ಜಾಲಂದರ (ಆಯ್ದ ವಿಮರ್ಶಾ ಲೇಖನಗಳು)
ಕಲಾ ಭಾಗ್ವತ್
ಸ್ನೇಹಾ ಎಂಟರ್ಪ್ರೈಸಸ್, ಬೆಂಗಳೂರು.
ಸಂಪರ್ಕ : 9845062549
ಬೆಲೆ : ರೂ 400
ಸಾಹಿತ್ಯ ಒಂದು ವಿಶೇಷವಾದ ಕಲೆ. ಇತರ ಭಾರತೀಯ ಭಾಷೆಗಳನ್ನು, ಅಲ್ಲಿನ ಸಾಹಿತ್ಯವನ್ನು ತೂಗಿ ನೋಡುವಾಗ ಕನ್ನಡ ಸಾಹಿತ್ಯ ಸಾಕಷ್ಟು ಸಮೃದ್ಧವೂ ವೈವಿಧ್ಯಮಯವೂ ಆಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ಕನ್ನಡ ಭಾಗ್ಯವಂತ ಸಾಹಿತ್ಯ, ರಾಷ್ಟ್ರಮಟ್ಟದಲ್ಲಿ ಅದಕ್ಕಿರುವ ಸ್ಥಾನಮಾನ ಹಿರಿದಾದುದು ಎಂಬ ಹಾಮಾನಾ ಅವರ ಮಾತು ಅವಲೋಕನೀಯವಾಗಿದೆ. ಕಲಾ ಭಾಗ್ವತ್ ವಿರಚಿತ ‘ಜಾಲಂದರ’ ಆಯ್ದ ಲೇಖನಗಳ ಇತ್ತೀಚಿನ ಸಂಕಲನ. ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಬಲ್ಮೆ, ಸಾರ್ಥಕತೆ, ಅಲ್ಲಿನ ಸ್ವೋಪಜ್ಞತೆ ಏನೆಂಬುದನ್ನು ಚಿಂತನೆಗೆ, ಮರು ಚಿಂತನೆಗೆ ಗುರಿ ಪಡಿಸುವ ಕಾಳಜಿಯನ್ನು ಇದು ಹೊಂದಿದೆ. ಕನ್ನಡ ಸಾಹಿತ್ಯ ಪರಂಪರೆ ಹಾಗೂ ಅಲ್ಲಿನ ಚಿಂತನೆಗಳಲ್ಲಿರುವ ಶ್ರೇಷ್ಠ ಹಾಗೂ ಉತ್ತಮ ಅಂಶಗಳನ್ನು ವಿವರಿಸುವ ವಿಶ್ಲೇಷಣೆ ನಡೆಸುವ ಪ್ರಯತ್ನವು ಈ ಕೃತಿಯಲ್ಲಿ ಎದ್ದು ಕಾಣುತ್ತದೆ.
ಕಲಾ ಭಾಗ್ವತ್
ಕಲಾ ಭಾಗ್ವತ್ ಅವರು ಸೃಜನಶೀಲ ಪ್ರತಿಭೆಯನ್ನು ಹೊಂದಿರುವ ಸೂಕ್ಷ್ಮ ಸಂವೇದನೆಯ ಲೇಖಕರು. ಕನ್ನಡದ ಬಗೆಗೆ ಅಪಾರವಾದ ಪ್ರೀತಿ, ಶ್ರದ್ಧೆಯುಳ್ಳ ಕಲಾ ಅವರು ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಇವುಗಳ ಸಮರಸ ಭಾವಸಂಪನ್ನರು. ಈ ಕೃತಿಯ ಆರಂಭದಲ್ಲೇ ಅವರು ಸಾಹಿತ್ಯ ಎನ್ನುವುದು ವಿಶಾಲವಾದ ಮನೋಗತದಿಂದ, ಕಲಾತ್ಮಕವಾದ ಭಾಷೆಯಲ್ಲಿ ಸ್ವಾನುಭವ, ಜ್ಞಾನ, ವಸ್ತು ವಿಷಯಗಳನ್ನು ಕಟ್ಟಿಕೊಡುವುದು. ಇದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸಬಲ್ಲ ಮಾಧ್ಯಮ. ಮನಸ್ಸು ಪಕ್ವವಾಗಲು ಸಾಧಕವಾದ ಸಕಲ ಜ್ಞಾನವನ್ನೂ ಸಾಹಿತ್ಯ ಒಳಗೊಂಡಿರುತ್ತದೆ. ಹುಟ್ಟುವಾಗಲೇ ಸಮಾಜದ ಒಂದು ಅಂಗವಾಗುವ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸಮಾಜಕ್ಕೆ ಒಳಿತನ್ನು ಮಾಡುವಂತೇ; ಅದಾಗದಿದ್ದಲ್ಲಿ ಕಡೆಯ ಪಕ್ಷ ಕೆಡುಕನ್ನು ಮಾಡದಿರುವಂತಾದರೂ ಮಾಡುವಲ್ಲಿ ಸಾಹಿತ್ಯವು ಗಮನ ವಹಿಸುತ್ತದೆ. ಇದು ಕಾಲ ದೇಶ ಭಾಷೆಗಳ ಸೀಮೆಯನ್ನು ಮೀರಿ ಬೆಳೆದು ಮನುಕುಲದ ವಿಕಾಸಕ್ಕೆ ಕಾರಣವಾದ ಒಂದು ಅವಿಭಾಜ್ಯ ಅಂಗವಾಗಿದೆ ಎಂಬ ಮಾನವೀಯ ನೆಲೆಯಲ್ಲಿ ಖಚಿತವಾಗಿ ವಿಶದ ಪಡಿಸಿದ್ದಾರೆ. ಹೀಗಾಗಿ ಇಲ್ಲಿನ ವಿಮರ್ಶೆಯ ಲೇಖನಗಳೆಲ್ಲ ಸಾಹಿತ್ಯದ ಗುಣಾತ್ಮಕ ವೈಶಿಷ್ಟ್ಯವನ್ನು ಎತ್ತಿತೋರುವ ಆಶಯವನ್ನು ಹೊಂದಿವೆ.
ಸಾಂಪ್ರತ ಕೃತಿಯಲ್ಲಿ 29 ಸಮೀಕ್ಷಾತ್ಮಕ, ವಿಮರ್ಶಾತ್ಮಕ ಲೇಖನಗಳಿದ್ದು ಇವುಗಳಲ್ಲಿ ಅನೇಕ ಮಹತ್ವದ ಕವಿ ಕೃತಿಗಳ ಭಾವರಹಸ್ಯಗಳನ್ನು ವಿವೇಚಿಸುತ್ತಲೇ ಸಮಗ್ರ ಕನ್ನಡ ಸಾಹಿತ್ಯದ ಬಗೆಗೆ ಆದರಭಾವವನ್ನು ಬೆಳೆಸುವ ಕಾಳಜಿ ವ್ಯಕ್ತವಾಗಿದೆ. “ಒಳ್ಳೆಯ ಕವಿ ಕಾವ್ಯ ಭುವನದ ಭಾಗ್ಯದಿಂದ ಅಕ್ಕು” ಎಂಬುದು ಪ್ರಾಚೀನ ಕವಿವಾಣಿ. ಇದಕ್ಕೆ ಸಂವಾದಿಯಾದ ಒಂದು ಪ್ರಸಿದ್ಧ ಗ್ರೀಕ್ ಜಾನಪದ ಕಥೆ ಇದೆ. ಅದು ಹೀಗಿದೆ.ಆ್ಯಂಟಿಸಸ್ ಎಂಬ ಒಬ್ಬ ರಾಕ್ಷಸನಿದ್ದ. ಅವನು ಪ್ರತಿ ಬಾರಿ ದ್ವಂದ್ವ ಯುದ್ಧ ಮಾಡುವ ಹೊತ್ತಲ್ಲಿ ಕೆಳಕ್ಕೆ ಬಿದ್ದಾಗಲೆಲ್ಲ ಹೊಸ ಚೈತನ್ಯದಿಂದ ಪುಟಿದೇಳುತ್ತಿದ್ದನಂತೆ. ಕಾರಣ, ಭೂಮಿಯನ್ನು ಮುಟ್ಟಿದಾಗ ಅವನ ಶಕ್ತಿ
ಇಮ್ಮಡಿಯಾಗುತಿದ್ದಿತಂತೆ. ಈ ಭೂಮಿ ತತ್ವ, ಸತ್ವಗಳಿಂದ ಸಾಹಿತ್ಯ ನಿತ್ಯನೂತನವಾಗುತ್ತದೆ ಎಂಬ ಅರಿವು ನಮ್ಮ ಪ್ರಾಚೀನ ಕವಿಗಳಿಗೆ ಇತ್ತು ಎಂಬ ಅರಿವು ಇಲ್ಲಿ ಮುನ್ನೆಲೆಗೆ ಬಂದು ಚರ್ಚೆಗೊಳಗಾಗಿರುವುದು ಈ ಕೃತಿಯ ಧನಾತ್ಮಕ ಅಂಶ. ಪರಂಪರೆ ಹಾಗೂ ಆಧುನಿಕತೆ ಇವುಗಳ ಅನುಸಂಧಾನಗೈದು ಕನ್ನಡ ಸಾರಸ್ವತ ಜಗತ್ತು ಹೇಗೆ ಗಟ್ಟಿಯಾಗಿ ರೂಪುಗೊಂಡಿತು ಎಂಬ ಹುಡುಕಾಟ, ಜಿಜ್ಞಾಸೆ ಪ್ರಸಕ್ತ ಕೃತಿಯ ಉದ್ದಕ್ಕೂ ಢಾಳಾಗಿ ಕಾಣಸಿಗುತ್ತದೆ.
ಪಂಪ ಯುಗದ ಚಂಪೂ ಕವಿಗಳ ಇತಿಹಾಸಿಕ ಪ್ರಜ್ಞೆ ಎಂಬ ಲೇಖನ ಅಂದಿನ ಕವಿಗಳ ಸಮಕಾಲೀನ ಪ್ರಜ್ಞೆಯ ಕುರಿತು ಹೊಸ ಒಳನೋಟವನ್ನು ಬೀರುವಲ್ಲಿ ಸಫಲವಾಗಿದೆ.ಕಾವ್ಯವೆನ್ನುವುದು ಬರಿಯ ಕಲ್ಪನೆಯ ಸರಕಲ್ಲ. ಆಯಾ ಕಾಲದ ಸ್ಥಿತಿಗತಿಗಳಿಗೆ ಅನುಗುಣವಾಗಿ ಅನೇಕ ತಂತ್ರಗಳನ್ನು ಬಳಸಿಕೊಂಡು ಜನ ಜೀವನಕ್ಕೆ ಹತ್ತಿರವಾಗುವಂತೆ ಚರಿತ್ರೆಯಾಗಿ ಕಟ್ಟಿಕೊಡುವ ಚಂಪೂ ಕವಿಗಳ ರಚನೆಗಳು ಕಾಲಾತೀತ ಮೌಲ್ಯವನ್ನು ಹೊಂದಿರುವುದು ಸ್ಪಷ್ಟ. ಕಾಲ ಸ್ವರೂಪವನ್ನು, ರಾಜಕೀಯ, ಸಾಮಾಜಿಕ, ಧಾರ್ಮಿಕ ನೆಲೆಗಳಲ್ಲಿ ಬಿಂಬಿಸಿರುವುದು ಚಂಪೂ ಕವಿಗಳ ಇತಿಹಾಸಿಕ ಪ್ರಜ್ಞೆಯಿಂದಲೇ. ಚಂಪೂ ಕೃತಿಗಳಲ್ಲಿ ಚಾರಿತ್ರಿಕ ಸಂದರ್ಭದ ಹಲವು ಮೌಲ್ಯಗಳು ಅಡಗಿದ್ದು ಸಮಾಕಾಲೀನ ಪರಿಸ್ಥಿತಿಗೆ ಅವು ಮುಖಾಮುಖಿಯಾಗಿವೆ. ಹೀಗಾಗಿ ಮಹತ್ವದ ಕೃತಿಗಳಾಗಿ ಇಂದಿಗೂ ಜೀವಂತಿಕೆಯನ್ನು ಉಳಿಸಿಕೊಂಡಿವೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಹರಿಹರನ ಗಿರಿಜಾ ಕಲ್ಯಾಣದ ನಿತ್ಯ ಸತ್ಯ, ಕನ್ನಡದ ತವನಿಧಿ ದಾಸ ಸಾಹಿತ್ಯದ ಅನನ್ಯತೆ, ಮುಂಬೈಯಲ್ಲಿ ಬೆಳಕು ಕಂಡ ಕನ್ನಡದ ಮೊದಲ ಸಾಮಾಜಿಕ ನಾಟಕದ ನಿಲುವು, ಕನ್ನಡದ ಬಣ್ಣ ಬನಿಯನ್ನು ಗಾಢ ಗೊಳಿಸಿದ ವ್ಯಾಸರಾಯ ಬಲ್ಲಾಳರ ಸಾಹಿತ್ಯ ಸಾಧನೆ, ವಿ.ಜಿ ಭಟ್ಟರ ಆಯ್ದ ಕವಿತೆಗಳ ಆಯಾಮ ಹಾಗೂ ಅನನ್ಯತೆ, ಜಯಂತ ಕಾಯ್ಕಿಣಿ ಅವರ ಪ್ರಬಂಧ ಲೋಕ, ಭೈರಪ್ಪನವರ ಮಹತ್ವದ ಕಾದಂಬರಿ ಮಂದ್ರದಲ್ಲಿನ ಸಂಗೀತಪ್ರಭೆ ಮೊದಲಾದ ಲೇಖನಗಳ ಮೂಲಕ ಈ ಕೃತಿ ತನ್ನ ಅವಲೋಕನ ಸಾಮರ್ಥ್ಯ ಮತ್ತು ಒಳನೋಟಗಳಿಂದ ನಮ್ಮ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡದ ಪ್ರಮುಖ ಉಪಭಾಷೆಗಳಲ್ಲಿ ಒಂದಾದ ಹವ್ಯಕ ಭಾಷೆ , ಸಂಸ್ಕೃತಿಯ ಕುರಿತಾದ ಲೇಖನ ಬಹಳ ಮನೋಹರವಾಗಿದೆ. ಕನ್ನಡದ ಸಮಕಾಲೀನ ಸಾಹಿತ್ಯದ ವಿಶಿಷ್ಟ ಕವಿ ಕೃತಿಗಳನ್ನು ಸಾಹಿತ್ಯ ಮಾರ್ಗಗಳನ್ನು ಕುರಿತ ವಿವೇಚನೆ, ವಿಶ್ಲೇಷಣೆ ಸಾಹಿತ್ಯ ಚರಿತ್ರೆ ದೃಷ್ಟಿಯಿಂದ ಬೆಲೆಯುಳ್ಳದ್ದಾಗಿದೆ. ಗಜಾನನ ಶರ್ಮಾ ಅವರ ಚೆನ್ನಬೈರಾ ದೇವಿ ಕಾದಂಬರಿಗೆ ಬಂದ ಒಳ್ಳೆಯ ವಿಮರ್ಶೆಗಳಲ್ಲಿ ಕಲಾ ಅವರ ಲೇಖನವೂ ಒಂದು. ಇದೊಂದು ನವಚಾರಿತ್ರಿಕ ವಿವೇಚನೆ ವಿಶ್ಲೇಷಣೆಯೂ ಆಗಿದೆ. ನಾಡಿನ ನಾಮಾಂಕಿತ ವಿಮರ್ಶಕರಾದ ಎಂ ಎಸ್ ಆಶಾದೇವಿ, ಬಿ. ಜನಾರ್ದನ ಭಟ್, ಜಿ. ಎಂ. ಹೆಗಡೆ ಅವರು ವಿಮರ್ಶೆಗೆ ಕೊಟ್ಟ ಕೊಡುಗೆ, ಅವರ ಸುದೀರ್ಘ ಸಂದರ್ಶನ ಲೇಖನಗಳಿಂದ ಈ ಕೃತಿಯ ತೂಕ ಮತ್ತಷ್ಟು ಹೆಚ್ಚಿದೆ.
ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ ಒಂದು ಸುದೀರ್ಘ ಪ್ರಬಂಧ. ಕರ್ನಾಟಕ ಸಂಸ್ಕೃತಿಯ ಮುಚ್ಚಿದ ಬಾಗಿಲುಗಳನ್ನು ತೆರೆದ ಮುಂಬೈನ ಸಂಶೋಧಕರ ಸಾಹಸಪ್ರಥೆ, ಸಾಧನೆ ಇಲ್ಲಿ ದಾಖಲಾಗಿದೆ. ಇಲ್ಲಿನ ಬರವಣಿಗೆಯಲ್ಲಿ ಕಂಡುಬರುವ ಶ್ರದ್ಧೆ, ಶ್ರಮ, ಪರಂಪರೆಯ ಅರಿವು, ಗುಣ ಗ್ರಾಹಕತೆ, ಸಂಸ್ಕೃತಿ ಚಿಂತನ, ಅಧ್ಯಯನದಲ್ಲಿರುವ ಪರಿಣತಿ, ಮೊದಲಾದ ಅಂಶಗಳು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದರ್ಶಪ್ರಾಯವಾಗಿವೆ. ಕಾವ್ಯ, ಕಲೆ, ಸಾಹಿತ್ಯ, ವಿಮರ್ಶೆ ಮುಂತಾದವುಗಳಿಗೆ ವ್ಯಾಖ್ಯೆ, ವ್ಯಾಖ್ಯಾನಗಳಾಗಿ ನಿಲ್ಲಬಲ್ಲ ಅನೇಕ ಉಕ್ತಿಗಳು ಈ ಕೃತಿಯಲ್ಲಿ ಧಾರಾಳವಾಗಿ ಕಾಣಸಿಗುತ್ತವೆ. ಕವಿ, ಲೇಖಕರ ಕುರಿತು ಅವರು ಹೇಳುವ ಮಾತು ನೇರ, ಸರಳ ಹಾಗೂ ಖಚಿತವಾಗಿವೆ. ಇಲ್ಲಿನ ಲೇಖನಗಳು ಕಲಾ ಅವರ ವಿಚಾರ ಸಂಪನ್ನತೆಗೆ ಸಾಕ್ಷಿಯಾಗಿವೆ. ಪ್ರಾಚೀನ ಅರ್ವಾಚೀನ ಎಂಬ ಭೇದ ಭಾವವಿಲ್ಲದೆ ಸಾಹಿತ್ಯ ಸಂಗೀತ ಕಲೆ ಎಲ್ಲವನ್ನು ತೆರೆದ ಮನಸ್ಸಿನಿಂದ ಅವಲೋಕಿಸುವ ಕ್ರಮ ಔಚಿತ್ಯಪೂರ್ಣವಾಗಿದೆ. ಕಲಾ ಅವರ ಸಾಹಿತ್ಯ ಸಮೀಕ್ಷೆ ವಿಮರ್ಶೆಗೆ ಸೃಜನಶೀಲ ಒಳನೋಟದ ಭಾಗ್ಯವಿದೆ.
ಕೃತಿಯೊಂದರ ಸತ್ವ, ಸತ್ಯವನ್ನು ವರ್ತಮಾನದ ಬೆಳಕಿನಲ್ಲಿ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುವ ಕ್ರಮವು ಈ ಕೃತಿಯ ಹೆಚ್ಚುಗಾರಿಕೆ. ಜಾಲಂಧರ ಕೃತಿಯಲ್ಲಿ ಕಲಾ ಅವರ ಸೃಷ್ಟಿಶೀಲ ಪ್ರತಿಭೆ ಸಹ ಎದ್ದು ಕಾಣುತ್ತದೆ. ಅವರ ಸಾಹಿತ್ಯ ಸಾಧನೆ ಉಪಾಸನೆಯ ಫಲವಾಗಿ ಫಲಿಸಿದೆ. “ಕಲಾ ಭಾಗ್ವತ್ ಅವರ ಓದಿನ ಹರಹನ್ನು, ಆಯ್ಕೆಯ ವೈವಿಧ್ಯವನ್ನು ಏಕಕಾಲದಲ್ಲಿ ಪ್ರತಿಫಲಿಸುವ ಈ ವಿಶಿಷ್ಟ ಕೃತಿಯ ಓದಿನ ಹಾಸು ಸಂಕೀರ್ಣವಾದದ್ದು. ಹಳಗನ್ನಡದ ಪಂಪ ಯುಗದ ಕವಿಗಳ ಮತ್ತು ಹರಿಹರನ ಚಂಪೂ ಕಾವ್ಯಾಂತರ್ಗತ ವಸ್ತುವನ್ನೂ ನಡುಗನ್ನಡದ ದಾಸ ಸಾಹಿತ್ಯವನ್ನೂ ಪರಾಮರ್ಶಿಸುವಾಗ ಅಂದಿನ ಚಾರಿತ್ರಿಕ ಹಾಗೂ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಚರ್ಚಿಸುತ್ತಾರೆ. ಆದರೆ ಈ ಸಂಕಲನದ ಬರೆಹ ಹಳಗನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಲೇಖಕಿಯ ಆಯ್ಕೆಯ ಬೀಸು ಆಧುನಿಕ ಸಾಹಿತ್ಯವನ್ನೂ ಆತುಕೊಂಡಿದೆ. ಸಮಕಾಲೀನ ಮುಂಬೈ ಸಾಹಿತ್ಯದ ಸತ್ವ ಮತ್ತು ಕಾಂತಿಯನ್ನು ಬಿಂಬಿಸಿದ ಕೃತಿ- ಕೃತಿಕಾರರನ್ನು ವಿಶ್ಲೇಷಿಸಿದ್ದಾರೆ.
ಇಲ್ಲಿ ಸಂಚಯವಾಗಿರುವ ಲೇಖನಗಳು ಕೇವಲ ಪರಿಚಯಾತ್ಮಕ ಪ್ರಾಥಮಿಕ ನೆಲೆಯಲ್ಲಿ ಪರ್ಯವಸಾನಗೊಳ್ಳುವುದಿಲ್ಲ. ಕಲಾ ಅವರ ಕೃತಿಯು ದೊಡ್ಡ ಪರಿಪ್ರೇಕ್ಷ್ಯದಲ್ಲಿ ಅಳವಟ್ಟಿರುವ ಎಲ್ಲ 29 ಲೇಖನಗಳೂ ಸ್ವಯಂಪೂರ್ಣವಾಗಿವೆ. ನಿರೂಪಣೆಯ ಶೈಲಿ ಪೆಡಸಾಗದೆ ಸುಭಗವಾಗಿದೆ. ಸಂಶೋಧನೆಗೆ ಬೇಕಾದ ಖಚಿತತೆ ಮತ್ತು ಸೃಜನ ಸಾಹಿತ್ಯ ವಿಮರ್ಶೆಗೆ ತಕ್ಕ ಹದ ಇವರ ಗದ್ಯದ ಧನಾತ್ಮಕ ಗುಣ” ಎಂಬುದಾಗಿ ನಾಡೋಜ ಪ್ರೊ. ಹಂಪನಾ ಅವರು ಈ ಕೃತಿಯ ಬೆನ್ನುಡಿಯಲ್ಲಿ ಹೇಳಿರುವ ಮಾತಿನಲ್ಲಿ ಅತ್ಯುಕ್ತಿ ಇಲ್ಲ. ಇವತ್ತು ಹೊಸ ತಲೆಮಾರಿನ ಲೇಖಕರು ಸಹ ವಿಮರ್ಶೆಯ ಕ್ಷೇತ್ರದಲ್ಲಿ ಶ್ರದ್ದೆಯಿಂದ ಕೆಲಸ ಮಾಡುತ್ತಿರುವುದು ಆಶಾದಾಯಕ ಸಂಗತಿ. ಈ ಸಾಲಿನಲ್ಲಿ ಕಲಾ ಭಾಗ್ವತ್ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸಾರ್ಥಕ ಪ್ರಯತ್ನದ ಈ ಕೃತಿಗಾಗಿ ಕಲಾ ಭಾಗ್ವತ್ ಅವರಿಗೆ ಅಭಿನಂದನೆಗಳು.
- ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ ವಿವಿ
2 thoughts on “ಸಾಮಯಿಕ ಮಹತ್ವವಿರುವ ಕೃತಿ ಜಾಲಂದರ”
ಒಳ್ಳೆಯ ಕೃತಿಯನ್ನು ನೀಡಿದ ಕಲಾಭಾಗ್ವತ್ ಹಾಗೂ ಪರಿಚಯಿಸಿದ ಉಪಾಧ್ಯ ಅವರಿಗೂ ಅಭಿನಂದನೆ ಗಳು
ಧನ್ಯವಾದಗಳು ಮೇಡಂ.