“ತ್ಯಾಗಮಯ ಜೀವನದ ನ್ಯಾಯದ ನಡೆಗೆ ಬೆಳಕಿನ ಪ್ರಭೆಯನ್ನು ಬೀರಿದ ಲೈಟ್‌ಹೌಸ್“
ಕೃತಿಯ ಹೆಸರು; ಲೈಟ್ ಹೌಸ್
ಲೇಖಕರು: ಹರೀಶ್ ಹೆಜ್ಮಾಡಿ
ಅಭಿಜಿತ್ ಪ್ರಕಾಶನ
ಪುಟ: ೧೦೦, ಬೆಲೆ :೧೦೦
ಅಕ್ಷಯ ಮಾಸ ಪತ್ರಿಕೆಯ ಸಂಪಾದಕರಾದ ಹರೀಶ್ ಹೆಜ್ಮಾಡಿ ಅವರು ಒಳ್ಳೆಯ ವಿಮರ್ಶಕರಾಗಿ ಎಲ್ಲರಿಗೂ ಚಿರಪರಿಚಿತರು. ಸಾಮಾಜದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಕೋನದಿಂದ ನೋಡುವ ಇವರು ಚಿಂತನಶೀಲ ವ್ಯಕ್ತಿತ್ವವನ್ನು ಹೊಂದಿದವರೆಂಬುದಕ್ಕೆ ಅಕ್ಷಯ ಮಾಸಿಕದ ಸಂಪಾದಕೀಯವೇ ನಿದರ್ಶನವಾಗಿದೆ. ಯಾವುದೇ ವಿಷಯವನ್ನು ಆಳವಾಗಿ ಗ್ರಹಿಸಿ, ವಿವೇಚನೆಗೊಳಪಡಿಸುವ ಇವರ ಬರವಣಿಗೆಗಳು ಜ್ಞಾನಕ್ಕೆ ಮೇವು ಮತ್ತು ಓದಿಗೆ ಖುಷಿಯನ್ನು ನೀಡುತ್ತವೆ. ಅಕ್ಷಯ ಮಾಸಿಕದಲ್ಲಿ ಇವರು ಬರೆಯುತ್ತಿದ್ದ ‘ಸಂಕರಕ್ಕ’ ಎಂಬ ಶೀರ್ಷಿಕೆಯಿರುವ ಚುಟುಕುಗಳು ಬಹುಜನಪ್ರಿಯತೆಯನ್ನು ಪಡೆದಿತ್ತು. ಕೇವಲ ನಾಲ್ಕೇ ಸಾಲಿನಲ್ಲಿರುವ ಅರ್ಥ ವಿಸ್ತಾರತೆ, ವಾಸ್ತವವನ್ನು ವಿಡಂಬನಾತ್ಮಕವಾಗಿ ಕಟ್ಟಿ ಕೊಡುವವರ ಇವರ ಜಾಣ್ಮೆ ಮೆಚ್ಚುವಂತದ್ದು. ಇಂಥ ವಿಶಿಷ್ಟತೆಗಳಿಂದಲೇ ಹೆಜ್ಮಾಡಿಯವರ ‘ಸಾಲು ಸಾಲು ಹಣತೆ’ ವ್ಯಕ್ತಿಚಿತ್ರಗಳ ಸಂಕಲನ ಭಿನ್ನಪರಿಯಲ್ಲಿ ಮೂಡಿಬಂದು ಜನಮೆಚ್ಚುಗೆಯನ್ನು ಪಡೆದಿದೆಯೆನ್ನಬಹುದು. ಇದೀಗ ಲೈಟ್‌ಹೌಸ್ ಕೃತಿಯ ಮೂಲಕ ಹೆಜ್ಮಾಡಿಯವರು ಮತ್ತೊಮ್ಮೆ ಸಹೃದಯ ಓದುಗರಿಗೆ ಮುಖಾಮುಖಿಯಾಗಿದ್ದಾರೆ.

ಅಭಿಜಿತ ಪ್ರಕಾಶನದ ಮೂಲಕ ಪ್ರಕಟಗೊಂಡ ‘ಲೈಟ್ ಹೌಸ್’ ಮುಂಬಯಿ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಸಮಾಜಸೇವಕ ಗೋಪಾಲ ಸಿ. ಪೂಜಾರಿ ಅವರ ಆತ್ಮಕಥನವನ್ನೊಳಗೊಂಡ ಕೃತಿಯಾಗಿದೆ. ಇದರಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿವೆ. ಡಾ. ಜಿ.ಎನ್ ಉಪಾಧ್ಯ ಅವರು ಬರೆದಿರುವ ಮುನ್ನುಡಿ ಮತ್ತು ಬೆನ್ನುಡಿ ಈ ಕೃತಿಯ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿದೆ. ಗೋಪಾಲ ಪೂಜಾರಿಯವರ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ, ವೃತ್ತಿ ಮತ್ತು ಸಾಮಾಜಿಕ ಜೀವನದ ನಡೆಹಾದಿಯನ್ನು ಹರೀಶ್ ಹೆಜ್ಮಡಿಯವರು ಲೈಟ್ ಹೌಸ್‌ನ ಶಿರೋನಾಮೆಯಡಿಯಲ್ಲಿ ಸೊಗಸಾಗಿ ಪ್ರತಿಬಿಂಬಿಸಿದ್ದಾರೆ.
ಈ ಕೃತಿಯ ವಿಶಿಷ್ಟತೆಯೇನೆಂದರೆ ಭೂತ ಮತ್ತು ವರ್ತಮಾನಗಳು ಜೊತೆಯಾಗಿ ಸಾಗುತ್ತವೆ. ಕುಟುಂಬದಲ್ಲಿ ಕಷ್ಟ ಕಾರ್ಪಣ್ಯಗಳೇ ಬಿಡದೆ ಕಾಡಿದಾಗ ಗೋಪಾಲ ಪೂಜಾರಿಯವರ ಬಾಲ್ಯ ಹೆಜಮಾಡಿಯಿಂದ ವೈನಾಡಿಗೆ ಸಾಗುತ್ತದೆ. ಅಲ್ಲಿಂದ ಪುನಃ ಕಾಪು ಪಡುಗ್ರಾಮಕ್ಕೆ ಬಂದು ಶಾಶ್ವತವಾಗಿ ನೆಲೆ ಕಂಡುಕೊಳ್ಳುತ್ತದೆ. ಇವೆಲ್ಲವುಗಳ ನಡುವೆ ಬದುಕು ಕಲಿಸಿದ ಪಾಠಗಳೆಷ್ಟೋ…! ವಿದ್ಯಾರ್ಥಿಯೇ ಗುರುವಾಗಿ, ನಾಲ್ಕು ಮಕ್ಕಳನ್ನು ಸಾಕಿ ಸಲಹಲು ಹರಸಾಹಸ ಪಡುತ್ತಿದ್ದ ಅಮ್ಮನಿಗೆ ಹೆಗಲಾಗಿ ನಿಂತ ಇವರ ಸ್ವಾವಲಂಬಿತನ, ಬಡತನವನ್ನು ಸಮರ್ಥವಾಗಿ ಎದುರಿಸಿದ ದಿಟ್ಟತನ ಈ ಕೃತಿಯಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ. ಕಾಪು ಪ್ರದೇಶದ ಸುತ್ತಮುತ್ತಲಿನ ಪರಿಸರದ ವರ್ಣನೆಯಂತೂ ಓದುಗನನ್ನು ಮನಸಾ ಮಣಿಸಿ ಕಡಲತಡಿಯ ಪ್ರಕೃತಿಯ ಸೌಂದರ್ಯದತ್ತ ಕೊಂಡೊಯ್ಯುತ್ತದೆ.
ಮುಂಬಯಿ ನಗರದಲ್ಲಿ ವಿದ್ಯೆಯ ಹಾದಿಯನ್ನು ಸುಗಮಗೊಳಿಸಿದ ಎಲ್ಸಿ ಮಾಲೀಕರು, ವಕೀಲ ವೃತ್ತಿಗೆ ಭದ್ರತೆಯನ್ನೊದಗಿಸಿದ ಡಿ.ಪಿ. ಹೆಜ್ಮಾಡಿ, ಎಸ್. ಟಿ. ಮರವೂರು ಮತ್ತು ಬಲ್ಯದ ಆತ್ಮೀಯ ಗೆಳೆಯ ನಾರಾಯಣ ಅಂಚನ್, ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಅಂಬೇಡ್ಕರ್ ಲಾ ಕಾಲೇಜ್ ಅವರ ಜ್ಞಾನದ ತೃಷೆಗೆ ವರವಾದ ಬಗೆ, ಮುಂಬಯಿ ವಿಶ್ವವಿದ್ಯಲಯದ ಮಟ್ಟದಲ್ಲಿ ಅಂತಿಮ ತರಗತಿಯ ಕಾನೂನು ಪರೀಕ್ಷೆ ಪೇಪರು ತಯಾರು ಸಮಿತಿಯ ಕಾರ್ಯಾಧ್ಯಕ್ಷರಾಗಿ ಕೆಲಸ, ಅವರ ನ್ಯಾಯದ ಅಭಿಪ್ರಾಯ ಮತ್ತು ಸ್ಪಷ್ಟತೆಗಳಿಂದ ಒದಗಿ ಬಂದ ನಾಲ್ಕೆöÊದು ಬ್ಯಾಂಕ್‌ನ ಜವಾಬ್ದಾರಿಗಳು ಅವರ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಸಂದ ಪ್ರತಿಫಲವಾಗಿದೆ. ಮುಂಬಯಿಯತ್ತ ನಡಿಗೆ, ಕೋರ್ಟಿನ ನೆನಪುಗಳು, ಗೆಳೆಯ ಪ್ರೊ.ನಾರಾಯಣ ಅಂಚನರೊಂದಿಗೆ ಬಾಲ್ಯದಲ್ಲಿ ಬೆಸೆದ ಸ್ನೇಹಾನುಬಂಧದ ನೆನಪುಗಳು ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.
ಪೂಜಾರಿಯವರು ಆದರ್ಶದ ಹಾದಿಯಲ್ಲಿ ಮುನ್ನಡೆಯುವ ಧ್ಯೇಯವನ್ನು ಇಟ್ಟುಕೊಂಡವರು. ಕಾನೂನು ಕ್ಷೇತ್ರದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಸತ್ಯದ ವಿರುದ್ಧ ನಡೆಯಬೇಕಾದ ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ. ಅದನ್ನೆಲ್ಲ ಮೀರಿ ನಡೆಯಬೇಕಾದರೆ ಹಲವಾರು ಅಡೆತಡೆಗಳನ್ನು ಎದುರಿಸಬೇಕು. ಮಹತ್ವಾಕಾಂಕ್ಷೆಗಳನ್ನು ಬದಿಗಿರಿಸಿ ಮುನ್ನಡೆಯಬೇಕು. ವಕಾಲತು ಕ್ಷೇತ್ರದಲ್ಲಿ ಇಂಥ ನಿಲುವನ್ನು ಕಾಯ್ದುಕೊಳ್ಳುವವರು ವಿರಳ. ಆದರೆ ಪೂಜಾರಿಯವರು ಇದನ್ನು ಸಾಧಿಸಿದ್ದಾರೆ. ಸತ್ಯಕ್ಕೆ ಹತ್ತಿರವಾಗಿ ನಿಷ್ಠುರನಾಗಿ ತನ್ನ ವೃತ್ತಿ ಜೀವನದ ಮೌಲ್ಯವನ್ನು ಪೂಜಾರಿಯವರು ಹೇಗೆ ಕಾಪಾಡಿಕೊಂಡು ಬಂದರೆನ್ನುವುದು ಈ ಕೃತಿಯ ಮೂಲಕ ವ್ಯಕ್ತವಾಗುತ್ತದೆ. ವಿದ್ಯಾರ್ಥಿ ಜೀವನಕ್ಕೆ ಭರವಸೆಯನ್ನು ತುಂಬಿದ ಲೈಟ್ ಹೌಸ್ ಪೂಜಾರಿಯವರನ್ನು ಆವರಿಸಿಕೊಂಡಿರುವ ಬಗೆಯೇ ಬಿನ್ನ. ಒಂದಷ್ಟು ಕಾಲ ಅವರ ಭಾವನೆಗಳಿಗೆ ಸ್ಪಂದಿಸುವ ಒಡನಾಡಿಯಂತಿದ್ದ ಲೈಟ್ ಹೌಸ್‌ನ ಸೆಳೆತವನ್ನು ಇಂದಿಗೂ ಕಾಯ್ದಿಟ್ಟುಕೊಂಡಿದ್ದಾರೆ. ಇವರು ತಮ್ಮ ಬದುಕನ್ನೇ ಬದಲಿಸಿದ ಒಂದು ಪ್ರತಿರೂಪವನ್ನಾಗಿ ಲೈಟ್ ಹೌಸನ್ನು ಸ್ವೀಕರಿಸಿದರೆ ಅದನ್ನೇ ಪ್ರತಿಮೆಯನ್ನಾಗಿಟ್ಟುಕೊಂಡು ಲೇಖಕರು ಸಾಧಕನ ಬದುಕಿಗೆ ಸುಂದರ ರೂಪು ನೀಡಿದ್ದಾರೆ. ಲೈಟ್ ಹೌಸ್ ಹೇಗೆ ಅಪಘಾತಗಳನ್ನು ತಪ್ಪಿಸಿ ಸಮುದ್ರಯಾನವನ್ನು ಸುಗಮವಾಗಿಸುವುದೋ ಹಾಗೆಯೇ ಗೋಪಾಲ ಪೂಜಾರಿಯೊಳಗಿರುವ ವಿಶೇಷ ಚೇತನ ಅವರನ್ನು ಸತ್ಪಥದಲ್ಲಿ ಮುನ್ನಡೆಸಿದೆ. ಅನ್ಯಾಯದ ಕೋಟೆಯೊಳಗೆ ನ್ಯಾಯದ ಬೆಳಕನ್ನು ಕಾಣಿಸಿದ ಬಗೆಯನ್ನು, ಏರುಪೇರಾದ ಹಲವರ ಬದುಕನ್ನು ಸಮದೂಗಿಸಿದ ಅವರ ಜಾಣ್ಮೆಯನ್ನು, ಮಾನವೀಯತೆಯ ನೆಲೆಯಲ್ಲಿ ನ್ಯಾಯ ದೊರಕಿಸಿಕೊಟ್ಟ ಸಾರ್ಥಕತೆಯನ್ನು ಲೇಖಕರು ಈ ಕೃತಿಯ ಮೂಲಕ ಅನಾವರಣಗೊಳಿಸಿದ್ದಾರೆ.
ಸರಳ ಬದುಕನ್ನು ಪ್ರೀತಿಸಿದ ಪೂಜಾರಿಯವರು ಅಧ್ಯಾತ್ಮದ ಒಲವನ್ನು ಎಳವೆಯಿಂದಲೇ ಬೆಳೆಸಿಕೊಂಡವರು. ತಮ್ಮೊಳಗೆ ಇರುವ ಅದಮ್ಯ ಶಕ್ತಿಯನ್ನು ಬಲವಾಗಿ ನಂಬಿದವರು. ಬದುಕಿನ ಎಲ್ಲ ಸಮಸ್ಯೆಗಳನ್ನೂ ಆ ನಂಬಿಕೆಯಿಂದಲೇ ಪರಿಹರಿಸಿಕೊಂಡವರು. ತಾಯಿಯ ಕನಸನ್ನು ನನಸಾಗಿಸಿ, ಒಡಹುಟ್ಟಿದವರೆಲ್ಲರಿಗೂ ಸುವ್ಯವಸ್ಥಿತ ಜೀವನವನ್ನು ಕಾಣಿಸಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದವರು. ಕಾಪು ಬಿಲ್ಲವರ ಸಂಘ ಮುಂಬಯಿ ಮೂಲಕ ಸಾಮಾಜಿಕ ಚಟುವಟಿಕೆಗಳಿಗೆ ಜೀವ ತುಂಬಿ ತಮ್ಮಿಂದಾದಷ್ಟು ಜನಸೇವೆಯನ್ನು ಮಾಡಿದವರು. ಅವರದೇ ಆದ ತತ್ವ ಸಿದ್ಧಾಂತಗಳೊಂದಿಗೆ ಒಳ್ಳೆಯ ಜೀವನ ಸೂತ್ರಗಳನ್ನು ಪಾಲಿಸಿಕೊಂಡು ಅದನ್ನೇ ಆಪ್ತರಿಗೂ ಬೋಧಿಸಿದವರು.
ಎಲ್ಲರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಎಲ್ಲರಿಗೂ ಪ್ರಿಯರಾಗಿ, ಎಲ್ಲರನ್ನೂ ತಮ್ಮ ಮನೆಯ ಸದಸ್ಯರಂತೆ ಕಾಣುವ ಗೋಪಾಲ ಪೂಜಾರಿಯವರ ಮನೋವಿಶಾಲತೆಯನ್ನು ಈ ಕೃತಿ ದರ್ಶಿಸುತ್ತದೆ. ನಾವು ಒಳ್ಳೆಯವರಾಗಿದ್ದರೆ ಪ್ರತಿ ಸಂದರ್ಭದಲ್ಲಿ ನಮಗೆ ಒಳ್ಳೆಯವರೇ ಸಿಗುತ್ತಾರೆ ಮತ್ತು ಯಾವತ್ತಿಗೂ ಒಳ್ಳೆಯದೇ ಆಗುತ್ತದೆ ಎನ್ನುವುದಕ್ಕೆ ಪೂಜಾರಿಯವರ ಜೀವನ ಒಂದು ನಿದರ್ಶನವಾಗಿ ನಿಲ್ಲುತ್ತದೆ. ಅವರ ತ್ಯಾಗಮಯ ಜೀವನದ ಪುಟಗಳನ್ನು ಪರಿಶೀಲಿಸಿದಾಗ ಗಂಧದಂತೆ ತನ್ನ ತಾ ತೇದ ಜೀವ ಕಣ್ಣೆದುರು ಬಂದು ನಿಲ್ಲುತ್ತದೆ. ಅವರ ಮುಖದಲ್ಲಿರುವ ಮಂದಹಾಸ ಶಾಂತ ನಿರ್ಮಲ ಭಾವ ಎಲ್ಲ ಸವಾಲುಗಳಿಗೆ ಉತ್ತರವಾಗುತ್ತದೆ.
ಹರೀಶ್ ಹೆಜ್ಮಾಡಿಯವರು ಲೈಟ್ ಹೌಸ್ ಆತ್ಮಕಥನದ ಮೂಲಕ ತೆರೆಮರೆಯಲ್ಲಿದ್ದ ಸಾಧಕನ ಪರಿಚಯವನ್ನು ಲೋಕಮುಖಕ್ಕೆ ತೆರೆದಿಟ್ಟಿದ್ದಾರೆ. ಸತ್ವಪೂರ್ಣವಾದ ಭಾಷೆಯಿಂದ ಸಾಧಕನ ವ್ಯಕ್ತಿತ್ವವನ್ನು ಅನೇಕ ದೃಷ್ಟಿಕೋನಗಳಿಂದ ಅಳೆದು ವಿಶ್ಲೇಷಿಸಿದ್ದಾರೆ. ಕಡಿಮೆ ಶಬ್ದಗಳಲ್ಲಿ ಅಗಾಧತೆಯನ್ನು ಸೃಷ್ಟಿಸುವ ಸಾಮರ್ಥ್ಯ ಇವರ ಬರವಣಿಗೆಯಲ್ಲಿದೆ. ಓದುಗನ ಮನಸ್ಸಿನಲ್ಲಿ ಏಕಾಗ್ರತೆಯನ್ನು ಮೂಡಿಸಿ ಆಪ್ತವಾಗಿ ಓದಿಸಿಕೊಂಡು ಹೋಗುವ ಶಕ್ತಿ ಹೆಜ್ಮಾಡಿಯವರ ನಿರೂಪಣಾ ಶೈಲಿಯಲ್ಲಿದೆ. ಓರ್ವ ಸಾಧಕನ ವ್ಯಕ್ತಿಚಿತ್ರಣವನ್ನು ಸಂಕ್ಷಿಪ್ತವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹೇಗೆ ಕಟ್ಟಿಕೊಡಬಹುದು ಎನ್ನುವುದಕ್ಕೆ ಲೈಟ್ ಹೌಸ್ ಒಂದು ಮಾದರಿ ಕೃತಿಯಾಗಿದೆ. ಹರೀಶ್ ಹೆಜ್ಮಾಡಿಯವರಿಂದ ಇನ್ನಷ್ಟು ಮೌಲ್ಯಯುತ ಕೃತಿಗಳು ಮೂಡಿಬರಲೆಂಬ ಹಾರೈಕೆ.







