‘ಸರಕಾರ ಕೊಡುವ ಸಂಬಳಕ್ಕೆ ಸಮನಾಗಿ ದುಡಿದರೆ ಸಾಕುʼ ಎಂಬವರೇ ನಮ್ಮಲ್ಲಿ ಹೆಚ್ಚು. ʻಸಂಬಳಕ್ಕೆ ಸಮನಾಗಿʼ ಎಂಬುದರ ಅರ್ಥವ್ಯಾಪ್ತಿ ಅವರವರಿಗೆ ಸಂಬಂಧಪಟ್ಟದ್ದು. ಇಲ್ಲೊಬ್ಬರು ಹಳ್ಳಿಮೇಷ್ಟ್ರಿದ್ದಾರೆ. ಸುಳ್ಯ ತಾಲೂಕಿನ ಮರ್ಕಂಜದ ಶಿವಶಂಕರ ಭಟ್ಟರು. ಮಂಗಳೂರಿನ ಕಪಿತಾನಿಯೋ ಶಿಕ್ಷಣ ಸಂಸ್ಥೆಯ ಕ್ರೀಡಾಶಿಕ್ಷಕರಾಗಿ ೧೯೮೬ರಲ್ಲಿ ವೃತ್ತಿಜೀವನ ಆರಂಭಿಸಿದರು. ಪ್ರಾಥಮಿಕ ಶಾಲೆಯಿಂದ ತೊಡಗಿ ಅದೇ ಕ್ಯಾಂಪಸ್ಸಿನಲ್ಲಿದ್ದ ಕಪಿತಾನಿಯೋ ಪ್ರೌಢಶಾಲೆ ಹಾಗೂ ಶಿಕ್ಷಕಿ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೂ ಕ್ರೀಡಾಶಿಕ್ಷಣ ನೀಡುತ್ತ ಬಂದರು. ವಿದ್ಯಾರ್ಥಿಗಳನ್ನು ಭಾಷಣಕ್ಕೆ, ಚರ್ಚಾಸ್ಪರ್ಧೆಗೆ, ನಾಟಕಕ್ಕೆ ತರಬೇತಿಗೊಳಿಸುವುದರಲ್ಲೂ ಶಿವಶಂಕರ್ ಸಿದ್ಧಹಸ್ತರು. ಜೊತೆಗೆ ಕನ್ನಡ, ಸಮಾಜ ವಿಜ್ಞಾನ ಇತ್ಯಾದಿ ಪಾಠಮಾಡುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದರು. ಕಪಿತಾನಿಯೋ ಕ್ಯಾಂಪಸ್ಸಿನೊಳಗೆ ಯಾವ ಸಂಸ್ಥೆಯ ಯಾವ ಕಾರ್ಯಕ್ರಮವಿದ್ದರೂ ಅದನ್ನು ನಗುನಗುತ್ತ ಸಂಘಟಿಸುವ ಜಾಯಮಾನ ಅವರದು. ತಾಲೂಕು ಮಟ್ಟದ್ದಿರಲಿ, ಜಿಲ್ಲಾಮಟ್ಟದ್ದಿರಲಿ- ಕ್ರೀಡಾಕೂಟಗಳನ್ನು ಆಯೋಜಿಸುವುದರಲ್ಲಿ ಅವರದು ಎತ್ತಿದ ಕೈ. ಶಾಲೆಯ ಸಂಬಳಕ್ಕೆ ತಕ್ಕಷ್ಟು ದುಡಿದರೆ ಸಾಕು ಎಂಬ ಯೋಚನೆಯನ್ನು ಶಿವಶಂಕರ್ ಎಂದೂ ಮಾಡಿದವರಲ್ಲ. ಅವರಿಗೆ ಕಾಯಕವೇ ಕೈಲಾಸ.
ಹತ್ತು ವರ್ಷಗಳ ತರುವಾಯ (೧೯೯೬) ಕಪಿತಾನಿಯೋ ಶಾಲೆಯಿಂದ -ತಾನು ಕಲಿತ- ಮಿತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ಸೇರ್ಪಡೆಯಾದರು. ಬಳಿಕ ೨೦೦೩ರಲ್ಲಿ ಸುಳ್ಯ ತಾಲೂಕಿನ ಕೊಯ್ಕುಳಿ ದುಗ್ಗಲಡ್ಕ ಶಾಲೆಗೆ ವರ್ಗವಾದರು. ಅವರು ಬಂದು ಸೇರಬೇಕಿದ್ದರೆ ಆ ಶಾಲೆಯಲ್ಲಿ ಕೊಠಡಿಗಳ ಕೊರತೆ ಕಂಡು ಬಂತು. ಆಗಲೇ ಕಟಿಬದ್ಧರಾದ ಶಿವಶಂಕರ್ ಸಾರ್ವಜನಿಕರ ದೇಣಿಗೆ ಸಂಗ್ರಹಕ್ಕೆ ಮುಂದಾದರು. ಜೊತೆಗೆ SSAಯ ಸಹಾಯವನ್ನೂ ಪಡೆದರು. ಐದು ಕೊಠಡಿಗಳ ನಿರ್ಮಾಣ, ಜೊತೆಗೆ ರಂಗಮಂದಿರದ ನಿರ್ಮಾಣವೂ ಆಯಿತು!
ಒಂದು ವರ್ಷ ಪದಂಗಡಿ ಸ.ಹಿ.ಪ್ರಾ ಶಾಲೆಯಲ್ಲಿದ್ದ ಶಿವಶಂಕರ್, ಅಲ್ಲಿಯೂ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕಾರಣರಾದರು. ೨೦೦೯ರಲ್ಲಿ ಅಂಡಿಂಜೆಯ ಸರಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಬಂದ ಶಿವಶಂಕರ್ ತಮ್ಮ ಬಹುಮುಖೀ ಸಾಮರ್ಥ್ಯವನ್ನು ಅಲ್ಲೂ ಶ್ರುತಪಡಿಸಿದರು. ಪ್ರಸಿದ್ಧ ರಂಗಕಲಾವಿದೆಯೂ ಆಗಿನ ರಾಜ್ಯಸಭಾ ಸದಸ್ಯೆಯೂ ಆಗಿದ್ದ ಬಿ.ಜಯಶ್ರೀಯವರನ್ನು ಶಾಲೆಗೆ ಕರೆಯಿಸಿ ಅವರ ರಾಜ್ಯಸಭಾ ಫಂಡಿನ ಮೂಲಕ ಶಾಲೆಗೊಂದು ಸುಂದರ ಗ್ರಂಥಾಲಯವನ್ನೂ ಶಾಲಾ ಶೌಚಾಲಯವನ್ನೂ ಕಟ್ಟಿಸಿಕೊಡುವಲ್ಲಿ ಸಫಲರಾದರು. ಶಾಲೆಗೆ ಬೇಕಾದ ಪೀಠೋಪಕರಣಗಳನ್ನು, ಗ್ರಂಥಾಲಯಕ್ಕೆ ಬೇಕಾಗುವ ಪುಸ್ತಕಗಳನ್ನು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಯಾವತ್ತೂ ಸರಕಾರದ ಕೈ ಕಾಯಲಿಲ್ಲ; ಸಾರ್ವಜನಿಕರಿಂದ ಸಂಗ್ರಹಿಸುವ ಕೆಲಸವನ್ನು ತನ್ಮಯತೆಯಿಂದ ಮಾಡಿದರು. ಗ್ರಾಮೀಣ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಎಳನೀರು ಗುತ್ಯಡ್ಕವೆಂಬ ಕಾಡಿನಂಚಿನ ಶಾಲೆಗೂ ಬಿ.ಜಯಶ್ರೀಯವರ ಮೂಲಕ ಧನಸಹಾಯ ಪಡೆದು ಎರಡು ಕೊಠಡಿಗಳನ್ನು ನಿರ್ಮಿಸುವಲ್ಲಿ ಕಾರಣೀಭೂತರಾದರು. ೨೦೨೩ರಲ್ಲಿ ತಾವು -ಪ್ರಭಾರ ಮುಖ್ಯೋಪಾಧ್ಯಾಯರಾಗಿಯೂ- ದುಡಿದ ಅಂಡಿಂಜೆ ಶಾಲೆಗೆ ನವೀಕೃತ ಸಭಾಭವನ, ಭೋಜನಾಲಯ, ಪ್ರವೇಶದ್ವಾರ, ಮಕ್ಕಳ ಪ್ಲೇಹೋಮ್ ಇತ್ಯಾದಿಗಳನ್ನು ಶಾಲಾ ಹಳೆವಿದ್ಯಾರ್ಥಿಗಳಿಂದ, ಊರ-ಪರವೂರ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಕಟ್ಟಿಸಿದರು.
ಶಿಕ್ಷಕರ ಶ್ರೋಯೋಭಿವೃದ್ಧಿಗಾಗಿಯೂ ಶಿವಶಂಕರ್ ಭಟ್ಟರು ಸಾಕಷ್ಟು ದುಡಿದಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಳ್ಯ ತಾಲೂಕು ಕಾರ್ಯದರ್ಶಿಯಾಗಿ ಮೂರು ಬಾರಿ, ಜಿಲ್ಲಾ ಕಾರ್ಯದರ್ಶಿಯಾಗಿ ಎರಡು ಬಾರಿ. ಜಿಲ್ಲಾಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಶಿಕ್ಷಕರ ಬೇಡಿಕೆಗಳನ್ನು ಅನುಲಕ್ಷಿಸಿ ನಡೆಸಲಾದ ಹಲವಾರು ಪ್ರತಿಭಟನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿವಶಂಕರ್ ಯಾವತ್ತೂ ಒತ್ತು ನೀಡುತ್ತಿದ್ದರು. ಮಕ್ಕಳನ್ನು ಸ್ಕಾಲರ್ಶಿಪ್ ಪರೀಕ್ಷೆಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಸಿದ್ಧಪಡಿಸುವುದು, ನಿರಂತರ ಕ್ರೀಡೋತ್ಸವಗಳನ್ನು ಏರ್ಪಡಿಸುವುದು ಶಿವಶಂಕರ ಭಟ್ ಅವರಿಗೆ ಸದಾ ಪ್ರಿಯವಾದ ಕೆಲಸ. ವಿದ್ಯಾರ್ಥಿಗಳೊಂದಿಗಿನ, ಸಹೋದ್ಯೋಗಿಗಳೊಂದಿಗಿನ, ಸಾರ್ವಜನಿಕರೊಂದಿಗಿನ ಸೌಹಾರ್ದಯುತ ಸಂಬಂಧ ನಿಮಿತ್ತವಾಗಿಯೇ ಅವರು ದುಡಿಮೆಗೈದ ಪ್ರತಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಭಟ್ಟರಿಗೆ ಸಾಧ್ಯವಾಯಿತು.
ಶಾಲಾ ಸಮಯಕ್ಕಿಂತ ಒಂದುಗಂಟೆ ಮುಂಚಿತವಾಗಿ ತಮ್ಮ ಹಾಜರಾತಿಯನ್ನು ಖಚಿತ ಪಡಿಸಿಕೊಳ್ಳುತ್ತಿದ್ದುದು ಅವರ ರೂಢಿ. ತಮ್ಮ ತೋಟದಲ್ಲಿ ಬೆಳೆದ ಬಾಳೆಹಣ್ಣೋ ತೆಂಗಿನ ಕಾಯಿಯೋ ಮಕ್ಕಳ ಬಿಸಿಯೂಟಕ್ಕೆ ಬಳಸಿಕೊಳ್ಳುವುದರಲ್ಲಿ ಅವರಿಗೆ ನೆಮ್ಮದಿ.
ಶಾಲೆಯನ್ನು ಮನೆಯಂತೆ ಪ್ರೀತಿಸುತ್ತಿದ್ದ ಶಿವಶಂಕರ ಭಟ್ಟರಿಗೆ ಇದೀಗ ವಿದಾಯದ ಸಮಯ. ಇದೇ (ಮೇ) ತಿಂಗಳ ೩೧ಕ್ಕೆ ತಮ್ಮ ಮೂವತ್ತೊಂಬತ್ತು ವರ್ಷಗಳ ಅಧ್ಯಾಪನಕ್ಕೆ ವಿರಾಮ ಹಾಕಿ ಮರಳಿ ಹಳ್ಳಿಗೆ ಮರಳಲಿದ್ದಾರೆ ಈ ನಮ್ಮ ಹಳ್ಳಿ ಮೇಷ್ಟ್ರು!
*****
- ಶಿವಶಂಕರ ಭಟ್ ಓರ್ವ ಕಾಯಕಜೀವಿ ಮೇಷ್ಟ್ರು, ವೃತ್ತಿಯಿಂದ ಮೊನ್ನೆ೩೧ಕ್ಕೆ ನಿವೃತ್ತರಾಗಿದ್ದಾರೆ. ಇದೀಗ ಅವರಿಗೆ ಸಾರ್ವಜನಿಕ ಅಭಿನಂದನ ಕಾರ್ಯಕ್ರಮ ೧೪ಕ್ಕೆ ನಡೆಯುತ್ತಿದೆ.









4 thoughts on “ಶಾಲೆ ಕಟ್ಟುವ ಹಳ್ಳಿ ಮೇಷ್ಟ್ರು- ಕೆ. ಶಿವಶಂಕರ ಭಟ್”
ಶಿವಶಂಕರ್ ಭಟ್ಟರಂತ ಒಬ್ಬ ಶಿಕ್ಷಕ ಪ್ರತಿಶಾಲೆಯಲ್ಲಿ ಇದ್ದರೆ ಶಾಲೆ, ಮಕ್ಕಳು ಜೀವನಪರ್ಯಂತ ಅವರನ್ನು ಜ್ಞಾಪಿಸಿಕೊಳ್ಳುತ್ತಿರುತ್ತಾರೆ. ಅಭಿನಂದನೆಗಳು.
ಇಂತಹ ಸಮರ್ಪಣಾ ಮನೋಭಾವದ ಶಿಕ್ಷಕರನ್ನು ನಾನೆಂದೂ ನೋಡಿರಲೆ ಇಲ್ಲ.ಇಂತಹ ಕಾಯಕ ಜೀವಿಗಳನ್ನು ಕಂಡ ಸಂಸ್ಥೆ ಮತ್ತು ವಿದ್ಯಾರ್ಥಿಗಳು ಧನ್ಯರು!
ಇಂತಹ ಶಿಕ್ಷಕರು ಬೇಕು ಈಗ ನಮ್ಮ ಸಮಾಜಕ್ಕೆ. ಅವರ ವೃತ್ತಿಪರತೆ ಕೆಲವರಿಗೆ ಮಾರ್ಗದರ್ಶಕ ಆದರೂ ಸಾಕು. ಅಭಿನಂದನೆಗಳು
ಉತ್ತಮ ಬರಹ. ವ್ಯಕ್ತಿಯ ಬದುಕಿನ ಬಗ್ಗೆ ನೈಜ ಚಿತ್ರಣ ನೀಡಿದ ಪ್ರೇರಣದಾಯಿ ಲೇಖನ. ಲೇಖಕರು ಹಿರಿಯ ವಿದ್ವಾಂಸರು.