ಯುವ ವಿಮರ್ಶಕ, ಲಲಿತ ಪ್ರಬಂಧಕಾರ ಮತ್ತು ಸಂಘಟಕರಾದ ವಿಕಾಸ ಹೊಸಮನಿ ಅವರ ಎರಡನೆಯ ಕೃತಿ ‘ಮಿಂಚಿನ ಬಳ್ಳಿ’. ಈ ಲಲಿತ ಪ್ರಬಂಧ ಸಂಕಲನದಲ್ಲಿ ಒಟ್ಟು ಹದಿನೈದು ಪ್ರಬಂಧಗಳಲ್ಲಿ ಪ್ರಬಂಧಗಳಿವೆ. ಅವರ ವಿಸ್ತಾರವಾದ ಓದು ಮತ್ತು ವೈವಿಧ್ಯಮಯ ಆಸಕ್ತಿ ಈ ಪ್ರಬಂಧಗಳಲ್ಲಿ ಎದ್ದು ಕಾಣುತ್ತದೆ. ‘ಚಹದ ಪ್ರಸಂಗಗಳು’, ‘ಉತ್ತರ ಕರ್ನಾಟಕದ ಮಂದಿ’, ‘ಸಂಪನ್ನರು’, ‘ಸಹೃದಯಿ’, ‘ಮುನ್ನುಡಿಯ ವೃತ್ತಾಂತ’, ‘ಮೊದಲ ಪ್ರೇಮ’, ‘ಪತ್ರಗಳು’, ಪ್ರಶಸ್ತಿಗಳು’, ‘ಅಭಿಮಾನ’, ‘ಉಪದೇಶ’, ‘ಆತ್ಮಾವಲೋಕನ ಸಭೆ’, ‘ಹೆಸರಿನಲ್ಲೇನಿದೆ?’, ‘ಸಿನಿಮಾ ಟಾಕೀಸುಗಳು’, ‘ಮಲಯಾಳಿಗಳು’ ಮತ್ತು ‘ಬುದ್ಧಿಜೀವಿಗಳು’ ಎಂಬ ಹದಿನೈದು ಪ್ರಬಂಧಗಳಲ್ಲಿ ವಿಕಾಸ ಅವರು ಹತ್ತು ಹಲವು ವಿಷಯಗಳ ಕುರಿತು ಸ್ವಾರಸ್ಯಕರವಾಗಿ ಮತ್ತು ತಮಾಷೆಯಾಗಿ ಬರೆದಿದ್ದಾರೆ.
‘ಚಹದ ಪ್ರಸಂಗಗಳು’ ಎಂಬ ಮೊದಲ ಪ್ರಬಂಧವೇ ಓದುಗರನ್ನು ಆವರಿಸಿಕೊಂಡು ಬಿಡುತ್ತದೆ. ಸರ್ವಜನಪ್ರಿಯವಾದ ಚಹದ ಸುತ್ತ ಬೆಳೆಯುವ ಈ ಪ್ರಬಂಧ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಚಹದ ವಿಧಗಳು, ಚಹದಂಗಡಿಯ ಚಿತ್ರ – ವಿಚಿತ್ರ ಹೆಸರುಗಳು, ಬಾಗೇವಾಡಿ ಭವಾನಿ, ಶ್ರೀಧರ – ಶ್ರೀಕಾಂತರ ಪ್ರಸಂಗ, ನಾಗರಾಜನ ಪಿಎಚ್.ಡಿ. ಪ್ರಸಂಗ, ಲೇಖಕರ ಮೊದಲ ಆಕರ್ಷಣೆಯಾದ ಉತ್ತರ ಕನ್ನಡದ ಚೆಲುವೆ, ಬೆಂಗಳೂರಿನ ಪಿಎಚ್.ಡಿ. ಹುಡುಗಿಯೊಂದಿಗಿನ ವಿರಸ, ವಿನೋದನ ಕನ್ಯಾ ನೋಡುವ ಪ್ರಸಂಗ ಮತ್ತು ಹಾಸನದ ಡಿಟ್ಟೋ ಶಿಲ್ಪಾಳ ಘಟನೆಗಳು ತುಂಬ ಚೆನ್ನಾಗಿವೆ.
‘ಉತ್ತರ ಕರ್ನಾಟಕದ ಮಂದಿ’ಯಂತೂ ಒಂದು ಸೊಗಸಾದ ಎಪಿಲಾಗಿನಂತಿದೆ. ಮೈಸೂರಿನವಳಾದ ನನಗೆ ಉತ್ತರ ಕರ್ನಾಟಕದ ಗೆಳತಿಯರೇ ಹೆಚ್ಚು. ಅತ್ಯಂತ ಹೃದಯವಂತರಾದ ಆ ಜನ ಬಿಚ್ಚು ಮನಸ್ಸಿನವರು. ತಾವಾಗಿಯೇ ಮೇಲೆ ಬಿದ್ದು ಮಾತನಾಡಿಸಿ, ಸ್ನೇಹ ಮಾಡಿಕೊಳ್ಳುವವರು. ಸ್ವತಃ ಉತ್ತರ ಕರ್ನಾಟಕದ ಹುಡುಗನಾದ ಲೇಖಕರು ತಮ್ಮ ಪ್ರದೇಶ, ಸಂಸ್ಕೃತಿ ಮತ್ತು ಜನಜೀವನದ ಕುರಿತು ವಸ್ತುನಿಷ್ಠವಾಗಿ ಬರೆದಿದ್ದಾರೆ. ಸಹೃದಯಿಗಳಾದ ಚಂದ್ರಪ್ಪ, ರಾಮಣ್ಣ, ಅಧಿಕ ಪ್ರಸಂಗಿಗಳಾದ ಕಲ್ಲನಗೌಡ, ವಿರೂಪಾಕ್ಷಿ ಮಾವ ಮುಂತಾದವರ ಪ್ರಸಂಗಗಳು ತುಂಬ ತಮಾಷೆಯಾಗಿವೆ. ಗದುಗಿನ ಮದುವೆ ಮನೆಯಲ್ಲಿ ಸಿಗುವ ಸುಂದರಿ ದೀಪಾಳ ಪ್ರಸಂಗ ರೋಮ್ಯಾಂಟಿಕ್ಕಾಗಿದೆ.
‘ಸಂಪನ್ನರು’ ಒಂದು ವಿಶಿಷ್ಟ ಪ್ರಬಂಧ. ಒಳ್ಳೆಯವರ ಕುರಿತ ವಿಷಯವನ್ನು ಇಟ್ಟುಕೊಂಡು ಚರ್ಚಿಸಿರುವ ಈ ಪ್ರಬಂಧದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳಿವೆ. ಇಬ್ಬರು ಹೆಂಡಿರ ಗಂಡನಾದ ಬಸವಣ್ಣಿ ಮಾಸ್ತರನ ಕಥೆ, ಕಲ್ಗುಡಿಯ ರಾಜಕಾರಣ ಪ್ರವೇಶ, ಕುಮಾರನ ಆನ್ಲೈನ್ ಪ್ರೇಮ ಪ್ರಕರಣ, ಬೆರಳೆಣಿಕೆಯಷ್ಟು ಕೃತಿಗಳನ್ನು ಬರೆದು ದೊಡ್ಡ ದೊಡ್ಡ ಪ್ರಶಸ್ತಿ ಬೇಕೆಂಬ ಮೈಲಾರಿಯವರ ಪ್ರಶಸ್ತಿಯ ಹಪಾಹಪಿಯ ಕುರಿತು ವಿಕಾಸ ಅವರು ಸೊಗಸಾಗಿ ಬರೆದಿದ್ದಾರೆ.
‘ಸಹೃದಯಿ’ ಪ್ರಬಂಧದಲ್ಲಿ ಲೇಖಕರು ಸಮಕಾಲೀನ ಕನ್ನಡ ಸಾಹಿತ್ಯ ಲೋಕದಲ್ಲಿರುವ ಲೇಖಕ/ಕಿಯರ ಗುಣ, ಸ್ವಭಾವವನ್ನು ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ. ನಿಸಾರ್ ಅಹಮದ್ ಅವರನ್ನು ಕೆ. ಎಸ್. ಆರ್. ಟಿ. ಸಿ. ಬಸ್ ಡ್ರೈವರ್ ಮತ್ತು ಸು. ರಂ. ಎಕ್ಕುಂಡಿಯವರನ್ನು ಪೋಸ್ಟ್ ಮಾಸ್ಟರ್ ಮಾಡಿದ ಉದಯೋನ್ಮುಖ ಕವಿಗಳ ಅಜ್ಞಾನ ಆಶ್ಚರ್ಯ ಉಂಟು ಮಾಡುತ್ತದೆ. ಈಗ ಎಲ್ಲೆಂದರಲ್ಲಿ ಹೆಚ್ಚಾಗಿರುವ ಕವಿಗೋಷ್ಠಿಗಳ ಪಿಡುಗಿನ ಕುರಿತು ವಿಡಂಬನೆ ಮಾಡಿರುವ ವಿಕಾಸ ಅವರು ಅದನ್ನು ತುಂಬ ನಾಟಕೀಯವಾಗಿ ಪ್ರಸ್ತುತ ಪಡಿಸಿದ್ದಾರೆ.
‘ಮುನ್ನುಡಿಯ ವೃತ್ತಾಂತ’ ಸಾಹಿತ್ಯದಲ್ಲಿ ಮುನ್ನುಡಿಗಿರುವ ಸ್ಥಾನ – ಮಾನದ ಕುರಿತು ವಿವರವಾಗಿ ತಿಳಿಸುವ ಪ್ರಬಂಧ. ಸಾಹಿತ್ಯ ಲೋಕದ ದಿಗ್ಗಜರಾದ ಬೇಂದ್ರೆ, ಕುವೆಂಪು, ಅಡಿಗ, ಕುರ್ತಕೋಟಿ, ಅನಂತಮೂರ್ತಿ, ಗಿರಡ್ಡಿ ಸೇರಿದಂತೆ ವಿವಿಧ ಲೇಖಕರ ಮುನ್ನುಡಿ ಬರೆಯುವ ರೀತಿಯ ಕುರಿತು ಹೊಸ ಮಾಹಿತಿ ನೀಡುತ್ತದೆ. ಮುನ್ನುಡಿಯ ಹಿಂದಿರುವ ಅನೇಕ ಸ್ವಾರಸ್ಯಕರ ಘಟನೆಗಳು ಓದುಗರಿಗೆ ವಿಶೇಷ ಮಾಹಿತಿ ನೀಡುತ್ತವೆ.
‘ಮೊದಲ ಪ್ರೇಮ’ ಲೇಖಕರ ರೋಮ್ಯಾಂಟಿಕ್ ಮನೋಭಾವವನ್ನು ಅನಾವರಣಗೊಳಿಸಿದ ವಿಶಿಷ್ಟ ಪ್ರಬಂಧ. ಭೀಮ – ದ್ರೌಪದಿ, ಡಾಂಟೆ – ಬಿಯಾಟ್ರಿಸ್, ಪೆಟ್ರಾರ್ಕ್ – ಲಾರಾ ಸೇರಿದಂತೆ ಜಗದ್ವಿಖ್ಯಾತ ಪ್ರೇಮಭಂಗದ ಕಥೆಗಳನ್ನು ಹೃದಯಂಗಮವಾಗಿ ನಿರೂಪಿಸಿದ್ದಾರೆ. ದೃಷ್ಟಿ, ಸ್ಪರ್ಶ ಮತ್ತು ಅನುಭವ ಹೀಗೆ ಮೂರು ಹಂತದ ಪ್ರೇಮದ ಕುರಿತು ಹೇಳುವ ಲೇಖಕರು ಈ ವಿಷಯದಲ್ಲಿ ತುಂಬ ಆಳವಾಗಿ ತಿಳಿದುಕೊಂಡಿದ್ದಾರೆ.
‘ಪತ್ರಗಳು’ ಪ್ರಬಂಧ ಸಾಹಿತ್ಯದಲ್ಲಿ ಪತ್ರಗಳ ಮಹತ್ವ ಎಂಥದ್ದು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದೆ. ಬೇಂದ್ರೆ – ಶಂಬಾ ಅವರ ಜಗಳ, ಸಾಹಿತ್ಯ ಅಕಾಡೆಮಿಗೆ ಪತ್ರ ಬರೆದು ಸಣ್ಣತನ ತೋರಿಸಿದ ಬುದ್ಧಿಜೀವಿಗಳ ಆಕ್ಷೇಪಾರ್ಹ ವರ್ತನೆ, ಮಂಜುಮಾಮಾ – ಸ್ವಾತಿಯ ಪ್ರೇಮಪತ್ರ ಪ್ರಕರಣ ಮತ್ತು ಅನಾಮಧೇಯ ಪತ್ರ ನಂಬಿಕೊಂಡು ಬಳ್ಳಾರಿಗೆ ಹೋಗಿ ಅವಮಾನಿತನಾದ ಹಾಸನ ದೇಶದ ಕವಿಯ ಪ್ರಸಂಗಗಳು ನಗೆಯುಕ್ಕಿಸುತ್ತವೆ.
‘ಪ್ರಶಸ್ತಿಗಳು’ ಸಮಕಾಲೀನ ಕನ್ನಡ ಸಾಹಿತ್ಯ ಲೋಕದ ದುಸ್ಥಿತಿಯನ್ನು ವಿಡಂಬನೆ ಮಾಡಿದೆ. ವಿಕಾಸ ಅವರು ಕೆಲವು ಸಾಹಿತಿಗಳಿಗಿರುವ ಪ್ರಶಸ್ತಿಯ ಹಪಾಹಪಿಯನ್ನು ಕುರಿತು ತೀವ್ರವಾಗಿ ಲೇವಡಿ ಮಾಡಿ ಬರೆದಿದ್ದಾರೆ. ಪ್ರಶಸ್ತಿಗಳ ಹಿಂದೆ ಎಷ್ಟೆಲ್ಲ ಕಥೆಗಳಿವೆ ಎಂದು ಗೊತ್ತಾಗಿ ಸಾಮಾನ್ಯ ಓದುಗರು ಆಶ್ಚರ್ಯ ಪಡುವಷ್ಟು ಮಾಹಿತಿ ಕೊಟ್ಟಿರುವ ಲೇಖಕರು ಭ್ರಷ್ಟ ಸಾಹಿತಿಗಳ ಮುಖವಾಡವನ್ನು ಕಳಚಿ ನಿಜ ಸ್ವರೂಪವನ್ನು ತೋರಿಸಿದ್ದಾರೆ.
‘ಅಭಿಮಾನ’ ಮತ್ತು ‘ಉಪದೇಶ’ ಮನಸ್ಸನ್ನು ಹಗುರಗೊಳಿಸುವ ಪ್ರಬಂಧಗಳು. ಮಲಯಾಳಿ ಮತ್ತು ತಮಿಳು ಮಕ್ಕಳ ಅತಿರೇಕದ ಅಭಿಮಾನ, ತಮ್ಮ ಸಿನಿಮಾ ಮಾತ್ರ ಶ್ರೇಷ್ಠ ಉಳಿದವರದ್ದು ಕನಿಷ್ಠ ಎಂಬ ಭ್ರಮೆ, ರೇಷ್ಮೆ ಸೀರೆಯ ಕೆಂಡಸಂಪಿಗೆ ಕವಯತ್ರಿಯ ಅತಿರೇಕದ ವರ್ತನೆ, ಕನ್ನಡದ ಬಗ್ಗೆ ಕನ್ನಡಿಗರೇ ತೋರಿಸುವ ಅಲಕ್ಷ್ಯ, ಉಪದೇಶದಿಂದಾಗುವ ಅನಾಹುತಗಳು, ಮಂಜುಮಾಮನ ಉಚಿತ ಉಪದೇಶ, ನಾಗರಾಜನ ಪ್ರೇಮಭಂಗ ಮಾಡಿದ ಚಂದ್ರಪ್ಪ, ಮೂರು ಮದುವೆಯಾದ ತೆಲುಗು ನಟ ಅಭಿಮಾನಿಗಳು ತನ್ನಂತಾಗಬಾರದೆಂದು ನೀಡುವ ಉಪದೇಶ ತುಂಬ ತಮಾಷೆಯಾಗಿವೆ.
‘ಆತ್ಮಾವಲೋಕನ ಸಭೆ’ ವಿಕಾಸ ಅವರ ಅದ್ಭುತ ಕಲ್ಪನಾ ಸಾಮರ್ಥ್ಯವನ್ನು ತೋರಿಸುವ ಪ್ರಬಂಧ. ವಿಶ್ವಕಪ್ ಸೋಲನ್ನು ಹೀಗೂ ವಿಶ್ಲೇಷಣೆ ಮಾಡಬಹುದೇ ಎಂದು ಅಚ್ಚರಿಯುಂಟು ಮಾಡುವಂಥ ಪ್ರಬಂಧ. ಎರಡೆರಡು ಬಾರಿ ಆಸ್ಟ್ರೇಲಿಯ ತಂಡದಿಂದ ಸೋತು ನಿರಾಶೆ ಅನುಭವಿಸಿದ ಭಾರತ ತಂಡದ ಸೋಲಿನ ಕಾರಣಗಳನ್ನು ತಮಾಷೆಯಾಗಿ ಮತ್ತು ತಾರ್ಕಿಕವಾಗಿ ವಿಶ್ಲೇಷಣೆ ಮಾಡಿರುವ ಪ್ರಬಂಧ ತುಂಬ ಸೊಗಸಾಗಿದೆ.
‘ಹೆಸರಿನಲ್ಲೇನಿದೆ?’ ನಾಮಪುರಾಣವನ್ನು ಕುರಿತು ಚರ್ಚಿಸುತ್ತದೆ. ಹೆಸರುಗಳ ಹಿಂದಿರುವ ಕಥೆಗಳು, ಹೆಸರಿನಿಂದಾಗುವ ಅವಾಂತರಗಳು ಒಂದೆರಡಲ್ಲ. ಅಣ್ಣಪ್ಪ (ಕುಮಾರ್) ಮತ್ತು ಮೇಘಾಳ ಮದುವೆ, ಶ್ರೀಕಾರದಿಂದ ಆರಂಭ ಅಥವಾ ಅಂತ್ಯವಾಗುವ ಕರಾವಳಿ ಹುಡುಗಿಯರ ಹೆಸರುಗಳು, ಹೆಸರಿಗೂ, ಸ್ವಭಾವಕ್ಕೂ ಸಂಬಂಧವೇ ಇರದ ಜನ ಸೇರಿದಂತೆ ಹೆಸರಿನ ಸುತ್ತ ನಡೆದ ಪ್ರಸಂಗಗಳು ನಗು ತರಿಸುತ್ತವೆ.
‘ಸಿನಿಮಾ ಟಾಕೀಸುಗಳು’ ಒಂದು ಕಾಲದಲ್ಲಿ ಜನಸಮೂಹದ ಪ್ರಜ್ಞೆಯ ಒಂದು ಭಾಗವಾಗಿದ್ದ ಸಿನಿಮಾ ಮಂದಿರಗಳು ತೆರೆಯ ಮರೆಗೆ ಸರಿಯುತ್ತಿರುವುದನ್ನು ವಿಷಾದದಿಂದ ದಾಖಲಿಸುತ್ತದೆ. ವಯಸ್ಕರ ಚಿತ್ರಗಳ ಕುರಿತ ವಸ್ತ್ರದ ಮಾಸ್ತರ ಮತ್ತು ಉಡಾಳ ರುದ್ರನ ಪ್ರಸಂಗ ನಗೆಯುಕ್ಕಿಸಿದರೆ, ಹೈಸ್ಕೂಲ್ ಹುಡುಗ – ಹುಡುಗಿಯರು ಕೂಡ ಅಶ್ಲೀಲ ಚಿತ್ರಗಳನ್ನು ನೋಡುವ ವಿಷಯ ಗಾಬರಿ ಹುಟ್ಟಿಸುತ್ತದೆ.
‘ಬುದ್ಧಿಜೀವಿಗಳು’ ಅತ್ಯಂತ ಮಾಹಿತಿಯುಕ್ತ ಪ್ರಬಂಧ. ಲೇಖಕರು ಈ ಪ್ರಬಂಧದಲ್ಲಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಲಂಪಟತನ, ಭ್ರಷ್ಟಾಚಾರ, ಜಾತೀಯತೆ ಮತ್ತು ಕ್ಷುಲ್ಲಕ ರಾಜಕಾರಣ ಮಾಡುತ್ತ ಎಲ್ಲವನ್ನೂ ಹಾಳು ಮಾಡುತ್ತಿರುವ ಸುಶಿಕ್ಷಿತರೆಂದುಕೊಂಡವರ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಕರಾವಳಿ ವಿವಿಯ ವಿದ್ಯಾರ್ಥಿಯೊಬ್ಬಳ ಕಥೆ ಗಮನಾರ್ಹ. ಮೂವತ್ತು ಕಳೆದರೂ ಕೂಡ ಅತ್ತ ಸಂಶೋಧನೆಯೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ, ಅತ್ತ ಸಂಗೀತವೂ ಇಲ್ಲ, ಇತ್ತ ಮದುವೆಯೂ ಇಲ್ಲ ಎಂಬಂತಹ ಸ್ಥಿತಿ ಮರುಕ ಹುಟ್ಟಿಸುತ್ತದೆ.
‘ಮಲಯಾಳಿಗಳು’ ನಮ್ಮ ಪಕ್ಕದ ರಾಜ್ಯದವರಾದ ಕೇರಳಿಗರ ಗುಣ, ಸ್ವಭಾವವನ್ನು ತುಂಬ ಚೆನ್ನಾಗಿ ಮತ್ತು ಸರಿಯಾಗಿ ವಿಶ್ಲೇಷಣೆ ಮಾಡಿರುವ ಪ್ರಬಂಧ. ಲೇಖಕರು ಮಲಯಾಳಿಗಳನ್ನು ತುಂಬ ಹತ್ತಿರದಿಂದ, ಸೂಕ್ಷ್ಮವಾಗಿ ಅವಲೋಕಿಸಿ ಬರೆದಿರುವುದು ಎದ್ದು 9ಕಾಣುತ್ತದೆ. ತಕ್ಕಮಟ್ಟಿಗೆ ಮಲಯಾಳಿ ಗೆಳತಿಯರಿರುವ ನನಗೆ ಅವರ ಬಗ್ಗೆ ಚೆನ್ನಾಗಿ ಗೊತ್ತು. ಲೇಖಕರು ಹೇಳಿರುವ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಮಲಯಾಳಿ ಹುಡುಗಿಯರ ಕುರಿತು ಬರೆಯುವಾಗ ಮಾತ್ರ ಲೇಖಕರು ಕವಿಯಂತಾಗಿಬಿಡುತ್ತಾರೆ! ಮಲಯಾಳಿ ಸುಂದರಿಯರನ್ನು ಸ್ವಲ್ಪ ಹೆಚ್ಚು ಹೊಗಳುತ್ತಾರೆ ಎಂಬ ಸಂಶಯ ಓದುಗರಿಗೆ ಬಾರದಿರದು!
‘ಮಿಂಚಿನ ಬಳ್ಳಿ’ ಕೃತಿ ಒಂದು ಒಳ್ಳೆಯ ಪ್ರಬಂಧ ಸಂಕಲನ. ಪಂಡಿತ, ಪಾಮರರಾದಿಯಾಗಿ ಯಾರೂ ಓದಿ ಸಂತೋಷ ಪಡಬಹುದಾದ ಉತ್ತಮ ಪ್ರಬಂಧಗಳು ಇಲ್ಲಿವೆ. ಹಿರಿಯ ಲೇಖಕರಾದ ಕೆ. ಸತ್ಯನಾರಾಯಣ ಅವರು ತಮ್ಮ ಮುನ್ನುಡಿಯಲ್ಲಿ ವಿಕಾಸ ಅವರ ಬರವಣಿಗೆಯ ಶಕ್ತಿಯನ್ನು ಗುರುತಿಸಿದ್ದಾರೆ. ಪ್ರಾಜ್ಞ ಓದುಗರಾದ ಕುಮಾರಿ ಭವ್ಯ ಭಟ್ ಅವರು ಬ್ಲರ್ಬಿನಲ್ಲಿ ವಿಕಾಸ ಅವರ ಪ್ರಬಂಧಗಳ ಕುರಿತು ಆಡಿರುವ ಹೊಗಳಿಕೆಯ ಮಾತುಗಳು ನಿಜ ಎಂಬುದನ್ನು ಪುಸ್ತಕ ಓದಿದ ನಂತರ ಓದುಗರು ಖಂಡಿತ ಒಪ್ಪುತ್ತಾರೆ.
ಹೊಸ ತಲೆಮಾರಿನ ಮಹತ್ವದ ಲೇಖಕರಲ್ಲೊಬ್ಬರಾದ ವಿಕಾಸ ಹೊಸಮನಿ ಪ್ರತಿಭಾನ್ವಿತ ಸಾಹಿತಿ, ಸಮರ್ಥ ಸಂಘಟಕ ಮತ್ತು ಸಹೃದಯಿ ವ್ಯಕ್ತಿ. ಸಾಹಿತ್ಯ, ಸಂಘಟನೆಯ ಮೂಲಕ ತಾವು ಬೆಳೆಯುವುದರ ಜೊತೆಗೆ ತಮ್ಮೊಂದಿಗೆ ಇತರರನ್ನು ಸಹ ಬೆಳೆಸುವ ಅಪರೂಪದ ಗುಣವುಳ್ಳ ವ್ಯಕ್ತಿ. ಮೂವತ್ತರ ಹರೆಯದ ಈ ತರುಣ ಲೇಖಕರಲ್ಲಿರುವ ಪ್ರಬುದ್ಧತೆ ಮತ್ತು ಸಹೃದಯತೆ ಎಷ್ಟೋ ಜನ ದೊಡ್ಡ ಲೇಖಕರಲ್ಲಿಲ್ಲ. ‘ಮಿಂಚಿನ ಬಳ್ಳಿ’ಯಂತಹ ಸೊಗಸಾದ ಕೃತಿಯನ್ನು ಕೊಟ್ಟಿರುವ ವಿಕಾಸ ಹೊಸಮನಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು.
2 thoughts on “ವಿಕಾಸ ಹೊಸಮನಿ ಅವರ ‘ಮಿಂಚಿನ ಬಳ್ಳಿ’”
ನಿಜಕ್ಕೂ ಮಿಂಚಿನ ಬಳ್ಳಿಯ ಗೊಂಚಲನ್ನು ಲೇಖಕಿ ಸಮರ್ಥವಾಗಿ ಪರಿಚಯಿಸಿದ್ದಾರೆ.
ವಿಕಾಸ ಹೊಸಮನಿಯ ಬರಹಗಳು ತುಂಬಾ ಸ್ವಾದಿಷ್ಟವಾಗಿರುತ್ತವೆ. ಇಬ್ಬರಿಗೂ ಅಭಿನಂದನೆಗಳು.
.
ಓದುವ ಆಸಕ್ತಿ ಉಂಟು ಮಾಡುವ ಬರೆಹ..
ವಿಕಾಸ್ ನನಗೂ ಸ್ವಲ್ಪ ಮಟ್ಟಿಗೆ ಗೊತ್ತು.ಅವರ ಬಗ್ಗೆ ಇಲ್ಲಿ ಹೇಳಿದುದನ್ನು ನಾನೂ ಅನುಮೋದಿಸುತ್ತೇನೆ.ಬಿಡಿಯಾಗಿ ಅವರ ಒಂದೆರಡು ಪ್ರಬಂಧ ಓದಿದ್ದೇನೆ.ನಿರರ್ಗಳ, ರಸಭರಿತ ಬರೆಹದಿಂದಾಗಿ ಓದು ಒಂದು ಲವಲವಿಕೆಯ ಪಯಣದಂತೆ ಅನಿಸುತ್ತದೆ…
ವಿಕಾಸ ಹೊಸಮನಿಯವರ ಪುಸ್ತಕಕ್ಕೆ ಖಂಡಿತ ಒಳ್ಳೆಯ ಮನ್ನಣೆ ದೊರಕುವ ಭರವಸೆ ನನಗೆ.
ಅವರಿಗೆ ಅಭಿನಂದನೆಗಳು..