ಆರು ತಿಂಗಳಿಂದ ಹೊಟ್ಟೆ ನೋವು
ನಡ ನೋವು, ಏನೋ ಹಸಿ ಹಸಿ
ಹೊರಗಾದಳು ಹನ್ನೇರಡರ ಬಾಲೆ
ಹೆಣ್ಣಾದದ್ದಕ್ಕೆ ಕನ್ಯತ್ವಕ್ಕೆ ಕಡ್ಡಾಯ
ಪ್ರಕೃತಿಯ ಸೂರ್ಯ ಚಂದ್ರರಂತೆ
ಸ್ವಾಭಾವಿಕ ಇರಬೇಕಾದದ್ದು
ಗೆಜ್ಜೆ ಹಾಕಿಕೊಂಡು ಸಣ್ಣ ಕಾಲಲ್ಲಿ
ಲುಟುಲುಟು ಓಡಾಡುವ
ದೊಡ್ಡವಳಾಗುವುದು ಖುಷಿ ಜೊತೆ ದುಃಖ
ಹೆಣ್ತನದ ಮೊದಲ ಹೆಜ್ಜೆ
ಪರ ಮನೆಯ ಸೇರುವ ದೊಡ್ಡ ಹೆಜ್ಜೆ
ಅಲ್ಪ ಸಮಯದಲ್ಲಿ
ಬೆಣ್ಣೆಯಂತ ಬಣ್ಣ
ಗಲ್ಲದ ಮೃದುತ್ವ ಕೈಯಲ್ಲಿ
ನೋಡಿದವರು ಕಣ್ಣು
ಹಚ್ಚಾರೆಂಬ ಸಂಶಯ
ಅಷ್ಟಷ್ಟೇ ನಾಚಿಕೆಯ ಹೊತ್ತು
ಯೌವ್ವನದ ತಯಾರಿ
ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ
ಆಟ ಆಡಿದ ತಮ್ಮ, ಅಣ್ಣ, ಸ್ನೇಹಿತ,
ಸಾಕಿ ಸಲುಹಿದ ಚಿಕ್ಕಪ್ಪ, ಸಹೋದರ ಮಾಮ,
ಕೊನೆಗೆ ಹಡೆದ ಅಪ್ಪನನ್ನು ನಂಬದಂತೆ
ಮಾಡುವ ನೋಡಿದ, ಕೇಳಿದ
ಜೀವ ಹಿಂಡುವ ಘಟನೆಗಳು ಆಗಾಗ
ಹೊರಗಾದರಷ್ಟೇ ಅಲ್ಲ
ಮಗಳೆಂಬುದು ಯಾವಾಗಲೂ
ಸಿಹಿ ಜವಾಬ್ದಾರಿಯೇ ಸರಿ
ಬರದಿರಲಿ ಹಾರೈಕೆ
ನಾವು ಕಂಡ ನೋವು- ದುಮ್ಮಾನ
ಸಿಗಲಿ ಬಾಳ ನೌಕೆ
ಅಲೆಗಳ ಅಬ್ಬರವಿಲ್ಲದೇ
ಹೆಣ್ಣು ಹಡೆದವರ
ಆಸೆ ಇಷ್ಟೇ.
- ಮಾಲಾ ಮ. ಅಕ್ಕಿಶೆಟ್ಟಿ, ಬೆಳಗಾವಿ.








4 thoughts on “ಸಿಹಿ ಜವಾಬ್ದಾರಿ”
ಒಂದು ಚೆಂದವಾಗಿ ಅರಳಬಹುದಾದ ಕತೆಯ ಚೌಕಟ್ಟನ್ನು ಮುರಿದು, ಅರೆದು, ಮುದ್ದೆ ಮಾಡಿ ಅದೊಂದು ಕವಿತೆಯಾಗುವ ಸಾಧ್ಯ ಸುಂದರತೆಯನ್ನು ತಾಯ್ತನದ ವಿಶೇಷ ಕಾಳಜಿಯಲ್ಲಿ ಮಾರ್ಪಡಿಸಿ, ಕೇವಲ ಹೆಣ್ಣು ಅನುಭವಿಸುವ, ಅವರಿಂದ ಮಾತ್ರ ಜಗತ್ತು ತಿಳಿಯುವ ಭಾಷೆಯಲ್ಲಿ, ಸಹಜವಾದ, ನೋವು, ಭೀತಿ, ಆತಂಕ, ತಲ್ಲಣಗಳನ್ನೆಲ್ಲ ಬದಿಗಿಟ್ಟು, ಸೂಸುವ ಆಶಯದಲ್ಲಿ ಮಾತೃ ವಾತ್ಸಲ್ಯದ ರಮಣೀಯ ಉಲ್ಲಾಸವಿದೆ!
ಸಧ್ಯದ ಪರಿಸ್ಥಿತಿಯಲ್ಲಿ ಯಾವಾಗಲೂ ಆಗಬಹುದಾದ ಭೀಷಣತೆಯ ಚಿತ್ರಣ ವಾಸ್ತವಕ್ಕೆ ಕನ್ನಡಿ ಹಿಡಿದಿದೆ.
ಬೆಳಕು ಬೇಕೇ ಬೇಕು ಎಂಬ ಹಂಬಲವೇ ಈ ಕವಿತೆಯ ಜೀವಾಳ
ತಮ್ಮ ಕವಿತೆಯ ಓದಿನ ಆತ್ಮೀಯತೆಗೆ ಶರಣು ಸರ್.
ವಾಸ್ತವದ ಚಿತ್ರಣ ಸ್ವಾಭಾವಿಕವಾಗಿ ಮೂಡಿಬಂದಿದೆ. ಅಭಿನಂದನೆಗಳು.
ಧನ್ಯವಾದಗಳು ಸರ್