ಅಗಲಿದ ಎಚ್ಚೆಸ್ವಿಯವರಿಗೆ ಸಂಭ್ರಮದ ಕವಿ-ಕಾವ್ಯನಮನ


ಇತ್ತೀಚೆಗೆ ಗತಿಸಿದ ಕನ್ನಡದ ʻಕಾವ್ಯ ಕಾಮಧೇನುʼ ಎನಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಎಚ್.‌ ಎಸ್.‌ ವೆಂಕಟೇಶಮೂರ್ತಿ ಅವರಿಗೆ ಸಾರ್ವಜನಿಕವಾಗಿ ಗೌರವಾರ್ಪಣೆ ಮಾಡುವ ಅಪೂರ್ವ ಅವಕಾಶವೊಂದನ್ನು ಕಪ್ಪಣ್ಣ ಅಂಗಳ ಹಾಗೂ ಸಮಂಜಸ ತಂಡಗಳು ಎನ್‌ ಆರ್‌ ಕಾಲೋನಿಯ ಸಿ. ಅಶ್ವತ್ಥ ಕಲಾಭವನದಲ್ಲಿ ಕಲ್ಪಿಸಿಕೊಟ್ಟರು. ಕನ್ನಡ ಸಾಹಿತ್ಯ ಲೋಕದ ಸರ್ವ ಪ್ರಕಾರಗಳಲ್ಲೂ ಬದ್ಧತೆಯಿಂದ ಕೃಷಿ ಮಾಡಿದ ಎಚ್ಚೆಸ್ವಿ ಅವರಿಗೆ ಆ ಎಲ್ಲ ಪ್ರಕಾರಗಳಲ್ಲೂ ಅಪಾರ ಅಭಿಮಾನಿಗಳು. ಪೂರ್ವಾಹ್ನ ನಿಗದಿತ ಸಮಯಕ್ಕೂ ಮುಂಚಿತವಾಗಿ ಅಭಿಮಾನಿಗಳು ಬಂದು ಸಭಾಂಗಣ ತುಂಬಿಕೊಂಡದ್ದು ನೋಡಿ ತುಸು ತಡವಾಗಿ ಬಂದ ಅತಿಥಿಗಳೂ ತಬ್ಬಿಬ್ಬು

ಕಾರ್ಯಕ್ರಮದ ಸಂಯೋಜಕರಲ್ಲೊಬ್ಬರಾದ ಶ್ರೀನಿವಾಸ ಜಿ. ಕಪ್ಪಣ್ಣ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯದ ʻಅತ್ಯತ್ತಮ ಸಾಂಸ್ಕೃತಿಕ ಸಂಘಟಕʼ ಎಂದು ಹೆಸರು ಪಡೆದವರು. ತಮ್ಮ ಹೆಸರಿಗೆ ತಕ್ಕಂತೆ ಸರಳವಾಗಿಯಾದರೂ ಗಂಭೀರವಾದ ಕಾರ್ಯಕ್ರಮವನ್ನೇ ಆಯೋಜಿಸಿದ್ದರು. ಇನ್ನೋರ್ವ ಸಾಂಸ್ಕೃತಿಕ ಸಂಘಟಕ, ಸಾಹಿತಿಗಳೂ ಆದ ಕೆ. ಈ. ರಾಧಾಕೃಷ್ಣ ಅವರು ಕಪ್ಪಣ್ಣ ಅವರಿಗೆ ಸಾಥ್‌ ನೀಡಿದರು.

ಕಾರ್ಯಕ್ರಮದ ವಿನ್ಯಾಸವೇ ವಿನೂತನವಾಗಿತ್ತು. ವೇದಿಕೆಯಲ್ಲಿ ಯಾವುದೇ ಕುರ್ಚಿಗಳಿರಲಿಲ್ಲ. ಕನ್ನಡ ಭಾವಗೀತೆಗಳ ಶ್ರೇಷ್ಠ ಗಾಯಕಿಯರಲ್ಲೊಬ್ಬರಾದ ಎಂ.ಡಿ. ಪಲ್ಲವಿಯವರು ವೇದಿಕೆಯ ಮಧ್ಯಭಾಗದಲ್ಲಿ ಕುಳಿತಿದ್ದರು. ಅವರ ಬಲಬದಿಗೆ ತಬ್ಲಾ ನುಡಿಸುವ ಶ್ರೀನಿವಾಸ್‌, ಎಡಕ್ಕೆ ಗಿಟಾರ್‌ ನುಡಿಸುವ ಶ್ರೀನಿವಾಸ್!‌ ಪಲ್ಲವಿಯವರು ಎಚ್ಚೆಸ್ವಿಯವರ ಜನಪ್ರಿಯ ಹಾಡುಗಳನ್ನಷ್ಟೇ ಅಲ್ಲ; ಅಪರೂಪದ ಹಾಡುಗಳನ್ನೂ ಆಯ್ದು ಮೋಹಕವಾಗಿ ಹಾಡಿದರು. ಅವರು ಒಂದು ಹಾಡು ಹಾಡಿದರೆ ಮರುಕ್ಷಣದಲ್ಲಿ ಓರ್ವಸಾಹಿತಿಯಿಂದ ಕೆಲ ಮಾತುಗಳು, ಮತ್ತೆ ಪಲ್ಲವಿಯವರಿಗೆ ವೇದಿಕೆ, ಮತ್ತೆ ಮಾತು. ಕೆ.ಈ ರಾಧಾಕೃಷ್ಣ, ಮಲ್ಲೇಪುರಂ ಜಿ. ವೆಂಕಟೇಶ್‌, ಬಿ.ಆರ್‌ ಲಕ್ಷ್ಮಣರಾವ್‌, ನಾ ದಾಮೋದರ ಶೆಟ್ಟಿ, ಫಾ. ಚಾರ್ಲ್ಸ್‌ ಲಸ್ರಾಡೋ, ಸುಂದರ್‌ ವೀಣಾ ಎಚ್ಚೆಸ್ವಿಯವರ ವ್ಯಕ್ತಿತ್ವವನ್ನೂ ಅವರ ಸಾಹಿತ್ಯದ ವಿವಿಧ ಮುಖಗಳನ್ನೂ ಕಂಡರಿಸಿದರು. ಎಲ್ಲರ ಮಾತುಗಳು ಹೃಸ್ವರೂಪದ್ದಾಗಿದ್ದು ಎಚ್ಚೆಸ್ವಿಯವರನ್ನು ಬಣ್ಣಿಸಿದ್ದು ʻಕಿರಿದರೊಳ್‌ ಪಿರಿದರ್ಥಮ್‌ʼ ಎಂಬಂತಿತ್ತು.

ಎಚ್ಚೆಸ್ವಿಯವರಿಗೆ ರಂಗ ಗೌರವ ಸಲ್ಲಿಸುವ ಜವಾಬ್ದಾರಿ ಹೊತ್ತಿದ್ದ ಖ್ಯಾತ ರಂಗ ನಿರ್ದೇಶಕಿ ಬಿ.ಜಯಶ್ರೀ ಅವರು ಎಚ್ಚೆಸ್ವಿಯವರ ನಾಟಕಗಳ ಕೆಲವು ಸಂಭಾಷಣೆ ಹಾಗೂ ಹಾಡುಗಳನ್ನು ಉಚ್ಛಕಂಠದಲ್ಲಿ ಹಾಡಿ, ಆಡಿ ತೋರಿಸಿ ಸಭೆಗೆ ಮತ್ತಷ್ಟು ಮೆರಗು ನೀಡಿದರು.

ಎಚ್ ಎಸ್ ವೆಂಕಟೇಶ ಮೂರ್ತಿಯವರ ನಗುಮೊಗದ ಒಂದು ಭಾವಚಿತ್ರ ರಂಗಶೀರ್ಷದಲ್ಲಿ! ಮುಖ್ಯ ಅತಿಥಿಗಳಾದ ಐ.ಎಂ. ವಿಠ್ಠಲ ಮೂರ್ತಿಯವರು ಆ ಭಾವಚಿತ್ರದ ಪ್ರಸ್ತುತತೆಯ ಬಗ್ಗೇನೆ ಮಾತನಾಡಿದರು. ಇನ್ನೋರ್ವ ಅತಿಥಿಗಳಾಗಿದ್ದ ಪ್ರೊ. ಹಂಪನಾ ಅವರು ಹಿರಿತಲೆಗಳು ಅಗಲಿದಾಗ ಉಂಟಾಗುವ ಶೂನ್ಯವನ್ನು ನೆನಪಿಸಿಕೊಂಡರು.

ಇಡಿಯ ಕಾರ್ಯಕ್ರಮ ಎಚ್ಚೆಸ್ವಿಯವರ ಆತ್ಮಕ್ಕೆ ಸಂಭ್ರಮ ತರುವ ರೂಪದ್ದಾಗಿದ್ದೇ ಹೊರತು ಯಾರೂ ಮ್ಲಾನ ಮುಖವಿಟ್ಟು ಮಾತನಾಡಿಲ್ಲ. ʻನೀವು ನಮ್ಮ ಜೊತೆ ಹೇಗಿದ್ದಿರೋ ನಾವೂ ನಿಮ್ಮ ಜೊತೆ ಹಾಗೆಯೇ ಇದ್ದೇವೆʼ ಎಂಬಂತಿತ್ತು ಕಾರ್ಯಕ್ರಮ.
ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟ ಶ್ರೀನಿವಾಸ್‌ ಜಿ ಕಪ್ಪಣ್ಣ ಹಾಗೂ ಅವರಿಗೆ ಬೆಂಬಲವಾಗಿ ನಿಂತವರಿಗೆಲ್ಲ ಹೃತ್ಪೂರ್ವಕ ವಂದನೆಗಳು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಅಗಲಿದ ಎಚ್ಚೆಸ್ವಿಯವರಿಗೆ ಸಂಭ್ರಮದ ಕವಿ-ಕಾವ್ಯನಮನ”

  1. Raghavendra Mangalore

    ” ನೀವು ನಮ್ಮ ಜೊತೆ ಹೇಗಿದ್ದಿರೋ ನಾವು ನಿಮ್ಮ ಜೊತೆ ಹಾಗೆಯೇ ಇದ್ದೇವೆ ” ಈ ಒಂದು ವಾಕ್ಯ ಸಾಕು ಕವಿ – ಕಾವ್ಯ ನಮನ ಹೇಗೆ ನಡೆಯಿತು ಎಂದು ಹೇಳುವುದಕ್ಕೆ. ಕಾರ್ಯಕ್ರಮದ ವರದಿ ಮಾಡಿದ ಡಾ. ನಾ. ದಾಮೋದರ ಶೆಟ್ಟಿ ಅವರಿಗೆ ಅಭಿನಂದನೆಗಳು.

  2. ಖ್ಯಾತ ಸಾಹಿತಿ ಕವಿ ಹೆಚ್ ಎಸ್ ವಿ ಅವರಿಗಾಗಿ ಆಯೋಜಿಸಿದ ಕಾವ್ಯ ನಮನ ಕಾರ್ಯಕ್ರಮ ಬಹಳ ಅರ್ಥಪೂರ್ಣ ಹಾಗೂ ಅದ್ಭುತವಾಗಿದೆ.. 🙏.
    ಮುಂದಿನ ದಿನಗಳಲ್ಲಿ ಇಂಥ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೆ ದಯವಿಟ್ಟು ಒಂದು ವಾರ ಮೊದಲೇ ತಿಳಿಸಿದರೆ ಆಸಕ್ತರು ಭಾಗವಹಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ

  3. Chintamani Sabhahit

    https://youtu.be/ky-KWkhXUXk?feature=shared
    ಈ ಕವನ ಪೂರ್ತಿ ಸ್ವಗತ ಭಾಷೆಯಲ್ಲಿದೆ!
    ನನ್ನ ಅನಿಸಿಕೆ: ಬುಡದಿಂದ ಕೊನೆಯವರೆಗೂ,ನಿಸರ್ಗದ ಪರಿಸರದಲ್ಲಿ ಕಾಣುವ ಎಲ್ಲ ಕ್ರಿಯೆಗಳು, ಆಕರಗಳು, ಪರಿಕರಗಳು, ಸಹಜವಾಗಿ ಮೂರ್ತವಾಗುವ ಆರ್ತ, ಪಾರಮಾರ್ಥಿಕ, ಆವೇಶರಹಿತ, ಸೌಜನ್ಯದಭಾವದಂತೆ, ತನ್ನ ಜೀವನವೂ ಅದೇ ತರಹದ ಅರ್ಪಣೆಯ ಪರಿಪೂರ್ಣತೆಯಲ್ಲಿ, ಪರಮೋಚ್ಛತಮ ಪರಮಾತ್ಮನಲ್ಲಿ ಲೀನವಾಗುವ ನಿರಾಗಸ ಆಶಯವೇ ಕವಿಯ ಪ್ರಾರ್ಥನೆ! ಸ್ವಂತ ಹೃದಯದ ತಂತುಗಳನ್ನೆಲ್ಲ, ಎಳೆ ಎಳೆಯಾಗಿ, ಬಿಚ್ಚಿಡುತ್ತಾ, ಬಿಚ್ಚಿಕೊಡುತ್ತ, ನಿರರ್ಗಳ ನಿಸ್ವಾರ್ಥತೆಯಲ್ಲಿ,ಪುನಃ ಪ್ರಕೃತಿಯಲ್ಲಿ ಕಳಚಿಬಿಡುವ, ಕಳಚಿಕೊಡುವ ಅಂತಿಮ ಹೃದಯಂಗಮ ಕ್ರತಜ್ಞತಾಭಾವದ ಉಲ್ಲಸಿತ ಭಾವನೆ, ಹದವಾಗಿ, ಮುದವಾಗಿ ಮೂಡಿಬಂದಿದೆ. ಕವಿ ಸಮಯದ ಕವಿ, ದಿ. ಎಚ್.ಎಸ್.ವೆಂಕಟೇಶಮೂರ್ತಿಯವರನ್ನು ನೆನಪಿಸುತ್ತ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai