ಸ್ತ್ರೀ ಸತ್ವದ ಮುಕ್ತ ಅನಾವರಣ ಹಾಗೂ ಹಲವು ನೆಲೆಗಳು

ಈ ಜಗತ್ತು ಸೃಷ್ಟಿಯ ಸುಂದರವಾದ ಕೊಡುಗೆ. ವ್ಯಷ್ಟಿ ಸಮಷ್ಟಿಗಳ ಅನ್ನೋನ್ಯತೆಯು ಈ ಅಂದಕ್ಕೆ ಕಾರಣ. ವ್ಯಕ್ತಿ ಮತ್ತು ಸಮಾಜ ಇವೆರಡರಲ್ಲಿ ಮುಖ್ಯ ಅಮುಖ್ಯಗಳ ಭೇದವನ್ನು ಎಣಿಸದೆಯೇ ಮುನ್ನಡೆಯುವ ಲೋಕಾನುಭವಿಗಳು ಜಗತ್ತನ್ನು ಸುಂದರವಾಗಿಸಲು ಕಾರಣರಾಗುತ್ತಾರೆ. ಅವರ ಬದುಕು ಯಾವಾಗಲೂ ಶಾಶ್ವತ ಸತ್ಯದ ಕಡೆಗೆ ಮುಖ ಮಾಡಿರುತ್ತದೆ. ಕರ್ತವ್ಯನಿಷ್ಠ ವ್ಯಕ್ತಿ ಹಾಗೂ ಸಮಾಜ ಪರಸ್ಪರ ಪೂರಕವಾಗಿರುವ ಸಮೂಹ ವ್ಯವಸ್ಥೆ. ಇಲ್ಲಿ ಆರ್ಥಿಕವಾಗಿ ಸದೃಢನಾಗಿ, ಸುಧಾರಣೆಯತ್ತ ಲಕ್ಷ್ಯವುಳ್ಳ ವ್ಯಕ್ತಿ ವಿಕಾಸದ ಕೇಂದ್ರಬಿಂದುವಾಗಿರುತ್ತಾನೆ. ಸುತ್ತಲಿನ ವ್ಯವಸ್ಥೆಯಲ್ಲಿ ತಾನು ಉತ್ತಮವಾದ ಬದುಕನ್ನು ನಡೆಸಿ, ವ್ಯವಸ್ಥೆಯನ್ನು ಪೋಷಿಸಿ, ಇತರರೂ ಹಿತಕರವಾದ ಬದುಕನ್ನು ನಡೆಸುವಂತೆ ಮಾಡುವ ಸಮಾಜದ ವ್ಯಕ್ತ ರೂಪವಾಗಿ ಇರುವವರು ಸುಂದರ ಸಮಾಜದ ಶಿಲ್ಪಿಗಳಾಗುತ್ತಾರೆ. ಪ್ರಕೃತಿಯಿಂದ ಸುಸಂಸ್ಕೃತಿಯ ಕಡೆಗೆ ವಿಕಾಸವಾಗುವ ಪಥದಲ್ಲಿ ಹೆಜ್ಜೆ ಹಾಕುತ್ತಾ ತನ್ನ ವ್ಯಕ್ತಿತ್ವದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ‘ಏರಿದವನು ಚಿಕ್ಕವನಿರಲೇಬೇಕು’ ಎಂಬ ಮಾತಿಗೆ ಮಾದರಿಯಾಗಿರುತ್ತಾರೆ. ಅಂತಹ ವ್ಯಕ್ತಿತ್ವದ ಅಂಕಿತ ನಾಮವೇ ಸುಧಾ ಮೂರ್ತಿ. ಅವರಿಂದ ರಚಿತವಾದ ಮೌಲ್ಯಾಧಾರಿತ ಕಾದಂಬರಿಗಳು ಏಳು, ವಿಜ್ಞಾನಿಯಾಗಿ, ಅಧ್ಯಾಪಕರಾಗಿ, ಉದ್ಯೋಗ ಪತಿಯಾಗಿ, ಆಡಳಿತ ತಜ್ಞರಾಗಿ, ಸಮಾಜ ಸೇವಕರಾಗಿರುವ ಸುಧಾ ಮೂರ್ತಿಯವರು ಬುದ್ಧಿ, ಧನಸಂಪತ್ತು, ಪರೋಪಕಾರಿ ಮನೋಭಾವ, ಮಾನವೀಯತೆ ಇವೆಲ್ಲದರ ಒಡತಿ. ಇದರ ಜೊತೆಗೆ ಸಾಹಿತ್ಯ ರಚನೆಯನ್ನೂ ಮಾಡುವ ಮೂಲಕ ಅವರು ಪೂರ್ಣದ ಕಡೆಗೆ ಸಾಗುತ್ತಿರುವುದು ಕನ್ನಡಿಗರಾದ ನಾವು ಅಭಿಮಾನ ಪಡುವ ಸಂಗತಿ.

ಸುಧಾ ಮೂರ್ತಿಯವರ ಸರ್ವಾಂಗೀಣ ಸಾಧನೆ ಈಗಾಗಲೇ ವಿಶ್ವವ್ಯಾಪಿಯಾಗಿದೆ. ಅವರು ಹುಟ್ಟಿ ಬೆಳೆದ ಮಣ್ಣಿನಲ್ಲಿ ಬಿತ್ತಿದ ಸಾಹಿತ್ಯ ಬೀಜ ಇಂದು ಸಮೃದ್ಧವಾದ ಸಾಹಿತ್ಯ ಲೋಕದ ಹಸಿರನ್ನು ಹೆಚ್ಚಿಸಿರುವುದು ಈಗಾಗಲೇ ವೇದ್ಯವಾಗಿದೆ. ಅವರ ಸಾಹಿತ್ಯವು ವಸ್ತು, ವಿಷಯ, ಶೈಲಿ, ನಿರೂಪಣೆ, ಹೆಣಿಗೆ, ತಂತ್ರ, ವೈಚಾರಿಕ ದೃಷ್ಟಿಕೋನ, ಚಿಂತನ ಮಂಥನಗಳೊಂದಿಗೆ ಸತ್ವಪೂರ್ಣವಾದ ಬದುಕಿಗೆ ಸದಾ ನೀರೆರೆಯುವುದರೊಂದಿಗೆ ಸುಧಾರಣೆಯ ಆಶಯವನ್ನೂ ಹೊಂದಿವೆ. ವಿಕಾಸಕ್ಕೆ ಬೆಳಕಾಗಿವೆ. ಮುಖ್ಯವಾಗಿ ಸುಧಾ ಮೂರ್ತಿಯವರ ಕಾದಂಬರಿಗಳು ಸ್ತ್ರೀ ಕೇಂದ್ರಿತ ನೆಲೆಯಲ್ಲಿ ರಚನೆಯಾಗಿವೆ. ಸ್ಪರ್ಧಾತ್ಮಕ ಜೀವನದಲ್ಲಿ ಸ್ತ್ರೀಯ ನಾನಾ ಮುಖಗಳನ್ನು ಹಲವು ಪಾತ್ರಗಳ ಮೂಲಕ ಪರಿಚಯಿಸುತ್ತದೆ. ಮಹಿಳೆಗೆ ಸಮಾಜವು ಒಡ್ಡುವ ಸವಾಲುಗಳನ್ನು, ಎದುರಾಗುವ ಸಮಸ್ಯೆಗಳನ್ನು ಗಟ್ಟಿತನದಿಂದ, ಅಷ್ಟೇ ವಿವೇಕದಿಂದ ಎದುರಿಸಲು ಪ್ರೇರಣೆ ನೀಡುತ್ತವೆ. ವ್ಯಕ್ತಿ, ಕುಟುಂಬ, ಸಮಾಜ, ಈ ಮೂರು ಹಂತಗಳಲ್ಲಿ ಕಾಣಬೇಕಾದ ಬದಲಾವಣೆಗಳನ್ನು ನಾವು ದಿನ ನಿತ್ಯ ಕಾಣುವ, ಸಾಮಾನ್ಯವೆಂದು ಭಾವಿಸಿರುವ ಸನ್ನಿವೇಶಗಳ ಮೂಲಕವೇ ಹೇಳುವುದರಿಂದ ಅವರ ಕಾದಂಬರಿಗಳು ಪರಿಣಾಮಕಾರಿಯಾಗಿವೆ. ಸಾಮಾಜಿಕ ಸಮಸ್ಯೆಗಳನ್ನು ವಿಭಿನ್ನ ಆಯಾಮಗಳಲ್ಲಿ ಪರಿಚಯಿಸುತ್ತ ಶ್ರಮ ಹಾಗೂ ಜವಾಬ್ದಾರಿಯ ಮಹತ್ವವನ್ನು ಪರೋಕ್ಷವಾಗಿ ತಿಳಿಸುತ್ತವೆ. ಅವರ ‘ಪರಿಧಿ’ ಕಾದಂಬರಿಯನ್ನು ಉದಾಹರಣೆಯಾಗಿಟ್ಟುಕೊಂಡು ಅವರ ಕಾದಂಬರಿಗಳನ್ನು ಹಲವು ನೆಲೆಗಳಲ್ಲಿ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.

ಜೀವನವನ್ನು ಅತ್ಯಂತ ಉತ್ಸಾಹ, ಆಸಕ್ತಿ, ಆನಂದದಿಂದ ಸ್ವೀಕರಿಸುವ ಹೆಣ್ಣು ತಾನು ಕೌಟುಂಬಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದಾಗಲೂ ಅತ್ಯಂತ ತಾಳ್ಮೆಯಿಂದ ತನ್ನ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಸಾಬೀತುಪಡಿಸುವ ಕಥೆ ‘ಪರಿಧಿ’ ಕಾದಂಬರಿಯ ವಸ್ತು. ಒಬ್ಬ ವ್ಯಕ್ತಿ ತಾನು ಹುಟ್ಟಿ ಬೆಳೆದ ಪರಿಸರ, ಹಿನ್ನೆಲೆಗಳೊಂದಿಗೆ ಯಾವ ರೀತಿ ಸ್ವಭಾವವನ್ನು ರೂಪಿಸಿಕೊಳ್ಳಬಹುದು ಎನ್ನುವುದಕ್ಕೆ ಕಾದಂಬರಿಯ ಕಥಾನಾಯಕಿ ಮೃದುಲಾ ಮಾದರಿ. ಅಂತಹ ಮಹಿಳೆಯರು ಜಾಣ್ಮೆಯಿಂದ ಒಂದು ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೆಂಬಂತೆ ಹೆಣೆದಿರುವ ಕಾದಂಬರಿಯು ಚೇತೋಹಾರಿಯಾಗಿದೆ. ಗಂಡು ಹೆಣ್ಣು ಪರಸ್ಪರರು ‘ಸೇರಿಗೆ ಸವ್ವಾಸೇರು’ ವಿರೋಧವನ್ನು ವ್ಯಕ್ತಪಡಿಸಿ ವಿಚ್ಛೇದನ ಪಡೆದು ಬದುಕನ್ನು ಹಾಗೂ ಸಮಾಜವನ್ನು ಅಂದಗೆಡಿಸುವ ವರ್ತನೆಯು ಸರಿಯಾದ ರೀತಿಯಲ್ಲಿ ಪರಿವರ್ತನೆಯಾಗಬೇಕು ಎಂಬ ಆಶಯ ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ. ಬದುಕಿನ ಏಳು ಬೀಳುಗಳನ್ನು, ಸಮಾಜ ಹಾಗೂ ವೃತ್ತಿ ಜೀವನದ ಸಂದಿಗ್ಧತೆಗಳನ್ನು ಕಾದಂಬರಿ ಸಾಂದ್ರವಾಗಿ ಹಿಡಿದಿಟ್ಟಿದೆ. ಜನರ ಹೀನ ಮನೋಭಾವ, ರಾಜಕೀಯ ಪ್ರಭಾವ, ಆರ್ಥಿಕ ಒತ್ತಡ, ಹಣವಂತರ, ಅಧಿಕಾರಶಾಹಿಗಳ ಪ್ರಭಾವ ಒಬ್ಬರ ಪ್ರತಿಭೆಯನ್ನು ಹೇಗೆ ಮಸುಕಾಗಿಸುತ್ತದೆ. ಮನುಷ್ಯನ ಮೂಲ ಸ್ವಭಾವವನ್ನು ಹೇಗೆ ಬದಲಿಸುತ್ತದೆ ಎಂಬುದರ ಗ್ರಹಿಕೆಯು ಕಾದಂಬರಿಯ ಇನ್ನೊಂದು ಮುಖ. ಸಾವಯವ ಕುಟುಂಬದಲ್ಲಿ ಅನೇಕ ಒತ್ತಡಗಳಿಂದ ಸಂಬಂಧಗಳು ಶಿಥಿಲವಾಗುವುದನ್ನು ಈ ಕಾದಂಬರಿಯು ತೋರಿಸುತ್ತದೆ.

‘ಪರಿಧಿ’ ಎನ್ನುವಂತಹ ಶೀರ್ಷಿಕೆ ಕಾದಂಬರಿಗೆ ಸಮಂಜಸವಾಗಿರುವುದಕ್ಕೆ ಕಾರಣಗಳು ಮೂರು.

  1. ಇಲ್ಲಿ ಕೌಟುಂಬಿಕ, ಔದ್ಯೋಗಿಕ;ಅದಕ್ಕೆ ಕೊಂಡಿಯಾಗಿರುವ ಔದ್ಯಮಿಕ ಹಾಗೂ ಸಾಮಾಜಿಕ ಹೀಗೆ ಮೂರು ಹೊರ ಪರಿಧಿಗಳಿವೆ. ಅವುಗಳ ಒಳಗೆ ನಿತ್ಯದ ವಿದ್ಯಮಾನಗಳನ್ನು, ಓರೆ ಕೋರೆಗಳನ್ನು ಸಾಂದರ್ಭಿಕವಾಗಿ ಪೋಣಿಸಿ ಕತೆಯನ್ನು ವಿಸ್ತರಿಸಲಾಗಿದೆ.
  1. ಪ್ರತಿಯೊಂದು ಹೊರ ಪರಿಧಿಯ ಒಳಗೂ ಕತೆಗೆ ಸಂಬಂಧಿಸಿದ ಮುಖ್ಯ ಪಾತ್ರಗಳು ತಮ್ಮದೇ ಆದಂತಹ ಸ್ವಭಾವ, ಪ್ರಭಾವಗಳಿಗೆ ಅನುಗುಣವಾಗಿ ನಿರ್ಮಿಸಿಕೊಂಡ ಒಳ ಪರಿಧಿಗಳಿವೆ. ಅದರ ಒಳಗೇ ಅವರವರ ಬಾಳು ಸಾಗುತ್ತಿರುತ್ತದೆ.
  2. ಕಾದಂಬರಿಯಲ್ಲಿ ಎರಡು ಮುಖ್ಯ ತಿರುವುಗಳಾಗುತ್ತವೆ. ಎರಡು ರೀತಿಯಲ್ಲಿ ಒಳ ಪರಿಧಿಯ ಮೀರುವಿಕೆಯೇ ಈ ತಿರುವುಗಳು.

ಮೊದಲಾಗಿ ಕಾದಂಬರಿಯ ಉತ್ತರಾರ್ಧದ ಆರಂಭದಲ್ಲಿ ನಾಯಕ ಸಂಜಯ ತನ್ನ ಪರಿಧಿಯನ್ನು ಮೀರುತ್ತಾನೆ. ಸಂಜಯ ಅತೀ ಬುದ್ಧಿವಂತ, ಬಡತನ, ಅಸಹಾಯಕತೆಯ ನಡುವೆಯೂ ಬುದ್ಧಿ ಬಲದಿಂದ ವೈದ್ಯಕೀಯ ಪದವಿಯನ್ನು ಪಡೆದು ಶಿಕ್ಷಕಿಯಾದ ಮೃದುಲಾಳಿಗೆ ಒಲಿದು, ಮದುವೆಯಾಗಿ ಅನ್ನೋನ್ಯ ಜೀವನವನ್ನು ನಡೆಸುತ್ತಾನೆ. ಶಿಶಿರನಿಗೆ ತಂದೆಯಾಗುತ್ತಾನೆ. ಕಲಿಕೆಯಲ್ಲೂ ಹಂತ ಹಂತವಾಗಿ ಮೇಲೇರುತ್ತಾನೆ. ಆದರೆ ಚಿಪ್ಪಿನೊಳಗಿನ ಆಮೆಯಂತೆ ಅಷ್ಟೇ ಸಂಕೋಚ ಸ್ವಭಾವದವನಾದ ಆತನಿಗೆ ತನ್ನ ವೈದ್ಯಕೀಯ ಕಾರ್ಯಕ್ಷೇತ್ರದಲ್ಲಿ ನಡೆಯುವ ಮೋಸ, ವಂಚನೆ, ಅಪಮಾನ, ಅವ್ಯವಹಾರಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಅವನ ಮನಸ್ಸು ರೋಸಿ ಹೋಗಿ ಉದಾರಿಯಲ್ಲದ ಗೆಳೆಯ ಆಲೆಕ್ಸ್ ನ ಸಲಹೆಯಂತೆ ಬದಲಾಗಲು ಇಚ್ಛಿಸುತ್ತಾನೆ. ಸರ್ಕಾರಿ ಕೆಲಸವನ್ನು ಬಿಟ್ಟು ಸ್ವಂತ ಆಸ್ಪತ್ರೆಯನ್ನು ತೆರೆಯುತ್ತಾನೆ. ಮೃದುಲಾಳ ಸಹಕಾರದೊಂದಿಗೆ ವೃತ್ತಿ ಸರಿಯಾಗಿ ಕೈ ಹಿಡಿದಾಗ ಅದರ ಜೊತೆಗೆ ಉದ್ಯಮವನ್ನೂ ಆರಂಭಿಸಲು ಮುಂದಾಗುತ್ತಾನೆ. ಕೈತುಂಬಾ ಹಣ ಬಂದಾಗ ಒಂದು ಹಂತದಲ್ಲಿ ಆತ ತನ್ನ ಮೂಲ ಸ್ವಭಾವಕ್ಕೆ, ಆದರ್ಶಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಪರಿಧಿಯನ್ನು ಮೀರುತ್ತಾನೆ. ಹಣದ, ಖ್ಯಾತಿಯ ಬೆನ್ನು ಹತ್ತಿ ಹೋಗಿ ತನ್ನ ತಾಳ್ಮೆ, ವಿವೇಕವನ್ನು ಕಳೆದುಕೊಳ್ಳುತ್ತಾನೆ. ತಾಯಿ ರತ್ನಮ್ಮ ಚಿಕ್ಕಂದಿನಿಂದಲೂ ಕಲಿಸಿದ ವ್ಯಾವಹಾರಿಕ ಚುರುಕುತನದ ಪಾಠವನ್ನು ತನ್ನ ಮನೋಸ್ಥೆರ್ಯ ಹೆಚ್ಚಿಸಿಕೊಳ್ಳಲಷ್ಟೇ ಅಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತಾನೆ. ಏನನ್ನೋ ಮಾಡಲು ಹೋಗಿ ಇನ್ನೇನೋ ಆದ ಎನ್ನುವ ರೀತಿಯಲ್ಲಿ ಅಸಮರ್ಪಕ ಬದಲಾವಣೆಗಳಿಗೆ ಕಾರಣನಾಗುತ್ತಾನೆ. ಗಾಳಿ ಬಂದಾಗ ತೂರಿಕೊಳ್ಳುವ ಪಾತ್ರಗಳಾದ ಅಕ್ಕ ಲಕ್ಷ್ಮಿ, ಅವಳ ಗಂಡ ಪ್ರಭಾಕರ ಮುಂತಾದವರು ಆತನ ಪರಿಧಿಯೊಳಗೆ ಪ್ರವೇಶಿಸಿ ಪ್ರಯೋಜನ ಪಡೆಯುತ್ತಾರೆ. ಹಣ ಬಂದಾಗ ಮನುಷ್ಯನಲ್ಲಾಗುವ ಬದಲಾವಣೆಗಳನ್ನು ಈ ಭಾಗದಲ್ಲಿ ವಿಶೇಷಿಸಲಾಗಿದೆ. ಇತ್ತ ಆರೋಗ್ಯಕರವಾದ ಪರಿಧಿಯನ್ನು ನಿರ್ಮಿಸಿಕೊಂಡು ಸಹ ಧರ್ಮಿಣಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಆನಂದದಿಂದ ಬದುಕುತ್ತಿರುವ ನಾಯಕಿ ಮೃದುಲಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾಳೆ. ಬಾಳ ಸಂಗಾತಿಯಾದವನು ತನ್ನ ಆಸೆ ಕೈಗೂಡಲು ಸಹಕರಿಸಿದ ಹೆಂಡತಿಯ ಇಚ್ಛೆಯನ್ನು ಅರಿಯುವ ಪ್ರಯತ್ನವನ್ನೂ ಮಾಡದೆ ಆಕೆ ಹೊರ ಪ್ರಪಂಚದ ವ್ಯವಹಾರಗಳನ್ನು ಅರಿಯದ ಮುಗ್ಧ ಎಂಬಂತೆ ದೂರವಿಡುತ್ತಾನೆ. ಕಲಿತು ವೈದ್ಯನಾಗಿ ಕೈಗೆ ಬರುತ್ತಿರುವ ಮಗ ಶಿಶಿರನೂ ಅಪ್ಪನ ಪಕ್ಷ ವನ್ನು ವಹಿಸುವವ, ಒಂದು ಹಂತದ ವರೆಗೆ ಮೃದುಲಾ ಪರಸ್ಪರ ಸಹಕಾರವೆಂಬಂತೆ ಈ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಒಮ್ಮೆ ಗಂಡನ ಅನೈತಿಕ ಹಣ ಸಂಪಾದನೆ ತನಗೆ ತಿಳಿಯದ ಹಾಗೆ ಮಿತಿ ಮೀರುತ್ತಿರುವುದು ಖಾತ್ರಿಯಾದಾಗ, ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಅರಿವಾದಾಗ ಆಕೆ ಖಿನ್ನಳಾಗುತ್ತಾಳೆ. ತನಗೆ ಆಪ್ತ ಸ್ನೇಹಿತೆಯಾದ. ಅನಿತಾಳ(ಆಲೆಕ್ಸ್‌ನ ಹೆಂಡತಿ) ಸಲಹೆಯನ್ನೂ, ಮಗ ಶಿಶಿರನನ್ನು ಚಿಕ್ಕಂದಿನಿಂದಲೂ ಸಲಹಿದ ತನ್ನ ಶಾಲೆಯ ಹೆಡ್ ಮಾಸ್ಟರ್ ಮುನಿಯಪ್ಪನವರ ಪತ್ನಿ ಕಾಂತಮ್ಮನವರ ಅಭಿಪ್ರಾಯವನ್ನೂ ಕೇಳುತ್ತಾಳೆ. ಅವೆರಡೂ ಮೃದುಲಾಳ ಮನಸ್ಥಿತಿಗೆ ಹೊಂದದೇ ಇರುವುದರಿಂದ ಅನುಭವಿ ಮನೋವೈದ್ಯ ಡಾ. ರಾವ್ ಅವರನ್ನು ಸಂಪರ್ಕಿಸುತ್ತಾಳೆ. ಅವರ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಕಂಡುಕೊಳ್ಳುವಾಗ ಪರಿಹಾರೋಪಾಯ ಅವಳ ಅರಿವಿಗೆ ಬರುತ್ತದೆ. ಅವರಿಬ್ಬರ ನಡುವೆ ನಡೆಯುವ ಪ್ರಶೋತ್ತರಗಳ ರೂಪದಲ್ಲಿ ಅನಾವರಣವಾದ ಮಹಿಳೆಯ ಒಳತೋಟಿಗಳು, ತುಮುಲಗಳು ಕಾದಂಬರಿಕಾರರ ಸೂಕ್ಷ್ಮ ಸ್ತ್ರೀ ಸಂವೇದನೆಗೆ ಸಾಕ್ಷಿಯಾಗಿವೆ. ಇವುಗಳ ಹಿನ್ನೆಲೆಯಲ್ಲಿ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿರುವುದು ಕಾದಂಬರಿಯ ಮುಖ್ಯ ಭಾಗವಾಗಿದೆ. (ಪು.283-300) ಆದಾದ ನಂತರ ಬರುವ ಎರಡನೆಯ ತಿರುವು ‘ಪರಿಧಿ’ ಕಾದಂಬರಿಯನ್ನು ಗೆಲ್ಲಿಸಿದೆ. ಇದು ಕಾದಂಬರಿಯ ಕೊನೆಯಲ್ಲಿ ಬರುವ ತಿರುವು. ನಾಯಕಿ ಮೃದುಲಾ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹಾಗೂ ಆದರ್ಶ ಪಾಲನೆಗಾಗಿ ವಿವೇಕದಿಂದ ತನ್ನ ಪರಿಧಿಯನ್ನು ಮೀರುತ್ತಾಳೆ. ಅತ್ತೆ ರತ್ನಮ್ಮ ಹೇಳಿದ ಕಿವಿ ಮಾತಿನಂತೆ ತನ್ನ ಶಿಕ್ಷಕ ವೃತ್ತಿಯ ಸಂಬಳದಲ್ಲಿ ಉಳಿಸಿಟ್ಟ ಹಣವನ್ನು ಎತ್ತಿಕೊಂಡು ತವರೂರಾದ ಆಲದ ಹಳ್ಳಿಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದುಕೊಂಡು ಸ್ವತಂತ್ರವಾಗಿ ಬದುಕುವ ನಿರ್ಧಾರಕ್ಕೆ ಬರುತ್ತಾಳೆ. ಇದೊಂದು ಅರ್ಥಪೂರ್ಣವಾದ ಮೀರುವಿಕೆಯಾಗಿದೆ. ಅತ್ತ ಹೆಚ್ಚಿನ ಕಲಿಕೆಗಾಗಿ ಹೊರದೇಶಕ್ಕೆ ಹೋದ ಶಿಶಿರನಿಗೆ ತಮ್ಮ ಕುಟುಂಬದ ಒಳಿತಿನಲ್ಲಿ ಅಮ್ಮನ ಪಾತ್ರ ಮುಖ್ಯವಾಗಿತ್ತು ಎಂಬುದರ ಅನುಭವವಾಗುತ್ತದೆ. ಸಂಜಯನಿಗೂ ಮೃದುಲಾಳ ಇರುವಿಕೆಯ ಮಹತ್ವ ಆಗ ಅರಿವಾಗುತ್ತದೆ. ಕೊನೆಯಲ್ಲಿ ಸಂಜಯ- ಮೃದುಲಾರ ಒಳ್ಳೆಯ ಅಂತಃಕರಣ, ಮೂಲ ಸ್ವಭಾವ, ಬೆಳೆದ ಸಂಸ್ಕಾರ ಹಾಗೂ ಅವರು ಪಡೆದ ಜ್ಞಾನ, ತಿಳುವಳಿಕೆ, ಅರಿವಿನ ಬಲದಿಂದ ಕಾದಂಬರಿ ಸುಖಾಂತ್ಯವಾಗುತ್ತದೆ. ಅವರಿಬ್ಬರ ಮೊದಲ ಭೇಟಿಯ ಸನ್ನಿವೇಶದಲ್ಲಿ ಮೃದುಲಾ ತನ್ನ ಚೀಲದಲ್ಲಿರುವುದನ್ನು ಕಳುವು ಮಾಡುತ್ತಿರುವಳೆಂಬ ತಪ್ಪು ಕಲ್ಪನೆಯಿಂದ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದ ಸಂಜಯನ ಕೈಯನ್ನು ಕಾದಂಬರಿಯ ಅಂತ್ಯದಲ್ಲಿ ಆತ್ಮ ಸಂಗಾತಿಯಾಗಿ, ಓರ್ವ ಸುಸಂಸ್ಕೃತ ಹೆಣ್ಣಾಗಿ ಅವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಅವಳು ಜೋಕಾಲಿಯಲ್ಲಿ ಜೀಕುತ್ತಿರುವಾಗ ಅದನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿದ ಭರವಸೆಯ ಕೈಯಾಗಿ ಪರಿವರ್ತಿಸಿರುವ ಕಾದಂಬರಿಯ ತಂತ್ರ ವಿಶೇಷವಾಗಿದೆ.

ಕಾದಂಬರಿಯ ವಿಶೇಷತೆ ಹಾಗೂ ಇದು ಸಾರ್ವಕಾಲಿಕವಾದ ಮಹತ್ವವನ್ನು ಪಡೆದಿರಲು ಕಾರಣಗಳು

ಆಲದ ಹಳ್ಳಿಯ ವರ್ಣನೆ – ಹುಬ್ಬಳ್ಳಿಯಿಂದ ಶಿಗ್ಗಾಂವಿಗೆ ಹೋಗುವಾಗ 10 ಕಿ. ಮೀ ಅಂತರದಲ್ಲಿ ಹಿಂದೆಯೇ ಇರುವ ನಾಯಕಿ ಮೃದುಲಾಳ ಊರಾದ ‘ಆಲದ ಹಳ್ಳಿ’ ಎಂಬ ಹೆಸರೇ ಆ ಊರಿನವರ ಹೃದಯ ವೈಶಾಲ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಕಾದಂಬರಿಯಲ್ಲಿ ಹಳ್ಳಿಯ ಭೌಗೋಳಿಕ ಪರಿಸರದ ಸುಂದರ ವರ್ಣನೆಯಿದೆ. ಅಪ್ಪಟ ಹಳ್ಳಿಯ ಜಾನಪದ ಭಾಷೆ, ಹಬ್ಬ ಹರಿದಿನ, ಮದುವೆ ಸಮಾರಂಭಗಳ ಆಚರಣೆ, ಕೌಟುಂಬಿಕ ಜೀವನ ಚಿತ್ರಣ, ಸಾಮರಸ್ಯದ ಜೀವನ, ಅಲ್ಲಲ್ಲಿ ಇಣುಕುವ ಗಾದೆ ಮಾತುಗಳು, ನಾಣ್ಣುಡಿಗಳೊಂದಿಗೆ ಸಾಗುವ ಸಂಭಾಷಣೆಗಳು ಓದುಗರನ್ನು ಅಲ್ಲೆಲ್ಲ ಕಡೆ ಸುತ್ತಾಡಿಸಿ ಬರುವುದು. ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಸೊಗಸಾಗಿ ಕಾದಂಬರಿಯು ತೆರೆದಿಟ್ಟಿದೆ. ನಾಯಕ ಸಂಜಯನ ಊರಾದ ಟಿ ನರಸೀಪುರದಲ್ಲಿರುವ ಅವನ ಕುಟುಂಬ ಜೀವನದ ಚಿತ್ರಣವಿದೆ. ಅವನ ತಂದೆ ತಾಯಿಯರ ಗುಣ ಸ್ವಭಾವ ಜೀವನಾನುಭವದಿಂದ ಬಂದಿರುವ ಹಿರಿಯರ ಸ್ವಭಾವ ಎಂಬಂತೆ ಮೂಡಿದೆ. ತಾಯಿ ರತ್ನಮ್ಮನ ಪಾತ್ರ ಕಾದಂಬರಿಯಲ್ಲಿ ವಿಶೇಷವೂ ಆಕರ್ಷಣೀಯವೂ ಆಗಿದೆ. ಅವಳ ನೇರ ನಡೆ ನುಡಿ, ಕಟುವಾದ ವ್ಯಾವಹಾರಿಕ ಮನೋಭಾವ, ಚಿಂತನೆ ಅತಿರೇಕವೆನಿಸಿದರೂ ಸಮಾಜದಲ್ಲಿ ಯಾರಿಗೂ ಕೆಡುಕನ್ನು ಮಾಡದೆ ತನಗೆ ಬೇಕಾದ ಹಾಗೆ ಜೀವನ ನಡೆಸುವ ದಿಟ್ಟತನ ಮಹಿಳೆಗೆ ಇರಬೇಕು ಎನ್ನುವ ದೃಷ್ಟಿಯಲ್ಲಿ ನೋಡುವಾಗ ಅವಳ ಪಾತ್ರ ಅತ್ಯಂತ ಆಪ್ತವಾಗುತ್ತದೆ. ಅವಳು ಆಡುವ ಮಾತುಗಳು ಅನೇಕ ಸಂದರ್ಭಗಳಲ್ಲಿ ಸಂಜಯನಿಗೆ ಆತ್ಮಸ್ಥೆರ್ಯವನ್ನು ಹೆಚ್ಚಿಸಿಕೊಂಡು ಹಿಂಜರಿಕೆಯಿಂದ ಹೊರಬರಲು ನೆರವಾಗುವವು. ಕೊನೆಯಲ್ಲಿ ಮೃದುಲೆಯ ನಿರ್ಧಾರ ಕೈಗೂಡಲೂ ಅತ್ತೆಯ ಕಿವಿಮಾತೇ ಸಹಕಾರ ನೀಡುವುದು. ಕಾದಂಬರಿ ಅನೇಕ ಜೀವನ ತತ್ವಗಳನ್ನು ಪ್ರತಿಪಾದಿಸುತ್ತದೆ. ಒತ್ತಡವಿಲ್ಲದ ಉತ್ತಮ ಜೀವನಕ್ಕೆ ಬೇಕಾಗುವ ಗುಣಗಳನ್ನು ರೂಢಿಸಿಕೊಳ್ಳಲು ಇಲ್ಲಿನ ಪಾತ್ರ, ಸನ್ನಿವೇಶಗಳು ಅನುವುಮಾಡಿಕೊಟ್ಟಿವೆ. ಪ್ರತಿಯೊಂದು ಸಾಲೂ ಸತ್ವಪೂರ್ಣವಾಗಿದೆ. ವಸ್ತು, ವ್ಯಕ್ತಿ, ಪರಿಸರ, ಕುಟುಂಬ, ಸಮಾಜ, ವೈದ್ಯಕೀಯ ಕ್ಷೇತ್ರ, ರಾಜಕೀಯ, ಈ ಎಲ್ಲ ವಿಷಯಗಳೊಂದಿಗೆ ಹರಹು ಪಡೆದು ಆಗಾಗ ಪರಂಪರೆಯೊಂದಿಗೆ ಪಿಸುಮಾತನಾಡುತ್ತಾ ಸಾಗುವಾಗ, ಕಾದಂಬರಿ ಅನನ್ಯವೆನಿಸುತ್ತದೆ. ಸಮಾಜದ ವಿವಿಧ ಕ್ಷೇತ್ರಗಳ ವ್ಯವಸ್ಥೆಗಳ ಅಡಿಯಲ್ಲಿ ದುಡಿಯುವವರು ಕಾರ್ಯನಿಷ್ಠರಾಗಿರಬೇಕು, ಅವರ ಮನೋಭಾವ ಮಾನವೀಯವಾಗಿರಬೇಕು, ಒಬ್ಬ ವಿದ್ಯಾವಂತ ಹೆಣ್ಣು ಹುಟ್ಟು ಸಾವುಗಳ ನಡುವೆ ಜೋಕಾಲಿ ಜೀಕುವಾಗ ಜಾಣೆಯಿಂದ ಜಾಗರೂಕಳಾಗಿರಬೇಕು. ಬದುಕು ವಿಷಮವಾದಾಗ ಸಮಚಿತ್ತದಿಂದ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಜಯಿಸಿ ಬರಬೇಕು ಎನ್ನುವುದು ಈ ಕಾದಂಬರಿ ಹೇಳುವ ಸಾರ್ವಕಾಲಿಕ ಸತ್ಯ.

ಜೀವನವನ್ನು ಹಸನಾಗಿಸುವ, ಸಹ್ಯವಾಗಿಸುವ, ತಿದ್ದುವ ರೀತಿಯಲ್ಲಿ ಸುಧಾ ಮೂರ್ತಿಯವರ ಕಾದಂಬರಿಗಳ ಕಥಾ ಹಂದರವಿರುತ್ತದೆ. ಈ ಕಾದಂಬರಿಯಲ್ಲಿ ಪ್ರತಿಯೊಂದು ಪರಿಧಿಯ ಒಳಗೂ ವಿಚಾರಗಳನ್ನು ಪ್ರಚೋದಿಸುವ, ಮನಸ್ಸನ್ನು ಶುದ್ಧವಾಗಿಸುವ ವಿಷಯಗಳು ಹೆಣೆಯಲ್ಪಟ್ಟಿವೆ. ಇಲ್ಲಿ ಕಥಾನಾಯಕಿಯ ಸ್ವಭಾವ ವರ್ಣನೆ ವಿಶೇಷವಾಗಿದೆ. “ಜೋಕಾಲಿಯಿಂದಲೇ ಮೃದುಲಾ ತನ್ನ ಮನೆಯನ್ನು ನೋಡುತ್ತಿದ್ದಳು. ಅವಳಿಗೆ ಅತೀವ ಜೀವನದ ಉತ್ಸಾಹ, ಪ್ರತಿಯೊಂದರಲ್ಲೂ ಅಪರಿಮಿತವಾದ ಆಸಕ್ತಿ. ಜೀವನವನ್ನು ಪ್ರತಿ ನಿಮಿಷವೂ ಅವಳು ನೋಡುವ ದೃಷ್ಟಿಯೇ ಬೇರೆ. ಬೆಳಗಿನ ಸೂರ್ಯ ಕೇವಲ ತನಗಾಗಿಯೇ ಹುಟ್ಟುತ್ತಾನೆ ಎಂಬ ಭರವಸೆ. ಕಾಮನ ಬಿಲ್ಲು ಅವಳಿಗಾಗಿಯೇ ಮೂಡಿದೆ ಎನ್ನುವ ತವಕ. ಜೀವನದಲ್ಲಿ ಯಾವ ಮಾಸವೂ ಅವಳಿಗೆ ಮುಗಿಯದ ಆನಂದ, ಯಾವ ಅಳತೆಗೋಲಿನಿಂದಲೂ ಅವಳ ಉತ್ಸಾಹ ಅಳೆಯಲು ಸಾಧ್ಯವಿಲ್ಲ” (ಪು.4) ಇದು ಕಾದಂಬರಿಯ ಕತೆಗೆ ಪೂರಕವಾಗಿ ಚಿತ್ರಿಸಿರುವ ಒಬ್ಬ ಹೆಣ್ಣುಮಗಳ ಗುಣವಾದರೂ ನಿಜ ಜೀವನದಲ್ಲೂ ಸ್ತ್ರೀಯರ ಬದುಕು ಸುಂದರವಾಗುವುದು ಇಂತಹ ಗುಣಗಳಿಂದಲೇ. ಅವಳ ಅಂತಃಸತ್ವ ಎಂತಹ ಪ್ರತಿಕೂಲ ಪರಿಸ್ಥಿತಿಗಳನ್ನೂ ಸಮತೋಲನಕ್ಕೆ ತರುವಲ್ಲಿ ಸಹಕರಿಸುತ್ತದೆ. ಇನ್ನು, ಕಥಾನಾಯಕ ಸಂಜಯನ ಛಲ, ಸಾಧನೆ, ಕರ್ತವ್ಯ ನಿಷ್ಠೆ, ಒಬ್ಬ ವೈದ್ಯನಾಗಿ ಆತನ ಸೇವಾ ಮನೋಭಾವ ಇವೆಲ್ಲವೂ ಆದರ್ಶ ಜೀವನಕ್ಕೆ ಪೋಷಕ ಅಂಶಗಳು.

ಸಂಜಯನ ಅಕ್ಕ ಲಕ್ಷ್ಮಿ ತವರು ಮನೆಯಲ್ಲಿ ಮಿತವಾಗಿಯೇ ಜೀವನ ನಡೆಸುತ್ತಿದ್ದವಳು ಮುಂದೆ ಮದುವೆಯಾಗಿ ನಾಲ್ಕಾರು ಅಣ್ಣ ತಮ್ಮಂದಿರು ಒಟ್ಟಿಗೆ ವಾಸಿಸುತ್ತಿರುವ ಒಟ್ಟು ಕುಟುಂಬವನ್ನು ಸೇರಿ ಮೈಸೂರಿನಲ್ಲಿ ವಾಸಿಸುತ್ತಾಳೆ. ಪುಕ್ಕಲು ಸ್ವಭಾವದವಳಾದ ಆಕೆ ಬಾಹ್ಯ ಪ್ರಭಾವದಿಂದ, ಸಹವಾಸ ದೋಷದಿಂದ, ಮನೆಯ ಹೆಂಗಸರೊಂದಿಗೆ ಪೈಪೋಟಿಗೆ ಬಿದ್ದು ಸುಳ್ಳು ಮರ್ಯಾದೆ, ದೊಡ್ಡಸ್ತಿಕೆ ಎಲ್ಲವನ್ನು ತನ್ನ ಪರಿಧಿಯೊಳಗೆ ಸ್ಥಾಪಿಸಿಕೊಳ್ಳುತ್ತಾಳೆ. ಮುಂದೆ ಹಣ ಬಂದಾಗ ಸಂಜಯನ ನಡವಳಿಕೆ ಬದಲಾಗುವಲ್ಲಿ ಅವಳ ಹಾಗೂ ಅವಳ ಸ್ವಭಾವಕ್ಕೆ ತಕ್ಕಂತೆ ಕುಣಿಯುವ ಗಂಡ ಪ್ರಭಾಕರನ ಪಾತ್ರವೂ ಕಾರಣವಾಗುತ್ತದೆ. ಇಂತಹ ದಾರಿ ತಪ್ಪಿಸುವ ದುರಾಸೆ ಸುಂದರ ಜೀವನಕ್ಕೆ ಪ್ರತಿಕೂಲವಾಗುವುದೆಂಬ ಜೀವನ ತತ್ವ ಇಲ್ಲಿದೆ. ಕಾದಂಬರಿಯಲ್ಲಿ ಬರುವ ಆಲದ ಹಳ್ಳಿ, ಆಲದ ಮರ, ಅದಕ್ಕೆ ಕಟ್ಟಿದ ಜೋಕಾಲಿ, ಅದರ ಮೇಲೆ ಕುಳಿತು ಜೀಕುವ ಮೃದುಲಾ ಇವೆಲ್ಲ ಪ್ರತಿಮೆಗಳು, ವರ್ಣನೆಗಳು ಓದುಗರಲ್ಲಿ ವಿಶಾಲ ಮನೋಭಾವ, ಉತ್ಸಾಹವನ್ನು ಮೂಡಿಸಿ ಹಲವು ಬಗೆಗಳಲ್ಲಿ ಯೋಚಿಸಲು ಅವಕಾಶ ಮಾಡಿಕೊಡುತ್ತವೆ. ಕಾದಂಬರಿಯಲ್ಲಿ ಆರೋಗ್ಯ, ಪರಿಸರ, ವೈಚಾರಿಕತೆ, ಸೌಹಾರ್ದತೆಯನ್ನು ಬಿಂಬಿಸುವ ಸಾಲುಗಳು ಆಗಾಗ ಇಣುಕುತ್ತವೆ.

ಉದಾ: ಆರೋಗ್ಯದ ಬಗ್ಗೆ ಸಂಜಯ ಮುಂಬಯಿಯ ಕೆ. ಇ. ಎಂ. ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿರುವಾಗ ಕೆಲಸದಲ್ಲಿ ಮೈಮರೆತ ಆತನಿಗೆ ಮದುವೆಗೆಂದು ಹುಬ್ಬಳ್ಳಿಗೆ ಪ್ರಯಾಣಿಸಬೇಕಾದ ರೈಲಿನ ಸಮಯ ಥಟ್ಟನೆ ನೆನಪಾಗುತ್ತದೆ. ಶರವೇಗದಿಂದ ಬಂದು ರೈಲು ಏರಿದಾಗ ವೈದ್ಯನಾದ ಆತನ ಮನದಲ್ಲಿ ಬರುವ ಆರೋಗ್ಯದ ಬಗೆಗಿನ ವಿಚಾರ ಹೀಗಿದೆ- “ಆತಂಕಗಳಿಂದಲೆ ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವುದು. ಆತಂಕ ಜೀವನದ ಒಂದು ಅಂಗ. ಅದರೊಂದಿಗೆ ಸಹಬಾಳ್ವೆ ಅತ್ಯಗತ್ಯ ಅದನ್ನು ನಿಯಂತ್ರಿಸಲು ಕಲಿತರೆ ಬಾಳು ಸುಗಮ” (ಪು.15)

ಪರಿಸರ ಕಾಳಜಿ – ನದಿ ತೀರದಲ್ಲಿ ಸಂಗ್ರಹವಾಗಿರುವ ಉಸುಕನ್ನು ಸರ್ಕಾರದ ಅನುಮತಿ ಪಡೆದೋ ಪಡೆಯದೆಯೋ ತೆಗೆದು ಮನೆ ಕಟ್ಟಲು ಬಳಸುವುದರಿಂದ ಮಳೆಗಾಲದಲ್ಲಿ ನದಿಗೆ ನೀರು ಬಂದಾಗ ಗುಂಡಿಯಾಗುವುದು. ನೀರು ಮುಂದೆ ಹರಿಯಲು ಅನಾನುಕೂಲವಾಗುವುದು ಎಂಬ ವಿಚಾರವನ್ನು ಸಂಜಯ ತಾಯಿಯೊಂದಿಗೆ ಹಂಚಿಕೊಳ್ಳುತ್ತಾನೆ.

ಸಾಮಾಜಿಕ ಕಾಳಜಿ- ತಾಯಿಯೊಂದಿಗೆ ಮಾತುಕತೆಯಾಡುವಾಗ ಸಂಜಯ ಹೇಳುವುದು ಹೆಚ್ಚು ಹೆಚ್ಚು ಮನೆಗಳ ನಿರ್ಮಾಣವಾಗುವುದು ಜನ ಸಂಖ್ಯೆ ಹೆಚ್ಚಾದಾಗ. ಸರ್ಕಾರ, ಕುಟುಂಬ ಕಲ್ಯಾಣ ಇಲಾಖೆಯವರು ಕುಟುಂಬ ಯೋಜನೆಯ ಬಗ್ಗೆ ಅವಿರತವಾಗಿ ಹೇಳಿದರೂ ಹಳ್ಳಿಯವರು ಯಾರೂ ಕೇಳುವುದಿಲ್ಲ. (ಪು.94)

ಸೌಹಾರ್ದತೆ, ವೈಚಾರಿಕತೆಯನ್ನು ಹೇಳುವ ಸಾಲುಗಳು ಆಲದ ಹಳ್ಳಿಯ ಚಿತ್ರಣದ ಭಾಗವಾಗಿ “ಆಲದ ಹಳ್ಳಿಯಲ್ಲಿ ಶೇಕಡ ಐವತ್ತರಷ್ಟು ಹಿಂದುಗಳಿದ್ದರೆ ಇನ್ನು ಐವತ್ತರಷ್ಟು ಇಸ್ಲಾಂ ಮತದವರು. ಹನುಮಂತ ದೇವರ ಗುಡಿಯ ಎದುರಿಗೆ ಮಸೀದಿಯೂ ಇದೆ. ಮಸೀದಿಯ ಮುಲ್ಲಾ ಜಲಾಲುದ್ದೀನ್, ಹನುಮಂತ ದೇವರ ಅರ್ಚಕ ಕುರುಬರ ಸಂಗಣ್ಣ ‘ಜಾನೆ ದೋಸ್ತ್’. ಹಳ್ಳಿಯ ಹನುಮಂತ ದೇವರಿಗೆ ನೂರಾರು ಮಂತ್ರದ, ಅರ್ಚನೆಯ ಗೊಂದಲವೇ ಇಲ್ಲ. ಪ್ರತಿದಿನ ಸ್ನಾನ ಮಾಡಿಸಿ ಕಣಗಲೆ ಹೂವನ್ನು ಏರಿಸಿ ಎರಡು ವೀಳ್ಯದೆಲೆ, ಸ್ವಲ್ಪ ಬೆಲ್ಲವನ್ನು ನೈವೇದ್ಯಕ್ಕಿಟ್ಟರೆ ಪೂಜೆ ಮುಗಿಯಿತು”. (ಪು.5)’ಪರಿದಿ’ ಕಾದಂಬರಿಯು ನಿರೂಪಣೆ ಮತ್ತು ಸಂಭಾಷಣೆಗಳನ್ನೊಳಗೊಂಡಿರುವುದರಿಂದ ಎಲ್ಲಿಯೂ ಗೊಂದಲವಾಗದ ರೀತಿಯಲ್ಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ಶಿಗ್ಗಾಂವಿ ಪರಿಸರದ, ಟಿ ನರಸಿಪುರದ, ಬೆಂಗಳೂರಿನ ಭಾಷೆಯ ಸೊಗಡನ್ನು ಇಲ್ಲಿ ಕಾಣಬಹುದು. ಅತಿಯೆನಿಸುವ ವರ್ಣನೆ, ರಂಜಕತೆಗೆ ಹೆಚ್ಚು ಒತ್ತು ಕೊಡದೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಆ ಮೂಲಕ ವಿಕಾಸ ಪಥವನ್ನು ತೋರುವ ಕಾದಂಬರಿಯಿದು. ಇಲ್ಲಿ ಬರುವ ಪಾತ್ರಗಳನ್ನು ಕೇವಲ ಹರವು ತಿರುವುಗಳಿಗೆ ಪೋಷಕವಾಗಿ ಮಾತ್ರ ಬಳಸಿಕೊಂಡಿಲ್ಲ. ಬದಲಾಗಿ ಹೆಚ್ಚಿನ ಪಾತ್ರಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಜೀವನ ಪಾಠವನ್ನು ಹೇಳುವಂತೇ ಚಿತ್ರಿಸಿರುವುದು ವಿಶೇಷ. ‘ಪರಿಧಿ’ಯಷ್ಟೇ ಅಲ್ಲ, ಸುಧಾ ಮೂರ್ತಿಯವರ ಎಲ್ಲ ಕಾದಂಬರಿಗಳು ಓದುಗರ ಋಣಾತ್ಮಕ ಮನೋಭಾವವನ್ನು, ಮನಸ್ಸಿನ ಸಂದಿಗ್ಧತೆಯನ್ನು ಹೋಗಲಾಡಿಸಿ ಕಾಲ, ಸಂದರ್ಭಗಳಿಗೆ ಅನುಸಾರವಾವಾಗಿ ಹೊಸ ಹೆಜ್ಜೆಯಿಡುತ್ತಾ ಜೀವನವನ್ನು ಸಮಚಿತ್ತದಿಂದ ನಿರಾತಂಕವಾಗಿ ಸ್ವೀಕರಿಸುವ ಉತ್ಸಾಹವನ್ನು ಹೆಚ್ಚಿಸುತ್ತವೆ. ವ್ಯವಸ್ಥೆಯಲ್ಲಿ ಎಲ್ಲಿಯವರೆಗೆ ಸರಿಯಾದ ಸುಧಾರಣೆಗಳಾಗುವುದಿಲ್ಲವೋ ಜನರ ಮನೋಭಾವ ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೂ ಅನನ್ಯ ಆಯಾಮವಿರುವ ಅವರ ಕಾದಂಬರಿಗಳು ಮಹತ್ವವನ್ನು ಪಡೆದಿವೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಸ್ತ್ರೀ ಸತ್ವದ ಮುಕ್ತ ಅನಾವರಣ ಹಾಗೂ ಹಲವು ನೆಲೆಗಳು”

  1. ಉಪಾಧ್ಯ. ಜಿ. ಎನ್

    ಸೊಗಸಾಗಿದೆ ಕೃತಿ ವಿಮರ್ಶೆ, ಇದೊಂದು ಒಳ್ಳೆಯ ಕೃತಿ. ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter

Editor and Advisors/ Patrons

Prakash Rao Payyar

Chief Editor

Shri Manohar Thonse

-Abu Dhabi

Shri Prabhakar Kamath

- Dubai

Mallikarjuna Gowda

- Dubai

Prakash R.

- Dubai