- ಶತಮಾನದ ಸ್ಮರಣೆ *
” ಜಿ. ಎಸ್. ಆಮೂರ ವ್ಯಕ್ತಿಮತ್ತೆ ಮತ್ತು ವಿಮರ್ಶೆ “





ಸಾಂಪ್ರತ ಕನ್ನಡದಲ್ಲಿ ವಿಮರ್ಶೆಯೂ ಸಾಹಿತ್ಯದ ಒಂದು ಗಣ್ಯ ಹಾಗೂ ಪ್ರಧಾನ ಪ್ರಕಾರವೆಂದು ಪರಿಗಣಿಸಲ್ಪಟ್ಟಿದೆ. ಇತರ ಭಾರತೀಯ ಭಾಷೆಗಳಲ್ಲಿ ಹೆಚ್ಚಾಗಿ ಸೃಜನ ಸಾಹಿತ್ಯಕ್ಕೆ ವಿಶೇಷವಾದ ಒತ್ತು ನೀಡಲಾಗುತ್ತಿದ್ದರೆ ಕನ್ನಡದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ವಿಮರ್ಶಾ ಕೃತಿಗಳೇ ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುತ್ತಿರುವುದು ಅವಲೋಕನೀಯ ಅಂಶ. ನಮ್ಮದೇ ಪರಂಪರೆಯನ್ನು ಹುಡುಕಿ ಪ್ರತಿಷ್ಠಾಪಿಸುವ ಕೆಲಸ ತಕ್ಕಮಟ್ಟಿಗೆ ಕನ್ನಡ ವಿಮರ್ಶೆಯಲ್ಲಿ ನಡೆಯುತ್ತಿರುವುದು ಆಶಾದಾಯಕ ಸಂಗತಿ. ಕನ್ನಡ ಲೇಖಕರು ತಮ್ಮ ವಿಮರ್ಶಾ ಕೃತಿಗಳ ಮೂಲಕ ದೊಡ್ಡ ಓದುಗ ವರ್ಗವನ್ನು ಸಿದ್ಧ ಮಾಡಿದ್ದು ಇತ್ತೀಚಿನ ಒಂದು ಅಸಾಧಾರಣ ಬೆಳವಣಿಗೆ. ಸಾಹಿತ್ಯ ವಿಮರ್ಶೆ ಎಂಬ ಜ್ಞಾನ ಕ್ಷೇತ್ರ ಕಳೆದ ಕೆಲವು ದಶಕಗಳಲ್ಲಿ ಕನ್ನಡದಲ್ಲಿ ನಿರಂತರವಾಗಿ ಬೆಳೆಯುತ್ತಾ ಹೊಸ ಆಯಾಮವನ್ನು ಪಡೆದುಕೊಂಡಿದೆ. ಪ್ರಸಕ್ತ ಕನ್ನಡ ವಿಮರ್ಶಕರು ಅನೇಕ ವಾಗ್ವಾದಗಳನ್ನು ಮುನ್ನೆಲೆಗೆ ತಂದು ವಿಶ್ಲೇಷಣೆ ನಡೆಸಿರುವುದು ವರ್ತಮಾನದ ತುರ್ತು ಸಹ ಆಗಿದೆ. ಕನ್ನಡ ವಿಮರ್ಶೆ ಇಂದು ಒಂದು ಬಗೆಯ ಸಾಂಸ್ಕೃತಿಕ ಹುಡುಕಾಟವಾಗಿ ಹೆಚ್ಚಾಗಿ ಚಾಲ್ತಿಯರುವುದು ಮೆಚ್ಚತಕ್ಕ ಸಂಗತಿ. ಬದುಕಿನ ಜೊತೆಗೆ ಸಾಹಿತ್ಯದ ಅನುಸಂಧಾನ ಕನ್ನಡ ವಿಮರ್ಶೆಯ ಪ್ರಧಾನ ಲಕ್ಷಣಗಳಲ್ಲಿ ಒಂದು. ಒಂದೊಂದು ತಲೆಮಾರೂ ಹೊಸ ಹೊಸ ವಿಮರ್ಶಾ ಸೂತ್ರಗಳನ್ನು ರೂಪಿಸಿಕೊಳ್ಳಬೇಕೆಂಬುದು ವಿಮರ್ಶಕ ಟಿ.ಎಸ್. ಎಲಿಯಟ್ ನ ಮತ.
ಕನ್ನಡ ಸಾರಸ್ವತ ಜಗತ್ತಿನಲ್ಲಿ ವಿಮರ್ಶಕ ಜಿ. ಎಸ್. ಆಮೂರ ಅವರದು ಒಡೆದು ಕಾಣುವ ಹೆಸರು. “ವಿಮರ್ಶಕನು ವಿಮರ್ಶೆಯನ್ನು ಬರೆಯುವುದು ತನ್ನ ಕಲ್ಪನಾ ಚಾತುರ್ಯ, ತನ್ನ ಜಾಣತನ, ತನ್ನ ವಿದ್ವತ್ತು ಅಥವಾ ಸೂಕ್ಷ್ಮಜ್ಞತೆಯನ್ನು ಪ್ರದರ್ಶಿಸುವುದಕ್ಕಲ್ಲ, ಕೃತಿಯ ಮಹತ್ವವನ್ನು ಪ್ರಕಟಿಸುವುದಕ್ಕಾಗಿ. ವಿಮರ್ಶಕನ ಲಾಂಛನವೆಂದರೆ ದಂಡವಲ್ಲ, ದೀಪ ” ಎಂದಿದ್ದಾನೆ ಪ್ರಸಿದ್ಧ ಆಂಗ್ಲ ಲೇಖಕ ಹೆಲೆನ್ ಗಾರ್ಡ್ನರ್. ಈ ಮಾತನ್ನು ಕನ್ನಡದಲ್ಲಿ ನಿಜಗೊಳಿಸಿದ ಚಿಂತಕ, ವಿಮರ್ಶಕ ಆಮೂರ್. ಸಾಹಿತ್ಯ ಪ್ರಪಂಚದಲ್ಲಿನ ಅತ್ಯುತ್ತಮ ಚಿಂತನೆಗಳನ್ನು ತಿಳಿದುಕೊಳ್ಳುವ, ಪ್ರಚಾರ ಮಾಡುವ ನಿಸ್ವಾರ್ಥ ಪ್ರಯತ್ನವೇ ವಿಮರ್ಶೆ. ವರ್ತಮಾನದ ಪ್ರಮುಖ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ವಿಮರ್ಶೆಯೂ ಒಂದು. ವಿಮರ್ಶೆ ಸಹೃದಯನಿಗೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ದಾರಿದೀಪ. ಸಾಹಿತ್ಯ ವಿಮರ್ಶೆಯನ್ನು ಒಂದು ಸಾಂಸ್ಕೃತಿಕ ಚಟುವಟಿಕೆ ಎಂದು ನಂಬಿ, ನೆಚ್ಚಿ ಐದು ದಶಕಗಳ ಕಾಲ ನೋಂಪಿಯಂತೆ ಆ ಕ್ಷೇತ್ರದಲ್ಲಿ ಬೇಸಾಯ ಮಾಡಿ ಹುಲುಸಾದ ಬೆಳೆ ತೆಗೆದ ಕೀರ್ತಿ ಆಮೂರ ಅವರಿಗೆ ಸಲ್ಲುತ್ತದೆ. ಇದು ಆಮೂರ ಶತಮಾನೋತ್ಸವ ವರ್ಷ.
ಡಾ. ಗುರುರಾಜ ಶಾಮಾಚಾರ್ಯ ಆಮೂರ ಅವರು 1925ರಲ್ಲಿ ಜನಿಸಿದರು. ಅವರ ಹುಟ್ಟೂರು ಗದಗ ಜಿಲ್ಲೆಯ ಸೂರಣಗಿ. ಬೊಮ್ಮನಹಳ್ಳಿ, ಕರ್ಜಗಿಗಳಲ್ಲಿ ಗ್ರಾಮೀಣ ಭಾಗದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದು, ಹಾವೇರಿಯ ಮುನಿಸಿಪಲ್ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಶನ್ ಪೂರೈಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ., ಪದವಿ; ಅಮೇರಿಕದ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯಗಳಲ್ಲಿ ಟಿ.ಎಸ್.ಎಲಿಯಟ್ ಕುರಿತು ಸಂಶೋಧನೆ ನಡೆಸಿದರು. 1964ರಿಂದ 68ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, 1968ರಿಂದ 85ರವರೆಗೆ ಔರಂಗಾಬಾದ್ ನ ಮರಾಠವಾಡಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ರೀಡರ್, ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡರು. ಹೊಸಗನ್ನಡ ಸಾಹಿತ್ಯ ವಿಮರ್ಶಾ ಪರಂಪರೆಯನ್ನು ಕಟ್ಟಿದ ಪ್ರಥಮರಲ್ಲಿ ಡಾ.ಜಿ.ಎಸ್. ಆಮೂರರ ಹೆಸರು ಅತ್ಯಂತ ಪ್ರಮುಖವಾದದ್ದು. ವೈಯಕ್ತಿಕ ಪೂರ್ವಗ್ರಹಗಳಿಂದ ಸಾಹಿತ್ಯ ವಿಮರ್ಶೆಯನ್ನು ಪ್ರದೂಷಿತಗೊಳಿಸದ ಅವರ ವಿಮರ್ಶೆಯು ಯಾವ ಕಾಲಕ್ಕೂ ಮಾದರಿ ಎನ್ನಿಸಿಕೊಳ್ಳುವಂತಹದು. ಹೊಸಗನ್ನಡ ಕಥನ ವಿಮರ್ಶೆಯ ಬಂಡಿ ನವ್ಯಕ್ಕೇ ನಿಂತುಹೋದಾಗ, ಕಥನದ ವಿಮರ್ಶೆಯ ಹರಿವು ದೇವನೂರರ ಕಥನದಷ್ಟೊತ್ತಿಗೆ ದರಿಗಟ್ಟಿದಾಗ, ಅದನ್ನು ಮುಂದಕ್ಕೆ ಪ್ರಸರಣಗೊಳ್ಳುವಂತೆ ಮಾಡಿದ ಗುಣಸಂಪನ್ನ ವಿಮರ್ಶಕರು ಆಮೂರರಾಗಿದ್ದಾರೆ. ಡಾ.ಜಿ.ಎಸ್. ಅಮೂರರ ವಿಮರ್ಶಾ ಮಾದರಿಯು ಇಂಗ್ಲಿಷಿನ ‘ಗ್ರೇಟ್ ಟ್ರೆಡಿಶನ್’ ಮಾದರಿಯದೇ ಆಗಿದ್ದರೂ, ಅವರಿಗೆ ಕನ್ನಡ ಭಾಷೆಯ ಸಾಹಿತ್ಯದ ಬಗೆಗೆ ಅತ್ಯಂತ ವಿವೇಕಯುತವಾದ ಸಮ್ಯಕ್ ಗ್ರಹಿಕೆಯಿದ್ದಿತು. ಇಂಥ ತಿಳುವಳಿಕೆಯ ಹಿನ್ನೆಲೆಯಲ್ಲಿ ಅವರು ಕನ್ನಡದ ಅನೇಕ ‘ಮೈನರ್’ ಎನ್ನಿಸಿಕೊಂಡ ಲೇಖಕರ ಮಹತ್ವವನ್ನು ಗುರುತಿಸಿ ಗೌರವಿಸಿದ್ದಾರೆ ಎಂಬ ವಿಮರ್ಶಕ ಡಾ. ಜಿ. ಎಂ. ಹೆಗಡೆ ಅವರ ಮಾತು ಅವಲೋಕನೀಯವಾಗಿದೆ.

ಡಾ. ಜಿ.ಎಸ್. ಆಮೂರರು ಪಡೆದಿರುವ ಅನೇಕ ಪ್ರಶಸ್ತಿ ಪುರಸ್ಕಾರಗಳಲ್ಲಿ ‘ಫುಲ್ ಬ್ರೆಟ್ ಸ್ಕಾಲರ್ಶಿಪ್’, ಸಂಶೋಧನೆಗಾಗಿ ‘ಬ್ರಿಟಿಷ್ ಕೌನ್ಸಿಲ್ ಶಿಷ್ಯವೇತನ’, ಆರ್.ಕೆ. ಲಾಗೂ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಹೀಗೆ ಹತ್ತು ಹಲವು. ಆಮೂರ ಅವರು ಕೃತಿನಿಷ್ಠ ವಿಮರ್ಶಕರು. ಕನ್ನಡ ಸಾಹಿತ್ಯ ವಿಮರ್ಶೆಯ ಆಯಾಮವನ್ನು ಬೆರಗುಗೊಳಿಸುವಂತೆ ವಿಸ್ತರಿಸಿದವರು ಆಮೂರರು ಎಂಬುದಾಗಿ ಹಿರಿಯ ಸಾಹಿತಿ ಜಿ.ಎಸ್. ಶಿವರುದ್ರಪ್ಪನವರು ಅಭಿಪ್ರಾಯಪಟ್ಟಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯ ಒಂದು ಪ್ರಮುಖ ಚಾರಿತ್ರಿಕ ಆಂದೋಲನ. ಅದರ ಸಾಂಸ್ಕೃತಿಕ ರೂಪಗಳನ್ನು ಗುರುತಿಸುತ್ತಲೇ ಈ ಕಾವ್ಯ ಮಾರ್ಗ ಏಕರೂಪಿಯಾಗಿರಲಿಲ್ಲ ಎಂಬುದನ್ನು ಸಮರ್ಪಕವಾಗಿ ಶೋಧಿಸಿ ವಿಮರ್ಶೆಗೆ ಒಳಪಡಿಸಿದ್ದು ಅವರ ಗುರುತರವಾದ ಸಾಧನೆ. ಬೇಂದ್ರೆ, ಕುವೆಂಪು, ಮಧುರಚೆನ್ನ, ವಿನಾಯಕ ಮೊದಲಾದವರ ಕಾವ್ಯಮಾರ್ಗಗಳ ನಡುವಿನ ಅಂತರವನ್ನು ತಮ್ಮ ಕೃತಿಗಳಲ್ಲಿ, ಲೇಖನಗಳಲ್ಲಿ ಹಾಳತವಾಗಿ ಅವರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಭುವನದ ಭಾಗ್ಯ, ವಿರಾಟ ಪುರುಷ, ಯುಗದ ಕವಿ, ಕನ್ನಡ ಕಥನ ಸಾಹಿತ್ಯ- ಸಣ್ಣ ಕಥೆ, ಕನ್ನಡ ಕಥನ ಸಾಹಿತ್ಯ- ಕಾದಂಬರಿ, ಗಿರೀಶ್ ಕಾರ್ನಾಡ ಮತ್ತು ಭಾರತೀಯ ರಂಗಭೂಮಿ, ಆಧುನಿಕ ಕನ್ನಡ ವಿಮರ್ಶೆ ಹೀಗೆ 45ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಹಿರಿಮೆ ಆಮೂರ ಅವರದು. ಅವರೊಬ್ಬ ಸವ್ಯಸಾಚಿ ಲೇಖಕರಾಗಿ, ವಿಮರ್ಶಕರಾಗಿ ಅಪಾರವಾದ ಜನ ಮನ್ನಣೆಗೆ ಪಾತ್ರರಾಗಿದ್ದರು.
ವಿಮರ್ಶೆ ಒಂದು ಬಗೆಯ ಶಿಸ್ತು, ಶಿಕ್ಷಣ. ಅದು ಓದುಗರ ಸಾಹಿತ್ಯಾಭಿರುಚಿಯನ್ನು ಪರಿಷ್ಕರಿಸುತ್ತದೆ. “ವಿಮರ್ಶಕನಿಲ್ಲದ ಕವಿ ಅರ್ಥವಾಗದ ಗ್ರಂಥ. ವಿಮರ್ಶಕನು ಲೇಖಕ-ವಾಚಕರ ನಡುವಿನ ಮಾಧ್ಯಮ. ವಿಮರ್ಶೆ ಕಾವ್ಯಾಕಾಶದ ತಾರೆಗಳನ್ನು ಸ್ಪಷ್ಟವಾಗಿ ತೋರಿಸುವ ದೂರದರ್ಶಕ “ಎಂಬ ಕವಿ ಬೇಂದ್ರೆ ಅವರ ಮಾತಿನಲ್ಲಿ ತಥ್ಯವಿದೆ. ಇಂದು ವಿಮರ್ಶೆಯ ಅರ್ಥ, ಉದ್ದೇಶ, ವ್ಯಾಪ್ತಿ- ಇವೆಲ್ಲವೂ ಜಟಿಲವಾದ ಎಳೆಗಳನ್ನು ಬಿಡಿಸಿಕೊಂಡು ಅಂತರ್ಶಿಸ್ತೀಯವಾಗಿ, ಸ್ಪಷ್ಟವಾಗಿ ಸರಳವಾಗಿ ಆಸಕ್ತರಿಗೆ ಸಮಾಜಕ್ಕೆ ಸಿಗಬೇಕಾದ ಅಗತ್ಯತೆಯಿದೆ. ಕನ್ನಡದ ಈ ಸಂದರ್ಭದಲ್ಲಿ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಬೆಳಕು ಕಾಣುತ್ತಿವೆ. ಕನ್ನಡ ವಿಮರ್ಶಕರು ದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿರುವುದು ಅಸಾಧಾರಣ ವಿಷಯ. ವಿಮರ್ಶೆಯನ್ನೇ ತಮ್ಮ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡು, ಅದನ್ನು ತಮ್ಮ ಸಾಂಸ್ಕೃತಿಕ ಹೊಣೆಗಾರಿಕೆ ಎಂದರಿತು ಈ ಸಾಹಿತ್ಯ ಪ್ರಕಾರವನ್ನು ಸಮೃದ್ಧಗೊಳಿಸಿದ ಶ್ರೇಷ್ಠ ವಿಮರ್ಶಕ ಆಮೂರ ಎಂದರೆ ಅತ್ಯುಕ್ತಿಯಾಗದು. 400ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ವಿಮರ್ಶೆಗೆ ಗುರಿಪಡಿಸಿದ ಅಪೂರ್ವ ಸಾಧಕ ಅವರಾಗಿದ್ದಾರೆ.

ಆಮೂರ ಅವರ ವಿಮರ್ಶೆಯ ಕೃತಿಗಳು ಸಿದ್ಧ ಮಾದರಿಯವುಗಳಲ್ಲ. ಪ್ರತಿಯೊಂದು ಕೃತಿ ರಚನೆಗಾಗಿ ಅವರು ಹೊಸ ಮಾದರಿಯನ್ನು ಹುಡುಕಿಕೊಂಡು ನಿಷ್ಠೆಯಿಂದ ಕೆಲಸ ಮಾಡಿರುವುದು ಗಮನೀಯ ಅಂಶ. ಆಧುನಿಕ ಕನ್ನಡ ಸಾಹಿತ್ಯದ ವಿರಾಟ ಪುರುಷ ಅಥವಾ ಶ್ರೀರಂಗ ಸಾರಸ್ವತ ಸಮೀಕ್ಷೆ (1988) ಈ ಕೃತಿಯಲ್ಲಿ ಅವರ ಪ್ರಾರಂಭದ ನಾಟಕಗಳು, ಗಾಂಧಿಯುಗದ ನಾಟಕಗಳು, ಹೊಸ ಅಲೆಯ ನಾಟಕಗಳು,ಕೊನೆಯ ನಾಟಕಗಳು ಎಂದು ನಾಲ್ಕು ಹಂತಗಳಲ್ಲಿ ಗುರುತಿಸಿ ನಾಟಕ ಹಾಗೂ ರಂಗಭೂಮಿಗಳನ್ನು ಕುರಿತು ಶ್ರೀರಂಗರ ಚಿಂತನೆಯನ್ನು ಒಟ್ಟಾಗಿ ಗ್ರಹಿಸಿರುವುದು ಈ ಕೃತಿಯ ಗಟ್ಟಿತನಕ್ಕೆ ಕಾರಣವಾಗಿದೆ. ಆಮೂರರ ಅಗಾಧವಾದ ಪ್ರತಿಭೆ, ವಿವಿಧ ಜ್ಞಾನ ಶಾಖೆಗಳ ಮೇಲೆ ಅವರಿಗಿರುವ ಹಿಡಿತ, ತೀಕ್ಷ್ಣ ವಿಶ್ಲೇಷಣ ಕ್ರಮ ಹಾಗೂ ಸೋಪಜ್ಞ ವ್ಯಾಖ್ಯಾನಗಳಿಂದ ಇದೊಂದು ಉತ್ಕೃಷ್ಟ ಕೃತಿಯಾಗಿ ಪಡಿಮೂಡಿದೆ. ಈ ಕೃತಿಯ ಮುಮ್ಮಾತಿನಲ್ಲಿ ಲೇಖಕರ ಅನಿಸಿಕೆ ಹೀಗೆ ವ್ಯಕ್ತವಾಗಿದೆ- “ನನ್ನ ಪುಸ್ತಕದ ಉಪಶೀರ್ಷಿಕೆ ಸೂಚಿಸುವಂತೆ ಇದು ಶ್ರೀರಂಗರ ಸಾಹಿತ್ಯವನ್ನು ಸಮಗ್ರವಾಗಿ-ಎಂದರೆ ನಾಟಕ, ಕಾದಂಬರಿ, ಹರಟೆ, ವೈಚಾರಿಕ ಗ್ರಂಥಗಳು, ಚರಿತ್ರೆ-ಆತ್ಮಚರಿತ್ರೆ, ಅನುವಾದಗಳು ಇತ್ಯಾದಿ ಸೇರಿದಂತೆ-ನೋಡುವ ಪ್ರಯತ್ನ. ಇದರಿಂದಾಗಿ ಅವರ ದರ್ಶನದ ಸಮಗ್ರತೆ, ಕಲೆಯ ವಿಕಾಸ, ವೈಚಾರಿಕತೆಯ ಸ್ವರೂಪ, ಕೃತಿಗಳ ಅಂತಃಸಂಬಂಧಗಳು ಇಂಥ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲುವುದು ಸಾಧ್ಯವಾಗಬಹುದು ಎಂದು ನನ್ನ ನಂಬುಗೆ. ಹರಿಜನ್ವಾರ, ಶೋಕಚಕ್ರ, ಕತ್ತಲೆ ಬೆಳಕು, ಕೇಳು ಜನಮೇಜಯ, ರಂಗಭಾರತ, ವಿಶ್ವಾಮಿತ್ರನ ಸೃಷ್ಟಿ ಇಂಥ ಕೆಲವೇ ಕೃತಿಗಳನ್ನು ಬಿಟ್ಟರೆ ಶ್ರೀರಂಗರ ಕೃತಿಗಳು ಗಂಭೀರ ವಿಮರ್ಶೆಗೆ ಒಳಗಾದ ಉದಾಹರಣೆಗಳು ವಿರಳ. ಹರಿಜನ್ವಾರ ಅವರ ಹತ್ತನೆಯ ನಾಟಕ ಎನ್ನುವ ವಿಷಯವಾಗಲಿ, ಅವರ ಏಕಾಂಕಗಳೇ ಎಪ್ಪತ್ತರಷ್ಟಿವೆ ಎನ್ನುವ ಮಾತಾಗಲಿ ಬಹಳಷ್ಟು ಓದುಗರಿಗೆ ಗೊತ್ತಿರಲಾರದು. ಹಾಗೆಯೇ ಶ್ರೀರಂಗರಿಗೆ ತಮ್ಮದೇ ಆದ ದರ್ಶನವಿದೆಯೆ? ಇದ್ದರೆ, ಇಂದು ಅದರ ಪ್ರಸ್ತುತತೆಯೇನು ? ಎಂಬ ಪ್ರಶ್ನೆಗಳೂ ನಮ್ಮ ವಿಮರ್ಶಕರಿಗೆ ಮಹತ್ವದ್ದೆನಿಸಿಲ್ಲ. ಶ್ರೀರಂಗರ ಸೃಜನಶೀಲ ಸಾಹಿತ್ಯಕ್ಕೂ, ಅವರ ವೈಚಾರಿಕತೆಗೂ ಅವಿನಾಭಾವ ಸಂಬಂಧವಿದ್ದರೂ ಅವರ ವೈಚಾರಿಕ ಗ್ರಂಥಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ. ಗೀತಾಗಾಂಭೀರ್ಯ, ಗೀತಾದರ್ಪಣ, ಮಾನವನ ಮೃತ್ಯುಪತ್ರಗಳಂಥ ಗ್ರಂಥಗಳಲ್ಲಿ ಮಾನವನ ಸ್ವಭಾವ, ಸಾಮಾಜಿಕ ಸಂಘಟನೆಗಳ ಸ್ವರೂಪ, ನಾಯಕತತ್ವ, ಪ್ರಗತಿಯ ಕಲ್ಪನೆಗಳಂಥ ಮೂಲಭೂತ ಸಮಸ್ಯೆಗಳ ಬಗ್ಗೆ ಅವರ ಚಿಂತನೆಯಿದೆ. ಈ ಚಿಂತನೆಯೇ ಅವರ ಕೃತಿಗಳ ಬೆನ್ನೆಲುಬಾಗಿದ್ದರೂ ಅದರ ಗುಣದೋಷಗಳ ಬಗ್ಗೆ ಚರ್ಚೆಯೇ ಆಗಿಲ್ಲ. ನಮ್ಮವಿಮರ್ಶಕರಿಗೆ ಶ್ರೀರಂಗರ ಚಿಂತನೆ ಅವರ ಕಲೆಗೆ ಮಾರಕವಾಗಿ ಕಂಡಿದೆಯೇ ಹೊರತು ಪೋಷಕ ಅಥವಾ ಪೂರಕವಾಗಿ ಅಲ್ಲ ಎನ್ನುತ್ತಲೇ ಕನ್ನಡ ವಿಮರ್ಶೆಯ ಇತಿಮಿತಿಯನ್ನು ಸಹ ಎತ್ತಿ ಆಡುವಲ್ಲಿ ಅವರು ಹಿಂದೆ ಮುಂದೆ ನೋಡುವುದಿಲ್ಲ.
ವರ್ತಮಾನದ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಕುರಿತು ಬಹಳ ನೋವಿನಿಂದಲೇ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. “ಬೇಂದ್ರೆ ಅಥವಾ ಕುವೆಂಪುರವರನ್ನು ಓದದೆಯೂ ಇಂದು ನಮ್ಮ ವಿದ್ಯಾರ್ಥಿಗಳು ವಿದ್ಯಾವಂತರೆನಿಸಿಕೊಳ್ಳಬಲ್ಲ ಸಾಂಸ್ಕೃತಿಕ ಪರಿಸ್ಥಿತಿ ನಮ್ಮಲ್ಲಿದೆ ಎಂಬರ್ಥದ ಮಾತುಗಳನ್ನು ಯು.ಆರ್. ಅನಂತಮೂರ್ತಿ ಒಮ್ಮೆ ಹೇಳಿದ್ದರು. ಶ್ರೀರಂಗರ ವಿಷಯದಲ್ಲಿ ಇದು ಇನ್ನೂ ಹೆಚ್ಚು ನಿಜವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಾಗಿರುವ ಕನ್ನಡ ಬಲ್ಲ ವಿದ್ವಾಂಸರಿಗೂ ಶ್ರೀರಂಗರ ಹೆಸರೂ ಕೂಡ ಅಪರಿಚಿತವಾಗಿರುವ ಸನ್ನಿವೇಶ ನನ್ನ ಅನುಭವಕ್ಕೆ ಬಂದಿದೆ. ಆಧುನಿಕ ಕನ್ನಡದ ಶ್ರೇಷ್ಠ ನಾಟಕಕಾರರೂ, ರಂಗಭೂಮಿಯ ಬಗ್ಗೆ ನಿರಂತರವಾಗಿ ಚಿಂತಿಸಿದವರೂ, ಪ್ರಥಮ ವರ್ಗದ ಮೇಧಾವಿಗಳೂ ಆಗಿದ್ದ ಅವರಂಥ ಲೇಖಕರನ್ನು ಇಷ್ಟು ಬೇಗ ವಿಸ್ಮೃತಿಗೆ ತಳ್ಳುವುದು ಒಂದು ಸಾಂಸ್ಕೃತಿಕ ದುರಂತವೆಂದೇ ನನ್ನ ಭಾವನೆ. ನನ್ನ ಪುಸ್ತಕದಲ್ಲಿ ಹಲವಾರು ಕೊರತೆಗಳಿರಬಹುದು. ಆದರೆ ಅದು ಇಂಥ ದುರಂತದ ಬಗ್ಗೆ ಎಚ್ಚರಿಕೆಯ ದನಿಯಾದರೆ ಸಾಕು”.(ಅದೇ, ಪುಟ 6) ಈ ಬಗೆಯ ಕಾಳಜಿ ಆಮೂರರ ವಿಮರ್ಶೆಯ ಹಿರಿಮೆಯನ್ನು ಎತ್ತಿಹಿಡಿದಿದೆ.
“ನನ್ನ ಪ್ರಮುಖ ವ್ಯವಸಾಯ ವಿಮರ್ಶೆಯ ಕ್ಷೇತ್ರದಲ್ಲಿಯೇ ನಡೆದಿದೆ. ಬಹುಶಃ ಇದು ಸಾಹಿತ್ಯದ ಶಿಕ್ಷಕನಿಗೆ ಅನಿವಾರ್ಯವಾದುದು ಎಂದೇ ತೋರುತ್ತದೆ. ಯಾಕೆಂದರೆ, ಸೀಮಿತ ಅರ್ಥದಲ್ಲಿ ಇದು ಕ್ಲಾಸ್ ರೂಂ ಕಾರ್ಯದ ವಿಸ್ತರಣವೇ ಆಗಿದೆ. ಆದರೆ ಇದಕ್ಕೆ ಬೇರೆ ಆಯಾಮಗಳೂ ಇವೆ. ಒಂದು ಸಮಾಜದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವಿವೇಕವಾಗಿಯೂ ವಿಮರ್ಶಕ ಕಾರ್ಯಪ್ರವೃತ್ತನಾಗಬೇಕಾಗುತ್ತದೆ. ಹೊಸ ಪ್ರತಿಭೆಗಳನ್ನು ಗುರುತಿಸುವ, ಅಭಿಜ್ಞಾನ-ಪ್ರತ್ಯಭಿಜ್ಞಾನಗಳ ಗುರುತರ ಹೊಣೆಯೂ ಅವನ ಮೇಲಿರುತ್ತದೆ. ವ್ಯಾಖ್ಯಾನ, ಮೌಲ್ಯ ನಿರ್ಣಯಗಳಂಥ ಕರ್ತವ್ಯಗಳನ್ನು ಅವನು ನಿಭಾಯಿಸಬೇಕಾಗುತ್ತದೆ. ಕನ್ನಡದಲ್ಲಿ ಬಿ.ಎಂ.ಶ್ರೀ.ಯವರಿಂದ ಪ್ರಾರಂಭವಾದ ವಿಮರ್ಶಕರ ದೊಡ್ಡ ಪರಂಪರೆಯೇ ಇದೆ. ಈ ಪರಂಪರೆಯಲ್ಲಿ ಒಂದು ಚಿಕ್ಕ ಕೊಂಡಿಯಾಗಿರುವ ಸೌಭಾಗ್ಯ ನನ್ನದಾಗಿದೆ” ಎಂದವರು ವಿನೀತವಾಗಿ ಹೇಳಿಕೊಂಡಿದ್ದಾರೆ.
ಆಮೂರ ಅವರು ಬಹುಭಾಷಾ ತಜ್ಞರು, ಅವರದು ನಾನಾ ಭಾಷೆಗಳ ಸಂವೇದನೆ. ಬಹುಕಾಲ ಅವರು ಬೋಧನೆಯನ್ನು ಮಾಡಿದ್ದು ಇಂಗ್ಲಿಷದಲ್ಲಿ. 17-18 ವರ್ಷ ಮರಾಠಿ ನೆಲದಲ್ಲಿ ಕೆಲಸ ಮಾಡಿದ್ದರಿಂದ ಮರಾಠಿಯಲ್ಲೂ ಹಿಡಿತ ಸಾಧಿಸಿ ಅಲ್ಲಿಯೂ ಬರೆವಣಿಗೆ, ಅನುವಾದ ಕಾರ್ಯವನ್ನು ಮಾಡಿದರು. ಅದರಿಂದ ಆದ ಲಾಭವನ್ನು ಅವರು ಹೀಗೆ ಹೇಳಿಕೊಂದಿದ್ದಾರೆ. “ಔರಂಗಾಬಾದಿನಲ್ಲಿ ನನಗಾದ ಒಂದು ದೊಡ್ಡ ಲಾಭವೆಂದರೆ ಹಲವಾರು ಮರಾಠಿ ಲೇಖಕರೊಡನೆ ಸಹವಾಸ ಬೆಳೆಯುವಂತಾದದ್ದು. ಇವರಲ್ಲಿ ನಾನು ಪ್ರಭಾಕರ ಪಾಧ್ಯೆ, ಬಾಲಚಂದ್ರ ನೆಮಾಡೇ, ವಾ.ಲ. ಕುಲಕರ್ಣಿ, ಗೋ.ಮಾ. ಪವಾರ, ಸುಧೀರ ರಸಾಳ, ಕೆ. ನಾರಾಯಣ ಕಾಳೇ ಹಾಗೂ ಪ್ರ.ಈ. ಸೋನಕಾಂಬಳೇ ಇವರನ್ನು ಹೆಸರಿಸಲೇಬೇಕು. ‘ಮಹಾರಾಷ್ಟ್ರ ಸಾಹಿತ್ಯ ಪರಿಷತ್ ಪತ್ರಿಕೆ’, ‘ಅಸ್ಮಿತಾದರ್ಶ’ ಮೊದಲಾದ ಪತ್ರಿಕೆಗಳಲ್ಲಿ ನನ್ನ ಕೆಲ ಲೇಖನಗಳ ಅನುವಾದ ಪ್ರಕಟವಾದವು. ಜನಾರ್ದನ ವಾಘಮಾರೇ (ನಂತರ ಅವರು ನಾಂದೇಡದ ಸ್ವಾಮಿ ರಮಾನಂದತೀರ್ಥ ವಿಶ್ವವಿದ್ಯಾಲಯದ ಕುಲಗುರುಗಳಾದರು) ಅವರು ದಲಿತ ಸಾಹಿತ್ಯವನ್ನು ಕುರಿತು ಪಿಎಚ್.ಡಿ. ಪದವಿಗಾಗಿ ಮಂಡಿಸಿದ ಸಂಪ್ರಬಂಧಕ್ಕೆ ನಾನೇ ಮಾರ್ಗದರ್ಶಕನಾಗಿದ್ದೆ. ಹೀಗಾಗಿ ಮರಾಠಿ ಸಾಹಿತ್ಯದ, ವಿಶೇಷವಾಗಿ ದಲಿತ ಸಾಹಿತ್ಯದ, ನಿಕಟ ಪರಿಚಯದ ಲಾಭ ನನಗೆ ದೊರೆಯುವಂತಾಯಿತು. ನಾನು ಔರಂಗಾಬಾದಿನಲ್ಲಿರುವಾಗಲೇ ಅಮೆರಿಕೆಯ ಪ್ರವಾಸದ ಅವಕಾಶವೂ ದೊರೆಯಿತು. ಒಂದು ವರ್ಷದ ಕಾಲ ನಾನು ಕೆಲಿಫೋರ್ನಿಯಾ ಹಾಗೂ ಯೇಲ್ ವಿಶ್ವವಿದ್ಯಾಲಯಗಳಲ್ಲಿದ್ದೆ. ಅಮೆರಿಕನ್ ವಿದ್ವಾಂಸರ ಶ್ರಮ, ಶಿಸ್ತು ನನಗೆ ಮಾದರಿಯೆನಿಸಿತು. ಅದನ್ನು ನಾನು ಓದು-ಬರವಣಿಗೆಯಲ್ಲಿ ರೂಢಿಸಿಕೊಂಡೆ. ಜೊತೆಗೆ ಸಂಸ್ಕೃತ ಭಾಷೆಯಲ್ಲೂ ಒಳ್ಳೆಯ ಪ್ರಭುತ್ವವಿದ್ದುದರಿಂದ ಅವರು ತುಲನಾತ್ಮಕ ಅಧ್ಯಯನದಲ್ಲೂ ವಿಶೇಷವಾದ ಆಸ್ಥೆಯನ್ನು ತಳೆದು ಆ ಎಲ್ಲ ಅನುಭವವನ್ನು ವಿಮರ್ಶೆಗೆ ಧಾರೆಯೆರೆದರು. ನಿಜವಾದ ಅರ್ಥದಲ್ಲಿ ಅವರು ದೊಡ್ಡ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡಿದ್ದು ವಿಶೇಷ. ದೇಶ ವಿದೇಶಗಳ ಅನೇಕ ದೊಡ್ಡ ದೊಡ್ಡ ಸಾಹಿತಿಗಳ ಸಂಪರ್ಕ ಅವರಿಗಿತ್ತು.
ಸಾಹಿತ್ಯ ವಿಮರ್ಶೆಯ ಕುರಿತಾಗಿ ಆಮೂರ ಅವರ ಸ್ಪಷ್ಟ ನಿಲುವು ಇಂತಿದೆ “ಕೃತಿ ಪರೀಕ್ಷಕಂಗೆಂಟೆರ್ದೆಯೆ?’ ಎಂದು ರನ್ನ ಸವಾಲು ಹಾಕಿದ. ಪರೀಕ್ಷೆ ಎನ್ನುವ ಶಬ್ದದಲ್ಲಿನ ಧ್ವನಿಪೂರ್ಣ ಶ್ರೀಮಂತಿಕೆಯನ್ನು ನಾವು ಗಮನಿಸಬೇಕು . ವಿಮರ್ಶೆ ಎರಡು ರೀತಿಗಳಿಂದ ಕೃತಿ ಪರೀಕ್ಷೆಯಾಗಬಲ್ಲುದು. ಮೌಲ್ಯಮಾಪನ ಎನ್ನುವ ಅರ್ಥದಲ್ಲಿಯೇ ಈ ಶಬ್ದ ಪ್ರಚಾರದಲ್ಲಿದೆಯಾದರೂ ಒಂದು ವಸ್ತುವನ್ನು ಸಾಧ್ಯವಿದ್ದಷ್ಟು ಸಮಗ್ರವಾಗಿ ನೋಡುವುದು”( ಪರಿ+ ಈಕ್ಷೆ) ಎನ್ನುವ ಅರ್ಥವೂ ಅದರಲ್ಲಿ ಅಡಗಿದೆ. ವಿಮರ್ಶೆ ಒಂದು ಹಂತದಲ್ಲಿ ಕೃತಿಯ ಸಮೀಕ್ಷೆಯಾದರೆ, ಇನ್ನೊಂದು ಹಂತದಲ್ಲಿ ಅದು ಬೆಲೆ ಕಟ್ಟುವ ಜವಾಬುದಾರಿಯನ್ನೂ ವಹಿಸಿಕೊಳ್ಳುತ್ತದೆ. ಒಂದು ಕೃತಿಯನ್ನು ಚೆನ್ನಾಗಿ ನೋಡದೆಯೆ ಅದರ ಮೌಲ್ಯವನ್ನು ನಿರ್ಧರಿಸುವುದು ಹುಂಬತನದ ಕೆಲಸವಾದೀತು. ಈ ದೃಷ್ಟಿಯಿಂದ ವಿಮರ್ಶೆಯ ಮುಖ್ಯ ಕೆಲಸ ಕೃತಿಯನ್ನು ಅರ್ಥೈಸುವುದು. ಪ್ರಯೋಗಶೀಲವಾದ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಇದು ಸಾಕಷ್ಟು ಜಟಿಲವಾದ ಕ್ರಿಯೆಯೇ ಆಗಿದೆ. ಇಂದು ವಿಮರ್ಶೆಯ ವಿಧಿ-ವಿಧಾನಗಳು ಪ್ರೌಢವಾಗಿ ಬೆಳೆದುದರಿಂದ ಒಮ್ಮೊಮ್ಮೆ ಕೃತಿಗಿಂತ ವಿಮರ್ಶೆಯೇ ಹೆಚ್ಚು ಮಹತ್ತ್ವದ್ದಾಗಿ ಕಂಡುಬರುವುದುಂಟು.”(ಆಧುನಿಕ ಕನ್ನಡ ವಿಮರ್ಶೆ, 2008, ಪುಟ,6)
ಆಮೂರ ಅವರು ಅಪ್ಪಟ ಕನ್ನಡದ ಅಭಿಮಾನಿ. ಇಂಗ್ಲಿಷ್ ದಲ್ಲಿ ಸಾಹಿತ್ಯ ರಚನೆ ಮಾಡಿದರೂ ಆ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿಹಿಡಿದರು. “ಇಂದು ನಾನು ಕನ್ನಡ ಲೇಖಕನೆಂದೇ ನನ್ನನ್ನು ಗುರುತಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಸಾರ್ವಜನಿಕ ಗುರುತೂ ಆಗಿದೆ. ಆದರೆ ಸುಮಾರು ಐದು ದಶಕಗಳ ಕಾಲ ನಾನು ಇಂಗ್ಲಿಷ್ ಅಧ್ಯಯನ, ಅಧ್ಯಾಪನಗಳಲ್ಲಿಯೇ ಕಳೆದಿದ್ದೇನೆ. ವಸಾಹತಿನ ಸಂದರ್ಭದಲ್ಲಿ ಇಂಗ್ಲಿಷಿನ ಆಕರ್ಷಣೆಯೇ ಅಷ್ಟು ಬಲವಾಗಿದ್ದಿತು. ಆದರೆ ನಾನು ಎ.ಬಿ.ಸಿ. ಕಲಿತಿದ್ದೇ ನನ್ನ ಹದಿಮೂರನೆಯ ವಯಸ್ಸಿನಲ್ಲಿ. ನಾನು ಮೊದಲು ದೊರಕಿಸಿದ ಸರ್ಟಿಫಿಕೇಟ್ ಮುಲ್ಕಿ ಪರೀಕ್ಷೆಯದು. ಆಗ ಅದನ್ನು ವರ್ನಾಕ್ಯುಲರ್ ಫೈನಲ್ ಎಂದು ಕರೆಯುತ್ತಿದ್ದರು. ಹೀಗಿದ್ದೂ ನಾನು ಪ್ರೀತಿಸಿದ ಕನ್ನಡ ಹಾಗೂ ಸಂಸ್ಕೃತಗಳನ್ನು ಬಿಟ್ಟು ಇಂಗ್ಲಿಷನ್ನೇ ಆಯ್ದುಕೊಂಡದುದರ ಕಾರಣ ಕಾಲದ ಒತ್ತಡವೇ ಆಗಿರಬೇಕು. ಆದರೆ, ಇಂಗ್ಲಿಷಿನಿಂದ ನಾನು ಸಾಕಷ್ಟು ಲಾಭ ಪಡೆದಿದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಮೊದಲನೆಯದಾಗಿ ಜೀವಿತದ ಮಾರ್ಗ ಸುಗಮವಾಯಿತು. ಮುಂಬೈ ವಿಶ್ವವಿದ್ಯಾಲಯಕ್ಕೆ ಎಂ.ಎ. ಪರೀಕ್ಷೆಯಲ್ಲಿ ಮೊದಲಿಗನಾಗಿ ತೇರ್ಗಡೆಯಾದುದಕ್ಕೆ ಸುಲಭದಲ್ಲಿ ಉದ್ಯೋಗ ದೊರೆಯಿತು. ಪ್ರೊ. ಸಿ.ಡಿ. ನರಸಿಂಹಯ್ಯನವರ ಪ್ರೀತಿಯ ಸಹಾಯದಿಂದ ಸೀನಿಯರ್ ಫುಲ್‌ಬ್ರೆಟ್ ವಿದ್ಯಾರ್ಥಿವೇತನ ದೊರೆತು ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಸಂಶೋಧನೆ ಕೈಕೊಳ್ಳುವ ಅವಕಾಶಗಳು ದೊರೆತವು. ದೇಶ ವಿದೇಶಗಳಲ್ಲಿ ನನ್ನ ಲೇಖನಗಳು ಪ್ರಕಟವಾದವು. ನನ್ನ ಪಿಎಚ್.ಡಿ. ಪ್ರಬಂಧ The Concept of Comedy ಸೇರಿದಂತೆ ಸುಮಾರು ಮೂವತ್ತು ಪುಸ್ತಕಗಳನ್ನು ನಾನು ಇಂಗ್ಲಿಷಿನಲ್ಲಿ ಪ್ರಕಟಿಸಿದ್ದೇನೆ. ಇದರಲ್ಲಿ ಕನ್ನಡ ಕೃತಿಗಳ ಇಂಗ್ಲಿಷ್ ಅನುವಾದಗಳೂ ಸೇರಿವೆ ” ಎಂದವರು ತಮ್ಮ ಅಧ್ಯಯನ ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ಜಾಗತಿಕ ಸಾಹಿತ್ಯವನ್ನು ಚೆನ್ನಾಗಿ ಓದಿ ಅರ್ಥೈಸಿಕೊಂಡ ಅವರು ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಯನ್ನು ಲೋಕಮುಖಕ್ಕೆ ಪರಿಚಯಿಸುವ ಕಾಯಕವನ್ನು ವ್ಯಾಪಕವಾಗಿ ಮಾಡಿದ್ದು ಇನ್ನೊಂದು ದೊಡ್ಡ ಸಾಧನೆ.
ನೇರ ನಡೆ-ನುಡಿಗೆ ಹೆಸರಾಗಿದ್ದ ಆಮೂರ ಅವರು ಕನ್ನಡ ಭಾಷೆ, ಸಾಹಿತ್ಯ- ಸಂಸ್ಕೃತಿಗಳ ಹಿನ್ನಡೆಗೆ ಕಾರಣಗಳನ್ನ ಹೀಗೆ ಪಟ್ಟಿ ಮಾಡಿದ್ದಾರೆ. “ಪರಭಾಷಾ ವ್ಯಾಮೋಹ ನಮ್ಮಲ್ಲಿ ಅತಿಯಾಗಿದೆ. ಇಂಗ್ಲಿಷರನ್ನು ಮೀರಿದ ಇಂಗ್ಲಿಷ್ ಪ್ರೀತಿ ನಮ್ಮದು. ಪ್ರಾಥಮಿಕ ವಿದ್ಯಾಭ್ಯಾಸದ ಮೊದಲ ಹಂತದಲ್ಲಿಯೆ ಇಂಗ್ಲಿಷನ್ನು ಸೇರಿಸಿ ನಮ್ಮ ಶಿಕ್ಷಣ ವ್ಯವಸ್ಥೆ ತುಂಬಿ ಬರಲಾರದ ಹಾನಿಯನ್ನು ಮಾಡುತ್ತಲಿದೆ. ಯಾವುದೇ ಒಂದು ಭಾಷೆಯಲ್ಲಿ ತಕ್ಕಮಟ್ಟಿಗಿನ ಪ್ರಾವೀಣ್ಯ ದೊರಕಿಸುವುದಕ್ಕೆ ಒಂದು ವರ್ಷ ಸಾಕು. ಇದನ್ನು ನನ್ನ ಅನುಭವದಿಂದಲೇ ಸಾಬೀತುಪಡಿಸಬಲ್ಲೆ. ಮುಲ್ಕಿ ಪರೀಕ್ಷೆಯಲ್ಲಿ ಪಾಸಾದ ನಂತರ ಹದಿಮೂರನೆಯ ವಯಸ್ಸಿನಲ್ಲಿ ಎಬಿಸಿಯಿಂದ ಪ್ರಾರಂಭಿಸಿ ಒಂದು ವರ್ಷದಲ್ಲಿ ನಾನು ಇಂಗ್ಲಿಷ್ ಮೂರನೆಯ ಇಯತ್ತೆಯ ಪರೀಕ್ಷೆಯಲ್ಲಿ ಯಶಸ್ಸು ದೊರಕಿಸಿಕೊಂಡೆ. ನಾಲ್ಕನೆಯ ಇಯತ್ತೆಯಲ್ಲಿಯೇ ಪ್ರಕಾಶನದ ಯೋಗ್ಯತೆಯ ಲೇಖನ ಬರೆದೆ. ಇಂಗ್ಲಿಷಿನಲ್ಲಿ ಒಬ್ಬ ಲೇಖಕನಾಗುವುದಕ್ಕೆ ನನಗೆ ಇದರಿಂದ ತೊಂದರೆಯಾಗಲಿಲ್ಲ. 1881ರಷ್ಟು ಮೊದಲೇ ವಿ.ಕೃ. ಚಿಪಳೂಣಕರರಂಥವರು ಇಂಗ್ಲಿಷ್ ಭಾಷೆಯ ಘಾತಕಶಕ್ತಿಯ ವಿರುದ್ಧ ದನಿಯೆತ್ತಿದ್ದರೂ, ನಮ್ಮ ಇಂಗ್ಲಿಷ್ ಮೋಹ ಬೆಳೆಯುತ್ತಲೇ ಇದೆ. ಚೀನದ ಮಂತ್ರಿಯೊಬ್ಬ ಜಪಾನಿಗೆ ಹೋದಾಗ ಇಂಗ್ಲಿಷಿನಲ್ಲಿ ಮಾತಾಡಿ ತನ್ನ ಸ್ಥಾನವನ್ನೇ ಕಳೆದುಕೊಂಡ. ನಮ್ಮ ಕ್ರಿಯಾಶೀಲತೆ, ಸೃಜನಶೀಲತೆ, ಆತ್ಮವಿಶ್ವಾಸ ನಮ್ಮ ಮಾತೃಭಾಷೆಯ ಮೂಲಕ ಮಾತ್ರವೇ ಬೆಳೆಯಬಲ್ಲವು ಎಂದು ಎಲ್ಲ ತಜ್ಞರೂ ಅಭಿಪ್ರಾಯಪಡುತ್ತಿರುವಾಗ ನಾವು ವಿರುದ್ಧ ದಿಕ್ಕಿನಲ್ಲಿ ನಡೆದಿದ್ದೇವೆ. ಸಾಹಿತ್ಯದಲ್ಲೂ ಪಾಶ್ಚಾತ್ಯರ ಅನುಕರಣೆ ರೂಢಿಯಾಗಿ ಹೋಗಿದೆ. ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೆನ್ನುವುದು ಅಬಾಧಿತ ಸತ್ಯ. ಆದರೆ ಅದಕ್ಕೆ ಜನಮನದಲ್ಲಿ ಭದ್ರವಾದ ಸ್ಥಾನ ದೊರಕಿಸುವಲ್ಲಿ ನಾವು ಇಂದು ವಿಫಲರಾಗಿದ್ದೇವೆ. ಈ ವೈಫಲ್ಯದ ಅರಿವು ಬರಬೇಕಾದರೆ ಕನ್ನಡದ ಟಿ.ವಿ. ವಾಹಿನಿಗಳನ್ನು ನೋಡಬೇಕು. ಅಲ್ಲಿ ಒಂದು ವಾಕ್ಯದ ಪ್ರತಿಯೊಂದು ಕನ್ನಡ ಶಬ್ದಕ್ಕೂ ನಾಲ್ಕು ಇಂಗ್ಲಿಷ್ ಶಬ್ದಗಳಿರುತ್ತವೆ. ಕೆಲವೊಮ್ಮೆ ಅಲ್ಲಿ ಭಾಗವಹಿಸುವವರು ನೇರವಾಗಿ ಇಂಗ್ಲಿಷಿಗೆಯೇ ಇಳಿದುಬಿಡುತ್ತಾರೆ. ಇದಕ್ಕೆ ಪರಿಹಾರವೇನು? ನಮಗೆ ಇಂಗ್ಲಿಷಿನೊಡನೆ ಬೇರೆ ಭಾಷೆಗಳೂ ಬೇಕು. ಆದರೆ ಅವು ತಮ್ಮ ತಮ್ಮ ಸ್ಥಾನದಲ್ಲಿರುವುದು ಅವಶ್ಯವಿದೆ. ಪರಭಾಷೆ, ಸಂಸ್ಕೃತಿಗಳ ವಿಷಯದಲ್ಲಿ ‘ಕವಿರಾಜಮಾರ್ಗ’ಕಾರ ತೋರಿದ ವಿವೇಕವನ್ನು ನಾವು ಮತ್ತೆ ದೊರಕಿಸಿಕೊಳ್ಳಬೇಕಾದ ಅವಶ್ಯಕತೆ ಇದೆ “ಎಂಬುದನ್ನು ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ನೇರವಾಗಿ, ಖಾರವಾಗಿ ಹೇಳಿದ್ದಾರೆ.
ಡಾ. ಜಿ. ಎಸ್. ಆಮೂರರು ಕನ್ನಡ ಹಾಗೂ ಇಂಗ್ಲೀಷಿನಲ್ಲಿ ೪೦೦ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳ ವಿಮರ್ಶೆಯನ್ನು ಮಾಡುವ ಮೂಲಕ ಮೌಲ್ಯಮಾಪನ ಮಾಡಿದ್ದಾರೆ. ಕೃತಿಯ ಅಂತಃಸತ್ವವನ್ನು ಗುರುತಿಸಿ ಸಾಹಿತ್ಯ ಪರಂಪರೆಯ ದಾರಿಯಲ್ಲಿ ಅದು ತೆರೆದುಕೊಳ್ಳುವ ಅರ್ಥ ಪ್ರಪಂಚವನ್ನು ಅವರು ಪ್ರಕಟಪಡಿಸಿದ್ದಾರೆ. ಅವರು ಯಾವಾಗಲೂ ಕೃತಿ, ಕೃತಿಕಾರರನ್ನು ಮುಂದೆ ಮಾಡಿ ತಾವು ಅದರ ಹಿಂದೆ ನಿಂತು ಬೆಳಕು ಚೆಲ್ಲುತ್ತಾರೆ. ಹೀಗೆ ಮಾಡುವಾಗ ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ಆರೋಗ್ಯಪೂರ್ಣ ಅಭಿಪ್ರಾಯವನ್ನು ರೂಪಿಸುತ್ತಾರೆ. ವೈಯಕ್ತಿಕವಾದ ಇಷ್ಟಾನಿಷ್ಟಗಳಿಗೆ ಆಸ್ಪದ ಕೊಡದೆ ಕವಿ, ಕೃತಿಗಳ ನಿಂದೆ, ದೋಷಕಥನಕ್ಕೆ ಅಥವಾ ಅತಿಪ್ರಶಂಸೆಗೆ ವಿಮರ್ಶೆಯನ್ನು ಮೀಸಲಾಗಿರಿಸದೆ ಸಾಹಿತ್ಯ ಪರಂಪರೆಯ ದಾರಿಯಲ್ಲಿ ಅದನ್ನು ಗುರುತಿಸುವ ಆಮೂರರ ವಿಮರ್ಶೆ ನಮಗೆ ತುಂಬ ಪ್ರಿಯವಾಗುತ್ತದೆ. ಸಮತೋಲನ ದೃಷ್ಟಿಯನ್ನು ಕಾಯ್ದುಕೊಂಡು ಕನ್ನಡ ವಿಮರ್ಶೆಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಕಾರ್ಯವನ್ನು ಡಾ. ಆಮೂರರು ತುಂಬ ಶ್ರದ್ಧೆಯಿಂದ ಮಾಡಿದ್ದಾರೆ ಎಂಬುದಾಗಿ ಡಾ. ಜಿ. ಎಂ. ಹೆಗಡೆ ಅವರು ಕನ್ನಡ ಸಾರಸ್ವತ ಲೋಕಕ್ಕೆ ಅಮೂರರು ಕೊಟ್ಟ ಕೊಡುಗೆಯನ್ನು, ಅನನ್ಯತೆಯನ್ನು ಖಚಿತವಾಗಿ ಗುರುತಿಸಿದ್ದಾರೆ. ಕನ್ನಡ ನಾಡು ಕಂಡ ಶತಮಾನದ ಶ್ರೇಷ್ಠ ವಿಮರ್ಶಕರಲ್ಲಿ ಅವರು ಸುಪ್ರಸಿದ್ಧರಾಗಿದ್ದಾರೆ. ಅವರ ವಿಮರ್ಶೆಯ ಕಾಯಕಕ್ಕೆ ಯಾರೂ ಬೆರಗಾಗಬೇಕು. ಆಮೂರರಂತಹ ದೈತ್ಯ ಪ್ರತಿಭೆಯ ವಿಮರ್ಶಕರು, ಚಿಂತಕರು ಸಿಕ್ಕಿರುವುದು ಕನ್ನಡದ ಭಾಗ್ಯವೇ ಸರಿ.
ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ







