ಕಳೆದ ಎಂಬತ್ತರ ದಶಕದಲ್ಲಿ ಜಿದ್ದಿಗೆ ಬಿದ್ದು ನಾಟಕವಾಡುತ್ತಿದ್ದ ಬೆಂಗಳೂರಿನ ರಂಗಸಂಪದ ತಂಡವು ಹಲವು ಏಳುಬೀಳುಗಳನ್ನು ಅನುಭವಿಸಿ ಈ ಕಾಲಘಟ್ಟದಲ್ಲಿ ಮತ್ತೆ ಗರಿಗೆದರಿ ನಾಟಕವಾಡತೊಡಗಿದ್ದು ಖುಷಿಪಡುವ ವಿಚಾರ. ಇದೀಗ ಐವತ್ತೆರಡನೆಯ ವಸಂತಕ್ಕೆ ಕಾಲಿಟ್ಟಿರುವ ʻರಂಗಸಂಪದವುʼ ಈ ವರ್ಷದ ಮೊದಲ ಕಾಣಿಕೆಯಾಗಿ ಕಟ್ಟಿಕೊಟ್ಟ ನಾಟಕ ರಮೇಶ್‌ಚಂದ್ ಎಚ್.ಸಿ. ಅವರ ʻಶೇಷಗ್ರಸ್ತರು.ʼ ವಿನ್ಯಾಸ, ನಿರ್ದೇಶನ ಕೂಡ ನಾಟಕಕಾರರದೆ. ಕೋವಿಡ್ ಕಾಲದಲ್ಲಿ ಮಧ್ಯಮವರ್ಗದ ಕುಟುಂಬವೊಂದರ ಮೇಲೆ ಅದು ಬೀರಿದ ಪರಿಣಾಮವನ್ನು ಬಿತ್ತರಿಸುತ್ತಾ ದೇಶವು ಅನುಭವಿಸಿದ ಕಷ್ಟನಷ್ಟಗಳನ್ನು ಮುಖ್ಯವಾಗಿಟ್ಟುಕೊಂಡು ನಾಟಕ ಸಾಗುತ್ತದೆ. ಜೊತೆಗೆ ಇತರ ಅನೇಕ ಸಾಂಸಾರಿಕ ಕವಲುಗಳನ್ನು ಏಕಸೂತ್ರದಲ್ಲಿ ಪೋಣಿಸುವ ಪ್ರಯತ್ನವೂ ನಾಟಕದಲ್ಲಿದೆ. ಈ ಕಾಲಘಟ್ಟದಲ್ಲಿ ನಿಂತು ಭೂತಕ್ಕೂ ಭವಿಷ್ಯತ್ತಿಗೂ ನೋಡಬಯಸುವ ಮಧ್ಯಮ ವರ್ಗದ ಆಶೋತ್ತರಗಳು ಎತ್ತ ಚಲಿಸುತ್ತಿವೆ ಎಂದು ಪ್ರೇಕ್ಷಕರ ಮುಂದೆ ಸಾದರ ಪಡಿಸುವ ಒಂದು ಪ್ರಯತ್ನವಾಗಿ ಪ್ರಸ್ತುತ ನಾಟಕವಿದೆ.
ತಾಯಿ ಗಂಗಮ್ಮಳನ್ನು (ಸೌಭಾಗ್ಯ ಬಿ.) ಅತಿಯಾಗಿ ಪ್ರೀತಿಸುವ ಪುತ್ರ ಶ್ರೀಕಾಂತ(ಪ್ರಜ್ವಲ್ ಮಸ್ಕಿ)ನ ಕಾಲುಗಳು ಪರಂಪರೆಯ ಕಡೆಗಿದ್ದರೆ, ಆತನ ತಲೆ ಆಧುನಿಕ ಕಾಲಘಟ್ಟದ ಲಿವಿಂಗ್ ಟುಗೇದರ್ ಕಡೆಗೂ ತನ್ನ ಪಾರ್ಟ್ನರ್ ನಿತ್ಯಾಳ (ರಚನಾ ಹೆರೂರು) ಜೊತೆ ಸೇರಿ ಮಾಡುವ ಅತ್ಯಾಧುನಿಕ ಸ್ಟಾರ್ಟ್‌ಅಪ್ ಕಂಪೆನಿಯ ಕಡೆಗೂ ಇರುತ್ತದೆ. ಕೊರೋನಾ ನಿಮಿತ್ತವಾಗಿ ತಾಯಿಯ ಬದುಕು ಅಂತ್ಯಗೊಳ್ಳುತ್ತದೆ. ತನ್ನ ಪುತ್ರ ಸಾಂಪ್ರದಾಯಿಕ ವಿವಾಹಕ್ಕೆ ಒಪ್ಪದ ದುಃಖವನ್ನು ಎದೆಯೊಳಗಿಟ್ಟುಕೊಂಡೇ ಆಕೆ ಇಹಲೋಕ ತ್ಯಜಿಸುತ್ತಾಳೆ.
ಮನೆಯೊಡೆಯ ಕಲ್ಲಯ್ಯ(ಚಂದ್ರಕಾಂತ ಎಂ.) ಕಾಲಕ್ಕೆ ಹೊಂದಿಕೊಂಡು ಮಕ್ಕಳ ಭಾವೀ ಬದುಕನ್ನು ಅನಿವಾರ್ಯವಾಗಿ ಒಪ್ಪಿಕೊಂಡರೂ ಅವನ ಮನಸ್ಸು ಹಳೆಯ ಬೇರುಗಳ ಹುಡುಕಾಟದಲ್ಲೇ ತಲ್ಲೀನಕೊಂಡಿದೆ. ಕೊರೋನಾ ಭೀತಿ, ಗಂಗಮ್ಮನ ಸಾವು, ಲಿವಿಂಗ್ ಟುಗೆದರ್, ಸ್ಟಾರ್ಟ್ ಅಪ್ ಕಂಪೆನಿ ಭವಿಷ್ಯ, ತಲೆಮಾರುಗಳ ಹುಡುಕಾಟ- ಗೊಂದಲಗಳು ಸಂಘರ್ಷಾತ್ಮಕತೆಯನ್ನು ಒದಗಿಸಿ, ನಾಟಕವನ್ನು ಕುತೂಹಲಭರಿತವನ್ನಾಗಿಸುತ್ತದೆ. ಹಳೆತಲೆಮಾರಿನ ಕಲ್ಲಯ್ಯನ ಪೀಳಿಗೆಯ ಹುಡುಕಾಟ ಯಶಸ್ವಿಯಾಗುವುದೂ ಮಗ ಶ್ರೀಕಾಂತನ ಲಿವಿಂಗ್ ಟುಗೆದರ್ ಯೋಚನೆ ವಿಫಲವಾಗುವುದೂ ಆದರೆ ಆತನ ಸ್ಟಾರ್ಟ್ ಅಪ್ ಸಂಶೋಧನೆಗೆ ವಿಪುಲ ಅವಕಾಶಗಳು ಒದಗಿ ಬರುವುದೂ ಕಂಡಾಗ ನಾಟಕಕಾರನ ಚಲನೆ ಪರಂಪರೆಯ ಕಡೆಗಿದೆಯೇ ಅದನ್ನು ಮೀರುವುದರ ಕಡೆಗಿದೆಯೇ ಅಥವಾ ಅವೆರಡೂ ಸಂದರ್ಭೋಚಿತವಾಗಿ ಬೆಸೆಯುವುದರ ಕಡೆಗಿದೆಯೇ ಎಂಬ ಜಿಜ್ಞಾಸೆ ಒಡಮೂಡುತ್ತದೆ. ನಿರ್ದೇಶಕನೂ ನಾಟಕಕಾರನೂ ಒಬ್ಬರೇ ಆಗಿರುವುದರಿಂದ ಅಭಿವ್ಯಕ್ತಿಯ ಆಲೋಚನೆ ಏಕಮುಖವಾಗಿರುತ್ತದೆ. ಬದಲಿಗೆ ಅನ್ಯ ನಿರ್ದೇಶಕರಿರುತ್ತಿದ್ದರೆ ಅಭಿವ್ಯಕ್ತಿಯಲ್ಲಿ ವ್ಯತ್ಯಸ್ಥ ನೆಲೆಗಳನ್ನು ಕಂಡುಕೊಳ್ಳುವುದಕ್ಕೆ ಅವಕಾಶವಾಗುತ್ತಿತ್ತೋ ಏನೊ. ಅಲ್ಲಲ್ಲಿ ಕೆಲವು ದೀರ್ಘವೆನ್ನಿಸುವ ಸಂವಾದವನ್ನು ವಸ್ತುವಿನ ಸುತ್ತ ಮಾತ್ರ ಇರುವಂತೆ ನೋಡಿಕೊಳ್ಳಬೇಬೇಕಾಗಿತ್ತು ಎನಿಸುತ್ತದೆ. ಕೆಲವು ಸಂಘರ್ಷದ ಸನ್ನಿವೇಶಗಳಲ್ಲಿ ಧ್ವನಿ ಜುಮ್ಮೆನ್ನಿಸುವಂತೆ ಮೂಡಿಬಂದಿದೆ.(ಶಂಕರ್ ಬಿಲ್ಲೇಮನೆ). ನಾಟಕ ಪ್ರೇಕ್ಷಕನ ಚಿಂತನೆಗೆ ಆಹಾರವೊದಗಿಸಿದೆ ಎಂಬುದರಲ್ಲಿ ಬೇರೆ ಮಾತಿಲ್ಲ.
ಹೊಸ ಕಲಾವಿದರನ್ನು ಮುನ್ನೆಲೆಗೆ ತರುವ ಪ್ರಯತ್ನ ಪ್ರಸ್ತುತ ನಾಟಕದಲ್ಲಿ ನಡೆದಿದೆ. ನೇಪಥ್ಯದಲ್ಲೇ ನಾಲ್ಕು ದಶಕಗಳ ಕಾಲ ಕಳೆದ ಕಲ್ಲಯ್ಯ ಪಾತ್ರಧಾರಿ ಎಂ. ಚಂದ್ರಕಾಂತ್, ತಾನಿಷ್ಟು ಕಾಲ ವೇದಿಕೆಯ ಮುನ್ನೆಲೆಗೆ ಬಾರದ್ದೇಕೆ ಎಂದು ಪಶ್ಚಾತ್ತಾಪ ಪಟ್ಟಿರಬೇಕು. ನಾಟಕವನ್ನು ಎಲ್ಲ ಕಲಾವಿದರೂ ಒಟ್ಟು ಸೇರಿ ಗೆಲ್ಲಿಸುವ ಪ್ರಯತ್ನ ಪಟ್ಟದ್ದು ನಿಸ್ಸಂದೇಹ. ಬೆಳಕಿನ ನಿರ್ವಹಣೆಯ ಸೊಬಗನ್ನೂ ಅಲ್ಲಗಳೆಯುವಂತಿಲ್ಲ. ಮೊದಲ ಪ್ರದರ್ಶನದಲ್ಲೇ ಪ್ರೇಕ್ಷರನ್ನು ಹೀಗೆ ಆವರಿಸಿಕೊಂಡದ್ದು ಕಂಡಾಗ ʻಶೇಷಗ್ರಸ್ತರುʼ ನಾಟಕ ಮುಂದಿನ ಪ್ರದರ್ಶನಗಳಲ್ಲಿ ತನ್ನ ಚಲನೆಯ ಗತಿಯನ್ನು ಇನ್ನಷ್ಟು ಕ್ಷಿಪ್ರಗೊಳಿಸಿ ಹಲವಾರು ಪ್ರದರ್ಶನಗಳತ್ತ ದಾಪುಗಾಲಿಡಲಿ ಎಂಬುದು ಹಾರೈಕೆ.
*****