ವಿಳಾಸವೇ ಇಲ್ಲದೇ ಜಗತ್ತ ಪರ್ಯಟನೆ ಮಾಡುತ್ತಿದ್ದ ಕಾಲವೊಂದಿತ್ತು. ಆದರೆ ವಿಳಾಸ ಸಿಕ್ಕ ಮೇಲೂ ವಿಳಾಸ ಮರೆಯುವ ಇಲ್ಲವೇ ತಪ್ಪು ವಿಳಾಸಕ್ಕೆ ಮುಟ್ಟುವ ತುರಾತುರಿಯ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಪ್ರಕ್ಷುಬ್ಧತೆ ಕನ್ನಡ ಕಾವ್ಯ ಜಗತ್ತನ್ನೂ ಕಾಡುತ್ತಿದೆ. ಹಾಗಾಗಿ ಹೊಸ ತುಡಿತದ ಕೆಲ ಕವಿ ಮನಗಳು ಹೊಸ ವಿಳಾಸವ ಹುಡುಕಿ ಹೊರಟಿವೆ. ಹೊಸ ವಿಳಾಸದ ಹೆಜ್ಜೆಗಳ ಹುಡುಕುವುದು ತಪ್ಪೆಂದು ತಿಳಿದೂ ಅದನ್ನು ಮುದ್ದಾಂ ಆಗಿ ಮಾಡುವ ಖಯಾಲಿ ಮನುಷ್ಯನದು. ಆದರೆ ಈ ಹೆಜ್ಜೆಗಳಿಗೆ ದಕ್ಕುವ ಬದುಕಿನ ಅನುಭವಗಳು ಕೂಡಾ ಅಷ್ಟೇ ವಿಚಿತ್ರ ಮತ್ತು ಶ್ರೀಮಂತ. ಕವಿಯಾಗುವ ತುಡಿತ ಹೊಸ ಹೆಜ್ಜೆಗಳಿಗೆ ವಿಳಾಸ ಹುಡುಕುವ ಅನಿವಾರ್ಯತೆಯನ್ನು ಮುಂದಿಡುತ್ತದೆ. ಅಂತಹ ಅನಿವಾರ್ಯತೆಯನ್ನು ಹಲವು ಬಗೆಯಲ್ಲಿ ಕವಿತೆಯಾಗಿಸಿ ಓದುಗನ ಮುಂದಿರಿಸಿದ್ದಾರೆ ಸಂತೋಷ ನಾಯಿಕ ಎಂಬ ಅರಳುಗಣ್ಣಿನ ಹಳ್ಳಿ ಮಣ್ಣಿನ ಹುಡುಗ.
ಕಾಲಧರ್ಮಕ್ಕೆ ತಕ್ಕಂತೆ ಕವಿತೆಯ ನೋಟವೂ, ಅಭಿವ್ಯಕ್ತಿಯ ದಾಟಿಯೂ ಅದರ ರೂಹುಗಳೂ ಬದಲಾಗುತ್ತಲೆ ಇರುತ್ತವೆ. ಇರಬೇಕು ಕೂಡಾ. ಆದರೆ ಇಂದಿನ ಹಲವು ಕವಿಗಳಿಗೆ ಬರವಣಿಗೆಗೆ ಒಡ್ಡಿಕೊಂಡಾಗ ಎದೆಯೊಳಗೆ ಸಿಕ್ಕಿಕೊಂಡ ಅಕ್ಷರಗಳು ಉಸುರಿದ್ದು ಸುಖಜೀವನದ ಸಾರವನ್ನಲ್ಲ, ಬದಲಿಗೆ ಎಲ್ಲ ನೆಲೆಯಲ್ಲೂ ಶಾಂತಿ ಮಾಯವಾಗಿ, ಅಶಾಂತಿ, ಅನೀತಿ, ಅನ್ಯಾಯ, ಅತ್ಯಾಚಾರ ಹೀಗೆ ನಿತ್ಯ ರಣರಂಗವಾಗುತ್ತಿರುವ ಸಾಮಾನ್ಯರ ತಪ್ತ ಬದುಕನ್ನು. ಹೀಗಿರುವಲ್ಲಿ ನೆತ್ತರಿನ ಕವಿತೆಗಳ ಬರೆಯೋದು ಮತ್ತು ಬರೆಯುವ ಸನ್ನಿವೇಶದಿಂದ ತಪ್ಪಿಸಿಕೊಳ್ಳಲಾಗದ ಮನಃಸ್ಥಿತಿ ಕವಿಗೆ ಎದುರಾಗುವುದು ಸಹಜ. ಯಾಕೆಂದರೆ ಇಂತಹ ಕವಿತೆಗಳು ಕೇವಲ ಗೀಳಿಗೆ ಹುಟ್ಟವು. ಬದಲಿಗೆ ವಾಸ್ತವಕ್ಕೆ ಮುಖಾಮುಖಿಯಾಗುವ ಮಾರ್ಗದಲ್ಲಿ ಅಭಿವ್ಯಕ್ತವಾಗುತ್ತವೆ. ಇವು ಎದೆಯೊಳಗಿನ ಸಂಕಟದ ಪದಗಳು. ನೋವಿಗೆ ಮಿಡಿಯುವ ಹೃದಯ ಮಾತ್ರ ಕಾಣಬಹುದಾದ ಹನಿಗಳು.
ಸಂತೋಷ ನಾಯಿಕರ ಹೆಚ್ಚು ಕಮ್ಮಿ ಎಲ್ಲ ಕವಿತೆಗಳು ಬಡವನ ಕಣ್ಣೀರಿನ ಹಾಡು ಉಲಿಯುತ್ತವೆ, ಹೆಣ್ಣಿನ ಪರವಾಗಿ ಮಿಡಿಯುತ್ತವೆ, ಅನ್ಯಾಯಕ್ಕೆ ಘರ್ಜಿಸುತ್ತವೆ, ಬದುಕನ್ನು ಧಿಕ್ಕರಿಸುತ್ತವೆ. ಹಾಗಾಗಿ ಇಲ್ಲಿ ಸುಖದ ಬದುಕಿನ ಯಾವ ಸಾಲುಗಳೂ ಇಲ್ಲ. ಆದರ್ಶಪರವಾದ ಒಲವು ಪ್ರೇಮದ ಸೊಲ್ಲಿಲ್ಲ. ಬದುಕಿನ ಹೊಂದಾಣಿಕೆಗೆ ಹಾರೈಸುವುದಿಲ್ಲ. ‘ಯುದ್ಧ ಮತ್ತು ಹೆಣ್ಣು’ ಎಂಬ ಕವಿತೆಯಲ್ಲಿ ಕವಿಯ ನೋವು ಮಾರ್ದನಿಗೊಡುವುದು ಹೀಗೆ.
“ ಈಗಲೂ
ಯುದ್ಧ ನಿಂತಿಲ್ಲ.
ಸತ್ತವರ ಹೆಸರಿನಲಿ ನಡೆಯುತ್ತಲೇ ಇದೆ.
ಯುದ್ಧ ಹೂಡಿದವರೆಂದೂ ಸಾಯಲ್ಲ
ಯುದ್ಧ ಮಾಡುವವರೆ
ಹೆಂಡತಿ ಮಕ್ಕಳ ಕಳೆದುಕೊಂಡು
ಯಾರದೋ ಗುಂಡಿನ ತುಪಾಕಿಗೆ ತುತ್ತಾಗಿ
ಹದ್ದು ಗಿಡುಗದ ಆಹಾರವಾಗುತ್ತಾರೆ”
ಇಂದು ನಿತ್ಯ ಯುದ್ಧ. ಹಿಂದೆ ರಾಜನಿಗಾಗಿ, ರಾಜ್ಯ ವಿಸ್ತರಣೆಗಾಗಿ ನಡೆಯುವ ಯುದ್ಧದಲ್ಲಿ ಸೈನಿಕರು ಮಡಿಯುತ್ತಿದ್ದರೆ, ಇಂದಿನ ಸಾಮಾಜಿಕ ಬದುಕೇ ರಣರಂಗವಾಗಿದೆ. ಇಲ್ಲಿ ರಾಜಕೀಯದ ದೊಂಬರಾಟವಿದೆ. ಯುದ್ಧ ಹೂಡುವ ಸಮಯಸಾಧಕರು ತಮ್ಮ ಲಾಭಕ್ಕಾಗಿ ದೋಂಬಿ ಗಲಾಟೆಗಳ ಹುಟ್ಟುಹಾಕುತ್ತಾರೆ. ಧರ್ಮ, ಮತ, ಪಂಥಗಳ ಎತ್ತಿ ಕಟ್ಟುತ್ತಾರೆ. ಮುಗ್ಧರಾದ ಬಡವರು, ಸ್ತ್ರೀಯರು, ಮಕ್ಕಳು ಇಂತಹ ದುಷ್ಟಕೂಟದ ಚಕ್ರವ್ಯೂಹದಲ್ಲಿ ಬಲಿಯಾಗುತ್ತಿರುವ ಕುರಿತು ಕವಿಗೆ ತೀವ್ರ ವಿಷಾದವಿದೆ.
ಗಡಿಭಾಗದ ಕವಿಗೆ ಗಡಿ ನಾಡಿನ ಭಾಗದಲ್ಲಿನ ಒಳಹೊರಗಿನ ಅನುಭವವಿದೆ. ನೆಲ. ಜಲ, ಭಾಷೆ, ಇವು ಜನರನ್ನು ಇಭ್ಭಾಗಿಸಲು ಅಧಿಕಾರಸ್ಥ ಮನಸ್ಸುಗಳು ಏನೆಲ್ಲ ತಂತ್ರ ಕುತಂತ್ರಗಳ ಹೆಣೆಯುತ್ತವೆ. ಅವರಿಗೆ ಅಧಿಕಾರ, ಐಷಾರಾಮ, ಆನಂದದ ಅನುಭೋಗಕ್ಕೆ ಗಡಿ ಪ್ರದೇಶದ ಭಾಷೆಗಳು, ಅಲ್ಲಿಯ ನೀರು, ನೆಲ ದಾಳವಾದರೆ, ಸಾಮಾನ್ಯರಿಗೆ ಅವರ ಜೀವನದ ಜೊತೆ ಹೆಣೆದುಕೊಂಡ ಅನುಬಂಧ. ಹಾಗಾಗಿ ನಾಯಿಕ ‘ಗಡಿ’ ಎಂಬ ಪುಟ್ಟ ಕವಿತೆಯಲ್ಲಿ ಹೀಗೆ ನೋಯುತ್ತಾರೆ.
ಅವರಿಗೆ
ಗಡಿಗಳೆಂದರೆ
ಸದಾ ಯುದ್ಧದ ನೆಲೆಗಳು
ಜನರ ನಡುವೆ ಭಾಷೆ ತಂದು
ಕಿಚ್ಚು ಹೊತ್ತಿಸುವ ಕುಂಡಗಳು
ಕೊಲೆಗಳಿಗೆ ರಕ್ತ ಕಲೆಗಳಿಗೆ
ಶಾಶ್ವತ ಸಾಂತ್ವನ ಕೇಂದ್ರಗಳು
ನಮಗೆ..
ಗಡಿಗಳೆಂದರೆ
ಹೆತ್ತ ಹೊತ್ತ ಒಡಲುಗಳು
ಇಲ್ಲಿಯ ಕವಿತೆಗಳ ಓದಿದ ಮೇಲೆ ಜಗದ ತುಂಬಾ ಹಬ್ಬಿರುವ ಹಬ್ಬುತ್ತಿರುವ ಹಿಂಸೆಗೆ ಎಳೆಯ ಮನಸ್ಸುಗಳು ಎಷ್ಟು ವಿಹ್ವಲಗೊಳ್ಳುತ್ತಿವೆ ಎನಿಸುತ್ತದೆ. ಯುದ್ಧ ಕಾಲದಲ್ಲಿ, ಅನ್ಯಾಯ ಅನಾಚಾರದ ಕಾಲದಲ್ಲಿ ಅದರ ಅಭಿವ್ಯಕ್ತಿಗೂ ಕವಿತೆ ಮಾಧ್ಯಮ. ಆದರೆ ಇಂತಹ ಕವಿತೆಗಳನ್ನು ತುರ್ತುಕಾಲದ ಕವಿತೆಗಳು ಎಂದು ಕರೆದು ಕಾವ್ಯ ಮಾರ್ಗದಿಂದ ಅವುಗಳನ್ನು ಪ್ರತ್ಯೇಕಿಸುವ ಹುನ್ನಾರವೂ ಕಾವ್ಯ ಜಗತ್ತಿನಲ್ಲಿ ನಡೆಯುತ್ತದೆ. ಆದರೆ ಬರೀ ಪ್ರೀತಿ ಪ್ರೇಮ, ಕಾಮ, ವಿರಹ, ಸಂಬಂಧಗಳು ಅಷ್ಟೇ ಬದುಕಲ್ಲ. ಮನುಷ್ಯಕುಲದ ಉದ್ದಕ್ಕೂ ಹರಿದಿರುವುದು ರಕ್ತಪಾತ. ಹಿಂದೆ ಹೆಣ್ಣು, ಹೊನ್ನು, ಮಣ್ಣಿಗಾಗಿ ಯುದ್ಧ ನಡೆಯುತ್ತಿದ್ದರೆ, ಇಂದು ನೆಲ,ಜಲ, ಧರ್ಮ, ಜಾತಿ ಮತ, ಪಂಗಡ, ಭಾಷೆ, ಹೀಗೆ ಈ ಪಟ್ಟಿ ಬೆಳೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಯುದ್ಧ ಹಿಂಸೆಗಳ ಹೊರತಾಗಿ ಬದುಕನ್ನು ಯಾವ ನೆಲೆಯಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆಳರಿವು ಕವಿಗಿದೆ. ಇಂತಹ ಸಂಕಟಗಳೆ ಇಂದಿನ ಎಳೆಯ ಮನಸ್ಸುಗಳ ಹೆಚ್ಚುಹೆಚ್ಚಾಗಿ ಕಾಡುತ್ತಿವೆ. ಪುಕ್ಕಲು ದನಿಗಳಿಗೂ ಒಂದು ಗಟ್ಟಿ ಸ್ವರ ಇದ್ದೇ ಇದೆ ಎಂಬ ಅರಿವು ಮೊಳೆತ ಕ್ಷಣ ಇಂತಹ ಹತ್ತಾರು ಗಟ್ಟಿ ದನಿಗಳು ಮಾರ್ದನಿಗೈಯುತ್ತವೆ.’ಚರಿತ್ರೆ ಮಾತಾಡುತ್ತದೆ’,ಸರ್ವೆಕಲ್ಲು, ನಮ್ಮ ತಕರಾರಿದೆ, ಯುದ್ಧ ಮತ್ತು ಹೆಣ್ಣು ಮುಂತಾದ ಕವಿತೆಗಳ ಈ ನೆಲೆಯಲ್ಲಿ ಗ್ರಹಿಸಬಹುದು ಎನಿಸುತ್ತದೆ.
ಸ್ತ್ರೀ ಪರ ಚಿಂತನೆಗಳು ಈ ಸಂಕಲನದಲ್ಲಿ ಬಹಳ ಇವೆ. ಧರ್ಮ ಬೇಧವಿಲ್ಲದೇ ನಡೆದ ಒಂದೇ ಶೋಷಣೆ ಎಂದರೆ ಅದು ಸ್ತ್ರೀ ಶೋಷಣೆ ಎಂಬುದು ಕವಿಗೆ ತಿಳಿದಿದೆ. ‘ಅವಳ ಸ್ವಾತಂತ್ರ್ಯ’ ಕವಿತೆ ಈ ಸತ್ಯವನ್ನು ಕಟ್ಟಿದ ರೀತಿಯಿಂದ ಇಷ್ಟವಾಗುತ್ತದೆ.
“ದೇವಸ್ಥಾನ ಘಂಟೆಗಳ
ನಾದ ಕೂಟ ಅವಳನ್ನೆಂದೂ
ಒಡತಿ ಮಾಡಲಾರದು
ಬೆತ್ತಲಾಗಿಸಿ ಗೆಜ್ಜೆ ಕಟ್ಟಿ
ದೇವದಾಸಿ ಪವಿತ್ರವೆಂದು
ಹಣೆಗೆ ಲೇಬೆಲ್ ಅಂಟಿಸಿ
ಬಸವಿ ಬಿಡುವುದು
ನಮಾಜ್ ಆಝಾನ್ ಕಲೀಮಾ ರೋಜಾ
ಅವಳನೆಂದೂ
ಜನ್ನತ್ಗೆ ಸೇರಿಸಲಾರದು
ನಕಾಬ್ , ಬುರ್ಕಾ, ತಲಾಕ್
ಮುಂತಾದವುಗಳಲ್ಲಿ ಇಟ್ಟು
ಮಸೀದಿಗೆ ಅನುಮತಿಯನೆಂದೂ
ಕೊಡಲಾರದು.” ಸ್ತ್ರೀ ಸಮಾನತೆಯ ಹಾದಿಯಲ್ಲಿ ಮುನ್ನಡಿಯಿಡುತ್ತಿರುವ ಮಹಿಳೆಯರು ಕೂಡಾ ಒಂದಲ್ಲ ಒಂದು ರೀತಿಯಿಂದ ಅನ್ಯಾಯದ ಹಾದಿಯಲ್ಲಿ ತುಳಿತಕ್ಕೆ ಒಳಗಾಗುತ್ತಲೇ ಇರುವ ಚಿತ್ರಣವನ್ನು ಇಲ್ಲಿಯ ಕೆಲವು ಕವಿತೆಗಳು ಕಟ್ಟಿಕೊಟ್ಟಿವೆ. ಸ್ವಾರ್ಥದ ನೆರಳಿನಲ್ಲಿ ನಂಬಿಕೆಗಳು ಕುಸಿದು ಸಂಬಂಧಗಳು ಅರ್ಥಹೀನವಾಗುತ್ತಿರುವ ಕುರಿತು ಕವಿಯಲ್ಲಿ ಆತಂಕವಿದೆ. ಮಹಿಳಾ ಮುಖಿ ಚಿಂತನೆಯಲ್ಲಿ ಯಶೋಧರೆ, ನಾವು ಯಾವುದಕ್ಕೆ ಸಾಕ್ಷಿ, ಹೆಜ್ಜೆಗಳು , ಊರ್ಮಿಳೆ, ಅಕ್ಕ, ದಾಸಿ ಮುಂತಾದ ಕವಿತೆಗಳ ಗಮನಿಸಬಹುದು.
ಸಂದಿಗ್ಧತೆಯ ಕಾಲದಲ್ಲಿ ನಿಂತು ನೋಡುತ್ತಿದ್ದೇವೆ. ನಮ್ಮ ನಿಮ್ಮೆಲ್ಲರ ಬದುಕು ಯಾವುದರ ವಿರುದ್ಧ ಸೆಣಸುತ್ತಿದೆ. ಬದುಕು ಕೇವಲ ಸಹಜ ಬದುಕಾಗಿದೆಯೇ? ಅತಿರಂಜಕತೆಯ ಕಲಸುಮೇಲೋಗರವಾಗುತ್ತಿದೆಯೇ? ಗುರುತಿಸಿಕೊಳ್ಳುವ ತುರಾತುರಿಯಲ್ಲಿ ತನ್ನತನವನ್ನು ಮಾರಿಕೊಳ್ಳುತ್ತಿದೆಯೇ? ಜಾಗತೀಕರಣದ ಪ್ರಭಾವಲಯಕ್ಕೆ ಸಿಕ್ಕು ನಮ್ಮತನ ಕಳೆದುಕೊಂಡು ಭಿನ್ನ ಸಂಸ್ಕೃತಿಗಳ ಮೋಹಕ್ಕೆ ಬಿದ್ದು ಭ್ರಮೆಯ ಬೆನ್ನೇರಿ ಸಾಗುತ್ತಿದ್ದೇವೆಯೇ?ಈ ಭ್ರಮಾದೀನ ದಾರಿಗಳು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿವೆ ಎಂಬ ಅರಿವಿದೆಯೇ? ಸಂಕಲನ ಓದಿದ ನಂತರ ಮೂಡುವ ಪ್ರಶ್ನೆಗಳಿವು.
- ನಾಗರೇಖಾ ಗಾಂವಕರ








1 thought on “ಹೊಸ ವಿಳಾಸದ ಕವಿತೆಗಳು”
ವಾಸ್ತವದ ಚಿತ್ರಣ ಸೊಗಸಾಗಿದೆ. ಅರ್ಥಪೂರ್ಣ ವಿಮರ್ಶೆ. ಅಭಿನಂದನೆಗಳು.