ಕಾಲ ಇದಲ್ಲ

ಅದೊಂದು ಕಾಲವಿತ್ತು
ಹಬ್ಬ ಹರಿದಿನಕ್ಕೆ
ತವರುಮನೆ ಸೇರಿದ ಅವಳು
ಅತ್ತ ಬಿಟ್ಟಿರಲಾರದ ಅವನೂ
ಪತ್ರಗಳಲ್ಲಿ ಸಂಧಿಸುತ್ತಿದ್ದರು
ತಾಜಾ ಭಾವಗಳ
ಪ್ರೀತಿ ಮೇಳ ಅದ್ದೂರಿಯಾಗಿ
ನಡೆಯುತ್ತಿತ್ತು

ಬಾಗಿಲೆದುರು ಬಂದು
ಅಂಚೆಯಣ್ಣ ಪತ್ರ ಬಂದಿದೆಯೆಂದರೆ
ಸಹಿ ಹಾಕಿದೊಡನೆಯೇ ಪತ್ರ ಪಡೆದು
ಅವನ ಪ್ರೇಮದ ಪರಿಭಾಷೆ ಓದಲು
ಹಕ್ಕಿಯಂತೆ ಹಾರಿ ಹೋಗುವ
ಅವಳ ಕಾತರ, ಸಂಭ್ರಮ
ನೋಡುವುದೇ ಚೆಂದ

ಅವಳಿಂದ ಪತ್ರ ಬರುವುದು
ತಡವಾದಾಗ
ಅವನ ಸಪ್ಪೆ ಮೋರೆಗೆ
ಅದುವೇ ಕಾರಣ, ಅರಿತವರು
ಎಷ್ಟು ವರುಷದ ಅಗಲಿಕೆಯೋ
ಎಂದು ನಗುತ್ತ ಲೊಚಗುಟ್ಟಿದರೆ
ಅವನ ನಾಚಿಕೆಗೆ ಪಾರವೇ ಇಲ್ಲ

ಈಗಲೂ ಬರುತ್ತಾನೆ
ಅಂಚೆಯವನು
ಬೈಸಿಕಲ್ ತುಳಿಯುತ್ತ
ಗಂಟು ಗಂಟು ವ್ಯವಹಾರ
ಪತ್ರಗಳ ಮೂಟೆಯನ್ನು ಹೊತ್ತು
ಅಂದು ತಂತ್ರಜ್ಞಾನವಿಲ್ಲದಿದ್ದರೂ
ಸಂಬಂಧಗಳು ಗಟ್ಟಿಯಿದ್ದವು
ಪ್ರೀತಿ ಹೇರಳವಾಗಿತ್ತು

ಇಂದು ದಿಲ್ಲಿಯಲ್ಲಿದ್ದರೂ ಕ್ಷಣದಲ್ಲಿಯೇ
ಸಂದೇಶಗಳ ರವಾನೆ
ಇಂದೆಲ್ಲವೂ ಇದೆ
ಕೃತಕ ಭಾವಗಳ ಸಂತೆಯಲ್ಲಿ
ಸಹಜ ಪ್ರೀತಿಗಷ್ಟೇ ಕೊರತೆ

  • ಮಧು ಕಾರಗಿ, ಕೆರೆವಡಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಕಾಲ ಇದಲ್ಲ”

  1. Chintamani Sabhahit

    ಕೊನೆಯ ಪ್ಯಾರಾ ಬಿಟ್ಟರೆ, ಕವಿತೆಯಲ್ಲಿ ಭಾವನೆಗಳು ತುಳುಕುವ ತೈಲದ ಮಾರ್ದವತೆ ಭಾರವಾಗಿ, ಸಾಂದ್ರೀಕೃತ ಪರಿಣಾಮದ ಮಂಚೂಣಿಯ ರುಚಿ ಹೆಪ್ಪುಗಟ್ಟುತ್ತದೆ. ಇದು ಯಾವುದೇ ಕಾವ್ಯದ ವೈಯಕ್ತಿಕ ಸೌಂದರ್ಯ!

    ಆದರೆ, ಸ್ವತಃ ಉದ್ದೇಶವನ್ನು ಅಭಿವ್ಯಕ್ತಿಸಿದರೆ, ಬಣ್ಣವೇ ಬದಲಾಗಿ ಬರೀ ಗದ್ಯವಾಗಿಬಿಡುತ್ತದೆ: ಹಿಟ್ಟಿಗೆ ನೀರು ಹೆಚ್ಚಾಗಿ ರೊಟ್ಟಿಯ ಬದಲು, ದೋಸೆಯಾಗುವ ಅನಿವಾರ್ಯತೆಯಂತೆ!

    ಒಮ್ಮೆ, ಕೊನೆಯ ಪ್ಯಾರಾ ಕಳೆದು ಮತ್ತೊಮ್ಮೆ ಓದಿನೋಡಿ, ಕಾವ್ಯದ ಜೀವಂತಿಕೆ ಇನ್ನೂ ಮಿಡಿಯುತ್ತಿದೆ!

    ಕವಿ ಹೇಳದಿರುವದೇ ಕಾವ್ಯದ ಕಾಲಾತೀತ ಜೀವಂತ ಲಕ್ಷಣ ಅನ್ನುವುದನ್ನು ಮರೆಯಬೇಕೆ?

  2. ತಮ್ಮ ಪ್ರತಿಕ್ರಿಯೆ ಓದಿ ಬಹಳ ಸಂತಸವಾಯಿತು ಸರ್
    ನಿಜ ಕವಿ ನೇರವಾಗಿ ಏನನ್ನೂ ಹೇಳಬಾರದು ಆದರೂ ಇಲ್ಲಿ ಎಡವಿದ್ದೇನೆ ಎಚ್ಚರಿಸಿದ್ದಕ್ಕಾಗಿ ತಮಗೆ ಅನಂತ ಧನ್ಯವಾದಗಳು

  3. ಡಾ. ಸುಭಾಷ್ ಪಟ್ಟಾಜೆ

    ಹಳೆಯ ಕಾಲದಲ್ಲಿದ್ದ ಸಂಬಂಧಗಳ ಆರ್ದ್ರತೆ ಮತ್ತು ಅಧುನಿಕ ಕಾಲದ ಯಾಂತ್ರಿಕತೆಯನ್ನು ಕಟ್ಟಿಕೊಟ್ಟ ಕವಿತೆ.

  4. Raghavendra Mangalore

    ಆಗಿನ ಭಾವನೆಗಳು ಈಗೆಲ್ಲಿ? ಕವನ ಮನಸಿಗೆ ಮುದ ನೀಡಿತು. ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai