(ಹೆನ್ರಿ ವಾಡ್ಸ್ವರ್ತ್ ಲಾಂಗ್ಫೆಲೋ (ಫೆಬ್ರವರಿ 27, 1807 – ಮಾರ್ಚ್ 24, 1882) ಅವರು 19 ನೇ ಶತಮಾನದ ಜನಪ್ರಿಯ ಅಮೇರಿಕನ್ ಕವಿ ಮತ್ತು ಶಿಕ್ಷಣತಜ್ಞ. ಅವರ ಮೂಲ ಕೃತಿಗಳಲ್ಲಿ “ಪಾಲ್ ರೆವೆರೆಸ್ ರೈಡ್”, “ದಿ ಸಾಂಗ್ ಆಫ್ ಹಿಯಾವಥಾ” ಮತ್ತು “ಇವಾಂಜೆಲಿನ್” ಕವನಗಳು ಸೇರಿವೆ. ಡಾಂಟೆ ಅಲಿಘೇರಿಯ ಡಿವೈನ್ ಕಾಮಿಡಿಯನ್ನು ಸಂಪೂರ್ಣವಾಗಿ ಭಾಷಾಂತರಿಸಿದ ಮೊದಲ ಅಮೇರಿಕನ್ ಅವರಾಗಿದ್ದರು. ಅವರ ’Sundown’ ಕವಿತೆಯ ಭಾವಾನುವಾದ ಇಲ್ಲಿದೆ)
ಗ್ರೀಷ್ಮದ ಸೂರ್ಯ ಮುಳುಗುವಾಗ
ವೃಕ್ಷದ ನೆತ್ತಿಯು ಕೆಂಪಗೆ ಹೊಳೆಯುತ್ತದೆ,
ಹತ್ತಿರದ ಚರ್ಚ ಗೋಪುರದ ತುದಿಯ
ಗಾಳಿಕೋಳಿಗೂ ಉರಿನಾಲಿಗೆ ಇದೆ!
ಎಲ್ಲವೂ ಕತ್ತಲಲ್ಲಿ ಕಳೆದುಹೋಗುತ್ತದೆ!
ಓ ಸುಂದರ ಬೇಸಿಗೆಯ ಬೆಳಗೆ,
ನೀನು ಕೊಡುವುದೇನು? ಕಸಿದುಕೊಳ್ಳುವುದೇನು?
ಹುಟ್ಟು- ಸಾವು, ಪ್ರೀತಿ- ದ್ವೇಷದ
ಬಾಳು ಸುಖ-ದುಃಖದ ಆಗರ;
ಎದೆತುಂಬಿ ನಿಂತಿವೆ ನೋವು , ನಲಿವು ನಿರಂತರ!
ಬಾಳಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು
ಪುಸ್ತಕದ ಪುಟ ತಿರುವಿದಂತೆ,
ಮನುಜ ಮಾಡುವ ಪಾಪ-ಪುಣ್ಯಕೆ
ಒತ್ತುವ ಕೆಂಪು ಮುದ್ರೆಯಂತಿಹ ಮುಳುಗುವ ಸೂರ್ಯ !
ಅಯ್ಯೋ ಯಾವುದೂ ಮರಳಿಬಾರದಲ್ಲ!!
ಭಾವಾನುವಾದ: ಸೀಮಾ ಕುಲಕರ್ಣಿ, ಕೌಲಾಲಂಪುರ , ಮಲೇಶಿಯ







