“ಸುಧೀ”
ಅಪ್ಪನ ಗಂಟಲೊಳಗಿನಿಂದ ಕೂಗು ಹೊರಟಿತು.
“ನೀನಿನ್ನೂ ಹೊರಟಿದ್ದೀಯೋ ಇಲ್ವೋ? ಒಂಬತ್ತೂವರೆಯಾಗ್ತಾ ಬಂತು. ಹತ್ತರ ಬಸ್ ಸಿಗದಿದ್ರೆ ಹತ್ತೂವರೆಗೆ ಮುಟ್ಟಲು ಕಷ್ಟವಾದೀತು. ಅಷ್ಟೂ ಗೊತ್ತಿಲ್ವಾ? ಸುದರ್ಶನ ಚಟಪಟ ತಯಾರಾಗಿ ಎಂಟೂವರೆಗೆ ಮನೆ ಬಿಡ್ತಿದ್ದ. ನಿಂಗೇಕೆ ಇಷ್ಟು ಹೊತ್ತು?”
‘ಅಪ್ಪಾ, ಅವ ಬಾತ್‍ರೂಮಿಗೆ ಹೋದ ಬಳಿಕ ಅರ್ಧಗಂಟೆ ಸ್ನಾನ ಮಾಡ್ತಿದ್ದ. ಆಮೇಲೆ ಬಂದು – ನಿನ್ನ ಬಟ್ಟೆಗಳ ಜೊತೆ ನನ್ನದೂ ಇಸ್ತ್ರಿ ಮಾಡು, ಬರುವಾಗ ಅಂಗಡಿಯಿಂದ ತರಬೇಕಾದ ಸಾಮಾನುಗಳ ಪಟ್ಟಿ ಬರೆ ಅಂತ ಅಪ್ಪಣೆ ಕೊಡ್ತಿದ್ದ.’
ತನ್ನ ನಾಲಿಗೆಯ ಮೇಲೆ ಸಾಲುಗಟ್ಟಿದ ಉತ್ತರವನ್ನು ಕಷ್ಟಪಟ್ಟು ಹಿಂದೆ ಸರಿಸಿದ ಸುಧೀರ.
“ನಿನ್ನಿಂದಾಗಿ ನಂಗೂ ತಡವಾಗ್ತದೆ. ಹತ್ತು ಗಂಟೆಗೆ ಗ್ರಾಮಸಭೆಯಲ್ಲಿ ಮಾತಾಡ್ಬೇಕು. ದೇವಸ್ಥಾನದ ಬ್ರಹ್ಮಕಲಶ, ಭೂತಸ್ಥಾನಗಳ ಜೀರ್ಣೋದ್ಧಾರದ ಕೆಲಸಕ್ಕೆ ಹೋಗ್ಬೇಕು. ಎಲ್ಲ ಮುಗಿಸಿ ಮನೆಗೆ ಬರುವಾಗ ನಾಲ್ಕೂವರೆಯಾಗ್ತದೆ.”
ಕೊನೆಗೂ ಅಪ್ಪ ಉಸಿರೆಳೆದುಕೊಳ್ಳಲು ಮಾತುಗಳನ್ನು ನಿಲ್ಲಿಸಿದಾಗ ಸುಧೀರನೆಂದ. “ಮೂರೂವರೆಯ ನಂತರ ಸ್ವಲ್ಪ ಹೊತ್ತು ಲೈಬ್ರರಿಯಲ್ಲಿ ಕೂತುಕೊಳ್ಳುವೆ.”
“ಒಳ್ಳೇದಾಯ್ತು. ತಡವಾದ್ರೆ ಫೋನ್ ಮಾಡು. ಮಧ್ಯಾಹ್ನ ಆಕ್ಟಿವಾ ತಗೊಂಡು ಆ ಕಡೆ ಹೋಗ್ಲಿಕ್ಕುಂಟು. ಬರುವಾಗ ನಿನ್ನನ್ನು ಕರ್ಕೊಂಡು ಬರ್ತೇನೆ”
ಅಣ್ಣನಿರುತ್ತಿದ್ದರೆ ನಡುವೆ ಬಂದು “ಅಪ್ಪಾ, ಈಗ ಅವನೇನೂ ಚಿಕ್ಕವನಲ್ಲ. ಹೈಯರ್ ಸೆಕೆಂಡರಿ ಸ್ಕೂಲಿನ ಅಧ್ಯಾಪಕ. ಇನ್ನಾದರೂ ಅವನ ಬಗ್ಗೆ ಅವನೇ ನಿರ್ಧರಿಸಲಿ” ಎಂದೋ “ಸುಧೀ, ಅಪ್ಪ ಹೇಳೋದನ್ನೆಲ್ಲ ಕೇಳಿ ನೀನು ಸುಮ್ಮನೆ ಕೂತ್ಕೊಳ್ಳೋದು ಯಾಕೆ? ನಾನು ಮಾಡುವ ಹಾಗೆ ಮಾಡು. ಶುರುಮಾಡುತ್ತಿದ್ದಂತೆ ಕೈಯಲ್ಲಿ ಪೇಪರ್ ಹಿಡಿದು ಕೂತ್ಕೋ. ಇಲ್ಲದಿದ್ದರೆ ಟಿ.ವಿ ಹಾಕು. ಇಲ್ಲದಿದ್ದರೆ ಒಂದೆರಡು ನಿಮಿಷಗಳವರೆಗೆ ಸುಮ್ಮನಿದ್ದು ಆಮೇಲೆ ಸಣ್ಣ ದನಿಯಲ್ಲಿ ‘ಆಯ್ತಾ ನಿಮ್ಮದು?’ ಅಂತ ಕೇಳು. ಆಮೇಲೆ ತಾವೇ ನಿಲ್ಲಿಸ್ತಾರೆ. ನೀನಾದರೋ ಒಂದಕ್ಷರ ಮಾತಾಡದೆ ಸುಮ್ಮನಿರುತ್ತೀ. ಇನ್ನಾದರೂ ನಿನ್ನ ಮನಸ್ಸಿಗನಿಸಿದಂತೆ ನಡೆಯುತ್ತಾ ಹೋಗು” ಎಂದೋ ಹೇಳುತ್ತಿದ್ದ.
“ಸುದರ್ಶನನ ಹಾಗೆ ನೀನೂ ಇಂಜಿನಿಯರ್ ಆಗ್ಬೇಕು ಅಂತ ನನ್ನ ಅಸೆಯಾಗಿತ್ತು. ಆದರೆ ನೀನು ಗಣಿತದಲ್ಲಿ ಹಿಂದೆ ಬಿದ್ದದ್ರಿಂದ ಅದು ನುಚ್ಚುನೂರಾಯ್ತು. ವಿದೇಶಿ ಭಾಷೆ ಕಲ್ತು ಇಂಟರ್‍ಪ್ರಟರ್ ಆದ್ರೆ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸೇರಿಕೊಳ್ಳೋ ಅವಕಾಶವಿತ್ತು. ನೀನು ಇಂಗ್ಲಿಷ್ ಮತ್ತು ಎಕನಾಮಿಕ್ಸ್ ಬಿಟ್ಟು ಕನ್ನಡವನ್ನು ಆಯ್ದುಕೊಂಡೆ. ಸುದರ್ಶನನ್ನು ನೋಡು. ಇಂಜಿನಿಯರ್ ಆದ ಮೇಲೆ ಮಲೇಷ್ಯಾಕ್ಕೆ ಹೋದ. ನಂತರ ಅಮೆರಿಕಕ್ಕೆ ತೆರಳಿದ. ನಿನ್ನಕ್ಕನ ಗಂಡ ಬಿ.ಕಾಂ ಅದರೂ ಡಿಪ್ಲೋಮ ಮಾಡಿ ಮಲ್ಟಿನ್ಯಾಶನಲ್‍ನಲ್ಲಿ ಒಳ್ಳೆ ಸಂಬಳ ತಗೊಳ್ತಾನೆ. ನಾನು ಅವನಿಗೆ ಹೇಳಿ ನಿನಗೆ ಅಲ್ಲಿ ಕೆಲಸ ತೆಗೆಸಿಕೊಡ್ತಿದ್ದೆ. ಇದೆಲ್ಲ ಗೊತ್ತಿದ್ದೂ ಮಾಸ್ತರಿಕೆ ಮಾಡುವ ಆಸೆ ಏಕೆ ಬಂತು? ಅದರಲ್ಲಿ ಏನು ಪ್ರಗತಿ ಉಳಿದಿದೆ ಈಗ?”
“ಅಪ್ಪಾ, ನೀವು ಇದನ್ನು ನೂರ ಒಂದನೇ ಸಲ ಹೇಳುತ್ತಿದ್ದೀರ. ನಾನು ಈಗ ಉದ್ಯೋಗದ ಕುರಿತು ಚಿಂತಿಸುತ್ತಿಲ್ಲ. ನನಗೆ ಸಣ್ಣಕತೆಗಳು ಅಂದರೆ ತುಂಬಾ ಇಷ್ಟ. ಎಂ. ಎ ಮುಗಿಸಿದ ಬಳಿಕ ಆ ವಿಷಯದ ಬಗ್ಗೆ ಪಿ.ಎಚ್.ಡಿ ಮಾಡ್ತೇನೆ. ಅದಕ್ಕಿಂತ ಮುನ್ನ ನನ್ನದೇ ಆದ ಕತೆಗಳ ಸಂಕಲನ ತರುತ್ತೇನೆ.”
ಅಮ್ಮನೇ ನನ್ನ ಪರ ಮಾತನಾಡಿದಳು. “ಸುದರ್ಶನ, ಸುಧಾ ತಮ್ಮ ಇಷ್ಟದ ಪ್ರಕಾರ ಆಯ್ಕೆ ಮಾಡಿದ್ರು. ನೀವು ಇವನಿಗೆ ಅಷ್ಟಾದರೂ ಸ್ವಾತಂತ್ರ್ಯ ಕೊಡ್ಬೇಕು”
“ಅಂದರೆ ಏನೇ?”
“ಚಿಕ್ಕಂದಿನಿಂದಲೇ ಇವ ನಮ್ಮನ್ನು ನೆಚ್ಚಿಕೊಂಡು ಬೆಳೆದ. ಬೆಳೆದ ಮೇಲೆ ಕೂಡ ಎಲ್ಲದರಲ್ಲೂ ಅಸಹಾಯಕತೆ. ಪ್ರತಿಯೊಂದನ್ನೂ ನೀವೇ ಮಾಡುತ್ತಿದ್ದುದರಿಂದ, ನಿಮ್ಮ ಪ್ರೀತಿ, ಆತುರ, ನಿಯಂತ್ರಣಗಳು ಅವನ ಕಾಲ ಮೇಲೆ ನಡೆಯಲು ಅವಕಾಶ ಕೊಡಲಿಲ್ಲ. ಹದಗೊಳ್ಳಲು ಬಿಡಲಿಲ್ಲ. ಹೋಗಲಿ ಬಿಡಿ, ಮುಂದಿನದ್ದು ಯಾರು ನೋಡಿದ್ದಾರೆ?” ಎಂದು ಅಮ್ಮ ವಾದದ ಮೇಲೆ ಪರದೆಯನ್ನು ಎಳೆದರೂ “ಯಾವಾಗ ನೋಡಿದ್ರೂ ನೀವು ಇವನನ್ನು ಸುದರ್ಶನನೊಡನೆ ಹೋಲಿಸ್ತಿದ್ದೀರಿ. ರೂಪ, ಬುದ್ಧಿವಂತಿಕೆ, ಚುರುಕುತನ ಹೀಗೆ ಎಲ್ಲದರಲ್ಲೂ ಇವ ಹೇಗೆ ಸುದರ್ಶನನಿಗಿಂತ ಕಡಿಮೆ ಇದ್ದಾನೆ, ಅವನು ಹೇಗೆ ಮೇಲೇರಿದ್ದಾನೆ ಅಂತ ಹೇಳುವ ನೀವು ಇವನ ಸರಳತನ, ಮತ್ತೊಬ್ಬರ ಸಲುವಾಗಿ ಒದ್ದಾಡುವ ಗುಣ, ಕಷ್ಟಕಾಲಕ್ಕೆ ಓಡಿಬರುವ ಮನೋಭಾವಗಳ ಕುರಿತು ಏಕೆ ಹೇಳ್ತಿಲ್ಲ?” ಎಂದು ಗೊಣಗುತ್ತಲೇ ಇದ್ದಳು.
“ಸ್ವಲ್ಪ ತಡೆದುಕೋ ಅಮ್ಮಾ” ಸುಧೀರನು ತಣ್ಣಗಿನ ದನಿಯಲ್ಲಿ ಹೇಳಿದ. “ನಾವು ಒಮ್ಮೆ ಸೀನಿದರೂ ಕಾಳಜಿ ತೆಗೆದುಕೊಳ್ಳುವ, ತೋಟ-ಹಿತ್ತಿಲುಗಳಲ್ಲಿ ಆತ್ಮವಿಶ್ವಾಸದಿಂದ ವ್ಯವಹರಿಸುವ, ಸಂಬಂಧಿಕರ ಮನೆಯ ಕಾರ್ಯಕ್ರಮ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತನ್ನದೆಲ್ಲವನ್ನೂ ಬಿಟ್ಟು ಭಾಗವಹಿಸುವ ಅಪ್ಪ ಉಳಿದವರಿಂದಲೂ ಅದನ್ನೇ ಅಪೇಕ್ಷಿಸ್ತಾರೆ. ಅಣ್ಣ ಮತ್ತು ಅಕ್ಕ ಕಲಿಕೆಯಲ್ಲಿ ನನಗಿಂತ ಮುಂದೆ ಹೋಗಿ ಅವರಿಗೆ ಸಂತಸವನ್ನು ಕೊಟ್ಟಿದ್ದಾರೆ. ನಾನಂತೂ ಅವರಿಗೆ ಬೇಡದ ಸಂತಾನವಾಗಿದ್ದೇನೆ. ಆದರೆ ನಿನಗೆ ಅಂಥ ಭಾವನೆಯಿಲ್ಲ. ನನಗೆ ಅಷ್ಟೇ ಸಾಕು.”
ಸುಧೀರನು ತನ್ನ ಸಂಶೋಧನ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ ಬಳಿಕ ಅಪ್ಪ ಹೇಳತೊಡಗಿದರು. “ಇನ್ನಾದರೂ ನಿನಗೆ ಮದುವೆಯಾಗಬೇಕು.”
“ಅಪ್ಪಾ, ನಾನು ಪಿ.ಎಚ್.ಡಿ ಕೋರ್ಸ್‍ವರ್ಕ್ ಮಾಡ್ತಿದ್ದಾಗ ನನಗೆ ಉದ್ಯೋಗವಿಲ್ಲ ಅಂತ ನಿಮಗೆ ಬೇಸರವಿತ್ತು. ಕೂಳಿಗೆ ದಂಡವಾಗಿ ಬಿದ್ದಿದ್ದೇನೆ ಎಂಬಂತೆ ನೋಡ್ತಿದ್ರಿ. ತೀರ್ಥಾನಂದ ಕಾಲೇಜಿನಲ್ಲಿ ಕೆಲಸ ಸಿಕ್ಕಿದ ಕೂಡಲೇ ನೀವು ನನಗೆ ಮದುವೆ ಮಾಡಲು ಹೊರಟಿರಿ. ಸಂಬಳ ಕಡಿಮೆಯಾಯ್ತು ಅಂತ ಎಲ್ಲರೂ ತಿರಸ್ಕರಿಸಿದರು.”
“ಅದಕ್ಕೇನಾಯ್ತು? ಈಗ ನೀನು ಅಲ್ಲಿಂದ ಬಿಟ್ಟು ಕಾಸರಗೋಡಿನಲ್ಲಿ ಸೇರಿಕೊಂಡೆಯಲ್ಲ. ಸ್ವಂತ ಊರಾಗಿರೋದ್ರಿಂದ ಮನೆಯಿಂದ ದಿನಾ ಬಂದು ಹೋಗಿ ಮಾಡಬಹುದಲ್ಲ. ನಲುವತ್ತಕ್ಕಿಂತ ಮೇಲೆ ಸಂಬಳವಿದೆಯಲ್ಲ.”
“ಆದರೆ ಇನ್ನೂ ಅಪ್ರೂವಲ್ ಆಗಿಲ್ಲ.”
“ಯಾವತ್ತಾದರೊಂದು ದಿನ ಆಗಬಹುದಲ್ಲ. ಸಂಬಳವೆಲ್ಲ ಒಟ್ಟಿಗೇ ಸಿಗ್ತದೆ. ಅಲ್ಲಿವರೆಗೂ ನಿನಗಾಗಿ ಯಾರು ಕಾದು ಕೂತ್ಕೊಳ್ತಾರೆ? ನಮ್ಮ ಜಾತಿಯಲ್ಲಿ ಈಗ ಹುಡುಗಿಯರು ಸಿಗ್ತಾರಾ?”
“ಈಗೇನೂ ಬೇಡ. ಒಂದು ವರ್ಷ ಕಳೆಯಲಿ. ಒಂದಷ್ಟು ಹಣ ಕೈಗೆ ಬರಲಿ.”
“ಇತ್ತೀಚಿನ ಹುಡುಗ ಹುಡುಗಿಯರು ತುಂಬಾ ಮುಂದುವರಿದಿದ್ದಾರೆ. ಹೈಸ್ಕೂಲಲ್ಲಿರುವಾಗಲೇ ಗಾಡಿ ಓಡಿಸ್ತಾರೆ. ಕಾಲೇಜಲ್ಲಿ ಕಲಿಯುವಾಗಲೇ ಸಂಗಾತಿಗಳನ್ನು ಹುಡುಕಿಕೊಳ್ತಾರೆ. ನಿಂಗೆ ಅದೆಲ್ಲ ಎಲ್ಲಿ ಬರಬೇಕು? ತುಂಬಾ ಜಾತಕಗಳು ಬಂದವು. ಒಂದೂ ಕೂಡಿ ಬರಲಿಲ್ಲ. ಹೇಳಿ ಕೇಳಿ ನಿನ್ನದು ಆಶ್ಲೇಷ ನಕ್ಷತ್ರವಲ್ಲವಾ?” ಎಂದ ಬಳಿಕ ಅಡುಗೆಕೋಣೆಯತ್ತ ಮುಖ ತಿರುಗಿಸಿ “ಏ ಇವಳೇ, ನಿನ್ನ ಪೈಕಿ ಯಾರಾದ್ರೂ ಒಬ್ಳನ್ನು ವಿಚಾರಿಸು. ಇಲ್ಲದಿದ್ರೆ ಇವ ಕತೆ, ಕಾದಂಬರಿ, ಅಂತ ಹೇಳ್ಕೊಂಡು ಯಾವುದಾದ್ರೂ ದರಿದ್ರ ಹುಡುಗಿಯನ್ನು ಪ್ರೀತಿಸಬಹುದು. ಹರಕು ಅಂಗಿ, ತೇಪೆ ಹಚ್ಚಿದ ಬಟ್ಟೆ ತೊಟ್ಟ ಸೊಸೆ ಮನೆಗೆ ಬರಬಹುದು. ಏನೋ? ಅಂಥವಳನ್ನೆಲ್ಲಾದ್ರೂ ನೋಡಿಟ್ಟಿದ್ದೀಯೇನೋ” ಎಂದರು.
ಸುಧೀರ ಮಾತನಾಡದೆ ಎದ್ದು ಹೋದ.
“ನಾಲಗೆ ಇದೆ ಅಂತ ಬಾಯಿಗೆ ಬಂದದ್ದು ಹೇಳ್ಬೇಡಿ. ಹುಡುಗಿ ಸಿಗದೆ ಇದ್ದುದು ಇವನ ತಪ್ಪಿನಿಂದಾಗಿಯೋ? ಎಂತೆಂಥ ನಿಬಂಧನೆಗಳು ಈಗಿನ ಹುಡುಗಿಯರಿಗೆ! ಕಾಸರಗೋಡಿನವ ಬೇಡ, ಬೆಂಗಳೂರಿನವನೇ ಬೇಕು. ಹಳ್ಳಿ ಮನೆ ಆಗಬಾರದು. ಪೇಟೆ ರಸ್ತೆ ಬದಿಯ ಬಂಗಲೆಯೇ ಬೇಕು. ಹುಡುಗನಿಗೆ ತಂದೆತಾಯಿಯರು ಇರಬಾರದು. ಇದ್ದರೆ ಹುಡುಗ ಅವಳೊಂದಿಗೆ ಬೇರೆಯೇ ವಾಸಿಸಬೇಕು. ಇಬ್ಬರು ಕೂತುಕೊಂಡು ಹೋಗುವ ವಾಹನವೂ, ತನ್ನ ಕುಟುಂಬದವರು ಕೂತುಕೊಂಡು ಹೋಗುವ ವಾಹನವೂ ಬೇಕು. ಆದರೆ ಕಂಡಕಂಡವರ ಜೊತೆ ಓಡಿಹೋಗುವಾಗ ಅಥವಾ ಬೇರೇನಾದರೂ ಮಾಡುವಾಗ ಯಾವ ನಿಬಂಧನೆಗಳೂ ಇಲ್ಲ. ಇದೆಲ್ಲ ನಿಮಗೆ ಗೊತ್ತಿಲ್ಲದ್ದಾ?” ಅಮ್ಮನು ಅಪ್ಪನನಲ್ಲಿ ಹೇಳುತ್ತಿರುವುದು ಕೇಳಿಸಿತು.
“ನಾನು ಸಿಟ್ಟಿನಿಂದ ಹೇಳಿದ್ದಲ್ಲ. ನಿಮ್ಮ ಮೇಲೆ ನನಗಿರುವ ಕಾಳಜಿಯನ್ನು ನೀವು ಅರ್ಥ ಮಾಡಿಕೊಳ್ಳೋದಿಲ್ಲ. ಮಗನಿಗೆ ಉದ್ಯೋಗ ಸಿಗುವುದಕ್ಕಾಗಿ ನಾನು ಪೇಚಾಡಿಲ್ವಾ? ಎಷ್ಟು ಹುಡುಕಿದರೂ ಅವನಿಗೆ ಕನ್ಯೆ ಸಿಗದಿದ್ದಾಗ ದುರ್ಗಾಪೂಜೆ, ಬಾಲಗಣಪತಿ ಹವನ, ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಿಲ್ವಾ? ಪ್ರಾರ್ಥನೆ ಸಲ್ಲಿಸಿಲ್ವಾ? ನನ್ನ ಮಗ ಸರಳ ಹುಡುಗ. ಪ್ರಾಯದ ಮದದಲ್ಲಿ ನಮ್ಮನ್ನು ತುಚ್ಛವಾಗಿ ನೋಡುವವನಲ್ಲ. ಆದರೆ ಈ ಕಾಲದಲ್ಲಿ ಇಷ್ಟು ಸರಳವಾಗಿದ್ರೆ ಅವನನ್ನು ಯಾರೂ ಮೂಸೋದಿಲ್ಲ. ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲಿ ಅಂದ್ಕೊಂಡು ಏನಾದರೂ ಹೇಳಿದ್ರೆ ಅದನ್ನು ಋಣಾತ್ಮಕವಾಗಿ ಮಾತ್ರ ಕಾಣೋದೇಕೆ?” ಅಪ್ಪನ ದನಿ ಶಾಂತವಾಗಿತ್ತು.
ನಂತರ ಯಾರೋ ಅವನಿಗೆ ವಿನಯಳ ಜಾತಕವನ್ನು ತಂದರು. ಅವಳಿಗೆ ಕವಿತೆಗಳು ಇಷ್ಟವಾಗುತ್ತವೆ ಎಂದು ತಿಳಿದಾಗ ಸುಧೀರ ಆಕೆಯ ಮುಖದ ಮೇಲಿನಿಂದ ಕಣ್ಣುಗಳನ್ನೇ ತೆಗೆಯಲಿಲ್ಲ. ನಂತರ ಆಕೆ ಮೆಲ್ಲಗೆ ತನ್ನ ಕೈಚೀಲದಿಂದ ಬಿಡಿಸಿ ತೆಗೆದು ಓದಿ ಹೇಳಿದಳು. ನಂತರ ಸುಧೀರ ಆ ಕಾಗದವನ್ನು ಬೇಡಿ ಪಡೆದುಕೊಂಡ. ಹೂವಿನ ಎಸಳುಗಳನ್ನು ಸವರುವಂತೆ ಕೈಯಾಡಿಸುತ್ತ ಸಾವಕಾಶವಾಗಿ ಓದಿದ. ತಾನು ಮಾಡಲು ಬಯಸುವ ಕೆಲಸಗಳ ಬಗ್ಗೆ ಆಕೆ ಹೇಳಿದಾಗ ಆತ ಸಂತಸದಿಂದ ನಗುತ್ತಾ ಹೇಳಿದ. “ನಿನಗೇನು ಸೇರುತ್ತದೋ ಅದನ್ನು ಮಾಡಲು ನಿನಗೆ ಸ್ವಾತಂತ್ರ್ಯವಿದೆ.”
ವಿನಯಳನ್ನು ಭೇಟಿಯಾಗಿ ಬಂದ ನಂತರ ಅಪ್ಪ ಎಷ್ಟೂ ಕೆದಕಿದರೂ ಸುಧೀರ “ಅವಳ ಕಡೆಯಿಂದ ಅಭಿಪ್ರಾಯ ತಿಳಿದ ಬಳಿಕ ಹೇಳ್ತೇನೆ” ಎಂದಷ್ಟೇ ಹೇಳಿ ತನ್ನ ಮಾತನ್ನು ಮುಗಿಸಿದ.
ವಿನಯಳ ಒಪ್ಪಿಗೆ ತಿಳಿಯುತ್ತಿದ್ದಂತೆ ಅಪ್ಪನ ಜೀವ ಬಾಣಲೆಯಲ್ಲಿ ಬಿದ್ದಂತಾಯಿತು.
“ಎಷ್ಟು ಬೇಗ ಆಗ್ತದೋ ಅಷ್ಟು ಬೇಗ ಮದುವೆ ಮಾಡಿಸಿ ಬಿಡೋಣ. ನಮ್ಮ ಅಂತಸ್ತಿಗೆ ಹೊಂದುವ ಒಳ್ಳೆಯ ಹುಡುಗಿ ಸಿಕ್ಕಿದ್ದಾಳೆ. ಈ ಸಂಬಂಧ ಬಿಡೋದು ಬೇಡ. ಸುದರ್ಶನನದ್ದೇನು ಬಿಡು. ನಂಗೆ ಇವನದ್ದೇ ಚಿಂತೆಯಾಗಿತ್ತು. ಒಪ್ಪಿಗೆಯಾದಲ್ಲಿ ತಂದು ಬಿಡೋದು ಒಳ್ಳೇದು. ಆದಷ್ಟು ಬೇಗನೆ ಹುಡುಗಿಯ ಮನೆಯವರ ಬಳಿ ಮಾತುಕತೆ ನಡೆಸಿ ಮೊದಲ ಮುಹೂರ್ತಕ್ಕೆ ಮುಗಿಸಿ ಬಿಡ್ಬೇಕು. ಆ ವೇಳೆಯಲ್ಲಿ ಸುದರ್ಶನ ಬಂದ್ರೆ ಒಂದೇ ಮಂಟಪದಲ್ಲಿ ಅವನ ಮದುವೆಯನ್ನೂ ಮಾಡ್ಬೇಕು. ಪ್ಲಾಸ್ಟಿಕ್ ಸರ್ಜರಿ ಕಲಿತ ಹುಡುಗಿಯನ್ನು ಅವನಿಗಾಗಿ ನೋಡಿಟ್ಟದ್ದು ಸುಮ್ಮನೆಯಾ? ಅವ ಮಂಗಳೂರಿಗೆ ಬಂದು ಅದೇ ವಿದೇಶೀ ಕಂಪೆನಿಯ ಶಾಖೆಯಲ್ಲಿ ಕೆಲಸ ಮುಂದುವರಿಸ್ತಾನೆ. ಅಲ್ಲಿದ್ದಷ್ಟೇ ಸಂಬಳ ಸಿಗ್ತದೆ. ಹುಡುಗಿಯ ಮನೆಯವರಿಗೆ ಅವರದ್ದೇ ಆಸ್ಪತ್ರೆ ಅಲ್ಲೇ ಇರೋದ್ರಿಂದ ಅವರಿಗೇನೂ ಸಮಸ್ಯೆಯಿಲ್ಲ.”
“ಇಲ್ಲಪ್ಪಾ. ಅಷ್ಟು ಹೊತ್ತಿಗೆ ಬರಲು ಸಾಧ್ಯವಿಲ್ಲ. ನೀವು ತಮ್ಮನ ಮದುವೆ ಮುಗಿಸಿ.”
ಕೆಲವೇ ಪದಗಳನ್ನು ಹೇಳಿ ಫೋನ್ ಇಟ್ಟುಬಿಟ್ಟಿದ್ದ ಸುದರ್ಶನ.
“ಯಾರು ಏನೇ ಹೇಳಲಿ. ವಿನಯಳಿಗೆ ನಾನು ಬಹಳ ಹಿಡಿಸಿದ್ದೇನೆ. ನನ್ನ ಬದುಕಿನಲ್ಲಿ ವಸಂತಕಾಲ ಅರಳುತ್ತಿದೆ.”
ಮುಂದಿಟ್ಟುಕೊಂಡಿದ್ದ ಪುಸ್ತಕದ ಪುಟಗಳ ಮೇಲೆ ಸುಧೀರನ ಕಣ್ಣು ಹೊರಳುತ್ತಿದ್ದರೂ ಅದರಲ್ಲಿ ನಗುಮೊಗದ ವಿನಯ ಓರೆಕಣ್ಣಿನಿಂದ ನೋಡುತ್ತಾ, ನಾಚಿ ತಲೆತಗ್ಗಿಸುತ್ತಾ ಇದ್ದಳು.
“ನೋಡಿ ನಿಮಗೆ ಫೋನು”
ಗ್ರಂಥಾಲಯದ ಸಿಬ್ಬಂದಿ ಎರಡು ಸಲ ಹೇಳಿದಾಗಲೇ ತನ್ನ ಜೇಬಿನೊಳಗಿನ ಮೊಬೈಲ್ ಮೌನವಾಗಿ ಮಿಡಿಯುತ್ತಿರುವುದು ಅವನ ಗಮನಕ್ಕೆ ಬಂದದ್ದು. ಅಪ್ಪನೇ ಆಗಿರಬಹುದು ಎಂದುಕೊಂಡು ಕಿವಿಗಿಟ್ಟಾಗ ಕೇಳಿಬಂದದ್ದು ಅಮ್ಮನ ದನಿ.
“ಮಗಾ. ಬೇಗ ಬಾ.”
ಆಕೆಯ ದನಿಯಲ್ಲಿ ಆತುರವಿತ್ತು.
“ಏನಮ್ಮ? ಏನಾಯ್ತು?”
“ಮೀಟಿಂಗಿಗೆಂದು ಹೋದ ನಿನ್ನಪ್ಪ ಕುಸಿದು ಬಿದ್ರು. ಪಂಚಾಯತಿನಲ್ಲಿದ್ದವರು ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಸ್ಟ್ರೇನ್ ಆಗಿದೆ ಅಂತ ಡಾಕ್ಟರು ಮಾತ್ರೆ ಕೊಟ್ಟು ಕಳಿಸಿದ್ರು. ಮನೆಗೆ ಮುಟ್ಟಿದಾಗ ‘ನಂಗೇನೋ ಆಗ್ತಿದೆ’ ಅಂತ ಮಲಗಲು ಹೊರಟರು. ಹಾಸಿಗೆ ಮುಟ್ಟುವಷ್ಟರಲ್ಲಿ…”
“ಅಮ್ಮಾ ನಾನೀಗಲೇ ಬರ್ತೇನೆ.”
ಆಟೋರಿಕ್ಷಾದಿಂದ ಇಳಿದ ಸುಧೀರನು ಆಸ್ಪತ್ರೆಯ ಕೋಣೆಯೊಳಗೆ ಬರುತ್ತಿದ್ದಂತೆ ಮಂಚದಲ್ಲಿ ಮಲಗಿದ್ದ ಅಪ್ಪನ ಕಣ್ಣುಗಳು ಅಸಹಾಯಕವಾಗಿ ಹೊರಳಿದವು. ಕುರ್ಚಿಯಲ್ಲಿ ಹತಾಶಳಾಗಿ ಕುಳಿತ ಅಮ್ಮನೆಡೆಗೆ ನೋಡಿದ ಸುಧೀರ ಆಕೆಯೆಡೆಗೆ ನಡೆದು ಅವಳ ಕೈಯಲ್ಲಿ ಕೈಯಿಟ್ಟ.
“ಮಗಾ!”
ಆ ಒಂದು ಕ್ಷಣದಲ್ಲಿ ಸುಧೀರನಿಗೆ ಒಮ್ಮೆಲೆ ಬಲ ಬಂದಂತಾಯಿತು.
“ಅಮ್ಮಾ ಹೆದರಬೇಡ.”
ಅವನು ತನ್ನ ಅಕ್ಕನಿಗೆ ದೂರವಾಣಿಯ ಮೂಲಕ ಎಲ್ಲವನ್ನೂ ವಿವರಿಸಿದ. ಡಾಕ್ಟರನ್ನು ಭೇಟಿಯಾಗಿ ಚಿಕಿತ್ಸೆಯ ಕುರಿತು ಚರ್ಚಿಸಿ ಮದ್ದುಗಳನ್ನು ತರಿಸಿದ.
ಅಕ್ಕನನ್ನು ಆಸ್ಪತ್ರೆಗೆ ಕರೆತಂದು ಬಾವ ಮನೆಗೆ ಬಂದಾಗ ಅವನು ಕಂಡ ದೃಶ್ಯ ಬೇರೆಯೇ ಆಗಿತ್ತು. ಒಳಹೊರಗಿನ ಕೆಲಸಗಳನ್ನೆಲ್ಲ ಸುಧೀರನೇ ನೋಡಿಕೊಳ್ಳುತ್ತಿದ್ದ. ಬೆಳಗ್ಗೆ ಎದ್ದು ದನಕರುಗಳಿಗೆ ಅಕ್ಕಚ್ಚು ಕೊಟ್ಟು, ಅನ್ನ-ತಿಂಡಿ ಬೇಯಲು ಇಟ್ಟು, ತೋಟ ಹಿತ್ತಿಲುಗಳಿಗೆ ನೀರು ಹಾಯಿಸಿ, ಅಡಿಕೆ, ತೆಂಗಿನಕಾಯಿ ಮತ್ತು ಸೋಗೆಗಳನ್ನು ಹೆಕ್ಕಿ ತಂದು, ಬುತ್ತಿ ಮಾಡಿ ಆಸ್ಪತ್ರೆಗೆ ಕೊಂಡೊಯ್ದು, ಬಿಡುವಿನ ವೇಳೆಯಲ್ಲಿ ಅಲ್ಲೇ ಕುಳಿತು ಪಿ.ಎಸ್.ಸಿ ಪರೀಕ್ಷೆಗೆ ತಯಾರಿಯನ್ನು ಮಾಡುತ್ತಿದ್ದ. ಇದನ್ನೆಲ್ಲ ಕಂಡು ಬಾವ ಹೇಳಿದ.
“ಅತ್ತೆ, ಸುಧೀರನ ಪರೀಕ್ಷೆ ಮುಗಿಯುವವರೆಗೂ ನಾನಿಲ್ಲಿ ಇರುತ್ತೇನೆ. ಮನೆವಾರ್ತೆಯ ಬಗ್ಗೆ ಚಿಂತೆ ಬೇಡ. ಅಷ್ಟು ಹೊತ್ತಿಗೆ ಮಾವನಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು.”
ಮುಂದೇನು ಮಾಡಬೇಕೆಂಬುದನ್ನು ಅಮ್ಮನೇ ಸೂಚಿಸಿದಳು. “ಸುಧೀರನಲ್ಲಿ ವಿಚಾರಿಸಿ ನಿರ್ಧರಿಸಿ.”
ಸುಧೀರ ನಕ್ಕು ತಲೆ ಅಲ್ಲಾಡಿಸಿದ.
ಸುದರ್ಶನ ದಿನ ಬಿಟ್ಟು ದಿನ ಫೋನ್ ಮಾಡುತ್ತಿದ್ದ. “ಸುಧಾ ಮತ್ತು ಸಂತೋಷ ಅಲ್ಲಿದ್ದಾರಲ್ಲ. ಅವರು ನೋಡಿಕೊಳ್ತಾರೆ. ನಾನು ಸ್ವಲ್ಪ ಸಾವಕಾಶವಾಗಿ ಬರುತ್ತೇನೆ” ಎಂದಾಗ ಸುಧೀರ ಮುಗುಳುನಗುತ್ತಲೇ ಹೇಳಿದ. “ಅವರಿದ್ದಾರೆ ನಿಜ. ನೀನು ಅಪ್ಪನ ನೆಚ್ಚಿನ ಮಗ. ಎಲ್ಲರಿಗೂ ನಿನ್ನ ಮೇಲೆ ಬಹಳ ವಿಶ್ವಾಸ. ಡಾಕ್ಟರಿದ್ದರೂ ನೀನೇ ಅವರಿಗಿಂತ ಚೆನ್ನಾಗಿ ನೋಡಿಕೊಳ್ಳುವೆ ಎಂದು ನಮಗೆನಿಸುತ್ತದೆ. ಆದಷ್ಟು ಬೇಗ ಬಂದರೆ ಅಪ್ಪ-ಅಮ್ಮನಿಗೆ ನೆಮ್ಮದಿಯೆನಿಸುವುದು.”
ಅಪ್ಪನ ಎಡಭಾಗ ಇನ್ನೂ ಸಂವೇದನಶೂನ್ಯವಾಗಿತ್ತು. ಮೇಲಿಂದ ಮೇಲೆ ಸನ್ನೆ ಮಾಡಿ, ಸುದರ್ಶನನ ಬಗ್ಗೆ ವಿಚಾರಿಸುತ್ತಿದ್ದರು. ದುಃಖದಲ್ಲಿದ್ದರೂ ತುಟಿಗಳನ್ನು ಅಲುಗಿಸುತ್ತಾ ಅವನ ಹೆಸರಿನ ಜಪವನ್ನು ಮಾಡುತ್ತಿದ್ದಾರೋ ಎನಿಸುತ್ತಿತ್ತು.
ವಿನಯಳಿಂದ ವಾಟ್ಸಾಪ್ ಸಂದೇಶ ಬಂದಿತು. “ನಿಮಗನಿಸಿದರೆ ‘ಈಗಲೇ ಬಾ’ ಎಂದು ನನಗೆ ಫೋನ್ ಮಾಡಿ. ನಾನು ಓಡಿ ಬರುವೆ. ಬರಬೇಕೆಂದು ಈಗಲೂ ಅನಿಸುತ್ತದೆ. ಆದರೆ ಮದುವೆಯಾಗುವ ಮೊದಲು ಹೀಗೆ ಭೇಟಿಯಾಗುವುದು ಒಂಥರ ಇರಿಸುಮುರಿಸು ಉಂಟುಮಾಡುತ್ತದೆ.”
ಸುಧೀರನ ಪರೀಕ್ಷೆ ಆರಂಭವಾಗುವ ಮೊದಲ ದಿನ ಅಪ್ಪನನ್ನು ಮನೆಗೆ ಕರೆತರಲಾಯಿತು. ಅವರ ಪಕ್ಕದಲ್ಲೇ ಇದ್ದು ಮನೆಯ ಕೆಲಸಗಳನ್ನು ಶಾಂತವಾಗಿ ನಿರ್ವಹಿಸುತ್ತಿರುವ ಸುಧೀರನ ರೂಪ ಬೇರೆಯದೇ ಆಗಿ ಕಾಣುತ್ತಿತ್ತು. ಅವನ ಪರೀಕ್ಷೆ ಮುಗಿಯುತ್ತಿದ್ದಂತೆ ಸುದರ್ಶನ ಅಮೇರಿಕದಿಂದ ಬಂದಿಳಿದ. ಅವನ ಜೊತೆಯಲ್ಲಿದ್ದ ವಿದೇಶಿ ಹೆಂಗಸನ್ನು ನೋಡಿ ಸುಧೀರನನ್ನು ಬಿಟ್ಟು ಎಲ್ಲರೂ ದಂಗಾದರು.
“ಅಪ್ಪ, ಅಮ್ಮಾ ಸಿಟ್ಟಿಗೇಳಬೇಡಿ. ನಿಮಗೆ ಹೇಳಬೇಕೆಂದುಕೊಂಡಿದ್ದೆ. ಅಷ್ಟರಲ್ಲಿ ಸುಧೀರನಿಗೆ ಮದುವೆ ನಿಶ್ಚಯವಾಗುತ್ತಿದೆ ಅಂತ ಗೊತ್ತಾಯ್ತು. ಅವನ ಮದುವೆಗೆ ಅಡ್ಡಿಯಾಗಬಾರದೆಂದು, ಎಲ್ಲವೂ ಚೆನ್ನಾಗಿ ನಡೆಯಬೇಕೆಂದುಕೊಂಡು ನಿಮ್ಮನ್ನು ಕತ್ತಲೆಯಲ್ಲಿಟ್ಟೆ. ಸುಧೀರನಿಗೆಲ್ಲವೂ ಗೊತ್ತು. ನಿಮ್ಮಲ್ಲಿ ಹೇಳಬೇಡಿ ಅಂತ ಅವನಲ್ಲಿ ಹೇಳಿದ್ದು ನಾನೇ.”
ಅಪ್ಪ ಸುಮ್ಮನೇ ಗೋಣು ಅಲ್ಲಾಡಿಸುತ್ತಿದ್ದರು. ಅವರ ಎಡಗಣ್ಣಿನಿಂದ ನೀರು ಸುರಿಯುತ್ತಿತ್ತು.
“ಅಪ್ಪಾ, ಇವಳು ಕ್ಯಾಥರೀನ್. ನನ್ನ ಆಫೀಸಿನ ಪಕ್ಕ ಇವಳ ತಂದೆಗೆ ದೊಡ್ಡ ರೆಸ್ಟೊರೆಂಟ್‍ಗಳಿವೆ. ಶಿಕ್ಷಣ ಅಷ್ಟೇನು ಇಲ್ಲದಿದ್ದರೂ ಬಹಳ ಶ್ರೀಮಂತಳಾಗಿದ್ದಾಳೆ. ಮನೆಗೆಲಸ, ಅಡುಗೆ, ಮಕ್ಕಳನ್ನು ಬೆಳೆಸುವುದೆಂದರೆ ಇವಳಿಗೆ ತುಂಬಾ ಇಷ್ಟ. ಆದ್ದರಿಂದ ನನ್ನ ಕೆರಿಯರ್ ಮುಂದುವರಿಸಲು ತೊಂದರೆಯಾಗೋದಿಲ್ಲ. ದೇಶ ದೇಶಗಳ ನಡುವಿನ ಡೀಲ್ ಮತ್ತು ಟೆಂಡರುಗಳನ್ನು ಕುದುರಿಸಿ ಕೊಡುತ್ತಿರುವುದೂ ಇವಳೇ. ಇವೆಲ್ಲ ವಿಚಾರ ಮಾಡಿ ನಾನಿವಳನ್ನು ಮದುವೆಯಾದೆ.”
ಅಮ್ಮ ತಕ್ಷಣವೇ ಮುಖವನ್ನು ಮೇಲೆ ಮಾಡಿದಳು. ಆಗ ಸುಧೀರನು ‘ಸುಮ್ಮನಿರು’ ಎಂಬಂತೆ ಸನ್ನೆ ಮಾಡಿ ಅವಳ ಪಕ್ಕದಲ್ಲಿ ನಿಂತುಕೊಂಡ.
“ಇವಳನ್ನು ಕರ್ಕೊಂಡು ಬರಬೇಕಾಗಿರಲಿಲ್ಲ. ಆದರೆ ಇವಳಿಗೆ ನನ್ನ ಊರನ್ನು ನೋಡುವ ಆಸೆ. ನಿಮ್ಮ ಆರೋಗ್ಯ ಇಷ್ಟು ಕೆಟ್ಟಿದೆಯಲ್ಲ. ಇಂಥ ಪರಿಸ್ಥಿತಿಯಲ್ಲಿ ಇವಳಿಗೆ ಇಲ್ಲಿ ಸರಿಯಾಗುತ್ತದೋ ಇಲ್ವೋ?”
ಸುದರ್ಶನನ ಒಂದೊಂದು ವಾಕ್ಯವೂ ಅಪ್ಪನ ಕಿವಿಗೆ ಬೀಳುತ್ತಿತ್ತು. ತಲೆಯಲ್ಲಿ ಕುದಿಯುತ್ತಿರುವ ಪಾತ್ರೆ ಒಡೆಯುತ್ತದೆಯೋ ಎಂದೆನಿಸುತ್ತಿತ್ತು. ಈತನ ಸಲುವಾಗಿ ನೋಡಿಟ್ಟ ಹುಡುಗಿ, ಮಾಡಿಟ್ಟ ತಾಳಿ, ತಂದಿಟ್ಟ ಬಟ್ಟೆಬರೆಗಳು…
ಅಮ್ಮ ಏನೂ ಮಾತನಾಡದೆ ಹಾಸಿದ ಬಟ್ಟೆಗಳನ್ನು ಸರಿಪಡಿಸುತ್ತಾ ಕುಳಿತಳು. ಬಿಗಿದ ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಸುಧೀರ ಮಾತನಾಡಿದ. “ಅಕ್ಕ-ಬಾವ ಬೆಂಗಳೂರಿಗೆ ಹೋಗ್ತಾರೆ. ನೀನೆಷ್ಟು ದಿನ ಇಲ್ಲಿರುತ್ತೀ?”
“ಎಂಟು ದಿನ.”
“ಅಣ್ಣಾ, ತಂದೆ ತಾಯಿಯರಿಗೆ ನಿನ್ನ ಅಗತ್ಯವಿದೆ. ನನಗೆ ಎಷ್ಟು ಸಾಧ್ಯವೋ ಅಷ್ಟು ಸಂಭಾಳಿಸುತ್ತಿದ್ದೇನೆ. ಆದರೆ ನನಗೂ ಓಡಾಟ ಹೆಚ್ಚಾಗುತ್ತದೆ. ಅಪ್ಪ ಸ್ವಲ್ಪ ಅಡ್ಡಾಡುವವರೆಗೂ ನೀನು ಇರುವಂತಾದರೆ ಅವರಿಗೆ ಮಾನಸಿಕ ಆಧಾರ ಸಿಗಬಹುದು. ಅಮ್ಮ ಏನನ್ನೂ ತೋರಿಸಿಕೊಳ್ಳೋದಿಲ್ಲ. ಅದರೆ ಆಕೆ ತೆಗೆದುಕೊಳ್ಳುವ ಬಿ. ಪಿ. ಮತ್ತು ಡಯಾಬಟೀಸ್ ಗುಳಿಗೆಗಳ ಪ್ರಮಾಣ ಜಾಸ್ತಿಯಾಗಿದೆ.”
“ಎಂಥ ಆಧಾರ? ಮನೆಗೆಲಸಕ್ಕೆ ನಾಣಿಯನ್ನು ಬರಹೇಳು. ಊಟವನ್ನು ಹೋಟೆಲಿನಿಂದ ತರಿಸು. ಮಾರ್ಚ್ ತಿಂಗಳು ಕಳೆದಿದೆ. ಇನ್ನು ನಿನಗೆ ಶಾಲೆಗೆ ಹೋಗಿ ಬರುವ ಕೆಲಸ ಮಾತ್ರ. ಆದರೆ ನನಗೆ ಹಲವು ದೇಶಗಳ ಕಾಂಟ್ರಾಕ್ಟ್ ಸಿಗೋದಕ್ಕಿದೆ. ಕ್ಯಾಥರಿನ್ ಒಬ್ಬಳಿಗೆ ಅದನ್ನು ನೋಡಿಕೊಳ್ಳಲಾಗೋದಿಲ್ಲ. ಆದ್ದರಿಂದ ಎಂಟು ಹತ್ತು ದಿನ ಇಲ್ಲಿರಬಹುದು ಎಂದಿದ್ದಾಳೆ.”
“ಅಣ್ಣಾ ಪ್ಲೀಸ್, ನನ್ನದೂ ಮದುವೆ ನಿಶ್ಚಯವಾಗೋದಿದೆ. ಅಕ್ಕನಿಗೆ ಚಿಕ್ಕ ಮಗುವಿರೋದ್ರಿಂದ ಅವಳು ಅಷ್ಟು ಬಿಡುವಾಗಿಲ್ಲ.”
“ಮದುವೆಯದ್ದೇನು ನಿಶ್ಚೈಸೋದು? ಸ್ವಲ್ಪ ದಿನ ತಡೆ. ರಿಜಿಸ್ಟರ್ ಮಾಡ್ಕೊಂಡು ಬಿಡು. ನೀನಿನ್ನೂ ಔತಣ, ಬಟ್ಟೆ, ಆಭರಣಗಳ ಗುಂಗಲ್ಲೇ ಇದ್ದೀಯಾ. ಏನೇ ಇದ್ರೂ ನನಗೆ ಹತ್ತು ದಿನಗಳಿಗಿಂತ ಹೆಚ್ಚು ನಿಲ್ಲಲಾಗೋದಿಲ್ಲ. ಒಂದೆರಡು ತಾಸಿನ ಕೆಲಸಕ್ಕೆ ನೌಕರರನ್ನಿಟ್ಟು ಸರಿದೂಗಿಸಬಹುದು. ನಾನು ಹಣ ಕಳುಹಿಸುವೆ.”
ಸುಧೀರನ ಗಮನ ಅಪ್ಪನತ್ತ ಹರಿಯಿತು. ಅವರ ಶರೀರ ನಡುಗತೊಡಗಿತ್ತು.
“ಸಾಕು ನಿಲ್ಲಿಸಿ.” ಅಮ್ಮ ಮಾತನಾಡಿದಳು. “ನನಗೆ ನಿಮ್ಮೆಲ್ಲರ ಬಳಿ ಮಾತನಾಡುವುದಕ್ಕಿದೆ. ಇವತ್ತು ರಾತ್ರಿ ಸುದರ್ಶನ, ಮಗಳು, ಅಳಿಯ ಎಲ್ಲರೂ ಹೋಗ್ತಾರಲ್ಲ. ಆದ್ದರಿಂದ ಈಗಲೇ ಕೆಲವು ವಿಚಾರಗಳನ್ನು ಹೇಳಿ ಮುಗಿಸಬೇಕಾಗಿದೆ. ನಿಮ್ಮಪ್ಪನ್ನು ಈ ಆಸ್ಪತ್ರೆಗೆ ಸೇರಿಸಿ ಕೆಲವು ದಿನಗಳಾದ ಬಳಿಕ ಸುಧೀರ ಫೋನಿನಲ್ಲಿ ಮಾತಾಡುತ್ತಿರೋದು ಕೇಳಿಸಿತು- ಪರೀಕ್ಷೆ ಆದ ತಕ್ಷಣ ಮದುವೆ ಮಾಡಿಸಬೇಕೆಂಬ ಉದ್ದೇಶ ನಿನ್ನ ತಂದೆತಾಯಿಯರಿಗೂ ಇತ್ತು. ಆದರೆ ನನ್ನಪ್ಪನಿಗೆ ಈಗ ಆರಾಮವಿಲ್ಲ. ಅವರು ಚೇತರಿಸಿಕೊಳ್ಳುವರೆಂಬ ನಂಬಿಕೆ ನನಗಿದೆ. ಅವರು ಗುಣಮುಖರಾಗಿ ಎದ್ದು ನಡೆದಾಡುವವರೆಗೆ ನಾನು ಮದುವೆಯಾಗುವುದು ಸರಿಯಲ್ಲ. ಸದ್ಯದ ಪರಿಸ್ಥಿತಿ ಹೀಗಿರುವುದರಿಂದ ನಾನು ನಿನ್ನನ್ನು ಮದುವೆಯಾಗುವುದು, ಒಳಗಡಿಯಿಟ್ಟ ಗಳಿಗೆಯಲ್ಲೇ ನಿನ್ನ ತಲೆಗೆ ಕಷ್ಟವನ್ನು ಹಾಕುವುದು ಸರಿಯಲ್ಲ. ನಿನ್ನ ಮನಸ್ಸಿಗೆ ಸರಿ ಬರುವಂಥ ಹುಡುಗನನ್ನು ನೋಡಿ ನಿನ್ನ ದಾರಿಯನ್ನು ಕಂಡುಕೋ ವಿನಯಾ. ನಿನಗೆ ಶುಭವಾಗಲಿ.”
“ಅಮ್ಮಾ ಸಾಕು” ಸುಧೀರನ ಬಾಯಿಯಿಂದ ಶಬ್ದ ಹೊರ ಬಂದಿತು. “ಆರು ತಿಂಗಳವರೆಗೆ ಅಪ್ಪ ಮತ್ತು ನಿನ್ನನ್ನು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಚಿಂತಿಸಬೇಕೆನಿಸುತ್ತಿಲ್ಲ. ಅಕ್ಕ-ಬಾವನಿಗೂ ಬೆಂಗಳೂರಿಗೆ ಹೋಗದೆ ನಿರ್ವಾಹವಿಲ್ಲ. ಹೀಗಿರುವಾಗ ವಿನಯಳನ್ನು ಕರೆತಂದು ಅವಳಿಗೂ ಕಷ್ಟ ಕೊಡಲು ಇಷ್ಟವಿಲ್ಲ. ನಾನು ವಿನಯಳನ್ನು ಪ್ರೀತಿಸುತ್ತೇನೆ. ಆದರೆ ಅವಳಿಲ್ಲದೆ ನನಗೆ ಬದುಕುವುದಕ್ಕೇ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಸಿಕ್ಕಿ ಹಾಕಿಕೊಂಡಿಲ್ಲ. ಅವಳ ಹಾದಿಯಲ್ಲಿ ಮುಳ್ಳಾಗಿರೋದಕ್ಕೆ ನನಗೇನು ಅಧಿಕಾರವಿದೆ?” ಎನ್ನುತ್ತಿದ್ದಂತೆ ಅವನ ಕೊರಳು ಕಟ್ಟಿದಂತಾಗಿ ದನಿ ಇಂಗಿ ಹೋಯಿತು. ಆದರೂ ತನ್ನನ್ನು ಹತೋಟಿಯಲ್ಲಿಟ್ಟುಕೊಂಡು ಅಪ್ಪನ ಹತ್ತಿರ ಹೋಗಿ ಕುಳಿತು ಬಟ್ಟೆಯಿಂದ ಅವರ ಮೈ ಒರೆಸುತ್ತಾ ಹೇಳಿದ. “ಹೆದರಬೇಡಿ ಅಪ್ಪಾ. ನೀವು ಬೇಗನೆ ಗುಣಮುಖರಾಗಿ. ಬಳಿಕ ನನ್ನ ಮದುವೆಯನ್ನು ನಿಮಗೆ ಬೇಕಾದಂತೆ ಮಾಡಿ. ಈಗ ನೀವು ಸ್ವಲ್ಪ ಶಾಂತರಾಗಿ.”
ಅಪ್ಪನು ಅವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅವರ ಕಣ್ಣುಗಳಲ್ಲಿ ನಿರಾಶೆ ಎದ್ದು ಕಾಣಿಸುತ್ತಿತ್ತು. ಸುಧೀರನ ಕೈಯನ್ನು ತನ್ನ ಬಲಗೈಯಿಂದ ಮುಖದ ಮೇಲೆ ಮೆಲ್ಲಗೆ ಉಜ್ಜುತ್ತಾ ಸ್ಪರ್ಶದ ಮೂಲಕ ಕ್ಷಮೆಯನ್ನು ಬೇಡಿದರು.
“ನನ್ನ ಮಾತು ಕೇಳು. ವಿನಯ ಏನೆಂದಳು ಹೇಳು.” ಅಮ್ಮ ಪ್ರಶ್ನಿಸಿದಳು.
“ಅವಳ ಅಪ್ಪನಿಗೆ ಆಕೆಯ ತೀರ್ಮಾನ ಹಿಡಿಸಲಿಲ್ಲವಂತೆ. ಆದರೆ ಅವಳು ತನ್ನ ನಿರ್ಣಯಕ್ಕೆ ಬದ್ಧಳಾಗಿದ್ದಾಳೆ. ‘ಆರು ತಿಂಗಳಲ್ಲಿ ನಿಮ್ಮ ತಂದೆಗೆ ಎದ್ದು ನಡೆಯಲಾಗದಿದ್ದರೆ ಇಲ್ಲಿನ ತೋರಣಕಟ್ಟೆ ಆಸ್ಪತ್ರೆ ಮತ್ತು ಪ್ರಕೃತಿಯ ಸಹವಾಸದಲ್ಲಿ ಅವರು ಬೇಗನೆ ಗುಣಮುಖರಾಗುವರು’ ಎಂದಳು.”
ಅಮ್ಮನು ಸುಧೀರನನ್ನು ಹತ್ತಿರಕ್ಕೆ ಕರೆದುಕೊಂಡು ಅಕ್ಕರೆಯಿಂದ ಹೇಳಿದಳು. “ನನ್ನ ಮಗನೇ, ನೀನು ಫೋನ್ ಮೂಲಕ ಅವಳಲ್ಲಿ ಆಡಿದ ಮಾತುಗಳನ್ನು ಸ್ವಲ್ಪ ದೂರ ನಿಂತು ಕೇಳಿಸಿಕೊಂಡಿದ್ದೆ. ತುಂಬಾ ಸಂತಸಪಟ್ಟೆ. ಬಳಿಕ ವಿಚಾರ ಮಾಡಿದೆ. ವಿನಯಳ ತಂದೆತಾಯಿಯರೊಂದಿಗೆ ಫೋನಲ್ಲಿ ಮಾತನಾಡಿದೆ. ನಿನ್ನ ಸಲುವಾಗಿ ಕಾಯಲು ಅವಳು ಒಪ್ಪಿಕೊಂಡಿದ್ದಾಳೆ.”
“ಅಮ್ಮಾ”
“ಕ್ಷಮಿಸು ಮಗಾ, ನಿನ್ನ ಮನಸ್ಸಿಗೆ ನೋವಾಗುವಂಥದ್ದೇನಾದರೂ ಹೇಳಬಹುದೆಂದುಕೊಂಡು ನಾನು ನಿನ್ನ ಮಾತುಗಳಿಗೆ ಕಿವಿಗೊಟ್ಟೆ. ಸುಧೀ, ನನಗೆ ನಿನ್ನ ಮೇಲೆ ಅಭಿಮಾನವೆನಿಸುತ್ತದೆ. ಬದುಕಿನಲ್ಲಿ ನೀನು ತುಂಬ ಖುಷಿಯಾಗಿರಬಲ್ಲೆ ಮಗಾ.”
ಅಪ್ಪ ಎಲ್ಲವನ್ನೂ ಕೇಳುತ್ತಿದ್ದರು. ಮಾತಿನ ಸಾರಾಂಶ ಅರ್ಥವಾದೊಡನೆ ಅವರ ಕಣ್ಣಿನಿಂದ ಹರಿಯುತ್ತಿದ್ದ ನೀರು ನಿಂತಿತು. ಸುದರ್ಶನನತ್ತ ಕಣ್ಣೆತ್ತಿಯೂ ನೋಡದೆ ಸುಧೀರನತ್ತ ಮುಗುಳುನಗು ಬೀರಿದರು.
*****







