ತಾರಾ ಸಾಲ್ಡಾನಾ ನಾಲ್ಕನೆಯ ವರ್ಗದ ವಿದ್ಯಾರ್ಥಿನಿ…..ಉತ್ಸಾಹದ ಬುಗ್ಗೆ! ಕೋವಿಡ್ಡಿನಿಂದಾಗಿ ದೇಶದಾದ್ಯಂತ ಕಟ್ಟುನಿಟ್ಟಾದ ಲಾಕ್ಡೌನ್ ವಿಧಿಸಿದ್ದುದರಿಂದ ಅವಳ ಶಾಲೆಯ ಪಾಠಗಳು ಅದಾಗಲೇ ಆನ್ಲೈನಿನಲ್ಲಿ ಶುರುವಾಗಿದ್ದವು. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಶಾಲೆಗೋಡುವ ಅವಸರವಿಲ್ಲವೆಂದು ಸಂಭ್ರಮಪಟ್ಟ ತಾರಾಳಿಗೆ ಎರಡೇ ವಾರಗಳಲ್ಲಿ ಬೇಸರವು ಗುಡ್ಡವಾಗಿತ್ತು . ಗಂಟೆಗಟ್ಟಲೆ ಲ್ಯಾಪ್ಟಾಪಿನ ಮುಂದೆ ಕುಳಿತುಕೊಂಡು ಶಿಕ್ಷಕರು ಕಲಿಸುವ ಕನ್ನಡ, ಹಿಂದಿ, ಇಂಗ್ಲಿಷ್ , ಗಣಿತ, ವಿಜ್ಞಾನ, ಇತಿಹಾಸ, ಭೂಗೋಳಶಾಸ್ತ್ರದ ಪಾಠಗಳನ್ನು ಅರಗಿಸಿಕೊಳ್ಳುವುದು ಕಷ್ಟವೆನಿಸತೊಡಗಿತ್ತು. ಸರಕಾರವು ವಿಧಿಸಿದ್ದ ಕೊರೋನಾ ಕಟ್ಟಳೆಗಳಿಂದಾಗಿ ಹೊರಗಡೆ ಹೋಗುವಂತಿಲ್ಲ….. ಗೆಳತಿಯರನ್ನು ಭೆಟ್ಟಿಯಾಗುವಂತಿಲ್ಲ…… ಆಟದ ಬಯಲಿನಲ್ಲಿ ಆಟವಾಡುವಂತಿಲ್ಲ……ದಿನದ ಇಪ್ಪತ್ನಾಲ್ಕು ಗಂಟೆ ಮನೆಯಲ್ಲಿಯೇ ಬಂಧಿತಳಾಗಿರಬೇಕಾಗಿತ್ತು!
ರೊಬೊಟಿಕ್ಸ್ ಎಂಜಿನಿಯರಾಗಿದ್ದ ತಾರಾನ ತಂದೆ-ತಾಯಿಯರಿಬ್ಬರೂ ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರ ಹೆಚ್ಚಿನ ಸಮಯ ಪ್ರಯೋಗಾಲಯದಲ್ಲಿ ಕಳೆಯುತ್ತಿತ್ತು. ಕೊರೋನಾ ಸಮಯದಲ್ಲಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉಪಯೋಗಕ್ಕೆ ಬೇಕಾಗುವ ರೋಬೋಟುಗಳ ಬಗೆಗಿನ ಸಂಶೋಧನೆ ಮತ್ತು ನಿರ್ಮಾಣ ಕಾರ್ಯದಲ್ಲಿ ಅವರಿಬ್ಬರೂ ನಿರತರಾದದ್ದರಿಂದ ಪ್ರತಿದಿನ ಪ್ರಯೋಗಾಲಯಕ್ಕೆ ಹೋಗಲು ಸರಕಾರದಿಂದ ವಿಶೇಷ ಅನುಮತಿ ದೊರೆತಿತ್ತು. ಮನೆಯಲ್ಲಿ ತಾರಾಳ ಬೇಸರ ಕಳೆಯಲು ಅಜ್ಜಿ ಬೈಬಲ್ಲಿನ ಕಥೆಗಳನ್ನು ಹೇಳುತ್ತಿದ್ದರೆ ಆಕೆಯ ಅತ್ಯಾ ಸುನಿತಾ ಮನೆಗೆಲಸಗಳಾದ ಬಳಿಕ ತಾರಾಳ ಹೋಮ್ವರ್ಕನಲ್ಲಿ ಸಹಾಯ ಮಾಡುತ್ತಿದ್ದಳು. ಜೊತೆಗೆ ಚಿತ್ರಕಲೆ, ರಂಗೋಲಿ, ಸಂಗೀತ, ತೋಟಗಾರಿಕೆ, ಒರಿಗಾಮಿ (ಕಾಗದವನ್ನು ಮಡಿಸಿ ಪ್ರಾಣಿ, ಪಕ್ಷಿ ಮತ್ತು ಇತರ ಅನೇಕ ವಸ್ತುಗಳನ್ನು ಮಾಡುವ ಜಪಾನಿನ ಸುಂದರ ಕಲೆ) ಬೇಕಿಂಗ್ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಅವಳನ್ನು ತೊಡಗಿಸುತ್ತ, ಕಾಮಿಕ್ಸ್ ರೂಪದಲ್ಲಿರುವ ಈಸೋಪನ ನೀತಿ ಕಥೆಗಳು, ಪಂಚತಂತ್ರ ಈ ಮುಂತಾದ ಕಥೆಗಳನ್ನೋದುತ್ತಿದ್ದಳು ಮತ್ತು ಮಕ್ಕಳ ಕಾರ್ಟೂನ್ ಧಾರಾವಾಹಿಗಳನ್ನು ತಾರಾನೊಟ್ಟಿಗೆ ನೋಡುತ್ತಿದ್ದಳು. ” ಇನ್ನೂ ಎಷ್ಟು ದಿನ ಹಿಂಗ ಮನಿಯೊಳಗಿರಬೇಕು? ಸಾಲಿ ಯಾವಾಗ ಮದಲಿನಂಗ ಶುರು ಆಗತದ? ಬಾಜೂ ಮನಿ ಮೇಘಾನ ಜೋಡಿ ಆಟಾ ಆಡಲಿಕ್ಕೆ ಯಾಕ ಬಿಡೂದುಲ್ಲ? ಹೊರಗ ಯಾಕ ಜನಾ ಕಾಣ್ಸೂದಿಲ್ಲ? ಅಪ್ಪಾ, ಅವ್ವಾ ಯಾಕ ಮಾಸ್ಕ ಹಾಕ್ಕೋತಾರ? ನನ್ನ ಸಾಲಿ ಆನ್ಲೈನಿನೊಳಗ ನಡದಂಗ ಅಪ್ಪಾ, ಅವ್ವಾನ ಕೆಲಸಾನೂ ಆನ್ಲೈನಿನೊಳಗ ಯಾಕ ಮಾಡಲಿಕ್ಕೆ ಬರೂದಿಲ್ಲ? ಅಪ್ಪಾ, ಅವ್ವಾ ತಮ್ಮ ಜೋಡಿ ನನ್ಯಾಕ ಹೊರಗ ಕರಕೊಂಡು ಹೋಗೂದುಲ್ಲಾ? …..” ಇವೇ ಮುಂತಾದ ತಾರಾಳ ಪ್ರಶ್ನೆಗಳ ಸುರಿಮಳೆಗೆ ಸುನಿತಾ ಸಿಡಿಮಿಡಿಗೊಳ್ಳದೆ ಸಮಾಧಾನದಿಂದ ಉತ್ತರಿಸುತ್ತಿದ್ದಳು.
ಮಧ್ಯಾನ್ಹ ಅಜ್ಜಿ ಮತ್ತು ಸುನಿತಾ ವಿಶ್ರಾಂತಿಯಲ್ಲಿದ್ದಾಗ ತಾರಾನಿಗೆ ಅದೇ ಏಕಾಂಗಿತನ ಸುತ್ತಿಕೊಳ್ಳುತ್ತಿತ್ತು. ಹೊರಗಡೆ ಬಿಕೋ ಎನ್ನುವ ರೋಡುಗಳು, ಆಗೊಮ್ಮೆ ಈಗೊಮ್ಮೆ ಕಾಣುವ ಅಂಬುಲೆನ್ಸುಗಳು, ಪೋಲೀಸರ ಜೀಪುಗಳು, ಎದುರುಗಡೆ, ಹಿಂದೆ, ಮುಂದೆ ಎತ್ತೆತ್ತಲೂ ಮುಚ್ಚಿದ ಬಾಗಿಲುಗಳು! ಅಂಗಳದಲ್ಲಿಯ ಗಿಡಬಳ್ಳಿ, ಹೂವುಗಳೊಂದಿಗೆ ಒಬ್ಬಳೇ ಮನಸು ತುಂಬಿ ಮಾತನಾಡುತ್ತಿದ್ದಳು. ಹಾರಾಡುವ ಪಾತರಗಿತ್ತಿಗಳು ಮತ್ತು ನೆಲದ ಮೇಲಿನ ಇರುವೆಯ ಸಾಲನ್ನು ನೋಡುತ್ತ ಅದೆಷ್ಟೋ ಹೊತ್ತು ಕಳೆಯುಯುತ್ತಿದ್ದಳು. ಮಾವಿನ ಗಿಡವನ್ನೇರಿ ಕುಳಿತು ಅದೆಷ್ಟೋ ಹೊತ್ತು ಆಕಾಶವನ್ನು ನೋಡುತ್ತ, ಅಲ್ಲಿಯ ಮೋಡಗಳನ್ನು, ಹಾರಾಡುವ ಪಕ್ಷಿಗಳನ್ನು ಕರೆಯುತ್ತ ಮನಸ್ಸಿನಲ್ಲಿಯ ಮಾತುಗಳನ್ನಾಡುತ್ತಿದ್ದಳು.
ಲಾಕ್ಡೌನ್ ಅವಧಿಯು ಮುಂದುವರೆದದ್ದರಿಂದ ತಾರಾಳಿಗೆ ಮನೆಯೊಂದು ಬಂದೀಖಾನೆಯಾಯ್ತು. ಗೆಳತಿಯರೊಂದಿಗೆ ಫೋನಿನಲ್ಲಿ ಮಾತನಾಡುತ್ತ ಕೆಲ ವೇಳೆ ಕಳೆದರೂ ಏಕಾಂಗಿತನ ಅವಳನ್ನು ಕಾಡದಿರಲಿಲ್ಲ. ಉಣ್ಣುವದು, ತಿನ್ನುವದು, ಆಟವಾಡುವದು ಏನಿದ್ದರೂ ಅವಳು ಏಕಾಂಗಿ. ಬರಬರುತ್ತ ಖಿನ್ನತೆಗೆ ಜಾರುತ್ತ ಕಿಟಕಿಯಲ್ಲಿ ಕಣ್ಣಿಗೆ ಸಿಕ್ಕ ಹೊರಜಗತ್ತನ್ನು ನೋಡುವದೇ ಅವಳ ಪಾಲಿಗೆ ಸಿಕ್ಕ ಖುಷಿ. ಇದನ್ನು ಗಮನಿಸಿದ ಸಾಲ್ಡಾನಾ ದಂಪತಿ ಏನಾದರೊಂದು ಉಪಾಯ ಮಾಡಲೇ ಬೇಕೆಂದು ತಮ್ಮೊಳಗೇ ಮಾತನಾಡಿಕೊಂಡರು. ಈ ವರ್ಷದ ಅವಳ ಹತ್ತನೆಯ ಹುಟ್ಟುಹಬ್ಬಕ್ಕೆ ಗೆಳತಿಯರು ಮತ್ತು ನೆರೆಹೊರೆಯವರಾರೂ ಬರಲಾರರೆನ್ನುವುದನ್ನು ನೆನೆಯುತ್ತ ಹಿಂದಿನ ರಾತ್ರಿ ಅಳುತ್ತಲೇ ಮಲಗಿದಳು. ಅವಳ ಹುಟ್ಟುದಿನ ೧೧ನೇ ಅಗಸ್ಟ ಬೆಳಿಗ್ಗೆ ಅವ್ವ-ಅಪ್ಪ ಮುದ್ದಿನ ಮಳೆಗರೆದಾಗಲೇ ಅವಳಿಗೆ ಎಚ್ಚರ! ” ಇಡೀ ಜಗತ್ತಿನೊಳಗ ಅತ್ಯಂತ ಸುಂದರಿ ನಮ್ಮ ತಾರಾ……ಮಗು, ಹ್ಯಾಪೀ ಬರ್ಥಡೇ!” ಹಾಸಿಗೆಯಿಂದ ಠಣ್ಣನೆ ಹೊರಗೆ ಜಿಗಿದು ಅವ್ವ-ಅಪ್ಪನನ್ನು ತೆಕ್ಕೆಹಾಕಿ ” ಅಮ್ಮಾ, ಅಪ್ಪಾ ಇವತ್ತೊಂದು ದಿನ ನನ್ನ ಜೋಡಿಗಿರ್ರಿ….ಒಬ್ಬಾಕೇ ಇದ್ದು ಭಾಳ ಬ್ಯಾಸರಾಗೇದ” ಎಂದಾಗ ಅವರಿಬ್ಬರ ಕಣ್ಣಲ್ಲೂ ನೀರಾಡಿತ್ತು. “ಇವತ್ತ ಇಡೀ ದಿನಾ ನಾವು ನಿನ್ನ ಜೊತೀನ ಇರತೇವಿ. ಅಜ್ಜಿ ನಿನ್ನ ಪ್ರೀತಿಯ ಅಡುಗೆ ಮಾಡ್ಯಾಳ. ಸುನಿತಾ ಅತ್ಯಾ ನಿನ್ನಿಷ್ಟದ ಚೊಕೊಲೇಟ ಕೇಕ್ ಮಾಡ್ಯಾಳ ಮತ್ತ ನೋಡಿಲ್ಲೆ ಎಷ್ಟು ಛಂದನ್ನೆ ಫ್ರಾಕು ಹೊಲದಾಳ ” ಎನ್ನುತ್ತ ಅಪ್ಪ ತಾರಾಳ ಇಷ್ಟದ ಗುಲಾಬಿ ಬಣ್ಣದ ಹೊಸ ಫ್ರಾಕನ್ನು ತೋರಿಸಿದರು. ” ಮತ್ತ ನನ್ನ ಹುಟ್ಟುಹಬ್ಬಕ್ಕ ನೀವಿಬ್ರೂ ಏನು ತಂದೀರಿ?” ತಾರಾಳ ಪ್ರಶ್ನೆಗೆ ನಸುನಗುತ್ತ ಅವ್ವ ಪುಟ್ಟ ನಾಯಿಮರಿಯನ್ನು ಅವಳ ಕೈಗಿತ್ತಾಗ ತಾರಾಳಿಗೆ ತಡೆದುಕೊಳ್ಳಲಾರದ ಖುಷಿಯಾಗಿತ್ತು!.. ಕುಣಿದಳು, ಹಾರಿದಳು… ” ಈ ನಾಯಿ ಮರಿನ್ನ ’ಪುಟ್ಟ ’ ಅಂತನ ಕರೀತೇನಿ” ಎನ್ನುತ್ತ ಕೈಯ್ಯಲ್ಲಿದ್ದ ನಾಯಿಮರಿಗೆ ಮುದ್ದುಗರೆದಳು. ” ನಿನ್ನ ಬ್ಯಾಸರಾ ಕಳೀಲಿಕ್ಕೆ ಮತ್ಯಾರು ಬಂದಾರ ನೋಡು” ಎನ್ನುತ್ತ ಅಪ್ಪ ಇದುವರೆಗೆ ತನ್ನ ಹಿಂದೆ ಅಡಗಿಸಿಟ್ಟಿದ್ದ ರೋಬೋಟನ್ನು ತೋರಿಸುತ್ತ, ” ತಾರಾ, ನಿನ್ನ ಭೆಟ್ಟಿಗೆ ಹೊಸಾ ಗೆಳತಿ ಬಂದಾಳ ನೊಡು. ಇಪ್ಪತ್ನಾಲ್ಕು ತಾಸು ನಿನ್ನ ಜೊಡೀಗೇ ಇರತಾಳ. ಇಕಿ ನಿನ್ನ ಜೋಡಿ ಕನ್ನಡ ಮತ್ತು ಇಂಗ್ಲೀಷಿನೊಳಗ ಮಾತನಾಡಬಲ್ಲಳು ಮತ್ತ ನಿನ್ನ ಜೋಡಿ ಆಟಾನೂ ಆಡತಾಳ” ಎನ್ನುತ್ತ ತಾರಾನಷ್ಟೇ ಎತ್ತರವಿದ್ದ ಮಾನವರೂಪಿ ರೋಬೋಟಿನ ಕೈಯ್ಯಿಂದ ಹೂಗುಚ್ಛವನ್ನು ಕೊಡಿಸಿದರು. ” ತಾರಾ, ಜನ್ಮದಿನದ ಶುಭಾಶಯಗಳು” ಎನ್ನುತ್ತ ರೋಬೋಟು ಅವಳ ಕೈ ಕುಲುಕಿದಾಗ ತಾರಾಳ ಸಂತೋಷಕ್ಕೆ ಆ ಒಂದು ಕೋಣೆ ಸಾಕಾಗಲಿಲ್ಲ! ತನ್ನಷ್ಟೇ ಎತ್ತರದ ರೋಬೋಗೆ ತೆಕ್ಕೆಹಾಕಿ, ” ನಾನು ಇಕಿನ್ನ ಸಿತಾರಾ ಅಂತ ಕರೀತೇನಿ. ಅಮ್ಮಾ, ಅಪ್ಪಾ ನೀವೆಷ್ಟು ಛೊಲೋ ಇದ್ದೀರಿ…ನನಗೊಬ್ಬ ಗೆಳತಿನ್ನ ಭೆಟ್ಟಿ ಮಾಡ್ಸಿದ್ರಿ, ನಾಯಿಮರಿ ಕೊಟ್ರಿ……ಥ್ಯಾಂಕ್ಸ್ …ನನಗ ಭಾಳ ಸಂತೋಷಾಗೇದ. ಇದು ನನ್ನ ಬೆಸ್ಟ ಬರ್ಥಡೇ! ” ಅನ್ನುತ್ತ ಅವ್ವ-ಅಪ್ಪನ ಗಲ್ಲಕ್ಕೆ ಮುತ್ತಿಟ್ಟಳು.
*****