ಮಲೇಷಿಯಾ ಕನ್ನಡ ಸಂಘ

ಜಾಗತಿಕ ಪೌರತ್ವದ ಈ ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದಕ್ಕಾಗಿಯೋ ಅಥವಾ ಉದ್ಯೋಗಕ್ಕಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿ ಕನ್ನಡಿಗರು ವಾಸವಾಗಿದ್ದಾರೆ. ತಾವಿದ್ದ ದೇಶಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಆ ಮೂಲಕ ಕನ್ನಡ ನಾಡು, ಸಂಸೃತಿ, ಸಂಪ್ರದಾಯ, ಭಾಷೆ ಮತ್ತು ಸಮುದಾಯಗಳೊಡನೆ ಸಂಪರ್ಕದಲ್ಲಿರಲು ಅನೇಕ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿ. ಇಂಥ ಕ್ರಿಯಾಶೀಲ ಸಂಘಟನೆಗಳಲ್ಲಿ ಕೌಲಾಲಂಪುರಿನಲ್ಲಿರುವ ಮಲೇಷಿಯಾ ಕನ್ನಡ ಸಂಘವೂ ಒಂದು!

ಕರ್ನಾಟಕ ರಾಜ್ಯೋತ್ಸವ ಆಚರಣೆ

2004 ರಲ್ಲಿ ಜನ್ಮತಳೆದ ಮಲೇಷಿಯಾ ಕನ್ನಡ ಸಂಘ ( ಮ.ಕ.ಸ) ವು ಇದುವರೆಗೆ ನಡೆದು ಬಂದ ದಾರಿ ಗಮನಾರ್ಹವಾಗಿದೆ. ಶುರುವಾತಿನಲ್ಲಿ ಮ.ಕ.ಸವು ಮಲೇಷಿಯಾಕ್ಕೆ ನೌಕರಿಗಾಗಿ ಬರುವ ಕನ್ನಡಿಗರಿಗೆ ಉದ್ಯೋಗಾವಕಾಶ, ವಸತಿ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವುದು ಮತ್ತು ಮುಖ್ಯವಾಗಿ ಮಲೇಷಿಯಾದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡುವುದು – ಈ ಕೆಲವು ಮುಖ್ಯ ಉದ್ದೇಶಗಳನ್ನಿಟ್ಟುಕೊಂಡಿತ್ತು. ಜೊತೆಗೆ ಮಲೇಷಿಯಾದಲ್ಲಿರುವ ಎಲ್ಲ ಕನ್ನಡಿಗರ ಕುಟುಂಬಗಳಿಗೆ ಸರ್ವತೋಮುಖ ಬೆಂಬಲ ಒದಗಿಸಲು ಸಂಘವು ಪ್ರತಿ ವರ್ಷ ರಾಜ್ಯೋತ್ಸವ, ಯುಗಾದಿ ಹಬ್ಬಗಳ ಆಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಣ್ಣ ಪ್ರಮಾಣದಲ್ಲಿ ಆಯೋಜಿಸಲಾಂಭಿಸಿತು. ವರ್ಷದಿಂದ ವರ್ಷಕ್ಕೆ ಮಲೇಷಿಯಾದಲ್ಲಿ ನೆಲೆಸಿರುವ ಕನ್ನಡಿಗರ ಸಂಖ್ಯೆ ಗಣನೀಯವಾದಂತೆ ಮಕ್ಕಳು, ಯುವಕ-ಯುವತಿಯರು ಮತ್ತು ಪ್ರಬುದ್ಧರು -ಹೀಗೆ ಬೇರೆ ಬೇರೆ ವಯೋಮಾನದವರನ್ನು ತಲುಪಲು ಸಾಂಸ್ಕೃತಿಕ ಕಾರ್ಯಕ್ರಮಗಳೊಟ್ಟಿಗೆ ಕ್ರೀಡೆ, ಮನರಂಜನೆ ಮುಂತಾದ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವದು ಅಗತ್ಯವಾಯಿತು. ಅದಕ್ಕನುಗುಣವಾಗಿ 2018ರಿಂದ ಮುಂದಿನ ಎರಡು ವರ್ಷಗಳ ವರೆಗೆ ಮಲೇಷಿಯಾದಲ್ಲಿರುವ ಉತ್ಸಾಹಿ ಯುವ ಕನ್ನಡಿಗರು ಸಂಘದ ವ್ಯಾಪ್ತಿಯನ್ನು ವಿಸ್ತರಿಸುವ ಕೆಲಸದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಆದರೆ 2020 ಮತ್ತು 2021ರಲ್ಲಿ ಮಲೇಷಿಯಾದಾದ್ಯಂತ ಕೊರೊನಾ ನಿರ್ಬಂಧನೆಗಳಿದ್ದುದರಿಂದ ರಾಜ್ಯೋತ್ಸವ,ಯುಗಾದಿ, ನಾಡಹಬ್ಬ ಮೊದಲಾದ ಪ್ರಮುಖ ಆಚರಣೆಗಳನ್ನೂ ಕೂಡ ಆನ್‌ಲೈನಿನಲ್ಲಿ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು.

ಭಾರತದ ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಮತ್ತು ಮಾಜಿ ಹೈಕಮೀಷನರ್ ಶ್ರೀ B.N ರೆಡ್ಡಿಯವರೊಂದಿಗೆ ಮಕಸದ ಸದಸ್ಯರು

ಸಂಘಟನಾ ಸಮಿತಿಯ ಸತತ ಪರಿಶ್ರಮದ ಫಲವಾಗಿ ಮುಂದೆ 2022ರಲ್ಲಿ ” ಹಳೆ ಬೇರು, ಹೊಸ ಚಿಗುರು” ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯೋತ್ಸವವನ್ನು ಆಗಿನ ಭಾರತದ ಹೈಕಮಿಷನರ್ ಶ್ರೀ ಬಿ. ಎನ್ ರೆಡ್ಡಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಉತ್ತಮ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರೊಂದಿಗೆ ಅತ್ಯಂತ ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಪಾರ ಯಶಸ್ಸು, ಗಣ್ಯರ ಪ್ರೋತ್ಸಾಹ, ಎಲ್ಲಕ್ಕಿಂತ ಮುಖ್ಯವಾಗಿ ಮಲೇಷಿಯಾ ಕನ್ನಡಿಗರ ಸಕ್ರಿಯ ಬೆಂಬಲದಿಂದಾಗಿ 2023ರ ಮಾರ್ಚ 30, ರಾಮನವಮಿಯ ಶುಭದಿನದಂದು ಮಲೇಷಿಯಾದ ಬೇರೆ ಬೇರೆ ರಾಜ್ಯಗಳಲ್ಲಿ ವಾಸವಾಗಿರುವ 75ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕುಟುಂಬಗಳ ಸದಸ್ಯತ್ವವನ್ನು ಹೊಂದಿದ್ದ ಮ.ಕ.ಸ ಕ್ಕೆ ಮಲೇಷಿಯಾದಲ್ಲಿ ಅಧಿಕೃತ ನೋಂದಾವಣಿಯ ಸ್ಥಾನಮಾನ ದೊರೆಯಿತು. ಹೀಗೆ ಪೂರ್ಣ ಪ್ರಮಾಣದ ಸಂಘಟನೆಯಾಗಿ ರೂಪುಗೊಂಡ ಮ.ಕ.ಸವು ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಿಂದ ಅನೇಕ ಕಾರ್ಯಾಗಾರಗಳನ್ನು, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಸ್ಕ್ವಾಷ್, ಕ್ರಿಕೆಟ್ ಮತ್ತು ಕೇರಮ್ ಮುಂತಾದ ಪಂದ್ಯಾವಳಿಗಳನ್ನು, ಪರ್ವತಾರೋಹಣ, ಚಾರಣ, ಪಟ್ಟಾಂಗ, ಪ್ರತಿಭಾ ಪ್ರದರ್ಶನ, ಮಕ್ಕಳಿಗಾಗಿ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆ – ಇವೇ ಮುಂತಾದ ವೈವಿಧ್ಯಮಯ ಚಟುವಟಿಕೆಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದೆ.

ಪದಾಧಿಕಾರಿಗಳು

ಉತ್ಕೃಷ್ಟ ಗುಣಮಟ್ಟವುಳ್ಳ, ಸದಭಿರುಚಿಯ ಹೊಸ ಪ್ರಯೋಗಗಳನ್ನು ಕನ್ನಡಿಗರ ಸಮುದಾಯಕ್ಕೆ ಪ್ರಸ್ತುತಪಡಿಸುಲು ಬದ್ಧವಾಗಿರುವ ಮ.ಕ.ಸ ವು 2023ರಲ್ಲಿ ರಾಜ್ಯೋತ್ಸವದ ಆಚರಣೆಗೆ ಆಯ್ದುಕೊಂಡಿದ್ದ ವಿಷಯ – ’ ಜನ್ಮ ಭೂಮಿಯಿಂದ ಕರ್ಮಭೂಮಿಯ ವರೆಗೆ’. ರಾಜಧಾನಿ ಕೌಲಾಲಂಪುರಿನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಖ್ಯಾತ ರಸಪ್ರಶ್ನೆ ಮಾಸ್ಟರ್, ದೂರದರ್ಶನ ನಿರೂಪಕ ಮತ್ತು ಬರಹಗಾರ ಡಾ. ನಾ ಸೋಮೇಶ್ವರ, ಅವರ ಪತ್ನಿ ರುಕುಮಾವತಿ ಹಾಗೂ ಭಾರತದ ಹೈಕಮಿಷನರ್ ಶ್ರೀ ಬಿ.ಎನ್. ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ. ನಾ ಸೋಮೇಶ್ವರರ ಅನೇಕ ಅಮೂಲ್ಯ ಸಲಹೆಗಳನ್ನಳವಡಿಸಿಕೊಂಡು 2024 ರಲ್ಲಿ ಕೌಲಾಲಂಪೂರಿನಲ್ಲಿ ಆಚರಿಸಲಾದ ರಾಜ್ಯೋತ್ಸವಕ್ಕೆ ಖ್ಯಾತ ನಟರಾದ ದತ್ತಣ್ಣ ( ಎಚ್ ಜಿ ದತ್ತಾತ್ರೇಯ) ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ’ನಿಮ್ಮ ಪ್ರತಿಭೆ, ನಮ್ಮ ವೇದಿಕೆ’ ಎಂಬ ಶೀರ್ಷಿಕೆಯಡಿ ಭರತನಾಟ್ಯ, ಅಣಕ, ನೃತ್ಯ- ಸಂಗೀತ ರೂಪಕ, ಗಾಯನ ಇವೇ ಮುಂತಾದ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಮಲೇಷಿಯಾದಲ್ಲಿ ವಾಸವಾಗಿರುವ ಕನ್ನಡಿಗರ ಪ್ರತಿಭೆಗೆ ವೇದಿಕೆಯನ್ನೊದಗಿಸುವುದು ಮುಖ್ಯ ಉದ್ದೇಶವಾಗಿತ್ತು.

ಮ.ಕ.ಸವು ಇದುವರೆಗೆ ಪ್ರಸ್ತುತಪಡಿಸಿರುವ ಕಾರ್ಯಕ್ರಮಗಳ ಉತ್ತಮ ಗುಣಮಟ್ಟ ಮತ್ತು ಅವುಗಳ ಅಚ್ಚುಕಟ್ಟಾದ ನಿರ್ವಹಣೆಯು ಶ್ರೀ ಬಿ.ಎನ್. ರೆಡ್ಡಿಯವರ ಪ್ರಶಂಸೆಯನ್ನು ಗಳಿಸಿದ್ದಷ್ಟೇ ಅಲ್ಲದೆ ಅವರ ಆಮಂತ್ರಣದ ಮೇರೆಗೆ 2024ರಲ್ಲಿ ಕೌಲಾಲಂಪುರಿನಲ್ಲಿರುವ ಭಾರತದ ಹೈಕಮಿಷನ್ನಿನ ಅಧಿಕೃತ ಕಚೇರಿಯಲ್ಲಿ ಆಚರಿಸಲಾದ ಸ್ವಾತಂತ್ರ್ಯ ದಿನಾಚರಣೆಯಂದು ಮ.ಕ.ಸ ದ ಸದಸ್ಯರು ಸಂಸ್ಕೃತ ಮತ್ತು ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರರಾದರು. 2025ರಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಈ ವರ್ಷವೂ ಪ್ರಾಯೋಜಕರ ಸಹಯೋಗದಲ್ಲಿ ರಕ್ತದಾನ ಶಿಬಿರ , ಗಿಡ ನೆಡುವುದು ಮತ್ತು ಉದ್ಯೋಗ ಮೇಳ – ಇವುಗಳೊಂದಿಗೆ ಚಾರಣ, ಪರ್ವತಾರೋಹಣ, ಕ್ರಿಕೆಟ್ ಪಂದ್ಯಾವಳಿ, ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಕ್ರೀಡಾ ದಿನ ( ಭಾರತ ಮತ್ತು ಕರ್ನಾಟಕದ ಸಾಂಪ್ರದಾಯಿಕ ಆಟಗಳು) , ಕರ್ನಾಟಕಾ ಗ್ರಾಂಡ್ ಫೇರ್, ವನಭೋಜನ, ಅಂತಾಕ್ಷರಿ ಮತ್ತು ರಾಜ್ಯೋತ್ಸವದ ಆಚರಣೆ – ಈ ಮುಂತಾದ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳ ರೂಪುರೇಷೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕಿಳಿಸಿದ್ದಾರೆ. ಮ.ಕ.ಸ ವು ತನ್ನ ಚಟುವಟಿಕೆಗಳನ್ನು ಕ್ರೀಡೆ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸದೆ ತನ್ನ ಸುತ್ತಲಿನ ಸಮುದಾಯ ಮತ್ತು ಪರಿಸರದ ಬಗ್ಗೆ ಕಾಳಜಿಯಿರುವ ಜವಾಬ್ದಾರಿಯುತ, ಸರ್ವತೋಮುಖ ಸಂಸ್ಥೆಯಾಗಿ ಬೆಳೆಯುತ್ತಿರುವುದು ಪ್ರಶಂಸನೀಯವಾಗಿದೆ. ಈ ದಿಸೆಯಲ್ಲಿ ಅನೇಕ I.T ಕಂಪನಿಗಳು ಮತ್ತು ಸ್ಥಳೀಯ ರೆಸ್ಟೋರಾಂಟುಗಳು ಮ.ಕ.ಸಕ್ಕೆ ತಮ್ಮ ಪ್ರಾಯೋಜಕತ್ವದ ಮೂಲಕ ಬೆಂಬಲ ನೀಡಿವೆ. ಮ.ಕ.ಸವು ತನ್ನ ಅಧಿಕೃತ ಅಂತರ್ಜಾಲ ತಾಣವನ್ನು ಬಳಸಿಕೊಂಡು ಶೀಘ್ರದಲ್ಲಿ ಕನ್ನಡ ವಾರ್ಷಿಕ ಪತ್ರಿಕೆಯೊಂದನ್ನು ಬಿಡುಗಡೆ ಮಾಡುವ ಮಹತ್ವಾಕಾಂಕ್ಷೆಯನ್ನೂ ಹೊಂದಿದೆ. ಒಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ” ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕರೆಯನ್ನು ಕಾರ್ಯರೂಪಕ್ಕಿಳಿಸುವುದರತ್ತ ಮ.ಕ.ಸವು ಉತ್ಸಾಹದ ಹೆಜ್ಜೆ ಹಾಕಿದೆ.

***

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಲೇಷಿಯಾ ಕನ್ನಡ ಸಂಘ”

  1. ಸುಮಂಗಲಾ ದಾಂಡೇವಾಲೆ

    ಭಾರತದ ಹೊರ ದೇಶದಲ್ಲಿ ಕನ್ನಡದ ಕಂಪು,ಇಂಪು ಪ್ರಸರಿಸುತ್ತಿರುವುದು ತಳಿದು ಸಂತಸವಾಯಿತು. ಹೀಗೆಯೇ ಕನ್ನಡಾಂಬೆಯ ಸೇವೆ ಸುದೀರ್ಘ ಸಮಯದ ವರೆಗೆ ಸಾಗಲಿ ಎಂದು ಹಾರೈಸೋಣ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai