ಎಂ. ಎಸ್‌. ಮೂರ್ತಿಯವರ ʻಬೌಲ್‌ʼ ಕಾದಂಬರಿ

ಧರ್ಮವೆಂಬುದು ಎಷ್ಟು ಹಿಂದಿನಿಂದ ಚಾಲ್ತಿಗೆ ಬಂದಿದ್ದರೂ -ಎಷ್ಟೇ ಕಾಲದ ಹೊಡೆತಕ್ಕೆ ಸಿಲುಕಿಕೊಂಡಿದ್ದರೂ- ಅದರ ಮಹತ್ವ ಇಂದು ಕೂಡ ಅಂತೆಯೇ ಉಳಿದುಕೊಂಡಿದೆ. ಅದು ಸಮಕಾಲೀನ ಹಾಗೂ ಸಾರ್ವಕಾಲೀನ. ಯಾವ ಧರ್ಮ ಮಾನವನ ಮೇಲೆ ಪ್ರಭಾವ ಬೀರುತ್ತದೋ ಆ ಧರ್ಮಕ್ಕೆ ಆತ ವಿಧೇಯನಾಗಿರುತ್ತಾನೆ. ಕೆಲವೊಮ್ಮ ಅದರ ಗುಣಸ್ವಭಾವವನ್ನಾತ ಬಳಕೆ ಮಾಡದಿರಬಹುದು, ಅಥವಾ ಅರಿಯದಿರಬಹುದು, ಆದರೂ ಅವನಲ್ಲಿ ಅದು ಅಡಕಗೊಂಡಿರುತ್ತದೆ. ಏಕೆಂದರೆ ಧರ್ಮದ ವ್ಯಾಪ್ತಿ ದೇಶಾತೀತ ಹಾಗೂ ಕಾಲಾತೀತ.

ಇಲ್ಲೊಂದು ಭಿಕ್ಷಾಪಾತ್ರೆಯನ್ನಿಟ್ಟುಕೊಂಡು ಕಾದಂಬರಿಕಾರ ಎಂ. ಎಸ್‌. ಮೂರ್ತಿಯವರು ʻಬೌಲ್‌ʼ ಕಾದಂಬರಿಯನ್ನು ರಚಿಸಿದ್ದಾರೆ. ತ್ರಿಕಾಲ ಸಂಚಾರದ ಗುಣವುಳ್ಳ `ಬೌಲ್‌’ ಯಾ ಭಿಕ್ಷಾಪಾತ್ರೆ ನಿಮಿತ್ತವಾಗಿ ರೂಪುಗೊಂಡ ಕಾದಂಬರಿ ಕಾಲಾನುಕಾಲಕ್ಕೆ ಹೊಂದಿಕೊಂಡು ಮಾನವನ ವ್ಯತ್ಯಸ್ತ ಬದುಕನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಬೌಲನ್ನಿಟ್ಟುಕೊಂಡು ಕಾದಂಬರಿಯ ಕಾಲನಿರ್ಣಯ ಅಸುಲಭವೆನಿಸಿದರೂ ಅದಕ್ಕೆ ಬುದ್ಧನನ್ನು ನೆನಪಿಸುವ ಗುಣವಿದೆ. ಬೌದ್ಧ ಧರ್ಮವನ್ನೂ ಅದು ಜೀವಿಸುತ್ತದೆ. ಅಂತೆಯೇ ಬುದ್ಧನ ಆಚಾರವಿಚಾರಗಳೂ ಕಾದಂಬರಿಯ ಒಳಗೆ ಓತಪ್ರೋತಗೊಂಡಿದೆ.

ಕಾದಂಬರಿಯ ಶಿರೋನಾಮೆ ʻಬೌಲ್‌ʼ. ಭಿಕ್ಷಾಪಾತ್ರೆ ಕೊಡುವ ಅರ್ಥಕ್ಕಿಂತಲೂ ಭಿನ್ನವಾದ ಅಥವಾ ಹೆಚ್ಚಿನ ಅರ್ಥವನ್ನು ಈ ʻಬೌಲ್‌ʼ ಎಂಬ ಆಂಗ್ಲಪದ ಕೊಡುವುದೇ? ಎಂಬ ಪ್ರಶ್ನೆಯೂ ಇಲ್ಲಿ ಆಕಾರ ಪಡೆಯುತ್ತದೆ. ಕಾದಂಬರಿಯ ಮುಖಪುಟವನ್ನು ಅವಲೋಕಿಸಿದರೆ ಅರ್ಧಚಂದ್ರಾಕೃತಿಯ ಒಂದು ಗೆರೆಯಷ್ಟೇ ಬೌಲನ್ನು ಸಂಕೇತಿಸುತ್ತದೆ. ಕಾಲದ ಮೂರು ಹಂತಗಳನ್ನು ಪ್ರತಿನಿಧಿಸುವಂತೆ ಮುಖಪುಟ ಚಿತ್ರಿತಗೊಂಡಿದೆ. ಖ್ಯಾತ ಚಿತ್ರಕಾರರೂ ಆಗಿರುವ ಕಾದಂಬರಿಕಾರ ಎಂ.ಎಸ್‌ ಮೂರ್ತಿಯವರು ತಾವೇ ರಚಿಸಿದ ಮುಖಪುಟದಲ್ಲಿ ಬೌಲಿನ ಮುಕ್ಕಾಲು ಭಾಗಕ್ಕೆ ಶ್ವೇತವರ್ಣದ ಹಿನ್ನೆಲೆ ಒದಗಿಸಿದ್ದಾರೆ.
ಮಾಲಿಂಗ, ಸುಮಲತೆ, ಬಿಕು, ಅಜ್ಜ ಹಾಗೂ ಆನಂದ- ಮುಂತಾದ ಪಾತ್ರಗಳು ಕಾದಂಬರಿಯ ಆಳ ವಿಸ್ತಾರಗಳ ಮೇಲೆ ಪ್ರಾತಿನಿಧ್ಯ ಸ್ಥಾಪಿಸಿವೆ. ಇಷ್ಟೂ ಪಾತ್ರಗಳನ್ನು ಪರಸ್ಪರ ಬೆಸೆಯುವ ಬೌಲನ್ನು ಚರಿಗೆಗೆಂದು ಎಷ್ಟು ಪ್ರಮಾಣದಲ್ಲಿ ಬಳಸಲಾಯಿತು ಎನ್ನುವುದಕ್ಕಿಂತ ಅದು ಹೇಗೆ ಕಾದಂಬರಿಗೆ ಸಂಕೇತವೂ ಸೂತ್ರವೂ ಆಯಿತು ಎಂಬುದು ಮುಖ್ಯ. ಅದು ಬೌದ್ಧ ಬಿಕುವಿನ ಕೈಗೆ ಆತನ ಗುರುವಿನಿಂದ ಬಂದುದು ಒಂದೆಡೆಯಾದರೆ ಅಲ್ಲಿಂದ ಅದು ಆತನ ಶಿಷ್ಯನಾದ ಆನಂದನ ಕೈಗೆ ಬಂದು ಸೇರುವುದು ಇನ್ನೊಂದೆಡೆ.

ಕೊಲೆ ಮಾಡಿಯಾದರೂ ಧನ ಸಂಪಾದಿಸಬೇಕೆನ್ನುವ ಬಯಕೆಯುಳ್ಳವನಾಗಿದ್ದ ಆನಂದನ ತಂದೆ ಮಾಲಿಂಗ. ಆತ ಅರಣ್ಯಮಾರ್ಗದ ಸಂಚಾರಿಗಳಾದ ಬಿಕುಗಳನ್ನು ಆಕ್ರಮಿಸುತ್ತಾನೆ. ಆ ಕಾದಾಟದಲ್ಲಿ ಮಾಲಿಂಗ ಮೃತನಾಗುತ್ತಾನೆ. ಭಿಕುವಿನ ಭಿಕ್ಷಾಪಾತ್ರೆ ಕಾದಾಟಕ್ಕೆ, ಕಾದಾಟದ ಪರಿಣಾಮಕ್ಕೆ ಸಾಕ್ಷಿಯಾಗುತ್ತದೆ ಹಾಗೂ ತುತ್ತಾಗುತ್ತದೆ. ಭಿಕ್ಷಾಪಾತ್ರೆ ಮುಕ್ಕಾದರೂ ನಶಿಸಿಹೋಗುವುದಿಲ್ಲ. ಜಂಗಮಕ್ಕಳಿವಿಲ್ಲ ಎಂಬಂತೆ ಅದು ಮುಂದಿನ ಪೀಳಿಗೆಯ ಕೈಗೆ ಸೇರುತ್ತಲೇ ಹೋಗುತ್ತದೆ.

ಇನ್ನೀಗ ಬಿಕುವಿನ ಸರದಿ. ತಾನು ಕಲಿತ ಪಾಠ ತನ್ನ ಬದುಕಿನ ಸತ್ಯದ ಜೊತೆ ಸಾಗಬೇಕಾಗಿದೆ. ಮಾಲಿಂಗನ ಪತ್ನಿ ಸುಮಲತೆ ಹಾಗೂ ಪುತ್ರ ಆನಂದರಿಗೆ ಆತ ಆಸರೆಯಾಗಿತ್ತಾನೆ. ಬಿಕು ಮುಂದಿನ ತಲೆಮಾರಿನ ಆಶಾಕಿರಣವಾದ ಆನಂದನನ್ನು ಪೋಷಿಸುವುದು ತನ್ನ ಬದುಕಿನ ಉದ್ದೇಶವೆಂದು ಪರಿಗಣಿಸುತ್ತಾನೆ. ಅಲ್ಲೇ ಸನಿಹದ ತನಗಿಂತ ಹಿರಿತಲೆಮಾರಿನ ಅಜ್ಜನ ಸಹಾಯದಿಂದ ಸುಮಲತೆಯ ಸಂಸಾರ ನಿರ್ವಹಣೆಗೆ ಬೇಕಾದ ಸಾಹಿತ್ಯವನ್ನು ಪೂರೈಸುತ್ತಾನೆ. ಮೊದಮೊದಲಿಗೆ ಬಿಕುವಿನ ನಡತೆಯ ಬಗ್ಗೆ, ಆತನಿಂದಾಗಿ ತನ್ನ ಪತಿ ಸಾವನ್ನಪ್ಪಿದ ಬಗ್ಗೆ ಸುಮಲತೆ ಅನ್ಯಾನ್ಯ ಯೋಚನೆಗಳಲ್ಲಿ ಮಗ್ನಳಾಗಿದ್ದರೂ ಕ್ರಮೇಣ ಬಿಕುವಿನ ತ್ಯಾಗ ದೊಡ್ಡದು ಎಂಬುದನ್ನು ಮನವರಿಕೆ ಮಾಡುತ್ತಾಳೆ. ಸುಮಲತೆಯ ಸಂಸಾರ ಬದುಕಿಕೊಳ್ಳಲು ನೆರವಾದುದೂ ಅದೇ ಬಿಕುವೇ ಹಾಗೂ ಅದೇ ಭಿಕ್ಷಾಪಾತ್ರೆಯೆ! ಅಜ್ಜ-ಬಿಕು ಹಾಗೂ ಸುಮಲತೆಯರು ಪರಸ್ಪರ ಅರ್ಥೈಸಿಕೊಳ್ಳುವ, ಅವಲಂಬಿಸಿಕೊಳ್ಳುವ ಪರಿಯನ್ನು ಕಾದಂಬರಿಕಾರರು ಎಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಆನಂದನನ್ನು ತನ್ನ ಸ್ವಂತ ಮಗನಂತೆ ಬಿಕು ಸಲಹುವಾಗಲೂ ಆತನ ನಿಸ್ಪೃಹತೆಯ ಬಗ್ಗೆ ಅವಳಿಗಾಗಲೀ ಅಜ್ಜನಿಗಾಗಲೀ ಅನ್ಯ ಸಂದೇಹ ಬರುವುದಿಲ್ಲ. ಅದು ಚಿತ್ರಕಾರನೂ ಕಾದಂಬರಿಕಾರನೂ ಆಗಿರುವ ಎಂ.ಎಸ್.ಮೂರ್ತಿಯವರ ಸಹಜ ನೇಯ್ಗೆಯಾಗಿತ್ತು.

ತನ್ನ ಆಶ್ರಮದಿಂದ ಭಿಕ್ಷಾಪಾತ್ರೆಯೊಂದಿಗೆ ಹೊರಟ ಬಿಕು ಮರಳಿ ಆಶ್ರಮಕ್ಕೆ ಸೇರಬೇಕಾಗಿತ್ತೆ? ಆತ ಕಾಡುದಾರಿಯಲ್ಲಿ ಇತರ ಬಿಕುಗಳೊಂದಿಗೆ ಎತ್ತ ಹೊರಟಿದ್ದ? ಆತನಿಗೆ ಅನ್ಯ ಜವಾಬ್ದಾರಿಗಳಿರಲಿಲ್ಲವೆ? ಆನಂದ ಹಾಗೂ ಸುಮಲತೆಯರನ್ನು ಸಲಹುವ ಜವಾಬ್ದಾರಿ ಮಾರ್ಗ ಮಧ್ಯದಲ್ಲಿ ಆತನಿಗೆ ಅಚಾನಕ್ಕಾಗಿ ಒದಗಿ ಬಂದುದಲ್ಲವೆ? ಮಾಲಿಂಗ ಸತ್ತ ತಕ್ಷಣ ತನ್ನ ಬದುಕಿನ ಗುರಿಯನ್ನು ತಾನೇ ನಿಶ್ಚಯಿಸಿಕೊಳ್ಳುವಷ್ಟು ಬಿಕು ಸ್ವತಂತ್ರನಾಗಿದ್ದನೆ? ಎಂಬಿತ್ಯಾದಿ ಪ್ರಶ್ನೆಗಳು ಕಾದಂಬರಿಯನ್ನು ಓದುವಾಗ ಮೂಡುವುದು ಸಹಜ. ನೈಜ ಸಂವಹನದ ಹಾದಿ ಹಿಡಿದಿರುವ ಕಾದಂಬರಿಯಾದ್ದರಿಂದ ಕಾದಂಬರಿಕಾರ ತನ್ನ ಉದ್ದೇಶಕ್ಕೆ ಹೊಂದಿಕೊಳ್ಳುವಂತೆ ಕಾದಂಬರಿಯನ್ನು ರೂಪಿಸಿಕೊಂಡು ಸಾಗಬಹುದು.

ಕೈಗಾರಿಕಾಯುಗದ ಪೂರ್ವದ ಹಿನ್ನೆಲೆಯಲ್ಲಿ ʻಬೌಲ್‌ʼ ಕಾದಂಬರಿ ಮೂಡಿದೆ. ಇಡಿಯ ಕಾದಂಬರಿ ಹಳ್ಳಿಯ ಪರಿಸರವನ್ನು ಆಶ್ರಯಿಸಿದೆ. ಮೌನ, ಕಾದಂಬರಿಯ ನಡೆಯನ್ನು ನಿಯಂತ್ರಿಸುವಂತಿದೆ. ಗದ್ದಲಕ್ಕೆ ಇಲ್ಲಿ ಎಡೆ ಕಡಿಮೆ. ಸಂತೆ ಹಾಗೂ ʻವಿಹಾರʼಗಳೆರಡೇ ತುಸು ಜನನಿಬಿಡ ಪ್ರದೇಶ. ಕಾದಂಬರಿಯಲ್ಲಿ ʻವಿಹಾರʼ ಕೇಂದ್ರವೊಂದು ಸೃಷ್ಟಿಗೊಳ್ಳುವ ರೀತಿಯೇ ವಿಶಿಷ್ಟವಾಗಿದೆ. ಅಲ್ಲಿ ಹಂತಹಂತವಾಗಿ ಶಿಷ್ಯಾದಿಗಳು ಸೇರಿಕೊಳ್ಳುವ ಪರಿ, ಅವರು ತಮ್ಮ ವಿದ್ಯೆ, ಉದ್ಯೋಗವನ್ನು ತಾವೇ ಅರಸಿ, ಆಯುವುದು, ಒಟ್ಟಾರೆಯಾಗಿ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವುದು ಆ ಕಾಲದ ಗುರುಕುಲ ಪದ್ಧತಿಯ ಚರ್ಯೆಯನ್ನು ನೆನಪಿಗೆ ತರುವಂತಿದೆ.

ಆನಂದ ತುಂಟ ಹುಡುಗನಾಗಿದ್ದವ ತನ್ನ ಅಪ್ಪನಂತಾಗದೆ ಬಿಕುವಿನ ಮಾರ್ಗದರ್ಶನದಲ್ಲಿ ಬದುಕಿನ ದಾರಿ ಮತ್ತು ಗುರಿಗಳನ್ನು ಕಂಡುಕೊಂಡು ಕೊನೆಗೆ ʻವಿಹಾರʼದ ಗುರುವಾಗುತ್ತಾನೆ. ಸರ್ವಸಂಗ ಪರಿತ್ಯಾಗಿಯಾದರೂ ಆತನ ಬದುಕಿಗೊಂದು ರೂಪುಕೊಟ್ಟ ಬಿಕು, ಅಮ್ಮ ಹಾಗೂ ಅಜ್ಜನವರನ್ನು ಆತನಿಂದ ಮರೆಯಲಾಗುವುದಿಲ್ಲ. ಅದೊಂದು ಬಗೆಯ ಪಾಶ. ಆನಂದನಿಗೂ ಆ ಪಾಶದಿಂದ ವಿಮೋಚನೆಯಿರುವುದಿಲ್ಲ. ಇಲ್ಲಿ ಇದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಬುದ್ಧ ತನ್ನ ಪತ್ನಿ, ಪುತ್ರರನ್ನು ತ್ಯಾಗ ಮಾಡಿರಬಹುದು. ಈತ ಬುದ್ಧನ ಶಿಷ್ಯನನ್ನು ನೆನಪಿಗೆ ತರುವ ಆನಂದನೇ ಆಗಿದ್ದರೂ ಸಂಸಾರದ ಪಾಶದಿಂದ ವಿಮುಕ್ತನಾದವನಲ್ಲ. ʻವಿಹಾರʼಕ್ಕೆ ಬಂದ ತಾಯಿಯನ್ನು ಏಕಾಂತದಲ್ಲಿ ಮಾತನಾಡಿಸುವಾಗಿನ ಹಾಗೂ ಅಜ್ಜನಿಂದ ಬಿಕುವಿನ ದೇಹಾಂತವಾದ ಸುದ್ದಿ ತಿಳಿದಾಗಿನ ಆನಂದನ ಕಣ್ಣೀರಿಗೆ ಸಂಸಾರದಿಂದ ಸಂಪೂರ್ಣ ತ್ಯಕ್ತನಾದವನ, ಕಾಲ-ದೇಶಗಳಿಗೆ ಹೊರತಾದವನ ಚರ್ಯೆಯಿಲ್ಲ.

ಕಾದಂಬರಿಯ ಕೊನೆಯ ಭಾಗದಲ್ಲಿ ಸನ್ಯಾಸವನ್ನು ಬಿಟ್ಟು ಸಂಸಾರಿಯಾಗುವುದರತ್ತ ಆನಂದ ಹೊರಟುಬಿಡುವಂತೆ ಅನ್ನಿಸಿದರೂ ಅಂತಿಮವಾಗಿ ತನ್ನನ್ನು ನಂಬಿ ʻವಿಹಾರʼದಲ್ಲಿರುವ ಶಿಷ್ಯ ಬಳಗವನ್ನು ಬಿಟ್ಟು ಹೋಗದಿರುವುದಕ್ಕೆ ತೀರ್ಮಾನಿಸುತ್ತಾನೆ. ಬಿಕುವಿನ ಮಾರ್ಗದರ್ಶನ, ʻವಿಹಾರʼದ ಗುರುಗಳಾಗಿದ್ದವರ ಉಪದೇಶ, ತನ್ನ ಮೇಲಿನ ನಂಬಿಕೆಯಿಂದ ʻವಿಹಾರʼದ ಗುರುವನ್ನಾಗಿ ತನ್ನನ್ನು ನೇಮಿಸಿದ್ದು -ಇವೆಲ್ಲವೂ ಆತನ ಮನಸ್ಸಿಗೆ ಬಂದು ಬಿಡುತ್ತದೆ.

ʻಬೌಲ್‌ʼ ಕಾದಂಬರಿಯು ಬುದ್ಧನ ಉಪದೇಶಗಳ ಹಿನ್ನೆಲೆಯಲ್ಲಿ ಕಟ್ಟಲಾದುದು. ಅಲ್ಲೊಬ್ಬ ಅಂಗೂಲಿಮಾಲನ ಇನ್ನೊಬ್ಬ ಆನಂದನ ಮತ್ತೊಬ್ಬ ಬುದ್ಧನ ಹಾಗೂ ಆಮ್ರಪಾಲಿಯ ಪ್ರತಿರೂಪಗಳನ್ನು ಊಹಿಸಬಹುದು. ಪರಸ್ಪರ ಸಂಬಂಧವಿಲ್ಲದ ಪಾತ್ರಗಳು ಕೂಡ ಹೇಗೆ ಹೊಂದಾಣಿಕೆಯ ಬದುಕನ್ನು ಕಂಡುಕೊಳ್ಳುತ್ತವೆ ಎನ್ನುವುದಕ್ಕೆ ಧರ್ಮದ ಹಿನ್ನೆಲೆಯೂ ಕಾರಣವಾಗುತ್ತದೆ. ದಟ್ಟವಾದ, ವಿವರಣಾತ್ಮಕವಾದ -ವಿಚಾರ ಸಂಪನ್ನತೆಯಿಂದ ಕೂಡಿದ, ಸಂಬಂಧಗಳ ಬೆಸುಗೆಯಿಂದ ಆವೃತವಾದ- ಕಾದಂಬರಿಯಿದು. ಡಾ. ಎಂ. ಎಸ್‌ ಮೂರ್ತಿ ಬುದ್ಧನ ಬದುಕನ್ನು ಚಿತ್ರಗಳ ಮೂಲಕ, ಬರಹಗಳ ಮೂಲಕ, ನಾಟಕ-ಕವನಗಳ ಮೂಲಕ ದಾಖಲಿಸಿದ್ದಾರೆ. ಬುದ್ಧನ ತಾತ್ತ್ವಿಕ ಚಿಂತನೆಗಳನ್ನು ಕಾದಂಬರಿಯ ಮೂಲಕ ಪೋಣಿಸುತ್ತ ಸ್ಫಟಿಕದ ಹೊಳಪನ್ನು ನೀಡಿ ಬೆಳಗುವಲ್ಲಿ ಮೂರ್ತಿಯವರು ಯಶಸ್ವಿಯಾಗಿದ್ದಾರೆ.

**”***

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಎಂ. ಎಸ್‌. ಮೂರ್ತಿಯವರ ʻಬೌಲ್‌ʼ ಕಾದಂಬರಿ”

  1. ಡಾ. ಬಿ. ಜನಾರ್ದನ ಭಟ್

    ಒಳ್ಳೆಯ ಸಮೀಕ್ಷೆ. ಅಭಿನಂದನೆಗಳು ಕಾದಂಬರಿಕಾರರಿಗೂ ನಾ.ದಾ. ಅವರಿಗೂ.

  2. ಪ್ರಮೋದ ನಾಯ್ಕ ಬೆಂಗಳೂರು

    ಸರಳ, ಆದರೂ ಗಾಢವಾದ ವಿಮರ್ಶೆ. ಪೂರ್ತಿ ಕಥೆಯನ್ನು ಓದುವ ಕುತೂಹಲ ಮೂಡಿತು. ಶ್ರೀ ನಾದಾ ಅವರಿಗೆ ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai