ನೈತಿಕತೆಯ ಏರಿಳಿತ

ವಿಮಾ ಹಾಸಿಗೆಯಲ್ಲಿ ಮೈಚೆಲ್ಲಿದಾಗ ಗಂಡ ಸಮೀರ್ ಆಗಲೇ ನಿದ್ರಾದೇವಿಯನ್ನು ತಬ್ಬಿಕೊಂಡಿದ್ದ. ವಿಮಾಳ ಕಣ್ಣುಗಳಿಗೆ ನಿದ್ರೆಯೇಕೋ ಅಡರಿಕೊಳ್ಳಲಿಲ್ಲ. ಮನಸ್ಸಿನಲ್ಲಿ ಎಣೆಯಿಲ್ಲದ ವಿಚಾರಗಳ ಹೊಯ್ದಾಟ, ನೆನಪುಗಳ ತಾಕಲಾಟ. ಅಂದು ಮಧ್ಯಾಹ್ನ ಊಟದ ಸಮಯದಲ್ಲಿ ಸಹೋದ್ಯೋಗಿ ಗೆಳತಿ ರೀಷ್ಮಾ, `ವಿಮಾ, ತುಂಬಾ ಮಂಕಾಗಿ ಕಾಣುತ್ತಿರುವಿಯಲ್ಲ…? ನಿನ್ನ ಮುಖಾರವಿಂದದಲ್ಲಿ ಕಳೆಯೇ ಇಲ್ಲ. ಡಲ್‍ನೆಸ್ ನಿನ್ನ ಚೆಂದದ ಮುಖವನ್ನು ಆವರಿಸಿಕೊಂಡಿಬಿಟ್ಟಿದೆ ಗ್ರಹಣ ಹಿಡಿದ ಚಂದ್ರನಂತೆ. ಏನಾಗಿದೆ ಗೆಳತಿ…? ಹೃದಯ ಬಿಚ್ಚಿ ಮಾತಾಡು’ ಎಂದಿದ್ದಳು ತಟ್ಟಂತ. `ಏನಂತ ಮಾತಾಡುವುದು…? ಹೇಗೆ ಅಂತ ಮಾತಾಡುವುದು? ಅವಳ ಮಾತಿನಲ್ಲಿ ಸಂಪೂರ್ಣ ಸತ್ಯಾಂಶವಿದ್ದುದೇನೋ ನಿಜ. ಏನಾದರೂ ಹೇಳಲೇ ಬೇಕಲ್ಲ…?’ ಮನಸ್ಸಿನಲ್ಲೇ ಯೋಚಿಸಿಕೊಂಡ ವಿಮಾ ಬಿಗಿದುಕೊಂಡಿದ್ದ ಮೊಗದಲ್ಲಿ ತುಸು ನಗೆಮಲ್ಲಿಗೆ ಅರಳಿಸಿ ಮಾತಿಗೆ ಮುಂದಾಗಿದ್ದಳು. `ರೀಷ್ಮಾ, ಅಂಥಹದ್ದೇನೂ ಗಹನವಾದ ವಿಷಯವಿಲ್ಲ. ನಿನ್ನೆ ರಾತ್ರಿ ನಿದ್ದೆ ಸರಿಯಾಗಲಿಲ್ಲ. ಅದಕ್ಕೇ ನಾನು ತುಸು ಡಲ್ಲಾಗಿ ಕಾಣುತ್ತಿರಬೇಕು. ನನ್ನ ಅಂತರಂಗದ ಹೊಳಹೊಕ್ಕು ನೋಡುವ ಗೆಳತಿ ನೀನಲ್ಲವೇ…? ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್.’ `ಹೌದಾ…? ನಿದ್ದೆ ಸರಿಯಾಗಲಿಲ್ಲವೇ…? ನಿನ್ನೇನೇ ನಿಮಗೆ ವೀಕ್ ಎಂಡ್ ಶುರುವಿಟ್ಟುಕೊಂಡಿತಾ…? ಹ್ಯಾಂಡ್ಸಮ್ ಹಸ್ಬಿ ಜೊತೆ ರೊಮ್ಯಾನ್ಸ್ ಜೋರಾಗಿತ್ತಾ…? ನನ್ ಬ್ರದರ್ ನಿನ್ನ ನಿದ್ದೆ ಕೆಡಿಸಿದ್ರಾ…? ಮಾಗಿಯ ಚಳಿ ಬೇರೆ!’ ಕಣ್ಣು ಮಿಟುಕಿಸುತ್ತಾ ನಗೆಯಾಡಿದಳು ರೀಷ್ಮಾ. `ಸದಾಶಿವನಿಗೆ ಅದೇ ಧ್ಯಾನವಂತೆ. ಹಾಗೆ ನಿಂದು.’ `ಇರ್ಲಿ, ಅದೇನು ವಿಷಯ ಅಂತ ಹೇಳು.’ `ನಿನ್ನೆ ಸಮೀರ್‍ಗೆ ರಾತ್ರಿ ಒಂದು ಗಂಟೆಗೆ ಸ್ಟಮಕ್ ಪ್ರಾಬ್ಲೆಮ್ ಆಗಿ ತುಂಬಾ ಸಫರ್ ಆದ್ರು. ಮೂರ್ನಾಲ್ಕು ಸಾರೆ ಟಾಯಿಲೆಟ್‍ಗೆ ಹೋಗಿಬಂದರು. ಅವರಿಗೆ ಹಿಂಗಾದಾಗ ನನಗೆ ನಿದ್ರೆ ಬಂದೀತೇ?. ಅವರಿಗೆ ನಿಂಬೆ ಹಣ್ಣಿನ ಬಿಸಿನೀರಿನ ಪಾನಕ, ಟ್ಯಾಬ್ಲೆಟ್ಸ್ ಅದೂ ಇದೂ ಅಂತ ಕೊಟ್ಟು ತುಸು ಸಮಾಧಾನದ ಮಾತೂ ಹೇಳಿದೆ. ನಾಲ್ಕು ಗಂಟೆಯ ಸುಮಾರಿಗೆ ಅವರು ತುಸು ಚೇತರಿಸಿಕೊಂಡರು. ನಾನು ಮತ್ತೆ ನಿದ್ದೆಗೆ ಜಾರಿದ್ದು ಅರ್ಲೀ ಮಾರ್ನಿಂಗ್ ನಾಲ್ಕರ ನಂತರವೇ. ಹೀಗಾಗಿ ನಾನು ಡಲ್ಲಾಗಿ ಕಾಣುತ್ತಿರಬಹುದು. ನಿನ್ನ ಮೈಂಡ್ ರೀಡಿಂಗ್ ಟೆಕ್ನಿಕ್ ಅತ್ಯದ್ಭುತ. ಸೂಕ್ಷ್ಮಗ್ರಾಹಿತ್ವಕ್ಕೆ ಥ್ಯಾಂಕ್ಸ್ ಎ ಲಾಟ್.’ `ಐದು ವರ್ಷಗಳ ಗೆಳೆತನದಲ್ಲಿ ಪ್ರೀತಿಯಾತ್ಮೀಯ ಗೆಳತಿಯ ಭಾವನೆಗಳನ್ನು ಅಷ್ಟೂ ಅರ್ಥಮಾಡಿಕೊಳ್ಳಲಿಕ್ಕಾಗುವುದಿಲ್ಲವೇ…? ಆದರೂ… ನಂಗ್ಯಾಕೋ ಡೌಟ್…? ಇರ್ಲಿ ಬಿಡು ಬೇಡ.’ `ಅದೇನೇ ಡೌಟ್ ನಿಂದು…? ನನ್ನ ಮಾತಿನ ಮೇಲೆ ನಂಬಿಕೆ ಇಲ್ವಾ? ನಾನೇನು ಸುಳ್ಳು ಹೇಳುತ್ತಿರುವೆನಾ…? ಅತಿಯಾಯಿತು ನಿಂದು…’ `ಸಾರಿ. ನೋ…ನೋ. ಫರ್ಗೆಟ್ ಇಟ್. ಲೆಟ್ ಅಸ್ ಚೇಂಜ್ ದಿ ಟಾಪಿಕ್…’ ಎಂದು ರೀಷ್ಮಾ ತನ್ನ ಅನುಮಾನದ ಎಳೆಯ ರೀಲನ್ನು ಸುತ್ತಿ ಪಕ್ಕಕ್ಕಿಡುತ್ತಾ ಮಾತನ್ನು ಬದಲಿಸಿದ್ದಳು. ಗೆಳತಿಯರಿಬ್ಬರೂ ಬೇರೆ ಅದೇನೋ ವಿಷಯಗಳ ಬಗ್ಗೆ ಮಾತಾಡುತ್ತಾ ಊಟ ಮುಗಿಸಿದ್ದರು.

ವಿಮಾ ಸಮೀರನ ಕಡೆಗೊಮ್ಮೆ ದಿಟ್ಟಿಸಿ ನೋಡಿದಳು. ಅಂಗಾತ ಮಲಗಿದ್ದ. ಆಗೊಮ್ಮೆ ಈಗೊಮ್ಮೆ ಸಣ್ಣದಾಗಿ ಗೊರಕೇನೂ ಹೊಡೆಯುತ್ತಿದ್ದ. ನೀರವ ರಾತ್ರಿಯಲ್ಲಿ ಗೊರಕೆಯ ಶಬ್ದ ಮಂದವಾಗಿ ಅನುರಣಿಸುತ್ತಿತ್ತು. ಅಂಗಾತ ಮಲಗಿದಾಗ ಸಮೀರ್ ಗೊರಕೆ ಹೊಡೆಯುವುದು ಸಾಮಾನ್ಯ. ವಿಮಾ ಸಮೀರನ ಮುಖದಲ್ಲಿ ದೃಷ್ಟಿ ನೆಟ್ಟಳು. ಮುಗ್ಧ ಮಗುವಿನಂಥ ಮಂದಹಾಸದ ನಗೆ ಅವನ ಮುಖದಲ್ಲಿ ಅರಳಿ ಮಾಯವಾಗುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು ಮಂದ ಬೆಳಕಿನಲ್ಲಿ. ಮೆಲ್ಲಗೇ ಅವನೆದೆಯಲ್ಲಿ ತಲೆಯಿರಿಸಿದಳು ನಿದ್ರಾಭಂಗವಾಗದಂತೆ. ಅವಿನಾಭಾವದ ಆಪ್ತತೆಯ ಸ್ಪರ್ಶಕ್ಕೆ ಪುಳಕಿತಗೊಂಡು ಸಂಭ್ರಮಿಸಿದಳು ತನ್ನೊಳಗೇ. ಆಗಲೂ ಅವಳ ಮನಸ್ಸು ಏನನ್ನೋ ಮೆಲುಕು ಹಾಕತೊಡಗಿತ್ತು.
****

ವಿಮಾ
“ನನಗೇನೋ, ವಿಮಾ' ಎಂಬ ಮುದ್ದಾದ ಹೆಸರನ್ನಿಟ್ಟು ಸಾಕಿ ಸಲಹಿದರು ಹೆತ್ತವರು. ಆದರೆ ನನ್ನ ಜೀವನಕ್ಕೇ ವಿಮೆ ಇಲ್ಲದಂತಾಗಿದೆ. ನಾನು, ಸಮೀರ್ ಬಾಳ ಸಂಗಾತಿಗಳಾಗಿ ಮಧುರ ದಾಂಪತ್ಯದ ಸವಿಯನ್ನು ಆರು ವರ್ಷಗಳಿಂದ ಸವಿಯುತ್ತಲೇ ಇದ್ದೇವೆ. ಮೊಗೆಮೊಗೆದು ಪ್ರೀತಿಯ ಮಧುರಾನಿಭೂತಿಯನ್ನು ಅನುಭವಿಸುತ್ತಿದ್ದೇವೆ. ಒಲವಿನ ಸಾಂಗತ್ಯದಲ್ಲಿ ಸಂಭ್ರಮಿಸುತ್ತಿದ್ದೇವೆ.ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ…’ ಎಂಬಂತಿದ್ದೇವೆ. ಆದರೆ…? ಆದರೇನು ಮಧುರ ದಾಂಪತ್ಯದ ಕುರುಹಿಗೆ ನನ್ನೊಡಲಲ್ಲಿ ಹೊಸದೊಂದು ಜೀವ ಮಿಸುಕಾಡಲಿಲ್ಲ ಇದುವರೆಗೂ…? ಇದರ ಸಂಬಂಧವೇ ನಾನು ಇಂದು ಆತ್ಮೀಯ ಸಹೋದ್ಯೋಗಿ ಗೆಳತಿ ರೀಷ್ಮಾಳಿಗೆ ಸುಳ್ಳಿನ ಕಂತೆಯನ್ನೇ ಎಸೆದುಬಿಟ್ಟೆನಲ್ಲ? ಫೇಸ್ ಈಜ್ ದಿ ಇಂಡೆಕ್ಸ್ ಆಫ್ ದಿ ಮೈಂಡ್' ಎಂಬಂತೆ ಅವಳು ನನ್ನ ಮನದಲ್ಲಿನ ವೇದನೆಯನ್ನು ನನ್ನ ಮುಖದಲ್ಲಿ ಕಂಡುಕೊಂಡವಳಂತೆ ಪ್ರಶ್ನಿಸಿದ್ದಳು. ನನ್ನ ಉತ್ತರ ಅವಳ ಅಂತರಾತ್ಮಕ್ಕೆ ಸಮಾಧಾನ ನೀಡಲಿಲ್ಲವೇನೋ? ಅವಳ ಚಿಕ್ಕ ಪ್ರಶ್ನೆಗೆ ನಾನು ಕನ್ವಿನ್ಸಿಂಗ್ ರಿಪ್ಲೈ ಕೊಡಲು ಹೆಣಗಾಡಿದ್ದಂತೂ ನಿಜ. ಕೊನೆಯಲ್ಲಿ ಅವಳು,ನಂಗ್ಯಾಕೋ ಡೌಟ್…?’ ಅಂತ ಹೇಳಿ ವಿಷಯವನ್ನು ಬಬಲ್ ಗಮ್‍ನಂತೆ ಜಗ್ಗುವುದು ಬೇಡ’ ಎಂದಳಲ್ಲವೇ? ಅದರಿಂದ ನನ್ನ ಮನಸ್ಸಿಗೆ ನೋವಾಗಬಹುದೆಂಬ ಕಳಕಳಿ ಇದ್ದಿದ್ದನ್ನು ನಾನು ಅರಿಯದೇ ಇರಲಾರೆ. ನನ್ನ ನಡೆಯಿಂದ ನಂಗ್ಯಾಕೋ ನನ್ನ ಬಗ್ಗೇನೇ ಒಂಥರ ಅಸಹ್ಯವೆನಿಸತೊಡಗಿದೆ. ಗೆಳತಿಗೆ ಸುಳ್ಳು ಹೇಳಿಬಿಟ್ಟೆನಲ್ಲ ಎಂಬ ಹಳಹಳಿಯಿಂದ ನನ್ನ ಹೃದಯ ಮಿಡುಕುತ್ತಿದೆ, ರೋಧಿಸುತ್ತಿದೆ. ಮನದಲ್ಲಿ ಒಂಥರ ಪಾಪಪ್ರಜ್ಞೆ ಕಾಡುತ್ತಿದೆ.

ಸತ್ಯವನ್ನು lಹೇಳುವುದಾದರೂ ಹೇಗೆ? ಯಾವ ಬಾಯಿಯಿಂದ ಹೇಳಲಿ? ನಾನು ಇಂದು ಸತ್ಯವನ್ನು ಬಿಚ್ಚಿಟ್ಟಿರಲಿಕ್ಕಿಲ್ಲ. ಆದರೆ ಮುಂದೆ ಎಂದಾದರೂ ಒಂದು ದಿನ ಸತ್ಯ ಸುಳ್ಳಿನ ಗೋರಿಯಿಂದ ಪುಟಿದೇಳದಿರುತ್ತದೆಯೇ? ಸತ್ಯ ಮುಂದೊಂದು ದಿನ ಹೊರಗೆ ಬಂದೇ ಬರುತ್ತದೆ. ಅದಕ್ಕೇ ದಾರ್ಶನಿಕರು, ಸುಳ್ಳಿಗೆ ಸುಖವಿಲ್ಲ, ಸತ್ಯಕ್ಕೆ ಸಾವಿಲ್ಲ' ಎಂದು ಹೇಳಿರಬಹುದಲ್ಲವೇ? ಅದೇನಾಯಿತು ಅಂದರೆ ಮದುವೆಯಾಗಿ ಆರು ವರ್ಷಗಳಾದರೂ ನಮಗೆ ಮಕ್ಕಳಾಗದಿದ್ದಕ್ಕೆ ಕಾರಣಗಳ ಅನ್ವೇಶಣೆಯಲ್ಲಿ ಈಗಾಗಲೇ ಒಂದು ವರ್ಷ ಕಳೆದಿದ್ದೇವೆ ನಾನು ಮತ್ತು ಸಮೀರ್. ಮೊದಲ ಮೂರು ವರ್ಷ,ಸದ್ಯಕ್ಕೆ ಮಕ್ಕಳು ಬೇಡ’ ಎಂದು ದಾಂಪತ್ಯ ಜೀವನದ ಸವಿ ಸವಿದೆವು. ಲೈಫ್ ತುಂಬಾ ಎಂಜಾಯ್ ಮಾಡಿದೆವು. ಅಲ್ಲಿ, ಇಲ್ಲಿ ಸುತ್ತಾಡಿಕೊಂಡು ಪ್ರೇಮ ಪರ್ವದ ಗಿರಿಯ ಶಿಖರವೇರಿ ಸುಖಿಸಿದ್ದೇ ಸುಖಿಸಿದ್ದು. ಮುಂದಿನ ದಿನಗಳಲ್ಲಿ ಮಗುವಿನ ಕೊರತೆ ಮನದಲ್ಲಿ ಕಾಡತೊಡಗಿದ್ದು ನಿಜ. ಹಿರಿಯರ, ಕಿರಿಯರ, ಹಿತೈಷಿಗಳ, ಮಾತುಗಳು ಎದೆಯನ್ನು ಇರಿಯತೊಡಗಿದವು. ಮಕ್ಕಳಿದ್ದ ವಾರಗೆಯ ಗೆಳತಿಯರ ಕೊಂಕು, ಚುಚ್ಚು ಮಾತುಗಳು ಒಡಲಲ್ಲಿ ಖಾರಕುಟ್ಟಿದ ಅನುಭವ ನೀಡತೊಡಗಿದ್ದೂ ನಿಜ. ಆಗ ನಾನು, ಸಮೀರ್ ಗಂಭೀರವಾಗಿ ಮಕ್ಕಳ ಬಗ್ಗೆ ಯೋಚಿಸಲು ಶುರುಮಾಡಿದ್ದು. ನಂತರ ತಜ್ಞ ವೈದ್ಯರ ಸಲಹೆ ಸೂಚನೆಗಳಂತೆ ಔಷಧೋಪಚಾರವೂ ಸಾಗಿದೆ. ಲೈಫ್ ಸ್ಟೈಲ್‍ನಲ್ಲೂ ಬದಲಾವಣೆ ಮಾಡಿಕೊಂಡಿದ್ದೇವೆ. ಹೊರಗಡೆ ಹಾಳೂ-ಮೂಳೂ ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿದ್ದೇವೆ. ಒಂದಿಷ್ಟು ಸ್ಮೋಕಿಂಗ್ ಮಾಡುತ್ತಿದ್ದ ಸಮೀರ್ ಅದನ್ನು ನಿಲ್ಲಿಸಿದ್ದಾನೆ. ಆಗೊಮ್ಮೆ ಈಗೊಮ್ಮೆ ಪಾರ್ಟಿ, ಫಂಕ್ಷನ್‍ಗಳಲ್ಲಿ ಸೇವಿಸುತ್ತಿದ್ದ ಮದ್ಯವನ್ನೂ ಬಿಟ್ಟಿದ್ದಾನೆ.

ತಜ್ಞ ವೈದ್ಯರ ಸಲಹೆಯ ಮೇರೆಗೆ ನಮ್ಮಿಬ್ಬರ ಫಲವತ್ತತೆಯ ಬಗ್ಗೆ ವಿವರವಾದ ತಪಾಸಣೆಯಾಯಿತು ಮೊನ್ನೆ ಶುಕ್ರವಾರ. ಶನಿವಾರ ವೀಕೆಂಡ್ ಎಂದು ಎಲ್ಲೂ ಸುತ್ತಲು ಹೋಗದೇ ಆರೋಗ್ಯ ತಪಾಸಣೆಯ ವರದಿಗಳನ್ನು ಪಡೆದುಕೊಂಡು ವೈದ್ಯರ ಮಾತುಗಳನ್ನು ಕೇಳಿಸಿಕೊಂಡು ಬಂದೆವು. ಇಬ್ಬರ ವರದಿಗಳು ನಿಜವಾಗಿಯೂ ಆಘಾತ ನೀಡುವಂಥಹವು. ನನ್ನ ಗರ್ಭಕೋಶಕ್ಕೆ ಯಾವಾಗಲೋ ಸರಿಪಡಿಸಲಾರದಂತ ಹಾನಿಯಾಗಿದೆಯಂತೆ. ಇರ್ರಿಪೇರೆಬಲ್ ಡ್ಯಾಮೇಜ್ ಅಂತೆ. ನಾನು ಗರ್ಭ ಧರಿಸುವ ಅವಕಾಶವನ್ನೇ ಕಳೆದುಕೊಂಡಿರುವೆನಂತೆ. ನನ್ನದೊಂದು ಕತೆಯಾದರೆ ಸಮೀರನದು ಇನ್ನೊಂದು ಕತೆ. ಅವನ ವೀರ್ಯದಲ್ಲಿ ಮಕ್ಕಳನ್ನು ಹುಟ್ಟಿಸುವುದಕ್ಕೆ ಬೇಕಾಗುವ ವಿರ್ಯಾಣುಗಳ ಸಂಖ್ಯೆ ಇಲ್ಲವಂತೆ. ಇರುವ ವೀರ್ಯಾಣುಗಳೂ ಸತ್ವಯುತವಾಗಿಲ್ಲವಂತೆ. ಇರುವ ಅಲ್ಪ ಸಂಖ್ಯೆಯ ವೀರ್ಯಾಣುಗಳಿಗೆ ಹೆಣ್ಣಿನ ಅಂಡಾಣುವಿನೊಡನೆ ಸಂಯೋಗಹೊಂದಿ ಹೊಸ ಜೀವವೊಂದನ್ನು ಸೃಷ್ಟಿಸುವ ತಾಕತ್ತೂ ಇಲ್ಲವಂತೆ. ನಾವಿಬ್ಬರೂ ಬರಡು ಜೀವಿಗಳೆಂದು ತಜ್ಞರು ಘೋಷಿಸಿದಾಗ ಎದೆಯೊಡೆದುಕೊಳ್ಳುವುದೊಂದೇ ಬಾಕಿ ಉಳಿದಿತ್ತು ನಮಗೆ. ನಮ್ಮ ಮಕ್ಕಳ ಕನಸು ಭಗ್ನವಾಗಿತ್ತು. ನೀವು ಮಗುವೊಂದನ್ನು ದತ್ತು ಪಡೆದುಕೊಳ್ಳಬಹುದು ಅಷ್ಟೇ' ಎಂದು ಶರಾ ಬರೆದು ಡಾಕ್ಟರರು ನಮ್ಮನ್ನು ಸಂತೈಸಿ ಕಳುಹಿಸಿದ್ದರು.ನಾವಿಬ್ಬರೂ ಬರಡು ಜೀವಿಗಳು’ ಎಂಬ ಪ್ರಮಾಣಪತ್ರ ಪಡೆದು ಹ್ಯಾಪು ಮೋರೆ ಹಾಕಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದೆವು. ಇದೇ ಚಿಂತೆಯಲ್ಲಿ ಎಂಜಾಯ್ ಮಾಡಿಕೊಂಡು ಕಳೆಯಬೇಕಿದ್ದ ವೀಕೆಂಡನ್ನು ಮಾತಿಲ್ಲದೇ ಮೌನದಲ್ಲಿ ಕಳೆದಿದ್ದೆವು ನಾನು ಮತ್ತು ಸಮೀರ್. ಶನಿವಾರ, ರವಿವಾರ ರಾತ್ರಿ ಇದೇ ಕನವರಿಕೆಯಲ್ಲಿ ಜಾಗರಣೆ ಮಾಡಿದ್ದರಿಂದ ಮುಖದಲ್ಲಿ ಡಲ್‍ನೆಸ್ ಕಾಣದೇ ಇರುತ್ತದೆಯೇ? ಅದನ್ನೇ ಗೆಳತಿ ಸೋಮವಾರದಂದು ಗುರುತಿಸಿದ್ದು. ಗೆಳತಿ ರೀಷ್ಮಾಳಿಗೆ ನಾವಿಬ್ಬರೂ ಬರಡು ಜೀವಿಗಳು ಎಂದು ಹೇಳದೇ ಸತ್ಯವನ್ನು ಮರೆಮಾಚಿ ಸುಳ್ಳಿನ ಮನೆ ಕಟ್ಟಿ ಹೇಳಿದ್ದು ನನ್ನೆದೆಯನ್ನು ಇರಿಯುತ್ತಿದೆ. ನಾವೀಗ ಜೀವವಿದ್ದು ಜೀವವಿಲ್ಲದ ಜೀವಿಗಳಾಗಿದ್ದೇವೆ.
****

ಆಸ್ಪತ್ರೆಗೆ ಹೋಗಿ ಬಂದಾಗಿನಿಂದ ನನ್ನ ಮನಸ್ಸು ಗೊಂದಲದ ಗೂಡಾಗಿದೆ. ನಮ್ಮ ವಂಶ ನಮ್ಮಿಂದಲೇ ಕೊನೆಗೊಳ್ಳಬೇಕೇ? ದತ್ತು ತೆಗೆದುಕೊಂಡರೆ ವಂಶ ಮುಂದುವರಿಯುತ್ತದೆಯಲ್ಲವೇ? ಅದ್ಹೇಗಾಗುತ್ತೆ? ದತ್ತು ತೆಗೆದುಕೊಂಡ ಕೂಸು ನಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿರುವುದಾ...? ಉಹೂಂ, ಅಲ್ಲವಲ್ಲ? ಈ ಘನಘೋರ ಶಿಕ್ಷೆಗೆ ಹೊಣೆ ಯಾರು? ಯಾರು, ಯಾರು...? ಸಮೀರನಿಗೆ ಈ ಶಿಕ್ಷೆ ಅದ್ಯಾಕೋ ಏನೋ? ಅವನ ಅಂತರಂಗವನ್ನು ಕೆದಕಿ ನೋಡಬೇಕು ಅಷ್ಟೇ. ಏನಂತ ಮಾತಾಡುವುದು ಅವನ ಜೊತೆಗೆ? ಹೇಗಂತ ಮಾತಾಡುವುದು....? ಸಮಯ, ಸಂದರ್ಭ ನೋಡಿಕೊಂಡು ಅವನೆದೆಯೊಳಗೆ ಇಣುಕಿ ನೋಡಬೇಕು. ನಾನಂತೂ ಇದಕ್ಕೆ ನೇರವಾಗಿ ಹೊಣೆಗಾರಳೇ. ನನ್ನ ಸ್ವಯಂಕೃತ ಅಪರಾಧದ ಫಲವನ್ನು ನಾನೀಗ ಉಣ್ಣುತ್ತಿರುವೆನಲ್ಲವೇ...? ಈ ಜನ್ಮದಲ್ಲಿ ಮಾಡಿದ ಪಾಪದ ಫಲವನ್ನು ಇದೇ ಜನ್ಮದಲ್ಲಿ ಅನುಭವಿಸುತ್ತಿರುವುದಕ್ಕೆ ನಾನೇ ಸಾಕ್ಷಿ.ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವಾ…?’ ಎಂದು ದಾರ್ಶನಿಕರು ಹೇಳಿದ್ದು ನನ್ನಂಥಹವಳಿಗೇ ಇರಬೇಕು.
ತೊಣಚಿ ಹತ್ತಿದ ನಾಯಿಯಂತೆ ಪರಚಿಕೊಳ್ಳುತ್ತಿದೆ ಮನಸ್ಸು. ನಿಂತಲ್ಲಿ ನಿಲ್ಲದಾಗಿದೆ. ಹುಚ್ಚು ಕುದುರೆಯಂತೆ ಎತ್ತೆತ್ತಲೋ ಜಿಗಿದಾಡುತ್ತಿದೆ ಅಂಕೆಗೆ ಸಿಗದೇ. ಮನಸ್ಸು ಹಳೇ ನೆನಪುಗಳನ್ನು ಕೆದಕಿ ಕೆದಕಿ ಗುಡ್ಡೆ ಹಾಕುತ್ತಿದೆ. ನೆನಪಿನ ಗುಡ್ಡೆಯಲ್ಲಿ ಒಂದು ಸ್ಪಷ್ಟ ರೂಪವನ್ನು ಪಡೆಯತೊಡಗಿತು.


“ವಿಮಾ ಡಿಯರ್, ನೀಲಿ ಆಗಸದಂಥ ಈ ನಿನ್ನ ಕಣ್ಣುಗಳು, ಮಿರಮಿರನೇ ಮಿಂಚುವ ಕಪ್ಪನೆಯ ಕೇಶರಾಶಿ, ಮರುಭೂಮಿಗೆ ಮಳೆಯ ಹನಿಯೊಂದು ಬಿದ್ದು ಗುಳಿ ನಿರ್ಮಿಸಿದಂತೆ ಕಾಣುವ ನಿನ್ನ ಕೆನ್ನೆಯ ಗುಳಿ, ಕೆಂಪನೆಯ ಚೆಂದದ ಈ ಮುದ್ದುಮೊಗ, ದೇವಲೋಕದ ರಂಭೆ, ಊರ್ವಶಿಯರಿಗೆ ಸ್ಪರ್ಧೆ ನೀಡುವಂತಿರುವ ಈ ನಿನ್ನ ಲವ್ಲೀ ಮೈಮಾಟ, ನನ್ನೆದೆಯಲಿ ಝೇಂಕಾರ ಸೃಷ್ಟಿಸಿವೆ” ಎಂದು ಉಲಿದು ತನ್ನೆದೆಯೊಳಗೆ ಪುಟಿಯುತ್ತಿದ್ದ ಪ್ರೇಮ ಕಾರಂಜಿಯನ್ನು ನನ್ನೆದೆಯೊಳಗೆ ಚಿಮ್ಮಿಸಿದ್ದ ಚಿರಾಗ್. ಅವನನ್ನು ಕಾಡಿಸಲು ನಾನು ಗಂಬೀರವಾಗೇ ಇದ್ದೆ.

ಅಂದು ನಮ್ಮ ಕಂಪನಿಯ ವಾರ್ಷಿಕೋತ್ಸವ. ಉದ್ಯೋಗಿಗಳಿಗೆ ಕಂಪನಿ ಪಾರ್ಟಿ ಏರ್ಪಡಿಸಿತ್ತು. ಹಿನ್ನಲೆ ಸಂಗೀತಕ್ಕೆ ಅನುಗುಣವಾಗಿ ಯುವಕ, ಯುವತಿಯರು ತಮ್ಮ ತಮ್ಮ ಜೋಡಿಗಳೊಂದಿಗೆ, ಪ್ರೇಮಿಗಳೊಂದಿಗೆ ಲಯಬದ್ಧವಾಗಿ ಹೆಜ್ಜೆ ಹಾಕತೊಡಗಿದ್ದರು. ಲಘು ಸಂಗೀತಕ್ಕೆ ಚಿರಾಗನೊಂದಿಗೆ ಓಲಾಡುತ್ತಿದ್ದ ನನ್ನ ಕಿವಿಯಲ್ಲಿ ಚಿರಾಗ್ ಮೆಲ್ಲಗೇ ಉಸುರಿದ್ದ. ನಾನು ಆ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಸೇರಿ ಆಗಲೇ ಒಂದು ವರ್ಷವಾಗಿತ್ತು. ಚಿರಾಗನಿಗೆ ಆಗಲೇ ನಾಲ್ಕು ವರ್ಷಗಳ ಸರ್ವೀಸ್ ಆಗಿತ್ತು. ಕೆಲಸಕ್ಕೆ ಸೇರಿದ ತುಸು ದಿನಗಳಲ್ಲಿ ಚಿರಾಗನ ಪರಿಚಯವಾಗಿತ್ತು. ಚಿರಾಗನ ಹೆತ್ತವರು ಕರ್ನಾಟಕ ಮೂಲದವರಾದರೂ ಕೇಂದ್ರ ಸರಕಾರ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸೇವೆ ಹೆಚ್ಚು-ಕಡಿಮೆ ಉತ್ತರ ಭಾರತದಲ್ಲೇ ಆಗಿತ್ತು. ಅವರು ದೆಹಲಿಯಲ್ಲಿದ್ದಾಗ ಚಿರಾಗ್ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿಗಾಗಿ ಸೇರಿಕೊಂಡಿದ್ದ. ಬಿಇ ಮುಗಿಯುತ್ತಿದ್ದಂತೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೇ ಸೇರಿದ್ದ. ಅವನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ನನಗೂ ಕೆಲಸ ಸಿಕ್ಕಿತ್ತು. ಅರಳು ಹುರಿದಂತೆ ಮಾತಾಡುವ ಚೆಲುವಾಂತ ಚೆನ್ನಿಗ ಚಿರಾಗ್. ಹುಡುಗಿಯರ ದಿಲ್ ಚಿತ್ ಮಾಡುವಂಥಹ ಆಕರ್ಷಕ ಪರ್ಸನಾಲಿಟಿ ಅವನದು. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಮೂರ್ನಾಲ್ಕು ಹುಡುಗಿಯರು ಅವನ ಹಿಂದೆ ಬಿದ್ದಿದ್ದರು. ಅವನ ಕುಡಿನೋಟಕ್ಕೆ ಹಂಬಲಿಸುತ್ತಿದ್ದರು. ಆದರೆ ಅವರ ತುಟಿಯಂಚಿನ ಮಾತು ಮುಖ್ಯವಾಗಲಿಲ್ಲ, ಕಣ್ಣಂಚಿನ ಕಾವ್ಯ ಅರ್ಥವಾಗಲಿಲ್ಲ ಅವನಿಗೆ. ನಾನು ಅವನಿಗೆ ಇಷ್ಟವಾಗಿದ್ದೆ.

“ವಿಮಾ, ನನ್ನ ಮಾತುಗಳು ನಿನ್ನೆದೆಗೆ ತಲುಪಲಿಲ್ಲವೇ? ನನ್ನ ಮನದಾಳದ ಭಾವನೆಗಳ ಗರ್ಭಗುಡಿಯಲ್ಲಿ ನನ್ನೊಲುಮೆಯ ಪ್ರೇಮಮೂರ್ತಿ ನೀನು. ಅರ್ಪಿಸುವೆ ಪ್ರೀತಿಯ ಹೂಗಳ ನಿನ್ನ ಹಿಡಿ ಪ್ರೀತಿಗಾಗಿ. ಉಸಿರು ಬಿಗಿ ಹಿಡಿದು ನಿಂತಿದ್ದೇನೆ ನಿನ್ನೊಲವಿನ ಚಿಲಿಪಿಲಿ ಮಾತುಗಳಿಗೆ” ಎಂದು ಮತ್ತೊಮ್ಮೆ ಪಿಸುಗುಟ್ಟಿದ ಚಿರಾಗ್ ನನ್ನ ಕಣ್ಣಲ್ಲಿ ದೃಷ್ಟಿ ನೆಟ್ಟು. ಅವನ ಮಾತಿಗೆ ಆಗಲೇ ನನ್ನ ಕದಪುಗಳು ರಾಗರಂಜಿತವಾಗಿದ್ದವೆನ್ನಿ.
“ಚಿರಾಗ್, ನನ್ನೆದೆಯೊಳಗೂ ನಿನ್ನ ಬಗ್ಗೆ ಬಣ್ಣ ಬಣ್ಣದ ಕಾರಂಜಿಗಳು ಚಿಮ್ಮುತ್ತಿವೆ. ನಾನೂ ಸಹ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಆಯ್ ಯಾಮ್ ಇನ್ ಲವ್ ವಿಥ್ ಯು ಚಿರಾಗ್. ನನ್ನ ಹೃದಯದ ಹೊಲ ಹಚ್ಚ ಹಸಿರಾಗಿಸಲು ನಿನ್ನೊಲವ ಕಾರಂಜಿ ಸದಾ ಚಿಮ್ಮುತಿರಬೇಕು.” ಅವನೆದೆಯೊಳಗೆ ತೂರಿಕೊಂಡು ಪಿಸುಗುಟ್ಟಿದ್ದೆ ನಾನು ಸುತ್ತಲಿನ ಪರಿವೆ ಇಲ್ಲದೇ. ನನ್ನನ್ನು ಬಿಗಿದಪ್ಪಿಕೊಂಡು ಚಿರಾಗ್ ನನ್ನ ತುಂಟ ಮೂಗಿನೊಂದಿಗೆ ಆಟವಾಡಿದ್ದ, ಸೇಬುಗೆನ್ನೆಗಳ ಮೇಲೆ ಬೆರಳಾಡಿಸಿ ಸಂಭ್ರಮಿಸಿ ಸಂತಸಪಟ್ಟಿದ್ದ. ಪ್ರೇಮಿಗಳಿಗೆ ಮತ್ತಿನ್ನೇನು ಬೇಕು…? ನಮ್ಮ ಪ್ರೀತಿ ನಾಗಾಲೋಟದಲ್ಲಿ ಚಲಿಸತೊಡಗಿತು.

ಮುಂದಿನ ದಿನಗಳಲ್ಲಿ ನಮ್ಮ ಪ್ರೀತಿಯ ಓಡಾಟ, ಸುತ್ತಾಟ ಎಗ್ಗಿಲ್ಲದೇ ಸಾಗಿತು. ನಮ್ಮಂತೆ ಇನ್ನೂ ನಾಲ್ಕು ಜೋಡಿಗಳಿದ್ದವು ನಮ್ಮ ಕಂಪನಿಯಲ್ಲಿ. ಸಮಾನ ಮನಸ್ಕರಾದ ನಾವುಗಳೆಲ್ಲರೂ ಜೊತೆಜೊತೆಯಾಗಿ ಸುತ್ತುತ್ತಿದ್ದೆವು. ವೇಕೆಂಡ್‍ಗಳಲ್ಲಿ ನಮ್ಮ ಸುತ್ತಾಟ ಬರೀ ಬೆಂಗಳೂರು, ಮೈಸೂರು, ನಂದಿಬೆಟ್ಟಗಳಿಗೆ ಸೀಮಿತವಾಗದೇ ಊಟಿ, ಕೊಡೈಕೆನಾಲ್, ಕೊಡಗು, ಗೋವಾದವರೆಗೂ ವಿಸ್ತಾರಗೊಳ್ಳಲು ಬಹಳಷ್ಟು ದಿನಗಳು ಬೇಕಾಗಲಿಲ್ಲ. ರೆಸಾರ್ಟ, ಹೋಮ್ ಸ್ಟೇಗಳಲ್ಲಿ ನಮ್ಮ ವಾಸ್ತವ್ಯ ನಿರಂತರವಾಯಿತು. ಹೀಗಾಗಿ ಬರೀ ಮಾನಸಿಕವಾಗಿ ಹತ್ತಿರವಾಗಿದ್ದ ನಾವು ದೈಹಿಕವಾಗಿಯೂ ಹತ್ತಿರವಾಗತೊಡಗಿದೆವು. ಬೆಂಕಿಯ ಸಮೀಪದ ಬೆಣ್ಣೆ ಕರಗದಿರುತ್ತದೆಯೇ? ನಮ್ಮ ದೇಹಗಳೂ ಬೆಸೆದುಕೊಳ್ಳಲು ಹಾತೊರೆಯತೊಡದವು. ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಟ್ಟತ್ತು. ಏಕಾಂತದಲ್ಲಿ ಮೈ, ಮನಸ್ಸುಗಳು ಬೆಸೆದುಕೊಂಡು ಸಂತಸದ ಸಂಭ್ರಮದಲ್ಲಿ ಮುಳುಮುಳುಗಿ ತೇಲಾಡತೊಡಗಿದವು. ಖುಷಿಯ ಪರಾಕಾಷ್ಠೆಯಲ್ಲಿ ಮಿಂದುಮೀಯತೊಡಗಿದವು. ಒಲವು ಗೆಲುವಿನ ನಗೆ ಬೀರಿತ್ತು. ಮೊಗೆಮೊಗೆದು ಖುಷಿ ಅನುಭವಿಸುತ್ತಿದ್ದಾಗ ಅಡ್ಡ ಪರಿಣಾಮಗಳ ಬಗ್ಗೆ ಯೋಚಿಸುವಷ್ಟು ವಿವೇಕ ಇರಲಿಲ್ಲ ಬುದ್ಧಿಗೆ. ಮನಸ್ಸಿಗಿಂತ ಬುದ್ಧಿ ಮೇಲಿನದು. ಪ್ರಜ್ಞೆ ಬುದ್ಧಿಗಿಂತ ಮೇಲಿನದು ಎಂದು ಹೇಳುತ್ತಾರೆ ದಾರ್ಶನಿಕರು. ಆದರೆ ಅದ್ಯಾವುದರ ಅರಿವು ನಮಗಿರಲಿಲ್ಲ. ದೈಹಿಕ ಸುಖವೇ ನಮ್ಮ ಜೀವನದ ಪರಮ ಗುರಿ ಎಂಬಂತೆ ವರ್ತಿಸುತ್ತಿದ್ದೆವು.

ಊಟಿಗೆ ಹೋಗಿಬಂದು ತಿಂಗಳಾಗಿತ್ತು. ನಾನು ಹೊರಗಾಗಲಿಲ್ಲ. ಗಾಬರಿ, ಭಯ, ಪುಳಕ ಎಲ್ಲವೂ ಮೈಮನಗಳಲ್ಲಿ. ಕಂಪನಿಯ ವತಿಯಿಂದ ಎರಡು ತಿಂಗಳ ವಿಶೇಷ ಡೆಪ್ಯೂಟೇಶನ್ ಮೇಲೆ ಚಿರಾಗ್ ದೆಹಲಿಗೆ ಹೋಗಿದ್ದ. ಫೋನಲ್ಲೇ ಅವನಿಗೆ ವಿಷಯ ತಿಳಿಸಿದೆ. ಗಾಬರಿ ಬೀಳಬೇಡ. ಬೇಡವೆನಿಸಿದರೆ ತೆಗೆಸಿಬಿಡು' ಎಂದಿದ್ದ. ಬೇಗನೇ ಮದುವೆಯಾಗಿಬಿಡೋಣ ಎಂದು ನಾನು ಅವಸರ ಪಡಿಸಿದ್ದೆ.ನೋಡೋಣ’ ಎಂದ. ಎರಡು ತಿಂಗಳಾದರೂ ಚಿರಾಗ್ ಬೆಂಗಳೂರಿಗೆ ಬರಲಿಲ್ಲ. ದೆಹಲಿಗೆ ಹೋದವನು ಬೇರೊಂದು ಕಂಪನಿಗೆ ಸೇರಿಕೊಂಡು ವಿದೇಶಕ್ಕೆ ಹಾರಿದ್ದ. ಅವನು ವಿದೇಶಕ್ಕೆ ಹೋಗುವ ಸುಳಿವನ್ನೂ ನನಗೆ ಕೊಟ್ಟಿರಲಿಲ್ಲ. ನಾನು ತುಂಬಾ ಪೀಡಿಸಿದಾಗ, ವಿಮಾ, ಅದು ನನ್ನದೇ ಮಗು ಅಂತ ಏನು ಗ್ಯಾರಂಟಿ...? ನಿನಗೆ ನಾನಲ್ಲದೇ ಹಲವಾರು ಹುಡುಗರ ಜೊತೆಗೆ ಸಂಬಂಧವಿತ್ತಂತೆ. ಯಾರ ಜೊತೆಗಿನ ಹಾದರಕ್ಕೆ ಆ ಜೀವ ಅಂಕುರಿಸಿದೆಯೋ ಏನೋ? ಅದು ನಿನಗಷ್ಟೇ ಗೊತ್ತಿರುವ ಸತ್ಯ. ನಾನಂತೂ ಇದಕ್ಕೆ ಹೊಣೆಯಾಗಲಾರೆ. ನಿನ್ನಂಥಹ ಬಿಚ್ ನಮ್ಮ ಮನೆಯ ಸೊಸೆಯಾಗುವುದು ಬೇಡವೆಂದು ನನ್ನ ಮಮ್ಮಿ ಈ ಕೇಸಲ್ಲಿ ಖಡಾಖಂಡಿತವಾಗಿ ತೀರ್ಪಿತ್ತಿದ್ದಾಳೆ. ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ಮದುವೆಯಾಗುತ್ತೇನೆಂದು ಒಪ್ಪಂದ ಮಾಡಿಕೊಂಡು ನಾನೇನು ನಿನ್ನ ಜೊತೆಗೆ ಸಂಬಂಧ ಬೆಳೆಸಿರಲಿಲ್ಲ. ನನ್ನಿಂದ ಸುಖ ಪಡೆಯುವ ತೆವಲಿಗಾಗಿ ನೀನು ನನ್ನೊಂದಿಗೆ ಬೆತ್ತಲಾದದ್ದು. ನನ್ನೊಂದಿಗೆ ಸುಖಿಸಬೇಕೆಂಬ ತೀಟೆ ನಿನಗಿತ್ತು. ತೀಟೆ ತೀರಿಸಿಕೊಂಡಿರುವಿ. ಸುಮ್ಮನೇ ಬಾಯಿ ಮುಚ್ಚಿಕೊಂಡು ತೆಪ್ಪಗಿರು. ನೀನು ಮಗುವಿನ ಡಿಎನ್‍ಎ ಪರೀಕ್ಷೆ ಮಾಡಿಸಲು ತಯಾರಿದ್ದರೆ ಅದನ್ನು ಎದುರಿಸಲು ನಾನೂ ರೆಡಿ' ಎಂದು ಒರಟಾಗಿ ಮಾತಾಡಿ ಅಮಾನವೀಯತೆ ಮೆರೆದು ಫೋನಿಟ್ಟಿದ್ದ. ಮತ್ತೆ ಆ ನಂಬರ್ ಅಸ್ತಿತ್ವಕ್ಕೆ ಬರಲಿಲ್ಲ. ಆಗಲೇ ನನಗೆ ಮೂರರ ಮೇಲೆ ತುಂಬಿದ್ದವು. ಗಳಿಗಿ ಸುಖಕ್ಕೆ ಮಳಗಿ ಕಳಕೊಂಡ್ರಂತೆ. ಮಲ್ಲಿಗೆ ಗಂಧ ಚೆಲ್ಲಿ ಅಸುರ ಚಿರಾಗ್ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ತಿಪ್ಪೆಗೆ ಎಸೆಯುವಂತೆ ನನ್ನನ್ನು ಎಸೆದಿದ್ದ ತನ್ನ ತೀಟೆ ತೀರಿಸಿಕೊಂಡು. ಕೆಟ್ಟ ಮೇಲೆ ಬಂದಿತು’ ಎಂಬಂತೆ ನನಗೆ ಜ್ಞಾನೋದಯವಾಗಿತ್ತು. ಚಿರಾಗನ ಕೃತಕ ಪ್ರೀತಿಗೆ ಬಲಿಪಶುವಾಗಿದ್ದೆ. ಇಂಥಹ ನರಮಾಧಮನ ಜೊತೆಗೆ ಜೀವನ ಪರ್ಯಂತ ಜೀವಿಸುವುದಕ್ಕಿಂತಲೂ ದೂರವಿರುವುದೇ ಲೇಸು ಎಂದು ತೀರ್ಮಾನಿಸಿದೆ. ಅಮ್ಮನಿಗೆ ನನ್ನ ಪರಿಸ್ಥಿತಿ ತಿಳಿಸುವಷ್ಟರಲ್ಲಿ ಮೂರು ತಿಂಗಳ ಮೇಲಾಗಿತ್ತು. ತಕ್ಷಣ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗಿದ್ದಳು. ಕೂಲಂಕುಶವಾಗಿ ತಪಾಸಣೆ ಮಾಡಿದ ಡಾ.ಮೈತ್ರೇಯಿ, ಈಗ ಅಬಾರ್ಶನ್‍ಗೆ ಮುಂದಾದರೆ ವಿಮಾಳ ಜೀವಕ್ಕೆ ಅಪಾಯವಿದೆ' ಎಂದು ತಿಳಿಸಿದ್ದರಿಂದ ಗರ್ಭಪಾತಕ್ಕೆ ಮುಂದಾಗಲಿಲ್ಲ.ಡಿಎನ್‍ಎ ಟೆಸ್ಟ್ ಮಾಡಿಸಿ ಚಿರಾಗನನ್ನು ಜೇಲಿಗೆ ಕಳಿಸೋಣ’ ಎಂದು ಅಪ್ಪ ಹಾರಾಡಿದ. ನಾನೇ ಬೇಡವೆಂದು ಅಪ್ಪನನ್ನು ಸಮಾಧಾನ ಮಾಡಿದೆ. ಮನೆತನದ ಘನತೆ, ಗೌರವ, ಮರ್ಯಾದೆ ಕಳೆದಿದ್ದಕ್ಕೆ ಮತ್ತೊಂದಿಷ್ಟು ಒದರಾಡಿದ. ಅಮ್ಮ ಅಪ್ಪನಿಗೆ ಕೂಲಾಗಿ ಇರಲು ಪ್ರಾರ್ಥಿಸಿಕೊಂಡಳು. ಕೆಲಸಕ್ಕೆ ರಾಜೀನಾಮೆ ನೀಡಬೇಕೆಂದು ತೀರ್ಮಾನಿಸಿಕೊಂಡೆ. ಅಷ್ಟರಲ್ಲಿ ಕೊರೋನಾ ವಕ್ರಿಸಿಕೊಂಡಿದ್ದರಿಂದ ಕಂಪನಿ, ವರ್ಕ ಫ್ರಮ್ ಹೋಮ್' ಘೋಷಿಸಿದ್ದರಿಂದ ಮನೆಯಲ್ಲೇ ಕೆಲಸ ಮುಂದುವರಿಸಿದೆ. ಹೆರಿಗೆ ಸಮೀಪಿಸುತ್ತಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿದೆ. ಹೆರಿಗೆಯ ಸಮಯದಲ್ಲಿ ತುಂಬಾ ಕಾಂಪ್ಲಿಕೇಶನ್ ಆಗಿ ಗರ್ಭಕೋಶಕ್ಕೆ ಇರ್ರಿಪೇರೆಬಲ್ ಡ್ಯಾಮೇಜ್ ಆಯಿತಂತೆ. ಹಸಿಗೂಸನ್ನು ನಿಷ್ಕರುಣೆಯಿಂದ ಅನಾಥಾಶ್ರಮವೊಂದಕ್ಕೆ ನೀಡಿದ್ದೂ ಆಯಿತು. ಗರ್ಭಕೋಶಕ್ಕೆ ಹಾನಿಯಾಗಿರುವುದೇ ನನಗೆ ಮಕ್ಕಳಾಗುವುದಿಲ್ಲವೆಂಬುದಕ್ಕೆ ಕಾರಣ. "ಚಿಂತೆಯನ್ನು ಚಿಗುರದೇ ಚಿವುಟಿ ಹಾಕಿ ಚೈತನ್ಯದ ಸಸಿಗೆ ನೀರೆರೆದು ಪೋಷಿಸಿ ಮೂರು ದಿನದ ಜೀವನ ಸಂತೆಯಲಿ ಮೂರ್ಖನಂತೆ ಬಾಳದೇ ಅರಿತುಕೊಂಡು ಬದುಕು" ಎಂದು ಅಮ್ಮ ನನ್ನಲ್ಲಿ ಧೈರ್ಯ ತುಂಬಿದಳು. ವರ್ಷ ತುಂಬುವಷ್ಟರಲ್ಲಿ ಈಗಿರುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಸಹೋದ್ಯೋಗಿ ಸಮೀರನ ಪರಿಚಯವಾಯಿತು. ಪ್ರೀತಿಯೂ ಆಯಿತು. ಮದುವೆಯೂ ಆಯಿತು. ಗರ್ಭಕೋಶ ಹಾನಿಗೊಳಗಾಗಿರುವುದರಿಂದ ಮಕ್ಕಳಾಗಲು ಸಾಧ್ಯವೇ...? ಸಮೀರನ ನ್ಯೂನ್ಯತೆಗಳಿಗೆ ಕಾರಣಗಳೇನೋ? ಸಮೀರನಿಗೆ ನನ್ನ ಗತಜೀವನದ ಬಗ್ಗೆ ತಿಳಿಸಿದರೆ ಹೇಗೆ ಸ್ವೀಕಾರ ಮಾಡಬಹುದು...?" ನೆನಪಿನ ಸುಳಿಯಿಂದ ಹೊರಬಂದ ವಿಮಾ ಒಂದು ಗಟ್ಟಿ ನಿರ್ಧಾರಕ್ಕೆ ಬಂದಾಗ ನಿದ್ರಾದೇವಿಯ ಸೆಳೆತಕ್ಕೆ ಸಿಲುಕಿಕೊಂಡಳು. **** ಸಮೀರ್ ಏನೇನೋ ಕೆಟ್ಟ ಕನಸುಗಳು. ಥಟ್ಟಂತ ಎಚ್ಚರವಾಯಿತು. ಬೆವೆತು ತೋಯ್ದು ತೊಪ್ಪೆಯಾಗಿದ್ದೆ. ಕನಸಿನ ಘಟನೆ ಜ್ಞಾಪಿಸಿಕೊಳ್ಳಲು ತಿಣಿಕ್ಯಾಡಿದೆ. ಎಲ್ಲವೂ ಅಸ್ಪಷ್ಟ. ದೈತ್ಯಾಕಾರದ ಜೀವಿಯೊಂದು ನನ್ನನ್ನು ಅಟ್ಟಾಡಿಸಿಕೊಂಡು ಬರುತ್ತಿರುವುದಷ್ಟೇ ನೆನಪಿಗೆ ಬಂತು. ಗಡಿಯಾರದ ಕಡೆಗೆ ದೃಷ್ಟಿ ಹರಿಸಿದೆ. ಬೆಳಗಿನ ಜಾವ ನಾಲ್ಕು ಗಂಟೆ. ವಿಮಾಳ ಕಡೆಗೆ ದೃಷ್ಟಿ ಹರಿಸಿದೆ. ನಿದ್ರಿಸುತ್ತಿದ್ದಳು. ಯಾವುದೋ ಅಸ್ಪಷ್ಟ ನೋವಿನ ಎಳೆ ಇತ್ತು ಮುಖಭಾವದಲ್ಲಿ. ಮೆಲ್ಲಗೇ ಎದ್ದು ಬಚ್ಚಲುಮನೆಗೆ ಹೋಗಿ ಬಂದೆ. ಅಂಗಾತ ಮಲಗಿದ್ದ ವಿಮಾಳ ಎದೆಯ ಮೇಲೆ ಮುಖವಿಟ್ಟು ಮಲಗಿದೆ.ಬಿಡಬೇಡ, ಸಮೂ ನನ್ನ ಬಿಡಬೇಡ’ ಎಂದು ಹಲುಬುತ್ತಾ ವಿಮಾ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅವಳ ಮುಖದ ಕಡೆಗೆ ದೃಷ್ಟಿಸಿದೆ. ನಿದ್ದೆಗಣ್ಣಿನಲ್ಲಿ ಬಡಬಡಿಸಿದ್ದಳು. `ಇಲ್ಲ ಪುಟ್ಟಾ, ನಾನೇಕೆ ನಿನ್ನನ್ನು ಬಿಡಲಿ? ಇಲ್ಲದ ಯೋಚನೆ ಏಕೆ? ಹಾಯಾಗಿ ಸುಮ್ಮನೇ ಮಲಗು’ ಎಂದೆನ್ನುತ್ತಾ ಅವಳ ಮುಂಗುರುಳು ನೇವರಿಸಿ ಅವಳನ್ನು ಬಲವಾಗಿ ತಬ್ಬಿಕೊಂಡೆ. ಅವಳ ಎದೆಯಂಗಳದಲ್ಲೇ ನನ್ನ ಮುಖವಿತ್ತು. ಮನಸ್ಸಿಗೆ ಬೇಸರವಾದಾಗ ಅವಳೆದೆಯಲ್ಲಿ ಮುಖವಿಟ್ಟು ಸಾಂತ್ವನ ಕಂಡುಕೊಳ್ಳುವುದು ನನಗೆ ಮೊದಲಿನಿಂದಲೂ ರೂಢಿ. ಅದೇನೋ ಅವ್ಯಕ್ತ, ಅಗಾಧ ಶಕ್ತಿ ಇತ್ತು ಅವಳೆದೆಯ ಮೃದು ಸ್ಪರ್ಶದಲ್ಲಿ. ಯಾಕೋ ಮನಸ್ಸಿನಲ್ಲಿನ ತುಮುಲ ಶಮನವಾಗುವ ಲಕ್ಷಣ ಕಾಣಲಿಲ್ಲ. ವೈದ್ಯಕೀಯ ವರದಿಗಳು ನಮ್ಮ ಕೈಸೇರಿದ ನಂತರ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ.

ನಮಗೆ ಮಕ್ಕಳಾಗದಿರುವುದಕ್ಕೇ ನಾವಿಬ್ಬರೂ ಹೊಣೆಗಾರರೇ? ವಿಮಾಳ ಗರ್ಭಕೋಶಕ್ಕೆ ಯಾವ ಕಾರಣದಿಂದ ಹಾನಿಯಾಗಿದೆಯೋ ಏನೋ? ಕಾರಣವನ್ನು ಕೆದಕಿ ಕೇಳಿ ಅವಳ ಮನಸ್ಸನ್ನು ನೋಯಿಸುವ ಇಚ್ಛೆ ನನಗಿಲ್ಲವಾದ್ದರಿಂದ ಸುಮ್ಮನಾಗಿರುವೆ. ಆದರೆ ನನ್ನ ವೀರ್ಯಾಣುಗಳ ಅಸಮರ್ಥತೆಗೆ ನಾನೇ ನೇರ ಹೊಣೆಗಾರನಲ್ಲವೇ? ಹೌದು. ಮನಸ್ಸಿನ ಕ್ಯಾನ್‍ವ್ಯಾಸ್ ಮೇಲೆ ಗತಜೀವನದ ನೆನಪುಗಳು ಬಣ್ಣ ಬಳಿದುಕೊಂಡು ತಕಥೈ ಮಾಡತೊಡಗಿದವು.
ಬಿಇ ಎರಡನೇ ವರ್ಷದಲ್ಲಿದ್ದಾಗ ನಾನು ದುರ್ಜನರ ಸಂಗದಲ್ಲಿ ಸಂತೋಷವನ್ನು ಅರಸಲು ಹೊರಟಿದ್ದೆ. ಶ್ರೀಮಂತ ವ್ಯಾಪಾರಿಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು, ಭ್ರಷ್ಟ ಅಧಿಕಾರಿಗಳ ಮಕ್ಕಳು, ಥಳುಕು-ಬಳುಕಿನ ಸಿನಿತಾರೆಯರ ಮಕ್ಕಳ ಜೊತೆಗೆ ಮೋಜು-ಮಸ್ತಿಯಲ್ಲಿದ್ದೆ. ಹೆಣ್ಣು, ಗಂಡು ಎಂಬ ಬೇಧಭಾವವಿರಲಿಲ್ಲ. ಹುಡುಗರಿಗಿಂತ ಹುಡುಗಿಯರೇ ತುಂಬಾ ಜನ. ಎಲ್ಲರೂ ಅರೆಬೆತ್ತಲೆ ಡ್ರೆಸ್ಸಿನ ಮಾಡ್ ಮಾಡ್ ಯುವತಿಯರು. ಕುಡಿತ, ಮಾದಕದ್ರವ್ಯಗಳ ಸೇವನೆಗಳ ಜೊತೆಗೆ ಮುಕ್ತ ಲೈಂಗಿಕ ಕ್ರಿಯೆಯಲ್ಲಿ ನಾವು ಹೊಸದೊಂದು ಲೋಕದಲ್ಲಿ ವಿಹರಿಸತೊಡಗಿದ್ದೆವು. ನನ್ನ ಘನಂದಾರಿ ಕೆಲಸ ಅಪ್ಪ-ಅಮ್ಮನಿಗೆ ಗೊತ್ತಾಗಿ ತಕ್ಷಣ ನನಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದರಿಂದ ಆ ದುವ್ರ್ಯಸನಗಳಿಂದ ಪಾರಾಗಿ ಮೊದಲಿನಂತಾಗಿದ್ದೆ. ಅಷ್ಟರಲ್ಲಿ ನನ್ನ ಒಂದು ವರ್ಷದ ವಿದ್ಯೆ ಹಾಳಾಗಿತ್ತು. ಪುನಃ ತರಗತಿಗೆ ಸೇರಿಕೊಂಡು ಪದವಿ ಗಳಿಸಿಕೊಂಡೆ. ಕೆಲಸವೂ ಸಿಕ್ಕಿತು. ವಿಮಾಳ ಪರಿಚಯವೂ ಆಯಿತು. ಲವ್ವೂ ಆಯಿತು. ಮದುವೆಯೂ ಆಯಿತು. ವಿಮಾಳಿಗೆ ನನ್ನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಹೇಳಿದರೆ ಹೇಗೆ…? ನಮ್ಮ ಸಂಬಂಧ ನಿಲ್ಲಬಹುದೇ…?”
****
“ಸಮೂ, ನಿದ್ದೆ ಬಂದಿಲ್ಲವಾ…?” ದಿಢೀರನೇ ಬಂದ ವಿಮಾಳ ಪ್ರಶ್ನೆಗೆ ಸಮೀರ್ ಕಸಿವಿಸಿಗೊಂಡ.
“ಇಲ್ಲ, ಇಲ್ಲ. ಹಾಗೇನಿಲ್ಲ. ತುಸು ಹೊತ್ತಿನ ಹಿಂದೆಯಷ್ಟೇ ಬಾಥ್ ರೂಮಿಗೆ ಹೋಗಿ ಬಂದೆ. ನಾನು ನಿನ್ನೆದೆಯಲ್ಲಿ ಮುಖವಿಟ್ಟಿದ್ದಕ್ಕೆ ನಿನಗೆ ಡಿಸ್ಟರ್ಬ ಆಯಿತಾ…?” ಎಂದೆನ್ನುತ್ತಾ ಕನಸಿನ ಪ್ರಸಂಗ ಹೇಳಿದ ಸಮೀರ್.
“ಹೌದಾ…? ಇರಲಿಬಿಡು. ತಲೆಕೆಡಿಸಿಕೊಳ್ಳಬೇಡ. ಇಲ್ಲಪ್ಪಾ, ನಿನ್ನಿಂದ ನನಗೆಂಥಹದೂ ಡಿಸ್ಟರ್ಬ ಆಗಿಲ್ಲ.”
“ವಿಮಾ, ನಿನಗೊಂದು ವಿಷಯ ತಿಳಿಸಬೇಕಿದೆ. ಬೇಸರ ಮಾಡಿಕೊಳ್ಳಬಾರದು…”
“ಅದಕ್ಕಿಂತ ಮುಂಚೆ ನಾನೂ ನಿನಗೊಂದು ವಿಷಯ ಹೇಳಬೇಕೆಂದಿರುವೆ. ಆಗ ನಿನ್ನ ನಿರ್ಧಾರ ಏನಿದ್ದರೂ ಸಹಿಸಿಕೊಳ್ಳುವೆ” ಎಂದೆನ್ನುತ್ತಾ ವಿಮಾ ತನ್ನ ಲೈಫ್ ಸ್ಟೋರಿ ವಿವರಿಸಿ ಅವನ ಪ್ರತಿಕ್ರಿಯೆಗಾಗಿ ಮುಖದಲ್ಲೇ ದೃಷ್ಟಿ ನೆಟ್ಟಳು. ಸಮೀರ್ ಅವಳ ಎದೆಯ ಮೇಲಿಂದ ತನ್ನ ಮುಖ ತೆಗೆದು ಅಂಗಾತ ಮಲಗಿ ಅವಳನ್ನು ತನ್ನೆದೆಯ ಮೇಲೆ ಮಲಗಿಸಿಕೊಂಡ.
“ಹೌದಾ…? ಇಷ್ಟೇನಾ…? ನೀನು ಚಿರಾಗ್ ಒಬ್ಬನ ಜೊತೆಗಷ್ಟೇ ಎಂಜಾಯ್ ಮಾಡಿದ್ದು ತಾನೇ…? ಆದರೆ ನಾನು…? ನನ್ನ ಜೀವನದಲ್ಲಿ ಅದೆಷ್ಟು ಹೆಣ್ಣುಗಳು ಬಂದು ಹೋದವೋ ಏನೋ…?” ಎಂದೆನ್ನುತ್ತಾ ಸಮೀರ್ ತನ್ನ ಕಥೆ ಹೇಳಿದ. ತುಸು ಹೊತ್ತಿನವರೆಗೆ ಮೌನದ ಅಬ್ಬರ.
“ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ, ಅತಿಯಾದ ಜೀವನ, ಸೀಮಾತೀತ ಸ್ವಾತಂತ್ರ್ಯ ಇವು ರಾಷ್ಟ್ರ ವಿಘಾತಗಳು ಎಂಬ ದಾರ್ಶನಿಕರ ಹಿತೋಕ್ತಿಗಳು ನಮಗಾಗಿಯೇ ಇರಬೇಕು. ಸಮೂ, ಹೋಗಲಿ ಬಿಡು. ಆದದ್ದು ಆಗಿ ಹೋಗಿದೆ. ನಾವೀಗ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದೇವೆ. ಹಳೆಯದನ್ನು ಮರೆತು ಈಗಿರುವಂತೆ ಇದ್ದು ಬಿಡೋಣ.” ವಿಮಾ ಸಮೀರನ ಎದೆಯ ಕೂದಲುಗಳಲ್ಲಿ ಬೆರಳಾಡಿಸುತ್ತಾ ಹೇಳಿದಳು.
“ಡಾರ್ಲಿಂಗ್, ನಿನ್ನದು ವಿಶಾಲ ಮನಸ್ಸು. ಹಿಂದಿನದನ್ನು ಪಕ್ಕಕ್ಕಿಟ್ಟು ಅನಾಥಾಲಯವೊಂದರಿಂದ ಶಿಶುವೊಂದನ್ನು ತಂದು ನಮ್ಮ ಮನೆಯಲ್ಲಿ ಚಿಲಿಪಿಲಿಯ ಕಲರವವನ್ನು ಸೃಷ್ಟಿಸೋಣ.”
“ಸರಿ. ಹಾಗೇ ಮಾಡೋಣ” ಎಂದೆನ್ನುತ್ತಾ ವಿಮಾ ಸಮೀರನ ಕೊರಳಲ್ಲಿ ತುಟಿ ಒತ್ತಿದಾಗ ಮೂಡಣದಲ್ಲಿ ಹೊಂಬೆಳಕು ಪಸರಿಸತೊಡಗಿತ್ತು.

ಶೇಖರಗೌಡ ವೀ ಸರನಾಡಗೌಡರ್, 
ತಾವರಗೇರಾ-583279, ತಾ:ಕುಷ್ಟಗಿ, ಜಿ:ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನೈತಿಕತೆಯ ಏರಿಳಿತ”

  1. Raghavendra Mangalore

    ಮನುಷ್ಯನ ನೈತಿಕತೆ ಅದರಲ್ಲೂ ದಂಪತಿಗಳ ನಡುವೆ ಮಕ್ಕಳನ್ನು ಹಡೆಯುವ ವಿಭಿನ್ನ ಸಮಸ್ಯೆಯ ಕುರಿತು ಒಂದು ಅರ್ಥಪೂರ್ಣ ಕಥೆಯನ್ನು ಹೆಣೆದ ತಮಗೆ ಅಭಿನಂದನೆಗಳು. ಸರಳ ಹಾಗೂ ಸುಂದರ ಸಂಭಾಷಣೆ ಕಥೆಯ ಹಿರಿಮೆಯನ್ನು ಹೆಚ್ಚಿಸಿವೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai