಡೀತಿರ್ತಾನ..
‘ಹರೇದ ಹುಡುಗಿ ಒಬ್ಬಾಕಿನ್ನ ಬಿಟ್ಟು ಹೋಗಬ್ಯಾಡ ಅಂತ ಹೇಳೇ ಹೇಳ್ತೀನಿ ಅಂವಾ ಕೇಳವಲ್ಲ ನನ ಮಾತು’ ಎಂದು ಅಸಹಾಯಕತೆಯಿಂದ ನುಡಿದಳು. ಪ್ರತಿಕ್ರಿಯೆಗೆ ಕಾಯದೇ ‘ಜಳಕ ಮಾಡಿಕೊಂಡ ಬರತೇನಿ ಒಂದ ಕಪ್ ಚಾ ಕಾಸಿ ಕೊಡು ಮಗಳೇ’ ಎನ್ನುತ್ತಾ ಬಚ್ಚಲು ಮನೆ ಹೊಕ್ಕಳು.
ಮಗಳು ಕೊಟ್ಟ ಕರಿ ನೀರಿನಂತಹ ಚಹ ಕುಡಿದು ‘ಈಗ ಮನಷ್ಯಾಳಾದ ಹಾಂಗ ಅನಿಸಾಕ ಹತ್ತಿತು ನೋಡು’ ಎನ್ನುತ್ತ ಉರಿಯೊಲೆಯ ಮೇಲೆ ಎಸರಿಟ್ಟಳು. ಮುಂಜಾನೆ ನಾಲ್ಕ ಸಿವುಡು ಮೆಂತೆಸೊಪ್ಪು ತಗೊಂಡಿದ್ದೆ ಬಿಡಿಸಿ ಹಳೆ ಅರಿಬಿ ಒಳಗ ಸುತ್ತಿಟ್ಟೇನಿ, ಬ್ಯಾಳಿ ಕುದಿಸಿಟ್ಟೇನಿ. ಬಳ್ಳೊಳ್ಳಿ ಸುಲಿದಿಟ್ಟೇನಿ ಇನ್ನೇನಾರ ಕೆಲಸಾ ಇದ್ರ ಹೇಳವ್ವಾ ಇಲ್ಲಕಿದ್ರ ನಾ ಒಂದೀಟು ಹೊತ್ತು ಓದತೇನಿ.
ಮಗಳು ಮಾಡಿಟ್ಟ ಕೆಲಸದಿಂದ ಚೆನ್ನಮ್ಮನ ಮನಸ್ಸು ಪ್ರಸನ್ನವಾಗಿತ್ತು. ‘ಬ್ಯಾಡೇಳು ನಾ ಬಾಕಿ ಕೆಲಸಾ ಮಾಡತೇನಿ. ನೀ ಓದಾಕ ಹೋಗು’ ಎಂದಳು.
ಗೋಪುರದಾಕಾರದ ಜೋಳದ ಹಿಟ್ಟಿನೊಳಗೆ ಕುಳಿ ತೆಗೆದು ಬಿಸಿನೀರು ಸುರಿದು ಮುಚ್ಚ ಕಟಗಿ ಹಿಂದಿನಿಂದ ಮೆಲ್ಲಗೆ ತಿರುವಿ ಮತ್ತಷ್ಟು ಒಣ ಹಿಟ್ಟನ್ನು ಮುಚ್ಚಿ ಸರಸರನೇ ಎರಡು ಟೊಮೇಟೋಗಳನ್ನು ಕತ್ತರಿಸಿ ಅಲ್ಯೂಮಿನಿಯಂ ಪಾತ್ರೆಗೆ ಹಾಕಿದಳು, ಒಂದಿಷ್ಟು ನೀರು ಸುರುವಿ ಉಪ್ಪು ಬೆಲ್ಲವನ್ನು ಸೇರಿಸಿದಳು. ತಣ್ಣೀರು ಚಿಮುಕಿಸುತ್ತ ರೊಟ್ಟಿ ಹಿಟ್ಟನ್ನು ನಾದಿದಳು. ಒಂದು ಒಲೆಯ ಮೇಲೆ ಕುದಿವ ಎಸರಿಗೆ ತೊಳೆದ ಅಕ್ಕಿಯನ್ನು ಹಾಕಿ ಇನ್ನೊಂದು ಒಲೆಯ ಮೇಲೆ ಕಾವಲಿಯನ್ನಿಟ್ಟಳು.
ಕಲ್ಲಿನ ಮೇಲೆ ತಟಪಟನೆ ರೊಟ್ಟಿ ಬಡಿಯುವಾಗ ಮನಸ್ಸು ಬಾಕಿ ಉಳಿದ ಕೆಲಸದ ಪಟ್ಟಿ ಮಾಡಲಾರಂಭಿಸಿತು. ಸಾರು, ಪಲ್ಲೆ ಮಾಡಿ ಎಲಿ ಹರವ ಬೇಕು. ಹಗ್ಗದ ಮ್ಯಾಲೆ ಒಣಾ ಹಾಕಿದ ಅರಬಿ ಮಡಚಿಡಬೇಕು. ಈ ಪವ್ಯಾ ಮನ್ಯಾಗಿದ್ದು ಎಲಿ ಹರವಿದರ ಬರತಿತ್ತು ಎಂದು ಗೊಣಗಾಡಿಕೊಂಡು ಮನಸ್ಸಿನ ಸಿಟ್ಟನ್ನು ರೊಟ್ಟಿ ಮೇಲೆಯೇ ಗಟ್ಟಿಯಾಗಿ ಬಡಿದು ತೀರಿಸಿಕೊಂಡಳು. ಆಮೇಲೆ ‘ಪಾಪ ಇದೇನು ಮಾಡಿತ್ತ ನನಗ ಎನ್ನುತ್ತಾ ಕಾಳಜಿಯಿಂದ ರೊಟ್ಟಿಯನ್ನೆತ್ತಿ ಕಾವಲಿಯ ಮೇಲೆ ಹಾಕಿ ಹಸಿ ಅರಬಿಯಿಂದ ಒಣ ಹಿಟ್ಟನ್ನು ಒರೆಸಿ ತೆಗೆದಳು. ‘ಅವ್ವಾ ಹೊಟ್ಟಿ ಹಸದತಿ ಅಡಿಗಿ ಆತೇನು?’ ಮಗಳು ಹೊರಗಿನಿಂದ ಕೂಗು ಹಾಕಿದಳು.
ಆಗೇತಿ ಬಾ.. ಎನ್ನುತ್ತಾ ಹಸಿ ಖಾರ, ಮೆಂತೆ ಪಲ್ಲೆ ಹಾಕಿ ಎರಡು ರೊಟ್ಟಿಯನ್ನಿಟ್ಟು ಮಗಳತ್ತ ಸರಿಸಿದಳು. ಅಷ್ಟರಲ್ಲಿ ಮುಂಬಾಗಿಲನ್ನು ಧಡಾರನೇ ತೆಗೆದು ಪವನ್ ಒಳಗಡಿ ಇಟ್ಟ. ‘ಅಂತೂ ನಿನಗ ಮನಿಗೆ ಬರಾಕ ಬಿಡುವಾತು ಅಂದ ಹಾಂಗಾತು’… ಎಂದು ವ್ಯಂಗ್ಯವಾಗಿ ನುಡಿದ ತಾಯಿಯ ಮಾತಿಗೆ ಏನೂ ತಲೆ ಕೆಡಿಸಿಕೊಳ್ಳದೇ ಕಾಲು ಕೈ ತೊಳೆದವನೆ ತಂಗಿಯ ಪಕ್ಕದಲ್ಲಿ ಕುಳಿತು ‘ನನಗೂ ತಾಟ ಹಚ್ಚಿ ಕೊಡವಾ’್ವ ಅಂದ. ಭುಗಿಲೆದ್ದ ಸಿಟ್ಟಿಗೆ ಕಡಿವಾಣ ಹಾಕುತ್ತ ಚೆನ್ನಮ್ಮ ಮತ್ತೊಂದು ತಾಟನ್ನು ಹಚ್ಚಿ ಮಗನ ಮುಂದಿಟ್ಟಳು. ನೀನೂ ನಮ್ಮ ಜೋಡಿ ಊಟಾ ಮಾಡವ್ವಾ. ನಾವ ಅನ್ನಾ ಸಾರು ಹಾಕಿಕೊಳತೀವೇಳು ಎಂದಳು ಲಕ್ಷ್ಮಿ. ಕಿತ್ತು ತಿನ್ನುವ ಬಡತನದಲ್ಲೂ ಸೊಂಪಾಗಿ ಬೆಳೆದ ಮಕ್ಕಳನ್ನು ದಿಟ್ಟಿಸಿ ನೋಡುತ್ತಾ ರೊಟ್ಟಿ ಮುರಿದು ಬಾಯ್ಗಿಟ್ಟಳು ಚೆನ್ನಮ್ಮ.
‘ಅವ್ವಾ ನನ್ನ ದೋಸ್ತರೆಲ್ಲ ನೌಕ್ರಿ ಹುಡುಕಾಕಂತ ಮುಂದಲವಾರ ಬೆಂಗಳೂರಕ್ಕ ಹೊಂಟಾರ, ನಾನೂ ಹೋಗಲೇನು?’ ಎಂದ ಪವನ್.
” ಹದಿನೆಂಟು ವರಸಾತು ನಿಮ್ಮಪ್ಪ ಚಾಕ್ರಿ ಹುಡುಕಿಕೊಂಡು ಹೋದಾಂವ ಬೆಂಗಳೂರಲಿಂದ ಹೊಳ್ಳಿ ಬರಲಿಲ್ಲ ಏನಪ್ಪಾ. ಹೆಂಡ್ತಿ ಮಕ್ಳು ಅದರೋ ಸತ್ತರೋ ನೋಡಾಕನೂ ಬರಲಿಲ್ಲ. ನಾವ ಹೋಗ್ಲಿ ಅವನ ತಾಯಿ ಸತ್ತಾಗ ಮಣ್ಣು ಕೊಡಾಕೂ ಬರಲಿಲ್ಲ. ಎಲ್ಲರೆ ಅದನೋ, ಮತ್ತೊಂದ ಮದ್ವಿ ಮಾಡಿಕೊಂಡಾನೋ, ಸತ್ತಾನೊ ಗೊತ್ತಿಲ್ಲ. ನೀನೂ ಅದೇ ಬೆಂಗಳೂರಿಗೆ ಹೊಕ್ಕೀನಂತಿ? ಅಲ್ಲಿಗಿ ಹೋಗಾಕ ರೊಕ್ಕೆಲ್ಲೈತಿ? ಎಂದು ಹರಿತವಾಗಿ ಮಗನನ್ನು ಪ್ರಶ್ನಿಸಿದಳು ಚೆನ್ನಮ್ಮ.
ಇನ್ನೇನಾದರೂ ಹೇಳಲು ಹೊರಟರೆ ಬೈಗುಳದ ಸುರಿಮಳೆಯಾಗುತ್ತದೆ ಎನ್ನುವುದರ ಅರಿವಿದ್ದ ಪವನ್ ಬೇಸರದಿಂದ ಅರ್ಧ ಉಂಡ ತಾಟಿನಲ್ಲಿಯೇ ಕೈತೊಳೆದು ಮೇಲೆದ್ದ. ದರವೇಶಿನ್ನ ತಂದು ಎಷ್ಟ ಕಷ್ಟಾ ಬಿದ್ದು ನಾ ನಿನಗ$ ಕಾಲೇಜು ಕಲ್ಸಿದೆ. ಒಂದ್ರೂಪಾಯಿ ಗಳಿಸಂಗಿಲ್ಲಾ. ಒಳ್ಳೇ ಸಾವಕಾರ್ರ ಗತಿ ಉಣ್ಣೋ ಊಟದಾಗ ಕೈ ತೊಳೀತೀದಿ. ನೀ ತಾಟಿನ್ಯಾಗ ಬಿಟ್ಟಷ್ಟ ಅನ್ನಾ ಗಳಿಸಾಕ ನಾ ಎಷ್ಟ ಬಡ ಬಡಕೊಂಡ ದುಡೀತೀನಿ ಅನ್ನಾದು ಗೊತ್ತಾಗಗಂಗಿಲ್ಲೇನು? ಚೆನ್ನಮ್ಮ ಬೈದಳು. ಮಗ ಮಾತಾಡದೇ ಎದ್ದು ಹೋಗಿ ಮುಸುಗಿಕ್ಕಿ ಮಲಗಿಕೊಂಡ.
ಹಸಿವಾದರೂ ಅನ್ನದ ತುತ್ತು ಗಂಟಲಲ್ಲಿ ಇಳಿಯಲೊಲ್ಲೆ ಎಂದು ಹಟ ಮಾಡಿದಂತೆನಿಸಿ ತುಸುವೇ ಉಂಡು ಮೇಲೆದ್ದಳು ಚೆನ್ನಮ್ಮ. ಮಿಕ್ಕಿದ ಅಡುಗೆಯನ್ನೆಲ್ಲ ಮುಚ್ಚಿಟ್ಟು ಕಸ ಮುಸುರೆ ಮುಗಿಸಿ ಮನೆ ಹಿಂದಿನ ಖೋಲಿಯಲ್ಲಿ ಎಲೆ ಹರವಿಟ್ಟು ಬಂದು ತಾಯಿ ಮಗಳು ಹಾಸಿಗೆಯಲ್ಲಿ ಉರುಳಿಕೊಂಡರು.
ಅವ್ವಾ ಅಪ್ಪಾ ಮನಿ ಬಿಟ್ಟು ಹೋಗುವಾಗ ನಾ ಎಷ್ಟ ವರಸದಾಗಿದ್ದೆ? ಮಗಳ ಪ್ರಶ್ನೆಗೆ ನಿಟ್ಟುಸಿರಿಟ್ಟ ಚೆನ್ನಮ್ಮ
ಎಲ್ಲಿದ ವರಸಾ ? ನೀ ಆರ ತಿಂಗಳ ಕೂಸಾಗಿದ್ದಿ..
ಏನೋ ಕೇಳಲು ಬಾಯ್ತೆಗೆದ ಲಕ್ಷ್ಮಿ ತಾಯಿಯ ಮೊಗದಲ್ಲಿದ್ದ ವ್ಯಥೆ ನೋಡಲಾದೇ ಮಕ್ಕೋ ಅವ್ವ, ನನಗೂ ನಿದ್ದಿ ಬಂದತಿ ಎಂದು ಮಗ್ಗುಲು ಬದಲಿಸಿದಳು.
ಹೊದೆದ ಕೌದಿ ಮಣ ಭಾರವಾದಂತೆನಿಸಿ ಅದನ್ನು ಪಕ್ಕಕ್ಕೆ ಸರಿಸಿ ಎಡಗೈಯನ್ನು ಎತ್ತಿ ಹಣೆಯ ಮೇಲಿರಿಸಿಕೊಂಡಳು. ಸಿವಾ ಸಿವ ಸಿವಾ ಎಂದು ನಿಡುಸುಯ್ದಳು. ಗುದ್ದದಿಂದ ಹೊರ ಬರುವ ಇರುವೆಗಳಂತೆಯೇ ನೆನಪುಗಳು ಹೊರಬರಲಾರಂಭಿಸಿದವು..
**
‘ನಮ್ಮ ಚೆನ್ನಮ್ಮಗ ಗಂಡು ಗೊತ್ತು ಮಾಡೀವು. ಧಾರವಾಡ ಸಮೀಪ ಎಲೆದಳ್ಳಿ ಹುಡುಗಾ ಸ್ವಂತ ಮನಿ ಐತಂತ ಹುಡುಗ ಭೇಷದಾನು. ಹೊಲಾಪಲಾ ಇಲ್ಲ. ತಾಯಿ ಮುತ್ತಗದೆಲಿ ಹಚ್ಚತಾಳಂತ. ಇಂವಾ ಪಟೇಲರ ಹೊಲದಾಗ ಕೂಲಿ ಕೆಲ್ಸಕ್ಕ ಹೊಕ್ಕಾನಂತ.’… ಅವ್ವ ಊರಿನವರ ಮುಂದೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.
ಊರೂರು ತಿರುಗುತ್ತ ಹೊಲದಲ್ಲೋ ಗುಡ್ಡದಲ್ಲೋ ಟೆಂಟ್ ಹಾಕಿಕೊಂಡು ಜೀವನ ಸವೆಸಿದ ಅಲೆಮಾರಿ ಕುರುಬತಿ ಅವ್ವನಿಗೆ ಸ್ವಂತ ಮನೆ ಇದ್ದರೆ ಸ್ವರ್ಗವೇ ಸೈ ಎನಿಸಿದ್ದು ಸರಿಯೇ. “ನಮ್ಮ ಹಾಂಗ ಕಷ್ಟಿಲ್ಲವಾ ನಿನಗ ಇದ್ದೂರಾಗ ಇರೂದು, ಮನಿ ಬಾಕಲ ಮುಂದ ನಳಾ ಬರ್ತದೆಯಂತೆ ಎಲೆದಳ್ಳಿಲಿ. ‘ನಮ್ಮ ಚೆನ್ನಮ್ಮ ಮಾರಾಣಿ ಹಂಗಿರಬೋದು ಆ ಊರಾಗೆ’ ಅಂತಿದ್ದ ನಿಮ್ಮಪ್ಪ. ಅವ್ವನ ಸಂಭ್ರಮ ನೋಡುವಂತಿತ್ತು.
ಅಪ್ಪ ಧಾರವಾಡದ ಉಳಿ ಬಸಪ್ಪನ ಗುಡಿಯಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಹೆಸರು ನೊಂದಾಯಿಸಿ ಬಂದ. ಮದುವೆಗೆ ನಾಲ್ಕು ದಿನ ಮೊದಲು ಅಪ್ಪನ ಗೆಳೆಯ ಹುಚ್ಚಪ್ಪ ಮನೆಗೆ ಬಂದ. ಚೆನ್ನಮ್ಮನ್ನ ಯಾವೂರಿಗೆ ಕೊಡತೀ ಎಂದು ವಿಚಾರಿಸಿದ. ಅಪ್ಪನ ಬಾಯಿಂದ ಎಲೆದಳ್ಳಿ ಹೆಸರು ಕೇಳಿದ ಕೂಡಲೇ ‘ಎಂಥಾ ಊರಿಗೆ ಮಗಳ ಕೊಡಾಕ ಹತ್ತೀದಿ. ಆ ಊರಾಗಿನ ಗಂಡಸೂರು ಮೈಬಗ್ಗಿಸಿ ಚೆಂದಾಗಿ ದುಡಿಯಂಗಿಲ್ಲ. ಮೂರ್ಹೊತ್ತೂ ಇಸ್ಪೀಟ್ ಬಡಕೊಂತ ಕುಂದರತಾರ’ ಎಂದ. ಗೆಲುವಾಗಿದ್ದ ಅಪ್ಪ ಅವ್ವನ ಮೊಗ ಬಾಡಿತು. ಹೆಣ್ಣ ಗಂಡ ಕೂಡಿಸಿದ ಏಜೆಂಟನ ಮಾತು ನಂಬಿ ಮೋಸ ಹೋದೀವೇನೋ ಎಂದಳು ಅವ್ವ. ಅಪ್ಪ ‘ಈಗಂತೂ ಮದ್ವಿ ಮುರಿಯಾಕ ಬರಂಗಿಲ್ಲ ಆಕಿ ಹಣೆಬಾರದಾಗ ಇದ್ಹಾಂಗ ಆಗಲಿ’ ಎಂದು ಬಿಟ್ಟ.
ಯಾರೋ ದಾನಿಗಳು ಕೊಟ್ಟ ಸೀರೆ ಉಟ್ಟು ಇನ್ಯಾರೋ ಕೊಟ್ಟ ತಾಳಿಯನ್ನು ಕಟ್ಟಿದ ಬಾಳಪ್ಪನ ಹೆಂಡತಿಯಾದೆ. ಗೋಕಾಕದಲ್ಲಿ ನಾಲ್ಕು ಕುರಿ ಕಡಿದು ಅಪ್ಪ ಜೋರಾಗಿಯೇ ನೆಂಟರೂಟ ಹಾಕಿಸಿದ. ಯಾರ್ಯಾರೋ ಆಯಾರ ಕೊಟ್ಟಿದ್ದನ್ನೆಲ್ಲ ಗಂಟು ಕಟ್ಟಿಕೊಂಡು ಎಲೆದಳ್ಳಿಗೆ ಬಂದಿದ್ದಾಯ್ತು. ಆ ಕಡೆ ಈ ಕಡೆ ಮನೆಯವರೆಲ್ಲ ದೃಷ್ಟಿ ತೆಗೆದು ಓಕುಳಿ ಚೆಲ್ಲಿ ಹೊಸ್ತಿಲು ದಾಟಿಸೋ ಶಾಸ್ತ್ರ ಮಾಡಿ ಅತ್ತೆ ಮಾಡಿದ ಸಿಹಿ ಅಡುಗೆ ಉಂಡು ಹೋದರು. ಮಂಕಾದ ವಿದ್ಯುತ್ ದೀಪದಲ್ಲಿ ಎರಡಂಕಣದ ಜಗುಲಿ ಒಂದಂಕಣದ ಖೋಲಿ, ಒಂದಂಕಣದ ಅಡುಗೆ ಮನೆಯನ್ನು ನೋಡಿಯೇ ನೋಡಿದೆ. ಕತ್ತು ಮೇಲೆತ್ತಿದೆ. ಬಾಗಿದ ಕಟ್ಟಿಗೆ ತೊಲೆಯ ಮೇಲೆ ನಾಡ ಹಂಚಿನ ಮಾಡು ಈಗಲೋ ಆಗಲೋ ಮುರಿದು ಬೀಳಬಹುದೆನಿಸಿದಾಗ ಅವ್ವ ಹೇಳುತ್ತಿದ್ದ ಮಾರಾಣಿ ಶಬ್ದ ನೆನಪಿಗೆ ಬಂದು ಒಂದು ಬಗೆಯ ವಿಷಾದ ಅವರಿಸಿತು.
ಅಂದೇ ಪ್ರಸ್ಥದ ಶಾಸ್ತ್ರ. ಮರುದಿನ ಬೆಳಿಗ್ಗೆ ಒಂದು ಕಪ್À ಚಹಾ ಕುಡಿದ ಅವ್ವ- ಅಪ್ಪ ನಾವಿನ್ನು ನಡೀತೀವ್ರಿ. ನಮ್ಮ ಮಗಳು ಇನ್ನ ನಿಮ್ಮ ಸೊತ್ತು ಎಂದು ಅತ್ತೆ ಅಳಿಯನಿಗೆ ಹೇಳಿ ಕಣ್ಣೀರೊರೆಸಿಕೊಳ್ಳುತ್ತಾ ಹೊರಟೇಬಿಟ್ಟರು. ಅತ್ತೆ ಪಾರವ್ವ ಕೆಲಸವಾನಿ ಹೆಂಗಸು. ಜಲ್ದಿ ಜಲ್ದಿ ಮನೆಗೆಲಸಾ ಮುಗಿಸಿ ಮುತ್ತುಗದೆಲಿ ಹಂಚಿಕೊಂತ ಕೂಡೂವಾಕಿ. ಅತ್ತೆಯ ಜೊತೆಗೆ ಅಡುಗೆ ಕೆಲಸಕ್ಕೆ ಕೈಗೂಡಿಸುತ್ತಿದ್ದೆ. ಕಸಾ ಪರಶಿ ಮಾಡೂದು, ಒಗಿಯಾಣಾ ಮಾಡೂದು, ಭಾಂಡೇ ತಿಕ್ಕೂದು… ಎಲ್ಲಾ ಮಾಡಿದ್ರೂ ನನಗ ಟೇಮ್ ಉಳೀತಿತ್ತು. ‘ಅತ್ತೀ ನನಗೂ ಎಲಿ ಹಚ್ಚೂದು ಕಲಸ್ರಲಾ’ ಎಂದೆ. ಮನಿತನಾ ನಡಸಬೇಕೂ ಅಂದ್ರೆ ಈ ಕೆಲಸಾ ನೀ ಕಲಿಯಾಕ ಬೇಕು ಎಂದು ಅತ್ತೆ ನಿಗೂಢವಾಗಿ ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಮುಂಜಾನೆ ನಾಸ್ಟಾ ಆದ ಕೂಡಲೇ ಹೊರಗೆ ಹೋಗುವ ಗಂಡ ಕೆಲಸಕ್ಕೆ ಹೋಗುತ್ತಾನೆ ಎಂದು ನಂಬಿದ್ದೆ. ಯಾವಾಗರೆ ಒಮ್ಮೊಮ್ಮೆ ನಾಲ್ಕೈದು ನೋಟುಗಳನ್ನೆಣಿಸಿ ತಾಯಿಯ ಕೈಗೆ ಕೊಟ್ಟಾಗ ಕೂಲಿ ಮಾಡಿದ ಹಣವಿರಬೇಕು ಎಂದುಕೊಳ್ಳುತ್ತಿದೆ. ಮನೆಗೆ ಬೇಕಾದ ಕಿರಾಣಿ ಸಂತೆ ಮಾಡೂವಾಗ ಅತ್ತೆ ಪದೇ ಪದೇ ದುಡ್ಡೆಣಿಸುವುದನ್ನು ನೋಡಿ ಮನ್ಯಾಗಿನ ಆರ್ಥಿಕ ಪರಿಸ್ಥಿತಿ ಖರಾಬ್ ಐತಿ ಅನ್ನೋದು ಅರಿವಿಗೆ ಬರತಿತ್ತು.
“ನಾನೂ ನಿನ್ನ ಜೋಡಿ ನಾಳೇಲಿಂದ ಕೂಲಿ ಕೆಲಸಕ್ಕ ಬರ್ಲೇನು? ಅತ್ತಿ ರೊಕ್ಕಕ್ಕ ಭಾಳ ತ್ರಾಸ ಮಾಡಿಕೊಳ್ತಾರ’ಎಂದೆ. ಗಾಭರಿಯಿಂದ ‘ಬ್ಯಾಡೇಳು ನೀ ಅಲ್ಲೀಗೆ ಬರೋದು’ ಎನ್ನುತ್ತಾ ಹಣೆಯ ಮೇಲಿನ ಬೆವರೊರೆಸಿಕೊಂಡ ಬಾಳಪ್ಪ. ಮದುವೆ ಆಗಿ ಎರಡೇ ತಿಂಗಳಿಗೆ ಮುಟ್ಟು ನಿಂತಿತ್ತು. ಚೊಚ್ಚಿಲು ಬಸುರಿ ಎನ್ನುತ್ತ ಅತ್ತೆ ಕಾಳಜಿ ಮಾಡುತ್ತಿದ್ದಳು. ಆಗೀಗ ಮಗನ ಮೇಲೆ ಸಿಟ್ಟಿಗೇಳುತ್ತಿದ್ದಳು, ಯಾಕೆಂಬುದೇ ನನಗರ್ಥವಾಗುತ್ತಿರಲಿಲ್ಲ.
ಗಂಡನ ಬಳಿ ‘ನಮ್ಮೂರಾಗೆಲ್ಲ ಕೂಲಿ ಮಾಡಾವ್ರ ಅರಬಿ ಬಣ್ಣಗೇಡಾಗಿರ್ತತಿ. ನಿಮ್ಮ ಅರಬಿ ಎಷ್ಟರ ಸ್ವಚ್ಛ ಇರತದಲ್ರೀ’ ಎಂದೆ ಒಂದು ದಿನ. ಪಟೇಲ್ರು, ಗೌಡ್ರು…..ಹೀಂಗ ಎಲ್ಲಾ ಸಾವ್ಕಾರ್ ಮಂದಿ ಹೊಲದಾಗ ಅಕ್ಕಡಿ ಬೆಳೆ ತೆಗಿಯೋದು ಬಿಟ್ಟು ಬೋರ್ ಹೊಡೆಸಿ ಕಬ್ಬು ಬೆಳಿಯಾಕ ಹತ್ತಿದ ಮ್ಯಾಲೆ ನಮ್ಮೂರಿನ್ಯಾಗ ಕೂಲಿ ಕೆಲಸ ಎಲ್ಲೂ ಸಿಗಂಗಿಲ್ಲ. ನಾ ದಿನಾ ಇಸ್ಪೀಟು ಆಡಾಕ ಹೊಕ್ಕೀನಿ.. ಎಂದು ಬಾಳಪ್ಪ ತಣ್ಣಗೆ ಹೇಳಿದಾಗ ಅತ್ತೆಯ ಸಿಟ್ಟು ಮಾತೂ ಎಲ್ಲವೂ ಅರ್ಥವಾಗಿತ್ತು. ಮದುವೆಯಾದ ಮೇಲೆ ಮಗನಿಗೆ ಜವಾಬ್ದಾರಿ ಬರಬಹುದೆಂದು ಮದುವೆ ಮಾಡಿದ್ದಾರೆಂಬುದೂ ತಿಳಿಯಿತು. ಹುಟ್ಟುವ ಮಗುವಿಗೆ ದುಡಿಯದ ಅಪ್ಪ! ಭರ್ಜರಿ ಆಳ್ತನದ ಗಂಡನ ರೂಪದ ಬಗ್ಗೆ ನನಗೆ ಮೋಹವಿತ್ತು. ಅವನ ಚಟದ ಬಗ್ಗೆ ತಿಳಿದ ಮೇಲೆ ಮೋಹ ಕರಗಲಾರಂಭಿಸಿತ್ತು. ಗಂಡನೊಂದಿಗೆ ನಿತ್ಯ ಜಗಳವಾಡಲಾರಂಭಿಸಿದೆ.
ಈ ಊರಿನ್ಯಾಗ ಅಲ್ಲದಿದ್ರೆ ಬ್ಯಾರೆ ಊರಾಗ ಹೋಗಿ ದುಡಿದು ತರಬಾರದೇನು? ಎನ್ನುತ್ತಿದ್ದೆ. ಒಮ್ಮೆ ಸೋಮಾರಿತನ ಮೈಗೂಡಿದ ಮನುಷ್ಯನನ್ನು ಬದಲಾಯಿಸುವುದು ಬಲು ಕಷ್ಟ. ಜೂಜಿಗೆ ಬಿದ್ದ ಅವನಿಗೆ ಸುಲಭವಾಗಿ ಸಂಪಾದಿಸಬಹುದು ಎಂಬ ಭ್ರಮೆ ಹುಟ್ಟಿಬಿಟ್ಟಿತ್ತು. ಅವನು ಸುಧಾರಿಸುವ ಬದಲು ನನ್ನ ಮೇಲೆಯೇ ಕೈ ಮಾಡಲಾರಂಭಿಸಿದ.
ಗೋಕಾಕಕ್ಕೆ ಒಯ್ದು ಬಾಣಂತನಾ ಮಾಡಿದ ಅವ್ವಾ ಅಪ್ಪಗ ಅಳಿಯನ ಬಣ್ಣ ಏನೆಂಬುದು ಗೊತ್ತಾಗಿತ್ತು. ಪುಟ್ಟ ಮೊಮ್ಮಗನನ್ನು ಆಡಿಸುತ್ತಾ ‘ಇನ್ನೂ ಚೊಲೋ ಮನಿತನಾ ನೋಡಿ ಕೊಡಬೇಕಾಗಿತು’್ತ ನಿನ್ನ ಎಂದು ಹೆತ್ತವರು ಹಲುಬುತ್ತಿದ್ದರು. ಅಪ್ಪ ಆಗೀಗ ಬಂದು ರೈತರು ತಮಗೆ ಕೊಡುವ ಜ್ವಾಳಾ ಕಾಳು ಕಡಿಯನ್ನು ಮೂಟೆಗಟ್ಟಿ ತಂದು ಕೊಟ್ಟು ಹೋಗುತ್ತಿದ್ದ. ತವರಿನವರ ಔದಾರ್ಯವೂ ಮನಸ್ಸಿಗೆ ಚುಚ್ಚುವ ಮುಳ್ಳಿನಂತೆ ಭಾಸವಾಗುತ್ತಿತ್ತು..
ಈ ಇಳಿ ವಯಸ್ಸಿನ್ಯಾಗೆ ಅತ್ತೀನ ಗುಡ್ಡಕ್ಕ ಕಳಿಸೋದು ಬ್ಯಾಡಾ ನಾವ ಹೋಗೋಣ ನಡಿ ಎಂದು ಆರು ತಿಂಗಳ ಮಗÀನನ್ನು ಅತ್ತೆಯ ಮಡಿಲಿಗೆ ಹಾಕಿ ಗಂಡನನ್ನು ಜೊತೆ ಮಾಡಿಕೊಂಡು ಮುತ್ತುಗದೆಲೆ ಹರಿಯಲು ಹೋಗಲಾರಂಭಿಸಿದೆ. ‘ನಾ ಎಲಿ ಹಚ್ಚತೇನಿ ನೀವು ಕಡ್ಡಿ ಮಾಡಿ ಕೊಡರೀ’ ಎಂದು ಗಂಡನಿಗೆ ಗಂಟು ಬೀಳುತ್ತಿದ್ದೆ. ‘ಕೈಯಾಗ ನಾಲ್ಕು ಕಾಸು ಕೂಡಲಾರ್ದೆ ಇದ್ದರ ಮಗಗ ಸಾಲಿ ಕಲಿಸೋದು ಹ್ಯಾಂಗ’ ಕೇಳುತ್ತಿದ್ದೆ ತ್ತಿದ್ದೆ.
‘ಮಗಾ ಹುಟ್ಟಿದ ಮ್ಯಾಲೆ ನಮ್ಮ ಬಾಳಪ್ಪ ಒಂದ ತುಸು ಬದಲಾಗ್ಯನೇಳು’ ಎಂದು ಅತ್ತೆಯೂ ಹೇಳಲಾರಂಭಿಸಿದಳು. ಮಗನಿಗೆ ಮೂರು ವರುಷ ತುಂಬುವಷ್ಟರಲ್ಲಿ ಮಗಳು ಹುಟ್ಟಿದಳು. ಆ ವರ್ಷ ಊರಿನಲ್ಲಿ ಭೀಕರ ಬರಗಾಲ, ನೀರಿನ ಕೊರತೆಯಿಂದ ಮುತ್ತುಗದೆಲೆಗಳೂ ಚಿಕ್ಕಚಿಕ್ಕದಾಗಿದ್ದವು, ಮುರುಟಿಕೊಂಡಿದ್ದವು. ಈ ವರಸಾ ಜೀವ್ನ ಮಾಡುದರ ಹ್ಯಾಂಗ ಎಲ್ಲರ ಮುಂದಿನ ಬೃಹದಾಕಾರದ ಪ್ರಶ್ನೆಯಾಗಿತ್ತು. ‘ಊರಾಗ ಒಂದಷ್ಟ ಮಂದಿ ಬೆಂಗಳೂರಕ ಗುಳೆ ಹೊಂಟಾರ ನಾನೂ ನಾಲ್ಕ ತಿಂಗಳಾ ಹೋಗಿ ಬರ್ಲೇನು? ಬಿಲ್ಡಿಂಗ್ ಕಟ್ಟೋ ಕೂಲಿ ಕೆಲಸಾ ಸಿಗತದಂತ ಅಲ್ಲಿ’ ಎಂದ ಗಂಡನನ್ನು ನೋಡಿ ಸಂಭ್ರಮವಾಗಿತ್ತು. ‘ಹುಡೂಗರನ್ನ ಅವ್ವಾನ್ನ ನಾ ಜ್ವಾಪನಾ ಮಾಡತೇನಿ, ನೀವು ಹೋಗಿ ಬರ್ರಿ’ ಎಂದು ಬೀಳ್ಕೊಟ್ಟೆ.
ಊರಿನಿಂದ ಹೋದವರೆಲ್ಲರೂ ನಾಲ್ಕು ತಿಂಗಳಿನಲ್ಲಿ ಮರಳಿ ಬಂದರು. ಬಾಳಪ್ಪ ಮಾತ್ರ ಬರಲಿಲ್ಲ. ಜೊತೆಯಲ್ಲಿ ಹೋದವರನ್ನು ವಿಚಾರಿಸಿದರೆ ‘ಬೆಂಗಳೂರದಾಗೆ ಬಸ್ಸ ಇಳಿದಾಂವ ಎತ್ತಾಗ ಹೋದ ನಮಗ ಗೊತ್ತೇ ಆಗಲಿಲ್ಲವ್ವಾ’ ಎಂದುಬಿಟ್ಟರು. ಆಗಸ ತಲೆ ಮೇಲೆ ಕಳಚಿ ಬಿದ್ದಂತಾಗಿತ್ತು. ಅಪ್ಪ ಯಾರ್ಯಾರದ್ದೋ ಕಾಲು ಹಿಡಿದು ಬೇಡಿಕೊಂಡು ಪೋಲೀಸ್ ಸ್ಟೇಶನ್ನಿಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಂz. ಆದರೆÀ ಬಾಳಪ್ಪ ಸಿಗಲೇ ಇಲ.್ಲ
ಬಡತನ ಕಣ್ಣೀರು ಹಾಕುವುದಕ್ಕೂ ಪುರುಸೊತ್ತು ಕೊಡಂಗಿಲ್ಲ. ಮಕ್ಕಳನ್ನು ಅತ್ತೆಗೊಪ್ಪಿಸಿ ಸಿರಿವಂತರ ಮನೆಯ ಕಸ ಮುಸುರೆ ಮಾಡಿದೆ. ಅವರು ಕೊಟ್ಟ ತಂಗಳನ್ನ ಕಟ ರೊಟ್ಟಿಯಲ್ಲಿಯೇ ನಮ್ಮ ಹೊಟ್ಟೆ ತುಂಬುತ್ತಿತ್ತು. ಅವರು ಔದಾರ್ಯದಿಂದ ಕೊಟ್ಟ ಹಳೆ ಬಟ್ಟೆ ತೊಟ್ಟೇ ಮಕ್ಕಳು ಬೆಳೆಯಲಾರಂಭಿಸಿದರು.
ಮರಳಿ ಬಾರದ ಮಗನ ದಾರಿ ನೋಡಿ ನೋಡಿ ಹತಾಶಳಾದ ಅತ್ತೆಯೂ ನಾಲ್ಕು ವರ್ಷಗಳಲ್ಲಿ ಶಿವನ ಪಾದ ಸೇರಿದಳು. “ನಮ್ಮ ಜೊತೆಗೇ ಇರುವಂತಿ ಬಾ ಮಗಳೇ’ ಎಂದಳು ಅವ್ವ.
‘ನಾ ಒಲ್ಲೆ ಕೊಟ್ಟ ಹೆಣ್ಣು ಕುಲಕ್ಕ ಹೊರಗಂತಾರು. ನೀವಿರೋ ಮಟಾ ನಡೀತದ ಆದ್ರ ಆಮ್ಯಾಲೆ ನಾವ ಅಣ್ಣ ತಮ್ಮಂದಿರ ಕಣ್ಣಾಗ ಸದರ ಆಕ್ಕೇವಿ. ಎಂದಾರ ಒಂದ ದಿನಾ ನನ ಗಂಡಾ ಹೊಳ್ಳಿ ಬಂದರ ನಾವಿಲ್ಲಿರಬೇಕಲ್ಲವಾ’ ಎಂದೆ. ಅವ್ವ ಕಣ್ಣೀರೊರೆಸುತ್ತ ಕಾಲಿಗೆರಗಿದ ನನ್ನ ತಲೆ ಸವರಿ ಚೆಂದಾಕಿರವ್ವಾ ಎಂದು ಹೋದಳು. ..ಬೆಳಗಾಗಾಕ ಬಂತೇನೋ ಹಳೆದೆಲ್ಲ ನೆನಪಿಸಿಕೊಂತ ಉರುಳಾಡಾಕ ಹತ್ತೇನಿ ಎಂದು ಗೊಣಗಿಕೊಂಡು ಪಕ್ಕದಲ್ಲಿದ್ದ ದುಪ್ಪಡಿಯನ್ನೆಳೆದುಕೊಂಡು ಕಣ್ಣವೆಗಳನ್ನು ಮುಚ್ಚಿದೆ.
******
ಆಗೀಗ ಮಳೆ ಹನಿಯಲಾರಂಭಿಸಿತು. ಮನಿ ಹಿಂದಲ ಖೋಲಿಯಿಂದ ಒಂದು ತೆಕ್ಕೆ ಮುತ್ತುಗದೆಲೆಗಳನ್ನು ಬಿದಿರಿನ ಬುಟ್ಟಿಯಲ್ಲಿ ತುಂಬಿಟ್ಟ ಪುಟ್ಟ ಕಡ್ಡಿಗಳನ್ನು ಇಟ್ಟುಕೊಂಡು ಕುಕ್ಕರಗಾಲಿನಲ್ಲಿ ಕುಳಿತು ಎಲೆ ಹಚ್ಚಲಾರಂಭಿಸಿದೆ. ‘ಮಧ್ಯೆ ಒಂದೆಲೆ ಇಡಬೇಕು ಸುತ್ತ ಐದೆಲೆ ಇಟ್ಟು ಕಡ್ಡಿ ಚುಚ್ಚಿಕೊಂತ ಹೋಗಬೇಕೆನವ್ವಾ’ ಎನ್ನುತ್ತಾ ದರೊಂದೂ ಕೆಲಸ ಕಲಿಸಿದ ಅತ್ತೆಯನ್ನು ಮನದಲ್ಲೇ ಸ್ಮರಿಸಿದೆ. ‘ಒಬ್ಬಾಕಿನೇ ಈ ಕೆಲ್ಸಾ ಮಾಡಾಕ ಬ್ಯಾಸರಕ್ಕೇತಿ ನಾನೂ ನಿಮ್ಮ ಕಟ್ಟಿ ಮ್ಯಾಲೇ ಎಲೆ ಹೊಚ್ಚತೀನಿ’ ಎನ್ನುತ್ತ ಶಾಂತಕ್ಕ ಬಂದು ಪಕ್ಕದಲ್ಲೇ ಕೂತಳು. ಮಗಳು ಕಾಲೇಜಕ್ಕ ಹ್ವಾದಳೇನು? ಕೇಳಿದಳು.
“ಹೂನಕ್ಕಾ ಹ್ವಾದಳು.ರಜಾ ಇದ್ದಾಗ ಮೂರ ತಿಂಗಳು ಹೊಲಿಗಿ ಕಲತಾಳಲ್ಲ, ನಿನ್ನ ಜೋಡಿ ದಿನ ಕೆಲಸ ಮಾಡತೇನಿ ಈ ವರಸಾ ಹೊಲಿಗಿ ಮಿಶನ್ ಕೊಡಸಂತಳು. ಮಗಾ ಬೆಂಗಳೂರಿಗೆ ಹೋಗತೇನಂತಾನು. ಎಲಿ ಹಚ್ಚಿ ಬಂದ ಪುಡಿಗಾಸಿನ್ಯಾಗ ಸಂತೀ ಮಾಡೋದೋ ಮಕ್ಕಳ ಬೇಡಿದನ್ನ ಕೊಡಿಸೋದೋ ಒಂದೂ ತಿಳಿಯಾಕ ಹತ್ತಿಲ್ಲಕ್ಕಾ. ನಮ್ಮಂಥಾವ್ರ ಬಾಳೇವು ಅಂದ್ರ ಉದ್ದಾನುದ್ದ ಮನಶ್ಯಾ ಗಿಡ್ಡ ಕೌದಿ ಹೊದ್ಹಾಂಗ. ತೆಲಿ ಮುಚ್ಚಿದ್ರ ಕಾಲಿಗಿಲ್ಲ ಕಾಲು ಮುಚ್ಚಿದ್ರ ತೆಲಿಗಿಲ್ಲ. ಧರ್ಮಸ್ಥಳ ಸಂಘಕ್ಕ ವಾರಾ ನೂರು ರೂಪಾಯಿ ಕಟ್ಟತೆನಲ್ಲಕ್ಕಾ ನನ್ನ ಚೀಟಿ ಹತ್ತಿದಾಗÀ ರಾಟಿ ಕೊಡಸಿಬಿಡತೆನಿ. ಹೆಂಗೂ ಊರಾಗ ಹೊಲಿಗಿ ಕಲತೋರೂ ಕಮ್ಮ ಅದಾರು, ಅರಬಿ ಹೊಲಿದು ಬಂದ ರೊಕ್ಕ ಆಕಿ ಕಾಲೇಜಿಂದ ಫೀ ತುಂಬಾಕ$ ಆಕ್ಕೆತಿ” ಎಂದಳು ಚೆನ್ನಮ್ಮ.
‘ಮಸ್ತ ತೆಲಿ ಓಡಿಸಿದಿ ಬಿಡ ಚೆನ್ನವ್ವಾ. ಈ ವರಸಾ ಕೂಡಿಸಿದ ಎಲಿ ರೊಕ್ಕ ಎಷ್ಟಾಗಬಹುದಂತಿ?’
ಈ ವರಸಾ ಎಲೆ ಕಟ್ಟಿಗೆ ನೂರು ರೂಪಾಯಿ ಹಾಕತೇಂದಾರು ಸಾವ್ಕರ್ರು. ಸುಮಾರು ಐವತ್ತು ಸಾವ್ರ ಆಗಬಹುದಕ್ಕಾ.
ಆಲೆಲೆಲೆ ಭಾಳಾ ಎಲಿ ಕೂಡಿಸೀದಿ.
ಏ ಭಾಳ ಏನ ಬಿಡ ಶಾಂತಕ್ಕಾ, ನಮ್ಮೂರಿನ್ಯಾಗ ಎಲಿಹಚ್ಚಿ ಹಚ್ಚಿ ಒಬೊಬ್ರು ಲಕ್ಷ ರೂಪಾಯಿ ತನಾ ಪೇಮೆಂಟ್ ಗಳಸ್ತಾರಂತ ಹುಬ್ಬಳ್ಳಿ ಸಾವ್ಕಾರ್ರು ಹೇಳತಿದ್ರು. ಬ್ಯಾಸಗಿ ಒಳಗ ಗುಡ್ಡಾ ಬೆಟ್ಟಾ ರಗಡ್ ರಗಡ್ ಓಡಾಡಕ್ಯಾರ ಎಲಿ ಕೂಡಿಸಿಕೊತಾರ,. ದ್ವಾಡ್ಡ್ ಹಿತ್ತಲ ಇದ್ದೋರು ಉದ್ದುದ್ದಾ ಹಗ್ಗ ಕಟ್ಟಿ ಎಲಿ ಒಣ ಹಕ್ಕೊಂತರ. ಕೆಲವು ಮನಿ ಮಂದ್ಯೆಲ್ಲ ಕೂಡಿ ಎಲಿ ತೊಟ್ಟ ಮುರಿಯೋದು, ಸಾರ್ಗೆ ಮಾಡೋದು, ಕಡ್ಡಿ ಕೆತ್ತೋದು, ಊಟದೆಲಿ ಹಚ್ಚೋದು ಮಾಡತಿರ್ತಾರು. ಅಂಥಾವ್ರು ಲಕ್ಷಾಂತರ ಗಳಿಸ್ತಿರ್ತಾರ ಎಂದಳು ಚೆನ್ನಮ್ಮ..
ಖರೇ ಅದ, ನಮ್ಮನ್ಯಾಗ ನಿಮ್ಮನ್ಯಾಗ ನಾವ$ ಹೆಣಗಾಡಬೇಕು. ಎಲಿ ಕೊಯ್ಯೋದ್ರಿಂದ ಮಾರೋ ತನಾ ನಮದೇ ಜಬಾದಾರಿ. ನಿನ್ನ ಗಂಡಾ ಹೋದಾಂವ ಬರವಲ್ಲ, ನನ್ನ ಗಂಡಾ ಇದ್ದಾಂವ ದುಡಿವಲ್ಲಾ, ನಮ್ಮ ನೀಲಿ ಗಂಡಾ ಬಿದ್ದಾಂವÀ ಏಳವಲ್ಲ. ಎಂದು ನಕ್ಕಳು ಶಾಂತಕ್ಕ.
ಈ ವರ್ಷರೆ ಐವತ್ತೆಲೆ ಕಟ್ಟಿಗೆ ನೂರು ರೂಪಾಯಿ ಮಾಡ್ರಿ ಅಂತ ನಾ ಅಂದೆ ಸಾವ್ಕಾರಿಗೆ. ಕಳೆದ ವರ್ಷರೆ ಹತ್ರೂಪಾಯಿ ಏರಿಸಿದ್ದಾಗೇತಿ. ಮತ್ತ ಈ ವರಷಾ ಆಗಂಗಿಲ್ಲಂದ್ರು. ಅವ್ರು ಒಂದ ಕಟ್ಟಿಗೆ ನೂರು ರೂಪಾಯಿ ಅನಕೊಂತ ಮಾರತಾರಂತ. ನಮ್ಮ ನಸೀಬದಾಗ ಇಷ್ಟ ಇರೋದು ನಮ್ಮ ಜೀವ್ನಾ ಆರಕ್ಕೇರಂಗಿಲ್ಲ ಮೂರಕ್ಕಿಳಿಯಂಗಿಲ್ಲ ಎಂದು ಚೆನ್ನಮ್ಮ ಹೇಳುವಷ್ಟರಲ್ಲಿ ‘ಇಂದ ಮಧ್ಯಾಹ್ನ ಕುಂಬಳಕಾಯಿ ಸೆಂಡಿಗಿ ಕರದಿದ್ದೆ ನಿಮಗ ಕೊಡಾಕಂತ ಒಂದೀಟು ತಗದ ಇಟ್ಟಿದ್ದೆ ತಗೋರವ್ವ’ ಎನ್ನುತ್ತ ನೀಲಾ ಬಂದಳು.
‘ಈ ಕೆಲಸಾ ಮಾಡೂ ಮುಂದ ಯಾರರೆ ತಿನ್ನಾಕ ಕುಡಿಯಾಕ ಏನರೆ ಕೊಟ್ಟರ ಎಷ್ಟ ಖುಷಿ ಅಕ್ಕೇತಿ. ನೀಲಾ ನೀ ಸೆಂಡಗಿ ತಂದಿ ಈಗ ಚೆನ್ನಮ್ಮ ಚಾ ಮಾಡ್ತಾಳ ಎಂದು ಕೀಟಲೆಯ ನಗೆನಕ್ಕಳು ಶಾಂತಕ್ಕ.
‘ಎಷ್ಟರ ಜಾಣೆ ಈ ಶಾಂತಕ್ಕ’ ಎನ್ನುತ್ತಾ ಚೆನ್ನಮ್ಮ ಒಂದೇ ತರಹ ಕೂತು ಹಿಡಿದ ಕಾಲನ್ನೊಮ್ಮೆ ತಿಕ್ಕಿಕೊಂಡು ಚಾ ಮಾಡಲು ಅಡುಗೆ ಮನೆ ಹೊಕ್ಕಳು.
ಗೋಡೆಗೊರಗಿ ಕುಳಿತು ಸೆಂಡಿಗೆ ಮುರಿದು ಬಾಯಿಗಿಡುತ್ತಾ ಒಳ್ಳೇ ಖಾರವಾಗಿ, ಭೇಷಾಗೇತಿ ನೀಲಾ ಎಂದು ಹೊಗಳಿದ ಚೆನ್ನಮ್ಮ ‘ಇಂಥಾ ಸೆಂಡಿಗಿ ಜೋಡಿ ಚಾ ಕುಡಿಯೋದಕ್ಕಿಂತ ಕಬ್ಬಿನ ಹಾಲ ಕುಡಿ¨ಕು ಒಳ್ಳೇ ಸವಿ ಹತ್ತತತಿ’ ಎಂದಳು.
ನಮ್ಮ ಊರ ತುಂಬಾ ಕಬ್ಬಿನ ಹೊಲಾ ಅದವು ಖರೇ. ಎರಡು ವರ್ಷಕ್ಕೊಮ್ಮೆ ಎಲ್ಲಾ ಕಬ್ಬ ಕಡಿದು ಸಕ್ಕರೆ ಕಾರ್ಖಾನೆಗೆ ಕಳಿಸಿಬಿಡ್ತಾರ. ಒಂದ ತಟಕು ಹಾಲ ಸಿಗೂದಿಲ್ಲ ಈ ಊರಿನ್ಯಾಗ. ನನಗೊಂದು ಇಚಾರ ಬರಕ ಹತ್ತೇತಿ. ಚೆನ್ನಮ್ಮಾ ನಿನ್ನ ಮಗ ಹಿಂಗ ಮಾಡಿದ್ರ ಹೆಂಗ? ಎಂದು ಬಿಸಿ ಬಿಸಿ ಚಾ ಹೀರುತ್ತ ಕುಳಿತ ಶಾಂತಕ್ಕ ಕೇಳಿದಳು.
ಏನ ಹೇಳಾಕ್ಹತ್ತಿ ಒಂದೀಟ ಬಿಡಿಸಿ ಹೇಳವ್ವಾ… ಎಂದಳು ಚೆನ್ನಮ್ಮ.
ಮಠದಾಗಿನ ಸ್ವಾಮಿಗೋಳು ಹರೇದ ಹುಡುಗೋರು ಊರು ಬಿಟ್ಟ ಹೋಗಬ್ಯಾಡ್ರಿ ವ್ಯಾಪಾರ ಏನಾರ ಮಾಡೋ ಹಾಂಗಿದ್ರ ಮಠದಿಂದಾ ಸಹಾಯಧನಾ ಕೊಡತೀವಿ ಅನ್ನತಾರಂತ. ನಿನ್ನ ಮಗಂಗೆ ಕಬ್ಬಿನ ಹಾಲ ತೆಗೆಯೋ ಗಾಣಾ ಕೊಡಿಸಾಕ ಕೇಳು. ಚೆಂದಾಗಿ ದುಡಕಿ ಮಾಡಿ ಮಠಕ್ಕ ಹೊಳ್ಳಿ ದುಡ್ಡು ಮುಟ್ಟಿಸಾಕ ಹೇಳು.
‘ಹುಡುಗಾ ಕಾಣಲಾರದ ನಗರಕ್ಕ ಹೋಗೋದಕ್ಕಿಂತಾ ಇದ್ದೂರಾಗ ದುಡಿಯಾದೇ ಭೇಷನ್ನಿಸ್ತದೆ ಚಿಗವ್ವಾ’ ಎಂದಳು ನೀಲಾ.
ವಿಷಯ ಚೆನ್ನಮ್ಮನಿಗೂ ಹಿಡಿಸಿತ್ತು.
******
ಒಂದು ವರುಷದ ನಂತರ… ಮಠದೆದುರು ಕಾಕಾನ ಮಿರ್ಚಿ ಮಂಡಕ್ಕಿ ಅಂಗಡಿ ಬಾಜೂಕನ$ ಪವನನ ಕಬ್ಬಿನ ಹಾಲಿನಂಗಡಿ ಶುರುವಾಗಿತ್ತು. ಮಠಕ್ಕೆ ಬಂದವನೊಬ್ಬ ನ್ಯೂಸ್ ಪೇಪರ್ ಹಿಡಿದುಕೊಂಡು ಗಟ್ಟಿಯಾಗಿ ಓದುತ್ತಿದ್ದ. ಕುಟುಂಬ ಪತ್ತೆ ಮಾಡಲು ಸುಳಿವು ನೀಡಿ ಬೆಂಗಳೂರಿನ ಹೊಟೆಲ್ಲಿನಲ್ಲಿ ಹಲವು ವರುಷಗಳಿಂದ ಕೆಲಸ ಮಾಡುತ್ತಿದ್ದ ಬಾಳಪ್ಪ ಎನ್ನುವವನನ್ನು ಒಂದು ಕಾಲು ಗ್ಯಾಂಗ್ರಿನ್ ಆಗಿದೆ ಎನ್ನುವ ಕಾರಣಕ್ಕೆ ನಿರ್ದಯವಾಗಿ ಹೊರನೂಕಿದ್ದಾರೆ. ನಮ್ಮೂರಿಗೆ ಹೋಗುತ್ತೇನೆ ಎಂದು ಬೆಂಗಳೂರಿನಿಂದ ಧಾರವಾಡದವರೆಗೆ ಬಂದ ಆ ಮನುಷ್ಯ ತಮ್ಮೂರಿಗೆ ಹೋಗಲು ತ್ರಾಣವಿಲ್ಲದೇ ನಗರದ ಹೊರವಲಯದಲ್ಲಿರುವ ಬಸ್ಟಾಂಡಿನಲ್ಲಿ ಮಲಗಿದ್ದಾನೆ. ‘ಮರಳಿ ಮನೆಗೆ’ ಸೇವಾ ಸಂಸ್ಥೆಯವರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಡ್ಮಿಟ್ ಮಾಡಿದ್ದಾರೆ.
‘ಇಂವಾ ಯಾರೋ ಯಾವೂರಿನವನೋ’ ಎಂದು ಓದಿದವನು ಲೊಚಗುಟ್ಟಿದ. ಕಬ್ಬಿನ ಹಾಲು ಸೋಸುತ್ತಾ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಪವನ್ ಪೇಪರಿನಲ್ಲಿ ಪ್ರಕಟವಾದ ಫೋಟೋ ನೋಡಿದ. ಮನೆ ಜಗುಲಿಗೆ ಇದ್ದ ಅಪ್ಪನ ಫೋಟೋವನ್ನು ನಿತ್ಯ ನೋಡುವಾಗಲೆಲ್ಲ ಹಣೆಯ ಎಡಭಾಗದಲ್ಲಿದ್ದ ಆಳವಾದ ಗಾಯದ ಗುರುತನ್ನೂ ನೋಡುವುದು ಅಭ್ಯಾಸವಾಗಿತ್ತವನಿಗೆ. ‘ಇಂವಾ ನಮ್ಮಪ್ಪ ಇರಬೇಕು ನಾಪತ್ತೆ ಆಗಿದ್ದ’ ಎಂದು ಸಂತೋಷದಿಂದ ಕಿರುಚಿದವನೇ ‘ ಅವ್ವಾಗ ಇದನ್ನ ತೋರಿಸಿ ಬರತೇನಿ’ ಎಂದು ಪೇಪರ್ ಹಿಡಿದುಕೊಂಡು ಮನೆಗೆ ಓಡಿಬಂದ.
‘ನೋಡವ್ವಾ ಅಪ್ಪಾ ಬದುಕಿದ್ದಾರ’ ಎಂದ. ಯಾರೋ ಧಾರವಾಡದ ಸಿವಿಲ್ದಾಗ ಅಡ್ಮಿಟ್ ಮಾಡ್ಯಾರಂತ. ಫೋಟೋ ನೋಡಿದೆ. ಎಣಗಪ್ಪು ಬಣ್ಣವಿದ್ದ ಬಾಳಪ್ಪ ಕಡುಗಪ್ಪಾಗಿದ್ದ ಸೊರಗಿದ್ದ. ಕೂದಲು ಅರ್ಧಮರ್ಧ ಹಣ್ಣಾಗಿದ್ದವು. ಹಣೆಯ ಮೇಲೆ ಅದೇ ಆಳವಾದ ಗುರುತಿತ್ತು. ‘ಹೌದು ಇವನೆ ನಿಮ್ಮಪ್ಪ’ ಎಂದೆ ಉದ್ವೇಗದಿಂದ. ಮಗಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ‘ಅಪ್ಪನ ಮಾರಿ ನೋಡುವಂಗಾಗೇತಿ ನನಗ’ ಎಂದು ಕುಣಿದಾಡಿದಳು. ಗೋಡೆಗೊರಗಿ ನಿಂತಳು ಚೆನ್ನಮ್ಮನ ಮನ ಹೊಯ್ದಾಡಲಾರಂಭಿಸಿತು.
ಕುಟುಂಬಕ್ಕೆ ಅಗತ್ಯವಿದ್ದಾಗ ಜೊತೆಗಿರದ ಗಂಡನನ್ನು ಮನೆಗೆ ಸೇರಿಸಿಕೊಳ್ಳಬೇಕೆ? ಎಷ್ಟು ನೋವು ಅವಮಾನಗಳನ್ನು ಇವನಿಂದಾಗಿ ಸಹಿಸಬೇಕಾಯ್ತ. ದುಡಿಯದ ಗಂಡನನ್ನು ದುಡಿ ಎಂದು ಕೇಳಿದ್ದು ನನ್ನ ತಪ್ಪೆ? ರೊಕ್ಕದ ಆಶೇಕ್ಕ ಜಗಳಾಡಿ ಗಂಡನ್ನ ಬೆಂಗಳೂರಿಗೆ ಕಳಿಸಿದಾಕಿ ಈಕಿ ಎಂದು ಊರಿನನೇಕರು ತನಗೆ ಅಪರಾಧಿ ಪಟ್ಟಗಟ್ಟಿರಲಿಲ್ಲವೇ? ಒಂಟಿಯಾಗಿ ದುಡಿದು ಮಕ್ಕಳನ್ನು ಬೆಳೆಸುವಾಗ ಅರ್ಧರಾತ್ರಿಯಲ್ಲೂ ಬಾಗಿಲು ಬಡಿದವರೆಷ್ಟು ಮಂದಿ! ಬೇಲಿ ಇರಲಾರ್ದ ಹೊಲದ ಹಾಂಗ ಈಕಿ ಎಂದು ಕಾಡಿದವರೆಷ್ಟು ಮಂದಿ!
‘ನಾ ನಿನ್ನ ಇಟ್ಗೋತೀನಿ’ ಎಂದು ಬೆನ್ನು ಬಿದ್ದಿದ್ದ ಪಕ್ಕದ ಬೀದಿ ಸಂಗಪ್ಪನಿಗೆ ಕಾಲ್ಮರಿ ತೆಗೆದು ಒಮ್ಮೆ ಚೆನ್ನಾಗಿ ಚಚ್ಚಿ ‘ನಾ ಮೈ ಮಾರಾಕ ಕುಂತಿಲ್ಲ. ಮಾನ ಮರ್ವಾದಿ ಐತಿ ನನಗ’ ಬೊಬ್ಬೆ ಹಾಕಿರಲಿಲ್ಲವೇ?
ಹುಬ್ಬಳ್ಳಿ ಸಾಹುಕಾರನ ಸಹಾಯಕ ‘ನೀ ಮನಸ್ಸು ಮಾಡಿದಿ ಅಂದ್ರ ನಿನ್ನ ಎಲೆ ಕಟ್ಟಿಗೆ ಹೆಚ್ಚಗಿ ರೊಕ್ಕಾ ಬರದು ಕೊಡತೀನಿ’ ಎಂದು ಕಣ್ಣು ಕೆಕ್ಕರಿಸಿ ನೋಡಿ ಹೇಳುತ್ತಿರಲಿಲ್ಲವೇ? ‘ಹೆಚ್ಗಿ ಏನ ಬ್ಯಾಡ್ರಿ ಎಲ್ಲಾರಿಗೂ ಕೊಟ್ಟಷ್ಟ ಕೊಡ್ರಿ’ ಎನ್ನುತ್ತಿರಲಿಲ್ಲವೇ?. ರಭಸದಿಂದ ನುಗ್ಗಿ ಬರುವ ಹಳೆ ನೆನಪುಗಳಿಂದ ಮನಸ್ಸು ವ್ಯಗ್ರವಾಯ್ತು. ಜೊತೆಗೆ ಬಾಳ ಬೇಕಾದಾಗ ಬೇಜವಾಬ್ದಾರಿಯಿಂದ ಬಿಟ್ಟು ಹೋದವನೀಗ ಬೇಕೆ? ಮನ ಹೊಯ್ದಾಡಲಾರಂಭಿಸಿತು ಮಗಳು ಕೈ ಹಿಡಿದಲುಗಿಸಿ ‘ಏನಾತವ್ವಾ ಸಿವಿಲ್ಲ ಆಸ್ಪತ್ರೆಗೆ ಹೋಗೋಣ ನಡಿ’ ಎಂದಳು. ಗೋಡೆಯ ಮೇಲಿದ್ದ ಅತ್ತೆಯ ಫೋಟೋ ದಿಟ್ಟಿಸಿದೆ. ಮೌನವಾಗಿ ಮಕ್ಕಳ ಮೊಗವನ್ನು ನೋಡಿದೆ. ಮನಸ್ಸು ಸ್ತಿಮಿತಕ್ಕೆ ಬಂತು.… ‘ನಡೀರಿ’ ಎನ್ನುತ್ತ ಹೊಸ್ತಿಲಿನಿಂದಾಚೆ ಅಡಿ ಇಟ್ಟೆ….
* ಮಾಲತಿ ಹೆಗಡೆ







