ಪ್ರಬಂಧಕಾರರಾಗಿ ಕಾರಂತರು
ಲೇ.: ವಿದ್ಯಾ ರಾಮಕೃಷ್ಣ
ಪ್ರಕಾಶನ: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ
ಮುಂಬಯಿ. ಸಂಪರ್ಕ: ೯೯೩೦೩೦೫೩೮೮
ಮೊದಲನೆಯ ಮುದ್ರಣ: ೨೦೨೫
ಪುಟಗಳು: ೧೮೮
ಬೆಲೆ: ರೂ. ೨೦೦
ಮೂಲತಃ ಸಾಫ್ಟ್ವೇರ್ ಇಂಜಿನಿಯರ್ ಆದ ವಿದ್ಯಾ ರಾಮಕೃಷ್ಣ ಅವರು ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯಿಂದ ಎಂ.ಎ. ಅಧ್ಯಯನಕ್ಕೆ ಮುಂದಾದವರು. ಅದರ ಭಾಗವಾಗಿ ಸಂಪ್ರಬಂಧವನ್ನು ಬರೆಯಬೇಕಾಗಿದ್ದ ಸಂದರ್ಭದಲ್ಲಿ ಅವರು `ಪ್ರಬಂಧಕಾರರಾಗಿ ಕಾರಂತರು’ ಎಂಬ ಅಧ್ಯಯನ ಕೃತಿಯನ್ನು ರಚಿಸಿದ್ದರು. ಈಗ ಅದನ್ನು ಪರಿಷ್ಕರಿಸಿ ಈ ಕೃತಿಯನ್ನು ಕನ್ನಡಿಗರ ಕೈಯಲ್ಲಿ ಇರಿಸಿದ್ದಾರೆ.
ಶಿವರಾಮ ಕಾರಂತರು ಕಾದಂಬರಿ ಮಾತ್ರವಲ್ಲ, ಹಲವು ಕ್ಷೇತ್ರಗಳಲ್ಲಿ ಮೇಲ್ಮಟ್ಟದ ಕೃತಿಗಳನ್ನು ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ, ಅದರ ವ್ಯಾಪ್ತಿ, ವಿಸ್ತಾರ, ಮೌಲಿಕತೆ ಇವುಗಳನ್ನು ಓದಿ ತಿಳಿದವರಾಗಲಿ, ಅದರ ಬಗ್ಗೆ ಸಮೀಕ್ಷೆ- ವಿಮರ್ಶೆಗಳನ್ನು ಓದಿದವರಾಗಲಿ ಬೆರಳೆಣಿಕೆಯಷ್ಟು ಮಂದಿಯಷ್ಟೇ ಇದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು ಕಾರಂತರ ಕಾದಂಬರಿಗಳಲ್ಲಿ ಅಂತರ್ಗತವಾಗಿರುವ ವಿವಿಧ ಮೌಲ್ಯಗಳ ಕುರಿತು ಚರ್ಚಿಸುವುದಕ್ಕೆ ತೋರಿಸುವಷ್ಟು ಅಸಕ್ತಿಯನ್ನು ಇತರ ಪ್ರಕಾರಗಳಲ್ಲಿರುವ ಅವರ ಬರವಣಿಗೆಯನ್ನು ಕುರಿತು ಚರ್ಚಿಸುವುದರಲ್ಲಿ ತೋರಿಸುವುದಿಲ್ಲ. ಹೀಗಾಗಿ ಕಾದಂಬರಿಯೇತರ ಸಾಹಿತ್ಯ ಪ್ರಕಾರಗಳಲ್ಲಿ ಕಾರಂತರ ಕೊಡುಗೆಯ ಬಗ್ಗೆ ಚಿಂತನ ಮಂಥನ ನಡೆಸಿ ಕೃತಿಗಳನ್ನು ಪ್ರಕಟಿಸಿದವರು ಕಡಿಮೆ. ಹಾಗೆಂದು ಇಲ್ಲವೆಂದಲ್ಲ. ಈ ಸಾಲಿನಲ್ಲಿ ವಿದ್ಯಾ ರಾಮಕೃಷ್ಣರ `ಪ್ರಬಂಧಕಾರರಾಗಿ ಕಾರಂತರು’ ಒಂದು ಮಹತ್ವದ ಪ್ರಕಟಣೆಯಾಗಿದೆ.
ಶೀರ್ಷಿಕೆಯೇ ಸೂಚಿಸುವಂತೆ ಶಿವರಾಮ ಕಾರಂತರು ಪ್ರಬಂಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಕ್ರೋಢೀಕರಣ, ಸಮೀಕ್ಷೆ ಮತ್ತು ಮೌಲ್ಯಮಾಪನ ಈ ಕೃತಿಯಲ್ಲಿ ನಡೆದಿದೆ. ಸಾಹಿತ್ಯ ವಿಮರ್ಶೆಯು ಭಾಷಾ ಸಾಹಿತ್ಯದ ಬೆಳವಣಿಗೆಗೆ ಮಾಡುವ ಉಪಕಾರಗಳಲ್ಲಿ ಇದು ಮುಖ್ಯವಾದದ್ದು. ಇದರಿಂದ ಒಂದು ಭಾಷೆಯಲ್ಲಿ ನಿರ್ದಿಷ್ಟ ಪ್ರಕಾರದಲ್ಲಿ ನಡೆದ ಸಾಧನೆಯ ದಾಖಲೀಕರಣ ಆಗುವುದಲ್ಲದೆ ಓದುಗರಿಗೆ ಮಾಹಿತಿಯನ್ನು ನೀಡಿ, ಅವರ ಅಭಿರುಚಿಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಇಲ್ಲಿ ಆಗಿರುವುದೂ ಅದೇ ಆಗಿದೆ. ಈ ಪುಸ್ತಕ ಓದು ಕಾರಂತರ ಪ್ರಬಂಧಗಳ ಬಗ್ಗೆ ಓದುಗರ ಕುತೂಹಲವನ್ನು ಪ್ರಚೋದಿಸಿ ಅಂತಹ ಕೃತಿಗಳನ್ನು ಓದಲು ಪ್ರೇರಣೆ ನೀಡುತ್ತದೆ. ಕಾರಂತರ ಅನುಭವ, ವೈಚಾರಿಕತೆ, ಸಮಾಜ ವಿಮರ್ಶೆ ಮತ್ತು ಹಾಸ್ಯ ಪ್ರಜ್ಞೆಗಳೆಲ್ಲ ಬೆರೆತು ಸೃಷ್ಟಿಯಾಗಿರುವ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿರುವ ಅವರ ಪ್ರಬಂಧ ಸಾಹಿತ್ಯವನ್ನು ನಾವು ಮುಖ್ಯವಾಗಿ ಓದಬೇಕಾಗಿದೆ ಮತ್ತು ಚರ್ಚಿಸಬೇಕಾಗಿದೆ.
ಈ ಪುಸ್ತಕದ ಸ್ವರೂಪವು ಅದರ ಪರಿವಿಡಿಯಲ್ಲಿ ತಿಳಿಯುತ್ತದೆ. ಕನ್ನಡ ಪ್ರಬಂಧ ಸಾಹಿತ್ಯ ಮತ್ತು ಕಾರಂತರು; ಕಾರಂತರ ಬದುಕು, ಬರಹ; ಕಾರಂತರ ಪ್ರಬಂಧಗಳಲ್ಲಿ ಏನುಂಟು? (ವಿಡಂಬನೆ, ಸಮಾಜ ಸುಧಾರಣೆಯ ಆಶಯ, ಬದುಕಿನ ಕುರಿತು ಜಿಜ್ಞಾಸೆ, ಸಮಾಜದ ಮನಃಶಾಸ್ತ್ರ ಮತ್ತು ಅನುಭವ ಕಥನ); ಕಾರಂತರ ಪ್ರಬಂಧಗಳ ಅನನ್ಯತೆ (ಹಾಸ್ಯ ಪ್ರಜ್ಞೆ, ಕಾವ್ಯ ಗುಣ, ಪ್ರಕೃತಿಯ ವರ್ಣನೆ, ಪ್ರಾಮಾಣಿಕತೆ, ಶೈಲಿ); ಪ್ರಬಂಧಕಾರರಾಗಿ ಕಾರಂತರು ಹಾಗೂ ಪು.ತಿ.ನ. – ಇವುಗಳು ಪ್ರಧಾನವಾದ ಅಧ್ಯಾಯಗಳು. ಕೊನೆಯ `ಸಮಾರೋಪ’ ಅಧ್ಯಾಯದಲ್ಲಿ ಕಾರಂತರ ಪ್ರಬಂಧಗಳ ಬಗ್ಗೆ ಒಟ್ಟಾಗಿ ಕೆಲವು ವಿಚಾರಗಳನ್ನು ಲೇಖಕಿ ಹೇಳಿದ್ದಾರೆ.
ವಿದ್ಯಾ ರಾಮಕೃಷ್ಣ ಅವರ ಈ ಕೃತಿಯು ಪ್ರಬಂಧಕಾರರಾಗಿ ಶಿವರಾಮ ಕಾರಂತರನ್ನು ಕಂಡು ವಿಶ್ಲೇಷಣೆ ನಡೆಸಿದ ಬಹುಮುಖ್ಯ ಪುಸ್ತಕವಾಗಿದೆ. ಕಾರಂತರ ಎಲ್ಲ ಪ್ರಬಂಧ ಸಂಗ್ರಹಗಳನ್ನು ಒಟ್ಟಿಗೆ ಅಧ್ಯಯನ ಮಾಡಿರುವುದೇ ಬಹಳ ಮುಖ್ಯ, ಯಾಕೆಂದರೆ ಅವರ ಪ್ರಬಂಧಗಳನ್ನೆಲ್ಲ ಒಂದು ಕಟ್ಟಿನಲ್ಲಿ ಪ್ರಕಟಿಸಿದ್ದೂ ಇಲ್ಲ, ಅಧ್ಯಯನ ಮಾಡಿದ್ದೂ ಇಲ್ಲ. ಯಾರೂ ಗಮನಿಸದ ಒಂದು ಮುಖ್ಯವಾದ ಆಯಾಮವನ್ನು ವಿದ್ಯಾ ರಾಮಕೃಷ್ಣ ಅವರು ಅಧ್ಯಯನಕ್ಕೆ ಆರಿಸಿಕೊಂಡದ್ದಕ್ಕೆ ಅವರು ಅಭಿನಂದನೀಯರು. ಅವರಿಗೆ ಮಾರ್ಗದರ್ಶನ ನೀಡಿದ ಅವರ ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ (ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ) ಅವರ ಮಾರ್ಗದರ್ಶನವೂ ಶ್ಲಾಘನೀಯವಾದುದು.
ವಿದ್ಯಾ ಅವರು ಜಾಗತಿಕವಾಗಿ ಪ್ರಬಂಧ ಸಾಹಿತ್ಯವು ಹುಟ್ಟಿ ಬೆಳೆದ ಬಗೆ ಮತ್ತು ಕನ್ನಡದಲ್ಲಿ ಇದು ಬೆಳೆದ ಬಗೆಗಳನ್ನು ಪ್ರಾರಂಭದಲ್ಲಿ ಚರ್ಚಿಸಿದ್ದಾರೆ. ಅವರೆನ್ನುವಂತೆ, ನವೋದಯ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗಶೀಲತೆ ಕಂಡು ಬಂದಿತು ವಸಾಹತುಶಾಹಿ ಆಳ್ವಿಕೆಯ ಪ್ರಭಾವದಿಂದ ಉಂಟಾದ ಪ್ರೇರಣೆಗಳಿಂದ ಸಾಹಿತ್ಯದ ಅನೇಕ ಹೊಸ ಪ್ರಕಾರಗಳಲ್ಲಿ ಭರದಿಂದ ರಚನೆಗಳಾದವು. ಅದರಲ್ಲಿ ಪ್ರಬಂಧ ಪ್ರಕಾರವೂ ಒಂದು. ಶಿವರಾಮ ಕಾರಂತರೂ ಅದನ್ನು ತಮ್ಮ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡರು. ವಿದ್ಯಾ ಅವರು ಗುರುತಿಸುವ ಒಂದು ಗಮನಾರ್ಹ ಅಂಶವೇಂದರೆ `ಅವರ (ಕಾರಂತರ) ಮಾನವೀಯ ಪ್ರಜ್ಞೆ, ತೀಕ್ಷ್ಣವಾದ ವೈಚಾರಿಕ ನಿಲುವು, ಪ್ರಗತಿಶೀಲ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ, ಬದುಕಿನ ಕುರಿತ ಜಿಜ್ಞಾಸೆ ಮತ್ತು ಮನೋಶಾಸ್ತ್ರಜ್ಞನ ನೋಟ ಎಲ್ಲವೂ ಅನನ್ಯವಾದವು. ಈ ಎಲ್ಲ ಮನೋಭಾವಗಳ ಎಳೆಗಳನ್ನು ಅವರ ಕಾದಂಬರಿ, ನಾಟಕ, ಕತೆ, ಕವನಗಳಲ್ಲಿ ಸೂಕ್ಷ್ಮವಾಗಿ, ಪರೋಕ್ಷವಾಗಿ ಕಾಣಬಹುದಾದರೂ ತಮ್ಮ ಪ್ರಬಂಧಗಳಲ್ಲಿ ಈ ಎಲ್ಲ ಆಯಾಮಗಳನ್ನು ಪ್ರಖರವಾಗಿ ಮತ್ತು ನಿಖರವಾಗಿ ಅವರು ಕಟ್ಟಿಕೊಟ್ಟಿದ್ದಾರೆ”. ಇದು ಬಹಳಷ್ಟು ಚಿಂತನೆಗೆ ದಾರಿ ತೋರುವ ಒಂದು ಪ್ರಮೇಯವಾಗಿದೆ. ವಿದ್ಯಾ ಅವರು ತಮ್ಮ ಹೇಳಿಕೆಯನ್ನು ಸೂಕ್ತ ಉದಾಹರಣೆಗಳೊಂದಿಗೆ ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ಕಾರಂತರಿಗೆ ತಮ್ಮ ಕಾದಂಬರಿಗಳಲ್ಲಿ ವ್ಯಕ್ತವಾದ ವೈಚಾರಿಕ ಪ್ರಜ್ಞೆಯನ್ನು ಜನ ಗುರುತಿಸಲಿಲ್ಲ, ಬರೇ ಕಥೆಗಾಗಿ ಓದುತ್ತಾರೆ ಎಂಬ ಅಸಮಾಧಾನವಿದ್ದುದು, ಲಲಿತ ಪ್ರಬಂಧಗಳನ್ನೇ ಹೆಚ್ಚಾಗಿ ಬರೆದುಕೊಂಡಿದ್ದರೆ ಜನ ಗಂಭೀರ ಲೇಖಕನೆಂದು ಪರಿಗಣಿಸದೆ ಏನೋ ಒಂದು ಬರೆದುಕೊಂಡಿದ್ದಾನೆ ಎಂದು ತಿಳಿದುಕೊಳ್ಳುವುದು ಇತ್ಯಾದಿಗಳ ಬಗ್ಗೆ ಯೋಚಿಸಿದ್ದುದನ್ನು ಅವರ ಆತ್ಮಕಥನಗಳಿಂದ ಪಡೆದು ಈ ಅಧ್ಯಯನದ ಸಂದರ್ಭದಲ್ಲಿ ವಿದ್ಯಾ ರಾಮಕೃಷ್ಣ ಅವರು ವಿಶ್ಲೇಷಿಸಿರುವುದು ಅವರ ಪ್ರಬಂಧಗಳ ರಚನೆಯ ಕಾಲ, ಅವರ ಪ್ರಬಂಧಗಳ ವಸ್ತು-ವಿಷಯಗಳ ಕುರಿತು ಹೆಚ್ಚಿನ ಚಿಂತನೆ ನಡೆಸಲು ಗ್ರಾಸವನ್ನು ಒದಗಿಸಿದೆ. ಹಾಗಾಗಿ ಈ ಅಧ್ಯಯನವು ಮುಖ್ಯವಾಗಿದೆ.
ಶಿವರಾಮ ಕಾರಂತರ ಪ್ರಬಂಧಗಳ ಸಮಗ್ರ ವಿವೇಚನೆ, ಅವುಗಳು ಯಾವುವು ಇತ್ಯಾದಿಗಳಿಗೆ ಈ ಪುಸ್ತಕ ಒಂದು ಪರಾಮರ್ಶನ ಗ್ರಂಥವಾಗಲಿದೆ. ಕಾರಂತರು ಕಾಲಕಾಲಕ್ಕೆ ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಹರಟೆ, ವಿಡಂಬನೆ, ವೈಚಾರಿಕ ಪ್ರಬಂಧ ಲೇಖನಗಳನ್ನು ಪ್ರಕಟಿಸಿದ್ದರು. ಅವುಗಳನ್ನು ಸಂಕಲಿಸಿ ಒಟ್ಟು ಆರು ಪ್ರಬಂಧ ಸಂಕಲನಗಳು ಮತ್ತು ಒಂದು ವೈಚಾರಿಕ ಬರಹಗಳ ಸಂಕಲನಗಳಾಗಿ ಅವರು ಪ್ರಕಟಿಸಿದ್ದಾರೆ. ಕಾರಂತರ ಆರು ಸಂಕಲನಗಳು: ಗ್ನಾನ, ಚಿಕ್ಕ ದೊಡ್ಡವರು, ಹಳ್ಳಿಯ ಹತ್ತು ಸಮಸ್ತರು, ಮೈಲಿಕಲ್ಲಿನೊಡನೆ ಮಾತುಕತೆಗಳು, ದೇಹ ಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು, ಮೈಗಳ್ಳನ ದಿನಚರಿಯಿಂದ. ಬಾಳ್ವೆಯೇ ಬೆಳಕು (ವೈಚಾರಿಕ ಕೃತಿ). ಸಂಕಲನವಾಗಿ ಪ್ರಕಟವಾಗದ ಅವರ ಎಲ್ಲ ಬಿಡಿ ಬರಹಗಳನ್ನು ಮಾಲಿನಿ ಮಲ್ಯ ಅವರು ಸಂಗ್ರಹಿಸಿದ್ದಾರೆ. ಅವುಗಳನ್ನು ‘ಶಿವರಾಮ ಕಾರಂತರ ಲೇಖನಗಳು’ ಎಂಬ ಎಂಟು ಸಂಪುಟಗಳಾಗಿ ಮಂಗಳೂರು ವಿಶ್ವವಿದ್ಯಾಲಯ ಹೊರತಂದಿದೆ.
ಕಾರಂತರ ಸಮಗ್ರ ವ್ಯಕ್ತಿತ್ವ ಮತ್ತು ಅವರ ನಿಲುವುಗಳನ್ನು ಅರಿಯುವ ಸಲುವಾಗಿ ಅವರ ಆತ್ಮಚರಿತ್ರೆಗಳಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಮತ್ತು ‘ಸ್ಮೃತಿ ಪಟಲದಿಂದ’ ಕೃತಿಗಳನ್ನು ಪರಿಶೀಲಿಸಿದ್ದಾರೆ. ಇದರಿಂದ ಕೆಲವು ಮಹತ್ವದ ಪೂರಕ ಮಾಹಿತಿಗಳನ್ನು ಅವರು ಪಡೆದುಕೊಂಡಿದ್ದಾರೆ.ಕೊನೆಯ ಒಂದು ಅಧ್ಯಾಯದಲ್ಲಿ ಶಿವರಾಮ ಕಾರಂತರ ಸಮಕಾಲೀನರಾದ ಪು.ತಿ.ನರಸಿಂಹಾಚಾರ್ ಅವರ ಸಮಗ್ರ ಗದ್ಯ ಬರಹಗಳ ಸಂಕಲನದಿಂದ ಆಯ್ದುಕೊಂಡ ಕೆಲವು ಪ್ರಬಂಧಗಳ ಜೊತೆಗೆ ಕಾರಂತರ ಕೆಲವು ಪ್ರಬಂಧಗಳ ತುಲನೆ ಮಾಡುವ ಪ್ರಯತ್ನವನ್ನೂ ಮಾಡಲಾಗಿದೆ. ಹೀಗೆ ಒಬ್ಬರು ಲೇಖಕರನ್ನು ಆಯ್ದುಕೊಳ್ಳಲು ಕಾರಣ ಇಬ್ಬರ ಮನೋಧರ್ಮಗಳು ಬೇರೆ ಬೇರೆಯಾಗಿರುವುದು. ಇದರಿಂದ ವಿಭಿನ್ನ ಮಾದರಿಯ ಪ್ರಬಂಧಗಳು ರೂಪುಗೊಂಡವು ಎನ್ನುವುದನ್ನು ವಿದ್ಯಾ ರಾಮಕೃಷ್ಣ ತೋರಿಸಿಕೊಟ್ಟಿದ್ದಾರೆ.
ವಿದ್ಯಾ ರಾಮಕೃಷ್ಣ ಅವರು ತೋರಿಸಿಕೊಟ್ಟಿರುವ ಹಾಗೆ ಶಿವರಾಮ ಕಾರಂತರ ಪ್ರಬಂಧಗಳ ವಸ್ತು ವೈವಿಧ್ಯ ಮತ್ತು ಅವರು ತಮ್ಮ ವೈಚಾರಿಕತೆಗೆ ಬದ್ಧರಾಗಿಯೇ ಅಷ್ಟೂ ವಿಚಾರಗಳನ್ನು ಹಾಸ್ಯ, ವಿಡಂಬನೆ, ವ್ಯಂಗ್ಯ, ಕಟಕಿ ಮುಂತಾದ ಶೈಲಿ ವೈವಿಧ್ಯಗಳಲ್ಲಿ ಕಟ್ಟಿಕೊಟ್ಟಿರುವುದು ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟವಾದ ವಿದ್ಯಮಾನವಾಗಿದೆ. ಶುದ್ಧ ಹಾಸ್ಯದ ಮೂಲಕ ಸಮಾಜದ ವೈಚಿತ್ರ ಗಳನ್ನು ತೋರಿಸುವುದು, ಲಘು ಧಾಟಿಯ ವ್ಯಕ್ತಿಚಿತ್ರಗಳು, ಜೀವನಾನುಭವ, ವಿಡಂಬನಾತ್ಮಕ ಸಮಾಜ ವಿಮರ್ಶೆ ಇತ್ಯಾದಿ ಶೈಲಿ ವೈವಿಧ್ಯ ಬೇರೆ ಲೇಖಕರಲ್ಲಿ ಕಾಣಸಿಗದು. ಇದರ ಜತೆಗೆ ಗಂಭೀರ ವೈಚಾರಿಕ ಲೇಖನಗಳ ಒಂದು ಸಂಕಲನವನ್ನೂ (ಇಂತಹ ಎರಡು ಪುಸ್ತಕಗಳಿದ್ದು ಇವುಗಳಲ್ಲಿ ಒಂದು ಲಭ್ಯವಿಲ್ಲ) ವಿದ್ಯಾ ರಾಮಕೃಷ್ಣ ಅವರು ಪ್ರಬಂಧಗಳ ಪ್ರಕಾರದ ಒಳಗೆಯೆ ತಂದು ಚರ್ಚಿಸಿರುವುದು ಸಮೀಚೀನವಾದ ಕ್ರಮವೆಂದು ಹೇಳಬಹುದು.
ಆಧುನಿಕ ಕನ್ನಡ ಸಾಹಿತ್ಯದ ಮಹಾನ್ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತರ ಪ್ರಬಂಧಗಳನ್ನು ಕುರಿತ ಸಮಗ್ರ ಪರಿಚಯ – ವಿಮರ್ಶೆ ಈ ಕೃತಿಯಲ್ಲಿ ಮೊದಲ ಬಾರಿಗೆ ಸಿಗುವಂತಾಗಿದೆ.







