ಮಣಿಯಂತಹ ತೀಕ್ಷ್ಣ ಕಣ್ಣುಗಳು ಮತ್ತು ವಿಲಕ್ಷಣ ಕೋರೆಹಲ್ಲುಗಳಿಂದಾಗಿ ಭಯಾನಕವಾಗಿ ಕಾಣುವ ಬಾವಲಿಗಳ ಬಗ್ಗೆ ಕುತೂಹಲಕ್ಕಿಂತ ಹೆಚ್ಚು ಭಯ ಹುಟ್ಟುವುದು ಸಹಜ! ಚೀನೀಯರಿಗೆ ಬಾವಲಿಗಳು ಅದೃಷ್ಟ ಮತ್ತು ಸಂತೋಷದ ಸಂಕೇತವಾದರೆ ಬೇರೆ ಸಂಸ್ಕೃತಿಗಳಲ್ಲಿ ಇವನ್ನು ಅಶುಭ ಹಾಗೂ ಸಾವು ಮತ್ತು ಪುನರ್ಜನ್ಮದ ಅನಿಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ನೈಋತ್ಯ ಏಷ್ಯಾದಲ್ಲಿ ಬಾವಲಿಯನ್ನು ನಕಾರಾತ್ಮಕ ಮತ್ತು ರಕ್ಕಸೀಯ ಜೀವಿ ಎಂದು ನಂಬುತ್ತಾರೆ. ಅದನ್ನು ಕನಸಿನಲ್ಲಿ ಕಂಡರೂ ಸಹ ಅದೊಂದು ಅಪಶಕುನವೆಂಬ ನಂಬಿಕೆಯಿದೆ. ಹಗಲಿಡೀ ನಿಷ್ಕ್ರಿಯವಾಗಿದ್ದು ರಾತ್ರಿಯ ವೇಳೆಯಲ್ಲಿ ಕ್ರಿಯಾಶೀಲವಾಗುವ ಈ ನಿಶಾಚರಿಗಳು ರಕ್ತಪಿಶಾಚಿಗಳೆಂಬ ಅಪನಂಬಿಕೆಯು ಅನೇಕರಲ್ಲಿ ಆಳವಾಗಿ ಬೇರೂರಿದೆ. ಬಾವಲಿಗಳು ದುಷ್ಟಶಕ್ತಿಗಳು ಅಥವಾ ದುರಾದೃಷ್ಟವನ್ನು ತರುತ್ತವೆ ಎಂಬ ತಪ್ಪು ತಿಳುವಳಿಕೆಗೆ ಮುಖ್ಯ ಕಾರಣಗಳೆಂದರೆ ಅವುಗಳ ದೈಹಿಕ ರಚನೆ ಮತ್ತು ಅವು ನಿಶಾಚರಿಗಳಾಗಿರುವುದು. ವಾಸ್ತವದಲ್ಲಿ ಅವು ನಾಚಿಕೆ ಸ್ವಭಾವದ ಸೌಮ್ಯ ಜೀವಿಗಳಾಗಿವೆ. ಬಾವಲಿಗಳು ಪ್ರತಿ ರಾತ್ರಿ ಸಾವಿರಾರು ಹಾನಿಕಾರಕ ಕೀಟಗಳನ್ನು ತಿನ್ನುವುದರ ಮೂಲಕ ಮಾನವರನ್ನು ರೋಗಗಳಿಂದ ರಕ್ಷಿಸುವುದಷ್ಟೇ ಅಲ್ಲದೆ ಬೆಳೆಗಳನ್ನೂ ಕ್ರಿಮಿಕೀಟಕಗಳ ಹಾವಳಿಯಿಂದ ರಕ್ಷಿಸುತ್ತವೆ. ಹಣ್ಣುಗಳನ್ನು ತಿನ್ನುವ ಬಾವಲಿಗಳು ತಮ್ಮ ಹಿಕ್ಕೆಗಳ ಮೂಲಕ ಮೂಲಕ ಬೀಜ ಪ್ರಸರಣವನ್ನು ಮಾಡಿ ಬಿರುಗಾಳಿ ಅಥವಾ ಕಾಳ್ಗಿಚ್ಚಿನಂತಹ ನೈಸರ್ಗಿಕ ವಿಪತ್ತಿಗೊಳಗಾದ ಕಾಡುಗಳನ್ನು ಮತ್ತೆ ಬೆಳೆಯಲು ಸಹಾಯ ಮಾಡಿದರೆ ಕೆಲವು ಬಾವಲಿಗಳು ಜೇನುನೊಣಗಳಂತೆ ಮಕರಂದವನ್ನು ಹೀರಿ ಹೂವುಗಳ ಪರಾಗಸ್ಪರ್ಶಕ್ಕೆ ಎಡೆಮಾಡಿಕೊಡುತ್ತವೆ.
ತಲೆಕೆಳಗಾಗಿ ನೇತಾಡುವ ಕುರೂಪಿ ಬಾವಲಿಗಳು ಮೇಲ್ನೋಟಕ್ಕೆ ಅರ್ಧ ಪ್ರಾಣಿ ಮತ್ತು ಅರ್ಧ ಪಕ್ಷಿಯಂತೆ ಕಾಣುತ್ತವೆ. ಗುಹೆಗಳು, ಹಳೆಯ ಕಟ್ಟಡಗಳು, ಬಂಡೆಗಳ ಬಿರುಕುಗಳು, ಸೇತುವೆಗಳ ಅಡಿಯಲ್ಲಿ ಮತ್ತು ಮರಗಳಲ್ಲಿ ವಾಸಿಸುವ ಬಾವಲಿಗಳು ಹಾರುವ ಸಾಮರ್ಥ್ಯವನ್ನು ಹೊಂದಿದ್ದರೂ ಅವು ಪಕ್ಷಿಗಳಲ್ಲ, ಸಸ್ತನಿಗಳು! ವಾಸ್ತವದಲ್ಲಿ ಇವು ಜಗತ್ತಿನ ಏಕಮಾತ್ರ ’ ಹಾರುವ ಸಸ್ತನಿ’ಗಳು! ಉಳಿದೆಲ್ಲ ಸಸ್ತನಿಗಳಂತೆ ಬಾವಲಿಗಳು ಬೆಚ್ಚಗಿನ ರಕ್ತದ ಪ್ರಾಣಿಗಳು. ಇದರರ್ಥ ಹೊರಗಿನ ವಾತಾವರಣ ಬಿಸಿಯಾಗಿರಲಿ ಅಥವಾ ತಂಪಾಗಿರಲಿ, ಸಸ್ತನಿಗಳು ತಮ್ಮ ದೇಹದ ಉಷ್ಣತೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಬಲ್ಲವು. ಬಾವಲಿಗಳ ವೈಜ್ಞಾನಿಕ ಹೆಸರು ಕೈರೋಪ್ಟೆರಾ (Chiroptera) – ಗ್ರೀಕ್ ಭಾಷೆಯಲ್ಲಿ ಇದರ ಅರ್ಥ ‘ಕೈ-ರೆಕ್ಕೆಗಳು’ ಎಂದಾಗುತ್ತದೆ . ಪಳೆಯುಳಿಕೆ ಪುರಾವೆಗಳ ಪ್ರಕಾರ ಇವು ಐವತ್ತು ದಶಲಕ್ಷ ವರ್ಷಗಳಿಗೂ ಹೆಚ್ಚು ಕಾಲ ಭೂಮಿಯ ಮೇಲೆ ಅಸ್ತಿತ್ವದಲ್ಲಿವೆ – ಹಾಗಾಗಿ ಅವು ಭೂಮಿಯ ಮೇಲಿನ ಅತ್ಯಂತ ಹಳೆಯ ಸಸ್ತನಿ ಪ್ರಭೇದಗಳಲ್ಲಿ ಒಂದಾಗಿವೆ. ಬಾವಲಿಗಳು ವಿಭಿನ್ನ ಪರಿಸರಗಳು ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬಲ್ಲುವಾದ್ದರಿಂದ ಅಂಟಾರ್ಟಿಕಾ (ವಿಶ್ವದ ದಕ್ಷಿಣದ ತುದಿಯಲ್ಲಿರುವ ಖಂಡ)ವನ್ನು ಹೊರತುಪಡಿಸಿ ಉಳಿದೆಲ್ಲ ಖಂಡಗಳಲ್ಲಿ ಕಂಡುಬರುತ್ತವೆ. ಇದಕ್ಕೆ ಕಾರಣ ಅಂಟಾರ್ಟಿಕಾದ ಪ್ರತಿಕೂಲ ಹವಾಮಾನ, ಸೂಕ್ತವಾದ ಆವಾಸಸ್ಥಾನ ಮತ್ತು ಆಹಾರ ಮೂಲಗಳ ಕೊರತೆ. ಈ ನಿಶಾಚರಿಗಳ ಬಗೆಗಿನ ಕೆಲ ಕುತೂಹಲಕಾರಿ ಸಂಗತಿಗಳು ಇಲ್ಲಿವೆ:
1) ವಿಶ್ವಾದ್ಯಂತ ಸುಮಾರು 1,300ಕ್ಕೂ ಹೆಚ್ಚಿನ ಜಾತಿಯ ಬಾವಲಿಗಳಿದ್ದು ಭಾರತದಲ್ಲಿ ಸುಮಾರು 123 ಜಾತಿಯ ಬಾವಲಿಗಳಿವೆ.
2) ಸಮಶೀತೋಷ್ಣ ಹವಾಮಾನದಲ್ಲಿ ಕೆಲ ಜಾತಿಯ ಬಾವಲಿಗಳು ಸುಮರು 10 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು. ಇನ್ನು ಕೆಲವು 20 ಅಥವಾ 30 ವರ್ಷಗಳಿಗಿಂತ ಹೆಚ್ಚು ಬದುಕಬಲ್ಲವು.
3) ಬಾವಲಿಗಳು ಕುರುಡಾಗಿರುತ್ತವೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ನಿಜದಲ್ಲಿ ಬಾವಲಿಗಳು ಕತ್ತಲಲ್ಲೂ ನೋಡಬಲ್ಲ ಸೂಕ್ಷ್ಮ ದೃಷ್ಟಿಯುನ್ನು ಪಡೆದಿವೆ.
4) ಈ ನಿಶಾಚರಿಗಳ ವೈಶಿಷ್ಟ್ಯವೆಂದರೆ ಅವು ವಿಶ್ರಾಂತಿಯ ಸಮಯದಲ್ಲಿ ತಲೆಕೆಳಗಾಗಿ ನೇತಾಡುವ ರೀತಿ. ಬಾವಲಿಗಳು ನೆಲದ ಮೇಲೆ ಓಡಲು ಸಾಧ್ಯವಿಲ್ಲದಿರುವುದರಿಂದ ಅವು ಮೇಲಕ್ಕೆ ಹಾರುವುದು ಅಸಾಧ್ಯ. ಹಾಗಾಗಿ ತಲೆಕೆಳಗಾಗಿ ನೇತಾಡುವುದರಿಂದ ಬಾವಲಿಗಳು ತಮಗೆ ಬೇಕಾದಾಗ ಹಾರಾಟವನ್ನು ಪ್ರಾರಂಭಿಸಲು ಅಗತ್ಯವಿರುವ ಉತ್ಕರ್ಷವನ್ನು ಉತ್ಪಾದಿಸುವ ಅಗತ್ಯವಿರುವುದಿಲ್ಲ. ಅವು ನೇತಾಡುವ ಸ್ಥಳದ ಮೇಲಿನ ಹಿಡಿತವನ್ನು ಬಿಡುಗಡೆ ಮಾಡಿದ ತಕ್ಷಣ ರೆಕ್ಕೆಗಳನ್ನು ತೆರೆದು ಹಾರಬಲ್ಲವು.
5) ಪಕ್ಷಿಗಳ ರೆಕ್ಕೆಗಳಂತೆ ಬಾವಲಿಗಳ ರೆಕ್ಕೆಗಳಲ್ಲಿ ಗರಿಗಳಿರುವುದಿಲ್ಲ. ಇವುಗಳ ರೆಕ್ಕೆಗಳು ಮಾರ್ಪಡಿಸಿದ ಮುಂಗಾಲುಗಳಾಗಿದ್ದು, ಉದ್ದವಾದ ಬೆರಳುಗಳ ಮಧ್ಯೆ ಪಟಾಜಿಯಂ (patagium) ಎಂಬ ತೆಳುವಾದ ಪೊರೆಯಿರುತ್ತದೆ. ಈ ಪೊರೆಯು ಬಾವಲಿಗಳ ದೇಹದ ವಿವಿಧ ಭಾಗಗಳ ನಡುವೆ ವಿಸ್ತರಿಸಿರುವುದರಿಂದಲೆ ಗಂಟೆಗೆ 60 ಮೈಲಿಗಿಂತ ಹೆಚ್ಚಿನ ವೇಗದಲ್ಲಿ ಹಾರುವದು ಸಾಧ್ಯವಿದೆ.
6) ಬಾವಲಿಗಳ ಗಾತ್ರವು ಒಂದು ಪೈಸೆಯ ನಾಣ್ಯಕ್ಕಿಂತ ಕಡಿಮೆ ತೂಕವಿರುವ ಹಂದಿ ಮೂಗಿನ ಬಾವಲಿ (Kitti’s hog-nosed bat) ಯಂತಹ ಸಣ್ಣ ಜಾತಿಗಳಿಂದ ಹಿಡಿದು 6 ಅಡಿಗಳಷ್ಟು ದೊಡ್ದ ರೆಕ್ಕೆಗಳನ್ನು ಹೊಂದಿರುವ ಹಾರುವ ನರಿ ( flying foxes – ಇದೊಂದು ಪ್ರಕಾರದ ಬಾವಲಿ)ಯಷ್ಟು ದೊಡ್ದದಾಗಿರುತ್ತದೆ. ’ಹಾರುವ ನರಿ’ ಬಾವಲಿಗಳನ್ನು ’ಹಣ್ಣಿನ ಬಾವಲಿ’ ( fruit bats ) ಅಥವಾ ’ಬೃಹತ್ ಬಾವಲಿ’ (mega bats) ಎಂದೂ ಕರೆಯುತ್ತಾರೆ. ಹಂದಿ ಮೂಗಿನ ಬಾವಲಿಗಳು ಆಗ್ನೇಯ ಏಷ್ಯಾದಲ್ಲಿ ಕಂಡುಬಂದರೆ ಬೃಹತ್ ಬಾವಲಿಗಳು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳಲ್ಲಿನ ಕೆಲವು ಸಾಗರ ದ್ವೀಪಗಳಲ್ಲಿ ಕಂಡುಬರುತ್ತವೆ.
7) ಬಾವಲಿಗಳು ರಾತ್ರಿಯ ವೇಳೆಯಲ್ಲಿ ತಮ್ಮ ಆಹಾರಕ್ಕಾಗಿ ಕೀಟಗಳನ್ನು ಹುಡುಕಲು ಅನುಸರಿಸುವ ಕ್ರಮವು ಅನನ್ಯವಾದುದು. ಸೆಕೆಂಡಿಗೆ 10-20 ಬೀಪ್ ಧ್ವನಿ ತರಂಗಗಳನ್ನು ತಮ್ಮ ದೇಹದಿಂದ ಹೊರಸೂಸಿ, ಆ ತರಂಗಗಳ ಪ್ರತಿಧ್ವನಿಯನ್ನು ಆಲಿಸುವುದರ ಮೂಲಕ ತಮ್ಮ ಆಹಾರದ ನಿರ್ದೇಶಾಂಕಗಳನ್ನು ಪತ್ತೆ ಹಚ್ಚುತ್ತವೆ.
8) ಕೆಲ ಬಾವಲಿಗಳು ಕೀಟಗಳನ್ನಷ್ಟೆ ತಿಂದರೆ ಬೇರೆ ಜಾತಿಯ ಬಾವಲಿಗಳು ಹಣ್ಣು, ಮಕರಂದ, ಪರಾಗ, ಮೀನು, ಕಪ್ಪೆಗಳು ಮತ್ತು ಸಣ್ಣ ಪ್ರಾಣಿಗಳು ಹೀಗೆ ವಿವಿಧ ರೀತಿಯ ಆಹಾರವನ್ನು ತಿನ್ನುತ್ತವೆ. ಕೇವಲ ರಕ್ತಪಿಶಾಚಿ ಬಾವಲಿಗಳು (vampire bats) ಮಾತ್ರ ಆಹಾರಕ್ಕಾಗಿ ಹಸು, ಪಕ್ಷಿ ಮತ್ತು ಪ್ರಾಣಿಗಳ ರಕ್ತವನ್ನು ಹೀರುತ್ತವೆ.
9) ಕೆಲ ಬಾವಲಿಗಳು ಕೊರೆವ ಚಳಿಗಾಲದಲ್ಲಿ ಗುಹೆಗಳೊಳಗೆ ತಿಂಗಳುಗಟ್ಟಲೆ ಚಳಿನಿದ್ದೆ (ಹೈಬರ್ನೇಟ್) ಮಾಡಿದರೆ ಇನ್ನು ಕೆಲವು ಬೆಚ್ಚಗಿನ ಹವಾಮಾನ ಮತ್ತು ಹೇರಳವಾದ ಆಹಾರ ಮೂಲಗಳನ್ನು ಹುಡುಕಿಕೊಂಡು ಸಾವಿರಾರು ಕಿಲೋಮೀಟರ್ ದೂರ ವಲಸೆ ಹೋಗುತ್ತವೆ.
10) ಇತರ ಸಸ್ತನಿಗಳಂತೆ ಬಾವಲಿಗಳು ಸಹ ತುಪ್ಪಳವನ್ನು ಹೊಂದಿರುತ್ತವೆ. ಇವು ಮರಿಗಳಿಗೆ ಜನ್ಮ ನೀಡುತ್ತವೆ ಮತ್ತು ತಮ್ಮ ಶಿಶುಗಳಿಗೆ ಹಾಲುಣಿಸುತ್ತವೆ. ಹೆಚ್ಚಿನ ಬಾವಲಿಗಳು ವರ್ಷಕ್ಕೆ ಒಂದು ಮರಿಯನ್ನು ಮಾತ್ರ ಪಡೆಯಬಲ್ಲವು.
11) ರೇಬೀಸ್ ವೈರಸ್, SARS-CoV, MERS-CoV, ಮಾರ್ಬರ್ಗ್ ವೈರಸ್, ನಿಪಾ ವೈರಸ್ ಮತ್ತು ಹೆಂಡ್ರಾ ವೈರಸ್ – ಇವು ಬಾವಲಿಗಳಿಂದ ಮಾನವರಿಗೆ ಪರೋಕ್ಷವಾಗಿ ವರ್ಗಾಂತರವಾಗುವ ಕೆಲ ಮುಖ್ಯ ವೈರಸ್ಸುಗಳು. ಈ ವೈರಸ್ಸುಗಳು ಬಾವಲಿಗಳಿಂದ ನೇರವಾಗಿ ಮಾನವರಿಗೆ ವರ್ಗಾವಣೆಯಾಗದೆ ಸಾಮಾನ್ಯವಾಗಿ ಹಂದಿ ಮತ್ತಿತರ ಮಧ್ಯಂತರ ಪ್ರಾಣಿಗಳ ಸಂಪರ್ಕದಿಂದಾಗಿ ಮನುಷ್ಯರ ದೇಹವನ್ನು ಪ್ರವೇಶಿಸುತ್ತವೆ.
12) ಬಾವಲಿಗಳ ಹಿಕ್ಕೆಗಳನ್ನು ’ಗ್ವಾನೋ’ (guano) ಎಂದು ಕರೆಯುತ್ತಾರೆ. ಸಸ್ಯಗಳ ಬೆಳವಣಿಗೆಗೆ ಬೇಕಾದ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್‌ಗಳು ಈ ಹಿಕ್ಕೆಗಳಲ್ಲಿ ಸಮೃದ್ಧವಾಗಿರುವುದರಿಂದ ಇದೊಂದು ರೀತಿಯ ಸಾವಯವ ಗೊಬ್ಬರವಾಗಿದೆ. ರೈತರು ಮತ್ತು ತೋಟಗಾರರು ಮಣ್ಣಿನ ಗುಣಮಟ್ಟವನ್ನು ಸುಧಾರಿಸಿ, ಅಧಿಕ ಬೆಳೆಯನ್ನು ಪಡೆಯಲು ಇವನ್ನು ಬಳಸುತ್ತಾರೆ.
13) ಇವು ತಾವಿರುವ ಪರಿಸರದಲ್ಲಿ ಬೆಳೆಗಳಿಗೆ ರೋಗ ತರುವ ಕ್ರಿಮಿಕೀಟಕಗಳನ್ನು ತಿಂದು ಮಾನವನಿಗೆ ಸಹಾಯ ಮಾಡುತ್ತವೆ. ವಾಸ್ತವದಲ್ಲಿ ಬಾಳೆಹಣ್ಣು, ಮಾವಿನಹಣ್ಣು, ಬೆಣ್ಣೆ ಹಣ್ಣು (ಅವಕಾಡೊ), ಖರ್ಜೂರ ಮತ್ತು ಅಂಜೂರ ಹಣ್ಣಿನ ಗಿಡಗಳನ್ನೊಳಗೊಂಡು 300ಕ್ಕೂ ಹೆಚ್ಚು ಉಷ್ಣವಲಯದಲ್ಲಿನ ಸಸ್ಯಗಳು ಬೀಜ ಪ್ರಸರಣ ಮತ್ತು ಪರಾಗಸ್ಪರ್ಶಕ್ಕಾಗಿ ಬಾವಲಿಗಳನ್ನು ಅವಲಂಬಿಸಿವೆ. ಹೀಗೆ ಬೀಜಗಳನ್ನು ಪ್ರಸರಣಗೊಳಿಸುವ ಮೂಲಕ ಮಾನವರು ಕತ್ತರಿಸಿ ನಾಶಮಾಡಿದ ಮಳೆಕಾಡುಗಳನ್ನು ಪುನರ್ನಿರ್ಮಿಸುವುದರಲ್ಲಿ ಬಾವಲಿಗಳ ಪಾತ್ರ ಹಿರಿದಾಗಿದೆ.
14) ಅಮೆರಿಕೆಯ ಟೆಕ್ಸಾಸಿನ ಬ್ರಾಕೆನ್ ಬ್ಯಾಟ್ ಗುಹೆಯು ವಿಶ್ವದ ಅತಿ ದೊಡ್ಡ ಬಾವಲಿಗಳ ವಸಾಹತು ಪ್ರದೇಶವಾಗಿದೆ. ಪ್ರತಿ ವರ್ಷ ಮಾರ್ಚ್ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ಲಕ್ಷಾಂತರ ಮೆಕ್ಸಿಕನ್ ಮುಕ್ತ ಬಾಲದ ಬಾವಲಿಗಳು ಬ್ರಾಕೆನ್ ಗುಹೆಗಳನ್ನು ಬಂದು ಸೇರುತ್ತವೆ. ಗುಹೆಯೊಳಗಿನ ಬೆಚ್ಚಗಿನ, ಆರ್ದ್ರ ವಾತಾವರಣವು ಮರಿಗಳಿಗೆ ಜನ್ಮ ನೀಡಲು ಮತ್ತು ಬೆಳಸಲು ಸೂಕ್ತ ತಾಣವಾಗಿರುವುದರಿಂದ ಬ್ರಾಕೆನ್ ಗುಹೆಯನ್ನು “ದೈತ್ಯ ಇನ್ಕ್ಯುಬೇಟರ್” ಎಂದೂ ಕರೆಯುತ್ತಾರೆ.
15) ದೊಡ್ಡ ಕಂದು ಬಾವಲಿಗಳು, ಚಿಕ್ಕ ಕಂದು ಬಾವಲಿಗಳು, ಸಾಮಾನ್ಯ ಪಿಪಿಸ್ಟ್ರೆಲ್‌ಗಳು ಮತ್ತು ಮಯೋಟಿಸ್ ಬಾವಲಿಗಳು – ಇವು ಹೆಚ್ಚಾಗಿ ಕಾಣಸಿಗುವ ಬಾವಲಿಯ ಜಾತಿಗಳು. ಕೆಲ ಜಾತಿಯ ಬಾವಲಿಗಳು ಒಂಟಿಯಾಗಿರಲು ಇಚ್ಛಿಸಿದರೆ ಇನ್ನು ಕೆಲವು ಸಣ್ಣ ಅಥವಾ ದೊಡ್ಡ ವಸಾಹತುಗಳನ್ನು ರೂಪಿಸಿಕೊಳ್ಳುತ್ತವೆ. ಸಣ್ಣ ವಸಾಹತುಗಳಲ್ಲಿ ಇವುಗಳ ಸಂಖ್ಯೆ ಒಂದು ಡಜನ್ನಿನಷ್ಟಿದ್ದರೆ ದೊಡ್ದ ವಸಾಹತುಗಳಲ್ಲಿ ಲಕ್ಷಾಂತರವಾಗಿರಬಹುದು!
16) ಹವಾಮಾನ ಬದಲಾವಣೆ , ಪರಿಸರ ಮಾಲಿನ್ಯ, ಅರಣ್ಯನಾಶ, ಮಾರಕ ರೋಗಗಳು – ಹೀಗೆ ಅನೇಕ ಕಾರಣಗಳಿಂದಾಗಿ ಕೆಲ ಜಾತಿಯ ಬಾವಲಿಗಳು ಅಪಾಯದಲ್ಲಿವೆ.
ಅನೇಕ ದಶಕಗಳ ಹಿಂದೆ ಅಮೆರಿಕೆಯ ಡಿಸಿ ಕಾಮಿಕ್ಸ್ ಮಕ್ಕಳಿಗಾಗಿ ಪ್ರಕಟಿಸಿದ ಕಾಮಿಕ್ಸ್ ಪುಸ್ತಕಗಳಲ್ಲಿ ’ಬಾವಲಿ ಮಾನವ’ (ಬ್ಯಾಟ್ ಮ್ಯಾನ್) ನು ಮಾನವರನ್ನು ಅನೇಕ ಆಪತ್ತುಗಳಿಂದ ರಕ್ಷಿಸುವ ಒಬ್ಬ ಸೂಪರ್ ಹೀರೋ. ತದನಂತರ ಬಿಡುಗಡೆಯಾದ ’ಬಾವಲಿ ಮಾನವ’ ನ ಸಾಹಸಗಳನ್ನಾಧರಿಸಿದ ಅನೇಕ ಇಂಗ್ಲಿಷ್ ಚಲನಚಿತ್ರ ಸರಣಿಗಳು ಇಂದಿಗೂ ಜನಪ್ರಿಯವಾಗಿವೆ. ಮಾನವನು ಬಾವಲಿಗಳಿಂದ ಮೈಲುಗಟ್ಟಲೆ ದೂರವಿದ್ದರೂ ಅವುಗಳ ಬಗೆಗಿನ ತನ್ನ ಕುತೂಹಲವನ್ನು ಉಳಿಸಿಕೊಂಡಿದ್ದಕ್ಕೆ ಬಾವಲಿ ಮಾನವನ ಕಾಲ್ಪನಿಕ ಪಾತ್ರವು ಒಂದು ಉತ್ತಮ ನಿದರ್ಶನವಾಗಿದೆ.
ಜಗತ್ತಿನ ಅನೇಕ ಸಂಸ್ಕೃತಿಗಳಲ್ಲಿ ಪ್ರಕೃತಿಯಲ್ಲಿರುವ ಕೆಲ ಪಕ್ಷಿ, ಪ್ರಾಣಿ, ಕ್ರಿಮಿಕೀಟಕಗಳ ಬಗೆಗೆ ತಪ್ಪು ಕಲ್ಪನೆಗಳಿವೆ, ಮೂಢ ನಂಬಿಕೆಗಳಿವೆ. ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯ ಸಹಕಾರದಿಂದಲೇ ಮಾನವನ ಜೀವನವು ನಿರಾಪದವಾಗಿದೆ.ಅದಕ್ಕೆ ನಾವು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪ್ರತಿಯೊಂದು ಜೀವಿಯ ಗುಣವೇನು, ಕೆಲಸವೇನು ಎಂಬುದನ್ನು ತಿಳಿಸಿಕೊಡುವುದರ ಅಗತ್ಯವಿದೆ. ಆ ಮೂಲಕ ಮೂಢನಂಬಿಕೆಗಳನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ. ’ವಸುಧೈವ ಕುಟುಂಬಕಂ’ ಎಂದು ಪ್ರತಿಪಾದಿಸಿದ ನಮ್ಮ ಹಿರಿಯರ ಮಾತಿನಲ್ಲಿ ಸೃಷ್ಟಿಯ ಮೂಲ ತತ್ವವಿದೆ. ಆದ್ದರಿಂದ ಎಲ್ಲ ಜೀವಿಗಳೊಂದಿಗೆ ಸಹಜೀವನ ನಡೆಸುವುದರ ಮೂಲಕ ನಾವು ಯೋಗ್ಯ ಮಾನವರಾಗಿ ಬಾಳಲು ಸಾಧ್ಯವಾಗುತ್ತದೆ.
- ಸೀಮಾ ಕುಲಕರ್ಣಿ, ಕೌಲಾಲಂಪುರ, ಮಲೇಶಿಯ








1 thought on “ನಿಗೂಢ ಜೀವಿ : ತೊಗಲು ಬಾವಲಿ”
ಬಾವಲಿ ಬಗ್ಗೆ ಇಷ್ಟು ಸವಿಸ್ತಾರವಾಗಿ ಬರೆದಿದ್ದೀರಿ ! ನಿಮಗೆ ನಮ್ಮ ಶುಭೇಚ್ಛೆಗಳು !