‘ಸಾಹಿತ್ಯ ವಿಮರ್ಶೆಯ ಕೈಪಿಡಿ’ – ಕೃತಿ ನೋಟ

ಕನ್ನಡದ ಜಗಲಿಗೆ ಬಂದ ವಿಮರ್ಶೆಯ ಜಾಗತಿಕ ವಿದ್ಯಮಾನ

ಸಾಹಿತ್ಯ ವಿಮರ್ಶೆಯ ಕೈಪಿಡಿ 

ಡಾ.ಜನಾರ್ದನ ಭಟ್ 

ಸೃಜನ ಪ್ರಕಾಶನ , ಮಂಡ್ಯ,

2025

9481145775

ಬೆಲೆ ರೂ 375

 ‘ಸಾಹಿತ್ಯ ವಿಮರ್ಶೆಯ ಕೈಪಿಡಿ’ ಇದು ಜನಾರ್ದನ ಭಟ್ ಅವರ ಇತ್ತೀಚಿನ ಕೃತಿ.ಕಾವ್ಯದ ಮೂಲವೇ ವಿಮರ್ಶೆಯ ಮೂಲ ಎಂಬ ಪ್ರಸಿದ್ಧವಾದ ಆಂಗ್ಲ ಹೇಳಿಕೆಯೊಂದಿದೆ. ಸಾಹಿತ್ಯ ವಿಮರ್ಶೆ ಸಹ ಒಂದು ಮಾದರಿಯ ಶಿಸ್ತು,ಶಿಕ್ಷಣವೇ ಆಗಿದೆ.ಅದೊಂದು ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು. ಸಾಂಪ್ರತ ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯೂ ಸಾಹಿತ್ಯದ ಒಂದು ಗಣ್ಯ ಹಾಗೂ ಪ್ರಧಾನ ಪ್ರಕಾರವೆಂದು ಪರಿಗಣಿಸಲ್ಪಟ್ಟಿದೆ.ಇತರ ಭಾರತೀಯ ಭಾಷೆಗಳಲ್ಲಿ ಇವತ್ತು ಹೆಚ್ಚಾಗಿ ಸೃಜನ ಸಾಹಿತ್ಯಕ್ಕೆ ವಿಶೇಷವಾದ ಒತ್ತು ನೀಡಲಾಗುತ್ತಿದ್ದರೆ ಕನ್ನಡದಲ್ಲಿ ವಿಮರ್ಶಾ ಕೃತಿಗಳೇ ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗುತ್ತಿರುವುದು, ಓದುಗರನ್ನು ಆಕರ್ಷಿಸುತ್ತಿರುವುದು ಅವಲೋಕನೀಯ ಅಂಶ.

 ‘ಸಾಹಿತ್ಯ ವಿಮರ್ಶೆಯ ಕೈಪಿಡಿ’ ಇದು ಡಾ. ಜನಾರ್ದನ ಭಟ್ ಅವರ  ಮಹತ್ವದ ಕೃತಿಗಳಲ್ಲಿ ಒಂದು.ಹೆಸರೇ ಸೂಚಿಸುವಂತೆ ಈ ಗ್ರಂಥ, ವಿಮರ್ಶೆ ಎಂದರೇನು? ಅದರ ಸ್ವರೂಪ, ಅದು ನಡೆದು ಬಂದ ದಾರಿ,ವಿಮರ್ಶೆಯ ಆಳ ಅಗಲ ವೈಭವ,ಇತಿಹಾಸ, ಪರಂಪರೆ, ಕನ್ನಡದಲ್ಲಿ ವಿಮರ್ಶೆ ಇಟ್ಟ ಹೆಜ್ಜೆ, ತೊಟ್ಟ ರೂಪದ ಸಮಗ್ರ ದರ್ಶನವನ್ನು ಇಲ್ಲಿ ಅಧಿಕೃತವಾಗಿ  ಮಾಡಿಕೊಡಲಾಗಿದೆ. ವಿಮರ್ಶೆಯ ವೈಧಾನಿಕತೆಯನ್ನು, ಅಲ್ಲಿನ ಇತ್ತೀಚಿನ ಬೆಳವಣಿಗೆ ಹಾಗೂ ಹೊಸ ಹೊಸ ಪರಿಭಾಷೆಗಳನ್ನು  ಕರಾರುವಾಕ್ಕಾಗಿ, ನೇರವಾಗಿ, ಸ್ಪಷ್ಟವಾಗಿ ವಿಶ್ಲೇಷಿಸಿರುವುದು ಈ ಕೃತಿಯ ಧನಾತ್ಮಕ ಅಂಶ.ಇದು ಕನ್ನಡ ವಿಮರ್ಶೆಯನ್ನು ಅಧ್ಯಯನ ಓದುವವರಿಗೆ, ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಉಪಯುಕ್ತವಾದ ತೋರು ದೀಪವಾಗಿದೆ.

ಬಹುಶಿಸ್ತೀಯ ಅಧ್ಯಯನ, ಚಿಂತನೆ, ವ್ಯಾಖ್ಯಾನ, ಮೌಲ್ಯಮಾಪನ, ಚೇತೋಹಾರಿಯಾದ ನಿರೂಪಣೆಗಳಿಂದ  ವಾಚನೀಯವೂ ಆಗಿರುವ ಈ ಕೃತಿ ಕನ್ನಡ ವಿಮರ್ಶಾ ಜಗತ್ತಿಗೆ ಒಂದು ಉತ್ತಮ ಕೊಡುಗೆಯೂ ಆಗಿದೆ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯ ಕುರಿತು ಈಗಾಗಲೇ ಕೆಲವು ಪುಸ್ತಕಗಳು ಬಂದಿವೆ. ಆದರೆ ಪ್ರಸ್ತುತ ಕೃತಿ ಅವುಗಳಿಗಿಂತ ಬಹಳ ಭಿನ್ನವಾಗಿದ್ದು ಜಾಗತಿಕ ಮಟ್ಟದಲ್ಲಿ 21ನೆಯ ಶತಮಾನದಲ್ಲಿ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ನಡೆದ ಬೆಳವಣಿಗೆಯನ್ನು ಸಹ ಇಲ್ಲಿ ಗಮನಿಸಿ ಉದಾಹರಣೆ ಸಹಿತ ವಿವರಣೆ ನೀಡಲಾಗಿದೆ.ನಿಜ ಹೇಳಬೇಕೆಂದರೆ ಈ ಕೃತಿ ಒಂದು ರೀತಿಯಲ್ಲಿ ಆಧುನಿಕ ವಿಮರ್ಶೆಯ ಪ್ರಸ್ಥಾನಗಳ ಸಮಗ್ರ ಚರಿತ್ರೆಯೂ ಆಗಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ ಬೆಳೆದು ಬಂದ ಬಗೆಯನ್ನು ಸ್ಥೂಲವಾಗಿ ಇಲ್ಲಿ ವಿಶ್ಲೇಷಿಸಿ ನಿರೂಪಿಸಲಾಗಿದೆ. ಒಂದು ಬಗೆಯ ಪರಂಪರೆಯ ಅನುಸಂಧಾನ ಸಹ ಇಲ್ಲಿ ಎದ್ದು ಕಾಣುತ್ತದೆ.

 ಈ ಕೃತಿಯಲ್ಲಿ  ಮೂರು ಮುಖ್ಯ ಭಾಗಗಳಿದ್ದು ಕರ್ತೃ ಕೇಂದ್ರಿತ, ಕೃತಿ ಕೇಂದ್ರಿತ, ಸಮಾಜ ಕೇಂದ್ರಿತ, ತೌಲನಿಕ ಸಾಹಿತ್ಯ ವಿಮರ್ಶೆ ಎಂಬಾದಿಯಾದ  ಒಳತೆನೆಗಳಿವೆ. ಜಾನ್ ಡ್ರೈಡನ್ ಇಂಗ್ಲೀಷ್ನಲ್ಲಿ ಮೊದಲ ಬಾರಿಗೆ ವಿಮರ್ಶೆ ಎಂಬ ಪದವನ್ನು 1668ರಲ್ಲಿ ಬಳಸಿದ. ಸಾಹಿತ್ಯ ಕೃತಿಗಳನ್ನು ಸ್ಪಷ್ಟಗೊಳಿಸುವ ಲಕ್ಷಣಗಳನ್ನು ತಿಳಿಸುವ ವಿಂಗಡಿಸುವ ಹೋಲಿಸುವ ವಿಶ್ಲೇಷಿಸುವ ವಿವರಿಸುವ ಮೌಲ್ಯಮಾಪನ ಮಾಡುವ ಪ್ರಯತ್ನಗಳು ವಿಮರ್ಶೆ ಎನಿಸಿಕೊಳ್ಳುತ್ತವೆ. ಇವತ್ತು ವಿಮರ್ಶೆಯ ಅರ್ಥ ವ್ಯಾಪ್ತಿ ಹೆಚ್ಚಿದೆ. ಶಿಕ್ಷಣದಲ್ಲಿ ಸಾಹಿತ್ಯದ ಅಧ್ಯಯನ ಎಂದರೆ ಅದು ವಿಮರ್ಶೆಯೇ ಆಗಿರುತ್ತದೆ. ಸಾಹಿತ್ಯದ ಅಧ್ಯಯನ ಶಿಕ್ಷಣ ಕ್ರಮದಲ್ಲಿ ಸೇರಿಕೊಂಡಾಗ ವಿಮರ್ಶೆ ಹೇಗೆ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂತು ಎಂಬುದರ ಇತಿಹಾಸವನ್ನು ಇಲ್ಲಿ ಕಟ್ಟಿಕೊಟ್ಟಿರುವುದು ಔಚಿತ್ಯ  ಪೂರ್ಣವಾಗಿದೆ.

ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಅಭ್ಯಾಸ ಮಾಡಬೇಕಾದ ಲಾಕ್ಷಣಿಕರ, ವಿಮರ್ಶಕರ ಚಿಂತನೆಗಳನ್ನು ಸಂಕ್ಷಿಪ್ತವಾಗಿ ಕೊಡಲಾಗಿದೆ.. ಈ ಭಾಗದಲ್ಲಿ ಅರಿಸ್ಟಾಟಲ್, ಲಾಂಜೈನಸ್, ಭರತ, ಆನಂದವರ್ಧನ, ಅಭಿನವಗುಪ್ತ, ಧನಂಜಯ ಮತ್ತು ನಾರ್ಥಾಪ್ ಪ್ರೈ – ಮೊದಲಾದವರ ಕುರಿತಾದ ಲೇಖನಗಳಿವೆ. ಕೆಲವು ಮುಖ್ಯ ಪರಿಕಲ್ಪನೆಗಳನ್ನು ಮತ್ತು ಪರಿಕರಗಳನ್ನು ನೀಡಿದ  ಅರ್ನಾಲ್ಡ್,ಕ್ರೋಚೆ, ಟಿ.ಎಸ್.ಎಲಿಯಟ್, ಎಫ್. ಆರ್. ಲೀವಿಸ್,ಐ.ಎ. ರಿಚರ್ಡ್, ಮಿಲನ್ ಕುಂದೇರ ಮೊದಲಾದ ಸಾಹಿತ್ಯ ಚಿಂತಕರ ಕುರಿತು ಒಳನೋಟಗಳಿರುವ ಪ್ರತ್ಯೇಕ ಲೇಖನಗಳಿವೆ. ಆಧುನಿಕೋತ್ತರ ವಿಮರ್ಶೆ, ಪರಿಸರನಿಷ್ಠ ಸ್ತ್ರೀ ವಾದಿ ವಿಮರ್ಶೆ, ಪರಿಸರನಿಷ್ಠ ಭಾಷಾ ವಿಜ್ಞಾನ, ಜಂಗಮ ನವ್ಯತೆ ಸ್ವೀಕಾರ ಸಿದ್ಧಾಂತ ಮೊದಲಾದ ವಿಮರ್ಶಾ ಪ್ರಕಾರಗಳ ಕುರಿತು ಕನ್ನಡದಲ್ಲಿ ಅಷ್ಟಾಗಿ ಚರ್ಚೆಯಾಗಿಲ್ಲ.ಭಟ್ ಅವರ ವ್ಯಾಪಕ ಓದು, ಅಧ್ಯಯನ, ಪರಿಶ್ರಮಗಳಿಂದ ವಿಮರ್ಶೆಯ ಜಾಗತಿಕ ವಿದ್ಯಮಾನ, ಇತ್ತೀಚಿನ ಬೆಳವಣಿಗೆ ಕನ್ನಡದ ಜಗಲಿಗೆ ಬಂದು ಸೇರಿದಂತಾಗಿದೆ. 

ವಿಮರ್ಶೆ ಬಹಳ ಸೂಕ್ಷ್ಮವಾದ ಜವಾಬ್ದಾರಿಯ ಕೆಲಸ. ಸಾಹಿತ್ಯ ಕೃತಿಯ ‘ಮೌಲ್ಯಮಾಪನ’ ಎನ್ನುವುದು ವಿಮರ್ಶೆಯ ಒಂದು ಅಪೇಕ್ಷಣೀಯ ಆಯಾಮವಾಗಿದೆ. ಹಾಗೆ ಮೌಲ್ಯಮಾಪನ ಮಾಡುವ ಮುನ್ನ ಅಥವಾ ತೀರ್ಪು ಕೊಡುವ ಮುನ್ನ, ನ್ಯಾಯಾಲಯದಲ್ಲಿ ನಡೆಯುವಂತೆ ಪರ ಹಾಗೂ ವಿರೋಧದ ವಾದವಿವಾದಗಳ ಹಾಗೆ ಸಾಹಿತ್ಯ ಕೃತಿಯ ಬಗ್ಗೆ ವಿವರಿಸಬೇಕು ಮತ್ತು ಚರ್ಚಿಸಬೇಕು. ಅದಕ್ಕಾಗಿ ವಿಮರ್ಶಕ ಸೂಕ್ತ ಪಾರಿಭಾಷಿಕ ಪದಗಳ ಮೂಲಕ ಸಾಹಿತ್ಯ ಕೃತಿಯ ಬಗ್ಗೆ ಇತರರಿಗೆ ತಿಳಿಸುವ ತಜ್ಞತೆಯನ್ನು ಹೊಂದಿರಬೇಕು. ಜತೆಗೆ, ಸಮಾಜ ಹಿತದ ದೃಷ್ಟಿಯಿಂದಲೂ ಅದನ್ನು ಮೌಲ್ಯಮಾಪನ ಮಾಡಬೇಕು.

ಕೃತಿಯೊಂದು ಸಾಹಿತ್ಯಕ ಮೌಲ್ಯಗಳನ್ನಷ್ಟೆ ಹೊಂದಿರುವುದಲ್ಲ; ಅದು ಜೀವಪರವಾಗಿದ್ದು ಸಮಾಜದ ಹಿತವನ್ನು ರಕ್ಷಿಸುವ ಮೌಲ್ಯಗಳನ್ನು ಹೇಳಬೇಕಾಗುತ್ತದೆ. ಸಾಹಿತ್ಯ ಚಿಂತಕ ಟಿ.ಎಸ್. ಎಲಿಯಟ್ ಈ ಎರಡು ಆಯಾಮಗಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾನೆ ಎಂಬುದನ್ನು ಇಲ್ಲಿ ತುಲನಾತ್ಮಕ ವಾಗಿ ವಿವರಿಸಿದ್ದಾರೆ.ವಿಮರ್ಶೆಯ ಮೂರು ಆಯಾಮಗಳನ್ನು ಡಾ.ಭಟ್ ಅವರು ಇಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ.

“ಸಾಹಿತ್ಯ ವಿಮರ್ಶೆಯನ್ನು ಒಂದು ಮರದ ರೂಪಕದಲ್ಲಿ ಹೇಳುವುದಾದರೆ ಆ ಮರದ ಬೇರು ಅಂದರೆ ಸಾಹಿತ್ಯ ಮೀಮಾಂಸೆ. ಈ ಭಾಗದಲ್ಲಿರುವುದು ಸಾಹಿತ್ಯ ತತ್ವಗಳ ಚಿಂತನೆ. ಇದನ್ನು Theoretical Criticism ಎನ್ನುತ್ತಾರೆ. ಯಾವ ನಿರ್ದಿಷ್ಟ ಕೃತಿಯ ವಿಮರ್ಶೆ ಆಗಿರದೆ, ಉತ್ಕೃಷ್ಟ ಅಭಿಜಾತ ಕೃತಿಗಳನ್ನು ಉದಾಹರಣೆಗೆ ಬಳಸಿಕೊಂಡು, ಸಾಹಿತ್ಯದ ತತ್ತ್ವಗಳನ್ನು ಚಿಂತಿಸುವುದರಿಂದ ಈ ಹೆಸರು ಬಂದಿದೆ. ಈ ಮರದ ಕಾಂಡ ಮತ್ತು ದೊಡ್ಡ ಶಾಖೆಗಳು ಅಂದರೆ ವಿವಿಧ ಆಧುನಿಕ ವಿಮರ್ಶಾ ಪ್ರಸ್ಥಾನಗಳು (Critical Concepts).

ಈ ಮರದ ಸಣ್ಣ ಕೊಂಬೆ ರೆಂಬೆಗಳು, ಹೂವು, ಹಣ್ಣುಗಳು ಅಂದರೆ ಸಾಹಿತ್ಯ ವಿಮರ್ಶೆ ಕೃತಿ ವಿಮರ್ಶೆಗಳು. ಈಗ ನಾವು ಕೃತಿ ವಿಮರ್ಶೆ, ಸಾಹಿತ್ಯ ವಿಮರ್ಶೆ, ಕೃತಿ ಸಮೀಕ್ಷೆ ಮುಂತಾಗಿ ಕರೆಯುವ ಸಾಹಿತ್ಯಕ ಚಟುವಟಿಕೆಗಳು Literary Criticism ಎನಿಸಿಕೊಳ್ಳುತ್ತವೆ” ಕನ್ನಡದಲ್ಲಿ ಬಂದ ವಿಮರ್ಶೆಯ ಸಿದ್ಧಾಂತಗಳನ್ನು ಇತಿಹಾಸವನ್ನು ಹೇಳುವ ಹೆಚ್ಚಿನ ಕೃತಿಗಳು ಜಿಡುಕು ಜಿಡು ಕಾಗಿ ಗೊಂದಲಮಯವಾಗಿದ್ದು ಅವು ಸಂವಹನ ಗೊಳ್ಳುವುದಿಲ್ಲ.ಆದರೆ ಜನಾರ್ದನ ಭಟ್ ಅವರು ಸ್ವತಃ ಸೃಜನಶೀಲ ಲೇಖಕರಾಗಿ ಸೈ ಎನಿಸಿಕೊಂಡವರು. ಹೀಗಾಗಿ ಅವರ ವಿಮರ್ಶೆಯ ಕುರಿತಾದ ಬರವಣಿಗೆ ಸ್ಪಷ್ಟವಾಗಿ ನೇರವಾಗಿದ್ದು ವಾಚನೀಯ ಗುಣವನ್ನು ಹೊಂದಿದೆ. ಕನ್ನಡ ಸಾರಸ್ವತ ಲೋಕಕ್ಕೆ ಇದೊಂದು ಒಳ್ಳೆಯ ಸೇರ್ಪಡೆ.ಡಾ. ಜನಾರ್ದನ ಭಟ್ ಅವರಿಗೆ ಅಭಿನಂದನೆಗಳು.

  • ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai