ಮೊನ್ನೆ ಬೆಳ್ಳಂಬೆಳಗ್ಗೆ ಮಕ್ಕಳಿಬ್ಬರೂ ಒಬ್ಬರಮೇಲೊಬ್ಬರು ಕೆಸರೆರಚಿಕೊಳ್ಳುವುದನ್ನು ಕೇಳಿ ಮನಸ್ಸು ತುಂಬ ಘಾಸಿಯಾಗಿತ್ತು. ಎಷ್ಟೊಂದು ಅನ್ಯೋನ್ಯವಾಗಿ ಬೆಳೆದ ಮಕ್ಕಳಿವರು. ಮುಂಜಾನೆ ಎದ್ದು ಬಂದಾಗ ಅಮ್ಮನ ಸೆರಗು ಹಿಡಿಯುವುದಕ್ಕೆ ಪೈಪೋಟಿ ನಡೆಸುತ್ತಿದ್ದವರು. ಅದಕ್ಕೇ ಬೆನ್ನಮೇಲಿಂದ ಸೆರಗು ತಂದು ಎಡ-ಬಲದಲ್ಲಿ ಇಬ್ಬರನ್ನೂ ಕುಳ್ಳಿರಿಸಿಕೊಂಡು, ಇಬ್ಬರಿಗೂ ಸೆರಗು ಸಿಗುವಂತೆ ಮಾಡುತ್ತಿದ್ದ ದಿನಗಳು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇವೆ. ವಯಸ್ಸು ಹೇಗೆ ಅವರ ಪಾಲಿಗೆ ಎಲ್ಲವನ್ನೂ ಮರೆಸಿಬಿಟ್ಟಿದೆ, ಎಂಬುದೇ ಅರ್ಥವಾಗುತ್ತಿಲ್ಲ. ಏನೋ ಜೋಕ್ ಮಾಡುತ್ತ ಇಬ್ಬರ ಬಳಿಗೆ ಹೋದೆ. “ಅಮ್ಮ ನೀನು ಸುಮ್ಮನಿರು. ನಿನಗಿದು ಅರ್ಥವಾಗುವುದಿಲ್ಲ” ಎಂದ ದೊಡ್ಡವ. ಸಣ್ಣವ ನನ್ನತ್ತ ನೋಡಿದವನು ಕಣ್ಣಲ್ಲಿ ಕಣ್ಣಿಡಲಾರದೆ, ಮುಖ ತಿರುಗಿಸಿದ. ಎಂಟು ದಿನಗಳ ಮಟ್ಟಿಗೆ ಒಬ್ಬ ಬೆಂಗಳೂರಿಂದ ಬಂದಿದ್ದರೆ, ಮತ್ತೊಬ್ಬ ನೊಯಿಡಾದಿಂದ ಬಂದಿದ್ದ.
“ಸಂದೀಪ, ಹೊಟ್ಟೆಯಲ್ಲೇನೋ ತಳಮಳ ಆಗ್ತಾ ಇದೆ. ತಲೆಯೊಳಗೆ ಹಲವು ಸೂಜಿಗಳಿಂದ ಚುಚ್ಚುತ್ತಿರುವ ಅನುಭವ. ಎಡಗಾಲು ಮೊದಲೇ ಸರಿಯಿಲ್ಲ.” ಇಷ್ಟು ಹೇಳಿದ್ದು ನೆನಪಿದೆ. ಕುಳಿತಿದ್ದವಳು ಅಲ್ಲೇ ಸೋಫಾದಮೇಲೆ ಅಡ್ಡಬಿದ್ದೆನೆಂದು ಅನ್ನಿಸಿತಾದರೂ, ಏನಾಗುತ್ತ್ತಿದೆಯೆಂದು ತಿಳಿಯಲಿಲ್ಲ. ಪ್ರಜ್ಞೆ ಬಂದಿದ್ದು ಆಸ್ಪತ್ರೆಯಲ್ಲಿ. ಎಲ್ಲರೂ ಅತ್ತಿತ್ತ ಓಡುತ್ತಿರುವುದನ್ನು ನೋಡಿ ನನಗೇ ಆಶ್ಚರ್ಯ! ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಇಲ್ಲಿಯ ಎಲ್ಲ ಆಗುಹೋಗುಗಳು ನನಗೆ ಅರ್ಥವಾಗುತ್ತಿವೆ. ಆದರೂ ನಾನೇಕೆ ಮನೆಯಲ್ಲಿರದೆ, ಆಸ್ಪತ್ರೆಯಲ್ಲಿದ್ದೇನೆ. ಅದೂ ಆಸ್ಪತ್ರೆಯ ಸುಸಜ್ಜಿತವಾದ ಕೋಣೆಯೊಂದರಲ್ಲಿ!
ಮಕ್ಕಳೆಡೆಗೆ ನೋಡಿದೆ, ‘ಸುಮ್ಮನಿರು, ಏನೂ ಮಾತಾಡಬೇಡ’, ಎಂಬಂತೆ ಒಬ್ಬ ಅಲ್ಲಿಂದಲೇ ಸನ್ನೆ ಮಾಡಿದ. ಮತ್ತೊಬ್ಬ ಹೊರಗಿನಿಂದ ಆಗಷ್ಟೆ ಒಳಗೆ ಬರುತ್ತಿದ್ದ.
ಆ ಸ್ಕ್ಯಾನ್-ಈ ಸ್ಕ್ಯಾನ್ ಎಂದು ಗಾಲಿಕುರ್ಚಿಯಲ್ಲಿ ಕರೆದುಕೊಂಡು ಹೋದದ್ದೇ ಹೋದದ್ದು. ಹಿಂದೆಂದೂ ಕಾಣದ ಮಶೀನಿನಲ್ಲಿ ಶರೀರವನ್ನು ತೂರಿಸಿದ್ದೇ ತೂರಿಸಿದ್ದು. ಅಂತೂ ಎರಡು ದಿನ ಮುಂಜಾನೆಯಿಂದ ಸಂಜೆಯತನಕ ಇದ್ದೆಲ್ಲ ಮಶೀನುಗಳಲ್ಲಿ ಒಳಹೊಕ್ಕು ಹೊರಬಂದು, ಸಿಕ್ಕ ಎಲ್ಲ ರಿಪೋರ್ಟ್ ಹಿಡಿದುಕೊಂಡು ಡಾಕ್ಟರ ಬಳಿಗೆ ಬಂದಾಯ್ತು.
“ಹೇಗಿದ್ದೀರಮ್ಮ ಈಗ? ಸ್ಕ್ಯಾನಿಂಗ್ ಎಲ್ಲ ಮುಗಿದಮೇಲೆ ಜ್ಯೂಸ್, ಕಾಫಿ, ಟೀ ಏನಾದರೂ ತೆಗೆದುಕೊಂಡಿರಾ?”
‘ಹೌದು’ ಎಂಬಂತೆ ತಲೆಯಾಡಿಸಿದೆ. ಅವರು ಬಿಡಿಸಿಕೇಳಿದರೆ, ಏನು ತೆಗೆದುಕೊಂಡೆ ಎಂದು ಹೇಳಬಹುದಿತ್ತು. ಅವರಿಗೆ ಅಷ್ಟೆಲ್ಲ ವಿವರಣೆ ಬೇಡವೇನೊ, ಚುಟುಕು-ಮೊಟಕು ಉತ್ತರವೇ ಸಾಕಾಗುತ್ತದೆಂದು ಕಾಣಿಸಿತು.
“ಈಗ ಹೇಗೆ ಅನ್ನಿಸ್ತಾ ಇದೆ? ಎದೆಯಲ್ಲಿ ಏನಾದರೂ ‘ಚುಳಕ್’ ಆಗ್ತಾ ಇದೆಯಾ? ಬಲಭುಜದ ಹತ್ತಿರ ನೋವಿದೆಯಾ? ಎಡ ಮೊಣಕಾಲಿನಲ್ಲಿ ಫ್ಲೂಯೆಡ್ ಕಡಿಮೆಯಾಗಿ ಮೂಳೆ ಸವೆತ ಆರಂಭಿಕ ಹಂತದಲ್ಲಿದೆ. ಹಾಗಾಗಿ ಕಾಲು ಎಳೆದುಕೊಂಡು ನಡೆಯುತ್ತಿದ್ದೀರಿ.”
ಹಿಂದಿನ ದಿನ ಏಳು ತೆಂಗಿನಕಾಯಿ ಸುಲಿದು, ನಾಲ್ಕು ತೆಂಗಿನಕಾಯಿ ಒಡೆದು, ಎಂಟು ಕಡಿಗಳನ್ನು ಅವಿಶ್ರಾಂತವಾಗಿ ತುರಿದಿದ್ದರ ಪರಿಣಾಮ ಬಲ ಭುಜದಲ್ಲಿ ವಿಪರೀತ ನೋವಿತ್ತಾದರೂ, ಅವರು ಪ್ರಶ್ನೆ ಕೇಳಿದ ರೀತಿಗೆ ಈ ಉತ್ತರ ಕೊಡುವುದು ಬೇಡವೆನಿಸಿ, ‘ಹೌದು’ ಎಂಬಂತೆ ತಲೆಯಾಡಿಸಿದೆ.
“ಅಮ್ಮ, ನೀವು ಬಲು ಗಟ್ಟಿಗಿತ್ತಿ. ಅಷ್ಟು ಸೀರಿಯಸ್ ಆಗಿ ಆಸ್ಪತ್ರೆಗೆ ಬಂದವರು, ಈಗ ನೋಡಿದರೆ ಯಾವುದೋ ಪೇಶಂಟ್ ನೋಡಲು ಬಂದವರಂತೆ ಇದ್ದೀರಲ್ವಾ?”
ಕೇಳಿ ನಗುಬಂತು, ಆದರೆ ನನ್ನ ನಗುಮುಖ ಅವರಿಗಷ್ಟೇ ಅಲ್ಲ, ನನ್ನ ಮಕ್ಕಳಿಗೂ ಕಾಣಿಸಲಿಲ್ಲ. ಅವರ ಗಮನವೆಲ್ಲ ಎಕ್ಸರೇ ನೋಡುವುದರಲ್ಲೇ ಕೇಂದ್ರೀಕೃತವಾಗಿತ್ತು. “ಹಾರ್ಟ್ಲ್ಲಿ ಯಾವ ಪ್ರೊಬ್ಲೆಮ್ ಕಾಣಿಸ್ತಾ ಇಲ್ಲ. ನೀವೂ ನೋವಿಲ್ಲ ಎಂದು ಹೇಳಿದ್ದೀರಲ್ವಾ. ನೀವು ಯಾವ್ಯಾವುದೋ ಮೆಡಿಸಿನ್ ದಿನಾ ಎರಡು ಹೊತ್ತು ತೆಗೆದುಕೊಳ್ತೀರಿ ಅಂತ ನಿಮ್ಮ ಮಕ್ಕಳು ಹೇಳಿದ್ದರು. ಮಧ್ಯಾಹ್ನದವರೆಗೆ ಮನೆಗೆ ಹೋಗಿ ತಂದು ತೋರಿಸಿ ಎಂದಿದ್ದೆ. ಮನೆಯಲ್ಲಿ ಯಾರೂ ಇಲ್ವಾ?”
“ಒಬ್ಬಳು ಕೆಲಸದವಳು ಇದ್ದಾಳೆ. ಅವಳ ಕೈಯಲ್ಲಿರುವ ಮೊಬೈಲ್ ಕಾಲ್ಗಷ್ಟೇ ಸೀಮಿತ. ಮೆಡಿಸಿನ್ ನೋಡಿ ಫೋಟೋ ತೆಗೆದು ಕಳಿಸುವುದು ಅವಳಿಂದ ಸಾಧ್ಯವಿಲ್ಲ. ಅವಳ ಕೈಗೆ ಸಿಗುವಲ್ಲಿ ಅಂಥದ್ದು ಏನೂ ಇಟ್ಟಿಲ್ಲ.”
“ಪರವಾಗಿಲ್ಲ, ನೀವು ಇಷ್ಟು ಮಾತಾಡುತ್ತಿದ್ದೀರಿ ಎಂದಮೇಲೆ ನೀವೇ ಹೇಳಿಬಿಡಿ.”
“ಗಂಟುನೋವಿಗೆ ಆಯುರ್ವೇದಿಕ್ ಗುಳಿಗೆ ಮತ್ತು ಕಷಾಯ ಎರಡು ಹೊತ್ತು ತೆಗೆದುಕೊಳ್ತೇನೆ. ಬಿ.ಪಿ.ಗೆ ಬೆಳಿಗ್ಗೆ ತೆಗೆದುಕೊಳ್ಳಲು ಒಂದು ಮಾತ್ರೆಯಿದೆ. ಮತ್ಯಾವ ತೊಂದರೆಯೂ ಇರಲಿಲ್ಲ, ಬೇರೆ ಯಾವ ಔಷಧಿಯೂ ಇಲ್ಲ.” ಡಾಕ್ಟರ್ ‘ಹೂಂ’ ಗುಟ್ಟಿದರಾದರೂ, ದೊಡ್ಡ ಮಗ ಮಾತ್ರ ಇಷ್ಟೆಲ್ಲ ವಿವರಣೆ ಬೇಕಿತ್ತಾ ಎಂಬಂತೆ ಗುರ್ರಾಯಿಸಿ ನೋಡಿದ.
“ಓಕೇ…ಓಕೇ…” ಎಂದವರು ಮೊದಲಿನ ಎಕ್ಸರೇ ಕೆಳಗಿಟ್ಟು, ತಲೆಬುರುಡೆಯ ಸ್ಕ್ಯಾನಿಂಗ್ ಫೋಟೋ ನೋಡತೊಡಗಿದರು. ಇಬ್ಬರೂ ಮಕ್ಕಳು ಹತ್ತಿರ ಬಂದರು. “ನಿಮ್ಮಮ್ಮ ಆಲಮೋಸ್ಟ್ ಸರಿಯಾಗಿ ಇದ್ದಾರೆ. ಎಲ್ಲಿಯಾದರೂ ಸಣ್ಣ ಪ್ರಮಾಣದಲ್ಲಿ ಬ್ಲಡ್ ಕ್ಲಾಟ್ ಆಗಿ, ಅದು ತಾನಾಗಿಯೇ ನಾರ್ಮಲ್ಗೆ ಬಂದಿರಬೇಕು. ಬ್ರೇನ್ನಲ್ಲಿ ಕೂಡ ಯಾವ ಸಮಸ್ಯೆ ಕಾಣಿಸ್ತಾ ಇಲ್ಲ. ಆದರೂ ಅವರ ಮಟ್ಟಿಗೆ ಹೇಳುವುದಾದರೆ, ಬ್ರೇನ್ಗೆ ಒಂದಿಷ್ಟು ರೆಸ್ಟ್ ಬೇಕಾಗಿದೆ. ನೀವಿಬ್ಬರೂ ಒಳ್ಳೆಯ ಕೆಲಸದಲ್ಲಿ ಇದ್ದೀರಿ. ಹಾಗಾಗಿ ನಿಮ್ಮ ಕುರಿತಾಗಿಯೂ ಅವರಿಗೆ ಚಿಂತೆ ಇದ್ದಂತಿಲ್ಲ, ಆದರೂ ಯಾವುದೋ ಕೊರಗು ಅವರನ್ನು ಕಾಡ್ತಾ ಇರಬೇಕು. ಹದಿನೈದು ದಿನಗಳ ಮೆಡಿಸಿನ್ ಬರೆದಿದ್ದೇನೆ. ಆವಾಗ ನೋಡಿ ಬೇಕಿದ್ದರೆ ಸೈಕೆಟ್ರಿಗೆ ರೆಫರ್ ಮಾಡ್ತೇನೆ….ಓ.ಕೇ ಅಲ್ವಾ ಅಮ್ಮ?” ನಾನು ವಿಷಾದದ ನಗುಮುಖ ತೋರಿಸಿದೆ. ಅದನ್ನವರು ಗಮನಿಸಲಿಲ್ಲವೇನೋ. ಅವರಿಗೆ ಬೇಕಾಗಿದ್ದು ಬಾಯ್ದೆರೆ ಉತ್ತರ. “ಮನೆಯಲ್ಲಿ ತೋಟದಲ್ಲಿ ತುಂಬ ಕೆಲಸ ಮಾಡ್ತಾರೇನೋ, ಅಲ್ವಾ? ಮಾಡಬಾರದು ಅಂತ ನಾನು ಹೇಳೋದಿಲ್ಲ.” ಮಕ್ಕಳಿಬ್ಬರಿಂದ ಯಾವ ಉತ್ತರವೂ ಬರಲಿಲ್ಲ. ಹಾಗಾಗಿ ಮತ್ತೆ ಮಾತು ಮುಂದುವರಿಸಿದರು, “ಎರಡು ದಿನ ಆಸ್ಪತ್ರೆಯಲ್ಲಿ ಫುಲ್ ರೆಸ್ಟ್ ಮಾಡಿದರಲ್ವಾ, ಗ್ಲುಕೋಸ್ ಎಲ್ಲ ಶರೀರದೊಳಗೆ ಹೋಗಿದೆ. ಹಾಗಾಗಿ ಈಗ ನಾರ್ಮಲ್ನಲ್ಲಿ ಇದ್ದ ಹಾಗೆ ಕಾಣಿಸ್ತಾರೆ. ಅವರಿಗೆ ಕಂಪ್ಲೀಟ್ ರೆಸ್ಟ್ ಬೇಕು… ನೋಡಿ ಅಮ್ಮ, ನೀವೀಗ ವಯಸ್ಸಿಗೆ ಬಂದ ಹುಡುಗಿಯಲ್ಲ, ನಿಮಗೀಗ ನಿರಂತರವಾಗಿ ಕೆಲಸ ಮಾಡ್ತಾ ಇರಬೇಕು ಎಂದು ಅನಿಸಿದರೂ, ನಿಮ್ಮ ದೇಹಕ್ಕೆ ಅದನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಅದಕ್ಕಾಗಿ ನೀವು ನಿಮಗಾಗಿ ಸ್ವಲ್ಪ ಮಿತಿಯನ್ನು ಹಾಕಿಕೊಳ್ಳಬೇಕಾಗ್ತದೆ. ಕೆಲಸಗಳ ನಡುವೆ ಆಗಾಗ ಸ್ವಲ್ಪ ಅಂಗಾತ ಮಲಗಿ ಬಾಡಿ ರಿಲ್ಯಾಕ್ಸ್ ಮಾಡಿಕೊಳ್ಳಿ. ಆಗ ಎನರ್ಜಿ ಅಕ್ಯಮಿಲೇಟ್ ಆಗ್ತದೆ.”
ಮಕ್ಕಳು ಈಗಲೂ ಆಕಾಶವೇ ತಲೆಯಮೇಲೆ ಬಿದ್ದವರಂತೆ ಮುಗುಂ ಆಗಿಯೇ ಇದ್ದವರಂತೆ ಕಂಡರು. ನಾನು ಸರಿಯಾಗಿದ್ದೇನೆ ಎಂದು ತೋರಿಸಿಕೊಳ್ಳಲು ಇದುವೇ ಸಕಾಲವೆಂದು ಡಾಕ್ಟರ್ರಿಗೆ ಹೇಳಿದೆ, “ಡಾಕ್ಟರ್, ಬೇರೆ ಯಾವುದೇ ಸಮಸ್ಯೆ ಇದ್ದಿರಬಹುದು, ಬ್ರೇನ್ ಸಮಸ್ಯೆ ನೂರಕ್ಕೆ ನೂರರಷ್ಟು ಇರಲಿಕ್ಕಿಲ್ಲ.”
“ನೀವು ಅದ್ಹೇಗೆ ಹೇಳ್ತೀರಾ?” ಅವರ ಧ್ವನಿ ಹೇಗಿತ್ತೆಂದರೆ, ಡಾಕ್ಟರ್ ನಾನಾ ಅಥವಾ ನೀವಾ? ಎಂದು ಕೇಳುವಂತಿತ್ತು. ನನಗೆ ಮಾತು ಮುಂದುವರಿಸಲೇ ಬೇಕಿತ್ತು. ಅದಕ್ಕೆ ಹೇಳಿದೆ, “ಹೈಸ್ಕೂಲ್ನಲ್ಲಿ ನಮ್ಮ ಇಂಗ್ಲಿಷ್ ಮೇಸ್ಟ್ರು ಹೇಳ್ತಾ ಇದ್ದರು, ಸುಶೀಲಾ, ನಿನಗೆ ದೇವರು ಎಲ್ಲವನ್ನು ಕೊಟ್ಟು, ನಿನ್ನ ತಲೆಯೊಳಗೆ ಬ್ರೇನ್ ಇಡೋದಕ್ಕೆ ಮರೆತಂತಿದೆ.” ಬ್ರೇನ್ ಇರುವ ಜಾಗದಲ್ಲಿ ಏನಿದೆ ಎಂಬ ಬಗ್ಗೆ ಮೇಸ್ಟ್ರು ಹೇಳುತ್ತಿದ್ದ ಇನ್ನೂ ಒಂದು ವಾಕ್ಯಾಂಶ ಅಲ್ಲಿ ಸೇರಿಸಬಹುದಿತ್ತು. ಅಷ್ಟರಲ್ಲಿ ಡಾಕ್ಟರ್ ಪಿಸ್ಕ್…ಪಿಸ್ಕ್ ಎಂದು ನಗಲಾರಂಭಿಸಿದರು. ಅವರ ನಗು ತಾರಕ್ಕೇರುತ್ತಿದ್ದಂತೆ, ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಟೇಬಲ್ ಮೇಲೆ ಬಾರಿಸಿದರು. ಬಾಗಿಲಬಳಿ ನಿಂತ ನರ್ಸ್ ಗಾಬರಿಯಿಂದ ಒಳಗೋಡಿ ಬಂದು ನೋಡಿದರೆ, ಒಬ್ಬರು ನಗುತ್ತಿದ್ದಾರೆ, ಇಬ್ಬರು ಬಾಯಿಗೆ ಗಟ್ಟಿಯಾಗಿ ಕೈ ಒತ್ತಿಕೊಂಡಿದ್ದಾರೆ, ಪೇಶಂಟ್ ಮಾತ್ರ ತನಗೇನೇನೂ ಗೊತ್ತಿಲ್ಲಪ್ಪ ಎನ್ನುವಂತೆ ಮುಖ ಹುಳ್ಳಗೆ ಮಾಡಿಕೊಂಡು ಕುಳಿತಿದ್ದಾಳೆ.
“ಡಾಕ್ಟರ್?” ನರ್ಸ್ ಪ್ರಶ್ನಾರ್ಥಕವಾಗಿ ಕರೆದುದಕ್ಕೆ ನಗುತ್ತಲೇ ಹೇಳಿದರು, “ನಥಿಂಗ್…ನಥಿಂಗ್” ಎನ್ನುತ್ತ ಪೆನ್ನು ಹಿಡಿದು ನೋಟ್ಪ್ಯಾಡ್ ಎತ್ತಿಕೊಂಡರು.
ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಪುಟದ ತುಂಬ ಬರೆದು ಸಹಿ ಹಾಕಿ ಮುಗಿಸಿ, ನನ್ನ ಮುಂದಿಟ್ಟು ಹೇಳಿದರು, “ಅಮ್ಮ, ನಿಮಗೇನೂ ಆಗಿಲ್ಲ. ಯೂ ಆರ್ ಪರಫೆಕ್ಟಲೀ ಆಲ್ರೈಟ್… ಇವರಿಬ್ಬರು ಟ್ವಿನ್ಸಾ?”
“ಅಲ್ಲ, ಎರಡೂವರೆ ವರ್ಷ ಅಂತರದವರು.”
“ಮಕ್ಕಳ ಮದುವೆ ಮಾಡಿ, ಎಲ್ಲ ಸರಿ ಹೋಗ್ತದೆ… ಹದಿನೈದು ದಿನಕ್ಕೆ ಮಾತ್ರೆ ಬರೆದಿದ್ದೇನೆ. ಇಲ್ಲೇ ಹೊರಗೆ ಹೋದ ಕೂಡಲೆ ಬಲಗಡೆ ಮೆಡಿಕಲ್ ಸ್ಟೋರ್ಸ್ ಇದೆ. ಅಲ್ಲೇ ತೆಗೆದುಕೊಳ್ಳಿ. ಇಲ್ಲಿ ಮಾಡಿರುವ ಸ್ಕ್ಯಾನಿಂಗ್, ಎಕ್ಸರೇ ಯಾವುದಾದರೂ ರಿಪೋರ್ಟ್ ಬೇಕಿದ್ದರೆ, ಕೌಂಟರ್ ನಂಬರ್ ಮೂರಕ್ಕೆ ಹೋಗಿ, ಅಲ್ಲಿ ಪೇಮೆಂಟ್ ಮಾಡಿ ತೆಗೆದುಕೊಳ್ಳಿ.”
ಹೊರಗಡೆ ಬಂದೆವು. ನನ್ನ ಕೈಯಲ್ಲಿದ್ದ ಚೀಟಿಯನ್ನು ಸಣ್ಣವ ಎಳೆದುಕೊಂಡು, “ಅಮ್ಮ, ನೀನಿಲ್ಲೇ ಕುರ್ಚಿಯಲ್ಲಿ ಕುಳಿತಿರು. ಅಣ್ಣ ಪಾರ್ಕಿಂಗ್ ಲಾಟ್ಗೆ ಹೋಗಿ ಕಾರು ತೆಗೆದುಕೊಂಡು ಬರ್ತಾನೆ.”
“ಸಂದೀಪ, ನನಗೇನೂ ಇಲ್ಲ ಎಂದಮೇಲೆ ಮಾತ್ರೆ ಯಾಕೆ ನುಂಗಬೇಕು? ಅಲ್ಲವೇನೋ ಸಂತೋಷ? ನೀನು ಏನು ಹೇಳ್ತಿಯಾ? ನಿಮ್ಮಿಬ್ಬರ ಮದುವೆ ಮಾಡಿಬಿಟ್ಟರೆ ಎಲ್ಲ ಸರಿಹೋಗ್ತದೆ ಅಂತ ಡಾಕ್ಟರ್ ಹೇಳಿದ್ದಾರಲ್ವಾ?”
ಸಂತೋಷನಿಗೆ ಸ್ವಲ್ಪ ಮುಂಗೋಪ ಜಾಸ್ತಿ. ತಾನು ಹೇಳಿದ್ದೇ ಸರಿ ಎನ್ನುವವನು. ಅವರಿಬ್ಬರ ಗಲಾಟೆಗೂ ಅದೇ ಕಾರಣವಾಗಿತ್ತು. ಆದರೆ ಮೊನ್ನೆ ಬೆಳಗಿನ ಜಾವ ಅದು ಸ್ವಲ್ಪ ಜಾಸ್ತಿಯೇ ಆಯತಪ್ಪಿಹೋಗಿತ್ತು.
ಅಲ್ವೇನೋ ಸಂತೋಷ, ಎಂದು ಕೇಳಿದ್ದಕ್ಕೆ ಮತ್ತೆ ಪಿತ್ತ ನೆತ್ತಿಗೇರಿದಂತಾದರೂ ಬಾಯಿಗೆ ಬಂದಂತೆ ಒದರಾಡಲು ಅದು ತಕ್ಕ ಸ್ಥಳವಾಗಿರಲಿಲ್ಲ. ಏನೇ ಆದರೂ ಮಾತಿಗೆ ಮಾತು ಬಿಟ್ಟುಕೊಡುವ ಜಾಯಮಾನ ಅವನದಲ್ಲ. ಹಾಗಾಗಿ ಹೇಳಿಯೇಬಿಟ್ಟ, “ಅಮ್ಮ, ಮದುವೆ ಮಾಡಿಕೊಳ್ಳಲಿಕ್ಕೆ ಹೇಳಿದವರು ಜೋಯಿಸರೂ ಅಲ್ಲ, ಪುರೋಹಿತರೂ ಅಲ್ಲ…”
ಬ್ರೋಕರ್ ಕೂಡ ಅಲ್ಲ, ಅಂತ ಸೇರಿಸ್ತಾನೇನೋ ಎಂದು ಕಾದೆ. ಆ ಶಬ್ದ ಅವನ ಬಾಯಲ್ಲಿ ಬರಲಿಲ್ಲ.
“ನಮಗೆ ಬೇಕಾದಾಗ ನಾವು ಮದುವೆ ಆಗ್ತೇವೆ. ನೀನು ಇದನ್ನೆಲ್ಲ ತಲೆಗೆ ಹಚ್ಚಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಎಲ್ಲಕ್ಕಿಂತ ಮೊದಲು ಕಾಲು ಗುಣಮಾಡಿಕೊ. ಇಲ್ಲದೆಹೋದರೆ ಆಯುಷ್ಯಪೂರ್ತಿ ಕುಂಟಿಯಾಗಿಯೇ ಇದ್ದುಬಿಡ್ತೀಯಾ.” “ಆಯ್ತು ಬಿಡು…” ಮಾತು ಮುಗಿಯುವ ಮೊದಲೇ ಸಂತೋಷ ಮಾರು ದೂರ ಹೋಗಿಯಾಗಿತ್ತು.
“ಅಂದಹಾಗೆ ಸಂದೀಪ, ಇವತ್ತಿನವರೆಗಿನ ಬಿಲ್ ಎಷ್ಟಾಯ್ತು?”
“ನೀನು ಬ್ರೇನ್ ಇಲ್ಲ ಅಂತ ಒಪ್ಪಿಕೊಂಡಿದ್ದೀಯಾ. ಹಾರ್ಟ್ ಇಲ್ಲ ಅಂತ ನಿನಗೆ ಇದುವರೆಗೂ ಯಾರೂ ಹೇಳಿಲ್ಲ. ಹಾಗಾಗಿ ನೀನು ಹೃದಯವಂತೆ. ಕೇವಲ ಎರಡೇ ಎರಡು ದಿನ ಆಸ್ಪತ್ರೆಯಲ್ಲಿ ಮಲಗಿದ್ದಕ್ಕೆ ಬಿಲ್ ಎಷ್ಟಾಯ್ತು ಅಂತ ಗೊತ್ತಾದರೆ ನಿನಗೆ ಹಾರ್ಟ್ ಅಟ್ಯಾಕ್ ಆಗುವುದು ಗ್ಯಾರಂಟಿ. ಮತ್ತೆ ನಿನ್ನನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಿಲ್ಲ. ನಮಗೆ ಹಿಂದಿರುಗಿ ಹೋಗಲೇಬೇಕು. ಮೆಡಿಸಿನ್ ತೆಗೆದುಕೊಳ್ಳಲೇಬೇಕಾ ಎಂದು ಮತ್ತೆ ಕೇಳಬೇಡ. ತಗೊಂಡು ಮನೆಗೆ ಹೋಗೋಣ. ಎರಡು ದಿನ ಮುಂಜಾನೆಯಿಂದ ಸಂಜೆತನಕ ಇಪ್ಪತ್ತೈದು ಕಡೆ ಅಲೆದು-ಅಲೆದು ತಲೆ ಚಿಟ್ಟು ಹಿಡಿದುಹೋಗಿದೆ” ಕೆಲವೊಮ್ಮೆ ಹೂಂಗುಟ್ಟೆ, ಕೆಲವೊಮ್ಮೆ ತಲೆಯಾಡಿಸಿದೆ. ಏನೋ ನೆನಪಾದವರಂತೆ ಪುನಃ ಹೇಳಿದ, “ಅಂದಹಾಗೆ ಹದಿನೈದು ದಿನಗಳ ನಂತರ ಡಾಕ್ಟರ್ ಮತ್ತೊಮ್ಮೆ ಬಂದು ತೋರಿಸಲು ಹೇಳಿದ್ದನ್ನು ಮರೆಯಬೇಡ. ಚಿಕ್ಕಮ್ಮನಿಗೆ ಹೇಳಿ ಅವಳನ್ನು ಕರೆದುಕೊಂಡು ಆಸ್ಪತ್ರೆಗೆ ಬಾ. ಬರುವಾಗ ಈ ಫೈಲ್ ತರಬೇಕು. ಇದರಲ್ಲಿದ್ದ ಕಾರ್ಡ್ ಕೌಂಟರ್ನಲ್ಲಿ ತೋರಿಸಬೇಕು. ಅಲ್ಲಿದ್ದವರು ಯಾರಾದರೂ ಹೆಲ್ಪ್ ಮಾಡ್ತಾರೆ. ಮನೆಗೆ ಹೋಗಿ ಈ ಎಲ್ಲ ರಿಪೋರ್ಟ್ಗಳನ್ನು ಮಾತ್ರೆ ಚೀಟಿಗಳನ್ನು ಫೈಲ್ ಮಾಡಿ ಇಡ್ತೇನೆ.”
ಈಗ ಜೋರಾಗಿ ‘ಹೂಂ’ ಎಂದೆ. ಕಾರಣವಿಷ್ಟೆ, ಫೈಲ್ ಇಲ್ಲೇ ಇರುವುದರಿಂದ ಎಷ್ಟು ಬಿಲ್ ಆಯಿತೆಂದು ನೋಡಬಹುದಲ್ಲ, ಎಂದು ಮನಸ್ಸಲ್ಲೇ ಮಂಡಿಗೆ ತಿಂದೆ.
ಛೆ! ನಾನೆಂಥ ಪೆದ್ದಿ, ಬೇರೆಲ್ಲವನ್ನೂ ಫೈಲ್ ಮಾಡಿರ್ತಾರೆ ಆದರೆ ಬಿಲ್ ಯಾಕೆ ಅಲ್ಲಿಡ್ತಾರೆ. ಇರಲಿ, ಎರಡುದಿನಗಳ ಮಟ್ಟಿಗಾದರೂ ಅಮ್ಮನಿಗಾಗಿ ಇಬ್ಬರೂ ಲ್ಯಾಪಟಾಪ್ ಮುಚ್ಚಿಟ್ಟರಲ್ಲ, ಅಷ್ಟೇ ಸಾಕು.







1 thought on “ಆಘಾತ”
ಚೆನ್ನಾಗಿದೆ ಕತೆ