ಆಗಾಗ ವರ್ಗವಾಗುವ ಉದ್ಯೋಗದಲ್ಲಿರುವವರು ದೇವರು ಪ್ರತ್ಯಕ್ಷರಾದರೆ ಯಾವ ವರ ಕೇಳಬಹುದು? ನನ್ನ ಪ್ರಕಾರ:
ಕೊಡು ದೇವರೆ
ವರ
ಊರಿಂದೂರಿಗೆ
ವರ್ಗವಾಗದಂತೆ
ಮಾಡು ಒಂದೆಡೆ
ಸ್ಥಾ-ವರ!
ವರ ಎಲ್ಲರಿಗೂ ಬೇಕು. ಶಾಪ ಯಾರಿಗೂ ಬೇಡ. ಆದರೆ ಕೆಲವೊಮ್ಮೆ ಶಾಪವೂ ವರವಾಗುತ್ತದೆ. ಇಂಗ್ಲಿಷ್ ನಲ್ಲಿ ಇದನ್ನು ʼಬ್ಲೆಸ್ಸಿಂಗ್ ಇನ್ ಡಿಸ್ ಗೈಸ್ ʼಅನ್ನುತ್ತಾರೆ. ನನ್ನ ಬ್ಯಾಂಕಿಂಗ್ ವೃತ್ತಿ ಜೀವನದಲ್ಲಿ ನಡೆದ ಅಂತಹ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬ್ಯಾಂಕಿನಲ್ಲಿ ಅಧಿಕಾರಿಗಳಿಗೆ ಸಾಮಾನ್ಯವಾಗಿ ಮೂರು ವರ್ಷಕ್ಕೊಮ್ಮೆ ವರ್ಗವಾಗುತ್ತದೆ. ಮೇಲಧಿಕಾರಿಯ ಕೆಂಗಣ್ಣಿಗೆ ಗುರಿಯಾದರೆ ಒಂದು ಅಥವಾ ಎರಡು ವರ್ಷಕ್ಕೆ ವರ್ಗವಾಗುವುದೂ ಇದೆ. ಸರಕಾರಿ ಕಚೇರಿಗಳಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ
ಅಯ್ಯಾ ಎಂದರೆ
ಬಡ್ತಿಗೆ ಮಾರ್ಗ
ಎಲವೋ ಅಂದರೆ
ವರ್ಗ!
ಈ ಘಟನೆ ನಡೆದದ್ದು ಇಸವಿ 2000ದಲ್ಲಿ. ನಾನಾಗ ಬ್ಯಾಂಕಿನಲ್ಲಿ 20 ವರ್ಷಗಳ ಸೇವೆ ಸಲ್ಲಿಸಿ ಬೆಳಗಾವಿಯಲ್ಲಿ ಮೆನೇಜರ್ ಆಗಿದ್ದೆ. ಸಾಹಿತಿಯಾಗಿಯೂ ಹೆಸರು ಮಾಡಿದ್ದೆ. ʼಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿʼ ಅನ್ನುವ ಗಾದೆಯಂತೆ ಸಂಬಳಕ್ಕೆ ಬ್ಯಾಂಕಿನ ವೃತ್ತಿ ಬೇಕು, ಆದರೆ ಹೊರ ರಾಜ್ಯಗಳಿಗೆ ವರ್ಗವಾಗಿ ಅದರಿಂದ ಸಾಹಿತ್ಯ ಕೃಷಿಗೆ ತೊಂದರೆಯಾಗಬಾರದು ಅನ್ನುವುದು ನನ್ನ ಧೋರಣೆಯಾಗಿತ್ತು. ಇಪ್ಪತ್ತು ವರ್ಷ ಕರ್ನಾಟಕದಲ್ಲೆ ಸೇವೆಸಲ್ಲಿಸಿದ್ದ ನನಗೆ ಸೀನಿಯರ್ ಮೆನೇಜರ್ ಹುದ್ದೆಗೆ ಬಡ್ತಿ ಸಿಗಬೇಕಾದರೆ ಉತ್ತರ ಭಾರತದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಹೀಗಾಗಿ ಬಡ್ತಿಗಾಗಿ ನಡೆಯುವ ಸಂದರ್ಶನಕ್ಕೆ ಹೋಗಬೇಕೆ? ಬೇಡವೆ? ಎಂಬ ಗೊಂದಲದಲ್ಲಿದ್ದೆ. ʼನೀವು ಕವಿಯಾದ್ದರಿಂದ ನಿಮಗೆ ಪ್ರಮೋಶನ್ ಕೊಟ್ಟು ಕರ್ನಾಟಕದಲ್ಲೆ ಇಡ್ತಾರೆ. ಹೋಗಿ, ಅವಕಾಶ ಕಳ್ಕೋಬೇಡಿʼ ಎಂದ ಸಹೋದ್ಯೋಗಿಗಳ ಮಾತನ್ನು ನಂಬಿ ಸಂದರ್ಶನಕ್ಕೆ ಹೋದೆ.
ಬಡ್ತಿ ಸಿಕ್ಕಿತು. ಜತೆಗೆ ಬೆಳಗಾವಿಯಿಂದ ಮಹಾರಾಷ್ಟ ರಾಜ್ಯದ ನಾಸಿಕ ಶಾಖೆಗೆ ವರ್ಗ ಮಾಡಿರುವ ಆದೇಶವೂ ಬಂತು. ನಾಸಿಕ್ ನಗರ ಚೆನ್ನಾಗಿದ್ದರೂ ಅಲ್ಲಿನ ಶಾಲೆಗಳು ಅಷ್ಟೇನೂ ಉತ್ತಮವಾಗಿರಲಿಲ್ಲ. ಜತೆಗೆ ಶಾಲೆಯಲ್ಲಿ ಮಕ್ಕಳು ಮರಾಠಿಯನ್ನು ಒಂದು ವಿಷಯವಾಗಿ ಕಲಿಯುವುದು ಕಡ್ಡಾಯವೆಂದು ತಿಳಿದಾಗ ನನ್ನ ಮಡದಿ ಗಾಬರಿಯಾದಳು. ನಮ್ಮ ಮಗಳು ಆಗ ಹತ್ತನೆ ತರಗತಿಯಲ್ಲಿ ಓದುತ್ತಿದ್ದದ್ದರಿಂದ ಹೊಸ ಭಾಷೆ ಮರಾಠಿಯಿಂದಾಗಿ ಅವಳ ಸರಾಸರಿ ಅಂಕ ಕಡಿಮೆಯಾಗುತ್ತದೆ ಎಂಬುದು ನನ್ನ ಮಡದಿಯ ಆತಂಕಕ್ಕೆ ಕಾರಣವಾಗಿತ್ತು. ಹೇಗಾದರೂ ಮಾಡಿ ವರ್ಗ ರದ್ದು ಮಾಡಿಸಿಕೊಳ್ಳಿ ಎಂದು ಹಠ ಮಾಡಿದಳು. ಮುಖ್ಯ ಕಚೇರಿಯಲ್ಲಿ ನನಗೆ ಪರಿಚಿತರಾಗಿದ್ದ ಹಿರಿಯ ಅಧಿಕಾರಿಗಳೊಬ್ಬರ ಹತ್ತಿರ “ಕಾಮತ್ ಮಾಮ್, ಕನ್ನಡದ ಕವಿಯನ್ನು ಮಹಾರಾಷ್ಟ್ರಕ್ಕೆ ವರ್ಗ ಮಾಡಿದ್ದೀರಲ್ಲ. ದಯವಿಟ್ಟು ಈ ಆದೇಶವನ್ನು ಬದಲಾಯಿಸಿ” ಎಂದು ಕೇಳಿಕೊಂಡೆ. ಅವರು “ನೀವು ಕವಿಯಾದ್ದರಿಂದ ಕರ್ನಾಟಕದ ನೆರೆಯ ರಾಜ್ಯದಲ್ಲಿರುವ ನಾಸಿಕ್ ಗೆ ವರ್ಗ ಮಾಡಿದ್ದೇವೆ. ಇಲ್ಲದಿದ್ದರೆ ದೆಹಲಿಗೆ ಹಾಕುತ್ತಿದ್ದೆವು. ಚೌಕಾಸಿ ಮಾಡದೆ ಹೋಗಿ”ಅಂದರು. ಕೊನೆಗೆ ಒಂದು ಪರಿಹಾರ ಹೊಳೆಯಿತು. ಮಗಳನ್ನು ಬೆಂಗಳೂರಿನ ನಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ಅಲ್ಲಿಗೆ ಹತ್ತಿರದ ಹೈಸ್ಕೂಲಿಗೆ ಸೇರಿಸಿದೆವು. ಹೆಂಡತಿ ಮತ್ತು ಐದನೆ ಕ್ಲಾಸಿನಲ್ಲಿದ್ದ ಮಗನೊಂದಿಗೆ ನಾನು ನಾಸಿಕ್ ಗೆ ಹೋದೆ. ಮಗಳನ್ನು ಬಿಟ್ಟು ಹೋಗುವುದು ಬೇಸರದ ಸಂಗತಿಯಾದರೂ ಅನಿವಾರ್ಯವಾಗಿತ್ತು.
ನಾಸಿಕ್ ಶಾಖೆಯ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳು ಆಗಿತ್ತಷ್ಟೆ. ಹಿಂದಿಯೂ ಸರಿಯಾಗಿ ಬಾರದ ನನಗೆ ಶುದ್ಧ ಮರಾಠಿಯಲ್ಲಿ ಮಾತನಾಡುತ್ತಿದ್ದ ಗ್ರಾಹಕರನ್ನು ಒಲಿಸಿಕೊಂಡು ವ್ಯವಹಾರ ಮಾಡುವುದು ದೊಡ್ಡ ಸವಾಲಾಗಿತ್ತು. ಜತೆಗೆ ನಮ್ಮ ಶಾಖೆಯನ್ನು ಗಣಕೀಕರಣಗೊಳಿಸುವ ಕೆಲಸ ಆರಂಭವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನನ್ನ ಗ್ರಹಚಾರಕ್ಕೆ ಬ್ಯಾಂಕಿನ ಚೆಯರ್ ಮ್ಯಾನ್ ಬೇರೊಂದು ಊರಿಗೆ ಹೋಗುವ ಮಾರ್ಗದಲ್ಲಿ ಮರುದಿನ ಮುಂಜಾನೆ ನಮ್ಮ ಶಾಖೆಗೆ ಭೇಟಿ ನೀಡುತ್ತಾರೆ ಎಂಬ ಸುದ್ದಿ ಬಂತು. ಮಹಾ ಶಿಸ್ತಿನ ಮನುಷ್ಯ ಮತ್ತು ಕೋಪಿಷ್ಟರಾಗಿದ್ದ ಆ ಚೆಯರ್ ಮ್ಯಾನ್ ಬರುತ್ತಾರೆಂದರೆ ಶಾಖಾಧಿಕಾರಿಗಳು ಭಯಭೀತರಾಗುತ್ತಿದ್ದರು. ನಾನೂ ಅಂಜುತ್ತಲೇ ರೈಲು ನಿಲ್ದಾಣಕ್ಕೆ ಹೋಗಿ ಅವರನ್ನು ಎದುರುಗೊಂಡೆ. ಫಲಾಹಾರಕ್ಕೆ ಉತ್ತಮವಾದ ಹೋಟೆಲ್ಲಿಗೆ ಕರೆದುಕೊಂಡು ಹೋದೆ.
ಅಲ್ಲಿಂದ ಶಾಖೆಗೆ ಬರುತ್ತಿದ್ದ ಹಾಗೆ ವಿದ್ಯುತ್ ಹೋಯಿತು. ಜನರೇಟರ್ ನ ಮಂದ ಬೆಳಕಿನಲ್ಲಿ ಶಾಖೆಯ ಹಳೆಯ ಪೀಠೋಪಕರಣಗಳು ಇನ್ನಷ್ಟು ಹಳೆಯದಾಗಿ ಕಾಣುತ್ತಿದ್ದವು. ಚೆಯರ್ ಮ್ಯಾನ್ ಮುಖ ಸಿಂಡರಿಸಿಕೊಂಡೇ ಕ್ಯಾಬಿನ್ ಗೆ ಬಂದು ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನನ್ನ ಉತ್ತರ ಅವರಿಗೆ ಸಮಾಧಾನ ನೀಡಲಿಲ್ಲ. ಅವರ ಜೊತೆಗೆ ಬಂದಿದ್ದ ಜನರಲ್ ಮ್ಯಾನೇಜರ್ ಹತ್ತಿರ “ಈತ ಹೇಗೆ ಮ್ಯಾನೇಜರ್ ಆದ? ಇವನ ವೇಷಭೂಷಣ, ಮಾತು, ಶಾಖೆಯ ಸ್ವಚ್ಛತೆ ಯಾವುದೂ ಸರಿ ಇಲ್ಲ.” ಎಂದು ಮುಂತಾಗಿ ತುಂಬಾ ಕೆಟ್ಟದಾಗಿ ಬೈಯತೊಡಗಿದರು. ಕನ್ನಡ ಬಾರದ ಚೆಯರ್ ಮ್ಯಾನ್‌ಗೆ ನಾನೊಬ್ಬ ಕವಿ, ಯಶಸ್ವಿ ಬ್ಯಾಂಕ್ ಮೆನೇಜರ್ ಅಂತ ನನ್ನ ಪರಿಚಯವಿದ್ದ ಜನರಲ್ ಮ್ಯಾನೇಜರ್ ಆದರೂ ಹೇಳಬಹುದೆಂದು ಅವರತ್ತ ದೃಷ್ಟಿ ಬೀರಿದೆ. ಅವರು ಮೌನವಾಗಿದ್ದರು. ಅನಿವಾರ್ಯವಾಗಿ ನಾನೇ “ಸರ್, ನಾನು ಈ ಶಾಖೆಗೆ ಇತ್ತೀಚೆಗಷ್ಟೆ ಬಂದಿದ್ದೇನೆ. ಪ್ರಗತಿ ತೋರಿಸಲು ಸ್ವಲ್ಪ ಸಮಯ ಬೇಕು. ಹಿಂದಿನ ಶಾಖೆಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಬೇಕಿದ್ದರೆ ನೀವೇ ನೋಡಿ “ ಎಂದು ನನ್ನ ಕುರ್ಚಿಯ ಹಿಂದೆ ಜೋಡಿಸಿಟ್ಟಿದ್ದ ಪ್ರಶಸ್ತಿಗಳನ್ನು ತೋರಿಸಿದೆ. ಚೆಯರ್ ಮ್ಯಾನ್ ಇನ್ನಷ್ಟು ಸಿಟ್ಟಾಗಿ “ಈ ವ್ಯಕ್ತಿಗೆ ಪ್ರಶಸ್ತಿಗಳನ್ನು ಹೇಗೆ ಇಡಬೇಕೆಂಬುದೂ ಗೊತ್ತಿಲ್ಲ. ಈತನ ಹತ್ತಿರ ಮಾತಾನಾಡಿ ಪ್ರಯೋಜನವಿಲ್ಲ. ಬೇಜವಾಬ್ದಾರಿ ಮನುಷ್ಯ” ಎಂದು ಗೊಣಗುತ್ತಾ ಹೊರಟೇ ಬಿಟ್ಟರು. ನನ್ನ ದುರದೃಷ್ಟಕ್ಕೆ ಹಿಂದಿನ ದಿನ ನಾನು ಚೆನ್ನಾಗಿ ಜೋಡಿಸಿಟ್ಟ ಪ್ರಶಸ್ತಿಗಳನ್ನು ಕಸ ಗುಡಿಸುವವಳು ಧೂಳು ಒರೆಸುವಾಗ ಅಡ್ಡಾದಿಡ್ಡಿಯಾಗಿ ಇಟ್ಟಿದ್ದಳು. ಅದನ್ನು ನಾನು ಗಮನಿಸಿರಲಿಲ್ಲ.
ಆ ಕಾಲದಲ್ಲಿ ವಾಟ್ಸಾಪ್ ಇಲ್ಲದಿದ್ದರೂ ನನಗೆ ಚೆಯರ್ ಮ್ಯಾನ್ ಬೈದ ಸುದ್ದಿ ಶರವೇಗದಲ್ಲಿ ಇತರ ಶಾಖೆಗಳಿಗೆ ಹಬ್ಬಿತು. ಕೆಲವರು ಘಟನೆಗೆ ರೆಕ್ಕೆ ಪುಕ್ಕ ಹಚ್ಚಿ ಅದನ್ನುಇನ್ನಷ್ಟು ರೋಚಕಗೊಳಿಸಿದರು. ಚೆಯರ್ ಮ್ಯಾನ್ ಜೊತೆ ಚಹಾ ಕುಡಿಯುವಾಗ ಡುಂಡಿರಾಜರ ಕೈ ನಡುಗಿ ಅಂಗಿಯ ಮೇಲೆ ಚೆಲ್ಲಿಕೊಂಡರು, ಸೊರ ಸೊರ ಸದ್ದು ಮಾಡುತ್ತಾ ಕುಡಿದದ್ದಕ್ಕೆ ಬೈಸಿಕೊಂಡರು ಇತ್ಯಾದಿ. ಇದನ್ನೆಲ್ಲ ಕೇಳಿ ಕೆಲವು ದಿನ ನನಗೆ ಬೇಸರವಾದರೂ ನಂತರ ಅದನ್ನು ಮರೆತು ಬ್ಯಾಂಕ್ ಕೆಲಸದಲ್ಲಿ ತೊಡಗಿಕೊಂಡೆ. ಶಾಖೆಯ ವ್ಯವಹಾರದಲ್ಲೂ ಪ್ರಗತಿ ಕಾಣತೊಡಗಿತು. ನಾಸಿಕ್‌ನಲ್ಲಿ ಇನ್ನೆರಡು ವರ್ಷ ಇರಬಹುದು ಅಂದುಕೊಂಡಿದ್ದೆ. ಇದ್ದಕ್ಕಿದ್ದ ಹಾಗೆ ಒಂದು ದಿನ ನನ್ನನ್ನು ನಾಸಿಕ್ ಶಾಖೆಯಿಂದ ಮುಂಬೈ ನಗರದ ಪ್ರಾದೇಶಿಕ ಕಚೇರಿಗೆ ವರ್ಗ ಮಾಡಿರುವ ಸುದ್ದಿ ಬಂತು. ದಿಢೀರ್ ವರ್ಗಕ್ಕೆ ಕಾರಣ ನಾಸಿಕ್ ಶಾಖೆಯಿಂದ ನನ್ನನ್ನು ತೆಗೆದು ಮರಾಠಿ ಬಲ್ಲವರನ್ನು ಮೆನೇಜರ್ ಆಗಿ ನೇಮಿಸುವಂತೆ ಚೆಯರ್ ಮ್ಯಾನ್ ಸೂಚಿಸಿದ್ದರಂತೆ.
ಒಂದೇ ವರ್ಷದಲ್ಲಿ ಪುನಃ ಗಂಟು ಮೂಟೆ ಕಟ್ಟುವಂತಾಯಿತಲ್ಲ ಎಂದು ಬೇಸರದಿಂದಲೇ ಮುಂಬೈಗೆ ಹೋದೆ. ಅಲ್ಲಿ ವಾಸಕ್ಕೆ ಅತ್ಯುತ್ತಮವಾದ ಬ್ಯಾಂಕಿನ ವಸತಿ ಗೃಹ ಸಿಕ್ಕಿತು. ಕಚೇರಿಯಲ್ಲಿ ಮತ್ತು ವಸತಿ ಗೃಹದಲ್ಲಿಬಹಳ ಜನ ಕನ್ನಡಿಗ ಸಹೋದ್ಯೋಗಿಗಳು ಇದ್ದರು. ಮಕ್ಕಳ ಶಿಕ್ಷಣಕ್ಕೆ ನಾಸಿಕ್ ಗಿಂತ ಮುಂಬೈ ಎಷ್ಟೋ ಪಾಲು ಉತ್ತಮವಾಗಿತ್ತು. ಬೆಂಗಳೂರಿನಲ್ಲಿ ಹತ್ತನೆ ತರಗತಿ ಮುಗಿಸಿದ್ದ ಮಗಳನ್ನು ಮುಂಬೈನಲ್ಲಿ ಪಿ.ಯು.ಸಿ.ಗೆ ಸೇರಿಸಿದೆವು. ಉತ್ತಮ ಅಂಕ ಇದ್ದದ್ದರಿಂದ ಅವಳಿಗೆ ಒಳ್ಳೆಯ ಕಾಲೇಜಿನಲ್ಲಿ ಉಚಿತ ಪ್ರವೇಶ ದೊರಕಿತು. ಪ್ರಾದೇಶಿಕ ಕಚೇರಿಯಾದ್ದರಿಂದ ಶಾಖೆಯಷ್ಟು ಕೆಲಸದ ಒತ್ತಡ ಇರಲಿಲ್ಲ. ಮುಂಬೈಯಲ್ಲಿ ಅನೇಕ ಕನ್ನಡ ಸಂಘಗಳಿದ್ದು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದರು. ಶಿಕ್ಷೆಯ ರೂಪದಲ್ಲಿ ನನಗಾದ ವರ್ಗಾವಣೆ ಶಾಪವಲ್ಲ ವರ ಅನ್ನಿಸಿತು. ಮುಂಬೈನಲ್ಲಿ ಎರಡು ವರ್ಷ ಪೂರೈಸಿದ ನಂತರ ನನ್ನ ಕೋರಿಕೆಯಂತೆ ಮಂಗಳೂರಿಗೆ ವರ್ಗವಾಯಿತು. ಆ ವರ್ಷ ಮುಖ್ಯ ಕಚೇರಿಯಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ನಾಸಿಕ್ ನಲ್ಲಿ ನನಗೆ ಬೈದಿದ್ದ ಚೆಯರ್ ಮ್ಯಾನ್ ಸಾಹೇಬರೇ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ನನ್ನನ್ನು ಸನ್ಮಾನಿಸಿ ಬಾಯಿ ತುಂಬಾ ಹೊಗಳಿದರು.
ಮುಗಿಸುವ ಮುನ್ನ:
————————
ಎಲ್ಲ ಮೇಲಧಿಕಾರಿಗಳೂ
ಬಾಸ್ ಅನ್ನಿಸಿಕೊಳ್ಳುವರು
ಎಲ್ಲೋ ಕೆಲವರು
ಶಹಭಾಸ್ ಅನ್ನಿಸಿಕೊಳ್ಳುವರು!








4 thoughts on “ಶಾಪವೇ ವರವಾದ ಪ್ರಸಂಗ”
ಸೂಪರ್ ಬರಹ ಸರ್. ಓದಿ ಖುಷಿಯಾಯಿತು
ಡುಂಡಿ ಬರೆಹ ಯಾವಾಗಲೂ ಕಚಗುಳಿ ಇಡುವಂತಿರುತ್ತದೆ
ಕೆಲಸದ ಸಮಯದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಾ ಇರುತ್ತವೆ. ಅವುಗಳಿಗೆ ಅಕ್ಷರರೂಪ ಕೊಟ್ಟು ಸೊಗಸಾಗಿ ಚಿತ್ರಿಸಿದ್ದೀರಿ.
ಎಲ್ಲರ ಮನೆ ದೋಸೆ ತೂತು ಎಂಬಂತೆ ಎಲ್ಲಾ ಬ್ಯಾಂಕುಗಳಲ್ಲಿ ಇದೇ ಕಾರ್ಯವೈಖರಿ ಇದೆ. ಅನುಭವ ಚೆನ್ನಾಗಿದೆ. ಅಭಿನಂದನೆಗಳು. ನಾನು ೧೯೭೩-೭೭ರ ಬ್ಯಾಚಿನ ಕೃಷಿ ಕಾಲೇಜ್ ಧಾರವಾಡದ ಪ್ರೊಡಕ್ಟ್.