ಹಿನ್ನೀರು, ಲಗೂನ್ ಮತ್ತು ಕೃತಕ ಸರೋವರಗಳು

ಹಿನ್ನೀರು ಮತ್ತು ಕೃತಕ ಸರೋವರಗಳಿಗೆ ಪರಸ್ಪರ ಸಂಬಂಧ ಹೊಂದಿದ್ದು, ಅದು ಹೇಗೆ ಎಂದು ಪ್ರಸ್ತುತ ಲೇಖನದ ನಂತರದ ಭಾಗಗಳಲ್ಲಿ ತಿಳಿದು ಬರುತ್ತದೆ ಮತ್ತು ಹಿನ್ನೀರು ಹಾಗೂ ಲಗೂನ್ ಗಳಲ್ಲಿರುವ ಪ್ರಮುಖ ಅಂತರಗಳನ್ನು ಸಹ ತಿಳಿದು, ಇವುಗಳಿಂದ ಅಲ್ಲಿನ ಸ್ಥಳೀಯ ಜನರಿಗೆ ಮತ್ತು ಪರಿಸರಕ್ಕಾಗುವ ಒಳಿತು- ಕೆಡಕುಗಳನ್ನು ವಿಸ್ತಾರವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.

ಮೊದಲಿಗೆ, ಹಿನ್ನೀರು (ಬ್ಯಾಕ್ ವಾಟರ್) ಎಂದ ಕೂಡಲೇ ಬಹುತೇಕರಿಗೆ ನೆನಪಾಗುವುದು ಕೇರಳದಲ್ಲಿರುವ ಹಿನ್ನೀರು ಪ್ರದೇಶಗಳು, ಎಡ- ಬಲ ಭಾಗದಲ್ಲಿ ಸಾಲಿನ ಮ್ಯಾಗ್ರೋವ್ ಅರಣ್ಯ , ದೋಣಿ ವಿಹಾರಗಳು ಮತ್ತು ಕಣ್ಣಿಗೆ ತಂಪಾದ ವಾತಾವರಣ, ಫೋಟೋ ಕ್ಲಿಕ್ಕಿಸಿಕೊಳ್ಳಲು ಸುಂದರವಾದ ಹಸಿರುಭರಿತ ಹಿನ್ನೆಲೆ.

ಹಿನ್ನೀರು ಹೇಗೆ ಸೃಷ್ಟಿಯಾಗುತ್ತವೆ? ಎಂದು ತಿಳಿದುಕೊಳ್ಳುವುದಾದರೆ – ನದಿಗಳು ಸಹಜವಾಗಿ ಹೆಚ್ಚಿನ ಹರಿವನ್ನು ಒಳಗೊಂಡು ಇಳಿಜಾರಿನ ದಿಕ್ಕಿನಲ್ಲಿ ಹರಿದು ಸಮುದ್ರ ಸೇರಿಕೊಳ್ಳುತ್ತದೆ. ನದಿಗಳು ಉಪನದಿಗಳಾಗಿ, ಮುಖ್ಯ ನದಿ ಹರಿವಿನಿಂದ ಕಾಲುವೆಯಾಗಿ ಪ್ರತ್ಯೇಕಿಸುವುದು ಅಥವಾ ನದಿಯ ಹರಿವನ್ನು ತಡೆಗೋಡೆ ಕಟ್ಟಿ ಆಣೆಕಟ್ಟು ನಿರ್ಮಿಸುವ ಮೂಲಕ ಕಡಿಮೆ ಅಥವಾ ಸಂಪೂರ್ಣ ಹರಿವನ್ನು ಸ್ಥಗಿತಗೊಳಿಸಿ ನದಿ ನೀರನ್ನು ಅಲ್ಲಿಯೇ ತಡೆಹಿಡಿಯುವ ಮೂಲಕ ಹಿನ್ನೀರು ಸೃಷ್ಟಿಯಾಗುತ್ತದೆ .

ಇಂತಹ ಜಲಪ್ರದೇಶವು (ಹಿನ್ನೀರು) ಮುಖ್ಯವಾಗಿ ವಿವಿಧ ಅಡಚಣೆಯ ಮೂಲಕ ರೂಪುಗೊಳ್ಳುತ್ತದೆ. ಮೊದಲು ತಡೆಗೋಡೆ ಮತ್ತು ಅಣೆಕಟ್ಟು ನದಿಯ ಹರಿವಿನ ಅಡ್ಡಲಾಗಿ ನಿರ್ಮಿಸುವುದರಿಂದ ಒಂದು ಬಗೆಯ ಹಿನ್ನೀರು ಸೃಷ್ಟಿಯಾಗಿ ಸಮುದ್ರ ಸೇರುವ ನದಿ ನೀರನ್ನು ಆ ಅಣೆಕಟ್ಟಿನ ಸಲುವಾಗಿ ತಡೆಗೋಡೆ ಸುತ್ತಲಿನಲ್ಲಿ ಹಿನ್ನೀರಾಗಿ ನೀರನ್ನು ಸಂರಕ್ಷಿಸಲಾಗುತ್ತದೆ, ಆದರೆ, ಪ್ರಮುಖ ಬಗೆಯ ಹಿನ್ನೀರು ಕಾಣಸಿಗುವುದು ಇಳಿಜಾರಿನ ದಿಕ್ಕಿನತ್ತ ಹರಿಯುವ ನದಿಗಳ ಮಾರ್ಗ ಬದಲಿಸಿ, ಅದರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸುವುದರಿಂದ ನದಿಯಂತೆ ಭಾಸವಾಗುವ, ಆದರೆ ಹರಿವಿಲ್ಲದ ಹಿನ್ನೀರು ರೂಪುಗೊಳ್ಳುತ್ತದೆ. ಪ್ರಮುಖವಾಗಿ ಈ ಬಗೆಯ ಹಿನ್ನೀರು ಪ್ರದೇಶಗಳನ್ನು ಕಾಣಸಿಗುವುದು ಭಾರತದ ದಕ್ಷಿಣ ಭಾಗದಲ್ಲಿರುವ ಕೇರಳ ರಾಜ್ಯದಲ್ಲಿ! ಇಂತಹ ಹಿನ್ನೀರು ಪ್ರದೇಶಗಳಲ್ಲಿ ದೋಣಿ ವಿಹಾರ, ದೋಣಿ ಪಯಣ, ಮೀನುಗಾರಿಕೆ, ಇನ್ನು ಇತ್ಯಾದಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚಿಸಿ ಪ್ರವಾಸಿಗಳನ್ನು ಸೆಳೆಯುತ್ತ ಶೇ .10 ರಷ್ಟು ಕೇರಳದ ಜಿಡಿಪಿ ಈ ಬಗೆಯ ಪ್ರವಾಸೋದ್ಯಮದಿಂದ ಬರುತ್ತದೆ.

ಕೇರಳದ ಪ್ರಮುಖ ಹಿನ್ನೀರು ಪ್ರದೇಶಗಳನ್ನು ಪಟ್ಟಿ ಮಾಡಿದರೆ- ಅಲೆಪ್ಪಿ, ಕುಮರ ಕೋಮ್, ಕುಟ್ಟನಾಡ್, ಕೊಲ್ಲಮ್, ತ್ರಿಶೂರ್, ಕಣ್ಣೂರ್ ಮತ್ತು ಮಲ್ಲಪುರಂ ಪ್ರಮುಖ ಹಿನ್ನೀರು ಪ್ರದೇಶಗಳಾಗಿವೆ. ಇದರಲ್ಲಿ ಅಲೆಪ್ಪಿಯನ್ನು “ಪೂರ್ವದ ವೆನಿಸ್” ಎಂದು ಕರೆಯಲಾಗುತ್ತದೆ. ಇದು ಕೇರಳದ ಪ್ರಮುಖ ಪ್ರವಾಸಿ ತಾಣವಾಗಿದ್ದು ಸಂಕೀರ್ಣವಾದ ಹಿನ್ನೀರು, ಕಾಲುವೆ, ಸಣ್ಣ ಕೆರೆಗಳಿಂದ ಕೂಡಿದ್ದು ಮತ್ತು ವಿಶಿಷ್ಟ ಭೂಗೋಳ ಪ್ರದೇಶದಲ್ಲಿರುವ ಅಲೆಪ್ಪಿಯ ಹಿನ್ನೀರನ್ನು ಅಂದಿನ ವೈಸ್ ರಾಯ್ ಯಾಗಿದ್ದ ಲಾರ್ಡ್ ಕರ್ಜನ್ ಇದರ ಸೌಂದರ್ಯಕ್ಕೆ ಮನಸೋತು “ವೆನಿಸ್ ಆಫ್ ದಿ ಈಸ್ಟ್” ಎಂದು ಕರೆದಿದ್ದಾರೆ. ಇಲ್ಲಿ ಓಣಂ ಸಂದರ್ಭದಲ್ಲಿ ದೋಣಿ ಸ್ಪರ್ಧೆ ಸಹ ಆಚರಿಸಲಾಗುತ್ತದೆ ಮತ್ತು ಅಲೆಪ್ಪಿ ತೆಂಗಿನನಾರು ಉತ್ಪಾದಿಸುವ ಕೇಂದ್ರವಾಗಿದೆ.

ಸುಮಾರು 900 ಕಿ.ಮೀ. ಉದ್ದವಿರುವ ಅಲೆಪ್ಪಿ ಹಿನ್ನೀರು ಪ್ರದೇಶವು ತೆಂಗು ಮರಗಳಿಂದ ಮತ್ತು ನದಿಗಳಿಂದ ಪರಸ್ಪರ ಜೋಡಣೆಯಾಗಿರುವ ಕಾಲುವೆಗಳು, ಬತ್ತದ ಹಸಿರು ಜಮೀನು, ತಾಳೆ ಮರಗಳಿಂದ ಒಂದು ಉತ್ತಮವಾದ ಪರಿಸರವನ್ನೇ ಸೃಷ್ಟಿಸಿದೆ! ಅಕ್ಟೋಬರ್ -ಮಾರ್ಚ್ ತಿಂಗಳು ಅಲೆಪ್ಪಿ ನೋಡಲು ಉತ್ತಮ ಸಮಯವೆಂದು ಆಗ ವಾತಾವರಣ ತಂಪು ಮತ್ತು ಮನೋಹರವಾಗಿರುತ್ತದೆ ಎಂದು ಭಾವಿಸಲಾಗಿದೆ. ಪ್ರವಾಸಿಗರಿಗೆ ಮತ್ತು ಕೆಲಸದ ಒತ್ತಡದಿಂದ ವಿರಾಮ ತೆಗೆದುಕೊಳ್ಳ ಬಯಸುವವರಿಗೆ ಇಂತಹ ಹಿನ್ನೀರ ಪ್ರದೇಶಗಳು ಮನಸ್ಸಿಗೆ ನಿರಾಳ ಮತ್ತು ತಂಪು ನೀಡ ಬಹುದು.

ಜಲಾಶಯ ಅಥವಾ ಅಣೆಕಟ್ಟು ಒಂದು ಬಗೆಯ ಕೃತಕ ಸರೋವರಗಳೇ! ಹಾಗೆ ಜಲಾಶಯ ಎಂದ ಕೂಡಲೇ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಮೈಸೂರಿನಲ್ಲಿರುವ ಸರ್.ಎಮ್.ವಿಶ್ವೇಶ್ವರಯ್ಯನವರು ನಿರ್ಮಿಸಿದ “ಕೃಷ್ಣರಾಜ ಸಾಗರ” ಅಣೆಕಟ್ಟು ಆದರೆ ಇದಕ್ಕೂ ಮೊದಲು 1907ರಲ್ಲಿ ಸಂಪೂರ್ಣಗೊಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಿರ್ಮಾಣವಾದ “ವಾಣಿ ವಿಲಾಸ ಸಾಗರ ” ಇದು ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮತ್ತು ಅತ್ಯಂತ ಹಳೆಯ ಕೃತಕ ಸರೋವರವಾಗಿದ್ದು, ಭಾರತದ ಅತ್ಯಂತ ಉದ್ದದ ಜಲಾಶಯ ಎಂಬ ದಾಖಲೆಯೂ ಇದೆ.

ಇಂತಹ ಜಲಾಶಯವು ಒಂದು ಬಗೆಯ ಕೃತಕ ಸರೋವರವಾಗಿದ್ದು ಇದರಿಂದ ಅಂತರ್ಜಲದ ಸಾಮರ್ಥ್ಯ ಹೆಚ್ಚಾಗುತ್ತದೆ. ಕೃಷಿ ಮಾಡಲು,ವಿವಿಧ ಬಗೆಯ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ. ಜಲಾಶಯದ ಸುತ್ತಲೂ ಹಸಿರಿನಿಂದ ಸಮೃದ್ಧಿಯಾಗಿ ಔಷಧೀಯ ಸಸ್ಯಗಳು, ಅಲಂಕಾರಿಕ ಸಸ್ಯಗಳು ಮತ್ತು ವಿವಿಧ ಗಿಡ- ಮರಗಳನ್ನು ಉದ್ಯಾನವನದ ರೂಪದಲ್ಲಿ ಸೃಷ್ಟಿಸಿ ವಿವಿಧ ಪ್ರದೇಶದ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೆ ಮಳೆಯ ಪ್ರಮಾಣ ಕಡಿಮೆಯಿರುವ ಸಂದರ್ಭದಲ್ಲಿ ಇಂತಹ ಅಣೆಕಟ್ಟಿನ ಮೂಲಕ ಸಂರಕ್ಷಿಸುವ ಹಿನ್ನೀರನ್ನು ಸುತ್ತ-ಮುತ್ತಲಿನ ಊರಿನವರು ಬಳಸಿಕೊಳ್ಳಬಹುದು . ಹಾಗೇ, ಈ ಹಿನ್ನೀರಿನಲ್ಲಿ ಬಗೆ -ಬಗೆಯ ಜಲಚರಗಳು ಜೀವಿಸುವುದರಿಂದ ಮೀನುಗಾರಿಕೆಗೂ ಅವಕಾಶ ಮಾಡಿಕೊಡುತ್ತದೆ. ಕೆಲವೊಮ್ಮೆ, ಪ್ರತ್ಯೇಕ ಋತು ಕಾಲದಲ್ಲಿ ವಲಸೆ ಹಕ್ಕಿಗಳು ವಲಸೆ ಬಂದು ತಮಗೆ ಅನುಕೂಲವಾಗಿರುವಷ್ಟು ಸಮಯ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಜೀವ ಚಕ್ರವನ್ನು ನಡೆಸಿಕೊಳ್ಳಲು ಸಹಾಯವಾಗುತ್ತದೆ.

ವಾಣಿ ವಿಲಾಸ ಸಾಗರ (ವಿ.ವಿ.ಎಸ್) ಜಲಾಶಯವನ್ನು ‘ವೇದಾವತಿ’ ನದಿಯ ಅಡ್ಡಲಾಗಿ ನಿರ್ಮಿಸಲಾಗಿದ್ದು ಇದರ ಹಿಂದೆ ಮೈಸೂರು ಸಂಸ್ಥಾನದ ಶ್ರಮ ಮತ್ತು ಪೌರಾಣಿಕ ದಂತಕಥೆಯ ಹಿನ್ನೆಲೆಯಿದೆ. ವಾಣಿ ವಿಲಾಸ ಸಾಗರವನ್ನು ‘ಮಾರಿಕಣಿವೆ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. (ಮಾರಿ: ದೇವಿ ಮಾರಮ್ಮ; ಕಣಿವೆ: ಎರಡು ಬೆಟ್ಟಗಳ ಮಧ್ಯವಿರುವ ತಗ್ಗು ಪ್ರದೇಶ) ಹೀಗೆ ಕರೆಯಲು, ಇದರ ಸಮೀಪ “ಕಣಿವೆ ಮಾರಮ್ಮ ದೇವಸ್ಥಾನ” ಸ್ಥಾಪಿಸಲಾಗಿದ್ದು, ಅಲ್ಲಿನ ಅರ್ಚಕರು ಮೂಲ ದೇವಿಯ ದಿಕ್ಕು ತನ್ನ ಬೆನ್ನು ತೋರಿಸಿ ಭಕ್ತರಿಗೆ ದರ್ಶನ ನೀಡುತ್ತಿರುವಳು.ಇದರ ಕಾರಣ, ಜಲಾಶಯವನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ವೇದಾವತಿ ನದಿಯ ಆರ್ಭಟವನ್ನು ತಡೆಯಲು ಕಷ್ಟವಾಗುತ್ತಿದ್ದು, ದೇವಿಯು ತನ್ನ ಕಾಲನ್ನು ಅಡ್ಡಿಯಾಗಿಸಿ ನದಿಯನ್ನು ತಡೆದು ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು ಎಂಬ ಪ್ರತೀತಿಯ ಕಾರಣ ವಾಣಿ ವಿಲಾಸ ಸಾಗರವನ್ನು ಮಾರಿಕಣಿವೆಯೆಂದು ಕರೆಯಲಾಗುತ್ತದೆ.

ಇದರ ವಿಶೇಷತೆಗಳೇನೆಂದರೆ – ಸಿಮೆಂಟ್ ಬಳಸದೆ ಸಂಪೂರ್ಣವಾಗಿ ಗಾರೆಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ, ಡ್ರೋನ್ ಚಿತ್ರಗಳ ಮೂಲಕ ಗಮನಿಸಿದರೆ ಜಲಾಶಯದ ವಿಸ್ತಾರ ಭಾರತದ ಭೂಪಟದಂತೆ ಕಾಣುತ್ತದೆ. ವಾಣಿ ವಿಲಾಸ ಸಾಗರವು 142 ಅಡಿ ಎತ್ತರ, 405 .50 ಮೀ. ಉದ್ದ, 5,374 ಚದುರ ಕಿ.ಮೀ.ಜಲಾವೃತ, 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸೆಪ್ಟೆಂಬರ್ 2,2022, ರಂದು ಈ ಜಯಶಯವು 8 ಶತಮಾನಗಳ ಬಳಿಕ ಸಂಪೂರ್ಣ ಭರ್ತಿಯಾಗಿದೆ ಎಂಬ ದಾಖಲೆಯಿದೆ.

ಮೈಸೂರು ಸಂಸ್ಥಾನದ ಕೊಡುಗೆ ವಿ.ವಿ.ಎಸ್. ಜಲಾಶಯದ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರವಹಿಸಿದೆ. ಅಂದು ರಾಜರಾದ ಶ್ರೀ. ಚಾಮರಾಜೇಂದ್ರ ಒಡೆಯರ್ ರವರು ಕಲ್ಕತ್ತಾದಲ್ಲಿದ್ದಾಗ ಡಿಫ್ಥೇರಿಯಾ ಖಾಯಿಲೆಗೆ ತುತ್ತಾಗಿ ಮರಣ ಹೊಂದುತ್ತಾರೆ. ಆಗ ಅವರ ಪುತ್ರನಾದ ಶ್ರೀ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಕೇವಲ 10 ವರ್ಷವಾಗಿದ್ದು ಬ್ರಿಟಿಷ್ ನಿಯಮಾನುಸಾರ 15 ವರ್ಷದ ತುಂಬಿದ ಬಳಿಕವೇ ರಾಜರಿಗೆ ರಾಜ್ಯವನ್ನು ಆಳುವ ಅಧಿಕಾರವಿರುವ ಕಾರಣ ರಾಜಮಾತೆಯಾದ (ಚಾಮರಾಜೇಂದ್ರ ಒಡೆಯರ್ ರವರ ಶ್ರೀಮತಿ) ಕೆಂಪನಂಜಮ್ಮಣ್ಣಿಯವರು ರಾಜ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗ, ಶೇಷಾದ್ರಿ ಅಯ್ಯರ್, ಮೈಸೂರಿನ ದಿವಾನರಾಗಿದ್ದು ವಿವಿಎಸ್ ಜಲಾಶಯ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯನ್ನು ಅಂದು ಬರ ಪೀಡಿತ ಪ್ರದೇಶವೆಂದು ಗುರುತಿಸಿದ್ದ ಕಾರಣ ಅಲ್ಲಿ ಅಣೆಕಟ್ಟನ್ನು ನಿರ್ಮಿಸಿ ಜನರಿಗೆ ಅನುಕೂಲವಾಗಬೇಕೆಂದು ರಾಜಮಾತೆ ನಿರ್ಧರಿಸಿ, ಜಲಾಶಯ ಕಟ್ಟಲು ಬ್ರಿಟಿಷರ ಬಳಿ ಅನುಮತಿ ಕೇಳಿದಾಗ ಅವರೆಲ್ಲ ಈ “ಮಾರಿಕಣಿವೆ ನೀರಾವರಿ ಯೋಜನೆ”ಯನ್ನು ಮೊದಲು ನಿರಾಕರಿಸಿದ್ದರು ನಂತರ ಇದನ್ನು ಒಪ್ಪಿ, ಸರ್. ಮಾರ್ಕ್ ಕಬ್ಬನ್ ಮತ್ತು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ರವರ ಸಹಯೋಗದಿಂದ (1897 -1907 ) 10 ವರ್ಷಗಳ ಶ್ರಮದ ಬಳಿಕ ವಾಣಿ ವಿಲಾಸ ಸಾಗರದ ನಿರ್ಮಾಣ ಸಂಪೂಣವಾಯಿತು

.ನಿರ್ಮಾಣದ ಸಂದರ್ಭದಲ್ಲಿ ಹಣದ ಕೊರತೆಯಿಂದಾಗಿ ರಾಜಮಾತೆ ತಮ್ಮ ಒಡವೆಗಳನ್ನು ಮಾರಿ, ಸುಮಾರು 45 ಲಕ್ಷದ ವೆಚ್ಚದಲ್ಲಿ ವಿವಿಎಸ್ ಜಲಾಶಯ ನಿರ್ಮಾಣವಾಗಿ, ಇಂದೂ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮವಾದ ತಂತ್ರಜ್ಞಾನ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈ ಕಾರ್ಯವನ್ನು ಸ್ಪೂರ್ತಿಯಾಗಿಸಿಕೊಂಡು 15 ವರ್ಷ ತುಂಬಿದ ನಂತರ ರಾಜರಾದ ಶ್ರೀ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಪ್ರಾಂತ್ಯದಲ್ಲಿ, ಇಂದು ಪ್ರವಾಸಿ ತಾಣವೆಂದೇ ಪ್ರಸಿದ್ದವಾಗಿರುವ “ಕೃಷ್ಣ ರಾಜಸಾಗರ” ಜಲಾಶಯವನ್ನು ರಾಜರು ಮತ್ತು ಸರ್.ಎಮ್.ವಿಶ್ವೇಶ್ವರಯ್ಯನವರ ತಂತ್ರಜ್ಞಾನದಿಂದ ನಿರ್ಮಿಸಿದ್ದಾರೆ.

ವಿ.ವಿ.ಎಸ್ ನಿರ್ಮಾಣದ ಉಪಯೋಗದ ಫಲಗಳನ್ನು ಸುತ್ತಲಿನ ಹಿರಿಯೂರು, ಚಳ್ಳಕೆರೆ ಭಾಗಗಳಲ್ಲಿ – ಕಬ್ಬು, ರಾಗಿ, ಬತ್ತ, ಹತ್ತಿ, ತೆಂಗುಗಳನ್ನು ಬೆಳೆಯುತ್ತ ಮತ್ತು ರಾಣಿಯನ್ನು ಗೌರವಿಸುವ ಸಲುವಾಗಿ ಅಂದಿನ ರೈತರು ಕಬ್ಬು ಬೆಳೆದು ಅದರ ಮಾರಾಟದ ಹಣದಿಂದ “ವಾಣಿ ಸಕ್ಕರೆ ಕಾಲೇಜ”ನ್ನು ನಿರ್ಮಿಸಿ ಹಲವು ಆಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾಬುದ್ಧಿ ನೀಡುವ ಸಂಸ್ಥೆಯಾಗಿದೆ. ಮೀನುಗಾರಿಕೆಯನ್ನೂ ಇಲ್ಲಿ ಪ್ರೋತ್ಸಾಹಿಸಲಾಗಿದೆ, ಅಲ್ಲದೇ ವಿ.ವಿ.ಎಸ್ ಸುತ್ತ-ಮುತ್ತ ಔಷಧಿ ಸಸ್ಯಗಳನ್ನು “ಪಂಚವಟಿ” ಎಂಬ ಉದ್ಯಾನವನದ ಹೆಸರಿನಲ್ಲಿ ಬೆಳೆಸಿ ಪೋಷಿಸಲಾಗುತ್ತಿದೆ. ಇಂತಹ ವಿಶಿಷ್ಟವಾದ ವಾಣಿ ವಿಲಾಸ ಸಾಗರವು ಜನರಲ್ಲಿ ಕೆ.ಆರ್.ಎಸ್. ನಂತೆ ಪ್ರಸಿದ್ಧಿಯಾಗದಂತೆ ಇರುವುದು ಬೇಸರದ ಸಂಗತಿ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ವೈಶಿಷ್ಟ್ಯತೆಗಳನ್ನು ತಿಳಿದು ಪ್ರವಾಸಿಗರು ಭೇಟಿ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.

ವಾಣಿ ವಿಲಾಸ ಸಾಗರದ ಮೂಲಕ ಕೃತಕ ಸರೋವರದ ಒಂದು ಬಗೆಯನ್ನು ತಿಳಿದುಕೊಳ್ಳುವಂತಾಯಿತು ಮತ್ತು ಜಲಾಶಯದ ನಿರ್ಮಾಣದ ಮೂಲಕ ನದಿಯು ಹಿನ್ನೀರಾಗಿ ಪರಿವರ್ತನೆಗೊಳ್ಳುತ್ತದೆ. ಆದರೆ, ಮೊದಲು ಸರೋವರಗಳೆಂದರೆ ಏನು? ಎಂದು ವಿವರಿಸುವುದಾದರೆ- ನಾಲ್ಕು ದಿಕ್ಕುಗಳಿಂದಲೂ ಭೂಮಿಯಿಂದ ಸುತ್ತುವರೆದು ಮಧ್ಯಭಾಗದಲ್ಲಿ ಹಳ್ಳದ ಆಕಾರದಲ್ಲಿ ನೀರಿನಿಂದ ತುಂಬಿರುವ ಪ್ರದೇಶವೇ ಸರೋವರಗಳು. ಕೊಳಗಳು, ಕೆರೆಗಳು ನೈಸರ್ಗಿಕ ಸರೋವರಗಳಾದರೇ, ಮಾನವ ನಿರ್ಮಿತ ಜಲಾಶಯಗಳು ಅಥವಾ ಅಣೆಕಟ್ಟುಗಳೇ ಕೃತಕ ಸರೋವರಗಳು. ಅಲ್ಲದೇ ನಗರಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ನೀರಿನ ಅಗತ್ಯವನ್ನು ಪೂರೈಸಲು ಕೃತಕವಾಗಿ ನಿರ್ಮಿಸಲ್ಪಡುವ ಕೆರೆಗಳು ಸಹ ಇನ್ನೊಂದು ಬಗೆಯ ಕೃತಕ ಸರೋವರಗಳೇ !
ಇಂತಹ ಕೆರೆಯ ರೂಪದ ಒಂದು ಕೃತಕ ಸರೋವರದ ಉದಾಹರಣೆಯೇ – ಬೆಂಗಳೂರಿನಲ್ಲಿರುವ “ಹೆಸರುಘಟ್ಟ ಕೆರೆ”. ಒಂದು ಕಾಲದಲ್ಲಿ “ಸರೋವರಗಳ ನಗರ” ಎಂದು ಕರೆಯಲಾಗುತ್ತಿದ್ದ ಬೆಂಗಳೂರು ನಗರದಲ್ಲಿಅಂದು ಸುಮಾರು 200 ಕ್ಕೂ ಹೆಚ್ಚು ಅದರಲ್ಲೂ ಹೆಚ್ಚಿನ ಸಂಖ್ಯೆ ಮಾನವ ನಿರ್ಮಿತ “ಕೆರೆ” ಮತ್ತು “ಟ್ಯಾಂಕ್” ರೂಪದಲ್ಲಿರುವ ಸರೋವರಗಳು. ಆದರೆ, 90 ರ ದಶಕದ ನಗರೀಕರಣದಿಂದ, ನೆಲದ ಒತ್ತುವರಿಯಿಂದಾಗಿ ಇಂದು ಕೇವಲ 40 ಕೆರೆಗಳಷ್ಟೇ ಬೆಂಗಳೂರಿನಲ್ಲಿ ಉಳಿದಿವೆ!

ಹಾಗೇ ಕೃತಕ ಸರೋವರಗಳ ಬಗ್ಗೆ ಮತ್ತು ಹೆಸರುಘಟ್ಟ ಕೆರೆಯ ಬಗ್ಗೆ ತಿಳಿಯಲು ಹೊರಟಾಗ “ಡೆಕ್ಕನ್ ಹೆರಾಲ್ಡ್” ಪತ್ರಿಕೆಯ ಒಂದು ವಿಸ್ತೃತ ವರದಿಯು ಬೆಂಗಳೂರಿನ ಅತ್ಯಂತ ದೊಡ್ಡ ಮತ್ತು ಮಾನವ ನಿರ್ಮಿತ ಕೆರೆಗಳಲ್ಲಿ ಒಂದಾದ ಈ ಹೆಸರುಘಟ್ಟ ಕೆರೆಯ ಇಂದಿನ ಸ್ಥಿತಿಯ ಬಗ್ಗೆ ಅಚ್ಚರಿಯ ಸಂಗತಿಯನ್ನು ವರದಿ ಮಾಡಲಾಗಿದೆ. 1894 ರಲ್ಲಿ ಬೆಂಗಳೂರಿನ ನೀರಿನ ಅವಶ್ಯಕತೆಗಳನ್ನು ಪೂರೈಸಲು ಮೈಸೂರು ಸಾಮ್ರಾಜ್ಯದ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ಈ ಕೆರೆಯನ್ನು ಸುಮಾರು 1000 ಎಕರೆ ಪ್ರದೇಶದಷ್ಟು ನಿರ್ಮಿಸಲಾಗಿದ್ದು ಅಂದು ಈ ಕೆರೆಯೊಂದೇ ಬೆಂಗಳೂರಿನ ಏಕೈಕ ನೀರಿನ ಮೂಲವಾಗಿತ್ತು.
ಇಂತಹ ಪ್ರತಿಷ್ಠಿತ ಹೆಸರುಘಟ್ಟದ ಕೆರೆಯ ಇಂದಿನ ಪರಿಸ್ಥಿತಿಯನ್ನು ಸ್ಯಾಟಿಲೈಟ್ ಮತ್ತು ಡ್ರೋನ್ ಚಿತ್ರಗಳ ಮೂಲಕ ಗಮನಿಸಿದಾಗ ಮತ್ತು ಇಂತಹ ಕೆರೆಗಳ ಕ್ಷೀಣಿಕೆಗೆ ಕಾರಣಗಳನ್ನು ತಿಳಿಯಲು paani.earth ಎಂಬ ಎನ್.ಜಿ .ಒ. ಸಂಸ್ಥೆ ನಡೆಸುತ್ತಿರುವ, ನಿರ್ಮಲಾ ಗೌಡ ಮತ್ತು ಪುಷ್ಪ ಎಂಬ ಎರಡು ಸಂಶೋಧಕರ ಪ್ರಕಾರ ಕೆರೆಯ ಒಡಲ ಭಾಗದಲ್ಲಿ ಅಲ್ಲಲ್ಲಿ ತೇಪೆ ಹಚ್ಚಿದಂತೆ ಪ್ಯಾಚ್ ರೀತಿಯಲ್ಲಿ ಕೆರೆಯ ಚಿತ್ರಣ ಕಾಣಿಸಿತು.

ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರಿಗೆ ತಿಳಿದು ಬಂದ ಸಂಗತಿ, ಅವರಲ್ಲಿ ಅಚ್ಚರಿಯನ್ನುಂಟುಮಾಡಿತು. ಆ ಪ್ಯಾಚ್ ಗಳೆಲ್ಲವೂ ಮರಗಳು! ಸಹಜವಾಗಿ ಮರಗಳು ಬೆಳೆಯುವುದು ಪರಿಸರವು ಸಮೃದ್ಧಿಯಾಗಿದೆ ಎಂದು ಸೂಚಿಸುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಮರಗಳು ಅಥವಾ ಎಂತಹುದೇ ಹಸಿರುಗಳು ಬೆಳೆಯುವುದು ಅಪಾಯವನ್ನು ಸೂಚಿಸುತ್ತದೆ.
ಇದರ ಕಾರಣ ತಿಳಿಯಲು ಹೊರಟ ಅವರಿಗೆ, ಬೆಂಗಳೂರಿನಲ್ಲಿ 90ರ ದಶಕದ ನಗರೀಕರಣದಿಂದ ಕೆರೆಗಳ ಒತ್ತುವರಿಯನ್ನು ತಡೆಯಲು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಲಕ್ಷ್ಮಣ್ ರಾವ್ ಸಮಿತಿಯ ಅಧ್ಯಯನದ ಒಂದು ಉಪಾಯದ ಅನುಸಾರ ಕೆರೆ ಕಟ್ಟೆಯ ಸುತ್ತಲೂ Prosopis juliflora ಎಂಬ ವೈಜ್ಞಾನಿಕ ಹೆಸರುಳ್ಳ ಜಾಲಿ ಮರಗಳನ್ನೂ ಮತ್ತು Acacia nilotica ಎಂಬ ಅಕೇಷಿಯಾ ಗಿಡಗಳನ್ನು ಕೆರೆಯ ಸುತ್ತಲೂ ಬಿತ್ತನೆ ಮಾಡಿದರು. ಇದೇ ಕೆರೆಯ ಅಳಿವಿನ ಮೊದಲ ಕಾರಣ !
ಈ ಎನ್ .ಜಿ .ಒ ಸಂಸ್ಥೆಯ ಸಂಶೋಧಕರ ಪ್ರಕಾರ ಜಾಲಿ ಮರಗಳು ಮತ್ತು ಅಕೇಷಿಯಾ ಗಿಡಗಳು ನಮ್ಮ ದಕ್ಷಿಣ ಭಾರತಕ್ಕೆ ಆಕ್ರಮಣಕಾರಿ ಪ್ರಭೇದಗಳಾಗಿದ್ದು, ಇದರ ಸುತ್ತಲಿನ ಪ್ರದೇಶಗಳನ್ನು ತನಗಾಗಿಸಿಕೊಂಡು ಎಲ್ಲೆಡೆ ಈ ಮರಗಳೇ ಬೆಳೆಯುತ್ತದೆ ಎಂದು ತಿಳಿದು ಬಂತು. ಇಂತಹ ಆಕ್ರಮಣಕಾರಿ ಮರಗಳ ಪ್ರಭೇದಗಳ ಬಗ್ಗೆ ತಿಳಿಯಲು ಹೊರಟಾಗ ಅವರಿಗೆ ಸ್ವಾಮಿ ಎಂಬ ಮೀನುಗಾರ ದೊಡ್ಡಬಳ್ಳಾಪುರದ ಪಲನ ಜೋಗಿಹಳ್ಳಿ ಕೆರೆಯಲ್ಲಿ 40 ವರ್ಷಗಳಿಂದ ತಂದೆಯ ಬಳಿಕ ಮೀನುಗಾರಿಕೆಯಿಂದ ಜೀವನ ಕಟ್ಟಿಕೊಂಡಿರುವ ಇವರು ಜಾಲಿ ಮರದ ಎಲೆಗಳು, ಕಾಯಿಗಳು ಕೆರೆಯಲ್ಲಿ ಬೀಳುವುದರಿಂದ, ಇದನ್ನು ಮೀನುಗಳು ಸೇವಿಸಿದಾಗ ಅತ್ಯಂತ ವಿಷಕಾರಿಯಾಗಿ ಮೀನುಗಳ ಸಂತತಿಗಳನ್ನು ನಾಶಪಡಿಸುತ್ತವೆ ಎಂದು ತಿಳಿಸಿದ್ದಾರೆ.

ಆಕ್ರಮಣಕಾರಿ ಮರ-ಗಿಡಗಳು ಅಥವಾ ಯಾವುದೇ ರೀತಿಯ ಹಸಿರು ಜಲ-ಜೀವಿಗಳಿಗೆ ಯೋಗ್ಯವಲ್ಲ, ಹಾಗೆ ಇಂತಹ ಮರಗಳನ್ನು ಸರೋವರಗಳ ಸುತ್ತಲೂ ಬೆಳೆಸುವುದು ಪ್ರಮಾದ. ಏಕೆಂದರೆ, ಇಂತಹ ಹಸಿರು ಗಿಡಗಳು ಬೆಳೆಯಲು ಸಾರಜನಕ(ನೈಟ್ರೋಜನ್), ಪೊಟ್ಯಾಸಿಯಮ್, ರಂಜಕ (ಫಾಸ್ಫರಸ್ ) ಎಂಬ ಮೂರು ರಾಸಾಯನಿಕ ಅಂಶಗಳು ಅತ್ಯಾಗತ್ಯ. ಆದರೆ ಈ ಮೂರು, ಜಲಚರಗಳಿಗೆ ಅಪಾಯಕಾರಿ ಇದರಿಂದ ಅವುಗಳು ಉಸಿರಾಡಲು ಬೇಕಾಗಿರುವ ಕರಗಿದ (ಡಿಸಾಲ್ವ್ಡ್) ಆಮ್ಲಜನಕದ ಪ್ರಮಾಣ ಕ್ಷೀಣಿಸುತ್ತದೆ ಮತ್ತು ಒಣ ಮರದ ಎಲೆ, ಕಾಯಿಗಳು ನೀರಿಗೆ ಬೀಳುವುದರಿಂದ ಅದು ಕೊಳೆಯಲು ಆರಂಭವಾಗಿ ಬಿಒಡಿ (ಬಯೋಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್ ) ಎಂಬ ಅಂಶದ ಪ್ರಮಾಣ ನೀರಿನಲ್ಲಿ ಹೆಚ್ಚಾಗಿ ಅದು ಜೀವಿಸಲು ಮತ್ತು ಉಪಯೋಗಿಸಲು ಯೋಗ್ಯವಾಗಿರದೆ ಪ್ರಮಾದಕಾರಿಯಾಗಿದ್ದು “ಪ್ಲಾಂಕ್ಟನ್ ಹೂವುಗಳು” ಎಂಬ ಪ್ರಕ್ರಿಯೆಯಿಂದಾಗಿ ಇಂತಹ ಜಲ ಪ್ರದೇಶಗಳು ಅಳಿವಿನ ಆರಂಭವನ್ನು ಸೂಚಿಸುತ್ತದೆ, ಎಂದು ಒಂದು ದೀರ್ಘವಾದ ವರದಿಯನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯಿಂದ, ಇಂತಹ ಕೃತಕ ಸರೋವರಗಳ ಒಂದು ಬಗೆಯಾದ “ಕೆರೆಗಳು” ಹೇಗೆ ಆಕ್ರಮಣಕಾರಿ ಪ್ರಭೇದದ ಮರ-ಗಿಡಗಳಿಂದ, ನಗರೀಕರಣದಿಂದಾಗಿ ಒಂದು ಕಾಲದಲ್ಲಿ ಕೆರೆಗಳ ನಗರ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ಕೆರೆಗಳು ಮಾಯವಾಗಲು ಬಹುಮುಖ್ಯ ಕಾರಣವೆಂದು ತಿಳಿಸಿಕೊಟ್ಟಿದೆ.

ಲಗೂನ್ ಮತ್ತು ಹಿನ್ನೀರಿಗೂ ಇರುವ ಪ್ರಮುಖ ವ್ಯತ್ಯಾಸ ಇದರ ರೂಪುವಿಕೆ ಮತ್ತು ಸ್ಥಳ. ಲಗೂನ್ ಗಳು ಸಹಜವಾಗಿ ಕರಾವಳಿ ಲಕ್ಷಣಗಳನ್ನು ಹೊಂದಿದ್ದು ಸಮುದ್ರದಿಂದ ಪ್ರತ್ಯೇಕವಾಗಿ ಸ್ಯಾಂಡ್ ಬಾರ್ಸ್ ಅಥವಾ ಹವಳದ ಬಂಡೆಗಳ (ಕೊರಲ್ ರೀಫ್ಸ್) ಮೂಲಕ ವಿಭಜನೆಗೊಂಡು ಲಗೂನ್ ಗಳು ರೂಪುಗೊಳ್ಳುತ್ತವೆ. ಆದರೆ, ನದಿಗಳ ಹರಿವಿನ ಅಡ್ಡಲಾಗಿ ನಿರ್ಮಿಸಲ್ಪಡುವ ತಡೆಗೋಡೆ, ಅಣೆಕಟ್ಟುಗಳಿಂದ ಹಿನ್ನೀರು ಸೃಷ್ಟಿಯಾಗುತ್ತವೆ.

ಚಿಲಿಕ ಕೆರೆ ಮತ್ತು ಪುಲಿ ಕಟ್ ಕೆರೆಗಳೇ ಭಾರತ ದೇಶದ ಮೊದಲ ಮತ್ತು ಎರಡನೇಯ ಅತಿದೊಡ್ಡ ಉಪ್ಪುನೀರಿನ ಕೆರೆ ರೂಪದ ಲಗೂನ್ ಗಳು. ಚಿಲಿಕ ಲಗೂನ್ ಭಾರತದ ಮೊದಲ ಸ್ಥಾನದಲ್ಲಿರುವ ಅತಿದೊಡ್ಡ ಕರಾವಳಿ ಲಗೂನ್ ಆಗಿದ್ದು ಒಡಿಶಾ ರಾಜ್ಯದ ಪುರಿ,ಖೋರ್ ಧ, ಗನ್ ಜಂ ಜಿಲ್ಲೆಗಳಲ್ಲಿ ವಿಸ್ತೀರ್ಣವಾಗಿದ್ದು ಭಾರತದ ಪೂರ್ವ ಕರಾವಳಿ ಭಾಗದಲ್ಲಿ ಬಂಗಾಳ ಕೊಲ್ಲಿ ಸಮುದ್ರದ ಭಾಗವಾಗಿದೆ.

ಈ ಚಿಲಿಕ ಲಗೂನ್ ಸೃಷ್ಟಿಯ ಬಗ್ಗೆ ಹಲವು ದಂತಕಥೆಗಳು ಮತ್ತು ಭೂವೈಜ್ಞಾನಿಕ ಅಂಶಗಳನ್ನು ಒಡಿಶಾ ಸರ್ಕಾರವು ತನ್ನ ಚಿಲಿಕ ಅಭಿವೃದ್ಧಿ ಇಲಾಖೆಯ ಅಂತರ್ಜಾಲದ ಮೂಲಕ, ಈ ಲಗೂನ್ ನ ಇತಿಹಾಸವನ್ನು ಉಲ್ಲೇಖಿಸಿದೆ. ಇದರ ಪ್ರಕಾರ, ಒಂದು ದಂತಕಥೆಯ ಅನುಸಾರ ಪುರಿಯನ್ನು ಲೂಟಿ ಮಾಡಲು ಕಡಲಗಳ್ಳ ರಾಜನಾದ ರಕ್ತ ಬಾಹು ತನ್ನ ಹಡಗುಗಳನ್ನು ಪತ್ತೆಯಾಗುವುದನ್ನು ತಪ್ಪಿಸಿಕೊಳ್ಳಲು ಲಂಗಾರು ಹಾಕಿದನು, ಆದರೆ ಅಲ್ಲಿನ ಜನರಿಗೆ ಮುಂದೇ ಈ ವಿಷಯ ತಿಳಿದು ತಮ್ಮೆಲ್ಲ ಆಸ್ತಿಗಳೊಂದಿಗೆ ಓಡಿಹೋದರು. ಕೊನೆಗೆ ಈತ ಬಂದಾಗ ನಿರ್ಜನ ನಗರವನ್ನು ಕಂಡು ಕೋಪಗೊಂಡು, ಸಮುದ್ರವು ತನಗೆ ದ್ರೋಹ ಬಗೆದಿದೆ ಎಂದು ಸಮುದ್ರದ ಮೇಲೆ ದಾಳಿ ಶುರುಮಾಡಿದ ಈತ ತನ್ನ ಸೈನ್ಯದೊಂದಿಗೆ ಸಮುದ್ರದ ತಳವನ್ನು ಪ್ರವೇಶಿಸಿದೆ. ಆ ಸಮಯದಲ್ಲಿ ಸಮುದ್ರವು ಹಿಂದೆ ಸರಿದು ಸೈನ್ಯವನ್ನು ಮುಳುಗಿಸಿ ಇಂದಿನ ಚಿಲಿಕ ಲಗೂನ್ ರೂಪಿತವಾಗಿದೆ ಎಂಬ ಕಥೆ ಇದೆ.

ಅಲ್ಲದೆ ಸಮುದ್ರದ ಅಧಿಪತಿ ಎಂದು ಕರೆಯಲಾಗುತ್ತಿದ್ದ ಕಳಿಂಗ ಮಹಾರಾಜರ ದಿನಗಳಲ್ಲಿ ಚಿಲಿಕ ಲಗೂನ್ ನ ದಕ್ಷಿಣ ವಲಯದಲ್ಲಿ ವಾಣಿಜ್ಯ ವ್ಯವಹಾರಕ್ಕಾಗಿ ಪ್ರಮುಖ ವ್ಯಕ್ತಿಗಳು ಈ ಲಗೂನ್ ಮೂಲಕ ಒಡಿಶಾ ಪ್ರವೇಶಿಸಿದರು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂಬ ವರದಿ ಇದೆ.
ಅಧ್ಯಯನಗಳ ಪ್ರಕಾರ ಚಿಲಿಕ ಲಗೂನ್ ದಕ್ಷಿಣ ಭಾಗದ ಕಲ್ಲು- ಬಂಡೆಗಳಲ್ಲಿ ಹವಳದ ಅವಶೇಷಗಳಿದ್ದು, ಬಿಳಿ ಪಟ್ಟಿಯಾಗಿ ಗುರುತಿಸಲಾಗಿದ್ದು ಈ ಪಟ್ಟಿಯು ಈಗಿನ ನೀರಿನ ಮಟ್ಟಕ್ಕಿಂತ 8 ಮೀಟರ್ ಎತ್ತರದಲ್ಲಿದ್ದು, ಇದು ಒಂದು ಕಾಲದಲ್ಲಿ ಸಮುದ್ರವಾಗಿತ್ತು ಎಂಬುದರ ಸೂಚನೆ ನೀಡುತ್ತದೆ. ಹಾಗೆ, ಭೂವೈಜ್ಞಾನಿಕ ಅಧ್ಯಯನದ ಪ್ರಕಾರ ಇಂದು ಕಂಡುಬರುವ ಹೆಚ್ಚಿನ ಲಗೂನ್ ಗಳು ಕಳೆದ 6000 -8000 ವರ್ಷಗಳಲ್ಲಿ ವಿಶ್ವದಾದ್ಯಂತ ಸಮುದ್ರ ಮಟ್ಟ ಏರಿಕೆಯ ಪರಿಣಾಮವಾಗಿ ಲಗೂನ್ ಗಳು ರೂಪುಗೊಂಡಿವೆ.

ಹಾಗೇ ಪ್ಲೇಸ್ಟೋ ಸೀನ್ (ಹಿಮಯುಗ) ಅವಧಿಯ ನಂತರ ಹಂತಗಳಲ್ಲಿ ಚಿಲಿಕ ಲಗೂನ್ ಬಂಗಾಳ ಕೊಲ್ಲಿಯ ಭಾಗವಾಗಿತ್ತು ಎಂದೂ ಭೂವೈಜ್ಞಾನಿಕ ಅಧ್ಯಯನ ಪುರಾವೆಗಳು ಸೂಚಿಸುತ್ತದೆ. ಚಿಲಿಕ ಲಗೂನ ನ್ನು UNESCOನ ತಾತ್ಕಾಲಿಕ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ.

ಹಿನ್ನೀರು, ಲಗೂನ್ ಮತ್ತು ಕೃತಕ ಸರೋವರಗಳು ನದಿ ಅಥವಾ ಸಮುದ್ರದಿಂದ ಪ್ರತ್ಯೇಕವಾಗಿ ರೂಪುಗೊಂಡು ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದ್ದು ಜೀವನ ಕಟ್ಟಿಕೊಟ್ಟಿದೆ, ಸುತ್ತಲಿರುವ ಊರುಗಳಿಗೆ ಕೃಷಿ ಮಾಡಲು ಆಧಾರವಾಗಿದೆ. ವಿವಿಧ ವಲಸೆ ಬಂದ ಪಕ್ಷಿಗಳಿಗೆ ಆಹಾರ ಮತ್ತು ಜೀವನ ಚಕ್ರ ಪೂರ್ಣಗೊಳಿಸಲು ನೆರವಾಗಿದೆ, ಪ್ರವಾಸಿಗರಿಗೆ ನಿರಾಳದ ಹಾಗೂ ಸುಂದರವಾದ ಪ್ರವಾಸಿ ತಾಣವಾಗಿದೆ! ಪ್ರವಾಸೋದ್ಯಮ ಸ್ಥಳಗಳಿಗಾಗಿ ಆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಹಾಯವಾಗಿದೆ. ಆದರೆ, ಇಂತಹ ಜಲಪ್ರದೇಶಗಳು ನಗರೀಕರಣದಿಂದ, ಹೆಚ್ಚು ಸಂಪಾದಿಸ ಬೇಕೆಂಬ ದುರಾಸೆಯಿಂದ ಈ ಪ್ರದೇಶಗಳೆಲ್ಲ ಒತ್ತುವರಿಯಿಂದಾಗಿ ಅಳಿವಿನ ಅಂಚಿನಲ್ಲಿದೆ, ಅಂತಹುದೊಂದೇ ಬೆಂಗಳೂರಿನ ಹೆಸರುಘಟ್ಟ ಕೆರೆ, ಸರಿಯಾದ ಕಾಳಜಿ ವಹಿಸದೆ ಕೆರೆಯ ಅಳಿವಿಗೆ ಕಾರಣವಾಗಿದೆ. ಇನ್ನೂ ಲಗೂನ್ ಗಳಾದ ಒಡಿಯಾದ ಚಿಲಿಕ ಕೆರೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪುಲಿಕಟ್ ಲಗೂನ್ ಗಳು ಆರ್ಥಿಕ ಬೆಳವಣಿಗೆಗಾಗಿ, ಪ್ರವಾಸೋದ್ಯಮವನ್ನು ಜಲ-ಚರ ಮತ್ತು ವಲಸೆ ಪಕ್ಷಿಗಳಿಗೆ ತಾಣವಾಗಿದೆ. ಭೂಮಿಯ ಶೇ . ಮೂರು ಭಾಗ ನೀರಿನಿಂದ ಕೂಡಿದ್ದು ಈ ಜಲಪ್ರದೇಶಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಭೂಮಿಯಲ್ಲಿ ವಾಸಿಸುವವರ ಹೊಣೆಯಾಗಿದೆ.

****”

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai