ಬದುಕು – ಸಾವಿನ ಮಧ್ಯ ಹೀಗೊಂದು ಸ್ವಗತ!


ಹಾಸ್ಯ/ವಿಡಂಬನೆ

ಸೋಲು – ಗೆಲುವು, ಸುಖ – ದುಃಖ, ಆಶೆ – ನಿರಾಶೆ, ಶಾಂತಿ – ಅಶಾಂತಿ, ಸುಳ್ಳು – ಸತ್ಯ, ಅತ್ತೆ – ಸೊಸೆ, ರಾಜಕೀಯ – ಅರಾಜಕೀಯ ಇತ್ಯಾದಿ ಎಲ್ಲಾ ಒಂದೇ ನಾಣ್ಯದ ಎರಡು ಮುಖಗಳು…

ಬದುಕು (ಹುಟ್ಟು) ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ಓಕೆ. ಮತ್ತೆ ಯಾರ ಕೈಯಲ್ಲಿ?… ಈಗ ಎಲ್ಲರ ಹುಟ್ಟು ಹೆರಿಗೆ ಆಸ್ಪತ್ರೆಯಲ್ಲಿ. ಇನ್ನು ರಾಜಕೀಯ ನಾಯಕರ ಸಾವುಗಳು ಮಾತ್ರ ಬಹುತೇಕ ಸಂದರ್ಭಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ತಾನೇ !

ಈ ಸಾವಿಗೆ ಸಾವಾದರೂ ಬಂದು ಸಾಯುತ್ತಿಲ್ಲ ಎಂದು ಅಂದುಕೊಂಡಿತು ಬದುಕು.

ಛೇ… ಈ ಬದುಕಿಗೆ ಸೀದಾ ಸಾದಾ ಬದುಕಲೂ ಆಗುತ್ತಿಲ್ಲ ಎಂದು ಸಾವಿನ ಉವಾಚ.

ನಿಜ ಹೇಳಬೇಕೆಂದರೆ ಮನುಷ್ಯನ ಜೀವನ ಸಾವು ಬದುಕಿನ ಅಥವಾ ಬದುಕು ಸಾವಿನ ಮಧ್ಯದ ಹೋರಾಟವೇ? ಇಲ್ಲಾ ಎರಡೂ ಸೇರಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆಯೇ ಗೊತ್ತಿಲ್ಲ…

ಸಾವು ಬದುಕಿನೊಂದಿಗೆ ” ನಿನ್ನದೂ ಒಂದು ಬದುಕೇನು? ನೆಟ್ಟಗೆ ಬದುಕಲು ಆಗದಿದ್ದರೆ ಸುಮ್ಮನೆ ಸತ್ತರೆ ಏನು ನಷ್ಟ? ” ಎಂದಿತು.

ಬದುಕು ಸಾವಿನೊಂದಿಗೆ “ಛೀ… ಛೀ…ನಿನ್ನದೂ ಒಂದು ಸಾವೇನು? ಸರಿಯಾಗಿ ಸಾಯಲು ಆಗದಿದ್ದರೆ ಬದುಕಿಯಾದರೂ ಬದುಕಬಹುದಿತ್ತಲ್ಲವೇನು? ” ಎಂದಿತು ವ್ಯಂಗ್ಯದಿಂದ.

” ಬುದ್ಧಿ ಇದೆ ಅಂತ ಅದು ಮುಂಡಾ ಮೋಚುವವರೆಗೆ ತೋರಿಸಬೇಡ…ನಾನು ಹಸಿ ಗೋಡೆಯಲ್ಲಿ ಮೊಳೆ ಹೊಡೆದಂತೆ ನೇರವಾಗಿ ಮಾತನಾಡುವವನು. ಸತ್ತಂತೆ ಬದುಕುವುದಕ್ಕಿಂತ ನನ್ನ ಹಾಗೆ ಸಾಯೋದು ಉತ್ತಮ…” ಎಂದು ಬದುಕನ್ನು ಅಣಕಿಸಿತು ಸಾವು.

” ನನಗೇ ಹೇಳುವಷ್ಟು ಧೈರ್ಯ ಇದೆಯಾ ನಿನಗೆ? ನಿನ್ನನ್ನು ನಾನೇನು ಕರೆದಿರುವನೇನು? ನೀನು ಕರೆಯದೆ ಬರುವ ಮೋಸ್ಟ್ ಆನ್ ವಾಂಟೆಡ್ ಗೆಸ್ಟ್… ಅಲ್ಲದೇ ನೀನು ನನ್ನ ಪಾಲಿನ ದೊಡ್ಡ ಘೋಸ್ಟ್ ಕೂಡ ಹೌದು…ನಿನಗೆ ಯಾವಾಗ ಹೃದಯಾಘಾತ ವಕ್ಕರಿಸಿ ಗೊಟಕ್ ಅಂತಿಯಾ ಅಂತ ನಿನಗೇ ಗೊತ್ತಿಲ್ಲ. ಆದರೆ ನಾನು ಹಾಗಲ್ಲ. ಬದುಕಿರುವವರೆಗೆ ಉಸಿರಾಡುತ್ತಾ ಬದುಕಿರುತ್ತೇನೆ . ಇದು ನನ್ನಿಷ್ಟ! ನಿನ್ನದು ಏನೀಗ ? “ಎಂದಿತು ಬದುಕು.

” ಸ್ವಲ್ಪ ಹೊತ್ತು ಬಾಯಿ ಮುಚ್ಚಿಕೊಂಡು ಬಿದ್ದಿರು…ಯಾರೋ ಬರ್ತಿದ್ದಾರೆ.” ಎಂದಿತು ಪಿಸುದ್ವನಿಯಲ್ಲಿ ಸಾವು.

ಹೈ ಟೆಕ್ ಆಸ್ಪತ್ರೆಯಲ್ಲಿನ ಐ ಸಿ ಯು ಸೌಲಭ್ಯದ ಏ ಸಿ ಸ್ಪೆಷಲ್ ರೂಮಿನ ಮಂಚದ ಮೇಲೆ ಮುಲುಗುತ್ತಾ ಏದುಸಿರು ಬಿಡುತ್ತಾ ಮಲಗಿದ್ದ ಜೀವಂತ ಶವದಂತಹ ಪೇಷಂಟ್. ಬದುಕುತ್ತಾನೋ ಅಥವಾ ಸತ್ತು ಬಿಳಿ ಬಟ್ಟೆಯನ್ನು ದೇಹದ ಮೇಲೆ ಹೊದೆಸಿಕೊಳ್ಳುತ್ತಾನೋ ಗೊತ್ತಿಲ್ಲ! ಆಗ ತಾನೇ ಒಳಗೆ ಬಂದ ಡಾಕ್ಟರ್ ಸಾಮಾನ್ಯನಲ್ಲ. ಪೇಷಂಟನ್ನು ಬದುಕಿಸುವುದಕ್ಕೂ ಇಲ್ಲಾ ಸಾಯಿಸುವದಕ್ಕೂ ಕೂಡ ಹೈ ಫೀಸು ವಸೂಲು ಮಾಡುವ ಕಾಸ್ಟ್ಲಿ ಡಾಕ್ಟರ್ ಗುಂಡಣ್ಣ.

” ನೋಡು ನೋಡು…ಕೊರಳನ್ನು ಸುತ್ತುವರಿದ ಸ್ಟೆತೋಸ್ಕೋಪ್… ಹಾವನ್ನು ಕೊರಳಲ್ಲಿ ಧರಿಸಿದ ಥೇಟ್ ಪರಮೇಶ್ವರನಂತೆ! ಎಂದು ಆನಂದದಿಂದ ಉಲಿಯಿತು ಸಾವು.

” ಅಂದರೆ ಮಂಚದ ಮೇಲಿನ ಪೇಷಂಟನ್ನು ಡೈರೆಕ್ಟ್ ಆಗಿ ರುದ್ರಭೂಮಿಗೆ ಕಳಿಸುವ ಪವಿತ್ರ ಕಾರ್ಯಕ್ರಮಕ್ಕಾಗಿ ತುಂಬಾ ಕಾತುರದಿಂದ ಎದುರು ನೋಡುತ್ತಿರುವೆ ಅಂತ ಕಾಣುತ್ತೆ…” ಎಂದು ಕೋಪದಿಂದ ಬುಸುಗುಟ್ಟಿತು ಬದುಕು.

” ನಾನು ಇಲ್ಲೇ ನಿಂತಿರುವೆ. ಅವನ್ಯಾರು ಈ ಪೇಷಂಟನ್ನು ಸಾಯಿಸೋದಿಕ್ಕೆ…ಅವನನ್ನು ಸಾಯಿಸುವಂತಿದ್ದರೆ ನಾನೇ ಸಾಯಿಸಬೇಕು. ತಿಳಿಯಿತೇ ! ” ಎಂದಿತು ಸಾವು.

” ದರಿದ್ರ ಸಾವೇ ಬಾಯಿ ಮುಚ್ಚಿಕೊಂಡು ಬಿದ್ದಿರು… ಆ ಡಾಕ್ಟರ್ ಬದುಕಿಸಲು ಸ್ವಲ್ಪ ಪ್ರಯತ್ನ ಪಟ್ಟರೂ ನಾನು ಬದುಕುಳಿಯುತ್ತೇನೆ.
ತಿಳಿಯಿತಾ ? ” ಉತ್ತರಿಸಿತು ಬದುಕು.

” ಆ ಡಾಕ್ಟರ್ ಇವನನ್ನು ಸಾಯಿಸಲು ಏನೂ ಮಾಡದಿದ್ದರೂ ನಾನು ಬಿಡೋದಿಲ್ಲ. ಖಂಡಿತ ಸಾಯಿಸುತ್ತೇನೆ “. ಎಂದು ಗಟ್ಟಿ ಧ್ವನಿಯಲ್ಲಿ ಹೇಳಿತು ಸಾವು.

” ನೋಡು… ಮಂಚದ ಮೇಲಿನ ಪೇಷಂಟಿನಲ್ಲಿ ಒಳಗಿರುವ ಬದುಕು ಅಂದರೆ ಜೀವ ಆದ ನನ್ನನ್ನು ಹುಡುಕುತ್ತಿದ್ದಾನೆ ಡಾಕ್ಟರ್ ” ಎಂದಿತು ಬದುಕು.

” ಆತ ಹುಡುಕುತ್ತಿರೊಂದು ನಿನ್ನ ಸಲುವಾಗಿ ಅಲ್ಲ. ಪೇಷಂಟಿನ ದೇಹದೊಳಗಿನ ಯಾವ ಪಾರ್ಟ್ ತನಗೆ ಕೆಲಸಕ್ಕೆ ಬರುತ್ತದೆ ಎಂದು ತಪಾಸಣೆ ಮಾಡುತ್ತಿರುವನು ಅಷ್ಟೇ! ” ಎಂದು ಹೇಳಿತು ಸಾವು.

” ನೀನು ಯಾರನ್ನಾದರೂ ಸರಿ ಮೊದಲು ನಿನ್ನ ತೆಕ್ಕೆಗೆ ತಗೋಬೇಕು ಅಂತ ಕಾಯ್ತಾ ಇರ್ತಿಯಾ…ಆದರೆ ಅದಕ್ಕೆ ಡಾಕ್ಟರ್ ಅವಕಾಶ ಕೊಡುವುದಿಲ್ಲ. ಕಾರಣ ‘ ವೈದ್ಯೋ ನಾರಾಯಣ ಹರಿ ‘ ಎನ್ನುವ ಮಾತು ಕೇಳಿಲ್ಲವೇನು ? ” ಸಿಡುಕಿನ ಧ್ವನಿಯಲ್ಲಿ ನುಡಿಯಿತು ಬದುಕು.

” ಅವನು ‘ ವೈದ್ಯೋ ನಾರಯಣ ಹರಿ ‘ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಎಷ್ಟೋ ಪೇಷಂಟುಗಳನ್ನು ದಿನ ನಿತ್ಯ ‘ ಹರಿ ನಾಮ ‘ ಭಜನೆ ಮಾಡುವಂತೆ ಮಾಡಿದ್ದಾನೆ ಗೊತ್ತಾ…ಫೀಸು ಕೊಡದವನು ‘ ಹರಿಪಾದ ‘ ಸೇರಿದರೆ, ಫೀಸು ಕೊಟ್ಟಿಲ್ಲ ಅದಕ್ಕೇ ಅಲ್ಲಿಗೆ ಡೈರೆಕ್ಟ್ ಆಗಿ ಕಳಿಸಿದ್ದಾನೆ ಅಂತಾರೆ ಜನ… ಇನ್ನು ಫೀಸು ಕೊಟ್ಟವನು ‘ ಹರಿಪಾದ ‘ ಸೇರಿದರೆ ಪಾಪ…ಅವನ ಆಯುಷ್ಯ ಮುಗಿಯಿತು ಅಷ್ಟೇ ಎನ್ನುತ್ತಾರೆ ಅದೇ ಜನ…ತಾನು ಆಪರೇಷನ್ ಮಾಡಿ ಬದುಕುಳಿದವರ ಪೇಷಂಟುಗಳ ಸಂಖ್ಯೆ ಕಡಿಮೆ ಆದರೂ ‘ ಆಪರೇಷನ್ ಕಿಂಗ್ ‘ ಎನ್ನುವ ಹೆಸರನ್ನು ಗಳಿಸಿದ್ದಾನೆ ಡಾಕ್ಟರ್ ಗುಂಡಣ್ಣ. ತನಗೆ ಬೇಡವಾದವರ ಕಿಡ್ನಿ ತೆಗೆದು ಒಳ್ಳೆಯ ರೇಟಿಗೆ ಮಾರಿಕೊಳ್ಳುವ ಆಪಾದನೆ ಕೂಡ ಈ ಡಾಕ್ಟರ್ ಮೇಲಿದೆ. ಪ್ರಾಣವನ್ನು ಉಳಿಸುವ ಲೈಸೆನ್ಸನ್ನು ಪ್ರಾಣ ತೆಗೆಯುವ ಪರ್ಮಿಟ್ ಆಗಿ ಬಳಸುತ್ತಿದ್ದಾನೆ ಗೊತ್ತಾ…? ” ಎಂದಿತು ಉದ್ರೇಕಿತ ಧ್ವನಿಯಲ್ಲಿ ಸಾವು ನುಡಿಯಿತು.

” ಈ ದೇಶದ ಅತ್ಯಂತ ಪಾವಿತ್ರ್ಯತೆ ಹೊಂದಿದ ವೈದ್ಯ ವೃತ್ತಿಗೆ ಕಳಂಕ ತರಬೇಡ…” ಎಂದಿತು ಬದುಕು ಸಾವಿನೊಂದಿಗೆ.

” ಯಾವ ವೃತ್ತಿ ಮಾಡುವವನಾದರೂ ತಾನು ಮಾಡುತ್ತಿರುವ ವೃತ್ತಿಯನ್ನು ಅಪವಿತ್ರವಾದದ್ದು ಎಂದು ಯಾಕೆ ಅಂದುಕೊಳ್ಳುತ್ತಾನೆ ಹೇಳು?…ಸ್ಟಾರ್ ಹೋಟೆಲುಗಳಂತಹ ಆಸ್ಪತ್ರೆಗಳಲ್ಲಿ ಪ್ರಾಣದ ಜೊತೆಯ ವ್ಯಾಪಾರ ಸಣ್ಣದೇನಲ್ಲ! ಒಂದು ಬದುಕಿನ ಮೇಲೆ ಆಸ್ಪತ್ರೆಯ ಎಷ್ಟೊಂದು ಜೀವಿಗಳು ಬದುಕುತ್ತವೆ ಗೊತ್ತಾ…ಹೆಚ್ಚೂ ಕಡಿಮೆ ಸಾವಿನ ಮೇಲೆ ಕೂಡಾ ಆಸ್ಪತ್ರೆಯ ಅಷ್ಟೇ ಜೀವಿಗಳು ಬದುಕು ಸಾಗಿಸುತ್ತವೆ ಅಂತ ನಿನಗೆ ಗೊತ್ತಾ? ” ಎಂದಿತು ಸಾವು.

ಮಧ್ಯದಲ್ಲಿ ಅರೆಕ್ಷಣ ಮೌನ ಬದುಕು ಸಾವಿನ ಮಧ್ಯೆ…

” ಡಾಕ್ಟರ್… ಈ ಪೇಷಂಟ್ ಬದುಕುತ್ತಾನಾ ? ” ಎಂದು ಪ್ರಶ್ನಿಸಿತು ಬದುಕು ಡಾಕ್ಟರನ್ನು.

ಡಾಕ್ಟರ್ ಗುಂಡಣ್ಣ ಬದುಕಿನತ್ತ ಒಂದು ಕ್ಷಣ ದಿಟ್ಟಿಸಿ ನೋಡಿ ” ಪೇಷಂಟ್ ಬಂಧುಗಳು ಬಂದರೆ ಗೊತ್ತಾಗುತ್ತದೆ… ” ಎಂದು ತಣ್ಣಗೆ ಉತ್ತರಿಸಿದ.

” ಅದೇಕೆ ಹಾಗೆ ? ಎಂದು ಅಚ್ಚರಿಯಿಂದ ಪ್ರಶ್ನಿಸಿತು ಬದುಕು.

” ಅವರಿಂದ ಪೇಷಂಟ್ ಪರವಾಗಿ ಎಷ್ಟರಮಟ್ಟಿಗೆ ಬಿಲ್ ಭರಿಸಲು ಶಕ್ತಿ ಇದೆ ಎಂದು ನಮಗೆ ಗೊತ್ತಾಗಬೇಕಲ್ಲ ಅದಕ್ಕೇ…” ಎಂದ ಡಾಕ್ಟರ್ ಗುಂಡಣ್ಣ.

” ಅಂದರೆ…ಅವರಿಗೆ ದೊಡ್ಡ ಬಿಲ್ ಆದರೂ ಕಟ್ಟುವ ಸಾಮರ್ಥ್ಯ ಇದೆ ಎಂದರೆ ಸಾವು ಬರದಂತೆ ಕಾಪಾಡುವ ಶಕ್ತಿ ನಿನಗಿದೆಯಾ? ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿತು ಸಾವು.

” ಬದುಕಿದವನನ್ನು ಬದುಕು ಬದುಕಿಸುತ್ತದೆ. ಸಾಯುವನನ್ನು ಸಾವು ಸಾಯಿಸುತ್ತದೆ…ಇದು ಪ್ರಕೃತಿ ನಿಯಮ. ನಾವು ಡಾಕ್ಟರುಗಳು ಸಾಯುವನನ್ನು ಬದುಕುತ್ತಾನೆ ಎಂದು ನಂಬಿಸಿ ಸಾಯಿಸುತ್ತೇವೆ…
ಬದುಕುಳಿಯುವನನ್ನು ಸಾಯುತ್ತಾನೆ ಎಂದು ಬೆದರಿಸಿ ಯಾಮಾರಿಸುತ್ತೇವೆ. ಯಾವುದಕ್ಕಾದರೂ ಸರಿ…ಬಿಲ್ ಮಾತ್ರ ಪೂರ್ತಿ ‘ ಪೈಸಾ ವಸೂಲ್ ‘ ಆಗುವವರೆಗೆ ಬಿಡೋದಿಲ್ಲ ” ಎಂದ ಡಾಕ್ಟರ್ ಗುಂಡಣ್ಣ.

ನನಗಿಂತ ಕ್ರೂರ ಈ ಡಾಕ್ಟರ್ ಎನ್ನುವ ಮನುಷ್ಯ. ಇನ್ನು ಇಲ್ಲಿ ಒಂದು ಕ್ಷಣ ಇರೋಕೆ ನನಗೆ ಸಾಧ್ಯವಾಗುವುದಿಲ್ಲ…
ಬದುಕುಳಿದರೆ ಸಾಕು ಎಂದು ಅಲ್ಲಿಂದ ಓಡಿ ಹೋಯಿತು ಸಾವು…

ಸಾವು ಸಾಯಿಸದೇ ಓಡಿ ಹೋಯಿತು ಆದ್ದರಿಂದ ಬದುಕು ಇನ್ನು ಬದುಕಲೇಬೇಕು ಎಂದು ನಿರ್ಧರಿಸಿ ನೆಮ್ಮದಿಯಿಂದ ಬದುಕಲಾರಂಭಿಸಿತು!

ಅಲ್ಲಿಗೆ ಬದುಕು ಸಾವಿನ ಮಧ್ಯದ ಸ್ವಗತ ಇಲ್ಲಿಗೆ ಮುಕ್ತಾಯಗೊಂಡಿತು.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai