ಜಿ. ಎಸ್. ಆಮೂರ ಅವರ
ಸಮಗ್ರ ಬೇಂದ್ರೆ ವಿಮರ್ಶೆ
ಸಂಪಾದಕರು: ಡಾ. ಜಿ. ಎಂ.ಹೆಗಡೆ
ಪ್ರಕಾಶನ : ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. 2025, ಬೆಲೆ: ರೂ. 1250/-
ವರಕವಿ ಬೇಂದ್ರೆ ಅವರ ಹೆಸರನ್ನು ಕೇಳದ ಕನ್ನಡಿಗನಿಲ್ಲ.ಆಧುನಿಕ ಕನ್ನಡ ಕಾವ್ಯ ನಿರ್ಮಾಪಕರಲ್ಲಿ
ಅವರದು ಎದ್ದು ಕಾಣುವ ಹೆಸರು.”ಒಂದು ಪೂರ್ಣ ಆಯುಷ್ಯವನ್ನು ಸಾರ್ಥಕವಾಗಿ ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಾಗಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು.
ಇಪ್ಪತ್ತನೆಯ ಶತಮಾನದಲ್ಲಿ ಇಂಥ ಕವಿ ಕನ್ನಡದಲ್ಲಿ ಇರುವುದು ಕನ್ನಡ ಭಾಷೆಯ ಸುದೈವವೇ ಸರಿ” ಎಂಬುದಾಗಿ ಖ್ಯಾತ ಸಾಹಿತಿ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಹೇಳಿರುವ ಮಾತಿನಲ್ಲಿ ಅತ್ಯುಕ್ತಿ ಇಲ್ಲ.ಬೇಂದ್ರೆ ಕನ್ನಡಿಗರ ಭಾವಕೋಶದಲ್ಲಿ ಸೇರಿಹೋದ ಅದ್ಭುತ ಕವಿ ಚೇತನ. ಅವರ ಸಮಗ್ರ ಸಾಹಿತ್ಯವನ್ನು ತಾಳೆ ಹಾಕಿ ಒರೆಗೆ ಹಚ್ಚಿ ನೋಡಿ ಅವರನ್ನು ಭುವನದ ಭಾಗ್ಯ ಎಂದು ಕರೆದು ಅವರ ದೈತ್ಯ ಪ್ರತಿಭೆಯ ಪ್ರಕಾಶವನ್ನು ಲೋಕ ಸಮ್ಮುಖಗೊಳಿಸಿದವರು ವಿಮರ್ಶಕ ಡಾ.ಆಮೂರ.
ಡಾ. ಜಿ.ಎಸ್. ಆಮೂರ ಅವರ ‘ಸಮಗ್ರ ಬೇಂದ್ರೆ ವಿಮರ್ಶೆ’ ಈ ಮಹಾಕೃತಿಯನ್ನು ವಿಮರ್ಶಕ ಡಾ. ಜಿ. ಎಂ. ಹೆಗಡೆ ಅವರು ಇತ್ತೀಚಿಗೆ ಸಂಪಾದಿಸಿ ಕೊಟ್ಟಿದ್ದಾರೆ.”ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವ ವಿಕಾಸ ಪ್ರಕ್ರಿಯೆ.ಅದಕ್ಕೆ ಶತಮಾನಗಳೂ ಬೇಕಾಗಬಹುದು.ನನ್ನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ಭವಿಷ್ಯತ್ತಿನಲ್ಲಿದೆ ” ಎಂಬುದಾಗಿ ಬೇಂದ್ರೆಯವರೇ ಒಂದು ಕಡೆ ಹೇಳಿಕೊಂಡಿದ್ದರು. ಈ ನುಡಿ ಯನ್ನು ಸಾಕಾರಗೊಳಿಸಿದ್ದು ಪ್ರಸ್ತುತ ಕೃತಿಯ ಹೆಚ್ಚುಗಾರಿಕೆ. ಬೇಂದ್ರೆಯವರು ದರ್ಶಕ ಕವಿ, ಅವರ ದರ್ಶನವನ್ನು ಸಮಗ್ರವಾಗಿ ಖಚಿತವಾಗಿ ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿ ಪ್ರಚಂಡವಾದ ಕೃತಿಗಳನ್ನು ರಚಿಸಿದ ಹಿರಿಮೆ ಆಮೂರ ಅವರಿಗೆ ಸಲ್ಲುತ್ತದೆ. ಆಮೂರ ಅವರು ಕಳೆದ ನಾಲ್ಕು ದಶಕಗಳಲ್ಲಿ ನಡೆಸಿದ ಬೇಂದ್ರ ಸಾಹಿತ್ಯ ಚಿಂತನೆ, ಅನುಸಂಧಾನ, ವಿಚಾರ ವಿಮರ್ಶೆ ಪ್ರಸಕ್ತ ಕೃತಿಯಲ್ಲಿ ಒಂದೆಡೆ ಅಚ್ಚರಿ ಪಡುವಹಾಗೆ ದಾಖಲಾಗಿರುವುದು ಕನ್ನಡದ ಅದೃಷ್ಟ.
ಸಾಂಪ್ರತ ಗ್ರಂಥದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳಿವೆ. ಮೊದಲನೆಯ ಭಾಗದಲ್ಲಿ ‘ಭುವನದ ಭಾಗ್ಯ’,ಎರಡನೆಯ ಭಾಗದಲ್ಲಿ ‘ಭುವನದ ಭಾಗ್ಯ ಕೃತಿಯ ಕುರಿತು ಕನ್ನಡ ವಿಮರ್ಶೆಯ ಸಹಸ್ಪಂದನ’, ಮೂರನೆಯ ಭಾಗದಲ್ಲಿ ‘ಭುವನದ ಭಾಗ್ಯ’ದ ನಂತರದಲ್ಲಿ ಬಂದ ಆಮೂರರ ಬೇಂದ್ರೆ ಸಾಹಿತ್ಯ ವಿಮರ್ಶೆಯ ಲೇಖನಗಳ ‘ಒಳಗಿರುವ ಬೆಳಕು’, ನಾಲ್ಕನೆಯ ಭಾಗದಲ್ಲಿ ಬೇಂದ್ರೆ ಕವಿತೆಗಳ ಇಂಗ್ಲಿಷ್ ಅನುವಾದ ‘The Spider and The Web’, ಜತೆಗೆ ಅಂಬಿಕಾತನಯದತ್ತರ ಮೂಲ ಕನ್ನಡ ಕವಿತೆಗಳನ್ನು ಒಳಗೊಂಡಿರುವುದು ವಿಶೇಷ.
ಭುವನದ ಭಾಗ್ಯ ಆಮೂರ ವಿರಚಿತ ಅತ್ಯಂತ ಮಹತ್ವದ ವಿಮರ್ಶಾ ಕೃತಿ.ಬೇಂದ್ರೆ ಅವರ ಸಮಗ್ರ ಕಾವ್ಯ ದರ್ಶನವನ್ನು ಸಶಕ್ತವಾಗಿ ಹಿಡಿದಿಟ್ಟ ಅಪೂರ್ವ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.ಬೇಂದ್ರೆಯವರ ದರ್ಶನದ ಅಖಂಡತೆಯನ್ನು ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿ ವೈವಿಧ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ನೋಡುವ ಡಾ. ಆಮೂರರ ವಿಮರ್ಶೆ ವಿದ್ವತ್ ವಲಯದಲ್ಲಿ ಬಹು ಪ್ರಶಂಸೆಗೆ ಪಾತ್ರವಾಗಿದೆ.ಕವಿ ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳ ವಿಮರ್ಶೆಯನ್ನು ಪರಿಶೀಲಿಸಿ, ಎದ್ದ ತಕರಾರುಗಳಿಗೆ ಸಮಚಿತ್ತದಿಂದ ಪ್ರತಿಕ್ರಿಯಿಸಿ ವಿಚಾರಾತ್ಮಕವಾದ ದೃಷ್ಟಿಕೋನವನ್ನು ಒದಗಿಸಿದ ಶ್ರೇಯಸ್ಸು ಆಮೂರರಿಗೆ ಸಲ್ಲುತ್ತದೆ.ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಈ ಕೃತಿ ಪಾತ್ರವಾಗಿದೆ. ಒಳಗಿರುವ ಬೆಳಕು ಇದೂ ಸಹ ಬೇಂದ್ರೆ ಅವರ ಸಾಹಿತ್ಯದ ಕುರಿತಾಗಿ ಆಮೂರ ಅವರು ಬರೆದ ಪ್ರೌಢ ಚಿಂತನೆಯನ್ನು ಒಳಗೊಂಡ ಕೃತಿ.ಇದರಲ್ಲಿ ಕವಿ ಬೇಂದ್ರೆ ಅವರ ವ್ಯಕ್ತಿತ್ವ, ಪ್ರತಿಭೆ, ಅವರ ಜೀವನ ಪ್ರಜ್ಞೆ, ಅವರ ಕಾವ್ಯ ಧರ್ಮ, ಬೇಂದ್ರೆ ಅವರ ಕಾವ್ಯದಲ್ಲಿ ಪ್ರಜ್ಞೆ ಮತ್ತು ಪ್ರಯೋಗ, ಬೇಂದ್ರೆಯವರ ಕಾವ್ಯಾನುಸಂಧಾನದ ಅನನ್ಯ ತೆಯನ್ನು ಇಲ್ಲಿ ತುಲನಾತ್ಮಕವಾಗಿ ಅನಾವರಣಗೊಳಿಸಲಾಗಿದೆ.
“ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮಲ್ಲಿಯ ಕವಿಯನ್ನು ‘ಅಂಬಿಕಾತನಯದತ್ತ’ ಎಂದು ಕರೆದು ತಮ್ಮ ತಾಯಿಯ ಹೆಸರಿನಲ್ಲಿಯೇ ಕೀರ್ತಿ ಗಳಿಸಿದರು. ಜೀವನದಲ್ಲಿ ಅವರು ಸುಖ ದುಃಖಗಳೆರಡನ್ನೂ ಅತ್ಯಂತಿಕವಾಗಿ ಅನುಭವಿಸಿದರು. ಆದರೆ ನಾದಲೀಲೆಯ ಪ್ರಾರಂಭದಲ್ಲಿ ಅವರು ಹೇಳಿದಂತೆ ತಮ್ಮ ಯಾತನೆಯನ್ನು ತಮಗಾಗಿ ಇರಿಸಿಕೊಂಡು ಅದರ ಹಾಡನ್ನು ಮಾತ್ರ ರಸಿಕರಿಗೆ ನೀಡಿದರು. ಅವರ ಕಾವ್ಯ ತೀರ ಸ್ವಂತದ್ದೆಂದೆನಿಸುವ ಅನುಭವವನ್ನೇ ಆಧರಿಸಿದರೂ ಅದು ನಿಜವಾದ ಸಾರ್ವತ್ರಿಕತೆಯನ್ನೂ, ಅಪೌರುಷೇಯತ್ವವನ್ನೂ ಸಾಧಿಸಿತು” ಹೀಗೆ ಬೇಂದ್ರೆ ಅವರ ಕಾವ್ಯದ ಅನನ್ಯತೆ ಹಾಗೂ ಅದರ ವಿರಾಟ್ ಸ್ವರೂಪ ದರ್ಶನವನ್ನು ಮಾಡಿಕೊಟ್ಟಿರುವುದು ಈ ಕೃತಿಯ ಅತಿಶಯತೆ.
“ಜೀವನದಲ್ಲಿಯೇ ಆಗಲಿ, ಸಾಹಿತ್ಯದಲ್ಲಿಯೇ ಆಗಲಿ ಬೇಂದ್ರೆಯವರು ಸಮನ್ವಯ, ಸಾಮಂಜಸ್ಯ, ಸಾಮರಸ್ಯ ಸೂತ್ರಗಳ ಆರಾಧಕರಾಗಿದ್ದರು. ಬದಲಾವಣೆಯನ್ನಾಗಲೀ, ಆಧುನಿಕತೆಯನ್ನಾಗಲೀ ಅವರೆಂದೂ ವಿರೋಧಿಸಲಿಲ್ಲ. ಹೀಗಿದ್ದರೂ ಅವರು ತಮ್ಮ ಸಾಹಿತ್ಯಕ ಜೀವನದ ಉತ್ತರಾರ್ಧದಲ್ಲಿ ಸಮಾಜ ವಿಮುಖರಾಗಿ ಅಧ್ಯಾತ್ಮದಲ್ಲಿ ಮುಳುಗಿಬಿಟ್ಟರು ಎಂಬ ಗ್ರಹಿಕೆಯೊಂದು ಅವರ ಕೆಲ ಓದುಗರಲ್ಲಿ ರೂಢವಾಗಿದೆ. ಆದರೆ ಈ ಗ್ರಹಿಕೆಯಲ್ಲಿ ತಥ್ಯವಿಲ್ಲ.ವಾತ್ಸಲ್ಯ, ಪ್ರೇಮ, ಗೆಳೆತನ ಇಂಥ ವಸ್ತುಗಳನ್ನಾಧರಿಸಿದ ಅವರ ಕವಿತೆಗಳು ಕೆಲವೊಂದು ಕಾಲಖಂಡಗಳಿಗೆ ಸೀಮಿತವಾಗಿವೆ. ಆದರೆ ಅವರ ಸಮಷ್ಟಿಪ್ರಜ್ಞೆಯ ಕವಿತೆಗಳಿಗೆ ಇಂಥ ಕಾಲಮಿತಿಗಳಿಲ್ಲ. ಯಾವ ‘ಇಜಂ’ಗಳನ್ನೂ ಅವರು ಸ್ವೀಕರಿಸಲಿಲ್ಲ. ಆದರೆ ಸಮಾಜದ ಆಗುಹೋಗುಗಳಿಗೆ ಅವರಷ್ಟು ಸಂವೇದನಾಶೀಲರಾಗಿ ಸ್ಪಂದಿಸಿದ ಕವಿಗಳು ವಿರಳ. ಶ್ರೀ ಅರವಿಂದರ ಪ್ರಭಾವ ಅವರ ಸಮಷ್ಟಿಪ್ರಜ್ಞೆಗೆ ವಿರುದ್ಧವಾದ ದಿಕ್ಕಿನಲ್ಲಿ ಕಾರ್ಯ ಮಾಡಲಿಲ್ಲ. ತದ್ವಿರುದ್ಧವಾಗಿ ಅದಕ್ಕೊಂದು ಭದ್ರವಾದ ತಾತ್ವಿಕ ನೆಲೆಯನ್ನು ಒದಗಿಸಿಕೊಟ್ಟಿತು”ಇದು ಆಮೂರ ಅವರು ತೆರೆದಿಟ್ಟಿರುವ ಸಾಲು ಸಾಲು ಒಳನೋಟಗಳು.
ಅಮೂರರ ಭುವನದ ಭಾಗ್ಯ ಕನ್ನಡ ಸಾಹಿತ್ಯ ವಿಮರ್ಶೆಯ ವಲಯದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ ಕೃತಿ.
“ಬೇಂದ್ರೆಯವರನ್ನು ಕುರಿತು ಈ ವರೆಗೂ ಇಷ್ಟು ಕೂಲಂಕಷವಾದ ಚರ್ಚೆಯನ್ನು ಒಳಗೊಂಡ ಸಮಗ್ರ ವಿವೇಚನೆ ಕನ್ನಡದಲ್ಲಿ ನಡೆದಿರಲಿಲ್ಲ. ಕವಿಕಾವ್ಯಪರವಾದ ಮುಕ್ತ ಸಹೃದಯತೆ, ಬಹುಶ್ರುತ ವಿದ್ವತ್ತು, ಅಪಾರವಾದ ವಿನಯ, ಸಮತೂಕದ ವಿಮರ್ಶನಪ್ರಜ್ಞೆ -ಇವು ‘ಭುವನದ ಭಾಗ್ಯ’ದ ವಿವೇಚನೆಯ ನೆಲೆಗಟ್ಟಾಗಿವೆ. ಬೇಂದ್ರೆಯವರ ಕಾವ್ಯದ ಮುಖ್ಯ ಆಶಯಗಳನ್ನೂ, ಮಾದರಿಗಳನ್ನೂ, ಪ್ರತೀಕಗಳನ್ನೂ, ಒಟ್ಟಾರೆ ಬೇಂದ್ರೆ ಸಾಹಿತ್ಯದ ನಿಲುವುಗಳನ್ನೂ ಇದುವರೆಗೆ ಬೇಂದ್ರೆಯವರನ್ನು ಕುರಿತು ನಡೆದಿರುವ ವಿಮರ್ಶೆಯ ಹಿನ್ನೆಲೆಯಲ್ಲಿ ಮತ್ತು ಸಮಕಾಲೀನ ಸಂದರ್ಭದಲ್ಲಿ ಚರ್ಚೆಗೆ ಗುರಿಪಡಿಸುವದರ ಮೂಲಕ ಬೇಂದ್ರೆಯವರ ಸಾಹಿತ್ಯದ ಮರುಪರಿಶೀಲನೆಗೆ ಹಾಗೂ ಅರ್ಥವಂತಿಕೆಗೆ ಭದ್ರವಾದ ಬುನಾದಿಯನ್ನು ಡಾ. ಆಮೂರರು ಹಾಕಿಕೊಟ್ಟಿದ್ದಾರೆ” ಎಂಬುದಾಗಿ ಡಾ. ಜಿ.ಎಸ್.ಶಿವರುದ್ರಪ್ಪ ಅವರು ಹೇಳಿರುವ ಮಾತುಗಳಲ್ಲಿ ಉತ್ಪ್ರೇಕ್ಷೆ ಇಲ್ಲ.
ಬೇಂದ್ರೆ ಅವರದು ದೈತ್ಯ ಪ್ರತಿಭೆ. ಕಾವ್ಯಸೃಷ್ಟಿಯಂತೆ ಕಾವ್ಯಚಿಂತನವನ್ನೂ ನಿಷ್ಠೆಯಿಂದ ನಡೆಯಿಸಿದ ಕವಿಚಿಂತಕರಲ್ಲಿ ಬೇಂದ್ರೆಯವರು ಅಗ್ರಪಂಕ್ತಿಗೆ ಸೇರಿದವರು. ಕವಿಯ ಸ್ವರೂಪವನ್ನು ಅವರು ದೃಷ್ಟಾರ ಮತ್ತು ಸೃಷ್ಟಾರ ಎಂಬ ಎರಡು ಸ್ತರಗಳಲ್ಲಿ ಗುರುತಿಸಿದರು.ದೃಷ್ಟಾರನಾಗದೆ ಕವಿ ಸೃಷ್ಟಾರನಾಗಲಾರ ಎಂದು ಅವರು ದೃಢವಾಗಿ ನಂಬಿದ್ದರು. ಕಾವ್ಯಸೃಷ್ಟಿಯನ್ನು ‘ಯೋಗ’ ಎಂದು ಕರೆದು ಅದರ ಎರಡು ಮುಖಗಳನ್ನು ಅವರು ಗುರುತಿಸಿದರು-ಅಂತರಂಗ ಯೋಗ ಹಾಗೂ ಬಹಿರಂಗ ಯೋಗ. ಅಂತರಂಗದ ‘ಅನಿರ್ವಚನೀಯ’ ದರ್ಶನವನ್ನು ಭಾಷೆಯ ಎಲ್ಲ ಸ್ತರಗಳನ್ನು ಬಳಸಿಕೊಂಡು ‘ವಚನ’ಕ್ಕೆ ಇಳಿಸುವುದು ಕವಿ ಬಹಿರಂಗ ಯೋಗದಲ್ಲಿ ನಡೆಸುವ ಕ್ರಿಯೆ. ಬಹಿರಂಗ ಯೋಗವನ್ನು ಅವರು ‘ಕರ್ಮಯೋಗ’ ಎಂತಲೂ ಕರೆದರು. ಈ ಕ್ರಿಯೆಯಲ್ಲಿ ಕವಿ ದೊರಕಿಸುವ ಯಶಸ್ಸು ಅವನ ಯೋಗ್ಯತೆಯನ್ನು ನಿರ್ಧರಿಸುತ್ತದೆ ಎಂಬ ಗಂಭೀರ ಜಿಜ್ಞಾಸೆ ಈ ಕೃತಿಯಲ್ಲಿ ಅಡಕಗೊಂಡಿದೆ. ಬೇಂದ್ರೆಯವರ ಸಾಹಿತ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ಇಡಿಯಾಗಿ ನೋಡುವ ಪ್ರಾಮಾಣಿಕ ಪ್ರಯತ್ನ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಬೇಂದ್ರೆಯವರ ಕಾವ್ಯ, ನಾಟಕ,ಕತೆ, ಕಾವ್ಯಮೀಮಾಂಸೆ,ಸಾಹಿತ್ಯ ವಿಮರ್ಶೆ, ವಿಚಾರ ಸಾಹಿತ್ಯ ಹೀಗೆ ಎಲ್ಲವೂ ಇಲ್ಲಿ ಚರ್ಚೆಗೆ ವಿಶ್ಲೇಷಣೆಗೆ ಒಳಗಾಗಿವೆ.
ಬೇಂದ್ರೆ ಅವರ ಮನೆ ಮಾತು ಮರಾಠಿ. ಅವರು ಪದವಿ ಶಿಕ್ಷಣ ಪೂರೈಸಿದ್ದು ಪುಣೆಯಲ್ಲಿ. ಹೀಗಾಗಿ ಕೆಲವರು ಬೇಂದ್ರೆ ಅವರ ಕಾವ್ಯ ರಚನೆಗೆ ಮರಾಠಿ ಪ್ರೇರಣೆ ನೀಡಿದೆ ಎಂಬ ವಾದವನ್ನು ಮಂಡಿಸಿದ್ದೂ ಉಂಟು.ಈ ಕುರಿತು ಆಮೂರ ಅವರ ವಿಚಾರ ವಿಮರ್ಶೆ ಹೀಗಿದೆ “ಮರಾಠಿ ಕಾವ್ಯ ಆಧುನಿಕ ಕನ್ನಡ ಕಾವ್ಯದ ಮೇಲೆ ವಿಶೇಷವಾದ ಯಾವ ಪ್ರಭಾವವನ್ನೂ ಬೀರಿಲ್ಲ ಎಂದು ಸ್ವತಃ ಬೇಂದ್ರೆಯವರೇ ಸ್ಪಷ್ಟವಾಗಿ ಹೇಳಿದ್ದರೂ ಅವರ ಕಾವ್ಯ ಸ್ಫೂರ್ತಿಯ ಪ್ರಾಥಮಿಕ ನೆಲೆ ಮರಾಠಿ ಕಾವ್ಯದಲ್ಲಿದೆ ಎಂದು ಸಾಧಿಸುವ ಪ್ರಯತ್ನಗಳು ನಡೆದಿವೆ. ಬೇಂದ್ರೆಯವರ ಪ್ರಾರಂಭದ ಕವಿತೆಗಳ ಸ್ವರೂಪವನ್ನು ನೋಡಿದಾಗ ಅವರು ತಮ್ಮನ್ನು ಕನ್ನಡ ಕಾವ್ಯ ಪರಂಪರೆಯೊಡನೆ ಎಷ್ಟು ಗಾಢವಾಗಿ ಜೋಡಿಸಿಕೊಂಡಿದ್ದರೆನ್ನುವುದರ ಬಗ್ಗೆ ಸಂಶಯ ಉಳಿಯಲಾರದು. ಕನ್ನಡ ಕಾವ್ಯದ ಆಧುನೀಕರಣದ ದಿಕ್ಕಿನಲ್ಲಿ ಹಟ್ಟಿಯಂಗಡಿ ನಾರಾಯಣರಾಗಲಿ, ಶ್ರೀ ಅವರಾಗಲೀ ನಡೆಯಿಸಿದ ಪ್ರಯೋಗಗಳಿಂದಲೂ ಅವರು ನೇರವಾಗಿ ಪ್ರಭಾವಿತರಾಗಲಿಲ್ಲ.ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಬೇಂದ್ರೆಯವರ ಕಾವ್ಯ ಮಹತ್ತ್ವದ್ದಾಗುವುದು ಅಭಿವ್ಯಕ್ತಿ ನಿಷ್ಠ ಕಾವ್ಯರೂಪಗಳನ್ನು ಸೃಷ್ಟಿಸುವುದರ ಮೂಲಕ. ಈ ದೃಷ್ಟಿಯಿಂದ 1919ರಲ್ಲಿಯೇ ಅವರು ಬರೆದ ‘ಬೆಳಗು’ ಕವಿತೆಗೆ ಐತಿಹಾಸಿಕ ಮಹತ್ತ್ವವಿದೆ” ಎಂಬುದನ್ನು ಇಲ್ಲಿ ಲೇಖಕರು ವಿವಿಧ ಪುರಾವೆಗಳ ಮೂಲಕ ರುಜುವಾತು ಪಡಿಸಿದ್ದಾರೆ.ಬೇಂದ್ರೆ ಅವರ ಸಾಹಿತ್ಯದ ಬಲ್ಮೆ ಏನು ಎಂಬುದನ್ನು ಎಳೆ ಎಳೆಯಾಗಿ ತೌಲನಿಕವಾಗಿ ಬಿಚ್ಚಿಟ್ಟಿ ರುವುದು ಈ ಕೃತಿಯ ವಿಶೇಷತೆ.
ಉದಾಹರಣೆಗೆ
1) ” ಬೇಂದ್ರೆಯವರು ತಮ್ಮ ಕಾವ್ಯಜೀವನದ ಮೊದಲಿನಿಂದ ಕೊನೆಯವರೆಗೆ ಒಂದೇ ರೀತಿಯ ಕವಿತೆ ಬರೆಯಲಿಲ್ಲ. ಸಾಂಪ್ರದಾಯಿಕ ರಚನೆಗಳು, ಹಾಡು-ಲಾವಣಿಗಳು, ಸಾನೆಟ್, ಸೀಸಪದ್ಯ ಮೊದಲಾದ ರೂಪಗಳು, ‘ನಾಕುತಂತಿ’ಯಂಥ ಸಂಕೀರ್ಣ ರಚನೆಗಳು, ತತ್ವಪದ ಇಂಥ ಅನೇಕ ಪ್ರಕಾರಗಳಲ್ಲಿ ಅವರ ಕಾವ್ಯ ಹಬ್ಬಿಕೊಂಡಿದೆ. ಅವರ ಕಾವ್ಯದ ಉಗಮ ದೇಸೀ ಪರಂಪರೆಯಲ್ಲಿದ್ದಂತೆ ಶಿಷ್ಟ ಪರಂಪರೆಯಲ್ಲಿಯೂ ಇದೆ. ಇದು ಕನ್ನಡದ ಮಹತ್ವದ ಕವಿಗಳ ವೈಶಿಷ್ಟ್ಯವೂ ಆಗಿದೆ. ವಿಮರ್ಶೆಯ ಮಾನದಂಡಗಳು ಈ ಸತ್ಯವನ್ನು ಅವಶ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಧ್ಯವಿದ್ದ ಮಟ್ಟಿಗೆ ನನ್ನ ಪುಸ್ತಕದಲ್ಲಿ ಇಂಥ ಮಾನದಂಡಗಳನ್ನು ಹೊರಗಿನಿಂದ ತರದೆ ಆಂತರಿಕವಾಗಿ ರೂಪಿಸಿಕೊಳ್ಳಲಾಗಿದೆ. ಕೃತಿನಿಷ್ಠತೆ ವಿಮರ್ಶೆಯಲ್ಲಿ ನಾನು ಯಾವಾಗಲೂ ಕಾಯ್ದುಕೊಂಡು ಬಂದಿರುವ ಒಂದು ಗುಣ. ಅದನ್ನು ಇಲ್ಲಿಯೂ ಬಿಟ್ಟುಕೊಟ್ಟಿಲ್ಲ. ಬೇಂದ್ರೆಯವರ ಮಹತ್ವದ ಕವಿತೆಗಳ ವಿಶ್ಲೇಷಣೆ ತಕ್ಕ ಪ್ರಮಾಣದಲ್ಲಿ ನಡೆದಿದೆಯಾದರೂ ಅನೇಕ ಅವಾಸ್ತವ ಅಂಶಗಳೂ ಅದರಲ್ಲಿ ಸೇರಿಕೊಂಡಿವೆ, ಸೇರಿಕೊಳ್ಳುತ್ತಲಿವೆ. ಇವುಗಳನ್ನು ಗುರುತಿಸುವುದು ಅವಶ್ಯವಿದೆ. ಇದೂ ಅಲ್ಲದೆ, ಪ್ರಸ್ತುತವಾದ ಹೊಸ ಅಂಶಗಳನ್ನು ಗಮನಿಸುವುದರ ಮೂಲಕ ಅರ್ಥೈಸುವ ಕ್ರಿಯೆ ಇನ್ನೂ ಹೆಚ್ಚು ಸಮೃದ್ಧವಾಗಬಲ್ಲುದು” ಪ್ರಸ್ತಾವನೆಯಲ್ಲಿ ಆಮೂರ ಅವರು ಹೇಳಿದ ಮಾತು ಈ ಕೃತಿಯಲ್ಲಿ ಚೆನ್ನಾಗಿ ನೆರವೇರಿದೆ. ಬೇಂದ್ರೆಯವರ ದರ್ಶನದ ಅಖಂಡತೆಯನ್ನು ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿಯ ವೈವಿಧ್ಯವನ್ನು ಅತ್ಯಂತ ಸಮರ್ಪಕವಾಗಿ ಗುರುತಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.
ಎರಡು ಮಹಾಯುದ್ಧಗಳನ್ನು ಕಂಡ ಕಾಲದಲ್ಲಿ ಬದುಕಿಯೂ ಬೇಂದ್ರೆಯವರು ಮಾನವನ ಭವಿಷ್ಯದ ಬಗ್ಗೆ ಭರವಸೆಯನ್ನು ಹೊಂದಿದ್ದರು. ಜ್ಞಾನಪೀಠ ಪ್ರಶಸ್ತಿಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ “ನವಕೃತಯುಗವೊಂದು ಕ್ಷಿತಿಜದಲ್ಲಿ ಮೂಡುತ್ತಲಿದೆಯೆಂದು ನನಗೆ ಅನಿಸುತ್ತಾ ಇದೆ” ಎಂದು ಘೋಷಿಸಿ ಅವರು ಈ ಭರವಸೆಯನ್ನು ವ್ಯಕ್ತಪಡಿಸಿದರು. ಬೇಂದ್ರೆಯವರ ಆಶಾವಾದ ನಮಗೆ ಮಹತ್ತ್ವದ್ದಾಗುವ ಕಾರಣವೆಂದರೆ ಅಷ್ಟೇ ಗಟ್ಟಿಯಾದ ಅವರ ವಾಸ್ತವದ ಅರಿವು: “ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ.”
2) ಬೇಂದ್ರೆಯವರ ದರ್ಶನದ ಸ್ವರೂಪವೇ ಅಖಂಡವಾದುದರಿಂದ ಯಾವ ಕವಿತೆಯನ್ನು ನೋಡಿದರೂ ನಮಗೆ ಅದರ ಪ್ರತೀತಿಯಾಗುತ್ತದೆ. ಆದರೆ, ಕೆಲವೊಂದು ಕವಿತೆಗಳ ಉದ್ದೇಶವೇ ಓದುಗನಿಗೆ ಅದರ ಸಾಕ್ಷಾತ್ಕಾರವನ್ನು ಒದಗಿಸುವುದು.(ಪುಟ 495)
3) ಬೇಂದ್ರೆಯವರ ಚತುರ್ಮುಖ ಪ್ರಜ್ಞೆಯನ್ನು ಸ್ಥೂಲವಾಗಿ ರಸಪ್ರಜ್ಞೆ, ಭಾವಪ್ರಜ್ಞೆ, ದೈವಪ್ರಜ್ಞೆ ಮತ್ತು ಆರ್ಷಪ್ರಜ್ಞೆಗಳೆಂದು ವಿಂಗಡಿಸಬಹುದು. ಇದು ಕೇವಲ ಅಭ್ಯಾಸದ ಅನುಕೂಲತೆಗಾಗಿಯೇ ಹೊರತು ಅದೊಂದು ವಿಘಟಿತ ಪ್ರಜ್ಞೆಯೆಂದು ಸೂಚಿಸುವುದಕ್ಕಲ್ಲ. ಹಾಗೆ ನೋಡಿದರೆ, ಬೇಂದ್ರೆಯವರ ವ್ಯಕ್ತಿತ್ವದ ಹಿರಿಮೆ ಅದರ ಪೂರ್ಣತೆಯಲ್ಲಿದೆ. ಬಾಳನ್ನು ಒಟ್ಟಾಗಿ ಗ್ರಹಿಸುವ ಅವರ ಸಮನ್ವಯ ದೃಷ್ಟಿ ಪೂರ್ಣತೆಯನ್ನೇ ಆದರ್ಶವಾಗಿಟ್ಟುಕೊಂಡು ಹೊರಟುದುದು. ನವೋದಯದ ಕಾಲದಲ್ಲಿ ಇಂಥ ಸಮನ್ವಯ ಅನೇಕರಿಗೆ ಆದರ್ಶವನ್ನೊದಗಿಸಿದ್ದರೂ ಬಹಳಷ್ಟು ಮಟ್ಟಿಗೆ ಅದು ತಾತ್ವಿಕ ಮಟ್ಟದಲ್ಲಿಯೇ ಉಳಿದುಬಿಟ್ಟಿತು. ಬೇಂದ್ರೆಯವರಂತೆ ಅದನ್ನು ಸಂಪೂರ್ಣವಾಗಿ ಕಾವ್ಯದ ಮಾಧ್ಯಮದಲ್ಲಿ ಸಾಧಿಸಿದವರು ವಿರಳ.(ಪುಟ 504)
4) ಒಬ್ಬ ಕವಿಯು ಸಾಂಕೇತಿಕ ವ್ಯಕ್ತಿಯಾಗಿರುತ್ತಾನೆ.ಅವನ ಕಾವ್ಯವು ಸಾಂಪ್ರದಾಯಿಕ ಸಾಂಸ್ಕೃತಿಕ ಪರಂಪರೆಯ ಮುಂದುವರಿಕೆಯಾಗಿರುತ್ತದೆ. ಇದು ಸ್ವತಃ ಬೇಂದ್ರೆಯವರ ಕಾವ್ಯಕ್ಕೇ ಪೂರ್ಣವಾಗಿ ಅನ್ವಯಿಸುತ್ತದೆ.ಅವರು ವರ್ತಮಾನ ಹಾಗೂ ಭವಿಷ್ಯಕ್ಕೆ ಬದ್ಧರಾಗಿದ್ದರೂ ನಿಜವಾದ ಅರ್ಥದಲ್ಲಿ ಅವರು ಪರಂಪರೆಯ ಕವಿಯಾಗಿದ್ದರು. ಅವರು ತಾನು ನವೋದಯ ಅಥವಾ ನವ್ಯ ಕವಿ ಅಲ್ಲ. ವೇದಕವಿ, ವೇದವಿತ್‌ಕವಿ, ಅಂತ ಒತ್ತಿ ಹೇಳುತ್ತಿದ್ದರು. ಭಾರತದ ಸಾಂಪ್ರದಾಯಿಕ ಅಧ್ಯಾತ್ಮಕ ಪರಂಪರೆಯೇ ಅವರ ಕಾವ್ಯದ ಮೂಲ ಆಧಾರವಾಗಿತ್ತು.ಅದು ಸಾಮರಸ್ಯದ ಪರಂಪರೆ-ದೇವರು ಮತ್ತು ಮನುಷ್ಯನ ನಡುವೆ, ಮನುಷ್ಯ ಮತ್ತು ಪ್ರಕೃತಿ ಹಾಗೂ ಇತರ ಮನುಷ್ಯರೊಂದಿಗೆ ಇರುವ ಸಾಮರಸ್ಯ. ಸಂವೇದನಾಶೀಲರಾಗಿದ್ದ ಅವರಿಗೆ ಆಧುನಿಕ ಸಮಾಜದ ಸಮಸ್ಯೆಗಳ ಅರಿವಿದ್ದರೂ ಅವರಿಗೆ ತಮ್ಮ ದೃಷ್ಟಿಯಲ್ಲಿ ನಂಬಿಕೆಯಿತು. ಇದೇ ಅವರ ವಿಶ್ವಧಾರಣಾಸೂತ್ರ
(ಪುಟ 768)
5) ಐರಿಷ್ ಕವಿ ಎ ಈ,ಖಲೀಲ್ ಜಿಬ್ರಾನ್, ರವೀಂದ್ರನಾಥ ಟಾಗೋರ್ ಹಾಗೂ ಶ್ರೀ ಅರವಿಂದರನ್ನು ಬೇಂದ್ರೆ ಅವರು ‘ಗುರುಚತುರ್ಮುಖ’ವೆಂದು ಕರೆದರು. ಆದರೆ ಇವರೆಲ್ಲರ ಪ್ರಭಾವ ಒಂದೇ ರೀತಿಯದಾಗಲಿ, ಒಂದೇ ಮಟ್ಟದ್ದಾಗಲಿ ಇರಲಿಲ್ಲ ಎನ್ನುವುದು ಸ್ಪಷ್ಟವಿದೆ. ಶ್ರೀ ಅರವಿಂದರಿಗೆ ಹೋಲಿಸಿದರೆ ಉಳಿದ ‘ಗುರು’ಗಳ ಪ್ರಭಾವ ಬೇಂದ್ರೆ ಕಾವ್ಯ ಜೀವನದ ಕೆಲ ಹಂತಗಳಿಗೆ ಮಾತ್ರ ಪ್ರಸ್ತುತವಾಗಿತ್ತು ಎಂದು ಹೇಳಬಹುದು.
6)ಹಾಗೆ ನೋಡಿದರೆ ಕನ್ನಡ ಕಾವ್ಯ ಪರಂಪರೆಯ ಒಳಗಿನ ಪ್ರಭಾವಗಳೇ ಬೇಂದ್ರೆಯವರ ಕಾವ್ಯದ ಸಂದರ್ಭದಲ್ಲಿ ಹೆಚ್ಚು ಕ್ರಿಯಾಶೀಲವಾದುದನ್ನು ನಾವು ನೋಡುತ್ತೇವೆ. ಇದರ ಅರಿವು ಸ್ವತಃ ಬೇಂದ್ರೆಯವರಲ್ಲಿಯೇ ಬಲವಾಗಿದ್ದಿತು.1923ರಲ್ಲಿ ನಡೆದ ವಿಜಾಪೂರ ಸಾಹಿತ್ಯ ಸಮ್ಮೇಳನದಲ್ಲಿ ‘ನಮಗೆ ಬೇಕಾದ ಕಾವ್ಯ’ ಎಂಬ ವಿಷಯವನ್ನು ಕುರಿತು ಮಾತಾಡುತ್ತ ಬೇಂದ್ರೆಯವರು ವಚನಕಾರರು ಹಾಗೂ ಹರಿದಾಸರು ಹಾಕಿಕೊಟ್ಟ ಮಾರ್ಗವನ್ನೇ ಎತ್ತಿ ಹಿಡಿದರು. ನಮಗೆ ಈಗ ಬೇಕಾದವರು ಅಷ್ಟಾದಶವರ್ಣನದ ಚಕೋರ-ಚಾತಕಗಳ ಸಮಯದ ಕವಿಗಳಲ್ಲ; ಸೃಷ್ಟಿಯ ಪೂಜಾರಿಗಳಾದ, ವಿಚಾರಮೂಢ ವಿಕಾರಗಳನ್ನು ತಾಲಲಯಕ್ಕೆ ಹಾಡುವ ಕವಿಗಳಲ್ಲ. ನಮಗೆ ಬೇಕಾದವರು ಋಷಿಗಳು.nವೇದದ ಕವಿಗಳು. ಕನ್ನಡ ಸಾಹಿತ್ಯದಲ್ಲಿ ದಾಸ ಕೂಟದವರೂ ವಚನಕಾರರೂ ಪ್ರಾರಂಭದ ಪ್ರಯತ್ನವನ್ನು ಮಾಡಿರುವರು. ಅವರ ಹಾದಿಯನ್ನೇ ನಾವು ಹಿಡಿಯಬೇಕು.
7)ಬೇಂದ್ರೆಯವರು ತಮ್ಮ ಕಾವ್ಯಜೀವನವನ್ನು ಪ್ರಾರಂಭಿಸಿದ ಕಾಲದಲ್ಲಿಯೂ ಕೂಡ ಈ ಹಾದಿ ತೆರೆದೇ ಇದ್ದಿತು ಎನ್ನುವುದನ್ನು ನಾವು ಗಮನಿಸಬೇಕು. ಜಗನ್ನಾಥದಾಸರು, ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿಗಳು ಹಾಗೂ ಶಿಶುನಾಳ ಶರೀಫರಂಥವರ ಪದಗಳು ಜನಮನದಲ್ಲಿ ಇನ್ನೂ ಜೀವಂತವಾಗಿದ್ದವು. ಹೀಗೆಂದೇ ಅವರು ತಮ್ಮ ಭಾಷಣದಲ್ಲಿ ಈ ಕವಿಗಳ ಕೃತಿಗಳನ್ನು ಉದಾಹರಿಸಿದರು. ಆದರೆ ಇದೇ ಕೊನೆಯಾಗಬೇಕೆಂದು ಅವರು ಬಯಸಲಿಲ್ಲ. “ಇಷ್ಟರಿಂದಲೇ ಸಾಗದು. ಮತಗಳ ಬೇಲಿಯನ್ನು ದಾಟಿ ‘ಎಲ್ಲರೊಳು ತಾನಿಪ್ಪ ತನ್ನೊಳಗೆಲ್ಲರನು ಧರಿಸಿಹ’ ಒಂದು ಸನಾತನ ಧರ್ಮದ ಅನುಭಾವ ಸ್ಫೂರ್ತಿಯಿಂದ “ಏಕಂ ಸದ್ವಿಪ್ರಬಹುಧಾ ವದಂತಿ” “ಸರ್ವ೦ ಚಿಜ್ಯೋತಿದೇವೇತಿ ಯಂ ಪಶ್ಯತಿ ಸ ಪಶ್ಯತಿ” “Nature is a symbol” ಮೊದಲಾದ ಯೋಗಪ್ರತ್ಯಕ್ಷ ಪ್ರತೀತಿಯ ಸಮಯಗಳಿಂದ ಒಡಗೂಡಿದ ಗಾಢ ಉನ್ನತ ಕಾವ್ಯವು ಬೇಕು” ಎಂದು ಹೇಳಿದರು. ಇದರಿಂದಾಗಿ ವಚನಕಾರರು ಹರಿದಾಸರಿಂದ ಆರಂಭವಾದ ಹಾದಿ ಬೇಂದ್ರೆಯವರನ್ನು ಟಾಗೋರ್ ಎಮರ್ಸನ್ ಹಾಗೂ ಶ್ರೀ ಅರವಿಂದರತ್ತ ಕರೆದೊಯ್ಯಿತು.(ಪುಟ 525)
“ಈ ಪುಸ್ತಕದಲ್ಲಿ ನಾನು ರೂಪಿಸಿಕೊಂಡ ವಿಮರ್ಶೆಯ ವಿಧಾನದ ಬಗೆಗೂ ಒಂದೆರಡು ಮಾತು ಹೇಳುವುದು ಅವಶ್ಯವಿದೆ. ಮೊದಲನೆಯದಾಗಿ, ಇಲ್ಲಿ ಬೇಂದ್ರೆಯವರ ಸಾಹಿತ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ಇಡಿಯಾಗಿ ನೋಡುವ ಪ್ರಯತ್ನವಿದೆ. ಇದುವರೆಗೆ ಬಂದ ವಿಮರ್ಶೆ ಬಿಡಿ ಕೃತಿಗಳ ವಿಶ್ಲೇಷಣೆಯಲ್ಲಿ ತೋರಿದ ಆಸ್ಥೆ, ಕೌಶಲಗಳನ್ನು ಅವುಗಳನ್ನು ಸಮಗ್ರವಾಗಿ ಅಥವಾ ಚಾರಿತ್ರಿಕವಾಗಿ ನೋಡುವಲ್ಲಿ ತೋರಿಲ್ಲ. ಇದರಿಂದಾಗಿ, ಈ ಕೃತಿಗಳ ಆಂತರಿಕ ಸಂಬಂಧಗಳು ಮತ್ತು ಬೇಂದ್ರೆ ಕಾವ್ಯದ ವಿಕಾಸಕ್ರಮ ಗ್ರಹಿಕೆಯ ಹೊರಗೆಯೇ ಉಳಿದುಕೊಂಡಿವೆ. ಈ ದಿಕ್ಕಿನಲ್ಲಿ ನಡೆದ ಒಂದೆರಡು ಪ್ರಯತ್ನಗಳೂ ಸರಿಯಾದ ದಾರಿ ಹಿಡಿದಿಲ್ಲ. ಉದಾಹರಣೆಗೆ, ಕೆಲ ವಿಮರ್ಶಕರು ಮರಾಠಿ ಸಾಹಿತ್ಯದ ಅಥವಾ ಶ್ರೀಯವರ ಇಂಗ್ಲಿಷ್ ಅನುವಾದಗಳ ಪ್ರಭಾವಕ್ಕೆ ಕೊಟ್ಟ ಮಹತ್ವವನ್ನು ಗಮನಿಸಬಹುದು. ಮರಾಠಿ ಕಾವ್ಯ ಆಧುನಿಕ ಕನ್ನಡ ಕಾವ್ಯದ ಮೇಲೆ ವಿಶೇಷವಾದ ಯಾವ ಪ್ರಭಾವವನ್ನೂ ಬೀರಿಲ್ಲ ಎಂದು ಸ್ವತಃ ಬೇಂದ್ರೆಯವರೇ ಸ್ಪಷ್ಟವಾಗಿ ಹೇಳಿದ್ದರೂ ಅವರ ಕಾವ್ಯಸ್ಪೂರ್ತಿಯ ಪ್ರಾಥಮಿಕ ನೆಲೆ ಮರಾಠಿ ಕಾವ್ಯದಲ್ಲಿದೆ ಎಂದು ಸಾಧಿಸುವ ಪ್ರಯತ್ನಗಳು ನಡೆದಿವೆ. ಆದರೆ ಬೇಂದ್ರೆಯವರ ಪ್ರಾರಂಭದ ಕವಿತೆಗಳ ಸ್ವರೂಪವನ್ನು ನೋಡಿದಾಗ ಅವರು ತಮ್ಮನ್ನು ಕನ್ನಡ ಕಾವ್ಯ ಪರಂಪರೆಯೊಡನೆ ಎಷ್ಟು ಗಾಢವಾಗಿ ಜೋಡಿಸಿಕೊಂಡಿದ್ದರೆನ್ನುವುದರ ಬಗ್ಗೆ ಸಂಶಯ ಉಳಿಯಲಾರದು. ಕನ್ನಡ ಕಾವ್ಯದ ಆಧುನೀಕರಣದ ದಿಕ್ಕಿನಲ್ಲಿ ಹಟ್ಟಿಯಂಗಡಿ ನಾರಾಯಣರಾಗಲಿ, ಶ್ರೀಯವರಾಗಲಿ ನಡೆಯಿಸಿದ ಪ್ರಯೋಗಗಳಿಂದಲೂ ಅವರು ನೇರವಾಗಿ ಪ್ರಭಾವಿತರಾಗಲಿಲ್ಲ. ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಬೇಂದ್ರೆಯವರ ಕಾವ್ಯ ಮಹತ್ವದ್ದಾಗುವುದು ಅಭಿವ್ಯಕ್ತಿನಿಷ್ಠ (Expressive) ಕಾವ್ಯರೂಪಗಳನ್ನು ಸೃಷ್ಟಿಸುವುದರ ಮೂಲಕ. ಇದು ಅವರ ಸ್ವಂತ ಸಾಧನೆ. ಈ ದೃಷ್ಟಿಯಿಂದ ೧೯೧೯ರಲ್ಲಿಯೇ
ಅವರು ಬರೆದ ‘ಬೆಳಗು’ ಕವಿತೆಗೆ ಐತಿಹಾಸಿಕ ಮಹತ್ವವಿದೆ. ಎರಡನೆಯದಾಗಿ, ನಾನು ಆಯ್ದುಕೊಂಡ ಪರಿಪ್ರೇಕ್ಷ್ಯ ಅವರ ಸಮಗ್ರ ಸಾಧನೆಯ ಪರಿಪ್ರೇಕ್ಷ್ಯ. ಇದರಿಂದಾಗಿ ಅವರ ದರ್ಶನದ ಅಖಂಡತೆಯನ್ನು, ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿಯ ವೈವಿಧ್ಯವನ್ನು ಗುರುತಿಸುವುದು ಸಾಧ್ಯವಾಗಬಹುದು ಎಂದು ನನ್ನ ನಂಬುಗೆ. ಅರಳು ಮರಳಿನ ಪೂರ್ವದ ಕವಿಯೇ ನಿಜವಾದ ಬೇಂದ್ರೆ ನಂತರದ ಕವಿ ಕವಿಯೇ ಅಲ್ಲ ಎನ್ನುವ ಅಭಿಪ್ರಾಯ ಎಷ್ಟು ರೂಢವಾಗಿದೆಯೆಂದರೆ, ಅದಕ್ಕೊಂದು ನಿರ್ಣಾಯಕ ಸ್ವರೂಪವೇ ಬಂದುಬಿಟ್ಟಿದೆ. ಇಂಥ ನಿರ್ಣಯಗಳನ್ನು ಪ್ರಶ್ನಿಸುವುದು ನಾನಿಟ್ಟುಕೊಂಡ ಉದ್ದೇಶಗಳಲ್ಲೊಂದಾಗಿದೆ. ಇದೇ ರೀತಿ ಕಾಲಕ್ರಮ ಮತ್ತು ವಸ್ತುಕ್ರಮಗಳೆರಡನ್ನೂ ಒಳಗೊಳ್ಳುವ ನಿರೂಪಣಾ ವಿಧಾನವನ್ನರಿಸುವ ಮೂಲಕ ವಿಕಾಸದ ಮೂಲಸೂತ್ರಗಳನ್ನು ಕಂಡುಹಿಡಿಯುವ ಪ್ರಯತ್ನವನ್ನೂ ನಾನಿಲ್ಲಿ ಮಾಡಿದ್ದುಂಟು.
ಬೇಂದ್ರೆ ಅವರ ಸಾಹಿತ್ಯ ಸಾಹಿತ್ಯ ಸಾಕಷ್ಟು ವಿಪುಲವಾದದ್ದು. ಅಮೂರ ಅವರು ಈ ಸಾಹಿತ್ಯ ರಾಶಿಯನ್ನು ಪ್ರವೇಶಿಸುವುದು ಹೀಗೆ “ಕೃಷ್ಣಾಕುಮಾರಿ ಪುಸ್ತಕರೂಪದಲ್ಲಿ ಪ್ರಕಟವಾದ ಬೇಂದ್ರೆಯವರ ಪ್ರಥಮ ಕೃತಿ. ಈ ಕಾವ್ಯವನ್ನು ವೆಂಕಟೇಶ ಭೀಮರಾಯ ಆಲೂರರು ‘ಈ ಅರೆ ಅರಳಿದ ಮೊಗ್ಗೆಯ ಸುವಾಸನೆಯನ್ನು ಅರಸಿಕರೂ ಕೂಡ ಮೂಸಿ ನೋಡಿ ಮೋದ ಪಡಲಿ’ ಎಂಬ ‘ಬಿನ್ನಹ’ದೊಡನೆ ೧೯೨೨ರಲ್ಲಿ ‘ಶಾರದಾಮಂಡಲ’ದ ವತಿಯಿಂದ ಧಾರವಾಡದಲ್ಲಿ ಪ್ರಕಟಿಸಿದರು. “ಶ್ರೀ ಆಲೂರ, ಶ್ರೀ ಜಠಾರ, ಶ್ರೀ ಕದಡಿ ಮಾಸ್ತರ ಇವರ ಪ್ರೋತ್ಸಾಹವೂ ಸಹಾಯವೂ ನನಗೆ ಆಗದೇ ಇದ್ದರೆ, ಈ ಕಾವ್ಯವೂ ಬಾಣಂತಿಯ ಕೋಣೆಯಲ್ಲಿಯೇ ತನ್ನ ಜೇಷ್ಠ ಬಂಧುಗಳ ಬಳಗದ ಕೂಡ ಬಳಲುತ್ತ ಬೀಳುತ್ತಿತ್ತು” ಎಂಬ ಬೇಂದ್ರೆಯವರ ಹೇಳಿಕೆ ಈ ಮೊದಲೇ ಅವರು ಸಾಕಷ್ಟು ಕಾವ್ಯರಚನೆ ಮಾಡಿದ್ದರು ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ೧೯೧೬ರಲ್ಲಿ ತಾವು ಪುಣೆಗೆ ಹೋದಾಗ ಬೇಂದ್ರೆಯವರ ಟಿಪ್ಪಣಿ ಬುಕ್ಕುಗಳಲ್ಲಿ ಕನ್ನಡ ಕವನ, ಗದ್ಯ ಲೇಖನ, ಮತ್ತು ಇಂಗ್ಲಿಷ್ ಕವನಗಳನ್ನು ನೋಡಿದ್ದಾಗಿ ಮಹಿಷಿ ಅಶ್ವತ್ಥರಾಯರು ಹೇಳಿದ್ದಾರೆ. ಅವರ ಕವಿತೆಯೊಂದು ಮೊಟ್ಟಮೊದಲು ಅಚ್ಚಾದದ್ದು ೧೯೧೮ರಲ್ಲಿ. ‘ಪ್ರಭಾತ’ದ ಮೊದಲ ಸಂಚಿಕೆಯಲ್ಲಿಯೇ ‘ತುತ್ತೂರಿ’ ಮತ್ತು ‘ಸರಸ್ವತಿ’ ಎಂಬ ಅವರ ಎರಡು ಕವನಗಳು ಪ್ರಕಾಶಿತವಾದವು. ‘ಪ್ರಭಾತ’ದ ಮುಂದಿನ ಸಂಚಿಕೆಗಳಲ್ಲಿ ಅವರ ಇನ್ನೆರಡು ಕವನಗಳು ‘ರಾತ್ರಿಗೆ’ ಹಾಗೂ ‘ಅಹಹ ಸ್ವಾತಂತ್ರ್ಯದೇವಿ’ ಬೆಳಕು ಕಂಡವು. “ಕೋಗಿಲೇ, ಕೋಗಿಲೇ ಎಂದು ಬಂದೆ ನೀ’ ಎಂಬ ನೀಳವನ, ಕೆಲವು ಬಿಡಿಗವನ, ಕೆಲವು ಭಾಷಾಂತರ, ಕೆಲವು ಪ್ರಾಯೋಗಿಕ ನುಡಿಗಳು ಇಷ್ಟು ಬಾಂಡವಲಿನಿಂದ ನಾನು ಕವಿಯಾಗಿಬಿಟ್ಟಿದ್ದೆ” ಎಂದು ಬೇಂದ್ರೆಯವರು ಒಂದೆಡೆ ಹೇಳಿದ್ದಾರೆ. ಮೂವತ್ತರ ಸಂಖ್ಯೆಯನ್ನು ಮೀರಿದ ಅವರ ಪ್ರಾರಂಭದ ಕವಿತೆಗಳು ನನ್ನದು ಈ ಕನ್ನಡನಾಡು, ಗರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಸಂಚಯ ಮತ್ತು ನಮನಗಳಲ್ಲಿ ಹಂಚಿಹೋಗಿದ್ದರೂ ಅವುಗಳನ್ನು ಗುರುತಿಸುವುದು ಸಾಧ್ಯವಿದೆ. ಒಂದೆರಡು ಅಪವಾದಗಳನ್ನು ಬಿಟ್ಟರೆ ಬೇಂದ್ರೆಯವರ ಪ್ರಾರಂಭದ ಕವಿತೆಗಳೆಲ್ಲ ಕನ್ನಡ ದೇಸೀ ಸಂಪ್ರದಾಯದ ಷಟ್ಟದಿ ಅಥವಾ ಅದರ ಪರಿಷ್ಕೃತರೂಪಗಳ, ಚೌಪದಿಗಳ, ಲಾವಣಿಯಂಥ ಹಾಡುಗಳ ಛಂದೋರೂಪಗಳನ್ನೇ ಅನುಸರಿಸಿರುವದು ಗಮನಾರ್ಹವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಇದೇ ಆಗ ಪ್ರಚಲಿತವಿದ್ದ ಕಾವ್ಯಮಾರ್ಗವಾಗಿತ್ತು. ಷಟ್ಟದಿಯ ಯುಗ ಇನ್ನ ಮುಗಿದಿರಲಿಲ್ಲ. ಬೇಂದ್ರೆಯವರಿಗೆ ಅತ್ಯಂತ ಪ್ರಿಯ ಕವಿಗಳಲ್ಲೊಬ್ಬನಾದ ಲಕ್ಷ್ಮೀಶನ ಜೈಮಿನಿ ಭಾರತದ ರೆವರೆಂಡ್ ಜಾನ್ ಗ್ಯಾರೆಟ್ ಸಂಪಾದಿಸಿದ ಆವೃತ್ತಿ ೧೮೪೮ರಲ್ಲಿ ಪ್ರಕಟವಾಗಿ ೧೯ನೆಯ ಶತಮಾನದಲ್ಲಿಯೇ ಇಪ್ಪತ್ತು ಸಲ ಅಚ್ಚಾಗಿತ್ತು. ಲಕ್ಷ್ಮೀಶ, ಸರ್ವಜ್ಞರ ಪರಿಚಾರಿಕೆಯನ್ನು’ ಬೇಂದ್ರೆಯವರು ಕಾಲೇಜಿನಲ್ಲಿದ್ದಾಗಲೇ ಬೆಳೆಸಿಕೊಂಡಿದ್ದರು.
ಮರಾಠಿ ಬೇಂದ್ರೆಯವರ ಮಾತೃಭಾಷೆ, ಫರ್ಗುಸನ್ ಕಾಲೇಜಿನ ವಿದ್ಯಾರ್ಥಿಯಾಗಿ ೧೯೧೪ ರಿಂದ ೧೯೪೮ರ ವರೆಗೆ ಪುಣೆಯಲ್ಲಿ ವಾಸ. ಹೀಗಾಗಿ ಅವರಿಗೆ ಮೊದಲಿನಿಂದಲೇ ಮರಾಠಿ ಕಾವ್ಯದ ಪರಿಚಯವಿತ್ತು. ಮೊಟ್ಟ ಮೊದಲಿನ ಕವಿತೆ (‘ಝಾಲೀ ವೀಸ ವಯಾಸ ಆಜ)ಯನ್ನು ಅವರು ಮರಾಠಿಯಲ್ಲಿಯೇ ಬರೆದರು.೧೨ ೧೯೦೩-೧೯೦೫ರ ವರೆಗೆ ಧಾರವಾಡದಲ್ಲಿ ಶಿಕ್ಷಕನಾಗಿ ದುಡಿದು ಹುಬ್ಬಳ್ಳಿಯಲ್ಲಿ ಪ್ಲೇಗಿಗೆ ತುತ್ತಾದ ಕೇಶವಸುತರ ಕಾವ್ಯವನ್ನು ಅವರು ತಮ್ಮ ಶಾರದಾಮಂಡಲದ ಗೆಳೆಯ ಓತೂರಕರರೊಡನೆ ಅಭ್ಯಾಸ ಮಾಡಿದ್ದರು. ಗಡಕರಿಯವರ ಕವಿತೆಗಳ ಬಗ್ಗೆ ಇವರಿಗೆ ವಿಶೇಷ ಪ್ರೀತಿಯೆನಿಸಿತು ಎಂದು ಆತ್ಮಾರಾಮ ಜೋಗ ಹೇಳಿದ್ದಾರೆ.೧೩ ಗಡಕರಿಯವ-ರೊಡನೆ ಮತ್ತು ಫರ್ಗುಸನ್ ಕಾಲೇಜಿನ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಸಮೀಕ್ಷಕ ಬಳವಂತರಾವ ಪಟವರ್ಧನ (ಇವರೂ ಕೆಲಕಾಲ ಧಾರವಾಡದಲ್ಲಿ ಶಿಕ್ಷಕರೆಂದು ದುಡಿದವರು) ರೊಡನೆ ಬೇಂದ್ರೆಯವರು ನಿಕಟ ಸಂಪರ್ಕ ಹೊಂದಿದ್ದರು ಎಂದು ಅವರ ‘ಮಾಮೇಭಾವೂ’ ಮರಾಠಿ ಸಂಶೋಧಕ ಕೃ.ರಾ. ಪರಾಂಜಪೆ ಹೇಳಿದ್ದಾರೆ.೧೪ ಕೇಶವಸುತರನ್ನು ಮರಾಠಿಯ ಕೀಟ್ಸ್ ಎಂದು ಬೇಂದ್ರೆಯವರು ಕರೆದಿದ್ದಾರೆ. ಕೀಟ್ಸ್ ಅವರ ಪ್ರೀತಿಯ ಕವಿಯಾದ್ದರಿಂದ ಕೇಶವಸುತರತ್ತ ಬೇಂದ್ರೆಯವರು ಆಕರ್ಷಿತ-ರಾದುದರಲ್ಲಿ ಆಶ್ಚರ್ಯವೇನಿಲ್ಲ. ಗೋವಿಂದಾಗ್ರಜರಂಥ ಪ್ರಮುಖ ಕವಿಗಳು ಕೂಡ ಆಗ ಕೇಶವಸುತರ ಶಿಷ್ಯತ್ವವನ್ನು ಒಪ್ಪಿಕೊಂಡುಬಿಟ್ಟಿದ್ದರು. ತಮ್ಮ ಪ್ರಥಮ ಪ್ರಕಾಶಿತ ಕವಿತೆ ‘ತುತ್ತೂರಿ’ ಕೇಶವಸುತರ ‘ತುತಾರಿ’ಯ ಹೆಸರನ್ನು ಕೇಳಿ ಬರೆದದ್ದು ಎಂದು ಬೇಂದ್ರೆಯವರು ಹೇಳಿದ್ದಾರೆ. ಆದರೆ, ಅವರು ಈ ಮೊದಲೇ ತಮ್ಮನ್ನು ಕನ್ನಡ ಕಾವ್ಯಪರಂಪರೆಯೊಡನೆ ಸೃಜನಾತ್ಮಕವಾಗಿ ಜೋಡಿಸಿಕೊಂಡಿದ್ದರು. ಮರಾಠಿ ಕಾವ್ಯ ಆಧುನಿಕತೆಯನ್ನೆದುರಿಸಿದಾಗ ಅಕ್ಷರ ವೃತ್ತಗಳನ್ನು ಬಿಟ್ಟು ಮಾತ್ರಾವೃತ್ತಗಳನ್ನು ಸ್ವೀಕರಿಸುವ ಕ್ರಾಂತಿಕಾರಕ ಧೋರಣೆಯನ್ನು ಸ್ವೀಕರಿಸಬೇಕಾಯಿತು. ಕೇಶವಸುತರಂಥವರು ಮರಾಠಿ ಕಾವ್ಯದ ಇತಿಹಾಸದಲ್ಲಿ ಮಹತ್ತ್ವವನ್ನು ಪಡೆದಿರುವುದು ಅವರು ಈ ದಿಕ್ಕಿನಲ್ಲಿ ದೊರಕಿಸಿದ ಯಶಸ್ಸಿಗಾಗಿ. ಆದರೆ, ಕನ್ನಡದಲ್ಲಿ ಇಂಥ ಮೂಲಭೂತ ಕ್ರಾಂತಿಯ ಅವಶ್ಯಕತೆ ಇರಲಿಲ್ಲ. ಕೆ.ವಿ. ಪುಟ್ಟಪ್ಪನವರು ಹೇಳಿದ ಹಾಗೆ, “ಛಂದಃಶಾಸ್ತ್ರವನ್ನು ಓದಿದ ಯಾರಿಗಾದರೂ ಈಗಿನ ಹೊಸ ರೂಪಗಳು ಹಳೆಯ ಷಟ್ಟದಿ ರಗಳೆಗಳ ರೂಪಾಂತರಗಳೆಂದು ತೋರದೆ ಇರುವುದಿಲ್ಲ. ನಮ್ಮ ಕನ್ನಡಕ್ಕೆ ಸಂಪೂರ್ಣವಾಗಿ ಅಸ್ವಾಭಾವಿಕವಾಗಿರುವ ‘ವೃತ್ತ’ಗಳೆಂದು ನಾವು ಕರೆಯುವ ಸಂಸ್ಕೃತ ಛಂದಸ್ಸು ಮಾತ್ರ ಬಿದ್ದು ಹೋಗುತ್ತದೆ…. ಮಾತ್ರಾ ಛಂದಸ್ಸೇ ನಮಗೆ ಸಹಜವಾದುದು”ಇದೂ ಅಲ್ಲದೆ, ಬೇಂದ್ರೆ ಮತ್ತು ಕೇಶವಸುತರ ಕಾವ್ಯಪ್ರಕೃತಿಗಳ ಭಿನ್ನತೆಯಿಂದಾಗಿ ಕೇಶವಸುತರು ಅವರ ‘ಗುರುಚತುರ್ಮುಖ’ದಲ್ಲಿ ಸೇರಲಿಲ್ಲ. ಮರಾಠಿ ಕಾವ್ಯಕ್ಕೆ ಹೊಸ ತಿರುವು ಕೊಟ್ಟವರಲ್ಲಿ ಕೇಶವಸುತರು ಆದ್ಯರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಅವರ ಪ್ರತಿಭೆ ಪ್ರಥಮ ದರ್ಜೆಯ ಪ್ರತಿಭೆಯಾಗಿರಲಿಲ್ಲ. ರೋಮ್ಯಾಂಟಿಕ್ ಕಾವ್ಯಮಾರ್ಗದ ಕೇಂದ್ರವಸ್ತುಗಳಾದ ಪ್ರೇಮ, ನಿಸರ್ಗ, ಸೃಷ್ಟಿ ಕ್ರಿಯೆಗಳೊಡನೆ ಕೇಶವಸುತರ ಸಂಬಂಧ ಜೀವಾಳದ ಸಂಬಂಧವಾಗಿರದೆ, ಬೌದ್ಧಿಕ ಮತ್ತು ಕಾಲ್ಪನಿಕ ರೀತಿಯದಾದ್ದರಿಂದ ಇಂಗ್ಲಿಷ್ ಮತ್ತು ಆಮೇರಿಕನ್ ಕವಿಗಳ ಪ್ರಭಾವ ಅವರಲ್ಲಿ ನೇರವಾಗಿಯೇ ಕಾಣಿಸಿಕೊಂಡಿತು. ಆದರೆ, ಬಹಿರ್ಮುಖವಾದ ಮರಾಠಿ ಕಾವ್ಯಕ್ಕೆ ಅಂತರ್ಮುಖತೆಯ ತಿರುವು ಕೊಡುವುದರ ಮೂಲಕ ಅದರ ಆಧುನೀಕರಣವನ್ನು ಸಾಧಿಸಿದ ಶ್ರೇಯಸ್ಸು ಅವರದಾಗಿದೆ. ಕೇಶವಸುತರ ‘ಗೂಢಗುಂಜನ’ ಕವಿತೆಗಳ ಪ್ರಭಾವವನ್ನು ಬೇಂದ್ರೆಯವರ ಕೆಲ ಕವಿತೆಗಳಲ್ಲಿ ಗುರುತಿಸಬಹುದು. ಆದರೆ, ಕೇಶವಸುತರ ಪ್ರಭಾವ ಬೇಂದ್ರೆಯವರ ಮಟ್ಟಿಗೆ ನಿರ್ಣಯಾತ್ಮಕ ಸ್ವರೂಪದ್ದಾಗಿರಲಿಲ್ಲ.
‘ಪ್ರೇಮದ ಶಾಹೀರ ‘ರೆನಿಸಿದ ಗೋವಿಂದಾಗ್ರಜರು ಬೇಂದ್ರೆಯವರಿಗೆ ಕೇಶವಸುತ-ರಿಗಿಂತ ಹತ್ತಿರದವರು. ಆದರೆ, ಅವರ ನಾಟಕಗಳನ್ನು ಮೆಚ್ಚಿಕೊಂಡಷ್ಟು ಅವರ ಕವಿತೆಗಳನ್ನು ಬೇಂದ್ರೆಯವರು ಮೆಚ್ಚಿಕೊಂಡಂತಿಲ್ಲ. ಗೋವಿಂದಾಗ್ರಜರ ಕಾವ್ಯದಲ್ಲಿ ಓತಪ್ರೋತವಾಗಿ ಹರಿಯುವ ಭಾವನಾವಶತೆ, ಔದಾಸೀನ್ಯ ಬೇಂದ್ರೆಯವರ ಸ್ವಭಾವಕ್ಕೆ ಹೊರತಾದವುಗಳು. ಹೀಗಿದ್ದರೂ ಅವರ ವಿಚಾರಗಳಲ್ಲಿ ಸಾಮ್ಯತೆಗಳಿಲ್ಲದಿಲ್ಲ. ಹೃದಯ ವಿವೇಕಗಳ ಸಮನ್ವಯ ಬೇಂದ್ರೆಯವರು ಇಟ್ಟುಕೊಂಡಿದ್ದ ಆದರ್ಶಗಳಲ್ಲಿಯೇ ಶ್ರೇಷ್ಠವಾದದ್ದು.ಇಂಥ ಆದರ್ಶವನ್ನು ಗೋವಿಂದಾಗ್ರಜರಲ್ಲಿಯೂ ಕಾಣಬಹುದು.
“ಬಿ.ಎಂ.ಶ್ರೀ.ಯವರಿಗೆ ಇಂಗ್ಲಿಷ್ ಕಾವ್ಯದ ಪ್ರಭಾವ ಎಷ್ಟರಮಟ್ಟಿಗೆ ಆಯಿತೋ ಅಷ್ಟೇ ಮಟ್ಟಿಗೆ ಬೇಂದ್ರೆಯವರಿಗೆ ಮರಾಠಿ ಕಾವ್ಯದ ಪ್ರಭಾವವಾಯಿತು” ಎಂಬ ಸುಮತೀಂದ್ರ ನಾಡಿಗರ ವಾದ ಸತ್ಯದಿಂದ ದೂರವಾದದ್ದು. ಸ್ವತಃ ಬೇಂದ್ರೆಯವರೇ ಇದನ್ನು ಅಲ್ಲಗಳೆದಿದ್ದಾರೆ. ಪಂಡಿತ ಅವಳೇಕರರ ಮರಾಠಿ ವಾಯದರ್ಶನ (೧೯೫೭)ಕ್ಕೆ ಬರೆದ ‘ಮುನ್ನುಡಿ’ಯಲ್ಲಿ ಈ ವಿಷಯದ ಬಗ್ಗೆ ಅವರ ಸ್ಪಷ್ಟ ಹೇಳಿಕೆಯಿದೆ. “ಮಹಾರಾಷ್ಟ್ರ ಆಧುನಿಕ ಕಾವ್ಯ ಕನ್ನಡ ಕಾವ್ಯದ ಮೇಲೆ ಅಂಥ ಯಾವ ಪರಿಣಾಮವನ್ನೂ ಮಾಡಿಲ್ಲ ಎಂದೇ ಹೇಳಬಹುದು. ಮಹಾರಾಷ್ಟ್ರ ಕಾವ್ಯ ಪ್ರತಿಭೆಗೆ ಪ್ರೇರಕ ಕಾರಣಗಳಾಗಿ ಇರುವ ಸಂಸ್ಕೃತ ಸಾಹಿತ್ಯ, ಆಂಗ್ಲ ಸಾಹಿತ್ಯಗಳು ಮಹಾರಾಷ್ಟ್ರದ ಮುಖವಾಗಿ ಕನ್ನಡಕ್ಕೆ ಬರಲಿಲ್ಲ”.
ಪ್ರಭಾವ ಯಾವಾಗ ಮಹತ್ತ್ವದ್ದಾಗುತ್ತದೆ ಎನ್ನುವುದರ ಬಗ್ಗೆ ಬೇಂದ್ರೆಯವರಿಗೆ ಸ್ವಂತದ ವಿಚಾರಗಳಿದ್ದವು(ಪುಟ 18) ಖಚಿತವಾಗಿ ವಿವರಿಸಿರುವುದು ಆಮೂರ ಅವರಿಗೆ ಇರುವ ವ್ಯಾಪಕವಾದ ಓದು ಅಧ್ಯಯನ, ತೌಲನಿಕ ಚಿಂತನೆಗೆ ಸಾಕ್ಷಿ. ಬೇಂದ್ರೆ ಅವರ ಸಾಹಿತ್ಯ ರಚನೆಯ ಮೇಲೆ ಮೇಲೆ ಯಾರ ಯಾರ ಪ್ರಭಾವವಾಯಿತು ಎಂಬುದನ್ನು ಕರಾರುವಕ್ಕಾಗಿ ವಿವರಿಸಿರುವುದು ಈ ಕೃತಿಯ ಧನಾತ್ಮಕ ಅಂಶ. ಆಮೂರ ಅವರಿಗೆ ಭಾರತೀಯ ಸಾಹಿತ್ಯದಲ್ಲಿ ಹಾಗೂ ಮರಾಠಿ ಸಾಹಿತ್ಯದಲ್ಲಿ ಇರುವ ಹಿಡಿತವನ್ನು ನಾವಿಲ್ಲಿ ನೋಡಬಹುದಾಗಿದೆ.
ಬೇಂದ್ರೆಯವರ ಪ್ರಾರಂಭದ ಕವಿತೆಗಳ ಅಭ್ಯಾಸ ಅವರ ಒಟ್ಟು ಕಾವ್ಯಸಾಧನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಅನೇಕ ರೀತಿಯಿಂದ ಸಹಕಾರಿಯಾಗಬಲ್ಲದು. ಈ ಕವಿತೆಗಳು ಸಂಧಿಕಾಲದ ಕವಿತೆಗಳಾಗಿದ್ದರಿಂದ ಅಭಿವ್ಯಕ್ತಿಯ ದೃಷ್ಟಿಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಅವುಗಳಿಂದ ಅಪೇಕ್ಷಿಸುವಂತಿಲ್ಲ. ಷಟ್ಟದಿ ಯುಗದ ಕೊನೆಯ ಚರಣದಲ್ಲಿ ಕಾವ್ಯರಚನೆಗೆ ತೊಡಗಿದ ಬೇಂದ್ರೆಯವರು ಸಹಜವಾಗಿಯೇ ಆ ಛಂದೋಪ್ರಕಾರವನ್ನು ತಮ್ಮ ಕಾವ್ಯದ ಮುಖ್ಯ ಮಾಧ್ಯಮವನ್ನಾಗಿ ಆರಿಸಿಕೊಂಡರು. ಷಟ್ಟದಿ ಒಂದು ದೇಹ ಅಥವಾ ಆವರಣ ಮಾತ್ರವೆಂದು ಆಗ ಅವರು ಭಾವಿಸಿದ್ದರಿಂದ ತಾಳ-ಲಯಗಳ ನಿಯಂತ್ರಣದಲ್ಲಿ ಹುಟ್ಟುವ ಛಂದೋಗತಿಯ ಸೃಷ್ಟಿಗೆ ಅದು ಬಾಧಕವೆಂದು ಅವರಿಗೆ ತೋರಲಿಲ್ಲ. ಷಟ್ಟದಿಯನ್ನಲ್ಲದೆ ಆ ಕಾಲದಲ್ಲಿ ಪ್ರಚಲಿತವಿದ್ದ ಲಾವಣಿ, ಪದ ಇಂಥ ಛಂದೋ ಪ್ರಕಾರಗಳನ್ನೂ ಅವರು ಸ್ವೀಕರಿಸಿದರು. ಆದರೆ, ಅನೇಕ ಪ್ರಭಾವಗಳಿಗೆ ಒಳಗಾಗಿ ಅವರ ಮನಸ್ಸು ಆಗಲೇ ಆಧುನಿಕತೆಯತ್ತ ಒಲಿದಿತ್ತು. ಈ ಆಧುನಿಕತೆಯ ಮುಖ್ಯ ಲಕ್ಷಣ ಸ್ವಾನುಭವದ ಅಭಿವ್ಯಕ್ತಿ. ಇದರಿಂದಾಗಿ ಕಾವ್ಯ ಅಂತರ್ಮುಖಿಯಾಗುವುದು ಅನಿವಾರ್ಯವಾಯಿತು. ಈ ಅಂತರ್ಮುಖತೆ ಭಾವಗೀತೆಯ ಲಕ್ಷಣವಾದ್ದರಿಂದ ವರ್ಣಕ ಮಾಧ್ಯಮವಾದ ಷಟ್ನದಿಯ ಸ್ವರೂಪ ಬದಲಾಗುತ್ತ ‘ಬೆಳಗು’ ಕವಿತೆಯಲ್ಲಿ ಪ್ರಕಟವಾಗುವ ಶುದ್ಧ ಭಾವಗೀತವು ಹುಟ್ಟಿಕೊಳ್ಳುವುದಕ್ಕೆ ಕಾರಣವಾಯಿತು ಎಂಬ ವಿವರಣೆ ಸಮರ್ಪಕವಾಗಿದೆ.
ಬೇಂದ್ರೆಯವರ ಪ್ರಾರಂಭದ ಕವಿತೆಗಳ ಮಹತ್ವ ಭಾವಗೀತೆಯತ್ತ ಅವರ ಪ್ರಯಾಣದ ಹೆಜ್ಜೆಗಳನ್ನು ಗುರುತಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಬೇಂದ್ರೆ ಕಾವ್ಯದ ಅಭ್ಯಾಸದ ಸಂದರ್ಭದಲ್ಲಿ ಅವರು ಯಾವ ಪ್ರಭಾವಗಳನ್ನು ಸ್ವೀಕರಿಸುತ್ತಿದ್ದರೆನ್ನುವುದನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ ವಿಶೇಷ ಮಹತ್ವವಿದೆ. ಇಂಥ ಅಭ್ಯಾಸಕ್ಕೆ ಅವರ ಪ್ರಾರಂಭದ ಕವಿತೆಗಳು ಉತ್ತಮ ಅವಕಾಶ ನೀಡುತ್ತವೆ. ಇದಲ್ಲದೆ, ಅವರ ಕಾವ್ಯದ ಮುಖ್ಯ ಆಸ್ಥೆಗಳು ಪ್ರಾರಂಭದ ಕವಿತೆಗಳಲ್ಲಿಯೇ ಬೀಜರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ಅವರ ಕಾವ್ಯವನ್ನು ಇಡಿಯಾಗಿ ನೋಡಬೇಕೆನ್ನುವವರಿಗೆ ಈ ಕವಿತೆಗಳ ಅಭ್ಯಾಸ ಅನಿವಾರ್ಯವಾಗಿದೆ. ಬೇಂದ್ರೆಯವರ ಕಾವ್ಯದ ಅಭ್ಯಾಸ ಹೆಚ್ಚಾಗಿ ಬಿಡಿ ಕವಿತೆಗಳ ವಿಶ್ಲೇಷಣೆಯ ಮೂಲಕ ನಡೆದಿರುವುದರಿಂದ ಅವರ ಕಾವ್ಯದ ವಿಕಾಸ ಕ್ರಮಕ್ಕಾಗಲಿ, ಅವರ ಕವಿತೆಗಳ ಪರಸ್ಪರ ಸಂಬಂಧಗಳಿಗಾಗಲಿ ವಿಶೇಷವಾಗಿ ಲಕ್ಷ್ಯ ದೊರೆತಿಲ್ಲ ಮಿತಿಯನ್ನ ಗಮನಿಸಿ ಬಹು ಆಯಾಮಗಳಲ್ಲಿ ಬೇಂದ್ರೆಯವರ ಕಾವ್ಯವನ್ನು ಅಧ್ಯಯನ ಮಾಡುವುದು ಮಾಡಿರುವುದು ಈ ಕೃತಿಯ ವೈಶಿಷ್ಟ್ಯ.
‘ಬೆಳಗು’ ಬೇಂದ್ರೆಯವರ ಪ್ರಸಿದ್ದ ಕವಿತೆಗಳಲ್ಲೊಂದಾದರೂ ಅದನ್ನು ಅರ್ಥೈಸುವ ಕ್ರಿಯೆ ಸಮರ್ಪಕವಾಗಿ ನಡೆದಿಲ್ಲ. ಉದಾಹರಣೆಗೆ, ಕವಿತೆಯ ಮೊದಲನೆಯ ನುಡಿಯನ್ನೇ ತೆಗೆದುಕೊಳ್ಳಬಹುದು. ಇಲ್ಲಿ ಕವಿ ವರ್ಣಿಸುತ್ತಿರುವ ಕ್ರಿಯೆ ಅರುಣೋದಯ ಸೂರ್ಯೋದಯದಲ್ಲಿ ಪರಿಣಮಿಸುತ್ತಿರುವ ಕ್ರಿಯೆ. ಅದನ್ನು ರೂಪಕದ ಭಾಷೆಯಲ್ಲಿ ‘ಮೂಡಲ ಮನೆಯ ಮುತ್ತಿನ ನೀರಿನಲ್ಲಿ ಎರಕಹೊಯ್ದ ಬಾಗಿಲು ತೆರೆದು, ಬೆಳಕು ಹರಿದು ಜಗವೆಲ್ಲ ತೊಯ್ದು ಹೋಯಿತು’ ಎಂದು ಕವಿ ವರ್ಣಿಸುತ್ತಾನೆ. ಹಾಡಿನ ಲಯ ಕವಿತೆಗಿರುವುದರಿಂದ ‘ಹೊಯ್ದ’ ಎನ್ನುವುದು. ‘ಹೊಯ್ದಾ’ ಆಗಿಯೂ ‘ತೋಯ್ದ’ ಎನ್ನುವುದು ‘ತೋಯ್ದಾ’ ಎಂದೂ ಆಗುತ್ತದೆ. ಈ ಭಾಷಾ ಪ್ರಕ್ರಿಯೆಯನ್ನು ಯಾರೂ ಗಮನಿಸಿದಂತಿಲ್ಲ. ಇನ್ನೊಂದು ಉದಾಹರಣೆ ಮೂರನೆಯ ನುಡಿ.”ಎಲೆಗಳ ಮೇಲೆ ಹೂಗಳ ಒಳಗೇ/ಅಮೃತದ ಬಿಂದು/ ಯಾರಿರಿಸಿರುವರು ಮುಗಿಲ ಮೇಲಿಂ/ದಿಲ್ಲಿಗೇ ತಂದು/
ಈಗ – ಇಲ್ಲಿಗೇ ತಂದು” ಇಲ್ಲಿ ಅಮೃತದ ಬಿಂದುಗಳು ಎಲೆಯ ಮೇಲೆ, ಹೂಗಳ ಒಳಗೆ ಕಾಣಿಸಿಕೊಂಡ ರಹಸ್ಯದ ಬಗ್ಗೆ ವಿಸ್ಮಯವನ್ನು ತೋರುವುದೇ ಕವಿಯ ಉದ್ದೇಶವಾಗಿರುವಾಗ ‘ಯಾರಿರಿಸಿರುವರು’ ಎನ್ನುವುದು ಸ್ಪಷ್ಟವಾಗುವುದೇ ಇಲ್ಲ ಎಂದು ಹೇಳುವುದು ಸರಿಯಾದ ಗ್ರಹಿಕೆಯಲ್ಲ. ಆದರೆ ಇಂಥ ಪ್ರಮಾದ ಕೂಡ ಈ ಕವಿತೆಯ ವಿವೇಚನೆಯಲ್ಲಿ ಬಂದುಹೋಗಿದೆ.
ಬೇಂದ್ರೆಯವರು ಬಳಸುವ ‘ಭಾವ’ ಪದದ ಅರ್ಥದಲ್ಲಿ ಅನೇಕ ಪದರುಗಳಿವೆಯಾದರೂ ಅದು ಮುಖ್ಯವಾಗಿ ‘ಇರವು’ ‘ಅರಿವು’ಗಳ ದೈತಾದ್ವಿತದ ಸಂಕೇತವಾಗಿದೆ. ಕಾವ್ಯ ಕೇವಲ ಕವಿಯ ಕುಶಲಕರ್ಮವಾಗಿರದೆ ಅವನ ಭಾವಪ್ರಪಂಚದ ಅಭಿವ್ಯಕ್ತಿಯಾಗಿರಬೇಕು ಎಂದು ಬೇಂದ್ರೆಯವರು ನಂಬಿದ್ದರು. ಈ ತಿಳಿವು ಅವರಿಗೆ ಅವರ ಪ್ರೀತಿಯ ಎಮರ್‌ಸನ್ ಮತ್ತು ಗುರುಸ್ಥಾನದಲ್ಲಿದ್ದ ಶ್ರೀ ಅರವಿಂದರ ಮುಖಾಂತರ ಬಂದಂತೆ ತೋರುತ್ತದೆ. Form is the mixture of matter and spirit, it is the visibility of spirit ವಿಸ್ತಾರಗೊಂಡು ಶ್ರೀ ಅರವಿಂದರಲ್ಲಿ’…. It is not the form which either fires or reveals the spirit but the spirit which makes out of itself the form and the word ” ಎಂಬ ಸಿದ್ಧಾಂತದ ರೂಪ ತಳೆಯಿತು. ಇದು ನಿಜವಾದ ಅರ್ಥದಲ್ಲಿ ರೋಮ್ಯಾಂಟಿಕ್ ಸಿದ್ಧಾಂತ. ಈ ಸಿದ್ಧಾಂತ ಕನ್ನಡ ಕಾವ್ಯದಲ್ಲಿ ಮೊಟ್ಟಮೊದಲು ಆಕಾರ ಪಡೆದದ್ದು ಬೇಂದ್ರೆಯವರ ‘ಬೆಳಗು’ ಕವಿತೆಯಲ್ಲಿ ಎನ್ನುವುದು ಐತಿಹಾಸಿಕ ಸತ್ಯ. ಇಂಥ ಹೊಸ ಪ್ರಯೋಗದ ಸ್ವೀಕೃತಿಯ ಬಗ್ಗೆ ಸ್ವತಃ ಬೇಂದ್ರೆಯವರೇ ಅಧೀರರಾಗಿದ್ದರು: “ಜನ ಹೇಗೆ ಮೆಚ್ಚುವರೋ ಎಂಬ ಭಯ ನನಗಿಲ್ಲದಿರಲಿಲ್ಲ. ಆದ್ದರಿಂದಲೇ ಅದನ್ನು ‘ಸದಾನಂದಿ ಜಂಗಮ’ ಎಂಬ ಕಾವ್ಯನಾಮದಿಂದ ಪ್ರಕಟಿಸಿದೆ.” ಅಚ್ಚು ಕಂಡ ಅವರ ಮೊದಲ ಕವಿತೆ ‘ತುತ್ತೂರಿ’ ‘ಅಂಬಿಕಾತನಯದತ್ತ’ ಹೆಸರಿನಲ್ಲಿ ಪ್ರಕಟವಾದಾಗ ಬೇಂದ್ರೆಯವರಲ್ಲಿ ಇಂಥ ಅಳುಕಿರಲಿಲ್ಲ. ಯಾಕೆಂದರೆ ಅದು ಪರಂಪರೆಯಿಂದ ಇಷ್ಟು ಕ್ರಾಂತಿಕಾರಕವಾಗಿ ಸಿಡಿದು ನಿಂತಿರಲಿಲ್ಲ ಎಂಬುದನ್ನು ಉದಾಹರಣೆ ಸಹಿತ ದೇಶ ವಿದೇಶಗಳ ಕವಿ ಪ್ರತಿಭೆಗಳ ಜತೆಗೆ ಹೋಲಿಸಿ ಬೇಂದ್ರೆ ಹೇಗೆ ಭಿನ್ನ ಎಂಬುದನ್ನು ಇಲ್ಲಿ ತೋರಿಸಿ ಕೊಡಲಾಗಿದೆ.
ಶ್ರೀರಂಗರು ಶ್ರೇಷ್ಠ ನಾಟಕಕಾರರಾಗಿದ್ದಂತೆ ಪ್ರಥಮ ವರ್ಗದ ಕಾದಂಬರಿಕಾರರೂ ಆಗಿದ್ದರೂ ಅವರ ನಾಟಕಗಳಿಗೆ ಕೊಟ್ಟಷ್ಟು ಲಕ್ಷ್ಯವನ್ನು ವಿಮರ್ಶಕರು ಕಾದಂಬರಿಗಳಿಗೆ ಕೊಡಲಿಲ್ಲ. ಈ ವಿಷಯವನ್ನು ಅವರಲ್ಲಿ ಒಮ್ಮೆ ಈ ಲೇಖಕ ಪ್ರಸ್ತಾಪಿಸಿದಾಗ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ‘ನಾಟಕ ಬರದಿದ್ದs ತಪ್ಪಾಗೇದ!’ ಎಂದು ಉದ್ಗಾರೆ ತೆಗೆದರು. ‘ಬೇಂದ್ರೆ ಎಂದೂ ಗದ್ಯದ ವೈಚಾರಿಕತೆಯಿಂದ ಆಕರ್ಷಿತರಾಗಲಿಲ್ಲ’ ಎಂಬ ಕೆ.ವಿ. ತಿರುಮಲೇಶರ ಹೇಳಿಕೆಯನ್ನು ನೋಡಿದ್ದರೆ, ಬಹುಶಃ ಬೇಂದ್ರೆಯವರು ಕೂಡ ‘ಕವಿತಾ ಬರದಿದ್ದs ತಪ್ಪಾಗೇದ’ ಅನ್ನುತ್ತಿದ್ದರೋ ಏನೋ! ಒಂದು ಮಾತು ಮಾತ್ರ ನಿಜ. ಬೇಂದ್ರೆಯವರ ಗದ್ಯರಚನೆಯ ವೈವಿಧ್ಯ ವಿಶಾಲತೆಗಳನ್ನಾಗಲಿ, ಅದರ ಐತಿಹಾಸಿಕ ಆಥವಾ ಆಂತರಿಕ ಮಹತ್ತ್ವವನ್ನಾಗಲಿ ವಿಮರ್ಶಕರು ಯಥಾರ್ಥವಾಗಿ ಗ್ರಹಿಸಿದಂತಿಲ್ಲ.
ಗದ್ಯದ ಎಲ್ಲ ಪ್ರಕಾರಗಳಲ್ಲಿಯೂ ಬೇಂದ್ರೆಯವರು ಕೈಯಾಡಿಸಿದರು. ಈ ದೃಷ್ಟಿಯಿಂದ ಅವರ ಸಾಹಿತ್ಯದ ವಿರಾಟ್ ಸ್ವರೂಪ ಕೆಲಮಟ್ಟಿಗೆ ಪ್ರಾತಿನಿಧಿಕವಾದ ಸಂಗ್ರಹ. ಇಲ್ಲಿ ಭಾಷಣ, ಮುನ್ನುಡಿ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ,
ಆತ್ಮಕಥನ -ಈ ಪ್ರಕಾರಗಳ ಮಾದರಿಗಳಿವೆ. ಆದರೆ ಇವು ಕೂಡ ಕೇವಲ ಮಾದರಿಗಳು.
ಅವರ ಮುನ್ನುಡಿಗಳೇ ನೂರಕ್ಕಿಂತ ಹೆಚ್ಚಾಗಿವೆ. ಮಾತೆಲ್ಲ ಜ್ಯೋತಿ, ಮತಧರ್ಮ ಮತ್ತು ಆಧುನಿಕ ಮಾನವಗಳಲ್ಲಿ ಅವರ ಕೆಲವು ಭಾಷಣಗಳು ಸಂಗ್ರಹಿತವಾದರೂ ಎಷ್ಟೋ ಬೇರೆ ಕಡೆಗಳಲ್ಲಿ ಹಂಚಿಹೋಗಿವೆ. ಬೇಂದ್ರೆಯವರ ನಾಟಕಗಳು, ಕತೆ-ಹರಟೆಗಳು, ವ್ಯಕ್ತಿ ಚಿತ್ರಗಳು, ಸಂಪಾದಕೀಯ ಲೇಖನ-ಟಿಪ್ಪಣಿಗಳು, ಅನುವಾದಗಳು ಈ ಗ್ರಂಥದಲ್ಲಿ ಸೇರಿಲ್ಲ. ಇವುಗಳಿಗಾಗಿ ನಿರಾಭರಣ ಸುಂದರಿ, ನಾಟ್ಯಸಂಪುಟ, ವಿಚಾರಮಂಜರಿ, ಕನ್ನಡದ ಕಿಡಿಗಳು ಹಾಗೂ ‘ಜಯಕರ್ನಾಟಕ’, ‘ಸ್ವಧರ್ಮ’ ಮೊದಲಾದ ಪತ್ರಿಗಳ ಸಂಪುಟಗಳಲ್ಲಿ
ಹುಡುಕಬೇಕಾಗುತ್ತದೆ. ಬೇಂದ್ರೆಯವರ ಗದ್ಯದ ಸಮಗ್ರ ಸಂಪುಟಗಳು ಹೊರಬಂದಾಗಲೇ ಗದ್ಯದಲ್ಲಿ ಮಾಡಿದ ಅವರ ಕೃಷಿಯ ಯಥಾರ್ಥ ಕಲ್ಪನೆ ಸಾಧ್ಯ. ಅಲ್ಲಿಯವರೆಗೆ ಅವರ ಗದ್ಯ
ಸಮೀಕ್ಷೆಯ ಕಾರ್ಯ ತೃಪ್ತಿಕರವಾಗಿ ನಡೆಯಲಾರದು.
ದಿಕ್ಕಿನಲ್ಲಿ ಕೆಲವೊಂದು ಪ್ರಯತ್ನಗಳನ್ನು ಮಾತ್ರ ಮಾಡಬಹುದು ಎಂಬ ಸೂಚನೆಯನ್ನು ನೀಡುತ್ತಲೇ ಬೇಂದ್ರೆಯವರ ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ನಾಟಕ, ಕತೆ, ಹರಟೆ ಮತ್ತು ಅನುವಾದ ಸಾಹಿತ್ಯವನ್ನು ಸಮಗ್ರವಾಗಿ ಆಮೂರ ಅವರು ಇಲ್ಲಿ ವಿಮರ್ಶೆಗೆ ಈಡು ಮಾಡಿದ್ದಾರೆ.
ಬೇಂದ್ರೆ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ ಕಾವ್ಯ. ಆದರೂ ಅವರ ಕಾವ್ಯ ತತ್ವ ಚಿಂತನೆ ಹಾಗೂ ವಿಮರ್ಶನ ಪ್ರಜ್ಞೆ ಪ್ರತಿಭೆಯನ್ನು ಸಹ ಇಲ್ಲಿ ಆಮೂರರು ಒರೆಗೆ ಹಚ್ಚಿ ನೋಡಿರುವುದು ವಿಶೇಷ.bನವೋದಯದ ಪ್ರಮುಖ ಕವಿಗಳಾದ ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಅವರಿಗೆ ಕಾವ್ಯಸೃಷ್ಟಿಯಂತೆ ಕಾವ್ಯಚಿಂತನೆ ಮತ್ತು ಸಾಹಿತ್ಯ ವಿಮರ್ಶೆಗಳೂ ಗಾಢವಾದ ಆಸ್ಥೆಯ ವಿಷಯಗಳಾಗಿರುವುದು ಗಮನಾರ್ಹವಾಗಿದೆ. ಹೊಸ ಕಾವ್ಯ ಬಂದಾಗಲೆಲ್ಲ ಇಂತ ಕಾರ್ಯದ ಅವಶ್ಯಕತೆಯುಂಟಾಗುತ್ತದೆ ಮತ್ತು ಅನೇಕ ಸಲ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಸಂದರ್ಭದಲ್ಲಿ ಕೋಲ್‌ರಿಡ್ಜ್‌ನಂತೆ, ನವ್ಯಕಾವ್ಯದ ಸಂದರ್ಭದಲ್ಲಿ ಎಲಿಯಟ್‌ನಂತೆ, ಕವಿಯೇ ಈ ಹೊಣೆಯನ್ನು ನಿರ್ವಹಿಸಿದ್ದುಂಟು. ಬೇಂದ್ರೆಯವರು ಈ ಹೊಣೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರೆನ್ನುವುದಕ್ಕೆ ಅವರ ಸಾಹಿತ್ಯ ಮತ್ತು ವಿಮರ್ಶೆ (೧೯೩೭), ಸಾಹಿತ್ಯ ಸಂಶೋಧನೆ (೧೯೪೦), ವಿಚಾರಮಂಜರಿ (೧೯೪೫), ಜೈಮಿನಿ ಭಾರತಕ್ಕೆ ಮುನ್ನುಡಿ (೧೯೫೪), ಮಹಾರಾಷ್ಟ್ರ ಸಾಹಿತ್ಯ (೧೯೫೯). ಕಾವೋದ್ಯೋಗ (೧೯೬೨), ಸಂವಾದ (ಮರಾಠಿಯಲ್ಲಿ) (೧೯೫೯), ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು (೧೯೬೮), ಮಾತೆಲ್ಲ ಜ್ಯೋತಿ (೧೯೭೨), ಸಾಹಿತ್ಯದ ವಿರಾಟ್ ಸ್ವರೂಪ (೧೯೭೪) ಮತ್ತು ಕುಮಾರವ್ಯಾಸ (೧೯೭೬) ಗಳಲ್ಲಿ ಸಂಗ್ರಹಿತವಾದ ವಿಮರ್ಶೆ, ಸಂದರ್ಭೋಚಿತವಾಗಿ ಮಾಡಿದ ಭಾಷಣಗಳು ಮತ್ತು ಹಲವಾರು ಗ್ರಂಥಗಳಿಗೆ ಬರೆದ ಮುನ್ನುಡಿಗಳು ಸಾಕ್ಷಿಯಾಗಿವೆ, ಅವರ ಕಾವ್ಯಚಿಂತನ ಕೇವಲ ಗದ್ಯಕ್ಕಷ್ಟೇ ಸೀಮಿತವಾಗಿದ್ದಿಲ್ಲ. ಗರಿಯಿಂದ ಪ್ರತಿಬಿಂಬಗಳವರೆಗಿನ ಸುಮಾರು ಎಲ್ಲ ಸಂಗ್ರಹಗಳಲ್ಲಿಯೂ ಕಾವ್ಯಚಿಂತನೆಯೀ ಕಾವ್ಯವಸ್ತುವಾಗಿರುವ ಅನೇಕ ಕವಿತೆಗಳಿವೆ. ಇಡಿಯ ಕನ್ನಡ ಕಾವ್ಯಪರಂಪರೆಯಲ್ಲಿಯೇ ಕಾವ್ಯಚಿಂತನೆ ಕಾವ್ಯದಲ್ಲಿ ಇಷ್ಟು ಪ್ರಮಾಣದಲ್ಲಿ ಅಭಿವ್ಯಕ್ತವಾದ ಬೇರೆ ಉದಾಹರಣೆಗಳು ಸಿಗುವುದಿಲ್ಲ.
ಬೇಂದ್ರೆಯವರ ಕಾವ್ಯಚಿಂತನದ ಮೂಲ ಸೆಲೆ ಭಾರತೀಯ ಸಾಹಿತ್ಯಶಾಸ್ತ್ರದ ಮುಖ್ಯ ಪ್ರವಾಹವಾದ ರಸಸಂಪ್ರದಾಯದಲ್ಲಿಯೇ ಇದೆ. ‘ಕಾವ್ಯಮಾನಂದಾಯ’ ಎಂಬ ತತ್ತ್ವವನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರು. ಕಲೆಗಳ ಕಲ್ಯಾಣಕರ ಶಕ್ತಿಯ ಅರಿವನ್ನೂ ಅವರು ಹೊಂದಿದ್ದರು. (ಉದಾ: ‘ನೃತ್ಯಯಜ್ಞ) ಆದರೆ, ಅನೇಕ ಮೂಲಗಳಿಂದ, ಮುಖ್ಯವಾಗಿ ಶ್ರೀ ಅರವಿಂದರ ಕಾವ್ಯ ವಿಚಾರಗಳಿಂದ, ಬಂದ ಹೊಸ ಅಂಶಗಳನ್ನು ಸೇರಿಸಿಕೊಳ್ಳುವ ಮೂಲಕ ಅದು ತನ್ನದೇ ಆದ ವೈಯಕ್ತಿಕತೆಯನ್ನು ಪಡೆದುಕೊಂಡಿತು. ಎರಡು ಮುಖ್ಯ ಕಾರಣಗಳಿಗಾಗಿ ಈ ಕಾವ್ಯಚಿಂತನವನ್ನು ನಾವು ಲಕ್ಷಿಸಬೇಕಾಗಿದೆ. ಮೊದಲನೆಯದು, ಇದರಿಂದ ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಒದಗುವ ಅನುಕೂಲತೆ. ಎರಡನೆಯದು, ಬೇಂದ್ರೆಯವರಂಥ ಶ್ರೇಷ್ಠ ಕವಿಯೊಬ್ಬನು ತನ್ನ ಪರಂಪರೆಯಲ್ಲಿಯ ಕಾವ್ಯಚಿಂತನದಲ್ಲಿ ಹೊಂದಿದ್ದ ಶ್ರದ್ಧೆಯ ಸಾಂಕೇತಿಕತೆ. ಪಾಶ್ಚಾತ್ಯ ಪ್ರಭಾವಗಳಿಂದ ಮುಕ್ತತೆಯ ಮಾರ್ಗಗಳ ಶೋಧನೆಯತ್ತ ವಿಶೇಷ ಲಕ್ಷ್ಯ ಕೊಡುತ್ತಿರುವ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಈ ಸಾಂಕೇತಿಕತೆ ಅತ್ಯಂತ ಮಹತ್ತ್ವದ್ದಾಗಿದೆ. ಬೇಂದ್ರೆಯವರ ಕಾವ್ಯಚಿಂತನವನ್ನು ಇಡಿಯಾಗಿ ಗ್ರಹಿಸುವುದು ಸುಲಭಸಾಧ್ಯವಾದ ಕಾರ್ಯವಲ್ಲ. ಅವರ ಗದ್ಯದ ಸಾಂದ್ರತೆ ಮತ್ತು ಪದ್ಯದ ರೂಪಕದ ಭಾಷೆ ತರ್ಕದ ಜಾಲದಲ್ಲಿ ಸಹಜವಾಗಿ ಸಿಗುವಂಥವಲ್ಲ. ಆದರೂ, ಕಾವ್ಯಶಾಸ್ತ್ರದ ಮೂಲಭೂತ ಸಮಸ್ಯೆಗಳಾದ ಕವಿ, ಕಾವ್ಯ, ಸಹೃದಯರ ಲಕ್ಷಣಗಳು ಮತ್ತು ಈ ಮೂರರ ಪರಸ್ಪರ ಸಂಬಂಧಗಳು ಮತ್ತೆ ಮತ್ತೆ ಅವರ ಚಿಂತನದ ವಿಷಯವಾಗಿ ಬರುವುದರಿಂದ ಅವುಗಳನ್ನು ಸಂಕ್ಷಿಪ್ತರೂಪದಲ್ಲಿಯಾದರೂ ಗ್ರಹಿಸುವುದು ಸಾಧ್ಯವಿದೆ. ಇಂಥ ಪ್ರಯತ್ನಕ್ಕೆ ಅವರ ಗದ್ಯಲೇಖನಗಳಲ್ಲಿ ಪ್ರಕಟವಾಗುವ ವಿಚಾರಗಳನ್ನಷ್ಟೇ ಅಲ್ಲದೆ, ಕಾವ್ಯಚಿಂತನದಲ್ಲಿ ಮೂಡಿಬಂದ ಕವಿತೆಗಳಲ್ಲಿ ಸೂಚಿತವಾಗುವ ಅರ್ಥಗಳನ್ನೂ ಗಮನಿಸಿರು ವುದು ಈ ಕೃತಿಯ
ಹೆಚ್ಚುಗಾರಿಕೆ.
ಎಲ್ಲ ಶ್ರೇಷ್ಠ ಬರಹಗಾರರ ಹಾಗೆ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು, ತಮ್ಮ ತಾಯಿಯ ಹೆಸರನ್ನು ಸೇರಿಸಿಕೊಂಡು ಅಂಬಿಕಾತನಯದತ್ತನೆಂಬ ಕವಿಯಾಗಿ ಗುರುತಿಸಿಕೊಳ್ಳಲು ಬಯಸಿ, ಪರಿಪೂರ್ಣ ಬಾಳನ್ನು ಬದುಕಿದರು, ಬಾಳಿನ ಎಲ್ಲ ಸುಖಗಳು ಮತ್ತು ನೋವುಗಳ ಸಹಿತವಾಗಿ. ಆದರೆ ನಾದಲೀಲೆಯ ಅರ್ಪಣಾಕವನದಲ್ಲಿ ಅವರೇ ಹೇಳಿದಂತೆ, ನೋವುಗಳನ್ನು ತಮ್ಮ ಪಾಲಿಗೇ ಇಟ್ಟುಕೊಂಡು, ಓದುಗರಿಗೆ ತಮ್ಮ ಹಾಡುಗಳನ್ನು ಮಾತ್ರ ನೀಡಿದರು. ಅತ್ಯಂತ ಖಾಸಗೀ ವ್ಯಕ್ತಿತ್ವದ ಬರಹಗಾರರಾಗಿದ್ದುಕೊಂಡೂ ನಿಜವಾದ ನಿರಾಕಾರತ್ವ ಮತ್ತು ಸಾರ್ವತ್ರಿಕತೆಯನ್ನು ಸಾಧಿಸಿದ ಕವಿ ಅವರು. ಒಬ್ಬ ಮಹಾನ್ ಕವಿಯ ಜೀವನಚರಿತ್ರೆಯು ಆತನ ಕಲೆಯನ್ನು ವಿಶ್ಲೇಷಿಸುವುದಿಲ್ಲ. ವಿಶ್ಲೇಷಣೆಗಳನ್ನು ಸಾಧ್ಯವಾಗಿಸುವಂತಹ ಜೀವಂತ ಸಂದರ್ಭಗಳನ್ನು ಸೃಷ್ಟಿಸುತ್ತದೆ.
ಒಬ್ಬ ಕವಿಯು ಸಾಂಕೇತಿಕ ವ್ಯಕ್ತಿಯಾಗಿರುತ್ತಾನೆ. ಅವನ ಕಾವ್ಯವು ಸಾಂಪ್ರದಾಯಿಕ ಸಾಂಸ್ಕೃತಿಕ ಪರಂಪರೆಯ ಮುಂದುವರಿಕೆಯಾಗಿರುತ್ತದೆ. ಇದು ಸ್ವತಃ ಬೇಂದ್ರೆಯವರ ಕಾವ್ಯಕ್ಕೇ ಪೂರ್ಣವಾಗಿ ಅನ್ವಯಿಸುತ್ತದೆ. ಅವರು ವರ್ತಮಾನ ಹಾಗೂ ಭವಿಷ್ಯಕ್ಕೆ ಬದ್ಧರಾಗಿದ್ದರೂ ನಿಜವಾದ ಅರ್ಥದಲ್ಲಿ ಅವರು ಪರಂಪರೆಯ ಕವಿಯಾಗಿದ್ದರು. ಅವರು ತಾನು ನವೋದಯ ಅಥವಾ ನವ್ಯ ಕವಿ ಅಲ್ಲ. ವೇದಕವಿ, ವೇದವಿತ್ ಕವಿ, ಅಂತ ಒತ್ತಿ ಹೇಳುತ್ತಿದ್ದರು. ಭಾರತದ ಸಾಂಪ್ರದಾಯಿಕ
ಆಧ್ಯಾತ್ಮಕ ಪರಂಪರೆಯೇ ಅವರ ಕಾವ್ಯದ ಮೂಲ ಆಧಾರವಾಗಿತ್ತು. ಅದು ಸಾಮರಸ್ಯದ ಪರಂಪರೆ-ದೇವರು ಮತ್ತು ಮನುಷ್ಯನ ನಡುವೆ, ಮನುಷ್ಯ ಮತ್ತು ಪ್ರಕೃತಿ ಹಾಗೂ ಇತರ ಮನುಷ್ಯರೊಂದಿಗೆ ಇರುವ ಸಾಮರಸ್ಯ. ಸಂವೇದನಾಶೀಲರಾಗಿದ್ದ ಅವರಿಗೆ ಆಧುನಿಕ ಸಮಾಜದ ಸಮಸ್ಯೆಗಳ ಅರಿವಿದ್ದರೂ ಅವರಿಗೆ ತಮ್ಮ ದೃಷ್ಟಿಯಲ್ಲಿ ನಂಬಿಕೆಯಿತ್ತು. ಇದೇ ಅವರ ವಿಶ್ವಧಾರಣಾಸೂತ್ರ.
ಬೇಂದ್ರೆಯವರ ಕಾವ್ಯ ತಿಳಿಯುವುದಿಲ್ಲ ಎಂಬ ತಕರಾರು ಬಹಳ ಹಳೆಯದು. ಈ ತಕರಾರಿಗೆ ಅನೇಕ ಕಾರಣಗಳಿವೆ. ಮೊದಲನೆಯದು ಅವರ ಪ್ರಯೋಗಶೀಲತೆ. ಸಂಧಿಕಾಲದಲ್ಲಿ ಕಾವ್ಯ ರಚನೆಯನ್ನು ಪ್ರಾರಂಭಿಸಿದ ಅವರು ತುಳಿದ ಹಾದಿಯೇ ಹೊಸ ಹಾದಿಯಾಗಿತ್ತು. “ಹುಡುಕುವುದಕ್ಕೆ ಹಾಯ್ದಾಡುವುದರಿಂದಲೇ ಹಾದಿ ತಾನೇ ಹುಟ್ಟುವುದು?” ಎಂದು ಅವರು ಆಗ ಕೇಳಿದ್ದರು.೧೧ ಈ ಪ್ರಯೋಗಶೀಲತೆ ಎಷ್ಟು ಬೆರಗುಗೊಳಿಸುವಂತಹದಿತ್ತೆಂದರೆ, ತೀ.ನಂ. ಶ್ರೀಕಂಠಯ್ಯನವರಂಥ ನುರಿತ ವಿಮರ್ಶಕರು ಕೂಡ ‘ಬೆಳಗು’ ಕವಿತೆಯ ಮಹತ್ತ್ವವನ್ನು ತಿಳಿಯಲು ಮಾಸ್ತಿಯವರ ಮಾರ್ಗದರ್ಶನಕ್ಕಾಗಿ ಕಾಯಬೇಕಾಯಿತು. ಅರಳು ಮರಳು ಅನಂತರ ಬೇಂದ್ರೆಯವರ ಕಾವ್ಯ ಬೇರೆ ಮಾರ್ಗವನ್ನು ಹಿಡಿದಾಗ, ಅವರ ಓದುಗರು ಮತ್ತೆ ತೊಂದರೆಗೊಳಗಾದರು. ಟಿ.ಎಸ್. ಎಲಿಯಟ್‌ನ The Waste Land ಮೆಚ್ಚಿಕೊಂಡಿದ್ದ ಎಫ್.ಆರ್. ಲೀವಿಸ್‌ನಂಥ ವಿಮರ್ಶಕರು four Quartets ನಲ್ಲಿ ಅವನ ಕಾವ್ಯಶಕ್ತಿಯ ಹ್ರಾಸವನ್ನು ಕಂಡಂತೆ ನಾದಲೀಲೆ, ಗಂಗಾವತರಣಗಳಿಗೆ ಮನಸೋತ ಬೇಂದ್ರೆಯವರ ಓದುಗರು ನಾಕುತಂತಿಯಿಂದ ದಿಗ್ಧಮೆಗೊಂಡರು. ಇದಕ್ಕೆ ಕಾರಣ, ಕಾವ್ಯದ ಬಗ್ಗೆ ಬೇಂದ್ರೆಯವರ ಬದಲಾದ ಕಲ್ಪನೆ ಮತ್ತು ವೈದಿಕ ಛಂದಸ್ಸಿನ ಉಪಯೋಗ ಇವಿಷ್ಟೇ ಆಗಿರದೆ ಒಂದು ಸಂಸ್ಕೃತಿಯ ಬಗ್ಗೆ ರೂಢವಾಗಿದ್ದ ವಿಸ್ಮೃತಿ, ಅಪನಂಬಿಕೆಗಳೂ ಕಾರಣವಾಗಿದ್ದವು. ಕೆಲವರಿಗಂತೂ ಈ ಸಂಸ್ಕೃತಿ ಹುಸಿ, ಅಪ್ರಸ್ತುತ ಮತ್ತು ನಿರರ್ಥಕವಾಗಿ ಕಂಡಿತು. ಇದರಿಂದಾಗಿ ಬೇಂದ್ರೆಯವರ ಓದುಗರು ಅವರ ಸಾಹಿತ್ಯವನ್ನು ಇಡಿಯಾಗಿ ನೋಡದೆ ತಮಗೆ ಇಷ್ಟವಾದ ಅಂಶಗಳನ್ನಷ್ಟೇ ಆಯ್ದುಕೊಳ್ಳುವ ಒಂದು ಪದ್ಧತಿ ಬೆಳೆದುಬಂದಿತು. ಆದರೆ, ಬೇಂದ್ರೆಯವರು ನಮ್ಮ ಕಾಲದ ಅತ್ಯಂತ ಜನಪ್ರಿಯ ಕವಿಯೂ ಆಗಿದ್ದರೆನ್ನುವುದು ಅಷ್ಟೇ ಸತ್ಯವಾಗಿದೆ. “ಒಬ್ಬ ಕವಿಯ ಕೃತಿ ಹೀಗೆ ಜನಪ್ರಿಯ ಆಗುವುದು ಆತನ ಕಾವ್ಯಶಕ್ತಿಯ ಪ್ರಾಪ್ತಿಯಂತೆಯೇ ಅವನಿಗೆ ಒಂದು ಭಾಗ್ಯ.
ಬೇಂದ್ರೆಯವರು ತಮ್ಮ ಕಾವೋದ್ಯೋಗವನ್ನು ಪ್ರಾರಂಭಿಸಿದಾಗ ಹೊಸಗನ್ನಡ ಕಾವ್ಯದ ಭಾಷೆ ಇನ್ನೂ ರೂಪುಗೊಳ್ಳುವುದರಲ್ಲಿತ್ತು. ಆದರೆ, ಕನ್ನಡದ ಶಕ್ತಿಯ ಬಗ್ಗೆ ಅವರಲ್ಲಿ ಅಪಾರ ನಂಬಿಗೆಯಿತ್ತು. “ಮನದೆಲ್ಲ ದಾಹವನ್ನು ಶಮನಗೊಳಿಸುವ ರಸ-ಝರಿಯು ಕನ್ನಡದ ಕೆಚ್ಚಿನಲ್ಲಿದೆ. ಚಿತ್ತದ ಎಲ್ಲ ಪೊರೆಗಳನ್ನೂ ಬಿಚ್ಚಿ ತೋರಿಸುವ ಕಸುವು ಕನ್ನಡ ನುಡಿಗಿದೆ.” “ಕನ್ನಡದ ಬಸಿರಿಗೆ ಬಯಲು ಬಯ್ದಿಟ್ಟದ್ದನ್ನೆಲ್ಲ ಒಡಮೂಡಿಸುವ ಶಕ್ತಿ ಇದೆ” ಎಂದು ಅವರು ಘೋಷಿಸಿದರು. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಕೂಡ ಇಂಥ ವೀರಶ್ರದ್ಧೆ ವಿರಳವಾಗಿ ನೋಡಸಿಗುತ್ತದೆ. ಮರುಳಸಿದ್ಧನ ಕೈಯ ಮಾಯಾಕಿನ್ನರಿಯಂತೆ ಬೇಂದ್ರೆಯವರ ಕಾವ್ಯ ಕನ್ನಡದಲ್ಲಿ ‘ಸಹಸ್ರತಂತ್ರೀ ನಿಃಸ್ವನ’ವನ್ನು ಹೊರಡಿಸಿತು. ಗೋಪಾಲಕೃಷ್ಣ ಅಡಿಗರು ಹೇಳಿದಂತೆ “ಕನ್ನಡದ ಕವಿಗಳಲ್ಲಿ ಪಂಪ, ನಾರಣಪ್ಪರ ತರುವಾಯ ಕನ್ನಡದ ಜೀವಾಳವನ್ನೇ ಹಿಡಿದು, ಈ ನಮ್ಮ ಭಾಷೆಯ ಜೀವನಾಡಿಯನ್ನೇ ಮಿಡಿದು ಕಾವ್ಯರಚನೆ ಮಾಡಿದ ಕವಿ ನಮ್ಮಲ್ಲಿ ಬೇಂದ್ರೆಯವರಲ್ಲದೆ ಬೇರೆ ಯಾರೂ ಅಲ್ಲ.” ಎಂಬುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಖಚಿತವಾಗಿnಆಮೂರ ಅವರು ವಿವರಿಸಿದ್ದಾರೆ.
ಕಾವ್ಯವನ್ನು ಒಂದು ‘ಉದ್ಯೋಗ’ವೆಂದು ಕರೆದ ವರಕವಿ ಬೇಂದ್ರೆಯವರು ಕಾವ್ಯಧರ್ಮ ಹಾಗೂ ಲೋಕಧರ್ಮಗಳ ನಡುವಿನ ನಿರಂತರತೆಯನ್ನು ಎತ್ತಿ ತೋರಿಸಿದರು. ಕಾವ್ಯವೂ ಒಂದು ಕರ್ಮ. ಅದು ಪುರುಷಾರ್ಥ ಪೂರ್ಣವಾಗಲಿ, ಬರಿ ಪ್ರಕೃತಿ ವಿಲಾಸವಾಗದಿರಲಿ” ಎಂಬ ಅವರ ಹೇಳಿಕೆ ಜೀವನ ಹಾಗೂ ಅದರ ಒಂದು ಭಾಗವೇ ಆದ ಕಾವ್ಯ ಇವುಗಳ ಗುರಿ ಒಂದೇ ಆಗಿದೆ ಎಂಬ ನಂಬಿಕೆಯಿಂದ ಬಂದದ್ದು. ಪುರುಷಾರ್ಥಗಳಲ್ಲಿ ಧರ್ಮಾರ್ಥ ಮೋಕ್ಷಗಳಿಗಿಂತ ಕಾಮಕ್ಕೆ ಸಹ ಬೇಂದ್ರೆಯವರು ಆದ್ಯತೆಯನ್ನಿತ್ತರು. “ಧರ್ಮಾರ್ಥ ಮೋಕ್ಷಗಳಿಗಿಂತ ಭಕ್ತಿಕಾಮವೇ ಪುರುಷಾರ್ಥವಾದರೆ ಮಾನವತೆಯ ಕಾಲುಷ್ಯ ಕಳೆದೀತು” ಎಂದು ಒಂದು ಕಡೆ ಅವರು ಹೇಳಿದ್ದುಂಟು. ಕಾಮದ ಆದ್ಯತೆಯ ಪ್ರಮಾಣ ಅವರಿಗೆ ನಾಸದೀಯ ಸೂಕ್ತದಲ್ಲಿ ದೊರಕಿತು. ಮೇಘದೂತದ ಪೀಠಿಕೆಯ ಮೊದಲು ಅವರು “ಕಾಮಸ್ತದನ್ನೇ ಸಮವರ್ತತಾದಿ | ಮನಸೋ ರೇತಃ ಪ್ರಥಮಂ ಯದಾಸೀತ್ | ಸತೋ ಬಂಧುಮತಿ ನಿರವಿಂದನ್ | ಹೃದಿ ಪ್ರತೀಷ್ಯಾ ಕವಯೋ ಮನೀಷಾ !” ಎಂಬ ಈ ಸೂಕ್ತದ ಪಂಕ್ತಿಗಳನ್ನು ನೆನೆದಿದ್ದಾರೆ. ‘ಕಾಮ’ವನ್ನು ‘ಭಕ್ತಿ’ಯೊಡನೆ ಜೋಡಿಸುವುದರ ಮೂಲಕ ಅದರ ಸ್ವರೂಪವನ್ನು ಬೇಂದ್ರೆಯವರು ಪರಿವರ್ತಿಸಿದರು. “ಬುದ್ಧಿ-ಭಾವಗಳ ಸಮರಸ ಯುಕ್ತಿಸಂಧಾನ ಪಡೆದಾಗ ಕಾಮ-ಭಕ್ತಿ ಒಂದಾಗಿ ಜೀವನಕ್ಕೆ ಹೊಸ ಸಿದ್ಧಿ ಬರುತ್ತದೆ” ಎನ್ನುವುದು ಅವರ ಮಹತ್ತ್ವದ ಒಳನೋಟಗಳಲ್ಲೊಂದು. ಅಂಬಿಕಾತನಯದತ್ತರ ಕಾವ್ಯಕ್ಕೆ ಹಲವಾರು ಆಯಾಮಗಳಿವೆಯಾದರೂ ಅವುಗಳಲ್ಲಿ ಅತ್ಯಂತ ಮಹತ್ತ್ವದ್ದು ಭಕ್ತಿಯ ಅಭಿವ್ಯಕ್ತಿ. ಭಕ್ತಿಸೂತ್ರಗಳು ಹೇಳುವಂತೆ ಪ್ರೇಮವೂ ಕೂಡ ಭಕ್ತಿಯ ಒಂದು ಅವಿಷ್ಕಾರವೇ. ಆದ್ದರಿಂದ ಧರ್ಮ ಕಾಮಕ್ಕೆ ಅವರ ಮೌಲ್ಯ ವ್ಯವಸ್ಥೆಯಲ್ಲಿ ಅನನ್ಯವಾದ ಸ್ಥಾನ ದೊರಕಿತು. ತಮ್ಮನ್ನು “ಒಲವುಲಿಂಗದ ಉದ್ಭವವಾದಿ”ಯೆಂದೇ ಅವರು ಗುರುತಿಸಿಕೊಂಡರು. ಈ ಮೌಲ್ಯವೇ ಅವರ ಕಾವ್ಯದ ಕಲ್ಪನೆಯನ್ನು ಕೂಡ ರೂಪಿಸಿತು. “ಕಾವ್ಯವು ಐಹಿಕ ರಾಜಕಾರಣವಲ್ಲ, ಪಾರಮಾರ್ಥಿಕ ಮುಕ್ತಿ ಮಾರ್ಗವಲ್ಲ, ಅದು ಧರ್ಮ ಕಾಮವಾಗಿ ಯತ್ನಿಸುವ ಕಾಮ-ಧರ್ಮ” ಎನ್ನುವುದು ಅವರ ಮಹತ್ವದ ಹೇಳಿಕೆಗಳಲ್ಲೊಂದು.ಬೇಂದ್ರೆ ಅವರ ಮುಖ್ಯ ಸಾಮಾಜಿಕ ತಾತ್ವಿಕತೆಯನ್ನು ಧಾರ್ಮಿಕ ಮಾನವತಾವಾದದಲ್ಲಿ ಗುರುತಿಸುವ ಕಾರ್ಯವನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.
ಅಲ್ಲಮನ ಶ್ರೇಷ್ಠತೆಯನ್ನು ಬೇಂದ್ರೆಯವರು ಒಪ್ಪಿಕೊಂಡಿರುವುದಕ್ಕೆ ಹಲವಾರು ಕಾರಣಗಳಿವೆ ಎಂಬುದನ್ನು ಇಲ್ಲಿ ಬೆಳಕಿಗೆ ಹಿಡಿಯಲಾಗಿದೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಅವರು ಪ್ರಭುವಿನಲ್ಲಿ ಕಂಡ ಅಸಾಮಾನ್ಯ ಹಾಗೂ ಪರಿಪೂರ್ಣ ವ್ಯಕ್ತಿತ್ವ. ಭಕ್ತ ಬ್ರಹ್ಮನ ಉಪಾಸಕರಾಗಿದ್ದ ಬೇಂದ್ರೆಯವರಿಗೆ ಮಾತೆಂಬುದು ಜ್ಯೋತಿರ್ಲಿಂಗ ಎಂಬ ವಚನ ಬೀಜ ಮಂತ್ರವಾದುದರಲ್ಲಿ ಆಶ್ಚರ್ಯವಿಲ್ಲ. ಅಲ್ಲಮನ ವಚನದಲ್ಲಿನ ‘ನಾನು’, ‘ನೀನು’, ‘ಸ್ವಯಂ’, ‘ಪರಂ’ ಚತುರ್ಮುಖದರ್ಶನ ಬೇಂದ್ರೆಯವರ ಅನೇಕ ಕವನಗಳಲ್ಲಿ ಅಭಿವ್ಯಕ್ತಿ ಪಡೆದು ‘ನಾಕು ತಂತಿ’ಯಲ್ಲಿ ನಿರ್ಣಾಯಕ ಸ್ವರೂಪವನ್ನು ಹೊಂದಿದೆ.
‘ನಾನು’ ‘ನೀನು’
‘ಆನು’ ‘ತಾನು’
ನಾಕೆ ನಾಕು ತಂತಿ
‘ಆತ್ಮಾಚತುಷ್ಟಾತ್ ಎಂಬ ಮಾತು ಉಪನಿಷತ್ತುಗಳಲ್ಲಿದೆ. ಆದರೆ ಬೇಂದ್ರೆಯವರ ಸಾಲುಗಳ ನಿಜವಾದ ಮೂಲ ಅಲ್ಲಮನ ವಚನದಲ್ಲಿದೆ ಎಂದೆನಿಸುತ್ತದೆ.ಇಲ್ಲಿ ‘ನಾನು’ ‘ನೀನು’ ಹಾಗೆಯೇ ಉಳಿದು ‘ಸ್ವಯಂ’ ಎನ್ನುವುದು ‘ಆನು’ ಆಗಿ ‘ಪರಂ’ ಎನ್ನುವುದು ‘ತಾನು’ ಆಗಿ ಪರಿವರ್ತಿತವಾಗಿದೆ ಎಂಬ ಆಮೂರ ಅವರ ಊಹೆ
ಸ್ವೀಕಾರಾರ್ಹವಾಗಿದೆ.
ಕನ್ನಡದ ಶಕ್ತಿಯಲ್ಲಿ ಬೇಂದ್ರೆಯವರಿಗೆ ಅಪಾರ ಶ್ರದ್ದೆಯಿತ್ತು. “ಮನದಲ್ಲಿ ದಾಹವನ್ನು ಶಮನಗೊಳಿಸುವ ರಸಝರಿಯು ಕನ್ನಡದ ಕೆಚ್ಚಿನಲ್ಲಿದೆ. ಚಿತ್ತದ ಎಲ್ಲ ಪೊರೆಗಳನ್ನೂ ಬಿಚ್ಚಿ ತೋರಿಸುವ ಕಸುವು ಕನ್ನಡ ನುಡಿಗಿದೆ” ಎಂದು ಅವರು ಹೇಳಿದ್ದಾರೆ. ಈ ಶ್ರದ್ಧೆಯನ್ನು ಅವರು ವಚನಕಾರರ ಮೂಲಕವಾಗಿ – ಅದರಲ್ಲಿಯೂ ಮುಖ್ಯವಾಗಿ ಅಲ್ಲಮಪ್ರಭುವಿನ ಮೂಲಕವಾಗಿ ಪಡೆದುಕೊಂಡರು ಎಂದು ನಿಃಸಂಶಯವಾಗಿ ಹೇಳಬಹುದು.
ಸಖೀಗೀತ ಆಧುನಿಕ ಕಾವ್ಯದ ಶ್ರೇಷ್ಠ ಸಾಧನೆಗಳಲ್ಲೊಂದಾಗಿದೆ ಎನ್ನುವುದನ್ನು ಸಾಮಾನ್ಯವಾಗಿ ಎಲ್ಲ ವಿಮರ್ಶಕರೂ ಒಪ್ಪಿಕೊಳ್ಳುತ್ತಾರೆ. ವರ್ಡ್ಸ್ ವರ್ತ್ The Prelude ಕಾವ್ಯದಂತೆ ಆತ್ಮ ನಿವೇದನದ ಉದ್ದೇಶಕ್ಕಾಗಿ ರೋಮ್ಯಾಂಟಿಕ್ ಪರಂಪರೆಗೆ ಸೇರುತ್ತದಾದರೂ, ನಿಷ್ಠುರ ಆತ್ಮಪರೀಕ್ಷೆಗೆ ಮತ್ತು ನಿಖರವಾದ ವಾಸ್ತವ ಪ್ರಜ್ಞೆಗಳ ಮೂಲಕ ಅಲ್ಲಿ ಅಭಿವ್ಯಕ್ತವಾಗುವ ಸಂವೇದನೆಯ ಸ್ವರೂಪ ಆಧುನಿಕವಾದದ್ದು. ಬೇಂದ್ರೆಯವರ ಸಮಕಾಲೀನರ ಅನೇಕ ಕತೆ-ಕಾದಂಬರಿಗಳ ವಿಷಯವಾದ ದಾಂಪತ್ಯದ ಸಮಸ್ಯೆಯ ಸ್ವರೂಪವೂ ಆಧುನಿಕವಾದದ್ದು ಎನ್ನುವುದನ್ನೂ ಇಲ್ಲಿ ನೆನೆಯಬಹುದು. ರಮ್ಯವಾದ ಮತ್ತು ಆಧುನಿಕತೆಗಳ ಅಂಶಗಳನ್ನು ಒಟ್ಟಿಗೆ ಒಳಗೊಂಡಿರುವುದು ಸಖೀಗೀತದ ಒಂದು ವೈಶಿಷ್ಟ್ಯವಾಗಿದೆ.
ಸಖೀಗೀತದ ಇನ್ನೊಂದು ಎದ್ದುಕಾಣುವ ವೈಶಿಷ್ಟ್ಯವೆಂದರೆ ಅದು ಸಾಧಿಸುವ ದೇಸಿ ಮತ್ತು ಮಾರ್ಗಗಳ ಬೆಸುಗೆ.ಭಾಷೆ, ಛಂದಸ್ಸುಗಳಲ್ಲಿ ದೇಸಿಯ ಸತ್ವವನ್ನು ಒಳಗೊಂಡ ಈ ಕವಿತೆಯ ಉದ್ದೇಶ ಮಾತ್ರ ನಿಜವಾದ ಅರ್ಥದಲ್ಲಿ ಬೌದ್ಧಿಕವಾದದ್ದು. ಅನುಭವವನ್ನು ಅದು ಶೋಧಿಸುವ ರೀತಿ ದೇಸಿ ಸಂಪ್ರದಾಯದ ಅಳವಿಗೆ ಸಿಗುವಂಥದಲ್ಲ. ಬೇಂದ್ರೆಯವರಂತೆ ಅಕ್ಷರಸ್ಥ ಮತ್ತು ಮೌಖಿಕ ಪರಂಪರೆಯನ್ನು ಇಡಿಯಾಗಿ ಗ್ರಹಿಸಬೇಕೆನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದ ಕನ್ನಡ ಕವಿಗೆ ಇದು ಅನಿವಾರ್ಯ.
ಬೇಂದ್ರೆಯವರು ಕೈಯಾಡಿಸಿದ ಸಾಹಿತ್ಯ ಪ್ರಕಾರಗಳಲ್ಲಿ ಕತೆ, ಹರಟೆಗಳೂ ಸೇರಿವೆ. ಈ ಪ್ರಕಾರಗಳಲ್ಲಿ ಅವರ ಕೃಷಿ ಅತ್ಯಂತ ಸೀಮಿತವಾದುದಾದರೂ ಅದು ಅವರ ಒಟ್ಟು ಸಾಧನೆಯ ಮಹತ್ತ್ವದ ಅಂಗವಾದುದರಿಂದ ಅದನ್ನು ಕಡೆಗಣಿಸುವಂತಿಲ್ಲ ಎನ್ನುತ್ತಲೇ ಈ ಪ್ರಕಾರಗಳಲ್ಲಿ ಬೇಂದ್ರೆ ಅವರು ಮಾಡಿದ ಪ್ರಯೋಗಗಳ ವಿವರಣೆ ಇಲ್ಲಿ ನೆಲೆ ಪಡೆದಿದೆ. ಕಾವ್ಯ ಎಂಬ ಪದವನ್ನು ವ್ಯಾಖ್ಯಾನಿಸುವಾಗ ಅದಕ್ಕೊಂದು ಅಧಿದೈವಿಕವಾದ ನೆಲೆಯನ್ನು ಕಲ್ಪಿಸಿದಂತೆ ‘ಕಥೆ’ಯೆಂಬ ಪದಕ್ಕೂ ಅಂಥ ನೆಲೆಯನ್ನು ಬೇಂದ್ರೆಯವರು ‘ಕಥೆಗಳ ಕಥೆ’ ಎಂಬ ‘ಒಂದು ಒಡಗತೆ’ಯಲ್ಲಿ ಒದಗಿಸಿದ್ದಾರೆ; ಈ ‘ಒಡಗತೆ’ಯನ್ನು ಅವರು ೧೯೪೮ರಲ್ಲಿ ಪ್ರಕಟವಾದ ಹೂದೋಟ ಕುಸುಮ-೧ ಎಂಬ ಸಂಗ್ರಹಕ್ಕಾಗಿ ಬರೆದರು. ಅದು ನಿರಾಭರಣ ಸುಂದರಿಯ ೧೯೮೦ರ ಆವೃತ್ತಿಯಲ್ಲಿ ಮತ್ತೆ ಪ್ರಕಟವಾಗಿದೆ. ಹೂದೋಟದಲ್ಲಿ ‘ಕಥೆಗಳ ಕಥೆ’ಯನ್ನು ಆಕೃತಿಬದ್ದವಾಗಿ ತೋರಿಸಲಾಗಿದೆ. ಬೇಂದ್ರೆ ಅವರು ಬರೆದದ್ದು ಕೇವಲ ಏಳು ಕಥೆಗಳು.ಬೇಂದ್ರೆ ಅವರು ಹರಟೆ ಸಾಹಿತ್ಯ ಪ್ರಕಾರದಲ್ಲೂ ಕೃಷಿ ಮಾಡಿದ್ದರು. ಈ ಎಲ್ಲ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿ ಬೇಂದ್ರೆ ಅವರ ಪ್ರತಿಭೆ ಎಲ್ಲೆಲ್ಲಿ ಮಿಂಚಿದೆ ಎಂಬುದನ್ನು ಈ ಕೃತಿ ಯಲ್ಲಿ ಗುರುತಿಸಲಾಗಿದೆ
ಅನುವಾದದಲ್ಲಿಯೂ ಬೇಂದ್ರೆ ಅವರ ಸಾಧನೆ ದೊಡ್ಡದು.”ಕನ್ನಡ ಮೇಘದೂತವೊಂದನ್ನೇ ಕೊಟ್ಟಿದ್ದರೂ ಬೇಂದ್ರೆಯವರ ಹೆಸರು ಅನುವಾದ ಕ್ಷೇತ್ರದಲ್ಲಿ ಸ್ಥಿರವಾಗುತ್ತಿತ್ತು. ಆದರೆ, ಅವರು ತಮ್ಮ ವಿಪುಲ ಪದ್ಯಗದ್ಯ ಸೃಷ್ಟಿಯಲ್ಲಿ ನಿರತರಾದಾಗಲೂ ಕೂಡ ಸಂಸ್ಕೃತ, ಮರಾಠಿ, ಇಂಗ್ಲಿಷ್, ಹಿಂದಿ, ಬಂಗಾಲಿ ಮತ್ತಿನ್ನಿತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದು ಉಪಕಾರ ಮಾಡಿದ್ದಾರೆ. ಈ ಅನುವಾದಗಳಲ್ಲಿ ಬಹಳಷ್ಟು ಅವರು ಸ್ಟೇಚ್ಛೆಯಿಂದಲೇ ಮಾಡಿದವುಗಳು. ಕೆಲವೊಂದು ಸಾಹಿತ್ಯ ಅಕಾಡಮಿಯಂಥ ಸಂಸ್ಥೆಗಳಿಗಾಗಿ ಸಿದ್ಧಪಡಿಸಿದವುಗಳು. ಈ ಅನುವಾದಗಳ ಪಟ್ಟಿ ಸಾಕಷ್ಟು ದೊಡ್ಡದಾಗಿಯೇ ಇದೆ.
ಸಂಸ್ಕೃತದಲ್ಲಿ
- ಕನ್ನಡ ಮೇಘದೂತ
೨. ಆನಂದ ಲಹರಿಯಿಂದ
೩. ಅಮೃತಾನುಭವದಿಂದ
೪. ಹಲವಾರು ಸ್ತೋತ್ರಗಳು
ಮರಾಠಿಯಿಂದ
೧. ಚಾಂಗದೇವ ಪಾಸಷ್ಟಿ
೨. ಅನಿಲರ ಭಗ್ನಮೂರ್ತಿ
೩. ಮಹಾರಾಷ್ಟ್ರ ಸಾಹಿತ್ಯದಲ್ಲಿ ಜ್ಞಾನೇಶ್ವರ, ಮೋರೋಪಂತ, ಕೇಶವಸುತ, ಗೋವಿಂದಾಗ್ರಜ, ಅನಿಲ, ಮರ್ಢಕರರ ಕೃತಿಭಾಗಗಳನ್ನು ಅನುವಾದ ಮಾಡಿದ್ದಾರೆ. ಕನ್ನಡ ಮೇಘ ದೂತ ಬೇಂದ್ರೆ ಅವರ ಶ್ರೇಷ್ಠ ಅನುವಾದ ಕೃತಿ.ಬೇಂದ್ರೆ ಅವರು ಆಯ್ದುಕೊಳ್ಳುವ ಛಂದಸ್ಸಿನಲ್ಲಿ ಅವರದೇ ಆದ ನಾದಮಯತೆ ಸೇರಿ ಅವರ ಕೃತಿ ಕನ್ನಡದೆ ಆಗಿಬಿಟ್ಟಿದೆ. ಅನುವಾದ ಕ್ಷೇತ್ರಕ್ಕೆ ಬೇಂದ್ರೆಯವರು ಕೊಟ್ಟ ಕೊಡುಗೆಯ ಅವಲೋಕನ ವಿಶ್ಲೇಷಣೆ ಈ ಕೃತಿಯಲ್ಲಿ ಸೊಗಸಾಗಿ ಅನಾವರಣಗೊಂಡಿದೆ.
ವಿಮರ್ಶೆಯ ಹೆಸರಿನಲ್ಲಿ ಬೇಂದ್ರೆ ಅವರ ಕಾವ್ಯವನ್ನು ತಪ್ಪಾಗಿ ಅರ್ಥೈಸಿರುವುದನ್ನು ಗುರುತಿಸಿರುವ ಆಮೂರರು ಅದನ್ನು ಎಲ್ಲರಿಗೂ ಒಪ್ಪಿಗೆ ಆಗುವಂತೆ ಮರು ವ್ಯಾಖ್ಯಾನ ಮಾಡಿರುವುದು ವಿಶೇಷ. ಒಂದು ಉದಾಹರಣೆ ಇಂತಿದೆ.
ಬೇಂದ್ರೆಯವರ ಕಾವ್ಯವನ್ನು ಕುರಿತಂತೆ ರಂ.ಶ್ರೀ. ಮುಗಳಿಯವರು “ಬೇಂದ್ರೆಯವರ ಕವಿತೆಗಳು ಬುದ್ಧಿಗೀತಗಳೇ ಹೊರತು ಹೃದಯಗೀತಗಳಲ್ಲ” ಎಂಬ ನಿರ್ಣಯಕ್ಕೆ ಬಂದರು. ಈ ನಿರ್ಣಯವನ್ನು ಪ್ರಸ್ತಾಪಿಸುತ್ತ ಅದನ್ನು ಅನುಮೋದಿಸುವ ಧಾಟಿಯಲ್ಲಿಯೇ ಕುರ್ತಕೋಟಿಯವರು “ಮುಗಳಿಯವರ ಅಭಿಪ್ರಾಯ ಬೇಂದ್ರೆಯವರ ಕಾವ್ಯದ ಸಮಗ್ರತೆಯನ್ನು ಅಪ್ರತ್ಯಕ್ಷವಾಗಿ ಸೂಚಿಸುತ್ತದೆಂದು ತೋರುತ್ತದೆ” ಎಂದು ಬರೆದರು. (ಬೇಂದ್ರೆ ಕಾವ್ಯ ವಿಮರ್ಶೆ ೨೦೧೨: ೧೩೩). ಆಶ್ಚರ್ಯದ ಸಂಗತಿ ಎಂದರೆ ಬೇಂದ್ರೆಯವರ ಸಮಗ್ರ ಮರಾಠಿ ಕವನಗಳ ಭಾವಾನುವಾದವನ್ನು ವಾಮನ ಬೇಂದ್ರೆಯವರು ಹೃದಯಗೀತ ಎಂದು ಕರೆದಿರುವುದು. ಇದು ಮುಗಳಿಯವರ ನಿಲುವಿಗೆ ವಿರುದ್ಧವಾದುದು. (ಸಂ.ವಾ.ದ, ೨೦೦೭). ಈ ಅಭಿಪ್ರಾಯವನ್ನು ಪರಿಶೀಲಿಸುವ ಮೊದಲು ಬೇಂದ್ರೆಯವರು ಬುದ್ಧಿ ಹಾಗೂ ಭಾವನೆ ಈ ಪರಿಕಲ್ಪನೆಗಳನ್ನು ಗ್ರಹಿಸಿದ ರೀತಿಯನ್ನು ಗಮನಿಸುವುದು ಲಾಭದಾಯಕವಾಗಬಹುದು. ದಾ.ಗೋ. ದೇಶಪಾಂಡೆಯವರು ಸಂಪಾದಿಸಿದ ಮರಾಠೀ ಗ್ರಂಥ ಸಂವಾದ (೧೯೬೪)ದಲ್ಲಿ ‘ಭಾವನಾ ಮತ್ತು ಬುದ್ಧಿ’ (ಭಾವನಾ ಆಣಿ ಬುದ್ಧಿ) ಎಂಬ ಬೇಂದ್ರೆಯವರ ಲೇಖನವೊಂದಿದೆ.
‘ಬುದ್ಧಿಗೀತ’ ಮತ್ತು ‘ಹೃದಯಗೀತ’ ಎಂಬ ಪದಗಳನ್ನು ಮುಗಳಿಯವರು ಯಾವ ಅರ್ಥದಲ್ಲಿ ಪ್ರಯೋಗಿಸಿದರೋ ತಿಳಿಯದು ಆದರೆ ಬೇಂದ್ರೆಯವರು ಹೃದಯ, ವಿವೇಕಗಳ ಯೋಗವನ್ನೇ ಪ್ರತಿಪಾದಿಸಿದರು ಹಾಗೂ ‘೮೮೧+೪೪೧ ಇದು ನನ್ನ ಮಹಾಕಾವ್ಯ’ ಎಂದು ಹೇಳಿ ಸಂಖ್ಯೆಗಳ ಮೂಲಕವಾಗಿಯೂ ಅದನ್ನು ಸ್ಥಾಪಿಸಿದರು. “ಬುದ್ಧಿ-ಭಾವಗಳ ಸಮರಸಯುಕ್ತಿ ಸಂಧಾನ ಶುದ್ಧ ಪ್ರೇಮದಿಂದಲೇ ಸಾಧ್ಯ” ಎಂದು ಅವರು ದೃಢವಾಗಿ ನಂಬಿದ್ದರು (ಬೇಂದ್ರೆ, ೧೯೭೨: ೧೧೭). ಬುದ್ಧಿ-ಭಾವಗಳೆರಡೂ ಅಂತಃಕರಣಗಳೇ ಆದುದರಿಂದ ಇದು ಅಸಾಧ್ಯವೂ ಆಗಿರಲಿಲ್ಲ. ಅವರ ಕಾವ್ಯವನ್ನೂ ಈ ಪರಿಪ್ರೇಕ್ಷ್ಯದಲ್ಲಿಯೇ ನೋಡಬೇಕು.
ಹಾಗೆ ನೋಡಿದರೆ ಬುದ್ದಿ ಹಾಗೂ ಭಾವಗಳೆರಡೂ ಅಂತಃಕರಣದ ರೂಪಗಳೇ ಆದುದರಿಂದ ಅವುಗಳಲ್ಲಿ ಆತ್ಯಂತಿಕವಾದ ವಿರೋಧವನ್ನು ಕಲ್ಪಿಸುವುದೂ ಸರಿಯಾದ ವಿಧಾನವಾಗಲಾರದು. ಅಂತಃಕರಣವನ್ನೇ ಮನಸ್ಸು, ಬುದ್ಧಿ, ಅಹಂಕಾರಗಳಾಗಿ ಅವುಗಳ ವೃತ್ತಿಗಳನ್ನವಲಂಬಿಸಿ ಬೇರೆ ಬೇರೆಯಾಗಿ ಹೇಳಲಾಗುತ್ತದೆ ಎಂದು ವಿವೇಕ ಚೂಡಾಮಣಿಯಲ್ಲಿ ವಿವರಣೆಯಿದೆ. (ಸುಬ್ಬರಾಮಯ್ಯನವರು ೧೯೯೮: ೨೨).ವಸ್ತುಗಳ ನಿಜವಾದ ಸ್ವರೂಪವನ್ನು ನಿರ್ಧರಿಸುವುದು ಬುದ್ಧಿ. (ಪದಾರ್ಥಾಧ್ಯವಸಾಯ ಧರ್ಮತಃ). ಭಾವವೂ ಮಾನಸಿಕ ವ್ಯಾಪಾರವೇ. ಅದಕ್ಕೆ ಅನೇಕ ಅರ್ಥಗಳಿದ್ದರೂ ಕಾವ್ಯಮೀಮಾಂಸೆಯ ಸಂದರ್ಭದಲ್ಲಿ ಅದನ್ನು “ಚಿತ್ತವೃತ್ತಿ’ಯೆಂದು ಪರಿಗಣಿಸಬೇಕು ಎನ್ನುವ ಮೀಮಾಂಸಕರ ಸೂಚನೆ ಸೂಕ್ತವಾದದ್ದು. ಸ್ಥಾಯಿ ಮೊದಲಾದ ಭಾವಗಳನ್ನು ವಿವರಿಸುವಾಗ ಭರತನೂ ಇದೇ ಅರ್ಥವನ್ನೇ ಸೂಚಿಸಿದ್ದಾನೆ. ಆದರೆ ‘ಭಾವ’ದ ಮೂಲ ‘ಭವ’ ಅಥವಾ ಇರುವಿಕೆಗೆ ಸಂಬಂಧಿಸಿದುದರಿಂದ ಅದಕ್ಕೂ ಬುದ್ದಿಗೂ ಸಾಹಚರ್ಯವಿದೆಯೇ ಹೊರತು ವಿರೋಧವಲ್ಲ. ಇದನ್ನೇ ಬೇಂದ್ರೆಯವರು ಯೋಗ ಎಂದು ಕರೆದಿದ್ದಾರೆ.(ಪುಟ 680-81)
ಅಮೂರ ವಿರಚಿತ ಭುವನದ ಭಾಗ್ಯ ಅತಿ ಮಹತ್ವದ ವಿಮರ್ಶೆಯ ಕೃತಿ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಹ ದೊರಕಿದೆ. ಈ ಕೃತಿ ಗೆ ಬಂದ ಪ್ರಮುಖ ವಿಮರ್ಶೆಯ ಲೇಖನಗಳನ್ನು ಇಲ್ಲಿ ಸಂಪಾದಿಸಿ ಕೊಟ್ಟಿರುವುದು ಅವಲೋಕನೀಯವಾಗಿದೆ.ನಾಡಿನ ಪ್ರತಿಭಾಸಂಪನ್ನ ಕವಿ ಗೋಪಾಲಕೃಷ್ಣ ಅಡಿಗರು ಈ ಕೃತಿಯ ಗುಣಾತಿಶ ಯವನ್ನು ಹೀಗೆ ಗುರುತಿಸಿದ್ದಾರೆ ಬೇಂದ್ರೆಯವರ ಸಾಹಿತ್ಯದ ಮೇಲೆ ಅಲ್ಲಿ ಇಲ್ಲಿ ಕೆಲವು ಲೇಖನಗಳು, ಅವರ ಕಾವ್ಯದ ಮೇಲೆ ಒಂದೆರಡು ಗ್ರಂಥಗಳು ಬಂದಿದ್ದರೂ ಸಮಗ್ರವಾಗಿ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ, ಅವರ ಸಾಹಿತ್ಯ ಮೇಲೆ ಬಂದಿರುವ ಎಲ್ಲ ವಿಮರ್ಶೆಗಳನ್ನೂ ಗಮನಿಸಿ, ತಮ್ಮ ಕೃತಿಗಳ ಮೇಲೆ ಬೇಂದ್ರೆಯವರೆ ಹೇಳಿರುವ ಮಾತುಗಳನ್ನೆಲ್ಲ ಸಂಗ್ರಹಿಸಿ, ಸಮೀಕ್ಷೆ ನಡೆಸಿ, ಬೇಂದ್ರೆಯವರು ಯಾವ ಯಾವ ಕೃತಿಗಳಿಂದ, ಸಾಹಿತಿಗಳಿಂದ ಪ್ರಭಾವಿತರಾದರು, ಆ ಪ್ರಭಾವಗಳನ್ನೆಲ್ಲ ಮೀರಿ ನಿಂತು ಅವರ ಕೃತಿಗಳು ಹೇಗೆ ಸ್ವತಂತ್ರ ಕೃತಿಗಳಾಗಿ ಕನ್ನಡ ಕಾವ್ಯ ಸಂಪ್ರದಾಯದಲ್ಲೇ ಅನನ್ಯವಾಗಿವೆ ಎಂಬುದನ್ನು ಇಲ್ಲಿ ಸವಿಸ್ತಾರವಾಗಿ ಚಿತ್ರಿಸಿ ಶ್ರೀ ಆಮೂರರು ಬೇಂದ್ರೆಯವರ ಸಾಹಿತ್ಯದ ಆಳವಾದ ಅಭ್ಯಾಸಕ್ಕೆ ತುಂಬ ಸಹಕಾರಿಯಾಗುವಂತೆ ರಚಿಸಿದ ಕೃತಿ ಇಲ್ಲಿದೆ. ಕನ್ನಡ ರಸಿಕರೆಲ್ಲರೂ ಗಮನಿಸಲೇಬೆಕಾದ ಗ್ರಂಥ ಇದು ಎಂದೂ ಧಾರಾಳವಾಗಿ ಹೇಳಬಹುದು.
ಈ ಕೃತಿಯ ಅನನ್ಯತೆ, ಬೇಂದ್ರೆ ಅವರ ವಿಶಿಷ್ಟ ಸಾಧನೆಯನ್ನು ವಿಮರ್ಶಕ ಆಮೂರ ಅವರು ಗುರುತಿಸಿರುವುದನ್ನು ಡಾ. ಹೆಗಡೆ ಅವರು ಹೀಗೆ ತೆರೆ ದಿಟ್ಟಿದ್ದಾರೆ.
“ವಚನ ಸಾಹಿತ್ಯ ಆಧುನಿಕ ಕನ್ನಡ ಕವಿಗಳ ಮೇಲೆ ಪ್ರಭಾವಿಸಿದ ರೀತಿ ಕುತೂಹಲಕರವಾದದ್ದು. ಕುವೆಂಪು ಬಸವಣ್ಣನವರಲ್ಲಿ ವಿಭೂತಿ ತತ್ವದರ್ಶನವನ್ನು ಕಂಡರೆ ಬೇಂದ್ರೆ ಅಲ್ಲಮಪ್ರಭುವಿನ ವೈಚಾರಿಕತೆಯನ್ನು ಮೆಚ್ಚಿಕೊಂಡದ್ದಲ್ಲದೆ ಕನ್ನಡ ಸಾಹಿತ್ಯದ ನಾಲ್ಕು ನಾಯಕರತ್ನಗಳಲ್ಲಿ ಅಲ್ಲಮನಿಗೆ ಗೌರವದ ಸ್ಥಾನವನ್ನು ಕೊಟ್ಟರು. ‘ಬೇಂದ್ರೆಯವರ ದೃಷ್ಟಿಯಲ್ಲಿ ಅಲ್ಲಮಪ್ರಭು’ ಆಮೂರರ ವ್ಯಾಖ್ಯಾನ ಅರ್ಥಪೂರ್ಣವಾಗಿದೆ. ಆಮೂರರು ಇದೇ ಸಂದರ್ಭದಲ್ಲಿ ‘ಬೇಂದ್ರೆಯವರ ಕವಿತೆಗಳಲ್ಲಿ ಅನುಭಾವ’ ಪ್ರಬಂಧದಲ್ಲಿ ಪ್ರತ್ಯೇಕ ಜಿಜ್ಞಾಸೆಯನ್ನು ಪ್ರತಿಪಾದಿಸಿದ್ದಾರೆ.
ಬೇಂದ್ರೆಯವರು ಶ್ರೇಷ್ಠ ಕವಿಯಾಗಿದ್ದಂತೆ ಶ್ರೇಷ್ಠ ಚಿಂತಕರೂ ಆಗಿದ್ದರು ಎಂಬುದನ್ನು ಆಮೂರರು ‘ಒಳಗಿರುವ ಬೆಳಕು’ ಗ್ರಂಥದ ಮೂರನೆಯ ಭಾಗದಲ್ಲಿ ವಿವೇಚಿಸಿದ್ದಾರೆ. ಈ ಬಗೆಯ ಚಿಂತನಕ್ಕೆ ಅವರಿಗೆ ಆನಂದ ಝುಂಜರವಾಡರು ಸಂಗ್ರಹಿಸಿದ ಸೊಲ್ಲಾಪುರದ ಸುಮೇರಚಂದ ಜೈನರು ಬೇಂದ್ರೆ ಸಂವಾದ ನಡೆಸಿದ ಆಕರಗಳನ್ನು ಬಳಸಿಕೊಂಡಿರುವದನ್ನು ವಿದಿತಪಡಿಸಿದ್ದಾರೆ. ಕಾವ್ಯ ಹಾಗೂ ತತ್ವಜ್ಞಾನಗಳ ಸಂಬಂಧವನ್ನು ಕುರಿತು ಅರವಿಂದರು ಟಾಗೋರ್, ಟಿ.ಎಸ್. ಎಲಿಯಟ್‌ನ ವಿಚಾರಗಳನ್ನು ಹೊಸದಾಗಿ ಇಲ್ಲಿ ಪರಿಶೀಲಿಸಿದ್ದಾರೆ. “ಜ್ಞಾನದೇವನ ಜ್ಞಾನೇಶ್ವರಿ, ಅನುಭವಾಮೃತ ಹಾಗೂ ಅಭಂಗಗಳು ಬೇಂದ್ರೆಯವರ ಸಂವೇದನೆಯನ್ನು ಆಳದಲ್ಲಿ ತಟ್ಟಿರಲೇಬೇಕು. ತಮ್ಮ ಕಾವ್ಯ ಜೀವನದಲ್ಲಿ ಬೇಂದ್ರೆಯವರು ಟಾಗೋರ್, ಅರವಿಂದರೂ ಸೇರಿದಂತೆ ಅನೇಕರ ಪ್ರಭಾವಗಳಿಗೆ ಒಳಗಾದರು. ಆದರೆ ಈ ಪರಂಪರೆ ಮರಾಠಿ ಸಂತರಿಂದಲೇ ಪ್ರಾರಂಭವಾಯಿತು” ಎಂಬ ವಿಚಾರವನ್ನು ಆಮೂರರು ವ್ಯಕ್ತಪಡಿಸಿದ್ದಾರೆ.
ಬೇಂದ್ರೆಯವರ ಕಾವ್ಯ ತತ್ವ ವಿಚಾರಗಳನ್ನು ಅವರೇ ರಚಿಸಿದ ಕವಿತೆಗಳಿಗೆ ಅನ್ವಯಿಸಿ ನೋಡುವ ವಿಶಿಷ್ಟ ಬಗೆಯೊಂದು ಇಲ್ಲಿ ಪ್ರಕಟವಾಗಿದೆ. ಸತ್ಯ, ನಿಷ್ಠೆ, ಯೋಗ, ವಿವೇಕ, ಚೈತನ್ಯ, ಸಮತೆ, ಸ್ವಾತಂತ್ರ್ಯ, ಯಜ್ಞ, ದೇವದೇವತೆಗಳು, ಸದ್ಗುರು, ಗುರುಪರಂಪರೆ, ಚತುರಂಗ, ಸ್ವಸ್ವರೂಪ, ಸ್ವಧರ್ಮ, ವೈರಾಗ್ಯ, ಅನ್ನ, ಕಾವ್ಯಸೃಷ್ಟಿ, ಕಲ್ಪನೆ, ನೆನಪು, ಬುದ್ಧಿಭಾವ, ಸಾಮರಸ್ಯ, ಒಲವು, ಮಾತುಮೌನ, ಚರಿತ್ರಚಾರಿತ್ರ್ಯ ಹೀಗೆ ಇಪ್ಪತ್ತು ವಿವಿಧ ವಿಷಯಗಳ ಕುರಿತು ಬೇಂದ್ರೆ ತತ್ವಜಿಜ್ಞಾಸೆಯನ್ನು ಬೇಂದ್ರೆ ಕವಿತೆಗಳ ನಿದರ್ಶನಗಳೊಂದಿಗೆ ಹೊಸ ಬಗೆಯ ವ್ಯಾಖ್ಯಾನ ಇಲ್ಲಿದೆ ‘ಭುವನದ ಭಾಗ್ಯ’. ಬೇಂದ್ರೆ ಸಮಗ್ರ ಅಧ್ಯಯನ ಗ್ರಂಥವನ್ನು ಬರೆದ ನಂತರವೂ ಅವರ ಕಾವ್ಯವಿಮರ್ಶೆಯನ್ನು ಕುರಿತು ಇನ್ನೂ ಹೇಳುವದು ಇದ್ದೇ ಇದೆ ಎಂಬುದನ್ನು ಆಮೂರ ಅವರು ಬೇಂದ್ರೆ ಕಾವ್ಯ ಜಿಜ್ಞಾಸೆಯನ್ನು ಇಲ್ಲಿ ಮುಂದುವರಿಸಿರುವದನ್ನು ಕಂಡು ನಾವು ಬೆರಗಾಗುತ್ತೇವೆ. ಇದಕ್ಕೆ ನಾಕುತಂತಿಯ ವಿಮರ್ಶೆ ಸಾಕ್ಷಿಯಾಗಿದೆ.
ಬೇಂದ್ರೆ ಅವರ ಮನೆ ಮಾತು ಮರಾಠಿ. ಅವರಿಗೆ ಮರಾಠಿಯಲ್ಲಿ ಒಳ್ಳೆಯ ಹಿಡಿತವಿತ್ತು. ತಮ್ಮ ಕೆಲವು ಕವಿತೆಗಳನ್ನು ಅವರು ತಾವೇ ಮರಾಠಿಗೆ ಅನುವಾದಿಸಿದ್ದಾರೆ. ಆಮೂರ ಅವರು ಮರಾಠಿ ಭಾಷೆಯನ್ನು ಚೆನ್ನಾಗಿ ಬಲ್ಲವರು. ಬೇಂದ್ರೆ ಅವರ ಮರಾಠಿ ಸಾಹಿತ್ಯವನ್ನು ಸಹ ಅವರು ಇಲ್ಲಿ ವಿವೇಚನೆಗೆ
ಗುರಿಪಡಿಸಿದ್ದಾರೆ.
“ಬೇಂದ್ರೆಯವರ ಕಾವ್ಯದ ಭಾಷೆ ಕನ್ನಡ, ಸಂಸ್ಕಾರ ಭಾರತೀಯ, ಸಂಚಾರೀ ಪ್ರೇರಣೆ ಸಾರ್ವಭೌಮಿಕ” ಎಂದು ಬೇಂದ್ರೆಯವರೇ ತಮ್ಮ ಬಗ್ಗೆ ಬರೆದಿದ್ದಾರೆ. ಆದರೂ ಅವರ ಮಾತೃಭಾಷೆ ಮರಾಠಿಯಾಗಿದ್ದುದರಿಂದ ಅವರಿಗೆ ಆ ಭಾಷೆಯಲ್ಲಿ ಸಹಜ ಪರಿಣತಿ ಇದ್ದುದಲ್ಲದೆ ಅದನ್ನು ಅವರು ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಯೂ ಬಳಸಿಕೊಳ್ಳಬಲ್ಲವರಾಗಿದ್ದರು. ೧೯೬೫ ರಲ್ಲಿ ಪ್ರಕಟವಾದ ಅವರ ‘ಸಂವಾದ’ಕ್ಕೆ ಪ್ರತಿಷ್ಠಿತ ನ.ಚಿ. ಕೇಳಕರ ಪ್ರಶಸ್ತಿ ದೊರೆಯಿತೆನ್ನುವುದನ್ನು ಗಮನಿಸಿದಾಗ ಮರಾಠಿಯ ಮೇಲಿನ ಅವರ ಪ್ರಭುತ್ವದ ಕಲ್ಪನೆ ಬರುತ್ತದೆ. ಮರಾಠಿಯಲ್ಲಿಯೂ ಗದ್ಯ, ಪದ್ಯ ಸೇರಿದಂತೆ ಅವರ ಸಾಹಿತ್ಯಸೃಷ್ಟಿ ಗಣನೀಯ ಪ್ರಮಾಣದಲ್ಲಿದೆ.
ಬೇಂದ್ರೆಯವರ ಮರಾಠಿ ಕವಿತೆಗಳನ್ನು ವಾಮನ ಬೇಂದ್ರೆಯವರು ಉಮಾಳಾ ಎಂಬ ಶೀರ್ಷಿಕೆಯಲ್ಲಿ ಸಂಪಾದಿಸಿ ೧೯೯೧ ರಷ್ಟು ಪೂರ್ವದಲ್ಲಿಯೇ ಪ್ರಕಟಿಸಿದ್ದರು. ಅವರೇ ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹೃದಯಗೀತ ಎಂಬ ಹೆಸರಿನಲ್ಲಿ ೨೦೦೭ರಲ್ಲಿ ಹೊರತಂದರು. ‘ಶೃಂಗದ ಬೆನ್ನೇರಿ ಬಂತು’ (‘ಕಲ್ಪನಾ’), ‘ಉದಿತ ದಿನ’ (‘ಉಗವೇ ದಿನ’), ‘ಕೊನೆಯ ಹಾಡು’ (‘ಪ್ರಾರ್ಥನಾ’) ಮೊದಲಾದ ತಮ್ಮ ಕನ್ನಡ ಕವಿತೆಗಳನ್ನು ಸ್ವತಃ ಬೇಂದ್ರೆಯವರೇ ಮರಾಠಿಗೆ ಭಾಷಾಂತರಿಸಿ ಪ್ರಕಟಿಸಿದ್ದರು. ಆದರೆ, ಬಹುಮಟ್ಟಿಗೆ ಅವರ ಮರಾಠೀ ಕವಿತೆಗಳು ಸ್ವತಂತ್ರ ರಚನೆಗಳು. ಹೀಗಾಗಿ, ಅವು ಕೂಡ ಔದುಂಬರ ಗಾಥೆಯ ಅವಿಭಾಜ್ಯ ಅಂಗಗಳೆ, ಕನ್ನಡದಲ್ಲಾಗಲಿ, ಮರಾಠಿಯಲ್ಲಾಗಲಿ ಬೇಂದ್ರೆಯವರ ಕಾವ್ಯವ್ಯಕ್ತಿತ್ವದ ಸ್ವರೂಪ, ಕಾವ್ಯವಸ್ತುವಿನ ವೈವಿಧ್ಯ, ಅಭಿವ್ಯಕ್ತಿಯ ವಿಧಾನಗಳು ಒಂದೇ ತೆರನಾಗಿರುವುದು ಅವರ ಒಟ್ಟು ವ್ಯಕ್ತಿತ್ವದ ಅಖಂಡತೆಯನ್ನು ಎತ್ತಿ ತೋರಿಸುತ್ತದೆ ಎಂಬ ಆಮೂರ ಅವರ ಮಾತು ಬೇಂದ್ರೆಯವರ ಪ್ರತಿಭೆಗೆ ಕನ್ನಡ ಹಿಡಿಯುತ್ತದೆ.
ಬೇಂದ್ರೆ ಕಾವ್ಯದ ವಿಮರ್ಶಾ ಪರಂಪರೆಯನ್ನು ಸಹ ಆಮೂರ ಅವರು ಸುದೀರ್ಘವಾಗಿ ಇಲ್ಲಿ ವಿಶ್ಲೇಷಣೆಗೆ ಗುರಿಪಡಿಸಿದ್ದಾರೆ. ಕನ್ನಡ ವಿಮರ್ಶಕರು ಬೇಂದ್ರೆಯವರ ಸಾಹಿತ್ಯವನ್ನು ವಿಮರ್ಶೆ ಮಾಡುವಾಗ ಎಲ್ಲಿ ಹಾದಿ ತಪ್ಪಿದ್ದಾರೆ, ಅದರ ಸರಿಯಾದ ವಿವರಣೆ ಏನು ಎಂಬುದನ್ನು ಈ ಕೃತಿಯಲ್ಲಿ ಆಧಾರ ಸಹಿತವಾಗಿ ಅವರು ಚರ್ಚಿಸಿದ್ದಾರೆ.
“ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ತಮ್ಮನ್ನು ಗುರುತಿಸಿಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ‘ವರಕವಿ’ ಎಂದು ಕರೆಯುವುದು ಈಗ ವಾಡಿಕೆಯಾಗಿಬಿಟ್ಟಿದೆ. ಆದರೆ, ಶಂಕರ ಮೊಕಾಶಿ ಪುಣೇಕರರು ವಿವರಿಸಿದಂತೆ ಈ ರೂಢಿ ಮಾತಿನ ಹಿಂದೆ ಗಹನವಾದ ಅರ್ಥವಿದೆ. “ವರಕವಿಯಲ್ಲಿ ಭಾವ-ನಾದ-ಭಾಷೆಗಳು ಸಂಪೂರ್ಣ ಸಹಕಾರದಿಂದ ಅವತರಿಸಿ, ಅವಳಿ-ಜವಳಿ-ತ್ರಿವಳಿಯಾಗಿ ಜನ್ಮ ಪಡೆಯುತ್ತವೆ” ಎಂದು ಮೊಕಾಶಿ ಹೇಳುತ್ತಾರೆ (ಮೊಕಾಶಿ ಪುಣೇಕರ, ೧೯೮೯ : ೧೮) ಭಾವ, ನಾದ, ಭಾಷೆಗಳಿಗೆ ಅವರು ಅಲಂಕಾರಗಳನ್ನೂ ಸೇರಿಸಬಹುದಿತ್ತೆಂದು ತೋರುತ್ತದೆ. ರಸ ಸಂಹಿತ ಚೇತಸ್ಸಿನ ಪ್ರತಿಭಾವಂತ ಕವಿಯನ್ನು ಅಲಂಕಾರಗಳು ತಾವೇ ಮುಂದಾಗಿ ಆವರಿಸಿಕೊಳ್ಳುತ್ತವೆ ಎಂಬ ಆನಂದವರ್ಧನನ ಮಾತನ್ನು ಇಲ್ಲಿ ನೆನೆಯಬಹುದು (ಧ್ವನ್ಯಾಲೋಕ : II). ಬೇಂದ್ರೆಯವರ ಕಾವ್ಯ ಅತ್ಯಂತ ಶ್ರೀಮಂತವಾದ ಕಾವ್ಯ. ಮೊಕಾಶಿಯವರ ಭಾಷೆಯಲ್ಲಿ ‘ಭೂರಿಕಾವ್ಯ’ (The Poetry of Abundance). ವೈಪುಲ್ಯ ಮತ್ತು ವೈವಿಧ್ಯಗಳು ಅದರ ಎದ್ದು ಕಾಣುವ ವೈಶಿಷ್ಟ್ಯಗಳು. “ಕಾವ್ಯದಲ್ಲಿ ಏನನ್ನು ಅರಗಿಸಿಕೊಳ್ಳುವುದು ಅಸಾಧ್ಯ ಇತ್ತೊ ಅದನ್ನೆಲ್ಲ ಅಲಕ್ಷಿಸುವ ಕವಿ ಬೇಂದ್ರೆ ಅಲ್ಲ” ಎಂದು ಹೇಳಿ ಬೇಂದ್ರೆ ಕಾವ್ಯದ ವಸ್ತು ವೈವಿಧ್ಯವನ್ನು ದಿವಾಣಜಿ ಗುರುತಿಸಿದರೆ, ಅವರ ಶೈಲಿ ಹಾಗೂ ಛಂದಸ್ಸಿನ ವೈವಿಧ್ಯಗಳನ್ನು ಶಂಕರ ಮೊಕಾಶಿ ಪುಣೇಕರ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರು ಸಮರ್ಥವಾಗಿ ವಿವರಿಸಿದ್ದಾರೆ. ಸುದೈವದಿಂದ ಬೇಂದ್ರೆ ಕಾವ್ಯ ಪ್ರಾರಂಭದಿಂದಲೂ ಗಂಭೀರ ಚರ್ಚೆಯ ವಿಷಯವಾಗಿ ಚಿಂತನಶೀಲ ಓದುಗರ ಗಮನ ಸೆಳೆದಿದೆ. ಎಚ್. ಎಸ್. ರಾಘವೇಂದ್ರರಾವ್ ಅವರ ಮಾತುಗಳಲ್ಲಿ ಹೇಳುವುದಾದರೆ, “ಈ ಕವಿಯ ಹಿರಿಯ ಸಮಕಾಲೀನರಾದ ಮಾಸ್ತಿಯವರಿಂದ ಹಿಡಿದು ಮೂರು-ನಾಲ್ಕು ಪೀಳಿಗೆಯ ನಂತರದ ಹದಿಹರೆಯದವರ ವರೆಗೆ ವೈವಿಧ್ಯಪೂರ್ಣವಾದ ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಪಡೆಯುವ ಭಾಗ್ಯ ಬೇಂದ್ರೆಯವರದಾಗಿದೆ” (ರಾಘವೇಂದ್ರರಾವ್, ೧೯೯೫ : ೨೮೦)(ಅದೇ ಪುಟ 561) ಈ ಮೂಲಕ ಬೇಂದ್ರೆಯವರ ಕಾವ್ಯದ ವ್ಯಾಖ್ಯಾನ ಪುನರ್ ವ್ಯಾಖ್ಯಾನ ಇಲ್ಲಿ ನಡೆದಿದೆ ಎಂಬುದು ಗಮನಿಸಬೇಕಾದ ಅಂಶ.
ಬೇಂದ್ರೆ ಅವರ ನಾಲ್ಕು ತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕೃತಿ ಸಾಕಷ್ಟು ಸಂಕೀರ್ಣವಾಗಿದೆ. ಅಲ್ಲಿನ ಕವಿತೆಗಳು ಅರ್ಥವಾಗುವುದಿಲ್ಲ ಎಂಬೆಲ್ಲ ಆರೋಪ ಅಪವಾದಗಳು ಕೇಳಿ ಬಂದವು. ನಾಕುತಂತಿ ಕೃತಿಯ ಕುರಿತು ನಡೆದ ವಿಚಾರ ವಿಮರ್ಶೆ ಏನೇನು ಸಾಲದು ಎನ್ನುವ ನಿಲುವು ಅಮೂರ ಅವರದು.
“ನಾಕು ತಂತಿ ಬನ್ನಂಜೆಯವರು ಹೇಳುವ ಹಾಗೆ ‘ಅತ್ಯಂತ ವಿವಾದಗ್ರಸ್ತವಾದ ಒಂದು ಕವನ ಸಂಗ್ರಹ’ವಷ್ಟೇ ಅಲ್ಲದೆ ಬಹು ಜನರಿಗೆ ಅರ್ಥವಾಗದ ಕಾವ್ಯವೂ ಅಹುದು. ಬೇಂದ್ರೆ ಕಾವ್ಯದ ಕ್ಲಿಷ್ಟತೆ ಹಾಗೂ ದುರೂಹ್ಯತೆಗಳ ವಿವೇಚನೆಯೊಂದಿಗೆಯೇ ಬನ್ನಂಚೆ ತಮ್ಮ ಲೇಖನವನ್ನು ಪ್ರಾರಂಭಿಸುತ್ತಾರೆ. ಬೇಂದ್ರೆಯವರು ಕೈಕೊಂಡ ಚತುರ್ಮುಖ ದರ್ಶನದ ಅನ್ವೇಷಣೆಯ ಗಹನತೆಯೇ ಅವರ ಕಾವ್ಯಕ್ಕೆ ದುರೂಹ್ಯತೆ ತಂದುಕೊಟ್ಟಿತು ಎಂದು ಬನ್ನಂಜೆ ವಿವರಿಸುತ್ತಾರೆ. ಈ ಅನ್ವೇಷಣೆಯ ಫಲವಾಗಿ ಬೇಂದ್ರೆಯವರ “ಕವನಗಳು ಅತಿಸಾಂಕೇತಿಕತೆಯ ಮಜಲನ್ನು ಮುಟ್ಟಿದವು… ನಾವು ವಿಹರಿಸುವ ಪ್ರಪಂಚಕ್ಕಿಂತ ಬೇರೆಯಾದ ಅಂತರಂಗ ಪ್ರಪಂಚದಲ್ಲಿ ಅವರ ಕಾವ್ಯವಿಹಾರ ಮುಂದುವರಿಯಿತು”. ಇದೂ ಅಲ್ಲದೆ ಬೇಂದ್ರೆಯವರು ಸಾಧಿಸಿದ ಬಹುಶ್ರುತತೆಯ ಆಳವನ್ನು ತಿಳಿಯುವುದು ಸಾಮಾನ್ಯ ಓದುಗನ ಅಳವಿನ ಮಾತಲ್ಲ. ತಮ್ಮ ಮಾತಿನ ನಿದರ್ಶನವೆಂದು ನಾಕು ತಂತಿಯ ‘ಆಣು-ಮಹತ್ತು’ ಕವಿತೆಯ ಮೇಲೆ ಬರೆದ ತಮ್ಮ ಭಾಷ್ಯವನ್ನು ಬನ್ನಂಜೆ ಉದಾಹರಿಸುತ್ತಾರೆ. ಬೇಂದ್ರೆಯವರ ಕಾವ್ಯದಲ್ಲಿ ಇಳಿಯಬೇಕೆನ್ನುವವರಿಗೆ ವ್ಯಾಪಕವಾದ ಪೂರ್ವ ಸಿದ್ಧತೆ ಬೇಕು ಎನ್ನುವುದು ಆರಳು-ಮರಳು ಹಾಗೂ ನಂತರದ ಕಾವ್ಯದ ಸಂದರ್ಭದಲ್ಲಂತೂ ಸಂಪೂರ್ಣವಾಗಿ ನಿಜವಾಗಿದೆ. ಚತುರ್ಮುಖ ದರ್ಶನದ ಅನ್ವೇಷಣೆ ನಾಕು ತಂತಿಯ ಕವಿತೆಗಳಲ್ಲಿ ಹಲವಾರು ನೆಲೆಗಳಲ್ಲಿ ಭಾಷೆ, ಬದುಕು, ಮನಸ್ಸಿನ ಅವಸ್ಥೆಗಳು ಇತ್ಯಾದಿ ಹೇಗೆ ನಡೆದಿದೆಯೆನ್ನುವುದನ್ನು ಬನ್ನಂಜೆ ವಿಸ್ತಾರವಾಗಿ ಚರ್ಚಿಸುತ್ತಾರೆ. ಇಂಥ ಒಂದು ಪ್ರಯತ್ನವನ್ನು ಕೆ. ಎಸ್. ನಾರಾಯಣಾಚಾರ್ಯರೂ ತಮ್ಮ ಬೇಂದ್ರೆ ಕಾವ್ಯದಲ್ಲಿ ಆಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ ಎಂಬ ಗ್ರಂಥದಲ್ಲಿ ಮಾಡಿದ್ದುಂಟು. (ನಾರಾಯಣಾಚಾರ್ಯ, ೧೯೯೬) ಆದರೆ ಅವರು ಆಧ್ಯಾತ್ಮದ ನೆಲೆಯಿಂದ ಹೊರಟು ಕಾವ್ಯವನ್ನು ತಲುಪುತ್ತಾರೆ. ಬನ್ನಂಜೆಯವರಂತೆ ಕಾವ್ಯದ ನೆಲೆಯಿಂದ ಆಧ್ಯಾತ್ಮವನ್ನು ಹೊರಡಿಸುವದಿಲ್ಲ. ಇದೂ ಅಲ್ಲದೆ, ಅವರಿಗೆ ಬೇಂದ್ರೆ ಕಾವ್ಯದ ವ್ಯಾಖ್ಯಾನಕ್ಕಿಂತ ಅದರ ಬಗ್ಗೆ ಎದ್ದ ವಾದಗಳೇ ಮುಖ್ಯ. ಇದೇನೇ ಇದ್ದರೂ, ನಾಕು ತಂತಿಯಂಥ ಕಾವ್ಯವನ್ನು ಆಸ್ವಾದಿಸಲು, ಅದರ ದುರೂಹ್ಯತೆಯನ್ನು ದೂರ ಮಾಡಲು ಇನ್ನೂ ವಿಸ್ತ್ರತವಾದ ಪ್ರಯತ್ನ ನಡೆಯಬೇಕಾಗಿದೆ. ಟಿ.ಎಸ್. ಎಲಿಯಟ್‌ನ The West Land ನ ಬಗೆಗೂ ಕ್ಲಿಷ್ಟತೆಯ ಆಪಾದನೆಗಳಿದ್ದವು. ಆದರೆ ವಿದ್ವಾಂಸರ ಪ್ರಯತ್ನಗಳ ಫಲವಾಗಿ ಈ ಕ್ಲಿಷ್ಟತೆ ದೂರವಾಗಿದೆ. ಜೇಮ್ಸ್ ಜಾಯ್ಸನ Ulysses ದಲ್ಲಿ ಬರುವ allusions ಬಗ್ಗೆಯೇ ಒಂದು ಉದ್ದಂಥವಿದೆ. ಬೇಂದ್ರೆ ಕಾವ್ಯದ ಸಂದರ್ಭದಲ್ಲಿಯೂ ಇಂಥ ಸಹಾಯದ ಅವಶ್ಯಕತೆಯಿದೆ(ಪುಟ 548) ಎಂಬುದನ್ನು ಒತ್ತಿ ಹೇಳಿದ್ದಾರೆ. ಆತ ನಮಗೆ ಹೇಗೆ ಓದಬೇಕು ಎನ್ನುವುದನ್ನು ಕಲಿಸಿಕೊಟ್ಟ ಎಂಬುದಾಗಿ ಎಫ್ ಆರ್ ಲಿವಿಸ್ ತೀರಿಕೊಂಡಾಗ ಕರ್ಮೋಡ್ ಅವನ ಕುರಿತು ಹೇಳಿದ ಪ್ರಶಂಸೆಯ ಮಾತು. ಪಾಶ್ಚಾತ್ಯ ವಿಮರ್ಶೆಯಿಂದ ನಾವು ಯಾವುದಾದರೂ ಲಾಭಪಡೆದಿದ್ದರೆ ಅದು ವ್ಯಾಖ್ಯಾನ (Interpretation) ಸಂದರ್ಭದಲ್ಲಿ. ವ್ಯಾಖ್ಯಾನದ ವ್ಯಾಖ್ಯೆ, ವಿಧಾನಗಳು ಹಾಗೂ ಮಿತಿಗಳ ಬಗ್ಗೆ ಗೊಂದಲ ಹುಟ್ಟಿಸುವಷ್ಟು ಚರ್ಚೆ ವಿಶೇಷವಾಗಿ ಪಾಶ್ಚಾತ್ಯರಲ್ಲಿ ನಡೆದಿದೆ. ನನ್ನ ಮಟ್ಟಿಗೆ ಕೃತಿನಿಷ್ಠತೆ ಅಥವಾ ಫ್ರೆಡರಿಕ್ ಜೇಮ್ರನ್‌ನ ಪರಿಭಾಷೆಯಲ್ಲಿ ‘ಆಕೃತಿ’ ನಿಷ್ಠತೆ ವ್ಯಾಖ್ಯಾನದ ಅನಿವಾರ್ಯತೆ. ಈ ಗುಣವನ್ನು ಕಾಯ್ದುಕೊಂಡು ವ್ಯಾಖ್ಯಾನ ಕೃತಿಯ ಆಕೃತಿಯನ್ನು ಯಾವ ಮಾರ್ಗದಿಂದಾದರೂ ಪ್ರವೇಶಿಸಬಹುದು.
ಕೃತಿ ಎಂದರೇನು ಎನ್ನುವುದು ಕೂಡ ಸುಲಭದ ಪ್ರಶ್ನೆಯಲ್ಲ. ನಾನು ಇನ್ನೊಂದು ಸಂದರ್ಭದಲ್ಲಿ ಬರೆದ ಹಾಗೆ, ಕೃತಿಯ ಅಸ್ತಿತ್ವವನ್ನೇ ಅಲ್ಲಗಳೆಯುವುದರಿಂದ ಅದನ್ನು ಓದುಗರ ಪ್ರತಿಕ್ರಿಯೆಗಳಲ್ಲಿಯೇ ಸ್ಥಾಪಿಸುವವರೆಗೆ ಅದರ ಸ್ವರೂಪದ ಬಗ್ಗೆ ಅಭಿಪ್ರಾಯ ಭಿನ್ನತೆಯಿದೆ. ವೈಯಕ್ತಿಕವಾಗಿ ನನಗೆ ಕೃತಿಯ ಅಸ್ತಿತ್ವವನ್ನು ಕೃತಿಕಾರನ ಆಶಯ, ಪಠ್ಯದ ಆಶಯ ಹಾಗೂ ಓದುಗನ ಆಶಯಗಳ ಅರ್ಥಚಕ್ರದಲ್ಲಿ ಗುರುತಿಸುವ ಉಂಬರ್ಟೋ ಎಕೋನ ಸಿದ್ಧಾಂತ ಸಮರ್ಪಕವೆನಿಸಿದೆ. ಕೃತಿಯ ವ್ಯಾಖ್ಯಾನ ಈ ಮೂರೂ ಅಂಶಗಳನ್ನು ಒಳಗೊಳ್ಳಬೇಕಾಗುತ್ತದೆ. ಇತ್ತೀಚೆಗೆ ನಮ್ಮಲ್ಲಿ ಕೃತಿನಿಷ್ಠ ವಿಮರ್ಶೆಯೆಂದರೆ ರೂಪನಿಷ್ಠ ಅಥವಾ ಪ್ರಾಯೋಗಿಕ ವಿಮರ್ಶೆಯೆಂಬ ಭ್ರಮೆ ಹುಟ್ಟಿಕೊಂಡು ಅದನ್ನು ಸಂಶಯದಿಂದ ನೋಡಲಾಗುತ್ತಿದೆ. ಆದರೆ ಇದು ತಪ್ಪು ಗ್ರಹಿಕೆ. ರೂಪನಿಷ್ಠ ವಿಮರ್ಶೆ ವ್ಯಾಖ್ಯಾನದ ಒಂದು ಸಂದರ್ಭವನ್ನು ಮಾತ್ರ ಗಮನಿಸುತ್ತದೆ. ಎಕೊ ಹೇಳುವಂತೆ ವ್ಯಾಖ್ಯಾನದ ಸಂದರ್ಭಗಳಿಗೆ ಮಿತಿಯಿಲ್ಲ. ಆದರೆ ಯಾವುದೇ ಒಂದು ಸಂದರ್ಭದಲ್ಲಿ ವ್ಯಾಖ್ಯಾನಕ್ಕೆ ಮಿತಿಗಳಿರುತ್ತವೆ. ಈ ಮಿತಿಗಳನ್ನು ವಿಮರ್ಶಕನ ಔಚಿತ್ಯ ಪ್ರಜ್ಞೆಯೇ ಗುರುತಿಸಬೇಕಾಗುತ್ತದೆ.
(ಅದೇ ಪುಟ 682)
ನಾಡಿನ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಎಚ್.ಎಸ್. ರಾಘವೇಂದ್ರ ರಾವ್ ಅವರು ಭುವನದ ಭಾಗ್ಯ ಕೃತಿಗೆ ಬರೆದ ಅಭಿಪ್ರಾಯ ಒಂದು ಬಗೆಯ ಮೌಲ್ಯಮಾಪನವೇ ಆಗಿದೆ. ಅದು ಇಂತಿದೆ,
“ಪ್ರಿಯರಾದ ಡಾ. ಜಿ.ಎಸ್. ಆಮೂರ ಅವರಿಗೆ,
ಕನ್ನಡ ವಿಮರ್ಶೆಯ ಒಟ್ಟು ಸಂದರ್ಭದಲ್ಲಿಯೇ ಅತ್ಯುತ್ತಮವಾದ ಕೃತಿಯೊಂದನ್ನು ರಚಿಸಿರುವುದಕ್ಕಾಗಿ ಹಾರ್ದಿಕ ಅಭಿನಂದನೆಗಳು. ಕನ್ನಡದ ಯಾವುದೇ ಕವಿಯನ್ನು ಕುರಿತು ಇಷ್ಟು ಸಮಗ್ರವಾದ, ಒಳನೋಟಗಳಿಂದ ಕೂಡಿದ ಇನ್ನೊಂದು ಗ್ರಂಥ ಬಂದಿಲ್ಲ. ಈ ಮಾತಿಗೆ ಹಳಗನ್ನಡ ಕವಿಗಳು ಅಪವಾದವಲ್ಲ. ಬೇಂದ್ರೆಯವರನ್ನು ಕುರಿತು ಬಂದಿರುವ ಕೃತಿಗಳಲ್ಲಿಯೂ ನಿಮ್ಮದೇ ಮೊದಲ ಸ್ಥಾನ ಪಡೆಯುತ್ತದೆ.
ಒಬ್ಬ ಕವಿಯ ಸಮಗ್ರ ಕಾವ್ಯವನ್ನು ಅದರ ವಿಕಸನ ಹಾಗೂ ಆಕೃತಿಗಳ ನೆಲೆಯಲ್ಲಿ ಹೇಗೆ ಅಧ್ಯಯನ ಮಾಡಬಹುದೆನ್ನುವುದಕ್ಕೆ ನಿಮ್ಮ ಗ್ರಂಥ ಒಂದು ಮಾದರಿಯಾಗಿದೆ. ಕವಿಯ ಜೀವನ ಹಾಗೂ ಪರಿಸರಗಳ ತಿಳುವಳಿಕೆಯಿದ್ದರೂ ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸದ ನಿಮ್ಮ ‘ಕೃತಿನಿಷ್ಠೆ’ ಗಮನೀಯವಾದುದು.
ಬೇಂದ್ರೆಯವರ ಬಗ್ಗೆ ಈಗಾಗಲೇ ಬಂದಿರುವ ವಿಮರ್ಶೆಯ ಹಲವು ಕೊರತೆಗಳನ್ನು ಪರಿಮಿತಿಗಳನ್ನು ಗುರುತಿಸಿ ಅವುಗಳ ಪುನರಾವಲೋಕನ ಮಾಡುವ ಬಹಳ ಮುಖ್ಯವಾದ ಕೆಲಸವನ್ನು ನಿಮ್ಮ ಕೃತಿಯು ಸಾಧಿಸಿದೆ. ಒಬ್ಬ ಮಹತ್ತ್ವದ ಕವಿಯನ್ನು ಲಘುವಾಗಿ ತೆಗೆದುಕೊಳ್ಳದೆ, ವ್ಯಾಮೋಹಕ್ಕೆ ಗುರಿಯಾಗದೆ, ವಸ್ತುನಿಷ್ಠವಾಗಿ ನೋಡುವ ಕೆಲಸವನ್ನು ನೀವು ಮಾಡಿದ್ದೀರಿ.
ಬೇಂದ್ರೆಯವರ ಕಾವ್ಯವನ್ನುಳಿದು, ಇತರ ಬರವಣಿಗೆಯನ್ನು ಅಧ್ಯಯನ ಮಾಡಿರುವುದರಿಂದ ಕೃತಿಗೆ ಸಮಗ್ರತೆ ಒದಗಿ ಬಂದಿರುವುದಲ್ಲದೆ ಕಾವ್ಯದ ಅಧ್ಯಯನಕ್ಕೂ ಸಹಾಯಕವಾಗುವ ಅನೇಕ ಅಂಶಗಳು ಬೆಳಕಿಗೆ ಬಂದಿವೆ.
ನನಗೆ ಬಹಳ ಹಿಡಿಸಿದ ಸಂಗತಿಯೆಂದರೆ, ನಿಮ್ಮಲ್ಲಿರುವ ಪ್ರತಿಭೆ-ಪಾಂಡಿತ್ಯ ಮತ್ತು ವಿನಯಗಳ ಸಂಯೋಜನೆಯ ಅತ್ಯುತ್ತಮ ಮಾದರಿ-ಯನ್ನು ನಿಮ್ಮಲ್ಲಿ ನೋಡಬಹುದು. ಓದು-ಪಾಂಡಿತ್ಯಗಳು ವಿಮರ್ಶಕನ ಅಹಂಕಾರವನ್ನು ಘೋಷಿಸುವ ಸಂಗತಿಗಳಾಗದೆ ಕೃತಿಯ ಮೇಲೆ ಬೆಳಕು ಚೆಲ್ಲುವ ಬಗೆಯನ್ನು ಇಲ್ಲಿ ಕಾಣಬಹುದು. ಹಾಗೆ ನೋಡಿದರೆ ನಮ್ಮ ಅತ್ಯಂತ ಆರೋಗ್ಯವಂತ ವಿಮರ್ಶಕರಲ್ಲಿ ನೀವೊಬ್ಬರು.
ಆಮೂರ ಅವರದು ಬಹುಭಾಷಿಕ ಸಂವೇದನೆ. ಅವರು ಉತ್ತಮ ಅನುವಾದಕರು ಹೌದು. ಬೇಂದ್ರೆ ಅವರ ಮಹತ್ವದ ಐವತ್ತು ಕವಿತೆಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿರುವುದು ಅವಲೋಕನೀಯವಾಗಿದೆ. ಈ ಅನುವಾದದ ಕುರಿತು ಸ್ವತಹ ಆಮೂರ ಅವರು ಹೇಳಿರುವ ಮಾತುಗಳು ಇಂತಿವೆ “ಬೇಂದ್ರೆಯವರನ್ನು ಅನುವಾದಿಸುವುದೆಂದರೆ ಎಂತಹ ನುರಿತ ಅನುವಾದಕನಿಗೂ ಸವಾಲೇ ಸೈ. ಅವರು ಆಧುನಿಕ ಕನ್ನಡದ ಅತ್ಯಂತ ಶ್ರೇಷ್ಠ ಹಾಗೂ ಬಹುಶ್ಯುತ ಕವಿಗಳಲ್ಲೊಬ್ಬರು. ಅವರ ಮಗನೂ ಸ್ವತಃ ಕವಿಯೂ ಆಗಿದ್ದ ವಾಮನ ಬೇಂದ್ರೆಯವರು ಸಂಪಾದಿಸಿದ “ಔದುಂಬರಗಾಥೆ”ಯಲ್ಲಿ ಬೇಂದ್ರೆಯವರ ಸಮಗ್ರಕಾವ್ಯ ಅಡಕವಾಗಿದ್ದು ಅದರಲ್ಲಿ ಹದಿನಾಲ್ಕು ನೂರಕ್ಕೂ ಹೆಚ್ಚು ಕವಿತೆಗಳಿವೆ. ಬೃಹತ್ ಗಾತ್ರದ ಆ ಕೃತಿಯಿಂದ ಕೇವಲ ಐವತ್ತು ಕವಿತೆಗಳನ್ನು ಆಯ್ದುಕೊಳ್ಳುವುದು ನನ್ನ ಪಾಲಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಯಾಕೆಂದರೆ ಎಲ್ಲವೂ ಸಮನಾಗಿ ಶ್ರೇಷ್ಠವೇ ಆಗಿದ್ದವು. ಅಲ್ಲದೆ ಅವರು ಅದೆಷ್ಟೊಂದು ವಿಭಿನ್ನ ಶೈಲಿಗಳಲ್ಲಿ, ವಿಭಿನ್ನ ಪ್ರಕಾರಗಳಲ್ಲಿ ಬರೆದಿದ್ದರು, ಮತ್ತು ವೇದದಿಂದ ಜಾನಪದದವರೆಗೆ ಅದೆಷ್ಟೊಂದು ಛಂದಸ್ಸುಗಳ ಪ್ರಯೋಗ ಮಾಡಿದ್ದರೆಂದರೆ ನಾನು ಸಮರ್ಥವಾಗಿ ಅನುವಾದಿಸಬಲ್ಲೆನೆಂದು ನನಗೇ ಆತ್ಮವಿಶ್ವಾಸ ಹುಟ್ಟಿಸುವ ಕವಿತೆಗಳಿಗಾಗಿ ನಾನು ತಡಕಾಡಬೇಕಾಯಿತು. ಸಂಗೀತವು ಬೇಂದ್ರೆ ಕಾವ್ಯದ ಒಂದು ಅವಿಭಾಜ್ಯ ಅಂಗವಾಗಿದ್ದು, ಅನುವಾದ ಮಾಡುವಾಗ ಅದೇ ಮೊದಲಿಗೆ ಎದುರಾಗುವ ಆತಂಕವಾಗಿದೆ, ಅದೂ ವಿಶೇಷವಾಗಿ ಭಾರತೀಯವಲ್ಲದ ಇಂಗ್ಲಿಶ್‌ನಂತಹ ಭಾಷೆಗೆ. ಬೇಂದ್ರೆ ಕಾವ್ಯದ ಮಾತೃಭಾಷಿಕ ಓದುಗರಿಗೆ ಈ ಕೃತಿಯಲ್ಲಿ ಅವರಿಗೆ ಪ್ರಿಯವಾದ ಹಲವಾರು ಕವನಗಳು ಕಾಣಸಿಗಲಿಕ್ಕಿಲ್ಲ, ಆದರೆ ಇದಕ್ಕೇನೂ ಬೇರೆ ದಾರಿಯಿರಲಿಲ್ಲ. ಬೇಂದ್ರೆಯವರ ಎಲ್ಲಾ ಕವನ ಸಂಕಲನಗಳಿಂದಲೂ ನಾನು ಆಯ್ದುಕೊಂಡಿದ್ದೇನೆ. ಆದರೂ ನನ್ನ ಆಯ್ಕೆಯು ಪ್ರಾತಿನಿಧಿಕವಾಗಿರುವುದಕ್ಕಿಂತ ಹೆಚ್ಚಾಗಿ ಅವಕಾಶವಾದಿಯೆನಿಸಬಹುದೆಂದು ನಾನು ಒಪ್ಪುತ್ತೇನೆ. ಆದರೆ ನನಗನಿಸುವ ಮಟ್ಟಿಗೆ ಈ ಆಯ್ದ ಕವನಗಳು ಬೇಂದ್ರೆಯವರ ಪ್ರಮುಖ ಕಾಳಜಿಗಳನ್ನು ಪ್ರತಿಪಾದಿಸುತ್ತವೆ-ಸೃಜನಶೀಲ ಪ್ರಕ್ರಿಯೆಯ ಚಿತ್ರಣ, ಮಾತು ಮತ್ತು ಮೌನದ ಸಂಬಂಧ, ಭ್ರಮೆ ಮತ್ತು ವಾಸ್ತವದ ಇಬ್ಬಂದಿತನ. ಬೇಂದ್ರೆಯವರು ಪ್ರೀತಿ ಮತ್ತು ಸೌಂದರ್ಯಗಳನ್ನು ಕುರಿತು. ಜೀವನ-ಅನುಭವ-ಮತ್ತು ಅಸ್ತಿತ್ವವಾದೀ ನೋವಿನ ಅರಿವು ಕುರಿತು ಹೊಂದಿದ್ದ ಅನನ್ಯ ದೃಷ್ಟಿಕೋನಗಳ ಒಳನೋಟಗಳನ್ನೂ ಈ ಕವನಗಳು ಪ್ರತಿನಿಧಿಸುತ್ತವೆ”
(ಪುಟ 778) ಇಲ್ಲಿಯ ಅನುವಾದ ಸರಳವಾಗಿ ಸುಂದರವಾಗಿ ಮೂಡಿಬಂದಿದೆ. ಈ ಮೂಲಕ ಬೇಂದ್ರೆ ಕಾವ್ಯದ ಹಿರಿಮೆ ಇತರ ಭಾಷಿಕರಿಗೆ ತಿಳಿಯುವಂತಾಗಿದೆ.
ಬೇಂದ್ರೆಯವರ ಅಥವಾ ಅವರಂಥ ದಾರ್ಶನಿಕ ಕವಿಗಳ ಕಾವ್ಯದ ಪರಿಪೂರ್ಣ ಅನುಭವ ಕವಿಯ ದರ್ಶನ ಹಾಗೂ ಕರ್ಮಕೌಶಲಗಳನ್ನು ಒಳಗೊಳ್ಳಬೇಕಾಗುತ್ತದೆ ಎಂಬುದನ್ನು
ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಬೇಂದ್ರೆಯವರ ಕಾವ್ಯಾನುಸಂಧಾನ, ಅವರ ತಾತ್ವಿಕ ಚಿಂತನೆ -ಇಂಥ ಕೆಲವು ವಿಶಿಷ್ಟ ಆಯಾಮಗಳನ್ನು ಮುನ್ನೆಲೆಗೆ ತಂದು ನಡೆಸಿದ ವಿವರವಾದ ವಿಶ್ಲೇಷಣೆ ಇಲ್ಲಿದೆ. ಬೇಂದ್ರೆ ಕಾವ್ಯ ಎಲ್ಲ ತಲೆಮಾರುಗಳ ಓದುಗರ, ವಿಮರ್ಶಕರ ಹಾಗೂ ಚಿಂತಕರ ಅಭ್ಯಾಸದ ವಿಷಯವಾಗಿ ಉಳಿದಿರುವುದು ಈ ಕೃತಿಯ ಓದಿನಿಂದ ಮನದಟ್ಟಾಗುತ್ತದೆ.
ಈ ಕೃತಿಯನ್ನು ವಿಶೇಷವಾದ ಕಾಳಜಿಯಿಂದ ಸಂಪಾದಿಸಿ ಕೊಟ್ಟವರು ನಾಡಿನ ಹಿರಿಯ ವಿಮರ್ಶಕ, ಆಮೂರರ ನಿಕಟವರ್ತಿ ಡಾ. ಜಿ. ಎಂ. ಹೆಗಡೆ. “ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಡಾ. ಜಿ.ಎಸ್. ಆಮೂರ ಅವರು ಶತಮಾನದ ಶ್ರೇಷ್ಠ ವಿಮರ್ಶಕರಾಗಿ ಖ್ಯಾತರಾಗಿದ್ದರು.ಅವರು ಕನ್ನಡ ಹಾಗೂ ಇಂಗ್ಲಿಷಗಳೆರಡರಲ್ಲೂ ಸಮೃದ್ಧ ವಿಮರ್ಶಾ ಸಾಹಿತ್ಯ ರಚಿಸಿದ್ದ ವಿದ್ವತ್ತಿನ ಶಿಖರವಾಗಿದ್ದರು. ಪ್ರತಿಭೆ ಪಾಂಡಿತ್ಯ,
ಸದಭಿರುಚಿ, ಸಹೃದಯತೆಯಿಂದ ಕೂಡಿದ ಡಾ. ಆಮೂರರ ವಿಮರ್ಶೆ ಕನ್ನಡ ಸಾಹಿತ್ಯಲೋಕದಲ್ಲಿ ಅಪಾರ ಮನ್ನಣೆಯನ್ನು ಗಳಿಸಿದೆ. ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಲೇಖಕರು ಹಾಗೂ ಕೃತಿಗಳ ಬಗೆಗೆ ಡಾ. ಆಮೂರ ಅವರು ಬರೆದ ವಿಮರ್ಶೆ ಹೊಸ ಅರ್ಥಲೋಕವನ್ನೇ ತೆರೆದಿದೆ. ಆಧುನಿಕ ಕನ್ನಡ ಸಾಹಿತ್ಯದ ಕೇಂದ್ರ ಪ್ರಮೇಯಗಳನ್ನು, ಅದರ ಪರಂಪರೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹೊಸ ಚಿಂತನೆಗಳನ್ನು ಅವರು ನೀಡಿದ್ದಾರೆ.ಗಟ್ಟಿಯಾದ ತಾತ್ವಿಕ ಚಿಂತನೆಯನ್ನು ಹೊಂದಿರುವ ಆಮೂರರ ಚಿಂತನೆ ಕನ್ನಡ ವಿಮರ್ಶೆಯಲ್ಲಿ ಹೊಸ ಮಾರ್ಗವನ್ನೇ ತೆರೆದಿದೆ ಎಂಬುದಕ್ಕೆ ಸಾಕ್ಷಿ ಈ ಉದ್ಗ್ರಂಥ.ಇದೊಂದು ಅಪರೂಪದ ಶತಮಾನದ ಕೃತಿ.ಇದನ್ನು ಪ್ರಕಟಿಸಿದ ಸಾಹಿತ್ಯ ಪ್ರಕಾಶನಕ್ಕೆ ಕನ್ನಡಿಗರು ಕೃತಜ್ಞರು.







