ಅತಿ ಹೆಚ್ಚು ವಿಮರ್ಶಾ ಕೃತಿಗಳು
ಏಕೆ ಪ್ರಕಟವಾಗುತ್ತಿವೆ??
ವಿಮರ್ಶೆಯ ವರ್ತಮಾನ??? ವಿಮರ್ಶೆಗೆ ಭವಿಷ್ಯ ಇದೆಯಾ???
ಸಾಹಿತ್ಯಕ್ಕೂ ವಿಮರ್ಶೆಗೂ ಇರುವ ಸಂಬಂಧ ಘನಿಷ್ಠವಾದುದು.ಕವಿ ಮತ್ತು ವಿಮರ್ಶಕರ ದಾಂಪತ್ಯದಿಂದಲೇ ಸರಸ್ವತೀ ತತ್ವದ ವಿಜಯ ಎಂಬುದು ಅಭಿನಗುಪ್ತನ ಮತ. ಕ್ರಿಯಾತ್ಮಕವಾದ ಸಾಹಿತ್ಯದಂತೆ ಕ್ರಿಯಾತ್ಮಕವಾದ ವಿಮರ್ಶೆ ಸಾರಸ್ವತ ಲೋಕದ ದೋಹದ.ವಿಮರ್ಶೆ ರಚನಾತ್ಮಕವಾದ ಸಾಹಿತ್ಯವನ್ನು ಅವಲಂಬಿಸಿ ಸಾಗುವ ಪ್ರಜ್ಞಾಪೂರ್ವಕ ಕ್ರಿಯೆ.ಹೀಗಾಗಿ ಪ್ರಸಿದ್ಧ ಆಂಗ್ಲ ವಿಮರ್ಶಕ ಸಿ. ಡೇ. ಲೂಯಿ “ವಿಮರ್ಶಕನಿಗಿರುವುದು ಒಂದೇ ಒಂದು ಮುಖ್ಯವಾದ ಕೆಲಸ; ಕಾವ್ಯದ ಬಗೆಗೆ ನಮ್ಮ ಪ್ರತಿಕ್ರಿಯೆಯನ್ನು ಸುಲಭಗೊಳಿಸುವುದು, ವಿಶಾಲಗೊಳಿಸುವುದು ಅಥವಾ ಆಳಗೊಳಿಸುವುದು”ಎಂಬುದಾಗಿ ವಿಮರ್ಶೆಯ ಹಾಗೂ ವಿಮರ್ಶಕನ ಅಗತ್ಯವನ್ನು ಒತ್ತಿ ಹೇಳಿದ್ದಾನೆ. ಜೆ. ರೀವ್ಸ್ ನ ಪ್ರಕಾರ “ವಿಮರ್ಶೆ ಕ್ಷುಲಕ ಟೀಕೆ ಅಲ್ಲ; ಕೂದಲು ಸೀಳುವ ಕೆಲಸವೂ ಅಲ್ಲ; ಏತಕ್ಕೆ ಕೆಲವು ರುಚಿಸಿದವು ಏತಕ್ಕೆ ಕೆಲವು ರುಚಿಸಲಿಲ್ಲ ಎನ್ನುವುದನ್ನು ಆಂಶಿಕವಾಗಿಯಾದರೂ ನೋಡುವ ಶಕ್ತಿ. ಅದೊಂದು ಅಂತರ್ದೃಷ್ಟಿ – ಅರ್ಧ ಪ್ರಯತ್ನಪೂರ್ವಕವಾದುದು, ಇನ್ನರ್ಧ ಅಯತ್ನಪೂರ್ವಕವಾದುದು” ಸಾಹಿತ್ಯ ವಿಮರ್ಶೆ ನಮ್ಮಲ್ಲಿ ಇವತ್ತು ಪ್ರಮುಖ ಸಾಹಿತ್ಯ ಪ್ರಕಾರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ವಿಮರ್ಶೆಗೆ ಗಟ್ಟಿ ಒಂದು ಶತಮಾನದ ಇತಿಹಾಸವಿದೆ.
ಕನ್ನಡ ನವೋದಯ ಸಾಹಿತ್ಯದ ಹಿರಿಯ ಲೇಖಕರಾಗಿದ್ದ ಮಾಸ್ತಿಯವರು ಸಾಹಿತ್ಯ ಮೀಮಾಂಸೆ ಮತ್ತು ವಿಮರ್ಶೆಯ ಪರಂಪರೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.” ಕನ್ನಡ ಸಣ್ಣಕಥೆಗೆ ಮಾಸ್ತಿಯವರು ಜನಕರಾಗಿರುವಂತೆಯೇ ಕನ್ನಡ ವಿಮರ್ಶೆಗೂ ಮಾಸ್ತಿಯವರು ಜನಕರಾಗಿದ್ದಾರೆ. ಸಾಹಿತ್ಯ ವಿಮರ್ಶೆಯ ಪರಂಪರೆಯೇ ಇಲ್ಲದಿದ್ದ ಕಾಲದಲ್ಲಿ ಮಾಸ್ತಿಯವರು ವಿಮರ್ಶೆಯ ವ್ಯವಸಾಯ ನಡೆಸಿದರು. ಮಾಸ್ತಿಯವರ ವಿಮರ್ಶೆ ಬಂದ ಸಾಂಸ್ಕೃತಿಕ ಸಂದರ್ಭವನ್ನು ನಾವು ಅರಿಯುವುದು ಬಹಳ ಅವಶ್ಯಕ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕನ್ನಡ ನವೋದಯ ಸಾಹಿತ್ಯ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಿಂದ ಆಧುನಿಕತೆ ಕಾಲಿಟ್ಟ ಸಂದರ್ಭವದು. ಭಾರತೀಯ ಸಾಹಿತ್ಯ ಮತ್ತು ಇಂಗ್ಲೀಷ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ಮಾಸ್ತಿಯವರು ಕನ್ನಡದ ಹೊಸ ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯದ ಸ್ವರೂಪವನ್ನು ವಿವೇಚಿಸಿದರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ವಿಮರ್ಶೆ ಅಗತ್ಯವೂ ಅನಿವಾರ್ಯವೂ ಆಗಿದೆಯೆಂಬುದನ್ನು ಅವರು ಸಮರ್ಥವಾಗಿ ಪ್ರತಿಪಾದಿಸಿದರು( ಜಿ. ಎಂ. ಹೆಗಡೆ, ಮಾಸ್ತಿ ಕೃತಿ ಚಿಂತನ,2007)
ಮಾಸ್ತಿಯವರ ವಿಮರ್ಶೆಯ ಪ್ರಪಂಚ ಅತ್ಯಂತ ವಿಸ್ತಾರವಾದದ್ದು. ಸಾಹಿತ್ಯ ತತ್ವ, ವಿಮರ್ಶಾ ಸ್ವರೂಪ, ಪ್ರಾಚೀನ ಭಾರತೀಯ ಸಾಹಿತ್ಯ, ಪ್ರಾಚೀನ ಕನ್ನಡ ಸಾಹಿತ್ಯ: ಜನಪದ ಸಾಹಿತ್ಯ, ಹೊಸಗನ್ನಡ ಕಾವ್ಯ ಮಾರ್ಗ ಮತ್ತು ಕವಿ ಕೃತಿಗಳು, ಭಾರತೀಯ ಮತ್ತು ವಿಶ್ವದ ಕವಿ ಕೃತಿಗಳ ಕುರಿತಾದ ಮಾಸ್ತಿಯವರ ವಿಮರ್ಶೆ ಕನ್ನಡ ವಿಮರ್ಶೆಯ ಬಹುಮುಖೀ ನೆಲೆಯ ಪ್ರತೀಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
“ಕನ್ನಡದಲ್ಲಿ ಸಾಹಿತ್ಯದ ನವೋದಯವಾದಾಗ 1924ರಷ್ಟೊತ್ತಿಗೆ ಮಾಸ್ತಿಯವರ ‘ಸಾಹಿತ್ಯ’ ಗ್ರಂಥ ಪ್ರಕಟವಾಯಿತು. ಅದು ಕನ್ನಡದಲ್ಲಿ ಬಂದ ಮೊದಲ ಸಾಹಿತ್ಯ ಮೀಮಾಂಸೆಯ ಕೃತಿಯಾಗಿದೆ. ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ ಎಂಬ ಸುದೀರ್ಘವಾದ ಒಂದು ಲೇಖನದಲ್ಲಿ ಮಾಸ್ತಿ ಅವರು ” ಈಗ ನಾವು ವಿಮರ್ಶೆಯೆಂದು ಕರೆಯುವ ರೀತಿಯ ಬರವಣಿಗೆ ನಮ್ಮಲ್ಲಿ ಇನ್ನೂ ಹೊಸದು; ಅದರ ಹೆಸರೂ ಹೊಸದು. ಎಂದರೆ ಹಿಂದೆ ನಮ್ಮಲ್ಲಿ ವಿಮರ್ಶೆ ಇರಲಿಲ್ಲವೆಂದಲ್ಲ. ವಿಮರ್ಶೆಯಿಲ್ಲದೆ ಸಾಹಿತ್ಯ ಆಗುವುದೂ ಇಲ್ಲ; ಬೆಳೆಯುವುದೂ ಇಲ್ಲ. ಆದರೆ ಸಾಹಿತ್ಯದ ರಚನೆಯಲ್ಲೂ ಅದಕ್ಕೆ ಸಮೀಪ ಸಂಬಂಧವುಳ್ಳ ಲಕ್ಷಣದ ವಿಚಾರದಲ್ಲೂ ಎಷ್ಟೋ ಅಷ್ಟು ಹೊರತು ವಿಮರ್ಶೆಯನ್ನೇ ಬೇರೆ ಗ್ರಂಥವಾಗಿ ಬರೆಯುವ ವಾಡಿಕೆ ಪೂರ್ವದಲ್ಲಿ ನಮ್ಮಲ್ಲಿ ಇರಲಿಲ್ಲ. ಇದಕ್ಕೆ ಅನೇಕ ಕಾರಣಗಳಿದ್ದವು. ಈ ರೀತಿಯ ವಿಮರ್ಶೆಯ ಲೇಖನವು ಕಾವ್ಯದ ರೂಪ ಲಕ್ಷಣಗಳನ್ನಲ್ಲದೆ ಕಾವ್ಯಗಳ ವಿಷಯಗಳನ್ನೂ ಚರ್ಚಿಸಬೇಕಾದ ಸಂದರ್ಭಗಳಿಂದ ಉಂಟಾಗತಕ್ಕದ್ದು. ಇಂಥ ಸಂದರ್ಭಗಳು ಹಿಂದೆ ನಮ್ಮ ದೇಶದ ಸಾಹಿತ್ಯದಲ್ಲಿ ಬಂದಂತೆ ತೋರುವುದಿಲ್ಲ. ಸಾಹಿತ್ಯ ಉದ್ದೇಶ ಆಶಯಗಳಲ್ಲಿ ಬಹುಮುಖವಾದರೆ ಇಂಥ ವಿಮರ್ಶೆ ಆವಶ್ಯಕವಾಗುವುದು. ಎರಡು ಗುಂಪುಗಳಿದ್ದರೆ ಒಂದು ಗುಂಪಿನವರು ಇನ್ನೊಂದು ಗುಂಪಿನವರ ಸರಿ ತಪ್ಪನ್ನು ಹುಡುಕಬಹುದು; ಒಬ್ಬೊಬ್ಬರೂ ತಮ್ಮ ದಾರಿ ಸರಿ ಎಂದು ಹೇಳುವುದಕ್ಕೆ ಪ್ರಯತ್ನಪಡಬಹುದು. ಈ ರೀತಿಯ ಗುಂಪು ಹಿಂದೆ ನಮ್ಮಲ್ಲಿ ವ್ಯವಹಾರದ ಜೀವನದ ವಿಷಯದಲ್ಲಾಗಲೀ ಸಾಹಿತ್ಯದ ವಿಷಯದಲ್ಲಾಗಲೀ ಆಗಲಿಲ್ಲ. ನಮ್ಮ ಜೀವನವನ್ನು ಅನುಸರಿಸಿ ನಮ್ಮ ಸಾಹಿತ್ಯವೂ ಹಿಂದೆ ಒಂದು ಧರ್ಮ ಒಂದು ನೀತಿ ಒಂದೇ ಉದ್ದೇಶವನ್ನು ಇರಿಸಿಕೊಂಡು ಮುಂದಕ್ಕೆ ನಡೆಯಿತು. ಹೀಗೆ ಎಲ್ಲರೂ ಒಪ್ಪಿದ್ದ ವಿಷಯಗಳನ್ನು ಚರ್ಚಿಸಬೇಕಾದದ್ದಿರಲಿಲ್ಲ. ಈ ಕಾರಣದಿಂದ ಮಾತ್ರವಲ್ಲದೆ ಸಾಹಿತ್ಯವು ಎಲ್ಲರಿಗೂ ಒಂದೇ ರೀತಿಯಾಗಿ ತಿಳಿಯಬೇಕೆಂದು ಪ್ರಯತ್ನಪಟ್ಟರೂ ವಿಮರ್ಶೆ ಬೇಕಾಗುವುದು. ನಮ್ಮಲ್ಲಿ ಸಾಹಿತ್ಯದ ತಿರುಳೆಲ್ಲ ಪಂಡಿತರಿಗೆ ತಕ್ಕದ್ದೆಂದೂ ಪಾಮರರಿಗೆ ಅದರ ಮೇಲ್ಬಾಗವೂ ಅದರಿಂದ ಬರಬಹುದಾದ ನೀತಿಯೂ ತಿಳಿದರೆ ಸಾಕೆಂದೂ ಅಭಿಪ್ರಾಯವಿತ್ತು”ಎಂದಿರುವುದು, ವಿಮರ್ಶೆಯ ಸ್ಥಾಪನೆಗೆ ಮಾಸ್ತಿ ಅವರು ಶ್ರಮಿಸಿದ ಬಗೆ ಈಗ ಇತಿಹಾಸ.ಕಳೆದ ಒಂದು ಶತಮಾನದಲ್ಲಿ ಕನ್ನಡ ವಿಮರ್ಶೆ ಸಾಕಷ್ಟು ಸಮೃದ್ಧವಾಗಿ ಬೆಳೆದು ಬಂದಿದೆ.ಸಾಂಪ್ರತ ಬೆಳಕು ಕಾಣುತ್ತಿರುವ ಕನ್ನಡ ಕೃತಿಗಳಲ್ಲಿ ವಿಮರ್ಶೆಯದೇ ಮೇಲುಗೈ ಎಂಬುದು ಕುತೂಹಲಕರ ಸಂಗತಿ.
ಸಾಹಿತ್ಯ ಸೃಷ್ಟಿ ಹಾಗೂ ವಿಮರ್ಶೆ ಇವೆರಡೂ ನಮ್ಮ ಮನಸ್ಸಿನ ಬೇರೆ ಬೇರೆ ಪ್ರತಿಕ್ರಿಯೆಗಳಾಗಿವೆ. ಹೀಗಿದ್ದೂ ಈ ಉಭಯ ಪ್ರಕಾರಗಳು ವಿರುದ್ಧವಾದವುಗಳಲ್ಲ: ಪೂರಕವಾದವು. ಸಾಹಿತ್ಯ ಮತ್ತು ವಿಮರ್ಶೆ ಇವೆರಡೂ ಸಾಹಿತಿ ಮತ್ತು ವಿಮರ್ಶಕರಲ್ಲಿ ನಡೆಯುವ ಸಹಕಾರ ಕ್ರಿಯೆಯೂ ಹೌದು. ವಿಮರ್ಶಕನಿಲ್ಲದ ಕವಿ ಅರ್ಥವಾಗದ ಗ್ರಂಥ. ವಿಮರ್ಶಕನು ಲೇಖಕ ವಾಚಕರ ನಡುವಿನ ಮಾಧ್ಯಮ. ವಿಮರ್ಶೆ ಕಾವ್ಯಾ ಕಾಶದ ತಾರೆಗಳನ್ನುಸ್ಪಷ್ಟವಾಗಿ ತೋರಿಸುವ ದೂರದರ್ಶಕ ಎಂಬುದಾಗಿ ಹಿರಿಯ ಕವಿ ಬೇಂದ್ರೆಯವರು ಬಹಳ ಹಿಂದೆಯೇ ವಿಮರ್ಶಕನ ಅಗತ್ಯವನ್ನು ಒತ್ತಿ ಹೇಳಿದ್ದರು. ವಿಮರ್ಶೆ ಎಂಬುದು ಬರೇ ಕೃತಿಯನ್ನು ಎತ್ತಿ ಹಿಡಿಯುವ ಪ್ರಚಾರ ಮಾಧ್ಯಮವಲ್ಲ. ಓದುಗರಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸುವ ಕಾಳಜಿಯನ್ನು ವಿಶೇಷವಾಗಿ ಸಾಹಿತ್ಯವನ್ನು ಬೋಧಿಸುವ ಅಧ್ಯಾಪಕರು ಮಾಡಬೇಕು. ಕನ್ನಡದಲ್ಲಿ ವಿಮರ್ಶೆ ಕಳೆದ ಅರ್ಧ ಶತಮಾನದಿಂದ ಸೃಜನಾತ್ಮಕ ಸಾಹಿತ್ಯದಂತೆ ಆಸ್ವಾದ್ಯವಾಗುತ್ತಿದೆ. ಸತ್ವಪೂರ್ಣವಾದ ಒಂದು ಕೃತಿ ಉತ್ತಮ ವಿಮರ್ಶೆಗೆ ಕಾರಣವಾಗುವಂತೆ ವಿಚಾರ ಯುಕ್ತವಾದ ಉತ್ತಮ ವಿಮರ್ಶೆ ಮಹತ್ವದ ಸಾಹಿತ್ಯ ಕೃತಿ ನಿರ್ಮಾಣಕ್ಕೆ ಪ್ರೇರಣೆಯನ್ನು ನೀಡಬಲ್ಲದು. ಸಾಹಿತ್ಯದ ಉತ್ಕರ್ಷಕ್ಕೆ ವಿಮರ್ಶೆ ಅನಿವಾರ್ಯ, ಅತ್ಯಗತ್ಯ.ಹೀಗಾಗಿ ನಮ್ಮಲ್ಲಿ ವಿಮರ್ಶೆ ಸಾಹಿತ್ಯದ ಅಂಗೋಪಾಂಗಗಳಲ್ಲಿ ಒಂದಾಗಿ ಇವತ್ತಿಗೂ ಸಾಗಿ ಬಂದಿದೆ.
ಸಾಂಪ್ರತ ಕನ್ನಡದಲ್ಲಿ ವಿಮರ್ಶೆಯೂ ಸಾಹಿತ್ಯದ ಒಂದು ಗಣ್ಯ ಹಾಗೂ ಪ್ರಧಾನ ಪ್ರಕಾರವೆಂದು ಪರಿಗಣಿಸಲ್ಪಟ್ಟಿದೆ. ಇತರ ಭಾರತೀಯ ಭಾಷೆಗಳಲ್ಲಿ ಹೆಚ್ಚಾಗಿ ಸೃಜನ ಸಾಹಿತ್ಯಕ್ಕೆ ವಿಶೇಷವಾದ ಒತ್ತು ನೀಡಲಾಗುತ್ತಿದ್ದರೆ ಕನ್ನಡದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ವಿಮರ್ಶಾ ಕೃತಿಗಳೇ ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುತ್ತಿರುವುದು ಅವಲೋಕನೀಯ ಅಂಶ. ನಮ್ಮದೇ ಪರಂಪರೆಯನ್ನು ಹುಡುಕಿ ಪ್ರತಿಷ್ಠಾಪಿಸುವ ಕೆಲಸ ತಕ್ಕಮಟ್ಟಿಗೆ ಕನ್ನಡ ವಿಮರ್ಶೆಯಲ್ಲಿನಡೆದಿರುವುದು,ನಡೆಯುತ್ತಿರುವುದು ಆಶಾದಾಯಕ ಸಂಗತಿ.ಕನ್ನಡ ಲೇಖಕರು ತಮ್ಮ ವಿಮರ್ಶಾ ಕೃತಿಗಳ ಮೂಲಕ ದೊಡ್ಡ ಓದುಗ ವರ್ಗವನ್ನು ಸಿದ್ಧ ಮಾಡಿದ್ದು ಇತ್ತೀಚಿನ ಒಂದು ಅಸಾಧಾರಣ ಬೆಳವಣಿಗೆ. ಸಾಹಿತ್ಯ ವಿಮರ್ಶೆ ಎಂಬ ಜ್ಞಾನ ಕ್ಷೇತ್ರ ಕಳೆದ ಕೆಲವು ದಶಕಗಳಲ್ಲಿ ಕನ್ನಡದಲ್ಲಿ ನಿರಂತರವಾಗಿ ಬೆಳೆಯುತ್ತಾ ಹೊಸ ಆಯಾಮವನ್ನು ಪಡೆದುಕೊಂಡಿದೆ. ಪ್ರಸಕ್ತ ಕನ್ನಡ ವಿಮರ್ಶಕರು ಅನೇಕ ವಾಗ್ವಾದಗಳನ್ನು ಪರಿಕಲ್ಪನೆಗಳನ್ನು ಮುನ್ನೆಲೆಗೆ ತಂದು ವಿಶ್ಲೇಷಣೆ ನಡೆಸಿರುವುದು ವರ್ತಮಾನದ ತುರ್ತು ಸಹ ಆಗಿದೆ. ಈ ಕುರಿತು ಅರವಿಂದ ಮಾಲಗತ್ತಿ ಅವರು “ಕನ್ನಡ ವಿಮರ್ಶೆ ಹಲವಾರು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತ ಬಂದಿದೆ. ಭಿನ್ನ ಸಾಂಸ್ಕೃತಿಕ ಚಿಂತನೆಗಳು ಮುಖಾಮುಖಿಯಾದಾಗ ಸ್ಥಾವರವಾಗದೆ ಜಂಗಮರೂಪಿಯಾಗಿ ಸಮಾಜಮುಖಿಯಾಗಿ ಹರಿದು ಬಂದಿದೆ. ವಿಮರ್ಶೆ ಕಟುವಾದರೂ ಕಷ್ಟ, ಉದಾರವಾದರೂ ವಿಷ. ಈ ಎರಡರ ನಡುವಿನ ಮಾರ್ಗ ಸುಗಮವೆಂದೇನಲ್ಲ. ಆದರೆ ಪ್ರವಹಿಸುವಿಕೆಯಲ್ಲಿ ಇವೆಲ್ಲ ಹಾಯ್ದು ಹೋಗುವುದು ಒಂದು ಸಹಜ ಪ್ರಕ್ರಿಯೆ. ಕಾಲಕ್ಕೆ ಮುಖಾಮುಖಿಯಾಗಿ ರೂಪುಗೊಳ್ಳುವುದೇ ವಿಮರ್ಶೆಯ ನಿಜದ ಅಸ್ತಿತ್ವ ಎನಿಸುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ (ಕನ್ನಡ ವಿಮರ್ಶೆಯ ಮಾರ್ಗ, 2004)ಇತರ ಸಾಹಿತ್ಯ ಪ್ರಕಾರಗಳಂತೆ ವಿಮರ್ಶೆಯಲ್ಲಿಯೂ ಬದಲಾವಣೆ ಏರಿಳಿತವಿರುವುದು ನಿಜ.
ಕನ್ನಡ ವಿಮರ್ಶೆ ಇಂದು ಒಂದು ಬಗೆಯ ಸಾಂಸ್ಕೃತಿಕ ಹುಡುಕಾಟವಾಗಿ ಹೆಚ್ಚಾಗಿ ಚಾಲ್ತಿಯರುವುದು ಮೆಚ್ಚತಕ್ಕ ಸಂಗತಿ. ಬದುಕಿನ ಜೊತೆಗೆ ಸಾಹಿತ್ಯದ ಅನುಸಂಧಾನ ಇತ್ತೀಚಿನ ಕನ್ನಡ ವಿಮರ್ಶೆಯ ಪ್ರಧಾನ ಲಕ್ಷಣಗಳಲ್ಲಿ ಒಂದು. ಒಂದೊಂದು ತಲೆಮಾರೂ ಹೊಸ ಹೊಸ ವಿಮರ್ಶಾ ಸೂತ್ರಗಳನ್ನು ರೂಪಿಸಿಕೊಳ್ಳಬೇಕೆಂಬುದು ವಿಮರ್ಶಕ ಟಿ.ಎಸ್. ಎಲಿಯಟ್ ನ ಮತ.ಕನ್ನಡ ಲೇಖಕರು ವಿಮರ್ಶೆಯ ಬಗೆಗೆ ಧನಾತ್ಮಕವಾಗಿ ಕಾಲಕಾಲಕ್ಕೆ ತಳೆದ ನಿಲುವು ನಮ್ಮ ವಿಮರ್ಶಾಲೋಕದ ನಡಾವಳಿಯನ್ನು ಸಹ ಹೇಳುತ್ತದೆ.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ವಿಮರ್ಶಕ ತುಂಬ ಓದಿಕೊಂಡಿರಬೇಕು, ತುಂಬ ಯೋಚಿಸಬೇಕು, ತುಂಬ ಎಚ್ಚರದಿಂದಿರಬೇಕು; ತುಂಬ ಸೌಹಾರ್ದದಿಂದರಬೇಕು. ತನ್ನ ವಿಮರ್ಶೆ ಅರೋಗಿಯಾಗಲಿ, ಸುಂದರವಾಗಲಿ, ಸಾರ್ಥಕವಾಗಲಿ ಎಂದು ಹಾತೊರೆಯಬೇಕು. ಹಂಬಲಿಸಬೇಕು, ತಪಿಸಬೇಕು. ಶಕ್ತರಾದ ವಿಮರ್ಶಕರಿಂದ ಸದ್ಯ ಇರುವ ಸಾಹಿತ್ಯವು ಎಲ್ಲರಿಗೂ ತಿಳಿಯುವುದಲ್ಲದೆ ಮುಂದಕ್ಕೆ ಒಳ್ಳೆಯ ಸಾಹಿತ್ಯ ಬರುವುದು ಸಾಧ್ಯ. (ಮಾಸ್ತಿ ಸಮಗ್ರ ವಿಮರ್ಶೆ)
ಕುವೆಂಪು
ವಿಮರ್ಶೆ ಎಂದರೆ ಕವಿ ಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯ ಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ (ಕಾವ್ಯ ವಿಹಾರ, ಪು. ೨) ಉತ್ತಮವಾದುದನ್ನು ಬೆರಳಿಟ್ಟು ತೋರುವುದು ಹೇಗೆ ವಿಮರ್ಶೆಯೋ ಹಾಗೆಯೇ ಅನುತ್ತಮವಾದುದನ್ನು ಮುಚ್ಚುವುದೂ ಒಂದು ತೆರನಾದ ವಿಮರ್ಶೆಯೆ. (ಕಾವ್ಯ ವಿಹಾರ, ಪು. ೮೩)
ವಿನಾಯಕ ಕೃಷ್ಣ ಗೋಕಾಕ
ವಿಮರ್ಶೆ ಜೀವನದಲ್ಲಿಯೂ, ಸಾಹಿತ್ಯದಲ್ಲಿಯೂ ಶಾಶ್ವತವಾದುದರ ವಿಜಯವನ್ನು ಸಾರುವ ಕಹಳೆ, ಪ್ರತಿ ಯುಗದಲ್ಲಿಯೂ ಜನಿಸುವ ಪ್ರತಿಭಾಶಾಲಿಗಳನ್ನು ಸಾಹಿತ್ಯ ರಂಗಕ್ಕೆ ಕರೆಯುವ ತುತ್ತೂರಿ.ಪ್ರತಿಭೆ ಇಲ್ಲವೆ ಒಂದು ಕೃತಿಯ ತಿರುಳನ್ನೇ ಕಂಡುಹಿಡಿಯುವ ತೀಕ್ಷ್ಯ ಬುದ್ಧಿ, ಹೆಚ್ಚಿನದನ್ನು ತಿಳಿದುಕೊಳ್ಳಬೇಕೆಂಬ ಜಿಜ್ಞಾಸೆ, ಯಾವ ಪೂರ್ವಾಗ್ರಹಕ್ಕೂ ಅಂಟಿಕೊಳ್ಳಬಾರದೆಂಬ ವಿವೇಕ ಪ್ರಜ್ಞೆ, ಇವಿಲ್ಲದೆ ಸಾಹಿತ್ಯವಾಗಲಿ ವಿಮರ್ಶೆಯಾಗಲಿ ಉನ್ನತಿ ಹೊಂದಲಾರದು.(ಸಾಹಿತ್ಯದಲ್ಲಿ ಪ್ರಗತಿ)
ಜಿ. ಎಸ್. ಶಿವರುದ್ರಪ್ಪ
ಸಾಹಿತ್ಯ ವಿಮರ್ಶೆ ಎಂದರೆ ಸಾಕಷ್ಟು ಸಮೃದ್ಧವಾದ ಸಾಹಿತ್ಯವಿರುವಲ್ಲಿ ಶಕ್ತನಾದ ಸೂಕ್ಷ್ಮಜ್ಞನಾದ ಸಹೃದಯನೊಬ್ಬ ಅದನ್ನು ಆಸ್ವಾದಿಸಿ, ಆಲೋಚಿಸಿ, ಅದರ ಗುಣ ದೋಷಗಳನ್ನು ವಿವೇಚಿಸಿ, ಅದರ ಬೆಲೆಯನ್ನು ಕಟ್ಟುವ ಒಂದು ನಿಷ್ಪಕ್ಷಪಾತವಾದ ಪ್ರಯತ್ನಎನ್ನಬಹುದು (ವಿಮರ್ಶೆಯ ಪೂರ್ವ ಪಶ್ಚಿಮ, ಪು.೧)
ರಂ. ಶ್ರೀ. ಮುಗಳಿ
ವಿಮರ್ಶೆಯು ಕಠೋರವಾದ ನ್ಯಾಯ ನಿರ್ಣಯವಲ್ಲ. ಕ್ರೂರವಾದ ದಂಡ ವಿಧಿಯಲ್ಲ. ನಿಷ್ಟುರವಾದ ದುಷ್ಟಬುದ್ಧಿಯ ದೋಷದರ್ಶನವೂ ಅಲ್ಲ. ಅದು ಸಹೃದಯನ ರಸಾನುಭವದಿಂದ ಹೊರಹೊಮ್ಮಿದ ಗುಣದೋಷದ ವಿವೇಚನೆಯುಳ್ಳ ರಸಗ್ರಹಣ. (ಮಾತೆಂಬುದು ಜ್ಯೋತಿರ್ಲಿಂಗ, ಪು. ೭೪-೭೫)
ಗೋಪಾಲಕೃಷ್ಣ ಅಡಿಗ
ಸಾಹಿತ್ಯಕ್ಕೂ ವಿಮರ್ಶೆಗೂ ಅವಿನಾಭಾವದಷ್ಟು ಅನ್ಯೋನ್ಯ ಸಂಬಂಧ. ಉತ್ತಮವಾದ ಪ್ರತಿಕೃತಿಯಲ್ಲೂ ವಿಮರ್ಶೆಯ ಒಂದಂಶ ಸೇರಿ ಅದು ಹೇಗೆ ಕೃತಾರ್ಥವಾಗುತ್ತದೋ ಅದೇ ರೀತಿ ವಿಮರ್ಶೆಯೂ ಕೃತಿಯನ್ನು ಬಿಟ್ಟು ಬೇರೆ ನಿಲ್ಲದು. (ಮುನ್ನುಡಿ : ಎಂ.ಜಿ. ಕೃಷ್ಣಮೂರ್ತಿ ಅವರ ‘ಆಧುನಿಕ ಭಾರತೀಯ ಸಾಹಿತ್ಯ’)
ಎಸ್. ವಿ. ರಂಗಣ್ಣ
ಕಾವ್ಯಕ್ಕೆ ನ್ಯಾಯವನ್ನು ಒದಗಿಸಿಕೊಡುವುದಕ್ಕೋಸ್ಕರ ಸೀಮಿತವಾಗಿದೆ ವಿಮರ್ಶೆ; ಅದರ ಗುರಿ ಒಂದೇ. ಫ್ರೆಂಚ್ ನುಡಿಯ ಅರ್ಥಗರ್ಭಿತವಾದ ಜಸ್ಟೆಸ್ (Justesse) ಎಂಬ ಆ ಒಂದು ಶಬ್ದದಲ್ಲಿ ಅಡಕವಾಗಿದೆ. ಕರಾರುವಾಕ್ಕು, ಔಚಿತ್ಯ, ನಿಷ್ಪಕ್ಷಪಾತ, ಯುಕ್ತತೆ- ಎಲ್ಲವೂ ಸಮಾಜದಿಂದ ಸಾಹಿತ್ಯ ಕೇಳುವ ‘ನ್ಯಾಯ’ ಅದೇ; ಅದನ್ನು ಈಯುವುದಕ್ಕೆ ನೆರವಾಗುವುದೇ ಸಾಹಿತ್ಯ ವಿಮರ್ಶೆ.(ಹೊನ್ನಶೂಲ. ಪು. ೧೯೧)
ಎಚ್. ತಿಪ್ಪೇರುದ್ರಸ್ವಾಮಿ
ಇಂಗ್ಲೀಷಿನ “Criticism” ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ “ವಿಮರ್ಶೆ”ಯೆಂಬ ಪದವನ್ನು ಬಳಸಲಾಗಿದೆ. ಇಂಗ್ಲೀಷಿನಲ್ಲಿ Literary – Criticism ವೈವಿಧ್ಯಮಯವಾಗಿ ಬೆಳೆದು ನಿಂತರೆ, ಕನ್ನಡದಲ್ಲಿ ಈ ಸಾಹಿತ್ಯ ವಿಮರ್ಶೆ ಇತ್ತೀಚಿನ ಕೊಡುಗೆಯಾಗಿದೆ. “ಮೃಶ್” ಎಂಬ ಧಾತುವಿಗೆ “ವಿ ” ಎಂಬ ಉಪಸರ್ಗ ಸೇರಿ “ವಿಮರ್ಶೆ” ಪದ ನಿಷ್ಪನ್ನವಾಗಿದೆ. “ಮೃಷ್” ಎಂದರೆ ತೀಡು, ಉಜ್ಜು, ಬಡಿ ಎಂದರ್ಥವಾಗುತ್ತದೆ. ಈ ರೀತಿಯ ಕಾರ್ಯಗಳು ಸಾಹಿತ್ಯ ವಿಮರ್ಶೆಯಲ್ಲಿಯೂ ನಡೆಯುವುದರಿಂದ, “ಮೃಶ್- ಪದದ ಅರ್ಥಬಳಕೆ ಔಚಿತ್ಯವಾದುದಾಗಿದೆ. ಒಂದು ಸಾಹಿತ್ಯ ಕೃತಿಯನ್ನು ಬೇರೆ ಬೇರೆ ರೀತಿಯಾಗಿ ಉಜ್ಜಿ ನೋಡಬೇಕಾಗುತ್ತದೆ. ಅದರ ವಿವಿಧ ಮುಖಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ. ಪರೀಕ್ಷಿಸಿದ ನಂತರ ಆ ಕೃತಿಯ ಮೌಲ್ಯ ನಿರ್ಣಯವಾಗುತ್ತದೆ. ಇಂತಹ ಪರೀಕ್ಷಾ ನೆಲೆಗಳೇ ವಿಮರ್ಶೆಯ ಮೂಲ ತತ್ವಗಳಾಗಿವೆ. (ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು )
ಜಿ. ಎಸ್. ಆಮೂರ
ಕೃತಿ ಪರೀಕ್ಷಕಂಗೆಂಟೆರ್ದೆಯೆ?’ ಎಂದು ರನ್ನ ಸವಾಲು ಹಾಕಿದ. ಪರೀಕ್ಷೆ ಎನ್ನುವ ಶಬ್ದದಲ್ಲಿನ ಧ್ವನಿಪೂರ್ಣ ಶ್ರೀಮಂತಿಕೆಯನ್ನು ನಾವು ಗಮನಿಸಬೇಕು . ವಿಮರ್ಶೆ ಎರಡು ರೀತಿಗಳಿಂದ ಕೃತಿಪರೀಕ್ಷೆಯಾಗಬಲ್ಲುದು. ಮೌಲ್ಯಮಾಪನ ಎನ್ನುವ ಅರ್ಥದಲ್ಲಿಯೇ ಈ ಶಬ್ದ ಪ್ರಚಾರದಲ್ಲಿದೆಯಾದರೂ ಒಂದು ವಸ್ತುವನ್ನು ಸಾಧ್ಯವಿದ್ದಷ್ಟು ಸಮಗ್ರವಾಗಿ ನೋಡುವುದು ” ( ಪರಿ+ ಈಕ್ಷೆ) ಎನ್ನುವ ಅರ್ಥವೂ ಅದರಲ್ಲಿ ಅಡಗಿದೆ. ವಿಮರ್ಶೆ ಒಂದು ಹಂತದಲ್ಲಿ ಕೃತಿಯ ಸಮೀಕ್ಷೆ ಯಾದರೆ, ಇನ್ನೊಂದು ಹಂತದಲ್ಲಿ ಅದು ಬೆಲೆ ಕಟ್ಟುವ ಜವಾಬುದಾರಿಯನ್ನೂ ವಹಿಸಿಕೊಳ್ಳುತ್ತದೆ. ಒಂದು ಕೃತಿಯನ್ನು ಚೆನ್ನಾಗಿ ನೋಡದೆಯೆ ಅದರ ಮೌಲ್ಯವನ್ನು ನಿರ್ಧರಿಸುವುದು ಹುಂಬತನದ ಕೆಲಸವಾದೀತು. ಈ ದೃಷ್ಟಿಯಿಂದ ವಿಮರ್ಶೆಯ ಮುಖ್ಯ ಕೆಲಸ ಕೃತಿಯನ್ನು ಅರ್ಥೈಸುವುದು. ಪ್ರಯೋಗಶೀಲವಾದ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಇದು ಸಾಕಷ್ಟು ಜಟಿಲವಾದ ಕ್ರಿಯೆಯೇ ಆಗಿದೆ. ಇಂದು ವಿಮರ್ಶೆಯ ವಿಧಿ-ವಿಧಾನಗಳು ಪ್ರೌಢವಾಗಿ ಬೆಳೆದುದರಿಂದ ಒಮ್ಮೊಮ್ಮೆ ಕೃತಿಗಿಂತ ವಿಮರ್ಶೆಯೇ ಹೆಚ್ಚು ಮಹತ್ತ್ವದ್ದಾಗಿ ಕಂಡುಬರುವುದುಂಟು. (ಆಧುನಿಕ ಕನ್ನಡ ವಿಮರ್ಶೆ, 2008,ಪುಟ,6)
ಬರಗೂರು ರಾಮಚಂದ್ರಪ್ಪ
ವಿಮರ್ಶೆಯೆಂದರೆ ಸಾಹಿತ್ಯವನ್ನು ಕುರಿತ ತತ್ತ್ವ ಮತ್ತು ವಿಶ್ಲೇಷಣಾ ವಿಧಾನ-ಎರಡೂ ಸೇರಿರುತ್ತವೆ. ಸಾಹಿತ್ಯದ ಪರಿಕಲ್ಪನೆ ಮತ್ತು ಸಾಹಿತ್ಯದ ವಿಶ್ಲೇಷಣೆಗಳ ಅಂತರ್ ಸಂಬಂಧದಲ್ಲಿ ವಿಮರ್ಶೆ ಹುಟ್ಟುತ್ತದೆ. ಸಾಹಿತ್ಯದ ಪರಿಕಲ್ಪನೆಯೆಂದರೆ ಬದುಕಿನ ಪರಿಕಲ್ಪನೆಯೂ ಹೌದು; ಸಾಹಿತ್ಯ ವಿಮರ್ಶೆಯೆಂದರೆ ಸಾಹಿತ್ಯ ಒಳಗೊಂಡ ಬದುಕಿನ ವಿಶ್ಲೇಷಣೆಯೂ ಹೌದು. ವಿಮರ್ಶೆಯ ಕೆಲಸ ಕೇವಲ ಭಾಷೆ-ಶೈಲಿಗಳ ಚರ್ಚೆಯಲ್ಲ. ಸಾಹಿತ್ಯದಲ್ಲಿ ರೂಪುಗೊಳ್ಳುವ ಭಾಷೆಯಲ್ಲಿ ಬದುಕಿನ ವಿವರ ಮತ್ತು ಒಳನೋಟಗಳೂ ಸೇರಿರುವುದರಿಂದ, ಬದುಕಿನ ವಿಶ್ಲೇಷಣೆಯು ವಿಮರ್ಶೆಯ ಅಂತರ್ಗತ ವಿಧಾನವಾಗಿರುತ್ತದೆ. ಸಾಹಿತ್ಯದ ಭಾಷೆಯನ್ನು ಚರ್ಚಿಸುವ ವಿಮರ್ಶೆಯ ಭಾಷೆಯಲ್ಲಿ ಬದುಕಿನ ಸೂಕ್ಷ್ಮಗಳೂ ಸೇರಿರುತ್ತವೆ. ಆದ್ದರಿಂದ ವಿಮರ್ಶೆಯ ಭಾಷೆ ಮತ್ತು ವಿಧಾನಗಳು ಸಾಹಿತ್ಯದೊಳಗಿನ ಜೀವನ ವಿವರಣೆಗಳನ್ನಷ್ಟೇ ವಿಶ್ಲೇಷಿಸುವುದಿಲ್ಲ ; ಅಲ್ಲಿರುವ ಜೀವನ ದೃಷ್ಟಿ-ಧೋರಣೆಗಳನ್ನೂ ವಿಶ್ಲೇಷಿಸುತ್ತೇವೆ. ಅಂದರೆ ವಿಮರ್ಶೆಯು ತನ್ನದೇ ಆದ ಜೀವನ ದೃಷ್ಟಿ ಧೋರಣೆಗಳನ್ನು ಹೊಂದಿರುತ್ತದೆ. (ಸಾಹಿತ್ಯ ವಿಮರ್ಶೆ, 1991)
ವಿಮರ್ಶೆ ಸಹ ನಿಂತ ನೀರಲ್ಲ, ಅದು ಕಾಲ ಕಾಲಕ್ಕೆ ಬದಲಾವಣೆ ಆಗುತ್ತಾ ಬಂದಿದೆ. ಇವತ್ತು ಜಗತ್ತಿನ ಎಲ್ಲೆಡೆ ವಿಮರ್ಶೆಯ ತತ್ವಗಳು ಹಾಗೂ ಆಧುನಿಕ ವಿಮರ್ಶಾ ಪ್ರಸ್ಥಾನಗಳು ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತಿವೆ. ಕರ್ತೃ ಕೇಂದ್ರಿತ, ವಿಮರ್ಶೆ,ಸಮಾಜ ಕೇಂದ್ರಿತ ವಿಮರ್ಶೆ, ಕೃತಿಕೇಂದ್ರಿತ ವಿಮರ್ಶೆ ಹಾಗೂ ವಾಚಕ ಕೇಂದ್ರಿತ ವಿಮರ್ಶೆ ಇವು ಹೆಚ್ಚಾಗಿ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಕುರಿತು ಕನ್ನಡದ ಹಿರಿಯ ವಿಮರ್ಶಕ ಸಿ. ಎನ್. ರಾಮಚಂದ್ರನ್ ಅವರು ವಿಮರ್ಶೆಯ ಜಾಗತಿಕ ವಿದ್ಯಮಾನವನ್ನು ಹೀಗೆ ವಿವರಿಸಿದ್ದಾರೆ.
“ಆಧುನಿಕ ಸಂದರ್ಭದಲ್ಲಿ ಪಾಶ್ಚಾತ್ಯರಲ್ಲಿ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಇವೆರಡು ಕ್ಷೇತ್ರಗಳಲ್ಲಿಯೂ ಅದ್ಭುತ ಕೆಲಸ ನಡೆದಿರುವುದನ್ನು ನಾವು ಕಾಣುತ್ತೇವೆ. ಅಲ್ಲದೆ ಸಾಹಿತ್ಯ ವಿಮರ್ಶೆಯಲ್ಲಿ ಮೌಲ್ಯಮಾಪನವು ಅತ್ಯಂತ ಗೌಣವಾಗಿ, ಕೃತಿ ಸಂಪಾದನೆ, ವ್ಯಾಖ್ಯಾನ ಮತ್ತು ಭಾಷ್ಯ, ವಿಶ್ಲೇಷಣೆ ಇವುಗಳಿಗೆ ವಿಮರ್ಶಕರು ಮಹತ್ವ ಕೊಡುವುದನ್ನು ಕಾಣುತ್ತೇವೆ. ‘ನವ್ಯ ವಿಮರ್ಶೆ’, ‘ರಾಚನಿಕ ವಿಮರ್ಶೆ’ ಮತ್ತು ‘ಮನೋವೈಜ್ಞಾನಿಕ ವಿಮರ್ಶೆ’ ಈ ಮಾರ್ಗಗಳಲ್ಲಿ ತೀರ್ಮಾನ ಮತ್ತು ಮೌಲ್ಯಮಾಪನ ಇಲ್ಲವೇ ಇಲ್ಲ ಎನ್ನಬಹುದು; ಇತರ ಪ್ರಮುಖ ವಿಮರ್ಶಾ ಮಾರ್ಗಗಳಲ್ಲಿಯೂ (ಮಾರ್ಕ್ಸ್ವಾದಿ ವಿಮರ್ಶೆ, ಚಿರಂತನ ಪ್ರತೀಕ ವಿಮರ್ಶೆ, ನಿರಚನ ವಿಮರ್ಶೆ ಇತ್ಯಾದಿ)ವ್ಯಾಖ್ಯಾನ ಮತ್ತು ವಿಶ್ಲೇಷಣೆಗಳೇ ಪ್ರಮುಖವಾಗುತ್ತವೆ.
ಒಂದು ಕೃತಿಯನ್ನು ಕುರಿತು ನಾವು ಕೈಗೊಳ್ಳುವ ತೀರ್ಮಾನಕ್ಕೆ ಆಧಾರವಾಗಿ
೧. ಬಳಸುವ ಕೃತಿ ವಿವರಗಳು ವೈಜ್ಞಾನಿಕ ಚರ್ಚೆಯಲ್ಲಿರುವಂತೆ ‘ನಿಮಿತ್ತ’ ಅಥವಾ ‘ಕಾರಣ’ಗಳಲ್ಲ, ಕೇವಲ ಸಮರ್ಥನೆಗಳು.
೨. ಪ್ರತಿಯೊಂದು ಸಾಹಿತ್ಯಕ ತೀರ್ಮಾನದ ಹಿಂದೆಯೂ – ಅದು ಎಷ್ಟೇ ಸರಳ ತೀರ್ಮಾನವಿರಲಿ – ಒಂದು ವೈಚಾರಿಕ ಪ್ರಣಾಳಿ ಇದ್ದೇ ಇರುತ್ತದೆ. ಆದ್ದರಿಂದ ಇದು ಕೇವಲ ಅಕಾಡೆಮಿಕ್ ವಿಮರ್ಶೆ’, ‘ಇದು ಸಮಾಜಬದ್ಧ ವಿಮರ್ಶೆ’ ಎಂಬ ಹೇಳಿಕೆಗಳು ಬಾಲಿಶ.
೩. ಕೃತಿಯ ಸ್ಪೋಪಜ್ಞತೆ ಹೆಚ್ಚಾದಷ್ಟೂ ಅದನ್ನು ಕುರಿತ ವಿಮರ್ಶಾ ಭಿನ್ನತೆಗಳು ಹೆಚ್ಚಾಗುತ್ತವೆ.
೪. ಒಂದು ಕೃತಿಯನ್ನು ಕುರಿತು, ಕೃತಿಯ ಅರ್ಥವನ್ನು ಕುರಿತು ‘ಇದಮಿತ್ಥಂ’ ಎಂದು ಸಾರ್ವಕಾಲಿಕ ತೀರ್ಮಾನವನ್ನು ಯಾವುದೇ ವಿಮರ್ಶಕನೂ ಅಥವಾ ವಿಮರ್ಶಾ ಮಾರ್ಗವೂ ಕೊಡುವುದು ಸೂಕ್ತವಲ್ಲ. ಕೃತಿಯನ್ನು ಆಧರಿಸಿದ, ಸತಾರ್ಕಿಕವಾದ ಯಾವುದೇ ವ್ಯಾಖ್ಯಾನವಾಗಲಿ, ತೀರ್ಮಾನವಾಗಲಿ ಗ್ರಾಹ್ಯ.(ಅದೇ ಸಾಹಿತ್ಯ ವಿಮರ್ಶೆ 1997,ಪುಟ 11)
20ನೆಯ ಶತಮಾನದ ಆರಂಭದಲ್ಲಿ, ನವೋದಯ ಕಾಲಘಟ್ಟದ ಲೇಖಕರು ಸಾಹಿತ್ಯ ಮತ್ತು ವಿಮರ್ಶೆ ಒಟ್ಟೊಟ್ಟಿಗೆ ನಡೆಸಿಕೊಂಡು ಹೋದರು.ಹೀಗಿದ್ದೂ ನಿಜವಾಗಿಯೂ ವಿಮರ್ಶೆ ಸಮೃದ್ಧವಾಗಿ ಬೆಳೆದು ಬಂದದ್ದು ನವ್ಯದ ಸಂದರ್ಭದಲ್ಲಿ. ಈ ಅವಧಿಯ ಅನೇಕ ಲೇಖಕರು ವಿಮರ್ಶೆಯನ್ನೇ ತಮ್ಮ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡಿದ್ದು ವಿಶೇಷ.
ಪಾಶ್ಚಾತ್ಯ ವಿಮರ್ಶೆಯ ಮಾನದಂಡಗಳು,ಅಲ್ಲಿನ ವಿಮರ್ಶಕರು ಕನ್ನಡ ವಿಮರ್ಶೆಯ ಮೇಲೆ ಗಾಢವಾದ ಪ್ರಭಾವವನ್ನು ಬೀರಿದರು. ನವ್ಯರು ಕೃತಿ ನಿಷ್ಠೆ ವಿಮರ್ಶೆಗೆ ಆದ್ಯತೆ ನೀಡಿದರು. 70ರ ದಶಕದಲ್ಲಿ ಕನ್ನಡ ವಿಮರ್ಶೆಯ ಗತಿ ಬದಲಾಯಿತು.
“ದಲಿತ-ಬಂಡಾಯದ ವಿಮರ್ಶೆಯ ಸಂದರ್ಭದಲ್ಲಿ ಎದ್ದ ಧೋರಣೆಗಳು ಮಹತ್ವದ್ದವು. ಮೊದಲು ದಲಿತ-ಬಂಡಾಯದ ಲೇಖಕರು ‘ಸಾಹಿತ್ಯ ವಿಮರ್ಶೆಯ ಮಾನದಂಡಗಳು ಬದಲಾಗಬೇಕು’ ಎನ್ನುವ ವಾದವನ್ನು ಮುಂದು ಮಾಡಿದರು. ಇದಕ್ಕೆ ಮುಖ್ಯ ಕಾರಣ ನವ್ಯ ಸಾಹಿತ್ಯದ ವಿಮರ್ಶೆಯ ಮಾನದಂಡಗಳನ್ನೇ ದಲಿತ-ಬಂಡಾಯದ ಧೋರಣೆಯ ಕೃತಿಗಳ ಮೇಲೂ ಪ್ರಯೋಗಿಸುತ್ತಿದ್ದುದು. ಇದು ಸಮರ್ಥನೀಯವಲ್ಲ ‘ಸಾಹಿತ್ಯ ನಮ್ಮ ನೆಲದ ಕ್ಷೀರ,ಅದನ್ನು ಕಡೆಯಲು ಅನ್ಯದೇಶದ ಕಡೆಗೋಲು ಬೇಕಿಲ್ಲ’ ‘ಹೊಸ ಸಾಹಿತ್ಯಕ್ಕೆ ಹೊಸ ಮಾನದಂಡಗಳು ಬೇಕು’ ಎಂದು ಪ್ರತಿಪಾದಿಸಿದರು. ದಲಿತ- ಬಂಡಾಯದ ವಿಮರ್ಶಕರು ನವೋದಯ ಹಾಗೂ ನವ್ಯದ ಸಂದರ್ಭದಲ್ಲಿ ಬಂದ ಕೃತಿಗಳ ವಿಮರ್ಶೆ ಯನ್ನು ಮಾಡಿದಾಗ ಅಸಾಹಿತ್ಯಕ ವಿಮರ್ಶೆ’ ಎಂದು ಎದುರೇಟು ನೀಡಿದಂತೆ ಉತ್ತರಿಸಲು ಪ್ರಯತ್ನಿಸಿ ದಂತಿದೆ. ಬದಲಾದ ಸಾಹಿತ್ಯ ಮಾರ್ಗಕ್ಕೆ ವಿಮರ್ಶೆಯ ಮಾನದಂಡಗಳು ಬದಲಾಗಬೇಕಿದೆ ಎನ್ನುವ ವಾದ ಸಂಗತವಾಗಿತ್ತು. ಇದರೊಂದಿಗೆ ಅವರು ನಿರೀಕ್ಷಿಸಿದ ಸಾಹಿತ್ಯಕ ಮೌಲ್ಯ ಅಥವಾ ಗುಣದ ಕುರಿತು ನಿರಾಕರಿಸುವಂತಿರಲಿಲ್ಲ. ಆದರೆ ದಲಿತ ಬಂಡಾಯಗಾರರ ವಿಮರ್ಶೆಯ ಮಾನದಂಡಗಳನ್ನು ಪರಿಶೀಲಿಸದರೆ ಸಾಹಿತ್ಯದ ಕೃತಿ ಮೇಲೆ ಸಾಮಾಜಿಕ, ಚಾರಿತ್ರಿಕ ಎಂಬ ಬಾಹ್ಯ ಮಾನದಂಡಗಳನ್ನು ಬಳಸಿ ವಿಮರ್ಶೆ ಮಾಡಲು ಮುಂದಾದುದ್ದರ ಪರಿಣಾಮ ‘ಅಸಾಹಿತ್ಯಕ ವಿಮರ್ಶೆ’ ಎಂಬ ಹಣೆಪಟ್ಟಿ ಯನ್ನು ಕಟ್ಟಿಕೊಳ್ಳಬೇಕಾಯಿತು. ಆಗ ವಿಮರ್ಶೆಯ ಮಾನದಂಡಗಳು ಬದಲಾಗಬೇಕು ಎನ್ನುವ ವಾದ ಮತ್ತಷ್ಟು ಪ್ರಭಲವಾಗುತ್ತ ಹೋಯಿತು. ಇದು ಪರಸ್ಪರ ನವ್ಯ-ದಲಿತ ಬಂಡಾಯದ ವಿಮರ್ಶಕರ ನಡುವೆ ನಡೆದ ವಾಗ್ವಾದವಾದರೆ, ದಲಿತ ಬಂಡಾಯದ ನಡುವೆಯೇ ನಡೆದ ವಿಮರ್ಶೆಯ ವಾಗ್ವಾದ ಮತ್ತೊಂದು ಬಗೆಯದ್ದಾಗಿದೆ. ಆದರೆ ಬಂಡಾಯದ ಸಂದರ್ಭದಲ್ಲಿ ರೂಪಗೊಂಡ ಸಮಾಜವಾದಿ ವಿಮರ್ಶೆ ನೆಲೆಯೂರಲು ಪ್ರಯತ್ನಿಸಿದ್ದು ಒಡೆದು ಕಾಣುತ್ತದೆ.( ಅರವಿಂದ ಮಾಲಗತ್ತಿ, ಕನ್ನಡ ವಿಮರ್ಶೆಯ ಮಾರ್ಗ, 2004,ಪುಟ 13)
ವಿಮರ್ಶೆ ಎನ್ನುವುದು ಕಾಲ ಕಾಲದ ಸಾಹಿತ್ಯ ನಿರ್ಮಾಣದೊಂದಿಗೆ ಸಹೃದಯಿ ವಿಚಾರವಂತರು ತೋರಿದ ಪ್ರತಿಕ್ರಿಯೆ ಹಾಗೂ ನಡೆಸಿದ ಗಂಭೀರವಾದ ಸಂವಾದ.ಸಾಹಿತ್ಯ ಅಕಾಡೆಮಿಗಾಗಿ ಶತಮಾನದ ವಿಮರ್ಶೆ ಸಂಪುಟವನ್ನು ಸಂಪಾದನೆ ಮಾಡಿಕೊಟ್ಟ ಎಚ್. ಎಸ್. ರಾಘವೇಂದ್ರ ರಾವ್ ಅವರು ವಿಮರ್ಶೆ ಆಧುನಿಕ ಕನ್ನಡದ ಸಂದರ್ಭದಲ್ಲಿ ನಡೆದುಬಂದ ದಾರಿಯನ್ನು, ಅದರ ಗತಿಶೀಲತೆಯನ್ನು ಹೀಗೆ ತೆರೆದು ತೋರಿದ್ದಾರೆ.
“ಕನ್ನಡ ವಿಮರ್ಶೆಯು ಮೊದಲಿನಿಂದಲೂ ಸಮಾಜಮುಖಿಯೇ ವಿನಾ, ಜೀವನಮುಖಿಯೇ ವಿನಾ ಕಲಾಮುಖಿಯಲ್ಲ. ಆದ್ದರಿಂದಲೇ ಸಾಹಿತ್ಯತತ್ವ, ವಿಮರ್ಶಾಪಂಥಗಳು, ಶೈಲಿ-ಪ್ರತಿಮೆ-ಪ್ರತೀಕಗಳಂಥ ಪರಿಕರಗಳು, ಛಂದಸ್ಸು, ಶಿಲ್ಪಗಳಂಥ ಆಕೃತಿ ನಿರ್ದಿಷ್ಟಗಳು, ನಮ್ಮ ವಿಮರ್ಶಕ-ಓದುಗರನ್ನು ತಮ್ಮ ಪ್ರತ್ಯೇಕತೆಯಲ್ಲಿ ಆಕರ್ಷಿಸಿರುವುದು ಬಹಳ ಕಡಿಮೆಯೇ, ಹಾಗೆಯೇ ವಿವಿಧ ಜ್ಞಾನಶಾಖೆಗಳ ನೆಲೆಯಲ್ಲಿ ಸಾಹಿತ್ಯವನ್ನು ಸತತವಾಗಿ ಪರಿಶೀಲಿಸುವ ಬರೆಹಗಾರರು ಆಯಾ ಶಿಸ್ತುಗಳಿಂದಲೂ ಮೂಡಿಬಂದಿಲ್ಲ. ಸಾಹಿತ್ಯದ ವಿದ್ಯಾರ್ಥಿಗಳೂ ಅಂಥ “ಎಕ್ಸ್ಕ್ಯೂಸಿವ್” ಅಸ್ತಿತ್ವವನ್ನು ಅಪೇಕ್ಷಿಸಿಲ್ಲ. ಹೀಗಾಗಿ ಕನ್ನಡದ ಸಂದರ್ಭದಲ್ಲಿ ಮನಶ್ಯಾಸ್ತ್ರೀಯ ವಿಮರ್ಶಕ, ಆರ್ಕಿಟೈಪಲ್ ವಿಮರ್ಶಕ, ಸಮಾಜಶಾಸ್ತ್ರೀಯ ವಿಮರ್ಶಕ ಮುಂತಾದ ವಿಶೇಷಣಗಳಿಗೆ ಹೆಚ್ಚಿನ ಅರ್ಥವಿಲ್ಲ. ಬದಲಾಗಿ ಆಶಯಗಳ ನೆಲೆಯಿಂದಲೇ ಹೊರಡುವ, ಸಮಾಜವಾದೀ ವಿಮರ್ಶಕ, ಸ್ತ್ರೀವಾದೀ ವಿಮರ್ಶಕಿ ಮುಂತಾದ ವಿವರಣೆಗಳು ಹೆಚ್ಚು ಉಪಯುಕ್ತವಾಗಬಹುದು. ಪಾಶ್ಚಾತ್ಯ ವಿಮರ್ಶೆಯ ಸನ್ನಿವೇಶದಲ್ಲಿ ದಶಕಗಳ ಕಾಲ ಬೆಳೆದುಬಂದಿರುವ ವಿಧಾನಗಳನ್ನು ಬಿಡಿಯಾಗಿ ಇಲ್ಲವೇ ಮಿಸಳಭಾಜಿಯಾಗಿ ತೆಗೆದುಕೊಂಡು ಮಾಡಿದ ಅವಸರದ ಅಡಿಗೆಗಳಿಗೆ ಅಲ್ಪಾಯುಷ್ಯ ಸಹಜವೇ ತಾನೇ? ನಮ್ಮ ವಿಮರ್ಶೆ, ರೂಪನಿಷ್ಠ ವಿಮರ್ಶೆ, ಪ್ರಾಯೋಗಿಕ ವಿಮರ್ಶೆ ಮುಂತಾದ ನವ್ಯರ ಪರಿಕಲ್ಪನೆಗಳೂ, ಕ್ರಮೇಣ ಅವರಿಂದಲೇ ಕಡೆಗಣ್ಣಿನ ಮರ್ಯಾದೆ ಪಡೆದುದನ್ನು ನಾವು ನೋಡಿ ಬಲ್ಲೆವು. ಹಾಗೆಂದು ಅವೆಲ್ಲ ಅನುಪಯುಕ್ತವೆಂಬ ತೀರ್ಮಾನವೂ ಸರಿಯಲ್ಲ. ಹಾಗೆಯೇ “ಸಾಹಿತ್ಯಕೃತಿ’ಯೆನ್ನುವುದು, ವಾಚಕನಲ್ಲಿ “ಭಾಷಿಕಪಠ್ಯ’ವು ಮೈದಳೆಯಬಹುದಾದ ಅನಂತ ಸಾಧ್ಯತೆಗಳಲ್ಲಿ ಒಂದು ಎಂದು ತಿಳಿದು ಯಾವುದೇ ಬಗೆಯ ವಿಮರ್ಶೆಯ ಸಾಧ್ಯತೆ ಹಾಗೂ ಅಗತ್ಯಗಳನ್ನು ಪ್ರಶ್ನಿಸುವ ಸಿನಿಕ ನಿಲುವುಗಳನ್ನೂ ಕೆಲವರು ತಳೆದಿದ್ದಾರೆ. ಕೃತಿಗೆ ಇರುವುದು “ಒಂದು ಅರ್ಥವಲ್ಲ” ಎನ್ನುವ ಮಾತು ನಿಜ. ಆದರೆ ಅದು ದಾರವಿಲ್ಲದ ಗಾಳಿಪಟದಂತೆ,ಯಾವ ಅರ್ಥಕ್ಕೆ ಬೇಕಾದರೂ ಒಗ್ಗಿಬಿಡುವುದಿಲ್ಲ. ಅನೇಕ “ವ್ಯಾಖ್ಯಾನ ಸಾಧ್ಯತೆ”ಗಳ ಅಸ್ತಿತ್ವವನ್ನೇ ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ನಿರ್ದಿಷ್ಟ ವ್ಯಾಖ್ಯಾನಗಳೂ ಕೂಡ ಸಾಂಸ್ಕೃತಿಕ ಸನ್ನಿವೇಶದ ಫಲಿತಗಳೇ ಆಗಿರುವುದರಿಂದ ಅವುಗಳ ವಿಶ್ಲೇಷಣೆಗೂ ಅನನ್ಯವಾದ ಮಹತ್ವವಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಾಹಿತ್ಯ ವಿಮರ್ಶೆಯು ಸಾಹಿತ್ಯ ಕೃತಿಗಳ ಹಾಗೂ ತನಗಿಂತ ಹಿಂದೆ ಬಂದ ವಿಮರ್ಶೆಯ ಸಾಂಸ್ಕೃತಿಕ ವಿಶ್ಲೇಷಣೆಯಾಗಿರುವಂತೆಯೇ ಮುಂದೆ ಬರುವ ವಿಮರ್ಶೆಗೆ ಸ್ವತಃ ತಾನೇ ಸಂಸ್ಕೃತಿಪಠ್ಯವಾಗಿ ಬಿಡುತ್ತದೆ. ಆದ್ದರಿಂದಲೇ ವಿಮರ್ಶೆಯ ಬಗ್ಗೆ ನಮಗಿರುವ ಅನ್ನಿಸಿಕೆಗಳು ಬದಲಾಗಬಹುದಾದರೂ ಅದು ಸಾರಾಸಗಟಾಗಿ ಅನಗತ್ಯವೆಂಬ ನಿಲುವನ್ನು ತಳೆಯುವುದು ಸರಿಯಲ್ಲ(ಶತಮಾನದ ಸಾಹಿತ್ಯ ವಿಮರ್ಶೆ, ಕೃತಿಯ ಪ್ರಸ್ತಾವನೆಯಲ್ಲಿ, 2001,ಪುಟ 29) ಎಂಬ ಮಾತು ಕನ್ನಡ ವಿಮರ್ಶೆಯ ಹೆಜ್ಜೆ ಹಾದಿಗಳ ಅವಲೋಕನವೂ ಆಗಿದೆ.
ವಿಮರ್ಶೆ ಅನವರತ
ಸಾಹಿತ್ಯಕ್ಕೂ ವಿಮರ್ಶೆಗೂ ಅವಿನಾಭಾವ ಸಂಬಂಧವಿದೆ. ವಿಮರ್ಶೆಗೆ ಭವಿಷ್ಯವಿದೆಯೇ? ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ. ‘The Future of Criticism’ ಎಂಬ ತನ್ನ ಲೇಖನದಲ್ಲಿ ಎಡ್ವರ್ಡ್ ಸೈದ್ ಈ ಪ್ರಶ್ನೆಯನ್ನು ಚರ್ಚಿಸಿದ್ದಾನೆ. ವಿಮರ್ಶೆಯ ಸ್ವರೂಪ ಬದಲಾಗುವ ಆವಶ್ಯಕತೆಯನ್ನು ಸ್ಟೆದ್ ಪ್ರತಿಪಾದಿಸುತ್ತಾನಾದರೂ ಅದಕ್ಕೆ ಭವಿಷ್ಯವಿದೆಯೆಂದೇ ಹೇಳುತ್ತಾನೆ. ಅವನ ಭರವಸೆಗೆ ಎರಡು ಕಾರಣಗಳಿವೆ: ಮೊದಲನೆಯದು, ಆಕರಗಳ ಶೋಧ ಹಾಗೂ ಅರ್ಥಗಳ ಅನ್ವೇಷಣೆ. ಒಂದು ಪಠ್ಯ ಹೇಗೆ ಸೃಷ್ಟಿಯಾಗುತ್ತದೆ? ಅದನ್ನು ಓದುವ ಬಗೆ ಯಾವುದು? ಇಂಥ ಪ್ರಶ್ನೆಗಳನ್ನು ವಿಮರ್ಶೆ ಎದುರಿಸುವುದರಿಂದ ಅದು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಲಾರದು. ಎರಡನೆಯದಾಗಿ, ವಿಮರ್ಶೆ ಸಂಸ್ಕೃತಿಗಳ ಸಂವಾದಗಳು, ಸಾಮಾಜಿಕ ಬದಲಾವಣೆ ಇಂಥ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದರಿಂದ ಅದಕ್ಕೆ ಸಾಮಾಜಿಕ ಪ್ರಸ್ತುತತೆಯೂ ಇದೆ( ಆಮೂರ,ಆಧುನಿಕ ಕನ್ನಡ ವಿಮರ್ಶೆ, 2008,ಪುಟ 4)ಈ ಇಲ್ಲ ಕಾರಣಗಳಿಂದ ಸಾಹಿತ್ಯದಲ್ಲಿ ವಿಮರ್ಶೆಗೆ ಮಹತ್ವ ಇದ್ದೇ ಇರುತ್ತದೆ ಎನ್ನಬಹುದು.
ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿಯುಳ್ಳವರು ಓದಲೇಬೇಕಾದ ಕಳೆದ ಮೂರು ದಶಕಗಳಲ್ಲಿ ಪ್ರಕಟವಾದ ಕೆಲವು ಉತ್ತಮ ಕನ್ನಡ ವಿಮರ್ಶಾ ಕೃತಿಗಳು :
1) ಎಚ್.ಎಸ್.ರಾಘವೇಂದ್ರ ರಾವ್, ಹಾಡೆ ಹಾದಿಯ ತೋರಿತು, 1995
2) ಕೀರ್ತಿನಾಥ ಕುರ್ತಕೋಟಿ, ಕನ್ನಡ ಸಾಹಿತ್ಯ ಸಂಗಾತಿ, 1995
3) ಡಿ. ಆರ್. ನಾಗರಾಜ್,ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ,1999
4)ಜಿ.ಎಸ್.ಶಿವರುದ್ರಪ್ಪ,ಕುವೆಂಪು ಪುನರಾಲೋಕನ, 2005
5)ಜಿ.ಎಸ್.ಅಮೂರ,ಕನ್ನಡ ಕಥನ ಸಾಹಿತ್ಯ ಕಾದಂಬರಿ,1994
6)ಕೆ,ವಿ.ನಾರಾಯಣ್.ಬೇರು ಕಾಂಡ ಚಿಗುರು.1997
7) ಬರಗೂರು ರಾಮಚಂದ್ರಪ್ಪ, ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ,2001
8)ಸಿ.ಎನ್.ರಾಮಚಂದ್ರನ್, ಪರಂಪರೆ ಪ್ರತಿರೋಧ,2002
9)ಮಲ್ಲೇಪುರಂ.ಜಿ, ವೆಂಕಟೇಶ್,ಅರಿವಿನ ಕಥನ 2014 10)ಗಿರಡ್ಡಿಗೋವಿಂದರಾಜ, ನವ್ಯ ವಿಮರ್ಶೆ,1995
11) ಟಿ. ಪಿ.ಅಶೋಕ, ಕಥನ ಪ್ರೀತಿ, 2013
12) ನರಹಳ್ಳಿ ಬಾಲಸುಬ್ರಹ್ಮಣ್ಯ, ಬಾ ಕುವೆಂಪು ದರ್ಶನಕೆ, 2019
13)ಎಂ. ಎಸ್. ಆಶಾದೇವಿ,ನಾರಿ ಕೇಳಾ,2015
14)ರಹಮತ್ ತರೀಕೆರೆ, ಕತ್ತಿಯಂಚಿನ ದಾರಿ,2017
15)ಕೆ.ಸತ್ಯನಾರಾಯಣ, ಖಾಸಗಿ ವಿಮರ್ಶೆ, 2009
16)ಜನಾರ್ದನ ಭಟ್, ಕನ್ನಡ ಕಾದಂಬರಿ ಮಾಲೆ , 2024
17)ಜಿ. ಎಂ. ಹೆಗಡೆ, ಕನ್ನಡ ವಿಮರ್ಶೆಗೆ ಮಾಸ್ತಿ ಅವರ ಕೊಡುಗೆ, 1999
18) ರಾಜೇಂದ್ರ ಚೆನ್ನಿ, ಅಧ್ಯಯನ,2001
19) ಎಸ್. ಆರ್, ವಿಜಯಶಂಕರ,ಅಪ್ರಮೇಯ,2016
20) ಸುಮಿತ್ರಾ ಬಾಯಿ, ಸ್ತ್ರೀ ವಾದ ಒಂದು ಅವಲೋಕನ,1998
21) ಎಚ್. ಎಸ್ ಶ್ರೀಮತಿ, ಸ್ತ್ರೀ ವಾದ, ಪದ ವಿವರಣ ಕೋಶ, 2018
22)ಕೇಶವ ಶರ್ಮ,ಮೂಡು ಪಡು, 2013
23)ಎಲ್. ಎಸ್. ಶೇಷಗಿರಿ ರಾವ್, ಸಾಹಿತ್ಯ ಸಂವಾದ, 2017
3 thoughts on “ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರವಾಗಿ “ವಿಮರ್ಶೆ “”
ವಿಮರ್ಶೆಯ ಕುರಿತಾಗಿ ಹಲವು ಮಾಹಿತಿಗಳನ್ನು ತುಂಬ ಅರ್ಥಪೂರ್ಣವಾಗಿ, ಹದ ತಪ್ಪದಂತೆ ಹೆಣೆದ ಲೇಖನ. ಬರಹಗಾರರಿಗೆ ಧನ್ಯವಾದಗಳು
ವಿಮರ್ಶೆ ಕುರಿತು ತುಂಬಾ ಅರ್ಥ ಪೂರ್ಣ ಲೇಖನಗಳಿವೆ
ಒಳ್ಳೆಯ ಲೇಖನ.ಆದರೆ ವಿಮರ್ಶೆಗೆ ಹೊಸ ಆಯಾಮ ಒದಗಿಸಿದ ಪ್ರೊ. ಜಿ.ಎಚ್ ನಾಯಕರು ವಿಮರ್ಶಾ ಕ್ಷೇತ್ರದ ಅಗ್ರಗಣ್ಯ ಹೆಸರು. ಅವರ ಕೃತಿಗಳ ಉಲ್ಲೇಖ ಇದ್ದಿದ್ದರೆ ಲೇಖನದ ಘನತನ ಹೆಚ್ಚುತ್ತಿತ್ತು.