ಮತ್ತೆ, ಮಂದ್ರಾವಲೋಕನ

ಎಸ್. ಎಲ್. ಭೈರಪ್ಪ

ನಿದ್ದೆ ಮಾಡದೆ ಹೊದ್ದು ಮಲಗದೆ ಅಳುವ ಕಂದ ಅಮ್ಮನ ಹಾಡು ಕೇಳಿದಾಕ್ಷಣ ಸುಮ್ಮನೇ ಮಲಗುತ್ತಿತ್ತು. ಜನ್ಮಜಾತವಾಗಿ ಆ ದೇಹದ ಕಣಕಣಗಳಲ್ಲಿ, ನರನಾಡಿಗಳಲ್ಲಿ ಸಂಗೀತದ ತಂತು ಮೀಟುತ್ತಿತ್ತು. ಹೌದು, ಬಹುಶಃ ಅದರಿಂದಲೇ ನಮ್ಮ ಭೈರಪ್ಪನವರ ‘ಮಂದ್ರ’ ಎಂಬ ಮಹತ್ಕಾದಂಬರಿಯು ಹೊರಬಂದು ಸರಸ್ವತೀ ಸಮ್ಮಾನಕ್ಕೆ ಭಾಜನವಾಯಿತು. ಕೆಲವೇ ಕೆಲವು ವಿಶೇಷ ವ್ಯಕ್ತಿತ್ವಗಳು ಜೀವನದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ಎಲ್ಲವನ್ನೂ ಮೀರಿ ತುತ್ತತುದಿಯನ್ನು ತಲುಪಿ ಅಂತರ್ಭಾವದಲ್ಲಿ ಬೆಳಗುತ್ತಾರೆ. ಆನಂದಾನುಭೂತಿಯಿಂದ ನಿರ್ಲಿಪ್ತವಾಗಿ ನಿಂತು ಸುಖಿಸುತ್ತಾರೆ. ಆಗ ಅವರಿಗೆ ಯಾವುದರ ಗೊಡವೆಯೂ ಇರುವುದಿಲ್ಲ. ಇಂತಹ ಮಹಾನ್ ವ್ಯಕ್ತಿತ್ವಗಳಲ್ಲಿ ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರೂ ಒಬ್ಬರು. ಅವರೊಮ್ಮೆ ನಮ್ಮೂರಿಗೆ ಬಂದಿದ್ದಾಗ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ ‘ಮುತ್ತು ಬಂದಿದೆ ಕೇರಿಗೆ ಜನರೆಲ್ಲ ಕೇಳಿ, ಮುತ್ತು ಬಂದಿದೆ ಕೇರಿಗೆ’ ಎಂಬ ದಾಸರ ಪದವನ್ನು ಅವರ ಎದುರಿಗೆ ಕುಳಿತು ನನ್ನ ಮಿತಿಯಲ್ಲಿ ಹಾಡುವಾಗ ತುಸು ಬೆವರಿದ್ದು ಈ ವ್ಯಕ್ತಿತ್ವದ ಕಾರಣಕ್ಕೇ ಇರಬಹುದು.

ಒಬ್ಬ ಕಲಾವಿದನು ಸಂಗೀತ ಕಲೆಯನ್ನು ತನ್ನದಾಗಿಸಿಕೊಂಡರಷ್ಟೇ ಸಾಲದು. ರಾಗದಲ್ಲಿ ಶ್ರೋತೃಗಳು ತಲ್ಲೀನರಾಗುವಂತೆ ಅಭಿವ್ಯಕ್ತಿ ಪಡಿಸಲು ಅವನಿಗೆ ವಾದ್ಯ, ಪಕ್ಕವಾದ್ಯಗಳ ಸಹಾಯ ಬೇಕು. ಒಂದು ಕಲೆಯನ್ನು ಪ್ರಸ್ತುತಪಡಿಸಲು ಅನೇಕ ವಿಧದ ಪರಿಕರಗಳು ಬೇಕು. ದೃಶ್ಯ, ಶ್ರಾವ್ಯ ಮಾಧ್ಯಮಗಳ ಮೂಲಕವೇ ಕಲೆ ಸಹೃದಯರನ್ನು ತಲುಪುವುದು. ಆದರೆ ಒಬ್ಬ ಶ್ರೇಷ್ಠ ಬರಹಗಾರ ಒಂದು ಕಲೆಯನ್ನು ಅದರಲ್ಲೂ ಮುಖ್ಯವಾಗಿ ಸಂಗೀತವನ್ನು ಸಾಹಿತ್ಯದ ಮುಖೇನ ಅಭಿವ್ಯಕ್ತಿಪಡಿಸುತ್ತಾನೆ ಎಂದರೆ ನಿಜಕ್ಕೂ ಆಶ್ಚರ್ಯವೇ. ಸಂಗೀತ ತರಗತಿ, ಅಭ್ಯಾಸ, ಸಂಗೀತ ಕಛೇರಿ ಮುಂತಾದ ಎಲ್ಲ ಆವರಣಗಳನ್ನು ಒಳಗೊಂಡ ಸಂಗೀತಲೋಕವನ್ನು ಸಾಹಿತ್ಯದ ಮೂಲಕ ಸೃಷ್ಟಿಸುವುದು, ಸಂಗೀತದ್ದೇ ಉಪಮೆ, ರೂಪಕ, ಸಂವಾದಗಳೊಂದಿಗೆ ಒಂದು ಬೃಹತ್ಕಾದಂಬರಿಯನ್ನು ರಚಿಸುವುದು, ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಅದು ಓದುಗರ ಮನೆ ಮನಗಳಲ್ಲಿ ರಾರಾಜಿಸುವಂತಾಗುವುದು ಇವೆಲ್ಲವೂ ಸಾಮಾನ್ಯರ ಊಹೆಗೂ ನಿಲುಕದ್ದು. ಸಂಗೀತ ಕಲೆಯ ಕುರಿತು ತನ್ನ ಅಗಾಧ ಜ್ಞಾನ, ತತ್ತ್ವಚಿಂತನೆಗಳನ್ನು ಸಹಜ ಜೀವನದ ಬೋಧೆಯಾಗಿಸಿ ಕೇವಲ ಒಂದು ಲೇಖನಿ ಹಾಗೂ ಹಾಳೆಯ ಮೂಲಕ ಯಾರಾದರೂ ಅಭಿವ್ಯಕ್ತ ಪಡಿಸಬಹುದೇ? ಹೌದು ಅದು ಸಾಧ್ಯ. ಅದು ನಮ್ಮ ನಾಡಿನ ವಿಶ್ವವಿಖ್ಯಾತ ಕಾದಂಬರಿಕಾರರಾದ ಸಂತೇಶಿವರದ ಭೈರಪ್ಪನಂತಹವರಿಂದ ಮಾತ್ರ ಸಾಧ್ಯ. ಕನ್ನಡದಲ್ಲಷ್ಟೇ ಏಕೆ ಭಾರತದ ಬೇರಾವ ಭಾಷೆಯಲ್ಲಿಯೂ ಸಂಗೀತವನ್ನು ಸೊಗಸಾಗಿ ಕಟ್ಟಿಕೊಡುವ ಮೂಲಕ ಇವೆಲ್ಲವನ್ನೂ ಸಾಧ್ಯವಾಗಿಸಿದ ಇನ್ನೊಬ್ಬ ಕಾದಂಬರಿಕಾರ ಇಲ್ಲ ಎಂಬ ಕಾರಣಕ್ಕಾಗಿ ಇಲ್ಲಿ ಭೈರಪ್ಪನವರು ನಮಗೆ ಮುಖ್ಯರಾಗುತ್ತಾರೆ. ಬದುಕನ್ನು ಕಲೆಯ ಮೂಲಕ ಕಂಡು ಅದನ್ನು ಸಾಹಿತ್ಯದ ಚೌಕಟ್ಟಿಗೆ ಅಳವಡಿಸಿ ನಿರೂಪಿಸಿದ ಹಿರಿಮೆ ಅವರದು.

ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸಿರುವುದಿಲ್ಲ. ಮೂಲಭೂತವಾಗಿ ಅದು ಮನದೊಳಗೆ ಇದ್ದು ಅದರೊಂದಿಗೆ ಆತ್ಮಸಖ್ಯತೆಯನ್ನು ಬೆಳೆಸಿಕೊಂಡಾಗ ಅದರ ಮೇಲೆ ಆಸಕ್ತಿ ಹೆಚ್ಚುತ್ತದೆ. ಮುಂದೆ ಅದು ಕೌಟುಂಬಿಕ ಸಾಮಾಜಿಕ ಪರಿಸರದ ಪ್ರಭಾವದಿಂದ ಕೆಲವರಲ್ಲಿ ಹವ್ಯಾಸವಾಗಿಯೇ ಉಳಿದುಬಿಡುತ್ತದೆ. ಇನ್ನು ಕೆಲವರು ಅದನ್ನು ಜೀವನದ ಮುಖ್ಯ ಅಂಗವಾಗಿ ಸ್ವೀಕರಿಸುತ್ತಾರೆ. ಪರಿಪೂರ್ಣತೆಯತ್ತ ಸಾಗಲು ಛಲವಾದಿಗಳಾಗುತ್ತಾರೆ. ಇಲ್ಲಿಯವರೆಗೆ ಅಂಥವರ ದಾರಿ ಸುಗಮವಾಗಿಯೇ ಇರುವುದು. ಆದರೆ ಭಾವ ಸಂಕೀರ್ಣತೆ, ಸಂಘರ್ಷಗಳು ಆರಂಭವಾಗುವುದು ಪ್ರಸಿದ್ದಿ ಎಂಬ ಮೈಲುಗಲ್ಲಿನ ಗುರಿಯತ್ತ ಹೊರಟಾಗ ಮಾತ್ರ. ಇವೆಲ್ಲವನ್ನೂ ದಾಟಿ ಗುರಿ ತಲುಪಿ ಪ್ರಸಿದ್ಧರಾದವರಲ್ಲಿ ಕೆಲವರು ತಮ್ಮ ದಾರಿಯಲ್ಲಿ ಉಂಟಾದ ಸಂಘರ್ಷಕ್ಕೆ ಕಾರಣವಾದ ಅಂಶಗಳನ್ನೇ ತಮ್ಮ ಅಧಿಕಾರದ ತೆಕ್ಕೆಗೆ ತಂದುಕೊಂಡು ತಮ್ಮ ಅಭಿರುಚಿಗಳಿಗೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಸ್ಯೆ ಉದ್ಭವವಾಗುವುದು ಇಲ್ಲಿ. ಸಂಗೀತದಂತಹ ಕಲೆಯಲ್ಲಿ ಇದರ ತೀಕ್ಷ್ಣತೆ ಹೆಚ್ಚು ಎಂದೇ ಹೇಳಬಹುದು. ಅದನ್ನು ಅನುಸರಿಸಿ ಪ್ರಸಿದ್ದಿಯ ದಾರಿಯಲ್ಲಿ ಕ್ರಮಿಸುತ್ತಿರುವವರು ಯಾವುದೋ ಹಂತದಲ್ಲಿ ಹಿಂದೆ ಸರಿಯಲಾಗದೆ ಮುಂದೆ ಕ್ರಮಿಸಲಾಗದೆ ದ್ವಂದ್ವದ ಸುಳಿಯಲ್ಲಿ ಸಿಲುಕಿ ಕೊಂಡಾಗ ತಮ್ಮ ಸ್ಥಾಯಿ ಭಾವದ ಸ್ವಾತಂತ್ರ್ಯವನ್ನೂ ಕಳೆದುಕೊಂಡುಬಿಡುತ್ತಾರೆ. ಇಂತಹ ಸಂದಿಗ್ಧತೆ ಕಾದಂಬರಿಯ ಒಂದು ಮುಖ.

ಮೂಲಭೂತ ತಿಳಿವಳಿಕೆ ಹಾಗೂ ವಿಶೇಷ ಜ್ಞಾನದೊಂದಿಗೆ ಸಪ್ತಸ್ವರಗಳು ಹೊರಹೊಮ್ಮಿದಾಗ ಅದು ಶಾಸ್ತ್ರೀಯ ಸಂಗೀತವೆನಿಸಿಕೊಳ್ಳುವುದು. ಗಾಯಕರ ಹಾಗೂ ಸಹೃದಯರ ಭಾವ ಅದರ ಆಳಕ್ಕಿಳಿದು ಶುದ್ಧ ರೂಪದಲ್ಲಿ ದರ್ಶನವಾದಾಗ ಅದರ ಅನುಭವವೂ ಅಗಾಧ. ಶಾಸ್ತ್ರೀಯ ಸಂಗೀತವೆಂಬ ಒಂದು ಉತ್ಕೃಷ್ಟ ಕಲೆಯ ಆನಂದವನ್ನು ಸಾಹಿತ್ಯದ ಮೂಲಕ ಅನುಭವಿಸುವ ವಿಶೇಷ ಅವಕಾಶ ಮಂದ್ರ ಕಾದಂಬರಿಯಲ್ಲಿದೆ. ಸಮಂಜಸವಾದ ಪಾತ್ರಗಳ ಮೂಲಕ ಸೂಕ್ತ ವಾತಾವರಣವನ್ನು ಸೃಷ್ಟಿಸಿ ಕಥಾನಕವಾಗಿಸಿದ ಒಂದು ಶ್ರೇಷ್ಠ ಕಾದಂಬರಿ ಮಂದ್ರ. ಸ್ವರ, ಲಯ, ತಾನಗಳಲ್ಲಿ ಲೀನವಾಗಿ ಪ್ರಭುತ್ವವನ್ನು ಸಾಧಿಸಿದಾಗ ಒಂದು ಹದವನ್ನು ಕಾಯ್ದುಕೊಂಡೇ ಅದನ್ನು ಮುನ್ನಡೆಸಬೇಕೆಂಬ ಸಂಗೀತದ ತತ್ತ್ವ ಬದುಕಿಗೂ ಅನ್ವಯಿಸುವಂತೆ ಕಟ್ಟಿಕೊಡುವಾಗ ಈ ಕಾದಂಬರಿ ಗೆಲ್ಲುತ್ತದೆ.

ಕಥೆಯಲ್ಲಿ ಬರುವ ಮುಖ್ಯ ಪುರುಷಪಾತ್ರ ಮೋಹನಲಾಲ್ ಚಿಕ್ಕಂದಿನಿಂದಲೂ ರೇಡಿಯೋ ಸಂಗೀತವನ್ನು ಕೇಳಿಕೊಂಡು ಹರಿದ್ವಾರದ ಗಂಗಾ ತೀರದಲ್ಲಿ ಹಾಡಿ ಭಿಕ್ಷೆಯನ್ನು ಬೇಡುತ್ತಿದ್ದವ. ಅವನ ಸಂಗೀತಕ್ಕೆ ಮಾರುಹೋಗಿ ಓಂಕಾರ ಬಾಬಾ ಎನ್ನುವವರು ತನ್ನ ಆಶ್ರಮದಲ್ಲಿ ಅವನಿಗೆ ಸಂಗೀತ ಪಾಠವನ್ನು ಆರಂಭಿಸುತ್ತಾರೆ. ‘ಸಂಗೀತವನ್ನು ಆಟದ, ಭೋಗದ ವಸ್ತುವನ್ನಾಗಿ ಮಾಡಿಕೊಂಡರೆ ಅದು ಮುಕ್ತಿ ಸಾಧನ ಹೇಗಾಗುತ್ತೆ?’ (ಪುಟ 73) ಎನ್ನುವ ಮಾತನ್ನು ಅವರ ಬಾಯಿಂದಲೇ ಕೇಳಿದ್ದ ಮೋಹನಲಾಲ್ ಮುಂದೊಮ್ಮೆ ಬಾಬಾರ ಸಂಗೀತ ಚಿಂತನೆ ಆಧ್ಯಾತ್ಮಿಕತೆಗೆ, ಭಕ್ತಿಗೆ ಆ ಮೂಲಕ ಮುಕ್ತಿಗೆ ಸೀಮಿತವಾಗಿರುವುದನ್ನು ತಿಳಿದು ಅವರಲ್ಲಿಂದ ಹೊರಹೋಗುವ ನಿರ್ಧಾರಕ್ಕೆ ಬರುತ್ತಾನೆ. ಅನೇಕ ಗವಯಿಗಳು ‘ಸ್ವರವನ್ನೇ ಸರ್ವಸ್ವವಾಗಿ ಮಾಡಿಕೊಂಡು, ಸ್ವರದೊಡನೆ ಆಟವಾಡಿ, ಸಖನಂತೆ ಸಖಿಯಂತೆ ಮುದ್ದಿಸಿ, ಮೆಲುಕಾಡಿಸಿ, ಶಾವಿಗೆ ಎಳೆಯಂತೆ ಹಿಂಜಿ, ಮಗ್ಗದ ಕೌಶಲದಂತೆ ನೇಯ್ದು ಬೇಕಾದ ಕೆಲಸವನ್ನು ಮಾಡುತ್ತಿದ್ದುದನ್ನು’ (ಪುಟ 73) ಕಾರ್ಯಕ್ರಮಗಳಲ್ಲಿ ವೀಕ್ಷಿಸುತ್ತಾನೆ. ಸಂಗೀತದ ಮೂಲಕ ಇನ್ನೇನನ್ನೋ ಪಡೆಯುವ ಅಭಿಲಾಷೆ ಹುಟ್ಟಿ ಅಲ್ಲಿಂದ ಹೊರಟುಬಿಡುತ್ತಾನೆ. ಭೂಪತರಾಮ ಎನ್ನುವ ತಬಲಾ ಗುರುವಿನ ಸಹಾಯ ಪಡೆದು ಚಿತ್ತರ್‌ಪುರದಲ್ಲಿ ತಪಶಕ್ತಿಯಿಂದ ಸಂಗೀತವನ್ನು ಸಾಧಿಸಿಕೊಂಡ ರಾಜಾ ಸಾಹೇಬ ಎನ್ನುವ ಗುರುಗಳಲ್ಲಿ ಸಂಗೀತವನ್ನು ಕಲಿಯುತ್ತಾನೆ. ತಂಬೂರಿಯ ಷಡ್ಡಕ್ಕೂ ಗಂಟಲಿಗೂ ಅದೈತವೇರ್ಪಡುವ, ಏಕಾಗ್ರತೆ, ಸ್ವರಶುದ್ಧಿ, ಭಾವಶುದ್ಧಿ, ಭಾವಶಾಂತಿಯನ್ನು ಹೊಂದಿದ ಅವರದೇ ಶೈಲಿಯಲ್ಲಿ ಸಂಗೀತವನ್ನು ಮುಂದುವರಿಸುವ ಪ್ರತಿಜ್ಞೆ ಮಾಡುತ್ತಾನೆ. ಚಿತ್ತರ್‌ಪುರದ ಕಾಡಿನ ಪರಿಸರದಲ್ಲಿ ಆರಂಭವಾದ ಅವನ ಕಾಮದ ತೃಷೆ ಮುಂದೆ ಬೇರೆ ಬೇರೆ ಪಾತ್ರಗಳೊಡನೆ ಸೇರುವ ಬಯಕೆಯನ್ನು ಪ್ರೇರೇಪಿಸುತ್ತದೆ.

ಮುಂಬಯಿಯ ಸೂಳೆಗೇರಿಯಲ್ಲಿ ಮಾರೋ ಬಿಹಾಗ್ ರಾಗದಲ್ಲಿ ನಿ. ರೆ. ಗ ಬಳಸಿ ಕಲ್ಯಾಣದ ಛಾಯೆಯನ್ನು ಮೂಡುವಂತೆ ಹಾಡಿ ಇವನನ್ನು ಆಕರ್ಷಿಸಿದ ಜವಾಹರ್‌ಬಾಯಿಯ ಪಾತ್ರವು ವಿವಾದಿ ಸ್ವರದಂತೆ ಕಾದಂಬರಿಯಲ್ಲಿ ಸೇರಿದೆ. ಅಂದರೆ ರಾಗದಲ್ಲಿ ಅದೊಂದು ವರ್ಜ್ಯ ಸ್ವರೂಪವಾದರೂ ಆಲಾಪದಲ್ಲಿ ನುರಿತ ಸಂಗೀತಗಾರ ಮಾತ್ರ ಸಮಯೋಚಿತವಾಗಿ ಬಳಸಲು ಅವಕಾಶವಿರುವ ಸ್ವರ, ಬಳಕೆಯ ಮಿತಿ ತಪ್ಪಿದರೆ ಅದು ರಾಗಕ್ಕೆ ಅಪಶ್ರುತಿಯನ್ನು ಕೊಡುತ್ತದೆ. ಮೋಹನಲಾಲನ ಮುಂಬಯಿ ಪುರಪ್ರವೇಶದ ಸೂಚನೆಯೆಂಬಂತೆ ಸೂಳೆಗೇರಿಯ ದೃಶ್ಯವನ್ನು ತಂದು ಆತನ ಕಾಮಬಾಧೆಯನ್ನು ನಿವಾರಿಸುವ ಕ್ಷಣಿಕ ಪಾತ್ರವಾಗಿ ಇಲ್ಲಿ ಜವಾಹರ್‌ಬಾಯಿಯ ಪಾತ್ರವನ್ನು ಲೇಖಕರು ಮೂಡಿಸಿದ್ದಾರೆ. ಅಲ್ಲದೆ ಮದುವೆ ಮಾಡಿಕೊಂಡ ಹೆಂಡತಿ ಮನೆಯಲ್ಲಿ ಇದ್ದರೆ ಬುದ್ದಿ ಹತೋಟಿಗೆ ಬರುತ್ತದೆ ಎಂದು ಹೇಳಿ ಸರಿದಾರಿಗೆ ತರುವ ಸಲಹೆಯನ್ನೂ ಅವಳು ಆತನಿಗೆ ಕೊಡುವುದರಿಂದ ಇದು ವಿವಾದಿ ಸ್ವರದ ಲಕ್ಷಣಕ್ಕೆ ಸರಿ ಹೊಂದುವ ಪಾತ್ರವಾಗಿದೆ.

ಪತಿಯಿಂದ ತನಗೆ ಸಂತಾನಭಾಗ್ಯವು ಲಭಿಸದೆಂದು ಅರಿತು ಕೇವಲ ತಾಯಾಗುವ ಹಂಬಲದಿಂದ ಮೋಹನಲಾಲನನ್ನು ಸೇರುವ ಚುನ್ನಿ, ಸಂಗೀತಜ್ಞಾನ ಇರದೇ ಇದ್ದರೂ ಆತ್ಮಿಕವಾಗಿ ಸಂಗೀತದ ಸಂಸ್ಕಾರವಿರುವ, ಅವನಿಗಿಂತ ಹನ್ನೊಂದು ವರ್ಷಕ್ಕೆ ಚಿಕ್ಕವಳಾದ, ಶಾಸ್ರೋಕ್ತವಾಗಿ ಮದುವೆ ಮಾಡಿಕೊಂಡ ರಾಮಕುಮಾರಿ, ರಿಜಿಸ್ಟರ್‌ ಮ್ಯಾರೇಜ್ ಮಾಡಿಕೊಂಡು ಈತನನ್ನು ಉಪಯೋಗಿಸಿಕೊಂಡು ಹಣ ಸಂಪಾದನೆ ಮಾಡುತ್ತಿದ್ದ ಚಂಪಾ, ಅವನ ಸಂಗೀತ ಪಾಂಡಿತ್ಯವನ್ನು ತನ್ನ ನೃತ್ಯಕ್ಕೆ ಬಳಸಿಕೊಂಡು ಜನಪ್ರಿಯತೆ ಗಳಿಸಿಕೊಳ್ಳಲು ಹೊಂಚು ಹಾಕಿದ್ದ ಮನೋಹರೀ ದಾಸ್, ಅವನಿಂದಲೇ ಸಂಗೀತ ಕಲಿತು ಸಾಧನೆ ಮಾಡಬೇಕೆಂದು ಸರ್ವಸ್ವವನ್ನೂ ಸಮರ್ಪಿಸಿಕೊಂಡ ಮಧುಮಿತಾ, ವಿದೇಶದಲ್ಲಿ ಸಂಗೀತ ಕಾರ್ಯಾಗಾರಕ್ಕೆ ಹೋದಾಗ ಸಂಬಂಧ ಬೆಳೆಸಿ ಶಿಷ್ಯವೇತನ ಪಡೆದು ಭಾರತಕ್ಕೂ ಬಂದ ಲಾರೆನ್ ಸ್ಮಿತ್ ಮೊದಲಾದವರ ಪಾತ್ರಗಳು ರಾಗಿಣಿಯರ ರೂಪದಲ್ಲಿ ಭಿನ್ನ-ಭಿನ್ನ ಸಂದರ್ಭಗಳಲ್ಲಿ ಸೇರ್ಪಡೆಯಾಗಿವೆ. ವಿಷಯ ಲಂಪಟನಾದ ಮೋಹನಲಾಲ್ ಸಂಗೀತದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡವನಲ್ಲ. ಆ ಕಠೋರ ತಪಸ್ಸಿಗಾಗಿ ಆತ ಎಲ್ಲ ಪಾತ್ರಗಳಿಂದ ನಿಧಾನವಾಗಿ ಜಾರಿಕೊಳ್ಳುತ್ತಾ ಬರುತ್ತಾನೆ. ಕಾಮಕ್ಕೆ ಅಡಿಯಾಳಾಗಿರುವ ಸಂಗೀತ ವಿದ್ವಾಂಸ ಮೋಹನಲಾಲನನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡ ಕೆಲವು ಪಾತ್ರಗಳೂ ಇವೆ. ರಾಜಾರಾಮ ಟಿಪ್ಪಿಸ್, ಗೋರೆ ಸಾಹೇಬರಂತಹ ನೈತಿಕಪ್ರಜ್ಞೆ ಇರುವ ಸಹೃದಯರೂ ಕತೆಯ ಹೆಣಿಗೆಯಲ್ಲಿ ಸೇರಿಕೊಂಡಿದ್ದಾರೆ.

ಈ ಕಾದಂಬರಿಯ ಶೀರ್ಷಿಕೆಯು ಸಂಗೀತದ ಒಂದು ಪರಿಭಾಷೆ. ಮಂದ್ರ ಸ್ಥಾಯಿಯಲ್ಲಿ ಷಡ್ಡವನ್ನು ತಂಬೂರಿಯ ಶ್ರುತಿಗೆ, ಸ್ಥಿರತೆಗೆ ಹೊಂದಿಸಲು ಬೇಕಾಗುವ ಅಂತರ್ಭಾವ ಉದ್ದೀಪನಗೊಂಡ ಬರಹಗಾರ ಓದುಗನನ್ನೂ ಅದೇ ದಾರಿಯಲ್ಲಿ ಕೊಂಡೊಯ್ಯುವಂತಹ ಕಥಾಹಂದರ ಇದರದ್ದು. ಕುಸುಮ ವಿಕಸನದಂತೆ ಪಾತ್ರಗಳೆಂಬ ದಳಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಇದಕ್ಕೆ ವಿಲಂಬಿತ ಲಯದ ಅಮಿತ ಆಲಾಪದಂತಹ ವಿಸ್ತಾರವಿದೆ. ಒಬ್ಬ ಮಹಾಕವಿಗೆ ಕಡಿಮೆಯಿಲ್ಲದ ರೀತಿಯಲ್ಲಿ ಇಲ್ಲಿ ಸೃಜಿಸಲ್ಪಟ್ಟಿರುವ ರಸಸ್ಥಾನಗಳು ನವಿರಾಗಿ ಓದುಗನ ಭಾವವನ್ನು ಆರೋಹಣ ಅವರೋಹಣಗಳಾಗಿ ಮೀಟುತ್ತವೆ. ಕೊನೆಗೊಂದು ಶಾಂತ ಸ್ತಬ್ಧತೆ, ತಿಳಿಯಾದ ಬದುಕಿನ ದರ್ಶನವಾದಂತೆ. ಸಂಗೀತದಿಂದಾಗುವ ನಿಜದರ್ಶನವೂ ಇದೇ. ಶಿವನಿಲ್ಲದೆ ಸೌಂದರ್ಯ ಎಲ್ಲಿದೆ? ಎನ್ನುವ ಅದ್ಭುತವಾದ ತತ್ತ್ವ ದರ್ಶನ. ಇಲ್ಲಿರುವ ಉಪಮೆ ರೂಪಕಗಳ ಹೊಂದಾಣಿಕೆಗೆ ಭೂಪಾಲೀ ರಾಗದ ಸಂಮೋಹನ ಶಕ್ತಿಯಿದೆ. ನಕ್ಷತ್ರಗಳಂತೆ ಸ್ವಂತಿಕೆಯ ಬೆಳಕಿದೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಚರ್ಚಿತವಾಗಿರುವ ಅನೇಕ ಲಕ್ಷಣಗಳು ಈ ಕಾದಂಬರಿಗೆ ಹೊಂದಿಕೆಯಾಗುವುದನ್ನೂ ಕಾಣಬಹುದಾಗಿದೆ. ಪ್ರೌಢ ಚಿಂತಕರು ಚರ್ಚಿಸಬೇಕಾದ ಶ್ರೇಷ್ಠ ಕಾದಂಬರಿ ಇದು.

ಈ ಕಾದಂಬರಿಯ ಪಾತ್ರಸೃಷ್ಟಿಯೇ ಸಂಗೀತಶಾಸ್ತ್ರಮಯವಾಗಿದೆ. ಭಾರತೀಯ ಶಾಸ್ತ್ರೀಯಸಂಗೀತದ ಮೂಲ ಸಾಮವೇದ. ಧ್ಯಾನದ ಮೂಲಕ ತಿಳಿವನ್ನು ಗಳಿಸುವ ಸಾಧನವಿದು. ಒಂದು ಬಗೆಯಲ್ಲಿ ಮಧ್ಯಕಾಲೀನ ಸಂಗೀತ ಪದ್ಧತಿಯಲ್ಲಿ ಪ್ರಚಲಿತವಿರುವ ರಾಗ ರಾಗಿಣಿ ಪರಿಕಲ್ಪನೆಯಲ್ಲಿ ಇಲ್ಲಿನ ಪಾತ್ರಗಳು ಮೂಡಿಬಂದಿವೆ. ರಾಗ ರಾಗಿಣಿಯರ ಮಿಲನದ ಚಿತ್ರಕಲೆ ಈಗಾಗಲೇ ಪ್ರಸಿದ್ದಿಯನ್ನು ಪಡೆದಿದೆ. ಅದೇ ಭಾವಗಳನ್ನು ಮೂರ್ತರೂಪವಾಗಿ ಮಂದ್ರ ಕಾದಂಬರಿಯಲ್ಲಿ ತರಲಾಗಿದೆ. ಶಿವಮತ ಹಾಗೂ ಕೃಷ್ಣಮತದ ಅನುಸಾರ ಒಂದು ಪುರುಷ ರಾಗಕ್ಕೆ ಆರು ಭಾರ್ಯಾ ಅಥವಾ ಸಂಗಾತಿಯ ರೂಪದ ರಾಗಗಳು. ಅಂದರೆ ರಾಗಿಣಿಯರು. ಸಂಗೀತದಲ್ಲಿ ಇದೊಂದು ಸುವ್ಯವಸ್ಥೆ. ಆದರೆ ಬದುಕಿನಲ್ಲಿ ಅದನ್ನು ಅನ್ವಯಿಸಿದರೆ ಇದೊಂದು ಸಂಕೀರ್ಣ ವ್ಯವಸ್ಥೆ ಎಂಬಂತೆ ಕಾದಂಬರಿ ಮೂಡಿಬಂದಿದೆ. ಮಂದ್ರದ ಮೋಹನಲಾಲ್ ಎನ್ನುವ ಪುರುಷ ಪಾತ್ರಕ್ಕೆ, ಆರು ಮುಖ್ಯ ಸ್ತ್ರೀ ಪಾತ್ರಗಳು ರಾಗಿಣಿಯರ ರೂಪದಲ್ಲಿ ಬರುವುದನ್ನು ಇಲ್ಲಿ ಕಾಣಬಹುದು. ಅಥವಾ ಸಂಗೀತದ ಸಪ್ತಸ್ವರಗಳಂತೇ ಒಟ್ಟು ಏಳು ಮುಖ್ಯ ಪಾತ್ರಗಳಾಗಿಯೂ ನೋಡಬಹುದು. ಕಾದಂಬರಿಯೇ ಏಳು ಪಾತ್ರಗಳಲ್ಲಿ ಕಾಣುವ ಸಂಪೂರ್ಣ ರಾಗ. ಸಪ್ತಕದ ಪ್ರತಿಯೊಂದು ಸ್ವರದಲ್ಲೂ ತನ್ಮಯನಾಗುವಾಗ ಸಿಗುವ ಭಾವ ಶುದ್ಧತೆ ಬದುಕಿನಲ್ಲೂ ಇರಬೇಕೆಂಬ ತಮ್ಮ ಇದರಲ್ಲಿದೆ. ಇಲ್ಲಿ ಆಯಾ ಪಾತ್ರಗಳನ್ನು ರಾಗಗಳ ಮುಖ್ಯ ಲಕ್ಷಣಗಳಿಗೆ ಅನುಗುಣವಾಗಿ ಸೃಷ್ಟಿಸಿರುವ ಪರಿ ಅನನ್ಯವಾಗಿದೆ. ಕಾದಂಬರಿಯಲ್ಲಿ ಕಲಾಕಾರ ಮೋಹನಲಾಲನ ಬದುಕನ್ನು ಒಂದು ರಾಗದ ಪ್ರಸ್ತುತಿಯ ಮೂರ್ತರೂಪವಾಗಿ ನಾವು ಕಾಣಬಹುದು. ನಿಧಾನವಾದ ವಿಸ್ತರಣೆಯೊಂದಿಗೆ ಆರಂಭವಾಗಿ ರಾಗ ಬೆಳೆಯುತ್ತಾ, ಅಭಿವೃದ್ಧಿಗೊಳ್ಳುತ್ತ ಹೋದಂತೆಯೇ ಶೃಂಗಾರಮಯವಾಗಿ ಪಕ್ಕವಾದ್ಯಗಳೊಂದಿಗೆ ಗತಿಯನ್ನು ಹೆಚ್ಚಿಸುತ್ತಾ ಹೋಗುವುದು. ಕಲಾಕಾರ ಮೋಹನಲಾಲ್ ತನ್ನ ಸ್ವಯಂ ಪ್ರತಿಭೆಯಿಂದ ಸಂಗೀತ ಶಾಸ್ತ್ರದಲ್ಲಿ ರಾಗ ರಾಗಿಣಿಯರ ಕಲ್ಪನೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾನೆ.

ಆದರೆ ಬದುಕಿಗೆ ಅನ್ವಯಿಸಿ ಕೊಳ್ಳಲು ಹೋದಾಗ ಆತ ಸೋಲಿಗೆ ಶರಣಾಗಬೇಕಾಯಿತು. ಕಲೆಯನ್ನು ಕಲೆಯಾಗಿಯೇ ಅನುಭವಿಸಿದರೆ ಅದರ ಅನುಭೂತಿಯೇ ಬೇರೆ ಎನ್ನುವ ಬೆಳಕು ಇಲ್ಲಿ ಹರಿದಿದೆ. ಕೊನೆಯಲ್ಲಿ ಕಲೆ ಹಾಗೂ ಬದುಕಿನ ಕುರಿತಾಗಿ ಸಹೃದಯರಲ್ಲಿ ಹುಟ್ಟುವ ಉಸ್ಪೂರ್ತ ಅನುಭೂತಿಯೊಂದಿಗೆ ಕಾದಂಬರಿ ಅಂತ್ಯವಾಗುವುದು. ಈ ನಡುವೆ ಭೈರಪ್ಪನವರು ಸಾಹಿತ್ಯದ ಮೂಲಕ ಅನೇಕ ಬಗೆಯ ಲೋಕವ್ಯವಹಾರಗಳನ್ನು, ಮನೋವ್ಯಾಪಾರಗಳನ್ನು, ಪ್ರಕೃತಿವರ್ಣನೆಯನ್ನು, ಸ್ತ್ರೀ ಸೌಂದರ್ಯವನ್ನು, ಸಂಸಾರದ ವಹಿವಾಟುಗಳನ್ನು, ಸಂಗೀತದ ಪರಿಭಾಷೆಗಳಲ್ಲಿ ಹೆಣೆಯುತ್ತಾ ಸಾಗಿದ್ದಾರೆ. ಅದರಲ್ಲಿ ಸಂಗೀತವನ್ನು ಲೀನವಾಗಿಸಿ ಅದ್ಭುತವಾಗಿ ಸಾಕ್ಷಾತ್ಕರಿಸಿರುತ್ತಾರೆ. ಮನೋಹರೀ ದಾಸ್‌ಳ ಪ್ರೇಮವು ವಿಫಲವಾದಾಗ ಮೋಹನಲಾಲನಲ್ಲಿ ಮೂಡುವ ಅನಿಸಿಕೆಗಳನ್ನು ಭೈರಪ್ಪನವರು ಸಂಗೀತಮಯವಾಗಿಯೇ ಹೊರಹೊಮ್ಮಿಸಿದ್ದಾರೆ: “ಪ್ರೇಮವು ಸ್ಥಾಯಿ, ಶಾಶ್ವತ, ಅಮರ ಎಂಬ ಭಾವನೆ ದಿಲ್ಲಿಗೆ ಬಂದ ಹೊಸತರಲ್ಲಿ ನನ್ನನ್ನು ತುಂಬಿಕೊಂಡಿತ್ತು…. ಸ್ಥಾಯಿಭಾವ ಸಂಚಾರಿಭಾವಗಳ ಕಲ್ಪನೆ ಪ್ರತಿಯೊಂದು ರಾಗದಲ್ಲೂ ಉಂಟು….ಸ್ಥಾಯಿಭಾವ ತನಗೆ ತಾನೆ ಸೂಚಿತವಾಗಲ್ಲ. ಸಂಚಾರಿಭಾವಗಳ ಮೂಲಕವೇ ಅದು ಪರಿಪೋಷಿತವಾಗಬೇಕು. ಅದು ಉಳಿಯಲು, ಉಳಿದು ಬೆಳೆಯಲು ಸಂಗೀತದ ಕ್ರಿಯೆ ನಡೆಯುತ್ತಿರಬೇಕು. ಕ್ರಿಯೆ ನಿಂತರೆ ಭಾವವು ಮುಕ್ತಾಯ ಎಂಬ ವಿಶ್ಲೇಷಣೆ ಹೊಳೆದಿರಲಿಲ್ಲ. ಜೊತೆಯಲ್ಲಿದ್ದು ಜೊತೆಯಲ್ಲಿ ಜೀವನ ಕ್ರಿಯೆಯಲ್ಲಿ ತೊಡಗಿದರೆ ಮಾತ್ರ ಪ್ರೇಮವೆಂಬ ಸ್ಥಾಯಿಭಾವವು ಸ್ರವಿಸುತ್ತಿರುತ್ತೆ. ಇಲ್ಲದಿದ್ದರೆ ಭಾವದ ಸ್ರಾವ ಎಲ್ಲಿಂದ ಬರಬೇಕು? ಎಂಬ ಸೂಕ್ಷ್ಮ ಅರ್ಥವಾಗಿರಲಿಲ್ಲ” ಎನ್ನುವ ಅವನ ಅನಿಸಿಕೆ ನುರಿತ ಸಂಗೀತಗಾರನಿಗಷ್ಟೇ ಸ್ಪುರಿಸಬಲ್ಲ ಭಾವನೆ (ಪುಟ 246), ಬದುಕಿನ ಬಣ್ಣ ಬನಿಯನ್ನು ಗಾಢಗೊಳಿಸುವ ಇಂತಹ ಸಾಲುಗಳು ಕಾದಂಬರಿಯಲ್ಲಿ ಹೇರಳವಾಗಿವೆ. ಮೋಹನಲಾಲನ ಬದುಕು ಅವರೋಹಣಮುಖಿಯಾಗಿ ಸಾಗುವ ಸಂದರ್ಭದಲ್ಲಿ ಅವನಿಗೆ ಸಂಗೀತದಲ್ಲಿಯೂ ತನ್ಮಯತೆಯನ್ನು ಸಾಧಿಸುವುದು ಕಷ್ಟವಾಗುತ್ತದೆ. ಮೋಹನಲಾಲನು ತಾನ್‌ಸೇನ್ ಪ್ರಶಸ್ತಿಯನ್ನು ಪಡೆದಾಗ ಮುಂಬಯಿಯಲ್ಲಿ ನಡೆಸಿದ ಕಚೇರಿಯಲ್ಲಿ ಹಾಡಿದಾಗಲೂ ಯಾಂತ್ರಿಕವೆನಿಸುವ ಮಟ್ಟಿಗೆ ಅವನ ಭಾವವು ಬತ್ತಿ ಹೋಗುತ್ತದೆ. ಈ ಬಗ್ಗೆ ಸಂಗೀತದ ಸಹೃದಯ ಶ್ರೋತೃವಾದ ಗೋರೆ ಸಾಹೇಬರು ಹಂಚಿಕೊಂಡ ಅಭಿಪ್ರಾಯವನ್ನು ಕಾದಂಬರಿಯಲ್ಲಿ ಮಾರ್ಮಿಕವಾಗಿ, ಪ್ರಶ್ನಾರ್ಥಕವಾಗಿ ತರಲಾಗಿದೆ: “ನಮ್ಮ ಸಂಗೀತಗಾರರಿಗೆ ಗಾಯನವಾದನ ಬಿಟ್ಟರೆ ಬುದ್ಧಿ ಪೋಷಣೆಗೆ ಬೇಕಾದ, ಉದಾಹರಣೆಗೆ ಗಂಭೀರ ಸಾಹಿತ್ಯ ತತ್ತ್ವಜ್ಞಾನಗಳನ್ನ ಓದುವಂಥ ಬೇರೆ ಹವ್ಯಾಸವೇ ಇಲ್ಲವೋ? ಅಥವಾ ನಾನು ಯಾಕೆ ಹಾಡ್ತೀನಿ, ಒಂದು ರಾಗದ ಮೂಲಕ ಯಾವ ಅರ್ಥ ಹೇಳ್ತಿನಿ ಅನ್ನೂ ಸ್ಪಷ್ಟ ಆಲೋಚನೆ ಇಲ್ಲವೋ? ಭಾವ ಅನ್ನೂದು ಒಂದು ಬಗೆಯ ಅರ್ಥವೇ. ವ್ಯಾಖ್ಯಾನ, ವಿಮರ್ಶೆಗಳೇ, ಅರ್ಥಸ್ಫುರಣೆ ನಿಂತು ಹೋದರೆ ಬರೀ ಅಭ್ಯಾಸ ಅಭ್ಯಸ್ಥ ಸ್ವರಗಳು ಉಳಿದುಕೊಂಡುಬಿಡ್ತವೋ? ಹೀಗೆ ನನ್ನ ಮನಸ್ಸಿನಲ್ಲಿ ಏನೇನೋ ಪ್ರಶ್ನೆಗಳು ಹುಟ್ತವೆ” ಎನ್ನುತ್ತಾರವರು (ಪುಟ 434). ಇಲ್ಲಿ ಸಂಗೀತವು ನೀಡುವ ಜೀವನ ದರ್ಶನವೇ ಅಡಗಿದಂತಿದೆ. ಬುದ್ಧಿ ಪೋಷಣೆಗೆ ಬೇಕಾದ ಹವ್ಯಾಸವನ್ನು ಕಲಾಕಾರ ಬೆಳೆಸಿಕೊಳ್ಳಬೇಕು ಎನ್ನುವ ತಾತ್ವಿಕ ಸಂದೇಶದ ಸುತ್ತ ಮಂದ್ರ ಕಾದಂಬರಿ ಹೆಣೆಯಲ್ಪಟ್ಟಿದೆ. ಕಾದಂಬರಿಯು ನೈತಿಕಪ್ರಜ್ಞೆಯಿರದ ಕಲಾವಿದನ ಬದುಕಿನ ಸಂಕೀರ್ಣತೆಯ ಗವಿಯಾಗಿದ್ದರೂ ಅಲ್ಲಿಂದ ಹೊರ ಬರುವಾಗ ಮಾತ್ರ ಬೆಳಕಿನ ಪ್ರಭಾವಳಿ ಆವರಿಸಿಕೊಂಡಂಥ ಅನುಭವವಾಗುತ್ತದೆ. ಕೊನೆಯಲ್ಲಿ ಮೋಹನಲಾಲ್ ಎಲ್ಲವನ್ನೂ ಬಿಟ್ಟು ಹರಿದ್ವಾರದ ಓಂಕಾರಾಶ್ರಮಕ್ಕೆ ಹೋಗುವ ಆಲೋಚನೆಯಲ್ಲಿ ಇರುವಾಗ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಬರುವ ಮಾತೊಂದನ್ನು ಮಾರ್ಮಿಕವಾಗಿ ಹೇಳಲಾಗಿದೆ: “ಹರಿದ್ವಾರದಲ್ಲಿ ಅಧ್ಯಾತ್ಮದ ಪಾವಿತ್ರ್ಯವಿದೆ. ಮುಂಬಯಿಯಲ್ಲಿ ರಸಿಕರ ಹೃದಯದ ಪಾವಿತ್ರ್ಯವಿದೆ. ಸಂಗೀತಕ್ಕೆ ಎರಡೂಬೇಕು” (ಪುಟ 586).

ಅಪ್ಪಟ ಭಾರತೀಯ ಶಾಸ್ತ್ರೀಯಸಂಗೀತದ ಶಾಸ್ತ್ರ ಗಾಯನ ಎರಡನ್ನೂ ಆರಾಧಿಸುವ ಕಲಾಕಾರರಾದ ಮೋಹನಲಾಲ್ ಹಾಗೂ ಮಧುಮಿತಾ ಅವರಿಂದ ಸಂಗೀತಮಯವಾದ ಮಂದ್ರ ಕಾದಂಬರಿ ಆರಂಭವಾಗುವುದು. ಮಂದ್ರಸ್ಥಾಯಿಯಲ್ಲಿ ಅಂತರ್ಮುಖಿಯಾದ ಭಾವದ ಉಲಿ ಸಹೃದಯರಿಗೆ ಕೇಳಿಸುವುದು ಎನ್ನುವುದನ್ನು ಒಪ್ಪಲೇಬೇಕು. ಮೇಘ ಮಲ್ಹಾರ್ ರಾಗದಲ್ಲಿ ಹಾಡಿದಾಗ ಮಳೆ ಸುರಿಯುವುದು ಎಂಬ ಪ್ರತೀತಿಯೂ ಇದೆ. ಕಾದಂಬರಿಕಾರರು ಆರಂಭದಲ್ಲಿಯೇ ಅದನ್ನು ತಂದಿದ್ದಾರೆ. ಅಮೆರಿಕಾದ ಲಾಸ್ ಗಟಾಸ್‌ನಲ್ಲಿ ಅತಿಥಿಯಾಗಿ ಹೋದ ಮೋಹನಲಾಲ್ ಮಧುಮಿತಾಳ ಸಂಗವನ್ನು ಬಯಸಿದಾಗ ಆಕೆ ತಿರಸ್ಕರಿಸಿ ಬಾಗಿಲು ಮುಚ್ಚಿಕೊಳ್ಳುತ್ತಾಳೆ. ಹೊರಗಿನಿಂದ ಕದ ಬಡಿದು ಎಷ್ಟು ಕೂಗಿಕೊಂಡರೂ ಅವಳು ಕದ ತೆರೆಯುವುದಿಲ್ಲ. ಆ ಸಮಯದಲ್ಲಿ ಮೋಹನಲಾಲನ ಮನದಲ್ಲಿ ಮೂಡುವ ಭಾವಗಳು ಮಂದ್ರಷಡ್ಜದ ಮಹಿಮೆಯನ್ನು ಅರುಹುವ ಸಾಲುಗಳಾಗಿವೆ: “ಆವಾಜ್ ಇಳಿಸಿ ಮಂದ್ರಕ್ಕೆ ತಂದು ಪಿಸುಮಂದ್ರಕ್ಕೆ ತಗ್ಗಿಸಿದರೂ ಒಳಗಿದ್ದ ಅವಳಿಗೆ ನನ್ನ ಅನುನಯಗಳೆಲ್ಲ ಕೇಳಲಿಲ್ಲವೋ ಅಥವಾ ಕೇಳಿಸಿಕೊಂಡು ಕಠೋರಳಾಗಿ ನಿಂತಿದ್ದಳೋ?” ಅಮೆರಿಕೆಯ ಶುಚಿಯಾದ ಕೊಳದ ನೀರನ್ನು ಬಣ್ಣಿಸುವಾಗಲೂ ಸಂಗೀತದ್ದೇ ಹೋಲಿಕೆ: “ಕಸ ಕಡ್ಡಿ ಕಾಗದದ ಚೂರು ಒಂದೂ ಇಲ್ಲದ ನೀರಿನ ತಳವು ಸ್ವರಸಾಧನೆ ಮಾಡಿದವನಿಗೆ ಮಂದ್ರಷಡ್ಜದಂತೆ ಸ್ಫುಟವಾಗಿ ಕಾಣಿಸುತ್ತದೆ”. ಮೊದಲ ಪುಟದಲ್ಲೇ ಮಂದ್ರಷಡ್ಜದ ಮಹಿಮೆಯನ್ನು ಅರುಹುವ ಕಾದಂಬರಿ ಬದುಕಿನಲ್ಲಿ, ಯಾವುದೇ ಸಾಧನೆಯಲ್ಲಿ ಆ ಸ್ಫುಟತೆ ಬೇಕೆಂದಾಗಲೆಲ್ಲಾ ಅದನ್ನು ಬಳಸಿಕೊಂಡಿದೆ.

ಕಾದಂಬರಿಯ ಮಧುಮಿತಾ ತನ್ನ ಸಂಗೀತಭ್ಯಾಸವನ್ನು ಆರಂಭಿಸುವುದು, ಭೈರವ ರಾಗದಿಂದ. ಎಂಟನೆಯ ಶತಮಾನದಲ್ಲಿ ರಚಿತವಾದ ‘ರಾಗ ಸಾಗರ’ದಲ್ಲಿ ಈ ರಾಗವನ್ನು ಆರಾಧನೆಯ ಸಾರ್ಥಕತೆಯನ್ನು ಬಿಂಬಿಸುವ ರಾಗವೆಂದು ವರ್ಣಿಸಿದ್ದಾರೆ. ಬದುಕನ್ನು ಎದುರು ಹಾಕಿಕೊಂಡು ಸಂಗೀತವನ್ನು ಆರಾಧಿಸಿದ ಮಧುಮಿತಾಳ ಸಂಗೀತ ಸಾಧನೆ ಕೊನೆಯಲ್ಲಿ ಸಾರ್ಥಕವಾದುದಂತೂ ಹೌದು. ಆದರೆ ಅವಳಿಗೆ ಕಲೆ ಹಾಗೂ ಬದುಕಿನ ಸೌಂದರ್ಯವನ್ನು ಸಮತೂಕದಲ್ಲಿ ಅನುಭವಿಸುವಂತಾಗಲಿಲ್ಲ. ಹಾರ್ಮೋನಿಯಂನ ಕರಿಯ ಎರಡನ್ನು ಹಿಡಿದು ಷಡ್ಜ ಹಚ್ಚಿದಾಗಲೇ ಮಂದ್ರಷಡ್ಜದ ಶಕ್ತಿ ಹೊಮ್ಮುವುದು. ಇದೊಂದು ಅಪೂರ್ವವಾದ ಅನಿರ್ವಚನೀಯ ಧ್ಯಾನಸ್ಥಿತಿ. ಮುಂದೆ ಧೈವತದಿಂದ ನಿಷಾಧವನ್ನು ಹಾಯ್ದು ಷಡ್ಜದ ಮೇಲೆ ನಿಂತಾಗ ಭೈರವದ ಭಾವ, ಶಾಂತಿಯ ಪಸರಣೆ. “ಮುಂಬಯಿಯ ಗದ್ದಲವನ್ನು ತಪ್ಪಿಸಿಕೊಳ್ಳಲಾಗದ ಆ ಕೋಣೆಯನ್ನು ಅವರ ಸ್ವರಶಾಂತಿಯು ಅರ್ಧ ನಿಮಿಷದಲ್ಲಿ ತುಂಬಿಕೊಂಡಿತು…..ಹಿಮಾಲಯದ ಶಿಖರದ ಮೇಲೂ ಲಭಿಸದ ಶಾಂತಿ” ಎಂದು ಮಧುಮಿತಾ ಮೋಹನಲಾಲನ ಗಾಯನಶಕ್ತಿಯನ್ನು ನೆನಪಿಸಿಕೊಳ್ಳುತ್ತಾಳೆ (ಪುಟ 16). ಭೈರವ ರಾಗದ ವಿಸ್ತಾರವೂ ಅಗಾಧವಾದದ್ದು. ಶೌರ್ಯದಿಂದ ಶಾಂತಿಯವರೆಗಿನ ಭಾವನಾತ್ಮಕ ಗುಣಲಕ್ಷಣಗಳು ಸಾಲು ಸಾಲಾಗಿ ಇಲ್ಲಿ ಬರುವುದನ್ನು ಕಾಣಬಹುದು. ಕತೆಯ ಹಂದರದಲ್ಲಿ ಮೋಹನಲಾಲ್ ಹಾಗೂ ಮಧುಮಿತಾಳ ಬದುಕು ಕೂಡ ಇದೇ ರೀತಿಯಲ್ಲಿ ಸಾಗುವುದು.

ಕಲೆಯನ್ನು ಸಾಕ್ಷಾತ್ಕರಿಸಿಕೊಂಡಿರುವ ಶ್ರೇಷ್ಠ ಸಂಗೀತಗಾರ ಮೋಹನಲಾಲ್ ತನ್ನ ಶಿಷ್ಯರಿಗೆ ಬೋಧಿಸುವ ಕ್ರಮಕ್ಕೂ, ಒಬ್ಬ ಸಂಗೀತಶಾಸ್ತ್ರವನ್ನೆಲ್ಲ ತಿಳಿದಿರುವ ಉಪಾಧ್ಯಾಯ ವಾಡೇಕರ್ ಕಲಿಸುವ ಪಾಠಗಳ ರೀತಿಗೂ ಯಾವ ಅಂತರವಿರುತ್ತದೆ ಎಂಬುದನ್ನು ಕಾದಂಬರಿಕಾರರು ಸೊಗಸಾಗಿ ಹೇಳಿರುತ್ತಾರೆ. ಈ ಅಂತರವನ್ನು ಅರಿತ ಮಧುಮಿತಾ ಮೋಹನಲಾಲನನ್ನೇ ತನ್ನ ಗುರುವಾಗಿ ಪಡೆಯಬೇಕೆಂದು ನಿಶ್ಚಯಿಸುತ್ತಾಳೆ. ಆರಂಭದಲ್ಲಿ ಮಧುಮಿತಾ ಮೋಹನಲಾಲನ ಬಗ್ಗೆ ಕೆಲವು ಕುಸಂಗತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಕೇಳಿರುತ್ತಾಳೆ. ಆಗಲೇ ಅವಳು, “ಕಲಾಕಾರೆಂದರೆ ಬಯಸಿ ಒಪ್ಪುವ ಹೆಂಗಸರೂ ಇರ್ತಾರೆ. ಪರಸ್ಪರ ಸಮ್ಮತಿಸಿ ಯಾರು ಏನು ಮಾಡಿಕೊಂಡರೆ ನನಗೇನು?” (ಪುಟ 18) ಎಂದು ಬದುಕಿನ ಕುರಿತಾಗಿ ಬಾಲಿಶವಾಗಿ, ಹಗುರಾಗಿ ಚಿಂತಿಸುತ್ತಾಳೆ. ಗುರುದಕ್ಷಿಣೆಯ ನೆಪದಲ್ಲಿ

ಮೋಹನಲಾಲ್ ಅವಳನ್ನು ನೈತಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿ ಆಡುವ ಮಾತುಗಳನ್ನು ಇಲ್ಲಿ ಬಹಳ ಮಾರ್ಮಿಕವಾಗಿ ಹೆಣೆಯಲಾಗಿದೆ. “ಶಿಷ್ಯ ಅಂದರೆ ಮಗಳ ಸಮಾನ ಅಲ್ಲವೇ?” (ಪುಟ 22) ಎಂದು ಮಧುಮಿತಾ ಕೇಳಿದಾಗ ಹುಸಿ ಸಂಬಂಧ ಭಾವನೆಗಳನ್ನು ಸಂಗೀತದ ಹುಸಿ ಸ್ವರಗಳಿಗೆ ಮೋಹನಲಾಲ್ ಹೋಲಿಸಿ ಮನವೊಲಿಸುತ್ತಾನೆ. “ಹುಸಿ ಸ್ವರಗಳಿಗೆ ಜಾಗ ಕೊಟ್ಟರೆ ರಾಗ ಹಾಳಾಗುತ್ತೆ ತಿಳಕೊ. ರಾಗದಲ್ಲಿರುವುದು ವಾದಿ ಸಂವಾದಿ ಎರಡೇ. ವಾಗ್ವಾದಕ್ಕೆ ಹೊರಟರೆ ಬೇರಾಗವಾಗುತ್ತೆ” ಎನ್ನುತ್ತಾನೆ (ಪುಟ 22), ಸಂಗೀತ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಮಹಾನ್ ಕಲಾಕಾರ ಮೋಹನಲಾಲ್ ಕಾಮಲಾಲಸೆಗೆ ಸಂಪೂರ್ಣ ಶರಣಾಗಿ ಅದನ್ನು ತೀರಿಸಿಕೊಳ್ಳಲು ತನ್ನ ಕಲೆಯನ್ನೇ ಬಳಸಿಕೊಳ್ಳುತ್ತಾನೆ. ಅವನಲ್ಲಿರುವ ಸಂಗೀತಕಲೆಯಲ್ಲಿ ಸೌಂದರ್ಯವಿದೆ ಆದರೆ ಶಿವತ್ವವಿಲ್ಲ. ಬದುಕಿನಲ್ಲಿ ನೈತಿಕಪ್ರಜ್ಞೆ ತುಸುಮಟ್ಟಿಗೆ ಚಿಗುರೊಡೆಯುವ ವಯಸ್ಸಿನಲ್ಲಿ ಮಧುಮಿತಾಳಿಗೆ ಅವನ ಮಾತಿನಿಂದ ಅಸಹ್ಯ ಹುಟ್ಟಿದರೂ ಸಂಗೀತದ ಸೂಕ್ಷ್ಮತೆಯನ್ನು, ಸೌಂದರ್ಯವನ್ನು, ಮಾಂತ್ರಿಕ ಶಕ್ತಿಯನ್ನು ಅರಿಯುವ ಹಾಗೂ ಅವೆಲ್ಲವನ್ನು ತನ್ನದಾಗಿಸಿಕೊಳ್ಳುವ ಉತ್ಕಟತೆಯ ಮುಂದೆ ಅದು ಗೌಣವಾಗುತ್ತದೆ. ಪ್ರತಿ ಹಂತದಲ್ಲೂ ಅವಳು ಮೋಹನಲಾಲನ ಕುರಿತಾದ ವದಂತಿಗಳನ್ನು ತನ್ನ ಸಂಗೀತ ಸಾಧನೆಗೆ ಅಡ್ಡಿಯಾಗದಂತೆ ಹದಗೊಳಿಸಿಕೊಂಡು ಪ್ರತಿಕ್ರಿಯಿಸುತ್ತಾಳೆ. ಅವಳಿಗೆ ಕೇವಲ ಶಾಸ್ತ್ರ ತಿಳಿದವರಿಂದ ಕಲಿತು ಸಂಗೀತದ ಶಿಕ್ಷಕಿಯಾಗುವ ಮನಸ್ಸಿರಲಿಲ್ಲ. ವಾಡೇಕರ್ ಮಾಸ್ತರರಿಂದ ಕಲಿಯುವ ಮಿತಿ ಅವಳ ಅರಿವಿಗೆ ಬರುತ್ತದೆ. ಪುನಃ ಮೋಹನಲಾಲನಲ್ಲಿ ಕಲಿಯುವ ಬಯಕೆಯಾಗುವುದು ಅವನ ಸಂಗೀತ ಕಚೇರಿಯಲ್ಲಿ ಶ್ರೋತೃವಾಗಿ ಕೇಳಿದಾಗ. ಆ ಕಾರ್ಯಕ್ರಮದಲ್ಲಿ ಮೋಹನಲಾಲ್ ಶುದ್ಧ ಕಲ್ಯಾಣದ ಬಡಾ ಖಯಾಲ್, ಬಿಲಾವಲ್ ತಾಟಿನ ದುರ್ಗಾ ರಾಗದ ಛೋಟಾ ಖಯಾಲನ್ನು, ಮಾಲಕಂಸ ರಾಗವನ್ನು ವಿಸ್ತಾರವಾಗಿ ಹಾಡಿ ಭೈರವಿ ರಾಗದೊಂದಿಗೆ ಮುಗಿಸಿದ್ದ. ಎಲ್ಲ ರಾಗಗಳನ್ನು ಪ್ರಸ್ತುತಪಡಿಸುವಾಗ ನುರಿತ ಸಂಗೀತಗಾರ ಯಾವ ಯಾವ ರೀತಿಯ ಚಮತ್ಕಾರವನ್ನು ರಾಗ ವಿಸ್ತಾರದಲ್ಲಿ ತೋರ್ಪಡಿಸುತ್ತಾನೆ ಎನ್ನುವುದನ್ನು ಶಾಸ್ತ್ರಬದ್ಧವಾಗಿ ಸುಲಲಿತವಾಗಿ ಹೇಳುವಾಗ ಕಾದಂಬರಿಕಾರರ ಆಳವಾದ ಸಂಗೀತಜ್ಞಾನ ಪಾರದರ್ಶಕವಾಗಿ ಓದುಗರಿಗೆ ಅರಿವಾಗುತ್ತದೆ.

ಮೊದಲು ಮೋಹನಲಾಲನ ನಡತೆಗೆ ಬೇಸತ್ತು ತನ್ನ ಗುರುವನ್ನು ಬದಲಾಯಿಸಿದ ಮಧುಮಿತಾ ಕಾರ್ಯಕ್ರಮದ ಬಳಿಕ ಅವನ ಸಂಗೀತಕ್ಕೆ ಮತ್ತೆ ಒಲಿಯುತ್ತಾಳೆ. ಅವಳ ಭಾವದಲ್ಲಾಗುವ ಬದಲಾವಣೆಗಳನ್ನು ಸೂಚಿಸುವಾಗ ಕಾದಂಬರಿಯಲ್ಲಿ ಬಳಸಿದ ತಂತ್ರ ವಿಶೇಷವಾಗಿದೆ. ಅವಳಿಗೆ ಮೋಹನಲಾಲನಿಗೆ ತಂಬೂರಿಯ ಒತ್ತಾಸೆ ಕೊಡುತ್ತಿರುವ ಅವನ ಶಿಷ್ಯ ರಜನಿ ಕೌಶಲಗಳ ಮೇಲೆ ಅಸೂಯೆ ಹುಟ್ಟುತ್ತದೆ. “ಎಷ್ಟು ಚೆನ್ನಾಗಿದ್ದೀನಿ ಹಣೆಯ ಅಗಲ, ಕಣ್ಣುಗಳ ಸ್ವರೂಪ, ನಯವಾದ ಮೀಂಡಿನಂತೆ ಬಾಗಿರುವ ಹುಬ್ಬುಗಳು, ಪೂರ್ವಾಂಗ ಉತ್ತರಾಂಗಗಳನ್ನು ದೃಢವಾಗಿ ವಿಂಗಡಿಸಿದರೂ ಕೋಮಲ ಸ್ವರೂಪದಲ್ಲಿರುವ ಮಧ್ಯಮದಂತಹ ಮೂಗು ಈ ರೂಪ ಅವಳಿಗೆಲ್ಲಿಂದ ಬರಬೇಕು?”(ಪುಟ 40) ಎಂದು ತನ್ನ ಮುಖವನ್ನು ರಜನಿ ಕೌಶಲಳ ಮುಖದೊಂದಿಗೆ ಹೋಲಿಸಿಕೊಳ್ಳುತ್ತಾಳೆ. ಈ ಒಂದೇ ವಾಕ್ಯದಲ್ಲಿ ಮಧುಮಿತಾಳ ಮುಖ ಸೌಂದರ್ಯ, ಸಂಗೀತದ ಸೌಂದರ್ಯ ಹಾಗೂ ರಜನಿ ಕೌಶಲಗಳ ಬಗ್ಗೆ ಅವಳಿಗೆ ಇರುವ ಅಸೂಯೆಯ ಭಾವಗಳು ಒಟ್ಟಿಗೇ ಅನುಭವಕ್ಕೆ ಬರುತ್ತವೆ. ಭೈರಪ್ಪನವರ ಇಂತಹ ಕಟ್ಟುವ ಕೌಶಲ್ಯ ಕಾದಂಬರಿಯ ಉದ್ದಕ್ಕೂ ಕಂಡುಬರುವುದು. ನಾಗಪುರದಲ್ಲಿ ಹಿಂದೊಮ್ಮೆ ನಡೆದ ಮೋಹನಲಾಲನ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಮಾಹಿಮ್‌ನ ಜವಳಿ ವ್ಯಾಪಾರಿ ಮಾಥುರ್ ಹಾಗೂ ಗೋರೆ ಸಾಹೇಬರು ಮಾತನಾಡಿಕೊಳ್ಳುವಾಗ ಮಧುಮಿತಾಳಿಗೆ ಅವನ ಹೆಂಡತಿ ಕಲಾಧರ್ಮವನ್ನು ಅರ್ಥಮಾಡಿಕೊಳ್ಳದವಳು ಎಂಬುದು ಅರಿವಾಗುತ್ತದೆ. ಮೋಹನಲಾಲನ ಜೀವನದಲ್ಲಿ ಬರುವ ರಾಗಿಣಿಯರಲ್ಲಿ ಒಬ್ಬಳಾದ ಚಂಪಾಳ ಪಾತ್ರಕ್ಕೆ ಮೊದಲ ಹಂತದ ಹೆಣಿಗೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಅನಾಮಧೇಯವಾಗಿ ಪ್ರವೇಶ ಕೊಡಲಾಗಿದೆ. ಮಧುಮಿತಾ ಅವನ ಬೆಳಗಿನ ತೋಡಿ ರಾಗದ, ಅಪರಾಹ್ನದ ಸಾರಂಗ ರಾಗದ, ಮಲ್ಹಾರ ರಾಗದ ಕ್ಯಾಸೆಟ್ಟನ್ನು ಹಾಕಿ ಕೇಳುತ್ತಾಳೆ. ಅವನು ಹಾಡುವ ರಾಗಗಳಲ್ಲೆಲ್ಲ ಯಾತನೆ ಮೂಲ ಶ್ರುತಿ ಎನ್ನುವುದನ್ನು ಕಂಡುಕೊಂಡ ಅವಳಿಗೆ ಉತ್ಸಾಹದಲ್ಲಿ ಹಾಡುವ ಧೃತಗತಿಯಲ್ಲೂ ನೋವು ಕಾಣಸುತ್ತದೆ. ಸಂಗೀತದಲ್ಲಿ ಕಲಾಕಾರನು ತನ್ನ ನೋವನ್ನೂ ಹೊರಹಾಕಿ ಹಗುರುಮಾಡಿಕೊಳ್ಳಬಲ್ಲ. ಅದೊಂದು ತಪಸ್ಸು ಎನ್ನುವುದನ್ನು ಕಾದಂಬರಿಕಾರರು ತೋರಿಸಿರುತ್ತಾರೆ. “ಇಂತಹ ಸೂಕ್ಷ್ಮ ಸಂವೇದೀ ಸುಕುಮಾರ ಮನಸ್ಸಿನ ಕಲಾವಿದ ಗಂಡನನ್ನು ಕೈಹಿಡಿದು ಅವರನ್ನು ಹಣ ಸಂಪಾದನೆಯ ಸಾಧನವನ್ನಾಗಿ ಬಳಸಿದ ಪಾಪಿ, ರಾಕ್ಷಸಿ” ಎಂದು ಚಂಪಾಳನ್ನು ಮಧುಮಿತಾ ಬೈದುಕೊಳ್ಳುತ್ತಾಳೆ (ಪುಟ 40). ಸಂಗೀತವೆಂಬುದು ಮಾರಾಟದ ಸರಕಲ್ಲ ಎಂಬುದನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ಇವೆಲ್ಲ ಅವಳ ಮನಸ್ಸನ್ನು ಚಂಚಲಗೊಳಿಸಿದ ಅಂಶಗಳು. ಸಂಗೀತವನ್ನು ಸಾಹಿತ್ಯದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೇ ಭಾಗದಲ್ಲಿ ಬರುವ ಗಮನ ಸೆಳೆಯುವ ಸಾಲುಗಳನ್ನು ತುಸುವಾದರೂ ಉಲ್ಲೇಖಿಸಲೇಬೇಕು. ‘ಪ್ರಪಂಚದಲ್ಲಿರುವ ರೂಕ್ಷತನವನ್ನು ಕರಗಿಸಿ ಎಲ್ಲೆಲ್ಲೂ ಮಾರ್ದವತೆಯನ್ನು ಸೃಷ್ಟಿಸುವುದೇ ಸಂಗೀತದ ಧರ್ಮ ಎನ್ನಿಸಿ ಸಂಗೀತದ ಬಗೆಗೆ ಹೊಸ ಅರಿವು ಉಂಟಾದುದಕ್ಕೆ ಪುಳಕವಾಯಿತು. ಹೌದು. ಅವರ ಗಾಯನದಲ್ಲಿರುವುದು ಈ ಗುಣ, ಮಾರ್ದವತೆಗೆ ಹದ ಕೊಡುವ ಗುಣ, ಬರಿ ನೋವಲ್ಲ ಎನ್ನಿಸಿತು. ನನ್ನ ಮುಖವನ್ನೇ ನೋಡಿಕೊಳ್ಳುತ್ತಾ ಎಷ್ಟೋ ಹೊತ್ತು ಬ್ರಷ್ ಚಲಿಸುತ್ತಿದ್ದೆ ವಿಲಂಬಿತ ಲಯದಲ್ಲಿ; ಮಧ್ಯ ಅಥವಾ ಧೃತಲಯದಲ್ಲಿ ಬ್ರಷ್‌ ಆಡಿಸಿದರೆ ಮಾರ್ದವ ಭಾವವು ಕರಗಿ ಹೋಗುತ್ತದೆ ಎಂಬಂತೆ” ಎನ್ನುವುದು ಮಧುಮಿತಾಳ ಆಲೋಚನೆ (ಪುಟ 41), ಮೋಹನಲಾಲನ ಗಾಯನದಲ್ಲಿರುವ ಸೌಂದರ್ಯವನ್ನು ಅವಳು ನಿಧಾನವಾಗಿ ಅನುಭವಿಸುತ್ತ ಮನಸ್ಸನ್ನು ಬದಲಾಯಿಸಿಕೊಳ್ಳುತ್ತಿರುವ ಸಂದರ್ಭವಿದು. ಇಂತಹ ಅಚ್ಚರಿ ಮೂಡಿಸುವ ಪ್ರತೀಕಗಳು ಈ ಕಾದಂಬರಿಯಲ್ಲಿ ಧಾರಾಳವಾಗಿವೆ.

ಮತ್ತೆ ಶಿಷ್ಯೆಯಾಗಿ ಸೇರಬೇಕೆನ್ನುವ ಮಧುಮಿತಾಳನ್ನು ಕಾಡುವುದು ನೀತಿಪ್ರಜ್ಞೆ, “ಹೆಂಗಸಿಗೆ ಮುಖ್ಯವಾದದ್ದನ್ನ ಕಳೆದುಕೊಳ್ಳದೆ ವಿದ್ಯೆ ಕಲಿಯಲು ಸಾಧ್ಯವೇ ಇಲ್ಲವೇ? ಎನಿಸಿ ಕೋಪವೂ ಬಂತು” (ಪುಟ 42) ಎಂದು ತನ್ನ ಅಸಹಾಯಕತೆಯನ್ನು ಅವಳು ಹೊರಹಾಕುತ್ತಾಳೆ. ಪುನಃ ಅವನಲ್ಲಿಯೇ ಹೋಗಿ ಸಂಗೀತವನ್ನು ಕಲಿಯಲು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ಪಶ್ಚಿಮ ಬಾಂದ್ರಾದಲ್ಲಿರುವ ಕಟ್ಟಡದ ಏಳನೆಯ ಮಹಡಿಯಲ್ಲಿರುವ ಅವನ ಫ್ಲಾಟ್ ನ್ನು ಪುನರ್‌ಪ್ರವೇಶ ಮಾಡುವಾಗಲೂ ಅವಳ ತಾಕಲಾಟ ಎದ್ದು ಕಾಣುತ್ತದೆ. ಲಿಫ್ಟ್‌ನ ” ಬಾಗಿಲು ಮುಚ್ಚಿಕೊಳ್ಳುವ ಮೊದಲು ಅದರೊಳಗೆ ನುಗ್ಗಿ ಏಳನೆಯ ಸಂಖ್ಯೆಯ ಗುಂಡಿ ಒತ್ತಿದೆ. ಅದು ಎಲ್ಲಿಯೂ ನಿಲ್ಲದೆ ಏರಿ ಮುಟ್ಟಿತು, ಷಡ್ಜದಿಂದ ಷಡ್ಜಕ್ಕೆ ಮೀಂಡು ಹೊಡೆದಂತೆ”. ಇಲ್ಲಿ ‘ಏಳನೆಯ ಅಂತಸ್ತು’, ‘ಷಡ್ಜಡದಿಂದ ಷಡ್ಜ’ ಎನ್ನುವ ಸಂಗೀತದ ಸಪ್ತಸ್ವರಗಳ ಕಲ್ಪನೆಯನ್ನು ಲೇಖಕರು ತಂದಿರುತ್ತಾರೆ (ಪುಟ 44). ಮನಸ್ಸಿನ ಅನೇಕ ತಾಕಲಾಟಗಳನ್ನು ಸಂಗೀತಕ್ಕೆ ಒಗ್ಗಿಸಿಕೊಂಡು ಕಾದಂಬರಿಯುದ್ದಕ್ಕೂ ಭೈರಪ್ಪನವರು ತಂದಿರುವುದು ಅನನ್ಯವೆನಿಸುತ್ತದೆ. ಒಬ್ಬ ಹೆಣ್ಣಿನ ಮನಃಸ್ಥಿತಿಯನ್ನು, ಅವಳೊಳಗಿರುವ ತಾಳ್ಮೆ, ಸಹನೆ, ಕರುಣೆ, ದಿಟ್ಟತನಗಳೆಲ್ಲವನ್ನೂ ಒಳಗೊಂಡಂತೆಯೇ ಅನೇಕ ಒಳತೋಟಿಗಳನ್ನೂ ಜೀವಂತವಾಗಿ ಮಂದ್ರದಲ್ಲಿ ತೆರೆದಿಡುವ ಭೈರಪ್ಪನವರ ಸ್ತ್ರೀ ಸಂವೇದನೆ, ಚಿಂತನೆ ಶ್ರೀಮಂತವಾದದ್ದು.

ಮೋಹನಲಾಲ್‌ನಂತಹ ಸಂಗೀತ ಕಲಾವಿದನ ಧ್ಯಾನವನ್ನು ಸಹಜವೆಂಬಂತೆ ಕದಡುವ ಉತ್ಕಟ ಕಾಮ ಬಯಕೆ ಅವನನ್ನು ಅನೇಕ ಬಾರಿ ಸ್ತ್ರೀ ಸಾಂಗತ್ಯಕ್ಕೆ ಬಲವಂತಪಡಿಸುತ್ತದೆ. ಆದರೆ ಅದನ್ನು ಶಾಶ್ವತವಾಗಿ ನಿಭಾಯಿಸುವುದು ಹೊರೆ ಎಂದೇ ಅವನಿಗೆ ಅನಿಸುತ್ತದೆ. ಸ್ತ್ರೀ ಸಾಂಗತ್ಯದ ಸಂದರ್ಭಗಳಲ್ಲಿ ಕಾದಂಬರಿಕಾರರ ತಂತ್ರಗಾರಿಕೆ ಕಾದಂಬರಿಯ ಔನ್ನತ್ಯವನ್ನೂ ಆಶಯವನ್ನೂ ಪೊರೆಯುವಂತಿದೆ. ರಾಗ ರಾಗಿಣಿಯರ ಸಂಧಿಕಾಲದಂತೆ ಸಂಗೀತಶಾಸ್ತ್ರಕ್ಕೆ ಅನುಗುಣವಾಗಿ ಕೇವಲ ಸೌಂದರ್ಯ ಪ್ರಜ್ಞೆಯನ್ನು ಉನ್ನತವಾಗಿ ಇಟ್ಟುಕೊಂಡು ಚಿತ್ರಿಸಿರುವ ರೀತಿ ವಿಶೇಷವಾಗಿದೆ. ಇಲ್ಲಿ ಶುಷ್ಕತೆ ಅಶ್ಲೀಲತೆ ಎರಡಕ್ಕೂ ಎಡೆಯೇ ಇಲ್ಲ. ಕೇವಲ ಚಿತ್ತವೃತ್ತಿಗೆ ಸಂಬಂಧಿಸಿದಂತೆ ಕಾವ್ಯರಸವನ್ನು ಬೆರಗು ಹುಟ್ಟಿಸುವ ರೀತಿಯಲ್ಲಿ ಅಳವಡಿಸಿದ್ದಾರೆ. ಕಲಾಕಾರರಿಬ್ಬರ ಗಂಧರ್ವ ವಿವಾಹದ ಪರಿಕಲ್ಪನೆಯನ್ನೂ ಇಲ್ಲಿ ತರಲಾಗಿದೆ. ಗಂಧರ್ವವಿವಾಹ ಮಾಡಿಕೊಂಡು ವಿದ್ಯೆಗಾಗಿ ತನ್ನನ್ನು ಸಂಪೂರ್ಣವಾಗಿ ಮೋಹನಲಾಲನಿಗೆ ಅರ್ಪಿಸಿಕೊಂಡ ಮಧುಮಿತಾ ಮುಂದೊಮ್ಮೆ ಸಾಂಸಾರಿಕ ಜೀವನವನ್ನು ಆಶಿಸಿ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿರುವ ವಿಕ್ರಂ ಷಾ ನೊಂದಿಗೆ ಮದುವೆ ಮಾಡಿಕೊಂಡು ಅಮೆರಿಕದಲ್ಲಿ ನೆಲೆಸುತ್ತಾಳೆ.

ಲಾರೆನ್ ಸ್ಮಿತ್‌ಳ ಶಾರೀರಿಕ ಆಯಕಟ್ಟನ್ನು ವರ್ಣಿಸುವಾಗ ಕಾದಂಬರಿಕಾರರು ಅವಳನ್ನು ಭೂಪಾಲಿ ರಾಗಕ್ಕೆ ಹೋಲಿಸುತ್ತಾರೆ. “ಭೂಪರಾಗದ ಎಲ್ಲ ಸುಖೋಲ್ಲಾಸಗಳು ಅವಳಲ್ಲಿತ್ತು. ಅದಕ್ಕಾಗಿ ನಾನು ಅವಳನ್ನು ಭೂಪಾಲಿ ಎಂದು ಕರೆಯುತ್ತಿದ್ದೇನೆ” ಎನ್ನುತ್ತಾನೆ ಮೋಹನಲಾಲ್, ಅವಳ ಸೌಂದರ್ಯವನ್ನು ವರ್ಣಿಸುವಾಗ ಇಡೀ ಭೂಪಾಲಿರಾಗದ ಲಕ್ಷಣವನ್ನೇ ಹೇಳಿರುತ್ತಾರೆ. ರಾಗದ ಸ್ವಭಾವಕ್ಕೆ ತಕ್ಕಂತೆ ಕಾದಂಬರಿಯ ಹರಿವಿಗೆ ಬೇಕಾಗುವ ಎಲ್ಲ ಪಾತ್ರಗಳನ್ನು ಸೃಷ್ಟಿಸಿರುವುದು ಭೈರಪ್ಪನವರ ವಿಶೇಷ ಕಲೆಗಾರಿಕೆ. ಭೈರಪ್ಪನವರ ವರ್ಣನಾ ಕೌಶಲ್ಯದ ಒಂದು ಉದಾಹರಣೆ ಕೊಡುವುದಾದರೆ ಮೋಹನಲಾಲ್ ಓಂಕಾರಾಶ್ರಮದಲ್ಲಿರುವಾಗ ಪಂಡಿತ ರಾಮ ನಾರಾಯಣ ರೋಹಿಲಾ ಅವರು ಹಾಡಿದ ಭೂಪಾಲಿ ರಾಗದ ಭಾವ ವರ್ಣನೆಯ (ಪುಟ 75) ಮುಂದುವರಿದ ಭಾಗವಾಗಿ ಲಾರೆನ್ ಸ್ಮಿತ್ಕಳನ್ನು ವರ್ಣಿಸಿರುವುದು (ಪುಟ 116). ಸ್ಥಾಯಿಭಾವ ಒಂದೇ ಆದರೂ ಸಂದರ್ಭಕ್ಕೆ ಅನುಗುಣವಾಗಿ ಹುಟ್ಟುವ ಸಂಚಾರಿ ಭಾವಗಳು ಪೋಷಕವಾಗಿ ಒಂದು ರಾಗ ಸ್ಪುರಿಸುವ ಭಾವಗಳ ಅಂತರವನ್ನು ಸ್ಪಷ್ಟವಾಗಿ ಇಲ್ಲಿ ಕಾಣಬಹುದು. ನೂರೈವತ್ತಕ್ಕೂ ಹೆಚ್ಚಿನ ಸಂಗೀತಕ್ಕೆ ಸಂಬಂಧಿಸಿದ ಅಲಂಕಾರಗಳನ್ನು ಮಂದ್ರ ಕಾದಂಬರಿಯಲ್ಲಿ ಬಳಸಲಾಗಿದೆ. ನೈತಿಕತೆಗೆ ಅಡ್ಡ ಬರುವ ಸಂಚಾರಿ ಭಾವಗಳನ್ನು ಅವುಗಳಿಂದ ಆಗುವ ಪರಿಣಾಮಗಳನ್ನು ಕಾದಂಬರಿಕಾರರು ಒಂದಲ್ಲ ಒಂದು ರಾಗದ ಮೂಲಕ ದೀರ್ಘಾಲಾಪ, ತಾನ, ಬೋಲ್, ಖಯಾಲ್‌ಗಳ ಮೂಲಕ ಹೊಸೆದಿರುತ್ತಾರೆ. ಕೊನೆಯಲ್ಲಿ ಮಧುಮಿತಾಳು ಮೋಹನಲಾಲನಿಂದ ಕಲಿತ ಶುದ್ದ ಕಲ್ಯಾಣ ರಾಗವನ್ನು ತನ್ನದೇ ದಾರಿಯಲ್ಲಿ ರಾಗವರ್ಧನೆ ಮಾಡಿಕೊಂಡಾಗ ಉಂಟಾಗುವ ವಿಶಿಷ್ಟ ಭಾವನೆಗೆ ಕೊಟ್ಟಿರುವ ಉಪಮೆ ಅದ್ಭುತವಾಗಿದೆ: “ಶಾಂತ ನಿಶ್ಚಲವಾಗಿ ಹರಿಯುವ ಕಲ್ಯಾಣದ ಕಾಲುವೆಯ ಮೇಲೆ ತೇಲುವ ಭೂಪಾಲಿಯ ಸೊಡರುಗಳು ಎಂಬ ವಿವರಣೆ ಹೆಚ್ಚುಸೂಕ್ತ ಎನ್ನಿಸಿತು”. (ಪುಟ 593). ಕಾದಂಬರಿಯ ಆರಂಭದಿಂದ ಅಂತ್ಯದವರೆಗೂ ಅನೇಕ ವಿಸ್ಮಯ ಸಂಗತಿಗಳು ಹಾಗೂ ಸಂಗೀತ ತಪ್ಪದೇ ಮನಸ್ಸನ್ನು ಆವರಿಸಿಕೊಂಡೇ ಇರುವಂತೆ ಸಾಹಿತ್ಯಕವಾಗಿ ಸೃಷ್ಟಿಸಿದ ಒಂದು ಬೃಹತ್ತಾದ ಕಾದಂಬರಿ ಮಂದ್ರ. ಸಂಗೀತದ ಒಂದು ಕಲಾಕೃತಿಯಾಗಿ ಅತ್ಯಂತ ಲವಲವಿಕೆಯಿಂದ, ಭಿನ್ನ ರೀತಿಯಿಂದ ಭೈರಪ್ಪನವರು ಮಂದ್ರವನ್ನು ರಚಿಸಿದ್ದಾರೆ. ಅದನ್ನು ಜನ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದಕ್ಕೆ ಬೇರೆ ಸಮರ್ಥನೆ ಬೇಕಿಲ್ಲ. ಸಂಗೀತವನ್ನು ಸಾಹಿತ್ಯದ ವಾಕ್ಯಗಳಲ್ಲಿ ನೇಯ್ದೆ ಮಾಡಿ ಸಮಕಾಲೀನ ವಿದ್ಯಮಾನವನ್ನು, ಬದುಕಿನ ಹಲವು ಆಯಾಮಗಳನ್ನು ಅದಕ್ಕೆ ಜೋಡಿಸಿರುವುದು ಅತ್ಯಂತ ಆಶ್ಚರ್ಯಕರವಾಗಿದೆ. ಇಂತಹ ಒಂದು ಶ್ರೇಷ್ಠ ಕಾದಂಬರಿಯ ಬಗ್ಗೆ ಕಿಂಚಿತ್ ಬರೆಯುವಾಗ ನನಗೆ ನಾಲ್ಕು ವರ್ಷಗಳ ಹಿಂದೆ ಕಲಿತ ಉತ್ತರಾದಿ ಸಂಗೀತವನ್ನು ಮತ್ತೊಮ್ಮೆ ಮೆಲುಕು ಹಾಕುವಂತಾಯಿತು. ಹಾರ್ಮೋನಿಯಂನಲ್ಲಿ ಕರಿಯ ಎರಡನ್ನು ಹಿಡಿದು ಷಡ್ಜಕ್ಕೆ ಶ್ರುತಿ ಹಿಡಿದು ಆನಂದಿಸಿ ಇಲ್ಲಿ ಬರುವ ಕೆಲವು ರಾಗಗಳ ಆರೋಹ-ಅವರೋಹ, ತುಸು ಆಲಾಪ, ತಾನ್ ಹಾಗೂ ಚೀಜ್‌ಗಳ ಮೂಲಕ ಸುತ್ತಿ ಬಂದ ಅಪೂರ್ವ ಅನುಭವವಾಯಿತು. ಸಂಗೀತದಂತಹ ಸಾಹಿತ್ಯ ‘ಮಂದ್ರ’ದ ಓದು ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ನೀಡಿದ ಅನುಭವ ಅನಿರ್ವಚನೀಯ.

(ಈ ಲೇಖನಕ್ಕೆ 2014ರಲ್ಲಿ ಪ್ರಕಟವಾಗಿರುವ ‘ಮಂದ್ರ’ದ 12ನೆಯ ಮುದ್ರಣವನ್ನು ಆಧಾರವಾಗಿರಿಸಿಕೊಳ್ಳಲಾಗಿದೆ.)

* ಕಲಾ ಭಾಗ್ವತ್, ಮುಂಬಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಮತ್ತೆ, ಮಂದ್ರಾವಲೋಕನ”

  1. Parvathi Aithal

    ತುಂಬಾ ಪರಿಪಕ್ವ ಲೇಖನ. ಸಂಗೀತ ಜ್ಞಾನವಿಲ್ಲದೆ ಸಂಗೀತ ಸಂವೇದನೆಯಿಲ್ಲದೆ ಕಾದಂಬರಿಯ ಬಗ್ಗೆ ಇಷ್ಟು ಸಮರ್ಪಕವಾಗಿ ಬರೆಯಲು ಸಾಧ್ಯವಿಲ್ಲ. ಅಭಿನಂದನೆಗಳು ಕಲಾ ಭಾಗವತ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai