ನಿರಂಜನ ಅವರ ‘ಚಿರಸ್ಮರಣೆ’

(ನಿರಂಜನ ೧೯೨೪ರ ಜೂನ್ ೧೫ ರಂದು ಜನಿಸಿದರು. ನಿರಂಜನ ಅವರ ೧೦೧ನೇ ಹುಟ್ಟುಹಬ್ಬ ಮತ್ತು ‘ಚಿರಸ್ಮರಣೆ’ ಕಾದಂಬರಿಗೆ ೭೦ ವರ್ಷ ತುಂಬಿದ ಪ್ರಯುಕ್ತ ವಿಶೇಷ ಲೇಖನ)

ಕನ್ನಡ ಪ್ರಗತಿಶೀಲ ಸಾಹಿತ್ಯದ ಶಿಲ್ಪಿಗಳಲ್ಲಿ ಒಬ್ಬರಾದ ನಿರಂಜನರ ‘ಚಿರಸ್ಮರಣೆ’ (1955) ಕಯ್ಯೂರಿನ ರೈತ ಹೋರಾಟವನ್ನು ವಸ್ತುವಾಗಿಟ್ಟುಕೊಂಡು ರೂಪುಗೊಂಡ ಕಾದಂಬರಿಯಾಗಿದೆ. “ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಯ್ಯೂರಿಗೆ ದೊರೆಯಬೇಕಾದ ಸ್ಥಾನ ಹಿರಿದು. ಪ್ರಜಾಪ್ರಭುತ್ವ ಸ್ಥಾಪನೆಯ ಯತ್ನದಲ್ಲಿ ಕಯ್ಯೂರು ವಹಿಸಿದ ಅಸಮಾನ ಪಾತ್ರವೇ ಈ ಕಾದಂಬರಿಗೆ ಮಾತೃಕೆ. ಕಯ್ಯೂರು ಘಟನೆ ನಡೆದುದು 1941ರಲ್ಲಿ ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ. ಆ ಹಳ್ಳಿಗೆ ಮೂರು ಮೈಲುಗಳ ದೂರದಲ್ಲಿ ಇದ್ದ ನಾನು ಆ ಹೋರಾಟಕ್ಕೆ ಬಲು ಸಮೀಪದ ನಿರೀಕ್ಷಕನಾಗಿದ್ದೆ. ಮುಂದೆ ಮಂಗಳೂರಲ್ಲೂ ವಿಚಾರಣೆಯ ಕಾಲದಲ್ಲಿ ಆ ಯೋಧರಿಗೆ ಸಮೀಪವಾಗಿ ನಾನಿದ್ದೆ. ಆ ಸಾಮೀಪ್ಯದ ಸಹವಾಸದ ಫಲವೇ ಈ ಕೃತಿ. ಇದು ನೈಜ ಘಟನೆಯ ಛಾಯಾಗ್ರಹಣವಲ್ಲ. ನಿಜಾಂಶಗಳೇ ಈ ಕಾದಂಬರಿಗೆ ಅಡಿಪಾಯವಾದರೂ ಅದರ ಮೇಲೆ ನಿಂತಿರುವ ಕಟ್ಟಡವೆಲ್ಲ ನನ್ನ ಕಲ್ಪನೆಯ ಸೃಷ್ಟಿ” ಎಂದು ಮೊದಲ ಮುದ್ರಣದ ಹಿನ್ನುಡಿಯಲ್ಲಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. 1975ರಲ್ಲಿ ‘ಚಿರಸ್ಮರಣೆ’ಯು ಮಲಯಾಳಂ ಭಾಷೆಗೆ ಅನುವಾದವಾದಾಗ ಅದಕ್ಕೆ ಅಭೂತಪೂರ್ವ ಸ್ವಾಗತ ದೊರೆತು ಮಲಯಾಳಕ್ಕೆ ಭಾಷಾಂತರಗೊಂಡ ಮೊದಲ ಕನ್ನಡ ಕೃತಿ ಎನಿಸಿಕೊಂಡಿತು. ಆಮೇಲೆ ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿತು. ಭಾರತೀಯ ಸಾಹಿತ್ಯದ ಗಟ್ಟಿ ಕೃತಿಗಳಲ್ಲೊಂದಾಗಿರುವ ಈ ಕಾದಂಬರಿಯು ಚರಿತ್ರೆಯಲ್ಲ. ಕಯ್ಯೂರಿನ ಹೋರಾಟದ ಶಕ್ತಿ ಮತ್ತು ಮೂವತ್ತು-ನಲುವತ್ತರ ದಶಕದ ಕಾಲಾವಧಿಯಲ್ಲಿ ಅಲ್ಲಿಗೆ ಹರಿದು ಬಂದ ಹೊಸ ಚೈತನ್ಯವನ್ನು ಸೆರೆಹಿಡಿದ ಅಪೂರ್ವ ಕಲಾಕೃತಿ.

ಕಾದಂಬರಿಯ ಆರಂಭದಲ್ಲಿ ಸೂತ್ರಧಾರನಂತೆ ಕಾಣಿಸಿಕೊಳ್ಳುವ ನಿರೂಪಕನು ಓದುಗನೊಡನೆ ಆತ್ಮೀಯವಾಗಿ ಸಂವಾದಿಸುತ್ತಾ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುತ್ತಿರುವ ಕಯ್ಯೂರಿನ ಜನರೆಡೆಗೆ ಕೊಂಡೊಯ್ಯುತ್ತಾನೆ. ಸುಮಾರು ಎರಡು ಸಾವಿರ ಮಂದಿ ನೆರೆದ ಕಾರ್ಯಕ್ರಮದಲ್ಲಿ ಜಾತಿಮತಗಳ ಎಲ್ಲೆಯನ್ನು ಮೀರಿದ ಸಾಮೂಹಿಕ ಭೋಜನ ಮತ್ತು ಕಯ್ಯೂರು ರೈತ ಹೋರಾಟದಲ್ಲಿ ಭಾಗವಹಿಸಿ ಹುತಾತ್ಮರಾದ ಮಠತ್ತಿಲ್ ಅಪ್ಪು, ಕೋಯಿತಟ್ಟಿಲ್ ಚಿರುಕಂಡ, ಪೊಡವರ ಕುಂಞಂಬು ಮತ್ತು ಅಬೂಬಕರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಿದ ಬಗೆಯನ್ನು ಹೇಳುತ್ತಾ ಅವರ ಕುಟುಂಬದ ಸದಸ್ಯರನ್ನು ಪರಿಚಯಿಸಿ ‘ಕಯ್ಯೂರು ವೀರಗಾಥಾ’ ಎಂಬ ನೃತ್ಯ ನಾಟಕವನ್ನು ನೋಡಲು ಓದುಗರನ್ನು ಸಿದ್ಧಗೊಳಿಸಿದರೂ ಅದೊಂದು ಕಾದಂಬರಿಯಾಗಿ ಕಣ್ಣೆದುರು ತೆರೆದುಕೊಳ್ಳುವ ರೀತಿಯಲ್ಲಿ ಕೃತಿಯ ಸಂವಿಧಾನವಿದೆ.

ಕಯ್ಯೂರು ಶಾಲೆಯ ಮಾಸ್ತರರ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಕ್ರಾಂತಿಯ ಕಡೆಗೆ ಆಕರ್ಷಿತರಾದ ಅಪ್ಪು ಮತ್ತು ಚಿರುಕಂಡರದ್ದು ಮುಳ್ಳಿನ ಮೇಲಿನ ನಡಿಗೆ. ಜಮೀನ್ದಾರರ ಬಂಟರ ಕಣ್ಣು ತಪ್ಪಿಸಿ, ಮೈಯೆಲ್ಲ ಕಣ್ಣಾಗಿದ್ದುಕೊಂಡು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ರೈತರು ದನಿಯೆತ್ತುವಂತೆ ಮಾಡಲು ಬಯಸುವ ಮಾಸ್ತರರೂ ಸೇರಿದಂತೆ ಅವರೆಲ್ಲರೂ ಭಾರತದ ಕ್ರಾಂತಿಮಾರ್ಗದ ಕವಲುಗಳು. ಲೋಕ ಸೃಷ್ಟಿಯಾಗಿ, ಲೋಕದಲ್ಲಿ ಮನುಷ್ಯ ಹುಟ್ಟಿದ ಕತೆ, ಮಾನವರು ಆರಂಭದಲ್ಲಿ ಬದುಕಿದ ರೀತಿ, ಆಗಿನ ಸಮಾಜ, ಅಲ್ಲಿ ಉಂಟಾದ ಗುಂಪುಗಳು, ಗುಂಪುಗಳೊಳಗೆ ನಡೆದ ಕದನ, ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡದ್ದು, ಬಲವಂತರು ಮತ್ತು ಬಲಹೀನರು, ಹಸಿದವರು ಮತ್ತು ಕಸಿದವರು, ಮಣ್ಣಿಗಾಗಿ ಹೋರಾಟ, ಮಾನವ ಜ್ಞಾನ ಸಂಪಾದಿಸಿದ ಬಗೆ, ಯಂತ್ರಗಳ ಆವಿಷ್ಕಾರ, ಅದರ ಮೂಲಕ ಮುಂದುವರಿದ ಜನವರ್ಗಗಳು ವ್ಯಾಪಾರದ ಹೆಸರಿನಲ್ಲಿ ದೇಶದೇಶಗಳಿಗೆ ಹೋಗಿ ಅವುಗಳನ್ನು ವಶಪಡಿಸಿಕೊಂಡದ್ದು, ಭಾರತವು ಸ್ವಾತಂತ್ರ್ಯವನ್ನು ಕಳೆದುಕೊಂಡು ನಿರಂತರ ಸುಲಿಗೆಗೆ ಒಳಗಾದದ್ದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಜನತೆಯ ಸೋಲು, ಲೋಕದ ವಿವಿಧೆಡೆಗಳಲ್ಲಿ ಹುಟ್ಟಿಕೊಂಡಂತೆ ಭಾರತದಲ್ಲೂ ಕ್ರಾಂತಿಯ ಕಿಡಿ ಹೊತ್ತಿಕೊಂಡದ್ದು, ರಾಷ್ಟ್ರೀಯ ಸಂಘಟನೆಯ ಉದಯ, ಮಹಾ ಹೋರಾಟಗಳ ವಿವರಗಳನ್ನು ಹಿರಿಯ ಕ್ರಾಂತಿಕಾರಿ ಪಂಡಿತರ ಮೂಲಕ ತಿಳಿದ ಅಪ್ಪು ಮತ್ತು ಚಿರುಕಂಡರಿಗೆ ಆ ಕುರಿತು ಹೆಚ್ಚೇನೂ ಅರ್ಥವಾಗದಿದ್ದರೂ ಪರಕೀಯರ ಆಳ್ವಿಕೆಯಿಂದ ಸಂಕಷ್ಟದಲ್ಲಿರುವ ನಮ್ಮ ಬಿಡುಗಡೆಗಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಸ್ಪಷ್ಟವಾಗುತ್ತದೆ. ಗುಪ್ತವಾಗಿ ಕ್ರಾಂತಿಯನ್ನು ಹಬ್ಬಿಸಿ, ರೈತರ ಬೆಂಬಲವನ್ನು ಪಡೆದ ಮೇಲೆ ರೈತ ಸಂಘವನ್ನು ಸ್ಥಾಪಿಸಿ ಜನ ಜಾಗೃತಿಯನ್ನು ಉಂಟುಮಾಡಿದ ಬಳಿಕ ರಾಜಕೀಯ ಜ್ಞಾನವನ್ನು ಪಡೆಯಲು ದಿನಪತ್ರಿಕೆಯನ್ನು ತರಿಸಿ, ಅದನ್ನು ಜನರಿಗೆ ಓದಿ ಹೇಳಿ, ವಾಚನಾಲಯವನ್ನು ತೆರದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಬಲಿದಾನದ ಮೂಲಕ ಬಿಡುಗಡೆಯನ್ನು ತಂದುಕೊಡುವ ಉದ್ದೇಶವನ್ನು ವ್ಯಕ್ತಪಡಿಸುವ ಕಾದಂಬರಿಯಲ್ಲಿ ಪರಕೀಯ ಶಕ್ತಿಗೆದುರಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಿಕೊಳ್ಳಲು ಕ್ರಮಿಸಬೇಕಾದ ಹೆಜ್ಜೆಗುರುತುಗಳನ್ನು ಕಾಣಲು ಸಾಧ್ಯವಿದೆ.

ಅಪ್ಪು ಮತ್ತು ಚಿರುಕಂಡ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಲು ತಳ ಒಡೆದ ದೋಣಿಯಲ್ಲಿ ಸಾಗುವ ಸನ್ನಿವೇಶವು ಉತ್ತಮ ಪ್ರತೀಕವಾಗಿ ಗಮನವನ್ನು ಸೆಳೆಯುತ್ತದೆ. ಒಳನುಗ್ಗುತ್ತಿರುವ ನೀರನ್ನು ವೇಗವಾಗಿ ಎತ್ತಿ, ನದಿಗೆ ಸುರಿಯುತ್ತಾ ಇನ್ನೊಂದು ತೀರವನ್ನು ಸೇರುವುದು ಬದುಕಿನ ಅಂತಿಮ ಸತ್ಯವನ್ನು ಸೂಚಿಸುತ್ತದೆ. ಮುಂದೆ ಬರಲಿರುವ ದಾರುಣ ಸನ್ನಿವೇಶಗಳ ಸೂಚನೆಯನ್ನು ಕೊಡದೆ ಲವಲವಿಕೆಯಿಂದ ಸಾಗುವ ಕಾದಂಬರಿಯಲ್ಲಿ ತೆಂಗು ಕಂಗುಗಳು, ರಾಮುಣ್ಣಿಯ ಚಹಾದಂಗಡಿ, ಕೆಂಡದಲ್ಲಿ ಬೇಯಿಸಿದ ಬಾಳೆಹಣ್ಣು, ಹೊಲ ಗದ್ದೆಗಳು, ಮಲಯಾಳಿಗಳ ವಸ್ತ್ರ ವಿಧಾನವೂ ಸೇರಿದಂತೆ ಕಾಸರಗೋಡಿನ ತೆಂಕು ಭಾಗದ ಭೂಪ್ರದೇಶದ ಪ್ರಾಕೃತಿಕ ಚಿತ್ರಣ, ಔಚಿತ್ಯವರಿತು ಮೂಡಿ ಬಂದಿದೆ.

ಅಪ್ಪು ಮತ್ತು ಚಿರುಕಂಡ ಹದಿಹರೆಯದ ಉತ್ಸಾಹ ಮತ್ತು ಹುಮ್ಮಸ್ಸನ್ನು ಮೈಗೂಡಿಸಿಕೊಂಡವರಾದರೂ ಯಾವುದೋ ಆವೇಶಕ್ಕೆ ಸಿಲುಕಿ ಭಂಡತನದಿಂದ ಹೊರಟವರಲ್ಲ. ಮನೆಯ ಬಡತನ ಮತ್ತು ಅಸಹಾಯಕತೆಯಿಂದ ಕಂಗೆಟ್ಟ ಪರಿಸ್ಥಿತಿ ಇವರ ಬದುಕಿನ ಹಿನ್ನೆಲೆಯಾಗಿದೆ. ಚಿರುಕಂಡನ ತಂದೆ ಎರಡೆಕರೆ ಹೊಲಗಳ ಒಡೆಯನಾಗಿದ್ದರೂ ಜಮೀನ್ದಾರರ ಸಾಲಗಾರನಾಗಿದ್ದ. ಅವನ ಸಂಪಾದನೆಯಿಂದ ಬಡ್ಡಿಯನ್ನೇ ತೀರಿಸಲಾಗುತ್ತಿರಲಿಲ್ಲ. ಆದ್ದರಿಂದ ಭೂಮಿಯು ಜಮೀನ್ದಾರರ ಪಾಲಾಗುತ್ತದೆ. ಹಲವರ ಕತೆಯೂ ಇದೇ ಆಗಿದ್ದು ಲೇಖಕರು ಪ್ರಕೃತಿಯ ಚಿತ್ರದ ಮೂಲಕ ಆ ಪರಿಸ್ಥಿತಿಯನ್ನು ಕಟ್ಟಿ ಕೊಟ್ಟ ರೀತಿಯು ಹೀಗಿದೆ. “ಹಿತ್ತಿಲಲ್ಲಿದ್ದ ಬಾಳೆಯ ಗಿಡಗಳ ಒಣಗಿದ ಉದ್ದನೆಯ ಎಲೆಗಳು ಅಸಹಾಯಕತೆಯಿಂದ ಮಡಚಿ, ಸೋಗೆಯಾಗಿ ಗಾಳಿಗೆ ಅತ್ತಿಂದಿತ್ತ ಬೀಸುತ್ತಿದ್ದವು. ಹಸುರೆಲೆಗಳು ಹರಿದು ಚಿಂದಿಯಾದರೂ ಹೆದರದೆ ನಗುತ್ತಾ ಗಾಳಿಯೊಡನೆ ಕದನ ನಡೆಸುತ್ತಿದ್ದವು, ಅಂಗಳದಲ್ಲಿದ್ದ ಎರಡು ತೆಂಗಿನಮರಗಳಿಂದಲೂ ಗರಿಗಳು ಎತ್ತರದಲ್ಲಿ ಟಿಪಟಿಪ ಸದ್ದು ಮಾಡುತ್ತಿದ್ದವು. ಬೇರೆ ತಾಳ ತಿಳಿಯದಂತೆ ಏಕಪ್ರಕಾರವಾಗಿ. ಆಕಾಶದಲ್ಲಿ ಚಂದ್ರನಿನ್ನೂ ಬಂದಿಲ್ಲವೆಂದು ನಕ್ಷತ್ರಗಳು ಅರಾಜಕತೆಯ ರಾಜ್ಯಭಾರ ನಡೆಸಿದ್ದವು.” (ಪುಟ 58)

ಕಾದಂಬರಿಯ ಆರಂಭದಲ್ಲಿ ಕಣ್ಣಿಗೆ ಬೀಳದೆ, ಇತರರ ಮಾತುಗಳ ಮೂಲಕ ಓದುಗರೊಂದಿಗೆ ಬೆರೆಯುವ ನಂಬಿಯಾರರ ಪಾತ್ರ ಕಲ್ಪನೆಯು ಅಪೂರ್ವವಾಗಿದೆ. ತಾನು ಗೇಣಿಗೆ ಕೊಟ್ಟ ತೋಟದ ಉತ್ಪನ್ನಗಳನ್ನು ಕದ್ದನೆಂದು ರೈತನಿಗೆ ಜಮೀನ್ದಾರ ನಂಬಿಯಾರರು ಬಾರುಕೋಲಿನಿಂದ ಹೊಡೆಸುವ ಸನ್ನಿವೇಶವನ್ನು ಕಟ್ಟಿಕೊಡುವಲ್ಲಿ ಲೇಖಕರ ಕಥನ ಕೌಶಲವು ವ್ಯಕ್ತವಾಗುತ್ತದೆ. ರೈತನು ತೋಟವನ್ನು ಬಿಟ್ಟು ಯಾಕೆ ಹೋಗಬೇಕಾಗಿತ್ತು? ಹೆಂಡತಿಗೆ ಕಾಯಿಲೆ ಅಂತ ಹೋದನೇ? ತೋಟ ಸೂರೆ ಮಾಡಿದವರು ಯಾರು? ರಾತ್ರೋ ರಾತ್ರಿ ಅದನ್ನು ಯಾವೂರಿಗೆ ಸಾಗಿಸಿದರೋ? ರೈತನೇ ಕದ್ದು ಮಾರಿ ಬಂದನೇ? ಕಳವಿನ ಮಾಲು ಜಮೀನ್ದಾರರ ಮನೆಯಲ್ಲಿರಬಹುದೋ? ಎಂಬ ಚರ್ಚೆಯ ಮಾತುಗಳನ್ನು ಪೋಣಿಸುವ ಮೂಲಕ ಲೇಖಕರು ಪ್ರಗತಿಶೀಲ ಸಾಹಿತ್ಯದಲ್ಲಿ ಸಾಮಾನ್ಯವಾಗಿದ್ದ ಏಕಪಕ್ಷೀಯ ಧಾಟಿಯನ್ನು ಧಾಟಿಯನ್ನು ಬಿಟ್ಟುಕೊಟ್ಟ ಸಮಸ್ಯೆಯ ಹಲವು ಮಗ್ಗುಲುಗಳಿಗೆ ಕಣ್ಣು ಹಾಯಿಸಿದ್ದಾರೆ.
ಮಾಸ್ತರು, ಅಪ್ಪು, ಚಿರುಕಂಡ ಮತ್ತು ಊರಿನ ರೈತರು ಹಳ್ಳಿಯ ಆರೋಗ್ಯಕರ ಮೌಲ್ಯಗಳ ಪ್ರತೀಕಗಳು. ಆತ್ಮಗೌರವ, ಆತ್ಮವಿಶ್ವಾಸ, ದುಡಿಮೆ ಇವುಗಳು ಹಳ್ಳಿಯ ಬದುಕಿನ ಶಕ್ತಿಯ ಮೂಲಗಳು. ದಾಸ್ಯ ಪ್ರವೃತ್ತಿಯು ಅದರ ದೌರ್ಬಲ್ಯ. ಹಳ್ಳಿಯವರು ನಿರಕ್ಷರತೆ ಮತ್ತು ಮೌಢ್ಯಕ್ಕೆ ಒಳಗಾದವರಾದರೂ ಶ್ರಮಜೀವನ ಮತ್ತು ಪ್ರಾಮಾಣಿಕತೆಗಳ ಪ್ರತೀಕವಾಗಿದ್ದು ಬದುಕಿನ ಸೃಜನಶೀಲತೆಯ ಪರವಾಗಿದ್ದಾರೆ. ಅವರ ವಿರೋಧಿಗಳಾದ ನಂಬಿಯಾರ, ನಂಬೂದಿರಿ ಮತ್ತು ಅವರ ಸಂಗಡಿಗರು ಏನನ್ನೂ ಉತ್ಪಾದಿಸುವುದಿಲ್ಲ. ಬೆಳೆಯುವುದಿಲ್ಲ. ವೈರುಧ್ಯಗಳನ್ನು ಹೊಂದಿದ ಪಾತ್ರಗಳ ಮೂಲಕ ಗ್ರಾಮ್ಯಜೀವನ ತನ್ನ ಕೊಳೆಯನ್ನು ಬಚ್ಚಿಡದೆ ಉಳಿದುಕೊಳ್ಳುತ್ತದೆ.

ಗ್ರಾಮ ಜೀವನದ ಬಲ ಮತ್ತು ದೌರ್ಬಲ್ಯಗಳನ್ನು ಚಿತ್ರಿಸುವುದರೊಂದಿಗೆ ಆರ್ಥಿಕ ವ್ಯವಸ್ಥೆಯ ಕುರಿತು ಚಿಂತನೆಯನ್ನು ಮಾಡುವ ಕಾದಂಬರಿಯು ಸಮಸ್ಯೆಗಳಿಗೆ ಪರಿಹಾರಗಳನ್ನು ಸಾಮಾಜಿಕ ನೆಲೆಗಳಲ್ಲಿ ಕಂಡುಕೊಳ್ಳುತ್ತದೆ. ಊಳಿಗಮಾನ್ಯ ವ್ಯವಸ್ಥೆ ಮತ್ತು ಪರಕೀಯರ ಆಡಳಿತದಲ್ಲಿ ವ್ಯಕ್ತಿಯ ಅಸ್ತಿತ್ವಕ್ಕೆ ಬೆಲೆಯಿಲ್ಲ ಎನ್ನುವ ವಿಚಾರವನ್ನು ಹೊಮ್ಮಿಸುವ ಕಾದಂಬರಿಯಲ್ಲಿ. ಮಾರ್ಕ್ಸ್ ವಾದಿ ನೆಲೆಗಟ್ಟನ್ನು ಕಾಣುತ್ತೇವೆ. ಹಲವಾರು ವರ್ಷಗಳ ಕಾಲ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ದುಡಿದ ನಿರಂಜನರು ತಮ್ಮ ಪಾತ್ರಗಳು ಅನುಭವಿಸುವ ಸಂಕಷ್ಟಗಳನ್ನು ಮಾರ್ಕ್ಸ್ ವಾದಿ ದೃಷ್ಟಿಯಿಂದ ನೋಡಿದ್ದಲ್ಲಿ ಆಚ್ಚರಿಯಿಲ್ಲ. ಇಲ್ಲಿ ಕಂಡು ಬರುವ ಸ್ವ (ಮಾಸ್ತರು, ಅವರ ಸಂಗಡಿಗರು ಮತ್ತು ರೈತರು) ಮತ್ತು ಅನ್ಯ (ನಂಬಿಯಾರ, ನಂಬೂದಿರಿ, ಆಂಗ್ಲರ ಆಡಳಿತ ವ್ಯವಸ್ಥೆಯ ಭಾಗಗಳು) ಪರಿಕಲ್ಪನೆಯನ್ನು ಅಸ್ತಿತ್ವವಾದಿ ನೆಲೆಯಲ್ಲೂ ನೋಡಬಹುದು. ಪ್ರಗತಿಶೀಲ ಪಂಥದ ಬಳಿಕ ಮುಖ್ಯವಾಹಿನಿಗೆ ಬಂದ ನವ್ಯ ಸಾಹಿತ್ಯದಲ್ಲಿ ಹೆಸರಿಲ್ಲದ ಪಾತ್ರಗಳು ಅಸ್ತಿತ್ವರಾಹಿತ್ಯಕ್ಕೆ ಸಂಕೇತವಾದರೆ ಈ ಕಾದಂಬರಿಯಲ್ಲಿ ಹೆಸರಿಲ್ಲದ ಮಾಸ್ತರರು ಊರಿನ ಶಕ್ತಿಯ ಕೇಂದ್ರವಾಗಿರುವುದು ಗಮನಾರ್ಹವಾಗಿದೆ.

ಬಹುಮಟ್ಟಿಗೆ ಘಟನೆಗಳನ್ನು ಅವಲಂಬಿಸಿರುವ ಕಾದಂಬರಿಯಲ್ಲಿ ವರ್ಗಪ್ರಜ್ಞೆ ಮತ್ತು ರಾಜಕೀಯ ತಿಳಿವು ಗಾಢವಾಗಿದ್ದರೂ ಅನವಶ್ಯಕ ವ್ಯಾಖ್ಯಾನ ಮತ್ತು ಭಾವಾಡಂಬರಗಳಿಲ್ಲ. ಸಾಮ್ರಾಜ್ಯ ಶಾಹಿತ್ವವು ಶೋಷಣೆಯ ಹಲವು ಮುಖಗಳ ಮೂಲಕ ಸಮಾಜದ ಸಂಪತ್ತು ಮತ್ತು ನೆಮ್ಮದಿಯನ್ನು ಕಬಳಿಸುವ, ಹಳ್ಳಿ ನಗರಗಳೆಂಬ ಭೇದವಿಲ್ಲದೆ ಮುದುಕರ ಮತ್ತು ಎಳೆಯರ ಬಾಳಿನ ಬೆಂಕಿಯಾಗಿ ಸುಡುವ ವಿದ್ಯಮಾನಗಳನ್ನು ಮನಗಾಣಿಸುವ ಕಾದಂಬರಿಯು ಸಮಾಜದಲ್ಲಿ ನಡೆಯುವ ಶೋಷಣೆ, ಹಿಂಸೆಗಳು ಜನಸಾಮಾನ್ಯನ ಬದುಕಿನಲ್ಲಿ ಹಾಸುಹೊಕ್ಕು ಅವರ ಮನೆ, ಹೆಂಗಸರು, ಮಕ್ಕಳು, ಮುದುಕರ ಬಾಳನ್ನು ತಿರುಚುವ ರೀತಿಯನ್ನು ಚಿತ್ರಿಸುತ್ತಾ, ಸರಕಾರವೇ ಹಿಂಸೆ ಅನ್ಯಾಯಗಳ ಮೇಲೆ ನಿಂತಿರುವ ಬಗೆಯನ್ನು ಪ್ರಕಟಿಸುತ್ತದೆ.

ಶೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಹೆಚ್ಚಿನ ಕಾದಂಬರಿಗಳು ಸೋಲುತ್ತವೆ. ಶೋಷಣೆಯು ಕೃತಿಯ ಪ್ರಧಾನ ವಸ್ತು ಆಗಿರಬೇಕೆಂಬ ಸಿದ್ದಾಂತಕ್ಕೆ ಬದ್ಧವಾಗಿರುವ ಕಾದಂಬರಿಯಲ್ಲಿ ಏಕತಾನತೆ, ಅಸಹಜ ಕಲ್ಪನೆ, ಅಂತಸತ್ವವಿಲ್ಲದ ಪಾತ್ರ, ಉದ್ವಿಗ್ನತೆಯಿಂದ ಕೂಡಿದ ನಿರೂಪಣೆ ಮತ್ತು ಅತಿಭಾವುಕತೆ ತಲೆ ಹಾಕಿ ಕೃತಿಯು ಸೊರಗುವುದಿದೆ. ಏಕತಾನತೆಯ ಹಂಗು ತೊರೆದ ಈ ಕೃತಿಯಲ್ಲಿ ದುಃಖಿತರ ಬಗೆಗಿನ ಕಳಕಳಿ, ಕ್ಷುಲ್ಲಕತೆಯನ್ನು ಮೀರಬಲ್ಲ ಔದಾರ್ಯ, ಕೆಟ್ಟ ಶಕ್ತಿಗಳನ್ನು ಎದುರಿಸಬಲ್ಲ ಧೈರ್ಯ, ಆಶಾವಾದ ಮತ್ತು ಪ್ರಗತಿಯನ್ನು ಕಂಡುಕೊಳ್ಳುವ ಹಂಬಲವು ಮುಖ್ಯವಾಗುತ್ತದೆ. ಇತರ ಪ್ರಗತಿಶೀಲ ಲೇಖಕರ ಬರವಣಿಗೆಗೆ ಹೋಲಿಸಿದರೆ ನಿರಂಜನರ ಕಾದಂಬರಿಯು ತೋರುವ ಸಂಯಮವು ಅನನ್ಯವಾಗಿದೆ. ಕಾದಂಬರಿಯ ಎರಡು ದೃಶ್ಯಗಳು ಲೇಖಕರ ಬರವಣಿಗೆಯ ಸಂಯಮವನ್ನು ಗುರುತಿಸಬಹುದು.

ಭೂಮಿಯನ್ನು ಕಳೆದುಕೊಂಡ ಚಿರುಕಂಡನ ತಂದೆಯ ಪ್ರತಿಕ್ರಿಯೆ.

“ಜಮೀನ್ದಾರ ಇಷ್ಟು ಕ್ರೂರಿಯಾಗಬಹುದೂಂತ ಭಾವಿಸಿರ್ಲಿಲ್ಲ ಕಲ್ಯಾಣಿ. ಹಿರಿಯರಿಂದ ಬಂದ ಆಸ್ತೀನ ಕಳಕೊಂಡೆನಲ್ಲ ನಾನ ಎಂಥವನೂಂತ? ನಿನ್ನೆ ನಾವು ಸ್ವಂತ ಆಸ್ತಿಯಿದ್ದ ರೈತರು. ಇವತ್ತು ಧಣಿಗಳ ಒಕ್ಕಲು, ಗುಲಾಮರು” (ಪುಟ 66-67)

ಜಮೀನ್ದಾರರ ಜೊತೆಗಿನ ಮಾಸ್ತರರ ಮಾತುಕತೆಯ ಸಂದರ್ಭ.

ರೈತ ಜನರನ್ನು ದೂರವಿಟ್ಟರೆ ಮಾತ್ರ ಅವರು ನಮ್ಮನ್ನು ಗೌರವಿಸುತ್ತಾರೆ. ‘ವಿದ್ಯೆ ಇಲ್ಲದೋರು ಮೃಗಗಳು. ಆದ್ದರಿಂದ ಅವರನ್ನು ಮೃಗಗಳನ್ನಾಗಿಯೇ ನೋಡಬೇಕು. ಅವರಿಗೆ ಅರ್ಥವಾಗೋದು ಬಾರುಕೋಲಿನ ಭಾಷೆ’ ಎನ್ನುವ ನಂಬಿಯಾರರ ಮಾತು ಮಾಸ್ತರನ್ನು ಸಿಟ್ಟಿಗೆಬ್ಬಿಸಿದರೂ ಅವರು ವಿವೇಕವನ್ನು ಬಿಟ್ಟುಕೊಡುವುದಿಲ್ಲ. ಅತ್ಯಂತ ದುಃಖದ ಅಥವಾ ಪ್ರಕ್ಷುಬ್ಧಕರ ಸನ್ನಿವೇಶಗಳಲ್ಲಿ ಗೋಳಾಡದೆ, ಚೀರಾಡದೆ, ಹೃದಯವನ್ನು ಬಿಗಿಹಿಡಿದು ವರ್ತಿಸಿದ ರೀತಿ ನೀತಿಗಳು ಮುಖ್ಯವಾಗುತ್ತವೆ. ಗಟ್ಟಿಯಾಗಿ ಉಸಿರು ಬಿಡದೆ, ಅತ್ತಿತ್ತ ಮಿಸುಕದೆ ಹೆತ್ತವರ ಮಾತುಗಳನ್ನು ಆಲಿಸಿದ ಚಿರುಕಂಡ ಮತ್ತು ನಂಬಿಯಾರನಿಗೆ ಮುಖಾಮುಖಿಯಾದ ಮಾಸ್ತರರ ಪರಿಸ್ಥಿತಿ ಬೇರೆಯಲ್ಲ. ಲೇಖಕರು ಇತರ ಪ್ರಗತಿಶೀಲ ಬರಹಗಾರರಂತೆ ರೊಚ್ಚಿನಿಂದ ಬರೆಯದಿದ್ದರೂ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿದವರ ಮೂಕ ಯಾತನೆಯನ್ನು ದಾಟಿಸುವ ರೀತಿಯು ಓದುಗರನ್ನು ವ್ಯವಸ್ಥೆಯ ವಿರುದ್ಧ ಬಂಡೇಳಿಸಬಲ್ಲದು.

ಲೇಖಕರ ಸೂಕ್ಷ್ಮಪ್ರಜ್ಞೆಯು ರೈತ ಸಮುದಾಯಕ್ಕೆ ಸೇರಿದವರ ಆರ್ಥಿಕ ಪರಿಸ್ಥಿತಿಗಳಲ್ಲಿನ ಭಿನ್ನತೆಗಳನ್ನು ಗುರುತಿಸಿದೆ. ಅಸಮಾನತೆಯ ಪರಿಕಲ್ಪನೆ ಕೇವಲ ಉಳ್ಳವರು ಮತ್ತು ಇಲ್ಲದವರು ಎಂಬ ಸರಳ ಗ್ರಹಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಇಲ್ಲಿನ ಹೆಚ್ಚುಗಾರಿಕೆಯಾಗಿದೆ. “ತಾವೂ ರೈತರು. ಅಪ್ಪುವಿನ ಮನೆಯವರೂ ರೈತರು. ಇವರಿಗೊಂದು ಜತೆ ಹೋರಿಗಳಿದ್ದವು. ತಮ್ಮವು ಕೈಬಿಟ್ಟು ಹೋಗಿದ್ದವು. ಇವರಿಗೆ ತಮ್ಮದಕ್ಕಿಂತಲೂ ವಿಸ್ತಾರವಾದ ಹೊಲಗಳಿದ್ದವು. ತಮ್ಮ ಹೊಲಗಳು ಜಮೀನ್ದಾರನ ವಶವಾಗಿದ್ದವು. ಈ ಮನೆ ತಮಗಿಂತ ಸ್ವಲ್ಪ ಮೇಲು. ಕಡು ದರಿದ್ರರಾದ ರೈತರ ಹಟ್ಟಿಗಳಿಗಿಂತ ತಮ್ಮ ಗುಡಿಸಲೇ ಮೇಲು. ಇವುಗಳಿಗಿಂತಲೂ ಮೇಲುಮಟ್ಟದ ಮನೆಗಳು ಬೇರೆ ಇದ್ದವು.” (ಪುಟ 77) ಈ ಮಾತನ್ನು ಲೇಖಕರು ಹೇಳದೆ ಚಿರುಕಂಡನ ಸ್ವಗತದ ರೀತಿಯಲ್ಲಿ ಬಂದಿರುವುದು ಅರ್ಥಪೂರ್ಣವಾಗಿದೆ.

ಕಾದಂಬರಿಯು ಕ್ರಾಂತಿಯ ಕಡೆಗೆ ಗಮನವನ್ನು ಹರಿಸಿದ್ದರೂ ಇದನ್ನು ಕ್ರಾಂತಿಕಾರಿಗಳ ಬಗೆಗಿನ ಕಾದಂಬರಿಯಾಗಿ ಮಾತ್ರ ಓದಲಾಗದು. ಅಪ್ಪು ಮತ್ತು ಚಿರುಕಂಡ ಪ್ರಧಾನ ಪಾತ್ರಗಳಾದರೂ ಇವರೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಅಪ್ಪುವಿನ ಯೋಗ್ಯತೆಯನ್ನು ತಿಳಿಯಲು ಚಿರುಕಂಡನನ್ನು, ಅಪ್ಪುವಿನ ಹೆತ್ತವರ ಗುಣಗಳನ್ನು ಅರಿಯಲು ಚಿರುಕಂಡನ ತಂದೆತಾಯಿಯರನ್ನು ಅವಲೋಕಿಸಬೇಕು. ಮಾಸ್ತರರ ಪರಿಚಯದಿಂದ ಸಂತುಷ್ಟರಾಗಿ ಸಾಮಾಜಿಕ ಕ್ರಾಂತಿಯನ್ನು ಭಾರತದಾದ್ಯಂತ ಹರಡಲು ಬಯಸುವ ಪಂಡಿತರು, ವರ್ಮಾ, ಪ್ರಭು ಮೊದಲಾದವರ ವ್ಯಕ್ತಿತ್ವವನ್ನು ಗುರುತಿಸಬೇಕು. ಯಾವುದೇ ಸಂದರ್ಭದಲ್ಲಿ ಮರಣ ತಮ್ಮ ಗಂಡನ ಮೇಲೆರಗಬಹುದೆಂದು ತಿಳಿದರೂ ಐಹಿಕ ಸುಖಗಳನ್ನು ಮಾತ್ರ ಬಯಸದೆ ಕ್ರಾಂತಿಯ ಕೆಲಸಗಳಿಗೆ ಬೆಂಬಲವನ್ನು ನೀಡುವ ದೇವಕಿ, ಜಾನಕಿ, ಇವರೆಲ್ಲರೂ ವೈವಾಹಿಕ ಚೌಕಟ್ಟಿನಲ್ಲಿ ಗಂಡು ಹೆಣ್ಣಿನ ಸಂಬಂಧಗಳ ವಾಸ್ತವ ಮತ್ತು ಅವುಗಳಾಚೆಗಿನ ಸತ್ಯಗಳನ್ನು ಅನಾವರಣಗೊಳಿಸುವ ಪಾತ್ರಗಳಾಗಿವೆ.

ಅಪ್ಪು – ಚಿರುಕಂಡ ಮತ್ತು ನಂಬೂದಿರಿ – ನಂಬಿಯಾರರ ವ್ಯಕ್ತಿಗತ, ಸಾಮಾಜಿಕ ಭಿನ್ನತೆಗಳು ಮುಖ್ಯವಾಗುತ್ತವೆ. ಚಿರುಕಂಡನು ಜಮೀನ್ದಾರನ ಒಕ್ಕಲು. ಅಪ್ಪು ಸ್ವತಂತ್ರ ರೈತ ಕುಟುಂಬಕ್ಕೆ ಸೇರಿದವನಾದರೂ ಅವರ ಗೆಳೆತನಕ್ಕೆ ಸಾಮಾಜಿಕ ಅಂತಸ್ತು ಅಡ್ಡಿಯಾಗುವುದಿಲ್ಲ. ಅಪ್ಪುವಿಗೆ ಆತ್ಮಪ್ರಶಂಸೆ ಹೆಚ್ಚು. ಆದರೆ ಆತನಿಗಿಂತ ಪ್ರಬುದ್ಧನಾಗಿರುವ ಚಿರುಕಂಡನು ಮೌನಿ. ಜನರು ಒಂದಾದರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ. ಅದಕ್ಕಾಗಿ ಹೋರಾಟವಾಗಬೇಕು. ರಾಷ್ಟ್ರವನ್ನು ತುಳಿದು ನಿಂತ ಪರಕೀಯ ಶಕ್ತಿಗಳ ಬೆನ್ನೆಲುಬು ಮುರಿಯಬೇಕು. ಬಳಿಕ ಆ ಶಕ್ತಿಯ ಆಧಾರಸ್ತಂಭಗಳನ್ನು ಕಿತ್ತೆಸೆಯಬೇಕು ಎಂಬ ಸಿದ್ಧಾಂತದ ಮಾತನ್ನು ಅಪ್ಪು ಹೃದಯದ ನೆಲೆಯಲ್ಲಿ ಯೋಚಿಸುತ್ತಾನೆ. ಜಮೀನ್ದಾರನು ರೈತರನ್ನು ಹೊರಹಾಕಿದರೆ ಏನೂ ಉಳಿಯೋದಿಲ್ಲ. ಊರು ಬಿಟ್ಟು ಭಿಕಾರಿಯಾದ ಮೇಲೆ ದೇಹದ ಶ್ರಮ ಮಾತ್ರ ಬಾಕಿಯಾಗತ್ತದೆ ಎಂದು ಬುದ್ಧಿಯ ಮೂಲಕ ಚಿರುಕಂಡನು ಚಿಂತಿಸುತ್ತಾನೆ. ಆತನ ಪ್ರಕಾರ ಗ್ರಾಮ ಪಂಚಾಯತಿನ ರೂಪೀಕರಣವು ಜಾಗೃತಿಗೆ ದಾರಿ. ಜಮೀನ್ದಾರನ ಕೈಯಿಂದ ಅಧಿಕಾರವನ್ನು ಪಡೆಯಲು ಹೋರಾಟವೇ ಹಾದಿ ಎಂಬುದು ಅಪ್ಪುವಿನ ನಿಲುವು. ಬೀಜ ಮೊಳೆತು ಗಿಡವಾಗಿ, ಮರವಾಗಿ, ಫಲ ಬಿಡಲು ಸಮಯ ಬೇಕು. ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ದುಡಿಯಬೇಕು ಎಂಬುದು ಮಾಸ್ತರರ ಅಭಿಪ್ರಾಯ.

ನಂಬೂದಿರಿಯು ನಂಬಿಯಾರನಂತೆ ಹೊಡಿ ಬಡಿ ಸ್ವಭಾವದವನಲ್ಲ. ನಯವಾಗಿ ಮಾತನಾಡಿಸಿ ರೈತರಿಂದ ಕಾರ್ಯಸಾಧನೆ ಮಾಡಿಕೊಳ್ಳುವವನು. ಶೂದ್ರರಿಗೆ ಶಿಕ್ಷಣದ ಅಗತ್ಯವಿಲ್ಲ ಎಂದು ಅವನ ವಾದ. “ನನ್ನ ತಾಳ್ಮೆ ನೋಡಿ ನನಗೇ ಆಶ್ಚರ್ಯವಾಗ್ತದೆ. ನಾನು ಸೀದಾ ಮನುಷ್ಯ. ಖಂಡಿತವಾದಿ. ಇವರಿಗೆ ನಂಬೂದಿರಿಯಂಥ ಯಜಮಾನರು ಸಿಗಬೇಕು. ಬೆಣ್ಣೇಲಿ ಕೂದಲು ತೆಗಿವಂಥ ಮಾತಾಡ್ತಾ ಹೇಗೆ ಅರೀತಾನೆ (ಪುಟ 148) ಎನ್ನುವ ನಂಬಿಯಾರನ ಮಾತು ಅವರಿಬ್ಬರ ಸ್ವಭಾವಗಳ ನಡುವಿನ ವ್ಯತ್ಯಾಸವನ್ನು ಹೇಳುತ್ತದೆ. ಬರೇ ಹೆಬ್ಬೆಟ್ಟಿನ ರುಜುವಿದ್ದರೆ ತಾನು ಏನೂ ತಿಳಿಯದವರಿಗೆ ಮೋಸ ಮಾಡುತ್ತಿರುವೆನೆಂಬ ಮಾತು ಕೇಳಿ ಬರಬಹುದು. ಶಾಲೆಯಲ್ಲಿ ಕಲಿತರೆ ಕರಾರು ಪತ್ರದಲ್ಲಿ ಏನು ಬರೆದರೂ ಅರ್ಥವಾಗಿದೆಯೆಂದು ಅಕ್ಷರದಲ್ಲೇ ಸಹಿ ಹಾಕಿಸಬಹುದು ಎಂಬ ಸ್ವಾರ್ಥಮೂಲ ಸಿದ್ಧಾಂತ ಆತನದ್ದು. ತಲಶೇರಿಯ ಕಾರ್ಮಿಕ ದಳದ ಉಪನಾಯಕನಾಗಿದ್ದ ಅಬೂಬಕರನು ಮಾಸ್ತರರ ನಿರ್ದೇಶನದ ಮೇರೆಗೆ ಕಯ್ಯೂರಿಗೆ ಬಂದು ಸ್ವಯಂಸೇವಕ ದಳವನ್ನು ರಚಿಸಿದಾಗ ಮುಂದಿನ ದಿನಗಳಲ್ಲಿ ಅವರ ಬಲ ಹೆಚ್ಚುವುದೆಂದು ಅರಿತ ನಂಬೂದಿರಿಯು ತನ್ನ ವಾಸವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ‘ಕ್ರಾಂತಿಕಾರಿಗಳು ಸರಕಾರದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಸೈನ್ಯ ಕಟ್ಟಿದ್ದಾರೆ. ಪ್ರತಿ ಸರ್ಕಾರ ಸ್ಥಾಪಿಸಿದ್ದಾರೆ. ಗೃಹಸ್ಥರು, ಹೆಂಗಸರು, ಮಕ್ಕಳು ಬದುಕುವುದೇ ಕಷ್ಟವಾಗಿದೆ. ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ಗಂಡಾಂತರವಿದೆ’ ಎಂದು ನಂಬಿಯಾರರು ಸಂಘಟನೆಯ ವಿರುದ್ಧ ಸರಕಾರಕ್ಕೆ ಉತ್ಪ್ರೇಕ್ಷೆಯ ಪತ್ರವನ್ನು ಬರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರೆಂದರೆ ಗಾಂಧಿವಾದಿಗಳು ಎಂದುಕೊಂಡಿರುವ ಆತನಿಗೆ ಕ್ರಾಂತಿಮಾರ್ಗದ ಪರಿಚಯವಿಲ್ಲದಿದ್ದುದರಿಂದ ಹೆಚ್ಚಿನ ಕಿರುಕುಳವನ್ನು ನೀಡದೆ ಸುಮ್ಮನಾದರೂ ಮಾಸ್ತರನ್ನು ರೈತರ ಒಡನಾಟದಿಂದ ವಿಮುಖನಾಗಿಸಲು ತನ್ನ ಮಗನಾದ ಕರುಣಾಕರನಿಗೆ ಮನೆಪಾಠ ಹೇಳಲು ನಿಯೋಜಿಸುವಲ್ಲಿ ಆತನ ಕುತಂತವ್ರು ಅಡಗಿದೆ. ಆದರೆ ಕೋರನ ಮನೆಯಲ್ಲಿ ರೈತರ ಸಭೆಯನ್ನು ನಡೆಸಿ, ಚಿರುಕಂಡನಿಂದ ಪತ್ರಿಕೆ ಓದಿಸುವ ಯೋಜನೆಯನ್ನು ಸಿದ್ಧಪಡಿಸಿ, ಕ್ರಾಂತಿಕಾರಿ ಚಟುವಟಿಕೆಗಳಿಗೆ ಪರ್ಯಾಯ ಹಾದಿಯು ರೂಪುಗೊಂಡಾಗ, ಆರಕ್ಷಕರನ್ನು ಕರೆಸಿ ವಿಚಾರಣೆ ಮಾಡಿಸುವ ಮೂಲಕ ಆತನು ರೈತರ ಮನದಲ್ಲಿ ಭಯವನ್ನು ಹುಟ್ಟಿಸಲು ಯತ್ನಿಸುತ್ತಾನೆ. ರೈತರು ಅದಕ್ಕೆ ಜಗ್ಗದೆ ಎದುರುತ್ತರವನ್ನು ಕೊಡುತ್ತಾರೆ. ಸಂಘಕ್ಕಾಗಿ ಗುಡಿಸಲು ಕಟ್ಟಲು ಪೊಡವರ ಕುಂಞಂಬು ಜಾಗವನ್ನು ಬಿಟ್ಟುಕೊಡುತ್ತಾನೆ.

ಕಾದಂಬರಿಯಲ್ಲಿ ಕಣ್ಣನ ಪ್ರವೇಶವಾದ ನಂತರ ಕ್ರಾಂತಿಯು ಕ್ರಿಯಾತ್ಮಕ ರೂಪವನ್ನು ತಾಳುತ್ತದೆ. ಚೆಲುವನೂ, ಹಾಡುಗಾರನೂ ಆದ ಈತನು ವಿಧವೆ ದೇವಕಿಯ ಮೇಲೆ ಕಣ್ಣು ಹಾಕಿದ ನಂಬಿಯಾರನ ಚಾಕರನನ್ನು ಅಪ್ಪುವಿನ ಜೊತೆ ಸೇರಿ ಹೊಡೆಯುವ ಪ್ರಸಂಗವು ಮುಖ್ಯವಾಗುತ್ತದೆ. ಅಬಲೆಯರ ರಕ್ಷಣೆಯ ಪರಿಕಲ್ಪನೆಯು ಅದರಲ್ಲಿದೆ. ತನಗೆ ದಕ್ಕದ ದೇವಕಿಯು ಕಣ್ಣನ ಆಸರೆಯಲ್ಲಿರುವುದರಿಂದ ನಂಬಿಯಾರನಿಗೆ ಸಿಟ್ಟು ಬರುವ ಸಾಧ್ಯತೆಯಿದ್ದು, ಕಣ್ಣನೂ ಅಪ್ಪುವೂ ಸಿಕ್ಕಿಬಿದ್ದಿರುತ್ತಿದ್ದರೆ, ಚಾಕರನು ಸತ್ತು ಹೋಗಿರುತ್ತಿದ್ದರೆ ಸಂಘದ ಕೆಲಸಗಳಿಗೆ ಸಂಚಕಾರ ಒದಗುತ್ತಿತ್ತು ಎಂಬುದು ನಿಜವಾದರೂ ದೇವಕಿಯನ್ನು ಅಲ್ಲೇ ಬಿಟ್ಟು ಹೋಗಿದ್ದರೆ ಇತರರು ಆಕೆಯನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿರಲಿಲ್ಲ. ಕ್ರಾಂತಿಯ ಹಾದಿಯಲ್ಲಿ ಇಂಥ ದುರ್ಭರ ಪ್ರಸಂಗ ಬರುವುದು ಸಹಜವಾಗಿರುವುದರಿಂದ ಅಬಲೆಯನ್ನು ಕಾಪಾಡದೆ ಕೈಕಟ್ಟಿ ಕುಳಿತುಕೊಳ್ಳುವುದು ಹೇಡಿತನದ ಲಕ್ಷಣವಾಗಿದೆ. ಅನ್ಯಾಯವನ್ನು ಎದುರಿಸುವವರು ಕಯ್ಯೂರಿನಲ್ಲಿದ್ದಾರೆ ಎಂದು ತಿಳಿದ ಜನರು ಎದ್ದು ನಿಲ್ಲಬೇಕಾದ ಬಗೆಯನ್ನು ಇದು ತೋರಿಸಿಕೊಡುತ್ತದೆ. ದೇವಕಿಯದ್ದು ವೈಯಕ್ತಿಕ ಪ್ರಶ್ನೆಯಾದರೆ, ಸಾಮೂಹಿಕ ಪ್ರಶ್ನೆ ಬಂದಾಗಲೂ ಒಗ್ಗಟ್ಟಾಗಿ ಧೈರ್ಯ ಸಾಹಸಗಳನ್ನು ಪ್ರದರ್ಶಿಸಬೇಕೆಂಬ ದನಿಯನ್ನು ಹೊಂದಿರುವ ದೇವಕಿಯ ಪ್ರಸಂಗವು ಕ್ರಾಂತಿಯ ಭಾಗವೆನಿಸಿಕೊಳ್ಳುವುದು ವಿಶೇಷ.

ದೇವಕಿಯ ತಂಗಿ ಜಾನಕಿಯ ಮೇಲೆ ಅಪ್ಪುವಿಗೆ ಪ್ರೀತಿ ಹುಟ್ಟಿದಾಗ ಅವನೊಳಗಿನ ಪ್ರೇಮಿ ಮತ್ತು ಕಾರ್ಯಕರ್ತನ ನಡುವೆ ತಿಕ್ಕಾಟವು ನಡೆಯುತ್ತದೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿರುವಾಗ ಇಂಥ ಯೋಚನೆ ಸಲ್ಲದೆಂದು ಬಗೆದರೂ ಅವನೊಳಗಿನ ಪ್ರೇಮಿಯು ಎಚ್ಚೆತ್ತು ಚಿತ್ತದಲ್ಲಿ ತಳಮಳವನ್ನು ಎಬ್ಬಿಸುತ್ತಾನೆ. “ಬೆಳೆಯೋದು ಸಾಯೋದೊಂದೇ ಬದುಕಿನ ಗುರಿ ಆಗಿರೋ ಜನಕ್ಕೆ ಮದುವೆ ಅಂದರೆ ಚಿಲ್ಲರೆ ವಿಷಯ. ಆದರೆ ಕ್ರಾಂತಿಕಾರಿಗಳಿಗೆ ಹಾಗಲ್ಲ. ಮದುವೆ ಅನ್ನೋದು ಅವರ ಕೊರಳಿಗೆ ಕೊರಡು ಕಟ್ಟಿದ ಹಾಗೆ. ಸಂಸಾರ ಸುಖ ಸಾಧ್ಯವೇ ಇಲ್ಲ. ಆದರೆ ಕ್ರಾಂತಿಕಾರಿಯೂ ಮನುಷ್ಯನೇ. ಆರೈಕೆ ಪೋಷಣೆ, ಉಪಚಾರ ಸಿಗದೆ ಹೋದರೂ ಪ್ರೀತಿ ಸಿಗಲೇಬೇಕು. ಆನ ತೋರಿಸೋ ಪ್ರೀತಿ ಜೊತೇಲಿ ವಿಶಿಷ್ಟ ಪ್ರೀತಿಯನ್ನು ಬಯಸುತ್ತಾನೆ. ಅದು ಅವನ ಹಾಗೆ ಕ್ರಾಂತಿಕಾರಿಯಾದ ಹೆಣ್ಣಿನಿಂದ ಸಿಗುತ್ತದೆ. ಕ್ರಾಂತಿಕಾರಿಯಲ್ಲದೇ ಹೋದರೂ ಆಕೆ ಅವನನ್ನು ಚೆನ್ನಾಗಿ ತಿಳಿದುಕೊಂಡು ಅನುಕೂಲೆಯಾಗಿರಬೇಕು. ಆದರೂ ಕ್ರಾಂತಿಕಾರಿಯ ದಾಂಪತ್ಯಕ್ಕೆ ಮಿತಿಯಿದೆ” (ಪುಟ 174-175) ಎಂದು ಅರಿತ ಮೇಲೆ ಮನಸ್ಸು ಸ್ಥಿರವಾದ ಬಿಂದುವಿನಲ್ಲಿ ನಿಲ್ಲುತ್ತದೆ. ಅವರು ಭೂಮಾಲೀಕರ ಒಪ್ಪಿಗೆಯನ್ನು ಪಡೆಯದೆ, ನಜರು ಒಪ್ಪಿಸದೆ, ಅಡಿಗೆರಗಿ ಆಶೀರ್ವಾದಗಳನ್ನು ಪಡೆಯದೆ ನೆರವೇರುವ ಅಪ್ಪು – ಜಾನಕಿಯರ ಮದುವೆಯು ಕಣ್ಣ ಮತ್ತು ದೇವಕಿಯ ವಿವಾಹದಂತೆ ಪ್ರತಿರೋಧದ ನೆಲೆಯಲ್ಲಿ ನಡೆಯುತ್ತದೆ.
ಮಾಸ್ತರರು ಶಾಲೆಯ ವಿದ್ಯಾರ್ಥಿಗಳನ್ನು ಬ್ರಿಟಿಷರ ವಿರುದ್ಧ ಪ್ರಚೋದಿಸುತ್ತಿರುವ ಸುಳಿವು ನಂಬಿಯಾರನಿಗೆ ಸಿಗುತ್ತದೆ. ಅಭ್ಯಾಸ ಪುಸ್ತಕದಲ್ಲಿ ‘ಪರಕೀಯ ರಾಜರ ಪ್ರಜೆಗಳು ಗುಲಾಮರು’ ಎಂಬ ಸಾಲನ್ನು ಅಳಿಸಿ ಹಾಕಲು ಒತ್ತಾಯಿಸುತ್ತಾರೆ. ಮಾಸ್ತರರು ಅದನ್ನು ಅಳಿಸಿ ಹಾಕಿದರೂ ‘ಒಬ್ಬನ ಹತ್ತಿರ 600 ಎಕರೆ ಭೂಮಿಯಿದ್ದು, ಅದನ್ನು 200 ಜನರಿಗೆ ಸಮಾನವಾಗಿ ಹಂಚಿದರೆ ಪ್ರತಿಯೊಬ್ಬನಿಗೆ ಸಿಗವ ಹೊಲದ ವಿಸ್ತಾರವೆಷ್ಟು?” ಎಂಬ ಲೆಕ್ಕ ಕೊಡುವ ಮೂಲಕ ಸಮಾಜವಾದದ ಸಂದಶವನ್ನು ಬಿತ್ತುತ್ತಾರೆ. ಮಗನ ಕಲಿಕೆ ಮುಗಿದ ಬಳಿಕ ಶಾಲೆಯನ್ನು ಮುಚ್ಚಿಸಿ ಮಾಸ್ತರರನ್ನು ಹೊರ ದಬ್ಬಿದ ನಂಬಿಯಾರರ ವಿರುದ್ಧ ದನಿಯೆತ್ತಿದ ಸಂಘವು ಶಾಲೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಧೈರ್ಯವನ್ನು ತೋರಿಸುತ್ತದೆ. ನಂಬಿಯಾರರ ವಿರೋಧಿಸಿದರೆ ಊರಿನವರ ನೆರವಿನಿಂದ ಸ್ವಂತ ಶಾಲೆಯನ್ನು ತೆರೆಯುವ ಉದ್ದೇಶವನ್ನು ವ್ಯಕ್ತಪಡಿಸುತ್ತದೆ. ತನ್ನ ಆಢ್ಯತನವನ್ನು ಉಳಿಸಿಕೊಳ್ಳಲು ಬೇರೆ ದಾರಿಯನ್ನು ಕಾಣದ ನಂಬಿಯಾರರು ಬೇರೊಬ್ಬ ಶಿಕ್ಷಕನನ್ನು ಗೊತ್ತು ಮಾಡುತ್ತಾರೆ. ಇದು ಏಕಾಧಿಪತ್ಯದ ವಿರುದ್ಧ ಪ್ರಜಾಪ್ರಭುತ್ವದ ಮೇಲುಗೈ ಆಗುವಂತೆ ಮಾಡಿದ ಸಂಘದ ಪ್ರಾಬಲ್ಯವನ್ನು ಸೂಚಿಸುತ್ತದೆ. ಇದರ ಪ್ರೇರಕ ಶಕ್ತಿಯು ಮಾಸ್ತರಾಗಿದ್ದಾರೆ. ತಳಿಪರಂಬ ಜಾತ್ರೆಯ ಬದಲು ಉತರ ಮಲಬಾರಿನಲ್ಲಿ ನಡೆಯುವ ರೈತ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುವುದು ಮಾಸ್ತರರ ಬೋಧನೆಯ ಪರಿಣಾಮವಾಗಿ ಉಂಟಾಗಿದ್ದ ರೈತರ ಜಾಗೃತಿಗೆ ಸಾಕ್ಷಿಯಾಗಿದೆ. ಕೃಷ್ಣನ್ ನಾಯರನ ಬೆಳೆಗಳನ್ನು ಎತ್ತಿನ ಗಾಡಿಯಲ್ಲಿ ಒಯ್ದು ಸಾಗಿಸುತ್ತಿದ್ದ ನಂಬಿಯಾರನ ಸಂಗಡಿಗರನ್ನು ತಡೆಗಟ್ಟಿ ವಶಪಡಿಸುವ ಘಟನೆಯು ಅದಕ್ಕೆ ಉದಾಹರಣೆಯಾಗಿದೆ. ಮಾಸ್ತರರು ಅಮಾನತುಗೊಂಡರೂ ಅವರು ಹಾಕಿಕೊಟ್ಟ ದುಡಿಮೆಯ ಹೆದ್ದಾರಿಯಲ್ಲಿ ಸಾಗುವ ಕಯ್ಯೂರಿನ ರೈತರು ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳಲು ಹೊರಡುತ್ತಾರೆ. ಲೋಕದ ಹಲವೆಡೆಗಳಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ಬಂಡಾಯವೆದ್ದು ಅದನ್ನು ನಿರ್ಮೂಲನಗೊಳಿಸಿದ ಯಾವ ಊರಿಗೂ ಕಯ್ಯೂರು ಕಡಿಮೆಯಲ್ಲ ಎಂದು ಸಾರುವ ಲೇಖಕರ ಉದ್ದೇಶವು ಫಲಿಸಿದೆ. ವಿಭಜಿಸಿ ಆಳುವ ಪ್ರಕ್ರಿಯೆಗೆ ಹೆಸರಾಗಿರುವ ಆಡಳಿತ ವ್ಯವಸ್ಥೆಯ ಭಾಗವಾಗಿರುವ ಆರಕ್ಷಕರು ರೈತ ಸಂಘದ ಬಲವನ್ನು ಕುಗ್ಗಿಸಲು ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಲು ಸೈನ್ಯಕ್ಕೆ ಸೇರುವ ಆಮಿಷವನ್ನು ಒಡ್ಡುತ್ತಾರೆ. ನೇಗಿಲು ಹಿಡಿಯುವ ಕೈ ಬಂದೂಕು ಎತ್ತಲು ಕಲಿತರೆ ಕ್ರಾಂತಿಕಾರಿ ಚಟುವಟಿಕೆಗಳಿಗೆ ಪ್ರಯೋಜನವಾಗುತ್ತದೆ ಎಂಬ ದೂರದೃಷ್ಟಿಯನ್ನು ಹೊಂದಿದ ಸಂಘವು ದೊಡ್ಡ ಸಂಸಾರ, ನಿರುದ್ಯೋಗ, ಹೊಲ ಇಲ್ಲದ ಸ್ಥಿತಿಯಲ್ಲಿರುವ ಆರು ಮಂದಿಯನ್ನು ಆಯ್ಕೆ ಮಾಡಿ ಕಳುಹಿಸುತ್ತದೆ.

ಹೊಸದುರ್ಗ ಠಾಣೆಯಿಂದ ಸುಬ್ಬಯ್ಯನೆಂಬ ಆರಕ್ಷಕನು ರೈತ ಸಂಘದವರ ಮೆರವಣಿಗೆಯನ್ನು ತಡೆದು ದರ್ಪವನ್ನು ಪ್ರದರ್ಶಿಸುತ್ತಾನೆ. ಆದರೆ ಕಾರ್ಯಕರ್ತರು ಅದನ್ನು ಲೆಕ್ಕಿಸದೆ ಮುಂದುವರೆಯುತ್ತಾರೆ. ಇದರಿಂದ ತನ್ನ ಅಭಿಮಾನಕ್ಕೆ ಪೆಟ್ಟು ಬಿದ್ದಂತಾಗಿ ಮೆರವಣಿಗೆಯ ಮುಂದಾಳಾಗಿದ್ದ ಅಬೂಬಕರನ್ನು ಹೊಡೆಯುತ್ತಾನೆ. ಬಾಲ ಸಂಘದ ನೇತಾರ ಕುಟ್ಟಿಕೃಷ್ಣನಿಗೆ ಒದೆಯುತ್ತಾನೆ. ಆಗ ರೈತರೆಲ್ಲರೂ ಒಗ್ಗಟ್ಟಾಗಿ ಸುಬ್ಬಯ್ಯನ ಮೇಲೆರಗಿ ಬಡಿಯುತ್ತಾರೆ. ಅವರ ಏಟುಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಸುಬ್ಬಯ್ಯನು ಈಜು ಬಾರದೆ ಮುಳುಗಿ ಸಾಯುತ್ತಾನೆ. ಕೆಲವೇ ದಿನಗಳಲ್ಲಿ ಕಯ್ಯೂರಿಗೆ ಆಗಮಿಸಿದ ಸಶಸ್ತ್ರ ಆರಕ್ಷಕ ಪಡೆಯು ಊರಿನ ಸುತ್ತ ಕಾವಲು ಏರ್ಪಡಿಸಿ ಚಿರುಕಂಡ, ಕೋರ, ಕಣ್ಣ ಮತ್ತು ಕುಂಞಂಬು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ ಹೊಸದುರ್ಗಕ್ಕೆ ಸಾಗಿಸುತ್ತಾರೆ. ಅದೇ ದಿನ ಸಂಜೆ ಮಲಬಾರಿನ ವಿಶೇಷ ಆರಕ್ಷಕ ಪಡೆಯ ಸಶಸ್ತ್ರ ದಳವು ಊರಿನ ತೋಪಿನಲ್ಲಿ ಬೀಡು ಬಿಡುತ್ತದೆ. ಭೂಗತರಾಗಿದ್ದ ಅಪ್ಪು ಮತ್ತು ಅಬೂಬಕರಿಗೆ ಯಾರ ಸಹಾಯವೂ ಸಿಗುವುದಿಲ್ಲ. ಘರ್ಷಣೆಯಲ್ಲಿ ಬೆಂದು ಉಕ್ಕಾಗುವ ರೈತರು ನಾಳೆ ದೊಡ್ಡ ಹೋರಾಟ ಮಾಡಬಹುದು ಎಂದು ಊಹಿಸಬಹುದಾದರೂ ಸದ್ಯದ ಪರಿಸ್ಥಿತಿಯಲ್ಲಿ ಅವರೆಲ್ಲರೂ ಸಶಸ್ತ್ರ ಆರಕ್ಷಕ ಪಡೆಗೆ ಹೆದರಿ ಸುಮ್ಮನಿದ್ದುದು ವಿಪರ್ಯಾಸ.

ಎರಡನೇ ವಿಶ್ವ ಮಹಾಯುದ್ಧ ಭುಗಿಲೆದ್ದುದರಿಂದ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿರುವುದರಿಂದ ಆಂಗ್ಲರ ಸರಕಾರಕ್ಕೆ ಸುಬ್ಬಯ್ಯನ ಸಾವಿಗಾಗಿ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲದಿದ್ದರೂ ಅವನನ್ನು ಹೊಡೆಯುವ ಮಟ್ಟಕ್ಕೆ ಕಯ್ಯೂರಿನ ಜನರು ಬೆಳೆದಿರುವುದರಿಂದ ಕ್ರಾಂತಿಕಾರಿಗಳ ಮೇಲೆ ತಾವೇ ಆರೋಪವನ್ನು ಹೊರಿಸಿ, ತಾವೇ ವಿಚಾರಣೆ ನಡೆಸಿ, ಉಳಿದವರಿಗೆ ಪಾಠವಾಗುವಂಥ ಅಸಾಮಾನ್ಯ ದಂಡನೆಯನ್ನು ವಿಧಿಸಲು ಹಿಂಜರಿಯುವುದಿಲ್ಲ. ಇದಕ್ಕಾಗಿ ನಂಬಿಯಾರರು ನಲುವತ್ತು ಜನರಿಂದ ಸುಳ್ಳು ಸಾಕ್ಷಿಯನ್ನು ಹೇಳಿಸುತ್ತಾರೆ. ಜಮೀನ್ದಾರರು ನಡೆಸುವ ಸುಲಿಗೆಯ ರಕ್ಷಣೆಗಾಗಿ ಕಾನೂನು ವ್ಯವಸ್ಥೆಯು ಹೂಡಿರುವ ಸಂಚೇ ಈ ಪ್ರಕರಣ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಮೊಕದ್ದಮೆಯ ಮೂಲಕ ಸರಕಾರವು ಸುಬ್ಬಯ್ಯನ ಸಾವನ್ನು ಮಂದಿಟ್ಟುಕೊಂಡು ಕಯ್ಯೂರಿನ ರೈತ ಸಂಘವನ್ನು ನಾಶ ಮಾಡಲು ಯತ್ನಿಸುತ್ತದೆ. ಘಟನೆಯ ದಿನ ತಲಶೇರಿಯ ರಾತ್ರಿ ಶಾಲೆಯಲ್ಲಿ ಪಾಠವನ್ನು ಹೇಳುತ್ತಿದ್ದ ಮಾಸ್ತರು, ಹಲವಾರು ಮೈಲುಗಳಾಚೆ ಇದ್ದ ಪ್ರಭು ಮತ್ತಿತರರು, ಘಟನೆ ನಡೆದ ಸ್ಥಳದಲ್ಲಿ ಇರದಿದ್ದ ಅಪ್ಪು, ಚಿರುಕಂಡ ಮತ್ತು ಅವರ ಹೆತ್ತವರು, ಶಾಂತವಾಗಿ ಮೆರವಣಿಗೆಯನ್ನು ನಡೆಸುತ್ತಿದ್ದ ರೈತರನ್ನು ಆರೋಪಿಗಳನ್ನಾಗಿ ಮಾಡುತ್ತದೆ. ರೈತರು ಕೊಲೆ ಮಾಡಿದರೆಂದು ಸಾಬೀತುಪಡಿಸಲು ಆಡಳಿತ ವರ್ಗಕ್ಕೆ ಸಾಧ್ಯವಿಲ್ಲದಿದ್ದುದರಿಂದ, ಅವರು ಸರಕಾರವನ್ನು ಉರುಳಿಸಲು ಸಂಚು ಹೂಡಿದರೆಂಬ ಆರೋಪವನ್ನು ಹೊರಿಸಿ ಪ್ರಕರಣಕ್ಕೆ ಗಂಭೀರ ರೂಪವನ್ನು ಕೊಡಲು ಹೆಣಗುತ್ತದೆ. ಕ್ರಾಂತಿಕಾರಿಗಳ ಪರ ನಿಂತಿದ್ದ ನ್ಯಾಯವಾದಿ ರಾಜಾರಾಯರು ಸುಳ್ಳು ಸಾಕ್ಷಿ ಹೇಳಿದವರನ್ನು ಪಾಟೀಸವಾಲುಗಳಿಂದ ಮಣಿಸಿ ಅವರು ಸುಳ್ಳುಗಾರರೆಂದು ಸಾಬೀತು ಪಡಿಸಿದರೂ ಹೋರಾಟಗಾರರನ್ನು ಹುಡುಕುವ ನೆಪದಲ್ಲಿ ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿದಾಗ, ಯಾವುದೇ ವಿವೇಚನೆಯಿಲ್ಲದೆ ಬಂಧನಗಳಾದಾಗ ಅದನ್ನು ನೋಡಲಾರದೆ ಶರಣಾದ ಅಪ್ಪು ಮತ್ತು ಅಬೂಬಕರ್ ಪರವಾಗಿ ಸಾಕ್ಷಿ ನುಡಿದವರ ಸಂಖ್ಯೆ ಕಡಿಮೆ. ಹಾಗಾಗಿ ಗೊಂದಲ ಉಂಟಾದುದರಿಂದ ಪ್ರಕರಣವನ್ನು ಮಂಗಳೂರು ನ್ಯಾಯಾಲಯದಿಂದ ಸೆಷನ್ಸ್ ಕೋರ್ಟಿಗೆ ವರ್ಗಾಯಿಸಲಾಗುತ್ತದೆ. ರಾಜದ್ರೋಹದ ಚಟುವಟಿಕೆಯ ಅಪರಾಧಕ್ಕಾಗಿ ಮಾಸ್ತರು, ಅಪ್ಪು, ಚಿರುಕಂಡ, ಕಣ್ಣ, ಕುಂಞಂಬು, ಅಬೂಬಕರ್ ಮತ್ತು ಇಪ್ಪತ್ತು ಜನರಿಗೆ ಐದು ವರ್ಷಗಳ ಕಠಿಣ ಕಾರಾಗೃಹವಾಸ, ಕೃಷ್ಣನ್ ನಾಯರ್ ಮತ್ತು ಇತರ ಹದಿನೆಂಟು ಜನರಿಗೆ ಎರಡು ವರ್ಷಗಳ ಸೆರೆಮನೆ, ಪ್ರಭು, ಕೇಳು ನಾಯರ್, ಧಾಂಡಿಗ, ಚಂದು, ಅಪ್ಪುವಿನ ತಂದೆ ಮತ್ತು ಚಿರುಕಂಡನ ತಂದೆಗೆ ಬಿಡುಗಡೆ, ಸುಬ್ಬಯ್ಯನನ್ನು ಕೊಲೆ ಮಾಡಿದ ತಪ್ಪಿಗೆ ಅಪ್ಪು, ಚಿರುಕಂಡ, ಕುಂಞಂಬು ಮತ್ತು ಅಬೂಬಕರಿಗೆ ಮರಣ ದಂಡನೆಯನ್ನು ವಿಧಿಸಲಾಗುತ್ತದೆ. ಕುಟ್ಟಿಕೃಷ್ಣನು ಅಪ್ರಾಪ್ತ ವಯಸ್ಸಿನವನಾಗಿದ್ದುದರಿಂದ ಮರಣದಂಡನೆಯ ಬದಲು ಖೈದಿಗಳ ಶಿಕ್ಷಣ ಶಾಲೆಗೆ ರವಾನಿಸಲಾಗುತ್ತದೆ. ಹೀಗೆ ಕಯ್ಯೂರಿನ ಜನರ ಮನದಲ್ಲಿ ನಡುಕ ಹುಟ್ಟಿಸುವ ಸಲುವಾಗಿ ನಾಲ್ವರು ಹೋರಾಟಗಾರರ ಕೊರಳಿಗೆ ಕುಣಿಕೆ ಬಿಗಿಯುವ ಮೂಲಕ ಕಾನೂನು ವ್ಯವಸ್ಥೆಯು ತಾನು ಆಯೋಜಿಸಿದ ಕಪಟ ನಾಟಕಕ್ಕೆ ತೆರೆಯನ್ನು ಎಳೆಯುತ್ತದೆ.

‘ಕಯ್ಯೂರು ವೀರಗಾಥಾ’ ನಾಟಕವು ಮುಗಿದ ಬಳಿಕ ಹುತಾತ್ಮರಿಗೆ ವಿಪ್ಲವ ವಂದನೆಯನ್ನು ಸಲ್ಲಿಸಿದ ಬಳಿಕ “ನಿಮ್ಮ ಕನಸುಗಳೆಲ್ಲ ನನಸಾಗಿಲ್ಲ ಎಂದು ಬಲ್ಲೆವು. ನಮ್ಮ ನಾಡೇನೋ ಸ್ವತಂತ್ರವಾಗಿದೆ. ಆದರೆ ಇದಿನ್ನೂ ಸಮತೆಯ, ಸೋದರತ್ವದ, ಸುಖಶಾಂತಿಯ ಬೀಡಾಗಿಲ್ಲ. ಕಲ್ಲುಮುಳ್ಳಿನ ಹಾದಿ ನಡೆದು ಬಂದು ಒಂದು ಘಟ್ಟನ್ನೀಗ ತಲುಪಿದ್ದೇವೆ. ಇಲ್ಲಿಂದ ಇನ್ನೊಂದು ಘಟ್ಟಕ್ಕೆ ಮುಂದಿನ ಪಯಣ. ಅದನ್ನೂ ಯಶಸ್ವಿಯಾಗಿಯೇ ಮುಗಿಸಿ ಗುರಿ ಸೇರುವ ವಿಷಯದಲ್ಲಿ ನಮಗೆ ಸಂದೇಹವಿಲ್ಲ. ವೀರ ಪರಂಪರೆಯುಳ್ಳ, ನಿರ್ಮಲ ಚಾರಿತ್ರ್ಯವುಳ್ಳ ನಮ್ಮ ಜನಕ್ಕೆ ಆ ಶಕ್ತಿಯಿದೆ” (ಪುಟ 304) ಎನ್ನುವ ನಿರೂಪಕನ ಮಾತಿಗೆ ಸಾಹಿತ್ಯಕ ಮಹತ್ವವಿದೆ. ಸ್ವಾತಂತ್ರ್ಯೋತ್ತರ ಕಾಲದ ಭಾರತದಲ್ಲಿ ಆದರ್ಶದ ಕನಸು ಒಡೆದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ನೀತಿ ನ್ಯಾಯ ವ್ಯವಸ್ಥೆಗಳು ಸಡಿಲಗೊಂಡದ್ದರಿಂದ, ಬದುಕಿನಲ್ಲಿ ಭ್ರಷ್ಟತೆ, ಗೊಂದಲಗಳು ಹೆಚ್ಚಿದಾಗ ಆಶಾವಾದಿಯಾಗಿದ್ದ ಮನುಷ್ಯನು ತಾನು ನಂಬಿಕೊಂಡಿದ್ದ ಮೌಲ್ಯಗಳ ಕುಸಿತದಿಂದ, ಕಂಡ ಕನಸುಗಳು ಭಗ್ನವಾದುದರಿಂದ ನಿರೀಕ್ಷೆಗಳೆಲ್ಲವೂ ಸುಳ್ಳಾಗಿ ಆತನ ಸಂಬಂಧಗಳಲ್ಲಿ ಭಿನ್ನತೆಗಳು ಕಂಡುಬಂದ ಸಂದರ್ಭದಲ್ಲಿ ಹುಟ್ಟಿದ ನವ್ಯ ಪ್ರಜ್ಞೆಯು ಸಾಹಿತ್ಯದ ಪ್ರಮುಖ ಪ್ರಕಾರಗಳಾದ ಕತೆ, ಕವಿತೆ, ಕಾದಂಬರಿಗಳ ಮೇಲೆ ತನ್ನ ಪ್ರಭಾವವನ್ನು ಬೀರಿ ಬರವಣಿಗೆಯ ದಿಕ್ಕನ್ನು ಬದಲಿಸಿ ನಿರಾಶಾವಾದವನ್ನೇ ಹೆಚ್ಚು ಬಿತ್ತರಿಸುತ್ತಿದ್ದ ಹೊತ್ತಿನಲ್ಲಿ ಕಾಣಿಸಿಕೊಂಡ ಈ ಕೃತಿಯು ಆಶಾವಾದವನ್ನು ಪ್ರತಿಪಾದಿಸಿ, ಧನಾತ್ಮಕ ನೋಟವನ್ನು ಬೀರುತ್ತದೆ. ಶೋಷಣೆ, ಕ್ರೌರ್ಯ, ಹಿಂಸೆಗಳ ಪ್ರಾಬಲ್ಯವನ್ನು ನಿಷ್ಠುರವಾಗಿ ಚಿತ್ರಿಸುತ್ತಿದ್ದರೂ ಸಿದ್ಧಾಂತವನ್ನು ಬದುಕಿನ ಸತ್ವವಾಗಿಟ್ಟುಕೊಂಡು ಬದುಕಿನ ಭರವಸೆ ಮತ್ತು ಶೋಷಿತರ ಹೋರಾಟದ ಗೆಲುವಿನ ಮೇಲಿರುವ ನಂಬಿಕೆಯನ್ನು ಪ್ರತಿಪಾದಿಸುತ್ತದೆ. ಚಿಕ್ಕಪುಟ್ಟ ವಾಕ್ಯಗಳ ಮೂಲಕ ಸ್ಪಷ್ಟವಾದ, ಮೂರ್ತ ವಿವರಗಳಿಂದ ಕೂಡಿದ, ಭಾವತೀಕ್ಷಣತೆಯಿಂದ ಶಕ್ತಿಯನ್ನು ಪಡೆಯುವ ಶೈಲಿ, ವೇಗವಾಗಿ ಸಾಗುವ ಕ್ರಿಯೆ, ಬಾಣವು ಗುರಿಯನ್ನು ಮುಟ್ಟುವಂತೆ ಪರಿಣಾಮವನ್ನು ಸಾಧಿಸುವ ಕಲೆಗಾರಿಕೆಯನ್ನು ಹೊಂದಿದ ಕೃತಿಯು ಕನ್ನಡ ಕಾದಂಬರಿಗಳ ಪೈಕಿ ಮುಖ್ಯವೆನಿಸಿಕೊಳ್ಳುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai