ಪ್ರವಾಸಕ್ಕೆಂದು ಬಂದಿದ್ದ ಫ್ಯಾಮಿಲಿಯೊಂದು ಜೋಗದಿಂದ ದಬ್ಬೆ ಫಾಲ್ಸ್ ಕಡೆಗೆ ಪ್ರಯಾಣಿಸುತ್ತಿರುವಾಗ “ಆಸರೆ ಹೋಂಸ್ಟೇ ಗೆ ದಾರಿ” ಎನ್ನುವ ದೊಡ್ಡದಾದ ಬೋರ್ಡ್ ಕಾಣಿಸುತ್ತದೆ. ಅದನ್ನು ಗಮನಿಸಿದ ಮಕ್ಕಳು ಅಪ್ಪನ ಬಳಿ ಅದರ ಅನುಭವವನ್ನು ಪಡೆಯಬೇಕೆಂದು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸುತ್ತಾರೆ. ಹೇಗೂ ಸಂಜೆಯಾಗಿದ್ದರಿಂದ ರಾತ್ರಿಯ ಪ್ರಯಾಣವನ್ನು ಅವಾಯ್ಡ್ ಮಾಡಿ ಮರುದಿನ ಮುರುಡೇಶ್ವರಕ್ಕೆ ಹೋದರಾಯಿತೆಂದು ನಿರ್ಧರಿಸಿ ಕಾರನ್ನು ಆ ಕಡೆಗೆ ತಿರುಗಿಸಿದರು. ಕಾಂಕ್ರೀಟ್ ರಸ್ತೆ ಅವರನ್ನು ತಲುಪಿಸಿದ್ದು ಒಂದು ಸುಂದರವಾದ ಕಟ್ಟಡ ಸಮುಚ್ಚಯದ ಬಳಿಗೆ. ಹಲವು ಟೂರಿಸ್ಟ್ ವೆಹಿಕಲ್ ಗಳು ಈಗಾಗಲೇ ಅಲ್ಲಿದ್ದವು. ಹೋಂಸ್ಟೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀಕಾಂತ್ ಬಳಿ ಮಾತನಾಡಿ ತಮಗೆ ಬೇಕಾದ ರೂಮಿನ ಕೀ ಪಡೆದುಕೊಂಡರು. ಕ್ಯಾಂಪ್ ಫೈರ್, ಒಳ ಹಾಗೂ ಹೊರಾಂಗಣ ಕ್ರೀಡೆ ಹೀಗೆ ಎಲ್ಲಾ ರೀತಿಯ ಮನರಂಜನೆಗೆ ಬೇಕಾದ ವ್ಯವಸ್ಥೆ ಅಲ್ಲಿತ್ತು. ಕ್ಯಾಂಟೀನ್ ಕೂಡ ಸುಸಜ್ಜಿತವಾಗಿತ್ತು ಅದರ ಉಸ್ತುವಾರಿಯನ್ನು ಶ್ರೀಕಾಂತ್ ನ ಪತ್ನಿ ಶಾರದಾ ವಹಿಸಿಕೊಂಡಿದ್ದರು. ಬಾಡಿಗೆ ಎಷ್ಟು ಅಂತ ವಿಚಾರಿಸಿದಾಗ ತಮಗೆ ಅನಿಸಿದಷ್ಟು ಅಲ್ಲಿರುವ ಪೆಟ್ಟಿಗೆಯಲ್ಲಿ ಹಾಕಿಬಿಡಿ ಅಂತ ಹೇಳುತ್ತಾರೆ. ಸಂಗ್ರಹವಾದ ಹಣವು ಅಲ್ಲಿನ ನಿರ್ವಹಣೆಯ ಜೊತೆಗೆ ಸಮಾಜಸೇವೆಗೆ, ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಸಂದಾಯವಾಗುತ್ತದೆ ಎನ್ನುವ ಸಣ್ಣ ಟಿಪ್ಪಣಿಯನ್ನೂ ಹಾಕಲಾಗಿತ್ತು.
ಸ್ವಾಗತ ಕೋಣೆಯಲ್ಲಿ ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದ್ದ “ಮನುಷ್ಯನ ಗತಿಯಲಿ ಮನುಷ್ಯನದ್ದೇ ನೆರಳು” ಎನ್ನುವ ವಾಕ್ಯ ತತ್ತ್ವಜ್ಞಾನದ ಆಳವನ್ನೂ, ಮಾನವೀಯ ಸಂಬಂಧಗಳ ಪ್ರಾಮುಖ್ಯತೆಯನ್ನೂ ಬಹಳ ಪ್ರಭಾವಶಾಲಿಯಾಗಿ ವ್ಯಕ್ತಪಡಿಸುತಿತ್ತು. ಜೀವನಯಾತ್ರೆಯಲ್ಲಿ (ಗತಿಯಲಿ), ಅವನಿಗೆ ಸಾಥ್ ನೀಡುವ ನಿಜವಾದ ನೆರಳು, ಆಶ್ರಯ, ಆಧಾರವೆಂದರೆ ಮತ್ತೊಬ್ಬ ಮನುಷ್ಯನೇ ಆಗಿರಬಹುದು. ಪ್ರಕೃತಿ, ಸಂಪತ್ತು, ಸ್ಥಾನಮಾನ ಎಲ್ಲವೂ ಕಾಲಿಕವಾಗಿರಬಹುದು. ಆದರೆ ಮನುಷ್ಯನು ಮನುಷ್ಯನಿಗೆ ಜೊತೆಯಾಗುವ ಭಾವನೆ, ಸಹಾನುಭೂತಿ, ಸಹಕಾರ ಇವುಗಳೇ “ನಿಜವಾದ ನೆರಳು”.
ವ್ಯವಹಾರದ ಜೊತೆಗೆ ತಾತ್ತ್ವಿಕ ಚಿಂತನೆ !!
ನಾಲ್ವರು ಇಂಜಿನಿಯರ್ ಗಳ ತಂಡ ಅದು. ಎಂಟು ನೂರ ಮೂವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುವ ಶರಾವತಿಯ ಜೋಗ ಜಲಪಾತದ ರಮಣೀಯತೆಯನ್ನು ಅನುಭವಿಸುತ್ತಿದ್ದವವರಿಗೆ ಮಧ್ಯಾಹ್ನದ ಊಟದ ಪರಿವೆಯೇ ಇರಲಿಲ್ಲ. ಮುಂಗಾರು ಮಳೆಯಲ್ಲಿ ಕುಣಿಯುತ್ತಾ, ಮೈಮರೆತು ನೆನೆಯುತ್ತಾ ಮಲೆನಾಡ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರಲು ನೇಸರನ ನಿರ್ಗಮನವೂ ಗಮನಕ್ಕೆ ಬಂದಿರಲಿಲ್ಲ.
ಸುತ್ತಮುತ್ತಲಿನ ಹೋಟೆಲ್ ಗಳಲ್ಲಿ ವಿದ್ಯುತ್ ದೀಪಗಳು ಬೆಳಗುವುದನ್ನು ಕಂಡು ವಾಸ್ತವಕ್ಕೆ ಮರಳಿ ರೂಮ್ ಬುಕ್ ಮಾಡೋಕೆ ಅಂತ ನೋಡಿದ್ರೆ ಎಲ್ಲವೂ ಫುಲ್ ಆಗೋಗಿತ್ತು. ಇನ್ನು ರೂಮ್ ಸಿಗಬೇಕು ಅಂದ್ರೆ ಸಾಗರಕ್ಕೆ ಹೋಗಬೇಕು ಅಥವಾ ಭಟ್ಕಳಕ್ಕೆ ಹೋಗಬೇಕು. ಹೇಗೂ ಅವರ ಪ್ರವಾಸದ ಲಿಸ್ಟ್ ನಲ್ಲಿದ್ದ ಮುಂದಿನ ಸ್ಪಾಟ್ ಗಳು ದಬ್ಬೆ ಜಲಪಾತ, ಭೀಮೇಶ್ವರ, ಕಾನೂರು ಕೋಟೆ ಆಗಿದ್ದರಿಂದ ಆ ದಿಕ್ಕಿಗೆ ವಾಹನವನ್ನು ತಿರುಗಿಸಿದರು.
ಮಾರ್ಗವನ್ನೇ ಮಸುಕಾಗಿಸುವಷ್ಟು ಮಳೆಯ ಅಬ್ಬರ, ಜೊತೆಗೆ ಮಳೆಯಲ್ಲೇ ನೆನೆದಿದ್ದರಿಂದ ನಡುಗುವಷ್ಟು ಚಳಿ. ಸ್ವಲ್ಪ ಮೈಬಿಸಿ ಮಾಡಿಕೊಳ್ಳೋಣವೆಂದು ಮಾರ್ಗ ಮಧ್ಯೆ ಕಾರ್ಗಲ್ ನ ಗೂಡoಗಡಿ ಬಳಿ ವಾಹನ ನಿಲ್ಲಿಸುತ್ತಾರೆ. ಬಿಸಿ ಬಿಸಿಯಾಗಿ ಚಹಾ ಕುಡಿದು ದಿನವಿಡೀ ಮಳೆಗೆ ನೆನೆದು ಮುದ್ದೆಯಾದ ಜರ್ಕಿನ್, ಪ್ಯಾಂಟುಗಳನ್ನು ಬದಲಿಸಿಕೊಳ್ಳುವಷ್ಟರಲ್ಲಿ ಅಂಗಡಿಯವನೂ ಬಾಗಿಲು ಹಾಕಿ ಹೊರಟಾಗಿತ್ತು. ಇನ್ನೇನು ಕಾರ್ ಸ್ಟಾರ್ಟ್ ಮಾಡಿ ಹೊರಡಬೇಕೆನ್ನುವಷ್ಟರಲ್ಲಿ ಕೋಗಾರು ಘಾಟಿಯಲ್ಲಿ ಭೀಕರ ಮಳೆಗಾಳಿಗೆ ನಡು ರಸ್ತೆಯ ಮೇಲೆ ದೊಡ್ಡ ದೊಡ್ಡ ಬೀಟೆ, ಸಾಗುವಾನಿ ಮರಗಳು ಉರುಳಿ ಬಿದ್ದ ಕಾರಣ ದಾರಿ ಬಂದ್ ಆಗಿದೆ ಎಂಬ ಸುದ್ದಿ ಆ ರಸ್ತೆಯಲ್ಲಿ ಹಿಂತಿರುಗಿ ಬರುವವರಿಂದ ತಿಳಿಯುತ್ತದೆ. ಸುತ್ತಲೂ ದಟ್ಟಾರಣ್ಯ, ಗುರುತು ಪರಿಚಯವಿಲ್ಲದ ರಸ್ತೆ ಬದಿಯಲ್ಲಿ ಇಡೀ ರಾತ್ರಿ ಕಾರಲ್ಲಿ ಕೂತು ಬೆಳಗು ಮಾಡೋ ಧೈರ್ಯ ಯಾರಲ್ಲೂ ಇರಲಿಲ್ಲ. ಕಾರಣ ಕಾಡುಪ್ರಾಣಿಗಳ ಹಾವಳಿ. ಗುಂಪು ಗುಂಪಾಗಿ ಓಡಾಡುವ ಕಾಡುಕೋಣಗಳು, ಸೊಕ್ಕಿ ನಡೆಯುವ ಕಾಡಾನೆಗಳು, ಬೇಟೆಗಾಗಿ ಹೊಂಚುಹಾಕುವ ಚಿರತೆಗಳು ಆ ಕಾಡಲ್ಲಿ ಬೇಕಾದಷ್ಟಿವೆ ಎನ್ನುವುದನ್ನು ಕೇಳಿ ತಿಳಿದುಕೊಂಡಿದ್ದರು. ಆತಂಕ ಹೆಚ್ಚುತ್ತಿರಲು ದೇವರೇ ಇಲ್ಲೇ ಅಕ್ಕ ಪಕ್ಕ ಯಾವುದಾದ್ರೂ ಚಿಕ್ಕ ಗುಡಿಸಲಾದ್ರೂ ಸಿಕ್ಕಿದ್ದರೆ ಕಟ್ಟೆ ಮೇಲಾದ್ರೂ ಮಲಗಿ ರಾತ್ರಿಯನ್ನು ಕಳೆಯಬಹುದಿತ್ತು ಎಂಬ ಯೋಚನೆ ಎಲ್ಲರದ್ದೂ.
ಕಾರನ್ನು ಚಹಾ ಅಂಗಡಿಯ ಸಮೀಪ ನಿಲ್ಲಿಸಿದವರೇ ಸಣ್ಣ ಟಾರ್ಚ್ ಹಿಡಿದು ಮುಖ್ಯ ರಸ್ತೆಯನ್ನು ಬಿಟ್ಟು ಅಕ್ಕ ಪಕ್ಕದಲ್ಲಿ ಯಾವುದಾದರೂ ಜನವಸತಿ ಇರಬಹುದೋ ಎಂದು ಹುಡುಕತೊಡಗಿದರು. ಗಾಢಾoಧಕಾರದಲ್ಲಿ ಹೆಜ್ಜೆ ಹಾಕುವಾಗ ಹಾವು ಚೇಳುಗಳನ್ನು ತುಳಿದು ಬಿಟ್ಟರೆ, ಕಾಡುಪ್ರಾಣಿಗಳು ಅಡ್ಡ ಸಿಕ್ಕಿಬಿಟ್ಟರೆ ಎನ್ನುವ ಭಯ. ಅಲ್ಲಲ್ಲಿ ಮಿಂಚು ಹುಳುಗಳ ಬೆಳಕು, ಕಿವಿಗಡಚುವ ಜೀರುಂಡೆಯ ಕೂಗು, ಕಪ್ಪೆಗಳು ವಟರಗುಟ್ಟುವ ಸದ್ದು ಬಿಟ್ಟರೆ ಮುಖಕ್ಕೆ ರಪ್ ರಪ್ಪೆಂದು ಅಪ್ಪಳಿಸುವ ಇರುಸಲು ಮಳೆ. ಹೀಗೆ ಹೆದರುತ್ತಲೇ ಸುಮಾರು ದೂರ ಸಾಗಿದ ಮೇಲೆ ಅಲ್ಲೊಂದು ಕಡೆ ಹೊಗೆಯ ಘಾಟು ವಾಸನೆ, ಶ್ವಾನಗಳು ಬೊಗಳುವ ಸದ್ದು ಕೇಳಿಸಿದಾಗ ಸಧ್ಯ ಇಲ್ಲೊಂದು ಊರು ಇದೆ ಎಂಬುದು ಖಾತ್ರಿಯಾಗಿ ಒಮ್ಮೆ ಗಟ್ಟಿಯಾಗಿ ಉಸಿರೆಳೆದುಕೊಳ್ಳುವಂತಾಯ್ತು.
ಆಷಾಢ ಮಾಸದ ಅಮಾವಾಸ್ಯೆಯ ದಿನ. ಹಗಲೂ ರಾತ್ರಿ ಬಿಟ್ಟೂ ಬಿಡದಂತೆ ಜುರ್ರೆಂದು ಸುರಿವ ಜಡಿ ಮಳೆ. ಅತ್ತ ಶರಾವತಿ ನದಿಯು ಉಕ್ಕಿ ಭೋರ್ಗರೆಯುತ್ತಿದ್ದರೆ ಇತ್ತ ಪಕ್ಕದ ಹಳ್ಳಿ ಕಣಪಗಾರು ಸುಬ್ಬಾಭಟ್ರ ಮನೆಯ ಹೊಗೆ ಹಿಡಿದ ಹಂಚಿನ ಪಡಕಿನಿಂದ ಪಟ ಪಟ ಎಂದು ನೀರು ಲಯವಾಗಿ ಸೋರುತ್ತಿತ್ತು. ಕಡಿ ಮಾಡಿನ ಗೋಡೆಯೂ ನೆನೆದು ಚೌಕಿ ಪೂರ್ತಿ ಥಂಡಿ ಆಗಿತ್ತು. ಬಚ್ಚಲು ಒಲೆಯೊಳಗೆ ತೆಂಗಿನ ಕುಂಟೆ, ಅಡಿಕೆ ಸಿಪ್ಪೆ ತುರುಕಿ ಸುಬ್ಬಾಭಟ್ರು ಬೆಂಕಿ ಕಾಯಿಸುತ್ತಾ..
“ನಾಳಿಂದ ಶ್ರಾವಣ ಮಾಸ. ಇನ್ನೇನ್ ಒಂದೊಂದೇ ಹಬ್ಬ ಶುರು. ಕೂಸು ಶಾರದಾ ನಾಗರಪಂಚಮಿಗೆ ಬಂದೋಳು ‘ಅಪ್ಪಯ್ಯ ನಾಲ್ಕು ದಿನ ಉಳ್ಕoಡು ಹೋಗ್ತಿ ಎಂದು ಹೇಳಿರೆ… ‘ಬ್ಯಾಡ ಮಗಳೇ ಮನೆ ತುಂಬಾ ಸೋರ್ತು ಅಂತ ಯಾವ್ ಬಾಯಗಾದ್ರು ಹೇಳ್ಲಿ ಆನು? ಅಳಿಯನ್ನoತು ಒಂದು ಘಳಿಗೆ ಮನೆ ಒಳಗೆ ಕರೆದು ಕೂರಿಸಕ್ಕೂ ಅಸಹ್ಯ. ಛೇ ಪ್ರತಿವರ್ಷ ಮಳೆಗಾಲದ್ ಪಾಡು ಇದೇ ಹಾಡಾಗೋತು” ಸಣ್ಣಕೆ ಗೊಣಗುತ್ತಿದ್ದರು.
ಕಿವಿ ನೆಟ್ಟಗೆ ಮಾಡಿಕೊಂಡ ಹೆಂಡತಿ ಸುಶೀಲಕ್ಕನ ಜವಾಬು – ”ಹಂಗೆ ಆಗವ್ವು ನಿಂಗಕ್ಕೆ. ಬ್ಯಾಸಿಗೆಲಿ ಶಾನುಭೋಗ್ರ ಮನೆ ಉದ್ದ ಮರದ ಸಿಪ್ಪೆ ತೆಂಗಿನಕಾಯಿ ನಮ್ಮನೆ ಕೋಳ್ ಹಂಚಿನ ಮೇಲ್ ಡುಬು ಡುಬು ಅಂತ ಬೀಳಕ್ಕಾರೆ ಕಣ್ಣು ಹೊಟ್ಟಿ ಹಾರಿ ಹೋಗಿತ್ತಾ ನಿಂಗಳದ್ದು? ಅಲ್ಲ… ಇಷ್ಟೆಲ್ಲಾ ಹಂಚು ಒಡದು ಹೋದ್ರೂ ನಿಂಗ ಒಂದು ಮಾತಾಡಿದ್ರ ಹೇಳಿ? ನೆರ ಮನೆಯವರ ಜೊತೆ ನಿಷ್ಠುರ ಕಟ್ಟಿ ಕೊಳ್ಳಲಾಗ ಅಂತ ಬಾಯಿ ಮುಚ್ಕಂಡ್ ಕೂತಿದ್ದಿ ಅಲ್ದಾ… ಈಗ ಒಬ್ರೇ ಮಂಡೆ ಕುಟ್ಕoಡ್ರೆ ಏನ್ ಬಂತು?? ಹಗಲೆಲ್ಲಾ ಹರಕು ಕೊಪ್ಪೆ ಹಾಕ್ಯoಡ್ ತ್ವಾಟದ ಕಾದಿಗೆ ಹೆರಿಯ ಕೆಲ್ಸ, ರಾತ್ರಿಗ್ ನೋಡಿರೆ ಈ ಲೋಕ ನೀರು ಸೋರ ಮಾಡ್ ಕೆಳಗೆ ನಡುಗ್ತಾ ಬಿದ್ಕoಬುದು. ಜ್ವರ ಗಿರ ಬಂತು ಅಂದ್ರೆ ಯಂಗೇನ್ ಗೊತ್ತಿಲ್ಲೆ ಮತ್ತೆ”. ಅವಳ ಮಾತು ಇದ್ದಿಲು ಒಲೆಯಲ್ಲಿ ಕುದಿಯುತ್ತಿದ್ದ ಬೆಲ್ಲದ ಕಾಫಿಯಷ್ಟೇ ಬಿಸಿಯಾಗಿತ್ತು.
ಶ್ವಾನಗಳು ಒಂದೇ ಸಮನೆ ಅಪರಿಚಿತರನ್ನು ನೋಡಿದಂತೆ ಬೊಗಳುತ್ತಿರುವುದನ್ನು ಕೇಳಿಸಿಕೊಂಡ ಸುಬ್ಬಾ ಭಟ್ಟರು ಮನೆಯಿಂದ ಹೊರಗೆ ಬಂದರು. ನಾಲ್ವರು ಯುವಕರನ್ನು ನೋಡಿ ಕಿವಿ ಕೆಪ್ಪಾಗುವಂತೆ ಬೊಗಳುತ್ತಿದ್ದ ಅವುಗಳ ಕುತ್ತಿಗೆ ಹಗ್ಗ ಹಾಕಿ ನಿಲ್ಲಿಸಿದರು.
“ಬನ್ನಿ ಬನ್ನಿ…. ಹಳ್ಳಿನಾಯಿ ಬರಿ ಕೂಗದಷ್ಟೇ ಇವು ಕಚ್ಚದಿಲ್ಲೆ ಹೆದರಡಿ.” ಚಿಮಣಿ ಬುರುಡೆ ಹಿಡಿದು ಬಂದ ಸುಶೀಲಕ್ಕನಿಂದ ಆದರದ ಸ್ವಾಗತವಾಯಿತು. ನಾಲ್ವರನ್ನೂ ಹೆಬ್ಬಾಗಿಲು ಚಿಟ್ಟೆ ಮೇಲೆ ಕೂಡ್ರಿಸಿ “ಅಯ್ಯೋ ರಾಮ ಮಳೇಲಿ ನೆನೆದು ಹೋಯಿದ್ರಲ್ಲೋ ಪಾಪ. ಎಂತಾರು ಬೆಚ್ಚುಗೆ ಕುಡಿಯಕ್ಕೆ ತತ್ತಿ ತಡೀರಿ” ಎನ್ನುತ್ತಾ ಒಳಹೊಕ್ಕಳು ಸುಶೀಲಕ್ಕ.
ಒಳಗಿನಿಂದ ಹಲಸಿನಕಾಯಿ ಚಿಪ್ಸ್ ಹಾಗೂ ಹಸಿಶುಂಠಿ, ಬೋಳ್ಕಾಳು ಕಷಾಯ ತಂದು ಅವರ ಕೈಗಿತ್ತ ನಂತರ “ಈ ಜೋರು ಮಳೇಲಿ ಅದು ಬೇರೆ ಅಮಾಸೆ ದಿನ ರಾತ್ರಿ ಹೊತ್ತಿಗೆ ಎತ್ಲಾಗೆ ಹೊರಟಿದ್ರೋ ಹುಡುಗ್ರ” ಎನ್ನುವ ಪ್ರಶ್ನೆ.
ತಾವೆಲ್ಲರೂ ಬೆಂಗಳೂರಿಂದ ಜೋಗಕ್ಕೆ ಟ್ರಿಪ್ ಬಂದವರು, ಹೀಗೆ ರೋಡ್ ಬಂದ್ ಆಗಿದ್ದರಿಂದ ಉಳಿದುಕೊಳ್ಳಲು ಯಾವುದಾದರೂ ಮನೆ ಸಿಗಬಹುದೇನೋ ಅಂತ ಹುಡುಕುತ್ತಾ ಹೊರಟಾಗ ನಿಮ್ಮ ಮನೆ ಸಿಕ್ಕಿತೆಂದು ಬಂದ ಕಾರಣವನ್ನು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಪ್ರಶಾಂತ್ ಹೆಗಡೆ, ಮುದೋಳದ ನಾಗೇಂದ್ರ ಪಾಟಿಲ್, ಬೆಂಗಳೂರಿನ ಡೇವಿಡ್, ಕುಂದಾಪುರದ ಜನಾರ್ಧನ ಶೆಟ್ಟಿ ತಮ್ಮ ತಮ್ಮ ಪರಿಚಯವನ್ನು ತಿಳಿಸಿದರು.
ಚಳಿಯಲ್ಲಿ ನಡಗುತ್ತಾ ಕೂತವರಿಗೆ ಇದ್ದಕ್ಕಿದ್ದಂತೆ ಭಯದಿಂದ ಬೆವರಿಳಿಸಿದ್ದು ಲಾಟಿನ್ ಬೆಳಕಿನಲ್ಲಿ ಕಂಡ ರಕ್ತ ಬಸಿಯುತ್ತಿದ್ದ ಎಲ್ಲರ ಕಾಲುಗಳು, ಕಲೆ ಕಲೆಯಾದ ಪ್ಯಾಂಟುಗಳು! ಆದರೆ ಒಬ್ಬರಿಗೂ ಉರಿ ನೋವು ಏನೂ ಆಗುತ್ತಿಲ್ಲ ಎಂಬುದೇ ಸೋಜಿಗದ ಸಂಗತಿಯಾಗಿತ್ತು!ಅಷ್ಟರಲ್ಲಿ ಸುಬ್ಬಾಭಟ್ಟರು “ಏನಾಗಿಲ್ಲ ಹೆದರಬೇಡಿ ಮಕ್ಕಳ್ರಾ, ಕಾನು ದಾರೀಲಿ ಬಪ್ಪಕಾರೆ ಉಂಬಳ ಕಚ್ಚಿದ ಗಾಯ ಅದು, ತಗಳಿ ಇದನ್ನ ಹಚ್ಚಿ ಸಾಕು ಹುಷಾರಾಗುತ್ತೆ” ಎನ್ನುತ್ತಾ ಕವಳದ ತಬಕಿನಿಂದ ಸುಣ್ಣ ತೆಗೆದು ಎಲ್ಲರಿಗೂ ಕೊಡುತ್ತಾರೆ. ವಿಶೇಷವಾಗಿ ಮಳೆಗಾಲದಲ್ಲಿ ತಮ್ಮ ಭಾಗದಲ್ಲಿ ಕಂಡು ಬರುವ ಜಿಗಣೆಗಳು ರಕ್ತ ಹೀರಿ ಹೊಟ್ಟೆ ತುಂಬಿದ ಮೇಲೆ ತಾವಾಗಿಯೇ ಬಿದ್ದು ಹೋಗುತ್ತವೆ ಎಂಬುದಾಗಿ ತಿಳಿಸಿದರು.
ಮುದುಡಿ ಕುಳಿತುಕೊಂಡವರನ್ನು ನೋಡಲಾಗದೆ ಮೈ ಕಾಯಿಸಿಕೊಳ್ಳಲು ಭಟ್ಟರು ಹೊಡಚಲು ಹಾಕಿಕೊಟ್ಟಾಗ ಎಲ್ಲರೂ ಓಡಿ ಬಂದು ಸುತ್ತುವರಿದು ಕುಳಿತರು. ಕೃಷಿಗೆ, ತೋಟದ ಬೆಳೆಗೆ ಸಂಬಂಧ ಪಟ್ಟಂತೆ ಸಾಧಕ ಬಾಧಕಗಳನ್ನು ಸುಬ್ಬಾ ಭಟ್ಟರೊಂದಿಗೆ ಚರ್ಚಿಸತೊಡಗಿದರು. ಗುರುತೇ ಇಲ್ಲದ ತಮ್ಮನ್ನು ಅದರಲ್ಲೂ ಈ ರಾತ್ರಿ ಹೊತ್ತು ಹತ್ತಿರದ ನೆಂಟರಂತೆ ಉಪಚರಿಸುತ್ತಿರುವ ಈ ದಂಪತಿಗಳು ಆಪದ್ಭಾoದವರಂತೆ ಕಂಡರು! ಪ್ರಶಾಂತ್ ಕುತೂಹಲದಿಂದ ಕೇಳಿದ “ಭಟ್ರೇ, ಅದ್ಯಾವ ನಂಬಿಕೆಯ ಮೇಲೆ ತಾವು ನಮಗೆ ಆಶ್ರಯ ಕೊಟ್ಟಿದ್ದು” ಅಂತ. “ನೋಡು ಮಗಾ, ಬೇರೊಬ್ಬರ ನೆರವಿಗಾಗದ ಮನುಷ್ಯ ಇದ್ದೇನು ಪ್ರಯೋಜನ. ಅಷ್ಟಕ್ಕೂ ನಮ್ಮಲ್ಲಿರುವ ಆಸ್ತಿ ಹಿರಿಯರು ಕಲಿಸಿದ ಮಾನವತ್ವದ ಗುಣಗಳಷ್ಟೇ. ಕಳ್ಳರಿಗೂ ಅದು ಬೇಕಾಗಿಲ್ಲ” ಅಂತ ಹೇಳಿ ಜೋರಾಗಿ ನಕ್ಕರು.
ಅಸ್ತ್ರ ಒಲೆಯಲ್ಲಿ ಕಳಲೆ ಸಾಂಬಾರ್ ಮಾಡಿ, ಮೆದೆ ಮುಗ್ಗಲು ಅಕ್ಕಿ ಅನ್ನ ಬಸಿದು ಬಾಳೆ ಎಲೆಹಾಕಿ ಊಟಕ್ಕೆ ಕರೆಯುವಾಗ “ನಮ್ಮಲ್ಲೂ ಇಷ್ಟೊತ್ತಿಗೆ ನಿಮ್ಮಷ್ಟೇ ದೊಡ್ಡ ಮಗನಿರುತ್ತಿದ್ದ ಗುದ್ದಮ್ಮನ ರೋಗ ಬಂದು ಅವನ ಪ್ರಾಣ ತೆಗೆದುಕೊಂಡು ಹೋಯಿತು” ಎಂದು ಭಾವುಕಳಾಗಿ ಸುಶೀಲಕ್ಕ ಸೆರಗಿನoಚಲ್ಲಿ ಕಣ್ಣೊರೆಸಿಕೊಂಡಳು. ”ಈಗ ಈ ಮನೆಗೆ ನಾವಿಬ್ಬರೇ. ದೇಶಕ್ಕೇ ಬೆಳಕು ಕೊಡುವ ಜೋಗ ಹತ್ತಿರದಲ್ಲೇ ಇದ್ದರೂ ಮಳೆಗಾಲ ಶುರುವಾದರೆ ವಾರಗಟ್ಟಲೆ ಸೀಮೆ ಎಣ್ಣೆ ದೀಪದಲ್ಲೇ ರಾತ್ರಿ ಕಳೆಯಬೇಕು” ಎನ್ನುವಾಗ ಭಟ್ಟರ ಮುಖ ಸಣ್ಣಗಾಗಿತ್ತು.
ಇರುವುದರಲ್ಲೇ ಸಂತೃಪ್ತಿಯಿಂದ ಊಟ ಮುಗಿಸಿ ಜಗಲಿ ಮೇಲೆ ಸಾಲಾಗಿ ಸುಶೀಲಕ್ಕ ಹೊಲೆದ ಜಡ್ಡಿ (ದುಪ್ಪಟ) ಹಾಸಿಗೆಯಲ್ಲಿ ಕರಿಯ ಕಂಬಳಿ ಹೊದ್ದು ಮಲಗಿದವರಿಗೆ ಅಲ್ಲಲ್ಲಿ ನೀರು ಹನಿ ಹನಿಯಾಗಿ ತೊಟ್ಟಿಕ್ಕುತ್ತಿದ್ದರೂ ರಾತ್ರಿ ಸೊಂಪಾದ ನಿದ್ದೆ! ಸುಬ್ಬಾ ಭಟ್ಟರು ಮಾತ್ರ ಮತ್ತದೇ ಸೋರುತ್ತಿರುವ ಮನೆಯ ಮಾಡನ್ನು ತದೇಕಚಿತ್ತದಿಂದ ನೋಡುತ್ತಲೇ ಇಡೀ ರಾತ್ರಿ ಕುಳಿತೇ ಇದ್ದರು. ಯಾಕೆಂದರೆ ಸೋರದೆ ಉಳಿದಿದ್ದ ಜಾಗವನ್ನು ಅತಿಥಿಗಳಿಗೆ ನೀಡಿದ್ದಾಗಿತ್ತು.
ಮರುದಿನ ಘಂಟೆ ಏಳು ಹೊಡೆದರೂ ಹೊಳವು ಕೊಡದೇ ದೋ…ಎಂದು ಸುರಿಯುತ್ತಿರುವ ಮಳೆಗೆ ಸೂರ್ಯ ರಶ್ಮಿಯೇ ಕಾಣಲಿಲ್ಲ. ಕೊಟ್ಟಿಗೆಯಲ್ಲಿ ಆಕಳ ಕರು ಅಂಬೇ… ಎನ್ನುವಾಗಲೇ ಎಚ್ಚರವಾಗಿದ್ದು. ಮನೆಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಹಿಂದಿನ ರಾತ್ರಿಯೆಲ್ಲಾ ಭಟ್ಟರು ಜಾಗರಣೆ ಮಾಡಿದ್ದು ಅರ್ಥವಾಗಿತ್ತು. ಛೇ! ತಮ್ಮಿಂದಾಗಿ ಹೀಗಾಯ್ತು ಅಂತ ನಾಲ್ಕೂ ಜನರು ಒಳಗೊಳಗೇ ಸಂಕಟ ಅನುಭವಿಸಿದರು.
ಮನೆ ಸೋರುತ್ತಿದೆ ಎಂದ ಮಾತ್ರಕ್ಕೆ ಅದು ಪುಟ್ಟ ಗುಡಿಸಲೇನು ಆಗಿರಲಿಲ್ಲ . ರೆಡ್ ಆಕ್ಸೈಡ್ ಫ್ಲೋರಿಂಗ್, ಮಂಗಳೂರು ಹಂಚಿನಿಂದ ಹೊದಿಸಲ್ಪಟ್ಟ ಚಾವಣಿ, ಅತಿಥಿಗಳು ಬಂದರೂ ಉಳಿದುಕೊಳ್ಳಲು ಬೇಕಾದ ಕೊಠಡಿಗಳು, ಹೀಗೆ ಎಲ್ಲವೂ ಇರುವ ಸಾಮಾನ್ಯ ದೊಡ್ಡದಾಗಿಯೇ ಇರುವ ಚೊಕ್ಕದಾದ ಮನೆ ಅದು. ಎದೆಯೆತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡಾಗಿನಿಂದ ದಂಪತಿಗಳು ಡಿಪ್ರೆಶನ್ ಗೆ ಹೋಗಿ ಇದ್ದ ತೋಟದ ಕಡೆಗೂ ಗಮನ ಕೊಡಲು ಅವರಿಂದ ಸಾಧ್ಯವಾಗಿರಲಿಲ್ಲ. ಮಗಳ ಆರೈಕೆಯಲ್ಲಿ ಸಹಜ ಸ್ಥಿತಿಗೆ ಮರಳಲು ಹಲವು ವರ್ಷಗಳೇ ಬೇಕಾದವು. ಮಗಳು ಮಾಡಿದ ಸತ್ಕರ್ಮದಿಂದಲೋ ಏನೋ ಯಾವುದೇ ವರದಕ್ಷಿಣೆ ಕೇಳದೇ ಕೆಳದಿ ಸೀಮೆಯ ದೂರದ ಸಂಬಂಧಿ ಶ್ರೀಕಾಂತ್ ಕಳೆದ ಬೇಸಿಗೆಯಲ್ಲಿ ಮದುವೆ ಮಾಡಿಕೊಂಡು ಹೋಗಿದ್ದ.
ಇನ್ನು ಇಲ್ಲೇ ಇದ್ದರೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಎಂದು ಉಪಚಾರ ಶುರು ಮಾಡುತ್ತಾರೆ ಇವರು. ಆದ್ದರಿಂದ ಮೊದಲು ಇಲ್ಲಿಂದ ಹೊರಡಬೇಕು ಎಂಬುದಾಗಿ ತಮ್ಮೊಳಗೆ ತೀರ್ಮಾನಿಸಿದರು. ಘಮ್ಮೆನ್ನುವ ನೊರೆ ನೊರೆಯಾದ ತಾಜಾ ಕಾಫಿ ಕುಡಿದು ಸುಶೀಲಕ್ಕ ಸುಬ್ಬಾ ಭಟ್ಟರ ಕಾಲಿಗೆ ಬಿದ್ದು ಹೊರಟು ನಿಂತಾಗ ಒಳ್ಳೆಯದಾಗಲಿ ಎಂದು ಹಾರೈಸಿ, ಮರೆಯದೇ ಬೇಸಿಗೆಯಲ್ಲಿ ಮತ್ತೆ ಬನ್ನಿ ನಮ್ಮನೆಗೆ ಎನ್ನುತ್ತಾ ಇಬ್ಬರೂ ಬೀಳ್ಕೊಟ್ಟರು.
ವಾಪಾಸ್ ಹೊರಟವರ ತಲೆಯಲ್ಲಿ ದಾರಿ ತುಂಬಾ ಸುಬ್ಬಾ ಭಟ್ಟರ ಮನೆ ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕೆಂಬ ಚಿಂತನೆ ನಡೆದಿತ್ತು. ಹಮೀರ್ ಸಾಬನಲ್ಲಿ ಒಳ್ಳೆಯ ಟಾರ್ಪಲ್ ಸಿಗುವುದೆಂದು ಸ್ಥಳೀಯರೊಬ್ಬರು ಅಂಗಡಿ ತೋರಿಸಿದಾಗ ಕೂಡಲೇ ಕೊಂಡು ಭಟ್ಟರ ಮನೆಯತ್ತ ನಡೆದರು. ನಿನ್ನೆ ಅತಿಥಿಗಳಾಗಿದ್ದವರು ಒಂದು ರಾತ್ರಿಯಲ್ಲಿ ಆ ಮನೆಯ ಹಿರಿಯರೊಂದಿಗೆ ಭಾವನಾತ್ಮಕವಾಗಿ ಒಂದಾಗಿ ಹೋಗಿದ್ದರು. ಈ ಬಾರಿ ಆ ಮನೆಯ ಶ್ವಾನಗಳು ಕೂಡ ಬಾಲ ಅಲ್ಲಾಡಿಸುತ್ತಾ ಎದುರುಗೊಂಡವು.
“ಥೋ ಈ ಹುಡುಗ್ರು ಎಂತ ಮರೆತು ಬಿಟ್ಟಿಕ್ಕೆ ಹೋಗಿದ್ದ ಕಾಣ್ತು. ಮತ್ತೆ ಬಂದ ನೋಡಿ ” ಸುಶೀಲಕ್ಕ ಭಟ್ಟರನ್ನು ಕರೆದಳು.
ಅವರು ತಂದಿದ್ದ ವಸ್ತುಗಳನ್ನು ನೋಡಿ ಸಂಕೋಚದಿಂದ ನಿಂತ ದಂಪತಿಗಳ ಅನುಮತಿಗೂ ಕಾಯದೆ ಏಣಿಯ ಸಹಾಯದಿಂದ ಮೇಲೆ ಹತ್ತಿ ಇಡೀ ಮನೆಗೂ ಎರಡು ಮಡಿಕೆ ಮಾಡಿ ಟಾರ್ಪಲನ್ನು ಹೊದಿಸಿದರು.
ಸದ್ಯಕ್ಕೆ ಈ ಮಳೆಗಾಲ ಕಳೆಯಲಿ, ಮುಂದೆ ನೋಡೋಣ ಎಂದು ಹೇಳಿ ಹೊರಟ ಎಲ್ಲಾ ಯುವಕರಲ್ಲೂ ದಂಪತಿಗಳಿಗೆ ತಮ್ಮ ಮಗನೇ ಕಾಣಿಸುತ್ತಿದ್ದ.
ಬೆಂಗಳೂರು ತಲುಪಿದ ನಂತರ ಆ ಸಿವಿಲ್ ಇಂಜಿನಿಯರ್ಗಳ ಮನಸಲ್ಲಿ ಹೊಸದೊಂದು ಆಲೋಚನೆ ಹುಟ್ಟಿಕೊಂಡಿತ್ತು. ಮನುಷ್ಯತ್ವದಿಂದ ಒಂದು ದಿನ ಉಳಿದುಕೊಳ್ಳಲು ತಮಗೆ ಜಾಗ ನೀಡಿದವರಿಗೆ ಅದರಿಂದಲೇ ಆರ್ಥಿಕವಾಗಿ ಸಹಾಯ ಆಗುವಂತೆ ಮಾಡಬೇಕು ಎನ್ನುವುದು. ಅದನ್ನು ಕಾರ್ಯಗತಗೊಳಿಸುವ ತನಕ ಆ ಯುವಕರಿಗೆ ನೆಮ್ಮದಿಯೂ ಇರಲಿಲ್ಲ.
ಮುಂದಿನ ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಮನೆಯನ್ನು ದುರಸ್ತಿಗೊಳಿಸಿ ಪೇಂಟಿಂಗ್ ಮಾಡಿಸಿ, ಬೆಳಕಿನ ವ್ಯವಸ್ಥೆಗೆ ಸಣ್ಣದೊಂದು ಸೋಲಾರ್ ಹೈಬ್ರಿಡ್ ಇನ್ವರ್ಟರ್ ಹಾಕಿಸಿ ಕೊಡುವಾಗ “ಭಟ್ರೇ, ತಮಗೆ ಒಪ್ಪಿಗೆಯಾಗುವುದಿದ್ದರೆ ಒಂದು ಮಾತು ಹೇಳಬಹುದೇ” ಅಂತ ಕೇಳುತ್ತಾರೆ. ಅದಕ್ಕೆ ಭಟ್ಟರು “ನೀವು ನಮಗೆ ಅನ್ಯರಲ್ಲ. ಧಾರಾಳವಾಗಿ ಹೇಳಿ” ಅಂತ ಹೇಳುತ್ತಾರೆ.
“ಈ ಮನೆ ನಿಮ್ಮಿಬ್ಬರಿಗೆ ಸ್ವಲ್ಪ ದೊಡ್ಡದೇ ಆಗಿರುವುದರಿದ ಕೆಲವು ಕೊಠಡಿಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ಯಾಕೆ ಕೊಡಬಾರದು?”
ಸಲಹೆ ದಂಪತಿಗಳಿಗೂ ಸರಿಯೆನಿಸಿತು. ಅದಕ್ಕೆ ಬೇಕಾದ ಹಾಗೆ ಪಾರ್ಟಿಶನ್ ಮಾಡಿಸಿ ಮುಖ್ಯ ರಸ್ತೆಯ ಬಳಿ ಹೋಂಸ್ಟೇ ಗೆ ದಾರಿ ಎನ್ನುವ ಸಣ್ಣ ಫಲಕವನ್ನೂ ಅಳವಡಿಸಿಕೊಟ್ಟರು. ಆ ಹಿರಿಜೀವಗಳಿಗೆ ವೃದ್ಧಾಪ್ಯದಲ್ಲಿ ಮುಂದೆ ಅದುವೇ ಒಂದು ಆಸರೆಯಾಯ್ತು.
✍️ ಕುಸುಮಾ. ಜಿ. ಭಟ್








1 thought on “ಆಸರೆ”
ಮಲೆನಾಡಿನ ಬದುಕಿನ, ಅರಣ್ಯ ಸಂಪತ್ತಿನ ಸುತ್ತ ಹೆಣೆಯಲ್ಪಟ್ಟ ಈ ಕತೆ, ಒಂದು ಪ್ರವಾಸದ ನಡುವೆ ಏಳುವ ಅನಿವಾರ್ಯ ತಿರುವಿನಲ್ಲಿರಬಹುದಾದ ಕುತೂಹಲದಿಂದ ಹೊಮ್ಮುವ, ಸೊಗಸಾದ ಸತ್ವಕ್ಕೆ ಮಾರ್ಮಿಕ ಮಂತ್ರದ ಎರಕ ಹೊಯ್ದಿದ್ದಾರೆ ಲೇಖಕಿ.
ಓದುತ್ತಿರುವಂತೆ ಊಹಾಪೋಹಗಳಿಗಿರುವ ರೆಕ್ಕೆಯನ್ನು ಕತ್ತರಿಸುವುದಕ್ಕೆ, ತತ್ ಕ್ಷಣ ವಾಸ್ತವಿಕ ಲಕ್ಷಣಗಳನ್ನು ಜೋಡಿಸುವ ಅವರ ನಿರೂಪಣಾ ತಂತ್ರ, ಆತ್ಮೀಯ ಸಂಭಾಷಣೆಗಳ ಕುಸುರಿನಲ್ಲಿ, ಯಶ ನೀಡುತ್ತದೆ.
ಪ್ರಾಯಶಃ ಈ ಕಾರಣಗಳಿಗಾಗಿ, ಕತೆ ‘ಆಸರೆ’ ಹಲವಾರು ಆಯಾಮಗಳೊಂದಿಗೆ ಅರ್ಥಪೂರ್ಣವಾಗಿದೆ! ಅಭಿನಂದನೆಗಳು!