ಸಾಹಿತ್ಯ, ಶುದ್ಧತೆ, ಬದ್ಧತೆ ಇತ್ಯಾದಿ…

ಶಿಕ್ಷಣ, ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಸೇರಿದಂತೆ ಯಾವುದೇ ಬೌದ್ಧಿಕ ಕ್ಷೇತ್ರವಿರಲಿ ಅಲ್ಲಿ ಶುದ್ಧತೆ, ಬದ್ಧತೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯಿರಬೇಕು. ಇಲ್ಲದಿದ್ದರೆ ಏನಾಗುತ್ತದೆ ಮತ್ತು ಏನಾಗಬಹುದು ಎಂಬುದಕ್ಕೆ ಕರ್ನಾಟಕದ ವಿವಿಗಳು, ಕನ್ನಡ ಸಾಹಿತ್ಯ ಲೋಕ ಮತ್ತು ಪತ್ರಿಕೋದ್ಯಮದಲ್ಲಿ ನಡೆಯುತ್ತಿರುವ ಅವಾಂತರಗಳೇ ಸಾಕ್ಷಿ. ಶುದ್ಧತೆ, ಬದ್ಧತೆ, ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ಪುಟಗಟ್ಟಲೇ ಬರೆಯುವ ಮತ್ತು ಗಂಟೆಗಟ್ಟಲೇ ಕೊರೆಯುವ ವಿವಿಗಳ ಪ್ರಾಧ್ಯಾಪಕರು, ಬುದ್ಧಿಜೀವಿಗಳು, ಸರ್ಕಾರಿ ಸಾಹಿತಿಗಳು ಮತ್ತು ಪತ್ರಕರ್ತರಿಗೆ ಇವೆಲ್ಲವುಗಳು ಖಂಡಿತವಾಗಿಯೂ ಇಲ್ಲ. ಅನರ್ಹರೇ ಅರ್ಹತೆಯ ಬಗ್ಗೆ ಮಾತನಾಡುವ ಅವಸರ್ಪಿಣಿ ಕಾಲವಿದು!

ಕರ್ನಾಟಕದ ವಿವಿಗಳ ಕನ್ನಡ ವಿಭಾಗಗಳು :
ಕರ್ನಾಟಕದ ಬಹುತೇಕ ವಿವಿಗಳ ಕನ್ನಡ ವಿಭಾಗಗಳಲ್ಲಿ ಶಿಕ್ಷಣದ ಗುಣಮಟ್ಟ, ಕನ್ನಡ ಪ್ರಜ್ಞೆ ಮತ್ತು ಸಾಹಿತ್ಯ ಪ್ರೀತಿ ಕಾಣೆಯಾಗಿದೆ. ಆರಂಕಿ ಸಂಬಳ ಪಡೆಯುವ ಅಲ್ಲಿರುವ ಪ್ರಾಧ್ಯಾಪಕರಿಗೇ ಇದೆಲ್ಲ ಇರುವುದಿಲ್ಲವೆಂದ ಮೇಲೆ ಕೇವಲ ಡಿಗ್ರಿ ಪಡೆದರಾಯಿತೆಂಬ ಮನಸ್ಥಿತಿಯ ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸಲಾದೀತು? ಜೆ.ಆರ್.ಎಫ್., ಕೆಸೆಟ್, ನೆಟ್ ಮತ್ತು ಪಿಎಚ್ಡಿ ಮಾಡಿದ ಮತ್ತು ಮಾಡುತ್ತಿರುವವರ ಬಗ್ಗೆ ಮಾತನಾಡದಿರುವುದೇ ಒಳಿತು. ಸಂಶೋಧನೆಯೆಂದರೇನೆಂದು ಗೊತ್ತಿಲ್ಲದವರು, ಪುಸ್ತಕಗಳೆಂದರೆ ಅಲರ್ಜಿಯಿರುವವರು, ಸಾಹಿತ್ಯದ ಬಗ್ಗೆ ಪ್ರೀತಿಯಿಲ್ಲದಿರುವವರು ಮತ್ತು ಒಟ್ಟಾರೆ ಅಕ್ಷರ ಶತ್ರುಗಳಂತಿರುವವರು ಪಿಎಚ್ಡಿ ಮಾಡಲು ಬರುತ್ತಿದ್ದಾರೆ. ಕೆಲವರಿಗೆ ಹೆಸರಿನ ಮೊದಲು ಡಾಕ್ಟರ್ ಎಂಬ ಉಪಾಧಿ ಸೇರಿಸಿಕೊಳ್ಳುವ ಹಂಬಲ, ಇನ್ನೂ ಕೆಲವರಿಗೆ ಅದು ನೌಕರಿ ಪಡೆಯಲು ಇರುವ ಟಿಕೆಟಿನಂತಾದರೆ, ಮತ್ತೂ ಕೆಲವರಿಗೆ ಅದು ಬಡ್ತಿ ಪಡೆಯುವ ಸಾಧನವಾಗಿದೆ. ಈ ಪಿಎಚ್ಡಿ ಮಾಡುವ ಪ್ರಭೃತಿಗಳು ಸಂಶೋಧನೆಯೊಂದನ್ನು ಹೊರತು ಪಡಿಸಿ ಉಳಿದ ಉಪದ್ವ್ಯಾಪತನಗಳನ್ನೆಲ್ಲ ತುಂಬ ಅಚ್ಚುಕಟ್ಟಾಗಿ ಮಾಡುತ್ತ ಹಾಯಾಗಿ ಕಾಲ ಕಳೆಯುತ್ತಾರೆ. ಶೇಕಡಾ ಎಂಬತ್ತರಷ್ಟು ಜನರು ಇಂತಹವರೇ ಇದ್ದಾರೆಂಬುದು ಕಹಿಯಾದರೂ ಸತ್ಯ.

ಇನ್ನು ವಿವಿಗಳ ಪ್ರಾಧ್ಯಾಪಕರಿಗಿರುವ ಭ್ರಮೆಗಳನ್ನು ನೋಡಿದರೆ ನಗು ಬರುತ್ತದೆ. ಈ ಮಹಾಶಯರಿಗಿರುವ ಆಸೆ, ಆಕಾಂಕ್ಷೆ, ಹಂಬಲ, ತೆವಲು ನೋಡಿದರೆ ಆಶ್ಚರ್ಯವಾಗುತ್ತದೆ. ಇವರು ತಮ್ಮ ವಿಭಾಗಗಳಲ್ಲಿ ತಮ್ಮ ಸುತ್ತ ಒಂದು ಕೋಟೆ ಕಟ್ಟಿಕೊಂಡಿರುತ್ತಾರೆ. ತಮ್ಮ ಜಾತಿ, ಸಮುದಾಯದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಮತ್ತು ಸಹೋದ್ಯೋಗಿಗಳ ಬಳಗ ಕಟ್ಟಿಕೊಂಡಿರುತ್ತಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಇಂತಿಂತಹ ಜಾತಿ, ಸಮುದಾಯದ, ಇಂತಿಂತಹ ಲೇಖಕ/ಕಿಯರ ಕುರಿತು ಮಾತ್ರ ಸಂಶೋಧನೆ ಮಾಡಬೇಕೆಂದು ಆದೇಶಿಸುತ್ತಾರೆ. ಸಂಶೋಧನಾರ್ಥಿಗಳಿಗೆ ಮಾರ್ಗದರ್ಶಕರಾಗಲು ಕೆಲವರು ಹುಡುಗರ ಜಾತಿ ನೋಡಿದರೆ, ಇನ್ನೂ ಕೆಲವರು ಹುಡುಗಿಯರ ಸೌಂದರ್ಯ ಮಾತ್ರ ನೋಡುತ್ತಾರೆಂಬ ವದಂತಿಯೂ ಇದೆ. ಆಶ್ಚರ್ಯದ ಸಂಗತಿಯೆಂದರೆ ಈ ವದಂತಿಯಲ್ಲಿ ಹುರುಳಿದೆ.

ಇರಲಿ, ಇತ್ತೀಚೆಗಿನ ಸಂಶೋಧನಾ ಪ್ರಬಂಧಗಳ ಶೀರ್ಷಿಕೆ ನೋಡಿದರೇ ನಿರಾಸೆಯಾಗುತ್ತದೆ. ಇನ್ನು ಆ ಸಂಶೋಧನಾ ಪ್ರಬಂಧಗಳನ್ನು ಓದಿದರೆ ಹುಚ್ಚು ಹಿಡಿಯುತ್ತದಷ್ಟೆ! ದ್ವಿತೀಯ ದರ್ಜೆಯ ಲೇಖಕ/ಕಿಯರ ಬದುಕು-ಬರಹ ಮತ್ತು ಸಮಗ್ರ ಕೃತಿಗಳ ಅಧ್ಯಯನ ನಡೆಯುತ್ತಿದೆ. ಈ ಸಂಶೋಧನಾ ಕೃತಿಗಳು ಅಭಿನಂದನ ಗ್ರಂಥಗಳಂತಿರುತ್ತವೆ. ಕರ್ನಾಟಕದ ಒಂದೆರಡು ಪ್ರತಿಷ್ಠಿತ ವಿವಿಗಳಿಂದ ಪಿಎಚ್ಡಿ ಪಡೆದ ಸಂಶೋಧನಾ ಕೃತಿಯ ವೇಷ ಹೊದ್ದ ದ್ವಿತೀಯ ದರ್ಜೆಯ ಲೇಖಕರ ಕುರಿತ ಅಭಿನಂದನ ಗ್ರಂಥಗಳನ್ನು ನೋಡಿ ನಾನು ಮೂಕ ವಿಸ್ಮಿತನಾಗಿದ್ದೇನೆ. ಇರಲಿ, ಕನ್ನಡ ವಿಭಾಗಗಳಲ್ಲಿ ನಡೆಯುವ ಸಂಶೋಧನೆ, ಸಂಶೋಧನಾರ್ಥಿಗಳ ದಡ್ಡತನ ಮತ್ತು ಪ್ರಾಧ್ಯಾಪಕರ ರಂಗೇಲಿ ಆಟಗಳ ಕುರಿತು ಬರೆಯುತ್ತ ಹೋದರೆ ಹಲವು ಸಂಪುಟಗಳೇ ಆಗಬಹುದು!

ಕನ್ನಡದ ಪತ್ರಿಕೆಗಳು :
ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯಕ್ಕೆ ಮೊದಲಿದ್ದ ನಂಟು ಈಗಿಲ್ಲ. ಬಹುತೇಕ ದಿನ, ವಾರ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳ ಗುಣಮಟ್ಟ ತೃಪ್ತಿಕರವಾಗಿಲ್ಲ. ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಿಗೆ ಸಿಗುವಷ್ಟು ಆದ್ಯತೆ ಸಾಹಿತ್ಯಕ್ಕೆ ಸಿಗುತ್ತಿಲ್ಲ. ಸ್ವಜನ ಪಕ್ಷಪಾತ, ಜಾತೀಯತೆ, ಎಡ-ಬಲ ಪಂಥಗಳ ಮೇಲಾಟ, ಸರ್ಕಾರಿ ಮತ್ತು ಕಾರ್ಪೋರೇಟ್ ಸಾಹಿತಿಗಳ ಹಸ್ತಕ್ಷೇಪದಿಂದ ಸಾಹಿತ್ಯ ಪತ್ರಿಕೆಗಳು ಸೊರಗಿವೆ. ಒಂದು ಕಾಲದಲ್ಲಿ ತುಂಬ ಮೇಲ್ಮಟ್ಟದಲ್ಲಿದ್ದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಕರ್ಮವೀರ, ಸುಧಾ, ತರಂಗ, ಕಸ್ತೂರಿ, ಮಯೂರ, ತುಷಾರ ಮುಂತಾದ ಪತ್ರಿಕೆಗಳು ಮೊದಲಿನ ಹಾಗೆ ಉಳಿದಿಲ್ಲ. ಅವುಗಳ ಸಾಹಿತ್ಯಕ ಗುಣಮಟ್ಟ ಗಣನೀಯವಾಗಿ ಕುಸಿದಿದೆ.

ಇನ್ನು ಕಿರು ಸಾಹಿತ್ಯಕ ಪತ್ರಿಕೆಗಳು ಒಂದೊಂದು ಗುಂಪು ಅಥವಾ ಬಣಕ್ಕೆ ಸೀಮಿತವಾಗಿವೆ. ಇಲ್ಲಿರುವಷ್ಟು ಸ್ವಜನ ಪಕ್ಷಪಾತ, ಜಾತೀಯತೆ, ಗುಂಪುಗಾರಿಕೆ ಬೇರೆಲ್ಲೂ ಇಲ್ಲ. ಸಾಹಿತಿಗಳ ವೇಷ ಹೊದ್ದ ರಾಜಕಾರಣಿಗಳು ಎಡ-ಬಲ ರಾಜಕೀಯ ಪಕ್ಷಗಳ ಅಧಿಕೃತ ವಕ್ತಾರರಂತೆ ವರ್ತಿಸುತ್ತಾರೆ. ಅವರ ದರಿದ್ರ ಮನಸ್ಥಿತಿಯ ಚಿಂತನೆ ಮತ್ತು ತುಕ್ಕು ಹಿಡಿದ ಬರವಣಿಗೆ ನೋಡಿದರೆ ಸಾಹಿತ್ಯದ ಮೇಲೇ ಜುಗುಪ್ಸೆ ಉಂಟಾಗುತ್ತದೆ. ಸಂಗಾತ, ಬಹುವಚನ, ಸಮಾಜಮುಖಿ, ಚಿಂತನ ಬಯಲು, ಉತ್ಥಾನ ಸೇರಿದಂತೆ ಬಹುತೇಕ ಎಲ್ಲ ಪತ್ರಿಕೆಗಳ ಗುಣಮಟ್ಟ ಅಷ್ಟಕ್ಕಷ್ಟೇ ಇದೆ. ಇವು ಆರಕ್ಕೇರದ, ಮೂರಕ್ಕಿಳಿಯದ ಒಂದು ಸೀಮಿತ ವರ್ಗದ ಓದುಗ ಮತ್ತು ಬರಹಗಾರರಿಗೆ ಮೀಸಲಾದ ಪತ್ರಿಕೆಗಳಾದ್ದರಿಂದ ಇಂತಹ ಕಿರು ಪತ್ರಿಕೆಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಕರಾವಳಿಯ ಉತ್ತರ ಭಾಗದ ಜಿಲ್ಲೆಯೊಂದರಿಂದ ಬಂದ ಕಾರ್ಪೋರೇಟ್ ಸಾಹಿತಿಗಳು ಮತ್ತು ಪತ್ರಕರ್ತರು ಸೇರಿ ಬೆಂಗಳೂರು ಮಹಾನಗರದಿಂದ ಒಂದು ಕಿರು ಸಾಹಿತ್ಯಕ ಪತ್ರಿಕೆ ಹೊರಡಿಸುತ್ತಿದ್ದಾರೆ. ಅದು ಕರಾವಳಿಯ ಉತ್ತರ ಭಾಗದ ಜಿಲ್ಲೆಯೊಂದರ ಜನರಿಂದ, ಆ ಜಿಲ್ಲೆಯ ಜನರಿಗಾಗಿ, ಆ ಜಿಲ್ಲೆಯ ಜನರಿಗೋಸ್ಕರ ನಡೆಸುವ ಪತ್ರಿಕೆಯಾಗಿದೆ! ಇಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ. ಇರಲಿ, ಇಂತಹ ಜಿಲ್ಲಾಮಟ್ಟದ ಕಿರು ಪತ್ರಿಕೆಗಳು ಸಹ ಇರಬೇಕು. ಕನಿಷ್ಠ ಆ ಜಿಲ್ಲೆಯ ಜನರಿಗಾದರೂ ಇದರಿಂದ ಅನುಕೂಲವಾಗಲಿ.

ಸಾಹಿತ್ಯ ಲೋಕದ ಸುತ್ತಮುತ್ತ :
ಸದ್ಯ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಬಣಗಳಿವೆ. ಕೆಲವು ನಿರ್ದಿಷ್ಟ ವರ್ಗದ ಲೇಖಕ/ಕಿಯರೂ ಇದ್ದಾರೆ. ಮೊದಲು ಬಹಳ ಸುಲಭವಾಗಿ ಎಡಪಂಥೀಯರು ಮತ್ತು ಬಲಪಂಥೀಯರು ಎಂದು ವರ್ಗೀಕರಿಸಬಹುದಿತ್ತು. ಈಗ ಅವನ್ನೆಲ್ಲ ಮೀರಿ ಕೆಲವು ಗುಂಪುಗಳು ಹುಟ್ಟಿಕೊಂಡಿವೆ. ಸದ್ಯ ಸರ್ಕಾರಿ ಸಾಹಿತಿಗಳು ಮತ್ತು ಕಾರ್ಪೋರೇಟ್ ಸಾಹಿತಿಗಳು ತುಂಬ ಚಾಲ್ತಿಯಲ್ಲಿದ್ದಾರೆ. ಈ ಭಾಗದಲ್ಲಿ ಇವರೆಡು ವರ್ಗದವರ ಬಗ್ಗೆ ಮಾತ್ರ ಚರ್ಚಿಸಿದ್ದೇನೆ.
ಅಷ್ಟೇನೂ ಪ್ರತಿಭಾವಂತರಲ್ಲದಿದ್ದರೂ ಸಹ, ಬರವಣಿಗೆ ಚೆನ್ನಾಗಿರದಿದ್ದರೂ ಕೂಡ ತುಂಬ ದೊಡ್ಡ ಸ್ಥಾನಮಾನ ಪಡೆದ ಅನೇಕ ಸಾಹಿತಿಗಳು ಕನ್ನಡದಲ್ಲಿದ್ದಾರೆ. ಯೋಗ್ಯತೆಯಿರದಿದ್ದರೂ ಕೂಡ ಯೋಗವಿರುವ ಅದೃಷ್ಟವಂತರಿವರು. ಇವರೆಲ್ಲ ತಮ್ಮ ಜಾತಿಯ ಹಿನ್ನಲೆ, ಸಾಮಾಜಿಕ ಹೋರಾಟ, ಸಾಹಿತ್ಯಕ ಹೋರಾಟ, ಚಾಣಾಕ್ಷತನ, ಗುಂಪುಗಾರಿಕೆ, ಹುಸಿ ಜಾತ್ಯಾತೀತವಾದ, ಹುಸಿ ರಾಷ್ಟ್ರಪ್ರೇಮ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಮಾಡಿ ಮುಂದೆ ಬಂದಿದ್ದಾರೆ. ಇವರು ತಮ್ಮನ್ನು ತಾವು ಎಡಪಂಥೀಯ ಮತ್ತು ಬಲಪಂಥೀಯ ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತಾರೆ.

ಬಲಪಂಥದವರಾದರೆ ಬಲಪಂಥೀಯ ವಿಚಾರಧಾರೆ ಮತ್ತು ಆ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಿದರೆ, ಎಡಪಂಥದವರಾದರೆ ಎಡಪಂಥೀಯ ವಿಚಾರಧಾರೆ ಮತ್ತು ಆ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಈ ಎರಡೂ ಬಣದ ಸಾಹಿತಿಗಳು ತಮ್ಮ ತಮ್ಮ ಸಿದ್ಧಾಂತ, ವಿಚಾರಧಾರೆಗೆ ಬಲವಾಗಿ ಅಂಟಿಕೊಂಡಿರುವುದು, ತಾವು ಬೆಂಬಲಿಸುವ ರಾಜಕೀಯ ಪಕ್ಷಕ್ಕೆ ಮತ್ತು ರಾಜಕಾರಣಿಗಳಿಗೆ ಪತಿವ್ರತಾ ನಿಷ್ಠೆ ತೋರುವುದನ್ನು ನೋಡಿದರೆ ಯಾರಿಗಾದರೂ ಮೆಚ್ಚುಗೆ ಮೂಡದೇ ಇರದು. ಇದಕ್ಕೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿದೆ ಮತ್ತು ಸಿಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ, ಅತ್ಯಂತ ಪ್ರಾಮಾಣಿಕವಾಗಿ ಬರೆದು, ಬದುಕಿ ದಿವಂಗತರಾದ ಸಾಹಿತಿಗಳ ಹೆಸರಿನಲ್ಲಿ ಸ್ಥಾಪಿತವಾದ ಸರ್ಕಾರಿ ಕೃಪಾಪೋಷಿತ ಸಂಸ್ಥೆಗಳ ಅಧ್ಯಕ್ಷಗಿರಿ ಇಂತಹವರಿಗೇ ದೊರೆಯುತ್ತವೆ. ಆದ್ದರಿಂದಲೇ ಕರ್ನಾಟಕದ ಜನರು ಇವರಿಗೆ ಸರ್ಕಾರಿ ಸಾಹಿತಿಗಳು ಎಂದು ಅರ್ಧ ಪ್ರೀತಿ ಮತ್ತು ಅರ್ಧ ತಮಾಷೆಯಿಂದ ಕರೆಯುತ್ತಾರೆ!

ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳ ಆಯ್ಕೆಯಲ್ಲಿ ಈ ಜಾತಿ ಸಮೀಕರಣ, ಎಡ-ಬಲ ಪಂಥಗಳ ಬದ್ಧತೆ, ಆಳುವ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳಿಗೆ ತೋರುವ ಪತಿವ್ರತಾ ನಿಷ್ಠೆ ಮುಖ್ಯ ಮಾನದಂಡಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೆ ಬಹಿರಂಗವಾಗಿ ಯಾರೂ ಮಾತನಾಡುವುದಿಲ್ಲ ಅಥವಾ ಬರೆಯುವುದಿಲ್ಲ.

ಬೆಂಗಳೂರು ಮಹಾನಗರವನ್ನು ಕೇಂದ್ರವನ್ನಾಗಿಟ್ಟುಕೊಂಡು, ಪಾಶ್ಚಾತ್ಯ ಸಾಹಿತ್ಯ ಮತ್ತು ಸಾಹಿತಿಗಳನ್ನು ಹೊಗಳುತ್ತ, ಕನ್ನಡದಲ್ಲಿ ಡ್ರಾಫ್ಟ್ ಬರೆದು ಅದನ್ನು ಇಂಗ್ಲಿಷಿನಲ್ಲಿ ಪ್ರಕಟಿಸುವ ಪ್ರಯತ್ನ ಮಾಡುತ್ತ, ಹಾಗೆ ಪ್ರಕಟಿಸಿದ ಕೃತಿಗಳಿಗೆ ನೋಬೆಲ್, ಪುಲಿಟ್ಜರ್, ಬೂಕರ್, ಇಂಟರನ್ಯಾಷನಲ್ ಮ್ಯಾನ್ ಬೂಕರ್ ಪ್ರಶಸ್ತಿ ಸಿಕ್ಕ ಹಾಗೆ ಕನಸು ಕಾಣುತ್ತ ಪುಳಕಗೊಳ್ಳುವವರೇ ಕಾರ್ಪೋರೇಟ್ ಸಾಹಿತಿಗಳು! ಬಹುತೇಕ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಬಾಲ್ಯ ಮತ್ತು ಶಿಕ್ಷಣ ಪೂರೈಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಪಡೆದು, ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ, ಕೋಲ್ಕತ್ತಾ, ಹೈದರಾಬಾದುಗಳಂತಹ ಮಹಾನಗರ ಮತ್ತು ಕೆಲಕಾಲ ವಿದೇಶಗಳಲ್ಲಿ ಸಹ ಕೆಲಸ ಮಾಡಿರುವ ಇವರು ಭಾರತೀಯ ದೇಹ ಮತ್ತು ಪಾಶ್ಚಾತ್ಯ ಆತ್ಮ ಹೊಂದಿರುವ ಅರ್ಧ ಭಾರತೀಯರು!

ಇತ್ತ ದೇಸಿ ಅನುಭವ, ಅತ್ತ ಪಾಶ್ಚಾತ್ಯ ಅನುಭವ ಎರಡೂ ಇವರ ಕೃತಿಗಳಲ್ಲಿ ಪೂರ್ಣವಾಗಿ ಮೈದಳೆಯುವುದಿಲ್ಲ. ಇಂಗ್ಲಿಷ್ ಓದುಗರು ಮತ್ತು ಪ್ರಕಾಶಕರನ್ನು ಮೆಚ್ಚಿಸಲು ಹೆಣಗುವ ಇವರು ಬರೆಯುವುದು ಮಾತ್ರ ಕನ್ನಡದಲ್ಲಿ! ಕನ್ನಡ ಓದುಗರನ್ನೇ ಪೂರ್ಣ ಪ್ರಮಾಣದಲ್ಲಿ ತಲುಪಲಾಗದ ಇವರು ಇಂಗ್ಲಿಷಿನಲ್ಲಿ ದಿಗ್ವಿಜಯ ಸಾಧಿಸುವ ಕನಸು ಕಾಣುತ್ತಿದ್ದಾರೆ. ಇವರು ತಮ್ಮ ಕೃತಿಗಳ ಇಂಗ್ಲಿಷ್ ಅನುವಾದ, ಪ್ರಕಾಶನ, ಮಾರಾಟ ಮುಂತಾದ ವಿಷಯಗಳಿಗೆ ಆದ್ಯತೆ ಕೊಟ್ಟು, ಶ್ರಮಿಸುವುದರಲ್ಲಿ ಶೇಕಡಾ ನಲವತ್ತರಷ್ಟು ಬರವಣಿಗೆಯ ಗುಣಮಟ್ಟಕ್ಕೆ ಆದ್ಯತೆ ಕೊಟ್ಟು, ಶ್ರಮಿಸಿದ್ದರೆ ಒಳ್ಳೆಯ ಕೃತಿಗಳಾದರೂ ಬರುತ್ತಿದ್ದವು. ಇತ್ತ ಕನ್ನಡ ಓದುಗರು ಮತ್ತು ಅತ್ತ ಇಂಗ್ಲಿಷ್ ಓದುಗರು – ಇಬ್ಬಣದವರೂ ಸಹ ಇವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇವರು ಪ್ರತಿಭಾವಂತರಾದರೂ ಸಹ ಇಂಗ್ಲಿಷ್ ಮೋಹ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ಮತ್ತು ನೊಬೆಲ್ ಕನಸು ಕಾಣುತ್ತ ಕೊನೆಗೂ ಕನ್ನಡಕ್ಕೇ ಅನ್ಯರಾಗಿ ಉಳಿಯುವುದು ಮಾತ್ರ ದುರಂತದ ಸಂಗತಿ.

ಇತ್ತೀಚೆಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯಿಂದ ಮೊದಲ್ಗೊಂಡು ಅಂತರ್ರಾಷ್ಟ್ರೀಯ ಮಟ್ಟದ ನೊಬೆಲ್ ಪ್ರಶಸ್ತಿಯವರೆಗೆ, ಜಿಲ್ಲಾಮಟ್ಟದ ರಾಜಕೀಯದಿಂದ ಹಿಡಿದು ಅಂತರ್ರಾಷ್ಟ್ರೀಯ ಮಟ್ಟದ ರಾಜಕೀಯ ನಡೆಯುತ್ತದೆ. ಇಂತಹ ಕಠಿಣ ಸಮಯದಲ್ಲಿ ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕರಿಗೆ ಇಂಟರನ್ಯಾಷನಲ್ ಮ್ಯಾನ್ ಬೂಕರ್ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯ ಮೂಲಕ ಅವರ ಅದೃಷ್ಟದ ಬಾಗಿಲು ತೆರೆಯುವುದರೊಂದಿಗೆ, ದಿನ ಬೆಳಗಾಗುವುದರೊಳಗಾಗಿ ಅವರು ತಾರಾ ವರ್ಚಸ್ಸು ಪಡೆದಿದ್ದಾರೆ. ಇರಲಿ, ಇದರ ಹಿಂದೆ ಅವರ ದಶಕಗಳ ಪರಿಶ್ರಮವಿದೆ. ಬಾನು ಮುಷ್ತಾಕರ ಕಥೆಗಳು ಚೆನ್ನಾಗಿವೆ ಆದ್ದರಿಂದಲೇ ಅವರಿಗೆ ಅರ್ಹವಾಗಿಯೇ ಬೂಕರ್ ಸಿಕ್ಕಿದೆ. ಕನ್ನಡದ ಕಾರ್ಪೋರೇಟ್ ಸಾಹಿತಿಗಳು ಹರಸಾಹಸ ಪಟ್ಟರೂ ಸಿಗದ ಪ್ರಶಸ್ತಿ, ಬೆಂಗಳೂರಿನಿಂದ ದೂರವಿರುವ ಹಾಸನದಲ್ಲಿದ್ದುಕೊಂಡು, ತಮ್ಮ ಪಾಡಿಗೆ ತಾವು ಬರೆದುಕೊಂಡಿರುವ ಬಾನು ಮುಷ್ತಾಕರಿಗೆ ದೊರೆತದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. ಇರಲಿ, ಬೂಕರ್ ಪ್ರಶಸ್ತಿ ಕನ್ನಡ ಲೇಖಕಿಯೊಬ್ಬರಿಗೆ ದೊರೆತದ್ದು ಸಂತೋಷದ ವಿಚಾರ.

ಬಾನು ಮುಷ್ತಾಕರು ಬರಹಗಾರ್ತಿ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ಹಲವು ವರ್ಷಗಳಿಂದ ಪರಿಶ್ರಮ ಪಟ್ಟರೂ ಸಿಗದ ಮಾನ್ಯತೆ ಬೂಕರ್ ಪ್ರಶಸ್ತಿಯೊಂದರಿಂದಲೇ ದೊರೆತದ್ದು ಮಾತ್ರ ಚಿಂತನಾರ್ಹ. ಯಾವುದೇ ಲೇಖಕ/ಕಿಯನ್ನು ಅವರ ಬರವಣಿಗೆಯ ಗುಣಮಟ್ಟದಿಂದ ಅಳೆಯಬೇಕೇ ಹೊರತು ಪ್ರಶಸ್ತಿಯಿಂದಲ್ಲ. ಮೇಲ್ವರ್ಗದ ಲೇಖಕಿಯೊಬ್ಬರನ್ನು ಸ್ಥಾಪಿಸಲು ಜೀವಮಾನವಿಡಿ ಶ್ರಮಿಸಿದ ಸಾರಾಂಶದ ವಿಮರ್ಶಕ ಮತ್ತು ಪ್ರಬಲ ಸಮುದಾಯದ ಲೇಖಕರೊಬ್ಬರನ್ನು ಸ್ಥಾಪಿಸಲು ದಶಕಗಳಿಂದ ಹೆಣಗುತ್ತಿರುವ ಪಾರಿಭಾಷಿಕ ವಿಮರ್ಶಕರಂತಹವರಿಗೆ ಬಾನು ಮುಷ್ತಾಕರಂತಹ ಲೇಖಕಿಯರು ಕಣ್ಣಿಗೆ ಕಾಣುವುದಿಲ್ಲ. ಮೇಲ್ವರ್ಗದ ವಿಮರ್ಶಕರ ಸಾಹಿತ್ಯಕ ರಾಜಕೀಯಕ್ಕೆ ಬಲಿಯಾದ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಲೇಖಕಿಯರಿಗೆ ಇದರಿಂದ ಸಾಕಷ್ಟು ಅನ್ಯಾಯವಾಗಿದೆ. ಇಂತಹ ಸಂದರ್ಭದಲ್ಲಿ ಬಾನು ಮುಷ್ತಾಕರಿಗೆ ಬೂಕರ್ ದೊರೆತಿದ್ದು ಮತ್ತು ಅದಕ್ಕೆ ಅಬ್ಬರದ ಪ್ರಚಾರ ಸಿಕ್ಕಿದ್ದರಲ್ಲಿ ತಪ್ಪಿಲ್ಲ. ನಮ್ಮ ಮೇಲ್ವರ್ಗ ಮತ್ತು ಪ್ರಬಲ ಸಮುದಾಯಕ್ಕೆ ಸೇರಿರುವ, ಬೆರಳೆಣಿಕೆಯಷ್ಟಿರುವ ವೃದ್ಧ ವಿಮರ್ಶಕರ ಕಣ್ಣಿಗೆ ಕವಿದಿರುವ ಮಂಜಿನ ಪೊರೆ ಇನ್ನಾದರೂ ಕಳಚಲಿ ಮತ್ತು ಅವರು ಒಳ್ಳೆಯ ಕೃತಿಗಳನ್ನು ಮುಕ್ತ ಮನಸ್ಸಿನಿಂದ ಗುರುತಿಸುವಂತಾಗಲಿ ಎಂಬುದು ನನ್ನ ಆಶಯ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಸಾಹಿತ್ಯ, ಶುದ್ಧತೆ, ಬದ್ಧತೆ ಇತ್ಯಾದಿ…”

  1. ವಿಠ್ಠಲ ಶ್ರೀನಿವಾಸ ಕಟ್ಟಿ.

    ನಿಮ್ಮ ಚಿಂತನೆ ಸ್ವಾಗತಾರ್ಹ. ಕಾರ್ಪೋರೆಟ್ ಸಾಹಿತ್ಯ ಬೆಳೆಯುತ್ತಿರುವದು ಕನಿಷ್ಠ ಪಕ್ಷ ಕನ್ನಡ ಸಾಹಿತ್ಯದ ಪ್ರಗತಿಗೆ ಮಾರಕವಾಗಿದೆ. ಒಂದು ವಿಶಿಷ್ಟ ಜಾತಿಯನ್ನು ನಿಂದಿಸುವದೇ ಪ್ರಗತಿಪರ ಚಿಂತನೆ ಎನಿಸಿಕೊಳ್ಳುತ್ತಿರುವದು ಖಂಡನೀಯ.
    ಜಾತಿಯ, ಧರ್ಮದ ಹೆಸರಿನಲ್ಲಿ ಸಾಹಿತ್ಯಪರಿಷತ್ತುಗಳ ಉಪಸ್ಥಿತಿ ಇನ್ನೂ ಹೆಚ್ಚು ಗಂಡಾಂತರಕಾರಿ. ಉದಾಹರಣೆಗೆ, ವೀರಶೈವ ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಹೀಗೆ ಜಾತಿ ಮತಗಳ ಪರಿಷತ್ತು ಗಳು ಸಾಹಿತ್ಯದ ಮೂಲ ಉದ್ದೇಶವನ್ನು ಮರೆ ಮಾಚುತ್ತವೆ. ಸುದೈವದಿಂದ ಕ್ಷತ್ರಿಯ, ವೈಶ್ಯ ಬ್ರಾಹ್ಮಣ ಸಾಹಿತ್ಯ ಪರಿಷತ್ತುಗಳು ಹುಟ್ಟಿಲ್ಲ ಅಥವಾ ಹುಟ್ಟಿಕೊಂಡಿದ್ದರೂ ನಮಗಿನ್ನೂ ತಿಳಿದಿಲ್ಲ.
    ಈ ಕುರಿತು ನೀವು ಅಭ್ಯಾಸ ಮಾಡಿ ವಿಮರ್ಶಾತ್ಮಕ ಲೇಖನ ಬರೆಯಬೇಕು.

  2. ಭಾಸ್ಕರ್

    ಉತ್ತಮ ಲೇಖನ. ವಾಸ್ತವತೆಗೆ ಹಿಡಿದ ಕೈಗನ್ನಡಿ

  3. REVANASIDDAPPA GR

    ಸಾರಸ್ವತ ಲೋಕದ ಕಟುವಾಸ್ತವದ ಅನಾವರಣ. ಇಷ್ಟವಾಯಿತು ಲೇಖನ.

  4. ಗೋಪಾಲ ತ್ರಾಸಿ

    ಸಕಾಲಿಕವಾದ ಅರ್ಥಪೂರ್ಣ ಬರಹ. ಈ ಗುಂಪುಗಾರಿಕೆ ಸಾಹಿತ್ಯ ಕ್ಷೇತ್ರ ಒಂದೇ ಅಲ್ಲ, ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ ಇದ್ದದ್ದೇ… ಹಪಾಹಪಿ ಈಗ ಹೆಚ್ಚಿರಬಹುದು. ಇವೆಲ್ಲ ಆಮಿಷಗಳಿಂದ ದೂರ ಉಳಿದ ಲೇಖಕರು ಕೊನೆಗೂ ದೂರವೇ ಉಳಿದು ಬಿಡುತ್ತಾರೆ. ಸಾಹಿತ್ಯದ ಕೇಂದ್ರ ಮನುಷ್ಯ, ಅದರ ಸಾರ ಸಮನ್ವಯ, ಸರಿಸಮಾನ. ಯಾವುದೇ ರೀತಿಯ ಮೇಲುಕೀಳು, ತಾರತಮ್ಯ, ಭೇದಭಾವ ವ್ಯರ್ಜ್ಯ ಅಂತಾದಾಗ ಈ ರೀತಿಯ ಒಲವಿನೆಲ್ಲರನ್ನೂ ‘ಎಡ’ ಅಂತ ವಿಂಗಡಿಸುವುದು ಅಕ್ಷಮ್ಯ. ಇನ್ನು ‘ಬಲ’ದ ಒಲವಿನ ಬಗ್ಗೆ ಹೇಳಬೇಕಿಂದಿಲ್ಲವಲ್ಲ.. ಬಲದ ದನಿ ಗಟ್ಟಿಯಾದ ಈ ಕಾಲ,ಸಂದರ್ಭವೂ ಸ್ವಯಂ ಸಾಕ್ಷಿ ಹೇಳುತ್ತದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai